Tuesday, November 1, 2016


ಕಪ್ಪು ಬೂರ್ಖಾ ಮತ್ತು ಕೇಸರಿ ಶಾಲುಗಳ ನಡುವೆ
ಡಾ. ರಾಜೇಂದ್ರ ಬುರಡಿಕಟ್ಟಿ

ಹಾವೇರಿ ಜಿಲ್ಲೆಯ ಹಾನಗಲ್, ಹಿರೇಕೆರೂರು ಮತ್ತು ಅಕ್ಕಿ ಆಲೂರು ಕಾಲೇಜುಗಳಲ್ಲಿ ಕಪ್ಪು ಬೂರ್ಖಾ ಮತ್ತು ಕೇಸರಿ ಶಾಲಿನ ಸಂಬಂಧ ಉದ್ಭವಿಸಿರುವ ವಿವಾದದ ಬೆಳವಣಿಗೆಗಳನ್ನು ಗಮನಿಸಿದರೆ ಅಲ್ಲಿ ಶೈಕ್ಷಣಿಕ ಅಂಶಗಳಿಗಿಂತ ಧಾರ್ಮಿಕ ಮತ್ತು ರಾಜಕೀಯ ಕಾರಣಗಳು ಮುನ್ನೆಲೆಗೆ ಬಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಪರಸ್ಪರ ಸ್ನೇಹ-ಪ್ರೀತಿ-ಪ್ರೇಮಗಳಂತಹ ಮಧುರ ಭಾವನೆಗಳ ಮೂಲಕ ಮನುಷ್ಯ ಜೀವನದ ವಸಂತಕಾಲವೆಂದು ಪರಿಗಣಿಸಲ್ಪಡುವ ಯೌವನದ ಆರಂಭದ ದಿನಗಳನ್ನು ಸಂತೋಷದಿಂದ ಕಳೆಯಬೇಕಾದ ತರುಣ ತರುಣಿಯರ ಮನಸ್ಸಿನಲ್ಲಿ ಪರಸ್ಪರ ದ್ವೇಷ-ಅಸೂಯೆ-ಅಪನಂಬಿಕೆಗಳಂತಹ ಮತ್ಸರ ಭಾವನೆಗಳನ್ನು ಬಿತ್ತುವ ಕೆಲಸವನ್ನು ಯಾರೇ ಮಾಡುತ್ತಿರಲಿ ಅದು ಅತ್ಯಂತ ನೀಚತನದ್ದು ಎನ್ನದೆ ವಿಧಿಯಿಲ್ಲ.

ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು. ಈಗ ಈ ವಿವಾದ ಎದ್ದಿರುವ ಕಾಲೇಜುಗಳಲ್ಲಿ ಒಂದಾಗಿರುವ ಹಿರೇಕೇರೂರಿನ ಡಿ. ಆರ್. ತಂಬಾಕರ ಪ್ರಥಮ ದರ್ಜೆ ಕಾಲೇಜಿರುವ ಕಟ್ಟಡದಲ್ಲಿಯೇ ಇದ್ದ ಆಗಿನ ಸಿ.ಇ.ಎಸ್. ಹೈಸ್ಕೂಲಿನಲ್ಲಿ (ಈಗ ಡಿ.ಆರ್. ತಂಬಾಕರ ಪ್ರೌಢಶಾಲೆ ಆಗಿರುವ ಅಲ್ಲಿ ಆಗ ಪದವಿಪೂರ್ವದ ಹಂತದವರೆಗೆ ಮಾತ್ರ ಶಿಕ್ಷಣವಿತ್ತು) ನಾನು ಓದುತ್ತಿದ್ದೆ. ಆ ಕಾಲದಲ್ಲಿ ನಮ್ಮ ಶಾಲೆ ಮತ್ತು ವಿವಾದ ಎದ್ದಿರುವ ಇತರ ಕಾಲೇಜುಗಳೂ ಸೇರಿದಂತೆ ಇಡೀ ಉತ್ತರ ಕರ್ನಾಟಕ ಭಾಗದ ಯಾವುದೇ ಶಾಲಾ ಕಾಲೇಜುಗಳಲ್ಲಿ ಯಾವ ಬಗೆಯ ವಾತಾವರಣ ಇತ್ತೆಂದರೆ ಅಲ್ಲಿ ಯಾವುದೇ ಬಗೆಯ ಭೇದಭಾವಗಳು ಇರಲಿಲ್ಲ. ಬಡವರಿಗೆ ಮತ್ತು ಶ್ರೀಮಂತರಿಗೆ ಬೇರೆ ಬೇರೆ ಶಾಲೆಗಳು ಇಲ್ಲದಿದ್ದ ಅಂದಿನ ಕಾಲದಲ್ಲಿ ಈ ಶಾಲೆ ಕಾಲೇಜುಗಳು ಎಲ್ಲ ವರ್ಗ-ಜಾತಿ-ಧರ್ಮದ ಮಕ್ಕಳನ್ನು `ತಾಯಂತೆ ಪೊರೆ'ಯುತ್ತಿದ್ದವು. ಆಗ ಅವುಗಳಿಗೆ ಯಾವುದೇ ರೀತಿಯ ಖಾಸಗಿತನದ ಹಮ್ಮ-ಬಿಮ್ಮುಗಳಿರಲಿಲ್ಲ. ಈಗಿನ ಸರ್ಕಾರಿ ಶಾಲೆಗಳಂತೆ ಬಹುತೇಕ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಂದಲೇ ತುಂಬಿತುಳುಕುತ್ತಿದ್ದ ಈ ಶಾಲೆ ಕಾಲೇಜುಗಳಲ್ಲಿ ಓದಿ ತಮ್ಮ ಬದುಕು ಕಟ್ಟಿಕೊಂಡವರು ಲಕ್ಷಾಂತರ ಜನರು. ಹೀಗೆ ಲಕ್ಷಾಂತರ ವಿದ್ಯಾರ್ಥಿಗಳ ಬದುಕನ್ನು ಕಟ್ಟಿಕೊಟ್ಟ ಅದ್ಭುತ ಇತಿಹಾಸವಿರುವ ಕಾಲೇಜುಗಳೇ ಇಂದು ವಿದ್ಯಾರ್ಥಿಗಳ ಬದುಕುಗಳನ್ನು ಒಡೆಯುವ ಚಟುವಟಿಕೆಗಳಿಗೆ ಆಶ್ರಯವಾಗುತ್ತಿರುವ ಈಗಿನ ಪರಿಸ್ಥಿತಿ ನೋಡಿದರೆ ಬೇಸರ ಮಾತ್ರವಲ್ಲ ಭಯವೂ ಆಗುವಂತಿದೆ.

ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ತರಗತಿಗಳಿಗೆ ಹಾಜರಾಗುವುದಕ್ಕೆ ಅವಕಾಶಮಾಡಿಕೊಟ್ಟು ಇತರರು ತಮ್ಮಿಷ್ಟದಂತೆ ಸಮವಸ್ತ್ರ ಬಿಟ್ಟು ಬೇರೆ ಉಡುಪು ಧರಿಸಿ ಬರುವುದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ, ತಮಗೆ ಸಮವಸ್ತ್ರ ಧರಿಸಿ ಬರದಿದ್ದರೆ ತೆಗೆದುಕೊಳ್ಳುವ ಶಿಸ್ತುಕ್ರಮಗಳನ್ನು ಅವರಿಗೆ ತೆಗೆದುಕೊಳ್ಳುತ್ತಿಲ್ಲ, ಇದರಿಂದ ಭೇದಭಾವ ನೀತಿ ಅನುಸರಿಸಿದಂತಾಗುತ್ತದೆ, ಇದು ಅನ್ಯಾಯ ಎಂದು ಈ ಕಾಲೇಜುಗಳಲ್ಲಿ ಕೆಲವು ವಿದ್ಯಾರ್ಥಿಗಳು ಕಾಲೇಜು ಆಡಳಿತಗಳ ವಿರುದ್ದ ತಿರುಗಿಬಿದ್ದಿವೆ. `ನಾವು ಸಮವಸ್ತ್ರ ಬಿಟ್ಟು ಬೇರೆ ಉಡುಪನ್ನು ಧರಿಸಿ ಬಂದರೆ ಸಮವಸ್ತ್ರ ನೀತಿ ಉಲ್ಲಂಘನೆಯಾಗುವುದಾದರೆ ಅವರು ಬೂರ್ಖಾ ಧರಿಸಿ ಬರುವುದೂ ಸಮವಸ್ತ್ರದ ಉಲ್ಲಂಘನೆಯಾಗುತ್ತದೆ' ಎಂಬುದು ಈ ವಿದ್ಯಾರ್ಥಿಗಳ ಗುಂಪಿನ ವಾದ. ಸಮವಸ್ತ್ರ ಧರಿಸದೇ ಬರುವುದು ಮತ್ತು ಅದನ್ನು ಧರಿಸಿ ಅದರ ಮೇಲೆ ಬೂರ್ಖಾ ಹಾಕಿಕೊಂಡು ಬರುವುದು ಇವುಗಳ ನಡುವಿನ ವ್ಯತ್ಯಾಸ ಈ ಗುಂಪಿಗೆ ಕಾಣುತ್ತಿಲ್ಲ. ಇದರಿಂದ `ಅವರು ಬೂರ್ಖಾ ಹಾಕಿಕೊಂಡು ಬರುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ನಾವೂ ನಮಗೆ ಬೇಕಾದ ಹಾಗೆ ಬಟ್ಟೆ ಹಾಕಿಕೊಂಡು ಬರುತ್ತೇವ.ೆ ಅದು ಏನಾಗುತ್ತೋ ನೋಡೇ ಬಿಡುತ್ತೇವೆ' ಎಂದು ಈ ವಿದ್ಯಾರ್ಥಿಗಳ ಗುಂಪು ಒಂದು ಕಾಲೇಜಿನಲ್ಲಿ ಸವಾಲು ಒಡ್ಡಿದೆ. ಅಷ್ಟೇ ಅಲ್ಲ ಸಧ್ಯಕ್ಕೆ ಕೇಸರಿ ಶಾಲು ಹಾಕಿಕೊಂಡು ಬರಲು ನಿರ್ಧರಿಸಿರುವ ಈ ಗುಂಪಿನ ವಿದ್ಯಾರ್ಥಿಗಳು ಮುಂದೆ ತಮ್ಮ ಕ್ರಮವನ್ನು ಬೋರ್ಮುಡ, ಪಂಚೆ, ಚಡ್ಡಿ ಇನ್ನೂ ಏನೇನೋ ಹಾಕಿಕೊಂಡು ಬರುವ ಮೂಲಕ ತಮ್ಮ ಪ್ರತಿಭಟನೆಯನ್ನು ಇನ್ನೂ ತೀವ್ರಗೊಳಿಸುವುದಾಗಿ ಬೆದರಿಕೆಯನ್ನೂ ಒಡ್ಡಿದ್ದಾರೆ.

ಈಗಾಗಲೇ ವರದಿಯಾಗಿರುವಂತೆ ಇಲ್ಲಿ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿರುವವರು ಎಂದರೆ ಕೇಸರಿ ಶಾಲಿನ ವಿದ್ಯಾರ್ಥಿಗಳಲ್ಲ. ಬದಲಾಗಿ ಬೂರ್ಖಾಧರಿಸಿ ಬರಬೇಕಾಗಿರುವ ವಿದ್ಯಾರ್ಥಿನಿಯರು. ಅವರ ಶಿಕ್ಷಣ ಈಗ ತೂಗುಯ್ಯಾಲೆಯಲ್ಲಿದೆ. ಅತ್ತ ಮನೆಯವರ ಒತ್ತಡ ಇತ್ತ ಸ್ನೇಹಿತರ ಒತ್ತಡ ಎರಡರ ಮಧ್ಯೆ ಅವರು ಸಿಲುಕಿಕೊಂಡಿದ್ದಾರೆ. ತಮ್ಮ ಹೆಸರನ್ನು ಹೇಳಿಕೊಳ್ಳಲಾರದ ಅನೇಕ ವಿದ್ಯಾರ್ಥಿನಿಯರು `ಬೂರ್ಖಾಧರಿಸಿ ಬರಬೇಡಿ ಎಂದರೆ ನಾವು ಕಾಲೇಜಿಗೆ ಬರುವುದನ್ನೇ ಬಿಡಬೇಕಾಗುತ್ತದೆ' ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅವರ ಈ ಮಾತು ಯಾರ ಮನಸ್ಸನ್ನೇ ಅಗಲಿ ಒಂದು ಕ್ಷಣ ಕಲಕಬೇಕು. ಈ ಮಾತು ಅವರ ಮೇಲೆ ಪರೋಕ್ಷ ಒತ್ತಡ ತರುತ್ತಿರುವ ಅವರ ಗೆಳಯ ಗೆಳತಿಯರೂ ಸೇರಿದಂತೆ ಯಾರಿಗೂ ಸಂತೋಷವನ್ನು ಕೊಡಬಾರದು. ಹಾಗೆ ಆ ಮಾತನ್ನು ಕೇಳಿ ಸಂತೋಷಪಡುವ ಮನಸ್ಥಿತಿಯಲ್ಲಿ ಇದ್ದವರು ನಿಜವಾಗಿ ಮನುಷ್ಯರಾಗಿರಲಾರರು. ಇಲ್ಲಿ ಬೂರ್ಖಾಧರಿಸಿ ಬರುತ್ತಿರುವ ವಿದ್ಯಾರ್ಥಿನಿಯರಾಗಿರಲಿ ಅವರು ತೆಗೆದು ಬರಲೇಬೇಕು ಎಂದು ಹಟಹಿಡಿದಿರುವ ವಿದ್ಯಾರ್ಥಿಗಳಾಗಲೀ ಸ್ವಭಾವತಃ ಹಟಮಾರಿಗಳಾಗಿರಬಹುದೆಂದು ನನಗನ್ನಿಸುವುದಿಲ್ಲ. ಸುಮಾರು ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಒಂದು ವಿದ್ಯಾಸಂಸ್ಥೆಯ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿರುವ ಅನುಭವದ ಆಧಾರದ ಮೇಲೆ ಹೇಳುವುದಾದರೆ ಬಾಹ್ಯ ಪ್ರೇರಣೆ, ಪ್ರಭಾವ ಒತ್ತಡಗಳು ಇಲ್ಲದೆ ವಿದ್ಯಾರ್ಥಿಗಳು ಈ ರೀತಿ ಹಟಮಾರಿ ಧೋರಣೆಯನ್ನು ಅನುಸರಿಸುವುದಿಲ್ಲ. ಇಲ್ಲಿ ವಿದ್ಯಾರ್ಥಿನಿಯರ ಮೇಲೆ ಮೂಲಭೂತವಾದಿಗಳ ಮತಧರ್ಮ ಪ್ರೇರಿತ ಒತ್ತಡ ಹಾಗೇ ವಿದ್ಯಾರ್ಥಿಗಳ ಮೇಲೆ ಕೋಮುವಾದ ಪ್ರೇರಿತ ರಾಜಕೀಯ ಒತ್ತಡ ಇರುವುದು ಸ್ಪಷ್ಟ. ಕರ್ನಾಟಕದ ಕರಾವಳಿ ಜನರ ಬದುಕನ್ನು ನರಕವಾಗಿಸಿದ ಈ ಜಾಡ್ಯ ಗೋವಿಂದಭಟ್ಟ-ಶಿಶುನಾಳ ಷರೀಫರಂತಹ ಸೌಹಾರ್ದ ಸಾಕ್ಷಿಪ್ರಜ್ಞೆಗಳು ನಡೆದಾಡಿದ ಭೂಮಿಗೆ ಕಾಲಿಟ್ಟು ಅದನ್ನು ರಕ್ತಸಿಕ್ತಗೊಳಿಸುವತ್ತ ಮುಖಮಾಡಿರುವುದು ದುಃಖದ ಸಂಗತಿ. ಅಲಕ್ಷ ಮಾಡಿದರೆ ಇದು ರಾಜ್ಯದ ಎಲ್ಲ ಭಾಗಕ್ಕೂ ಹಬ್ಬಿ ಇಡೀ ರಾಜ್ಯವನ್ನು ರೋಗಗ್ರಸ್ಥಮಾಡಬಹುದೇನೋ. 

ಬೂರ್ಖಾ ಧರಿಸಿ ಬರುವ ವಿದ್ಯಾರ್ಥಿನಿಯರೆಲ್ಲರೂ ತಾವು ಇಷ್ಟಪಟ್ಟ ಬಟ್ಟೆ ಹಾಕಿಕೊಳ್ಳುವ ಸಂತೋಷಕ್ಕಾಗಿ ಅಥವಾ ಕಾಲೇಜಿನ ಸಮವಸ್ತ್ರ ನೀತಿಯನ್ನು ಉಲ್ಲಂಘನೆ ಮಾಡಬೇಕೆಂಬ ಉದ್ದೇಶದಿಂದ ಹಾಗೆ ಮಾಡುತ್ತಾರೆ ಎಂದು ಬಹುಶಃ ಅವರನ್ನು ಈಗ ವಿರೋಧಿಸುತ್ತಿರುವ ವಿದ್ಯಾರ್ಥಿಗಳಿಗೂ ಅನ್ನಿಸಲಾರದು. ಅವರು ತಮ್ಮ ಮೇಲಿನ ಪಾಲಕರ ಮತ್ತು ಆ ಪಾಲಕರ ಮೇಲೆ ಕೆಲವು ಧಾರ್ಮಿಕ ನಾಯಕರು ತರುತ್ತಿರುವ ಒತ್ತಡ ಕೆಲವು ವೇಳೆ ನಂಬಿಕೆ ಇನ್ನು ಕೆಲವು ವೇಳೆ ಮೂಢನಂಬಿಕೆ ಇಂಥವುಳ ಕಾರಣದಿಂದ ಹೀಗೆ ಅಸಹಾಯಕರಾಗಿ ಅವನ್ನು ತೊಟ್ಟು ಬರುತ್ತಾರೆ ಎಂಬುದನ್ನು ಯಾರಾದರೂ ಅರ್ಥಮಾಡಿಕೊಳ್ಳಬಲ್ಲರು. ಈ ಸತ್ಯ ಗೊತ್ತಿರುವ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸ್ವ ಇಚ್ಚೆಯಿಂದ ತಮ್ಮ ಸ್ನೇಹಿತೆಯರ ಮೇಲೆ ದ್ವೇಷ ಸಾಧಿಸಲು ಸಾಧ್ಯವೇ ಇಲ್ಲ. ಇಲ್ಲಿರುವುದು ಬಹುಮುಖ್ಯವಾಗಿ ದೊಡ್ಡವರೆನ್ನಿಸಿಕೊಂಡವರ ದ್ವೇಷ ಅಸೂಯೆ ಮತ್ತು ಸ್ವಾರ್ಥಸಾಧನೆಗಳು. ಇತ್ತ ಧರ್ಮವನ್ನೂ ಸರಿಯಾಗಿ ಅರಿಯದ ಅತ್ತ ಆದರ್ಶ ರಾಜಕಾರಣವನ್ನೂ ಅರಿಯದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಸನ್ನಿವೇಶವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧ. 

ಹೀಗೆ ಅಸಹಾಯಕರಾಗಿ ಬೂರ್ಖಾ ಧರಿಸಿ ಬರುವ ವಿದ್ಯಾರ್ಥಿನಿಯರ ಕ್ರಮವನ್ನು ಪ್ರತಿಭಟಿಸುವ ಭರಾಟೆಯಲ್ಲಿ ಹುಡುಗರ ಹೆಗಲಿಗೆ ಕೇಸರಿ ಶಾಲುಗಳನ್ನು ಹಾಕಿ ಕಾಲೇಜಿಗೆ ಹೋಗಲು ಪ್ರಚೋದನೆ ನೀಡುವುದು ಒಂದು ಸೇಡಿನ ಕ್ರಮವಲ್ಲದೇ ಮತ್ತೇನೂ ಅಲ್ಲ. ಬೂರ್ಖಾ ಧರಿಸಿ ತರಗತಿಗಳಲ್ಲಿ ವಿದ್ಯಾರ್ಥಿನಿಯರು ಕುಳಿತುಕೊಳ್ಳುವುದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅಡಚಣೆ ಆಗುತ್ತಿದ್ದರೆ, ಅಥವಾ ವಿದ್ಯಾರ್ಥಿಗಳ ನಡುವೆ ಯಾವುದಾದರೂ ಬಗೆಯಲ್ಲಿ `ಅಸಮಾನತೆ' ಎಂಬುದು ಉಂಟಾಗುತ್ತಿದ್ದರೆ ಅವರು ಅದನ್ನು ತೆಗೆಯುವಂತೆ ಮಾಡಲು ಬೇಕಾದ ಕ್ರಮಗಳನ್ನು ಹೇಗೆ ತೆಗೆದುಕೊಳ್ಳಬಹುದು ಎಂಬ ಬಗ್ಗೆ ನಮ್ಮ ಆಲೋಚನೆ ಇರಬೇಕೆ ಹೊರತು ಅವರ ಜೊತೆಗೆ ಇನ್ನುಳಿದವರೂ ಸೇರಿಕೊಳ್ಳುವಂತೆ ಮಾಡುವುದರ ಕಡೆ ಅಲ್ಲ. ಇದು ಸಮಸ್ಯೆಯನ್ನು ತಿಳಿಗೊಳಿಸುವ ಬದಲು ಮತ್ತುಷ್ಟು ಜಟಿಲಗೊಳಿಸುವ ಕ್ರಮವಾಗುತ್ತದೆ. ಅದರಲ್ಲೂ ಹದಿಹರೆಯದ ವಯಸ್ಸಿನಲ್ಲಿರುವ ಒಂದು ಸಮುದಾಯದ ಹುಡುಗಿಯರ ವಿರುದ್ಧ ಅದೇ ವಯಸ್ಸಿನ ಬೇರೊಂದು ಸಮುದಾಯದ ಹುಡುಗರನ್ನು ಎತ್ತಿಕಟ್ಟುವುದು ಎಂತೆಂಥ ಅನಾಹುತಗಳಿಗೆ ಅನುವು ಮಾಡಿಕೊಡಬಹುದೆಂಬುದನ್ನು ಈ ರೀತಿ ಹುರುದುಂಬಿಸುವವರು ಒಂದು ಕ್ಷಣ ಯೋಚಿಸುವ ಅಗತ್ಯವಿದೆ.

ಹಿಂದೆ ಪರಿಸ್ಥಿತಿ ಹೇಗಿತ್ತೆಂದರೆ ನಾವು ಹೈಸ್ಕೂಲು ಓದುವಾಗಲೂ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಹುಡುಗಿಯರು ನಮ್ಮ ಶಾಲೆಗೆ ಬರುತ್ತಿದ್ದರಾದರೂ ಕಾಲೇಜಿಗೆ ಬರುವ ವೇಳೆಗೆ ಅವರ ಸಂಖ್ಯೆ ಇಲ್ಲವೆನ್ನುವಷ್ಟು ಕ್ಷೀಣಿಸುತ್ತಿತ್ತು. ಬೆರಳೆಣಿಕೆಯಲ್ಲಿ ಕಾಲೇಜಿಗೆ ಬರುತ್ತಿದ್ದ ಈ ಹುಡುಗಿಯರು ತಮ್ಮ ಮನಸ್ಸಿಲ್ಲದಿದ್ದರೂ ಮನೆಯವರ ಕಾಟಕ್ಕೆ (ಅವರಿಗೆ ಇನ್ಯಾರದ್ದೋ ಕಾಟ ಇರುತ್ತಿತ್ತು) ಬೂರ್ಖಾ ಧರಿಸಿ ಬರುತ್ತಿದ್ದರು. ಆದರೆ ಕಾಲೇಜಿಗೆ ಬಂದ ತಕ್ಷಣ ತಮ್ಮ ಬೂರ್ಖಾವನ್ನು ತೆಗೆದು ಬ್ಯಾಗಿನೊಳಗೆ ಹಾಕಿಕೊಳ್ಳುತ್ತಿದ್ದರು. ಮತ್ತೆ ಮನೆಗೆ ಹೊರಡುವಾಗ ಮೈಮೇಲೆ ಹಾಕಿಕೊಳ್ಳುತ್ತಿದ್ದರು. ಹಾಗೆ ಮಾಡಬೇಕೆಂದು ಅವರಿಗೆ ಯಾರೂ ಹೇಳುತ್ತಿರಲಿಲ್ಲ. ಅಲ್ಲಿ ಯಾರೂ ಹಾಕಿಕೊಳ್ಳದ ಈ ಬೂರ್ಖಾವನ್ನು ತಾವು ಹಾಕಿಕೊಳ್ಳುತ್ತಿದ್ದುದು ಅವರಿಗೇ ಮುಜುಗರವನ್ನುಂಟುಮಾಡುತ್ತಿತ್ತು. ಎಲ್ಲರೊಳಗೊಂದಾಗುವ ಗುಣ ಅವರಲ್ಲಿ ಸಹಜವಾಗಿಯೇ ಇತ್ತು. `ಹಾಗೇಕೆ ಅವನ್ನು ತೆಗೆಯುತ್ತೀರಿ?' ಎಂದು ಅವರ ಮನೆಯವರೂ ಅದನ್ನು ಪ್ರಶ್ನಿಸುತ್ತಿರಲಿಲ್ಲ. ಆಗ ಈ ಹುಡುಗಿಯರನ್ನು ನೋಡಿ ನಾವು `ನೀವು ಒಳ್ಳೊಳ್ಳೆಯ ಬಟ್ಟೆ ಹಾಕಿಕೊಳ್ಳುವುದು ಎಲ್ಲ ವೇಸ್ಟು. ಚಂದ-ಚಂದನೆ ಬಟ್ಟೆ ಹಾಕಿಕೊಂಡು ಆ ಬಟ್ಟೆ ಯಾರಿಗೂ ಕಾಣದಂತೆ ಈ ರೀತಿ ಬೂರ್ಖಾ ಹಾಕಿಕೊಂಡರೆ ಯಾತಕ್ಕೆ ಬಂತು?' ಎಂದು ತಮಾಸೆ ಮಾಡುತ್ತಿದ್ದೆವು. ಆಗ ಅವರು ತಮ್ಮ ಅಳಲನ್ನೂ ಅಸಹಾಯಕತೆಯನ್ನೂ ನಮ್ಮೊಡನೆ ಹೇಳಿಕೊಳ್ಳುತ್ತಾ ಸಂಕಟಪಡುತ್ತಿದ್ದದ್ದು ಆಗ ಮತ್ತೇ ನಾವೇ ಅವರನ್ನು  ಸಾಮಾಧಾನಮಾಡುತ್ತಿದ್ದುದು ಈಗಲೂ ನನಗೆ ಅಚ್ಚಳಿಯದೆ ನೆನಪಿದೆ. 

ಈ ಬಗೆಯ ವಯೋಸಹಜವಾದ ತಮಾಸೆ ಚೇಸ್ಟೆಗಳನ್ನು ಮಾಡುವ ಎಲ್ಲ ಬಗೆಯ ಸ್ವಾತಂತ್ರ್ಯಗಳೂ ಆಗ ನಮಗೆ ಇದ್ದವು. ನಮ್ಮ ತಮಾಸೆಯ ಮಾತುಗಳನ್ನು ಅವರೂ ಸೇರಿದಂತೆ ಯಾರೂ ತಪ್ಪಾಗಿ ಅರ್ಥೈಸುತ್ತಿರಲಿಲ್ಲ. ನಮ್ಮ ನಡುವಿನ ಆತ್ಮೀಯ ಮಾತುಕತೆಗಳನ್ನು ಚೇಸ್ಟೆ ತಮಾಸೆಗಳನ್ನು ಕಂಡು ಸಂತೋಷಪಡುವ ಕುಟುಂಬಗಳು ಎರಡೂ ಸಮುದಾಯಗಳಲ್ಲಿಯೂ ಇದ್ದವು. ಸುತ್ತಲ ಸಮಾಜವೂ ಹಾಗೆಯೇ ಇತ್ತು ಎಂಬುದು ಬಹಳ ಮುಖ್ಯವಾದ ಸಂಗತಿ. ಈಗ ಈ ಬಗೆಯ ವರ್ತನೆಗಳನ್ನು ಕಂಡು-ಕೇಳಿ ಸಂತೋಷಪಡುವುದಿರಲಿ ಕನಿಷ್ಠಪಕ್ಷ ಅವನ್ನು ಸಹಿಸಿಕೊಳ್ಳುವ `ಸಹನೆ'ಯೂ ಇಲ್ಲದಾಗಿದೆ. ಎಲ್ಲಿ ನೋಡಿದಲ್ಲಿ `ಧರ್ಮರಕ್ಷಕರ' ಹಾವಳಿ ಹೆಚ್ಚಾಗುತ್ತಿದೆ. ಬೇರೆ ಬೇರೆ ಸಮುದಾಯಕ್ಕೆ ಸೇರಿದ ಹುಡುಗ-ಹುಡುಗಿಯರು ಒಂದೆಡೆ ನಿಂತು ಎರಡು ಸ್ನೇಹದ ಮಾತುಗಳನ್ನು ಆಡುವುದೂ ಕೂಡ ಕಷ್ಟವಾಗುತ್ತಿದೆ. ಇದು ಯಾವುದೋ ಒಂದು ಧರ್ಮಕ್ಕೆ ಅಂಟಿದ ಜಾಢ್ಯವಾಗಿ ಇಂದು ಉಳಿದಿಲ್ಲ. ಒಂದು ಸಂಗತಿಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಧರ್ಮ ಯಾವುದಾದರೂ ಇರಲಿ ಅದರ ರಕ್ಷಕರು ಹೆಚ್ಚಾಗುತ್ತಿದ್ದಾರೆ ಎಂದರೇನೇ ಅದು ಅವಸಾನದ ಕಡೆ ಮುಖಮಾಡಿದೆ ಎಂದರ್ಥ. ಏಕೆಂದರೆ ಯಾವುದೇ ಪ್ರದೇಶದಲ್ಲಿ ರೋಗ ಉಲ್ಬಣವಾಗುತ್ತಾ ಹೋದಂತೆ ವೈದ್ಯರು ಮತ್ತು ದಾದಿಯರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಕಾಣತೊಡಗುತ್ತಾರೆ. ಅದೇನೇ ಇರಲಿ ಈ ಧರ್ಮರಕ್ಷಕರು ಕೊನೆಯ ಪಕ್ಷ ಭವ್ಯಭಾರತದ ಪ್ರಜೆಗಳು ನಿರ್ಮಾಣವಾಗುವ ಅತಿಮುಖ್ಯ ಸ್ಥಳಗಳಾದ ಶಾಲಾ-ಕಾಲೇಜುಗಳನ್ನಾದರೂ ಪ್ರವೇಶಿಸದೇ ಇದ್ದಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು. ಆದರೆ ಅವರು ಅವನ್ನೂ ಬಿಡುತ್ತಿಲ್ಲ. ಇದರ ಜೊತೆ ಕೆಲವರು ಕೆಟ್ಟ ರಾಜಕಾರಣ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಲೂ ಹವಣಿಸುತ್ತಿರುವುದು ಒಂದು ಕೆಟ್ಟ ಬೆಳವಣಿಗೆಯೇ ಸರಿ.

ಈ ಧರ್ಮ ಮತ್ತು ರಾಜಕಾರಣದ ಸಂಗತಿಗಳನ್ನು ಬದಿಗಿಟ್ಟು ಕೇವಲ ಶೈಕ್ಷಣಿಕ ಸಂಗತಿಗಳನ್ನು ಮಾತ್ರ ಇಟ್ಟುಕೊಂಡು ಈ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಈ ಸಮಸ್ಯೆಯನ್ನು ನೋಡುವುದಾದರೆ ಕೆಲವು ವಿದ್ಯಾರ್ಥನಿಯರು ಈ ರೀತಿ ಬೂರ್ಖಾ ಧರಿಸಿ ತರಗತಿಗಳಲ್ಲಿ ಇರುವುದರಿಂದ ಏನಾದರೂ ಸಮಸ್ಯೆಗಳು ಆಗುತ್ತವೆಯೇ ಎಂಬುದನ್ನು ನೋಡಬೇಕು. ಬಹಳಷ್ಟು ವರ್ಷಗಳ ಕಾಲ ಪಾಠಮಾಡಿದ ನನ್ನ ಅನುಭವದ ಪ್ರಕಾರ ಇದರಿಂದ ಕೆಲವರು ವಾದಿಸುವಂತೆ ಯಾವುದೋ ದೊಡ್ಡ ಅನಾಹುತವೇನೋ ಆಗಿಬಿಡುವುದಿಲ್ಲವಾದರೂ ಶೈಕ್ಷಣಿಕ ಕಾರ್ಯಕ್ಕೆ ತಕ್ಕಮಟ್ಟಿನ ಅಡಚಣೆಯಾಗುವುದು ನಿಜ. ತರಗತಿಯಲ್ಲಿ ಬೋಧನಾ ಕಲಿಕಾ ಕ್ರಿಯೆ ಸರಿಯಾಗಿ ಆಗಬೇಕಾದರೆ ಅಲ್ಲಿ ಕಲಿಸುವವರು ಮತ್ತು ಕಲಿಯುವವರ ಮಧ್ಯೆ ಕಲಿಕಾ ಪ್ರಕ್ರಿಯೆಗೆ ಅಡೆತಡೆಯನ್ನುಂಟುಮಾಡುವ ಯಾವುದೇ ಸಂಗತಿಗಳು ಇರುವುದು ತರವಲ್ಲ. 

ತಮಗೆ ನಾನು ಇಲ್ಲೊಂದು ಉದಾಹರಣೆಯನ್ನು ಕೊಡಬೇಕು. ನಾನು ಕೆಲವು ವರ್ಷಗಳ ಹಿಂದೆ ಶಾಲೆಯೊಂದರ ಮುಖ್ಯೋಪಾಧ್ಯಾಯನಾಗಿದ್ದ ಸಂದರ್ಭದಲ್ಲಿ ಡಿಸೆಂಬರ್ ತಿಂಗಳ ಒಂದು ದಿನ ಇದ್ದಕ್ಕಿದ್ದಂತೆ ಅಯ್ಯಪ್ಪಸ್ವಾಮಿ ಮಾಲೆ ಹಾಕಿಕೊಂಡ ವಿದ್ಯಾರ್ಥಿಯೊಬ್ಬ ಶಾಲೆಗೆ ಬಂದು ಕುಳಿತುಕೊಂಡ. ಆ ದೇವರ ಪೂಜಾ ನಿಯಮಗಳ ಪ್ರಕಾರ ಅವನು ತನ್ನ ನಿತ್ಯದ ಉಡುಪಿಗೆ ಬದಲಾಗಿ ಸೊಂಟದಿಂದ ಕೆಳಗೆ ಕೇವಲ ಒಂದು ಕಪ್ಪು ಪಂಚೆಯನ್ನು ಸುತ್ತಿಕೊಂಡಿದ್ದ. ಸೊಂಟದ ಮೇಲೆ ಬಟ್ಟೆ ಇರಲಿಲ್ಲ. ಪಾದ ಕೈ, ತೋಳು, ಹೊಟ್ಟೆ, ಬೆನ್ನು, ಹಣೆ ಇತ್ಯಾದಿ ಕಡೆಗಳಲ್ಲೆಲ್ಲ ದೊಡ್ಡ ದೊಡ್ಡ ಗಾತ್ರದ ಗಂಧ ಕುಂಕುಮಗಳ ಪಟ್ಟಿ ಬಡಿದುಕೊಂಡಿದ್ದ. ಈ ರೀತಿ ಇರುವ ಅವನನ್ನು ಕಂಡು ತರಗತಿಯ ಮಕ್ಕಳೆಲ್ಲ ಅವನಿಗೆ `ಸ್ವಾಮಿ' `ಸ್ವಾಮಿ' ಎಂದು ಶಿಕ್ಷಕರಿಗೆ ಹೆಚ್ಚಿನದಾದ ಗೌರವ ತೋರಿಸುತ್ತಾ ಅವನಿಂದ ಪ್ರತ್ಯೇಕವಾಗಿ ಕುಳಿತುಕೊಳ್ಳತೊಡಗಿದರು. ಹೀಗಾಗಿ ತರಗತಿಯಲ್ಲಿ ಶಿಕ್ಷಕರಿಗಿಂತ ಅವನೇ ದೊಡ್ಡವನಾದ. ಹೀಗೆ ಒಂದೆರಡು ದಿನಗಳಲ್ಲಿಯೇ ಅವನು ತರಗತಿಯಲ್ಲಿ ಇತರ ವಿದ್ಯಾರ್ಥಿಗಳಿಗಿಂತ ಪ್ರತ್ಯೇಕವಾಗುತ್ತಾ ಹೋದ. ಶಿಕ್ಷಕರೂ ಅವನನ್ನು ಪ್ರತ್ಯೇಕವಾಗಿ ಪರಿಗಣಿಸತೊಡಗಿದರು. ಹೋಂವರ್ಕ ಮಾಡದಿದ್ದರೆ ಉಳಿದವರಿಗೆ ಸಣ್ಣಪ್ರಮಾಣದ ಶಿಕ್ಷೆಕೊಡುತ್ತಿದ್ದರು. ಆದರೆ ಅವನಿಗೆ ಅದರಿಂದ ವಿನಾಯತಿ ಇತ್ತು. ಅವನಿಗೆ ಶಿಕ್ಷೆಕೊಟ್ಟರೆ ಅಯ್ಯಪ್ಪಸ್ವಾಮಿ ತಮಗೆ ಮರಳಿ ಶಿಕ್ಷೆಕೊಡಬಹುದು ಎಂಬುದು ಕೆಲವು ಶಿಕ್ಷಕರಿಗಿದ್ದ ಭಯ ಇದಕ್ಕೆ ಕಾರಣ. ಇದು ಕ್ರಮೇಣ ಮಕ್ಕಳಲ್ಲಿ, `ಶಿಕ್ಷಕರ ಶಿಕ್ಷೆಯನ್ನು ತಪ್ಪಿಸಿಕೊಳ್ಳಬೇಕಾದರೆ ಹೋಂವರ್ಕ ಮಾಡುವುದಕ್ಕಿಂತ ಅಯ್ಯಪ್ಪಸ್ವಾಮಿ ಮಾಲೆ ಹಾಕಿಕೊಳ್ಳುವುದು ಸುಲಭ' ಎಂಬ ಭಾವನೆಯನ್ನು ತರಲಾರಂಭಿಸಿತು. ಇದನ್ನು ಮನಗಂಡ ನಾನು  ಅವರ ಪಾಲಕರನ್ನು ಕರೆಸಿ ಶಾಲೆಯಲ್ಲಿ ಆಗುವ ಸಮಸ್ಯೆಯನ್ನು ಅವರಿಗೆ ತಿಳಿಹೇಳಿದಾಗ ಅವರೂ ನನ್ನ ಮಾತಿಗೆ ಸ್ಪಂದಿಸಿದರು. ಅಂದಿನ ವರ್ಷವನ್ನು ಕೆಲವು ವೇಳೆ ವಿದ್ಯಾರ್ಥಿಗೆ ರಜೆನೀಡಿ ಕೆಲವು ವೇಳೆ ಗೈರುಹಾಜರಾಗಲು ಅನುಮತಿ ನೀಡಿ ತಳ್ಳಿದ್ದಾಯಿತು. ಆದರೆ ನಂತರದ ವರ್ಷಗಳಲ್ಲಿ ಈ ಸಮಸ್ಯೆಯನ್ನು ಅರ್ಥಮಾಡಿಕೊಂಡ ಪಾಲಕರು ಮತ್ತೆ ತಮ್ಮ ಮಕ್ಕಳನ್ನು ಈ ರೀತಿ `ಧಾರ್ಮಿಕ ಸಂಕಟ'ಕ್ಕೆ ಸಿಲುಕಿಸುವ ಪ್ರಯತ್ನವನ್ನು ಮಾಡಲಿಲ್ಲ.

ಬೂರ್ಖಾದಿಂದ ಈ ಮಟ್ಟದಲ್ಲಿ ಸಮಸ್ಯೆ ಆಗದಿರಬಹುದು. ಆದರೆ ಬೂರ್ಖಾದಂತಹ ಬಟ್ಟೆ ಹಾಕಿಕೊಂಡು ತರಗತಿಯ ಒಳಗೆ ಯಾವುದೇ ವಿದ್ಯಾರ್ಥಿನಿಯರಾಗಲೀ ಶಿಕ್ಷಕಿಯರಾಗಲಿ ಇರುವುದು ಸರಿಯಾದ ಕ್ರಮವಲ್ಲವೆಂದು ನನ್ನಂತೆ ಬಹಳ ವರ್ಷ ಅಧ್ಯಾಪನ ಮಾಡಿದ ಯಾರಿಗೇ ಆದರೂ ಅನ್ನಿಸೀತು. ಏಕೆಂದರೆ ಶಿಕ್ಷಕಿಯೊಬ್ಬರು ಬೂರ್ಖಾ ಧರಿಸಿ ಪಾಠಮಾಡತೊಡಗಿದರೆ ಮುಂದಿರುವ ಮಕ್ಕಳಿಗೆ `ಸಂವಹನ' ಸರಿಯಾಗಿ ಆಗಲಾರದು. ಅದರಂತೆ ವಿದ್ಯಾರ್ಥಿಗಳೂ ಈ ರೀತಿ ಬಟ್ಟೆಧರಿಸಿ ಕುಳಿತಾಗೂ ಈ ಸಮಸ್ಯೆ ಉಂಟಾಗುತ್ತದೆ. ಮಕ್ಕಳ ಮುಖದ ಚಹರೆ ಹಾವ-ಭಾವ ಇವುಗಳನ್ನು ಗಮನಿಸದೆ ಶಿಕ್ಷಕರು ತಾವು ಮಾಡಿದ ಪಾಠ ಅರ್ಥವಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯುವುದು ಕಷ್ಟ. ಇದು ವಿದ್ಯಾರ್ಥಿಗಳನ್ನು `ಪ್ರತ್ಯೇಕಿಸುವ' ಅಂಶವೂ ಆಗಬಹುದು. `ನಾವೆಲ್ಲ ಒಂದು' ಎಂಬ ಭಾವನೆಗೆ ಧಕ್ಕೆ ತರಬಹುದು. ಈ ಹಿನ್ನಲೆಯಲ್ಲಿ ಇಸ್ಲಾಂ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿರದಿದ್ದರೂ ಆ ಧರ್ಮದ ಮುಖ್ಯ ಬೋಧನೆ-ತತ್ವಗಳನ್ನು ತಕ್ಕಮಟ್ಟಿಗೆ ಓದಿಕೊಂಡಿರುವ, ಯಾವ ಧರ್ಮಕ್ಕೂ ಅಂಟಿಕೊಂಡಿರದ ಮತ್ತು  ಬಹಳ ವರ್ಷ ಮೇಷ್ಟ್ರ ಕೆಲಸ ಮಾಡಿರುವ ನಾನು ಬೂರ್ಖಾ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಅತ್ಯಂತ ಪ್ರೀತಿಯಿಂದ ಹೇಳಬಹುದಾದ ಕಿವಿಮಾತೆಂದರೆ ಅವರು ಇಷ್ಟಪಟ್ಟೋ ಅಥವಾ ಒತ್ತಡಕ್ಕೊಳಗಾಗಿಯೋ ಬೂರ್ಖಾ ಧರಿಸಿ ಕಾಲೇಜಿಗೆ ಬಂದರೂ ತರಗತಿಯ ಪಾಠಪ್ರವಚನಗಳಲ್ಲಿ ಪಾಲ್ಗೊಳ್ಳುವಾಗ ಅವನ್ನು ತೆಗೆದು ಕುಳಿತುಕೊಳ್ಳುವುದು ಒಳ್ಳೆಯದು. ಇದರಿಂದ ಅವರು ತಮ್ಮ ಧರ್ಮವನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ನನಗಂತೂ ಅನ್ನಿಸುವುದಿಲ್ಲ. 

ಇದನ್ನು ಯಾರಿಗೋ ಹೆದರಿ ಅವರು ಮಾಡಬೇಕಾಗಿಲ್ಲ. ತಮ್ಮ ಪರಿಣಾಮಕಾರಿ ಕಲಿಕೆಯ ದೃಷ್ಟಿಯಿಂದ ಇದು ಅಗತ್ಯವಾದದ್ದು ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಕಾಲೇಜಿಗೆ ಬರುವಂಥವರು ತೀರಾ ಚಿಕ್ಕಮಕ್ಕಳೇನಲ್ಲ. ತಮ್ಮ ಭವಿಷ್ಯದ ಬಗ್ಗೆ ಒಂದಿಷ್ಟು ಆಲೋಚಿಸುವ ಶಕ್ತಿಸಾಮರ್ಥ್ಯ ಇರುವಂಥವರು. ಈ ವಿದ್ಯಾರ್ಥಿಗಳು ಪ್ರೀತಿಯಿಂದಲೇ ತಮ್ಮ ಪಾಲಕರನ್ನು ಈ ಬಗ್ಗೆ ಮನವೊಲಿಸುವ ಕೆಲಸವನ್ನು ಮಾಡಬೇಕು. ಈಗಾಗಲೇ ತಮ್ಮಂತೆ ಓದಿ ವಿವಿಧ ಉದ್ಯೋಗದಲ್ಲಿರುವ ಅದರಲ್ಲಿಯೂ ಶಿಕ್ಷಕಿಯರಾಗಿ ಉಪನ್ಯಾಸಕಿಯರಾಗಿ, ಪ್ರಾಧ್ಯಾಪಕಿಯರಾಗಿ ಕೆಲಸ ಮಾಡುತ್ತಿರುವ ತಮ್ಮ ಸಮುದಾಯದ ಮಹಿಳೆಯರು ಈ ರೀತಿ ಬೂರ್ಖಾ ಧರಿಸಿ ಶಾಲೆ ಕಾಲೇಜುಗಳಿಗೆ ಹೋದರೂ ಯಾರು ಹೇಳದಿದ್ದರೂ ತರಗತಿಯ ಒಳಗೆ ಅವನ್ನು ಬಳಸದೆ ಶಾಲೆ ಕಾಲೇಜುಗಳಿಗೆ ಹೋಗಲು ಮತ್ತು ಅಲ್ಲಿಂದ ಮರಳಿ ಬರಲು ಮಾತ್ರ ಬಳಸುತ್ತಿರುವುದನ್ನು ಅವರು ಗಮನಿಸಿಬೇಕು ಮತ್ತು ಅಂತಹ ಉದಾಹರಣೆಗಳನ್ನು ತಮ್ಮ ಪಾಲಕರಿಗೆ ನೀಡಬೇಕು. ಅವರ ಪಾಲಕರು ಅಥವಾ ಅವರ ಹಿಂದೆ ನಿಂತು ಇಂತಹ ಒತ್ತಡ ತರುವವರು ಆ ವಿದ್ಯಾರ್ಥಿನಿಯರಿಗೆ ಕನಿಷ್ಟ ಇಷ್ಟಾದರೂ ಸ್ವಾತಂತ್ರ್ಯ ಕೊಡಬೇಕು. ಇಲ್ಲದಿದ್ದರೆ ತಮ್ಮ ಮಕ್ಕಳ ಶಿಕ್ಷಣಕ್ಕೆ ತಾವೇ ಕೊಡಲಿಪೆಟ್ಟು ಕೊಟ್ಟಂತಾಗುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಏಕೆಂದರೆ ದುಡಿಯುವ ಒಬ್ಬ ಮಹಿಳೆ `ನಾನು ಬೂರ್ಖಾ ಹಾಕಿಕೊಳ್ಳುವುದಿಲ್ಲ' ಎಂದರೆ ಅವಳಿಗೆ `ನೀನು ದುಡಿಮೆಗೆ ಹೋಗುವುದೇ ಬೇಡ' ಎನ್ನುವುದು ವರ್ತಮಾನದ ಕಾಲಘಟ್ಟದಲ್ಲಿ ಕುಟುಂಬಕ್ಕೆ ಬರುವ ಆದಾಯದ  ಕಾರಣದಿಂದಾಗಿ ಕಡಿಮೆಯಾಗಿರಬಹುದಾದರೂ ಓದಲು ಹೋಗುವ ಒಬ್ಬ ವಿದ್ಯಾರ್ಥಿನಿ ಹಾಗೆ ಹೇಳಿದರೆ `ನೀನು ಓದಲು ಹೋಗುವುದೇ ಬೇಡ' ಎನ್ನುವುದು ಕಡಿಮೆಯಾಗಿಲ್ಲ ಎಂಬುದು ನಮ್ಮ ಮುಂದಿರುವ ವಾಸ್ತವ.

ಇನ್ನು ಕೇಸರಿ ಶಾಲಿನ ಸಮಸ್ಯೆ ಸಮಸ್ಯೆಯೇ ಅಲ್ಲ. ಏಕೆಂದರೆ ಅದನ್ನು ಹಾಕಿಕೊಂಡು ಬರುತ್ತಿರುವ ಹುಡುಗರು ಬೂರ್ಖಾ ಹಾಕಿಕೊಂಡು ಬರುತ್ತಿರುವ ಹುಡುಗಿಯರಂತೆ ಧಾರ್ಮಿಕ ಕಾರಣಕ್ಕಾಗಿ ಅದನ್ನು ಮಾಡುತ್ತಿಲ್ಲ ಎಂಬುದನ್ನು ಅವರ ಮಾತುಗಳೇ ಸೂಚಿಸುತ್ತವೆ. ಬೂರ್ಖಾದ ಬಗ್ಗೆ ತಮ್ಮ ಧರ್ಮಗ್ರಂಥದಲ್ಲಿ ಹೇಳಿದೆ ಎಂದು ಮುಸ್ಲಿಂ ಸಮುದಾಯದ ನನ್ನ ಕೆಲವು ಸ್ನೇಹಿತರು ಹೇಳುತ್ತಾರೆ. ಆ ಬಗ್ಗೆ ನನಗೆ ಹೆಚ್ಚಿಗೆ ಗೊತ್ತಿಲ್ಲ. ಆದರೆ ಅಲ್ಪಮಟ್ಟಿಗೆ ಹಿಂದೂ ಧರ್ಮದ ಪ್ರಮುಖ ಧರ್ಮಗ್ರಂಥಗಳು ಎಂದು ಕರೆಯಲ್ಪಡುವ ಬಹಳಷ್ಟು ಗ್ರಂಥಗಳನ್ನು ನಾನು ಓದಿರುವೆನಾದರೂ ಈ ಕೇಸರಿ ಶಾಲಿನ ಬಗ್ಗೆ ಬರ್ಮುಡಾ, ಚಡ್ಡಿಗಳ ಬಗ್ಗೆ ಯಾವ ಧರ್ಮಗ್ರಂಥದಲ್ಲಿ ಹೇಳಿದೆಯೋ ನನಗಂತೂ ಸಿಕ್ಕಿಲ್ಲ. ಬಹುಶಃ ಅವನ್ನು ಹಾಕಿಕೊಂಡು ಬರುತ್ತೇವೆ ಎಂದು ಬೆದರಿಸುವವರಿಗೂ ಕೂಡ ಈ ಬಗ್ಗೆ ಗೊತ್ತಿರಲಾರದು. `ಅವರು ಹಾಕಿದರೆ ನಾವೂ ಹಾಕುತ್ತೇವೆ. ಅವರು ಬಿಟ್ಟರೆ ನಾವೂ ಬಿಡುತ್ತೇವೆ' ಎಂಬಿತ್ಯಾದಿ ಹೇಳಿಕೆಗಳು ಅವರು ಇಂತಹ ಚಟುವಟಿಕೆಗಳನ್ನು `ಶ್ರದ್ಧೆ'ಗಾಗಿ ಮಾಡದೆ `ಸ್ಪರ್ಥೆ'ಗಾಗಿ ಮಾಡುತ್ತಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತಿವೆ. `ಶ್ರದ್ಧೆ' ಎಂಬುದು ಬಹಳ ಆಳವಾಗಿ ಬೇರುಬಿಟ್ಟಿರುವಂಥದ್ದು; ಗಟ್ಟಿ ತಾಯಿಬೇರಿನ ಆಲದ ಮರದ ಸ್ವರೂಪದ್ದು. ಅದನ್ನು ಬದಲಿಸುವುದು ಬಲು ಕಷ್ಟದ ಕೆಲಸ. ಆದರೆ `ಸ್ಪರ್ಥೆ' ಎಂಬುದು ಹೀಗೆ ಆಳವಾಗಿ ಬೇರುಬಿಟ್ಟಿರುವಂಥದ್ದಲ್ಲ. ಅದು ತುಂತುರು ಬೇರುಗಳ ಮುಳ್ಳುಕಂಟಿಯ ಸ್ವರೂಪದ್ದು. ಅದನ್ನು ಬದಲಿಸುವುದು ಬಲು ಸುಲಭದ ಕೆಲಸ. `ವೈರಿ' ಎಂಬುದು ಎದುರಿಗಿಲ್ಲ ಎಂತಾದರೆ ಅದು ತನ್ನಷ್ಟಕ್ಕೆ ತಾನು ಬಿದ್ದು ನಾಶವಾಗಿಬಿಡುತ್ತದೆ. ಹೀಗಾಗಿ ಅದೊಂದು ಗಂಭೀರ ಸಮಸ್ಯೆಯಲ್ಲ.

ಈ ವಿವಾದದ ಹಿನ್ನಲೆಯಲ್ಲಿ ಸಂಬಂಧಪಟ್ಟ ಹಲವರು ಪ್ರತಿಕ್ರಿಯಿಸಿದ್ದಾರಾದರೂ ಬಹುತೇಕರ ಹೇಳಿಕೆಗಳು ಸರಿ-ತಪ್ಪುಗಳ ಚರ್ಚೆಯನ್ನು ಬೆಳೆಸಲು ಹೆಚ್ಚು ಅನುಕೂಲಕರವಾಗಿವೆಯೇ ಹೊರತು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ಹೆಚ್ಚು ಪೂರಕವಾಗಿಲ್ಲ.  `ನಮ್ಮಲ್ಲಿನ ಎಂ.ಕಾಂ.,ಬಿ.ಇಡಿ ತರಗತಿಗಳಲ್ಲಿ ವ್ಯಾಸಂಗ ಮಾಡುವ ಮುಸ್ಲಿಂ ವಿದ್ಯಾರ್ಥಿನಿಯರು ಬೂರ್ಖಾ ಸಮೇತ ಬಂದು, ನಂತರ ಅದನ್ನು ಕಾಲೇಜಿನಲ್ಲಿ ಬಿಚ್ಚಿಡುತ್ತಾರೆ. ಮರಳಿ ಮನೆಗೆ ತೆರಳುವಾಗ ಹಾಕಿಕೊಂಡು ಹೋಗುತ್ತಾರೆ. ಅದೇ ಕೆಲಸವನ್ನು ಬಿ.ಎ., ಬಿ.ಕಾಂ. ವಿದ್ಯಾರ್ಥಿನಿಯರಿಗೆ ಮಾಡಲು ಕಷ್ಟ ಏನು?' ಎಂದು ಹಿರೇಕೆರೂರಿನ ಡಿ. ಆರ್. ತಂಬಾಕರ ಕಾಲೇಜಿನ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಪ್ರಶ್ನಿಸಿರುವುದು ತಾತ್ವಿಕವಾಗಿ ಸರಿ ಇದೆಯಾದರೂ ಅವರ ಪ್ರಶ್ನೆ ಸಿಸ್ತುಕ್ರಮ ಜರುಗಿಸುವಲ್ಲಿ ಹೆಚ್ಚು ಅನುಕೂಲವಾಗಬಹುದೇ ವಿನಃ ಮನವೊಲಿಸುವಲ್ಲಿ ಅಲ್ಲ. ಅಲ್ಲಿನ ಅಂಜುಮನ್ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಎ ಲೋಹಾರ್, `ನಮ್ಮ ಧರ್ಮದ ಪ್ರಕಾರ ಮಹಿಳೆಯರು ಕಡ್ಡಾಯವಾಗಿ ಬೂರ್ಖಾ ಧರಿಸಲೇಬೇಕು. ಹೀಗಾಗಿ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಹೀಗಾಗಿ ವಿದ್ಯಾರ್ಥಿನಿಯರು ಬೂರ್ಖಾ ತೆಗೆಯುವುದು ಅಸಾಧ್ಯದ ಮಾತು.' ಎಂದು ಹೇಳಿರುವುದು ಒಂದು ರೀತಿಯಲ್ಲಿ ಹಟಮಾರಿ ಧೋರಣೆಯಿಂದ ಕೂಡಿದ ಹೇಳಿಕೆಯಂತಿದೆ. `ಯಾವ ಹಿಂದೂ ಪರ ಸಂಘಟನೆಗಳೂ ಇದರ ಹಿಂದೆ ಇಲ್ಲ. ನಾಲ್ಕು ತಿಂಗಳಲ್ಲಿ ಎಂಟು-ಹತ್ತು ಬೈಠಕ್ಗಳು ಆಗಿರುವುದು ನಿಜ. ಆದರೆ, ಈ ವಿಷಯ ಕುರಿತು ಅಲ್ಲಿ ಚರ್ಚೆ ಆಗಿಲ್ಲ. ಇಷ್ಟಕ್ಕೂ ಪ್ರತಿಭಟನೆ ಮಾಡುತ್ತಿರುವವರು ಎಬಿವಿಪಿಯವರೂ ಅಲ್ಲ' ಎಂದು ಹಾನಗಲ್ಲಿನ ಆರ್.ಎಸ್.ಎಸ್. ಸ್ವಯಂ ಚಾಲಕ ಪ್ರಶಾಂತ ಮುಚ್ಚಂಡಿ ನೀಡಿರುವ ಹೇಳಿಕೆ ತಾಂತ್ರಿಕವಾಗಿ ಸರಿಯಿದ್ದರೂ ತಾತ್ವಿಕವಾಗಿ ಪ್ರಾಮಾಣಿಕತೆಯಿಂದ ಕೂಡಿದೆಯೇ ಎಂಬ ಪ್ರಶ್ನೆಯನ್ನು ಎತ್ತುತ್ತದೆ. ಏಕೆಂದರೆ ಇಂತಹ ಕೆಲಸಗಳಿಗೆ ಜನರನ್ನು `ಪ್ರಚೋದಿಸುವಿಕೆೆ' ಮತ್ತು `ಹುರಿದುಂಬಿಸುವಿಕೆ' ಅನೇಕ ಬಾರಿ `ಅಧಿಕೃತ ಸಭಾ ನಿರ್ಣಯಗಳ' ಅಥವಾ `ಬೈಠಕ್ ನಿರ್ಣಯ'ಗಳ ಆಚೆ-ಈಚೆ ನಡೆಯುವ ಸಂಗತಿಗಳಾಗಿರುತ್ತವೆ. ಆ ಹುಡುಗರೆಲ್ಲ ಬೂರ್ಖಾಕ್ಕೆ ವಿರುದ್ಧವಾಗಿ ಕೇಸರಿ ಶಾಲನ್ನೇ ಏಕೆ ಎತ್ತಿಕೊಂಡಿರಬಹುದು ಎಂಬುದನ್ನು ಆಲೋಚಿಸಿದರೆ ಇದು ನಮಗೆ ಅರ್ಥವಾಗುತ್ತದೆ. `ಬೂರ್ಖಾ ತೆಗೆದು ಬನ್ನಿ ಅಂದ್ರೆ ನಮ್ಮ ಮಕ್ಕಳನ್ನು ಕಾಲೇಜಿಗೇ ಕಳುಹಿಸುವುದಿಲ್ಲ. ಆಗಿದ್ದಾಗಲಿ. ಅವರ ನಸೀಬು ಇದ್ದಂಗೆ ಆಗಲಿ ಬಿಡಿ' ಎಂದು ಹಾನಗಲ್ ಪುರಸಭೆ ಸದಸ್ಯ ಖ್ವಾಜಾ ವೈನುದ್ಧಿನ್ ನಾಯ್ಕ್  ಬೇಸರದಿಂದ ಹೇಳಿರುವುದು ಕೂಡ ಸರಿಯಲ್ಲ. ಹೀಗೆ ಮಾಡಿದರೆ ತಮ್ಮ ಸಮುದಾಯದ ಮಕ್ಕಳ ಭವಿಷ್ಯದ ಮೇಲೆ ಅವರು ಕಲ್ಲೆಳೆದಂತಾಗುತ್ತದೆ. 

ಈ ಮಧ್ಯೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಸಾಂವಿಧಾನಿಕ ಅಂಶಗಳನ್ನು ಪ್ರಸ್ತಾಪಿಸಿ `ಬೂರ್ಖಾ ನಿಷೇಧ ಅಸಾಧ್ಯ' ಎಂದು ಹೇಳಿದ್ದಾರೆ. 'ಪ್ರೌಢವಯಸ್ಸಿನ ಪ್ರತಿಯೊಬ್ಬರಿಗೂ ತಮಗಿಷ್ಟದ ಉಡುಗೆ-ತೊಡುಗೆ ಧರಿಸಲು ಸಂವಿಧಾನದಲ್ಲಿ ಮುಕ್ತ ಅವಕಾಶ ಇದೆ' ಎಂದಿರುವ ಅವರ ಹೇಳಿಕೆ ಸರಿ ಇದೆಯಾದರೂ ಕಾಲೇಜು ಆವರಣದಲ್ಲಿ ಉಂಟಾಗಿರುವ ಗೊಂದಲವನ್ನು ಸರಿಪಡಿಸುವಲ್ಲಿ ಅದು ಉಪಕಾರ ಮಾಡುವುದಕ್ಕಿಂತ ಉಪದ್ರವ ಮಾಡುವ ಸಾಧ್ಯತೆ ಹೆಚ್ಚು. ಅವರ ಹೇಳಿಕೆಯ ಪ್ರಕಾರವೇ ಈಗ ಬೂರ್ಖಾ ನಿಷೇಧಿಸಲು ಹಟಹಿಡಿದಿರುವ ಹುಡುಗರು ಅವರು ಈಗಾಗಲೇ ಘೋಷಿಸಿರುವಂತೆ ಬರ್ಮುಡಾ, ಚಡ್ಡಿ, ಬನಿಯನ್ ಇತ್ಯಾದಿ ತೊಟ್ಟು ಕಾಲೇಜಿಗೆ ಬರತೊಡಗಿದರೆ ಅಲ್ಲಿ ಒಂದು `ಅಸಭ್ಯ ವಾತಾವರಣ' ಸೃಷ್ಟಿಯಾಗಲಾರದೇ? ಅದನ್ನು ನಿವಾರಿಸುವುದು ಹೇಗೆ?  `ಬೂರ್ಖಾ ಯಾವ ಸಮಾಜದ ಸಂಕೇತವನ್ನೂ ಸೂಚಿಸುವುದಿಲ್ಲ. ಮೇಲಾಗಿ ಇದು ಯಾವ ಧರ್ಮಕ್ಕೂ ಸಂಬಂಧಿಸಿದ್ದಲ್ಲ' ಎಂಬ ಅವರ ಈ ಸಂಬಂಧೆ ಹೇಳಿಕೆ ಅನಗತ್ಯವಾದ್ದು ಮತ್ತು ಗೊಂದಲವನ್ನುಂಟುಮಾಡುವಂಥದ್ದು. ಏಕೆಂದರೆ ಈಗಾಗಲೇ ಮುಸ್ಲಿಂ ಸಮುದಾಯದ ಮುಖ್ಯಸ್ಥರೊಬ್ಬರು ಅದನ್ನು ತಮ್ಮ ಧರ್ಮ-ಸಮಾಜದ ಸಂಕೇತ ಎಂದು ಹೇಳಿದ್ದಾರೆ.

`ಸಂವಿಧಾನದ ಆಶಯ' ಮತ್ತು `ನಮ್ಮ ಸ್ವಾತಂತ್ರ್ಯ' ಇವುಗಳ ನಡುವೆ ಅರ್ಥ ಬದ್ದ ಹೊಂದಾಣಿಕೆಯಾದಾಗ ಮಾತ್ರ ಭಾರತ ಮಾತ್ರವಲ್ಲ ಈ ಪ್ರಕಾರದ ಆಡಳಿತ ವ್ಯವಸ್ಥೆಯನ್ನು ಹೊಂದಿರುವ ಯಾವುದೇ ರಾಷ್ಟ್ರದಲ್ಲಿ ಸಮಸ್ಯೆಗಳನ್ನು ಸರಳವಾಗಿ ಬಗೆಹರಿಸಿಕೊಂಡು ನಾವು ಅರ್ಥಪೂರ್ಣವಾಗಿ ಗೊಂದಲಗಳಿಲ್ಲದೆ ನೆಮ್ಮದಿಯಿಂದ ಬದುಕಬಹುದು. ಒಂದು ಉದಾಹರಣೆ ಕೊಡುವುದಾದರೆ ತೀರಾ ಇತ್ತೀಚಿನವರೆಗೂ ಕಾಲೇಜುಗಳಲ್ಲಿ ರಾಷ್ಟ್ರಗೀತೆ ಹೇಳುವುದು ಮತ್ತು ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದು ಕಡ್ಡಾಯವಾಗಿರಲಿಲ್ಲ. ಶಾಲೆಗಳಲ್ಲಿ ಕಡ್ಡಾಯವಾಗಿತ್ತು. ಇದರ ಹಿಂದಿನ ಅರ್ಥ ಶಾಲೆಗಳಲ್ಲಿ ಇವು ನಡೆಯಲೇ ಬೇಕು ಕಾಲೇಜಿನಲ್ಲಿ ನಡೆದರೂ ಆಗುತ್ತೆ ಬಿಟ್ಟರೂ ಆಗುತ್ತೆ ಎಂಬುದಾಗಿರಲಿಲ್ಲ. ಶಾಲೆಗಳಲ್ಲಿ ಓದುವ ಮಕ್ಕಳು ಚಿಕ್ಕವರು, ಅವರಿಗೆ ಸ್ವಂತ ತಿಳಿವಳಿಕೆ ಇರುವುದಿಲ್ಲ, ಹಾಗಾಗಿ ಅಲ್ಲಿ ಇವನ್ನು ಕಡ್ಡಾಯ ಮಾಡುವ ಅಗತ್ಯವಿದೆ. ಆದರೆ ಕಾಲೇಜಿಗೆ ಹೋಗುವ ವೇಳೆಗೆ ವಿದ್ಯಾರ್ಥಗಳು ಪ್ರಬುದ್ಧರಾಗಿರುತ್ತಾರೆ ಮತ್ತು ಸ್ವಯಂ `ಪ್ರೇರಣೆಯಿಂದ ಇವುಗಳನ್ನು ನಡೆಸುತ್ತಾರೆ' ಎಂಬುದು ಈ ಕ್ರಮದ ಹಿಂದಿನ ಆಶಯವಾಗಿತ್ತು.  ಇತ್ತೀಚೆಗೆ ಕಾಲೇಜುಗಳಲ್ಲಿಯೂ ಇವನ್ನು ಕಡ್ಡಾಯ ಮಾಡಿರುವುದನ್ನು ನೋಡಿದರೆ ಈ ಆಶಯ ಈಡೇರಿಲ್ಲ ಎಂಬುದು ಅರ್ಥವಾಗುತ್ತದೆ. ಇದು ನಮ್ಮ ಶಿಕ್ಷಣ ವ್ಯವಸ್ಥೆಯ ಒಂದು ಬಗೆಯ ಸೋಲೂ ಹೌದು. ಈ ಹಿನ್ನಲೆಯಲ್ಲಿ ಇಲ್ಲಿ ಸಂವಿಧಾನದ ಆಶಯಗಳಿಗೆ ತಕ್ಕಂತೆ ನಮ್ಮ ಸ್ವಾತಂತ್ರ್ಯವನ್ನು ಸ್ವಲ್ಪಮಟ್ಟಿಗೆ ವಿನಯದಿಂದ ಭಾಗಿಸಿಕೊಳ್ಳುವಿಕೆ ಎರಡೂ ಕಡೆಯವರು ಮಾಡಲೇಬೇಕಾದ ಒಂದು ಸಾಂವಿಧಾನಿಕ ಜವಾಬ್ದಾರಿ ಕೂಡ ಆಗಿದೆ. ಮುರಿದು ಹೋಗುವುದಕ್ಕಿಂತ ಭಾಗಿ ಹೋಗುವುದು ಯಾವಾಗಲೂ ಕ್ಷೇಮ, ನಮಗೆ ಮಾತ್ರವಲ್ಲ ನಮ್ಮ ಎದುರಾಳಿಗಳಿಗೂ.

ಇಲ್ಲಿ ಸಮಸ್ಯೆಯೆಂಬುದು ಸಂಪೂರ್ಣವಾಗಿ ಬೂರ್ಖಾದ ಒಳಗೆ ಅಡಗಿಯೂ ಇಲ್ಲ ಕೇಸರಿ ಶಾಲುಗಳ ಮೂಲಕ ಹೆಗಲಮೇಲೆ ಹಾರಾಡುತ್ತಲೂ ಇಲ್ಲ, ಅದು ಕಪ್ಪು ಬೂರ್ಖಾ ಮತ್ತು ಕೇಸರಿ ಶಾಲುಗಳ ಮಧ್ಯೆ ಇದೆ ಎಂಬುದನ್ನು ನಾವು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕು. ಅದನ್ನು ಬಗೆಹರಿಸಲು ಸಂಬಂಧಪಟ್ಟವರೆಲ್ಲರೂ ಪ್ರಾಮಾಣಿಕ ಪ್ರಯತ್ನಮಾಡಬೇಕು. ವಿಶೇಷವಾಗಿ ಕಾಲೇಜುಗಳ ಮುಖ್ಯಸ್ಥರರು ಯಾವುದೇ ಬೇಧಭಾವವಿಲ್ಲದೆ ನಡೆದುಕೊಳ್ಳುವುದು ಬಹಳ ಮುಖ್ಯ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಹಿರಿಯ ಕವಿ ಡಾ. ವಿನಾಯಕ ಕೃಷ್ಣ ಗೋಕಾಕರ ಮಹಾಕಾವ್ಯ `ಭಾರತ ಸಿಂಧುರಶ್ಮಿ'ಯಲ್ಲಿ `ಅಪರಾಧಿಯಾಗದಿರು ನ್ಯಾಯಪತಿ ಸ್ಥಾನದಲಿ' ಎಂಬ ಒಂದು ಬಹುಮುಖ್ಯವಾದ ಸಾಲು ಬರುತ್ತದೆ. ನ್ಯಾಯಪತಿಯ ಸ್ಥಾನದಲ್ಲಿರುವ ಕಾಲೇಜು ಆಡಳಿತ ಮಂಡಳಿಗಳು ಅಲ್ಲಿನ ಪ್ರಾಂಶುಪಾಲರು `ಅಪರಾಧಿ' ಆಗದಿರುವುದು ಮಾತ್ರವಲ್ಲ `ಆರೋಪಿಗಳೂ' ಆಗದಂತೆ ವರ್ತಿಸಬೇಕು. ಇದರಿಂದ ವಿದ್ಯಾರ್ಥಿಗಳೆಲ್ಲರೂ ಅವರನ್ನು ನಂಬುತ್ತಾರೆ ಮತ್ತು ಅವರ ಮಾತಿಗೆ ಗೌರವ ಕೊಡುತ್ತಾರೆ. ಹೀಗೆ ವಿದ್ಯಾಸಂಸ್ಥೆಯ ಮುಖ್ಯಸ್ಥರು ತಮ್ಮ ಮೇಲೆ ವಿದ್ಯಾರ್ಥಿಗಳು ಮತ್ತು ಅವರ ಪಾಲಕರ ನಂಬಿಕೆಯನ್ನು ತಂದುಕೊಳ್ಳುವಲ್ಲಿ ಯಶಸ್ವಿಯಾದರೆ ಸಮಸ್ಯೆಯನ್ನು ಅರ್ಥಭಾಗ ಬಗೆಹರಿಸಿದಂತೆಯೇ. ಇದರ ಜೊತೆ ಕಾಲೇಜು ವಿದ್ಯಾರ್ಥಿಗಳಂತಹ ಯುವಶಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳುವವರೂ ಕೂಡ ತಮ್ಮ ಈ ಹೇಯ ಕೃತ್ಯವನ್ನು ನಿಲ್ಲಿಸಬೇಕು. ಬೂರ್ಖಾ ಧರಿಸಿ ಕಾಲೇಜಿಗೆ ಬರುತ್ತಿರುವ ವಿದ್ಯಾರ್ಥನಿಯರ ಮೇಲೆ ಯಾರದೋ ಪ್ರಚೋದನೆಯಿಂದ `ಬಾಡಿಗೆದ್ವೇಷ' ಸಾಧಿಸುತ್ತಿರುವ ವಿದ್ಯಾರ್ಥಿಗಳೂ ಸಹ ತಮ್ಮಂತೆ ಓದಲು ಬಂದಿರುವ ತಮ್ಮ ಗೆಳತಿಯರ ಬಗ್ಗೆ ತಮ್ಮ ನಿಜವಾದ ಭಾವನೆಗಳಾದ ಪ್ರೀತಿ, ಸ್ನೇಹ, ಪ್ರೀತಿ ಈ ಕಡೆ ಮರಳಬೇಕು. 

ಯಾರಿಗೇ ಆಗಲಿ ತಮ್ಮ ಶಾಲಾ-ಕಾಲೇಜು ಜೀವನದ ಸಂಗಾತಿಗಳು ಮತ್ತು ಸಂಗತಿಗಳು ಬದುಕಿನ ಬಹಳಷ್ಟು ಸಂದರ್ಭಗಳಲ್ಲಿ ಸಾಂದರ್ಭಿಕವಾಗಿ ಪದೇ ಪದೇ ನೆನಪಿಗೆ ಬರುತ್ತಲೇ ಇರುತ್ತವೆ. ಹಾಗೆ ನೆನಪು ಆದಾಗಲೆಲ್ಲ ಅಲ್ಲಿ ಮನಸ್ಸನ್ನು ಮುದಗೊಳಿಸುವ ಘಟನೆಗಳು ನೆನಪಾಗಬೇಕೇ ಹೊರತು ಮನಸ್ಸನ್ನು ಘಾಸಿಗೊಳಿಸುವ ಘಟನೆಗಳಲ್ಲ ಎಂದು ಎಲ್ಲರೂ ಬಯಸುತ್ತಾರೆ. ಅದಕ್ಕೆ ಈ ವಿದ್ಯಾರ್ಥಿಗಳೂ ಹೊರತಲ್ಲ. ಈ ಹಿನ್ನಲೆಯಲ್ಲಿ ಈ ಕಾಲೇಜುಗಳೂ ಸೇರಿದಂತೆ ಯಾವ ಕಾಲೇಜುಗಳ ವಿದ್ಯಾರ್ಥಿಗಳೂ ಹೊರಗೆ ಕೊಳೆತು ನಾರುತ್ತಿರುವ ಮತಧರ್ಮಗಳ, ಕೀಳುರಾಜಕೀಯದ ದುರ್ವಾಸನೆ ತಮ್ಮ ಕಾಲೇಜುಗಳ ಆವರಣದೊಳಗೆ ಅನವಶ್ಯವಾಗಿ ಪ್ರವೇಶವಾಗಲು ಅವಕಾಶಮಾಡಿಕೊಡಬಾರದು. ತಮ್ಮದೇ ಆದ ಪರಿಮಳಭರಿತ ಹೂವುಗಳಿಂದ ಕೂಡಿದ ಆನಂದದ ಉದ್ಯಾನವನವನ್ನಾಗಿ ಅವರು ತಮ್ಮ ಕಾಲೇಜು ಆವರಣಗಳನ್ನು ಇಟ್ಟುಕೊಳ್ಳಬೇಕು. ಏಕೆಂದರೆ ಈ ರೀತಿಯ ಒತ್ತಡಗಳನ್ನು ತರದಂತಿರುವುದು ಹೊರಗಿನವರ ಜವಾಬ್ದಾರಿ ಹೇಗೆ ಆಗಿದೆಯೋ ಇಂತಹ ಒತ್ತಡಗಳಿಗೆ ಅಥವಾ ಪ್ರಚೋದನೆಗಳಿಗೆ ಒಳಗಾಗಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳದೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ಜವಾಬ್ದಾರಿ ಈ ವಿದ್ಯಾರ್ಥಿಗಳದ್ದೂ ಆಗಿದೆ. ಈ ಬಗ್ಗೆ ಸಂಬಂಧಪಟ್ಟ ಎಲ್ಲರೂ ಆಲೋಚಿಸುವಂತಾಗಲಿ. ಉರ್ದು ಕವಿ ಅಲೀಫ್ ಅಹ್ಮದ್ ಬರ್ಖ್ ಅವರ `ನನ್ನನ್ನು ಅರಿತುಕೊಳಿ' ಎಂಬ ಕವನದ (ಅನು: ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ) ಕೆಳಗಿನ ನಾಲ್ಕು ಸಾಲುಗಳು ಈ ವಿವಾದದಲ್ಲಿ ಬಲಿಯಾಗುತ್ತಿರುವ ವಿದ್ಯಾರ್ಥಿನಿಯರ ಮನಸ್ಥಿತಿಯನ್ನು ನಮಗೆ ಅರ್ಥಪೂರ್ಣವಾಗಿ ಕಟ್ಟಿಕೊಡುತ್ತವೆ:

"ಪರಿಶುದ್ಧವಾಗಲೀ ನನ್ನ ಮುಖ
ತಿಕ್ಕಿ ತೊಳೆಯಲೀ ವಾಯುಸಖ
ಒರೆಸಲಾರೆನು ನಾನು ಧೂಳನ್ನು, ಕಟ್ಟಿಹೋಗಿದೆ ಕೈಯಿ
ಸಹನೆಯ ಅಪ್ರತಿಮವಾದ್ದೊಂದು ಬೇಡಿಯಿಂದ!'

***