Monday, September 10, 2018

'ನಗರ ನಕ್ಸಲೀಯರು' ಮತ್ತು ಪ್ರತಿಭಟನೆಯ ಪರಿ`ಭಾಷೆ'



'ನಗರ ನಕ್ಸಲೀಯರು' ಮತ್ತು ಪ್ರತಿಭಟನೆಯ ಪರಿ`ಭಾಷೆ'
- ಡಾ. ರಾಜೇಂದ್ರ ಬುರಡಿಕಟ್ಟಿ


ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಲೇಖಕ ಗಿರೀಶ ಕಾರ್ನಾಡ್ ಅವರು ಕಳೆದ ಸೆ.5 ರಂದು ಬೆಂಗಳೂರಿನಲ್ಲಿ ನಡೆದ `ಗೌರಿದಿನ' ಕಾರ್ಯಕ್ರಮದಂದು ಕೊರಳಲ್ಲಿ ಹಾಕಿಕೊಂಡಿದ್ದ `ನಾನೂ ಕೂಡ ನಗರ ನಕ್ಸಲೀಯ' ಎಂಬ ಫಲಕವನ್ನು ಅನಗತ್ಯವಾಗಿ ವಿವಾದಕ್ಕೆ ಎಳೆಯಲಾಗಿದೆ. ಬಗ್ಗೆ ಬೆಂಗಳೂರಿನ ವಕೀಲರೊಬ್ಬರು ಕಾರ್ನಾಡರ ವಿರುದ್ಧ ಪೋಲೀಸರಲ್ಲಿ ದೂರೊಂದನ್ನು ದಾಖಲಿಸಿ ತನಿಖೆಗೆ ಒತ್ತಾಯಿಸಿರುವುದು ಕೂಡ ವರದಿಯಾಗಿದೆ. ಪ್ರತಿಭಟನೆಯ ಪರಿಭಾಷೆಯನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ವಿಫಲರಾದಾಗ ಮಾತ್ರ ಇಂತಹ ಘಟನೆಗಳು ಸಂಭವಿಸಲು ಸಾಧ್ಯ.
ನಾವು ಭಾಷೆಯನ್ನು ಮುಖ್ಯವಾಗಿ `ಲೋಕೋಪಯೋಗಿ' ಮತ್ತು `ಭಾವೋಪಯೋಗಿ' ಎಂದು ಎರಡು ರೀತಿಯಲ್ಲಿ ಬಳಸುತ್ತೇವೆ ಎಂಬುದು ರಾಷ್ಟ್ರಕವಿ ಕುವೆಂಪು ಅವರು ಹೇಳುವ ಮಾತು. ಖ್ಯಾತ ಶಿಕ್ಷಣತಜ್ಞ ಮತ್ತು ವಿಮರ್ಶಕ .. ರಿಚರ್ಡ್ಸ್ ಭಾಷಾಬಳಕೆಯ ರೀತಿಗಳನ್ನು ‘Scientific use of Language’ ಮತ್ತು `Emotive use of Language' ಎಂದು ಕರೆದಿದ್ದಾನೆ. ರಿಚರ್ಡ್ಸ್ ಮತ್ತು ಕುವೆಂಪು ಹೇಳುವ ವಿಧಾನಗಳನ್ನು ಸರಳವಾಗಿ ರೀತಿ ವಿವರಿಸಬಹುದು. ಭಾಷೆಯ ಲೋಕೋಪಯೋಗಿ ಬಳಕೆ ಎಂದರೆ ಭಾಷೆಯನ್ನು ಸಹಜವಾಗಿ ಮತ್ತು ನೇರವಾಗಿ ವ್ಯವಹಾರಾನುಕೂಲಿಯಾಗಿ ಬಳಸುವ ಕ್ರಮ. ಇದನ್ನು ಸಾಮಾನ್ಯವಾಗಿ `ವ್ಯವಹಾರಿಕ ಭಾಷೆ' ಎಂದು ನಾವು ಕರೆಯಬಹುದು. ಇದು ಸಾಮಾನ್ಯವಾಗಿ ಮಾಹಿತಿಯನ್ನು ವರ್ಗಾವಣೆ ಮಾಡಲು ಬಳಕೆಯಾಗುತ್ತದೆ. ಭಾಷೆಯ ಭಾವೋಪಯೋಗಿ ಬಳಕೆ ಎಂದರೆ ನಮ್ಮ ಮನಸ್ಸಿನ ಭಾವನೆಗಳಾದ ಸಂತೋಷ, ಕೋಪ, ಸಿಟ್ಟು, ದುಃಖ ಇಂಥವುಗಳನ್ನು ಅಭಿವ್ಯಕ್ತಗೊಳಿಸಲು ಭಾಷೆಯನ್ನು ಒಂದಿಷ್ಟು ಅಸಹಜವಾಗಿ ಮತ್ತು ಸಂಕೀರ್ಣವಾಗಿ ಬಳಸುವ ಕ್ರಮ.
ಒಂದು ಉದಾಹರಣೆಯ ಮೂಲಕ ಇದನ್ನು ಸ್ಪಷ್ಟೀಕರಿಸಿಕೊಳ್ಳಬಹುದು. ನಮಗೆ ಒಂದಿಷ್ಟು ಪರಿಚಯಮಾತ್ರವಿರುವ ಅಷ್ಟೇನೂ ಹತ್ತಿರದ ಸ್ನೇಹ-ಸಂಬಂಧಗಳು ಇಲ್ಲದ ಒಬ್ಬ ವ್ಯಕ್ತಿಯು ಅಪಘಾತವೊಂದರಲ್ಲಿ ಆಕಸ್ಮಿಕ ಮರಣವನ್ನಪ್ಪಿದ ವಾರ್ತೆಯನ್ನು ಕೇಳಿದಾಗ ಆದ ನಮ್ಮ ಅನುಭವವನ್ನು ಇನ್ನೊಬ್ಬರಿಗೆ ತಿಳಿಸುವಾಗ, “ಅವರು ತೀರಿಹೋದರಂತೆ. ವಿಷಯ ತಿಳಿದು ನನಗೆ ತುಂಬಾ ದುಃಖವಾಯಿತು.” ಎಂದು ಹೇಳುತ್ತೇವೆ. ಮಾತು ನಮಗೆ ಒಂದಿಷ್ಟು ಮಾಹಿತಿಯನ್ನು-ಅಂದರೆ ಒಬ್ಬ ವ್ಯಕ್ತಿ ತೀರಿಹೋದ ಮತ್ತು ಅದು ಇನ್ನೊಬ್ಬ ವ್ಯಕ್ತಿಗೆ ಉಂಟುಮಾಡಿದ ಪರಿಣಾಮ ಇತ್ಯಾದಿ-ನೇರವಾಗಿ ನೀಡುತ್ತದೆ. ಇದನ್ನು ಭಾಷೆಯ ಲೋಕೋಪಯೋಗಿ ಪ್ರಯೋಗ ಎನ್ನಬಹುದು. ಇದೇ ಘಟನೆಯಲ್ಲಿ  ಅಪಘಾತ ಮತ್ತು ದುರ್ಮರಣದ ವಾರ್ತೆಯನ್ನು ಕೇಳಿದ ವ್ಯಕ್ತಿಯ ಹತ್ತಿರದ ಸಂಬಂಧಿಗಳಾದ ಅವನ ಹೆಂಡತಿಯೋ ಮಗನೋ ಅಥವಾ ತಾಯಿಯೋ ತಮ್ಮ ಅನುಭವವನ್ನು ಹೇಳುವಾಗ ಭಾಷೆಯನ್ನು ಮೊದಲಿನಂತೆ ಸಹಜವಾಗಿ ಕೇವಲ ಮಾಹಿತಿಕೊಡುವ ಮಾತಾಗಿ ಬಳಸುವುದಿಲ್ಲ.
ಅವರು ತಮ್ಮ ಅನುಭವವನ್ನು, “ಅವರು ಅಪಘಾತದಲ್ಲಿ ತೀರಿಕೊಂಡ ವಿಷಯ ಮೊದಲ ಸಲ ನನ್ನ ಕಿವಿಮೇಲೆ ಬಿದ್ದಾಗ ಅದನ್ನು ಕೇಳಿ ನನ್ನ ಎದೆ ಒಡೆದೇ ಹೋಯಿತು” ಎಂದು ಹೇಳುವುದುಂಟು. ಮಾತು ಘಟನೆಯ ಬಗ್ಗೆ ಮತ್ತು ಅದನ್ನು ಕೇಳಿದವರ ಮೇಲೆ ಮಾಡಿದ ಪರಿಣಾಮದ ಮಾಹಿತಿಯನ್ನು ಮಾತ್ರ ನೀಡದೆ ಅದನ್ನು ಕೇಳಿದವರ ಮನಸ್ಸಿನಲ್ಲಿ ಉಂಟಾದ ಭಾವನೆಯ ಸ್ವರೂಪ ಮತ್ತು ಅದರ ತೀವ್ರತೆಯನ್ನು ಅಭಿವ್ಯಕ್ತಿಗೊಳಿಸುತ್ತದೆ. ಇದನ್ನು ಭಾಷೆಯ ಭಾವೋಪಯೋಗಿ ಬಳಕೆ ಎನ್ನಬಹುದು. ವಾಸ್ತವದಲ್ಲಿ `ನನ್ನ ಎದೆ ಒಡೆದು ಹೋಯಿತು' ಎಂಬುದು ವೈಜ್ಞಾನಿಕವಾಗಿ ಅರ್ಥರಹಿತವಾದ ಮಾತು. ಏಕೆಂದರೆ `ಎದೆ ಒಡೆಯುವುದು' ಅಂದರೆ `ಹೃದಯ ಚೂರಾಗುವುದು' ಎಂದು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಹೃದಯ ಚೂರಾದರೆ ತನ್ನ ಅನುಭವವನ್ನು ಹೇಳಿಕೊಳ್ಳಲು ವ್ಯಕಿಯೇ ಬದುಕಿರುವುದಿಲ್ಲ! ಹಾಗಾಗಿ ಮಾತು ಭಾಷೆಯ ವೈಜ್ಞಾನಿಕ ಬಳಕೆಯಲ್ಲ. ಅದನ್ನು ಹಾಗೆ ಅರ್ಥಮಾಡಿಕೊಳ್ಳುವುದು ಸರಿಯಾದ ಕ್ರಮವಲ್ಲ. ಅದು ಭಾಷೆಯ ಭಾವೋಪಯೋಗಿ ಬಳಕೆ. `ನನ್ನ ಎದೆ ಒಡೆದು ಹೋಯಿತು' ಎಂಬುದು ಇಲ್ಲಿ `ನನಗೆ ಅತ್ಯಂತ ಹೆಚ್ಚು ನೋವು ದಿಗ್ಭ್ರಮೆಗಳು ಉಂಟಾದವು' ಎಂಬ ಅರ್ಥವನ್ನು ನೀಡುತ್ತದೆ. ಇದು ಶಬ್ಧಕೋಶದ ಅರ್ಥವಲ್ಲ; ಬದಲಿಗೆ ಭಾವಕೋಶದ ಅರ್ಥ!
ಭಾಷೆಯ ಭಾವೋಪಯೋಗಿ ಬಳಕೆ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಪುಲವಾಗಿ ಬಳಕೆಯಾಗುತ್ತಿರುತ್ತದೆ. ನಮ್ಮ ಮನಸ್ಸಿನ ತೀವ್ರ ಭಾವನೆಗಳನ್ನು ಪರಿಣಾಮಕಾರಿಯಾಗಿ ಓದುಗರ ಅಥವಾ ಕೇಳುಗರ ಮನಸ್ಸಿಗೆ ಅದೇ ಎತ್ತರದ ಮಟ್ಟದಲ್ಲಿ ತಲುಪಿಸಲು ಬಳಕೆಯನ್ನು ಮಾಡಲಾಗುತ್ತದೆ. ಕೆಲವು ಉದಾಹರಣೆಗಳನ್ನು ಗಮನಿಸುವುದಾದರೆ ಮಹಾಕವಿ ರನ್ನ ತನ್ನ `ಗದಾಯುದ್ಧ'ದಲ್ಲಿ ಮಹಾಭಾರತದ ಯುದ್ಧದಲ್ಲಿ ತನ್ನೆಲ್ಲ ಸಹೋದರರನ್ನು ಕಳೆದುಕೊಂಡು ಕೊನೆಗೆ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಿದ್ದ ದುರ್ಯೋಧನನಿಗೆ, ಹೊರಗೆ ತನ್ನನ್ನು ಹೀಯ್ಯಾಳಿಸಿ ಮಾತನಾಡುತ್ತಿದ್ದ ಭೀಮನ ಮಾತುಗಳನ್ನು ಕೇಳಿ ಏನಾಯಿತು ಎಂಬುದನ್ನು, `ನೀರೊಳಿರ್ದು ಬೆಮರ್ತನ್ ಉರಗ ಪತಾಕಂ' ಎಂದು ಹೇಳುತ್ತಾನೆ. `ನೀರಿನಲ್ಲಿದ್ದೂ ಬೆವರಿದನು' ಎಂಬುದು ವೈಜ್ಞಾನಿಕವಾಗಿ ತಪ್ಪು ಹೇಳಿಕೆ. ಹಾಗೇ ಹೇಳುವ ಮೂಲಕ ಕವಿ ಮಾತನ್ನು ಅವನಿಗೆ ಯಾವಮಟ್ಟದ ಕೋಪ ಬಂದಿತು ಎಂಬುದನ್ನು ನಮಗೆ ತಿಳಿಸಲು ಬಳಸಿದ್ದಾನೆ. ಅದೇ ರೀತಿ ಕುಮಾರವ್ಯಾಸ ತನ್ನ `ಕರ್ಣಾಟ ಭಾರತ ಕಥಾಮಂಜರಿ'ಯಲ್ಲಿ ದ್ರೋಣಾಚಾರ್ಯರ ಮರಣವಾರ್ತೆಯನ್ನು ದೃತರಾಷ್ಟ್ರನಿಗೆ ವರದಿಮಾಡುವ ಸಂಜಯನ ಬಾಯಿಂದ, ಬರತುದು ಕಡಲು, ಮುರಿದುದು ಮೇರು, ತಿರುಗಿತು ಪೊಡವಿ, ಬಿದ್ದಿದು ಭಾನುಮಂಡಲ ಎಂದು ಹೇಳಿಸುತ್ತಾನೆ. ಸಮುದ್ರ ಬತ್ತಿತು ಪರ್ವತ ಮುರಿಯಿತು ಭೂಮಿಯು ತಿರುಗಿತು, ಸೂರ್ಯಮಂಡಲವೇ ಬಿತ್ತು'' ಎಂಬ ಎಲ್ಲ ಮಾತುಗಳೂ ವೈಜ್ಞಾನಿಕವಾಗಿ ಸುಳ್ಳು ಎನ್ನಿಸುವಂಥವು. ಆದರೆ ಅವುಗಳು ಅಲ್ಲಿ ಬಳಕೆಯಾಗಿ ಘಟನೆಯ ತೀವ್ರತೆಯನ್ನು ಕೇಳುಗರಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಯಶಸ್ವಿಯಾಗಿವೆ.
ಕೇವಲ ಸಾಹಿತ್ಯ ಕೃತಿಗಳಲ್ಲಿ ಮಾತ್ರವಲ್ಲದೇ ದಿನನಿತ್ಯದ ವ್ಯವಹಾರಗಳಲ್ಲಿ ಕೂಡ ಭಾಷೆಯ ರೀತಿಯ ಭಾವೋಪಯೋಗಿ ಬಳಕೆ ಇದ್ದೇ ಇರುತ್ತದೆ. ಒಬ್ಬ ಹಿರಿಯವ್ಯಕ್ತಿ ಒಬ್ಬ ಚಿಕ್ಕಹುಡುಗಿಯನ್ನು ಕುರಿತು `ಬಾರಮ್ಮ ಇಲ್ಲಿ' ಎಂದು ಕರೆದಾಗ, ಕರೆದ ವ್ಯಕ್ತಿಯು ಮಗನೂ ಅಲ್ಲ, ಕರೆಸಿಕೊಂಡ ಹುಡುಗಿ ಅವನ ಅಮ್ಮನೂ ಅಲ್ಲ ಎಂಬುದು ನಮಗೆ ಗೊತ್ತಿದ್ದರೂ ನಾವ್ಯಾರು ಅದನ್ನು ಹುಚ್ಚುಮಾತು ಎಂದು ಗೇಲಿಮಾಡುವುದಿಲ್ಲ. ಬದಲಾಗಿ ಅವಳ ಬಗ್ಗೆ ಹಿರಿಯರ ಪ್ರೀತಿಯ ಭಾವವನ್ನು ಗುರುತಿಸುತ್ತೇವೆ. ಚಿಕ್ಕಕೂಸನ್ನು ಎತ್ತಿ ಮುದ್ದಾಡುವ ತಾಯಿ ಮಗುವನ್ನು `ಚಿನ್ನ' `ಬಂಗಾರ' ಎಂದು ಕರೆದರೆ ಅವಳು ತಪ್ಪು ತಪ್ಪು ಹೇಳುತ್ತಿದ್ದಾಳೆ ಅದರ ಬದಲು `ಎರಡು ಲೀಟರ್ ರಕ್ತದ, ಮೂರುವರೆ ಕೇಜಿ ಮಾಂಸದ ಮುದ್ದೆಯೇ' ಎಂದು ಕರೆಯಬೇಕಿತ್ತು ಎಂದು ಯೋಚಿಸುವ ಅವಿವೇಕಕ್ಕೆ ನಾವ್ಯಾರೂ ಹೋಗುವುದಿಲ್ಲ. ಒಬ್ಬ ವ್ಯಕ್ತಿ ಇನ್ನೊಬ್ಬನನ್ನು ಜಗಳದಲ್ಲಿ `ಬೋಳಿಮಗನೇ' ಎಂದು ಬೈದಾಗ ಬೈಯುತ್ತಿರುವ ವ್ಯಕ್ತಿಗೂ ಗೊತ್ತಿರುತ್ತದೆ ಅವನು ಬೋಳಿಯ (ವೇಶ್ಯೆಯ) ಮಗನಲ್ಲ ಎಂಬುದು. ಆದರೂ ಅವನನ್ನು ಹುಚ್ಚನೆಂದು ನಾವು ಗ್ರಹಿಸದೇ ಅವನ ಕೋಪದ ಭಾವವನ್ನು ಗುರುತಿಸುತ್ತೇವೆ. ಹೀಗೆ ಹತ್ತು ಹಲವು ಉದಾಹರಣೆಗಳನ್ನು ನಾವು ಕೊಡುತ್ತಾ ಹೋಗಬಹುದು.
ನಮ್ಮ ಕನ್ನಡ ಭಾಷೆ ಪ್ರಧಾನವಾಗಿ `ವಾಚ್ಯಾರ್ಥ, ಸೂಚ್ಯಾರ್ಥ, ಮತ್ತು ವ್ಯಂಗ್ಯಾರ್ಥ' ಎಂಬ ಮೂರು ಅರ್ಥಗಳಲ್ಲಿ ಬಳಕೆಯಾಗುತ್ತಿರುತ್ತದೆ. ಆಡಿದ ಮಾತಿಗೆ ಶಬ್ದಶಃ ಅರ್ಥವೇ (Literary Meaning) ಅಂದರೆ `ಆಡಿದಂತೆಯೇ ಅರ್ಥ' ಬರುವಂತಿದ್ದರೆ ಅದು ವಾಚ್ಯಾರ್ಥ. `ಆಡುವುದು ಒಂದು ಅರ್ಥವಾಗುವುದು ಇನ್ನೊಂದು ಇದ್ದರೆ ಅದು ಸೂಚ್ಯಾರ್ಥ. ಆಡಿದ ಮಾತಿಗೆ ವಿರುದ್ಧವಾದ ಅರ್ಥಹೊಮ್ಮಿದರೆ ಅದು ವ್ಯಂಗ್ಯಾರ್ಥ. ಒಂದೊಂದು ಉದಾಹರಣೆಗಳ ಮೂಲಕ ಇವುಗಳ ವ್ಯತ್ಯಾಸವನ್ನು ಗುರುತಿಸಬಹುದು. ತನ್ನ ಪ್ರೀತಿಯ ಪ್ರಸ್ತಾವನೆಯನ್ನು ತಿರಸ್ಕರಿಸಿದ ಹುಡುಗಿಯೊಬ್ಬಳ ವಿಷಯದಲ್ಲಿ ಹುಡುಗನೊಬ್ಬನು ಆಡಬಹುದಾದ ಮೂರು ಮಾತುಗಳನ್ನು ಗಮನಿಸಿ: ಒಂದು: “ನಿನಗೆ ಇಷ್ಟವಿಲ್ಲದಿದ್ದರೆ ನಾನು ನಿನ್ನನ್ನು ಬಲವಂತ ಮಾಡುವುದಿಲ್ಲ.” ಎರಡು: “ನೀನು ಅದು ಹೇಗೆ ಬೇರೆಯವರನ್ನು ಮದುವೆಯಾಗುವೆಯೋ ನೋಡುತ್ತೇನೆ.” ಮೂರು: `ಓಹೋ ನೀನು ತ್ರಿಪುರ ಸುಂದರಿ.. ರಾಜಕುಮಾರನೇ ಬಂದು ನಿನ್ನನ್ನು ಮದುವೆಯಾಗುತ್ತಾನೆ ಬಿಡು.” ಇವುಗಳಲ್ಲಿ ಮೊದಲನೇ ಮಾತು ನೇರಾನೇರ ಅರ್ಥವಿರುವುದರಿಂದ ಅದು ವಾಚ್ಯಾರ್ಥ. ಎರಡನೆಯದರಲ್ಲಿ 'ಬೇರೆಯವರೊಂದಿಗೆ ನಿನ್ನ ಮದುವೆಯಾಗಲು ನಾನು ಬಿಡುವುದಿಲ್ಲ’ ಎಂಬ ಅರ್ಥವಿರುವುದರಿಂದ ಅದು ಸೂಚ್ಯಾರ್ಥ. ಮೂರನೆಯದರಲ್ಲಿ 'ನೀನು ತ್ರಿಪುರ ಸುಂದರಿಯಲ್ಲ; ನಿನ್ನನ್ನು ಯಾವ ರಾಜಕುಮಾರನೂ ಬಂದು ಮದುವೆಯಾಗುವುದಿಲ್ಲ' ಎಂಬ ವಿರುದ್ಧಾರ್ಥವಿರುವುದರಿಂದ ಅದು ವ್ಯಂಗ್ಯಾರ್ಥ.
ನಕ್ಸಲೀಯ ಚಳವಳಿ ಮತ್ತು ಕಾರ್ನಾಡರ ವಿಷಯಕ್ಕೆ ಮತ್ತೆ ಬರೋಣ. ಭಾರತದಲ್ಲಿ ನಕ್ಸಲೀಯ ಚಳವಳಿಯ ಬಗ್ಗೆ - ಅದನ್ನು ಸಂಪೂರ್ಣ ಬೆಂಬಲಿಸುವ, ಸಂಪೂರ್ಣವಾಗಿ ವಿರೋಧಿಸುವ, ಮತ್ತು ಅದರ ಸೈದ್ಧಾಂತಿಕತೆಯನ್ನು ಮಾತ್ರ ಒಪ್ಪಿಕೊಂಡು ಕ್ರಿಯಾಮಾರ್ಗವನ್ನು ವಿರೋಧಿಸುವ - ಮೂರು ನೆಲೆಗಳಿವೆ. ಚಳವಳಿಯೊಂದಿಗೆ ಹೊಂದಿರುವ ಸೈದ್ಧಾಂತಿಕ ಸಂಬಂಧಗಳ ಆಧಾರದ ಮೇಲೆ ಮೂರು ರೀತಿಯ ಜನರು ನಮ್ಮಲ್ಲಿ ಇದ್ದಾರೆ. ಮೊದಲನೆಯವರು ಚಳವಳಿಯು ಶತಮಾನಗಳ ಕಾಲ ಶೋಷಣೆಗೊಳಗಾಗಿದ್ದ ಶೋಷಿತ ಸಮುದಾಯಕ್ಕೆ `ಬಿಡುಗಡೆ' ಬೆಳಕಾಗಿ ಬಂದಿತು ಎಂದು ಭಾವಿಸುವವರು. ಇವರು ನೇರವಾಗಿ ಚಳವಳಿಯನ್ನು ಬೆಂಬಲಿಸುವವರು. ಎರಡನೆಯವರು ಮೊದಲನೆಯವರಿಗೆ ವಿರುದ್ಧ ದಿಕ್ಕಿನಲ್ಲಿರುವವರು. ಅವರು ಚಳವಳಿ ಭಾರತ ಆಂತರಿಕ ಭದ್ರತೆಗೆ ಬಹುದೊಡ್ಡ ಅಪಾಯವನ್ನು ತಂದೊಡ್ಡುವ ಮೂಲಕ ದೇಶವನ್ನೇ ತಮ್ಮ ಕಪಿಮುಷ್ಟಿಯ `ಬಂಧನ'ಕ್ಕೆ ಒಳಪಡಿಸಿದೆಯೆಂದು ಭಾವಿಸುವವರು. ಇವರು ನೇರವಾಗಿ ಚಳವಳಿಯನ್ನು ವಿರೋಧಿಸುವವರು. ಇವೆರಡರ ಮಧ್ಯೆ ಮೂರನೆಯವರಾಗಿ ಇನ್ನೊಂದು ರೀತಿಯ ಜನರಿದ್ದಾರೆ. ಅವರೇ ನಕ್ಸಲರ ಶೋಷಣಾರಹಿತ ಸಮಸಮಾಜ ನಿರ್ಮಾಣದ ಆಶಯವನ್ನು ಸೈದ್ಧಾಂತಿಕವಾಗಿ ಒಪ್ಪಿಕೊಂಡೂ ಆಶಯಕ್ಕಾಗಿ ಅವರು ಹಿಡಿದಿರುವ `ಸಶಸ್ತ್ರ ಬಂಡಾಯ'ಯದ ಮಾರ್ಗವನ್ನು ಬೆಂಬಲಿಸದೇ ಅದನ್ನು ವಿರೋಧಿಸುವವರು!
ಭಾರತದಲ್ಲಿನ ಬಹುತೇಕ ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು, ವಿಚಾರವಾದಿಗಳು ಮೂರನೆಯ ವರ್ಗಕ್ಕೆ ಸೇರಿದವರು. ಶೋಷಣಾರಹಿತ ಸಮಾಜ ಸಮಸಮಾಜ ನಿರ್ಮಾಣದ ಅವರ ಆಶಯವನ್ನು ತಾತ್ವಿಕವಾಗಿ ಒಪ್ಪಿಕೊಂಡಿರುವವರು ಆದರೆ ಅದಕ್ಕಾಗಿ ಅವರು ತುಳಿದಿರುವ 'ಹಿಂಸಾತ್ಮಕ' ಹೋರಾಟವನ್ನು ವಿರೋಧಿಸುತ್ತಿರುವವರು. ಭಾರತದಲ್ಲಿ ನಕ್ಸಲ್ ಹೋರಾಟದ ಬಗೆಗಿನ ವಿರೋಧವು ಮುಖ್ಯವಾಗಿ ಅದು ಪ್ರಜಾಪ್ರಭುತ್ವ ಮಾದರಿಯ ರಾಷ್ಟ್ರವೊಂದಕ್ಕೆ ತಕ್ಕುದಲ್ಲದ `ಹಿಂಸಾತ್ಮಕ'ಮಾರ್ಗವನ್ನು ಅನುಸರಿಸುತ್ತದೆ ಎಂಬ ನೆಲೆಗಟ್ಟಿನ ಮೇಲೆ ಹುಟ್ಟಿರುವಂಥದ್ದು. ಹಾಗೆ ನೋಡಿದರೆ ಜನಹೋರಾಟಗಳನ್ನು `ಹಿಂಸಾತ್ಮಕ' ಮತ್ತು `ಅಹಿಂಸಾತ್ಮಕ' ಎಂದು ವಿಭಾಗಿಸುವುದು ಅಷ್ಟು ಸರಳವಲ್ಲ. ಸಾಮಾನ್ಯವಾಗಿ ಯಾವ ಹೋರಾಟಗಳೂ ಆರಂಭದಲ್ಲಿ ಹಿಂಸಾತ್ಮಕವಾಗಿಯೇ ಆರಂಭವಾಗುವುದಿಲ್ಲ. ಬಹುತೇಕ ಎಲ್ಲ ಹೋರಾಟಗಳು ಪ್ರಾರಂಭವಾಗುವುದು ಅಹಿಂಸಾತ್ಮಕವಾಗಿಯೇ. ಆದರೆ ಅಹಿಂಸಾತ್ಮಕ ಹೋರಾಟಗಳಿಗೆ ಜನಸಮುದಾಯ ಮತ್ತು ಪ್ರಭುತ್ವಗಳು ತೋರುವ ಸ್ಪಂದನೆ ಮತ್ತು ಪ್ರತಿಕ್ರಿಯೆಗಳ ಆಧಾರದ ಮೇಲೆ ಕೆಲವು ಹೋರಾಟಗಳು ಮಾರ್ಗಮಧ್ಯದಲ್ಲಿ ತಮ್ಮ ಪಥ ಬದಲಿಸಿಕೊಳ್ಳುತ್ತವೆ. ಇದು ಪ್ರಪಂಚದ ಯಾವುದೇ ಜನಹೋರಾಟಗಳಿಗೆ ಅನ್ವಯಿಸುವ ಮಾತು. ಅನ್ಯಾಯ, ಶೋಷಣೆಗಳ ವಿರುದ್ಧ ಅಹಿಂಸಾತ್ಮಕವಾಗಿ ನಡೆವ ಜನಹೋರಾಟಗಳಿಗೆ ಶೋಷಣೆಯ ಆರೋಪ ಎದುರಿಸುತ್ತಿರುವ ಜನ ಅಥವಾ ಪ್ರಭುತ್ವ ಸರಿಯಾಗಿ ಸ್ಪಂದಿಸದೇ ಇದ್ದಾಗ, ಅಂತಹ ಮಾದರಿಯ ಹೋರಾಟ `ನಿಷ್ಪ್ರಯೋಜಕ' ಅನ್ನುವಂತಾದಾಗ ಹೋರಾಟಗಳ ಮುಂದೆ ಎರಡು ಆಯ್ಕೆಗಳಿರುತ್ತವೆ. ಒಂದು ಹೋರಾಟವನ್ನು ನಿಲ್ಲಿಸುವುದು. ಇನ್ನೊಂದು ಅದರ ಪಥವನ್ನು ಹಿಂಸಾತ್ಮಕವಾಗಿ ಬದಲಿಸಿಕೊಂಡು ಮುಂದುವರೆಯುವುದು. ಬಹುಶಃ ನಕ್ಸಲ್ ಹೋರಾಟ ಹೀಗೆ ಪಥಬದಲಿಸಿಕೊಂಡ ಹೋರಾಟ ಇದ್ದೀತು.
ಅದು ಏನೇ ಇರಲಿ ಭಾರತದಂತಹ ಪ್ರಜಾಪ್ರಭುತ್ವ ಮಾದರಿಯ ದೇಶದಲ್ಲಿ ಪ್ರಭುತ್ವವೆಂಬುದು ಎಷ್ಟೇ ಶೋಷಣೆ ಮಾಡುವ ಹಂತ ತಲುಪಿದರೂ ನಕ್ಸಲ್ ಮಾದರಿ `ಸಶಸ್ತ್ರ ಹೋರಾಟ' ಇಲ್ಲಿಗೆ ಯೋಗ್ಯವಲ್ಲ. ನಾವು ಮಾಡುವ ಯಾವುದೇ ಹೋರಾಟ ಅದು ನಮ್ಮ ಸಂವಿಧಾನದ ಪರಿಮಿತಿಯನ್ನು ಮೀರಕೂಡದು ಎಂಬುದು ಬಹುತೇಕ ಎಲ್ಲ ರಾಷ್ಟ್ರೀಯವಾದಿಗಳೂ, ಮಾನವಪ್ರೇಮಿಗಳೂ ಒಪ್ಪುವ ಸಂಗತಿ. ಕಾರಣದಿಂದಾಗಿಯೇ ಭಾರತದ ಬಹುತೇಕ ಹೋರಾಟಗಾರರು ಮಾವೋವಾದಿ ಹೋರಾಟದ ಆಶಯವನ್ನು ಒಪ್ಪಿಕೊಂಡೂ ಅದರ ಹೋರಾಟಮಾದರಿಯನ್ನು ತಿರಸ್ಕರಿಸಿದ್ದಾರೆ. ಆಶಯವನ್ನು ಪ್ರಜಾಪ್ರಭುತ್ವಮಾದರಿಯ ಹೋರಾಟಗಳ ಮೂಲಕವೇ ಸಾಧಿಸೋಣ ಬನ್ನಿ ಎಂದು ನಕ್ಸಲೀಯರಿಗೆ ಕರೆನೀಡುತ್ತಲೇ ಬಂದಿದ್ದಾರೆ. ಅವರಲ್ಲಿ ಕರೆಗೆ ಓಗೊಟ್ಟು ಕೆಲವರು `ಮುಖ್ಯವಾಹಿನಿ'ಗೆ ಬಂದು ಪ್ರಸ್ತುತ ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದಾರೆ; ಕೆಲವರು ಬಂದಿಲ್ಲ. ಅವರೆಲ್ಲರನ್ನೂ  ನಮ್ಮ ಪ್ರಜಾಪ್ರಭುತ್ವ ಮಾದರಿಯ ಜನಪರಹೋರಾಟಗಳ ವ್ಯಾಪ್ತಿಗೆ ತಂದುಕೊಳ್ಳಬೇಕಾದ ತುರ್ತು ಇಂದು ನಮ್ಮ ಮುಂದಿದೆ. ಆದರೆ ಕೆಲಸ ಅಲ್ಲಲ್ಲಿ ನಡೆಯುತ್ತಿರಬೇಕಾದ ಸಂದರ್ಭದಲ್ಲಿಯೇ ಇತ್ತೀಚೆಗೆ ನಮ್ಮ ಸಮಾಜದ ಬಡವರು, ಶೋಷಿತರು, ದೀನರು, ದಲಿತರು ಇವರೆಲ್ಲರ ಪರವಾಗಿ ಹೋರಾಟ ಮಾಡುವ ಎಲ್ಲ ಹೋರಾಟಗಾರರನ್ನು `ನಕ್ಸಲರು' ಎಂದು ಹಣೆಪಟ್ಟಿಕಟ್ಟಿ ಗುರುತಿಸುವ ಒಂದು ಕೆಟ್ಟ ಸಂಪ್ರದಾಯ ಶುರುವಾಗಿದೆ. ದೇಶದ ಬಗೆಯ ಹೋರಾಟಗಾರರನ್ನು ಎಡಪಂಥೀಯ ಉಗ್ರರೊಂದಿಗೆ ಸಮೀಕರಿಸಿ ಹೋರಾಟಗಳನ್ನು ಮೆಟ್ಟಿಹಾಕುವುದು ಬಹುತೇಕವಾಗಿ ಬಲಪಂಥೀಯ ರಾಜಕಾರಣದ ಒಂದು ಭಾಗವೂ ಆಗಿರಬಹುದು. ಬಗೆಯ ಆಲೋಚನಾ ಕ್ರಮವು ಕೆಲವರಿಗೆ ತಾತ್ಕಾಲಿಕವಾದ ರಾಜಕೀಯ ಲಾಭಗಳನ್ನು ತಂದುಕೊಡುವಲ್ಲಿ ಯಶಸ್ವಿಯಾಗಬಹುದಾದರೂ ದೀರ್ಘಕಾಲಿಕವಾಗಿ ದೇಶಕ್ಕೆ ಬಹುದೊಡ್ಡ ಅಪಾಯವನ್ನು ತರಬಲ್ಲದು. ಬಗ್ಗೆ ನಮಗೆ ಎಚ್ಚರಿಗೆ ಇರಬೇಕಾದದ್ದು ತುಂಬಾ ಅವಶ್ಯಕವಾದದ್ದು.
`ನಕ್ಸಲೀಯರು' ಎಂಬ ಪದ ನಮಗೆ ಹೊಸದಲ್ಲವಾದರೂ `ನಗರ ನಕ್ಸಲೀಯರು' ಎಂಬ ಪದಪುಂಜ ನಮಗೆ ಹೊಸದು. ಒಂದು ತಿಂಗಳ ಹಿಂದೆ ಪದಪುಂಜ ಯಾರಿಗೂ ಗೊತ್ತಿರಲಿಲ್ಲ. ಇತ್ತೀಚೆಗೆ ಆಂಧ್ರದ ಕ್ರಾಂತಿಕಾರಿ ಕವಿ ವರವರರಾವ್ ಸೇರಿದಂತೆ ದೇಶದ ಕೆಲವು ಎಡಪಂಥೀಯ ಲೇಖಕರು ಮತ್ತು ಹೋರಾಟಗಾರರನ್ನು `ಪ್ರಧಾನಮಂತ್ರಿಯವರ ಹತ್ಯೆಗೆ ಸಂಚುರೂಪಿಸುತ್ತಿದ್ದರು' ಎಂಬ ಆರೋಪದಡಿ ಬಂಧಿಸಿದ ಪುಣೆಯ ಪೋಲಿಸರು ಮೊಟ್ಟಮೊದಲನೆಯದಾಗಿ ಪದಪುಂಜವನ್ನು ಟಂಕಿಸಿ ಬಳಸಿದರು. ಹೋರಾಟಗಾರರನ್ನು ಬಂಧಿಸಿದ ಅವರ ಕ್ರಮದ ಬಗ್ಗೆ ದೇಶಾದ್ಯಂತ ಪ್ರಬಲವಾದ ಪ್ರತಿರೋಧ ಕಂಡುಬಂದಾಗ ಬಗ್ಗೆ ಸಾರ್ವಜನಿಕವಾಗಿ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳಲು ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಾವು ಬಂಧಿಸಿದ ವ್ಯಕ್ತಿಗಳನ್ನು ಗುರುತಿಸಲು ಹೆಸರನ್ನು ಮೊದಲಬಾರಿ ಅವರು ಪ್ರಯೋಗಿಸಿದರು. (ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ರೀತಿ ಸಾರ್ವಜನಿಕವಾಗಿ ಪತ್ರಿಕಾ ಗೋಷ್ಠಿ ಕರೆದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡ ಅವರ ಕ್ರಮವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡು ಹೋರಾಟಗಾರರನ್ನು `ಗೃಹಬಂಧನ'ಕ್ಕೆ ಒಳಪಡಿಸಿತು ಎಂಬುದನ್ನೂ ಇಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಬೇಕು.) ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅದರ ಬಗ್ಗೆ ಚರ್ಚೆ ಇಲ್ಲಿ ಅನವಶ್ಯ.
ಈಗ ನಮ್ಮ ಮುಂದಿನ ಪ್ರಶ್ನೆ ಎಂದರೆ ಈಗತಾನೇ ಪೋಲೀಸರು ಟಂಕಿಸಿರುವ, ಯಾವ ವೇದಿಕೆಗಳಲ್ಲೂ ಚರ್ಚೆಗೆ ಬಾರದ, ಇನ್ನೂ ಯಾವ ನ್ಯಾಯಾಲಯಗಳ ಪ್ರಕರಣಗಳಲ್ಲಿಯೂ ಪ್ರಸ್ತಾಪವಾಗದ `ನಗರ ನಕ್ಸಲೀಯ' ಪದಪುಂಜದೊಡನೆ ಗುರುತಿಸಿಕೊಳ್ಳುವುದು ಅಥವಾ ಅದನ್ನು ಬಳಸುವುದು ಅಪರಾಧವಾಗುತ್ತದೆಯೇ ಎಂಬುದು. `ಗೌರಿದಿನ' ಕಾರ್ಯಕ್ರಮದಂದು ಬೆಂಗಳೂರಿನ ಸಮಾರಂಭದಲ್ಲಿ ಗಿರೀಶ್ ಕಾರ್ನಾಡ್ ಕೊರಳಿನಲ್ಲಿ ಹಾಕಿಕೊಂಡ ಫಲಕವು ಇಂಗ್ಲಿಷಿನಲ್ಲಿ ಬರೆದದ್ದಾಗಿತ್ತು ಮತ್ತು ಅದರ ಬರಹ ಹೀಗಿತ್ತು. “ME TOO URBAN NAXAL”.  ಇದನ್ನು ನಾನು ಮೇಲೆ ಹೇಳಿದ ವಾಚ್ಯಾರ್ಥದಲ್ಲಿ ಗ್ರಹಿಸಿದವರು ಇದನ್ನು ವಿವಾದಕ್ಕೆ ಎಳೆದಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಆದರೆ ನಮಗೆ ಗೊತ್ತಿರಬೇಕು. ಅಲ್ಲಿ ನಡೆಯುತ್ತಿದ್ದದ್ದು ಪ್ರತಿಭಟನೆ. ಪ್ರತಿಭಟನೆಗೆ ತನ್ನದೇ ಆದ ಒಂದು ಭಾಷೆಯಿರುತ್ತದೆ. ಅದಕ್ಕೆ ವಾಚ್ಯಾರ್ಥಕ್ಕೆ ಭಿನ್ನವಾದ ಅರ್ಥವಿರುತ್ತದೆ ಎಂದು.
2012 ಡಿಸೆಂಬರಿನಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ, ಈಗ `ನಿರ್ಭಯಾ ಪ್ರಕರಣ'ವೆಂದೇ ಹೆಸರಾಗಿರುವ ದೆಹಲಿ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಯ ಪ್ರಕರಣಕ್ಕೆ ಪ್ರತಿರೋಧವಾಗಿ ದೇಶಾದ್ಯಂತ ಪ್ರತಿಭಟನೆಗಳು ನಡೆದವು. ಆಗ ದೆಹಲಿಯಲ್ಲಿಯೇ ನಡೆದ ಕಾಲೇಜು ವಿದ್ಯಾರ್ಥಿನಿಯರ ಪ್ರತಿಭಟನೆಯಲ್ಲಿ ಅನೇಕ ವಿದ್ಯಾರ್ಥಿನಿಯರು ಹಿಡಿದುಕೊಂಡಿದ್ದ ಫಲಕಗಳಲ್ಲಿ, You Rape; We Chop’ ಎಂಬ ಹೇಳಿಕೆಯಿತ್ತು. “ನೀವು (ನಮ್ಮನ್ನು) ಅತ್ಯಾಚಾರ ಮಾಡಿ; ನಾವು (ನಿಮ್ಮದನ್ನು?') ಕತ್ತರಿಸುತ್ತೇವೆ” ಎಂಬ ಹೇಳಿಕೆಯನ್ನು ವಾಚ್ಯಾರ್ಥದಲ್ಲಿ ಗ್ರಹಿಸಿ ವಿದ್ಯಾರ್ಥಿನಿಯರೆಲ್ಲ ತಮ್ಮ ಅತ್ಯಾಚಾರಕ್ಕಾಗಿ ಆಮಂತ್ರಣ ನೀಡುತ್ತಿದ್ದಾರೆ ಎಂದು ಯಾವ ಮೂರ್ಖನೂ ಅರ್ಥಮಾಡಿಕೊಳ್ಳಲಿಲ್ಲ. ಬದಲಾಗಿ ಅವರಿಗೆ ಬಂದಿರುವ ಕೋಪ ಯಾವ ಮಟ್ಟದ್ದು ಎಂದು ಸರಿಯಾಗಿಯೇ ಗ್ರಹಿಸಿದರು. ಕಾರ್ನಾಡರ ಕೊರಳಲ್ಲಿದ್ದ ಫಲಕದ ಬರವಣಿಗೆಯ ಅರ್ಥವನ್ನೂ ನಾವು ಇದೇ ರೀತಿಯಲ್ಲಿ ಗ್ರಹಿಸಿಕೊಳ್ಳಬೇಕು. ಹೀಗಾಗಿ `ನಾನು ಕೂಡ ನಗರ ನಕ್ಸಲೀಯ' ಎಂಬ ಅಲ್ಲಿನ ಬರವಣಿಗೆಗೆ `ನೀವು ಹೋರಾಟಗಾರರ ಬಗ್ಗೆ ನಗರ ನಕ್ಸಲೀಯ ಎಂಬ ಪದಪುಂಜವನ್ನು ಬಳಕೆ ಮಾಡಿದ್ದಕ್ಕೆ ನನ್ನ ಪ್ರಬಲ ವಿರೋಧವಿದೆ' ಎಂಬ ಅರ್ಥ ಬರುತ್ತದೆಯೇ ಹೊರತು `ನಾನು ಕೂಡ ನಕ್ಸಲೀಯ ಅಥವಾ ಪೋಲಿಸರು `ಹುಟ್ಟಿಸಿದ' ಹೊಸಕೂಸು `ನಗರ ನಕ್ಸಲೀಯ' ಎಂಬ ಅರ್ಥ ಖಂಡಿತಾ ಬರುವುದಿಲ್ಲ.
*****
ಡಾ. ರಾಜೇಂದ್ರ ಬುರಡಿಕಟ್ಟಿ
09-09-2018