Thursday, June 29, 2017

ಬಂಡುಂಬ ಭ್ರಮರವೂ ಬಂಡಾಯದ ಕಾಗೆಗಳೂ...

ಬಂಡುಂಬ ಭ್ರಮರವೂ ಬಂಡಾಯದ ಕಾಗೆಗಳೂ...

`ಅಂಬುಜಕೆೆ ಭಾನುವಿನ ಉದಯದ ಚಿಂತೆ / ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ' ಇವು  ಬಸವಣ್ಣನವರ ವಚನವೊಂದರ ಎರಡು ಧ್ವನಿಪೂರ್ಣವಾದ ಸಾಲುಗಳು. ನಮ್ಮ ಚಿಂತೆಯನ್ನು ಅನುಸರಿಸಿಯೇ ನಮ್ಮ ಚಿಂತನೆಗಳು ಮೂಡುವುದನ್ನೂ ಆ ಚಿಂತನೆಯಂತೆಯೇ ನಾವು ಕ್ರಿಯಾಶೀಲರಾಗುವುದನ್ನು ಈ ಸಾಲುಗಳು ಸೂಚ್ಯವಾಗಿ ಅರುಹುತ್ತವೆ. ಕನ್ನಡದ ಮಹಾಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪನವರು ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ತಮ್ಮೊಂದಿಗಿನ `ಸಂವಾದ'ವೊಂದರಲ್ಲಿ ಭಾಗವಹಿಸಿ ಚಳವಳಿಗಳು ಮತ್ತು ಪ್ರಗತಿಪರ ಸಾಹಿತ್ಯದ ಬಗೆಗಿನ ತಮ್ಮ ಮಾಮೂಲಿ ವಿಷಕಾರುವಿಕೆಯನ್ನು ಮಾಡಿದ್ದು ವರದಿಯಾಗಿದೆ. ಕೆಲವು ವರ್ಷಗಳ ಹಿಂದೆ ಭೈರಪ್ಪನವರು ಏನಾದರೂ ಹೇಳಿಕೆ ನೀಡಿದರೆ ಅದಕ್ಕೆ ನಮ್ಮ ಸಾಹಿತ್ಯ ವಲಯದಿಂದ ಬಹುದೊಡ್ಡ ಮಟ್ಟದ ವಿರೋಧ ವ್ಯಕ್ತವಾಗುತ್ತಿತ್ತು. ಆದರೆ ಇತ್ತೀಚೆಗೆ ಅವರ ಹೇಳಿಕೆಗೆ ಕನ್ನಡದ ಯಾವ ಮುಖ್ಯ ಬರಹಗಾರರೂ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗುತ್ತಿಲ್ಲ. ಇದಕ್ಕೆ ಅವರ ವಿಚಾರವನ್ನು ಎಲ್ಲರೂ ಒಪ್ಪಿಕೊಂಡರು ಎಂದಾಗಲೀ ಅವರ ವಿಚಾರವನ್ನು ಎದುರಿಸುವ ಸಾಮಥ್ರ್ಯ ಯಾರಿಗೂ ಇಲ್ಲದಾಯಿತು ಎಂದಾಗಲೀ ಅರ್ಥವಲ್ಲ. ಬದಲಿಗೆ ಈ ಮನುಷ್ಯನ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬ ತೀಮರ್ಾನಕ್ಕೆ ಬಹುತೇಕರು ಬಂದಿದ್ದಾರೆಂದರ್ಥ. ಏಕೆಂದರೆ ದಾವಣಗೆರೆಯಲ್ಲಿ ಸಂವೇದನೆಯ ಸೂಕ್ಷ್ಮತೆಯ ಬಗ್ಗೆ ಮಾತಾಡಿರುವ ನಮ್ಮ ಭೈರಪ್ಪನವರು ಕನ್ನಡದ ಶಕ್ತಿಶಾಲಿ ಬರಹಗಾರರಲ್ಲಿ ಬಹುತೇಕ ಏಕೈಕ `ಸಂವಾದಸಾಧ್ಯ ಲೇಖಕ' ಅನ್ನಬಹುದು. ವರ್ಷಕ್ಕೆ ಒಂದೋ ಎರಡೋ ಬಾರಿ ಹುತ್ತದೊಳಗಿನಿಂದ ಹೊರಗೆ ಬರುವ ಹಾವೊಂದು ವಿಷವನ್ನು ಕಾರಿ ಮತ್ತೆ ಹುತ್ತ ಸೇರಿಕೊಳ್ಳುವ ಒಂದು ಚಿತ್ರಣವನ್ನು ನಾವು ಕಣ್ಣಮುಂದೆ ತಂದುಕೊಳ್ಳುವುದು ಅವರಿಗೆ ಮಾಡುವ ಅವಮಾನವೇನೂ ಆಗಲಿಕ್ಕಿಲ್ಲ. 

ಭೈರಪ್ಪನವರು ಕಳೆದ ವರ್ಷ ಬಹುತೇಕ ಹಸಿದವರ ಹೊಟ್ಟೆಗೆ ಒಂದಿಷ್ಟು ಅನ್ನಸಿಗುವುದಕ್ಕೆ ದಾರಿಯಾದ `ಅನ್ನಭಾಗ್ಯ'ದ ಬಡವರ ಉಣ್ಣುವ ತಟ್ಟೆಗೆ ಕಲ್ಲುಹಾಕುವ ಮಾತುಗಳನ್ನು ಆಡಿ ಸಾಹಿತ್ಯ ಮಾತ್ರವಲ್ಲ ಅದರಾಚೆಗಿನ ದುಡಿಯುವ ವರ್ಗದಿಂದಲೂ ಎರ್ರಾಬಿರ್ರಿ ಬೈಸಿಕೊಂಡು ಹೋದವರು ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಇದೇ ಮೊದಲೇನೋ. ಅವರ ಹೇಳಿಕೆಗಳಿಗೆ ಮತ್ತು ಅವರು ತಮ್ಮ ಕೃತಿಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಪ್ರತಿಪಾದಿಸುವ ಅನ್ಯಮತಧರ್ಮಗಳ ಬಗೆಗಿನ ದ್ವೇಷ-ರೋಷಗಳಿಗೆ, ತಮ್ಮದೇ ಧರ್ಮದ ಮಹಿಳೆಯರು, ದಲಿತರು ಮುಂತಾದವರ ಏಳಿಗೆ ಬಗೆಗಿನ ಅಸೂಯೆಗೆ ವ್ಯಕ್ತವಾಗುವ ಧನಾತ್ಮಕವೂ ವ್ಯಾಪಕವೂ ಆದ ಟೀಕೆಗಳು ಅವರನ್ನು ಮುಟ್ಟುತ್ತವೆಯೋ  ಇಲ್ಲವೋ ಭಗವಂತನೇ ಬಲ್ಲ. ಏಕೆಂದರೆ ಆ ಟೀಕೆಗಳಿಗೆ ಅವರಿಂದ ಯಾವುದೇ ಬಗೆಯ ಪ್ರತಿಕ್ರಿಯೆ ಬರುವುದಿಲ್ಲ. ಹಾಗೆ ನೋಡಿದರೆ `ವಿವಾದಾತ್ಮಕ' ಎಂದು ಕರೆಯಬಹುದಾದ ಹೇಳಿಕೆ ನೀಡುವ, ಕೃತಿರಚಿಸುವ ಲೇಖಕರು ಕನ್ನಡದಲ್ಲಿ ಭೈರಪ್ಪ ಒಬ್ಬರೇ ಅಲ್ಲ. ಇನ್ನೂ ಹಲವರು ಇದ್ದರು ಮತ್ತು ಇದ್ದಾರೆ. ಆದರೆ ಅವರೆಲ್ಲರಲ್ಲಿ ಇರುವ ಒಂದು ಗುಣವಿಶೇಷತೆ ಎಂದರೆ ಈ ರೀತಿಯ ಧನಾತ್ಮಕವೋ ಋಣಾತ್ಮಕವೋ ಆದ ಟೀಕೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ಬಂದಾಗ, ವಿವಾದಗಳು ಎದ್ದಾಗ, ಅವುಗಳಿಗೆ ತಮ್ಮ ಪ್ರತಿಕ್ರಿಯೆ ನೀಡುವಂಥದ್ದು ಮತ್ತು  ಆ ಮೂಲಕ ಎದ್ದ ವಿವಾದವನ್ನು ಮುಕ್ತಾಯ ಮಾಡುವುದು ಅಥವಾ ಆ ಬಗ್ಗೆ ಒಂದಿಷ್ಟು ಆರೋಗ್ಯಕರ ಚಚರ್ೆ ನಡೆಯುವಂತೆ ಮಾಡುವುದು. ಆದರೆ ಭೈರಪ್ಪನವರದ್ದು ಇದಕ್ಕೆ ವಿರುದ್ಧವಾದ ನಡೆ. ಒಮ್ಮೆ ಅವರು ಇಂತಹ ವಿವಾದಕ್ಕೆಡೆಮಾಡುವ ಹೇಳಿಕೆಯನ್ನು ನೀಡಿ ಅಂತರ್ಗತರಾದರೆ ಮುಗಿಯಿತು. ಅದರ ಬಗ್ಗೆ ಎಂತಹ ಉಗ್ರ ಪ್ರತಿಕ್ರಿಯೆ ಬಂದರೂ ಅದಕ್ಕೆ ಅವರು ಏನೊಂದೂ ಪ್ರತಿಕ್ರಿಯೆ ನೀಡಲಾರರು. ಯಾರೇ ಹೋರಾಡಲಿ ಊರೇ ಕೂಗಾಡಲಿ ಅವರ ನೆಮ್ಮದಿಗೆ ಭಂಗವಿಲ್ಲ! ಅವರು ಮತ್ತೆ ನಮಗೆ ಕಾಣಸಿಗುವುದು ಇನ್ನೊಂದೋ ಎರಡೋ ವರ್ಷಗಳ ನಂತರ. ಅದೂ ಇನ್ನೊಂದು ಇಂತಹ ವಿವಾದಾಸ್ಪದ ಹೇಳಿಕೆಯೊಂದಿಗೇ. ಇದೇ ಹಿನ್ನಲೆಯಲ್ಲಿ ಅವರನ್ನು ನಾನು ಅವರನ್ನು `ಸಂವಾದಸಾಧ್ಯ ಲೇಖಕ' ಎಂದದ್ದು. ಅವರ ಈ ಸಂವಾದರಾಹಿತ್ಯವೇ ಅವರ ಹೇಳಿಕೆಗಳನ್ನು ಸಾಹಿತ್ಯವಲಯ ತೀವ್ರ ನಿರ್ಲಕ್ಷಕ್ಕೆ ತಳ್ಳಲು ಇಂದು ಕಾರಣವಾಗಿದೆ.

ಕನ್ನಡ ಸಾಹಿತ್ಯದಲ್ಲಿ ಅಪಾರವಾದ ಓದುವ ವರ್ಗವನ್ನು ಹೊಂದಿಯೂ ಬೌದ್ಧಿಕವಲಯದಿಂದ ತಿರಸ್ಕಾರಕ್ಕೊಳಗಾದ ಭೈರಪ್ಪನವರು ವರ್ಷಕ್ಕೆ ಒಂದೋ ಎರಡೋ ಕಡೆ ನೇರವಾಗಿ ಓದುಗರೊಂದಿಗೆ ನಡೆಸುವ ಸಂವಾದದ ವರದಿಗಳು, ಐದೋ ಆರೋ ವರ್ಷಕ್ಕೊಮ್ಮೆ ಬರುವ ಅವರ `ಮಹಾ'ಕಾದಂಬರಿಗಳು ಅವರನ್ನು ಒಮ್ಮೆಗೆ ಸುದ್ದಿಗೆ ತಂದು ಒಂದಿಷ್ಟು ದಿನ ಚಲಾವಣೆಗೊಳಿಸಿ ಸುಮ್ಮನಾಗಿಸುತ್ತವೆ. ಅವರ ಈ `ಅಪಾರ ಓದುವ ವರ್ಗ' ವಿಶಿಷ್ಟ ಬಗೆಯದು. ಕುವೆಂಪು ಸಾಹಿತ್ಯವನ್ನು ವಿಮಶರ್ೆ ಮಾಡುತ್ತ ಸುಮಾರು ಮೂವತ್ತು ವರ್ಷಗಳ ಹಿಂದೆಯೇ ಲಂಕೇಶ್, `ಪ್ರಕೃತಿ ಎಂಬುದು ಕುವೆಂಪು ಅವರ ಮಿತ್ರನೂ ಹೌದು ಶತ್ರುವೂ ಹೌದು' ಎಂದು ಬರೆದಿದ್ದರು. ಇದನ್ನೇ ಭೈರಪ್ಪನವರಿಗೆ ಅನ್ವಯಿಸಿ ಹೇಳುವುದಾದರೆ `ಅವರ ಅಪಾರ ಓದುವ ವರ್ಗ ಅವರ ಮಿತ್ರನೂ ಹೌದು ಶತ್ರುವೂ ಹೌದು. ಮಿತ್ರ ಯಾಕೆಂಬುದದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಶತ್ರುಯಾಕೆಂದರೆ ಅವರಲ್ಲಿ ಬಹಳಷ್ಟು ಓದುಗರು ಸಾಹಿತ್ಯಕ್ಕಿಂತ ಧಾಮರ್ಿಕ ಕಾರಣಗಳಿಗಾಗಿ ಅವರ ಕೃತಿಗಳನ್ನು ಓದುವಂಥವರು ಅಥವಾ ಪಾರಾಯಣ ಮಾಡುವಂಥವರು. ಇನ್ನು ಕೆಲವರು ಓದದೆಯೂ ಅವರ `ಅಭಿಮಾನಿ' ಆದವರು; ಅವರನ್ನು ಒಂದು ರೀತಿಯಲ್ಲಿ ಆರಾಧಿಸುವಂಥವರು. ಯಾವುದೇ ಲೇಖಕ ಇರಬಹುದು. ಅವನು ಈ ರೀತಿಯ ಭಾವನಾತ್ಮಕ ಭಕ್ತರ ನಡುವೆ ಸಿಕ್ಕಿಹಾಕಿಕೊಂಡರೆ ಅವನ ಕಥೆ ಮುಗಿಯಿತು.  ಅಲ್ಲಿಂದ ಮುಂದೆ ಆ ಲೇಖಕ ತನ್ನ ಭಕ್ತರ `ಭಾವನೆಗೆಗಳಿಗೆ ಧಕ್ಕೆ' ಬರದ ರೀತಿಯಲ್ಲಿ ಬರೆಯಬೆಕಾದ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡು ಪೇಚಾಡಬೇಕಾಗುತ್ತದೆ. (ಈಗ ಉಡುಪಿಯ ಕೃಷ್ಣಮಠದ ಆವರಣದಲ್ಲಿ ರಂಜಾನ್ ಇಫ್ತಾರ್ ಕೂಟ ನಡೆಸಿ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡು ಪೇಚಾಡುತ್ತಿರುವ ಪೇಜಾವರ ಸ್ವಾಮಿಗಳನ್ನು ನೆನಪಿಸಿಕೊಳ್ಳಬಹುದು) ಆ ಮೂಲಕ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾನೆ. ಏಕೆಂದರೆ ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ, ಕಷ್ಟವನ್ನು ಪರಿಹರಿಸದಿದ್ದರೆ ತಾವು ಅದುವರೆಗೂ ಹೊತ್ತು ಮೆರೆಸುತ್ತಿದ್ದ ದೇವರ ಮೂತರ್ಿಯನ್ನೆ ಎತ್ತಿಹಾಕಿ ಆಕ್ರೋಶ ವ್ಯಕ್ತಪಡಿಸುವ ಈ ಭಕ್ತರು ಲೇಖಕನಂಥ ಬಡಪ್ರಾಣಿಯನ್ನು ಸುಮ್ಮನೆ ಬಿಡುತ್ತಾರೆಯೇ? ಹೆಚ್ಚುಕಡಿಮೆ ಭೈರಪ್ಪನವರಂತೆ ಹೆಚ್ಚು ಓದುಗರನ್ನು ಹೊಂದಿದ್ದ ತೇಜಸ್ವಿಯಂಥವರಿಗೆ ಈ ರೀತಿಯ ಇಕ್ಕಟ್ಟುಗಳು ಇರಲಿಲ್ಲ ಎಂಬುದನ್ನು ನಾವು ಗಮನಿಸಬೇಕು.

ಭೈರಪ್ಪನವರು ತಮ್ಮ ಓದುಗರೊಂದಿಗೆ ನಡೆಸುವ ಸಂವಾದದ ಸ್ವರೂಪ ಸಾಮಾನ್ಯವಾಗಿ ಹೇಗಿರುತ್ತದೆ ಎಂಬುದಕ್ಕೆ ಒಂದು ನಿದರ್ಶನ ಕೊಡಬಹುದು ಅನ್ನಿಸುತ್ತಿದೆ. 2011 ರಲ್ಲಿ ಇರಬಹುದು. ತೀರ್ಥಹಳ್ಳಿಯಲ್ಲಿ ಭೈರಪ್ಪನವರೊಡನೆ ಸಂವಾದ ಕಾರ್ಯಕ್ರಮವೊಂದು ಏಪರ್ಾಡಾಗಿತ್ತು. ನಾನು ಅಲ್ಲಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದ ಕಾರಣಕ್ಕೋ ಏನೋ ಆ ಕಾರ್ಯಕ್ರಮದ ವೇದಿಕೆಗೆ ನನ್ನನ್ನು ಸಂಘಟಕರು ಕರೆದಿದ್ದರು. ಭೈರಪ್ಪನವರ ಆರಂಭದ ಕಾದಂಬರಿಗಳನ್ನು ನನ್ನ ತಾರುಣ್ಯದ ಆರಂಭದ ದಿನಗಳಲ್ಲಿ ಅತ್ಯಂತ ಶ್ರದ್ಧೆಯಿಂದ ಸೊಂಟನೋವು ಬಂದರೂ ಏಳದೇ ಹಟವಿಟ್ಟು ಓದುತ್ತಿದ್ದ ಮತ್ತು ಅವುಗಳಿಂದ ಬಹಳಷ್ಟು ಪ್ರಭಾವಿತನಾಗಿದ್ದ ನಾನು ಸಹಜವಾಗಿಯೇ ಆಸಕ್ತಿಯಿಂದ ಆ ಕಾರ್ಯಕ್ರಮಕ್ಕೆ ಹೋಗಿದ್ದೆ. ಹೋಗುವಾಗ ನನ್ನ ಕಾರು ಕೆಟ್ಟು ನಾನು ದಾರಿಮೇಲೆ ಆದಾಗ ಸಂಘಟಕರು ಬೇರೆ ಕಾರು ಕಳಿಸಿ ನನ್ನನ್ನು ಆ ಕಾರ್ಯಕ್ರಮಕ್ಕೆ ಕರೆಸಿಕೊಳ್ಳುವ ದೊಡ್ಡಗುಣವನ್ನೂ ತೋರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಭೈರಪ್ಪನವರು ವಿಶ್ರಾಂತಿ ಪಡೆಯುತ್ತಿದ್ದ ಕೊಠಡಿಗೆ ಹೋಗಿ ಅವರಿಗೆ ನಮಸ್ಕರಿಸಿ ನನ್ನ ಗೌರವವನ್ನು ಸಲ್ಲಿಸಿ ಕಾರ್ಯಕ್ರಮದ ವೇದಿಕೆಗೆ ಬಂದ ನನಗೆ ಸಭಾಂಗಣದ ತುಂಬ ಜನ ಇದ್ದದ್ದು ನೋಡಿ ಆಶ್ಚರ್ಯವಾಯಿತು. ಏಕೆಂದರೆ ಅತಿರಥಮಹಾರಥರೆನಿಸುವ ಕನ್ನಡದ ಸಾಹಿತಿಗಳನ್ನು ನಾನು ಮತ್ತು ನನ್ನ ಹಿಂದಿನ ಅಧ್ಯಕ್ಷರು ತೀರ್ಥಹಳ್ಳಿಗೆ ಕರೆಸಿದಾಗ್ಯೂ ಅಷ್ಟೊಂದು ಜನ ಸೇರಿರಲಿಲ್ಲ. ಸೂಕ್ಷ್ಮವಾಗಿ ಅವಲೋಕಿಸುತ್ತಾ ಬಂದೆ. ಎಂದೆಂದೂ ಆಸ್ಪತ್ರೆಯ ಹೊರಗೆ ಕಾಲು ಹಾಕದ ಯಾವಾಗಲೂ `ಬ್ಯೂಜಿ' ಆಗಿರುವ ವೈದ್ಯರೂ ಸೇರಿದಂತೆ ವಿವಿಧ ವಲಯದ ಜನ ಅಲ್ಲಿ ಸೇರಿದ್ದರು. ಭೈರಪ್ಪನವರ ಯಾವುದಾದರೂ ಪುಸ್ತಕ ಪ್ರಕಟವಾದ ಕೂಡಲೇ ಅದರ ನೂರಾರು ಪ್ರತಿಗಳನ್ನು ತರಿಸಿಕೊಂಡು ಮನೆಮನೆಗೆ ತಲುಪಿಸಿ `ಓದಿಸುವ ಕಾಯಕ'ದಲ್ಲಿ ನಿರತರಾಗಿದ್ದ ಇಬ್ಬರು ಮೂವರು `ಸಾಹಿತ್ಯ ಪರಿಚಾರಕ'ರೂ ಸಭಿಕರ ಮಧ್ಯೆ ಅತ್ತಿಂದಿತ್ತ ಓಡಾಡುತ್ತಿದ್ದರು. ಎಂದೂ ಬರದ ಇವರೆಲ್ಲ ಎಲ್ಲಿಂದ ಬಂದರು ಎಂದು ಇನ್ನೂ ಸೂಕ್ಷ್ಮವಾಗಿ ನೋಡಿದಾಗ ಸತ್ಯ ಅರ್ಥವಾಯಿತು. ಅವರೆಲ್ಲ `ಸಾಹಿತ್ಯಾಭಿಮಾನಿಗಳು' ಆಗಿರಲಿಲ್ಲ. `ಭೈರಪ್ಪಾಭಿಮಾನಿಗಳು' ಆಗಿದ್ದರು. ತೀರ್ಥಹಳ್ಳಿಯವರೇ ಆದ ಕುವೆಂಪು ಅವರ ಯಾವ ಒಂದು ಪುಸ್ತಕದ ಹೆಸರು ಗೊತ್ತಿರದವರೂ ಅಲ್ಲಿ ಬಹಳಷ್ಟು ಜನರಿದ್ದರು. ವಿಶೇಷವೆಂದರೆ ಬಹುತೇಕ ಒಂದೇ `ಕುಲಬಾಂಧವ'ರಾಗಿದ್ದರು! ಇದು ಎಂಥದ್ಧಾದರೂ ಆಗಲಿ ಸಂವಾದ ಹೇಗೆ ನಡೆಯಿತು ಗಮನಿಸಿ:  

ಅದನ್ನು ಸಂವಾದ ಎಂದು ಹೇಗೆ ಕರೆಯಬಹುದೋ ತಿಳಿಯದು. ಆರಂಭದಲ್ಲಿಯೇ ಸಭಿಕರಿಗೆ ಮೂರು ಕಂಡೀಶನ್ಗಳನ್ನು ಹಾಕಲಾಯಿತು. ಮೊದಲ ಎರಡು ಕಂಡೀಶನ್ಗಳನ್ನು ಭೈರಪ್ಪನವರೇ ಮೈಕು ಹಿಡಿದುಕೊಂಡು ಹೇಳಿದರು. ಅವೆಂದರೆ ಒಂದು: `ಯಾರು ರಾಜಕೀಯದ ಪ್ರಶ್ನೆಗಳನ್ನು ಕೇಳಬಾರದು'. ಇನ್ನೊಂದು: `ಪ್ರಶ್ನೆಗಳು ಶುದ್ಧ ಸಾಹಿತ್ಯದ ಬಗ್ಗೆ ಮಾತ್ರ ಇರಬೇಕು'. ಮೂರನೇ ಕಂಡೀಶನ್ನನ್ನು ಅವರ ಪರವಾಗಿ ಸಂಘಟಕರು ಅನೌನ್ಸ್ ಮಾಡಿದರು. ಆ ಕಂಡೀಶನ್: `ಪ್ರಶ್ನೆಗಳನ್ನು ಯಾರೂ ಎದ್ದುನಿಂತು ಕೇಳಬಾರದು, ಕೇಳಬಯಸುವ ಪ್ರಶ್ನೆಯನ್ನು ಚೀಟಿಯಲ್ಲಿ ಬರೆದು ಕೊಡಬೇಕು,' ನನಗೆ ಈ ಶರತ್ತುಗಳನ್ನು ನೋಡಿ ಕಿರಿಕಿರಿಯಾಗತೊಡಗಿತು. ಸಂಘಟಕರು ಕುಳಿತ ಜನರಿಗೆ ಬಿಳಿಹಾಳೆಯ ಖಾಲೀ ಚೀಟಿಗಳನ್ನು ಹಂಚಿದರು. ಹಂಚಲ್ಪಟ್ಟ ಚೀಟಿಗಳನ್ನು ಸಭಿಕರಿಂದ ಸಂಗ್ರಹಿಸಿ ಒಂದು ಬುಟ್ಟಿಯಲ್ಲಿ ಸಂಗ್ರಹಿಸಿ ವೇದಿಕೆಗೆ ತರಲಾಯಿತು. ವೇದಿಕೆಯ ಮೇಲೆ ಭೈರಪ್ಪನವರು ಮಧ್ಯೆ ಕುಳಿತಿದ್ದರು. ಒಂದು ಕಡೆ ನಾನು ಇನ್ನೊಂದು ಕಡೆ ಸಂಘಟಕರ ಪರವಾಗಿ ಹಿರಿಯರೊಬ್ಬರು ಕುಳಿತಿದ್ದರು. ಆ ಹಿರಿಯರು ಬುಟ್ಟಿಯೊಳಗಿನ ಚೀಟಿಗಳನ್ನು ಒಂದೊಂದಾಗಿ ಭೈರಪ್ಪನವರಿಗೆ ಕೊಡುತ್ತಾ ಹೋದರು. ಭೈರಪ್ಪನವರು ಅವನ್ನು ಬಿಚ್ಚಿನೋಡಿ ಕೆಲವು ಚೀಟಿಯೊಳಗಿನ ಕೆಲವು ಪ್ರಶ್ನೆಗಳನ್ನು `ಆಯ್ದುಕೊಂಡು' ಉತ್ತರಿಸುತ್ತಾ ಹೋದರು. ಕೆಲವು ಚೀಟಿಗಳನ್ನು ಬಿಚ್ಚಿನೋಡಿ ಏನೊಂದೂ ಮಾತನಾಡದೆ ಅವನ್ನು ಪಕ್ಕಕ್ಕೆ ತಳ್ಳುತ್ತಾ ಹೋದರು. ಹೀಗೆ ತಳ್ಳಲ್ಪಟ್ಟ ಚೀಟಿಗಳನ್ನು ಟೇಬಲ್ ಕೆಳಗೆ ಇಟ್ಟಿದ್ದ ಇನ್ನೊಂದು ಬುಟ್ಟಿಗೆ (ಕಸದಬುಟ್ಟಿ)ಗೆ ಹಾಕುವ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ಕಸದ ಬುಟ್ಟಿಗೆ ಹಾಕಲಾದ ಚೀಟಿಗಳಲ್ಲಿ ಯಾವ ಪ್ರಶ್ನೆಗಳಿದ್ದವು ಎಂಬುದು ಯಾರಿಗೂ ತಿಳಿಯಲೇ ಇಲ್ಲ. 

ಸಂವಾದ ಎಂದರೆ ಪ್ರಶ್ನೆಕೇಳುವುದು ಮತ್ತು ಉತ್ತರ ಹೇಳುವುದು ಇರುತ್ತದೆ ಎಂದು ತಿಳಿದುಕೊಂಡಿದ್ದ ನನಗೆ ಈ ವಿಚಿತ್ರವಾದ `ಚೀಟಿಸಂವಾದ' ನೋಡಿ ತುಂಬಾ ನಿರಾಸೆಯಾಯಿತು. ದೊಡ್ಡಸಾಹಿತಿ ಎಂದು ರಜಾದಿನವನ್ನೂ ಗಮನಿಸದೇ ಬಂದಿದ್ದ ಪತ್ರಿಕೆಯ ವರದಿಗಾರಿಗೆ ಚಿಕ್ಕ ಪ್ರಶ್ನೆಗಳನ್ನೂ ಕೇಳಲು ಬಿಡಲಿಲ್ಲ. ಅವರಲ್ಲಿ ಬಹಳಷ್ಟು ಜನ ನಿರಾಶರಾಗಿ `ಇದು ಯಾವ ಸೀಮೆ ಸಂವಾದರೀ' ಎಂದು ತಲೆಕೊಡವಿಕೊಂಡು ಎದ್ದು ಹೋದರು. ಇಡೀ ಕಾರ್ಯಕ್ರಮ ಸಂವಾದ ಎಂದು ಕರೆಸಿಕೊಂಡಿದ್ದರೂ ಮಾತನಾಡಿದ್ದು ಭೈರಪ್ಪ ಮಾತ್ರ. ಎಲ್ಲರೂ ಅವರು ಹೇಳಿದ್ದನ್ನು ಕೇಳಿದರು ಅಷ್ಟೆ. ಕಾರ್ಯಕ್ರಮ ಮುಗಿಸಿಕೊಂಡು ಬರುವಾಗ ನಾನು ಸಂಘಟಕರಿಗೆ ಹೇಳಿದೆ, ಈ ರೀತಿ ಸಂವಾದ ಮಾಡುವ ಬದಲು ಈ ಎಲ್ಲ ಚೀಟಿಗಳನ್ನು ಭೈರಪ್ಪನವರ ಮನೆಗೇ ಕಳಿಸಿ ಅಲ್ಲಿಂದ ಉತ್ತರ ತರಿಸಿಕೊಳ್ಳಬಹುದಿತ್ತು  ಅವರನ್ನು ಅಷ್ಟು ದೂರದಿಂದ ಕರೆಸಿಕೊಳ್ಳುವ ಅಗತ್ಯವೇ ಇರಲಿಲ್ಲ. ಅವರ ಎಲ್ಲ ಸಂವಾದಗಳು ಹೀಗೆಯೇ ನಡೆಯದಿರಬಹುದಾದರೂ ಬಹುತೇಕ ಅವುಗಳ ಒಳಸ್ವರೂಪಗಳಲ್ಲಿ ಬಹಳ ವ್ಯತ್ಯಾಸವಿರುವುದಿಲ್ಲ.

ಭೈರಪ್ಪನವರು ನಮ್ಮಲ್ಲಿ ತಮ್ಮ ಕೃತಿಗಳಿಂದ ಹೇಗೆ ಪ್ರಸಿದ್ಧರೋ ಹಾಗೇ ಈ ಬಗೆಯ ಚಚರ್ಾಸ್ಪದ ಹೇಳಿಕೆಗಳಿಂದಲೂ ಪ್ರಸಿದ್ಧರು. ಅವರ ಇಂತಹ ಹೇಳಿಕೆಗಳ ಒಂದು ದೊಡ್ಡ ಸರಮಾಲೆಯೇ ಇದೆ. ಮೂರು-ನಾಲ್ಕು ಸಂದರ್ಭಗಳನ್ನು ಇಲ್ಲಿ ನೆನಪುಮಾಡಿಕೊಳ್ಳಬಹುದು. ಅವರಿಗೆ ನಾಡಿನ ಅತಿದೊಡ್ಡ ಸಾಹಿತ್ಯ ಪ್ರಶಸ್ತಿಯಾದ ಪಂಪಪ್ರಶಸ್ತಿ ಬಂದಾಗ ಅದನ್ನು ಸ್ವೀಕರಿಸುತ್ತಾ ಬನವಾಸಿಯಲ್ಲಿ, 'ಸಾಹಿತ್ಯದಿಂದ ಸಮಾಜ ಸುಧಾರಣೆ ಸಾಧ್ಯವಿಲ್ಲ' ಎಂದು ಹೇಳಿದ್ದರು. ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಆಗ ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಸಾಹಿತ್ಯ ಕಾರ್ಯಕ್ರಮದ ವೇದಿಕೆಯಿಂದ ಪ್ರತಿಕ್ರಿಯೆ ನೀಡಿದ್ದ ಚಂಪಾ, `ಇದು ಭೈರಪ್ಪನವರ ಹೇಳಿಕೆ ಅಷ್ಟೇ ಆಗಿರಲಾರದು. ಅದು ಅವರ ಆಶಯ ಕೂಡ ಆಗಿರಬೇಕು. ಸಾಹಿತ್ಯದಿಂದ ಸಮಾಜ ಸುಧಾರಣೆ ಆಗಬಾರದು ಎಂಬುದು ಅವರ ಆಶಯವಾಗಿರದಿದ್ದರೆ ಅವರು ಇಂತಹ ಹೇಳಿಕೆಯನ್ನು ನೀಡುತ್ತಿರಲಿಲ್ಲ.' ಎಂದು ಪ್ರತಿಕ್ರಿಯಿಸಿದ್ದರು. ಇನ್ನೊಂದು ಸಂದರ್ಭ:  ಭೈರಪ್ಪನವರು ಶಿವಮೊಗ್ಗದ ಕನರ್ಾಟಕ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ `ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಮಾಕ್ಸರ್ಿಸ್ಟ್, ಬಂಡಾಯ, ಸ್ತ್ರೀವಾದಿ ದಲಿತ ಹೀಗೆ ನಾನಾ ಸಾಹಿತ್ಯಗಳು ಯಾವುದೇ ರಸವನ್ನು ಹೊಂದದೆ ಸಾಹಿತ್ಯ ಕ್ಷೇತ್ರದ ಮೇಲೆ ದಾಳಿಮಾಡಿದವು' ಎಂದಿದ್ದರು. ಹೀಗೆ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ರಚಿತವಾದ ಸಾಹಿತ್ಯ ಜನಮಾನಸದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದಿದ್ದ ಅವರು ಇದು ಕನ್ನಡ ಸಾಹಿತ್ಯಕ್ಕೆ ಜನಜೀವನಕ್ಕೆ ಆದ ಒಂದು ನಷ್ಟ ಎಂಬರ್ಥದ ಮಾತುಗಳನ್ನು ಆಡಿದ್ದರು. 

ಹಾಗೆಯೇ ಕನಕಪುರದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಚಳವಳಿಗಳ ಬಗ್ಗೆ ತಮ್ಮ ಅಖಂಡವಾದ ತಿರಸ್ಕಾರವನ್ನೂ ಶುದ್ಧಸಾಹಿತ್ಯದ ಬಗೆಗಿನ ತಮ್ಮ ಅಪರಿಮಿತ ಪ್ರೇಮವನ್ನು ವ್ಯಕ್ತಪಡಿಸಿ ಪ್ರಗತಿಪರ ಲೇಖಕರನೇಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣಕ್ಕೆ ಅಪಸ್ವರ ಅದೇ ಮೊದಲೇನೂ ಆಗಿರಲಿಲ್ಲ. ಅಪಸ್ವರ, ಭಿನ್ನಾಭಿಪ್ರಾಯ ಇವೆಲ್ಲ ಮೊದಲೂ ಇದ್ದವು. ನಂತರವೂ ಬಂದವು. ಆದರೆ ನನಗೆ ತಿಳಿದ ಮಟ್ಟಿಗೆ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿಯೇ ಅಧ್ಯಕ್ಷರ ಭಾಷಣದ ಪ್ರತಿಯೊಂದಕ್ಕೆ ಬೆಂಕಿಹಚ್ಚಿ ಸುಡುವ ಘಟನೆ ನಡೆದದ್ದು ಕನಕಪುರ ಸಮ್ಮೇಳನವೊಂದರಲ್ಲಿಯೇ. ಇದು ಹೀಗಾದರೆ ಶ್ರವಣಬೆಳಗೊಳದ ಸಾಹಿತ್ಯ ಸಮ್ಮೇಳನದಲ್ಲಿ ಇನ್ನೊಂದು ಘಟನೆ ನಡೆಯಿತು.  ಹೊಟ್ಟೆಪಾಡಿಗೆ ಮನೆಬಿಟ್ಟು ಹೊರಗೆ ದುಡಿಯಲು ಹೋಗುವ ಮಹಿಳೆಯರ ಶೀಲ-ಚಾರಿತ್ರ್ಯಗಳನ್ನು ಜನ ಸಂಶಯದಿಂದ ಕಾಣುವಂತೆ ಮಾಡಬಲ್ಲ ಕೃತಿಯೊಂದನ್ನು ಅದೇ ಆಗ ಹೊರತಂದು ಮಹಿಳೆಯರ ಘನತೆ ಗೌರವಗಳಿಗೆ ಧಕ್ಕೆ ತರುವಂಥ ಕೆಲಸ ಮಾಡಿದ `ಆರೋಪ'ಕ್ಕೆ ಗುರಿಯಾಗಿದ್ದ ಅವರು ಆ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಹೋದನಂತರ ನಡೆದ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿದ ನಾಡಿನ ಮುಖ್ಯ ಮಹಿಳಾ ಸಾಹಿತಿಗಳೆಲ್ಲರೂ ಅವರ ಸ್ತ್ರೀದ್ವೇಷವನ್ನು ಹಿಗ್ಗಾಮುಗ್ಗಾ ಥಳಿಸಿ `ಮಹಾಮಂಗಳಾರತಿ' ಎತ್ತಿದ್ದು ದೊಡ್ಡ ಸುದ್ಧಿಯಾಯಿತು.  

ಹೆಚ್ಚೂ ಕಡಿಮೆ ಅವರು ಇದುವರೆಗೆ ಆಡುತ್ತಾ ಬಂದ ಮಾತುಗಳನ್ನೇ ದಾವಣಗೆರೆಯಲ್ಲೂ ಮತ್ತೆ ಆಡಿದ್ದಾರೆ. ಅನಂತಮೂತರ್ಿ ಅವರ ಬಗ್ಗೆ (ಬಹುಶಃ ತೇಜಸ್ವಿ ಮಾಡಿದ್ದಿರಬೇಕು) ಒಂದು ಟೀಕೆ ಇತ್ತು, ಅನಂತಮೂತರ್ಿ ಬರೆದದ್ದು ಒಂದೇ ಒಂದು ಕತೆ ಅದು `ಎಂದೆಂದೂ ಮುಗಿಯದ ಕತೆ' ಎಂದು. ಹಾಗೇ ಭೈರಪ್ಪನವರ ಬಗ್ಗೆಯೂ ಪ್ರೀತಿಯಿಂದಲೇ ಮಾಡಬಹುದಾದ ಒಂದು ಟೀಕೆ ಎಂದರೆ `ಭೈರಪ್ಪ ಯಾವಾಗಲೂ ಹೇಳುವುದು ಬರೆಯುವುದು ಒಂದೇ ಒಂದು ತತ್ವ, ಅದು, `ಸಮಾಜ ಬದಲಾವಣೆ ಸಾಹಿತ್ಯದ ಅಂದರೆ ಸಾಹಿತಿಯ ಜವಾಬ್ದಾರಿ ಅಲ್ಲ, ಅದು ಆಗಬೇಕಾದ ಕೆಲಸವೂ ಅಲ್ಲ.' ಇನ್ನೊಂದು ಅಂಶವೇನೆಂದರೆ ಭೈರಪ್ಪನವರಿಗೆ ನಮ್ಮ ವಿಶ್ವವಿದ್ಯಾಲಯಗಳ ಬಗ್ಗೆ ಅಲ್ಲಿನ `ಬುದ್ಧಿಜೀವಿ' ಪ್ರಾಧ್ಯಾಪಕರ ಬಗ್ಗೆ ಅಪಾರವಾದ ಕೋಪ. ಈ ಪ್ರಾಧ್ಯಾಪಕರು ಸಿದ್ಧಾಂತಗಳನ್ನು ವಿದ್ಯಾಥರ್ಿಗಳ ತಲೆಯಲ್ಲಿ ತುರುಕುತ್ತಾರೆ ಎಂಬುದು ಅವರ ಕೋಪಕ್ಕೆ ಇರುವ ಮುಖ್ಯ ಕಾರಣ. ಅವರ ಯಾವುದೇ ಈ ಬಗೆಯ ಅಪರೂಪದ ಸಂವಾದದ ವರದಿಯಲ್ಲಿ ಅವರ ಈ ಬುದ್ದಿಜೀವಿಗಳ ಬಗೆಗಿನ ಕೋಪ ವ್ಯಕ್ತವಾಗದಿದ್ದರೆ ಅದು ಅವರ ಕಾರ್ಯಕ್ರಮವೇ ಅಲ್ಲವೇನೋ ಅನ್ನಿಸುವಷ್ಟು ಅದು ಸಾಮಾನ್ಯವಾಗಿಬಿಟ್ಟಿದೆ. ಭೈರಪ್ಪನವರು ಹೇಳುವಂತೆ ಇಪ್ಪತ್ತನೆಯ ಶತಮಾನದ ಉತ್ತರಾರ್ಧದ ಈ ತತ್ವಸಿದ್ಧಾಂತಗಳಿಗೆ ಕನ್ನಡ ಸಾಹಿತ್ಯ ತೆರೆದುಕೊಳ್ಳದೇ ಇದ್ದಿದ್ದರೆ ಇಂದಿನ ಕನ್ನಡ ಸಾಹಿತ್ಯದ ಸ್ಥಿತಿ ಏನಾಗಿರುತ್ತಿತ್ತು ಎಂಬುದನ್ನು ಒಂದು ಕ್ಷಣ ಯೋಚಿಸೋಣ. ಈಗಲೂ ನಾವೆಲ್ಲರೂ ಅಲ್ಲಿಂದ ಹಿಂದೆ ಇದ್ದ `ರಸಭರಿತ' ಸಾಹಿತ್ಯವನ್ನೇ ಬರೆಯುತ್ತಾ ಓದುತ್ತಾ ಇರಬೇಕಾಗುತ್ತಿತ್ತು. ಇಲ್ಲವೇ ಅಲ್ಲಿಂದ ಹಿಂದಿನ ಕೃತಿಗಳ ಪರಿಷ್ಕೃತ ಆವೃತ್ತಿಗಳನ್ನು ತರುತ್ತಾಹೋಗಬೇಕಾಗುತ್ತಿತ್ತು. ಆದರೆ ಕನ್ನಡ ಸಾಹಿತ್ಯ ಈ ತತ್ವಸಿದ್ಧಾಂತಗಳಿಗೆ ತೆರೆದುಕೊಂಡಿದ್ದರಿಂದಲೇ ಇಂದು ಇಡೀ ದೇಶ ಗಮನಿಸುವಷ್ಟು ಮಹತ್ವದ ಸಾಹಿತ್ಯವನ್ನು (ಕನ್ನಡಕ್ಕೆ ಬಂದಿರುವ ಜ್ಞಾನಪೀಠ ಮತ್ತಿತರ ಪ್ರಶಸ್ತಿಗಳ ಸಂಖ್ಯೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ಮಾತನ್ನು ಹೇಳುತ್ತಿಲ್ಲ) ರಚಿಸಲು ಸಾಧ್ಯವಾಯಿತು. ಈ ತತ್ವಸಿದ್ಧಾಂತಗಳಿಗೆ ಅನುಗುಣವಾಗಿ ರಚಿತವಾದ ಸಾಹಿತ್ಯವೇ ಕನರ್ಾಟಕ ಮಾತ್ರವಲ್ಲ ಭಾರತದ ಬಹುಪಾಲು ಜನರಿಗೆ ಉಸಿರಾಡುವ ಶಕ್ತಿಯನ್ನೂ ಬಿಡುಗಡೆಯ ಬದುಕನ್ನೂ ನೀಡಿತು. ಹಾಗಾಗಿ ಭೈರಪ್ಪನವರು ಹೇಳುವಂತೆ ಈ ತತ್ವಸಿದ್ದಾಂತಗಳು ಕನ್ನಡ ಸಾಹಿತ್ಯಕ್ಕೆ ಬಂದದ್ದು ಒಂದು `ದಾಳಿ'ಯಾಗಿ ಅಲ್ಲ; ಬಿಡುಗಡೆಯ ಒಂದು `ದಾರಿ'ಯಾಗಿ.

ಭೈರಪ್ಪನವರಂತಹ ಲೇಖಕರಿಗೆ ಓದುಗನಲ್ಲಿ ರಸಾನಂದವನ್ನುಂಟುಮಾಡುವುದು ಆ ಮೂಲಕ `ಜನಮಾನಸದಲ್ಲಿ ಯಶಸ್ವಿಯಾಗುವ' ಸಾಹಿತ್ಯ ರಚಿಸುವುದು ಆದ್ಯತೆಯಾಗಿದ್ದರೆ ಈ ಬಗೆಯ ಸಾಹಿತ್ಯ ರಚಿಸಿದ ಲೇಖಕರಿಗೆ `ಜನಮಾನಸವನ್ನು ಬಂಧನಗಳಿಂದ ಬಿಡುಗಡೆಗೊಳಿಸುವುದು' ಅವರ `ಸಂಕಟಗಳಿಗೆ ತಕ್ಕಮಟ್ಟಿನ ಸಾಂತ್ವಾನವನ್ನು ಹೇಳುವುದು' ಆದ್ಯತೆಯಾಗಿತ್ತು. ಕೊನೆಯಲ್ಲಿ ಬಸವಣ್ಣನವರ ಮೇಲೆ ಉಲ್ಲೇಖಿಸಲ್ಪಟ್ಟ ವಚನಸಾಲುಗಳಿಗೆ ಬರುವುದಾದರೆ ಭ್ರಮರವಾಗಿ ಬಂಡುಂಬುವುದು ಭೈರಪ್ಪನಂಥವರ ಚಿಂತೆಯಾದರೆ ಸರ್ವರಿಗೂ ಚೈತನ್ಯವನ್ನು ನೀಡುವ `ಭಾನು'ವಿನ ಉದಯಕ್ಕಾಗಿ `ಅಂಬುಜ'ವಾಗಿ ಕಾತುರದಿಂದ ಕಾಯುವ ಮತ್ತು ಈ ಉದಯಉತ್ಸಾಹ ಜನರಲ್ಲಿ ಕುಗ್ಗದಂತೆ ಕಾಗೆಗಳಾಗಿ ಕೂಗಿಕೂಗಿ ಎಚ್ಚರಿಸುವ ಚಿಂತೆಗಳು ಬಂಡಾಯವೂ ಸೇರಿದಂತೆ ಬಹುತೇಕ ಪ್ರಗತಿಪರ ಲೇಖಕರದ್ದು. ಅವರವರ ಆಲೋಚನಾ ಕ್ರಮ ಅವರವರ ಬರಹಗಳ ಆದ್ಯತೆಯನ್ನು ನಿರ್ಧರಿಸುತ್ತವೆ. ಇಷ್ಟಾಗಿಯೂ ಭೈರಪ್ಪನವರು ಹೇಳುವ `ರಸಭರಿತ' ಅಥವಾ `ರಸಪೂರಿತ' ಸಾಹಿತ್ಯ ಎಂಬುದು ರಸಪೂರಿತ ಮಾವಿನ ಹಣ್ಣೋ ಅಥವಾ ಕಬ್ಬಿನ ಜಲ್ಲೆಯೋ ಇದ್ದಂತೆ. ಅವನ್ನು ಒಂದು ಸಾರಿ ತಿಂದು (ಓದಿ) ಆನಂದಿಸಿದರೆ ಅಲ್ಲಿ ಉಳಿಯುವುದು ಸಿಪ್ಪೆ ಮತ್ತು ಹೋಟೆ ಮಾತ್ರ. ಮತ್ತೆ ಆ ಕೃತಿಗಳ ಕಡೆ ನೋಡುವಂಥದ್ದೇನೂ ಇರುವುದಿಲ್ಲ. 

ಆದರೆ ಸಿದ್ಧಾಂತ ಆಧಾರಿತ ಸಾಹಿತ್ಯ ಕೃತಿಗಳು `ರಸಾನಂದ'ಕ್ಕಿಂತ `ಜಾಗೃತಿ'ಯನ್ನು ಗುರಿಯಾಗಿಟ್ಟುಕೊಂಡಿರುವುದರಿಂದ ಅವುಗಳು ಎಲ್ಲಿಯವರೆಗೂ ನಮ್ಮ ಸಮಾಜ ಸಮಸ್ಯೆಗಳಿಂದ ಸಂಪೂರ್ಣವಾಗಿ ಬಿಡುಗಡೆಹೊಂದುವುದಿಲ್ಲವೋ ಅಲ್ಲಿಯವರೆಗೂ ತಮ್ಮ ಮಹತ್ವವನ್ನು ಕಳೆದುಕೊಳ್ಳುವುದಿಲ್ಲ. ಇದೇ ಸಿದ್ಧಾಂತಕ್ಕನುಗುಣವಾಗಿ ರಚಿತವಾದ ಸಾಹಿತ್ಯದ ಶಕ್ತಿ! ಇಲ್ಲಿ ಎದುರಾಗುವ ಪ್ರಮುಖ ಪ್ರಶ್ನೆ ಎಂದರೆ ಎಲ್ಲ ಸಿದ್ಧಾಂತಗಳಿಂದ ಬಿಡಿಸಿಕೊಂಡ, ಭೈರಪ್ಪನವರು ಪದೇಪದೇ ಹೇಳುವ `ಶುದ್ಧಸಾಹಿತ್ಯ' ಎಂಬುದು ವಾಸ್ತವದಲ್ಲಿ ಇರಲು ಸಾಧ್ಯವೇ ಎಂಬುದು. ಏಕೆಂದರೆ ನಮ್ಮೆಲ್ಲರ ನಿಲುವುಗಳೂ ಒಂದಲ್ಲ ಒಂದು ರೀತಿಯಲ್ಲಿ ರಾಜಕೀಯ ನಿಲುವುಗಳೇ ಆಗಿರುತ್ತವೆಯಂತೆ. ನಾನು ಯಾವ ರಾಜಕೀಯ ನಿಲುವಿಗೂ ಸೇರಿದವನಲ್ಲ ಎಂಬ ನಿಲುವು ಕೂಡ ನಮ್ಮ ಒಂದು ರಾಜಕೀಯ ನಿಲುವೇ ಆಗಿರುತ್ತದೆ ಹೇಗೋ ಹಾಗೆ ನಾನು ಯಾವ ಸಿದ್ಧಾಂತಕ್ಕೂ ಬದ್ಧನಲ್ಲ ಎಂಬ ಧೋರಣೆಯೂ ನಮ್ಮ ಒಂದು ಸೈದ್ಧಾಂತಿಕ ಧೋರಣೆಯೇ ಆಗಿರುತ್ತದೆ! ಹೀಗಾಗಿ `ಶುದ್ಧಸಾಹಿತ್ಯ' ಎಂಬುದು ವಾಸ್ತವದಲ್ಲಿ ಇರಲು ಸಾಧ್ಯವೇ ಇಲ್ಲ. ಒಂದುವೇಳೆ ಅದು `ಇರಲು ಸಾಧ್ಯ' ಎಂದು ವಾದಕ್ಕಾಗಿ ಒಪ್ಪಿಕೊಂಡರೂ ಈ `ಶುದ್ಧಸಾಹಿತ್ಯ' ಎಂಬುದು `ಶುದ್ಧಚಿನ್ನ'ದಂತೆ ಬಹಳಷ್ಟು `ಬೆಲೆ'ಯುಳ್ಳದ್ದಾಗಿದ್ದರೂ `ಬಳಕೆ'ಗೆ ಬಾರದ್ದಾಗಿಯೇ ಇರಲು ಮಾತ್ರ ಸಾಧ್ಯ!! ಕೊನೆಯಮಾತು: ಕನ್ನಡ ಜನಜೀವನಕ್ಕೆ ಬಹುದೊಡ್ಡ ನಷ್ಟ ಆದದ್ದು ಭೈರಪ್ಪನವರು ಹೇಳುವಂತೆ ಅನ್ಯದೇಶಗಳಿಂದ ಕನ್ನಡಸಾಹಿತ್ಯವನ್ನು ಪ್ರವೇಶಮಾಡಿದ ಸಿದ್ಧಾಂತಗಳಿಂದ ಅಲ್ಲ; ಬದಲಾಗಿ ನಮ್ಮ ಸಾಹಿತ್ಯದ ಘನತೆ-ಗೌರವಗಳನ್ನು ಎತ್ತರಿಸಬಲ್ಲ ಎಲ್ಲಬಗೆಯ ಸಾಮಥ್ರ್ಯವಿದ್ದ ಭೈರಪ್ಪನವರಂತಹ ಒಬ್ಬ ಶಕ್ತಿಶಾಲಿ ಬರಹಗಾರರು ಮತಧರ್ಮ, ಕೋಮುವಾದ ಇಂತಹುಗಳ ಕಡೆ ವಾಲಿಕೊಂಡದ್ದರಿಂದ.
0-0-0-0-0
ಡಾ. ರಾಜೇಂದ್ರ ಬುರಡಿಕಟ್ಟಿ
buradikatti@gmail.com
29-06-2017

Monday, June 19, 2017

ಮುಚ್ಚುತ್ತಿರುವ ಶಾಲೆಗಳು ಕಾರಣ ಯಾರು? ಪರಿಹಾರ ಏನು?

ಬಾಲಕೃಷ್ಣ ಮತ್ತು ಪೂತನಿಯ ಮೊಲೆಹಾಲು
`ಶಾಲೆಯಲ್ಲಿರುವ ಮಕ್ಕಳು ಕಡಿಮೆಯಾದರೆ ಅದಕ್ಕೆ ಅಲ್ಲಿನ ಶಿಕ್ಷಕರನ್ನೇ ಹೊಣೆಮಾಡಲಾಗುತ್ತದೆ’ ಎಂದು ಶಿಕ್ಷಣ ಸಚಿವ ತನ್ವೀರ್ ಸೇಟ್ ಅವರು ತೇರದಾಳದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆಂದು ವರದಿಯಾಗಿದೆ. ಕರ್ನಾಟಕದ ಸಾರ್ವಜನಿಕ ಶಿಕ್ಷಣವು ಇತರೆ ರಾಜ್ಯಗಳ ಹಾಗೆಯೇ ಅತ್ಯಂತ ಗಂಭೀರವಾದ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಂಕೀರ್ಣ ಸಂದರ್ಭವೊಂದರಲ್ಲಿ ಅದರ ಗುಣಮಟ್ಟವನ್ನು ಹೆಚ್ಚಿಸಬೇಕೆಂಬ ಸದುದ್ದೇಶದಿಂದಲೇ ಹೇಳಿರಬಹುದೆಂದು ಭಾವಿಸಬಹುದಾದ ಅವರ ಈ ಮಾತು ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಬೇಕೆಂಬ ಅವರ ಕಾಳಜಿಯನ್ನು ತೋರಿಸುತ್ತದೆಯಾದರೂ ಶಾಲೆಗಳ ದುಸ್ಥಿತಿಗೆ ಕಾರಣವಾದ ಬಹುಮುಖ್ಯ ಅಂಶಗಳನ್ನು ಅವರು ಸರಿಯಾಗಿ ಗ್ರಹಿಸಿಲ್ಲವೇನೋ ಎಂದು ಭಾವಿಸುವಂತೆ ಮಾಡಿದೆ.  ನಮ್ಮ ಶಿಕ್ಷಣ ಇಂದು ಹಿಡಿಯಬಾರದ ಹಾದಿ ಹಿಡಿದು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಿಕ್ಕಟ್ಟುಗಳಿಗೆ ಕಾರಣಗಳೇನು ಎಂಬುದನ್ನು ತಲಸ್ಪರ್ಶಿಯಾಗಿ ಅಧ್ಯಯನಮಾಡಿ ಸೂಕ್ತಕ್ರಮಗಳನ್ನು ತೆಗೆದುಕೊಳ್ಳದೇ ಹೋದರೆ ಮುಂದೊಂದು ದಿನ ನಮ್ಮ ಸಮಾಜ ಅದಕ್ಕೆ ಅಪಾರವಾದ ಬೆಲೆಯನ್ನು ತೆರಬೇಕಾಗುತ್ತದೆ ಎಂಬುದು ಕೂಡ ನಮಗೆಲ್ಲ ತಿಳಿದಿರುವ ಸಂಗತಿಯೇ ಆಗಿದೆ. ಆದರೆ ಈ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳು ತೃಪ್ತಿಕರವಾಗಿಲ್ಲವೆಂದು ಹೇಳದೇ ಗತ್ಯಂತರವಿಲ್ಲ.


ಒಂದು ಊರಿನ ಸರ್ಕಾರಿ ಶಾಲೆ ಮುಚ್ಚುವುದು ಅಂದರೆ ಅದು ಕೇವಲ ಪಾಠಮಾಡುವ ಒಂದು ಕೆಲಸ ಅಲ್ಲಿ ನಿಂತಂತೆ ಅಲ್ಲ. ಬದಲಾಗಿ ಒಂದು ಊರಿನ ಸಮಾಜಕಟ್ಟುವ ಕೆಲಸವೇ ನಿಂತಂತೆ. ಈ ಮಹತ್ವವನ್ನು ನಾವು ಸರಿಯಾಗಿ ಗ್ರಹಿಸಲು ಸಾಧ್ಯವಾಗದಿದ್ದುದೋ ಅಥವಾ ಅದು ಸಾಧ್ಯವಾಗಿಯೂ ನಮ್ಮ ಪ್ರಲೋಭನೆಗಳ ಕಾರಣವಾಗಿಯೋ ಅಸಹಾಯಕತೆಯಿಂದಲೋ ನಾವು ಸರ್ಕಾರಿ ಶಾಲೆಗಳ ಸಬಲೀಕರಣವನ್ನು ಆದ್ಯತೆಯ ಅಂಶವಾಗಿ ಸ್ವೀಕರಿಸಿಲ್ಲವೆಂಬುದು ಸತ್ಯ. ಸರ್ಕಾರಿ ಶಾಲೆಗಳಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಈ ಕಾರಣದಿಂದ ಅನೇಕ ಶಾಲೆಗಳು ಮುಚ್ಚಿರುವಂಥದ್ದು ಮತ್ತು ಇನ್ನೂ ಅನೇಕ ಶಾಲೆಗಳು ಮುಚ್ಚುವ ಹಂತವನ್ನು ತಲುಪುತ್ತಿರುವುದು ಸಾರ್ವಜನಿಕ ಶಿಕ್ಷಣದ ಮಹತ್ವವನ್ನು ಅರಿತ ಯಾರಿಗಾದರೂ ನೋವನ್ನುಂಟುಮಾಡುವ ಸಂಗತಿಯೇ ಆಗಿದೆ. ಆ ಶಾಲೆಗಳು ಹಿಂದಿನ ಕಾಲದಲ್ಲಿದ್ದಂತೆ ಮಕ್ಕಳಿಂದ ತುಂಬಿತುಳುಕಬೇಕು ಎಂಬ ಇಂತಹ ವ್ಯಕ್ತಿಗಳೆಲ್ಲರ ಬಹುದಿನಗಳ ಕನಸು ನನಸಗಾದ ಕನಸಾಗಿಯೇ ಇನ್ನೂ ಉಳಿದುಕೊಂಡೇ ಬರುತ್ತಿದೆ.
ಈ ಶಾಲೆಗಳು ಹೀಗೆ ದುಸ್ಥಿತಿಗೆ ತಲುಪಲು ಕಾರಣಗಳೇನು ಎಂಬುದನ್ನು ಕಂಡುಹಿಡಿಯುವ ಪ್ರಯತ್ನಗಳು ಸರ್ಕಾರದ ಕಡೆಯಿಂದ ಎಷ್ಟರಮಟ್ಟಿಗೆ ಆಗಿವೆಯೋ ಆದರೆ ವೈಯಕ್ತಿಕ ಹಂತದಲ್ಲಿ ಮತ್ತು ಸಾಂಘಿಕವಾಗಿ ಅನೇಕ ಪ್ರಾಮಾಣಿಕ ಪ್ರಯತ್ನಗಳು ಈ ನಿಟ್ಟಿನಲ್ಲಿ ನಡೆದಿವೆ. ಅನೇಕ ಚಿಕ್ಕದೊಡ್ಡ ಅಧ್ಯಯನಗಳು ನಡೆದು ವರದಿಗಳು ಬೆಳಕುಕಂಡಿವೆ. ಹೀಗೆ ಬಂದ ವರದಿಗಳಲ್ಲಿ ಯಾವೊಂದು ವರದಿಯೂ `ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಅಲ್ಲಿನ ಶಿಕ್ಷಕರ ಕಳೆಪೆ ಬೋಧನೆಯೇ ಕಾರಣ’ ಎಂದು ಹೇಳಿದಂತಿಲ್ಲ. ಇದರ ಬದಲು ಅನೇಕ ವರದಿಗಳು `ಶಾಲೆಗಳು ಸುಸಜ್ಜಿತ ಕಟ್ಟಡಗಳನ್ನು ಹೊಂದಿದ್ದರೂ, ಅನೇಕ ಸೌಲಭ್ಯಗಳು ಇದ್ದರೂ ಉತ್ತಮವಾಗಿ ಬೋಧಿಸುವ ಶಿಕ್ಷಕರನ್ನು ಹೊಂದಿದ್ದರೂ ಮಕ್ಕಳಿಲ್ಲದೆ ಸೊರಗುತ್ತಿವೆ’ ಎಂಬರ್ಥದ ಮಾತುಗಳನ್ನು ಹೇಳಿವೆ. ಸರ್ಕಾರದ ಬಳಿಯೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಶಿಕ್ಷಕರೇ ಕಾರಣವೆಂದು ನಿರೂಪಿಸುವಷ್ಟು ಆಧಾರಗಳು ಇವೆಯೆಂದು ಅನ್ನಿಸುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಯಾವ ಅಂಶ ಮತ್ತು ಆಧಾರಗಳ ಮೇಲೆ  ಮತ್ತು ಹೇಗೆ ಸಚಿವರು ಶಿಕ್ಷಕರನ್ನು ಇಂತಹದ್ದಕ್ಕೆಲ್ಲ ಹೊಣೆಗಾರರನ್ನಾಗಿ ಮಾಡುತ್ತಾರೋ ತಿಳಿಯದು!
ಸರ್ಕಾರಿ ಶಾಲೆಗಳ ಅಧೋಗತಿಗೆ ಕಾರಣಗಳೇನು ಎಂಬುದನ್ನು ಪತ್ತೆಹಚ್ಚುವ ಕೆಲಸ ಬಹುತೇಕ ಮುಗಿದಿದೆ. ಉಳಿದಿರುವುದು ಈ ಕಾರಣಗಳಿಗೆ ಪರಿಹಾರವನ್ನು ಕಂಡುಕೊಂಡುಕೊಳ್ಳುವಲ್ಲಿ ತೆಗೆದುಕೊಳ್ಳಬೇಕಾದ ಕೆಲವು `ಕಠಿಣ’ ಕ್ರಮಗಳು ಮಾತ್ರ. ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಅವೈಜ್ಞಾನಿಕವಾಗಿ ಖಾಸಗೀ ಶಾಲೆಗಳು ನಾಯಿಕೊಡೆಗಳಂತೆ ಎಲ್ಲೆಂದರಲ್ಲಿ ತಲೆಯೆತ್ತಿರುವುದು, ಶಿಕ್ಷಣ ಹಕ್ಕು ಕಾಯ್ದೆಯನ್ನು ಅದರ ಅನೇಕ ಒಳ್ಳೆಯ ಅಂಶಗಳನ್ನು ಅಲಕ್ಷಿಸಿ ಕೇವಲ ಸರ್ಕಾರಿ ಶಾಲೆಯ ಮಕ್ಕಳನ್ನು ಖಾಸಗೀ ಶಾಲೆಗಳಿಗೆ ಕಳಿಸುವುದಕ್ಕಾಗಿ ಬಳಸಿಕೊಳ್ಳುತ್ತಿರುವುದು, ಕನ್ನಡ ಮಾಧ್ಯಮ ಬೋಧನೆಗೆ ಅನುಮತಿ ಪಡೆದು ರಾಜಾರೋಷವಾಗಿ (ಕದ್ದುಮುಚ್ಚಿ ಅಲ್ಲ) ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುತ್ತಿರುವ ಖಾಸಗೀ ಶಾಲೆಗಳ ಆಡಳಿತ ಮಂಡಳಿಗಳು ಮತ್ತು ಇಂತಹ ಇಂಗ್ಲಿಷ್‍ ಮಾಧ್ಯಮದ ಬಗ್ಗೆ ಪಾಲಕರಲ್ಲಿರುವ ಅರ್ಥರಹಿತ ಮೋಹ, ಇವು ಮುಖ್ಯವಾಗಿ ಸರ್ಕಾರಿ ಶಾಲೆಗಳ ಕತ್ತು ಹಿಚುಕುತ್ತಿರುವ ಬಹುಮುಖ್ಯವಾದ ಅಂಶಗಳಾಗಿವೆ ಎಂಬುದು ಬಹುತೇಕ ಅಧ್ಯಯನ ವರದಿಗಳ ಸಾರಾಂಶ. ಇತ್ತೀಚೆಗೆ ನಡೆದ ಅಧ್ಯಯನ ವರದಿಯೊಂದರ ಪ್ರಕಾರ ಕಳೆದ ಹತ್ತು ವರ್ಷಗಳ ದೀರ್ಘ ಅವಧಿಯಲ್ಲಿ ಸುಮಾರು ಹತ್ತು ಸಾವಿರ ಶಾಲೆಗಳು ಮುಚ್ಚಿದ್ದರೆ ಅದಕ್ಕೆ ಸರಿಸಮನಾದ ಹತ್ತು ಸಾವಿರ ಶಾಲೆಗಳು ಕೇವಲ ಎರಡು-ಮೂರು ವರ್ಷಗಳ ಅವಧಿಯಲ್ಲಿ ಖಾಸಗೀ ಕ್ಷೇತ್ರದಲ್ಲಿ ತೆರೆದಿವೆಯಂತೆ!!
ಇನ್ನೊಂದು ಅಂಶವೆಂದರೆ ಇತ್ತೀಚೆಗೆ ಆರ್.ಟಿ.ಇ.ಯನ್ನು `ಸರ್ಕಾರಿ ಶಾಲೆಗಳ ಮಕ್ಕಳನ್ನು ಖಾಸಗೀ ಶಾಲೆಗಳಿಗೆ ಕಳಿಸುವ ಮತ್ತು ಆ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಯೋಜನೆ’ ಎಂದು ಹಿರಿಯ ರಾಜಕಾರಣಿಯೇ ಒಬ್ಬರು ಮಾಡಿದ ಟೀಕೆ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದನ್ನು ಬಹುತೇಕ ಎಲ್ಲರೂ ಗಮನಿಸಿದ್ದಾರೆ. ಇಂಥದ್ದಕ್ಕೆಲ್ಲ ಯಾರು ಕಾರಣ? ಈ ಅಂಶಗಳೆಲ್ಲ ಶಿಕ್ಷಕರ ಕಾರ್ಯವ್ಯಾಪ್ತಿ ಮತ್ತು ನಿಯಂತ್ರಣದ ಹೊರಗಿರುವಾಗ ಅವರೇನು ಮಾಡಲು ಸಾಧ್ಯವಿದೆ? ಈ ಬಗ್ಗೆ ನಿಯಮ ರೂಪಿಸುವವರು ಮತ್ತು ಅವನ್ನು ಅನುಷ್ಠಾನಕ್ಕೆ  ತರಬೇಕಾದ ಹೊಣೆಗಾರಿಕೆಯನ್ನು ಹೊತ್ತಿರುವ ಉನ್ನತ ಮಟ್ಟದ ಅಧಿಕಾರಿಗಳು ಈ ಬಗ್ಗೆ ಮಾಡಬೇಕಾದದ್ದು ಬಹಳಷ್ಟಿದೆ ಅನ್ನಿಸುವುದಿಲ್ಲವೇ? ಇದಕ್ಕೆ ಯಾರೆಲ್ಲ ಕಾರಣ ಎಂದು ಆಲೋಚಿಸುವಾಗ ನನಗೊಂದು ಘಟನೆ ನೆನಪಿಗೆ ಬರುತ್ತಿದೆ.
ದೂರದಿಂದ ಸಂಬಂಧಿಯೂ ಆಗಬೇಕಿದ್ದ ನನ್ನ ಸ್ನೇಹಿತನೊಬ್ಬ ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ಜಿಲ್ಲಾಮಟ್ಟದ ಅಧಿಕಾರಿಯಾಗಿದ್ದ. ಅವನು ಅಧಿಕಾರಿಯಾಗಿರುವ ವೇಳೆಯಲ್ಲಿಯೇ ಖಾಸಗೀ ಶಾಲೆಯೊಂದು ಕನ್ನಡ ಮಾಧ್ಯಮ ಬೋಧನೆಗೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುತ್ತಿರುವುದು ಯಾಕೋ ಏನೋ ಸುದ್ಧಿಯಾಗಿ ವಿವಾದ ಉಂಟಾಯಿತು. ಆಗ ಅವನೂ ಸೇರಿದಂತೆ ಅನೇಕ ಅಧಿಕಾರಿಗಳು `ಸೂಕ್ತಕ್ರಮ’ ತೆಗೆದುಕೊಳ್ಳಲು ಆ ಶಾಲೆಗೆ ಭೇಟಿ ನೀಡುವುದು, `ವಿಚಾರಣೆ ಮಾಡುವುದು’ ಇತ್ಯಾದಿಗಳೆಲ್ಲ ನಡೆಯುತ್ತಿರುವುದು ಪತ್ರಿಕೆಗಳಲ್ಲಿ ಸುದ್ದಿಯಾಗಿ ಬರುತ್ತಿತ್ತು. ಇದು ನನಗೆ ಆಶ್ಚರ್ಯ ಎನಿಸಿ ಅವನಿಗೆ ಫೋನ್ ಮಾಡಿ, “ಪತ್ರಿಕೆಯಲ್ಲಿ ಬರುವವರೆಗೂ ನಿಮಗ್ಯಾರಿಗೂ ಅವರು ಕನ್ನಡ ಮಾಧ್ಯಮ ಬೋಧನೆಗೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಪಾಠಮಾಡುವ ವಿಚಾರ ಗೊತ್ತಿರಲಿಲ್ಲವೇ?” ಎಂದು ಕೇಳಿದೆ. ಅವನು ಏಕೋ ಗಂಟಲು ಕಟ್ಟಿದಂತೆ ಹಿಡಿದು ಹಿಡಿದು ಹಾರಿಕೆಯ ಎರಡು ಮಾತುಗಳನ್ನು ಆಡಿ, “ಒಂದು ಅರ್ಜೆಂಟ್ ಮೀಟಿಂಗ್‍ಗೆ ಹೊರಟಿದ್ದೇನೆ, ಆಮೇಲೆ ಫೋನ್ ಮಾಡುತ್ತೇನೆ” ಎಂದು ಮಾತು ಮುಗಿಸಿದ.
ನಾನು ಅವನನ್ನು ಹಾಗೆ ಕೇಳಲು ಕಾರಣವೇನೆಂದರೆ ವಿವಾದಕ್ಕೆ ಗುರಿಯಾದ ಖಾಸಗೀ ಶಾಲೆಯು ಯಾರೋ ನಕ್ಸಲೀಯರೋ ಇನ್ಯಾರೋ ನಡೆಸುತ್ತಿದ್ದ ಯಾರಿಗೂ ಗೊತ್ತಾಗದ ಯಾವುದೋ ಕಾಡಿನ ಮಧ್ಯದ ಅಜ್ಞಾನ ಸ್ಥಳದಲ್ಲಿ ಇರುವಂಥದ್ದಾಗಿರಲಿಲ್ಲ. ಬದಲಾಗಿ ಅವನು ಮುಖ್ಯಸ್ಥನಾಗಿರುವ ಜಿಲ್ಲಾ ಶಿಕ್ಷಣ ಕಛೇರಿಗೆ ಹೋಗುವ ಹೆದ್ದಾರಿಯಲ್ಲಿ ಅವನ ಕಛೇರಿಯ ಹತ್ತಿರವೇ ಇತ್ತು. ಏನಿಲ್ಲವೆಂದರೂ ಆ ಕಛೇರಿಯ ವಿವಿಧ ಹಂತಹ ಹತ್ತಿಪ್ಪತ್ತು ಅಧಿಕಾರಿಗಳಾದರೂ ದಿನಕ್ಕೆ ಎರಡು ಮೂರು ಬಾರಿಯಾದರೂ ಆ ಶಾಲೆಯ ಮುಂದೆಯೇ ಹೋಗುವುದೂ ಬರುವುದೂ ಮಾಡಬೇಕಾಗಿತ್ತು. ಹೀಗಿದ್ದೂ ಆ ಶಾಲೆಯಲ್ಲಿ ಅಕ್ರಮವಾಗಿ ಇಂಗ್ಲಿಷ್ ಬೋಧಿಸುತ್ತಿದ್ದುದು ಇವರಾರಿಗೂ ತಿಳಿಯದೇ ಉಳಿದುಕೊಂಡದ್ದು ಹೇಗೆ ಎಂಬುದು ನನ್ನ ಆಶ್ಚರ್ಯಕ್ಕೆ ಕಾರಣವಾಗಿತ್ತು! ಆಮೇಲೆ ಫೋನ್ ಮಾಡುತ್ತೇನೆ ಎಂದ ಆ ನನ್ನ ಮಿತ್ರ ನನಗೆ ಮರಳಿ ಫೋನ್ ಮಾಡಲಿಲ್ಲ. ಕೆಲವು ದಿನಗಳು ಕಾಯ್ದು ನಾನೇ ಫೋನ್ ಮಾಡೋಣ ಎಂದು ಒಂದು ದಿನ ಫೋನ್ ಎತ್ತಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಇದನ್ನು ತಿಳಿದ ನನ್ನ ಹೆಂಡತಿ ಹೇಳಿದಳು; “ಅವನ ಮಗಳೂ ಅದೇ ಶಾಲೆಯಲ್ಲಿ ಎರಡನೇ  ಕ್ಲಾಸ್ನಲ್ಲಿ ಓದ್ತಿದಾಳೆ.” ಎಂದು. ನನಗೆ ಕೇಳುವುದು ಹೇಳುವುದೂ ಏನೂ ಇಲ್ಲವೆನಿಸಿ ಫೋನ್ ಮಾಡುವುದನ್ನು ಬಿಟ್ಟೆ.
ಇದು ಅಧಿಕಾರಶಾಹಿಯ ಮನೋಧೋರಣೆಯನ್ನು ತೋರಿಸಿದರೆ ಆಡಳಿತಶಾಹಿ ಇನ್ನೊಂದು ನಿಟ್ಟಿನಿಂದ ನಮ್ಮ ಸರ್ಕಾರಿ ಶಾಲೆಗಳ ಕುತ್ತಿಗೆ ಕೊಯ್ಯುತ್ತಿದೆ. ನಮ್ಮ ಬಹುತೇಕ ಜನಪ್ರತಿನಿಧಿಗಳು ಒಂದಲ್ಲ ಒಂದು ಶಿಕ್ಷಣ ಸಂಸ್ಥೆಯ ಒಡೆಯರಾಗಿರುವಂಥವರು! ಅವರಲ್ಲಿ ಬಹಳಷ್ಟು ಜನರಿಗೆ ಅದು ಒಂದು ಲಾಭಧಾಯಕ ಉದ್ಯಮ. ಅದನ್ನು ಅವರು ಹೇಗೆತಾನೆ ಬಿಟ್ಟುಕೊಡುತ್ತಾರೆ? ಹಿಂದೆ ಅನೇಕ ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರರು ಸೇವಾ ಮನೋಭಾವದಿಂದ ಸ್ಥಾಪಿಸಿದಂತಹ ಕೆಲವು `ವಿದ್ಯಾವರ್ಧಕ’ ಸಂಘಗಳು ಕೂಡ ಇಂದು ಲಾಭಕೋರರ ಕಪಿಮುಷ್ಠಿಯಲ್ಲಿ ಸಿಕ್ಕು `ವಿದ್ಯಾವರ್ತಕ’ ಸಂಘಗಳಾಗಿ ಮಾರ್ಪಟ್ಟು ಪರಿಸ್ಥಿತಿಯನ್ನು ಬಿಗಡಾಯಿಸಿವೆ. ಇನ್ನು ಮೂರನೆಯವರು ಕೆಲವು ಪಾಲಕರು. ಅವರ ಮನಸ್ಥಿತಿ ಹೇಗಿದೆ ಎಂದರೆ ತಮ್ಮ ಮಕ್ಕಳು ಒಂದು ಹಂತದವರೆಗೆ ಅಂಕಗಳನ್ನು ಸುರಿಸುವ ಮಿಶಿನ್ ಆಗಿರಬೇಕೆಂದು ಮತ್ತು ಆ ಹಂತ ಮುಗಿದ ತಕ್ಷಣ  ಈ ಅಂಕ ಸುರಿಸುವ ಮಿಶಿನ್‍ಗಳು ಹಣ ಸುರಿಸುವ ಎ.ಟಿ.ಎಂ.ಗಳಾಗಿ ಪರಿವರ್ತನೆ ಹೊಂದಬೇಕೆಂದು ಅವರು ಬಯಸುತ್ತಿದ್ದಾರೆ!
ಹೀಗೆ ಮುಂದಾಲೋಚನೆ ಇಲ್ಲದೆ ನಿಯಮ ರೂಪಿಸುವ ಜನಪ್ರತಿನಿಧಿಗಳು, ಇರುವ ಒಳ್ಳೆಯ ಕೆಲವು ನಿಯಮಗಳನ್ನು ರಾಜಾರೋಷವಾಗಿ ಉಲ್ಲಂಘನೆ ಮಾಡುವ ಶಿಕ್ಷಣ ವ್ಯಾಪಾರಿಗಳು, ಈ ನಿಯಮಗಳ ಉಲ್ಲಂಘನೆ ಕಂಡೂ ಕಾಣದಂತೆ ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳುವ, ಸಾಧ್ಯವಾದರೆ `ಪಾಲುಪಡೆದು’ ಇಂತಹ ಉಲ್ಲಂಘನೆಗೆ ಪರೋಕ್ಷ ಬೆಂಬಲ ನೀಡುವ ಅಧಿಕಾರಿಗಳು, ಹಣದಹಿಂದೆ ಬಿದ್ದು ಹಪಹಪಿಸುತ್ತಿರುವ ಪಾಲಕರು ಈ ನಾಲ್ಕೂ ಶಿಕ್ಷಣದ ಬಹುಮುಖ್ಯ ಆಧಾರ ಸ್ಥಂಭಗಳನ್ನು ಗೆದ್ದಲ ಹುಳುವಾಗಿ ತಿನ್ನುತ್ತಿರುವುದು ಪರಿಸ್ಥಿತಿ ಹದಗೆಡಲು ಬಹುಮುಖ್ಯ ಕಾರಣ. ಈ ನಾಲ್ವರು ಮನಸ್ಸುಮಾಡಿದರೆ ಯಾವುದೇ ಕ್ಷಣದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಉನ್ನತ ಸ್ಥಿತಿಗೆ ಒಯ್ಯಬಹುದಾಗಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಎದುರಾಗಬಹುದಾದ ಪರಿಸ್ಥಿತಿ ಬರಬಹುದಾದ ಗಂಭೀರವಾದ ಅನಾಹುತಗಳ ಬಗ್ಗೆ ಅನೇಕ ತಜ್ಞರು, ಚಿಂತಕರು ನೀಡುತ್ತಿರುವ ಎಚ್ಚರಿಕೆಯ ಮಾತುಗಳನ್ನು ಕೇಳುವ ಸಮಯ-ಸಾವಧಾನಗಳು ಯಾರಿಗೂ ಇಲ್ಲವಾಗಿದೆ. ಸಮಸ್ಯೆ ಹೀಗೆ ಸಂಕೀರ್ಣವಾಗಿ ಬಲೆಹೆಣೆದುಕೊಂಡಿರುವಾಗ ನಿಯಮ ರೂಪಿಸುವವರೂ ಅಲ್ಲದ, ಉಲ್ಲಂಘಿಸುವವರೂ ಅಲ್ಲದ, ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಲು ಏನೂ ಅಧಿಕಾರವೂ ಇಲ್ಲದ ಶಾಲೆಯಲ್ಲಿರುವ ಶಿಕ್ಷಕರು ಏನುತಾನೆ ಮಾಡಬಲ್ಲರು? ಬಸವಣ್ಣವರ ವಚನವೊಂದರಲ್ಲಿ  ಬರುವ `ಬಡಪಶು ಪಂಕದಲ್ಲಿ ಬಿದ್ದಡೆ ಕಾಲಬಡಿವದಲ್ಲದೇ ಏನ ಮಾಡಬಲ್ಲದು?’ ಎಂಬಂತಾಗಿದೆ ಅವರ ಪರಿಸ್ಥಿತಿ.
ಅಂದಮಾತ್ರಕ್ಕೆ ಶಿಕ್ಷಕರ ಹೊಣೆಗಾರಿಕೆ ಇಲ್ಲವೇ ಇಲ್ಲ ಎಂದರ್ಥವಲ್ಲ. ಯಾವುದೇ ಒಂದು ಶಾಲೆ ಹೊರಗಿನಿಂದ ಯಾವುದೇ ಬಗೆಯ ಬೆಂಬಲ ಅದು ಎಷ್ಟೇ ಇದ್ದರೂ ಆ ಶಾಲೆಯ ಏಳಿಗೆಗಾಗಿ  ಒಳಗಿರುವ ಶಿಕ್ಷಕರ ಹೃದಯ ಮಿಡಿಯದೇ ಹೋದರೆ ಆ ಶಾಲೆ ಏಳಿಗೆಯಾಗಲು ಸಾಧ್ಯವಿಲ್ಲ. ಹಳ್ಳಿಯೊಂದರಲ್ಲಿ ಶಿಕ್ಷಕರು ಮನಸ್ಸು ಮಾಡಿದರೆ ಈಗಲೂ ಅನೇಕ ಮಿತಿಗಳ ನಡುವೆಯೇ ಶಾಲೆಯೊಂದನ್ನು ಉನ್ನತಿಗೆ ತರಲು ಸಾಧ್ಯವಿದೆ ಎಂಬುದು ಸತ್ಯವಾದರೂ ಅದಕ್ಕೆ ತಮ್ಮವೇ ಆದ ಹತ್ತು ಹಲವು ಮಿತಿಗಳಿವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಮೊನ್ನೆ ಶಾಲಾ ಪ್ರಾರಂಭದ ದಿನಗಳ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ಗಮನಿಸಿ. ಸರ್ಕಾರಿ ಶಾಲೆಯೊಂದರ ಶಿಕ್ಷಕರು ಮಕ್ಕಳ ಕೈಯಲ್ಲಿ `ಪ್ಲೇ ಕಾರ್ಡ್’ ಹಿಡಿಸಿಕೊಂಡು ಊರಲ್ಲಿ `ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿ’ ಎಂದು ಘೋಷಣೆ ಕೂಗಿಸುತ್ತಾ ಮೆರವಣಿಗೆ ಹೋಗಿದ್ದಾರೆ. ದಾರಿಯಲ್ಲೊಬ್ಬ ಅವರನ್ನು ನಿಲ್ಲಿಸಿ, `ನಿಮ್ಮ ಮಕ್ಕಳನ್ನು ಎಲ್ಲಿಗೆ ಕಳಿಸುತ್ತಿದ್ದೀರಿ ಹೇಳಿ. ನೀವೆಲ್ಲ ನಿಮ್ಮ ಮಕ್ಕಳನ್ನು ಖಾಸಗೀ ಶಾಲೆಗೆ ಸೇರಿಸಿಕೊಂಡು ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಲು ಹೇಳಲಿಕ್ಕೆ ಬಂದಿದ್ದೀರಾ?” ಎಂದು ಜೋರುಮಾಡಿದ್ದಾನೆ. ಈ ಶಿಕ್ಷಕ-ಶಿಕ್ಷಕಿಯರಿಗೆ ಏನು ಹೇಳಬೇಕೆಂದು ತೋಚದೆ ಮೆರವಣಿಗೆಯನ್ನು ಅಲ್ಲಿಂದಲೇ ಹಿಂತಿರುಗಿಸಿ ಶಾಲೆಗೆ ಮರಳಿಬಂದಿದ್ದಾರೆ.
ಕಾನೂನಿಯ ಪ್ರಕಾರ ಈ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗೀ ಶಾಲೆಗಳಿಗೆ ಕಳಿಸಿ ಅವರು ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವುದು ತಪ್ಪಲ್ಲ. ಆದರೆ ಕೇವಲ ಕಾನೂನಿನ ಪ್ರಕಾರ ಸರಿಯಿರುವುದು ಸಾರ್ವತ್ರಿಕ ಶಿಕ್ಷಣವನ್ನು ಸುಧಾರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಮೇಲಿನಿಂದ ವ್ಯವಸ್ಥೆ ಸರಿಯಾಗುತ್ತಾ ಬಂದರೆ ಇಂತಹ ಶಿಕ್ಷಕರೂ ತಮ್ಮ ಮನಸ್ಸನ್ನು ಬದಲಿಸಿಕೊಂಡು ತಾವಿರುವ ಶಾಲೆಗಳಿಗೇ ತಮ್ಮ ಮಕ್ಕಳನ್ನು ಕರೆದುಕೊಂಡು ಬರುವ ಮನಸ್ಸುಮಾಡಬಹುದು. ಆ ಮೂಲಕ ಇತರೆ ಪಾಲಕರಲ್ಲೂ ಒಂದಿಷ್ಟು ಭರವಸೆಯನ್ನು ಮೂಡಿಸಬಹುದು. ಬಹುಶಃ ಇದಿಷ್ಟೇ ಇವರು ಮಾಡಬಹುದಾದ್ದು ಅನ್ನಿಸುತ್ತದೆ.
ಖಾಸಗೀ ಶಿಕ್ಷಣವೆಂಬ ಹೆಬ್ಬಾವು ಇಂದು ಸಾರ್ವಜನಿಕ ಶಿಕ್ಷಣವನ್ನು ಹಂತಹಂತವಾಗಿ ನುಂಗತೊಡಗಿದೆ. ನಮಗೆ ಇರುವ ಆಯ್ಕೆಗಳು ಎರಡೆ. ಒಂದು ಅದರ ಆಹಾರವಾಗಿ ಅಂತ್ಯವಾಗುವುದು. ಇನ್ನೊಂದು ಅದನ್ನು ಮೆಟ್ಟಿನಿಂತು ಅದನ್ನು ತುಳಿಯುವುದು. ಹೀಗಾಗಿ ಎಲ್ಲಿಯವರೆಗೆ ಖಾಸಗೀ ಶಿಕ್ಷಣದ ಮೇಲೆ ನಮಗೆ ನಿಯಂತ್ರಣ ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಸಾರ್ವಜನಿಕ ಶಿಕ್ಷಣ ಸಹಜಸ್ಥಿತಿಯಲ್ಲಿ ಉಸಿರಾಡಲು ಸಾಧ್ಯವಾಗುವುದಿಲ್ಲ. ಖಾಸಗೀ ಶಾಲೆಗಳಿಗೆ ಸರಿಸಮಾನವಾಗಿ ಪೈಪೋಟಿ ಕೊಡುವಂತೆ ನಮ್ಮ ಸರ್ಕಾರಿ ಶಾಲೆಗಳನ್ನು ರೂಪಿಸುವುದು ವಾಸ್ತವದಲ್ಲಿ ಸುಲಭವಾದ ಸಂಗತಿಯಲ್ಲ. ಹೀಗಾಗಿ ಈ ದೇಶದ ಭಾವೀ ಪ್ರಜೆಗಳೆಲ್ಲರೂ ಯಾವುದೇ ಜಾತಿ-ಮತ-ಭಾಷೆ-ಆಸ್ತಿ-ಅಂತಸ್ತುಗಳ ತರತಮಗಳಿಲ್ಲದೆ ಅಕ್ಕಪಕ್ಕ ಕುಳಿತು ಸಮಾನವಾಗಿ ಕಲಿಯುವ `ಏಕರೂಪ ಶಿಕ್ಷಣ’ ವೊಂದೇ ಇದಕ್ಕೆ ಶಾಶ್ವತ ಪರಿಹಾರ ನೀಡಬಲ್ಲದು ಎಂಬುದನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕು.
 ಈ ರೀತಿಯ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ತಮ್ಮ ತಮ್ಮ ಪಾಲಿನ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವುದೊಂದೇ ನಾವು ಮಾಡಬಹುದಾದ ಮತ್ತು ಮಾಡಲೇಬೇಕಾದ ತುರ್ತು ಕಾರ್ಯವಾಗಿದೆ. ಈ ತುರ್ತು ಕಾರ್ಯ ನಿರ್ವಹಿಸುವಾಗ ನಾವು ಇಟ್ಟುಕೊಳ್ಳಲೇಬೇಕಾದ ಒಂದು ಎಚ್ಚರ ಏನೆಂದರೆ ಔಷಧಿ ಎಷ್ಟೇ ಪರಿಣಾಮಕಾರಿಯಾಗಿದ್ದರೂ ಅದನ್ನು ನೀಡುವ ವೈದ್ಯ ಎಷ್ಟೇ ನಿಪುಣನಾಗಿದ್ದರೂ ಕಾಯಿಲೆ ಯಾವುದು ಎಂಬುದನ್ನು ಸರಿಯಾಗಿ ಪತ್ತೆಹಚ್ಚಿಕೊಳ್ಳುವಲ್ಲಿ ಎಡವಿ ಅದನ್ನು ಬಳಸುವುದರಿಂದ ಕಾಯಿಲೆ ವಾಸಿಯಾಗುವುದಕ್ಕಿಂತ ಅದು ಉಲ್ಬಣಗೊಳ್ಳುವ ಸಾಧ್ಯತೆಯೇ ಹೆಚ್ಚು ಎಂಬುದು. ಅಂತಹ ಪ್ರಮಾದ ನಮ್ಮ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಆಗದಿರಲಿ. ಕೊನೆಯ ಮಾತು: ಭಾಗವತದಲ್ಲಿ ಒಂದು ಸಂದರ್ಭ ಬರುತ್ತದೆ. ಪೂತನಿ ಎಂಬ ಒಬ್ಬ ರಾಕ್ಷಸಿ ಬಾಲಕೃಷ್ಣನಿಗೆ ಮೊಲೆಹಾಲು ಉಣ್ಣಿಸಲು ತಾಯಿಯ ರೂಪದಲ್ಲಿ ಬರುತ್ತಾಳೆ. ಹಾಲು ಉಣ್ಣಿಸಿ ಬದುಕಿಸುವುದು ಅವಳ ಉದ್ದೇಶವಲ್ಲ; ಅದರ ಬದಲು ತನ್ನನ್ನು ವಿಷ ಉಣ್ಣಿಸಿ ಕೊಲ್ಲುವುದೇ ಅವಳ ಉದ್ದೇಶ ಎಂದು ಸ್ಪಷ್ಟವಾಗಿ ಗ್ರಹಿಸಿದ ಬಾಲಕೃಷ್ಣ ತಾಯಿರೂಪದಲ್ಲಿದ್ದ ಈ ರಾಕ್ಷಸಿಯ ಮೊಲೆಯನ್ನು ಕಚ್ಚಿ ಕೊಂದುಹಾಕುತ್ತಾನೆ. ಅದೇ ಬಾಲಕೃಷ್ಣನ ಸ್ಥಾನದಲ್ಲಿರುವ ನಮ್ಮ ಸಾರ್ವಜನಿಕ ಶಿಕ್ಷಣ ಏನು ಮಾಡಬೇಕು ಎಂಬ ಪಾಠ ಇದರಿಂದ ದೊರೆಯಬಹುದು ಅನ್ನಿಸುತ್ತದೆ.
0-0-0-0
·         ಡಾ. ರಾಜೇಂದ್ರ ಬುರಡಿಕಟ್ಟಿ

Monday, June 19, 2017

Wednesday, June 14, 2017

ಸಗಣಿ ತಿನ್ನಿಸಿದ ಮಾಂತ್ರಿಕ!

ಚಿಕಿತ್ಸೆಯ ಹೆಸರಿನಲ್ಲಿ ಮುಗ್ಧ ಯುವತಿಯೋರ್ವಳಿಗೆ ನಮ್ಮ ಬೀದರಿನಲ್ಲಿ ಸಗಣಿ ತಿನ್ನಿಸಿದ ಮಾಂತ್ರಿಕನೊಬ್ಬನ ವಿರುದ್ಧ ಮಹಾರಾಷ್ಟ್ರದ ಚಾಕೂರ್ ಪೋಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿರುವುದು ವರದಿಯಾಗಿದೆ. ದಾಖಲಾದ ಈ ಪ್ರಕರಣ ಇಂತಹ ಅಯೋಗ್ಯರಿಗೆ ಶಿಕ್ಷೆ ಕೊಡಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆಯೋ ಗೊತ್ತಿಲ್ಲ. ಆದರೆ ಕೊನೆಯ ಪಕ್ಷ ಪ್ರಕರಣ ದಾಖಲಾಗಲು ಮಹರಾಷ್ಟ್ರ ಸರ್ಕಾರವು ಜಾರಿಗೆ ತಂದಿರುವ ಮಾಢ್ಯ ನಿಷೇಧ ಕಾಯ್ದೆ ಸ್ಪಷ್ಟವಾಗಿ ನೆರವಾಗಿದ್ದು ಮಾತ್ರ ಒಂದು ಒಳ್ಳೆಯ ಬೆಳವಣಿಗೆಯಾಗಿದೆ ಎನ್ನಬೇಕು.
ಈ ಅಸಹ್ಯಕರ ಕೃತ್ಯಕ್ಕೆ ಬಲಿಯಾದ ಹದಿನೆಂಟು ವರ್ಷದ ಯುವತಿ ಅನಕ್ಷರಸ್ಥೆಯಲ್ಲ. ಬಿ.ಎ. ವ್ಯಾಸಂಗ ಮಾಡುತ್ತಿರುವ ಕಾಲೇಜು ಹುಡುಗಿ. ಅಂದರೆ ಹನ್ನೆರಡು ವರ್ಷಗಳ ಶಾಲಾ ಶಿಕ್ಷಣವನ್ನು ಮುಗಿಸಿರುವಂಥವಳು. ಹನ್ನೆರಡು ವರ್ಷಗಳ ದೀರ್ಘ ಅವಧಿಯಲ್ಲಿ ಅವಳಿಗೆ ನೀಡಲ್ಪಟ್ಟಿರುವ ಶಿಕ್ಷಣವು `ಸಗಣಿ ತಿನ್ನುವುದು ಅಸಹ್ಯವಾದದ್ದು, ಮೂರ್ಛೆರೋಗ ಅಥವಾ ಮಾಟ-ಮಂತ್ರಗಳಿಂದ ಆಗಿದೆ ಎನ್ನಲಾದ ತೊಂದರೆಗಳಿಗೆ ಪರಿಹಾರವು ಇದರಿಂದ ಸಿಗುವುದಿಲ್ಲ. ಇದು ಒಂದು ಮೂಢನಂಬಿಕೆ’ ಎಂಬ ಕನಿಷ್ಠ ಪ್ರಜ್ಞೆಯನ್ನೂ ಅವಳಲ್ಲಿ ಬೆಳಸಲಿಲ್ಲವೋ ಅಥವಾ ಅದು ಅವಳಲ್ಲಿ ಬೆಳದಿದ್ದರೂ ಅವಳ ಪಾಲಕರೂ ಸೇರಿದಂತೆ ಸುತ್ತಮುತ್ತಲ ಸಮಾಜ ಅವಳನ್ನು ಬಲತ್ಕಾರವಾಗಿ ಇಂತಹ ಕೃತ್ಯಕ್ಕೆ ದೂಡಿತೋ ಅದಿನ್ನೂ ಸ್ಪಷ್ಟವಾಗಬೇಕಾಗಿದೆ. ಕಾರಣ ಏನೇ ಇರಲಿ ನಮ್ಮ ಸಮಾಜ ಯಾವ ಹಂತದಲ್ಲಿದೆ ಮತ್ತು ಯಾವ ಕಡೆ ಚಲಿಸುತ್ತಿದೆ ಎಂಬುದು ಈ ಒಂದು ಘಟನೆ ನಮಗೆ ಬೆರಳುಮಾಡಿ ತೋರಿಸುತ್ತದೆ.
ಕರ್ನಾಟಕದಲ್ಲಿಯೂ ಇಂತಹ ಮೂಢನಂಬಿಕೆಗಳನ್ನು ನಿಷೇಧಿಸುವ, ಜನರಲ್ಲಿ ವೈಜ್ಞಾನಿಕತೆ, ವೈಚಾರಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂಥದೊಂದು ಕಾನೂನು ಇಷ್ಟರೊಳಗೆ ಜಾರಿಗೆ ಬಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅನ್ನಿಸುತ್ತಿದೆ. ಮಹಾರಾಷ್ಟ್ರ ಮಾದರಿಯ ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ತರಲು ನಮ್ಮಲ್ಲಿಯೂ ಒತ್ತಡ ಹೆಚ್ಚಾದಾಗ ಕುಂಟುತ್ತಾ ಕುಂಟುತ್ತಾ ಅಂತೂ ಒಂದು ಕರಡು ಸಿದ್ಧವಾದರೂ ಅದು ಕಾನೂನಾಗಿ ಜಾರಿಗೆ ಬರಲು ಇನ್ನೂ ಮೀನಮೇಷ ಎಣಿಸುತ್ತಿದೆ. ಸರ್ಕಾರ ಅದರ ಕರಡನ್ನು ಸಿದ್ಧಪಡಿಸಲು ಎಷ್ಟೋ ದಿವಸ ತೆಗೆದುಕೊಂಡಿತು. ಅಂತೂ ಕೊನೆಗಾದರೂ ಪ್ರಕಟವಾಯಿತಲ್ಲ ಎಂದು ಸಮಾಧಾನದ ನಿಟ್ಟುಸಿರು ಬಿಡುವ ವೇಳಗೇ ಅದು ಮುಂದೆ ಹೋಗದಂತೆ ಕಾಲೆಳೆಯುವ ಪ್ರಯತ್ನಗಳು ಶುರುವಾದವು. ಸರ್ಕಾರ ತರಲು ಹೊರಟಿರುವ ಈ ಉದ್ದೇಶಿಸಿತ ಕಾನೂನಿನ ಬಗ್ಗೆ ನಮ್ಮ ಕೆಲವು `ಧಾರ್ಮಿಕ ಮುಖಂಡರು’, `ರಾಜಕೀಯ ಮುತ್ಸದ್ಧಿಗಳು’ ಮತ್ತು `ಧರ್ಮರಕ್ಷಕರು’ ಇದು `ಹಿಂದೂ ಧರ್ಮದ ಆಚರಣೆಗಳ ಮೇಲೆ ನಿರ್ಬಂಧ ಹೇರುವ ಹುನ್ನಾರ’ ಎಂದು ಕ್ಯಾತೆ ತೆಗೆದು ಎದ್ವಾತದ್ವ ಹೇಳಿಕೆ ನೀಡಿ ಜನರಲ್ಲಿ ಅನಗತ್ಯ ಗೊಂದಲವನ್ನುಂಟುಮಾಡಿಬಿಟ್ಟರು!
ಕೆಲವರ ಹೇಳಿಕೆಗಳನ್ನು ನೋಡಿದರೆ ಅವರು ಈ ಕಾನೂನಿನ ಕರಡನ್ನು ನೋಡಲೇ ಇಲ್ಲ ಎಂದು ಯಾರಾದರೂ ಹೇಳಬಹುದಿತ್ತು. ಹೀಗೆ ಕರಡನ್ನು ಓದದೇ ಮಾಧ್ಯಮದೆದುರು ಹೇಳಿಕೆ ನೀಡಲು ಹಿಂದೆ ರಾಜಕಾರಣಿಗಳು ಅಂಜುತ್ತಿದ್ದರು. ಮರುಪ್ರಶ್ನೆ ಮಾಡಿದರೆ ಏನುಗತಿ ಎಂಬುದು ಅವರ ಅಂಜಿಕೆಯ ಹಿಂದೆ ಇರುತ್ತಿದ್ದ ಕಾರಣವಾಗಿತ್ತು. ಆದರೆ ಇಂದು ಅವರಿಗೆ ಆ ಅಂಜಿಕೆ ಇಲ್ಲ. ಹೀಗೆ ಬೇಜವಾಬ್ದಾರಿಯಿಂದ ಹೇಳಿಕೆ ನೀಡಿದಾಗ ಅದನ್ನು ನೀಡಿದವರಿಗೆ ಮರಳಿ ಪ್ರಶ್ನೆಮಾಡಿ ಸತ್ಯಾಸತ್ಯತೆಯನ್ನು ಧೃಡಪಡಿಸಿಕೊಂಡೇ ಜನತೆಗೆ ಸಂದೇಶ ರವಾನಿಸುವ ಜವಾಬ್ದಾರಿಯುತ ಮಾಧ್ಯಮಗಳ ಸಂಖ್ಯೆ ದಿನದಿನಕ್ಕೆ ಕುಸಿಯುತ್ತಿದ್ದು ಅವರು ಹೇಳಿದ್ದನ್ನು ಹಸಿಹಸಿಯಾಗಿ ಜನರಿಗೆ ಯಥಾವತ್ತಾಗಿ ದಾಟಿಸುವ, ಇನ್ನೂ ಸಾಧ್ಯವಾದರೆ ಇನ್ನಷ್ಟು `ಉಪ್ಪುಕಾರ’ ಹಾಕಿ ಮಸಾಲೆಮಾಡಿ ಜನತೆಗೆ ದಾಟಿಸುವ ಮಾಧ್ಯಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಅವರ ಅಂಜಿಕೆ ಇಲ್ಲವಾಗಲು ಬಹುಶಃ ಕಾರಣವಾಗಿರಬಹುದು.
ಹೀಗೆ ಹೇಳಿಕೆ ನೀಡಿದ ಯಾರೊಬ್ಬರೂ ಈ ಉದ್ದೇಶಿತ ಕಾನೂನಿನಲ್ಲಿಯ ಯಾವ ಅಂಶ ಇವರ ಧರ್ಮದ ಯಾವ ಆಚರಣೆಗಳನ್ನು ಯಾವ ರೀತಿಯಲ್ಲಿ ನಿರ್ಬಂಧಿಸುತ್ತದೆ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಲಿಲ್ಲ. ಅವರು ಹೇಳಿದ್ದನ್ನೇ `ವೇದವಾಕ್ಯ’ ಮಾಡಿಕೊಂಡ ಅವರ ಹಿಂಬಾಲಕ ಪಡೆ ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಎಲ್ಲೆಂದರಲ್ಲಿ ಈ ನಾಯಕರ ಹೇಳಿಕೆಗಳನ್ನೇ ಪುನರುಚ್ಚರಿಸಿ `ಇದರಲ್ಲಿ ಎನೋ ದೊಡ್ಡ ಸಂಚು ಅಡಗಿದೆ ಈ ಕಾನೂನು ಬಂದರೆ ಹಿಂದೂ ಧರ್ಮಕ್ಕೆ ದೊಡ್ಡ ನಷ್ಟವಾಗಲಿದೆ’ ಎಂದು ಸಾಮಾನ್ಯ ಜನರನೇಕರು ಭಾವಿಸುವಂತೆ ಮಾಡಿಬಿಟ್ಟರು. ಒಟ್ಟಿನಲ್ಲಿ ಎಲ್ಲರೂ ಸೇರಿ ಇದನ್ನೊಂದು ಗೊಂದಲದ ಗೂಡನ್ನಾಗಿ ಮಾಡಿ ಆಗಲೇಬೇಕಾಗಿದ್ದ ಅತ್ಯಂತ ಮಹತ್ವದ ಕೆಲಸವೊಂದಕ್ಕೆ ಕಲ್ಲುಹಾಕಿ ತಡೆಯೊಡ್ಡಿದರು. ಒಂದು ವೇಳೆ ಇವರು ಭಾವಿಸುವಂತಹ ತಮ್ಮ ಧಾರ್ಮಿಕ ಆಚರಣೆಗಳನ್ನು ನಿರ್ಬಂಧಿಸುವ ಅಂಶಗಳೇನಾದರೂ ಅದರಲ್ಲಿ ಇದ್ದರೆ ಅವನ್ನು ಎತ್ತಿತೋರಿಸಿ ಪರಿಷ್ಕರಣೆಗೆ ಒತ್ತಾಯಿಸುವ ಅವಕಾಶವಿದ್ದರೂ ಹಾಗೆ ಮಾಡದೆ ಅದನ್ನು ವಿನಾಕಾರಣ ತಡೆಯುವ ಪ್ರಯತ್ನ ನಡೆಸಿದ್ದು ಮಾತ್ರ ಜನತೆಯ ವೈಚಾರಿಕತೆ ಬೆಳೆಸುವಲ್ಲಿ ಉಂಟಾದ ಒಂದು ಹಿನ್ನಡೆಯಲ್ಲದೆ ಬೇರೇನೂ ಅಲ್ಲ.
ಈ ಕಾನೂನು ಈಗಿನ ಮುಖ್ಯಮಂತ್ರಿಯ ಕಾಲದಲ್ಲಿ ಜಾರಿಗೆ ಬರದಿದ್ದರೆ ಇನ್ಯಾರ ಕಾಲದಲ್ಲಿ ಬರಲು ಸಾಧ್ಯ? ಈ ಸರ್ಕಾರದ ಅವಧಿ ಮುಗಿಯಲು ಇರುವ ಇನ್ನೊಂದು ವರ್ಷದ ಅವಧಿಯೊಳಗೆ ಏನಾದರೂ ಮಾಡಿ ಅದನ್ನು ಜಾರಿಗೆ ತರಲೇಬೇಕೆಂದು ಅನೇಕ ಪ್ರಗತಿಪರ ಚಿಂತಕರು, ಪ್ರಗತಿಪರ ಆಲೋಚನಾ ಕ್ರಮದ ಮಠಾದೀಶರೂ ಈ ನಿಟ್ಟಿನಲ್ಲಿ ಮಾಡಿರುವ ಮತ್ತು ಮಾಡುತ್ತಿರುವ ಪ್ರಯತ್ನಗಳು ನಿರೀಕ್ಷಿತಮಟ್ಟದಲ್ಲಿ ಯಶಸ್ಸು ನೀಡಿಲ್ಲವಾದರೂ ಹುಸಿಯಾಗಬಹುದೆಂಬ ನಿರಾಶೆಯನ್ನುಂಟುಮಾಡಿಲ್ಲ ಎಂಬುದು ಸಮಾಧಾನದ ಸಂಗತಿ. ಸರ್ಕಾರ ಕೊನೆಗಳಿಗೆಯಲ್ಲಿಯಾದರೂ ಅದನ್ನು ಜಾರಿಗೆ ತರಬಹುದೆಂಬ ಭರವಸೆ ಇನ್ನೂ ಅಳಿಸಿಲ್ಲ.
ಒಂದು ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಕೆಲದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಯಾವುದೋ ಒಂದು ಹಳ್ಳಿಯಲ್ಲಿ ಆ ಊರಿನ ಆಂಜನೇಯ ಸ್ವಾಮಿಯ ಜಾತ್ರೆಯ ದಿನದಂದೋ ಏನೋ ಒಬ್ಬ ಬಾಲಕನಿಗೆ ಮಿತಿಮೀರಿ ನೀರನ್ನೋ ಎಳೆನೀರನ್ನೋ ಕುಡಿಸಿ ಅವನಿಗೆ ಉಚ್ಚೆ ಬರುವಂತೆ ಮಾಡಿ ಆ ಉಚ್ಚೆಯನ್ನು `ಆಂಜನೇಯಸ್ವಾಮಿಯ ತೀರ್ಥ’ ಎಂದು ಊರಿಗೆಲ್ಲ ಹಂಚುತ್ತಿರುವ ಘಟನೆ ಟಿ.ವಿ.ವಾಹಿನಿಯೊಂದರಲ್ಲಿ ಪ್ರಸಾರವಾಯಿತು. ಈ ಬಗ್ಗೆ ನಡೆದ ಟಿ.ವಿ.ಚರ್ಚೆಯಲ್ಲಿ ಆ ಊರಿನ ದೇವಸ್ಥಾನದ ಅರ್ಚಕರು ಮತ್ತು ಊರಿನ ಮುಖಂಡರು ಒಟ್ಟಾಗಿ `ನಮ್ಮ ಊರಿನಲ್ಲಿ ಆ ಬಾಲಕನ ಮೂತ್ರವನ್ನು ಮೂತ್ರವೆಂದು ಯಾರೂ ಭಾವಿಸುವುದಿಲ್ಲ. ಅದನ್ನು ಆಂಜನೇಯ ಸ್ವಾಮಿಯ ತೀರ್ಥವೆಂದೇ ಶ್ರದ್ಧೆಯಿಂದ ಸ್ವೀಕರಿಸುತ್ತೇವೆ.ಇದರಿಂದ ನಮ್ಮ ಊರಿಗೆ ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎಂಬುದು ನಮ್ಮ ನಂಬಿಕೆ. ಇದನ್ನು ನಾವು ಬದಲಿಸಿಕೊಳ್ಳಲು ಒಪ್ಪುವುದಿಲ್ಲ’ ಎಂದು ಬಹಳಷ್ಟು ಶ್ರದ್ಧೆಯಿಂದಲೇ ಹೇಳಿದರು!
ಈ ಘಟನೆ ಒಂದು ಉದಾಹರಣೆ ಮಾತ್ರ. ಮಕ್ಕಳಾಗದೆ ಚಿಂತಾಕ್ರಾಂತರಾದ ಮಹಿಳೆಯರನ್ನು ತಮ್ಮ ತೆವಲು ತೀರಿಸಿಕೊಳ್ಳಲು ಬಳಸಿಕೊಳ್ಳುವ ಮೂಲಕ ಲೈಂಗಿಕ ಶೋಷಣೆಗೊಳಪಡಿಸುವ ಘಟನೆಗಳೂ ಸೇರಿದಂತೆ ಈ ರೀತಿಯ ಮೌಢ್ಯವನ್ನು ಜನರಲ್ಲಿ ಬಿತ್ತುವ ಘಟನೆಗಳು ನಮ್ಮಲ್ಲಿ ದಿನದಿನಕ್ಕೂ ಹೆಚ್ಚುತ್ತಿವೆ. ಅನೇಕ ಪದವಿ ಪಡೆದ ಯುವ ಜನತೆಯೂ ಸಂಪ್ರದಾಯ-ಧರ್ಮ-ನಂಬಿಕೆ ಇತ್ಯಾದಿಗಳ ಹೆಸರಿನಲ್ಲಿ ಮೂಢನಂಬಿಕೆಗಳಿಗೆ ಜೋತು ಬೀಳುತ್ತಿರುವುದನ್ನು ನೋಡಿದರೆ ಜನತೆಯಲ್ಲಿ ವಿದ್ಯಾಭ್ಯಾಸ ಹೆಚ್ಚಿದಂತೆ ಇವೆಲ್ಲ ಕಡಿಮೆ ಆಗುತ್ತವೆ ಎಂಬ ನಿರೀಕ್ಷೆ ಹುಸಿಯಾಗುತ್ತಿದೆಯೇನೋ ಅನ್ನಿಸುತ್ತಿದೆ. ಇಂತಹ ಘಟನೆಗಳಿಗೆ ಕಡಿವಾಣ ಬೇಡವೇ? ಈ ರೀತಿಯ ಘಟನೆಗಳಿಗೆ ನಮ್ಮ ಪ್ರತಿಕ್ರಿಯೆ ಏನಾಗಿರಬೇಕು? ಅವು ಅವರ ನಂಬಿಕೆ ಎಂದು ನಾವು ಅವನ್ನು ಗೌರವಿಸಬೇಕೆ? ಏನಾದರೂ ಮಾಡಿಕೊಳ್ಳಲಿ ನಮಗೇನು ಎಂದು ಸುಮ್ಮನಿರಬೇಕೆ? ಬಹುಶಃ ಇವೆರಡೂ ಜವಾಬ್ದಾರಿಯುತ ನಡವಳಿಕೆ ಎನಿಸಲಾರವು. ನಾಗರಿಕ ಸಮಾಜ ತಲೆತಗ್ಗಿಸುವಂತಹ ಇಂತಹ ಅಸಹಯಕರ ಕೃತ್ಯಗಳನ್ನು ನಾವೆಲ್ಲ ವಿರೋಧಿಸಬೇಕಾಗಿದೆ.
ಮೌಢ್ಯ ನಿಷೇದ ಕಾಯ್ದೆ ಜಾರಿಗೆ ಬಂದರೆ ನಮ್ಮಲ್ಲಿ ಸಾಮಾನ್ಯ ಜನರ ಭಕ್ತಿ, ಧಾರ್ಮಿಕತೆ, ಆಧ್ಯಾತ್ಮಿಕತೆ ಇತ್ಯಾದಿಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡು ಹೊಟ್ಟೆಹೊರೆಯುವ, ಜನರನ್ನು ಶೋಷಣೆ ಮಾಡುತ್ತಿರುವ ಅನೇಕ ಕಪಟ ದೇವಮಾನವರ ಅಂತಸ್ತು ಮತ್ತು ಆದಾಯ ಎರಡಕ್ಕೂ ಕತ್ತರಿ ಬೀಳುವುದರಿಂದ ಅವರಿಗೆ ಈ ಕಾನೂನು ಜಾರಿಗೆ ಬರುವುದು ಬೇಕಾಗಿಲ್ಲ. ಹಾಗಾಗಿ ಮುಗ್ದ ಜನರಲ್ಲಿ ತಪ್ಪು ತಿಳಿವಳಿಕೆಯನ್ನು ನೀಡಿ ಈ ಕಾನೂನು ಜಾರಿಗೆ ಬರದಂತೆ ಏನು ಮಾಡಬಹುದೋ ಅದನ್ನೆಲ್ಲ ಅವರು ಮಾಡುತ್ತಿದ್ದಾರೆ. ಜನರ ಧಾರ್ಮಿಕ ಭಾವನೆಗಳ ತಂತಿಯನ್ನು ಮೀಟುತ್ತಿದ್ದಾರೆ ಅವರ ತಾಳಕ್ಕೆ ತಕ್ಕಂತೆ ಕುಣಿಯುವ ರಾಜಕಾರಣಿಗಳು ಮತ್ತು ಈ ರಾಜಕಾರಣಿಗಳ ವಿವೇಕರಹಿತ ಹೇಳಿಕೆಗಳಿಗೆ ಕಣ್ಣುಮುಚ್ಚಿಕೊಂಡು ಸಿಳ್ಳೆಹಾಕಿ ಬೆಂಬಲ ಸೂಚಿಸುತ್ತಿರುವ ನಮ್ಮ ಕೆಲವು ಯುವಪಡೆಗಳು ಈ ಕಾನೂನು ಜಾರಿಗೆ ಬರುವಲ್ಲಿ ಇರುವ ಮುಖ್ಯವಾದ ತೊಡಕಾಗಿದ್ದಾರೆ.
ಈ ಕಾನೂನಿನ ವಿಷಯದಲ್ಲಿ ನಾವೆಲ್ಲ ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ. ನನಗೆ ತಿಳಿದಮಟ್ಟಿಗೆ ಯಾವ ಧರ್ಮದ ಆಚರಣೆಗಳಿಗೂ ಈ ಉದ್ದೇಶಿತ ಕಾಯ್ದೆ ನಿಯಂತ್ರಣವನ್ನಾಗಲೀ ನಿರ್ಬಂಧವನ್ನಾಗಲೀ ಹೇರುವುದಿಲ್ಲ. ಬದಲಾಗಿ ಧರ್ಮ, ದೇವರು ಇತ್ಯಾದಿಗಳನ್ನು ಬಳಸಿಕೊಂಡು ಮಾಡುವ ಕೆಲವು ಮೌಢ್ಯಾಚರಣೆಗಳನ್ನು ಮಾತ್ರ ಅಪರಾಧವೆಂದು ಪರಿಗಣಿಸುತ್ತದೆ. ನಾವು ಬಹಳ ಎಚ್ಚರದಿಂದ ಗಮನಿಸಬೇಕಾದ ಸಂಗತಿಯೆಂದರೆ ಮನುಷ್ಯನ ಮೂತ್ರವನ್ನು ದೇವರ ತೀರ್ಥವೆಂದು ಸ್ವೀಕರಿಸುವ ಹಂತಕ್ಕೆ ಇಳಿದಿರುವ ಸಮಾಜ ಮನುಷ್ಯನ ಹೇಸಿಗೆಯನ್ನು ದೇವರ ಪ್ರಸಾದವೆಂದು ಸ್ವೀಕರಿಸುವ ಹಂತಕ್ಕೆ ತಲುಪಲು ಬಹಳ ದಿನ ತೆಗೆದುಕೊಳ್ಳುವುದಿಲ್ಲ ಎಂಬುದು. ಹಾಗಾಗದಿರಲಿ ಎಂಬುದೇ ಬಹುತೇಕ ಎಲ್ಲರ ನಿರೀಕ್ಷೆಯಾಗಿರುತ್ತದೆ.
ಹೀಗಾಗಿ ಇಂತಹ ಸಂಗತಿಗಳನ್ನು ನಾವು ಮುಕ್ತಮನಸ್ಸಿನಿಂದ ಸ್ವೀಕರಿಸಿ ಸಮಾಜದ ಮತ್ತು ಆಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಬೇಕು. ಅನಗತ್ಯವಾಗಿ ಇವಕ್ಕೆಲ್ಲ ಧರ್ಮದ ಲೇಪನ ಮಾಡುವುದನ್ನು ಬಿಡಬೇಕು. ನಾವು ಧಾರ್ಮಿಕರಾಗಿರುವುದು ತಪ್ಪಲ್ಲ ನಿಜ ಆದರೆ ಎಲ್ಲದನ್ನೂ ಧರ್ಮದ ಮಿತಿಯಲ್ಲಿಯೇ ನೋಡುವ ಧರ್ಮಾಂಧರಾಗಿರುವುದು ಮಾತ್ರ ತಪ್ಪೆ. `ಭಾರತೀಯರ ರಕ್ತವು ಔದಾರ್ಯ ಮತ್ತು ದೃಢತೆಗಳಿಗೆ ಹೆಸರಾಗಿದೆ. ಧರ್ಮಾಂಧತೆ ಇಲ್ಲಿನ ದೌರ್ಬಲ್ಯದ ಹೆಗ್ಗುರುತು’ ಎಂಬ ಖ್ಯಾತ ಸಮಾಜವಾದಿ ಚಿಂತಕ ಡಾ. ರಾಮ ಮನೋಹರ ಲೋಹಿಯಾ ಅವರ ಮಾತನ್ನು ನಾವು ಎಚ್ಚರದಿಂದ ಗಮನಿಸಬೇಕು. ನಮ್ಮ ಸಂವಿಧಾನವು ನೀಡಿರುವ ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯದ ನೆನಪನ್ನು ಪದೇಪದೇ ಮಾಡಿಕೊಳ್ಳುವ ನಾವು ಅದೇ ನಮ್ಮ ಸಂವಿಧಾನವು ವಿಧಿಸಿರುವ ಜನರಲ್ಲಿ ವೈಚಾರಿಕ ಮನೋಭಾವವನ್ನು ಬೆಳೆಸುವ ಜವಾಬ್ದಾರಿಯನ್ನೂ ಕೂಡ ಪದೇ ಪದೇ ನೆನಪು ಮಾಡಿಕೊಳ್ಳಬೇಕು. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಮೌಢ್ಯ ನಿಷೇಧ ಕಾಯ್ದೆ ಆದಷ್ಟು ಬೇಗ ಜಾರಿಗೆ ಬರಲು ನಮ್ಮನಿಮ್ಮೆಲ್ಲರ ಒತ್ತಡ ಹೆಚ್ಚಬೇಕಾಗಿದೆ. ಸರ್ಕಾರವು ಕೂಡ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡು ಅದನ್ನು ಜಾರಿಗೆ ತರುವ ಅಗತ್ಯವಿದೆ.ಇದು ಸರ್ಕಾರವು ಜನರಿಗೆ ನೀಡುತ್ತಿರುವ ಎಲ್ಲ `ಭಾಗ್ಯ’ಗಳಿಗಿಂತಲೂ ಮಿಗಿಲಾದ `ಭಾಗ್ಯ’ವಾಗುತ್ತದೆ. ಇದು ಆದರೆ ಮಾತ್ರ ಎಲ್ಲ ಜನರೂ ವೈಚಾರಿಕವಾಗಿ ಬೆಳೆಯಲು ಶೋಷಣೆಗೆ ಒಳಗಾಗದಿರಲು ಸಾಧ್ಯವಾಗುವ ಮೂಲಕ `ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಮಾತಿಗೆ ಅರ್ಥಬರುತ್ತದೆ.

Friday, June 2, 2017

ಮಳೆಗಾಗಿ ಪರ್ಜನ್ಯಹೋಮ ಮೌಢ್ಯ ಬಿತ್ತುವ ಕಾರ್ಯ


ಮುಂಗಾರು ಮಳೆಗಾಗಿ ಸರ್ಕಾರ ಪರ್ಜನ್ಯ ಹೋಮ ಮಾಡಿಸಲು ಹೊರಟಿರುವ ಕ್ರಮ ನಮ್ಮ ಸಂವಿಧಾನದ ಬಹುಮುಖ್ಯ ಆಶಯಗಲ್ಲಿ ಒಂದಾದ ಜನರಲ್ಲಿ ‘ವೈಜ್ಞಾನಿಕ ಮನೋಭಾವ' ಬೆಳೆಸುವ ಜವಾಬ್ದಾರಿಗೆ ವಿರುದ್ಧವಾದದ್ದು. ಮೌಢ್ಯನಿಷೇಧ ಕಾಯ್ದೆಯನ್ನು ತನ್ನ ಅಧಿಕಾರಾವಧಿಯು ಕೊನೆಗೊಳ್ಳುವದರೊಳಗೆಯಾದರೂ ಜಾರಿಗೆ ತರಬಹುದೇನೋ ಎಂಬ ವಿಶ್ವಾಸವನ್ನು ಅಲ್ಲದಿದ್ದರೂ ಆಶಾಭಾವನೆಯನ್ನು ಇಟ್ಟುಕೊಂಡಿರುವ ನಾಡಿನ ಬಹುತೇಕ ಜನರಿಗೆ ಸರ್ಕಾರದ ಈ ಕಡೆಯಿಂದ ಭರವಸೆ ಬತ್ತುವಂತಾಗಿದೆ.

ಮೈಸೂರು ಮಹಾರಾಜರ ಕಾಲದಿಂದಲೂ ಈ ಸಂಪ್ರದಾಯ ಇತ್ತು ಎಂದು ಸರ್ಕಾರ ನೀಡಿದೆ ಎನ್ನಲಾದ ಸಮರ್ಥನೆ ಸರಿಯಲ್ಲ. ನಮ್ಮಪೂರ್ವಜರು ನಡೆಸಿಕೊಂಡು ಬಂದಿರುವ ಅನೇಕ ಆಚರಣೆಗಳನ್ನು ನಾವಿಂದು ಬಿಟ್ಟಿದ್ದೇವೆ ಅಥವಾ ಮಾರ್ಪಡಿಸಿಕೊಂಡು ಮುಂದುವರೆಸಿದ್ದೇವೆ. ಹಿಂದೆ ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸಲು (ಖುಷಿಪಡಿಸಲು) ರಾತ್ರಿ ಅವರೊಳಗೆ ಮನೆಯ ಮಹಿಳೆಯರನ್ನು ‘ಇದಗಿಸುವುದು’ ಕೂಡ ನಮ್ಮ ಸಂಪ್ರದಾಯವಾಗಿತ್ತು! 'ಬೆತ್ತಲೆಸೇವೆ' ಕೂಡ ನಮ್ಮ ಸಂಪ್ರದಾಯವಾಗಿತ್ತು. ಅವನ್ನು ಇಂದು ನಾವು ಬಿಟ್ಟಿಲ್ಲವೇ? ಇದೇ ಮೈಸೂರು ಮಹಾರಾಜರ ಕಾಲದಲ್ಲಿ ದಸರಾ ಮೆರವಣಿಗೆಯಲ್ಲಿ ಅಂಬಾರಿಯಲ್ಲಿ ರಾಜರನ್ನು ಕೂರಿಸಿ ಮೆರವಣಿಗೆ ಮಾಡುವ ಕ್ರಮವಿತ್ತು. ಅದನ್ನು ಇಂದು ನಾವು ಬದಲಿಸಿಕೊಂಡಿಲ್ಲವೇ? ಹೀಗೆ ಸಂಪ್ರದಾಯಗಳನ್ನು ಬಿಟ್ಟುಕೊಡುವಿಕೆ ಅಥವಾ ಮಾರ್ಪಡಿಸಿಕೊಳ್ಳುವಿಕೆ ಚಲನಶೀಲ ಸಮಾಜವೊಂದರ ಸಹಜ ಲಕ್ಷಣ. ಕಾಲದ ಅವಶ್ಯಕತೆಯಾದ ಇದು ನಮ್ಮ ಪರಂಪರೆಗೆ ಕೊಡುವ ನಿಜವಾದ ಗೌರವ. ಅದನ್ನು ಬಿಟ್ಟು ಒಂದು ಕಾಲದ ಆಚರಣೆಯನ್ನು ಯಥಾವತ್ತಾಗಿ ಇನ್ನೊಂದು ಕಾಲದಲ್ಲಿ ನಡೆಸಲು ಹೋಗುವುದು ಅನೇಕವೇಳೆ ಮೂರ್ಖತನವಾಗುತ್ತದೆ.
ಆಡಳಿತ ನಡೆಸುವವರಿಗೆ ಯಾವುದೇ ವಿಚಾರವಿರಲಿ ಒಂದು ಸ್ಪಷ್ಟತೆ ಇರಬೇಕು. ಮಳೆ ಬರದಿರಲು ಕಾರಣಗಳೇನು ಮತ್ತು ಏನುಮಾಡುವುದರಿಂದ ಮಳೆಬರುತ್ತದೆ ಎಂಬುದು ಶಾಲಾ ಮಕ್ಕಳಾಗಿದ್ದಾಗಲೇ ತಿಳಿದುಕೊಳ್ಳಬೇಕಾದ ಚಿಕ್ಕ ಸಂಗತಿ. ಕಾಡು ನಾಶವೂ ಸೇರಿದಂತೆ ಪರಿಸರದ ಮೇಲೆ ಮಾಡಬಾರದ ಅನಾಚಾರಗಳನ್ನೆಲ್ಮ ಮಾಡಿ ಪರ್ಜನ್ಯ ಹೋಮ ಮಾಡಿ ಮಳೆ ತರಿಸುತ್ತೇವೆ ಎಂಬುದು ಹಾಸ್ಯಾಸ್ಪದವಾಗುತ್ತದೆ. ಹೀಗೆ ಮಳೆ ಬರಿಸಲು ಸಾಧ್ಯ ಎಂದು ಒಪ್ಪಿಕೊಂಡರೆ ಅರಣ್ಯ ಇಲಾಖೆಯು ಕೋಟಿಗಟ್ಟಲೆ ಖರ್ಚುಮಾಡಿ ಗಿಡಮರ ಬೆಳೆಸುವ ಅಗತ್ಯವೇ ಬರುವುದಿಲ್ಲ. ‘ಅದನ್ನೂ ಮಾಡುತ್ತೇವೆ; ಇದನ್ನೂ ಮಾಡುತ್ತೇವೆ. ಒಟ್ಟಿನಲ್ಲಿ ಹೇಗಾದರೂ ಸರಿ ಮಳೆಬಂದರಾಯಿತು' ಎನ್ನುವುದು ಎಡಬಿಡಂಗಿತನವಾಗುತ್ತದೆ. ಈ ಹೋಮದ ಶಕ್ತಿಯ ಬಗ್ಗೆ ಒಂದುವೇಳೆ ಅಷ್ಟೊಂದು ನಂಬಿಕೆ ಇದ್ದಿದ್ದರೆ ಮೇ ತಿಂಗಳ ಉರಿಬಿಸಿಲಿನಲ್ಲಿ ಜನ ಕುಡಿಯುವ ನೀರಿಗೆ ಆಹಾಕಾರಪಡುತ್ತಿದ್ದಾಗ ಅದನ್ನು ಮಾಡಬಹುದಿತ್ತು. ಆಗ ಅದನ್ನು ಮಾಡದೇ ನಮ್ಮ ಹವಾಮಾನ ಇಲಾಖೆ ಇನ್ನೇನು ಎರಡು ಮೂರು ದಿನಗಳಲ್ಲಿ ಮಳೆಯಾಗುತ್ತದೆ ಎಂದು ಹೇಳಿರುವಾಗ ಮಾಡಹೊರಟಿರುವುದು ನೋಡಿದರೆ ಈ ಹೋಮದ ‘ಅದ್ಭುತಶಕ್ತಿ’ಯಾರಿಗಾದರೂ ಅರಿವಾಗದೇ ಇರದು. ಇಂಥ ಕ್ರಮಗಳಿಂದ ಪುರೋಹಿತಶಾಹಿಯ ಹೊಟ್ಟೆ ಬೆಳೆಯುತ್ತದೆಯೇ ಹೊರತು ಮಳೆಯಾಗುವುದಿಲ್ಲ.
ಸರ್ಕಾರ ಇಂತಹ ಅಸಂಬದ್ದ ಕಾರ್ಯಗಳಿಗೆ ಸಾರ್ವಜನಿಕ ಹಣ ಮತ್ತು ತನ್ನ ಅಮೂಲ್ಯ ಸಮಯಗಳನ್ನು ಪೋಲುಮಾಡದೇ ಈ ನಿಟ್ಟಿನಲ್ಲಿ ಸ್ಪಷ್ಟತಿಳಿವಳಿಕೆ ಹೊಂದಿ ತಮ್ಮಷ್ಟಕ್ಕೆ ತಾವು ‘ಬೀಜದುಂಡೆ ಅಭಿಯಾನ' (Seed-ball Campaign) ದಂತಹ ಪರಿಸರ ಉಳಿಸಿಬೆಳೆಸುವ ಕಾರ್ಯದಲ್ಲಿ ರಾಜ್ಯದ ಬೇರೆಬೇರೆ ಕಡೆಗಳಲ್ಲಿ ನಿರತರಾಗಿರುವ ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳಿಗೆ ಧನಸಹಾಯವೂ ಸೇರಿದಂತೆ ಎಲ್ಲ ಅಗತ್ಯ ನೆರವನ್ನು ನೀಡುವ ಮೂಲಕ ಮಳೆಬರಿಸುವ ನಿಜಕಾರ್ಯಕ್ಕೆ ಕೈಜೋಡಿಸಬೇಕು
- ಡಾ. ರಾಜೇಂದ್ರ ಬುರಡಿಕಟ್ಟಿ