Friday, April 30, 2021

 ತಟ್ಟೆಲೋಟ ಬಡಿತವೂ ತಜ್ಞವೈದ್ಯರ ಸಲಹೆಯೂ.......

(ಹುಚ್ಚಾಟ ಬಿಟ್ಟು ಎಚ್ಚರಾಗುವ ಪರಿ)

ಕಳೆದ ವರ್ಷದ ಯುಗಾದಿ ಹಬ್ಬದ ಹಿಂದಿನ ಎರಡು ಮೂರು ದಿನಗಳನ್ನು ನೆನಪಿಸಿಕಳ್ಳೋಣ. ಕೊರೋನಾ ಬಗ್ಗೆ ಸಾರ್ವಜನಿಕರಿಗಾಗಲೀ ನಮ್ಮನ್ನಾಳುವವರಿಗಾಗಲೀ ಸ್ಪಷ್ಟವಾದ ತಿಳಿವಳಿಕೆ ಇನ್ನೂ ಇರಲಿಲ್ಲ. ತಿಳಿವಳಿಕೆ ಇದ್ದ ತಜ್ಞವೈದ್ಯರಿದ್ದರಾದರೂ ಅವರ ಮಾತು ಸಲಹೆ ಕೇಳಿ ಮುಂದುವರೆಯಬೇಕು ಎಂಬ ವಿವೇಕವೂ ನಮ್ಮನಾಳುವವರಿಗೆ ಇದ್ದಂತಿರಲಿಲ್ಲ.

ದೇಶಕ್ಕೆ ದೇಶವೇ ಗಂಟೆ-ಜಾಗಟೆಗಳ ಜೊತೆಗೆ ತಟ್ಟೆ-ಲೋಟ, ಗಂಗಾಳ-ಚರಿಗೆ, ಕೈಗೆ ಏನು ಸಿಗುತ್ತೋ ಅದನ್ನು ಬಡಿಯುತ್ತಾ ಬೀದಿಬೀದಿಗಳಲ್ಲಿ ಕುಣಿದಾಡಿ ಕೊರೊನಾ ಓಡಿಸಲು ಹುಚ್ಚಾಟದಲ್ಲಿ ತೊಡಗಿ ಅಪಹಾಸ್ಯಕ್ಕೆ ಈಡಾದ ದಿನಗಳವು.

ಆಗ ನಮ್ಮ ನಾಯಕರು ಜನರಿಗೆ ಕೊಡುವ ಕರೆಗಳು ವ್ಯಾಪಕವಾಗಿ ಮಾಧ್ಯಮಗಳಲ್ಲಿ ಬರುತ್ತಿದ್ದವು. ಅವುಗಳಲ್ಲಿ ಒಂದು ಮಾತು, ಇಪ್ಪತ್ತೆರಡೋ ಇಪ್ಪತ್ತನಾಲ್ಕೋ ಗಂಟೆಗಳು "ಎಲ್ಲರೂ ಮನೆಯೊಳಗಿದ್ದು ಜನಾತಾ ಕರ್ಪ್ಯೂ ಆಚರಿಸಿದರೆ . ನಾಳೆಯಿಂದ ಕೊರೊನಾ ಭಯವೇ ನಮಗೆ ಇರುವುದಿಲ್ಲ. ನಾಳೆ ಇಷ್ಟೊತ್ತಿಗೆ ಕೊರೋನಾ ನಮ್ಮ ದೇಶದಲ್ಲಿ ಇರುವುದೇ ಇಲ್ಲ" ಎಂಬುದು.  ಸರಿ ಜನರೆಲ್ಲ ಜನನಾಯಕರ ಮಾತಿಗೆ ತಕ್ಕ ಗೌರವಕೊಟ್ಟು ಜನತಾ ಕರ್ಫ್ಯೂ ಆಚರಿದರು. ಆದರೆ ಈ ಮಾತನ್ನು ನಂಬಿ ಮರುದಿನ ಕೊರೋನಾವನ್ನು ದೇಶದಿಂದಲೇ ಹೊರಗೆ ಓಡಿಸಿದವರೆಂತೆ ಯಾವುದೇ ಭಯ ಆತಂಕಗಳಿಲ್ಲದೆ ಸಂಭ್ರಮದಿಂದ ಯುಗಾದಿ ಶಾಪಿಂಗ್ ಮಾಡತೊಡಗಿದರು!!

ದೇಶದ ಜನರಿಗೆ ದೊರೆತ ತಪ್ಪುಸಂದೇಶ ಮತ್ತು ಜನರ ಹುಚ್ಚಾಟದ ಈ ಸಂದರ್ಭದಲ್ಲಯೇ ಅಂತರರಾಷ್ಟ್ರೀಯ ಮಟ್ಟದ ಭಾರತದ ಕೆಲವೇ ತಜ್ಞವೈದ್ಯರಲ್ಲಿ ಒಬ್ಬರಾದ ಡಾ. ದೇವಿಪ್ರಸಾದ ಶೆಟ್ಟಿ ಅವರ ಚಿಕ್ಕ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಎಂಬಂತೆ ಪ್ರಸಾರವಾಯಿತು. ಆ ವಿಡಿಯೋದಲ್ಲಿ ದೇಶದ ಜನರ ಹುಚ್ಚಾಟವನ್ನು ಅದಕ್ಕೆ ಕಾರಣವಾದ ತಪ್ಪುಮಾರ್ಗದರ್ಶನವನ್ನೂ ಪರೋಕ್ಷವಾಗಿ ಟೀಕಿಸಿದ ಅವರು ಜನರು ಹೀಗೆ ಹುಚ್ಚಾಟದಲ್ಲಿ ತೊಡಗಿದರೆ ದೇಶ ಯಾವ ಸ್ಥಿತಿಗೆ ಹೋಗಬಹುದು ಎಂಬುದನ್ನು ಅತ್ಯಂತ ಸಮರ್ಪಕ ಸಾಕ್ಷಾಧಾರಗಳೊಂದಿಗೆ ಎಚ್ಚರಿಸಿದ್ದರು. ಅವರ ಈ ವಿಡಿಯೋ ವೈರಲ್ ಆದ ನಂತರ ಅದೆಷ್ಟೋ ಜನರಿಗೆ, ಜನನಾಯಕರಿಗೆ ಕೊರೋನಾದ ಭೀಕರತೆಯ ಅರಿವಾಗಿ ಹುಚ್ಚಾಟದ ಕ್ರಮಗಳು ತುಸು ಕಡಿಮೆಯಾಗಿ ಒಂದಿಷ್ಟು 'ಎಚ್ಚರದ ಕ್ರಮಗಳು' ಜಾರಿಗೆ ಬಂದವು.

ಕೊರೋನಾ ಎರಡನೆಯ ಅಲೆಯ ಜೊತೆಗೆ ಎರಡನೆಯ ಹಂತದ ಹುಚ್ಚಾಟಗಳೂ ಶುರುವಾಗಿವೆ. ಕಿವಿಗೋ, ಮೂಗಿಗೋ ನಿಂಬೆಹಣ್ಣನ್ನೂ ಹುಣಿಸಿಹಣ್ಣನ್ನೋ ಹಿಂಡಿಕೊಂಡರೆ ಕೊರಾನ ಬರಲ್ಲವೆಂದು ಯಾರಾದರೂ ಒಂದು ಸಂದೇಶವನ್ನು (ಇಂತಹ ಸಂದೇಶ ಹಾಕುವವರು ಬಹಳಷ್ಟುವೇಳೆ ಆ ವಿಷಯದಲ್ಲಿ ಪರಿಣಿತರಾಗಿರುವುದಿಲ್ಲ) ಹಾಕಿದರೆ ಅದನ್ನು ಹಿಂದೆಮುಂದೆ ನೋಡದೆ ನಮ್ಮ ವಾಟ್ಸಪ್ ವಿಶ್ವವಿದ್ಯಾಲಯದ ಪದವಿಧರರು ಅವುಗಳನ್ನು ತಮಗೆ ಗೊತ್ತಿರುವ ಎಲ್ಲರಿಗೂ ತಳ್ಳುತ್ತಿದ್ದಾರೆ. ಆ ಮೇಲೆ ಆ ರೀತಿ ಮಾಡಿ ಯಾರಾದರೂ ಸತ್ತರೆ ಅವರ ಫೋಟೋಗಳನ್ನೂ ಇವರು ಅದೇ ರೀತಿ ಹಿಂದಿನಿಂದ ನಮಗೆ ಕಳಿಸಿಕೊಡುತ್ತಾರೆ!!

ಅತ್ತ ಜವಾಬ್ದಾರಿಯಿಲ್ಲದ ವಿದ್ಯಾವಂತರ ಸ್ಥಿತಿ ಹೀಗಾದರೆ ಇತ್ತ ರಾಜಕೀಯ ನಾಯಕರ ಅಂಧಾಭಿಮಾನಿಗಳ ಸ್ಥಿತಿ ಇನ್ನೊಂದು ರೀತಿಯದ್ದು. ಸಾವಿನ ಮನೆಯಲ್ಲಿಯೂ ನಾಯಕಭಜನೆ ಮಾಡುವ, ದೇಶದ ಜನ ಎಷ್ಟುಸತ್ತರೂ ತಮ್ಮ ನಾಯಕನ ವರ್ಚಸ್ಸಿಗೆ ಮಾತ್ರ ಧಕ್ಕೆಯಾಗಬಾರದೆಂದು ಹಟಕ್ಕೆ ನಿಂತಿರುವ ಅಂಧಾಭಿಮಾನಿಗಳು ಈಗಲೂ ಆಮ್ಲಜನಕ ಸಿಗದೆಯೋ ಹಾಸಿಗೆ ಸಿಗದೆಯೋ ಸತ್ತ ರೋಗಿಗಳ ಸುದ್ಧಗಳೇನಾದರೂ ಒಂದಿಷ್ಟು ಹೆಚ್ಚು ಪ್ರಸಾರವಾದರೆ, "ಇದು ಸಂದರ್ಭದ ದುರುಪಯೋಗ ಮಾಡಿಕೊಂಡು ನೆಗಿಟಿವಿಟಿ ಕ್ರಿಯೇಟ್ ಮಾಡುತ್ತಿರುವ ದೇಶದ್ರೋಹಿಗಳ ಕೆಲಸ" ಎಂದೇ ಹೇಳುತ್ತಾರೆ. ಹಿಂದೆ ಎಪ್ಪತ್ತು ವರ್ಷ ಎಲ್ಲ ಸರಿಯಾಗಿಯೇ ಇತ್ತೇ? ಎಂದು ಕೇಳಲೂ ಅವರು ಹಿಂಜರಿಯುವುದಿಲ್ಲ. ಒಂದು ಸಲ ವ್ಯಕ್ತಿಪೂಜೆಗೆ ಇಳಿದರೆ ನಮ್ಮೆಲ್ಲರ ಸ್ಥಿತಿಯೂ ಹೀಗೆಯೇ ಆಗುವುದು. 

ಆದಾಗ್ಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಾವು ಬಹಳ ಸುಧಾರಿಸಿದ್ದೇವೆ ಎಂದೇ ಹೇಳಬೇಕು. ಈ ವರ್ಷ ನಾವು ಯಾರೂ ತಟ್ಟೆ ಲೋಟ ಬಡಿಯುವ ಮಾತಾಡದೆ ಲಸಿಕೆ ಔಷಧಿ ಇತ್ಯಾದಿಗಳ ಬಗ್ಗೆ ಮಾತನಾಡುತ್ತಿದ್ದೇವೆ. ಅಷ್ಟರ ಮಟ್ಟಿಗೆ ನಮಗೆಲ್ಲ ಹುಚ್ಚು ವಾಸಿಯಾಗಿದೆ ಎಂಬುದೇ ಸಮಾಧಾನದ ಸಂಗತಿ.

ಈಗಲೂ ನಮ್ಮನಾಳುವವರಿಗೆ 'ಧನ್ವಂತರಿ ಹೋಮ ಮಾಡಿಸಿ' 'ವಿಶೇಷ ಪೂಜೆ ಮಾಡಿಸಿ' ಎಂದು ತಲೆತಿಕ್ಕುವ ಧಾರ್ಮಿಕ ನಾಯಕರು ಇದ್ದರೂ ಅವರ ಮಾತಿನ ಮೇಲೆ ಅವರಿಗೂ ನಂಬಿಕೆ ಇದ್ದಂತಿಲ್ಲ! ಅವರ ದೇವರ ಶಕ್ತಿ ಯಾವ ಮಟ್ಟದ್ದು ಎಂಬುದು ಜನರಿಗೆ ಕಳೆದವರ್ಷ ಗೊತ್ತಾಗಿದ್ದು ಅವರಿಗು ಗೊತ್ತಾಗಿದೆ.

ರಾಜಕೀಯ ನಾಯಕರು ಹುಚ್ಚರಾದರೆ ಅವರನ್ನು ಬದಲಿಸಿ ಬೇರೆಯವರನ್ನು ನಾಯಕರನ್ನಾಗಿ ಮಾಡಿಕೊಳ್ಳಲು ಸಾಧ್ಯವಿದೆ. ಆದರೆ ಜನರೇ ಹುಚ್ಚರಾಗಿಬಿಟ್ಟರೆ ಎಚ್ಚರಾಗುವುದನ್ನು ಬಿಟ್ಟು ಬೇರೆ ಮಾರ್ಗಗಳೇ ಇರುವುದಿಲ್ಲ. ಹಾಗಾಗಿ ನಾವೆಲ್ಲ ಹುಚ್ಚರಾಗದೆ ಎಚ್ಚಾರಾಗೋಣ.

ಕೊರೋನಾ ನಮ್ಮನ್ನು ಇನ್ನೂ ಯಾವಹಂತಕ್ಕೆ ಒಯ್ಯಬಹುದು ಎಂಬುದನ್ನು ಅದೇ ದೇವಿ ಪ್ರಸಾದ ಶೆಟ್ಟಿ ಮತ್ತೊಮ್ಮೆ ಎಚ್ಚರಿಸಿದ್ದಾರೆ. ನಿಯಂತ್ರಣಕ್ಕೆ ಕೆಲವು ಉಪಯುಕ್ತ ಸಲಹೆಗಳನ್ನೂ ನೀಡಿದ್ದಾರೆ. ಯಾರುಯಾರದೋ ಮಾತು ಕೇಳಿ ತಾವೂ ಹಾಳಾಗಿ ದೇಶವನ್ನೂ ಹಾಳುಮಾಡುವುದಕ್ಕಿಂತ ಇಂತಹ ತಜ್ಞ ವೈದ್ಯರ ಮಾತನ್ನು ಕೇಳುವ ವಿವೇಕ ಸಂಬಂಧಪಟ್ಟವರಿಗೆ ಬರಲಿ.

ರಾಬು

30-04-2021

Sunday, April 25, 2021

 



 



ನಿನ್ನ ಹತ್ತಿರ ನಾನು ಬರುವುದನು ಬಿಡಬಹುದು

ನೀನು ಹೇಳಿದ ಹಾಗೇ ಎಂದೆಂದಿಗು

ಆದರೆ ಅದು ಹೇಗೆ ತಡೆಯಬಹುದು ಹೇಳು

ನನ್ನ ಮನಸು ನಿನ್ನ ಕಡೆ ಬರದ ಹಾಗೆ

 

ನೀನು ಕೂಡ ನನ್ನ ಕಣ್ಣೆತ್ತಿ ನೋಡದೆಯೆ

ಇರಬಹುದು ಕೊಟ್ಟಿರುವ ಮಾತಿನಂತೆ

ಆದರೆ ಅದು ಹೇಗೆ ತಡೆಯುವೆಯೊ ಗೊತ್ತಿಲ್ಲ

ನನ್ನ ಬಿಂಬವು ಕಣ್ಣೊಳಗೆ ನುಗ್ಗಿಬರುವುದ

 

ಮನೆಗೆ ಹಾಕಿದ ಹಾಗೆ ಹಾಕಬಹುದೇ ಹೇಳು

ಕದಮುಚ್ಚಿ ಬೀಗವನು ಮನಸುಗಳಿಗೆ

ನೆನಪು ಬಾರದ ಹಾಗೆ ಕನಸು ಬೀಳದ ಹಾಗೆ

ಕಟ್ಟಿಹಾಕಲು ಬಹುದೆ ಅವುಗಳನ್ನು


ಏನೆಲ್ಲ ಒಪ್ಪಂದ ಮಾಡಿಕೊಳ್ಳಲು ಬಹುದು

ಅದರಂತೆ ನಾವುಗಳು ನಡೆಯಬಹುದು

ನಮ್ಮ ಮನಸ್ಸು ಹೃದಯಗಳು ನಮ್ಮ ಆಳುಗಳಲ್ಲ

ಅವು ನಮ್ಮ ಮಾತುಗಳ ಕೇಳುವುದೂ ಇಲ್ಲ

ಈ ಸತ್ಯ ಅರಿಯುವುದು ಒಳಿತಲ್ಲವೆ?

****

ರಾಜೇಂದ್ರ ಬುರಡಿಕಟ್ಟಿ

Thursday, April 22, 2021

 

“Not Mandatory to Read or React !!” (ಓದುವುದು ಪ್ರತಿಕ್ರಿಯಿಸುವುದು ಕಡ್ಡಾಯವಲ್ಲ!!!!)

ಬಹಳಷ್ಟು ಜನ ಮೆಚ್ಚದಿರುವ, ಆದರೂ ನಾನು ಜೋಪಾನವಾಗಿ ಕಾಯ್ದಿಟ್ಟುಕೊಂಡಿರುವ  ನನ್ನ ಮೇಲ್ಸಾಲಿನ ಹತ್ತು (Top-Ten) ಗುಣಗಳು!! 

1.       ಪ್ರಾಮಾಣಿಕ ದುಡಿಮೆಯ ಶ್ರಮದಿಂದ ಬರುವ ಆದಾಯದ ಹೊರತು ಅಪಮಾರ್ಗದಿಂದ   ಬರುವ ಯಾವುದೇ ನಗದು, ವಸ್ತು ಅಥವಾ ಇನ್ನಾವುದೇ ಬಗೆಯ ಆದಾಯಗಳನ್ನು ಸ್ಪಷ್ಟವಾಗಿ ನಿರಾಕರಿಸುವ ಗುಣವಿದೆ. ‘ಪುಗಸಟ್ಟೆ ಬರುವುದನ್ನು ಯಾಕೆ ಬಿಡಬೇಕು’ ಎಂಬುದಕ್ಕೆ ವಿರುದ್ಧವಾಗಿ ‘ಪುಗಸಟ್ಟೆ ಬರುವುದನ್ನು ಯಾಕೆ ತೆಗೆದುಕೊಳ್ಳಬೇಕು’ ಎಂಬ ಸ್ವಾಭಿಮಾನದ ಧಿಮಾಕು ನನ್ನದು!

2.       ನನಗೆ ಗೊತ್ತಿಲ್ಲದ ವಿಷಯದಲ್ಲಿ ಚಿಕ್ಕಮಗುವಿನಿಂದ ಬುದ್ದಿಹೇಳಿಸಿಕೊಳ್ಳಲೂ ನನಗೆ ನಾಚಿಕೆಯಾಗುವುದಿಲ್ಲ; ಅದು ಅವಮಾನ ಅನ್ನಿಸುವುದಿಲ್ಲ. ಆದರೆ ನನಗೆ ಗೊತ್ತಿರುವ ವಿಷಯದಲ್ಲಿ ತಪ್ಪುಮಾಡಿ ಬೇರೆಯವರಿಂದ ಬುದ್ದಿಹೇಳಿಸಿಕೊಳ್ಳಲು ತುಂಬಾ ನಾಚಿಕೆಯಾಗುತ್ತದೆ ಮತ್ತು ತುಂಬಾ ಮುಜುಗರ ಮತ್ತು ಅವಮಾನಗೊಂಡಂತೆ ಆಗುತ್ತದೆ.

3.       ನನಗೆ ಒಳಗೊಂದು ಹೊರಗೊಂದು ವ್ಯಕ್ತಿತ್ವವಿಲ್ಲ. ನನಗೆ ಅನ್ನಿಸಿದ್ದನ್ನು ಕೇಳುವವರಿಗೆ ತುಸು ನೋವಾದರೂ ನೇರವಾಗಿ ಹೇಳಿಬಿಡುವ ಗುಣವಿದೆ. ಇದು ಎಲ್ಲರ ಆರೋಗ್ಯಕ್ಕೂ ಒಳ್ಳೆಯದು ಎಂಬುದು ನನ್ನ ನಿಲುವು. ಇದರಿಂದ ಮಾನವ ಸಂಬಂಧಗಳ ನಡುವೆ ಸಂಶಯ, ಅನುಮಾನಗಳಿಗೆ ಅವಕಾಶ ಇರುವುದಿಲ್ಲವಾಗಿ ಕೇಳುವವರಿಗೆ ಆ ಕ್ಷಣದಲ್ಲಿ ತುಸು ಬೇಸರವಾದರೂ ಧೀರ್ಘಾವಧಿಯಲ್ಲಿ ಇದು ಒಳ್ಳೆಯ ಪರಿಣಾಮವನ್ನೇ ಬೀರುತ್ತದೆ. ಹೀಗಾಗಿ ಇತರರು  ತಮ್ಮ ಬಗ್ಗೆ ನನ್ನ ಭಾವನೆಯನ್ನು ತಿಳಿದುಕೊಳ್ಳಲು ಕಷ್ಟಪಡಬೇಕಾಗಿಲ್ಲ.

4.       ನಾನೊಬ್ಬ ನಂಬಿಗಸ್ಥ ಪ್ರೇಮಿ. (Faithful Lover). ಒಂದು ಸಲ ನನಗೆ ಯಾರ ಮೇಲೆಯಾದರೂ ಪ್ರೀತಿ ಹುಟ್ಟಿತು ಎಂದರೆ  ಅವರ ಮೇಲೆ ಕೆಲವು ಸಂದರ್ಭಗಳಲ್ಲಿ ತಾತ್ಕಾಲಿಕ ಸಿಟ್ಟು, ರೋಷ ಹುಟ್ಟಬಹುದೇ ಹೊರತು ಮತ್ತೆಂದಿಗೂ ದ್ವೇಷ  ಹುಟ್ಟುವುದಿಲ್ಲ; ಅವರು ನನ್ನನ್ನು ಪ್ರೀತಿಸಲಿ; ಬಿಡಲಿ; ನಿರಾಕರಿಸಲಿ; ಅಷ್ಟೇ ಏಕೆ ದ್ವೇಷಿಸಿದರೂ ಕೂಡ!

5.      
ನನಗೆ ಯಾರಿಗೂ ಮೋಸ-ವಂಚನೆ ಮಾಡುವ  ಗುಣವಿಲ್ಲ. ಯಾರಿಗೂ ತೊಂದರೆ ಕೊಡದಂತೆ ಆದಷ್ಟೂ ಬೇರೆಯವರಿಗೆ ಸಹಾಯಮಾಡಿ ಬದುಕುವ ಗುಣವಿದೆ.

6.       ಬೇರೆಯವರ ಸಹಾಯ ಮತ್ತು ಸೇವೆಗಳನ್ನು ನನ್ನ ಅಸಹಾಯಕ ಸ್ಥಿತಿಯಲ್ಲಿ ಮತ್ತು ತೀರಾ  ಅನಿವಾರ್ಯ ಎನಿಸುವ  ಸಂದರ್ಭಗಳಲ್ಲಿ ಮಾತ್ರ ಅದೂ ಎಷ್ಟುಸಾಧ್ಯವೋ ಅಷ್ಟೂ ಕಡಿಮೆ ಮಟ್ಟದಲ್ಲಿ ಬಳಸಿಕೊಳ್ಳುವ ಗುಣವಿದೆ. ಮಾಡುವವರು ಸಿಕ್ಕರೆ ಏನೆಲ್ಲ ಸೇವೆ ಮಾಡಿಸಿಕೊಳ್ಳುವ ಗುಣವಿಲ್ಲ.

7.       ಹಾಲಲ್ಲಿ ಜೇನಾಗಿ, ನೀರಲ್ಲಿ ಮೀನಾಗಿ ಹಾಯಾಗಿರುವ ಗುಣ ನನಗಿಲ್ಲ. ಅಂದರೆ ಪರಿಸ್ಥಿತಿಗೆ ತಕ್ಕಂತೆ ಒಳ್ಳೆಯವರ ಜೊತೆಗೆ ಒಳ್ಳೆಯವನಾಗಿ, ಕೆಟ್ಟವರ ಜೊತೆಗೆ ಕೆಟ್ಟವನಾಗಿ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಸಮಯಸಾಧಕತನವಿಲ್ಲ!

ಉದ್ದೇಶಪೂರ್ವಕವಾಗಿ ಅನ್ಯಾಯ, ಪಾಪಕಾರ್ಯಗಳಲ್ಲಿ ಪಾಲ್ಗೋಳ್ಳುವುದೇ ಇಲ್ಲ. ಇಂತಹ ಚಟುವಟಿಕೆಗಳು ಕಂಡರೆ ಸುಮ್ಮನೆ, ‘ಏನಾದರೂ ಮಾಡಿಕೊಳ್ಳಲಿ ನನಗೇನು’ ಎಂದು ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ. ಅನ್ಯಾಯ ಮಾಡುವವರ ಜೊತೆಗೆ ಅದನ್ನು ಕಂಡೂ ಸುಮ್ಮನಿರುವವರೂ ಆ ಕಾರ್ಯದ ಪಾಲುದಾರರೇ ಎನ್ನುವುದು ನನ್ನ ಅಭಿಪ್ರಾಯ. ಹಾಗಾಗಿ ಇಂತಹ ಘಟನೆಗಳು ನನಗೆ ಕಂಡುಬಂದಾಗೆಲ್ಲ ಮೊದಲ ಹಂತದಲ್ಲಿ ಅವನ್ನು ಸರಿಪಡಿಸಲು ನನ್ನ ಇತಿಮಿತಿಗಳಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ  ಮಾಡುತ್ತೇನೆ. ಆಗದಿದ್ದಾಗ ಅನಿವಾರ್ಯವಾಗಿ ಅಂತಹ ಚಟುವಟಿಕೆಗಳಿಂದ ಅದನ್ನು ಮಾಡುವವರಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುತ್ತೇನೆ.

8.       ತಪ್ಪುಮಾಡುವವರ ಬಗ್ಗೆ ನನಗೆ ಸಿಟ್ಟು ಬರುತ್ತದೆಯೇ ಹೊರತು ಅವರ ಬಗ್ಗೆ ದ್ವೇಷಹುಟ್ಟುವುದಿಲ್ಲ. ತಪ್ಪುಮಾಡುವವರು ಅಜ್ಞಾನದಿಂದ ಮಾಡುತ್ತಾರೆ. ಅಜ್ಞಾನಕ್ಕೆಶಿಕ್ಷಣಪರಿಹಾರವೇ ಹೊರತುಶಿಕ್ಷೆಯಲ್ಲವೆಂಬುದನ್ನು ನಾನು  ಅರ್ಥಮಾಡಿಕೊಂಡಿದ್ದೇನೆ. ಇನ್ನು ನೂರು ವರ್ಷಕ್ಕೆ ಈ ಸಮಾಜ ಸರಿಯಾಗುವುದಾದರೂ ಅದಕ್ಕೆ ಇರುವ ಏಕೈಕ ದಾರಿ ಎಂದರೆ ಶಿಕ್ಷಣ! ಹಾಗಾಗಿ ಯಾರು ಕೆಟ್ಟರೂ ಶಿಕ್ಷಕರಂತೂ ಕೆಡಲೇಬಾರದು ಎಂಬುದು ನನ್ನ ಅಭಿಪ್ರಾಯ. ಹೀಗಾಗಿ ಶಿಕ್ಷಕರು ಮಾಡುವ ಸಣ್ಣತಪ್ಪುಗಳೂ ನನಗೆ ಬಹಳ ದೊಡ್ಡವಾಗಿ ಕಾಣುತ್ತವೆ!! ಏಕೆಂದರೆ ಈ ಸಮಾಜ ಒಂದು ಬಸ್ ಇದ್ದಂತೆ. ಬಸ್ಸಿನಲ್ಲಿ 49 ಜನ ನಿದ್ದೆಮಾಡಿದರೂ ನಡೆಯುತ್ತದೆ. ಆದರೆ ಒಬ್ಬ ಮಾತ್ರ ನಿದ್ದೆ ಮಾಡಲೇ ಕೂಡದು. ಅವನೇ ಚಾಲಕ.  ಅವನು ಒಂದು ಕ್ಷಣ ಕಣ್ಣುಮುಚ್ಚಿದರೆ ಉಳಿದ 49 ಜನ ಶಾಶ್ವತವಾಗಿ ಕಣ್ಣುಮುಚ್ಚಬೇಕಾಗುತ್ತದೆ! ಸಮಾಜ ಎಂಬ ಬಸ್ಸಿನ ಚಾಲಕ ಸ್ಥಾನದಲ್ಲಿ ಕುಳಿತವರೇ ಶಿಕ್ಷಕರು ಅದಕ್ಕಾಗಿ ಈ ಕಾಳಜಿ ಅಷ್ಟೆ.

9.       ದೇವರು ಧರ್ಮ ಇಂಥವುಗಳ ಬಗ್ಗೆ ನಂಬಿಕೆ  ವಿಶ್ವಾಸಗಳಿಲ್ಲ;  ಆದರೆ ಅವನ್ನು ಪ್ರಾಮಾಣಿಕವಾಗಿ ನಂಬಿಕೊಂಡವರ ಬಗ್ಗೆ ದ್ವೇಷವಿಲ್ಲ. ಆದರೆ ಅವುಗಳನ್ನು ಜನರಲ್ಲಿ ಮೌಢ್ಯಬಿತ್ತಲು, ಜನರನ್ನು ಜಾತಿ-ಧರ್ಮ-ಜನಾಂಗಗಳಾಗಿ ವಿಭಜಿಸಿ ಅವರಲ್ಲಿ ದ್ವೇಷಾಸೂಯೆಗಳನ್ನು ಬಿತ್ತಲು ಬಳಸಿಕೊಳ್ಳುವವರ ಬಗ್ಗೆ ನನಗೆ ಸಾತ್ವಿಕ ಸಿಟ್ಟಿದೆ. ಅದು ಸಹಜವಾಗಿ ನನ್ನ ಬರೆಹ-ಭಾಷಣಗಳಲ್ಲಿ ಎದ್ದು ಕಾಣುವಂತಿರುತ್ತದೆ.

10.  


ಮನುಷ್ಯರು, ಮನುಷ್ಯತ್ವ ಮಾನವೀಯತೆ ಇವುಗಳ ಬಗ್ಗೆ ನನಗೆ ಬಹಳಷ್ಟು ವಿಶ್ವಾಸವಿದೆ.  ಹೀಗಾಗಿ ನನ್ನ ಎದುರಿಗೆ ಬರುವ ಮನುಷ್ಯನೊಬ್ಬ ನನಗೆ ಹಿಂದೂ ಆಗಿ ಮುಸಲ್ಮಾನನಾಗಿ ಕ್ರೈಸ್ತನಾಗಿ ಇನ್ನೇನೋ ಆಗಿ ಹೋಳು ಹೋಳಾಗಿ ಒಡೆದು ಕಾಣುವುದಿಲ್ಲ. ಅವನು ಒಬ್ಬ ಮನುಷ್ಯನಾಗಿಯೇ ನನಗೆ ಕಾಣುತ್ತಾನೆ. ಮನುಷ್ಯರನ್ನು ಜಾತಿ-ಮತ-ಜನಾಂಗಗಳ ಆಧಾರದ ಮೇಲೆಒಳ್ಳೆಯವರು’ಕೆಟ್ಟವರು’ ಎಂದು ಪರಿಗಣಿಸುವ ಗುಣನನಗೆ ಇಲ್ಲವೇ ಇಲ್ಲ. ಪ್ರಪಂಚದ ಎಲ್ಲ ಜನರೂ ಜಾತಿ-ಮತ-ಲಿಂಗ-ಪ್ರದೇಶ ಇವುಗಳ ಕೆಸರುಗುಂಡಿಯಲ್ಲಿ ಬಿದ್ದು ಒದ್ದಾಡುತ್ತಿರುವ ಬಗ್ಗೆ ಮರುಕವಿದ್ದು ಅವರೆಲ್ಲರೂ ಇವುಗಳ ಬಂಧನಗಳಿಂದ ಹೊರಬಂದು ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಸುಖ-ಸಂತೋಷ ಮತ್ತು ನೆಮ್ಮದಿಗಳಿಂದ ಬದುಕಬೇಂಬ ಅಪೇಕ್ಷೆಯಿದ್ದು ಬಗ್ಗೆ ನನ್ನ ಮಿತಿಯಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುವ ಗುಣವಿದೆ.

*****

(ರಾಜೇಂದ್ರ ಬುರಡಿಕಟ್ಟಿ)

22-04-2021

*****

(ಇದನ್ನು ಓದುವುದಾಗಲೀ ಇದಕ್ಕೆ ಪ್ರತಿಕ್ರಿಯಿಸುವುದಾಗಲೀ ಕಡ್ಡಾಯವಲ್ಲ. ಆದರೆ ಪುರಸೊತ್ತು ಮತ್ತು ಇಂಟ್ರೆಸ್ಟು ಇದ್ದವರು ಪ್ರತಿಕ್ರಿಯಿಸಬಹುದು. ಹಿಮ್ಮಾಹಿತಿಯಾಗಿ ಬರುವ ಎಲ್ಲ ಅಭಿಪ್ರಾಯಗಳನ್ನು ವಿಶೇಷವಾಗಿ ಭಿನ್ನಾಭಿಪ್ರಾಯಗಳನ್ನು ಸಕಲ ಮರ್ಯಾದೆಯಿಂದ ಸ್ವಾಗತ ಮಾಡಲಾಗುವುದು!!ರಾಬು)

Thursday, April 8, 2021

 

ಎಡವಟ್ಟು ಮದುವೆಗೆ ಇಪ್ಪತ್ಮೂರು ವರ್ಷ

(ಅಸಂಪ್ರದಾಯಿಕ ಮದುವೆಯೊಂದರ ಅನುಭವ ಕಥನ)

ನನ್ನ ಕಾಲೇಜು ದಿನಗಳ ಆರಂಭದಲ್ಲಿ ನಾನು ಲೌ ಮಾಡಿ ಮದುವೆ ಆಗುವುದನ್ನು ವಿರೋಧಿಸುತ್ತಿದ್ದೆ. ವಿವೇಕಾನಂದರನ್ನು ಬಹಳಷ್ಟು ಹಚ್ಚಿಕೊಂಡಿದ್ದ, ಹಾಗೇ ದೇವರು ಧರ್ಮ, ಆಧ್ಯಾತ್ಮ ಇಂಥವುಗಳಲ್ಲಿ ಮುಳುಗಿಹೋಗಿದ್ದ ನಾನು ಸನ್ಯಾಸಿಯಾಗಬೇಕೋ ಸಂಸಾರಿಯಾಗಬೇಕೋ ಎಂಬುದನ್ನು ತೀರ್ಮಾನಿಸಲು ಸಾಕಷ್ಟು ಕಾಲ ಒದ್ದಾಡಿದ್ದೆ.  ಕನ್ನಡದ ಹಿರಿಯ ಕವಿ ಕುವೆಂಪು ಕೂಡ ಹೀಗೆ ಸನ್ಯಾಸಿಯಾಗಬೇಕೋ ಸಂಸಾರಿಯಾಗಬೇಕೋ ಎಂದು ತಮ್ಮ ತಾರುಣ್ಯದ ದಿನಗಳಲ್ಲಿ ಸ್ಪಷ್ಟವಾಗಿ ನಿರ್ಧರಿಸಲು ಆಗದೆ ಒದ್ದಾಡಿದ್ದರು. ತಮ್ಮ ಮನಸ್ಸಿನ ತಾಕಲಾಟವನ್ನು ಒಂದು ಪದ್ಯದಲ್ಲಿ, ‘ಸನ್ಯಾಸವೊಂದು ಕಡೆ ಕೈಬೀಸಿ ಕರೆಯುತಿದೆ / ಸಂಸಾರವೊಂದು ಕಡೆ ಮೈಬೀಸಿ ಸೆಳೆಯುತಿದೆಎಂದು ತೋಡಿಕೊಂಡಿದ್ದಾರೆ.

ಕುವೆಂಪು ಸನ್ಯಾಸ ಮತ್ತು ಸಂಸಾರಗಳ ಎಳೆತವನ್ನು ದಾಖಲಿಸುವಾಗ ಬಳಸಿದ ಪದಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಸನ್ಯಾಸಕ್ಕೆ ಕೊಟ್ಟ ಗೌರವವನ್ನು ಸಂಸಾರಕ್ಕೆ ಕೊಟ್ಟಂತೆ ಕಾಣುವುದಿಲ್ಲ. ಏಕೆಂದರೆ ಸನ್ಯಾಸಕ್ಕೆಕೈಬೀಸಿ ಕರೆಯುತಿದೆಎಂದರೆ ಸಂಸಾರಕ್ಕೆ ಮೈಬೀಸಿ ಸೆಳೆಯುತಿದೆಎಂದಿದ್ದಾರೆ. ನಮ್ಮಲ್ಲಿ  ಕೈಬೀಸಿ ಕರೆಯುವುದುಮತ್ತುಮೈಬೀಸಿ ಸೆಳೆಯುವುದುಎರಡೂ ಒಂದೇ ಮಟ್ಟದ ಗೌರವಕ್ಕೆ ಅರ್ಹವಾದ ನಡೆವಳಿಕೆಗಳಲ್ಲ. ಕೈಬೀಸಿ ಕರೆಯುವುದು ಹೆಚ್ಚುಗೌರವದ ನಡೆವಳಿಕೆ. ಮೈಬೀಸಿ ಸೆಳೆಯುವುದು  ಕಡಿಮೆ ಗೌರವದ ಅಥವಾ ಗೌರವರಹಿತವಾದ ಅಶ್ಲೀಲತೆಯ (ವೇಶ್ಯಾನಡೆಯನ್ನು ನೆನಪಿಸುವ) ನಡೆವಳಿಕೆ!! ಕೊನೆಗೆ ಅವರು ಯಾವುದನ್ನೂ ನಗಣ್ಯವೆಂದು ಭಾವಿಸಿದ್ದರೋ ಅದೇ ಸಂಸಾರಕ್ಕೆ ಬಂದರು; ಮಾತು ಬೇರೆ. ಆದರೆ ಅವರು ಡೋಲಾಯಮಾನ ಸ್ಥಿತಿಯಿಂದ ಹೊರಬಂದು ಸಂಸಾರಿಯಾಗಲು ನಿರ್ಧರಿಸುವುದರೊಳಗೇ ಅವರಿಗೆ ಕಾಲಕ್ಕೆಮದುವೆ ವಯಸ್ಸು ಇನ್ನೇನು ಮೀರಿತುಎನ್ನುವಷ್ಟು ತಡವಾಗಿಬಿಟ್ಟಿತ್ತು!

ಯೂ ಟರ್ನು ಮತ್ತು ಖಾಲೀ ರೋಡು

ಅವರಿಗೆ ಹೋಲಿಸಿದರೆ ನಾನೇ ಅದೃಷ್ಟವಂತ ಅಂದುಕೊಳ್ಳಬೇಕು! ಏಕೆಂದರೆ ನನ್ನ ಡೋಲಾಯಮಾನ ಸ್ಥಿತಿ ನನ್ನನ್ನು ಅಷ್ಟುವರ್ಷ ಕಾಡಲಿಲ್ಲ. ಅಥವಾ ಕಾಡಲು ನಾನು ಬಿಡಲಿಲ್ಲ. ನನ್ನ ಇಪ್ಪತ್ತೆಂಟನೆಯ ವಯಸ್ಸಿಗೇ ಒಂದು ತೀರ್ಮಾನಕ್ಕೆ ನಾನು ಬಂದೆ. ಹಾಗಾಗಿ ಧರ್ಮ, ಅಧ್ಯಾತ್ಮ, ದೇವರು ಈ ಪುಸ್ತಕಗಳ ಓದು ನಿಲ್ಲಿಸಿ, ಪ್ರೀತಿ, ಪ್ರೇಮ, ಸಂಸಾರ, ಗ್ರಹಸ್ಥ ಜೀವನ ಇವುಗಳ ಜ್ಞಾನ ನೀಡುವ ಪುಸ್ತಕಗಳನ್ನು ಓದತೊಡಗಿದೆ. ಓದಿದ್ದು ಎಷ್ಟು ಅರ್ಥವಾಗಿದೆ ಎನ್ನುವುದನ್ನು ಗ್ಯಾರಂಟಿಪಡಿಸಿಕೊಳ್ಳುವುದು ಹೇಗೆ? ಅದಕ್ಕಾಗಿ ಆಗಿನ ಮದ್ರಾಸ್ (ಈಗಿನ ಚೆನ್ನೈ)ನ ಸಂಸ್ಥೆಯೊಂದರಲ್ಲಿ ‘ಕುಟುಂಬ ಜೀವನದಲ್ಲಿ ಸ್ನಾತಕೋತ್ತರ ಡಿಪ್ಲೊಮೋ’ ಒಂದಕ್ಕೆ ಹೆಸರು ನೋಂದಾಯಿಸಿ ಗಂಭೀರವಾಗಿ ಓದಿ ಪರೀಕ್ಷೆಯನ್ನೂ ಬರೆದೆ. ಪ್ರಥಮದರ್ಜೆಯಲ್ಲಿ ಪಾಸೂ ಆದೆ. ಆಗ ಧೈರ್ಯ ಬಂತು.  ಅದರಲ್ಲಿ ನಾನು  ಅಭ್ಯಾಸ ಮಾಡಿದ ಆರು ವಿಷಯಗಳು ಹೀಗೆ ಇದ್ದವು: 1) ಸೆಕ್ಸ್ ಎಜ್ಯೂಕೇಶನ್ 2) ಮ್ಯಾರೇಜ್ ಪ್ರಾಬ್ಲಮ್ಸ್ 3) ಸೆಕ್ಸ್ ರಿಲೇಟೆಡ್ ಪ್ರಾಬ್ಲಮ್ಸ್ 4) ಮ್ಯಾರೇಜ್ ಕೌನ್ಸೆಲಿಂಗ್ 5) ಚೈಲ್ಡ್ ಕೇರ್ ಅಂಡ್ ಡೆವೆಲೆಪ್ಮೆಂಟ್ 6) ಫುಡ್ ಸೈನ್ಸ್. ಇಂಥದ್ದೊಂದು ಕೋರ್ಸ್ ಇರುತ್ತದೆಯಾ ಎಂದು ಹೌಹಾರುವವರೂ ಉಂಟು. ಆದರೆ ಅದು ಇದ್ದದ್ದೂ ಹೌದು ನಾನು ಓದಿ ಪ್ರಥಮದರ್ಜೆಯಲ್ಲಿ ಪಾಸಾದದ್ದೂ ಹೌದು!!


ಅಂತೂ ಸನ್ಯಾಸ ಬ್ರಹ್ಮಚರ್ಯಕ್ಕೆ ಗುಡ್ ಬೈ ಹೇಳಿ ಸಂಸಾರಿ-ಗೃಹಸ್ಥನಾಗಲು ತೀರ್ಮಾನಿಸಿದೆ. ಈ ತೀರ್ಮಾನಕ್ಕೆ ಬರುವಲ್ಲಿ ನನಗೆ ನನ್ನ ವೈಯಕ್ತಿಕ ಬದುಕಿನ ಜೊತೆ ಕೌಟಂಬಿಕ ಮತ್ತು ಸಾಮಾಜಿಕ ಕಟ್ಟುಗಳೂ ಪ್ರಭಾವ ಬೀರಿದ್ದವು. ಬ್ರಹ್ಮಚರ್ಯ ಮತ್ತು ಸನ್ಯಾಸಗಳೇ ನಿಜವಾದ ಜೀವನದ ಗುರಿ; ಅದೇ ಶ್ರೇಷ್ಠವಾದದ್ದು ಎಂದು ಹುಂಬನಂತೆ ನಂಬಿಕೊಂಡಿದ್ದ ನನ್ನ ನಂಬಿಕೆಗೆವೀರ್ಯವಂತಿಕೆಯೇ ಜೀವನ; ವೀರ್ಯನಾಶವೇ ಮೃತ್ಯುಸೇರಿದಂತೆವೀರ್ಯನಾಶ ಪಾಪಕೃತ್ಯಎಂದು ಹೇಳುವ ಕೆಲವು ಪುಸ್ತಕಗಳನ್ನು ಓದಿದ್ದು ಕಾರಣವಿದ್ದೀತು. ಹೀಗಾಗಿ ಕಾಲೇಜಿನಲ್ಲಿ ನನ್ನನ್ನು ಲೌ ಮಾಡಲು ಬಂದ ಹುಡುಗಿಯರನ್ನು ಮೊದಮೊದಲುನೀವು ಕಾಲೇಜಿಗೆ ಬರೋದು ಇದ್ಕನಾ? ‘ನಿಮ್ಮಪ್ಪ ಅಮ್ಮ ನಿಮ್ಮನ್ನು ಕಾಲೇಜಿಗೆ ಕಳ್ಷಿದ್ದು ಇದ್ಕನಾ?” ಎಂದು ಬಾಯಿಗೆ ಬಂದಂತೆ ಬಯ್ದು, ಆಮೇಲೆ ಮಹಾತತ್ವಜ್ಞಾನಿಯಂತೆ ತಿಳಿವಳಿಕೆ ಹೇಳಿ ವಾಪಸ್ಸು ಕಳಿಸುತ್ತಿದ್ದೆ!!

ಆದರೆ ಕೆಲವು ವರ್ಷಗಳ ನಂತರ ನನ್ನ ಆಲೋಚನೆ ವಿರುದ್ಧ ದಿಕ್ಕಿಗೆ ತಿರುಗಿತು. ಲೌ ಮಾಡಿ ಮದುವೆಯಾಗುವುದೇ ನಿಜವಾದ ಜೀವನ. ಸಂಪ್ರದಾಯಿಕ ಮದುವೆ ಆಗುವವರೆಲ್ಲ ಅಜ್ಜನೆಟ್ಟ ಆಲದ ಮರಕ್ಕೆ ನೇಣುಹಾಕಿಕೊಳ್ಳುವ ಸ್ವಂತಿಕೆ ಇಲ್ಲದ ಪೆದ್ದುಗಳುಎನ್ನುವ ಹಂತಕ್ಕೆ ನಾನು ಬಂದೆ. ಹಾಗಾಗಿ ನಾನೂ ಲೌ ಮಾಡಿ ಮದುವೆಯಾಗಬೇಕೆಂದು ಹಂತದಲ್ಲಿ ಆಸೆಪಟ್ಟೆ. ಆದರೆ ಎಷ್ಟು ಪ್ರಯತ್ನಿಸಿದರೂ ಈಗ ಒಬ್ಬ ಹುಡುಗಿಯೂ ನನ್ನಕಡೆ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಮೊದಲು ನನ್ನನ್ನು ಇಷ್ಟಪಟ್ಟು ಲೌಮಾಡಲು ಬಂದು ನನ್ನಿಂದ ಬಯ್ಸಿಕೊಂಡೋ, ಬುದ್ಧಿವಾದ ಹೇಳಿಸಿಕೊಂಡೋ ಹೋದ ಹುಡುಗಿಯರೆಲ್ಲ ಈಗ ತಮ್ಮ ತಮ್ಮ ದಾರಿಯನ್ನು ನೋಡಿಕೊಂಡು ಯಾರುಯಾರುದೋ ಹಿಂದೆ ತಿರುಗಾಡುತ್ತಿದ್ದರು. ಹೊಸಹುಡುಗಿಯರಿಗೂ ಇವರೆಲ್ಲ ಕಿವಿಚುಚ್ಚಿದ್ದರೆಂದು ಕಾಣುತ್ತದೆ. ಅವ್ರೂ ಕೂಡ ನನ್ನನ್ನು ಕಂಡರೆ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ತುಸು ದೂರದಲ್ಲಿಯೇ ಓಡಾಡುತ್ತಿದ್ದರು. ಇದು ಸ್ವಯಂಕೃತ ಅಂದರೆ ನಾನೇ ಮಾಡಿಕೊಂಡ ಅಪರಾಧವಾದದ್ದರಿಂದ ಅದರ ಕೆಟ್ಟಪರಿಣಾಮಗಳನ್ನು ಯಾರ ಎದುರೂ ಹೇಳಿಕೊಳ್ಳದೆ ಬಾಯಿಮುಚ್ಚಿಕೊಂಡು ಅನುಭವಿಸಬೇಕಾದದ್ದು ನನಗೆ ಅನಿವಾರ್ಯವಾಯಿತು. ಮತ್ತೆ ನನ್ನ ಬದುಕಿನಲ್ಲಿ ನನ್ನನ್ನು ಇಷ್ಟಪಡುವವರನ್ನು ಕಾಣಲು ನಾನು ಎಷ್ಟೋ ವರ್ಷಗಳು ಕಾಯಬೇಕಾಯಿತು ಕೂಡ! ನಾನು ಯೂಟರ್ನ್ ತೆಗೆದುಕೊಂಡರೂ ಖಾಲೀ ರೋಡಿನಲ್ಲಿ ಒಬ್ಬನೇ ನಡೆಯಬೇಕಾಯಿತು!!

ದಿನಕ್ಕೆ ಏಳೆಂಟು ಹುಡುಗಿಯರನ್ನು ನೋಡಿದ್ದು!

ಲೌ ಮಾಡಿ ಮದುವೆಯಾಗುವುದು ನನ್ನ ಕೈಯಲ್ಲಿ ಆಗದ ಮಾತು ಎಂಬುದು ನನಗೆ ಸ್ಪಷ್ಟವಾಗುತ್ತಿದ್ದಂತೆಯೇ ಅನಿವಾರ್ಯವಾಗಿ ನಾನೂಅಜ್ಜನೆಟ್ಟ ಆಲದ ಮರಕ್ಕೆ ನೇಣುಹಾಕಿಕೊಳ್ಳುವ ಪೆದ್ದುಗಳೆಂದು ಜರಿಯುತ್ತಿದ್ದವರಂತೆಯೇ ಸಂಪ್ರದಾಯಿಕ ಮದುವೆಗೆ ಮುಂದಾಗಬೇಕಾಯಿತು. ಆದರೆ ಸಂಪ್ರದಾಯಿಕ ಮದುವೆಯಲ್ಲಿಯೇ ಒಂದಿಷ್ಟು ಕ್ರಾಂತಿಕಾರಕವಾಗಿ ಏನನ್ನಾದರೂ ಮಾಡಿ ಮದುವೆಯಾಗಬಹುದೇ ಎಂದು ಯೋಚಿಸತೊಡಗಿದೆ. ಹಾಗಾಗಿ ಇದಕ್ಕೊಂದು ಟೈಮ್ ಟೇಬಲ್ ಮಾಡಿಕೊಂಡೆ. 1998 ಜನವರಿ 01 ಮಾರ್ಚ್ 31 ಅವಧಿಯಲ್ಲಿ ಹೆಣ್ಣುನೋಡಿ ಕನ್ಯೆಯನ್ನು ಅಂತಿಮಗೊಳಿಸಿಕೊಳ್ಳುವುದು. ಮೇ 31 ಒಳಗೆ ಏನೇ ಆದರೂ ಸರಿ ಮದುವೆ ಎಂಬುದು ಮುಗಿಯಲೇ ಬೇಕು ಎಂಬುದು ವೇಳಾಪಟ್ಟಿಯಲ್ಲಿ ಇತ್ತು. ಹಾಗಾಗಿ ಹುಡುಗಿಯನ್ನು ನೋಡುವ ಕೆಲಸವನ್ನು ತೀವ್ರಗೊಳಿಸಿದೆ. ಒಂದೇ ದಿನಕ್ಕೆ ಮಂತ್ರಿಗಳ ಕಾರ್ಯಕ್ರಮ ಪಟ್ಟಿಯಂತೆ ಏಳೆಂಟು ಹುಡುಗಿಯರ ಮನೆಗೆ ಹೋಗುವ ಕಾರ್ಯಕ್ರಮವಿರುತ್ತಿತ್ತು

ಬೆಳಿಗ್ಗೆ ತಿಂಡಿ ಟೈಮಿಗೆ ಒಂದು ಮನೆ, ಹನ್ನೊಂದು ಗಂಟೆ ಟೀ ಟೈಮಿಗೆ ಇನ್ನೊಂದು ಮನೆ, ಮಧ್ಯಾಹ್ನ ಊಟದ ಟೈಮಿಗೆ ಮತ್ತೊಂದು ಮನೆ, ಸಂಜೆ ಟೀ ಟೈಮಿಗೆ ಮುಗುದೊಂದು ಮನೆ ಹೀಗೆ.  ಹೀಗೇ ನೋಡುತ್ತಾ ನೋಡುತ್ತಾ ಒಂದು ದಿನ ನಾನು ಭದ್ರಾವತಿಯ ಒಂದು ಮನೆಯಲ್ಲಿ ಹುಡುಗಿಯೊಬ್ಬಳ್ಳನ್ನು ನೋಡಿದ್ದು ರಾತ್ರಿ 7.45ಕ್ಕೆ. ಯಾರ ಮನೆಗೆ ನಾನು ಒಂದನೆಯವನೋ ಎರಡನೆಯವನೋ ಆಗಿ ಹೋಗುತ್ತಿದ್ದೆನೋ ಅಲ್ಲೆಲ್ಲ ಹುಡುಗಿಯ ಮನೆಯವರು ಬಹಳ ಉತ್ಸಾಹ ಮತ್ತು ಆಸೆ ನಿರೀಕ್ಷೆಗಳಿಂದ ರುಚಿಕಟ್ಟಾದ ಉಪ್ಪಿಟ್ಟು ಕೇಸರಿಬಾತ್ ಮುಂತಾದವುಗಳನ್ನು ಕೊಡುತ್ತಿದ್ದರು. ಇನ್ನು ಬಂದವರಿಗೆಲ್ಲ ತಿಂಡಿ ಟೀ ಕೊಟ್ಟು ಕೊಟ್ಟು ಸುಸ್ತಾಗಿದ್ದ ಆದರೆ ಯಾವ ಹುಡುಗನೂ ಒಪ್ಪಿಕೊಳ್ಳದೇ ಇದ್ದ ಹುಡುಗಿಯರ ಮನೆಗೆ ನಾನು ಇಪ್ಪತ್ತನೆಯವನೋ ಇಪ್ಪತ್ತೊಂದನೆಯವನೋ ಆಗಿ ಹೋದಾಗ ಅವರು ಕಾಟಾಚಾರಕ್ಕೆ ಕರಿದ ಅವಲಕ್ಕಿಯನ್ನೋ ಗುಲ್ಕೋಸ್ ಬಿಸ್ಕಿಟನ್ನೋ ಕೊಟ್ಟು ಅರ್ಧ ಚಾ ಕೊಟ್ಟು ಕೈಮುಗಿದು ಸಾಗುಹಾಕುತ್ತಿದ್ದರು. ಮೇಲೆ ಹೇಳಿದ ರಾತ್ರಿ ಏಳೂ ಮುಕ್ಕಾಲಿಗೆ ನೋಡಿದ ಭದ್ರಾವತಿಯ ಹುಡುಗಿ ನನಗೆ ತಂದು ಕೊಟ್ಟಿದ್ದು ಕೆಂಡದ ಮೇಲೆ ಹಾಕಿ ಸುಟ್ಟು ಕರಕಲಾಗಿದ್ದ ಹಪ್ಪಳವನ್ನು!

ಮರಕ್ಕೆ ತಾಳಿ ಕಟ್ಟುವುದು ತಪ್ಪಿದ್ದು!

ನನ್ನ ಟೈಮ್ ಟೇಬಲ್ಲಿನ ಪ್ರಕಾರ ನಾನು ಮಾರ್ಚ್ 31 ಒಳಗೆ ಹೆಣ್ಣುಹೋಡುವುದುನ್ನು ಮುಗಿಸಲೇಬೇಕಿತ್ತು. ಮೇ 31 ಒಳಗೆ ಮದುವೆ ಆಗಲೇಬೇಕಿತ್ತು. ವಿಷಯದಲ್ಲಿ ನಾನು ತುಂಬಾ ಹಟವಾದಿಯಾಗಿದ್ದೆ. ಮರಕ್ಕೆ ತಾಳಿಕಟ್ಟುವುದಾದರೂ ಸರಿ ಮೇ 31 ಒಳಗೆ ಮದುವೆ ಆಗಿಯೇ ತೀರುತ್ತೇನೆಂದು ಆಪ್ತರೆದುರು ಹೇಳಿಕೊಂಡಿದ್ದೆಆದರೆ ಹುಡುಗಿ ಆಯ್ಕೆ ಆಗಿರಲಿಲ್ಲ. ಹುಡುಕಾಟ ನಡೆದೇ ಇತ್ತು. ಇದೇ ಟೈಮಿಗೆ ಒಬ್ಬರು ನನಗೆ, ‘ಒಬ್ಬ ಗಂಡಸು ರೂಪವಂತಳೂ, ಗುಣವಂತಳೂ ಹಣವಂತಳೂ ಆದ ಹುಡುಗಿಯನ್ನು ಮದುವೆಯಾಗಲು ಇಷ್ಟಪಟ್ಟರೆ ಅವನು ಮೂರುಸಲ ಮದುವೆಯಾಗಬೇಕಾಗುತ್ತದೆ’ ಎಂದು ಬುದ್ದಿಮಾತು ಹೇಳಿದರು. ಈ ಮಾತು ನನಗೆ ಬಹಳ ತಟ್ಟಿತು.

ಮಾರ್ಚ್ ಕೊನೆಯವಾರ ಬಂದರೂ ಹೆಣ್ಣು ಅಂತಿಮಗೊಂಡಿರದಿದ್ದಾಗ ಒಂದು ವಾರದಲ್ಲಿ ಯಾವುದಾದರೂ

ಹುಡುಗಿ ಸಿಕ್ಕರೆ ಮುಖ ಮುಸುಡಿ ನೋಡದೆಎಸ್ಅನ್ನಬೇಕು ಎಂದು ತೀರ್ಮಾನಿಸಿ ಹೊರಟೆ, ಕೊನೆಗೆ ಸಾಗರದಲ್ಲಿ ಗೆಳೆಯರೆಲ್ಲ ಕರೆದುಕೊಂಡು ಹೋಗಿ ಒಂದು ಕನ್ಯೆಯನ್ನು ತೋರಿಸಿದರು. ಹೆಚ್ಚಿಗೆ ಧಿಮಾಕು ಮಾಡದೆ ತೆಪ್ಪಗೆ ಒಪ್ಪಿಕೊಂಡೆ. ಏಕೆಂದರೆ ಹುಡುಗಿಯನ್ನು ನೋಡಲು ಹೋಗುವ ಮೊದಲೇ ನಾನು ಮದುವೆಯ ದಿನಾಂಕವನ್ನೂ ಸ್ಥಳವನ್ನೂ ನಿರ್ಧರಿಸಿ ಬುಕ್ ಮಾಡಿಯಾಗಿತ್ತು. ಹುಡುಗಿ ಸಿಗದಿದ್ದರೆ ಉತ್ಸಾಹದಲ್ಲಿ ಹೇಳಿದಂತೆ ಮರಕ್ಕೇ ತಾಳಿಕಟ್ಟಬೇಕಾಗುತ್ತಿತ್ತು


ಕಾಲದಲ್ಲಿ ನಾನು ಕುವೆಂಪು ಅವರ ಪ್ರಭಾವಕ್ಕೆ ಒಳಗಾಗಿದ್ದೆ. ದೇವರು ಧರ್ಮದ ಗೊಂದಲಮಯದಾರಿಯಿಂದ ತಪ್ಪಿಸಿಕೊಂಡು ಶುದ್ಧ ಮಾನವತ್ವವನ್ನು ಬೋಧಿಸುವ ವೈಚಾರಿಕ ಸಾಹಿತ್ಯಕ್ಕೆ ನನ್ನನ್ನು ನಾನು ತೆರೆದುಕೊಂಡೆ. ಇದರಿಂದ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆ ಕಂಡುಕೊಂಡೆ. ದೇವರು, ಧರ್ಮ, ಇವುಗಳ ಪೊಳ್ಳು, ಮೂಢನಂಬಿಕೆ ಇವುಗಳ ಬಗ್ಗೆ ಸರಿಯಾದ ತಿಳಿವಳಿಕೆ ಬಂತು. ಹೀಗಾಗಿ ಜೋತಿಷ್ಯ, ಪುರೋಹಿತರ ಕಳ್ಳಾಟ ಇವುಗಳಿಂದ ಮುಕ್ತವಾಗಿ ಮದುವೆಯಾಗಬೇಕೆಂದು ನಿರ್ಧರಿಸಿದೆ. ಆದರೆ ಮದುವೆ ಎಂಬುದು ಜರುಗಲು ಕನಿಷ್ಠ ಇಬ್ಬರು ಬೇಕಾಗುವುದರಿಂದ ಅದು ಶೇ. 100 ರಷ್ಟು ನಾವಂದುಕೊಂಡಂತೆ ಆಗುವುದು ದುರ್ಲಭ. ಆದರೆ ಅದು ನನ್ನ ವಿಷಯದಲ್ಲಿ ಆಯಿತು. ಅದಕ್ಕೆ ಹೆಣ್ಣಿನ ಕಡೆಯವರು ಕೊಟ್ಟ ಸಹಕಾರ ಬಹಳ ದೊಡ್ಡದು. ಭಾರತದಲ್ಲಿ ಹೆಣ್ಣಿನ ಕಡೆಯವರುತಗ್ಗಿಬಗ್ಗಿ ನಡೆಯಬೇಕುಎಂಬುದು ಪುರುಷಪ್ರಧಾನ ಒಪ್ಪಿತ ಸಮಾಜ ರೂಪಿಸಿದ್ದ ಅಲಿಖಿತ ವಿಧಿಯಾಗಿದ್ದರಿಂದಲೋ ಏನೋ ಅವರೆಲ್ಲ, ‘ನೀವು ಹೇಗೆ ಹೇಳುತ್ತೀರೋ ಹಾಗೇ ಆಗಲಿಎಂದು ಹಗ್ಗವನ್ನು ನನ್ನ ಕೈಗೇ ಕೊಟ್ಟುಬಿಟ್ಟರು. ಹಾಗಾಗಿ ಮರಕ್ಕೆ ತಾಳಿಕಟ್ಟಬೇಕಾದ ಪ್ರಸಂಗದಿಂದ ಅಂತೂ ಬಚಾವಾದೆ!

ಪ್ರೀತಿ ಪ್ರೇಮ, ಸರಸ, ವಿರಸಗಳ ರಾಜ್ಯ ವಿವಾಹ ಕವಿಗೋಷ್ಠಿ



ಕುವೆಂಪು
ಪ್ರಣೀತಮಂತ್ರಮಾಂಗಲ್ಯರೀತ್ಯ ಮದುವೆಯಾಗಬೇಕು ಎಂಬುದು ನನ್ನ ಸಂದರ್ಭದ ನಿರ್ಧಾರವಾಗಿತ್ತು. ಹಂತದಲ್ಲಿ ನನ್ನ ಹತ್ತಿರವಿದ್ದ ಅತ್ಯುತ್ತಮ ಎನ್ನಬಹುದಾದ ಆಯ್ಕೆ ಅದೊಂದೇ ಆಗಿತ್ತು. ಆದರೆ ದೇವರು, ಧರ್ಮ, ಜ್ಯೋತಿಷ್ಯ, ಪುರೋಹಿತಶಾಹಿ ಇವನ್ನೆಲ್ಲ ತಿರಸ್ಕರಿಸಿದರೂ ಮದುವೆಯನ್ನು ಒಂದು ನೆನಪಿಡುವ ವಿಶೇಷ ಘಟನೆಯನ್ನಾಗಿ ಮಾಡಿಕೊಳ್ಳಬೇಕು ಎಂಬುದು ನನ್ನ ಬಯಕೆಯಾಗಿತ್ತು. ಹಾಗಾಗಿ ನನ್ನ ಮದುವೆಯ ನಿಮಿತ್ತ ಒಂದು ವೈಚಾರಿಕ ಉಪನ್ಯಾಸವನ್ನೂ ಒಂದು ರಾಜ್ಯಮಟ್ಟದ ವಿವಾಹ ಕವಿಗೋಷ್ಠಿಯನ್ನೂ  ನಡೆಸಬೇಕು ಎಂದು ಯೋಜನೆ ಹಾಕಿಕೊಂಡಿದ್ದೆ. ನಾನು ಹೆಣ್ಣನ್ನು ನೋಡಲು ತೊಡಗುವ ನಾಲ್ಕು ತಿಂಗಳ ಮೊದಲೇ ಮದುವೆ ಮಾಡುವ ಕಾರ್ಯಕ್ರಮದ ತಯಾರಿ ಪ್ರಾರಂಭಿಸಿದ್ದೆ. ಆಗ ಈಗಿನಂತೆ ತಲೆಗೊಂದು ಫೋನು ಇರಲಿ ಮನೆಗೊಂದಲ್ಲ ಊರಿಗೆ ಒಂದು ಫೋನೂ ಇರಲಿಲ್ಲ. ಎಲ್ಲವನ್ನೂ ಪತ್ರ ಬರೆವಣಿಗೆಯ ಮೂಲಕವೇ ಮಾಡಬೇಕಿತ್ತು.

ಹೀಗಾಗಿ ಸುಮಾರು ಐದು-ಆರು ತಿಂಗಳ ಮೊದಲೇ, ಕರ್ನಾಟಕದ ಎಲ್ಲ ಜಿಲ್ಲೆಗಳ ಸಾಹಿತ್ಯ ಪರಿಷತ್ತುಗಳ ಅಧ್ಯಕ್ಷರಿಗೆ ಒಂದೊಂದು ಪೋಸ್ಟ್ ಕಾರ್ಡ್ ಬರೆದು, “ಮುಂದಿನ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ನನ್ನ ಮದುವೆಯ ನಿಮಿತ್ತ ಕುವೆಂಪು ಅವರ ಕುಪ್ಪಳಿಯಲ್ಲಿ ರಾಜ್ಯಮಟ್ಟದ ವಿವಾಹಕವಿಗೋಷ್ಠಿಯೊಂದನ್ನು ಆಯೋಜಿಸಿದ್ದೇವೆ. ಪ್ರೀತಿ ಪ್ರೇಮ, ಕಾಮ, ಗಂಡುಹೆಣ್ಣಿನ ಸಂಬಂಧ, ದಾಂಪತ್ಯ ಜೀವನದ ಸರಸ ವಿರಸ ಇತ್ಯಾದಿ ಕುರಿತು ಕವಿತೆಯೊಂದನ್ನು ಬರೆದುಕೊಂಡು ನಿಮ್ಮ ಜಿಲ್ಲೆಯ ಕವಿಯೊಬ್ಬರು ನಮ್ಮಲ್ಲಿಗೆ ಬರುವ ವ್ಯವಸ್ಥೆಮಾಡಿಕೊಡಿಎಂದು ಕೇಳಿಕೊಂಡೆ. ಕೆಲವರು ಸ್ಪಂದಿಸಿದರೆ ಮತ್ತೆ ಕೆಲವರು ಸ್ಪಂದಿಸಲಿಲ್ಲ. ಮತ್ತೊಂದು ತಿಂಗಳು ಬಿಟ್ಟು ಇನ್ನೊಮ್ಮೆ ಪತ್ರಬರೆದೆ. ಹೀಗೇ ಮಾಡಿಮಾಡಿ ಕೊನೆಗೆ ಬಹುತೇಕ ಎಲ್ಲ ಜಿಲ್ಲೆಗಳಿಂದ ಕವಿಗಳ ಹೆಸರನ್ನು ತಿರಿಸಿಕೊಳ್ಳುವಲ್ಲಿ ಸಫಲನಾದೆ.

ಕುಪ್ಪಳಿಯಲ್ಲಿ ಅದೇ ವರ್ಷ ಕುವೆಂಪು ಅವರ ಮನೆಯನ್ನು ಕೆಡವಿ ಅದೇ ಮಾದರಿ ಮತ್ತು ವಿನ್ಯಾಸದಲ್ಲಿ ಹೊಸಮನೆಯನ್ನು ಕಟ್ಟುವ ಕಾರ್ಯ ಆರಂಭವಾಗಿತ್ತು. ನಾನು ಮದುವೆಯಾಗುವಾಗ ಅರ್ಧಮನೆಯನ್ನು ಕೆಡವಿಯಾಗಿತ್ತು. ನಿರ್ಮಾಣ ಕಾರ್ಯವೂ ನಡೆದಿತ್ತು. ಈಗಿನಂತೆ ಅಲ್ಲಿ ಮದುವೆಯಾಗಲು ಯಾವುದೇ ವ್ಯವಸ್ಥೆಗಳಿರಲಿಲ್ಲ. ಹೊಸ ಕಟ್ಟಡಗಳೂ ಇರಲಿಲ್ಲ. ಕುವೆಂಪು ಮನೆಯಿಂದ ಎರಡು ಕಿಲೋಮೀಟರ್ ದೂರದ ಗಡಿಕಲ್ಲಿನಲ್ಲಿ ತಗಡು ಹೊದಿಸಿದ ಒಂದು ಸಾಧಾರಣ ರಂಗಮಂದಿರವಿದ್ದು ಮದುವೆಯಾಗುವವರು ಅಲ್ಲಿಯೇ ಆಗಬೇಕಿತ್ತು. ನನ್ನ ಮದುವೆಗೂ ಅದೇ ಸ್ಥಳವನ್ನು ಗೊತ್ತುಮಾಡಿಕೊಂಡಿದ್ದೆವು.

ವಾರತಿಥಿಗಳನ್ನು ನೋಡದ ಪುರೋಹಿತರಿಲ್ಲದೇ ಅಂತೂ ಇಂತೂ ನಡೆದ ಮದುವೆ!

ಮದುವೆಯ ಆರಂಭದಿಂದಲೂ ಅದು ಮುಗಿಯುವವರೆಗೂ ನನ್ನ ಯೋಚನೆಯನ್ನು ಒಪ್ಪಿಕೊಂಡು ನನ್ನ ಯೋಜನೆಯನ್ನು ಕೇಳಿ ಅಲ್ಪಸ್ಪಲ್ಪ ಬದಲಾವಣೆ ಬೇಕೆನಿಸಿದರೆ ಅದನ್ನು ಮಾಡಿ ನನ್ನ ಮದುವೆಯನ್ನು ನಡೆಸಿಕೊಟ್ಟ ಹಿರಿಮೆ ಆಗ ತೀರ್ಥಹಳ್ಳಿ ತುಂಗಾ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿದ್ದು, ಕುವೆಂಪು ವಿ.ವಿ. ದೇವಂಗಿ ಪಿಎಚ್.ಡಿ ಅಧ್ಯಯನ ಕೇಂದ್ರದ ಸಂಯೋಜಕರೂ ಆಗಿದ್ದ (ಮುಂದೆ ನನ್ನ ಡಾಕ್ಟರಲ್ ಥೀಸೀಸ್ ಗೆ ಮಾರ್ಗದರ್ಶಕರೂ ಆಗಿ ಮಾರ್ಗದರ್ಶನ ಮಾಡಿದ) ಡಾ. ಜೆ.ಕೆ. ರಮೇಶ ಅವರು. ನಮ್ಮ ಮದುವೆಯ ನಂತರ ತಮ್ಮ ಇಬ್ಬರು ಮಕ್ಕಳ ಮದುವೆಯನ್ನೂ ಅದೇ ರೀತಿ ಮಾಡಲು ಅವರಿಗೆ ಸಾಧ್ಯವಾಯಿತು ಎನ್ನುವುದೂ ನನ್ನಂಥವರಿಗೆ ಸಂತೋಷಕೊಡುವ ಸಂಗತಿಯೇ ಆಗಿದೆ. ಅವರು ನನ್ನ ಈ ಮದುವೆಯ ಉಸ್ತುವಾರಿಯ ಜೊತೆಗೆ ಮದುವೆಯ ದಿನ, ‘ನಮ್ಮ ಮದುವೆಗಳು ನಡೆದುಬಂದ ದಾರಿ; ಬದಲಾಗುತ್ತಿರುವ ಅಲೆಗಳುಎಂಬ ವಿಷಯದ ಮೇಲೆ ಅದ್ಭುತ ಉಪನ್ಯಾಸವೊಂದನ್ನು ನೀಡಿ ಕಾರ್ಯಕ್ರಮಕ್ಕೆ ಘನತೆಯನ್ನು ತಂದುಕೊಟ್ಟರು.

ಮದುವೆಯ ದಿನಾಂಕವನ್ನು ಮತ್ತು ಸಮಯವನ್ನು ಗೊತ್ತುಮಾಡುವಲ್ಲಿ ಯಾವ ಪಂಚಾಂಗವನ್ನು ನಾನು ನೋಡಿರಲಿಲ್ಲ. ಯಾವ ಪುರೋಹಿತನನ್ನೂ ಕೇಳಿರಲಿಲ್ಲ. ‘ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಎನ್ನುವ ಬಸವಣ್ಣನ ಮಾತಿನಂತೆ ನಮಗೆ ಒಪ್ಪಿಗೆ ಆಗುವಂಥ ದಿನಾಂಕ ಸಮಯವನ್ನು ನಾನೇ ನಿರ್ಧರಿಸಿದ್ದೆ. ಏಪ್ರಿಲ್ 9 ಏಕೆ ನಿಗಧಿ ಮಾಡಿದ್ದೆನೆಂದರೆ ಯಾವ ರಜೆಯನ್ನೂ ಹಾಕದೇ ನಾನು ಮದುವೆಯದಾಗಬೇಕೆಂದೂ ನನ್ನ ಮದುವೆಯ ಸಲುವಾಗಿ ಯಾರೂ ರಜೆಹಾಕಬಾರದೆಂದೂ ನಾನು ಬಯಸಿದ್ದೆ. ಏಪ್ರಿಲ್ ಎಂಟು, ಒಂಬತ್ತು ಮತ್ತು ಹತ್ತು ಮೂರೂ ದಿನಗಳು ಬೇರೆಬೇರೆ ಕಾರಣಗಳಿಂದ ರಜಾದಿನಗಳಾಗಿದ್ದವು. ರಾಜ್ಯದ ದೂರದ ಜಿಲ್ಲೆಗಳಿಂದ ಬರುವ ಕವಿಗಳಿಗೆ ಹೋಗಲು ಮತ್ತು ಬರಲು ಅನುಕೂಲವಾಗಲೆಂದು ಮೂರು ದಿನಗಳಲ್ಲಿ ಮಧ್ಯದ ದಿನವನ್ನು ಗೊತ್ತು ಮಾಡಿದ್ದೆ. ಸಮಯ ಎಲ್ಲರೂ ಸೇರಲು ಹತ್ತುಗಂಟೆಯಾಗಬಹುದೆಂದು ಸಮಯಗೊತ್ತು ಮಾಡಿದ್ದೆ. ಆದರೆ ಎಲ್ಲರೂ ಸೇರಲು ಎಷ್ಟೋ ತಡವಾಯಿತು. ನಾನು ಪ್ರಕಟಪಡಿಸಿದ ಸಮಯಕ್ಕೂ ತಾಳಿಕಟ್ಟಿದ ಸಮಯಕ್ಕೂ ಒಂದೂವರೆ ತಾಸು ವ್ಯತ್ಯಾಸವಿತ್ತು. ತಾಳಿಕಟ್ಟಿದಾಗ ರಾಹುಕಾಲವಿತ್ತೋ, ಗುಳಿಕಕಾಲವಿತ್ತೋ ಯಮಗಂಡಕಾಲವಿತ್ತೋ ಯಾರಿಗೆ ಗೊತ್ತು!  (ನನ್ನ ಮದುವೆಗಾಗಿ ನಾನು ಒಂದು ರಜೆಯನ್ನೂ ಹಾಕಲಿಲ್ಲ ಕೂಡ. ಮದುವೆಯಾದ ಮರುದಿನ ರಜೆಯಿತ್ತು. ತಲೆತೊಳೆದುಕೊಂಡು ಚೆನ್ನಾಗಿ ನಿದ್ದೆಮಾಡಿ  ಅದರ ಮರುದಿನ ಎಂದಿನಂತೆ ಮೇಷ್ಟ್ರ ಕೆಲಸಕ್ಕೆ ಶಾಲೆಗೆ ಹಾಜರಾದೆ.)


ಕುವೆಂಪು
ಅವರ ಹೆಸರು ಕೇಳಿಯೇ ರಾಜ್ಯದ ಮೂಲೆಮೂಲೆಯಿಂದ ಕವಿಗಳು ಬಹಳ ಉತ್ಸಾಹದಿಂದ ಕುಪ್ಪಳಿಯ ನನ್ನ ಮದುವೆಗೆ ಬಂದಿದ್ದರು. ಮುಂದಿನ ದಿನಗಳಲ್ಲಿ ಸಾಹಿತ್ಯದಲ್ಲಿ ಹೆಸರು ಮಾಡಿದ,ಮಲೆಯಾಳಂ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿ ಹೆಸರು ಮಾಡಿದ ಕುಂದಾಪುರದ ಪಾರ್ವತಿ ಐತಾಳ್, ಬಾಗಲಕೋಟೆಯ ಮಲ್ಲಿಕಾರ್ಜುನ ಹುಲಗಬಾಳಿ, ಇತಿಹಾಸಕಾರ ಬಳ್ಳಾರಿಯ ಕುಂ.ಬಾ.ಸದಾಶಿವಪ್ಪ, ಸೇರಿದಂತೆ ಬಿಜಾಪುರದ ಭಾರತೀ ಪಾಟೀಲ್, ರಾಯಚೂರಿನ ಮಹಾಂತೇಶ್ ಮಸ್ಕಿ, ಗದಗದ ಡಿ.ವಿ. ಬಡಿಗೇರ, ಧಾರವಾಡದ ಚಂದ್ರಶೇಖರ ರೊಟ್ಟಿಗವಾಡ, ಬೆಂಗಳೂರು ಗ್ರಾಮಾಂತರದ ಪುಟ್ಟಸ್ವಾಮಿ ಭೂಹಳ್ಳಿ, ಕೋಲಾರದ ಡಿ.ಎಸ್. ಹನುಮಂತರಾವ್, ಚಾಮರಾಜನಗರದ ಪುಟ್ಟತಾಯಮ್ಮ, ಮಂಡ್ಯದ ಶಂಕರನಾರಾಯಣ ಭಟ್ಟ, ಕೊಡಗಿನ ಟಿ.ಎಂ. ಚಂದ್ರಶೇಖರ್, ಹಾಸನದ ಗೊರೂರು ಅನಂತರಾಜು, ದಕ್ಷಿಣ ಕನ್ನಡದ ವಿ.. ನಾಯಕಉತ್ತರ ಕನ್ನಡದ ಸುಮುಖಾನಂದ ಜಲವಳ್ಳಿ, ಚಿಕ್ಕಮಗಳೂರಿನ ಕೆ.ಎಂ. ರೇವಣ್ಣ, ಮೈಸೂರಿನ ಸೇತುರಾಮ್, ಬೀದರ್ ಬಾ.ನಾ ಸೋಲಾಪುರೆ ಹೀಗೇ ಅನೇಕರು…. ನಮ್ಮ ಕುಂದಾಪುರದ ಪಾರ್ವತಿ ಮೇಡಂ ಪ್ರೀತಿಯಹಾಡೊಂದನ್ನು ತಮ್ಮ ಸುಮಧುರ ಕಂಠದಿಂದ ಹಾಡಿ ಹರಸಿದ್ದು ಅನೇಕರು ಅರ್ಥಪೂರ್ಣ ಪ್ರೀತಿಕವನಗಳನ್ನು ಹಾಡಿದ್ದೂ ವಾಚಿಸಿದ್ದೂ ಈಗಲೂ ನಮಗೆ ಮರೆಯಲಾಗಿಲ್ಲ. ಕುಪ್ಪಳಿ ಮತ್ತು ಕುವೆಂಪು ಅವರನ್ನು ಎಷ್ಟು ಆಕರ್ಷಿಸಿದ್ದರು ಎಂದರೆ ಅವರಿಗೆ ನಮ್ಮ ಆತಿಥ್ಯದ  ಯಾವ ಕೊರತೆಯೂ ಕಣ್ಣಿಗೆ ಕಾಣಲೇ ಇಲ್ಲ!

ಅಕ್ಷತೆಯಿಲ್ಲದೆ ಹೂವೂ ಕೈಕೊಟ್ಟಾಗ ಚಪ್ಪಾಳೆ ತಟ್ಟಿಸಿದ್ದು


ನಮ್ಮದು
ಅಸಂಪ್ರದಾಯಿಕ ಮದುವೆಯ ಜೊತೆಗೆ ಒಂದಿಷ್ಟು ಗೊಂದಲದ ಮದುವೆಯೂ ಆಗಿತ್ತು. ಎಲ್ಲ ಯೋಜನೆಯನ್ನು ರೂಪಿಸಿದವನು ನಾನೊಬ್ಬನೆ. ನಾನು ಮದುಮಗನಾಗಿ ಮೇಲೆ ಕುಳಿತಾಗ ಉಳಿದವರಿಗೆ ಏನು ಮಾಡಬೇಕು ಎಂಬುದು ತಿಳಿಯುತ್ತಿರಲಿಲ್ಲ. ತಯಾರಿಯ ನಡುವೆ ನನಗೊಂದು ಜೊತೆ ಹೊಸಬಟ್ಟೆಯನ್ನು ಮುಂಚಿತವಾಗಿ ಹೊಲಿಸಿಕೊಳ್ಳಬೇಕು ಎಂಬುದನ್ನು ನಾನು ನೆಟ್ಟಗೆ ಮಾಡಿಕೊಂಡಿರಲಿಲ್ಲ. ಮದುವೆಗೆ ಒಂದು ಪೈಜಾಮು ಮತ್ತು ಒಂದು ಜುಬ್ಬಾ ಹೊಲಿಯಲು ಹಾಕಿದ್ದೆ. ಮದುವೆಯ ದಿನ ಬೆಳಿಗ್ಗೆ ಕುಪ್ಪಳಿಗೆ ಹೋಗುವಾಗ ಟೈಲರ್ ನಿಂದ ತೆಗೆದುಕೊಂಡರಾಯಿತು ಎಂದು ಬಿಟ್ಟಿದ್ದೆ. ಅವನು ಅಂದು ಅಂಗಡಿ ಬಾಗಿಲು ತೆಗೆಯುವುದನ್ನು ತಡಮಾಡಿ ಒಂದಿಷ್ಟು ಸಮಸ್ಯೆ ಮಾಡಿದ. ಮದುವೆಯಲ್ಲಿ ಅಕ್ಷತೆ ಹಾಕುವುದು ಬೇಡವೆಂಬುದು ನನ್ನ ಅಭಿಪ್ರಾಯವಾಗಿತ್ತು. ಅಕ್ಷತೆಯನ್ನು ಹಾಕಿ ನಂತರ ಕೆಳಗೆ ಬಿದ್ದ ಅಕ್ಷತೆಯ ಮೇಲೆ ಕಾಲಿಟ್ಟುಕೊಂಡು ತುಳಿಯುತ್ತಾ ಓಡಾಡುವುದು ಅನ್ನ ಬೆಳೆಯುವ ರೈತರಿಗೆ ಮಾಡುವ ಅವಮಾನವೆಂಬುದು ಮತ್ತು ಆಹಾರಪದಾರ್ಥಗಳನ್ನು ಚೆಲ್ಲಾಡುವುದು ತಿಳಿಗೇಡಿತನದ ಅಂಶವೆಂದೂ ನಾನು ತಿಳಿದು ಅಲ್ಲಿ ಅಕ್ಷತೆ ಇಟ್ಟಿರಲಿಲ್ಲ. ಅದರ ಬದಲು ಎಲ್ಲರಿಗೂ ಒಂದೊಂದು ಹೂವು ಕೊಟ್ಟು ಹಾಕಿಸುವ ಎಂದುಕೊಂಡಿದ್ದೆ. ಆದರೆ ಹೂವು ತರಬೇಕಾದವರು ಹೂವನ್ನು ತರಲೇ ಇಲ್ಲ. ಏನು ಮಾಡುವುದು ಎಂಬ ಸಮಸ್ಯೆ ಉಂಟಾಯಿತು. ಕೊನೆಗೆ ನಾನೇ ಸಂದರ್ಭಕ್ಕೆ ಸರಿಯಾಗಿ ಒಂದು ಕಥೆಕಟ್ಟಿ ಮೈಕಿನ ಎದುರು ಬಂದು ಹೀಗೆ ಹೇಳಿದೆ:

ನೋಡಿ. ನಮ್ಮನ್ನು ಆಶೀರ್ವದಿಸಲು ನೀವೆಲ್ಲ ಬಂದಿದ್ದು ನಮಗೆ ಬಹಳ ಸಂತೋಷವಾಗಿದೆ. ಅಕ್ಷತೆ ಹಾಕುವುದು ಒಂದು ಸಾಮಾಜಿಕ ಒಪ್ಪಿಗೆ ಕೊಡುವ ಸಂಕೇತ ಅಷ್ಟೇ. ಅದನ್ನು ರೈತರ ಆಹಾರ ಧಾನ್ಯವನ್ನು ಅವಮಾನ ಮಾಡದೆ ವಿಚಾರವಂತರಾದ ನಾವು ಬೇರೆ ರೀತಿ ಮಾಡೋಣ. ನಾನು ತಾಳಿ ಕಟ್ಟುತ್ತಿದ್ದಂತೆ ನೀವು ಚಪ್ಪಾಳೆ ಹೊಡೆಯಿರಿ. ಚಪ್ಪಾಳೆ

ಹೊಡೆಯುವುದು ಕ್ಷುಲ್ಲಕ ಅಂತ ತಿಳಿಯಬೇಡಿ. ಅದು ಅಕ್ಷತೆ ಹಾಕುವುದಕ್ಕಿಂತ ಬಹಳ ಮಹತ್ವದ್ದು. ಏಕೆಂದರೆ ನಮ್ಮ ವೈದಿಕರು ಎಡಗೈಯನ್ನು ಹೊಲಸು ತೊಳೆಯುವ ಕೈ ಎಂದು ಕೀಳಾಗಿ ಕಾಣುತ್ತಿದ್ದರು. ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿಹಾಡಿದ ಬಸವಣ್ಣ ಎಡಗೈ ಅಂಗೈಯಲ್ಲಿ ದೇವರನ್ನು ಇಟ್ಟುಕೊಂಡು ಪೂಜೆ ಮಾಡುವ, ‘ಇಷ್ಟಲಿಂಗ ಪೂಜಾವಿಧಾನಎಂಬ ಎಂಬ ಒಂದು ಹೊಸ ಪೂಜಾವಿಧಾನವನ್ನು ಹುಟ್ಟುಹಾಕಿ ಹೊಲಸು ತೊಳೆಯುವ ಕೈಗೆ ದೇವರ ಗದ್ದುಗೆಯ ಸ್ಥಾನಮಾನವನ್ನು ನೀಡಿದ. ನೀವು ಚಪ್ಪಾಳೆ ಹೊಡೆಯುವಾಗ ಎಡಗೈಗೆ ಬಲಗೈಯನ್ನು ತಟ್ಟುತ್ತೀರಿ. ಮೂಲಕ ನಮ್ಮ ಮದುವೆಗೆ ದೇವರ ಗದ್ದುಗೆಯನ್ನು ಮುಟ್ಟಿ ಪ್ರಮಾಣಮಾಡಿ  ಬೆಂಬಲಕೊಟ್ಟಂತೆ ಆಗುತ್ತದೆ.”


ನಾನು
ತಾಳಿಕಟ್ಟಿದೆ. ಜನರೆಲ್ಲ ದೊಡ್ಡ ಪ್ರಮಾಣದಲ್ಲಿ ಚಪ್ಪಾಳೆ ಹೊಡೆದರು. ಅಲ್ಲಿಗೆ ನಮ್ಮ ಮದುವೆ ಆಯಿತು. ಬಂದವರು ಬರಿಹೊಟ್ಟೆಯಲ್ಲಿ ಹೋಗಬಾರದು ಎಂಬ ಕಾರಣಕ್ಕೆ ಬಿಸಿಬೇಳೆಬಾತ್ ಮಾಡಿಸಿದ್ದೆ. ಅದನ್ನೆ ಒಂದಿಷ್ಟು ಪ್ರೀತಿಯಿಂದ ಸ್ವೀಕರಿಸಿ ಜನರೆಲ್ಲ ಹೋದರು. ಇವತ್ತು ಎಂಬತ್ತು ತೊಂಬತ್ತು ಐಟಂ ಮಾಡಿಸಿ ಊಟಹಾಕಿದರೂ ಅದನ್ನು ಉಂಡ ತಕ್ಷಣ ಮರೆಯುವ ಜನ ಅವತ್ತು. ತೀರಾ ಕಳಪೆ ಎನ್ನಬಹುದಾದ ಪೇಪರ್ ಪ್ಲೇಟಿನಲ್ಲಿ ಕೊಟ್ಟ ಎರಡು ಚಮಚ ಬಿಸಿಬೇಳೆಬಾತನ್ನು ತಿಂದು ಹೋದ ರಾಜ್ಯದ ಬೇರೆಬೇರೆ ಭಾಗಗಳಿಂದ ಬಂದಿದ್ದ ಜನರಲ್ಲಿ ಬಹಳಷ್ಟು ಜನ ಇವತ್ತಿಗೂ ಅತ್ಯಂತ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿರುವುದನ್ನು ಕಂಡಾಗ ನನಗೆ ಮನುಷ್ಯ ಸಂಬಂಧಗಳ ಬಗ್ಗೆ ಬಹಳ ಕುತೂಹಲವುಂಟಾಗುತ್ತದೆ. ಮದುವೆಯ ನಂತರ ನಾವು ಮದುಮಕ್ಕಳು ಮೊದಲು ಭೇಟಿಕೊಟ್ಟದ್ದು ಆಗ ಕುಪ್ಪಳಿಯಲ್ಲಿಯೇ ವಾಸವಾಗಿದ್ದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿಯಾಗಿದ್ದ, ಖ್ಯಾತ ವೈದ್ಯಲೇಖಕ ಡಾ. ಎಚ್.ಡಿ.ಚಂದ್ರಪ್ಪಗೌಡ ಅವರ ಮನೆಗೆ. “ನಿಮ್ಮಿಂದಾಗಿ ಕುವೆಂಪು ಅವರ ಮಂತ್ರಮಾಂಗಲ್ಯ ರಾಜ್ಯದ ಎಲ್ಲಭಾಗಗಳಿಗೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗಕ್ಕೆ ಪರಿಚಯವಾಯಿತುಎಂದು ಅವರು ನಮ್ಮನ್ನು ಆಶೀರ್ವದಿಸಿ ಕಳಿಸಿಕೊಟ್ಟದ್ದು ನನಗೆ ಧನ್ಯತೆಯನ್ನು ಉಂಟುಮಾಡಿತು.


ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಪತ್ರಿಕೆಗಳು ಇದನ್ನೊಂದು  ವಿಶೇಷ ಮದುವೆಯೆಂದು ದೊಡ್ಡ ಸುದ್ಧಿಯಾಗಿ ಪ್ರಕಟಿಸಿದವು. ರಾಜ್ಯದ ಅನೇಕ ಭಾಗಗಳಿಂದ ಬಂದಿದ್ದ ಕವಿಗಳು ಈ ಮದುವೆಯಿಂದ ಪ್ರಭಾವಿತರಾಗಿ ಅವರವರ ಜಿಲ್ಲೆಗಳ ಪತ್ರಿಕೆಗಳಲ್ಲಿ ಈ ಮದುವೆಯನ್ನು ಕುರಿತು ವಿಶೇಷ ಲೇಖನಗಳನ್ನೂ ಬರೆದರು. ಅವುಗಳಲ್ಲಿ ಆಗಿನ ಪ್ರಸಿದ್ಧ ವಾರಪತ್ರಿಕೆ, ಕರ್ಮವೀರದಲ್ಲಿ ಮಲ್ಲಿಕಾರ್ಜುನ ಹುಲಗಬಾಳಿ ಅವರು ಬರೆದ ವಿಶೇಷ ಸಚಿತ್ರ ಲೇಖನ, ಕನ್ನಡ ಜನ ಅಂತರಗದಲ್ಲಿ ಪಾರ್ವತಿ ಜಿ ಐತಾಳ್ ಬರೆದ ವಿಶ್ಲೇಷಣಾತ್ಮಕ ಲೇಖನ, ಮುಂತಾದವು  ರಾಜ್ಯದ ಬಹಳಷ್ಟು ಜನರಿಂದ ಮೆಚ್ಚುಗೆಗೆ ಪಾತ್ರವಾಗಿ ನನಗೆ ಧನ್ಯತೆಯನ್ನು ತಂದುಕೊಟ್ಟವು.

ಕತ್ತು ಹೊರಳಿಸಿ ನೋಡುವಾಗ…. 

ಮದುವೆಯಾಗಿ ಈಗ ಇಪ್ಪತ್ಮೂರು ವರ್ಷಗಳು ಕಳೆದಿವೆ. ‘ಇಪ್ಪತ್ಮೂರು’ ಯಾವ ‘ಶುಭ’ ಸಂಖ್ಯೆಯೂ ಅಲ್ಲ ಬಿಡಿ. ಈ ಇಪ್ಪತ್ಮೂರು ವರ್ಷಗಳಲ್ಲಿ ತುಂಗಾನದಿಯಲ್ಲಿ ಸಾಕಷ್ಟು ನೀರು ಹರಿದಿದೆ. ನಾನೇ ಮುಂದೆ ನಿಂತು ಅನೇಕ ಮಂತ್ರಮಾಂಗಲ್ಯ ಮದುವೆಗಳನ್ನು ಮಾಡಿಸಿದ್ದೇನೆ. ಕೆಲಸಕ್ಕೆ ಬಾರದ ಅರ್ಥವೂ ಗೊತ್ತಿಲ್ಲದ ಮಂತ್ರಗಳನ್ನು ಗೊಣಗುವ ಹೆಡ್ಡತನವನ್ನು ಅನೇಕರಿಗೆ ತಿಳಿಸಿಕೊಟ್ಟು ಅವರು ಎಚ್ಚರಾಗುವಂತೆ ಮಾಡಿದ್ದೇನೆ. ಅವರು ಸಂಪ್ರದಾಯವನ್ನು ಬಿಟ್ಟು ಮದುವೆಯಾದರೂ ವಿಶೇಷವಾಗಿ ಜೀವನದಲ್ಲಿ ನಷ್ಟವನ್ನು ಅನುಭವಿಸಿದ್ದು ನನಗೆ ಕಂಡುಬಂದಿಲ್ಲ. ನಮ್ಮ ವೈವಾಹಿಕ ಬದುಕನ್ನೊಮ್ಮೆ ಹಿಂತಿರುಗಿ ನೋಡಿಕೊಂಡಾಗ ನನಗೆ ತೃಪ್ತಿಯಾಗಿದೆ. ನಾನು ಸಂಪ್ರದಾಯಬಿಟ್ಟು ಮದುವೆಯಾದರೂ, ನಮಗೂ ಎರಡು ಮಕ್ಕಳು ಅದೂ ಬಹಳ ಜನ ಅಪೇಕ್ಷೆ ಪಡುವಂತೆ ಒಂದು ಗಂಡು ಒಂದು ಹೆಣ್ಣು ಆಗಿವೆ. ಕಷ್ಟ-ಸುಖ ಸಂಪ್ರದಾಯಿಕ ಮದುವೆಗಳನ್ನು ಆದವರಿಗಿಂತ ಹೆಚ್ಚು ಏನೂ ಬಂದಿಲ್ಲ. ಹೀಗೆ ಹೇಳುವಾಗ ನನಗೆ ನೆನಪಿಗೆ ಸದಾ ಬರುವಂಥದ್ದು ಒಂದು ಪ್ರಸಂಗ. ನನಗೆ ಗೊತ್ತಿರುವ ಒಬ್ಬ ವ್ಯಕ್ತಿ ಮದುವೆಯಾಗುವ ಗಂಡು ಹೆಣ್ಣುಗಳ ಜಾತಕ-ಸೂತಕ ಅದೂ ಇದೂ ನೋಡಿ ಕೂಡಿಸಿ ಕಳೆದು ಲೆಕ್ಕಾಹಾಕಿ ಸಂಬಂಧ ಆಗಿಬರುತ್ತದೆಯೋ ಇಲ್ಲವೋ ಎಂದು ಹೇಳುತ್ತಿದ್ದರು. ಜನ ಅವರಲ್ಲಿ ಕೇಳಿಸಲು ಮುಗಿಬೀಳುತ್ತಿದ್ದರು. ಆದರೆ ಅವರ ಹೆಂಡತಿಯೇ ಮದುವೆಯಾಗಿ ಕೆಲವೇ ತಿಂಗಳಲ್ಲಿ ಅವರನ್ನು ಬಿಟ್ಟುಹೋದರು!.


ನಾನು
ಅವರನ್ನು ಟೀಕೆಮಾಡಲು ಮಾತನ್ನು ಹೇಳುತ್ತಿಲ್ಲ. ಅವರು ಹೇಳಬಹುದಾಗಿದ್ದ ಜಾತಕ-ಸೂತಕಗಳ ಕಥೆ ಎಷ್ಟು ನಿಜವಿರಬಹುದು ಎಂಬುದನ್ನು ಜನ ಅರ್ಥಮಾಡಿಕೊಳ್ಳಬೇಕು ಎಂಬುದಕ್ಕೆ ಹೇಳುತ್ತಿದ್ದೇನೆ ಅಷ್ಟೇ. ನಾವಿಬ್ಬರೂ ಅಂದು ಸೇರಿದ್ದ ಜನರ ಸಮ್ಮುಖದಲ್ಲಿ ಕನ್ನಡದಲ್ಲಿಯೇ ಎಲ್ಲರಿಗೂ ಅರ್ಥವಾಗುವಂತೆ ಪ್ರಮಾಣಮಾಡುವಾಗ ಹೇಳಿದ್ದ ಒಂದು ಮಾತು ಹೀಗಿತ್ತು. “ಪರಸ್ಪರ ಪ್ರೀತಿ, ವಿಶ್ವಾಸಗಳಿಲ್ಲದೆ ಯಾವ ಯಾವ ಶಾಸ್ತ್ರಗಳ ಪ್ರಕಾರ ಮದುವೆಯಾದರೂ, ಯಾವ ಅಗ್ನಿಯನ್ನು ಸುತ್ತಿದರೂ ವ್ಯರ್ಥವೆಂದುದ ನಾವು ತಿಳಿದಿದ್ದೇವೆ. ಪ್ರೀತಿಯೊಂದೇ ಗಂಡ ಹೆಂಡತಿಯರನ್ನು ಒಟ್ಟಾಗಿ ಬಾಳುವಂತೆ ಮಾಡುವ ಏಕೈಕ ಸಾಧನ. ಅಂತಹ ಪ್ರೀತಿಗೆ ನಾವು ಕಟ್ಟುಬಿದ್ದಿದ್ದೇವೆ.” ಬರೀ ಪ್ರೀತಿಗಲ್ಲ; ಕುವೆಂಪು ಅವರ ಈ ಮಾತನ್ನು ನಾವು ಪ್ರಮಾಣ ಮಾಡಿದಂತೆ ಪರಸ್ಪರ ಪ್ರೀತಿಗೆ ಕಟ್ಟುಬೀಳಲು ಸಾಧ್ಯವಾಯಿತೋ ಇಲ್ಲವೋ ಆದರೆ ಅಂತಹ ಪ್ರೀತಿಗೆ ಕಟ್ಟುಬೀಳದಿದ್ದರೆ ಏನಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲಂತೂ ಖಂಡಿತಾ ಸಾಧ್ಯವಾಯಿತು. ಅಷ್ಟರ ಮಟ್ಟಿಗೆ ಬದುಕು ಧನ್ಯತೆಯನ್ನು ನೀಡಿತು.

*****

ರಾಜೇಂದ್ರ ಬುರಡಿಕಟ್ಟಿ

09 ಏಪ್ರಿಲ್ 2021