ಸುರಿವ ಮಳೆಯಲ್ಲಿ ʻಸುಧಾಮಪುರಿʼಯ ಸುತ್ತಾಟ!
ಮಹಾಭಾರತ ಯುದ್ಧಾವಧಿ ಬಿಟ್ಟರೆ ಯುದ್ಧಪೂರ್ವ ಮತ್ತು ಯುದ್ಧೋತ್ತರ ಅವಧಿಯ ಶ್ರೀಕೃಷ್ಣನ ಬದುಕಿನೊಂದಿಗೆ ಬೆಸೆದುಕೊಂಡಿರುವ ಪ್ರಾಚೀನ ಪೌರಾಣಿಕ ನಗರ ದ್ವಾರಕಾ. ಅದನ್ನು ನೋಡಿಕೊಂಡು ಮರುದಿನ ಬೆಳಿಗ್ಗೆ ದ್ವಾರಕಾದಿಂದ ಸೋಮನಾಥಕ್ಕೆ ಹೊರಡುವ ಖಾಸಗೀ ಬಸ್ ಹತ್ತಿಕೊಂಡು ನಾನು ಬಹಳ ದಿನದಿಂದ ನೋಡಬೇಕೆಂದು ನಿರೀಕ್ಷೆ ಮಾಡಿದ್ದ ಪೋರಬಂದರಿಗೆ ಹೊರಟೆ. ಅಲ್ಲಿ ಮುಖ್ಯವಾಗಿ ಗಾಂಧೀಜಿಯವರು ಹುಟ್ಟಿಬೆಳೆದ ಅವರ ಪೂರ್ವಜರ ಮನೆಯನ್ನು ನೋಡುವುದು ನನ್ನ ಮುಖ್ಯ ಉದ್ದೇಶವಾಗಿತ್ತಾದರೂ ಅದರ ಜೊತೆ ನೋಡತಕ್ಕ ಇತರೆ ಸ್ಥಳಗಳನ್ನೂ ಅಲ್ಲಿ ನೋಡಬೇಕೆಂಬುದು ನನ್ನ ಆಸೆಯಾಗಿತ್ತು. ಅದಕ್ಕಾಗಿ ನಾನು ಅರ್ಧದಿನವನ್ನು ಗೊತ್ತುಮಾಡಿಕೊಂಡಿದ್ದೆ. ಮಧ್ಯಾಹ್ನದ ವರೆಗೂ ಪೋರಬಂದರ್ ನೋಡಿ ಮಧ್ಯಾಹ್ನದ ಮೇಲೆ ಅಲ್ಲಿಂದ ಪ್ರಸಿದ್ಧ ಸೋಮನಾಥ ದೇವಸ್ಥಾನಕ್ಕೆ ಹೋಗಿ ಅದನ್ನು ನೋಡಿಕೊಂಡು ಅಲ್ಲಿಂದ ಎಂಟು ಹತ್ತು ಕಿಲೋಮೀಟರ್ ದೂರದಲ್ಲಿರುವ ವೈರಾವಲ್‌ಗೆ ಹೋಗಿ ಅಲ್ಲಿಂದ ಗುಜರಾತ್ ರಾಜಧಾನಿ ಗಾಂಧೀನಗರಕ್ಕೆ ಹೊರಡುವ ರೈಲನ್ನು ನಾನು ರಾತ್ರಿ ಹಿಡಿಯಬೇಕಿತ್ತು. ಬೆಳಿಗ್ಗೆ ಎಂಟಕ್ಕೆ ಧ್ವಾರಕಾ ಬಿಟ್ಟ ನಾನು ಪೋರಬಂದರಿಗೆ ತಲುಪುವಾಗ ಬೆಳಗಿನ ಹತ್ತುಗಂಟೆಯಾಗಿತ್ತು.
ನೃತ್ಯಗಾರ್ತಿಯ ಮನಸೆಳೆಯುವ ಮೂರು ಮಂದಿರಗಳು
ಪೋರಬಂದರಿನಲ್ಲಿ ಬಸ್ ಇಳಿದ ಕೂಡಲೇ ನಾನು ಮೊದಲು ನೋಡಲು ಹೋದದ್ದು ತಮ್ಮ ಕಿರಿಯ ವಯಸ್ಸಿನಲ್ಲಿಯೇ ಪೋರಬಂದರನ ಆರ್ಯಕನ್ಯಾ ಗುರುಕುಲದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ, ಭಾರತದ ಪ್ರಸಿದ್ಧ ಮುಣಿಪುರಿ ನೃತ್ಯಗಾರ್ತಿ ಡಾ ಸವಿತಾ ದೀದಿ ಮೆಹತಾ ಅವರ ನೆನಪಿನಲ್ಲಿರುವ ವಸ್ತುಸಂಗ್ರಹಾಲಯವನ್ನು. ನೃತ್ಯವನ್ನು ತಮ್ಮ ಜೀವನದ ಉಸಿರಾಗಿ ಹೊಂದಿದ್ದಾ ಸವಿತಾ ದೀದಿ ತಮ್ಮ ಸಾಧನೆಯ ಜೊತೆಜೊತೆಗೆ ಅನೇಕ ನೃತ್ಯಗಾರರನ್ನು ತಯಾರುಮಾಡಿ ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಂಡವರು.
ಅವರ ವೈಯಕ್ತಿಕ ಮತ್ತು ವೃತ್ತಿ ಬದುಕಿನ ಅನೇಕ ಸಲಕರಣೆಗಳ ಜೊತೆಜೊತೆಗೆ ಗುಜರಾತಿನ ಅದರಲ್ಲೂ ಸೌರಾಷ್ಟ್ರ ಭಾಗದ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜನಜೀವನಶೈಲಿಯನ್ನು ಪರಿಚಯಿಸುವ ಅಪರೂಪದ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿದ್ದಾರೆ. ಇವೆಲ್ಲವನ್ನೂ ನೋಡಿಕೊಂಡು ನಾನು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಆ ವಸ್ತುಸಂಗ್ರಹಾಲಯದ ಉಸ್ತುವಾರಿ ಯುವತಿ ನನ್ನನ್ನು ಮಾತನಾಡಿಸಿದಳು. ನಾನು ದೂರದ ಕರ್ನಾಟಕದಿಂದ ಬಂದಿರುವುದನ್ನು ತಿಳಿದ ಅವಳು, “ಡಾ ಸವಿತಾ ದೀದಿ ಅವರ ಜೀವನ ಮತ್ತು ಸಾಧನೆಯನ್ನು ತಿಳಿಸುವ ಹತ್ತು ನಿಮಿಷದ ಸಾಕ್ಷಚಿತ್ರವಿದೆ. ತಮಗೆ ಸಮಯವಿದ್ದರೆ ತೋರಿಸುತ್ತೇನೆ” ಎಂದಳು. ಬೆಳ್ಳಂಬೆಳಗ್ಗೆ ಆಕೆ ಮ್ಯೂಜಿಯಂ ಬಾಗಿಲು ತೆರೆಯುತ್ತಿದ್ದಂತೆ ಚಿಟಿಚಿಟಿ ಮಳೆಯಲ್ಲಿ ಮೊದಲ ಯಾತ್ರಿಕನಾಗಿ ನಾನು ಒಳಗೆ ಕಾಲಿಟ್ಟಿದ್ದೆ. ಅಲ್ಲಿ ನನ್ನನ್ನು ಬಿಟ್ಟರೆ ಇನ್ನೂ ಯಾರೂ ಬಂದಿರಲಿಲ್ಲ. ಆದರೂ ಆಕೆ ಆ ಸಾಕ್ಷಚಿತ್ರ ನೋಡಲು ಮಾಡಿದ ಗ್ಯಾಲರಿಗೆ ನನ್ನನ್ನು ಕರೆದುಕೊಂಡು ಹೋಗಿ ನನ್ನೊಬ್ಬನಿಗೇ ಅದನ್ನು ತೋರಿಸಿದಳು. ಆ ಪ್ರಸಿದ್ಧ ನೃತ್ಯಗಾರ್ತಿಗೆ ಮತ್ತು ಅದನ್ನು ಪರಿಚಯಮಾಡಿಸಿದ ಈ ಯುವತಿಗೆ ಧನ್ಯವಾದ ಸಲ್ಲಿಸಿ ಹೊರಗೆ ಬಂದೆ.
ಸವಿತಾ ದೀದಿ ವಸ್ತುಸಂಗ್ರಹಾಲಯಕ್ಕೆ ಹತ್ತಿರದಲ್ಲಿಯೇ ಇರುವ ಮತ್ತೊಂದು ನೋಡತಕ್ಕ ಸ್ಥಳವೆಂದರ ಅದು ಭಾರತ ಮಂದಿರ. ಇದೊಂದು ದೊಡ್ಡ ಹಾಲ್ ಇರುವ ಬಹಳಷ್ಟು ಕಂಬಗಳಿರುವ ಆದರೆ ನಡುವೆ ಎಲ್ಲಿಯೂ ಗೋಡೆಗಳಿಲ್ಲದ ಒಂದು ಮಂದಿರ. ಇದರ ವಿಶೇಷತೆ ಎಂದರೆ ಭಾರತದ ಜನಜೀವನದ ಭಾಗವಾಗಿರುವ, ಇಲ್ಲಿನ ಪುರಾಣ ಇತಿಹಾಸಗಳಲ್ಲಿ ಬರುವ ಅನೇಕ ಮಹಾನ್ ವ್ಯಕ್ತಿಗಳ ಚಿತ್ರಗಳನ್ನು ಇಲ್ಲಿನ ಕಂಬಗಳಲ್ಲಿ ಬರೆಸಿರುವುದು. ಪುರಾಣದ ಋಷಿಮುನಿಗಳು, ಇತಿಹಾಸದ ರಾಜರು ಹಾಗೆಯ ಪ್ರಾಚೀನ ಮತ್ತು ಮಧ್ಯಕಾಲೀನ ಭಾರತದ ಧಾರ್ಮಿಕ ಪುರುಷರು ಮಹಿಳೆಯರು ಚಿತ್ರಿತರಾಗಿರುವ ಈ ಮಂದಿರದಲ್ಲಿ ದಕ್ಷಿಣ ಭಾರತದ ಯಾರಾದರೂ ಇದ್ದಾರೆಯೇ ಎಂದು ಸಹಜವಾಗಿ ಹುಡುಕಾಡಿದೆ. ಆದರೆ ಆ ವಿಷಯದಲ್ಲಿ ತುಸು ನಿರಾಶೆಯಾಯಿತು.
ಬಸವಣ್ಣ,
ಅಕ್ಕಮಹಾದೇವಿ, ತಿರುವಳ್ಳರ್, ಅವರಂತಹ ಸಂತರಾಗಲೀ ವಿಜಯನಗರ ಸೇರಿದಂತೆ ಯಾವುದೇ ಪ್ರಸಿದ್ಧ ರಾಜರಾಗಲಿ
ಅಲ್ಲಿ ನನಗೆ ಕಾಣಲಿಲ್ಲ. ಇತಿಹಾಸ ಎಂದರೆ ಅದು ಉತ್ತರ ಭಾರತದ ರಾಜರ ಇತಿಹಾಸ. ಧರ್ಮ-ಸಂಸ್ಕೃತಿ ಅಂದರೆ
ಅದು ಉತ್ತರ ಭಾರತದ ಧರ್ಮ-ಸಂಸ್ಕೃತಿ ಎಂಬ ತಿಳಿವಳಿಕೆ ಇದಕ್ಕೆ ಕಾರಣ ಇದ್ದರೂ ಇದ್ದೀತು. ಭಾರತ ಮಂದಿರದಲ್ಲಿ
ಒಂದು ಸುತ್ತುಹಾಕಿಕೊಂಡು ಹೊರಗಡೆ ಆವರಣದಲ್ಲಿ ನಿಲ್ಲಿಸಿರುವ ಕೆಲವು ಸ್ವಾತಂತ್ರ್ಯಹೋರಾಟಗಾರರ ಮೂರ್ತಿಗಳ
ಹತ್ತಿರ ನಿಂತು ಒಂದು ಪೋಟೋ ಹೊಡೆದುಕೊಂಡು ಹೊರಬಂದೆ. ಭಾರತ ಮಂದಿರದ ಎದುರಿಗೇ ನೆಹರೂ ತಾರಾಮಂದಿರ
ಇತ್ತು. ಅದಕ್ಕೆ ಅಂದು ರಜೆಯ ದಿನವಾಗಿದ್ದರಿಂದ ತೆರೆದಿರಲಿಲ್ಲ. ತಾರಾಮಂದಿರಗಳನ್ನು ನಾನು ಈಗಾಗಲೇ
ಕೋಲ್ಕತ್ತಾ, ಪ್ರಯಾಗ್‌ರಾಜ್ ನ ನೆಹರೂ ಅವರ ಮನೆ ʼಆನಂದಭವನʼ ಮುಂತಾದ ಅನೇಕ ಕಡೆ ನೋಡಿದ್ದೆನಾದ್ದರಿಂದ
ಅದು ತಪ್ಪಿದ್ದಕ್ಕೆ ಬೇಸರವೇನೂ ಆಗಲಿಲ್ಲ. ಹೊರಗಿನಿಂದಲೇ ಒಂದು ಹಾಜರಿಫೋಟೋ ಹೊಡೆದುಕೊಂದು ಅಲ್ಲಿಂದ
ಹೊರಟೆ.
ʻಶ್ರೀಮಂತ ಭಕ್ತಿʼಯ ಶ್ರೀಹರಿಮಂದಿರ!
ಭಾರತ್ ಮಂದಿರ, ತಾರಾಮಂದಿರ ವಸ್ತುಸಂಗ್ರಹಾಲಯ ಇವುಗಳನ್ನು ನೋಡಿಕೊಂಡು ಊರಿನ ಹೊರಭಾಗದಲ್ಲಿ ಕಟ್ಟಲಾಗಿರುವ ಬೃಹತ್ ಹರಿಮಂದಿರಕ್ಕೆ ಹೋದೆ. ಭಾರತದ ಬಹುತೇಕ ಕಡೆ ಹರಿಮಂದಿರಗಳು ಹೇಗೆ ಇವೆಯೋ ಇಲ್ಲಿಯೂ ಅದು ಹಾಗೇ ಭವ್ಯವಾಗಿದೆ. ಭಕ್ತಿ ಎಂಬುದು ಬಡವರದ್ದಲ್ಲ ಅದು ಶ್ರೀಮಂತರದ್ದು ಎನ್ನುವುದನ್ನು ನೋಡಬೇಕೆನಿಸಿದರೆ ನೀವು ಯಾವುದಾರೂ ಒಂದು ಹರಿಮಂದಿರಕ್ಕೆ ಹೋಗಿ ನೋಡಬೇಕು! ನಾನು ಅಲ್ಲಿಗೆ ಹೋದಾಗ ಜಿಟಿಜಿಟಿ ಮಳೆ ಇನ್ನೂ ಬಿಟ್ಟಿರಲಿಲ್ಲ. ಹರಿಮಂದಿರದ ಆವರಣವನ್ನು ಪ್ರವೇಶಿಸುತ್ತಿದ್ದಂತೆ ದೊಡ್ಡದಾದ ಭಜನೆ ಧ್ವನಿವರ್ದಕದಲ್ಲಿ ಕೇಳಿಬರುತ್ತಿತ್ತು.
ಒಳಹೋಗಿ
ನೋಡಿದಾಗ ಹರಿಯ ಮೂರ್ತಿ ಇರುವ ಬೃಹತ್ ಆದ ಸಭಾಮಂಟಪದಲ್ಲಿ ನೂರಾರು ವಟುಗಳು ಸಾಮೂಹಿಕವಾಗಿ ವಾಧ್ಯಗಳ
ಸಮೇತ ಭಜನೆಯಲ್ಲಿ ತೊಡಗಿದ್ದರು. ಹಾಗೆ ಅದನ್ನೆಲ್ಲ ನೋಡಿಕೊಂಡು ಶ್ರೀಹರಿಗೆ ಒಂದು ನಮಸ್ಕಾರವನ್ನೂ
ಹಾಕಿ ಆ ಕಟ್ಟಡದ ಪಕ್ಕದ ಇನ್ನೊಂದು ಕಟ್ಟಡದಲ್ಲಿ ನವರಾತ್ರಿಯ ಅಂಗವಾಗಿ ನಡೆಯುತ್ತಿದ್ದ ವಿಶೇಷ ಪೂಜೆ
ಮತ್ತು ಭಜನೆ ನಡೆಯುತ್ತಿದ್ದದ್ದನ್ನೂ ನೋಡಿಕೊಂಡು ಒಂದಿಷ್ಟು ಹೊತ್ತು ಅದನ್ನು ಆಲಿಸಿ ಆವರಣದಲ್ಲಿ
ಒಂದು ಸುತ್ತುಹಾಕಿ ಹೊರಬಂದೆ. ನಾನು ಮುಖ್ಯವಾಗಿ ಪೋರಬಂದರಿನಲ್ಲಿ ಗಾಂಧೀಜಿ ಅವರು ಹುಟ್ಟಿಬೆಳೆದ ಮನೆಯನ್ನು
ನೋಡಬೇಕಾಗಿತ್ತು.
ಅಲ್ಲಿಗೆ
ಕರೆದೊಯ್ಯಲು ನನ್ನ ಮಾರ್ಗದರ್ಶಕನಿಗೆ ಹೇಳಿದಾಗ ಆತ ʻಆ
ಮಂದಿರ ದಿನವಿಡಿ ತೆರೆದಿರುತ್ತದೆ ಸಾರ್ ಹತ್ತಿರದಲ್ಲಿಯೇ ಸುಧಾಮ ಮಂದಿರ ಇದೆ ಅದನ್ನು ನೋಡಿಕೊಂಡು
ಹೋಗೋಣʼ ಎಂದು ಹೇಳಿದ. ʼಸರಿ ಎಂದು ಅತ್ತ ಹೇಳಿದ ಕಡೆಗೇನೇ ಹೊರಟೆವು.
ಬೀದಿನಾಯಿಗಳ ಆವಾಸವಾಗಿರುವ ʻಸುಧಾಮ ಮಂದಿರ!”
ʻಸುಧಾಮಮಂದಿರʼ
ಪೌರಾಣಿಕ ಕೃಷ್ಣನ ಸ್ನೇಹಿತನಾದ ಸುಧಾಮನ ಹೆಸರಿನಲ್ಲಿರುವ ಮಂದಿರ. ಕೃಷ್ಣನ ದ್ವಾರಕೆಗೂ ಇಲ್ಲಿಗೂ ಸುಮಾರು
ಒಂದು ನೂರಾ ಐವತ್ತು ಕಿಲೋಮೀಟರ್ ದೂರ. ನಾನು ಪೋರಬಂದರಿನಲ್ಲಿ ಇಳಿಯುತ್ತಿದ್ದಂತೆ ಸಣ್ಣದಾಗಿ ಶುರುವಾದ
ಮಳೆ ಬರುಬರುತ್ತಾ ಬಿರುಸಾಗತೊಡಗಿತು. ಈ ಸುಧಾಮ ಮಂದಿರಕ್ಕೆ
ಹೊರಡುವಾಗಲಂತೂ ಜೋರಾಗಿಯೇಬಿಟ್ಟಿತು. ಮಳೆಗಾಲವಲ್ಲದ ಕಾರಣ ಛತ್ರಿರಹಿತನಾಗಿ ಹೋಗಿದ್ದ ನನಗೆ ಅನಿವಾರ್ಯವಾಗಿ
ಅಲ್ಲಿ ಛತ್ರಿಯೊಂದನ್ನು ಕೊಳ್ಳಬೇಕಾಗಿ ಬಂತು. ಆಶ್ಚರ್ಯವೆಂದರೆ ನಾನು ಛತ್ರಿ ಕೊಂಡು ಐದು ನಿಮಿಷಕ್ಕೇ
ಮಳೆ ಸಣ್ಣದಾಗತೊಡಗಿತಾದರೂ ಸಂಪೂರ್ಣ ನಿಲ್ಲಲಿಲ್ಲ. ನನ್ನ ಛತ್ರಿಗೆ ಹೆದರಿರಬೇಕು ಅಂದುಕೊಂಡು ಸುಧಾಮ
ಮಂದಿರದ ಕಡೆ ಹೊರಟೆ.
ಸುಧಾಮ
ಮಂದಿರ ಒಂದು ಹಳೆಯ ಕಟ್ಟಡ. ಪಟ್ಟಣದ ಹೃದಯ ಭಾಗದಲ್ಲಿರುವ ಈ ಮಂದಿರ ಸ್ವಚ್ಛತೆಯ ದೃಷ್ಟಿಯಿಂದ ಬಹಳ
ಕೆಟ್ಟದ್ದಾಗಿದೆ. ಬಹುಶಃ ಆತ ಹುಟ್ಟಿ ಬೆಳೆದಿರಬಹುದಾದ ಮನೆಯೂ ಇದು ಆಗಿದ್ದೀತು. ಎದರು ಬದರು ಇರುವ
ಎರಡು ಕಟ್ಟಡಗಳಲ್ಲಿ ಒಂದರಲ್ಲಿ ಮಾತ್ರ ಮೂರ್ತಿಯಿದ್ದು ಪೂಜೆ ಇತ್ಯಾದಿ ನಡೆಯುತ್ತಿವೆ. ಅದರ ಮುಂದಿರುವ
ಕಟ್ಟಡ ಹಾಳುಬಿದ್ದಿದೆ. ನಾನು ಹೋದಾಗ ಅಲ್ಲಿ ಎಲ್ಲೆಂದರಲ್ಲಿ ನಾಯಿಗಳು ಮಲಗಿಕೊಂಡಿದ್ದವು. ಗಲೀಜು
ಕೂಡ ಸಾಕಷ್ಟು ಇತ್ತು. ಈ ದುರ್ಗತಿಯ ಸ್ಥಿತಿಯ ಕಟ್ಟಡವನ್ನು ನೋಡಿ ಹೊರಬರುವಾಗ ಅಲ್ಲಿ ಕಟ್ಟಡದ ಮುಂದಿನ
ಹೂತೋಟದಲ್ಲಿ ಸ್ಥಾಪಿತವಾಗಿರುವ, ಕೃಷ್ಣನ್ನು ಪ್ರೀತಿಯಿಂದ ತನ್ನ ಗೆಳೆಯ ಸುಧಾಮನನ್ನು ಅಪ್ಪಿಕೊಂಡಿರುವ
ಒಂದು ಆಕರ್ಷಕವಾದ ಮೂರ್ತಿ ಮಾತ್ರ ಖುಷಿಕೊಟ್ಟಿತು. ಅಲ್ಲೊಂದು ಫೋಟೋ ತೆಗೆದುಕೊಂಡು ಹೊರಟೆ. ಸುಧಾಮ
ಮಂದಿರದ ಮುಂದೆ ಕಾಡುವ ಬಿಕ್ಷುಕರನ್ನು ತಪ್ಪಿಸಿಕೊಂಡು ಹೊರಡುವುದೂ ಒಂದು ಸಾಹಸವೇ ಎನ್ನಬೇಕು!
ಮಳೆಯ
ಕಾರಣದಿಂದ ಮೈಕೈ ಬಿಚ್ಚಿ ತಿರುಗಾಡುವ ವಾತಾವರಣವೇ ಇಲ್ಲದ ಕಾರಣ ಅನುಕೂಲವಿದ್ದಿದ್ದರೆ ನೋಡಬಹುದಾಗಿದ್ದ
ಕೆಲವು ಸ್ಥಳಗಳನ್ನು ರದ್ದುಪಡಿಸಿ ನಾನು ಗಾಂಧೀಜಿಯವರು ಹುಟ್ಟಿಬೆಳೆದ ಮನೆಯನ್ನು ನೋಡಲು ಹೊರಟೆ. ಅದು
ನನ್ನ ಪೋರಬಂದರ್ ಭೇಟಿಯ ಪುಮುಖ ಉದ್ದೇಶವೇ ಆಗಿದ್ದರಿಂದ ಅದನ್ನು ನಾನು ತಪ್ಪಿಸಿಕೊಳ್ಳುವಂತೆಯೇ ಇರಲಿಲ್ಲ.
ಮಧ್ಯಾಹ್ನ ಮೂರು ಗಂಟೆಗೆ ನಾನು ಅಲ್ಲಿಂದ ಸೋಮನಾಥಕ್ಕೆ ಸೋಮನಾಥಮಂದಿರವನ್ನು ನೋಡಲು ಬೇರೆ ಹೊರಡುವುದು
ನಿಗಧಿಯಾಗಿತ್ತು.
ನನ್ನ
ಮಾರ್ಗದರ್ಶಕ ಪೋರಬಂದರಿನ ಕೆಲವು ದೊಡ್ಡ ರಸ್ತೆಗಳನ್ನು ಹಾದು ಚಿಕ್ಕ ರಸ್ತೆಗಳಿಗೆ ಪ್ರವೇಶಿಸಿ ಒಳಗೆ
ಒಳಗೆ ಹೋಗುತ್ತಾ ಅತ್ಯಂತ ಚಿಕ್ಕದಾದ ಮುಡಕಿಯಂತಹ ದಾರಿಗಳ ಮೂಲಕ ಸುತ್ತೂಬಳಸಿ ಮಾರುಕಟ್ಟೆಯ ಮಧ್ಯದ
ಒಂದು ಸ್ಥಳಕ್ಕೆ ನನ್ನನ್ನು ಕರೆದುಕೊಂಡು ಬಂದು, ʼಅದೋ ಅಲ್ಲಿ ಕಾಣುತ್ತೆ ನೋಡಿ ಎತ್ತರವಾದ ಒಂದು ಕಟ್ಟಡ.
ಅದೇ ಗಾಂಧೀಜಿ ಅವರು ಹುಟ್ಟಿದ ಮನೆ ಕೃತಿಮಂದಿರ. ಅಲ್ಲಿಗೆ ಆಟೋ ಹೋಗೋದಿಲ್ಲ. ನಾನು ಇಲ್ಲಿಯೇ ಕಾಯುತ್ತಿರುತ್ತೇನೆ
ನೀವು ಹೋಗಿ ಬನ್ನಿʼ ಎಂದು ನನ್ನನ್ನು ಇಳಿಸಿದ. ಅವನು ತೋರಿಸಿದ ಕಟ್ಟಡ ಸ್ವಲ್ಪವೇ ದೂರದಲ್ಲಿದ್ದರೂ
ಅದಕ್ಕೆ ಹೋಗಲು ಇದ್ದದ್ದು ಆಟೋ ಕೂಡ ಹೋಗಲಾರದಷ್ಟು ಕಿರಿದಾದ ದಾರಿ! ಇವನು ನನ್ನನ್ನು ಕರೆತಂದದ್ದು
ಯಾವುದೋ ಬೇರೆ ದಾರಿಯಿರಬೇಕು. ಆ ಕಟ್ಟಡಕ್ಕೆ ಬರಲು ವಿಶಾಲವಾದ ದಾರಿ ಬೇರೆ ಕಡೆಯಿಂದ ಇರಬಹುದು ಎಂಬುದು
ನನ್ನ ಎಣಿಕೆಯಾಗಿತ್ತು. ಆದರೆ ಅಲ್ಲಿ ಹೋಗಿ ನೋಡಿದಾಗ ಆ ಮನೆಗೆ ಹೋಗಲು ನಾನು ಹೋದ ಕಿರಿದಾದ ದಾರಿಯೇ
ಇದ್ದದ್ದರಲ್ಲಿ ದೊಡ್ಡದಾಗಿತ್ತು!
ಬಾಪು ಹುಟ್ಟಿ ಬೆಳದ ʻಕೃತಿಮಂದಿರʼ
ಕೃತಿಮಂದಿರʼ ಮೊದಲೇ ಹೇಳಿದಂತೆ ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರು ಹುಟ್ಟಿಬೆಳೆದ ಅವರ ಪೂರ್ವಜರ ಮನೆ. ನನ್ನ ಯೌವನದ ಆರಂಭಿಕ ದಿನಗಳಲ್ಲಿ ಗಾಂಧೀಜಿಯವರ ಆತ್ಮಕಥೆಯನ್ನು ಓದಿದ್ದ ನನಗೆ ಅವರು ಆರಂಭದ ಪುಟಗಳಲ್ಲಿ ಕೊಡುವ ಅವರ ಪೂರ್ವಜರ ವಿವರಗಳು ತಂದೆ ತಾಯಿಗಳ ಗುಣಸ್ವಭಾವಗಳು ಕಾಥೇವಾಡ ಪ್ರದೇಶದ ವಿವರಣೆ ಇತ್ಯಾದಿ ತುಂಬಾ ಮನಸ್ಸಿಗೆ ನಾಟಿದ್ದವು. ಅವರು ತಮ್ಮ ತಾಯಿಯ ಧಾರ್ಮಿಕ ಸ್ವಭಾವ ಅವರ ದೈನಿಂದಿನ ಜೀವನಶೈಲಿ ಇತ್ಯಾದಿಗಳನ್ನು ಕಟ್ಟಿಕೊಟ್ಟ ಬಗೆ ಬಹಳ ಹಿಡಿಸಿದ್ದವು. ಬಾಲ್ಯದಲ್ಲಿ ಅವರು ಮದುವೆಯಾದದ್ದು ಕಾಮಾಸಕ್ತಿಯಿಂದ ರೋಗ ಮತ್ತು ವೃದ್ಧಾಪ್ಯದಿಂದ ನರಳುವ ತಂದೆಯನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ದಕ್ಕೆ ಅವರು ಪಡುವ ಪಾಶ್ಚಾತ್ತಾಪ ಮನಸ್ಸನ್ನು ಕರಗಿಸಿತ್ತು. ಅಪ್ಪನ ಜೇಬಿನಿಂದ ದುಡ್ಡು ಕದ್ದದ್ದು ಅದನ್ನು ಹೇಳಲಾಗದೆ ಹಾಳೆಯಲ್ಲಿ ಬರೆದು ಅಪ್ಪನಿಂದ ಕ್ಷಮೆ ಕೇಳಿದ್ದು ಈ ಘಟನೆಗಳು ಇವತ್ತಿಗೂ ನನ್ನ ಮನಸ್ಸಿನಿಂದ ಹೊರಹೋಗಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಅವರು ಆರಂಭಿಕ ಜೀವನವನ್ನು ಕಳೆದ ಈ ಮನೆಯನ್ನು ನೋಡಲು ನಾನು ಸಹಜವಾಗಿಯೇ ತೀವ್ರಾಸಕ್ತನಾಗಿದ್ದೆ ಎಂದು ಬೇರೆ ಹೇಳಬೇಕಾಗಿಲ್ಲ.ನಾನು
ಕೃತಿಮಂದಿರಕ್ಕೆ ಹೋದಾಗ ಮಳೆ ಸಣ್ಣದಾಗಿ ಹನುಕುತ್ತಲೇ ಇತ್ತು. ಈ ಮನೆಯು ಆ ಕಾಲದ ಅನುಕೂಲಸ್ಥರ ಮನೆಯೇ
ಆಗಿದ್ದು ಸಾಕಷ್ಟು ದೊಡ್ಡದಿದೆ. ಮನೆಯ ಸುತ್ತಮುತ್ತ ಮುಂಭಾಗದಲ್ಲಿ ಜಾಗೆ ಇಲ್ಲವಾದರೂ ಮುಂಬಾಗಿಲನ್ನು
ದಾಟಿದ ಮೇಲೆ ಮುಖ್ಯಮನೆಯ ಮುಂಭಾಗದಲ್ಲಿ ಚಾವಣಿ ಇಲ್ಲದ ದೊಡ್ಡ ಹಜಾರದಂತಹ ವಿಶಾಲವಾದ ಸ್ಥಳವಿದೆ. ಅಲ್ಲಿಕೆಲವು
ಕೆಲಸಗಾರರು ತಾತ್ಕಾಲಿಕ ಪೆಂಡಾಲ್ ಹಾಕುತ್ತಿದ್ದರು. ನಾನು ಹೋದಾಗ ಶಾಮಿಯಾನಿನ ಮೇಲೆ ತಾಡಪಲ್ಲುಗಳನ್ನು
ಎಳೆಯುತ್ತಿದ್ದರು. ಅವೆಲ್ಲವೂ ಇನ್ನೆರಡು ಮೂರು ದಿನಗಳಲ್ಲಿ ನಡೆಯಲಿರುವ ಗಾಂಧೀ ಜಯಂತಿಯ ಕಾರ್ಯಕ್ರಮಕ್ಕಾಗಿ
ಅವರು ಮಾಡುತ್ತಿರುವ ವ್ಯವಸ್ಥೆ ಎಂದು ಅರ್ಥವಾಗಲು ನನಗೆ ಬಹಳ ಹೊತ್ತು ಬೇಕಾಗಲಿಲ್ಲ. ಆದರೂ ಅಲ್ಲಿನ
ಕೆಲಸಗಾರರನ್ನು ಖಾತರಿಗಾಗಿ ಕೆಳಿದೆ. ಅವರೂ ʼಹೌದುʼ ಎಂದರು.
ಕೆಳಭಾಗದಲ್ಲಿ
ಮನೆಯ ಮಧ್ಯಭಾಗದಲ್ಲಿ ಗಾಂಧೀಜಿ ಮತ್ತು ಕಸ್ತೂರ್ಬಾ ಅವರ ಜೋಡಿ ಪ್ರತಿಮೆಗಳನ್ನು ಇಡಲಾಗಿದ್ದು ಅಲ್ಲಿ
ನೆನಪಿಗಾಗಿ ನಾವು ಸುಂದರವಾದ ಒಂದು ಫೋಟೋ ತೆಗೆದುಕೊಳ್ಳಬಹುದು. ಇನ್ನು ಮನೆಯ ಹೊರ ಆವರಣದ ಸುತ್ತಲೂ
ಗಾಂಧೀಜಿಯವರ ಬದುಕಿನ ವಿವಿಧ ಮಹತ್ವದ ಘಟನೆಗಳನ್ನು ಬಿಂಬಿಸುವ ಕೆಲವು ಮಹತ್ವದ ಫೋಟೋಗಳನ್ನು ಹಾಕಲಾಗಿದೆ.
ಕೆಳಮನೆಗೆ ಮನೆಯ ಬಲಬಾಗದಲ್ಲಿ ಪ್ರವೇಶವಿರುವ ಬಾಗಿಲಿನಿಂದ ಪ್ರವೇಶಿಸಿದರೆ ಅಲ್ಲಿ ಮಹಾತ್ಮಅವರು ಹುಟ್ಟಿದ
ಕೋಣೆಯಿದೆ. ಅಲ್ಲಿ ಅವರು ಹುಟ್ಟಿದ ಸ್ಥಳವನ್ನು ಗುರುತುಮಾಡಿದ್ದಾರೆ. ಕೊಠಡಿಯ ಹೊರಗೆ ಮಹಾತ್ಮಾಗಾಂಧಿ ಈ ಕೊಠಡಿಯಲ್ಲಿಯೇ ಹುಟ್ಟಿದರು
ಎಂದು ಬೋರ್ಡನ್ನು ಕೂಡ ಹಾಕಿದ್ದಾರೆ. ಒಳಗೆ ಹೋಗಿ ಸುತ್ತಾಡಿ ಬರುವುದೇ ಒಂದು ವಿಶಿಷ್ಟ ಅನುಭವ.
ಇಷ್ಟನ್ನು
ನೋಡಿಕೊಂಡು ನಾವು ಮನೆಯ ಮೇಲ್ಮಹಡಿಗಳಿಗೆ ಏರಬಹುದು. ಮನೆಯು ಬಹಳ ಹಳೆಯ ಕಾಲದ್ದಾಗಿದ್ದು ಅದು ನಮ್ಮಲ್ಲಿರುವಂತೆಯೇ
ಅಗಲವಿಲ್ಲದ ಕಿರಿದಾದ ಕಟ್ಟಿಗೆಯ ಮೆಟ್ಟಿಲುಗಳನ್ನು ಹೊಂದಿದೆ. ಮೇಲಿನ ಎರಡು ಮೂರು ಮಹಡಿಗಳಲ್ಲಿ ಅನೇಕ
ಕೊಠಡಿಗಳಿವೆಯಾದರೂ ಅವುಗಳಲ್ಲಿ ಏನನ್ನೂ ಇಡಲಾಗಿಲ್ಲ. ಎಲ್ಲ ಖಾಲೀ ಇವೆ. ಪ್ರಯತ್ನಿಸಿದರೆ ಕುಪ್ಪಳಿಯ
ಕುವೆಂಪು ಮನೆಯನ್ನು ಮಾಡಿದಂತೆ ಬಹಳಷ್ಟು ಆಕರ್ಷಣೀಯ ವಸ್ತುಸಂಗ್ರಹಾಲಯವನ್ನಾಗಿ ಅದನ್ನು ಮಾಡಬಹುದು
ಅನ್ನಿಸಿತು.
ಹಲವು ಔಚಿತ್ಯಗಳ ಕಸ್ತೂರ್ಬಾನಿವಾಸ
ಕೃತಿಮಂದಿರವನ್ನು
ನೋಡಿಕೊಂಡು ಆ ಮನೆಯ ಹಿಂಬಾಗಿಲಿನಿಂದಲೇ ಇರುವ ಕಾಲುದಾರಿಯ ಮೂಲಕ ಕೃತಿಮಂದಿರದ ಹಿಂದೆಯೇ ಇರುವ ಇನ್ನೊಂದು
ಮನೆಗೆ ನಾವು ಹೋಗಲೇಬೇಕು. ಬಹಳಷ್ಟು ಜನ ಇದನ್ನು ಗಮನಸಿದೇ ಅಥವಾ ಗೊತ್ತಿಲ್ಲದೆ ಅದನ್ನು ನೋಡದೇ ಬಂದುಬಿಡುತ್ತಾರೆ.
ಅದೆಂದರೆ ಇಡೀ ಸ್ವತಂತ್ರ ಹೋರಾಟದ ಪಯಣದಲ್ಲಿ ಗಾಂಧೀಜಿಯ ಜೊತೆಗಿದ್ದು ಕೊನೆಗೆ ಈಗಿನ ಮಹಾರಾಷ್ಟ್ರದ
ಪುಣೆಯ ಆಗಾಖಾನ್ ಸೆರೆಮನೆಯಲ್ಲಿ ತಮ್ಮ ಕೊನೆಯುಸಿರನ್ನು ಎಳೆದ ಗಾಂಧೀಜಿಯವರ ಹೆಂಡತಿ ಕಸ್ತೂರ್ಬಾ
ಅವರು ಹುಟ್ಟಿದ ಮನೆ.
ಗಾಂಧೀಜಿ
ಅವರು ತಮ್ಮ ಜೀವನ ಚರಿತ್ರೆಯಲ್ಲಿ ಹೆಂಡತಿಯೊಂದಿಗಿನ ತಮ್ಮ ಸಂಬಂಧದ ಬಗ್ಗೆ ಸಾಕಷ್ಟು ವಿವರಣೆಯನ್ನು
ನೀಡಿದ್ದಾರೆ. ಅವರ ವಾಸ್ತವದಲ್ಲಿ ಹೆಂಡತಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುವ ಒಳ್ಳೆಯ ಗಂಡನೇನೂ
ಆಗಿರಲಿಲ್ಲ ಎಂಬುದು ಅವರ ವಿವರಗಳಿಂದಲೇ ತಿಳಿಯುತ್ತದೆ. ಅವರ ಮಧ್ಯೆ ಎಲ್ಲ ಗಂಡಹೆಂಡತಿಯರ ನಡುವೆ ನಡೆಯುವಂತೆ
ಸಾಕಷ್ಟು ಜಗಳಗಳು ನಡೆಯುತ್ತಿದ್ದವು. ಒಂದು ಸಲ ಯಾವುದೋ ಕಾರಣಕ್ಕೆ ಜಗಳ ಮಿತಿಮೀರಿ ಗಾಂಧೀಜಿ ತಾಳ್ಮೆ
ಕಳೆದುಕೊಂಡು ಹೆಂಡತಿಯ ತಲೆಯ ಕೂದಲನ್ನು ಹಿಡಿದು ಆಕೆಯನ್ನು ದರದರ ಎಳೆದುಕೊಂಡು ಮನೆಯಿಂದ ಹೊರಹಾಕುವ
ಘಟನೆಯಂತೂ ನನಗೆ ಈಗಲೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ.
ಕಸ್ತೂರ್ಬಾ
ಅವರ ಮನೆಕೂಡ ಒಂದು ಹಳೆಯ ಕಾಲದ ಎರಡು-ಮೂರು ಅಂತಸ್ತುಗಳ ಮನೆ. ಇದಕ್ಕೂ ಕೂಡ ಸರಿಯಾದ ದಾರಿಗಳಿಲ್ಲ.
ಮುಡುಕಿಯಂತ ಅಂಕುಡೊಂಕಿನ ದಾರಿಯಲ್ಲಿ ಸುತ್ತುಬಳಸಿ ನಡೆಯುತ್ತಾ ಇದಕ್ಕೆ ಹೋಗಬೇಕು. ಈ ಮನೆಯ ಮುಂದೆ
ಕೂಡ ಹಾಕಲಾಗಿರುವ ʻಕಸ್ತೂರ್ಬಾ ಗಾಂಧಿ ಅವರು ಹುಟ್ಟಿದ ಮನೆʼ ಎಂಬ ಬೋರ್ಡು ಓದಿಕೊಂಡು ಮನೆಯ
ಒಳಗೆ ಕಾಲಿಡುತ್ತಿದ್ದಂತೆಯೇ ಅಲ್ಲಿನ ಮೇಲ್ವಿಚಾರಕ ನನ್ನನ್ನು ಪ್ರೀತಿಯಿಂದ ಮಾತನಾಡಿಸಿ ಮನೆಯ ಪ್ರತಿಯೊಂದು
ಕೊಠಡಿಗೂ ಕರೆದುಕೊಂಡು ಹೋಗಿ ಅವುಗಳ ಪರಿಚಯ ಮಾಡಿಸಿದ. ಕಸ್ತೂರ್ಬಾ ಅವರ ಮನೆಯಲ್ಲಿ ಕೂಡ ಅವರು ತಾಯಗರ್ಭದಿಂದ
ಹೊರಬಂದ ಸ್ಥಳವನ್ನು ಸ್ವಸ್ತಿಕ್ ಮಾರ್ಕಿನಿಂದ ಗುರುತು ಮಾಡಲಾಗಿದೆ. ಅದರ ಹಿಂದೆ ಗೋಡೆಗೆ ಕಸ್ತೂರ್ಬಾ
ಅವರ ಫೋಟೋವೊಂದನ್ನು ಹಾಕಲಾಗಿದೆ. ಅಲ್ಲಿ ಹೋಗಿ ಆ ಮಹಾಚೇತನಕ್ಕೆ ನಮಸ್ಕಾರ ಮಾಡಿ ಮನೆಯ ವಿವಿಧ ಕೋಣೆಗಳನ್ನು
ನೋಡಲು ಹೋದೆ.
ಈ
ಮನೆಕೂಡ ತುಂಬಾ ಚಿಕ್ಕಚಿಕ್ಕದಾದ ಆದರೆ ಬಹಳಷ್ಟು ಕೋಣೆಗಳಿರುವ ದೊಡ್ಡಮನೆಯೇ. ಈ ಮನೆ ಮತ್ತು ಗಾಂಧೀಜಿಯವರ
ಮನೆ ಎರಡಕ್ಕೂ ಅನ್ವಯಿಸಿ ಹೇಳಬಹುದಾದ ಕೆಲವು ಮಾತುಗಳೆಂದರೆ ಈ ಎರಡೂ ಮನೆಗಳ ಅನೇಕ ಕೊಠಡಿಗಳಿಗೆ ಕಿಟಕಿಗಳಿಲ್ಲ.
ಆದಾಗ್ಯೂ ಕರೆಂಟು ಇಲ್ಲದ ಆ ಕಾಲದಲ್ಲಿ ಹಗಲು ಸೂರ್ಯನ ಬೆಳಕು ಸಹಜವಾಗಿ ಒಳಬರುವಂತೆ ಕೊಠಡಿಗಳ ವಿನ್ಯಾಸಗಳಿವೆ.
ರಾತ್ರಿವೇಳೆ ದೀಪಗಳನ್ನು ಇಡಲು ನಮ್ಮಲ್ಲಿ ಹಳೆಯ ಮನೆಗಳಲ್ಲಿ ಇರುವಂತೆ ಗೋಡೆಗಳಲ್ಲಿ ಚಿಕ್ಕಚಿಕ್ಕ
ಗೂಡುಗಳನ್ನೂ ಕಟ್ಟಿಗೆಯ ಕಂಬಗಳಲ್ಲಿ ಕಟ್ಟಿಗೆಯ ಕೈಗಳನ್ನೂ ಮಾಡಿದ್ದಾರೆ. ಬ್ಯಾಂಕ್ ಲಾಕರ್ ಗಳು
ಇಲ್ಲದ ಆ ಕಾಲದಲ್ಲಿ ಮನೆಯ ಒಡವೆ ಮುಂತಾದ ಬೆಲೆಬಾಳುವ ವಸ್ತುಗಳನ್ನು ಇಡಲು ಅಲ್ಲಲ್ಲಿ ಗೋಡೆಗಳಲ್ಲಿ
ಗುಪ್ತಗುಂಡಿಗಳಿವೆ.
ಈ
ಎರಡೂ ಮನೆಗಳಲ್ಲಿನ ಬಹುಮುಖ್ಯವಾಗಿ ಗಮನಿಸಬೇಕಾದ ಒಂದು ಅಂಶವೆಂದರೆ ಆ ಕಾಲದಲ್ಲಿಯೇ ಗೋಡೆಯ ಒಳಭಾಗದಲ್ಲಿ
ನೀರುಹರಿಯುವ ಚಿಕ್ಕಕಾಲುವೆಗಳನ್ನು ಮಾಡಿ ಆ ನೀರು ಮನೆಯ ಮುಂದಿನ ಹಜಾರದಲ್ಲಿ ನಿರ್ಮಿಸಲಾದ ಒಳಬಾವಿಯನ್ನು
ಬಂದು ಸೇರುವಂತೆ ಮಾಡಿರುವುದು! ಈಗಿನ ಮಳೆಕೊಯ್ಲು ಯೋಜನೆಯ ಪ್ರಾಚೀನ ರೂಪವಾದ ಇದನ್ನು ಆ ಕಾಲದಲ್ಲಿಯೇ
ಈ ಮನೆಗಳಲ್ಲಿ ಅಳವಡಿಸಿರುವುದು ನಿಜಕ್ಕೂ ಆಶ್ಚರ್ಯವನ್ನುಂಟುಮಾಡುತ್ತದೆ. ಕಸ್ತೂರ್ಬಾ ಅವರ ಮನೆಯ ಹಜಾರದಲ್ಲಿನ
ಬಾವಿಯನ್ನು ತೆರದು ನೋಡಿದಾಗ ಅದು ಇರುವ ಆಳವನ್ನು ನೋಡಿ ನಾನು ನಿಜಕ್ಕೂ ಬೆರಗಾದೆ!
ಕಸ್ತೂರ್ಬಾ
ಅವರ ಮನೆಯ ಸಂದರ್ಶಕರ ಪುಸ್ತಕದಲ್ಲಿ ವಿವರ ಬರೆಯಲು ಅವಕಾಶವಿದ್ದಿಲ್ಲವಾದ್ದರಿಂದ ಅಲ್ಲಿ ನನ್ನ ಹೆಸರು
ವಿವರಗಳನ್ನು ಮಾತ್ರ ಬರೆದೆ. ಆದರೆ ಗಾಂಧೀಜಿಯವರ ಮನೆಯ ಸಂದರ್ಶಕರ ಪುಸ್ತಕದಲ್ಲಿ ವಿವರ ಬರೆಯಲು ಅವಕಾಶವಿತ್ತು.
ಈ ಮನೆಯ ಭೇಟಿಯಿಂದ ನನಗಾದ ಆನಂದವನ್ನೂ ಸಾರ್ಥಕ್ಯದ ಭಾವನೆಗಳನ್ನೂ ನನ್ನ ಟಿಪ್ಪಣಿಯಲ್ಲಿ ಬರೆದು ಸಹಿಹಾಕಿ
ಅಲ್ಲಿಯೇ ಇದ್ದ ಮಹಾತ್ಮ ಮತ್ತು ಕಸ್ತೂರ್ಬಾ ಅವರ ಮೂರ್ತಿಗಳಿಗೆ ಮತ್ತೊಮ್ಮೆ ನಮಸ್ಕರಿಸಿ ಅಲ್ಲಿಂದ
ಹೊರಟೆ. ಹೊರಡುವ ಮುನ್ನ ಮನೆಯ ಮುಂದೆ ನಿಂತು ಇನ್ನೊಮ್ಮೆ ಫೋಟೋ ತೆಗೆದುಕೊಳ್ಳುವುದನ್ನು ಮರೆಯಲಿಲ್ಲ.
ಆಗಲೇ
ಮಧ್ಯಾಹ್ನದ ಊಟದ ಸಮಯವಾಗಿತ್ತು. “ಮತ್ತೇನನ್ನಾದರೂ ನೋಡಬೇಕೆ ಅಥವಾ ಬಸ್ ನಿಲ್ದಾಣಕ್ಕೆ ಬಿಡಲೇ?”
ಎಂದು ನನ್ನ ಆಟೋದವ ಕೇಳಿದ. ನೋಡಲು ಹಜೂರ್ ಪ್ಯಾಲೇಸ್ ನಂತಹ ಒಂದೆರಡು ಸ್ಥಳಗಳು ಮಾತ್ರ ಉಳಿದಿದ್ದವು.
ಆದರೆ ಸೋಮನಾಥಕ್ಕೆ ನಾನು ಸಂಜೆ ಆರೇಳು ಗಂಟೆಗಳ ಒಳಗೆ ತಲುಪಿ ಅಲ್ಲಿ ಸೋಮನಾಥನ ದರ್ಶನ ಮಾಡಿಕೊಂಡು
ಅಲ್ಲಿಗೆ ಆರೇಳು ಕಿಲೋಮೀಟರ್ ದೂರದಲ್ಲಿರುವ ವೇರಾವಲ್ ಗೆ ಹೋಗಿ ಅಲ್ಲಿಂದ ಗುಜರಾತ್ ರಾಜಧಾನಿ ಗಾಂಧೀನಗರಕ್ಕೆ
ಹೊರಡುವ ರೈಲು ಹಿಡಿಯಬೇಕಿತ್ತು. ಆದ್ದರಿಂದ, “ಮತ್ತೇನೂ ಬೇಡ ಬೀಚ್ ಒಂದನ್ನು ತೋರಿಸಿ ಬಸ್ ನಿಲ್ದಾಣಕ್ಕೆ
ಬಿಟ್ಟುಬಿಡು” ಎಂದು ಅವನಿಗೆ ಹೇಳಿದೆ. ಅವನು ನನ್ನನ್ನು ಗಾಂಧೀಜಿ ಮನೆಯ ಹತ್ತಿರವೇ ಇರುವ ಬೀಚ್ ಗೆ
ಕರೆದೊಯ್ದ. ವಿಶಾಲ ಅರಬ್ಬೀ ಸಮುದ್ರದ ದೊಡ್ಡದೊಡ್ಡ ತೆರೆಗಳು ಬಂದು ದಂಡೆಗೆ ಅಪ್ಪಳಿಸುವ ನಯನಮನೋಹರ
ದೃಶ್ಯವನ್ನು ಕಣ್ತುಂಬಿಕೊಂಡು ನನ್ನ ಪೋರಬಂದರಿನ ಪ್ರವಾಸವನ್ನು ಮುಗಿಸಿದೆ.
ಗುಜರಾತಿ ಊಟದ ಗಮ್ಮತ್ತು!
ಬಸ್
ಹತ್ತುವ ಮೊದಲು ಗುಜರಾತಿ ಶೈಲಿಯ ಊಟದ ಹೋಟೆಲ್ ಒಂದಕ್ಕೆ ಹೋದೆ. ಮೊಟ್ಟೆಯನ್ನೂ ತಿಂದು ಗೊತ್ತಿಲ್ಲದ
ನನಗೆ ಕೆಲವು ಕಡೆ ಆಹಾರದ ಸಮಸ್ಯೆ ಆಗುವುದಿದೆ. ಭಾರತದ ಪೂರ್ವಕರಾವಳಿ ಅಂದರೆ ಬಂಗಾಳಕೊಲ್ಲಿಗೆ ಹೊಂದಿಕೊಂಡಿರುವ
ರಾಜ್ಯಗಳು ಓಡಿಸ್ಸಾ ಪಶ್ವಿಮ ಬಂಗಾಳ, ಆಂದ್ರದ ರಾಯಲಸೀಮಾ, ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳು ಮುಖ್ಯವಾಗಿ
ಮಾಂಸಾಹಾರಿಗಳೆಂದು ಕರೆಯಲ್ಪಡುವ ಮಿಶ್ರಾಹಾರಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳು. ಇಲ್ಲಿ
ನನ್ನಂಥವನಿಗೆ ಆಹಾರದ ಕೆಲಸಮಸ್ಯೆಗಳು ಆಗಿದ್ದು ನಿಜ. ಆದರೆ ಪಶ್ವಿಮ ಕರಾವಳಿಗೆ ಅಂದರೆ ಅರಬ್ಬೀ ಸಮುದ್ರಕ್ಕೆ
ಹೊಂದಿಕೊಂಡಿರುವ ಗುಜರಾತ್, ರಾಜಸ್ತಾನ, ಮೇಲಿನ ಪಂಜಾಬ್ ಮುಂತಾದ ರಾಜ್ಯಗಳು ಶಾಖಾಹಾರಿಗಳನ್ನು ಹೆಚ್ಚಾಗಿ
ಹೊಂದಿರುವ ರಾಜ್ಯಗಳು. ಈ ಪ್ರದೇಶಗಳಲ್ಲಿ ಸುತ್ತಾಡುವಾಗ ನನಗೆ ಆಹಾರದ ಆತಂಕ ಇರುವುದೇ ಇಲ್ಲ.
ಈ
ಹೊಟೆಲ್‌ನಲ್ಲಿ ಗುಜರಾತಿ ಶೈಲಿಯ ಊಟಕ್ಕೆ ಆರ್ಡರ್ ಮಾಡಿದೆ. ನಮ್ಮಲ್ಲಿ ಅನ್ನದ ಜೊತೆಗೆ ಎರಡು ಚಪಾತಿ
ಅಥವಾ ಹೊಟ್ಟೆ ಊದಿಸಿಕೊಂಡ ಎರಡು ಪೂರಿಕೊಡುವುದು ವಾಡಿಕೆ. ಆದರೆ ಇಲ್ಲಿ ಗುಜರಾತಿನಲ್ಲಿ ಸಾಮಾನ್ಯವಾಗಿ
ಐದು-ಆರು ರೊಟ್ಟಿ ಎರಡು ತರದ ಪಲ್ಯ ಸ್ವಲ್ಪ ಅನ್ನ ಸಾರು
ಸೇರಿದ ಒಂದು ಸಾಮಾನ್ಯ ಊಟವಾಗಿರುತ್ತದೆ. ಇದು ಗೊತ್ತಿಲ್ಲದ ನಾನು ಅವನು ಮೊದಲು ತಂದು ಹಾಕಿದ
ಎರಡು ರೊಟ್ಟಿಯೇ ಅಂತಿಮ ಎಂದೂ ಆಮೇಲೆ ಅವನು ಅನ್ನವನ್ನು ತರಬಹುದೆಂದೂ ತಿಳಿದು ಆ ರೊಟ್ಟಿಯ ಜೊತೆಗೆ
ಕೊಟ್ಟಿದ್ದ ಎರಡೂ ರೀತಿಯ ಪಲ್ಯಗಳನ್ನೂ ತಿಂದು ಮುಗಿಸಿದ್ದೆ. ಅವನು ಮತ್ತೆ ಎರಡು ರೊಟ್ಟಿ ತಂದು ಹಾಕಿದ.
ಅವಕ್ಕೆ ಹೊಸದಾಗಿ ಪಲ್ಯ ತರಿಸಿಕೊಂಡು ತಿನ್ನಬೇಕಾಯಿತು. ಅಲ್ಲಿಗೆ ಹೊಟ್ಟೆ ತುಂಬಿತ್ತು.
ನೀರು
ಕುಡಿಯಲು ಹೊಟ್ಟೆಯಲ್ಲಿ ಸ್ವಲ್ವ ಜಾಗ ಇದೆ ಅನ್ನಿಸಿತು. ನೀರು ಕುಡಿಯುಲು ನಾನು ತಲೆ ಮೇಲೆತ್ತಿದಾಗ
ನನಗೆ ಗೊತ್ತಿಲ್ಲದಂತೆ ಅವನು ಮತ್ತೆ ಎರಡು ರೊಟ್ಟಿಗಳನ್ನು ನನ್ನ ತಟ್ಟೆಗೆ ತಂದು ಹಾಕಿಹೋಗಿದ್ದ! ಅದಕ್ಕೆ
ಪಲ್ಯ ಕೇಳುವ ಮೊದಲೇ ಅವನೇ ಪಲ್ಯವನ್ನೂ ತಂದು ಹಾಕಿದ. ಒಟ್ಟು ಆರು ರೊಟ್ಟಿಯಾಯಿತು. ಊಟದ ತಟ್ಟೆಯಲ್ಲಿ
ಆಹಾರ ಬಿಡುವುದಕ್ಕೆ ನನಗೆ ಬಹಳ ಹಿಂಸೆಯಾಗುತ್ತದೆ. ಹಾಗಂತ ಹೊಟ್ಟೆತುಂಬಿದ ಮೇಲೆ ತಿನ್ನುವುದು ಇನ್ನೊಂದು
ತರದ ಹಿಂಸೆ. ಮೊದಲಿನ ರೊಟ್ಟಿಗಳನ್ನು ಇಷ್ಟಪಟ್ಟು ತಿಂದಿದ್ದ ನನಗೆ ಇವನ್ನು ಕಷ್ಟಪಟ್ಟು ತಿನ್ನಬೇಕಾಯಿತು.
ತಿಂದು ಮುಗಿಸುವುದರೊಳಗೆ ಸಾಕುಸಾಕಾಗಿ ಹೋಯಿತು. ಊಟದ ಸೀಟಿನಿಂದ ಎಬ್ಬಿಸಲು ಯಾರದ್ದಾದರೂ ಸಹಾಯ ತೆಗೆದುಕೊಳ್ಳಬೇಕೋ
ಎನ್ನಿಸತೊಡಗಿದಾಗಲೂ ಅವನು ಮತ್ತೆ ಬಂದು ʻಅನ್ನ ತರಲೇ ಎಂದು
ಕೇಳಬೇಕೆ? ʼ “ಅಯ್ಯೋ ಭಗವಂತ! ಬೇಡಪ್ಪ” ಎಂದು ಹೊರಬಂದೆ.
ಪೋರಬಂದರಿನ
ಬಸ್ ನಿಲ್ದಾಣಕ್ಕೆ ಬಂದಿಳಿದಾಗ ಸೋಮನಾಥಕ್ಕೆ ಹೊರಡುವ ನನ್ನ ಬಸ್ಸಿಗೆ ಇನ್ನೂ ಅರ್ಧಗಂಟೆ ಇತ್ತಾದ್ದರಿಂದ
ಬಸ್ ನಿಲ್ದಾಣದ ಸುತ್ತಾ ಒಂದು ಸುತ್ತುಹಾಕುವಾಗ ಗಾಂಧೀಜಿ ಅವರ ಜೀವನದ ಪ್ರಮುಖ ಘಟನೆಗಳ ಚಿತ್ರಾವಳಿಗಳನ್ನು
ಅಲ್ಲಲ್ಲಿ ಅಳವಡಿಸಿದ್ದು ನೋಡುತ್ತಾ ನಿಂತೆ. ಪೋರಬಂದರಿನ ಅರ್ಧದಿನದ ಪ್ರವಾಸ ಚಿಟಿಚಿಟಿಮಳೆಯ ನಡುವೆಯೂ
ಸಾಕಷ್ಟು ಖುಷಿಯನ್ನೇ ಕೊಟ್ಟಿತು.
*****
ಡಾ. ರಾಜೇಂದ್ರ ಬುರಡಿಕಟ್ಟಿ
೦೩-೧೦-೨೦೨೫











No comments:
Post a Comment