Tuesday, August 29, 2017

ಪಂಪೀ ಒತ್ತಡ ಮತ್ತು ಕುಂವೀ ಸಂಕಟ

ಪಂಪೀ ಒತ್ತಡ ಮತ್ತು ಕುಂವೀ ಸಂಕಟ

ಇತ್ತೀಚೆಗಷ್ಟೆ ಕೆಲವು ಪಂಚಪೀಠಾಧೀಶ  'ಜಗದ್ಗುರು'ಗಳ ಬಗ್ಗೆ ಹಿರಿಯ ಲೇಖಕ ಮಿತ್ರರಾದ ಕುಂಬಾರ ವೀರಭದ್ರಪ್ಪ ಅವರು ತಮ್ಮ ಸಹಜಶೈಲಿಯ ಮಾತಿನ ಚಾಟಿ ಬೀಸಿದ್ದರು. ಅವರು ಆಗ ಮಾತನಾಡಿದ್ದು ಅವರ ನಿಜವಾದ ಮತ್ತು ಸಹಜವಾದ ಅಭಿಪ್ರಾಯ ಎಂದು ನಂಬಲು ಕಾರಣಗಳಿವೆ. ಏಕೆಂದರೆ ಆ ಮಾತುಗಳನ್ನು ಆಡುವಾಗ ಅವರ ಮೇಲೆ ಯಾವುದೇ ಒತ್ತಡಗಳಿದ್ದಂತೆ ತೋರುವುದಿಲ್ಲ. ಆಗ ಅವರು ಆಡಿದ ಮಾತುಗಳು ಕೆಲವು ಪಂಪೀಗಳ ಅರ್ಥರಹಿತವಾದ ಕೆಲವು ಆಚರಣೆಗಳ ಬಗೆಗಿನ ಅವರ ವಿರೋಧವೇ ಹೊರತು ಆ 'ಮಹಾಗುರು' ಗಳನ್ನು ವೈಯಕ್ತಿಕವಾಗಿ ವಿರೋಧಿಸುವ ಉದ್ದೇಶ ಅವರಿಗಿದ್ದಂತೆ ತೋರುವುದಿಲ್ಲ.

ಆದರೆ ಅದೇ ಕುಂವೀ ಇಂದು ಈ ಪಂಪೀಗಳ ಕುರಿತು ಈ ಮೊದಲು ಆಡಿದ್ದ ತಮ್ಮ ಮಾತು 'ತುಟಿತಪ್ಪಿ ಆಡಿದ್ದು' ಎಂದೂ ಪಂಪೀಗಳ ಬಗ್ಗೆ ತಮಗೆ 'ಅಪಾರವಾದ ಗೌರವವಿದೆ' ಎಂದೂ ಹೇಳಿಕೆ ನೀಡಿದ್ದು ವರದಿಯಾಗಿದೆ. ಈ ಬಗ್ಗೆ ಅನೇಕ ಸ್ನೇಹಿತರು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ವಿರೋಧ ಅಭಿಪ್ರಾಯಗಳಿರುವ ಅರ್ಥಪೂರ್ಣ ಚರ್ಚೆ ನಡೆಸಿದ್ದಾರೆ.

ಕುಂವೀ ಈ ಹೇಳಿಕೆ ನೀಡಲು ಅವರ  ಮೇಲೆ ಕೆಲವು ಪಂಪೀಗಳು ನೇರವಾಗಿಯೋ ತಮ್ಮನ್ನು ಹೊರುವ 'ಭಕ್ತರ' ಮೂಲಕವೋ ಒತ್ತಡ ಹೇರಿದ್ದಾರೆ, ಬೆದರಿಕೆ ಒಡ್ಡಿದ್ದಾರೆ ಎಂಬುದು ಇಲ್ಲಿ ಚರ್ಚಿಸಲ್ಪಡುತ್ತಿರುವ ಒಂದು ಮುಖ್ಯವಾದ ಸಂಗತಿ. ಇದನ್ನು ನಾವು ಸುಲಭವಾಗಿ ಅಲ್ಲಗಳೆಯುವಂತಿಲ್ಲ. ವಿಚಾರಗಳನ್ನು ವಿಚಾರಗಳಿಂದ ಎದುರಿಸುವ ಸಾಮರ್ಥ್ಯ ಇಲ್ಲದ ಕಾರಣದಿಂದ ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಎದುರಾಳಿಗಳ ಮೇಲೆ ಇಂತಹ ಒತ್ತಡ ಹೇರುವುದು ಪ್ರಾಣಬೆದರಿಕೆ ಒಡ್ಡುವುದು ಅಷ್ಟೇ ಏಕೆ ದೈಹಿಕ ಹಲ್ಲೆಗೂ ಇಳಿಯುವ 'ಭಕ್ತರ ಕೆಟ್ಟಚಾಳಿ' ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ  ಸಾಮಾನ್ಯ ಸಂಗತಿಯಾಗಹತ್ತಿದೆ.

ಕುಂವೀ ಮೇಲೆ ಪಂಪೀಗಳು ಈ ರೀತಿ ಒತ್ತಡ ತಂದದ್ದು ನಿಜವೇ ಆಗಿದ್ದಲ್ಲಿ ಅದು ಅತ್ಯಂತ ಖಂಡನೀಯ. ಒಂದುವೇಳೆ ಅಂತಹ ಪಾಪದ ಕೆಲಸಕ್ಕೆ ಅವರು ಕೈ ಹಾಕಿದ್ದು ನಿಜವಾಗಿದ್ದರೆ ಅದಕ್ಕೆ ತಕ್ಕ ಪ್ರತಿಫಲವನ್ನು ಅವರು ತಡವಾಗಿಯಾದರೂ ಉಣ್ಣಬೇಕಾಗುತ್ತದೆ. ಅವರ ವರ್ತನೆ ಹೀಗೇ ಮುಂದುವರೆದರೆ ಮುಂದಿನ ದಿನಗಳಲ್ಲಿ  ಅವರು ತಮ್ಮ  ಅಡ್ಡಪಲ್ಲಕ್ಕಿ ಹೊರಲಿಕ್ಕೂ ಜನರಿಲ್ಲದಂತೆ ಮಾಡಿಕೊಳ್ಳುವುದು ಗ್ಯಾರಂಟಿ. ಅದನ್ನು ಅವರು ಈಗಲೇ ಅರಿತರೆ ಒಳ್ಳೆಯದು. ದೇವರು - ಧರ್ಮ ಕುರಿತು, ದೇವಮಾನವರನ್ನು ಕುರಿತು ದೇಶಾದ್ಯಂತ ನಡೆಯುತ್ತಿರುವ ವಿದ್ಯಮಾನಗಳು ಅವರ ಕಣ್ಣು ತೆರೆಸಬೇಕು. ಅವರ ಕಣ್ಣು ತೆರೆದರೆ ಅವರನ್ನು ನಂಬಿ ಮಠಗಳಿಗೆ ಬರುವ ಭಕ್ತರ ಕಣ್ಣೂ ತೆರೆದಾವು.

ಇಲ್ಲದಿದ್ದರೆ ಕುಂವೀ ಅವರ 'ಯಾಪಿಲ್ಲು' ಕಾದಂಬರಿಯ ಪಾತ್ರವೊಂದು  "ಹೋಗ್ರೋ ಇವನೌನ್ ದೇವ್ರು ಬ್ಯಾಡ ದಿಂಡ್ರು ಬ್ಯಾಡ, ಬಡವ್ರು ಬೊಗ್ರು ಬರಂಗಿಲ್ಲ ಹೋಗಂಗಿಲ್ಲ" ಎಂದು ಗೊಣಗುವಂತೆ ಜನ ಮಠ ಮಂದಿರಗಳ ಬಗ್ಗೆ ಬರುಬರುತ್ತಾ ಜಿಗುಪ್ಸೆ ತಾಳಿ ಅವುಗಳಿಂದ ದೂರವಾದಾರು. ಅಥವಾ ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿ ಸರ್ಕಾರಿ ಶಾಲೆ ತೊರೆದು ಕಾನ್ವೆಂಟಿಗೆ ಮುಖಮಾಡಿದ ಅಲ್ಲಿನ ಮಕ್ಕಳು, "ಟಿಂಕಲ್ ಟಿಂಕಲ್ ಲಿಟ್ಟಲ್ ಸ್ಟಾರೂ... ಗೋರಮೆಂಟಿಚ್ಕೂಲು ವುಯ್ ಡೋಂಟು ಕೇರೂ" ಎಂದು ಹಾಡುತ್ತಾ ಸರ್ಕಾರಿ ಶಾಲೆಯನ್ನು ಗೇಲಿಮಾಡುತ್ತಾ ಹೋಗುವಂತೆ ಭಕ್ತರು ಕೂಡ "ಮಠ ಗಿಟ ವುಯ್ ಡೋಂಟ್ ವಾಂಟು,   ಸ್ವಾಮಿ ಗೀಮಿ ವುಯ್ ಡೋಂಟ್ ಕೇರೂ ...." ಎಂದು ಇವರನ್ನೂ ಇವರ ಮಠಗಳನ್ನೂ ಗೇಲಿಮಾಡುತ್ತಾ ಹೋದಾರು!!

ತಮ್ಮನ್ನು ಕುಂವೀ ಅಂಥವರು ವಿಮರ್ಶಿಸಿ ಮಾತನಾಡಿದಾಗ ಆ ವಿಮರ್ಶೆಯ ಮಾತುಗಳ ಹಿಂದಿರುವ ಸದಾಶಯವನ್ನು  ಅರ್ಥಮಾಡಿಕೊಂಡು ತಮ್ಮಅರ್ಥರಹಿತವಾದ ಆಚರಣೆಗಳನ್ನು ಕಾಲಕ್ಕೆ ಸಲ್ಲದ ತಮ್ಮ ಕೆಲವು ನಡೆವಳಿಕೆಗಳನ್ನು ತಿದ್ದಿಕೊಳ್ಳುವ ಕಡೆ ನಮ್ಮ ಪಂಪೀಗಳ ಗಮನ ಹರಿಯಬೇಕಾಗಿತ್ತೇ ಹೊರತು ಆ ಮಾತುಗಳನ್ನು ಆಡಿದ್ದ ಕುಂವೀಯವರ ಬಾಯಿ ಮುಚ್ಚಿಸುವ ಕಡೆಗಲ್ಲ. ಅದು ಎಲ್ಲರ ಆರೋಗ್ಯದ ದೃಷ್ಟಿಯಿಂದಲೂ  ಒಂದು ಒಲಕ್ಳೆಯ ನಡೆಯಾಗುತ್ತಿತ್ತು. ಆದರೆ ಹಾಗೆ ಅಗದಿದ್ದದ್ದು ವಿಷಾದದ ಸಂಗತಿ.

'ಮಾಡಬಾರದ್ದನ್ನು ಮಾಡಲು ಹೋದರೆ ಆಗಬಾರದ್ದು ಆಗುತ್ತದೆ' ಎಂಬುದೊಂದು ನಮ್ಮ ಹಿರಿಯರ ಅನುಭವ ನುಡಿ. ಇದಕ್ಕೆ ಸದ್ಯದ ಪ್ರಮುಖವಾದ ಮತ್ತು ತಾಜಾ ಉದಾಹರಣೆ ಎಂದರೆ ಹರ್ಯಾಣದಲ್ಲಿ ಮುಗ್ಧ ಜನರ ಭಕ್ತಿಯನ್ನು 'ತೊರುಂಬ ಲಾಭ' ಮಾಡಿಕೊಂಡು, ಯಾವ ರಾಜಕಾರಣಿಗೂ ಉದ್ಯಮಿಗೂ ಚಿತ್ರನಟ-ನಟಿಗೂ ಕಡಿಮೆ ಇಲ್ಲದಂತೆ ಭೋಗಜೀವನ ನಡೆಸಿ ಮೆರೆದ ದೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮಿಟ್ ರಾಮರಹೀಮ್ ಸಿಂಗ್ ಎಂಬ ದೇವಮಾನವನದ್ದು.

ಇಬ್ಬರು ಭಕ್ತೆಯರ ಮೇಲಿನ ಅತ್ಯಾಚಾರದ ಎರಡು ಪ್ರಕರಣದಲ್ಲಿ ದೋಷಿ ಎಂದು ಸಿ.ಬಿ.ಐ. ಕೋರ್ಟಿನಿಂದ ತೀರ್ಮಾನಿಸಲ್ಪಟ್ಟ ಆತ ಇದೀಗ ಮೂವತ್ತು ಲಕ್ಷ ದಂಡಕ್ಕೂ ಹತ್ತು ಹತ್ತು ಒಟ್ಟು ಇಪ್ಪತ್ತು ವರ್ಷಗಳ ಜೈಲುಶಿಕ್ಷೆಗೂ  ಗುರಿಯಾಗಿದ್ದಾನೆ. ಮಾಡಿದ್ದುಣ್ಣೋ ಮಾರಾಯ!! ಆತನ ಪ್ರಕರಣ ನೇರವಾಗಿ ನಮ್ಮ ಪಂಪೀಗಳಿಗೆ  ಸಂಬಂಧಪಡದಿರಬಹುದು. ಆತನಿಗೆ ತಮ್ಮನ್ನು ಹೋಲಿಸುವುದು 'ಅವಮಾನಕರ' ಎಂದೂ ಇವರಿಗೆ ಅನ್ನಿಸಿ ವಾಸ್ತವಿಕವಾಗಿ ಬರಬಾರದ ಸಿಟ್ಟ್ಟೂ ಬರಬಹುದು.  ಹಾಗೇನೂ ಅಗಬೇಕಿಲ್ಲ. ಭಕ್ತರ ಬದುಕಿನಲ್ಲಿ ಆಟವಾಡುವುದು ಅಥವಾ ಅವರನ್ನು ಅಜ್ಞಾನದಲ್ಲಿ ಇಟ್ಟುಕೊಂಡು ಬೇಳೆ ಬೇಯಿಸಿಕೊಳ್ಳುವ ಕೆಲಸ ಯಾರಿಗೇ ಆಗಲಿ ಮುಂದಿನ ದಿನಗಳಲ್ಲಿ ಸುಲಬವಾದ ಕೆಲಸವಲ್ಲ ಎಂಬ ಎಚ್ಚರಿಕೆಯ ಗಂಟೆಯನ್ನಂತೂ ಈ ಪ್ರಕರಣ ಬಾರಿಸಿದಂತಾಗಿದೆ. ಇದನ್ನು ಸಂಬಂಧಪಟ್ಟವರು ಅಲಕ್ಷಿಸಬಾರದು.

ಇನ್ನು ಕುಂವೀ ಬಗ್ಗೆ ಹೇಳುವುವಾದರೆ ಅವರೆಂಥವರು ಎಂಬುದು ನಾಡಿನ ಬಹುತೇಕ ಎಲ್ಲ ವಿದ್ಯಾವಂತ ಜನಕ್ಕೂ ಗೊತ್ತಿದೆ. ಕೊಟ್ಟೂರಿನಂಥ ಬಿಸಿಲೂರಿನಲ್ಲಿ ಶ್ರಮಜೀವಿಗಳ ಕುಟುಂಬದಲ್ಲಿ ಹುಟ್ಟಿಬೆಳೆದ 'ಗಾಂಧೀಕ್ಲಾಸಿನ ಹುಡುಗನೊಬ್ಬ ಇಂದು ಕನ್ನಡ ಸಾಹಿತ್ಯ ಲೋಕದ ಶಕ್ತಶಾಲಿ ಬರಹಗಾರನಾಗಿ ರೂಪುಗೊಂಡಿರುವಂಥದ್ದೇ ಒಂದು ಅಚ್ಚರಿಯ ಸಂಗತಿ.  ಕರ್ನಾಟಕದ ಹೊರಭಾಗದಲ್ಲಿ, ಹತ್ತಿಪ್ಪತ್ತು ರೂಪಾಯಿಗಳಿಗೂ ಮನುಷ್ಯರ ಜೀವವನ್ನೇ ತೆಗೆಯಲು ಸಿದ್ದರಿರುವ ಜನಸಮೂಹದ ನಡುವಿದ್ದು ಅವರ ಮಕ್ಕಳಿಗೆ ಪಾಠಹೇಳುವ ಕೆಲಸದಲ್ಲಿ ಬಹುತೇಕ ತಮ್ಮ ವೃತ್ತಿಬದುಕನ್ನು ಕಳೆದವರು. ತನ್ನ ಕೈಯಲ್ಲಿ ಪಾಠ ಹೇಳಿಸಿಕೊಂಡ ಯಾವನೇ ಒಬ್ಬ ವಿದ್ಯಾರ್ಥಿ ಫೇಲಾಗುವುದು ಎಂದರೆ ಅದು ತನಗೆ ದೊಡ್ಡ insult ಎಂದು ಬಗೆದು ಪ್ರೈಮರಿ ಸ್ಕೂಲ್ ಮೇಷ್ಟ್ರ ಕೆಲಸವನ್ನು ಯುನಿವರ್ಸಿಟಿ ಪ್ರೊಫೆಸರ್ ಕೆಲಸಕ್ಕಿಂತ ಸೀರಿಯಸ್ ಆಗಿ ತೆಗೆದುಕೊಂಡು ವೃತ್ತಿಯಲ್ಲಿ ತೊಡಗಿಕೊಂಡು ನಿವೃತ್ತರಾದವರು.

ಕುಂವೀ ಪ್ರಾಥಮಿಕ ಶಾಲೆಯ ಮೇಷ್ಟ್ರಾಗಿಯೇ ಇದ್ದುಕೊಂಡು ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾದ ಮತ್ತು ಅಲ್ಲಿನ ಪ್ರೊಫೆಸರ್ ಗಳು  ಘನವಾಗಿ ಚಿಂತನ-ಮಂಥನ ಮಾಡಿದಂಥ ಹಲವಾರು ಕೃತಿಗಳನ್ನು ಬರೆದ, ದಲಿತ-ಬಂಡಾಯದ ಹಿನ್ನೆಲೆಯಿಂದ ಬಂದ,  ಬಳ್ಳಾರಿ ಸ್ಟೈಲಿನ ಕನ್ನಡದ ಬಹುಮುಖ್ಯ ಲೇಖಕರು.  ಜನಪರವಾದ ಸಾಹಿತ್ಯ, ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಾನೂ ಬೆಳೆಯುತ್ತ ನಮ್ಮ ಸಾಹಿತ್ಯವನ್ನೂ ಬೆಳೆಸಿದ, ಒಳಗೊಂದು ಹೊರಗೊಂದು ಇಲ್ಲದ ನೇರ ನಡೆನುಡಿಯ ಮನುಷ್ಯ. ತಳಸಮುದಾಯಗಳ ನೋವು-ನಲಿವುಗಳನ್ನು ನಮ್ಮ ಸಮಾಜಕ್ಕೆ ಎತ್ತಿತೋರಿಸುವ ಮೂಲಕ ಆ ವರ್ಗಕ್ಕೊಂದು ಅಸ್ಮಿತೆಯನ್ನು ದೊರಕಿಸಿಕೊಟ್ಟ ಚಿಂತಕರು.

ಎಲ್ಲರೂ ಓದಬಹುದಾದ ಮಹತ್ವದ ಅನೇಕ ಕೃತಿಗಳನ್ನು ಬರೆದರೂ ಯಾರೂ ಸರಿಯಾಗಿ ಸರಾಗವಾಗಿ ಓದಲಾಗದ ಕೃತಿಯೊಂದಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಬಹುಮಾನ ಪಡೆದ ಸಾಹಿತಿ!  ದೇಶದಲ್ಲಿ ಅಸಹಿಷ್ಣುತೆ ವಿರುದ್ಧ ನಡೆದ ಪ್ರಶಸ್ತಿ ಪುರಸ್ಕಾರ ವಾಪಸಾತಿ ಚಳವಳಿಯಲ್ಲಿ ಪಾಲ್ಗೊಂಡು ಪ್ರಶಸ್ತಿ ವಾಪಸ್ಸು.ಕೊಡಲು ಹೋದಾಗ ಅದನ್ನು ಮರಳಿ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿಲ್ಲ ಎಂದು ಸಬೂಬು ಹೇಳಿದ ಅಧಿಕಾರಿಯ ಟೇಬಲ್ಲಿನ ಮೇಲೆ ಅವನ್ನೆಲ್ಲ ಬೀಸಾಕಿ 'ಏನರ ಮಾಡ್ಕ್ಯ' ಎಂದು ಹೇಳಿ ಹೊರಗೆ ಬರುವ ಮೂಲಕ ಸಾಮಾಜಿಕ ಬದ್ದತೆಯನ್ನುತೋರಿಸಿದ ವ್ಯಕ್ತಿ.

ಅವರ ನೇರ ಮಾತುಗಾರಿಕೆಗೆ ಒಂದು ಉದಾಹರಣೆ ಗಮನಿಸಿ: ಚಿತ್ರದುರ್ಗದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಹಿರಿಯ ಚಿಂತಕ ಡಾ.ಎಲ್.ಬಸವರಾಜು ಅವರು ಮಠ-ಮಾನ್ಯಗಳ ಬಗ್ಗೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಎತ್ತಿದ್ದ ಕೆಲವು ಮಹತ್ವ ಪ್ರಶ್ನೆಗಳು ಅಲ್ಲಿನ ಊಟದ ಪೆಂಡಾಲು ಸೇರಿದಂತೆ ಎಲ್ಲೆಡೆ ಬುಗಿಲೆದ್ದ ವಿಪರೀತ ಕೆಂದೂಳಿನಲ್ಲಿ ಕಳೆದು ಹೋದವಾದರೂ ನಂತರ ಬಹಳಷ್ಟು ದಿನ ರಾಜ್ಯದ ಯಾವುದೇ ಭಾಗದಲ್ಲಿ ಸಾಹಿತ್ಯದ ಕಾರ್ಯಕ್ರಮ ನಡೆದರೂ ಅವುಗಳ ಪ್ರಸ್ತಾಪವಾಗುವ ಮೂಲಕ ಅವು ಅನುರಣನಗೊಳ್ಳುತ್ತಿದ್ದ ಸಂದರ್ಭ.

ಈ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕೊನೆಯ ಗೋಷ್ಟಿಯೊಂದರಲ್ಲಿ ಭಾಗವಹಿಸಿದ್ದ, ತಮ್ಮ ಹರಕು  ಬಾಯಿಯಿಂದ ರಾಜ್ಯದಲ್ಲಿಯೇ ಕುಖ್ಯಾತರಾಗಿದ್ದ ಜಿಲ್ಲೆಯ ಪ್ರಮುಖ ರಾಜಕಾರಣಿಯೊಬ್ಬ ಎಲ್. ಬಸವರಾಜು ಅವರ ಬಗ್ಗೆ ಹಗುರವಾಗಿ ಮಾತನಾಡಿ, 'ಇಂತಹ ಸಾಹಿತಿಗಳ ಬಗ್ಗೆ ಜನತೆ ಎಚ್ಚರಿಕೆಯಿಂದ ಇರಬೇಕು' ಎಂದು ಬುದ್ದಿ ಹೇಳಿ ತನ್ನ ಅಜ್ಞಾನ ಪ್ರದರ್ಶಿಸಿದ.

ಆ ಗೋಷ್ಟಿಯ ನಂತರ ಸಮಾರೋಪ ಸಮಾರಂಭವಿದ್ದು ಕುಂವೀ ಸಮಾರೋಪ ಭಾಷಣಮಾಡುವುದಿತ್ತು. ಸಭಾಂಗಣದಲ್ಲಿದ್ದ ನಾನು ನನ್ನ ಪಕ್ಕ ಕುಳಿತಿದ್ದ  ಲೇಖಕ ಮಿತ್ರ ರಂಗರಾಜ ವನದುರ್ಗ ಅವರಿಗೆ 'ಕುಂವೀ ಅವರ ಗಮನಕ್ಕೆ ಈ ರಾಜಕಾರಣಿಯ ಮಾತನ್ನು ತಂದು ಅವರಿಂದ ಪ್ರತಿಕ್ರಿಯೆ ಕೊಡಿಸಿದರೆ ಚೆನ್ನಾಗಿತ್ತು' ಎಂದೆ. ಅದು ಅವರಿಗೂ ಸರಿ ಅನ್ನಿಸಿ ತಕ್ಷಣ ಫೋನು ಎತ್ತಿಕೊಂಡು ಇನ್ನೂ ಬಸ್ಸಿನಲ್ಲಿ ಕಾರ್ಯಕ್ರಮಕ್ಕೆ ಬರುತ್ತಲಿದ್ದ ಕುಂವೀಗೆ ವಿಷಯ ತಿಳಿಸಿಯೇಬಿಟ್ಟರು.

ಸಮಾರೋಪ ಭಾಷಣ ಮಾಡಲು ತುಸು  ಸ್ಟ್ರಾಂಗ್ ಆಗಿಯೇ ವೇದಿಕೆ ಏರಿದ ಕುಂವೀ ಆ ರಾಜಕಾರಣಿಯ ಮಾತಿಗೆ,  "ನಮ್ಮ ರಾಜಕಾರಣಿಗಳಿಗೆ ಏನು ಆಗಿದೆಯೋ. ಕನ್ನಡದಲ್ಲಿ ಯಾವೊಬ್ಬ ಸಾಹಿತಿಯೂ ರಾಜಕಾರಣಿಗಳನ್ನು ಟೀಕಿಸುವಾಗ ಬಾಯಿಗೆ ಬಂದಂತೆ ಮಾತನಾಡುವುದಿಲ್ಲ; ಗಂಭೀರವಾಗಿ ತಾತ್ವಿಕವಾದ ಭಿನ್ನಾಭಿಪ್ರಾಯ ಎತ್ತುವ ಮೂಲಕ ಟೀಕಿಸುತ್ತಾರೆ. ಆದರೆ ಅದೇ ರಾಜಕಾರಣಿಗಳು ಸಾಹಿತಿಗಳ ಬಗ್ಗೆ ಟೀಕಿಸುವಾಗ ಕನಿಷ್ಟ. ಸೌಜನ್ಯವನ್ನೂ ಇಟ್ಟುಕೊಳ್ಳದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸಾಹಿತಿಗಳಿಂದ ನಮ್ಮ ರಾಜಕಾರಣಿಗಳಿಗೆ ಬೇರೆ ಏನನ್ನೂ ಕಲಿಯಲು ಆಗದಿದ್ದರೂ ಕೊನೆಯಪಕ್ಷ ಬೇರೆಯವರನ್ನು ಟೀಕಿಸುವುದು ಹೇಗೆ ಎಂಬುದನ್ನಾದರೂ ಕಲಿಯಬೇಕು" ಎಂದು ತೀಕ್ಷಣವಾಗಿ ಪ್ರತಿಕ್ರಿಯಿಸಿ,  "ಬಸವರಾಜು ಎಷ್ಟು ದೊಡ್ಡವರು ಎಂದರೆ ಅವರು ಜೀವನದಲ್ಲಿ ಉಪ್ಪು ತಿಂದಷ್ಟು ನಮ್ಮಲ್ಲಿ ಬಹಳಷ್ಟು ಜನ ಅನ್ನವನ್ನೂ ತಿಂದಿಲ್ಲ. ಅಂತಹ ಹಿರಿಯರ ಬಗ್ಗೆ ಮಾತನಾಡುವಾಗ ಮೈಮೇಲೆ ಎಚ್ಚರಿಕೆ ಇಟ್ಟುಕೊಂಡು ಮಾತನಾಡಬೇಕು" ಎಂದು ಚಾಟಿ ಬೀಸಿ ಇಡೀ ಸಭಾಂಗಣದಲ್ಲಿ ಕರತಾಡನ ಪಡೆದರು!

ಇನ್ನೊಂದು ಸಂದರ್ಭ: ಕೆಲವು ವರ್ಷಗಳ ಹಿಂದೆ ನಾವೆಲ್ಲ ಸಹೋದರ ಪತ್ರಕರ್ತ ಕುಮಾರ್ ಬುರಡಿಕಟ್ಟಿ ಅವರ ಮದುವೆಯನ್ನು ಯಾವುದೇ ಧಾರ್ಮಿಕ ಕ್ರಿಯೆಗಳನ್ನು ನಡೆಸದೇ ವೈಚಾರಿಕತೆಯ ಅರಿವಿನ ಕಾರ್ಯಕ್ರಮವಾಗಿ ಶಿಕಾರಿಪುರ ತಾಲ್ಲೂಕಿನ ಕಡೇನಂದಿಹಳ್ಳಿ ಎಂಬ ನಮ್ಮ ಊರಿನಲ್ಲಿ ರೂಪಿಸಿದ್ದೆವು. ಅದೇ ಆಗ ರಿಟೈರ್ಡ್ ಆಗಿದ್ದ ಕುಂವೀ ಸರಿಯಾದ ರಸ್ತೆಯೂ ಇಲ್ಲದ ನಮ್ಮ ಊರಿಗೆ ಸರಳವಾದ ಕೆಂಪು ಬಸ್ಸಿನಲ್ಲೇ ಬಂದು ಕೆಂಪು ಭಾಷಣವನ್ನು ಮಾಡಿ ಅಷ್ಟೇ ಸರಳವಾಗಿ ಅದೇ ಕೆಂಪು ಬಸ್ಸಿನಲ್ಲೇ  ಮರಳಿ ಹೋಗುವ ಮೂಲಕ ಬಹಳ ಹತ್ತಿರವಾದರು. ಅಂದು ನಮ್ಮ ಕಾರ್ಯಕ್ರಮದಲ್ಲಿ ಇದ್ದ ಗೌರಿ ಲಂಕೇಶ್,  ಶಿವಸುಂದರ್, ಬಿಳಿದಾಳೆ ಈಶ,  ವಿ.ಎಸ್. ಶ್ರೀಧರ್ ಸೇರಿದಂತೆ ನಮ್ಮ ಹಳ್ಳಿಯ ಜನರೆಲ್ಲರೂ ಮೌಢ್ಯ ಸಂಪ್ರದಾಯಗಳ ವಿರುದ್ಧವಾಗಿ ಕುಂವೀ ಆಡಿದ ಅಪ್ರಾಮಾಣಿಕವಲ್ಲದ ಮಾತುಗಳಿಂದ ಸಂತುಷ್ಟರಾಗಿದ್ದು ನಮ್ಮ ಖಾಸಗೀ ಬದುಕಿನ ಅಂತೆಯೇ ಸಾರ್ವಜನಿಕ ಬದುಕಿನ ಒಂದು ಮುಖ್ಯ ಘಟನೆ ಎಂದೇ ನಾನು ಭಾವಿಸಿದ್ದೇನೆ.

ಇಂತಹ ನಮ್ಮ ಮೆಚ್ಚಿನ ಕುಂವೀ ಕೆಲವು ವೇಳೆ ಸ್ವಭಾವತಃ ಅವರ ವ್ಯಕ್ತಿತ್ವಕ್ಕೆ ಹೊಂದಾಣಿಕೆಯಾಗದಂತಹ  ಅಪ್ರಾಮಾಣಿಕ ಹೇಳಿಕೆ ನೀಡುವ ಮೂಲಕ ನಮಗೆ ನಿರಾಸೆಯನ್ನೂ ಮಾಡುವುದಿದೆ. ಈಗ ಪಂಪೀಗಳ ಕುರಿತು ಇಂತಹ ಹೇಳಿಕೆಯನ್ನು ನೀಡಿದ್ದು ಇತ್ತೀಚಿನ ದಿನಗಳಲ್ಲಿ  ಅವರು ನೀಡಿರುವ ಈ ಬಗೆಯ ಎರಡನೆಯ ಹೇಳಿಕೆ ಅಂದುಕೊಂಡಿದ್ದೇನೆ.  ಈ ಮೊದಲು ಹಿಂದೊಮ್ಮೆ ಅವರು ಹೀಗೇ ತಾವು ಅನುಗಾಲದಿಂದಲೂ  ಎದುರಾಳಿಗಳೆಂದು ಭಾವಿಸಿಕೊಂಡು ಬಂದಿದ್ದ, 'ಕಲ್ಪಿತ ಹಿಂದುತ್ವ' ಮತ್ತು ಅದರ ವಾಕ್ತಾರರಾದ 'ದೇಶಭಕ್ತ' ರನ್ನು ಕುರಿತು  'ಅವರೆಲ್ಲ ಬಹಳ ಒಳ್ಳೆಯವರು' ಎಂಬರ್ಥ ಬರುವಂಥ ಮಾತಾಡಿದ್ದು ವರದಿಯಾಗಿತ್ತು.  ಆಗ ಅವರ ಈ ಬದಲಾದ ನಿಲುವನ್ನು ಟೀಕಿಸಿದ್ದ ಚಂಪಾ 'ಕುಂ.ವೀ' ಎಂಬ ಅಕ್ಷರಗಳನ್ನು 'ಕುಂಕುಮ ವೀರ' ಎಂದು ವಿಸ್ತರಿಸಿ ಅಸಮಾಧಾನ ಸೂಚಿಸಿದ್ದರು!

ಈಗ ಕುಂವೀ ಪಂಪೀಗಳನ್ನು ಕುರಿತು ಅಂಥದ್ದೇ ಹೇಳಿಕೆಯನ್ನು ನೀಡಿದ್ದು ಅವರನ್ನೂ ಅವರ  ಸಾಹಿತ್ಯವನ್ನೂ ಪ್ರೀತಿಸುವ ಪ್ರಗತಿಪರ ಆಲೋಚನ ಕ್ರಮದ ನನ್ನಂತಹ ಬಹಳಷ್ಟು ಜನರಿಗೆ ಬೇಸರವನ್ನುಂಟು ಮಾಡಿದೆ ಎಂಬುದು ಸುಳ್ಳಲ್ಲ. ಇಂದು ಕುಂವೀ ಅವರ ಇಂತಹ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ  ಟೀಕೆ ವ್ಯಕ್ತವಾಗುತ್ತಿರುವುದು ಕೂಡ ಅವರ ಮೇಲಿನ ಮತ್ತು ಅವರ ಸಾಹಿತ್ಯದ ಮೇಲಿನ ಗೌರವದಿಂದಲೇ ಹೊರತು ಬೇರೇನೂ ಆಗಿರಲಾರದು. ಪರಿಸ್ಥಿತಿ ಹೀಗಿರುವಾಗ ಕುಂವೀ ಹೀಗೇಕೆ ಆಗೊಮ್ಮೆ ಈಗೊಮ್ಮೆ ದ್ವಂದ್ವ ನಿಲುವು ತಾಳುತ್ತಾರೆ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಹುಟ್ಟಿಕೊಂಡು  ಗೊಂದಲಕ್ಕೆ ದಾರಿಮಾಡಿಕೊಡುವುದು ಸಹಜವಾದದ್ದು.

ಒಂದುವೇಳೆ ಈ 'ದ್ವಂದ್ವ' ಎಂಬುದು ಕುಂವೀ ಅವರ ನಿಲುವಿನಲ್ಲಿ ಸ್ವಾಭಾವಿಕವಾಗಿಯೇ ಉಂಟಾಗುತ್ತಿದ್ದರೆ ಅವರೇ ಅದನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಹಾಗೆ ಮಾಡುವ ಮೂಲಕ ಅವರು ಸ್ಪಷ್ಟವಾಗಿ ಒಂದುಕಡೆ  - ಅದೂ ಅವರು ತಮ್ಮ ಬದುಕಿನ ಉದ್ದಕ್ಕೂ ಒಪ್ಪಿಕೊಂಡು ಬಾಳಿ ಬದುಕುತ್ತಾ ಬಂದಿರುವ 'ಸಮಸಮಾಜ ನಿರ್ಮಾಣ ಒಲವಿನ' ಕಡೆ - ನಿಲ್ಲುವ ಮೂಲಕ ಅದನ್ನು ಸರಿಪಡಿಸಿಕೊಳ್ಳಬೇಕು ಎಂಬುದು ಅವರಲ್ಲಿ ನನ್ನ ಪ್ರಿತಿಪೂರ್ವಕ ಆಗ್ರಹ.

ಒಂದುವೇಳೆ ಈ 'ಧ್ವಂದ್ವ'ಎಂಬುದು ಬಾಹ್ಯ ಒತ್ತಡಗಳ ಕಾರಣದಿಂದ ಅವರಲ್ಲಿ ಉಂಟಾಗುತ್ತಿದ್ದರೆ ದಯವಿಟ್ಟು ತಮ್ಮ ಮೇಲಿರುವ ಅಂತಹ ಒತ್ತಡಗಳು ಯಾವುವು ಎಂಬುದನ್ನು ಸಾರ್ವಜನಿಕಗೊಳಿಸುವ ಧೈರ್ಯವನ್ನು ಕುಂವೀ ತೋರಬೇಕು. ಅವರಿಗಾಗಿ ಮಾತ್ರವಲ್ಲ ಕನ್ನಡ ಸಾಹಿತ್ಯ ಮತ್ತು ಸಂಸ್ಸೃತಿಯ ಆರೋಗ್ಯಯುತ ಬೆಳವಣಿಗೆಯ ದೃಷ್ಟಿಯಿಂದಲೂ ಇದು ಮಹತ್ವದ್ದು. ಯಾವುದೇ ಲೇಖಕರ ವಿಷಯದಲ್ಲಿ  ಕನ್ನಡ ಲೇಖಕ ಸಮೂಹ ಈ ಬಗೆಯ ಸಂಕಟಗಳ ಸಂದರ್ಭಗಳಲ್ಲಿ ಬಾಧಿತರ ಜೊತೆಗಿದ್ದು ಅವರಿಗೆ ನೈತಿಕ ಬೆಂಬಲವೂ ಸೇರಿದಂತೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುತ್ತಾ ಬಂದಿದೆ. ಕುಂವೀ ವಿಷಯದಲ್ಲಿಯೂ ಇದನ್ನು ಈ ಸಮೂಹ ಮಾಡಿಯೇ ಮಾಡುತ್ತದೆ. ಕುಂವೀ ಇಂತಹ ಪೊಳ್ಳು ಬೆದರಿಕೆಗಳಿಗೆ - ಅದರಲ್ಲಿಯೂ ತಮ್ಮ ಒಂದೂ ಕೃತಿಯನ್ನೂ ಬಹುಶಃ  ಓದಿರದವರ ಬೆದರಿಕೆಗಳಿಗೆ - ಮಣಿಯುವ ಯಾವ ಅವಶಯಕತೆಯೂ ಇಲ್ಲ. ಮಣಿಯಬಾರದು ಕೂಡ. ಅವರ ಜೊತೆಗೆ ನಾವೆಲ್ಲ ಇದ್ದೇವೆ ಎಂಬ ಧೈರ್ಯ ಅವರಿಗಿರಲಿ.

ಕನ್ನಡ ಸಾಹಿತ್ಯ ಲೋಕ ಈಗಾಗಲೇ ಪ್ರಗತಿಪರ ಆಲೋಚನ ಕ್ರಮದ ಬಹುಮುಖ್ಯವಾದ ಕೆಲವು ಲೇಖಕರನ್ನು ಕಳೆದುಕೊಂಡಿದೆ. ಈ ಕಳೆದುಕೊಳ್ಳುವಿಕೆ ಮುಖ್ಯವಾಗಿ ಎರಡು ನೆಲೆಯಲ್ಲಿ ನಡೆದಿದೆ. ಮೊದಲನೆಯದಾಗಿ ಕೆಲವರನ್ನು ದೈಹಿಕವಾಗಿ ಕಳೆದುಕೊಂಡಿದೆ. ಎರಡನೆಯದಾಗಿ  ಮತ್ತೆ ಕೆಲವರನ್ನು ತಾತ್ವಿಕವಾಗಿ ಕಳೆದುಕೊಂಡಿದೆ. ಕಲಬುರ್ಗಿ ಅವರನ್ನು ಮೊದಲನೆಯದಕ್ಕೆ ಉದಾಹರಿಸಬಹುದಾದರೆ ಸಿದ್ಧಲಿಂಗಯ್ಯ ಅವರನ್ನು ಎರಡನೆಯದಕ್ಕೆಉದಾಹರಿಸಬಹುದು. ಕುಂವೀ ಅವರನ್ನು ಈ ಯಾವ ನೆಲೆಯಿಂದಲೂ  ಕಳೆದುಕೊಳ್ಳಲು ಈ ಲೋಕ ಇಷ್ಟಪಡುವುದಿಲ್ಲ . ಇದನ್ನು ಎಲ್ಲರೂ ಅಂದರೆ ಕುಂವೀ, ಪಂಪೀಗಳು ಮತ್ತು ನಾವು - ಅರ್ಥಮಾಡಿಕೊಂಡು ಮುನ್ನಡೆಯಬೇಕಿದೆ. ಅಲ್ಲವೇ?

- ರಾಜೇಂದ್ರ.ಬುರಡಿಕಟ್ಟಿ

Wednesday, August 23, 2017

ತ್ರಿವಳಿ ತಲಾಕ್: ಆಗದವರ ಮೇಲೆ ಆಲದಮರ ಬಿದ್ದಾಗ...

ತ್ರಿವಳಿ ತಲಾಕ್:  ಆಗದವರ ಮೇಲೆ ಆಲದಮರ ಬಿದ್ದಾಗ...


ಕುವೆಂಪು ರಾಮಾಯಣದಲ್ಲಿ ಒಂದು ಪ್ರಸಂಗ ಬರುತ್ತದೆ. ರಾವಣನ ಹೆಂಡತಿಯಾದ ಮಂಡೋದರಿ ಒಂದು ರಾತ್ರಿ ಗಂಡನ ಕಣ್ಣು ತಪ್ಪಿಸಿ ಕದ್ದು ಅಶೋಕವನಕ್ಕೆ ಬಂದು ತನ್ನ ಗಂಡ ಹೊತ್ತುಕೊಂಡು ಬಂದು ಅಲ್ಲಿ ಇಟ್ಟಿದ್ದ ಸೀತೆಯನ್ನು ಭೇಟಿಮಾಡುತ್ತಾಳೆ. ಪರಸ್ಪರ ವಿರೋಧಿ ಪಾಳೆಯಕ್ಕೆ ಸೇರಿದ ಈ ಇಬ್ಬರು ಮಹಿಳೆಯರ ನಡುವೆ ನಡೆಯುವ ಮನಕಲುಕುವ ಸಂಭಾಷಣೆ ಯಾವುದೇ ತಾಯಿಮಗಳ ನಡುವಿನ ಹೃದಯಸಂಭಾಷಣೆಗಿಂತ ಮಿಗಿಲು ಎನ್ನುವಂತಿದೆ. ತನ್ನ ಮುಖವನ್ನು ಮಂಡೋದರಿಯ ಎದೆಯಲ್ಲಿ ಹುದುಗಿಸಿಕೊಂಡು ಬಿಕ್ಕುವ ಸೀತೆಯನ್ನು ಅಪ್ಪಿಕೊಂಡು ಅವಳ ತಲೆ ನೇವರಿಸುತ್ತಾ  ಮಂಡೋದರಿಯ ಬಾಯಿಂದ ಬರುವ ಒಂದು ಮಾತು ಇದು: 'ನಾನಕ್ಕನ್ ತಂಗೆ, ನಿನಗೆ ವಯಸ್ಸಿನಂದಂತೆ ದುಕ್ಕದೊಳ್.'

ತ್ರಿವಳಿ ತಲಾಕ್ ವಿರುದ್ಧ ಸುಪ್ರೀಮ್ ಕೋರ್ಟ್ ನೀಡಿರುವ ತೀರ್ಪು ಹಲವು ಕಾರಣಗಳಿಂದ ಮಹತ್ವದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಗದ್ವೇಷಗಳಿಂದ ಮುಕ್ತವಾದ ಸಮಸಮಾಜ ನಿರ್ಮಾಣದ ಕನಸನ್ನು ಕಾಣುತ್ತಿರುವ ಎಲ್ಲ ಮಾನವ ಪ್ರೇಮಿಗಳಿಗೆ ಇದು ಹೊಸ ಭರವಸೆಯನ್ನುಂಟುಮಾಡಿದೆ. ಪರಸ್ಪರ ವಿರೋಧಿ ಆಲೋಚನಾ ಕ್ರಮವನ್ನು ಹೊಂದಿರುವ ವಿವಿಧ ಕ್ಷೇತ್ರಗಳ ನಾಯಕರು, ಮತ್ತು  'ಕಾಂಬಿಎ' ಪಕ್ಷಗಳು (ಕಾಂಗ್ರಸ್, ಬಿಜೆಪಿ, ಎಡಪಕ್ಷಗಳು) ಒಟ್ಟಾಗಿ ಈ ರೀತಿ ಸುಪ್ರೀಮ್ ಕೋರ್ಟಿನ ತೀರ್ಪನ್ನು ಸ್ವಾಗತಿಸಿದ ವಿದ್ಯಮಾನ ಇತ್ತೀಚಿನ ವರ್ಷಗಳಲ್ಲಿಯೇ ಅಪರೂಪದ್ದು ಎನ್ನಬಹುದು.

ಆದರೆ ಕೆಲವು 'ದೇಶಭಕ್ತರು' ಈ ತೀರ್ಪಿಗೆ ವ್ಯಕ್ತಪಡಿಸುತ್ತಿರುವ 'ಅಪರಿಮಿತ' 'ಅತ್ಯಾನಂದ'ಭರಿತ ಹರ್ಷೋದ್ಗಾರವು  ಪ್ರಾಮಾಣಿಕವಾಗಿದ್ದಂತಿಲ್ಲ. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ನಡೆದಾಗಲೆಲ್ಲ ಅತ್ಯಾಚಾರಿಗಳನ್ನು ಖಂಡಿಸುವ ಬದಲು, "ಹೆಣ್ಣುಮಕ್ಕಳು ಮನೆಯಲ್ಲಿರುವುದನ್ನು ಬಿಟ್ಟು ಯಾವಾಗ ಬೇಕೋ ಆವಾಗೆಲ್ಲ ಹೊರಗೆ ಏಕೆ ತಿರುಗಾಡಲು ಹೋಗಬೇಕು?" ಎಂದು ವಾದಿಸುವ ಮತ್ತು 'ಸ್ತ್ರೀ ಸ್ವಾತಂತ್ರಮನರ್ಹತಿ' ಎಂಬ ಧರ್ಮಶಾಸ್ತ್ರವನ್ನೇ ಬರೆದುಕೊಂಡಿರುವ ಪುರುಷಪ್ರಧಾನ ವ್ಯವಸ್ಥೆಯ ಪ್ರತಿಪಾದಕರೆಲ್ಲ ಇಂದು 'ಮಿಂದು ಮಡಿಯನು ಉಟ್ಟು ನೊಸಲ ತಿಲಕವನಿಟ್ಟು' ಈ ತೀರ್ಪನ್ನು ಸ್ವಾಗತಿಸುವಲ್ಲಿ ಮುಂಚೂಣಿಯಲ್ಲಿ ನಿಂತಿದ್ದಾರೆ! 

ತಲಾಕ್ ಕೊಡದಿದ್ದರೂ ಮಹಿಳೆಯನ್ನು ತಮ್ಮಿಷ್ಟದಂತೆ 'ಪೂಜ್ಯ' ಮತ್ತು 'ತ್ಯಾಜ್ಯ' 'ವಸ್ತು'ವಾಗಿ ಪರಿಗಣಿಸುವ ಇವರೆಲ್ಲರೂ ಈ ತೀರ್ಪಿನ ಬಗ್ಗೆ ವ್ಯಕ್ತಪಡಿಸುತ್ತಿರುವ ಅಮಿತಾನಂದವು ಸಹಜವಾಗಿಯೇ ಯಾರಲ್ಲಿಯೇ ಆದರೂ ಅನುಮಾನಗಳನ್ನು ಹುಟ್ಟಿಸುವಂಥದ್ದು. ಏಕೆಂದರೆ ಇವರೆಲ್ಲರ ಸ್ತ್ರೀಸ್ವಾತಂತ್ರ್ಯ ಕಾಳಜಿ ಪ್ರಾಮಾಣಿಕವಾಗಿರುವಂಥದ್ದೇ ಆಗಿದ್ದರೆ ಭಾರತದಲ್ಲಿ 'ಸ್ತ್ರೀವಾದಿ ಚಳವಳಿಯೇ ಹುಟ್ಟುತ್ತಿರಲಿಲ್ಲ  ಎಂಬುದನ್ನು ನಾವು ಗಮನಿಸಬೇಕು. 

ಈ ಧರ್ಮ (ಪ್ರ)ವರ್ತಕರು ಕೋರ್ಟಿನ ಈ ತೀರ್ಪನ್ನು ಬೆಣ್ಣೆಮಾತುಗಳಿಂದ ಬಣ್ಣಿಸುವ ಪರಿ ನೋಡಿದರೆ 'ಆಪತ್ತಿನಲ್ಲಿದ್ದವರಿಗೆ ಆಸರೆ ದೊರೆಯಿತು' ಎಂಬ 'ಸಹಜಾನಂದ'ಕ್ಕಿಂತ 'ಆಗದವರ ಮೇಲೆ ಆಲದಮರ ಬಿದ್ದಿತು' ಎಂಬ 'ವಿಕಟಾನಂದ'ವೇ ಇವರ 'ಖುಷಿಗೆ' ಕಾರಣವಿದ್ದಂತಿದೆ. ಯಾವುದಕ್ಕೂ ನಾವು ಹುಷಾರಾಗಿರಬೇಕಾಗಿದೆ.

ಈ ಮಧ್ಯೆ ಈ ತೀರ್ಪು ಬಂದದ್ದನ್ನು ತಿಳಿದ ಕೂಡಲೇ ಮುಂಬೈನಲ್ಲಿ ಕೆಲವು ಮುಸ್ಲಿಮ್ ಮಹಿಳೆಯರು ಸಂತೋಷದಿಂದ ಕುಣಿದು ಕುಪ್ಪಳಿಸಿದರೆಂದೂ ಅದಕ್ಕಾಗಿ ಮೋದಿಯವರಿಗೆ ಅಭಿನಂದಿಸಿದರೆಂದೂ ಕಾಂಗ್ರಸ್ ಸರ್ಕಾರ ಇದ್ದಿದ್ದರೆ ತಮ್ಮ ಸಮಸ್ಯೆ ಬಗೆಹರಿಯುತ್ತಿರಲಿಲ್ಲವೆಂದು ಹೇಳಿ ಸಂಭ್ರಮಿಸಿದರೆಂದೂ ಸಾಮಾಜಿಕ ಜಾಲತಾಣದಲ್ಲಿ ಯಾರೋ ಹಾಕಿದ ಫೋಟೋ ಸಹಿತ ಸುದ್ಧಿಯೊಂದು ನಮ್ಮಂಥವರಲ್ಲಿ ಆತಂಕವನ್ನುಂಟು ಮಾಡಿದೆ. ಕಾಂಗ್ರೆಸ್ ಬಿಜೆಪಿ ಎಂಬ ಕಾರಣಕ್ಕಾಗಿ ಅಲ್ಲ; ಈ ಮಹಿಳೆಯರು ತಮಗೆ ತೀರ್ಪು ಅಷ್ಟು ಸಂತೋಷವನ್ನುಂಟು ಮಾಡಿದ್ದರೆ  ಸುಪ್ರೀಂ ಕೋರ್ಟು ಮತ್ತು ಅಲ್ಲಿನ ನ್ಯಾಯಾಧೀಶರನ್ನು ಅಭಿನಂದಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರವನ್ನೂ ಪ್ರಧಾನ ಮಂತ್ರಿಗಳನ್ನು ಏಕೆ ಅಭಿನಂದಿಸಿದರು ಎಂಬ ಕಾರಣಕ್ಕಾಗಿ. 

ಇಂತಹ ಮಹತ್ವದ ಸಮಸ್ಯೆಗಳ ವಿಚಾರಣೆಗಳನ್ನು ನ್ಯಾಯಾಲಯಗಳೇ ಮಾಡುತ್ತವೆ ಮತ್ತು ನ್ಯಾಯಾದೀಶರೇ ತೀರ್ಪುಗಳನ್ನು ಬರೆದು ಪ್ರಕಟಿಸುತ್ತಾರೆ ಎಂದು ನಾವು ಬಲವಾಗಿ ನಂಬಿರುವುದು ನಮ್ಮ ಈ ಬಗೆಗಿನ ಆತಂಕಕ್ಕೆ ಕಾರಣವಿದ್ದೀತು. 

ಇದು ಏನೇ ಆಗಲಿ ತೀರ್ಪು ಭಾರತದಲ್ಲಿ ಬಹಳಷ್ಟು ಜನ ಅಭಿಪ್ರಾಯ ಪಟ್ಟಂತೆ ಲಿಂಗಸಮಾನತೆ ಸಾಧಿಸುವಕಡೆ ಬಹುಮುಖ್ಯವಾದ ಹೆಜ್ಜೆಯಾಗಬಹುದು, ಕೋಮುವಾದಿಗಳು ಮತ್ತು ಮೂಲಭೂತವಾದಿಗಳು ತಮಗೆ ಬೇಕಾದಂತೆ ಅದನ್ನು ಬಳಸಿಕೊಳ್ಳುವ ಅವಕಾಶವನ್ನು ನಾವು ನೀವೆಲ್ಲ ನೀಡದಿದ್ದರೆ. ಆ ನಿಟ್ಟಿನಲ್ಲಿ ನಮ್ಮ ನಮ್ಮ ಹಂತದಲ್ಲಿ ಏನೇನು ಸಾಧ್ಯವಿದೆಯೋ ಅದನ್ನೆಲ್ಲ ಮಾಡೋಣ. 

ನಾವೆಲ್ಲರೂ ವಿಶೇಷವಾಗಿ ನಮ್ಮ ಸಹೋದರಿಯರು ಸ್ಪಷ್ಟವಾಗಿ ಒಂದು ಸಂಗತಿಯನ್ನು ಅರ್ಥಮಾಡಿಕೊಳ್ಳಬೇಕು. ಅದೆಂದರೆ ನಮ್ಮಲ್ಲಿ ಮಹಿಳೆಯರೆಲ್ಲರೂ ಅವರು ಹಿಂದೂ ಇರಲಿ, ಮುಸ್ಲಿಮ್ ಇರಲಿ ಸಮಾನದುಃಖಿಗಳು. ಈ ದುಃಖದ ಪ್ರಮಾಣದಲ್ಲಿ ಒಂದಿಷ್ಟು ವ್ಯತ್ಯಾಸಗಳಿರಬಹುದು ಅಷ್ಟೇ. ಆರಂಭದಲ್ಲಿ ನಾನು ಉಲ್ಲೇಖಿಸಿದ ಕುವೆಂಪು ಕಾವ್ಯ ಹೇಳುವಂತೆ ಇವರೆಲ್ಲ ಕೇವಲ ವಯಸ್ಸಿನಲ್ಲಿ ಮಾತ್ರವಲ್ಲ ದುಃಖದಲ್ಲಿಯೂ ಅಕ್ಕತಂಗಿಯರು!!!

- ರಾಜೇಂದ್ರ ಬುರಡಿಕಟ್ಟಿ

Friday, August 4, 2017

ಹಿಂದೂ, ಶೈವ-ವೀರಶೈವ ಮತ್ತು ಲಿಂಗಾಯತ

ಹಿಂದೂ, ಶೈವ-ವೀರಶೈವ ಮತ್ತು ಲಿಂಗಾಯತ
(ಒಂದು ತಾತ್ವಿಕ ಚರ್ಚೆ)
ಭಾಗ-1
“ಹನ್ನೆರಡನೆಯ ಶತಮಾನದ ವಚನ ಆಂದೋಲನದ ಆ ಇಪ್ಪತ್ತೈದು ವರ್ಷಗಳು. ಹುಡುಕಿದರೂ ಜಗತ್ತಿನಲ್ಲಿಯೇ ಕರ್ನಾಟಕದ ಈ ಮಾದರಿ ಬಹುಶಃ ಎಲ್ಲೂ ಸಿಗುವುದಿಲ್ಲವೇನೋ! ಈ ವಚನಧರ್ಮವನ್ನು ಜಾತಿಯ ಬಚ್ಚಲಿನಿಂದ ಮೇಲೆತ್ತಿ ರಕ್ಷಿಸಿದರೆ ಜಗತ್ತಿಗೇ ಇದು ಬೆಳಕಾಗಬಹುದೇನೋ. ಇದು ಜಾತಿಯಾದರೆ ಕೆಟ್ಟಜಾತಿ; ಧರ್ಮವಾದರೆ ಮಹೋನ್ನತ ಧರ್ಮ” ಇವು `ವಚನಧರ್ಮ’ `ಶರಣಧರ್ಮ’ `ಬಸವಧರ್ಮ’ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ `ಲಿಂಗಾಯತ’ವನ್ನು ಕುರಿತ ಲೇಖಕ ದೇವನೂರು ಮಹಾದೇವ ಅವರು ತಮ್ಮ ಬಹುಪ್ರಸಿದ್ಧ ಕೃತಿ `ಎದೆಗೆ ಬಿದ್ದ ಅಕ್ಷರ’ದಲ್ಲಿ ಆಡುವ ಮಾತುಗಳು.
ಕರ್ನಾಟಕದ ಬಹುಸಂಖ್ಯಾತ ಜನಾಂಗವೆಂದು ಪರಿಗಣಿತವಾಗಿರುವ ವೀರಶೈವ-ಲಿಂಗಾಯತರು ಹಿಂದೂ ಧರ್ಮದಿಂದ ಪ್ರತ್ಯೇಕಿಸಲ್ಪಟ್ಟ `ಸ್ವತಂತ್ರಧರ್ಮ’ ಸ್ಥಾನಮಾನಕ್ಕಾಗಿ ಧ್ವನಿಯೆತ್ತಿರುವ ವಿದ್ಯಮಾನ ಈಗ ಪರವಿರೋಧಗಳ ಚರ್ಚೆಗೆ ವಸ್ತುವಾಗಿದೆ. ಹಾಗೇ ಒಂದಿಷ್ಟು ವಾದ-ಸಂವಾದ ಜೊತೆಜೊತೆಗೆ ಒಂದಿಷ್ಟು ವಿವಾದಗಳಿಗೂ ಕೂಡ. ಈ ಬೆಳವಣಿಗೆಗಳಿಗೆ ಕಾರಣವಾದ ಕೆಲವು ಅಂಶಗಳನ್ನು ನೋಡುವುದಾದರೆ ವಿಜಯಪುರದಲ್ಲಿ ಕೇಂದ್ರಸ್ಥಾನವನ್ನು ಹೊಂದಿರುವ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಕನ್ನಡ ನಾಡಿನ ಸಂತ ಕವಿಯತ್ರಿ ಅಕ್ಕಮಹಾದೇವಿಯ ಹೆಸರನ್ನು ಇಡುವುದು ಮತ್ತು ತನ್ನೆಲ್ಲ ಕಛೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಹಾಕುವಂತೆ ಆದೇಶಮಾಡಿ ಅದನ್ನು ಕಾರ್ಯಗತಗೊಳಿಸುವುದು ಈ ಎರಡು ಮುಖ್ಯ ವಿಷಯಗಳ ಪರವಾಗಿ ರಾಜ್ಯ ಸರ್ಕಾರ ಈ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ತೆಗೆದುಕೊಂಡು ನಿರ್ಣಯಗಳು.
ಈ ನಿರ್ಣಯಗಳು ಸಹಜವಾಗಿಯೇ ಈ ಸಂತರ ವಾರಸುದಾರರು ಎಂದು ಅನ್ನಿಸಿಕೊಂಡ ನಾಡಿನ ವೀರಶೈವ-ಲಿಂಗಾಯತರಲ್ಲಿ ಅಭಿಮಾನ ಮತ್ತು ಸಂತೋಷವನ್ನು ಹುಟ್ಟಿಸಿದವು. ಹಾಗಾಗಿ ಅವುಗಳನ್ನು ಆಗುಮಾಡಿದ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮವೊಂದನ್ನು ಏರ್ಪಡಿಸಿದ `ಅಖಿಲ ಭಾರತ ವೀರಶೈವ ಮಹಾಸಭಾ’ ಮುಖ್ಯಮಂತ್ರಿಯವರನ್ನು ಕರೆಸಿ ಸನ್ಮಾನಿಸಿದೆ. ಮತ್ತು ಅದರ ಜೊತೆಗೆ `ವೀರಶೈವ-ಲಿಂಗಾಯತ’ವನ್ನು ಒಂದು `ಸ್ವತಂತ್ರಧರ್ಮ’ವೆಂದು ಪರಿಗಣಿಸುವ’ ಒಂದು ಬೇಡಿಕೆಯನ್ನೂ ಅವರಿಗೆ ಕೊಟ್ಟಿದೆ. ಆ ಬೇಡಿಕೆಯ ಪರಿಶೀಲನೆ ಮತ್ತು ಅನುಮೋದನೆಯು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಸಹಜವಾಗಿ ಮುಖ್ಯಮಂತ್ರಿ ಸಭಾದ ಈ ಬೇಡಿಕೆಗೆ ಸ್ಪಂದಿಸಿ ಈ ಬಗ್ಗೆ ನಿಮ್ಮಲ್ಲಿ, “ಕೆಲವರು ವೀರಶೈವ ಎನ್ನುತ್ತೀರಿ ಮತ್ತು ಕೆಲವು ಲಿಂಗಾಯತ ಎನ್ನುತ್ತೀರಿ ಅದರಲ್ಲಿ ಯಾವುದು ಸರಿ? ಅಥವಾ ಎರಡೂ ಸೇರಿಸಿ ವೀರಶೈವ ಲಿಂಗಾಯತ ಎಂಬುದು ಸರಿಯೋ ಈ ಬಗ್ಗೆ ನೀವೆಲ್ಲ ಒಂದು ತೀರ್ಮಾನಕ್ಕೆ ಬಂದು ಮನವಿಕೊಟ್ಟರೆ ಕೇಂದ್ರಕ್ಕೆ ಅದನ್ನು ಪರಿಗಣಿಸಲು ಶಿಫಾರಸ್ಸು ಮಾಡುತ್ತೇನೆ” ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಯವರ ಈ ಹೇಳಿಕೆಯ ಮುಂದುವರೆದ ಭಾಗವಾಗಿ ಇತ್ತೀಚೆಗೆ ಬೀದರಿನಲ್ಲಿ ವೀರಶೈವ-ಲಿಂಗಾಯತ ಜನಾಂಗಗಳ ಜನರ ಬೃಹತ್ ಸಮಾವೇಶವೊಂದು ನಡೆದು ಸ್ವತಂತ್ರಧರ್ಮಕ್ಕಾಗಿ ಸಾರ್ವಜನಿಕ ಹಕ್ಕೊತ್ತಾಯ ಮಂಡಿಸಿದೆ. ಈ ಬೆಳವಣಿಗೆಗಳು ಈ ಜನಾಂಗಗಳ ಒಳಗೂ ಹೊರಗೂ ಒಂದಿಷ್ಟು ತಳಮಳವನ್ನುಂಟುಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಹಾಗಾಗಿಯೇ ಪರವಿರೋಧ ಚರ್ಚೆ ಬಿರುಸುಗೊಂಡಿದೆ.  ಒಂದು ಗುಂಪು ಅದಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಅಗತ್ಯತೆಯನ್ನು ಪ್ರತಿಪಾದಿಸಿದರೆ ಇನ್ನೊಂದು ಅದನ್ನು ವಿರೋಧಿಸುತ್ತಿದೆ. ಎರಡೂ ಕಡೆಯಲ್ಲಿ  ಅನೇಕ ಆಧಾರಗಳ ಸಮೇತ ತಮ್ಮ ಅಭಿಪ್ರಾಯಗಳನ್ನು, ವಾದಗಳನ್ನು ತಿಳಿದವರು ಮಂಡಿಸುತ್ತಿದ್ದಾರೆ. ಇವರಲ್ಲಿ ಅನೇಕ ವಿದ್ವಾಂಸರು, ಮಠಾಧೀಶರು, ಪಾಲ್ಗೊಂಡು - ಒಪ್ಪುವುದು ಬಿಡುವುದು ಬೇರೆಪ್ರಶ್ನೆ – ಚರ್ಚೆಯನ್ನು ಅರ್ಥಪೂರ್ಣಗೊಳಿಸಿದ್ದಾರೆ. ಹಾಗಂತ ತಿಳಿಯದವರೇನೂ ಸುಮ್ಮನಿಲ್ಲ. ಪತ್ರಿಕೆಯವರು ಎರಡೂ ಗುಂಪಿನ ಪ್ರಮುಖರನ್ನು ಸಂದರ್ಶನ ಮಾಡಿ ಒಂದೇ ಪುಟದಲ್ಲಿ ಅಕ್ಕಪಕ್ಕ ಅವರ ವಾದಸರಣಿಯನ್ನು ಪ್ರಕಟಿಸುವುದು, ದೃಶ್ಯಮಾಧ್ಯಮದವರು ಈ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ `ಗಣ್ಯರು’ ಎಂಬ ಕಾರಣಕ್ಕೆ ಕೆಲವು ರಾಜಕಾರಣಿಗಳ ಮುಖಕ್ಕೆ ಮೈಕು ಹಿಡಿಯುವುದು ಮತ್ತು ಮೈಕು ಹಿಡಿದರೂ ಮಾತನಾಡದಿದ್ದರೇ ಹೇಗೆಂದು ಅವರು ತಮಗೆ ತಿಳಿದ ಏನೋ ಒಂದು ಹೇಳುವುದು ಎಲ್ಲ ನಡೆಯುತ್ತಿವೆ.
ಈ ಸನ್ನಿವೇಶವನ್ನು ಹಿನ್ನಲೆಯಾಗಿಟ್ಟುಕೊಂಡು ಹಿಂದೂ-ಶೈವ-ವೀರಶೈವ-ಲಿಂಗಾಯತ ಇವುಗಳ ಕುರಿತು ಒಂದು ತಾತ್ವಿಕ ಚರ್ಚೆಯನ್ನು ಮಾಡಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ. ಆರಂಭದಲ್ಲಿಯೇ ಒಂದೆರಡು ಮಾತುಗಳನ್ನು ಹೇಳಿಬಿಡುವುದು ಉತ್ತಮ. ಈಗ ನಡೆಯುತ್ತಿರುವ ಚರ್ಚೆಯಲಿ ಬಹುಪಾಲು ಪರವಿರೋಧಗಳ ಅಭಿಪ್ರಾಯಗಳು ರಾಜಕೀಯ ಹಿನ್ನಲೆಯಲ್ಲಿಯೇ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಈ ರಾಜಕಾರಣ ನೇರವಾದ ಚುನಾವಣಾ ರಾಜಕಾರಣವಿರಬಹುದು ಅಂತೆಯೇ ಪರೋಕ್ಷವಾದ ಸಾಂಸ್ಕೃತಿಕ ರಾಜಕಾರಣವಿರಬಹುದು. ಯಾವುದೇ ಜನಸಮುದಾಯ ತನ್ನ ಕಕ್ಷೆಗೆ ಸೇರಿಕೊಳ್ಳುವುದು ಮತ್ತು ಕಕ್ಷೆಯಿಂದ ಹೊರನಡೆಯುವುದು ಪ್ರಜಾಪ್ರಭುತ್ವ ಮಾದರಿಯ ರಾಜಕಾರಣದಲ್ಲಿ ಅತ್ಯಂತ ಮಹತ್ವದ್ದೆಂದು ಪರಿಗಣಿಸಲ್ಪಡುವುದರಿಂದ ರಾಜಕೀಯ ಪಕ್ಷಗಳು ಸಹಜವಾಗಿಯೇ ಇಂತಹ ವಿಷಯಗಳಲ್ಲಿ ಸುಮ್ಮನಿರಲು ಸಾಧ್ಯವಾಗುವುದಿಲ್ಲ. ಅದರಲ್ಲೂ `ವೀರಶೈವ-ಲಿಂಗಾಯತ’ ಜನಾಂಗವು ಕರ್ನಾಟಕದ ಅತಿದೊಡ್ಡ ಜನಾಂಗವೆಂದು ಪರಿಗಣಿತವಾಗಿರುವುದು, ಸಾಮೂಹಿಕವಾಗಿ ರಾಜಕೀಯ ಪಕ್ಷಗಳ ಮತ್ತು ವೈಯಕ್ತಿಕವಾಗಿ ಈ ಜನಸಮುದಾಯಗಳ `ಅನಭಿಸಕ್ತ’ದೊರೆಗಳೆಂದು ಪರಿಗಣಿಸಲ್ಪಡುವ ಕೆಲವು ರಾಜಕಾರಣಿಗಳಿಗೆ ಅಳಿವು-ಉಳಿವಿನ ಪ್ರಶ್ನೆಯಾಗಿರುವುದು ಈ ಪಕ್ಷ ಮತ್ತು ವ್ಯಕ್ತಿ ರಾಜಕಾರಣವನ್ನು ಬಹಳಷ್ಟು ಕ್ರಿಯಾಶೀಲಗೊಳಿಸಿದೆ.
ಈ ಚರ್ಚೆಯಲ್ಲಿ ಕೇಳಿಬರುತ್ತಿರುವ ‘ಇದು ಹಿಂದೂ ಸಮಾಜವನ್ನು ಒಡೆಯುವ ಕೆಲಸ’ `ಮುಖ್ಯಮಂತ್ರಿಗಳು ಈ ಬಗ್ಗೆ ಅಭಿಪ್ರಾಯಪಡೆಯಲು ಮಂತ್ರಿಗಳನ್ನು ನಿಯಮಿಸಿದ್ದು ಕೀಳುರಾಜಕಾರಣ’, `ಇದು ಮುಖ್ಯಮಂತ್ರಿಗಳ ಒಡೆದಾಳುವ ನೀತಿ’ `ಪ್ರತ್ಯೇಕವಾದರೆ ನಮಗೆ ಅಲ್ಪಸಂಖ್ಯಾತರ ಸ್ಥಾನಮಾನ ಸಿಗುತ್ತದೆ, ಹಾಗೆ ಮಾಡುವುದರಲ್ಲಿ ತಪ್ಪೇನಿದೆ?’ ಪೇಜಾವರರಿಗೆ ಇದು ಸಂಬಂಧಪಡದ ವಿಚಾರ ಈ ವಿಷಯದಲ್ಲಿ ಅವರು ಮೂಗುತೂರಿಸುವುದು ಬೇಡ; ಇದು ನಮ್ಮ ಸಮಾಜದ ಆಂತರಿಕ ಸಮಸ್ಯೆ ಇದನ್ನು ನಾವು ನಾವೇ ಪರಿಹರಿಸಿಕೊಳ್ಳುತ್ತೇವೆ’ ಇತ್ಯಾದಿ ಮಾತುಗಳೆಲ್ಲವೂ ಈ ರಾಜಕಾರಣ ಪ್ರೇರಿತವಾದವುಗಳೇ ಎಂಬುದು ಯಾರಿಗೂ ಅನುಮಾನ ತರಲಾರವು. ಇಂತಹ ಮಾತುಗಳು ಪ್ರಶ‍್ನೆಗಳು, ವಾದಸರಣಿಗಳಿಗೆ ಹೆಚ್ಚು ಆದ್ಯತ ನೀಡದೆ ವಿಷಯದ ಐತಿಹಾಸಿಕ ಮತ್ತು ತಾತ್ವಿಕ ಅಂಶಗಳನ್ನಿಟ್ಟುಕೊಂಡು ಒಂದಿಷ್ಟು ಚರ್ಚೆಯನ್ನು ಮಾಡಲು ಇಲ್ಲಿ ಪ್ರಯತ್ನಿಸಲಾಗಿದೆ.
ಹೀಗಾಗಿ ಹಿಂದೂ ಅಂದರೇನು? ಅದೊಂದು ಧರ್ಮ ಹೌದೋ ಅಲ್ಲವೋ? ಅದಕ್ಕೂ ಶೈವ-ವೀರಶೈವ-ಲಿಂಗಾಯತ ಇವುಗಳಿಗೆ ಏನಾದರೂ ಸಂಬಂಧವಿದೆಯೇ? ಇದೆ ಎನ್ನುವುದಾದರೆ ಅದೆಂಥ ಸಂಬಂಧ? ಅವು ಒಂದಕ್ಕೊಂದು ಹೊಂದಿಕೊಳ್ಳುವ ತತ್ವಗಳನ್ನು ಹೊಂದಿವೆಯೇ ಹೊಂದಿದ್ದರೆ ಅವು ಎಂಥ ತತ್ವಗಳು? ಹೊಂದಿಕೊಳ್ಳದಿದ್ದರೆ ಅವು ಯಾವ ತತ್ವಗಳು? ವೀರಶೈವ ಮತ್ತು ಲಿಂಗಾಯತ ಒಂದೆಯೋ ಅಥವಾ ಬೇರೆಯೋ ಇಂತಹ ಪ್ರಶ್ನೆಗಳಿಗೆ ಇಲ್ಲಿ ಉತ್ತರದೊರೆಯಬಹುದೇ ವಿನಃ `ಕೂಡಿ ಇರುವುದರಿಂದ ಆಗುವ ಲಾಭವೇನು? ಒಡೆದುಹೋಗುವುದರಿಂದ ನಷ್ಟವೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲ ಉತ್ತರ ದೊರೆಯಲಾರದು.
ಭಾಗ-2
`ಹಿಂದೂ’ ಎಂಬುದು ವಾಸ್ತವವಾಗಿ ಇರುವ ಒಂದು ಧರ್ಮವೇ?
ವೀರಶೈವ ಲಿಂಗಾಯತಗಳ ಒಂದೆಯೇ ಅಥವಾ ಬೇರಯೇ ಎಂಬುದನ್ನು ಆಮೇಲೆ ನೋಡೋಣ. ಅದಕ್ಕೂ ಮೊದಲು ಅವೆರಡೂ ಹೆಚ್ಚುಕಡಿಮೆ ಒಂದಾಗದಿದ್ದರೂ ಒಟ್ಟಾಗಿ ಈಗ ಯಾವುದರ ವಿರುದ್ಧ ಜಗಳಕ್ಕಿಳಿದಿರುವವೋ ಮತ್ತು ಯಾವುದನ್ನು ಅವುಗಳ ಮೂಲವೆಂದು ಕೆಲವರು ವಾದಿಸುತ್ತಿರುವರೋ ಆ `ಹಿಂದೂ’ ಎಂದರೇನು ಎಂಬುದನ್ನು ನೋಡೋಣ. ಈ `ಹಿಂದೂ’ ಎಂಬುದು ಒಂದು ಧರ್ಮವೋ ಜನಾಂಗವೋ ಅಥವಾ ಎರಡೂ ಹೌದೋ (ಧರ್ಮ ಮತ್ತು ಜನಾಂಗಗಳು ಕೆಲವು ವೇಳೆ ಒಂದೇ ಇರುತ್ತವೆ ಉದಾ:ಜೈನ-ಜೈನರು, ಇನ್ನು ಕೆಲವು ವೇಳೆ ಭಿನ್ನಹೆಸರುಗಳಿಂದ ಕರೆಸಿಕೊಳ್ಳಲ್ಪಡುತ್ತವೆ. ಉದಾ: ಇಸ್ಲಾಂ, ಮುಸ್ಲಿಂ) ಬಹು ಚರ್ಚಿತ ಆ ಹೆಸರಿನ ಒಂದು ಧರ್ಮ ಹಿಂದೆ ಇತ್ತೆ? ಈಗಲೂ ವಾಸ್ತವದಲ್ಲಿ ಅದು ಇದೆಯೇ ಅಥವಾ ಅಂಥದೊಂದು ಭ್ರಮೆಯನ್ನು ಸೃಷ್ಟಿಸಲಾಗಿದೆಯೇ?  ಹಿಂದೆಯೂ ಇತ್ತು ಈಗಲೂ ಇದೆ ಎನ್ನುವುದಾದರೆ ಅದು ಎಂದು ಹುಟ್ಟಿಕೊಂಡಿತು? ಅದರ ಮುಖ್ಯ ತಾತ್ವಿಕತೆ ಏನು? ಅದನ್ನು ಅನುಸರಿಸಬೇಕು ಎನ್ನುವವನು ಪಾಲಿಸಬೇಕಾದ ತತ್ವಗಳು ಯಾವುದು? ಎಂಬ ವಿಷಯಗಳನ್ನು ಮೊದಲು  ಚರ್ಚಿಸಿಕೊಳ್ಳುವುದು ಬಹಳ ಮುಖ್ಯವಾದದ್ದು. `ಹಿಂದಣ ಹೆಜ್ಜೆಯನರಿಯರೆ ಮುಂದಣ ಹೆಜ್ಜೆಯನಿಡಲಾಗದು’ ಎಂಬ ಅಲ್ಲಮಪ್ರಭುವಿನ ಮಾತಿನಂತೆ ಮುಂದೆ ಯಾವ ಕಡೆ ನಡೆಯಬೇಕು ಎಂಬುದನ್ನು ನಿರ್ಧರಿಸಲಿಕ್ಕೆ ಈಗ ನಾವು ಯಾವಕಡೆಯಿಂದ ಬಂದು ಇಲ್ಲಿ ನಿಂತಿದ್ದೇವೆ ಎಂಬ ಅರಿವು ಅವಶ್ಯಕವಾಗಿ ಬೇಕಾಗುತ್ತದೆ. ಈ ಅರಿವನ್ನು ನಾವು ಅರಿಯದೇ ಹೋದರೆ ಬಂದದಾರಿಯಲ್ಲಿಯೇ ವಾಪಾಸ್ಸು ಹೊರಡುವ ಸಾಧ್ಯತೆ ಸಹಜವಾಗಿಯೇ ಇರುತ್ತದೆ.
`ಹಿಂದೂ’ ಎಂಬುದು ಧರ್ಮವಾದರೆ ಉಳಿದವು ಧರ್ಮಗಳಲ್ಲ!
ಒಂದು ಸಂದರ್ಭವನ್ನು ನೆನಪಿಸಬೇಕು. ನಾನು ನನ್ನ ಕಾಲೇಜು ದಿನಗಳಲ್ಲಿ `ಕರ್ನಾಟಕದ ಮತಧರ್ಮಗಳು’ ಎಂಬ ವಿಷಯವೊಂದನ್ನು ಅಧ್ಯಯನಕ್ಕೆ ಆಯ್ಕೆಮಾಡಿಕೊಂಡಿದ್ದೆ. ಅದರಲ್ಲಿ ಜೈನ, ಬೌದ್ಧ, ಇಸ್ಲಾಂ, ವೀರಶೈವ, ವೈಷ್ಣವ, ಹೀಗೆ ಏನೇನೋ ಧರ್ಮಗಳು ಅಧ್ಯಯನ ವಸ್ತುಗಳಾಗಿದ್ದವು. ನನಗೆ ಆಶ್ಚರ್ಯ ಹುಟ್ಟಿಸಿದ ಸಂಗತಿಯೆಂದರೆ ಭಾರತದ ಹಾಗೇ ಅದರ ಅಂಗವಾದ ಕರ್ನಾಟಕದ ಬಹುದೊಡ್ಡ ಧರ್ಮವೆಂದು ನಾನು ಅದುವರೆಗೂ ತಿಳಿದುಕೊಂಡಿದ್ದ `ಹಿಂದೂಧರ್ಮ’ ಎಂಬ ಧರ್ಮದ ಹೆಸರೇ ಅಲ್ಲಿರಲಿಲ್ಲ. ನಾನು ಈ ಬಗ್ಗೆ ಅಲ್ಲಲ್ಲಿ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ದೊರೆಯದಿದ್ದಾಗ ಈ ಧರ್ಮಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ಮತ್ತು ಯಾವಧರ್ಮಕ್ಕೂ ಅಂಟಿಕೊಂಡಿರದ ಮತ್ತು ಧರ್ಮದಂತಹ ವಿಷಯದಲ್ಲಿ `ಅಲಿಪ್ತ’ರಾಗಿದ್ದ ಒಬ್ಬ ಹಿರಿಯ ವಿದ್ವಾಂಸರನ್ನು ವಿಚಾರಿಸಿದೆ. ಅವರು ಹೇಳಿದ್ದು,”ಹಿಂದೂ ಎಂಬುದನ್ನು ಒಂದು ಧರ್ಮ ಎಂದು ಅಧ್ಯಯನ ದೃಷ್ಟಿಯಿಂದ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಅದನ್ನು ಧರ್ಮ ಎಂದು ಒಪ್ಪಿಕೊಂಡರೆ ಈಗಾಗಲೇ ಧರ್ಮಗಳೆಂದು ಒಪ್ಪಿಕೊಂಡಿರುವ ಜೈನ, ಬೌದ್ಧ, ಇಸ್ಲಾಂ, ವೀರಶೈವ, ಇತ್ಯಾದಿಗಳನ್ನು ಈ ಪಟ್ಟಿಯಿಂದ ಕೈಬಿಟ್ಟು ಅವುಗಳನ್ನು ಇನ್ಯಾವುದಾದರೂ ಹೆಸರಿನಿಂದ ಕರೆಯಬೇಕಾಗುತ್ತದೆ.”
ಮುಂದುವರೆದು ಮಾತನಾಡಿದ ಅವರು, “ಯಾವನ್ನು ಇಂದು ಹಿಂದೂಧರ್ಮದ ಅಂಗಗಳೆಂದು ಕರೆಯಲಾಗುತ್ತದೆಯೋ ಆ ವೀರಶೈವ, ವೈಷ್ಣವ ಇತ್ಯಾದಿಗಳೇ ಅಧ್ಯಯನ ದೃಷ್ಟಿಯಿಂದ ಅಸ್ಥಿತ್ವದಲ್ಲಿರುವ ನಿಜವಾದ ಧರ್ಮಗಳು. ಹಾಗಾಗಿ ಸಾಮಾನ್ಯವಾಗಿ ಧರ್ಮಗಳ ಸಾಲಿನಲ್ಲಿ `ಹಿಂದೂ’ ಎಂಬುದನ್ನು ಸೇರಿಸದೇ ವೈದಿಕ, ವೀರಶೈವ,  ಇತ್ಯಾದಿಗಳನ್ನು ಸೇರಿಸಿ ಇಡಲಾಗುತ್ತದೆ.” ಎಂದರು. ಇದು ನನಗೆ ಅತ್ಯಂತ ಗಂಭೀರ ವಿಷಯವೆನ್ನಿಸಿ, “ಮತ್ತೆ ಎಲ್ಲರೂ `ಹಿಂದೂಧರ್ಮ’ `ಹಿಂದೂಧರ್ಮ’ ಎನ್ನುತ್ತಾರಲ್ಲ?”  ಎಂದು ನನ್ನ ಸಹಜಾಶ್ಚರ್ಯದ ಪ್ರಶ್ನೆಹಾಕಿದಾಗ, `ಹಾಗೆ ಹೇಳುವವರನ್ನು `ಹಿಂದೂ ಧರ್ಮ ಎಂದರೇನು? ಅದರ ಮುಖ್ಯ ತಾತ್ವಿಕತೆ ಅಥವಾ ತತ್ವಗಳೇನು ಎಂದು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಏಳೆಂಟು ಮಾತುಗಳಲ್ಲಿ ತಿಳಿಸಲು ಹೇಳಿ” ಎಂದು ನಕ್ಕು ಸುಮ್ಮನೆ ತಮ್ಮ ಕೆಲಸದಲ್ಲಿ ಲೀನವಾದರು. ಇಂಥದ್ದೊಂದು ಬೃಹತ್ ಗಾತ್ರದ್ದೆಂದು ಹೇಳಲಾಗುವ ಧರ್ಮದ ಬಗ್ಗೆ ಈ ವಿದ್ವಾಂಸರೇ ಅಷ್ಟೇ ಗಾತ್ರದ ಮೌನದಿಂದ ನಾನು ಕಂಗಾಲಾಗಿ ಹೋದೆ.  ಈ ವಿಷಯದಲ್ಲಿ ಒಂದಿಷ್ಟು ಆಳವಾಗಿ ಅಧ್ಯಯನ ಮಾಡಲು ನನಗೆ ಮುಂದೆ ಪ್ರೇರಣೆಯಾಯಿತು ಎಂಬುದು ಬೇರೆ ವಿಷಯ.
ಈ ಘಟನೆಯನ್ನು ಇಲ್ಲಿ ವಿವರವಾಗಿ ಪ್ರಸ್ತಾಪಿಸಲು ಮುಖ್ಯಕಾರಣ `ಹಿಂದೂ’ ಎಂಬುದು ಮುಖ್ಯವಾಗಿ ರಾಜಕೀಯವಾಗಿ ಅದರ ಮುಂದುವರೆದ ಮತ್ತು ಅಧಿಕೃತ ಭಾಗವಾದ `ಪ್ರಜಾತಂತ್ರ’ದಿಂದ ಒಂದು ಧರ್ಮವಾಗಿ ಪರಿಗಣಿತವಾದರೂ (ಚುನಾವಣೆ, ಗಣತಿ, ಜನಾಂಗೀಯ ದಾಖಲಿಕರಣ ಇತ್ಯಾದಿಗಳಲ್ಲಿ) ಅದು ಸಾಂಸ್ಕೃತಿಕ ಮತ್ತು ಸಂಶೋಧನಾ ವಲಯದಲ್ಲಿ ಧರ್ಮವಾಗಿ ಸ್ವೀಕೃತವಾಗಿಲ್ಲ ಎಂಬುದನ್ನು ಹೇಳಲು. ಹೀಗೆ ಹೇಳಲು ಕಾರಣವಿದೆ. ಯಾವುದೇ ಒಂದು ಧರ್ಮ, ಅಥವಾ ಸಂಸ್ಕೃತಿ ಇರಲಿ ಅವುಗಳಿಗೆ ತಮ್ಮದೇ ಆದ ಕೆಲವು ಸಾಮಾನ್ಯ ಗುಣಲಕ್ಷಣಗಳು ಇರುತ್ತವೆ ಮತ್ತು ಆ ಗುಣಲಕ್ಷಣಗಲೇ ಆ ಧರ್ಮ ಅಥವಾ ಸಂಸ್ಕೃತಿಯ ಅನನ್ಯತೆಯ ಸಂಕೇತವಾಗಿರುತ್ತವೆ ಎಂಬುದು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಧ್ಯಯನನಿರತರಾದವರಿಗೆ ಸಾಮಾನ್ಯವಾಗಿ ತಿಳಿದಿರುವ ಸಂಗತಿ. ಹಿಂದೂ ಎಂಬುದಕ್ಕೆ ಈ ಬಗೆಯ ಅನನ್ಯತೆಯ ಸಂಕೇತಗಳನ್ನು ಇದುವರೆಗೆ ನಿರ್ದಿಷ್ಟಪಡಿಸಲಾಗಿಲ್ಲ ಎಂಬುದನ್ನು ನಾವೆಲ್ಲರೂ ಗಮನಿಸಬೇಕು. ವೈದಿಕ, ವೈಷ್ಣವ, ಇಸ್ಲಾಂ, ವೀರಶೈವ, ಜೈನ, ಬೌದ್ಧ ಮುಂತಾದ ಧರ್ಮಗಳ ವಿಷಯದಲ್ಲಿ ಯಾವುದಾದರೂ ಒಂದನ್ನು ಕುರಿತು, ಆ ಧರ್ಮದ ತಿರುಳು ಏನು ಅದು ಪ್ರತಿಪಾದಿಸುವ ಮೌಲ್ಯಗಳೇನು ಮತ್ತು ಅದನ್ನು ಅನುಸರಿಸುವ ಅನುಯಾಯಿಗಳು ಪಾಲಿಸಬೇಕಾದ ನಿಯಮಗಳೇನು? ಎಂದು  ಯಾರಾದರೂ ಪ್ರಶ್ನಿಸಿದರೆ ಉತ್ತರಿಸಲು ಕಷ್ಟವಾಗಲಾರದು. ಉದಾಹರಣೆಗೆ ಇಸ್ಲಾಮನ್ನು ತೆಗೆದುಕೊಂಡರೆ ಅದು ಕುರಾನನ್ನು ಪವಿತ್ರಗಂಥವೆಂದು ಒಪ್ಪಿಕೊಳ್ಳುತ್ತದೆ, ಮಹಮದ್ ಪೈಗಂಬರರನ್ನು ಮೂಲಪುರಷನನ್ನಾಗಿ ಒಪ್ಪಿಕೊಳ್ಳುತ್ತದೆ, ಅದನ್ನು ಅನುಸರಿಸುವವರು ನಮಾಜ್ ಮಾಡುತ್ತಾರೆ, ಮಸೀದಿಗೆ ಹೋಗುತ್ತಾರೆ ಮಹಿಳೆಯರು ಬೂರ್ಖಾ ಧರಿಸುತ್ತಾರೆ, ಹೀಗೆ ಒಂದಿಷ್ಟು ಲಕ್ಷಣಗಳನ್ನು ಹೇಳಿಬಿಡಬಹುದು. ಉಳಿದ ಧರ್ಮಗಳ ವಿಷಯಗಳಲ್ಲೂ ಇದು ಕಷ್ಟವಲ್ಲ. ನೀನೇಕೆ ಮುಸ್ಲಿಂ? ನೀನೇಕೆ ಲಿಂಗಾಯತ? ನೀನೇಕೆ ಜೈನ? ನೀನೇಕೆ ಕ್ರೈಸ್ತ? ಎಂದು ಯಾರಾದರೂ ಆ ಧರ್ಮಗಳನ್ನು ಅನುಸರಿಸುವವರಿಗೆ ಪ್ರಶ್ನೆಮಾಡಿದರೆ ಅವರು ತಡವರಿಸದೇ ನಾಲ್ಕಾರು ಮಾತುಗಳಲ್ಲಿ ಉತ್ತರ ಹೇಳಬಲ್ಲರು. ಹಾಗೇ ಯಾರಾದರೂ ನೀನೇಕೆ ಹಿಂದೂ? ಎಂದು ಯಾರಾದರೂ ಆ ಧರ್ಮದ ಅನುಯಾಯಿ ಅಂದುಕೊಳ್ಳುವವನನ್ನು ಕೇಳಿದರೆ ಅವನು ಹೀಗೆ ತಡವರಿಸದೇ ಉತ್ತರ ಹೇಳಬಲ್ಲನೇ?
 ಗೊಂದಲಗಳ ಹಿಂದೂ ಮಹಾಸಾಗರ!
 ಮೇಲಿನ ಯಾವುದಾರೂ ಒಂದು ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಕೊಡುವುದೂ`ಹಿಂದೂ’ ಎಂಬುದರ ವಿಷಯದಲ್ಲಿ ಸುಲಭವಲ್ಲ. ಅದರ ಹೆಸರು, ಉಗಮ, ಮೂಲಪುರುಷರು, ಧರ್ಮಗ್ರಂಥಗಳು, ಪ್ರತಿಪಾದಿಸುವ ಮೌಲ್ಯಗಳು ಅಥವಾ ತಾತ್ವಿಕತೆ ಅದನ್ನು ಅನುಸರಿಸುವವರ ನಡುವೆ ಕಂಡುಬರುವ ಸಾಮಾನ್ಯ ಲಕ್ಷಣಗಳು ಇಂತಹ ಯಾವ ವಿಷಯಗಳಲ್ಲಿಯೂ ಒಂದು ಸ್ಪಷ್ಟತೆ ಇಲ್ಲ. ಎಲ್ಲವೂ ಗೊಂದಲವೋ ಗೊಂದಲ. ಹಿಂದೂ ಎಂಬುದೇ ಒಂದು ರೀತಿಯಲ್ಲಿ ಗೊಂದಲಗಳ ಹಿಂದೂ ಮಹಾಸಾಗರ. ಸಾವಿರಾರು ವರ್ಷಗಳ ಧೀರ್ಘ ಇತಿಹಾಸವಿದೆ ಎಂದೂ ಹೇಳುತ್ತಲೇ ಬಂದಿದ್ದರೂ ಎಷ್ಟೋ ಸಾವಿರ ಪುಟಗಳ ಧರ್ಮಸಾಹಿತ್ಯ ಈ ಹೆಸರಲ್ಲಿ ಪ್ರಕಟವಾಗಿದ್ದರೂ, ಹಾದಿಗೊಂದು ಬೀದಿಗೊಂದು ದೇವಾಲಯಗಳು, ಅರ್ಚಕರು, ಪ್ರಪಂಚದ ಯಾವುದೇ ದೇಶಕ್ಕೆ ಬೇಕಾದರೂ ರಫ್ತುಮಾಡುವಷ್ಟು ಸಂಖ್ಯೆಯಲ್ಲಿರುವ ಸಂತರು-ಜಗದ್ಗುರುಗಳು-ಸ್ವಾಮಿಗಳು-ಬಾಬಾಗಳು ತುಂಬಿತುಳುಕುತ್ತಿದ್ದರೂ, ಅನೇಕ `ಧರ್ಮವೀರರು’ ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಮುಗ್ಧಜನಸಮೂಹವನ್ನು ಉದ್ದೇಶಿಸಿ, ಏರುಧ್ವನಿಯಲ್ಲಿ ಮಾತಾಡಿ ಅವರಲ್ಲಿ `ಧರ್ಮಪ್ರಜ್ಞೆ’ಯನ್ನು ಕೆರಳಿಸುತ್ತಿದ್ದರೂ (ಧರ್ಮಪ್ರಜ್ಞೆ ಅರಳಬೇಕಂತೆ, ಕೆರಳಬಾರದಂತೆ) ಮೇಲಿನ ಸಾಮಾನ್ಯ ಮತ್ತು ಮೂಲಭೂತವಾದ ಕೆಲವೇ ಕೆಲವು ಪ್ರಶ್ನೆಗಳಿಗೆ ಇನ್ನೂ ನಿರ್ದಿಷ್ಟ ಉತ್ತರಗಳಿಲ್ಲ. ಎಲ್ಲವೂ ಗೊಂದಲಮಯ. ಈ ಗೊಂದಲ ಅಂದರೆ ಸ್ಪಷ್ಟತೆ ಮತ್ತು ನಿರ್ದಿಷ್ಟತೆಗಳ ಕೊರತೆಯೇ ಅದು ಅಧ್ಯಯನವಲಯದಲ್ಲಿ `ಧರ್ಮ’ವಾಗಿ ಸ್ವೀಕರಿಸಲ್ಪಡದಿರಲು ಕಾರಣ ಎಂಬುದು ಸ್ಪಷ್ಟ.  ಈ ಲೇಖನದ ವ್ಯಾಪ್ತಿಯಲ್ಲಿ ಸಾಗರದಷ್ಟೇ ವಿಶಾಲವಾದ ಗೊಂದಲಗಳನ್ನೆಲ್ಲ ಚರ್ಚಿಸುವುದು ಅಸಾಧ್ಯವಾದ್ದರಿಂದ ಅದರ ಕೆಲವು ಗೊಂದಲಗಳನ್ನು ಮಾತ್ರ ಇಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಗಿದೆ:
`ಹಿಂದೂ’ `ಹಿಂದೂಸ್ತಾನ’ ಅಂದವರು ಯಾರು?
ಈ ಗೊಂದಲ ಮೂಲಭೂತವಾಗಿ `ಹಿಂದೂ’ ಎಂಬ ಅದರ ಹೆಸರಿನಿಂದಲೇ ಶುರುವಿಟ್ಟುಕೊಳ್ಳುತ್ತದೆ. `ಹಿಂದೂ’ ಎಂಬ ಶಬ್ದ ಹೇಗೆ ಬಂತು, ಅದರ ಮೂಲವೆಲ್ಲಿ ಮತ್ತು ಅದರ ಅರ್ಥವೇನು ಎಂಬುದರ ಬಗ್ಗೆ ಬಹಳಷ್ಟು ವಿದ್ವಾಂಸರು ಸಂಶೋಧನೆ ಮಾಡಿ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ”ಸಿಂಧೂ ನದಿಯ ಆಸುಪಾಸು ವಾಸಿಸುವ ಜನರನ್ನು `ಸಿಂಧೂ’ಗಳೆಂದೂ ಕರೆಯಲಾಯಿತು. ಈ `ಸಿಂಧೂ’ ಪದವೇ ಮುಂದೆ ಇದೇ ಅಪಭ್ರಂಶಗೊಂಡು `ಹಿಂದೂ’ ಎಂದು ಆಯಿತೆಂದೂ ಆನಂತರ ಅದರಿಂದಲೇ ಮುಂದೆ ನಮ್ಮ ದೇಶಕ್ಕೆ `ಹಿಂದೂಸ್ತಾನ’ವೆಂಬ ಹೆಸರು ಬಂದಿತು.” ಎಂಬ ಒಂದು ಅಭಿಪ್ರಾಯವಿದೆ. ಆದರೆ ಇದು ಅರ್ಥವಿಲ್ಲದ ಕಲ್ಪಿತ ಕಥೆ ಎಂದು ಅಧ್ಯಯನವಲಯಗಳಲ್ಲಿ ಬಹುತೇಕ ಈಗಾಗಲೇ ಸಾಬೀತಾಗಿದೆ. ಏಕೆಂದರೆ ಭಾಷಾಶಾಸ್ತ್ರದಲ್ಲಿ `ಪ’ `ಹ’ ಗಳು ವಿನಿಮಯ ಆಗುವುದು ಸಾಮಾನ್ಯ (ಉದಾ:ಪಕ್ಷಿ-ಹಕ್ಕಿ). ಆದರೆ `ಸ್’ `ಹ್’ ಹಾಗೆ ವಿನಿಮಯ ಆಗುವುದು ಇದ್ದಂತಿಲ್ಲ. ಈ ವಾದಕ್ಕೆ ಪುಷ್ಟಿಕೊಡುವಂತೆ `ಸಿಂಧೂ’ ಎಂಬುದು `ಹಿಂದೂ’ ಎಂದು ಜನಾಂಗದ ವಿಷಯದಲ್ಲಿ ಆದಂತೆ ಅದೇ ಹೆಸರಿನ ನದಿಯ ವಿಷಯದಲ್ಲಿ ಯಾಕಾಗಲಿಲ್ಲ? ಅದು ಈಗಲೂ ಸಿಂಧೂನದಿ ಎಂದೇ ಕರೆಸಿಕೊಳ್ಳುತ್ತಿರುವುದು ಏಕೆ? ಅಂತೆಯೇ ಹಿಂದೊಮ್ಮೆ ಅದೇ ಪ್ರದೇಶದಲ್ಲಿ ಇತ್ತೆಂದು ಹೇಳಲಾಗುವ `ಸರಸ್ವತಿ’ ನದಿ `ಹರಸ್ವತಿ’ಯಾಗಿ ಪರಿವರ್ತನೆಯಾಗಲಿಲ್ಲವೇಕೆ? ಎಂಬಂತಹ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳು ದೊರೆತಿಲ್ಲ.
ಬಹಳಷ್ಟು ಜನಕ್ಕೆ ಆಶ್ಚರ್ಯವಾಗಬಹುದು `ಹಿಂದೂ’ ಪದ ಸಂಸ್ಕೃತ ಅಥವಾ ಪ್ರಾಕೃತ ಮೂಲಗಳದ್ದಲ್ಲ. ಅಥವಾ ಭಾರತದ ಯಾವ ಭಾಷೆಯೂ ಅದರ ಮೂಲವಲ್ಲ. ಈ ಪದವು ನಮ್ಮ ಪ್ರಾಚೀನ ಗ್ರಂಥಗಳಲ್ಲೆಲ್ಲಿಯೂ (ಅಂದರೆ ವೇದಗಳು, ಉಪನಿಷತ್ತುಗಳು, ಆಗಮಗಳು, ಪುರಾಣಗಳು ಇತ್ಯಾದಿಗಳು) ಕಾಣುವುದಿಲ್ಲ; ಅದು ಕಾಣಸಿಗುವುದು ಏನಿದ್ದರೂ ಕ್ರಿ.ಶ. ಏಳು-ಎಂಟನೇ ಶತಮಾನದಿಂದೀಚೆಗಿನ ಕೃತಿಗಳಲ್ಲಿ ಎಂಬುದು ಅವನ್ನು ಸಾಕಷ್ಟು ಆಳವಾಗಿ ಅಧ್ಯಯನ ಮಾಡಿದ ತಜ್ಞರು ಹೇಳುವ ಮಾತು. ಹಾಗಾದರೆ ಈ ಪದ ಎಲ್ಲಿಂದ ಬಂತು? ಅದು ಬಂದದ್ದು ಪರ್ಶಿಯನ್ ಭಾಷೆಯಿಂದ. ಹಿಂದೂ ಇದು ಪರ್ಶಿಯನ್ ಭಾಷೆಯ ಪದ. ಅದನ್ನು ಇಲ್ಲಿಗೆ ಯಥಾವತ್ತಾಗಿ ತಂದು ಮೊಟ್ಟಮೊದಲು ಬಳಸಿದವರು ಪರ್ಶಿಯನ್ನರು. ಹೀಗಾಗಿ ನಮ್ಮ ದೇಶಕ್ಕೆ `ಹಿಂದೂಸ್ತಾನ್’ ಎಂದು ಮೊದಲು ಕರೆದವರು ಈಗ ಯಾರನ್ನು ಹಿಂದುಗಳು ಎಂದು ಕರೆಯಲಾಗುತ್ತದೆಯೋ ಮತ್ತು ಆ ಹೆಸರನ್ನು ಹಿಂದುತ್ವದ ಪ್ರತೀಕವೆಂದು ಯಾರೆಲ್ಲ ಭಾವಿಸುತ್ತಿದ್ದಾರೋ ಅವರು ಯಾರೂ ಅಲ್ಲ; ಯಾರು ಪಾಕಿಸ್ತಾನ್, ಅಫಘಾನಿಸ್ತಾನ್, ಖಜಕಿಸ್ತಾನ್ ಎಂದು ಕೆಲವು ಭೂಪ್ರದೇಶಗಳನ್ನು ಹೆಸರಿಸಿದರೋ ಅವರೇ ಅದೇ ಧಾಟಿಯಲ್ಲಿ ಈಗ ನಾವಿರುವ ಈ ಭೂಪ್ರದೇಶವನ್ನು ಹಿಂದೂಸ್ತಾನ್ ಎಂದೂ ಹೆಸರಿಸಿದರು! ಬಹುಕಾಲ ರಷ್ಯಾದ ಭಾಗವಾಗಿದ್ದ ಮತ್ತು ಈಗ ಸ್ವತಂತ್ರ ದೇಶವಾಗಿರುವ ನಮ್ಮ ದೇಶದ ತಲೆಯ ಮೇಲೆ ಇರುವ ಒಂದು ದೇಶಕ್ಕೆ ಖಜಕಿಸ್ತಾನ್ ಎಂಬ ಹೆಸರಿದೆ. “ಖಜಕಿಸ್ತಾನ್ ಎಂದರೆ ದರೋಡೆಕೋರರು ವಾಸಿಸುವ ಸ್ಥಳ!!”[i]
`ಹಿಂದೂ’  ಹಾಗಂದರೇನು?
“ಪರ್ಶಿಯನ್ ಭಾಷೆಯ ಹಿಂದೂ ಎಂಬ ಪದ ಹೀಗೆ ಗೌರವಕ್ಕೆ ಅರ್ಹವಾದ ಪದವಾಗಿರಲಿಲ್ಲವಾದ್ದರಿಂದ ಸಿಂಧೂ ನದಿ ಸಿದ್ಧಾಂತ ಹುಟ್ಟಿರಬೇಕು”[ii] ಇದು ಎಂಥದ್ದಾದರೂ ಇರಲಿ ಹೀಗೆ ಪರ್ಶಿಯನ್ನರು ಹಿಂದೂ ಎಂಬ ಹೆಸರಿನಿಂದ ಕರೆದ ಈ ಜನರೆಲ್ಲ ಅದಕ್ಕೂ ಮೊದಲು ಯಾವ ಹೆಸರಿನಿಂದ ಕರೆಯಲ್ಪಡುತ್ತಿದ್ದರು ಎಂಬ ಪ್ರಶ್ನೆ ಇಲ್ಲಿ ಹುಟ್ಟಿಕೊಳ್ಳುತ್ತದೆ. ಆ ಮೊದಲು ಅವರೆಲ್ಲರನ್ನೂ ಸೇರಿಸಿ ಒಂದು ಹೆಸರಿನಿಂದ ಕರೆಯಬೇಕಾದ ಯಾವ ಚಾರಿತ್ರಿಕ ಅಗತ್ಯವೂ ಉಂಟಾಗಲೇ ಇಲ್ಲವಾದ್ದರಿಂದ ಅವರೆಲ್ಲ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಹೀಗೆ ಬೇರೆ ಬೇರೆ ಹೆಸರುಗಳಿಂದಲೇ ಕರೆಯಲ್ಪಡುತ್ತಿದ್ದರು. ಇವರೆಲ್ಲರನ್ನೂ ಹಿಂದೂಖುಷ್ ಪರ್ವತದಿಂದಾಚೆಗೆ ಇರುವ ಜನ ಎನ್ನುವ ಅರ್ಥದಲ್ಲಿ ಎಲ್ಲರನ್ನೂ ಕೂಡಿಸಿ ಒಂದು ಹೆಸರಿನಿಂದ ಕರೆಯಬೇಕಾದ ಅವಶ್ಯಕತೆ ಮೊಟ್ಟ ಮೊದಲು ಉಂಟಾದದ್ದು ಪರ್ಶಿಯನ್ನರಂತಹ ವಿದೇಶಿಯರಿಗೆ. ಹೊರದೇಶದಿಂದ ಬಂದ ತಮ್ಮ ಜನರಿಂದ ಈ ಭಾಗದಲ್ಲಿ ಅವರು ಬರುವ ಮೊದಲೇ ಇದ್ದ ಎಲ್ಲ ಜನರನ್ನು ಪ್ರತ್ಯೇಕಿಸಿ ಗುರುತಿಸಬೇಕಾದ ಅವಶ್ಯಕತೆ ಅವರು ಈ ಪದವನ್ನು ಇವರೆಲ್ಲರಿಗೂ ಸೇರಿಸಿ ಬಳಸಲು ಕಾರಣವಾಯಿತು. ಬ್ರಿಟೀಷರು ಬರುವವರೆಗೆ `ಇಂಡಿಯಾ’ ಎಂಬ ಪದ ಹೇಗೆ ಇರಲಿಲ್ಲವೋ ಮತ್ತು ಆ ಕಾಲದ ಅಗತ್ಯವಾಗಿ ಅದು ಹೊಸದಾಗಿ ಹುಟ್ಟಿಕೊಂಡಿತೋ ಹಾಗೇ ಪರ್ಶಿಯನ್ನರು ಬರುವವರೆಗೆ `ಹಿಂದೂ’ ಎಂಬ ಪದವೂ ಇರಲಿಲ್ಲ ಮತ್ತು ಆ ಕಾಲದ ಅಗತ್ಯವಾಗಿ ಹುಟ್ಟಿಕೊಂಡಿತು.
“ಪರ್ಶಿಯನ್ ಭಾಷೆಯಲ್ಲಿ `ಹಿಂದೂ’ ಎಂಬ ಪದಕ್ಕೆ ಮುಖದ ಮೇಲಿನ ಮೊಡವೆ, ಸೇವಕ, ಗುಲಾಮ, ಕಳ್ಳ ಮುಂತಾದ ಹೆಸರುಗಳಿವೆ. ಈ ಪದದ ಆಧಾರದ ಮೇಲೆಯೇ ಸಿಂಧೂ ನದಿಯ ಹತ್ತಿರವಿರುವ ಪರ್ವತಕ್ಕೆ ಅವರು `ಹಿಂದೂಖುಷ್’ ಪರ್ವತ ಎಂದು ಕರೆದರು. ತೀರಾ ಕಡಿದಾದ ಈ ಪರ್ವತದ ಈಚೆಗೆ ಓಡಿಸಲ್ಪಟ್ಟವರು ಜೀವ ಕಳೆದುಕೊಳ್ಳುತ್ತಿದ್ದರು. `ಹಿಂದೂಖುಷ್’ ಎಂದರೆ ಕಳ್ಳರನ್ನು ನಾಶಗೊಳಿಸುವ ಪರ್ವತ ಎಂದರ್ಥ’[iii]. ಪರ್ಶಿಯನ್ ದೊರೆಗಳು ತಪ್ಪುಮಾಡಿದವರನ್ನು ಶಿಕ್ಷಿಸಲು ಈ ಪ್ರದೇಶವನ್ನು ಬಳಸಿಕೊಳ್ಳುತ್ತಿದ್ದರು. ಆ ಹೆಸರಿನ ಪರ್ವತದ ಈ ಕಡೆ ಇರುವ ಜನರನ್ನು ಅವರು ಪರ್ವತವನ್ನು ಗಡಿಯಾಗಿ ಗುರುತಿಸಿ ಅವರನ್ನು ಹಿಂದೂಗಳೆಂದು ಕರೆದರು.  ಒಟ್ಟಿನಲ್ಲಿ ಹೇಳಬೇಕೆಂದರೆ `ಹಿಂದೂ’ ಎಂಬುದು ಒಂದು ಭೂಪ್ರದೇಶದಲ್ಲಿ ವಾಸಿಸುವ ಜನರನ್ನು ನಿರ್ದೇಶಿಸುವ ಜನಾಂಗಸೂಚಿಪದವೇ ಹೊರತು ಧರ್ಮಸೂಚಿಪದ ಅಲ್ಲ; ಅಂದರೆ ‘ಹಿಂದೂ ಎಂಬುದು ಒಂದು ಜನಾಂಗದ ಹೆಸರೇ ಹೊರತು ಧರ್ಮದ ಹೆಸರು ಅಲ್ಲವೇ ಅಲ್ಲ. “ಆಸ್ಟ್ರೇಲಿಯನ್ನರು, ಭಾರತೀಯರು, ಅಮೇರಿಕನ್ನರು ಎಂಬ ಪದಗಳಿಗೆ ಅರ್ಥವಿರುವಂತೆ ಹಿಂದೂಗಳು ಎಂಬುದು ಜನಾಂಗೀಯವಾಗಿ ಅರ್ಥವಿರುವ ಒಂದು ಪದವೇ ಹೊರತು ಆಸ್ಟ್ರೇಲಿಯನ್ ಧರ್ಮ ಭಾರತೀಯಧರ್ಮ, ಅಮೇರಿಕನ್ ಧರ್ಮ ಎಂಬ ಪದಗಳಿಗೆ ಅರ್ಥವಿಲ್ಲ ಹೇಗೋ `ಹಿಂದೂಧರ್ಮ’ ಎಂಬುದೂ ಒಂದು ಅರ್ಥವಿಲ್ಲದ ಪದ.”[iv]
ಆಧುನಿಕ ಕಾಲದಲ್ಲಿ `ಹಿಂದೂ’ ಅಂದರೇನು? ಅದು ಒಂದು ಧರ್ಮ ಹೌದೇ ಅಲ್ಲವೇ ಎಂಬ ವಿಷಯ ಈಗಾಗಲೇ ಎರಡು-ಮೂರು ಬಾರಿ ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತಿದೆ. ಯಾರನ್ನು ಹಿಂದೂ ಎಂದು ಕರೆಯಬಹುದು ಎಂದೂ ಅಲ್ಲಿ ಸುಧೀರ್ಘ ಚರ್ಚೆ ನಡೆದಿದೆ. ಆದರೆ ಹೊರಬಂದ ಫಲಿತಾಂಶವಾದರೂ ಎಂಥದ್ಧು? ಕೋರ್ಟು ಅದನ್ನು ಧರ್ಮ ಅಲ್ಲ ಎಂಬುದನ್ನು ನೇರವಾಗಿ ಹೇಳದೆ ಅದನ್ನು `ಧರ್ಮ’ (Religion) ಎನ್ನುವುದಕ್ಕಿಂತ `ಜೀವನವಿಧಾನ’ (A way of life). ಎಂದು ಕರೆಯುವುದು ಲೇಸೆಂದು ಹೇಳಿತು!  ಹಿಂದೂಗಳು ಎಂದರೆ ಯಾರು ಎಂಬುದನ್ನು ನಿರ್ದೇಶಿಸಲು ಅದು ಇತರೆ ಜನಾಂಗಗಳ ಸಹಾಯ ತೆಗೆದುಕೊಳ್ಳಬೇಕಾಯಿತು. `ಮುಸ್ಲಿಮರಲ್ಲದ, ಜೈನರಲ್ಲದ, ಬೌದ್ಧರಲ್ಲದ ಜನ” ಹೀಗೇ ಹೇಳಿರುವುದು ಏನನ್ನು ತೋರಿಸುತ್ತದೆ? ಬೇರೇ ಯಾವ ಜನಾಂಗಗಳನ್ನೂ ನಿರ್ದೇಶಿಸಲು ಅಥವಾ ಗುರುತಿಸಲು ಹೀಗೆ ಅವರಲ್ಲದ ಇವರಲ್ಲದ ಜನ ಎಂದು ಹೇಳಬೇಕಾದ ಅಗತ್ಯ ಬರಲಾರದು. `ಹಿಂದುತ್ವ’ ಎಂಬುದಕ್ಕೆ ಸ್ವಂತಿಕೆ ಎಂಬುದು ಇಲ್ಲ ಸ್ವತಂತ್ರ ಅಸ್ತಿತ್ವವಿಲ್ಲ ಅದರ ಅಸ್ತಿತ್ವವಿರುವುದು ಕೇವಲ ಭಾವನೆಯಲ್ಲಿ ಮತ್ತು ಕಲ್ಪನೆಯಲ್ಲಿ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಮೂಲಪುರುಷ, ಧರ್ಮಗ್ರಂಥ ಮತ್ತು ದೇವದೇವತೆಗಳ ಗೊಂದಲಗಳು
ಹೀಗೆ ಧರ್ಮವಲ್ಲದಿದ್ದರೂ ಧರ್ಮವೆಂದು ಪರಿಗಣಿತವಾದ ಹಿಂದೂ ಎಂಬ ಕಲ್ಪಿತ ಧರ್ಮದ ಇನ್ನಿಷ್ಟು ಗೊಂದಲಗಳೆಂದರೆ ಅದರ ಮೂಲಪುರುಷ, ಧರ್ಮಗ್ರಂಥ ಮತ್ತು ದೇವತೆಗಳಿಗೆ ಸಂಬಂಧಿಸಿದ್ದು. ಉಳಿದ ಧರ್ಮಗಳಿಗೆ ಒಬ್ಬ ಮೂಲಪುರುಷನಿದ್ದಾನೆ. ಹಿಂದೂ ಧರ್ಮಕ್ಕೆ ಮೂಲಪುರುಷ ಯಾರು? ಇದಕ್ಕೆ ಇದುವರೆಗೂ ಕೊಡುತ್ತಾ ಬಂದಿರುವ ಉತ್ತರ, “ನಮ್ಮದು ಬೇರೆ ಧರ್ಮಗಳಂತೆ ಒಬ್ಬ ವ್ಯಕ್ತಿಯಿಂದ ಪ್ರಣೀತ ಧರ್ಮವಲ್ಲ ಪ್ರಾಚೀನ ಕಾಲದ ನೂರಾರು ಋಷಿಮುನಿಗಳಿಂದ ಪ್ರಣೀತವಾದದ್ದು. ಅವರೆಲ್ಲರೂ ಈ ಧರ್ಮಕ್ಕೆ ಮೂಲಪುರುಷರೇ” ಎಂಬುದು. ಹೀಗೆ ಹೇಳಿದರೆ ಏನನ್ನೂ ಹೇಳಿದಂತಾಗುವುದಿಲ್ಲ. ಈ ನೂರಾರು ಋಷಿಗಳು ಯಾರು, ಅವರು ಎಷ್ಟು ಜನರಿದ್ದಾರೆ ಮತ್ತು ಏನೆಲ್ಲ ಹೇಳಿದ್ದಾರೆ ಎಂಬುದರ ಬಗ್ಗೆ ಯಾರಿಗೆ ಗೊತ್ತಿದೆ? ಅವರಲ್ಲಿ ಕೆಲವುರು ಮನುಷ್ಯರು. ಮತ್ತೆ ಕೆಲವರು ಪೂರ್ಣಪ್ರಮಾಣದ ದೇವರು. ಮತ್ತೆ ಕೆಲವರು ದೇವರ ಅರೆಅಂಶಹೊಂದಿದವರು! ಹೋಗಲಿ ಅವರು ಹೇಳಿದ ಎಲ್ಲ ಸಂಗತಿಗಳನ್ನು ಕ್ರೋಢೀಕರಿಸಿ ಅವುಗಳನ್ನು ಸೂತ್ರೀಕರಿಸಿ ತಾತ್ವಿಕತೆಯನ್ನು ರೂಪಿಸಲು ಸಾಧ್ಯವಾಗಿದೆಯೇ? ಇಲ್ಲ.
ಧರ್ಮಗ್ರಂಥಗಳ ವಿಷಯದಲ್ಲಿಯೂ ಇದೇ ಗೊಂದಲ. ಇಲ್ಲಿಯೂ ಮೇಲಿನಂತಹ ಪ್ರಶ್ನೆಗೆ ಅಂಥದ್ದೇ ಉತ್ತರ: “ನಮ್ಮದು ಯಾವುದೋ ಒಂದು ಗ್ರಂಥವಲ್ಲ. ವೇದಗಳು, ಉಪನಿಷತ್ತುಗಳು, ಪುರಾಣಗಳು, ಆಗಮಗಳು, ಭಗವದ್ಗೀತೆ, ಮಹಾಭಾರತ, ರಾಮಾಯಣ, ಭಾಗವತ ಹೀಗೆ ಎಲ್ಲವೂ ಧರ್ಮಗ್ರಂಥಗಳೇ.” ಈ ಧರ್ಮಗ್ರಂಥಗಳು ಎಷ್ಟಿವೆ ಎಂಬುದು ಯಾವ ಸಾಮಾನ್ಯ ಹಿಂದೂವಿಗೂ ಅಷ್ಟೇ ಏಕೆ ಯಾವ ದೇವಮಾನವನಿಗೂ ಗೊತ್ತಿಲ್ಲ. ಧರ್ಮಗ್ರಂಥಗಳು ಎಷ್ಟಿವೆ ಮತ್ತು ಅವು ಯಾವುವು ಎಂಬುದೇ ಗೊತ್ತಿಲ್ಲದ ಮೇಲೆ ಅವುಗಳ ತಾತ್ವಿಕತೆ ಏನು, ಅವು ಪ್ರತಿಪಾದಿಸುವ ಮೌಲ್ಯಗಳೇನು ಎಂಬುದನ್ನು ಹೇಗೆ ಅರ್ಥಮಾಡಿಕೊಳ್ಳಲು ಸಾಧ್ಯ? ಪುರಾಣಗಳ ಸಂಖ್ಯೆಯನ್ನೇ ತೆಗೆದುಕೊಂಡರೆ `ಅಷ್ಟಾದಶಪುರಾಣ’ ಎಂಬ ಮಾತು ಅವುಗಳ ಸಂಖ್ಯೆ ಹದಿನೆಂಟು ಎಂದು ಹೇಳುತ್ತದೆ. ಆದರೆ ಹದಿನೆಂಟು ಮುಖ್ಯ ಪುರಾಣಗಳ ಜೊತೆಗೆ ಹದಿನೆಂಟು ಉಪಪುರಾಣಗಳೂ ಇದ್ದು ಅವುಗಳ ಸಂಖ್ಯೆ ಮೂವತ್ತಾರು ಎನ್ನಲಾಗುತ್ತದೆ. ಇದೂ ಅಂತಿಮ ಅಲ್ಲ ಎನ್ನುವಂತೆ ಹಿಂದೂ ಧಾರ್ಮಿಕ ಸಾಹಿತ್ಯವೆಂದು ಕರೆಯಲ್ಲಪಡುವ ಸಾಹಿತ್ಯದಲ್ಲಿಯೇ ಬೇರೆಬೇರೆ ಸಂಖ್ಯೆಗಳು ಸಿಗುತ್ತವೆ. ವೇದ, ಉಪನಿಷತ್ತು, ಪುರಾಣ ಇವುಗಳಲ್ಲಿ ಯಾವು ಪ್ರಾಚೀನ ಯಾವು ಅರ್ವಾಚೀನ ಎಂಬುದರ ಬಗ್ಗೆ ನಿರ್ದಿಷ್ಟತೆ ಇಲ್ಲ. ಸಾಮಾನ್ಯವಾಗಿ ವೇದಗಳೇ ಅತ್ಯಂತ ಪ್ರಾಚೀನ; ಉಪನಿಷತ್ತು ಮತ್ತು ಪುರಾಣಗಳು ನಂತರ ಬಂದಂಥವು ಎಂದು ಹೇಳಲಾಗುತ್ತದೆ. ಆದರೆ ಉಪನಿಷತ್ತುಗಳು ಮತ್ತು ಪುರಾಣಗಳು ತಾವೇ ಮೊದಲು ಹುಟ್ಟಿದವೆಂದು ವಾದಮಾಡಿ ಉಳಿದವನ್ನು ತಮ್ಮ ನಂತರ ಹುಟ್ಟಿದವೆಂದು ಹೇಳುತ್ತವೆ!
ಪ್ರತಿಷ್ಠಾಪನೆ ಪದಚ್ಯುತಿಗಳ ದಾಳವಾದ ದೇವಾನುದೇವತೆಗಳು
ದೇವದೇವತೆಗಳ ವಿಷಯದಲ್ಲಿರುವ ಗೊಂದಲವು ಇದಕ್ಕಿಂತಲೂ ದೊಡ್ಡದು. “ಹಿಂದೂಗಳನ್ನು ಸಾಮಾನ್ಯವಾಗಿ ಬಹುದೇವೋಪಾಸಕರೆಂದು ಕರೆಯಲಾಗುತ್ತದೆ. ವಾಸ್ತವದಲ್ಲಿ ಅದು ಸತ್ಯವಲ್ಲ. ಬಹುದೇವೋಪಾಸಕರು ಎಂದರೆ ಬಹಳಷ್ಟು ದೇವರನ್ನು ಉಪಾಸನೆ ಮಾಡುವವರು ಎಂದರ್ಥ. ಹಿಂದೂಗಳಲ್ಲಿ ಎಲ್ಲರೂ ಬಹುದೇವೋಪಾಸಕರಲ್ಲ. ಕೆಲವರು ಏಕದೇವೋಪಾಸಕರು”[v]. ಅವರಲ್ಲಿಯೂ ಏಕ ಅಂದರೆ ಒಬ್ಬನೇ ದೇವರನ್ನು ಎಂದರ್ಥವಲ್ಲ. ಒಬ್ಬೊಬ್ಬರು ಒಬ್ಬೊಬ್ಬೊ ದೇವರನ್ನು ಆರಾಧಿಸುವವರು ಎಂದರ್ಥ. ಹೀಗೆಲ್ಲ ಏಕೆ ಎಂದರೆ ಹಿಂದೂ ಎಂಬುದು ಅನೇಕ ಧರ್ಮಗಳ ಒಂದು ಒಕ್ಕೂಟ ಹಾಗಾಗಿ ಇದೆಲ್ಲ ಅಲ್ಲಿ ಸಾಮಾನ್ಯ ಸಂಗತಿ. ಇದೆಲ್ಲ ಸಮಸ್ಯೆಯಲ್ಲ. ವಿಶೇಷವೂ ಅಲ್ಲ. ವಿಷೇಶವಿರುವುದು ದೇವತೆಗಳಿಗೆ ಸಂಬಂಧಿಸಿದ ಇನ್ನೊಂದು ಸಂಗತಿಯಲ್ಲಿ. ಅದು ದೇವರನ್ನು ಕಾಲಕಾಲಕ್ಕೆ ಬಳಸಿ ಬದಿಗೆ ತಳ್ಳುವ ಸಂಗತಿಯಲ್ಲಿ. ಜಗತ್ತಿನ ಯಾವುದೇ ಧರ್ಮದಲ್ಲಿಯೂ ಕಂಡುಬರದ ವಿದ್ಯಮಾನವಾಗಿ ಅಂಬೇಡ್ಕರ್ ಇದನ್ನು ಗುರುತಿಸುತ್ತಾರೆ. ಅವರ ಪ್ರಕಾರ ಪ್ರಪಂಚದ ಯಾವುದೇ ಧರ್ಮದ ಅನುಯಾಯಿ ಇರಲಿ ತಾನು ನಂಬಿದ ದೇವರಲ್ಲಿ ಅಚಲವಾದ ವಿಶ್ವಾಸವನ್ನು ಹೊಂದಿರುತ್ತಾನೆ.[vi]
ಆದರೆ ಇಲ್ಲಿ ಹಾಗಿಲ್ಲ. ಈ ದೇವತೆಗಳನ್ನು ಪರಸ್ಪರ ಹೊಡೆದಾಟ ಮಾಡಿಸುವುದು ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟುವುದು, ಇಲ್ಲಿ ಎಷ್ಟರಮಟ್ಟಿಗೆ ಇದೆ ಎಂದರೆ ಈ ವಿದ್ಯಮಾನ ಬೇರೆ ಯಾವ ಧರ್ಮಗಳಲ್ಲಿಯೂ ಕಂಡುಬರುವುದಿಲ್ಲ. ಇಷ್ಟೊಂದು ಪ್ರಮಾಣದಲ್ಲಿ ಪ್ರತಿಷ್ಠಾಪನೆ ಮತ್ತು ಪದಚ್ಯುತಿಗಳ ದಾಳಗಳಾಗಿ ದೇವಾನುದೇವತೆಗಳನ್ನು ಬಳಸಿಕೊಂಡದ್ದು ಬೇರೆಲ್ಲೂ ಕಂಡುಬರದು ವಿಶಿಷ್ಟ ವಿದ್ಯಮಾನವೇ ಸರಿ. ಪ್ರತಿಷ್ಠಾಪನೆ ಮತ್ತು ಪದಚ್ಯುತಿ ದೇವತೆಗಳ ಬದಲಾವಣೆ ಮತ್ತು ಹೊಡೆದಾಟಕ್ಕೆ ಸಂಬಂಧಕ್ಕೆ ಒಂದೆರಡು ಉದಾಹರಣೆಗಳನ್ನು ನೆನಪಿಸಿಕೊಳ್ಳುವುದಾದರೆ “ವೇದಕಾಲದಲ್ಲಿ ದೇವತೆಗಳ ಸಂಖ್ಯೆ ಬಹಳವಿತ್ತು. `ಋಗ್ವೇದದ ಎರಡು ಕಡೆಗಳಲ್ಲಿ ದೇವರ ಸಂಖ್ಯೆ ಮೂರುಸಾವಿರದ ಮೂರು ನೂರಾ ಒಂಬತ್ತು ಎಂದು ಹೇಳಿದೆ. ನಮಗೆ ಈಗ ತಿಳಿಯಲು ಅಸಾಧ್ಯವಾದ ಯಾವುದೋ ಕಾರಣಕ್ಕಾಗಿ, ಆ ಸಂಖ್ಯೆಯನ್ನು ಮೂವತ್ತಮೂರಕ್ಕೆಕ್ಕೆ ಇಳಿಸಲಾಯಿತು. ಈ ಮೂವತ್ಮೂರು ದೇವತೆಗಳು ಯಾರು ಎಂಬುದನ್ನು `ಶತಪಥ ಬ್ರಾಹ್ಮಣ’ ಎಂಟು ವಸುಗಳು, ಹನ್ನೊಂದು ರುದ್ರರು, ಹನ್ನೆರಡು ಆದಿತ್ಯರು, ದ್ಯೌಸ್ ಮತ್ತು ಪೃಥ್ವಿ ( ಸ್ವರ್ಗ ಮತ್ತು ಭೂಮಿ) ಎಂದು ವಿವರಣೆ ನೀಡುತ್ತದೆ.”[vii]
ಆರಂಭದಲ್ಲಿ ಈ ದೇವತೆಗಳ ಸ್ಥಾನಮಾನದಲ್ಲಿ ಯಾವುದೇ ಏರುಪೇರುಗಳಿರಲಿಲ್ಲ. ಬರಬರುತ್ತಾ ಅವರಲ್ಲಿ ಮುಖ್ಯ ಮತ್ತು ಅಮುಖ್ಯವೆಂದು ವಿಂಗಡಿಸಲಾಯಿತು.  ಈ ಮೂವತ್ಮೂರು ದೇವತೆಗಳಲ್ಲಿ ಅಗ್ನಿ, ಇಂದ್ರ, ಸೋಮ ಮತ್ತು ವರುಣ ಎಂಬ ನಾಲ್ವರು `ಮುಖ್ಯ’ರಾಗಿ ಮೇಲೇರಿ ಉಳಿದವರು `ಸೇವಕ’ರಾಗಿ ಕೆಳಗಿಳಿದರು. ಆದರೆ ಈ ಮೇಲೇರಿದ, ಒಂದು ಕಾಲದಲ್ಲಿ ಅತ್ಯಂತ ಪ್ರಮುಖರಾಗಿದ್ದ ಈ ನಾಲ್ವರನ್ನೂ ನಂತರದ ಕಾಲಘಟ್ಟದಲ್ಲಿ ಮೂಲೆಗೆ ತಳ್ಳಿ ಬ್ರಹ್ಮ, ವಿಷ್ಣು, ಮಹೇಶ್ವರ (ಶಿವ) ಈ ಮೂವರನ್ನು (ತ್ರಿಮೂರ್ತಿಗಳು) ಉನ್ನತ ಸ್ಥಾನಕ್ಕೆ ಏರಿಸಲಾಯಿತು. ಈ ಬದಲಾವಣೆಗೆ ಕಾರಣವೇನು ಎಂದು ಯಾವ ಧರ್ಮಶಾಸ್ತ್ರಗಳಲ್ಲಿ ಸರಿಯಾದ ವಿವರಣೆ ಇದೆ? ಈ ಬ್ರಹ್ಮ, ವಿಷ್ಣು ಮತ್ತು ಶಿವ ಇವರನ್ನು `ನಂಬರ್ 1’ ಪದವಿಗೆ ಹೋರಟ ಮಾಡಿಸಿದಷ್ಟು ಇನ್ಯಾವ ದೇವತೆಗಳನ್ನೂ ಬಹುಶಃ ನಮ್ಮ ಧಾರ್ಮಿಕ ಸಾಹಿತ್ಯ ಮಾಡಿರಲಿಕ್ಕಿಲ್ಲ. ಈ ಕಾಲಘಟ್ಟದ ಆರಂಭದಲ್ಲಿ ಉಳಿದ ಇಬ್ಬರಿಗಿಂತ ತಾನು ಅಗ್ರನಾಗಲು ಬ್ರಹ್ಮನು ವಿಷ್ಣು ಮತ್ತು ಶಿವರ ಮಧ್ಯೆ ವೈರವನ್ನುಂಟುಮಾಡಲು ಪ್ರಯತ್ನಿಸಿದ. (ವಿವರಕ್ಕೆ ರಾಮಾಯಣದಲ್ಲಿ ಜನಕರಾಜನಿಂದ ಬೀಳ್ಕೊಂಡು ಬರುವಾಗ ಮಾರ್ಗಮಧ್ಯದಲ್ಲಿ ತಡೆದ ಪರುಶುರಾಮ, ನೀನು ಮುರಿದದ್ದು ಶಿವಧನುಸ್ಸು, ನಾನೊಂದು ತಂದಿದ್ದೇನೆ ಅದು ವಿಷ್ಣುವಿನದು’ ಎಂದು ಆಡುವ ಮಾತಿರುವ ಪ್ರಸಂಗವನ್ನು ಗಮನಿಸಿ.) ಆದರೆ ಈ ಬ್ರಹ್ಮನು ವಾಚಾ ಎಂಬ ತನ್ನ ಮಗಳ ಮೇಲೆಯೇ ಹಾದರ ಮಾಡಿದನೆಂಬ ಆರೋಪಕ್ಕೆ ಒಳಗಾಗಿ ತನಗೆ ಮಾಡಲ್ಪಡುತ್ತಿದ್ದ ಪೂಜೆಯನ್ನೇ ಕಳೆದುಕೊಂಡ!
ಈ ರೀತಿ ಬ್ರಹ್ಮನನ್ನು ಸ್ಪರ್ಧಾಕಣದಿಂದ ಓಡಿಸಿದ ಮೇಲೆ ಉಳಿದವರು ವಿಷ್ಣು ಮತ್ತು ಶಿವ. ಇವರೆಂದಿಗೂ ಶಾಂತಿಯಿಂದ ಬಾಳಿದಂತೆ ಕಾಣುವುದಿಲ್ಲ. ಆಗ ಶುರುವಾದ ಅವರ ನಡುವಿನ ವೈರ ಇನ್ನೂ ನಿಂತಿಲ್ಲ. ನಮ್ಮ ಪುರಾಣ ಮತ್ತು ಇತರ ಧಾರ್ಮಿಕ ಸಾಹಿತ್ಯ ಈ ಎರಡು ದೇವತೆಗಳ ಬಗ್ಗೆ ಅದೆಷ್ಟು ಪ್ರಚಾರ ಮತ್ತು ಅಪಪ್ರಚಾರಗಳಿಂದ ತುಂಬಿದೆ ಎಂಬುದನ್ನು ಕೆಲವು ಧಾರ್ಮಿಕ ಕೃತಿಗಳನ್ನಾದರೂ ಓದಿದವರು ತಿಳಿದೇ ಇರುತ್ತಾರೆ. ವಿಷ್ಣುಭಕ್ತರು ವಿಷ್ಣುವು ವೇದಕಾಲದ ಸೂರ್ಯದೇವನ ರೂಪ ಎಂದರೆ ಶಿವಭಕ್ತರು ಶಿವನು ವೇದಕಾಲದ ಅಗ್ನಿಯ ರೂಪವೆಂದು ಹೇಳುತ್ತಾರೆ. ಅವರಿಗೆ ವೇದಪ್ರಾಚೀನತೆ ಇದ್ದಂತೆ ನಮಗೂ ಇದೆ ಎಂದು ತೋರಿಸುವುದು ಇದರ ಉದ್ದೇಶ. ಅವರಿಗಿಂತ ನಾವೇನು ಕಡಿಮೆ ಎಂದು ಇವರು; ಇವರಿಗಿಂತ ನಾವೇನು ಕಡಿಮೆ ಎಂದು ಅವರು! ಈ ಶಿವ ಮತ್ತು ವಿಷ್ಣುಭಕ್ತರು ತಮ್ಮ ದೇವರು ಎದುರಿನವರ ದೇವರಿಗಿಂತ ಯಾವುದರಲ್ಲೂ ಕಡಿಮೆಯಾಗಬಾರದೆಂದು ಬಹಳ ಜಾಗ್ರತೆ ವಹಿಸುತ್ತಿದ್ದದ್ದು ಕಂಡುಬರುತ್ತದೆ. ವಿಷ್ಣುವಿಗೆ ನಾಲ್ಕುಗುರುತುಗಳನ್ನು ಅವರು ಮಾಡಿದರೆ ಶಿವನಿಗೂ ನಾಲ್ಕು ಗುರುತುಗಳನ್ನು (ಹರಿಯುವ ಗಂಗೆ, ಚಂದ್ರ, ಹಾವಿನಹಾರ, ಜಡೆ) ಇವರೂ ಮಾಡಿದರು. ವಿಷ್ಣುವಿಗೆ ಸಹಸ್ರನಾಮ ಅವರು ಮಾಡಿದರೆ ಶಿವನಿಗೂ ಸಹಸ್ರನಾಮ ಇವರೂ ಮಾಡಿದರು! ಇವರ ಮೇಲಾಟ-ಕೀಳಾಟವನ್ನು ಸ್ಪಷ್ಟವಾಗಿ ತೋರಿಸುವುದು ಸಮುದ್ರಮಥನದ ಕಥೆ. ಪರ್ವತವನ್ನೇ ಕಡಗೋಲನ್ನಾಗಿ ಸರ್ಪವನ್ನು ಹಗ್ಗವನ್ನಾಗಿ ಸಮುದ್ರವನ್ನು ಕಡೆದ ಈ ಪ್ರಸಿದ್ಧ ಘಟನೆಯಲ್ಲಿ ಇಡೀ ವಿಶ್ವವನ್ನು ಉಳಿಸಲು ವಿಷ್ಣು ಕೂರ್ಮಾವತಾರ ತಾಳಿ ಸಾಗರದಾಳದಲ್ಲಿ ಪರ್ವತದ ಅಡಿಕುಳಿತು ಇಡೀ ಪ್ರಪಂಚವನ್ನು ರಕ್ಷಿಸಿದಂತೆ ಕಥೆ ಚಿತ್ರಿತವಾಗಿ ವಿಷ್ಣು ಪಾರಮ್ಯವನ್ನು ಹೇಳಿದರೆ ನಂತರ ಬಂದ ಹಾಲಾಹಲವನ್ನು ತಾನೇ ಕುಡಿದು ವಿಶ್ವವನ್ನು ಕಾಪಾಡಿದ ಶಿವನ ಚಿತ್ರಣ ಶಿವಪಾರಮ್ಯವನ್ನು ತಿಳಿಸುತ್ತದೆ.
ಅವತಾರಗಳ ಅವಾಂತರ:
ವಿಷ್ಣುವಿನ ಅವತಾರಗಳ ಅವಾಂತರಗಳನ್ನು ನೋಡಿ. ಯುಗಯುಗಗಳಲ್ಲಿ ವಿಷ್ಣು ಬೇರೆಬೇರೆ ಅವತಾರಗಳನ್ನು ತಾಳಿದನೆಂದು ಹೇಳುವುದು ಸಾಮಾನ್ಯ. ಈ ಅವತಾರಗಳಲ್ಲಿ ಅವರು ಮಾಡಿದ ಕಾರ್ಯಗಳನೇಕರು ಹೇಳಲೂ ಮುಜುಗರಪಡುವಂಥವು. ಅವುಗಳ ವಿವರಣೆಗೆ ಇಲ್ಲಿ ಹೋಗದೆ ಅವುಗಳ ಲೆಕ್ಕಕ್ಕೆ ಮಾತ್ರ ಚರ್ಚೆಯನ್ನು ಮೊಟಕುಗೊಳಿಸಿಕೊಳ್ಳುವುದಾದರೆ ಈ ವಿಷ್ಣು ಒಟ್ಟು ತಾಳಿದ್ದು ಎಷ್ಟು ಅವತಾರ ಎಂಬ ಲೆಕ್ಕದಲ್ಲಿ ಸ್ಪಷ್ಟತೆ ಇದೆಯೇ? ಇಲ್ಲ.  “ಹರಿವಂಶದ ಪ್ರಕಾರ ಅವನು ತಾಳಿದ ಅವತಾರಗಳ ಸಂಖ್ಯೆ ಆರು. ನಾರಾಯಣೀ ಆಖ್ಯಾನದ ಪ್ರಕಾರ ಹತ್ತು. ವರಾಹಪುರಾಣದ ಪ್ರಕಾರ ಅವುಗಳ ಸಂಖ್ಯೆ ಹತ್ತೇ ಆದರೂ ನಾರಾಯಣೀ ಆಖ್ಯಾನದಲ್ಲಿದ್ದ `ಹಂಸಾವತಾರ’ ಹೋಗಿ ಇಲ್ಲಿ ಅದರ ಬದಲು `ಬುದ್ಧಾವತಾರ’ ಬಂದು ಸೇರಿಕೊಂಡಿದೆ. ವಾಯುಪುರಾಣದ ಪ್ರಕಾರ ವಿಷ್ಣುವಿನ ಅವತಾರಗಳ ಸಂಖ್ಯೆ ಹನ್ನೆರಡಾದರೆ ಭಾಗವತಪುರಾಣದ ಪ್ರಕಾರ ಇವುಗಳ ಸಂಖ್ಯೆ ಇಪ್ಪತ್ತೆರಡಕ್ಕೆ ಏರಿದೆ!!”[viii] ಇಪ್ಪತ್ತನೆಯ ಶತಮಾನದ ಕನ್ನಡದ ಹಿರಿಯ ಸಾಹಿತಿಗಳಲ್ಲೊಬ್ಬರಾದ ಪು.ತಿ.ನರಸಿಂಹಾಚಾರ್ ಅವರು ತಮ್ಮ ಶ್ರೀಹರಿಚರಿತೆಯಲ್ಲಿ ವಿಷ್ಣುವಿನ ಈ ಅವತಾರಗಳ ಪಟ್ಟಿಯನ್ನು ಗಾಂಧೀಜಿಯವರೆಗೂ ಎಳೆದುಕೊಂಡುಬಂದಿದ್ದಾರೆ. ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ಇನ್ನೊಂದಿಷ್ಟು ದಿನ ಕಳೆದ ಹಿಂದೂಧರ್ಮದ ಪ್ರಖ್ಯಾತ ವಿಮರ್ಶಕರಾಗಿದ್ದ ಅಂಬೇಡ್ಕರ್ ಕೂಡ ವಿಷ್ಣುವಿನ ಅವತಾರಿಗಳ ಪಟ್ಟಿಯಲ್ಲಿ ಸೇರಬಹುದೇನೋ ಅನ್ನಿಸುತ್ತಿದೆ. ಬುದ್ಧ ಮತ್ತು ಅಂಬೇಡ್ಕರ್‍ ಅವರನ್ನು ಸೇರಿಸಿದ  ಮೇಲೆ  ಒಳಗಡೆ ನುಗ್ಗಿ ಬಸವಣ್ಣನ ಹೆಸರನ್ನು ತೋರಿಸುವುದು ಕಷ್ಟವಲ್ಲಬಿಡಿ!!
ಒಂದು ಕಾಲದಲ್ಲಿ ಹೀಗೆ ಪ್ರಖ್ಯಾತರಾಗಿದ್ದ ಬ್ರಹ್ಮ,ವಿಷ್ಣು ಮತ್ತು ಮಹೇಶ್ವರರು ನಂತರದ ಕಾಲಘಟ್ಟದಲ್ಲಿ ಮೂಲೆಗೆ ಸರಿಸಲ್ಪಟ್ಟು ಅವರ ಸ್ಥಾನದಲ್ಲಿ ಅವರ ಮಡದಿಯರಾದ ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿ ಪ್ರಧಾನವೇದಿಕೆಗೆ ಬಂದರು ಅವರೂ ಶಾಶ್ವತವಾಗಿ ಉಳಿಯಲಿಲ್ಲ. ಅನಂತರ ಬಂದ ಪಾರ್ವತಿ, ಕಾಳಿ, ಗೌರಿ, ಗಣೇಶ ಇವರ ಬಗ್ಗೆ ಇರುವ ವಿವರಣೆಗಳು ಒಂದಕ್ಕೊಂದು ತಾಳೆಯೇ ಇಲ್ಲ.  ಹೀಗೆ ದೇವರ ಜನ್ಮ ಬೆಳವಣಿಗೆ, ಸಂಸಾರ ಕಾರ್ಯ ಇವುಗಳ ಬಗ್ಗೆ ಪುರಾಣಗಳು ನೀಡುವ ವಿವರಣೆಗಳು ನಿಮ್ಮನ್ನು ಕತ್ತಲಲ್ಲಿ ಕಣ್ಣಿಗೆ ಬಟ್ಟೆಕಟ್ಟಿ ಕಾಡಿಗೆ ನೂಕಿದಂತೆ ಮಾಡುತ್ತವೆ.
ನೈತಿಕತೆ, ಮೌಲ್ಯಗಳು ಮತ್ತು ತಾತ್ವಿಕತೆಯ ಗೊಂದಲಗಳು:
ಧರ್ಮ ಯಾವುದೇ ಇರಲಿ ಅದರ ಪ್ರತಿಪಾದಕರು ಅಥವಾ ಧಾರ್ಮಿಕ ಸಾಹಿತ್ಯದಲ್ಲಿ ಒಂದಿಷ್ಟಾದರೂ ಸ್ಪಷ್ಟತೆ ಇಲ್ಲದಿದ್ದರೆ ಅದು ಪ್ರತಿಪಾದಿಸುವ ನೈತಿಕತೆ, ಮೌಲ್ಯಗಳು ಮತ್ತು ತಾತ್ವಿಕತೆಯಲ್ಲಿ ಸ್ಪಷ್ಟತೆಗಳು ಇರಲು ಸಾಧ್ಯವಿಲ್ಲ. ಈ `ಹಿಂದೂ’ ಎಂಬುದರ ಕಥೆ ಇದೇ ಆಗಿದೆ. ವೇದಗಳಾದಿಯಾಗಿ ಯಾವು ಯಾವನ್ನು ಹಿಂದೂ ಧರ್ಮದ ಪವಿತ್ರ ಗ್ರಂಥಗಳೆಂದು ಹೇಳಲಾಗುತ್ತದೆಯೋ ಅವೆಲ್ಲವನ್ನೂ ಅಧ್ಯಯನ ಮಾಡಿ ಅವುಗಳ ಒಟ್ಟಾರೆ ತಾತ್ವಿಕತೆ ಏನು ಎಂದು ಹೇಳುವ ಕಾರ್ಯ ಇದುವರೆಗೂ ಆಗಿಲ್ಲ ಎಂಬ ಮಾತು ಆರಂಭದಲ್ಲಿಯೇ ಬಂದಿದೆ. ಅದು ಮುಂದಿನ ದಿನಗಳಲ್ಲಿ ಆಗುವ ಸಂಭವವೂ ಇದ್ದಂತಿಲ್ಲ. ಈ ಧಾರ್ಮಿಕ ಸಾಹಿತ್ಯ ಕೃತಿಗಳಲ್ಲಿ ಸಾಮಾನ್ಯ ಜನರು ಅಳವಡಿಸಿಕೊಳ್ಳಬೇಕಾದ ಮೌಲ್ಯಗಳೇನು ನೈತಿಕತೆ ಏನು ಎಂಬಂತಹ ವಿಚಾರಗಳ ಚರ್ಚೆ, ಚಿಂತನೆ ಇರುವುದೂ ಕಡಿಮೆ ಎಂದೇ ಹೇಳಬೇಕು. ಕೆಲವು ಕೃತಿಗಳಲ್ಲಿ ಇಂತಹ ವಿಷಯಗಳು ಒಂದಿಷ್ಟು ಇವೆಯಾದರೂ ಅವುಗಳ ಮಧ್ಯೆ ಒಂದು ಹೊಂದಾಣಿಕೆ ಎಂಬುದು ಇಲ್ಲ. ಒಂದೊಂದು ಗ್ರಂಥಗಳು ಒಂದೊಂದು ಸಂಗತಿಗಳಿಗೆ ಆದ್ಯತೆ ನೀಡಿವೆ.
ವೇದಗಳು ದೇವಸ್ಥಾನಗಳನ್ನು ಕಟ್ಟುವ ಪದ್ಧತಿ ಇಲ್ಲದಿರುವ ಮತ್ತು ಮೂರ್ತಿಪೂಜೆಯೂ ಇಲ್ಲದಿರುವ ಯಜ್ಞವೇ ಪ್ರಧಾನವಾದ ಮತ್ತು `ಮುಕ್ತಿ’ ಎಂಬುದರ ಪರಿಚಯವೇ ಇರದ ಧಾರ್ಮಿಕತೆಯ, ಗಂಡುಹೆಣ್ಣುಗಳ ಕೂಡುವಿಕೆಯ ಲೈಂಗಿಕ ಸಂಬಂಧಗಳಲ್ಲಿ ಕಟ್ಟುಪಾಡುಗಳಿರದ ಮತ್ತು ಮನುಷ್ಯ ಮನುಷ್ಯರ ನಡುವೆ ತರತಮಗಳಿರದ ಸಾಮಾಜಿಕತೆಯ, ಮನುಷ್ಯ ಉಂಡುಟ್ಟು (ಕುಡಿದು) ಸುಖವಾಗಿ ಬಾಳುವ ವೈಯಕ್ತಿಕತೆಯ, ಬದುಕಿನ ವಿವರಗಳನ್ನು ಚರ್ಚಿಸಿದರೆ, ಉಪನಿಷತ್ತುಗಳು ಮತ್ತು ನಂತರ ಕಾಲಘಟ್ಟದ ಧಾರ್ಮಿಕ ಸಾಹಿತ್ಯ ಅನೇಕ ವಿಧಿನಿಷೇಧಗಳನ್ನು ವಿಧಿಸಿಕೊಂಡ ಕಟ್ಟುಪಾಡಿನ ಜೀವನದ ವಿವರಗಳನ್ನು ನೀಡುತ್ತವೆ. ಉಪನಿಷತ್ತುಗಳನ್ನು ವೇದಾಂತ ಎಂದೂ ವೇದಗಳ ಸಾರವೆಂದೂ ಹೇಳುತ್ತಾರಾದರೂ ವಾಸ್ತವದಲ್ಲಿ ವೇದಗಳು ಹೇಳುವುದಕ್ಕೆ ಅನೇಕ ವಿರುದ್ಧ ಅಭಿಪ್ರಾಯವನ್ನು ಈ ಉಪನಿಷತ್ತುಗಳು ಹೇಳುವುದನ್ನು ನೋಡಬಹುದು. ಪುರಾಣಗಳು ಇನ್ನೇನೋ ಹೇಳುತ್ತವೆ. ಭಗವದ್ಗೀತೆಯಲ್ಲಿ ಕೃಷ್ಣ ಮೊದಲ ಅಧ್ಯಾಯಗಳಲ್ಲಿ ಹೇಳುವುದಕ್ಕೂ ನಂತರದ ಅಧ್ಯಾಯಗಳಲ್ಲಿ ಹೇಳುವುದಕ್ಕೂ ವೈರುಧ್ಯವಿದೆ. ಈ ಮಧ್ಯೆ ಮನುಸ್ಮೃತಿ ಎಂಬ ಗ್ರಂಥ ಆಡಳಿತ, ಸಾಮಾಜಿಕ ಜನಜೀವನ, ಧರ್ಮಿಕತೆ ಇತ್ಯಾದಿಗಳ ಬಗ್ಗೆ ಅತ್ಯಮೂಲ್ಯವಾದ ಕೆಲವು ಸಂಗತಿಗಳನ್ನು ಹೇಳುತ್ತದೆಯಾದರೂ ಮನುಷ್ಯ-ಮನುಷ್ಯರ ನಡುವೆ ಭೇದಮಾಡುವ ಒಂದು ಕೆಟ್ಟ ಬೋಧನೆಯಿಂದಾಗಿ ಅದರ ಎಲ್ಲ ಒಳ್ಳೆಯ ಅಂಶಗಳೂ ಮಣ್ಣುಗೂಡಿವೆ. ರಾಮಾಯಣ ಮಹಾಭಾರತ ಇವುಗಳ ವ್ಯಾಖ್ಯಾನ ಶತಮಾನಗಳಿಂದ ನಡೆಯುತ್ತಲೇ ಬಂದಿದ್ದರೂ ಅವುಗಳ ಮೌಲ್ಯನಿಷ್ಕರ್ಷೆ ನಿಂತಿಲ್ಲ; ನಿಲ್ಲುವುದೂ ಇಲ್ಲ. ಆ ಗ್ರಂಥದ ಪ್ರಕಾರ ಸರಿಯಾದದ್ದು ಈ ಗ್ರಂಥದ ಪ್ರಕಾರ ತಪ್ಪು. ಈ ಗ್ರಂಥದ ಪ್ರಕಾರ ಸರಿಯಾದದ್ದು ಆ ಗ್ರಂಥದ ಪ್ರಕಾರ ತಪ್ಪು!
ನೆರವು ನೀಡದಿರಲು ಜನಕೆ ಧರುಮವೇತಕೆ?
          ದೇವರು, ಧರ್ಮ, ಮುಕ್ತಿ, ಸ್ವರ್ಗ, ನರಕ ಇಂತಹ ಗಂಭೀರವವೂ ಆಧ್ಯಾತ್ಮಿಕವೂ ಆದ ಸಂಗತಿಗಳಿಗಾಗಿ ಮಾತ್ರ ಜನಸಾಮಾನ್ಯರು ಧರ್ಮಗಳನ್ನು ಆಶ್ರಯಿಸುವುದಿಲ್ಲ. ಅವರು ತಮ್ಮ ದಿನನಿತ್ಯದ ಲೌಕಿಕ ವ್ಯವಹಾರಗಳಲ್ಲಿ ತಮ್ಮ ನಡೆಯ ಸರಿತಪ್ಪು ನಿಷ್ಕರ್ಷೆಗಾಗಿಯೂ ಧರ್ಮದ ಕಡೆ ನೋಡುತ್ತಾರೆ. ಯಾವುದನ್ನು ಪೋಲೀಸು, ಕಾನೂನು, ನ್ಯಾಯಾಲಯ ಇಂತಹುಗಳಲ್ಲಿ ಬಹಿರಂಗವಾಗಿ ಹೇಳಿಕೊಳ್ಳಲು ಮುಜುಗರ ಉಂಟಾಗುತ್ತದೆಯೋ ಅಂತಹ ವೈಯಕ್ತಿಕವೆನಿಸುವ ವಿಷಯಗಳಲ್ಲಿ ಜನ ಹೆಚ್ಚಾಗಿ ಧರ್ಮದ ಕಡೆ ನೋಡುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಆಯಾ ಧರ್ಮಗಳು ತಮ್ಮ ಅನುಯಾಯಿಗಳಿಗೆ ಕೆಲವು ವಿಧಿನಿಷೇಧಗಳ ಮೂಲಕ ಪರೋಕ್ಷವಾಗಿಯಾದರೂ ಸರಳವಾಗಿ ಮಾರ್ಗದರ್ಶನ ಮಾಡುವುದು, ಸಮಾಧಾನ ಹೇಳುವುದು ಸಾಮಾನ್ಯ ಸಂಗತಿ. ಈ `ಹಿಂದೂಧರ್ಮ’ ಎಂಬುದು ಹಾಗೆ ಮಾಡುತ್ತದೆಯೇ? ಬಹುಶಃ ಇಲ್ಲ.
ವರ್ತಮಾನದ ಒಂದೆರಡು ಉದಾಹರಣೆಗಳ ಮೂಲಕ ಇದನ್ನು ನೋಡೋಣ. ಒಂದು: ಒಬ್ಬ ವ್ಯಕ್ತಿ ಲಂಚ ತೆಗೆದುಕೊಳ್ಳಲು ಮುಂದಾದ ಸಂದರ್ಭದಲ್ಲಿ ನಾನು ಮಾಡುತ್ತಿರುವುದು ತಪ್ಪೋ ಸರಿಯೋ ಎಂಬ ಧರ್ಮಸೂಕ್ಷ್ಮ ಅವನನ್ನು ಕಾಡಬಹುದು, ಆಗ ಅವನು ತನ್ನನ್ನು `ಲಿಂಗಾಯತ’ ಎಂದುಕೊಂಡವನಾಗಿದ್ದನೆಂದು ಭಾವಿಸೋಣ. ಅವನ ಧರ್ಮದ ಪ್ರಕಾರ ಅದು ತಪ್ಪು ಎಂದು ಅವನಿಗೆ ಅನ್ನಿಸಬಹುದು. ಏಕೆಂದರೆ `ದುಡಿಯದೇ ತಿನ್ನುವುದು ಕಳ್ಳತನಕ್ಕೆ ಸಮಾನ’ ಎಂದು ಆ ಧರ್ಮ ಹೇಳುತ್ತದೆ. ಅವನು ಅದನ್ನು ಅನುಷ್ಠಾನ ಮಾಡುತ್ತಾನೋ ಬಿಡುತ್ತಾನೋ ಅದು ನಂತರದ್ದು. ಕೊನೆಯಪಕ್ಷ ತಿಳಿವಳಿಕೆಯ ಮಟ್ಟದಲ್ಲಿಯಾದರೂ ಸ್ಪಷ್ಟ ಮಾರ್ಗದರ್ಶನ ಅವನಿಗೆ ಸಿಗುತ್ತದೆ. ಒಂದು ವೇಳೆ ಅವನು ತನ್ನನ್ನು `ಹಿಂದೂ’ ಎಂದುಕೊಂಡರೆ ಅವನಿಗೆ ಯಾವ ಗ್ರಂಥ ಅಥವಾ ಋಷಿಮುನಿಯ ಹೇಳಿಕೆಗಳಿಂದ  ಯಾವ ಮಾರ್ಗದರ್ಶನ ಅಥವಾ ಸಮಾಧಾನ ಸಿಗುತ್ತದೆ? ಕೆಲವು ಗ್ರಂಥಗಳಿಂದ `ಅದು ತಪ್ಪು’ ಎಂಬ ಮಾರ್ಗದರ್ಶನ ಸಿಗಬಹುದು. ಆದರೆ ಅದೇ ವೇಳೆಯಲ್ಲಿಯೇ ವೇದದಲ್ಲಿ ಇಂದ್ರನಿಗೆ ಒಬ್ಬಋಷಿ ಹೇಳುವ, `ನಮಗೆ ಬೇಕಾದ ವಸ್ತುಗಳನ್ನು ಅವು ಇರುವವರಿಂದ ನೀನು ಕೊಳ್ಳೆಹೊಡೆದು ನಮಗೆ ತಂದುಕೊಡು’ ಎನ್ನುವ ಮಾತಿನಿಂದ `ಅದು ಸರಿ’ ಎಂಬ ಮಾರ್ಗದರ್ಶನವೂ ಸಿಕ್ಕು ಅವನಿಗೆ ಆ ಸಂದರ್ಭದಲ್ಲಿ ಲಂಚ ತೆಗೆದುಕೊಳ್ಳಲು ಮಾತ್ರವಲ್ಲ ಇಡೀ ದೇಶವನ್ನೇ ಕೊಳ್ಳೆಹೊಡೆಯಲು ಪ್ರೇರಣೆಯನ್ನೂ ನೀಡಬಹುದು!.
          ಇನ್ನೊಂದು: ಒಬ್ಬ ಗಂಡಸು ಅಥವಾ ಹೆಂಗಸು ಹೇಗೆ ಹೇಗೋ ಮನುಷ್ಯ ಸಂಬಂಧಗಳ ಸುಳಿಯಲ್ಲಿ ಸಿಕ್ಕು ತಾನು ವಿವಾಹದ ಹೊರಗಿನ ಸಂಬಂಧವನ್ನು ಇಟ್ಟುಕೊಳ್ಳುವುದು ತಪ್ಪೋ ಸರಿಯೋ ಎಂಬ ಗೊಂದಲಕ್ಕೆ ಬೀಳುತ್ತಾನೆ ಅಥವಾ ಬೀಳುತ್ತಾಳೆ ಎಂದಿಟ್ಟುಕೊಳ್ಳೋಣ. ಆಗ ಮಾರ್ಗದರ್ಶನಕ್ಕಾಗಿ ಧರ್ಮದ ಮೊರೆಹೋಗುವ ಅವನಿಗೆ ಅಥವಾ ಅವಳಿಗೆ ಬೇರೆ ಯಾವ ಧರ್ಮವಾದರೂ ತಕ್ಕಮಟ್ಟಿನ ಸಮಾಧಾನ, ಮಾಡಿ ಅವಳಿಗೆ ಅಥವಾ ಅವನಿಗೆ ಮಾರ್ಗದರ್ಶನ ಮಾಡಬಹುದೇನೋ ಆದರೆ  ಈ `ಹಿಂದೂ’ ಮಾಡಲಾರದು. ಏಕೆಂದರೆ ಕೆಲವು ಕೃತಿಗಳ ಪ್ರಕಾರ ಅದು ತಪ್ಪಲ್ಲ. ಇನ್ನು ಕೆಲವು ಕೃತಿಗಳ ಪ್ರಕಾರ ತಪ್ಪು.  ಹೆಣ್ಣುಮಕ್ಕಳ ಮೇಲೆ ಹಟಸಂಭೋಗ ಮಾಡುವುದು ತಪ್ಪೋ ಸರಿಯೋ ಎಂಬ ಪ್ರಶ್ನೆಗೂ ಇಲ್ಲಿ ಉತ್ತರ ಕಷ್ಟ. ಸ್ವತಃ ಇಂದ್ರನೇ ಹಾಗೆ ಮಾಡಿದ ಉದಾಹರಣೆ ಇದೆ. ಕಳ್ಳತನ ಕಲಿಸುವ `ಚೋರವಿದ್ಯೆ’ ಅಥವಾ `ಕರಪಟಶಾಸ್ತ್ರ’ ಛಪ್ಪನ್ನೈವತ್ತಾರು ವಿದ್ಯೆಗಳಲ್ಲಿ ಒಂದಾಗಿದೆ! ಇಂತಹ ವಿಷಯಗಳಲ್ಲಿ ಸ್ಪಷ್ಟವಾದ ಮಾರ್ಗದರ್ಶನ ಸಮಾಧಾನಗಳು ಸಿಗದಿದ್ದರೆ ಅದು ಯಾವುದಾದರೂ ಇರಲಿ ಅಂತಹ ಧರ್ಮವನ್ನು ಕಟ್ಟಿಕೊಂಡು ಜನರಿಗೆ ಏನಾಗಬೇಕಿದೆ?
ಹೊಸಪೋಷಾಕಿನಲ್ಲಿ  ವೈದಿಕ ಧರ್ಮ
ಈ ಎಲ್ಲ ಗೊಂದಲಗಳಿಗೆ ಕಾರಣ ಸ್ಪಷ್ಟವಾಗಿದೆ. ಹಿಂದೂ ಎಂಬ ಪರೀಧಿಯೊಳಗೆ ಇರುವಂಥದ್ದು ಒಂದೇ ಧರ್ಮವಲ್ಲ. ಅದು ಹಲವು ಧರ್ಮಗಳ ಸಮೂಹ ಹಾಗಾಗಿ ಈ ಗೊಂದಲಗಳ ಲಕ್ಷಣ ಸಾಮಾನ್ಯ. ಈ ಹಲವು ಧರ್ಮಗಳು ಆರಂಭದಲ್ಲಿ ನಮ್ಮಲ್ಲಿ ಮುಖ್ಯವಾಗಿ `ವೈದಿಕ’ ಮತ್ತು `ಅವೈದಿಕ’ ಎಂಬ ಎರಡು ಪ್ರಧಾನ ಧಾರೆಗಳಿಗೆ ಸೇರಿದವಾಗಿದ್ದವು. ವೇದಪಾರಮ್ಯವನ್ನು ಒಪ್ಪುವಂಥವು `ವೈದಿಕ’ ಅದನ್ನು ಒಪ್ಪದೇ ಇರುವವರು `ಅವೈದಿಕ’ ಸಾಮಾನ್ಯವಾಗಿ ಬ್ರಾಹ್ಮಣಧರ್ಮ ಎಂದು ಕರೆಯಲ್ಪಡುವ ವೈದಿಕಧರ್ಮ ವೈದಿಕಧಾರೆಯ ಪ್ರಮುಖ ಧರ್ಮವಾದರೆ, ಚಾರ್ವಾಕ, ಲೋಕಾಯತ ಇತ್ಯಾದಿಗಳು ಆಗಿನ ಪ್ರಮಖ `ಅವೈದಿಕ’ ಧರ್ಮಗಳು. ವೈದಿಕ ಧರ್ಮಗಳು ಪರಜೀವನಕ್ಕೆ ಪ್ರಧಾನ್ಯತೆ ನೀಡಿದರೆ ಅವೈದಿಕ ಧರ್ಮಗಳು ಲೌಕಿಕ್ಕೆ ಆಧ್ಯತೆ ನೀಡುವಂಥವು. ವೇದಗಳ ನಂತರದ ಕಾಲಘಟ್ಟದಲ್ಲಿ ಸಮಾಜದ ಜನರು ಮೊಟ್ಟಮೊದಲಬಾರಿಗೆ `ಪೂಜಾಸಂಸ್ಕೃತಿ’ ಮತ್ತು `ಶ್ರಮಸಂಸ್ಕೃತಿ’ ಎಂದು ಇಬ್ಬಾಗವಾದಾಗ ವೈದಿಕರೆಲ್ಲ ಪೂಜಾಸಂಸ್ಕೃತಿಯ ವಾರಸುದಾರರಾದರೆ ಅವೈದಿಕರೆಲ್ಲರೂ ಶ್ರಮಸಂಸ್ಕೃತಿಯ ವಾರಸುದಾರರಾದರು.
ಆದರೆ ಅಧಿಕಾರ ಕೇಂದ್ರಕ್ಕೆ ಹತ್ತಿರವಿದ್ದ ವೈದಿಕರು ತಮ್ಮ ಧರ್ಮ ಮತ್ತು ಆಚರಣೆಗಳನ್ನೇ ಶ್ರೇಷ್ಠವೆಂದೂ ಉಳಿದವುಗಳನ್ನು ಕನಿಷ್ಠವೆಂದೂ ಪರಿಗಣಿಸುವಂತೆ ವ್ಯವಸ್ಥೆಮಾಡುವಲ್ಲಿ ಯಶಸ್ವಿಯಾದರು. ಮಾತ್ರವಲ್ಲ. ತಮ್ಮ ಆಚಾರ-ವಿಚಾರಗಳನ್ನು `ಸಂಸ್ಕೃತಿ’ ಎಂದೂ ಈ ದೇಶದ ಮೂಲನಿವಾಸಿಗಳಾದ ಬುಡಕಟ್ಟು ಜನಾಂಗವೂ ಸೇರಿದಂತೆ ಶ್ರಮಸಂಸ್ಕೃತಿಯ ವಾರಸುದಾರರಾದ ಆಚಾರ-ವಿಚಾರಗಳನ್ನು `ಅಸಂಸ್ಕೃತಿ’ ಎಂದು ಪರಿಗಣಿಸುವಂತೆ ಮಾಡಿದರು. ತಮ್ಮ ವಿಚಾರಕ್ಕೆ ವಿರುದ್ಧ ಧ್ವನಿಯೆತ್ತಿದವರನ್ನು ವೈದಿಕರು ನಿರ್ದಾಕ್ಷಿಣ್ಯವಾಗಿ ಹೊಸಕಿಹಾಕಿದ ನಿದರ್ಶನಗಳು ಇದೇ ಧಾರ್ಮಿಕ ಸಾಹಿತ್ಯದಲ್ಲಿ ಎಂದೂ ಅಳಿಸಿಹೋಗದಂತೆ ಗಟ್ಟಿಯಾಗಿ ದಾಖಲಾಗಿವೆ. ಹೀಗೆ ತೀರಾ ಸಣ್ಣಗುಂಪೊಂದರ ಧರ್ಮವಾಗಿದ್ದ ವೈದಿಕ ಧರ್ಮವೇ ಮುಂದೊಂದು ದಿನ `ಹಿಂದೂಧರ್ಮ’ವೆಂಬ ಬೃಹದ್ದಾಕಾರದ ಪೊಳ್ಳುಪೋಷಾಕಿನಲ್ಲಿ ಚಲಾವಣೆಗೆ ಬರಲು ಭೂಮಿಕೆ ಸಿದ್ಧವಾಯಿತು. ಹೀಗಾಗಿ ನಮಗೆ ಸ್ಪಷ್ಟತೆ ಇರಬೇಕು ಈಗ ಯಾವುದನ್ನು ಹಿಂದೂಧರ್ಮ ಎಂದು ಬಿಂಬಿಸಲಾಗುತ್ತದೆಯೋ ಅದು ಹಿಂದೆ ಚಲಾವಣೆಯಲ್ಲಿದ್ದ ಅನೇಕ ಧರ್ಮಗಳಲ್ಲಿ ಒಂದಾಗಿದ್ದ ವೈದಿಕಧರ್ಮವೇ ಹೊರತು ಬೇರೆಯಲ್ಲ! ಮೇಲಿನ ಎಲ್ಲ ಬಗೆಯ ಆಚರಣೆಗಳು, ಅವಾಂತರಗಳು ದ್ವಂದ್ವಗಳು ಅವು ಈ ವೈದಿಕ ಧರ್ಮದ್ದವೇ ಆಗಿವೆ.  ಈ ನೆಲದ ನಿಜವಾರಸುದಾರರಾದ ಅವೈದಿಕ ಧಾರೆಗಳಾದ ಚಾರ್ವಾಕ ಲೋಕಾಯತ ಇತ್ಯಾದಿಗಳು ಮುಖ್ಯವಾಗಿ ವಾಸ್ತವವಾದಿಯಾದ, ನೆಲದ ಚಿಂತನಾಧಾರೆಗಳಾಗಿದ್ದರೂ ಅಧಿಕಾರಕ್ಕೆ ಹತ್ತಿರವಿದ್ದ ವೈದಿಕ ಅವುಗಳ ಗಂಟಲನ್ನು ಒತ್ತಿಹಿಡಿದು ಬೆಳೆಯಿತು ಎನ್ನುವುದು ಗಮನಸಬೇಕಾದ ಸಂಗತಿ.
ವೈದಿಕ ಧರ್ಮ ನಿಂತಿರುವುದೇ ಬಹುಮುಖ್ಯವಾಗಿ ನಾಲ್ಕು ಆಧಾರಸ್ಥಂಭಗಳ ಮೇಲೆ. ಆ ಆಧಾರಸ್ಥಂಭಗಳೆಂದರೆ ಮೊದಲನೆಯದು ಬ್ರಾಹ್ಮಣರ ಯುಕ್ತಿ ಅಥವಾ `ಬುದ್ದಿವಂತಿಕೆ’ ಎರಡನೆಯದು ಕ್ಷತ್ರಿಯರ ದಂಡಶಕ್ತಿ ಅಥವಾ ರಾಜಕೀಯಶಕ್ತಿ, ಮೂರನೆಯದು ವೈಶ್ಯರ ಧನಭಲ ಮತ್ತು ಕೊನೆಯದಾಗಿ ಶೂದ್ರರ ದೈಹಿಕ ಶಕ್ತಿ, ಇವು ಆಗಲೂ ಸತ್ಯ. ಈಗಲೂ ಸತ್ಯ. ಇದು ಅಸಮಾನತೆಯನ್ನು ತನ್ನ ಉಸಿರಾಗಿ ಹೊಂದಿರುವಂಥ ಧರ್ಮ. ಅದರಿಂದ ಅಸಮಾನತೆಯನ್ನು ತೆಗೆಯುವುದು ಅಂದರೆ ಅದರ ಪ್ರಾಣವನ್ನೇ ತೆಗೆದಂತೆ. ಅದು ಕೇವಲ ಮನುಷ್ಯ ಮನುಷ್ಯರ ನಡುವೆ ಮೇಲು ಕೀಳು ಬೇಧ ಮಾಡುವುದಿಲ್ಲ; ಬದಲಾಗಿ ಪ್ರಾಣಿ ಪಕ್ಷಿ, ಗಿಡಮರ, ಅಂಕಿಸಂಖ್ಯೆ ಹೀಗೆ ಎಲ್ಲದಕ್ಕೂ ಶ್ರೇಷ್ಠ-ಕನಿಷ್ಠ ಕಲ್ಪನೆಯನ್ನು ನೀಡಿ ಅವನ್ನು ವಿಭಾಗಿಸುತ್ತದೆ. ಮನುಷ್ಯರಲ್ಲಿ ಬ್ರಾಹ್ಮಣರು ಶ್ರೇಷ್ಠ: ಶೂದ್ರರು ಕನಿಷ್ಠ. ಪ್ರಾಣಿಗಳಲ್ಲಿ ರತ್ನಪಕ್ಷಿ ಶ್ರೇಷ್ಠ, ಕಾಗೆ ಕನಿಷ್ಠ. ಪ್ರಾಣಿಗಳಲ್ಲಿ ಗೋವು ಶ್ರೇಷ್ಠ; ನಾಯಿ ಕತ್ತೆ ಕನಿಷ್ಠ. ಮರಗಳಲ್ಲಿ ಶ್ರೀಗಂಧ ಶ್ರೇಷ್ಠ, ಜಾಲಿ ಕನಿಷ್ಠ …..ಹೀಗೇ ಪಟ್ಟಿಯನ್ನು ಬೆಳೆಸಬಹುದು. 
ಹೀಗೆ ತರತಮಗಳ ತಾತ್ವಿಕತೆಯನ್ನು ಒಳಗೊಂಡ ವೈದಿಕಧರ್ಮವನ್ನು ಆ ಹಂತದಲ್ಲಿ ಹೆಚ್ಚು ವ್ಯಾಪಕವಾಗಿ ಹರಡಿಸುವ ಪ್ರಯತ್ನಗಳು ನಡೆದವಾದರೂ ಆ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ತನ್ನ ಎಂಥೆಂಥದೋ ಕಟ್ಟುಪಾಡುಗಳನ್ನು ಅರ್ಥರಹಿತ ಆಚರಣೆಗಳನ್ನು ಅದು ಇತರರ ಮೇಲೆ ಹೇರಲು ಹೋದಾಗ ಸಹಜವಾಗಿಯೇ ಪ್ರತಿರೋಧಗಳನ್ನು ಎದುರಿಸಬೇಕಾಗಿಬಂದರೂ ಅದು ತನಗಿರುವ ಧಾರ್ಮಿಕ ಏಕಸ್ವಾಮ್ಯ ಮತ್ತು ರಾಜಕೀಯ ಬೆಂಬಲದಿಂದಾಗಿ ಭಿನ್ನಧ್ವನಿಗಳನ್ನು ಹತ್ತಿಕ್ಕುವಲ್ಲಿ ಒಂದಿಷ್ಟು ಯಶಸ್ವಿಯಾದರೂ, ತನ್ನೊಳಗಿನ ಸಹಜ ಸ್ವತಂತ್ರವಾದ ಮನೋಧರ್ಮದ ಜನ ಅದಕ್ಕೆ ಒಗ್ಗಿಕೊಳ್ಳಲೂ ಆಗದೇ ಅತ್ತ ಹೊಂದಿಕೊಳ್ಳಲೂ ಆಗದೇ ಒಂದಿಷ್ಟುಕಾಲ ಉಸಿರುಕಟ್ಟಿದ ವಾತಾವರಣದಲ್ಲಿ ಬದುಕಿದಂತೆ ಕಂಡರೂ ಈ ಪರಿಸ್ಥಿತಿ ಬಹಳ ದಿನ ಮುಂದುವರೆಯಲು ಸಾಧ್ಯವಾದಂತಿಲ್ಲ. ಏಕೆಂದರೆ ತುಳಿಯುವ ಕಾಲಿನ ಕೆಳಗೇ ಪ್ರತಿಭಟಿಸುವ ಬೀಜಗಳು ಮೊಳಕೆಯೊಡೆಯುವುದು ಒಂದು ವಿಶ್ವಸತ್ಯ. ಈ ವಿಶ್ವಸತ್ಯದ ಭಾಗವಾಗಿಯೇ ಬುದ್ಧ, ಮಹಾವೀರ ಮುಂತಾದವರು ಹುಟ್ಟಿಬಂದು ಉಸಿರುಕಟ್ಟಿದವರ ಮುಖಕ್ಕೆ ಗಾಳಿಬೀಸಿದರು. ಈ ಗಾಳಿ ಸಹಜವಾಗಿಯೇ ತುಳಿತಕ್ಕೊಳಗಾದವರಿಗೆ ತಂಗಾಳಿಯಾಗಿಯೂ ದೌರ್ಜನ್ಯವೆಸಗುತ್ತಿದ್ದವರಿಗೆ ಬಿರುಗಾಳಿಯಾಗಿಯೂ ಬೀಸತೊಡಗಿತು. ವರ್ಣಾಶ್ರಮಗಳ ಒಂದು ಅಭದ್ರಮನೆ ಅಲುಗಾಡತೊಡಗಿತು. ಈ ಅಲುಗಾಟದ ಅಭದ್ರಮನೆಯಲ್ಲಿ ಇದ್ದದ್ದರಲ್ಲಿಯೇ ಸುರಕ್ಷಿತವಾಗಿರುವ ಸ್ಥಳಗಳನ್ನು ವೈದಿಕರು ಹಿಡಿದುಕೊಂಡರು. ಅಪಾಯಕಾರಿ ಸ್ಥಳಗಳಲ್ಲಿ ಜೀವಕೈಯಲ್ಲಿ ಹಿಡಿದುಕೊಂಡು ಬಾಳುವ ಅನಿವಾರ್ಯತೆಗೆ ಒಳಗಾದ ಬಹಳಷ್ಟು ತಳಸುಮುದಾಯದ ಜನ ಸುರಕ್ಷಿತ ಸ್ಥಳಗಳ ಕಡೆ ನೋಡತೊಡಗಿದರು. ಜೈನ,ಬೌದ್ಧ, ಇಸ್ಲಾಂ, ಶೈವ ಹೀಗೆ ಕೆಲವು ಸ್ಥಳಗಳಿಗೆ ಅವರು ನಡೆದರು. ಹೀಗೆ ನಡೆದ ಕೆಲವು ಜನರೇ ಮುಂದೆ ಶೈವ ವೀರಶೈವ – ಲಿಂಗಾಯತಗಳ ಉದಯಕ್ಕೂ ಕಾರಣರಾದರು.
ಭಾಗ-3
ಶೈವ – ವೀರಶೈವ ಮತ್ತು ಲಿಂಗಾಯತ
ಶೈವರೆಂದರೆ ಯಾರು?
ಸರಳವಾಗಿ ಹೇಳುವುದಾದರೆ ಶಿವನ ಆರಾಧಕರೇ ಶೈವರು. ಈ ಮೊದಲಿನ ಚರ್ಚೆಯಲ್ಲಿ ಶಿವ ಎಂಬ ದೇವತೆ ವೇದಗಳ ಕಾಲಘಟ್ಟದ ಎರಡನೇ ಹಂತದಲ್ಲಿ ಪ್ರಸಿದ್ಧಿಗೆ ಬಂದ ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದ ಎಂಬುದನ್ನು ನೋಡಿದ್ದೇವೆ. ಮತ್ತು ಬ್ರಹ್ಮನೆಂಬುವನು ಅಲ್ಲಿಯೇ ಪದಚ್ಯುತನಾದನೆಂಬುದನ್ನೂ ನೋಡಿದ್ದೇವೆ. ಹಾಗಾಗಿ ಅಲ್ಲಿ ಚಲಾವಣೆಯಲ್ಲಿ ಉಳಿದುಕೊಂಡ ಇಬ್ಬರೂ ಅಂದರೆ ವಿಷ್ಣು ಮತ್ತು ಶಿವ ಇಂದಿನವರೆಗೂ ಹೇಗುಹೇಗೋ ಅಂತೂ ಉಳಿದುಕೊಂಡು ಬಂದಿದ್ದಾರೆ. ಮಾರ್ಗಮಧ್ಯದಲ್ಲಿ ಅವರ ಶ್ರೀಮತಿಯವರ ಯಜಮಾನಿಕೆ ಬಂದು ಅವರು ಮೂಲೆಸೇರಿದರೂ ಮತ್ತೆ ಅವರಿಗೆ ಕಾಲಕೂಡಿಬಂದು ಮೇಲೆಬಂದು ಉಳಿದುಕೊಂಡರು. ಹೀಗೆ ಉಳಿದುಕೊಂಡು ಬಂದ ಈ ಇಬ್ಬರಲ್ಲಿ ವಿಷ್ಣು ಮುಂದಿನ ಕಾಲಘಟ್ಟದಲ್ಲಿ ವಿಶೇಷವಾಗಿ ವೈದಿಕರ ದೇವರಾಗಿ ತನ್ನ ವಿವಿಧ ರೂಪಾವತಾರಗಳಲ್ಲಿ (ರಾಮ, ಕೃಷ್ಣ, ವಿಷ್ಣು, ಇತ್ಯಾದಿಯಾಗಿ) ಮುಂದುವರೆದ. ಈ ವಿಷ್ನುವಿನ ಭಕ್ತರು ವೈಷ್ಣವರಾದರೆ ಶಿವನ ಆರಾಧಕರು ಶೈವರಾದರು. ಅವರು ವೇದ ಉಪನಿಷತ್ತು ಇತ್ಯಾದಿಗಳಿಗೆ ಹೆಚ್ಚು ಅಂಟಿಕೊಂಡರೆ. ಇವರು ಆಗಮಗಳಿಗೆ ಆದ್ಯತೆ ನೀಡಿದಂತೆ ಕಾಣುತ್ತದೆ.
ಶೈವರಲ್ಲಿ ಹಲವು ಉಪ ಪಂಗಡಗಳಿವೆ. ಶಿವನನ್ನು ವಿವಿಧರೂಪದಲ್ಲಿ ಆರಾಧಿಸುವ ಇವರಲ್ಲಿ ಕಪಾಲಿಶೈವರು, ಅಘೋರಿಶೈವರು, ಪಾಶುಪತಿಶೈವರು ಇತ್ಯಾದಿಗಳು ಪ್ರಮಖರು.  ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಈ ಶೈವರ ಪಂಗಡಗಳು ಹಂಚಿಹೋಗಿವೆಯಾದರೂ ಕರ್ನಾಟಕದ ಪರಿಸರದಲ್ಲಿ ಹತ್ತು ಹನ್ನೊಂದನೆಯ ಶತಮಾನದ ವೇಳೆಗೆ ಕಪಾಲಿ ಶೈವರ ಪ್ರಾಬಲ್ಯ ಹೆಚ್ಚಿದ್ದಂತೆ ತೋರುತ್ತದೆ.  ವೇದಕಾಲದಲ್ಲಿ ಶುರುವಾದ ವೈಷ್ಣವ ಶೈವರ ನಡುವಿನ ಜಗಳ ಸುಮಾರು ಕ್ರಿ.ಶ.ಹತ್ತನೆ ಶತಮಾನ ಬಂದರು ಮುಗಿದಿರಲಿಲ್ಲವೆಂದು ತೋರುತ್ತದೆ. ಆ ಕಾಲದಲ್ಲಿ ಇವರು ಪರಸ್ಪರರ ಪೂಜಾಕೇಂದ್ರಗಳಮೇಲೆ, ಅನುಯಾಯಿಗಳ ಮೇಲೆ ದಾಳಿಮಾಡಿದ ಉದಾಹರಣೆಗಳು ಅಲ್ಲಲ್ಲಿ ಸಿಗುತ್ತವೆ. ಈ ಶೈವರು ವಿಚಾರಕ್ಕಿಂತ ಆಚಾರಕ್ಕೆ ಹೆಚ್ಚು ಒತ್ತುಕೊಟ್ಟು ಅನೇಕ ವಾಮಾಚಾರ ಕಂದಾಚಾರಗಳಿಗೆ ಬಲಿಯಾದದ್ದು ಈಗಲೂ ವಿರಳವಾಗಿಯಾದರೂ ಕಂಡುಬರುವ ಅವರ ಕೆಲವು ಆಚರಣೆಗಳಿಂದ ಕಂಡುಬರುತ್ತದೆ. ಶಿವನನ್ನು ವಿಶೇಷವಾಗಿ ರುಂಡಮಾಲಿಯಾಗಿ, ಉಗ್ರಸ್ವರೂಪಿಯಾಗಿ ಸ್ವೀಕರಿಸಿ ಆಚರಿಸುವ ಶೈವರ ಕೆಲವು ಗುಂಪುಗಳು ಈಗಲೂ ಕೆಲವುಕಡೆ ನರಭಕ್ಷಣೆ ರಕ್ತಪಾನವನ್ನು ತಮ್ಮ ಆಚರಣೆಗಳ ಅಂಗವಾಗಿ ಹೊಂದಿರುವವೆಂದು ಹೇಳಲಾಗುತ್ತಿದೆ. ಬರಬರುತ್ತಾ ಅವರ ದುರಾಚಾರಗಳು ಮಿತಿಮೀರಿ ಬೆಳೆಯತೊಡಗಿದಾಗ, ಭೀಭತ್ಸ ಆಚರಣೆಗಳಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿದಲ್ಲವೆಂಬುದುನ್ನು ಹೇಳುವ ಅಗತ್ಯ ಸಮಾಜದಲ್ಲಿ ಉಂಟಾಯಿತು. ಈ ಅಗತ್ಯವನ್ನು ಪೂರೈಸಲೆಂದು ಹಳಿತಪ್ಪಿದ ಧರ್ಮವನ್ನು ಹಳಿಗೆ ಎತ್ತಿಇಡುವ ಪ್ರಯತ್ನಗಳ ಪ್ರತಿಫಲವಾಗಿ ಹುಟ್ಟಿಬಂದಂಥವೇ ವೀರಶೈವ ಮತ್ತು ಲಿಂಗಾಯತಗಳು.
ವೀರಶೈವ ಮತ್ತು ಲಿಂಗಾಯತ ಒಂದೆಯೇ ಅಥವಾ ಬೇರೆಬೇರೆಯೇ?
`ಹಿಂದೂ’ ಎಂಬುದರಿಂದ ಕಳಚಿಕೊಂಡು `ವೀರಶೈವ-ಲಿಂಗಾಯತ’ ಸ್ವತಂತ್ರಧರ್ಮದ ಸ್ಥಾನಮಾನಕ್ಕೆ ಒತ್ತಡ ತರುವ ಪ್ರಯತ್ನಗಳು ನಡೆಯುತ್ತಿರುವ ಈ ಹಂತದಲ್ಲಿ ಇನ್ನೊಂದು ಒಳಜಗಳ ಶುರುವಾಗಿದೆ. ಈ ಜಗಳ ವೀರಶೈವರು ಮತ್ತು ಲಿಂಗಾಯತರು ಒಂದೇಯೇ ಅಥವಾ ಬೇರೆಬೇರೆಯೇ ಎಂಬುದಕ್ಕೆ ಸಂಬಂಧಿಸಿದ್ದು. ಈ ಪ್ರಶ್ನೆಗೆ ಉತ್ತರಗಳು ಒಂದೇ ಆಗಿಲ್ಲ. ಇದರ ಭಾಗೀದಾರರೆಂದು ಗುರುತಿಸಬಹುದಾದ ಜನರನ್ನು ಮುಖ್ಯವಾಗಿ ನಾಲ್ಕು ಗುಂಪುಗಳಾಗಿ ವಿಂಗಡಿಸಬಹುದು. ಆ ನಾಲ್ಕು ಗುಂಪುಗಳು ಮತ್ತು ಅವರ ಅಭಿಪ್ರಾಯಗಳು ಹೀಗಿವೆ: ಮೊದಲನೆಯದಾಗಿ ರಾಜಕಾರಣಿಗಳ ಗುಂಪು: ಇವರ ಪ್ರಕಾರ ಇವೆರಡೂ ಬೇರೆಬೇರೆಯಲ್ಲ. ಇವೆರಡೂ ಒಂದೇ. ಇವುಗಳನ್ನು ಬೇರೆಬೇರೆ ಎಂದು ಕರೆಯುವುದು ಅವರ ಮಾತಿನ ಶೈಲಿಯಲ್ಲಿಯೇ ಹೇಳುವುದಾದರೆ `ಸಮಾಜವನ್ನು ಒಡೆಯುವ’ ಮತ್ತು `ಮತಬಾಂಧವರನ್ನು ಅಗಲಿಸುವ’ ಕುಂತಂತ್ರ ಮತ್ತು ಹುನ್ನಾರದ ಕೆಲಸ. ಇಲ್ಲಿ `ಸಮಾಜ’ ಎಂಬುದಕ್ಕೆ ಸಮಾಜಶಾಸ್ತ್ರ ಹೇಳುವ ವಿಶಾಲಾರ್ಥ ಇಲ್ಲ. ಇಲ್ಲಿ ಅದಕ್ಕೆ ಇರುವುದು `ಜಾತಿ’ ಎಂಬ ಸಂಕುಚಿತ ಅರ್ಥ. `ಮತ’ ಎಂಬುದಕ್ಕೆ ಎರಡರ್ಥ. ಒಂದು `ಧರ್ಮ’. ಇನ್ನೊಂದು `ಓಟು’. ನಾವು ಬೇಕಾದ ಅರ್ಥವನ್ನು ಮಾಡಿಕೊಳ್ಳಲು ಸ್ವತಂತ್ರರು!
ಇನ್ನು ಎರಡನೆಯದು ಮಠಾಧೀಶರ ಗುಂಪು: ಇವರಲ್ಲಿ ಎರಡು ರೀತಿಯ ಮಠಗಳಿಗೆ ಸೇರಿದ ಮೂರು ರೀತಿಯ ಅಭಿಪ್ರಾಯದ ಉಪಗುಂಪುಗಳಿವೆ. ಮೊದಲನೆಯ ಉಪಗುಂಪು ವಿರಕ್ತಮಠಗಳಿಗೆ ಸೇರಿದ ಮಠಾದೀಶರದ್ದು. ಈ ಗುಂಪಿನ ಪ್ರಕಾರ `ಲಿಂಗಾಯತ’ ಮತ್ತು ವೀರಶೈವ ಇವೆರಡೂ ಬೇರೆಬೇರೆ. ಏಕೆಂದರೆ ಇವುಗಳ ನಡುವೆ ತಾತ್ವಿಕ ಹೊಂದಾಣಿಕೆ ಇಲ್ಲ. ವೀರಶೈವ ಪೀಠಾಧಿಪತಿಗಳು ವಿಶೇಷವಾಗಿ ಪಂಚಪೀಠಾಧೀಶರು ಬಸವಾದಿ ಪ್ರಮಥರನ್ನು ಧರ್ಮಸ್ಥಾಪಕರಾಗಿ ಒಪ್ಪಿಕೊಳ್ಳುವುದಿಲ್ಲ. ಅವರ ತಾತ್ವಿಕತೆಗೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅವರು ವೈದಿಕರಿಗೆ ಹತ್ತಿರವೇ ಹೊರತು ವಚನಕಾರರಿಗೆ ಅಲ್ಲ ಎಂಬುದು ಇವರ ನಿಲುವು. ಇವೆರಡೂ ಬೇರೆ ಬೇರೆ ಎಂದು ಆರಂಭದಿಂದಲೂ ಹೇಳುತ್ತ ಬಂದಿರುವ ಗದಗದ ತೋಂಟದಾರ್ಯ ಶ್ರೀಗಳು ಅವರನ್ನು ಮನವೊಲಿಸಲು ಹೋದ ವೀರಶೈವ ಮಹಾಸಭಾದ ಶಾಮನೂರು ಶಿವಶಂಕರಪ್ಪ ನೇತೃತ್ವದ ತಂಡಕ್ಕೆ, `ನಮ್ಮದಾರಿ ನಮಗೆ ನಿಮ್ಮದಾರಿ ನಿಮಗೆ’[ix]  ಎಂದು ಹೇಳಿಕಳಿಸಿರುವುದು ಇದಕ್ಕೆ ಸ್ಪಷ್ಟ ನಿದರ್ಶನ. ಎರಡನೇ ಉಪಗುಂಪು ಪಂಚಪೀಠಗಳ ಪೀಠಾಧಿಪತಿಗಳ ಗುಂಪು: ಇವರಲ್ಲಿ ಕೆಲವರ ಪ್ರಕಾರ ಪ್ರಕಾರ ವೀರಶೈವ ಮತ್ತು ಲಿಂಗಾಯತ ಒಂದೇ ಅಲ್ಲ. ವೀರಶೈವವು ಮೂಲ ಮತ್ತು ಪ್ರಧಾನ ಲಿಂಗಾಯತವು ಅದಕ್ಕೆ ಅನುಬಂಧ. ವೀರಶೈವವು ಮೂಲನದಿ, ಲಿಂಗಾಯತ ಅದಕ್ಕೆ ಮಾರ್ಗಮಧ್ಯದಲ್ಲಿ ಬಂದು ಸೇರಿಕೊಂಡ ಉಪನದಿ. ರಂಭಾಪುರಿ ಸ್ವಾಮಿಗಳ ಈ ಬಗೆಗಿನ ಹೇಳಿಕೆಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.  ಇದೇ ಪಂಚಪೀಠದ ಪೀಠಾಧಿಪತಿಗಳ ಇನ್ನೊಂದು ಗುಂಪಿನ ಪ್ರಕಾರ ಇವೆರಡೂ ಒಂದೇ. ಇವರದ್ದು ಮೇಲೆ ಹೇಳಿದ ರಾಜಕಾರಣಿಗಳ ನಿಲುವಿಗೆ ಹತ್ತಿರವಿರುವ ನಿಲುವು.
ಮೂರನೆಯದು ಸಾಹಿತಿಗಳಂಥಹ ಸಾಂಸ್ಕೃತಿಕ ನಾಯಕರರ ಗುಂಪು. ಇವರು ಹೆಚ್ಚಾಗಿ ವ್ಯವಹಾರಿಕ ಲಾಭನಷ್ಟಗಳ ಮೇಲೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳದೇ ತಾತ್ವಿಕ ಅಂಶಗಳ ಮೇಲೆ ಮಾತನಡುವವರು ಎಂದು ನಿರೀಕ್ಷಿಸಲ್ಪಟ್ಟ ಜನ. ಇವರಲ್ಲಿಯೂ ಏಕಾಭಿಪ್ರಾಯವಿದ್ದಂತಿಲ್ಲ. ಎಡ, ಬಲ ಮತ್ತು `ನಡು’ ಅಂದರೆ `ಮಧ್ಯಮಮಾರ್ಗಿಗಳಾಗಿ ಮೂರು ರೀತಿಯ ಅಭಿಪ್ರಾಯ ಇವೆ. ಎಡಕ್ಕೆ ಉದಾಹರಣೆಯಾಗಿ ಚಂಪಾ ಅವರ `ಹಿಂದೂ ಎಂಬುದು ಬಲ. ಲಿಂಗಾಯತ ಎಂಬುದು ಎಡ. `ವೀರಶೈವ’ ಎಂಬುದು ಎಡಬಿಡಂಗಿ’[x] ಎಂಬ ಹೇಳಿಕೆಯನ್ನು ನೋಡಬಹುದು. ಬಲಕ್ಕೆ ಸಂಶೋಧಕ, ಎಂ. ಚಿದಾನಂದಮೂರ್ತಿ ಅವರ `ಹಿಂದೂ, ಶೈವ, ವೀರಶೈವ, ಲಿಂಗಾಯತ ಇವೆಲ್ಲವೂ ಒಂದೇ’[xi] ಎನ್ನುವ ಹೇಳಿಕೆಯನ್ನು ಉದಾಹರಿಸಬಹುದು. ಮಧ್ಯಮಮಾರ್ಗಕ್ಕೆ ಗೋ.ರು.ಚೆನ್ನಬಸಪ್ಪ ಅವರ, `ಲಿಂಗಾಯತ, ವೀರಶೈವ ಅನ್ನುವುದಕ್ಕಿಂತ ಇವೆರಡನ್ನೂ ಸೇರಿಸಿ ಶರಣಧರ್ಮ ಅನ್ನುವುದು ಸೂಕ್ತ’ ಎಂಬ ಹೇಳಿಕೆಯನ್ನು ತೆಗೆದುಕೊಳ್ಳಬಹುದು. ಈ  ವರ್ಗದ ಮೇಲಿನ ಹೇಳಿಕೆಗಳು ಸಾಕಷ್ಟು ಭಿನ್ನತೆಯಿಂದ ಕೂಡಿದ್ದರೂ ಅವು ರಾಜಕೀಯದಿಂದ ಪ್ರೇರೇಪಿತವಾಗಿರದೇ ಅವರ ಒಲವು-ನಿಲುವು, ಅಧ್ಯಯನ-ಸಂಶೋಧನೆ ಇವುಗಳಿಂದ ಪಡೆದ ಅರಿವಿನಭಾಗಗಳಾಗಿ ಮೂಡಿಬಂದಂಥವುಗಳು.
ನಾಲ್ಕನೆಯದ್ದು ಮತ್ತು ಕೊನೆಯದ್ದು ಈ ಧರ್ಮಗಳ ಅನುಯಾಯಿಗಳು ಅಥವಾ ಭಕ್ತರ ಗುಂಪು. ಇದು ಈ ಮೇಲಿನ ಮೂರು ಗುಂಪುಗಳಿಗೆ ಹೋಲಿಸಿದರೆ ಅತ್ಯಂತ ದೊಡ್ಡಪ್ರಮಾಣದಲ್ಲಿ ಅಂದರೆ ನೂರಕ್ಕೆ ತೊಂಬತ್ತಕ್ಕಿಂತಲೂ ಹೆಚ್ಚು ಜನರನ್ನು ಹೊಂದಿರುವ ಗುಂಪು. ಅತ್ಯಂತ ತಮಾಸೆ ಅನ್ನಿಸಬಹುದಾದರೂ ಸತ್ಯದ ಸಂಗತಿ ಏನೆಂದರೆ ಇವರಲ್ಲಿ ತಾವು ಲಿಂಗಾಯತರೋ ಅಥವಾ ವೀರಶೈವರೋ ಅಥವಾ ಎರಡಕ್ಕೂ ಸೇರಿದವರೋ ಎಂಬುದು ನೂರಕ್ಕೆ ತೊಂಬತ್ತೈದು ಜನರಿಗೆ ಗೊತ್ತೇ ಇಲ್ಲ!  ಏಕೆಂದರೆ ಗೊತ್ತಾಗುವಂತಹ ವ್ಯತ್ಯಾಸ ಅಲ್ಲಿಲ್ಲ. ಅದು ಅವರಿಗೆ ಸಮಸ್ಯೆಯೂ ಆದಂತಿಲ್ಲ. ಅದೇನಿದ್ದರೂ ಮಠಾದೀಶರು ಮತ್ತು ರಾಜಕಾರಣಿಗಳ ಸಮಸ್ಯೆಯೇ ಹೊರತು ತಮ್ಮದಲ್ಲ ಎಂದು ಅವರೆಲ್ಲ ಭಾವಿಸಿದಂತಿದೆ. ಅವರೆಲ್ಲ ಸರ್ಕಾರಿ ಲೆಕ್ಕದಲ್ಲಿ `ವೀರಶೈವ ಅಥವಾ ಲಿಂಗಾಯತ’ ಎಂದು ಕರೆಯಲ್ಪಡುವ ಒಂದೇ ಜಾತಿಯ ಮಕ್ಕಳು. ಅದನ್ನು ಗೊತ್ತುಮಾಡಿಕೊಳ್ಳಬೇಕಾದ ಅಗತ್ಯವೂ ಅವರಿಗೆ ಬಂದಂತಿಲ್ಲ. ಅವರು ರಂಭಾಪುರಿ ಸ್ವಾಮಿಗಳ ಅಡ್ಡಪಲ್ಲಕ್ಕಿಯನ್ನು ಹೋರಲೂ ಹೋಗುತ್ತಾರೆ. ಮುರುಘಾಶರಣರ ವೈಚಾರಿಕ ಉಪನ್ಯಾಸ ಆಲಿಸಲೂ ಹೋಗುತ್ತಾರೆ.
ಅಷ್ಟೇ ಏಕೆ ಬಸವಣ್ಣನನ್ನು ತಮ್ಮ ಅರಾಧ್ಯದೈವೆಂದು (ಬಸವಣ್ಣ ದೇವರಾಗಿರದೆ ನಮ್ಮ ನಿಮ್ಮಹಾಗೆ ಮನುಷ್ಯರೇ ಆಗಿದ್ದರಾದರೂ) ಸ್ವೀಕರಿಸಿ ಅವರ ಭಾವಚಿತ್ರಕ್ಕೆ ಶ್ರದ್ಧೆಯಿಂದ ಗೌರವವನ್ನೂ ಸಲ್ಲಿಸುತ್ತಾರೆ. ಬಸವಣ್ಣ ಯಾವುದನ್ನು ಅತ್ಯಂತ ಸ್ಪಷ್ಟವಾಗಿ ವಿರೋಧಿಸಿ ಮಾಡಬೇಡಿ ಎಂದು ಬೋಧನೆ ಮಾಡಿದ್ದಾರೋ ಅಂತಹ ವೈದಿಕ ಕರ್ಮಾಚಾರಣೆಗಳನ್ನೂ ಪುರೋಹಿತರನ್ನು ಕರೆಸಿ ಮಾಡುತ್ತಾರೆ! ಒಂದು ರೀತಿಯಲ್ಲಿ ಅವರು ಅಲ್ಲಿಯೂ ಸಲ್ಲುವವರು. ಇಲ್ಲಿಯೂ ಸಲ್ಲುವವರು; ಹಾಗನ್ನುವುದಕ್ಕಿಂತ ಎಲ್ಲೆಲ್ಲಿಯೂ ಸಲ್ಲುವವರು ಎನ್ನುವುದು ಹೆಚ್ಚುಹೊಂದಿಕೊಳ್ಳುವಂಥದ್ದು. ಇವರು ತಮ್ಮನ್ನು ವೀರಶೈವರೆಂದುಕೊಳ್ಳುವುದು ಅಥವಾ ಲಿಂಗಾಯತರೆಂದುಕೊಳ್ಳುವುದು ಅವರು ಯಾವ ಮಠಕ್ಕೆ ಅಥವಾ ಸ್ವಾಮಿಗಳ ಒಡನಾಡ ಇಟ್ಟುಕೊಂಡಿದ್ದೇವೆ ಎಂಬುದರ ಮೇಲೆ. ಆ ಕಡೆಯವರು, ಈ ಕಡೆಯವರು, ಎರಡೂ ಕಡೆಯವರು, ಯಾವ ಕಡೆಯೂ ಅಲ್ಲದವರು ಎಂದು ಸುಮಾರು ನಾಲ್ಕು ಗುಂಪುಗಳು ಇವರಲ್ಲಿವೆ. ಇವರಲ್ಲಿ  ಸಂದರ್ಭಾನುಸಾರ ಪಕ್ಷಬದಲಾವಣೆ ಮಾಡುವವರಿಗೇನೂ ಕಡಿಮೆ ಇಲ್ಲ. ರಂಭಾಪುರಿ ಶ್ರೀಗಳು ಮಾತೆ ಮಹಾದೇವಿಯವರ ವಿರುದ್ಧ ಆಡಿದರೆನ್ನಲಾದ `ಲೈಂಗಿಕ ಸಂಬಂಧದ ಚಾರಿತ್ರ್ಯವಧೆ’ಯ ಹೇಳಿಕೆಯ ಸಂದರ್ಭದಲ್ಲಿ ಮಾತೆಮಹಾದೇವಿಯವರ ಅಭಿಮಾನಿಗಳಾಗಿ ಈ ಶ್ರೀಗಳ ಭಾವಚಿತ್ರವನ್ನು ನೆಲಕ್ಕೆ ಹಾಕಿ ತುಳಿದು ಬೆಂಕಿಹಚ್ಚಿ ಆಕ್ರೋಶ ಮಾಡುವವರು, ಮತ್ತು ಇದಕ್ಕೆ ಪ್ರತಿಕ್ರಿಯೆಯಾಗಿ ಮಾತೆಮಹಾದೇವಿಯವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಧರಣಿ ಮಾಡುವವರು ವೀರಶೈವರೋ ಲಿಂಗಾಯತರೋ ಅಥವಾ `ಮಿಲಿಟಂಟ್ ಹಿಂದೂ’ಗಳೋಎಂದು ಪತ್ತೆಹಚ್ಚುವುದು ಸಣ್ಣಕೆಲಸವಲ್ಲ.
ಈ ನಾಲ್ಕೂ ಗುಂಪುಗಳ ಅಭಿಪ್ರಾಯಗಳನ್ನೂ ಗಮನದಲ್ಲಿಟ್ಟುಕೊಂಡು ತಾತ್ವಿಕವಾಗಿ ವೀರಶೈವ ಮತ್ತು ಲಿಂಗಾಯತ ಇವುಗಳಲ್ಲಿ ಇರುವ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ಒಂದಿಷ್ಟು ಚರ್ಚಿಸಬಹುದು ಮೊದಲನೆಯದಾಗಿ ವೀರಶೈವ:
ವೀರಶೈವ ಮತ್ತು ಪಂಚಪೀಠಾಧೀಶರು
“ಪಂಚಾಚಾರ್ಯರು ಯುಗಯುಗಗಳಲ್ಲಿಯೂ ಅವತರಿಸಿ ವೀರಶೈವ ಧರ್ಮವನ್ನು ಉದ್ಧಾರ ಮಾಡುವರು ಎಂದು ನಂಬಿಕೆ ವೀರಶೈವರಲ್ಲಿದೆ. ಹಿಂದಿನ ಮೂರು ಯುಗಗಳ ಮಾತನ್ನು ಈಗ ನಾವು ಆಡುವುದಿಲ್ಲ.  ಈ ಯುಗದಲ್ಲಿ ರೇವಣಸಿದ್ಧರು ಕೊಲ್ಲಿಪಾಕಿಯಲ್ಲಿಯೂ ಮರುಳಸಿದ್ಧರು ವಟಕ್ಷೇತ್ರದಲ್ಲಿಯೂ, ಪಂಡಿತಾರಾಧ್ಯರು ಸುಧಾಕುಂಡದಲ್ಲಿಯೂ, ಏಕೋರಾಮರು ದ್ರಾಕ್ಷಾರಾಮದಲ್ಲಿಯೂ, ವಿಶ್ವಾರಾಧ್ಯರು ವಾರಣಾಸಿಯಲ್ಲಿಯೂ ಸ್ಥಾವರಲಿಂಗಗಳಿಂದ ಉದ್ಭವಿಸಿ ಕ್ರಮವಾಗಿ ರಂಭಾಪುರಿ, ಉಜ್ಜಯನಿ, ಶ್ರೀಗಿರಿ, ಹಿಮವತ್ಕೇದಾರ, ಮತ್ತು ಕಾಶಿಗಳಲ್ಲಿ ಮಠಗಳನ್ನು ಸ್ಥಾಪಿಸಿರುವರೆಂದು ತಿಳಿಯುತ್ತೆ” ಇದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೂ ಮೂರು ವರ್ಷಗಳ ಹಿಂದೆ ಪ್ರಕಟಗೊಂಡ `ವಚನಧರ್ಮಸಾರ’ ಕೃತಿಯಲ್ಲಿ ಎಂ.ಆರ್. ಶ್ರೀನಿವಾಸಮೂರ್ತಿ ಅವರು ನೀಡುವ ಮಾಹಿತಿ. ಈ ವಿವರಣೆಯಿಂದ ನಮಗೆ ಮೂರು ಅಂಶಗಳು ಸ್ಪಷ್ಟವಾಗುತ್ತವೆ. 1) ಪಂಚಾಚಾರ್ಯರು ಬೇರೆಬೇರೆ ಯುಗಗಳಲ್ಲಿ ಹುಟ್ಟಿಬರುವರು ಎಂಬ ಒಂದು ನಂಬಿಕೆ ಇದೆ. 2) ನಮ್ಮ ಕಾಲದಲ್ಲಿ ಪಂಚಾಚಾರ್ಯರು ಪ್ರತ್ಯೇಕವಾದ ಐದು ಸ್ಥಾವರ ಲಿಂಗಗಳಿಂದ ಉದ್ಭವಿಸಿದರು. 3) ಇವರು ನಮ್ಮ ದೇಶದ ಬೇರೆಬೇರೆ ದಿಕ್ಕಿನಲ್ಲಿರುವ ಕಾಶಿ, ಕೇದಾರ, ಶ್ರೀಗಿರಿ ಉಜ್ಜಯಿನಿ ಮತ್ತು ರಂಭಾಪುರಿ (ಈಗಿನ ಕರ್ನಾಟಕದ ಬಾಳೇಹೊನ್ನೂರು) ಎಂಬ ಐದು ಸ್ಥಳಗಳಲ್ಲಿ ಮೂಲಮಠಗಳನ್ನು ಸ್ಥಾಪಿಸಿದರು.
ವೀರಶೈವದ ಇತಿಹಾಸದ ಬಗ್ಗೆಯಾಗಲೀ ವರ್ತಮಾನದ ಬಗ್ಗೆಯಾಗಲೀ ಸಾಕಷ್ಟು ಸಂಶೋಧನೆ ಆದಂತಿಲ್ಲ. ಲಭ್ಯವಿರುವ ಅಲ್ಪಸ್ವಲ್ಪ ಲಿಖಿತಾಧಾರಗಳು ಮತ್ತು ಬಾಯಾದಾರಗಳ ಮೇಲೆ ಕೆಲವು ಅಂಶಗಳು ತಿಳಿದುಬರುತ್ತವೆ. ಅವೆಂದರೆ ಸುಮಾರು ಹತ್ತನೆಯ ಶತಮಾನದಿಂದ ಹಿಂದೆ ವೀರಶೈವ ಎಂಬುದು ಇದ್ದಿರಲಿಕ್ಕಿಲ್ಲ. ಅದು ಶೈವವೈಷ್ಣವ ಮತ್ತು ಆನಂತರ ಸೇರಿಕೊಂಡ ಜೈನ ಇವುಗಳ ತಿಕ್ಕಾಟಗಳ ಪ್ರತಿಫಲವಾಗಿಯೂ ಹುಟ್ಟಿದ್ದಕ್ಕಿಂತ ಶೈವರ ದುರಾಚಾರ ಮತ್ತು ವಾಮಾಚಾರಗಳನ್ನು ಖಂಡಿಸಿ ಶಿವನನ್ನು ಶಾಂತಸ್ವರೂಪಿಯಾಗಿ ಕಂಡು ಆರಾಧಿಸಲು ಉಟ್ಟಿರಬೇಕು. ಹೀಗಾಗಿ ಅದು ಮೊಳಕೆ ಒಡೆದದ್ದು ಹತ್ತನೆಯ ಶತಮಾನ ಮತ್ತು ಹನ್ನೆರಡನೆ ಶತಮಾನದ ಮಧ್ಯೆ ಇರಬಹುದು. ಪಂಚಾಚಾರ್ಯರು ಸ್ಥಾಪಿಸಿದರು ಎನ್ನಲಾದ ಈ ಮಠಗಳಲ್ಲಿ ಕೆಲವು ಮಠಗಳ ಬಗ್ಗೆ ಸಾಕಷ್ಟು ಖಚಿತತೆಯ ಕೊರತೆ ಇದೆ. ಕಾಶಿ ಕೇದಾರಗಳಲ್ಲಿ  ಸ್ಥಾಪಿಸಿದರು ಎನ್ನಲಾದ ಮಠಗಳ ಬಗ್ಗೆ ಹೆಚ್ಚು ಅನುಮಾನಗಳಿವೆ. ಯಾವುದೇ ಮಠಸ್ಥಾಪನೆ ಎನ್ನುವುದು ನಡೆದಿದೆ ಎನ್ನುವುದಾದರೆ ಆ ಧರ್ಮವನ್ನು ಅನುಸರಿಸುವ ದೊಡ್ಡಪ್ರಮಾಣದ ಜನರು ಮೊದಲೇ ಅಲ್ಲಿರಬೇಕು. ಅಥವಾ ಆನಂತರವಾದರೂ ಅಲ್ಲಿ ಅವರು ಹೆಚ್ಚಾಗಿರಬೇಕು. ಇದು ಒಂದು ಸಾಮಾನ್ಯ ಲಕ್ಷಣ. ರಂಭಾಪುರಿ, ಉಜ್ಜಯನಿ ಮಠಗಳಗಳ ಪರಿಸರಗಳನ್ನು ನೋಡಿದರೆ ಇದು ಗೊತ್ತಾಗುತ್ತದೆ. ಆದರೆ ಕಾಶಿ ಕೇದಾರಗಳಲ್ಲಿ ಸುತ್ತಾಡಿದ ಅನೇಕರು ಹೇಳುವ ಹಾಗೆ ಅಲ್ಲಿ ಪ್ರತಿದಿನ ದೇವರ ತಲೆಯಮೇಲೆ ನೀರು ಹಾಕಿ ಹೂವು ಇಡಲೂ ವೀರಶೈವರೆಂಬುವರು ಇಲ್ಲವಂತೆ. ಒಂದು ವೇಳೆ ಅಲ್ಲಿ ಮಠಗಳು ಸ್ಥಾಪನೆ ಆಗಿದ್ದೇ ಆದರೆ ಆ ಮಠದ ಅನುಯಾಯಿಗಳೆಲ್ಲ ಏನಾದರು? ಈ ಪ್ರಶ್ನೆಗೆ ಸಮಂಜಸವೆನಿಸುವ ಉತ್ತರಗಳನ್ನು ಬಹುಶಃ ಯಾರೂ ನೀಡಿದಂತಿಲ್ಲ.
ಇನ್ನು ವೀರಶೈವರ ತಾತ್ವಿಕತೆ ಬಗ್ಗೆ ಹೇಳುವುದಾದರೆ ಅಲ್ಲಿ ಸಾಕಷ್ಟು ಗೊಂದಲವಿದ್ದಂತೆ ಕಾಣುತ್ತದೆ.ಇವರಲ್ಲಿ ಬಹಳಷ್ಟು ಪೀಠಾಧಿಪತಿಗಳ ಪ್ರಕಾರ ಪಂಚಾಚಾರ್ಯರು ವೀರಶೈವ ಎಂಬ ಧರ್ಮವನ್ನು ಸ್ಥಾಪಿಸಿದರು ಮತ್ತು ಆನಂತರ ಬಂದ ಬಸವಣ್ಣ ಮತ್ತು ಇತರ ಶರಣರು ಅದನ್ನು ಸುಧಾರಣೆಮಾಡಿದರು. ಬಸವಣ್ಣ ಧರ್ಮಸ್ಥಾಪಕ ಎಂಬುದನ್ನು ಇವರು ಒಪ್ಪಿಕೊಳ್ಳುವುದಿಲ್ಲ. ಬಸವಣ್ಣನಾಗಲೀ ಆತ ತನ್ನ ಸಹಚರರೊಂದಿಗೆ ಮಾಡಿದ ಹನ್ನೆರಡನೆ ಶತಮಾನದ ಚಳವಳಿ ಇವರಿಗೆ ಪಂಚಾಚಾರ್ಯರು ಮಾಡಿದ್ದಕ್ಕಿಂತ ದೊಡ್ಡದು ಎನಿಸುವುದಿಲ್ಲ. ಸಾಣೇಹಳ್ಳಿ ಸ್ವಾಮೀಜಿಯಂತಹ ಕೆಲವರನ್ನು ಬಿಟ್ಟರೆ ವಚನಕಾರರು ಮತ್ತು ವಚನಸಾಹಿತ್ಯದ ಬಗ್ಗೆ ಇವರಲ್ಲಿ ಬಹಳಷ್ಟು ಜನರಿಗೆ ಗೌರವಗಳು ಇದ್ದಂತಿಲ್ಲ. ಒಂದು ನಿದರ್ಶನವನ್ನು ಕೊಡಬಹುದು. ಒಂದೆರಡು ವರ್ಷಗಳ ಹಿಂದೆ ಒಂದು ಹಳ್ಳಿಯಲ್ಲಿ ಈ ಪಂಚಾಚಾರ್ಯ ಪೀಠವೊಂದಕ್ಕೆ ಸಂಬಂಧಿಸಿದ ಶಾಖಾಮಠದ ಸ್ವಾಮಿಗಳೊಬ್ಬರು ಸತತ ಒಂದು ತಿಂಗಳ ಕಾಲ ಪ್ರವಚನ ಮಾಡಿದರು. ನಾನು ಪ್ರತಿದಿನವೂ ಅಲ್ಲಿಗೆ ಹೋಗುತ್ತಿದ್ದೆ. ಇಡೀ ಒಂದು ತಿಂಗಳಕಾಲ ಅಖಂಡವಾಗಿ ನಡೆದ ಅವರ ಈ ಪ್ರವಚನ ಕಾಲದಲ್ಲಿ ಒಂದು ದಿನವಾದರೂ ಒಂದು ಸಲವಾದರೂ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಯಾರ ಹೆಸರೂ ಪ್ರಸ್ತಾಪವಾಗಲಿಲ್ಲ. ಒಂದೇ ಒಂದು ವಚನದ ಸಾಲೂ ಉಲ್ಲೇಖವಾಗಲಿಲ್ಲ. ಇಡೀ ಒಂದು ತಿಂಗಳು ಅವರು ಹೇಳಿದ್ದು ಆ ಪೀಠದ ಮೂಲಸ್ವಾಮಿಗಳು ಹುಟ್ಟಿದ್ದು, ಬೆಳದದ್ದು ಮತ್ತು ಅವರು ಎಂಥೆಂಥ ಪವಾಡಗಳನ್ನು ಮಾಡಿದರು ಎಂಬುದನ್ನು!. ಪ್ರವಚನದ ಅಂತಿಮ ದಿನದಂದು ಮೂಲಮಠದ `ದೊಡ್ಡಸ್ವಾಮಿ’ಗಳನ್ನು ಕರೆಸಿ ಅಡ್ಡಪಲ್ಲಕ್ಕಿ ಉತ್ಸವಮಾಡಿಸುವುದರೊಂದಿಗೆ ಈ ಪ್ರವಚನಕ್ಕೆ ಮಂಗಳಹಾಡಲಾಯಿತು.
ಅದು ಅವರೊಬ್ಬರ ನಿಲುವು ಅನ್ನಿಸುವುದಿಲ್ಲ. ಬಹುತೇಕ ಪಂಚಾಚಾರ್ಯ ಮಠಗಳ ನಿಲುವು ಇಂಥದ್ದೇ ಆದ್ದರಿಂದ ಅದನ್ನು ಇಲ್ಲಿ ಉಲ್ಲೇಖಿಸಬೇಕಾಯಿತು. ಈ ಪಂಚಾಚಾರ್ಯರು ಬೇರೆ ಬೇರೆ ಐದು ಗುಂಪುಗಳಿಗೆ ಸೇರಿರುವುದರಿಂದ ಅಲ್ಲಿಯೂ ಒಂದು ಏಕಸ್ವರೂಪದ ತಾತ್ವಿಕತೆ ಹೊಸೆಯುವುದು ಕಷ್ಟ. ಈ ಐದು ಜನ ಆಚಾರ್ಯರಿರುವ ಒಂದು ಫೋಟೋ ಪಂಚಮಸಾಲಿ ಲಿಂಗಾಯತರೆನ್ನಿಸಿಕೊಳ್ಳುವವರ ಮನೆಯ ದ್ವಾರಬಾಗಿಲಮೇಲೆ ಇರುತ್ತಿದ್ದುದು ಕೆಲವು ವರ್ಷಗಳ ಹಿಂದೆ ಕಾಣುತ್ತಿದ್ದಿತು. ಆದರೆ ಇವರಲ್ಲಿ ಯಾರು ಮಧ್ಯೆಯಾರು ಇರಬೇಕು ಆಕಡೆ ಈಕಡೆ ಕಟ್ಟಕಡೆಗೆ ಯಾರಿರಬೇಕು ಎಂಬುದರ ಬಗ್ಗೆ ಅವರವರಲ್ಲಿಯೇ ಸ್ಪರ್ಧೆ ಇಲ್ಲದಂತೆಯೂ ಕಾಣುವುದಿಲ್ಲ. ಕಷ್ಟಕಾಲದಲ್ಲಿ ಈ ಪಂಚಾಚಾರ್ಯರು ವಚನಕಾರರನ್ನೂ ವಚನಗಳನ್ನೂ ನೆನಪಿಸಿಕೊಂಡು ರಕ್ಷಣೆ ಪಡೆಯುವುದು ನಿಜವಾದರೂ ಆ ಬಗ್ಗೆ ಅವರಿಗೆ ಹೃದಯಾಂತರಾಳದ ಪ್ರೀತಿಗೌರವಗಳು ಇದ್ದಂತಿಲ್ಲ. ಇದ್ದಿದ್ದರೆ ಬಸವಾದಿ ಪ್ರಮಥರು ವಿರೋಧಿಸುವ ಕೆಲವು ಆಚರಣೆಗಳಿಗೆ ಅವರು ಈಗಲೂ ಅಂಟಿಕೊಂಡಿರುತ್ತಿರಲಿಲ್ಲ.
ಚಂಪಾ ಅವರು ಇವರನ್ನು ಉದ್ದೇಶಿಸಿ, `ಅಡಬಿಡಂಗಿಗಳು’ ಎಂದಿರುವ ಮಾತು ನೋಡಲು ಕೇಳಲು ಸ್ವಲ್ಪ ಒರಟು ಅನ್ನಿಸಿದರೂ ತಾತ್ವಿಕವಾಗಿ ಸರಿ ಅನ್ನಿಸುತ್ತದೆ. ಏಕೆಂದರೆ ಇವರು ಅತ್ತ ಪೂರ್ತಿ ವೈದಿಕರಂತೆ ವೈಚಾರಿಕತೆಗೆ ತಿಲಾಂಜಲಿ ಇಟ್ಟ ಆಚರಣಾಪ್ರಿಯ ಸಂಪ್ರದಾಯಶರಣರೂ ಅಲ್ಲ;  ಇತ್ತ ವಚನಕಾರರಂತೆ ಕಂದಾಚಾರಗಳ ಆಚರಣೆಗಳಿಗೆ ತಿಲಾಂಜಲಿ ಇತ್ತ ವಿಚಾರಪ್ರಿಯ ವೈಚಾರಿಕಶರಣರೂ ಅಲ್ಲ. ಹೋಗಲಿ ಇವರಿಬ್ಬರಿಗೂ ಭಿನ್ನವಾದ ತಮ್ಮದೇ ಆದ ಗಟ್ಟಿಯಾದ ಸ್ವತಂತ್ರ ತಾತ್ವಿಕತೆಯೇನಾದರೂ ಇದೆಯೇ? ಅದೂ ಇಲ್ಲ. ಅವರೆಂದರೆ ಅವರು; ಇವರೆಂದರೆ ಇವರು. ಈ ದ್ವಂದ್ವಗಳಿಗೆ ಉದಾಹರಣೆಯನ್ನು ಕೊಡುವುದಾದರೆ ಇವರು ಲಿಂಗಾಯತರಂತೆ `ಇಷ್ಟಲಿಂಗವನ್ನೂ’ ಕಟ್ಟಿಕೊಳ್ಳುವರು. ವೈದಿಕರಂತೆ ಅನೇಕ ಯಜ್ಞಯಾಗಗಳನ್ನೂ ಮಾಡುತ್ತಾರೆ. ಶೈವರಂತೆ ಅನೇಕ ಆಚರಣೆಗಳನ್ನೂ ಇಟ್ಟುಕೊಂಡಿರುವಂಥವರು. ವೈಷ್ಣವರಂತೆ ಗುಡಿಗುಂಡಾರಗಳನ್ನೂ ಸುತ್ತುತ್ತಾರೆ. ಲಿಂಗಾಯತವು ಶವ ಮತ್ತು ಶಿವ ಮಾತ್ರ ಜೀವಂತ ಮನುಷ್ಯನ ಹೆಗಲನ್ನು ಏರಲು ಅರ್ಹವಾದಂತವುಗಳು ಎಂದು ಭಾವಿಸಿದರೆ ಅವೆರಡೂ ಅಲ್ಲದ ಇವರು ಮನುಷ್ಯರ ಮೇಲೆ ಸವಾರಿ ಮಾಡುವ `ಅಡ್ಡಪಲ್ಲಕ್ಕಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳಲು ಇವರು ಮುಜುಗರಪಡುವುದಿಲ್ಲ.
ಲಿಂಗಾಯತ ಹಾಗಂದರೇನು?
`ಶರಣಧರ್ಮ’ `ವಚನಧರ್ಮ’ `ಬಸವಧರ್ಮ’ ಇತ್ಯಾದಿ ಹೆಸರುಗಳಿಂದ ಗುರುತಿಸಲ್ಪಡುವ `ಲಿಂಗಾಯತ’ ಎಂಬುದು ಏನು ಎಂಬುದನ್ನು ಈ ಚರ್ಚೆಯ ಅಂತಿಮಭಾಗವಾಗಿ ಎತ್ತಿಕೊಳ್ಳೋಣ. ಸರ್ಕಾರದ ಲೆಕ್ಕದಲ್ಲಿ ಈಗ `ಹಿಂದೂ’ ಎಂಬುದು ಒಂದು ಧರ್ಮ; `ಲಿಂಗಾಯತ’ ಎಂಬುದು ಒಂದು ಜಾತಿ. ಆದರೆ ತಾತ್ವಿಕವಾಗಿ ಇವೆರಡೂ ತಪ್ಪು. ಹಿಂದೂ ಹೇಗೆ ಏಕೆ ಧರ್ಮವಲ್ಲ ಎಂಬುದನ್ನು ಈಗಾಗಲೇ ಸಾಕಷ್ಟು ವಿವರವಾಗಿ ಮೇಲೆ ವಿವರಿಸಿದೆ. ಲಿಂಗಾಯತ ಜಾತಿ ಅಲ್ಲ ಏಕೆ ಎಂಬುದನ್ನು ನೋಡೋಣ. ಜಾತಿ ಮತ್ತು ಧರ್ಮ ಇವುಗಳಿಗಿರುವ ಮೂಲಭೂತವಾದ ಮತ್ತು ಮಹತ್ವವಾದ ವ್ಯತ್ಯಾಸವೆಂದರೆ ಜಾತಿಯು ಹುಟ್ಟಿನಿಂದ ಬರುತ್ತದೆ. ಧರ್ಮವು ಧರಿಸುವುದರಿಂದ ಅಂದರೆ ಅನುಸರಿಸುವುದರಿಂದ ಬರುತ್ತದೆ.  ಲಿಂಗಾಯತವು ಹುಟ್ಟಿನಿಂದ ಬರುವುದಿಲ್ಲ. ಅಪ್ಪ ಅಮ್ಮ ಲಿಂಗಾಯತ ಎಂಬ ಕಾರಣಕ್ಕೆ ಮಗ ಅಥವಾ ಮಗಳು ಲಿಂಗಾಯತ ಎನ್ನುವುದಾದರೆ ಅದು ಧರ್ಮವಲ್ಲ; ಜಾತಿ ಎಂಬುದು ನಮಗೆ ಸ್ಪಷ್ಟವಾಗಿ ತಿಳಿದಿರಬೇಕು. ಹೀಗೆ ಜಾತಿಯಿಂದ ಲಿಂಗಾಯತರಾದವರ ಮಕ್ಕಳಾದರೂ ಅವರು ಲಿಂಗಾಯತ ಧರ್ಮವನ್ನು ತಾತ್ವಿಕವಾಗಿ ಮತ್ತು ಸಾಂಕೇತಿಕವಾಗಿ ಸ್ವೀಕರಿಸದಿದ್ದರೆ ಲಿಂಗಾಯತರೆನಿಸಿಕೊಳ್ಳಲು ಅನರ್ಹರು.
ಈ ಧರ್ಮದ ತಾತ್ವಿಕತೆಯ ಪ್ರಕಾರ  ನಮ್ಮ ಸಮಾಜದ ಯಾವುದೇ ಜಾತಿಯ ಯಾವುದೇ ವರ್ಗದ ಒಬ್ಬ ವ್ಯಕ್ತಿ ತಾನು ಇಷ್ಟಪಟ್ಟರೆ ಈ ಧರ್ಮದ ತಾತ್ವಿಕತೆಯನ್ನು ಒಪ್ಪಿಕೊಂಡು ತೀರಾ ಸಾಂಕೇತಿಕವಾದ ಕೆಲವು ಆಚರಣೆಗಳನ್ನು ಅಳವಡಿಸಿಕೊಂಡು ಎಷ್ಟೊತ್ತಿನಲ್ಲಾದರೂ ಲಿಂಗಾಯತ ಆಗಿಬಿಡಬಹುದು. ಹೀಗೆ ಒಪ್ಪಿಕೊಂಡು ಸ್ವೀಕರಿಸಿ ಅನುಸರಿಸುವವರು ಮಾತ್ರ ನಿಜವಾಗಿ ಲಿಂಗಾಯತರು ಅವರನ್ನು `ನೀತಿಲಿಂಗಾಯತರು’ ಅಥವಾ `ಜ್ಯೋತಿಲಿಂಗಾಯತರು’ ಎಂದು ಕರೆಯಬಹುದು. ಕೇವಲ ಅಪ್ಪ ಅಮ್ಮ ಲಿಂಗಾಯತರು ಎನ್ನುವ ಕಾರಣಕ್ಕೆ ತಾವು ಲಿಂಗಾಯತರು ಎನ್ನುವವರು ನಿಜವಾಗಿಯೂ ಲಿಂಗಾಯತರಲ್ಲ. ಅವರು ಕೇವಲ `ಜಾತಿಲಿಂಗಾಯತರು.’ `ಲಿಂಗಾಯತ’ ಎಂಬುವರಲ್ಲಿ ಸಾಧರು, ಪಂಚಮಸಾಲಿಗಳು, ನೊಳಂಬರು, ಬಣಜಿಗರು ಇತ್ಯಾದಿ ಒಳಪಂಗಡಗಳು ಇವೆ ಎಂದು ಭಾವಿಸಲಾಗುತ್ತಿದ್ದರೂ ನಿಜವಾಗಿ ಇರುವುದು ಈ `ಜ್ಯೋತಿಲಿಂಗಾಯತರು’ ಮತ್ತು `ಜಾತಿಲಿಂಗಾಯತರು’ ಎಂಬ ಎರಡು ಪಂಗಡಗಳು ಮಾತ್ರ.  ಹನ್ನೆರಡನೇ ಶತಮಾನದ ವಿದ್ಯಮಾನವನ್ನು ಒಮ್ಮೆ ನೆನಪಿಗೆ ತಂದುಕೊಂಡರೆ ಈ ಅಂಶ ಬಹಳಷ್ಟು ಸುಲಭವಾಗಿ ಅರ್ಥವಾಗುತ್ತದೆ. ಅಲ್ಲಿ ಲಿಂಗಾಯತರೆಂದು ಕರೆಯಲ್ಪಟ್ಟವರು ಯಾರೂ ಹುಟ್ಟಿನಿಂದ ಲಿಂಗಾಯತರಾಗಿರಲಿಲ್ಲ. ಸಮಾಜದ ವಿವಿಧ ಜಾತಿಗಳಿಂದ ಬಂದ ಜನರೆಲ್ಲ ಈ ಲಿಂಗಾಯತದಲ್ಲಿ ಇದ್ದರು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಹನ್ನೆರಡನೇ ಶತಮಾನದಲ್ಲಿ ಜಾತಿಬಿಟ್ಟವರು ಮತ್ತು ಜಾತಿಕೆಟ್ಟವರೇ ಒಟ್ಟಾಗಿ ಲಿಂಗಾಯತರಾದದ್ದು. ಹೀಗಾಗಿ ಲಿಂಗಾಯತ ಎಂಬುದು ಮೂಲತಃ ಜಾತಿಬಿಟ್ಟವರು ಮತ್ತು ಜಾತಿಕೆಟ್ಟವರು ಕೂಡಿ ಹೊಸದಾಗಿ ಕಟ್ಟಿದ ಒಂದು ಪಂಥ ಅಥವಾ ಧರ್ಮ.
ಲಿಂಗಾಯತ ಎಂಬ ಸಮಾಸಪದವು ಲಿಂಗವನ್ನು ಆಯತಮಾಡಿಕೊಂಡವನು/ಳು ಎಂಬ ಎರಡು ಪದಗಳಿಂದಾದುದು. ಲಿಂಗವನ್ನು ಆಯತಮಾಡಿಕೊಳ್ಳುವುದು ಎಂದರೆ ಲಿಂಗವನ್ನು ಧರಿಸುವುದು ಎಂದರ್ಥ. ಇದನ್ನು ಅತ್ಯಂತ ಸರಳವಾಗಿ `ಅಂಗದ ಮೇಲೆ ಲಿಂಗವಿದ್ದವನು ಲಿಂಗಾಯತ’ ಎಂದು ಶರಣಧರ್ಮದಲ್ಲಿ ಹೇಳಲಾಗುತ್ತದೆ. ಶೈವರು ಶಿವನ ಆರಾಧಕರಾಧರೆ ವೀರಶೈವರು ಈಶ್ವರನ (ಸ್ಥಾವರಲಿಂಗ) ಆರಾಧಕರಾಧರೆ ಲಿಂಗಾಯತರು `ಇಷ್ಟಲಿಂಗಾರಧಕರು’. ಇಷ್ಟಲಿಂಗವೆಂಬುದು ಗುರುವಿನಿಂದ ಪಡೆದ, ಶಿಲೆಯಿಂದ ಮಾಡಲ್ಪಟ್ಟ ಒಂದು ಅಂಡಾಕಾರದ ರಚನೆಯಾಗಿದ್ದು ಅದನ್ನು ಲಿಂಗಾಯತನಾದವನು ತನ್ನ ದೇಹದ ಮೇಲೆ ಸದಾ ಧರಿಸಿರಬೇಕು ಎಂಬುದು ಆ ಧರ್ಮದ ಒಂದು ಸಂಪ್ರದಾಯ. ಆದರೆ ಇದು ತೀರಾ ಸಾಂಕೇತಿಕ. ಲಿಂಗಾಯತವು ಬಹುಮುಖ್ಯವಾಗಿ ಆಚಾರಕ್ಕಿಂತ ವಿಚಾರಕ್ಕೆ ಆದ್ಯತೆಯನ್ನು ನೀಡುವ ಧರ್ಮ. ಲಿಂಗಾಯತಧರ್ಮದ ಮೂಲಪುರುಷ ಧರ್ಮಗ್ರಂಥ ತಾತ್ವಿಕತೆ ಇವುಗಳ ಬಗ್ಗೆ ಹೇಳುವುದಾದರೆ ಇಲ್ಲಿ ಎಳ್ಳಷ್ಟೂ ಗೊಂದಲವಿಲ್ಲ ಎಂದು ಹೇಳಲಾಗದು. ಆದರೆ `ಹಿಂದೂ’ ಎಂಬಲ್ಲಿ ಇರುವಷ್ಟು ಗೋಜಲುಗೋಜಲಾಗಿ ಇಲ್ಲಿ ಇಲ್ಲ. ಇರುವ ಅಲ್ಪಸ್ವಲ್ಪ ಗೊಂದಲಗಳು ಅದರ ತಾತ್ವಿಕತೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಅಡ್ಡಿಪಡಿಸುವುದಿಲ್ಲ. ಹಾಗೆಯೇ ಆ ಧರ್ಮವನ್ನು ಅನುಸರಿಸುವವರಿಗೆ ಗೊಂದಲವುಂಟುಮಾಡುವುದು ಕಡಿಮೆ. ಕರ್ತೃ, ಕರ್ಮ, ಕ್ರಿಯೆ, ಕಾಲ ಈ ವಿಷಯಗಳಲ್ಲಿ ಹೆಚ್ಚು ಸ್ಪಷ್ಟತೆ ಇರುವುದು ಇದಕ್ಕೆ ಕಾರಣ.
ಈ ಧರ್ಮದ ಮೂಲಪುರುಷರು ಯಾರು? ಎಂಬ ಪ್ರಶ್ನೆಗೆ ಬಸವಣ್ಣ ಎಂದು ಹೇಳುವುದು ವಾಡಿಕೆಯಾದರೂ ಅದರ ಜೊತೆಗೆ ಬೇರೆ ಅಭಿಪ್ರಾಯವೂ ಇವೆ. ಈಗಾಗಲೇ ಈ ಲೇಖನದಲ್ಲಿ ಉಲ್ಲೇಖವಾದ ಎಂ.ಆರ್.ಶ್ರೀನಿವಾಸಮೂರ್ತಿ ಅವರು ಬಸವಣ್ಣನಿಗಿಂತ `ಅಲ್ಲಮಪ್ರಭು’ ಈ ಧರ್ಮದ ಮೂಲಪುರುಷ ಎನ್ನುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಒಬ್ಬ ಮನುಷ್ಯನಿಂದಲೇ ಅದು ಸೃಷ್ಟಿಯಾಯಿತು ಎಂದು ಅದನ್ನು ಯಾರದಾದರೂ ತಲೆಗೆ ಅಥವಾ ಕುತ್ತಿಗೆಗೆ ಕಟ್ಟುವ ಅವಶ್ಯಕತೆ ಏನಿದೆ? ಬಸವಾದಿ ಪ್ರಮಥರಿಂದ ಪ್ರತಿಪಾದಿಸಲ್ಪಟ್ಟಿತು ಎಂದು ಒಪ್ಪಿಕೊಳ್ಳುವಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಎರಡನೆಯದು ಧರ್ಮಗ್ರಂಥದ ವಿಷಯ. ಲಿಂಗಾಯತ ಧರ್ಮಕ್ಕೆ `ವಚನಧರ್ಮ’ ಎಂದೂ ಹೆಸರಿರುವುದು ಈ ಧರ್ಮವು ವಚನಸಾಹಿತ್ಯವನ್ನು ತನ್ನ ಧರ್ಮಸಾಹಿತ್ಯವಾಗಿ ಹೊಂದಿದೆ ಎಂಬುದನ್ನು ಪ್ರತಿಪಾದಿಸುತ್ತದೆ. ಲಿಂಗಾಯತಕ್ಕೆ ವಚನಸಾಹಿತ್ಯವೇ `ಧರ್ಮಗ್ರಂಥ. ವಚನ ಸಾಹಿತ್ಯ ಬಿಡಿಬಿಡಿಯಾದ ರಚನೆಗಳಿಂದ ಕೂಡಿದ ವಿಪುಲಸಾಹಿತ್ಯವಾಗಿದ್ದರೂ ನಮ್ಮ ಅಂದಾಜಿಗೆ ಸಿಗದಷ್ಟು ದೊಡ್ಡದಾಗಿಯೇನೂ ಇಲ್ಲ. ಈಗ ನಮಗೆ ಸಿಕ್ಕಿರುವ ಎಲ್ಲ ವಚನಕಾರರ ಎಲ್ಲ ವಚನಗಳನ್ನು ಕೂಡಿಸಿದರೂ ಅವುಗಳ ಸಂಖ್ಯೆ ಸುಮಾರು ಇಪ್ಪತ್ತು ಸಾವಿರ ಮಾತ್ರ. ಎಲ್ಲ ವಚನಗಳನ್ನೂ ಇಷ್ಟಪಟ್ಟರೆ ವ್ಯಕ್ತಿಯೊಬ್ಬನು ಸ್ವತಃ ಓದಿಕೊಂಡು ಅದರಲ್ಲಿ ಏನಿದೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಿರುವ ಪರಿಮಿತಿ ಅದಕ್ಕೆ ಇದೆ. ವಚನಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆಯವರು ಬರೆದ ಬಿಡಿರಚನೆಗಳಾಗಿರುವುದರಿಂದ ಅವುಗಳಲ್ಲಿ ಒಂದು ಗ್ರಂಥದಲ್ಲಿರುವ ಏಕಸೂತ್ರತೆ ಇಲ್ಲ ನಿಜ. ಆದರೆ ಎಲ್ಲ ವಚನಗಳನ್ನು ಓದಿದರೆ ಅವುಗಳ ನಡುವೆ ಬಹುದೊಡ್ಡ ವಿರೋಧಾಭಾಸವೆನಿಸುವ ಅಂಶಗಳು ಇಲ್ಲವೆನ್ನುವಷ್ಟು ಕಡಿಮೆ. ಅವುಗಳು, ದೇವರು, ಧರ್ಮ, ಆತ್ಮ ಪರಮಾತ್ಮ, ಸ್ವಾನುಭವ, ಮನುಷ್ಯನ ನಡೆನುಡಿ, ನಾವು ಪಾಲಿಸಬೇಕಾದ ಜೀವನ ವಿಧಾನ ಇಂತಹುಗಳ ಬಗ್ಗೆ ನೀಡಿರುವ ಸಂದೇಶಗಳ ನಡುವೆ ಹೇಳಿಕೊಳ್ಳುವಂಥಹ ವಿರೋಧಗಳಿಲ್ಲ. ಅಲ್ಪಸ್ವಲ್ಪವಿದ್ದರೆ ಅವು ಬೇರೆಬೇರೆಯವರಿಂದ ರಚನೆಯಾಗಿರುವುದರಿಂದ ಉಂಟಾದ ಮಾನವ ಸಹಜ ವ್ಯತ್ಯಾಸಗಳು ಅಷ್ಟೆ. ಕಾಲದ ದೃಷ್ಟಿಯಿಂದಲೂ ಇದು ಉಳಿದೆಲ್ಲ ಧರ್ಮಗಳಿಗಿಂತ ಹೆಚ್ಚು ಸ್ಪಷ್ಟವಿದೆ ಅನ್ನಿಸುತ್ತದೆ. ಇದು ಹನ್ನೆರಡನೇ ಶತಮಾನದ ಕಲ್ಯಾಣಕ್ರಾಂತ್ರಿಯ ಆಸುಪಾಸಿನ ಕಾಲವನ್ನು ಉಗಮಕಾಲವಾಗಿ ಸ್ವೀಕರಿಸುತ್ತದೆ.
ಲಿಂಗಾಯತ ಧರ್ಮದ ತಾತ್ವಿಕತೆ
ಲಿಂಗಾಯತ ಧರ್ಮದ ತಾತ್ವಿಕತೆ ಏನು ಎಂಬುದನ್ನು ವಚನಸಾಹಿತ್ಯದಿಂದ ಕ್ರೋಢೀಕರಿಸಿ ಘನೀಕರಿಸಿ ಹೀಗೆ ಸಂಕ್ಷೇಪಿಸಿ ಹೇಳಬಹುದು. ”ದೇವರು ಎಂಬುವನು ದೇವಾಲಯದಲ್ಲಿರುವ ಮೂರ್ತಿಗಳಲ್ಲಿ ಇಲ್ಲ. ಅವನು ನಮ್ಮ ಹೃದಯದಲ್ಲಿಯೇ ಇರುತ್ತಾನೆ. ನಮ್ಮ ದೇಹವೇ ದೇವಾಲಯ. ಅದನ್ನು ನಾವು ಶುದ್ಧ ಮತ್ತು ಸ್ವಚ್ಛವಾಗಿಟ್ಟುಕೊಳ್ಳಬೇಕು. ವೇದ, ಶಾಸ್ತ್ರ, ಆಗಮ ಇಂತಹುಗಳ ಬೆನ್ನುಹತ್ತಿ ನಾವು ಸಮಯವನ್ನು ಹಾಳುಮಾಡಿಕೊಳ್ಳುವುದು ವ್ಯರ್ಥ. ದೇವರನ್ನು ಕಾಣಲು ನಾವು ಧರ್ಮಸ್ಥಳಗಳನ್ನೂ ತೀರ್ಥಕ್ಷೇತ್ರಗಳನ್ನೂ ಅಲೆಯಬೇಕಾಗಿಲ್ಲ. ದೇವರು ಒಲಿಯುವುದು ನಮ್ಮ ನಿಷ್ಕಲ್ಮಶವಾದ ಭಕ್ತಿಗೇ ಹೊರತು ಆಡಂಭರದ ತೋರಿಕೆಯ ಭಕ್ತಿಗಲ್ಲ. ಈ ಭೂಮಿ ನಗಣ್ಯವಲ್ಲ. ಇದು ಭಗವಂತನ ಕಾರ್ಯಕ್ಷೇತ್ರ (ಕರ್ತಾರನ ಕಮ್ಮಟ). ಸ್ವರ್ಗ, ನರಕ ಎಲ್ಲವೂ ಈ ಭೂಮಿಯಲ್ಲಿ ನಾವು ಸೃಷ್ಟಿಸಿಕೊಳ್ಳುವ ಸ್ಥಿತಿಗಳಾಗಿವೆ. ಇಲ್ಲಿನ ಮನುಷ್ಯನ ಬದುಕು ಕ್ಷುಲ್ಲಕವಲ್ಲ. ಅದು ಬೆಲೆಯುಳ್ಳಂಥದ್ದು. ಹಾಗಾಗಿ ನಾವು ಭಗವಂತ ಕರುಣಿಸಿದ ಈ ಬದುಕನ್ನು ಹಾಳುಗೆಡವಿಕೊಳ್ಳಬಾರದು. ಪೂಜೆಗಿಂತ ಕಾಯಕ ಶ್ರೇಷ್ಠ.(ಕಾಯಕವೇ ಕೈಲಾಸ). ಒಬ್ಬ ಮನುಷ್ಯ ದಿನಕ್ಕೆ ಒಂದುಗಂಟೆ ಶ್ರದ್ಧೆಯಿಂದ ಪೂಜೆಮಾಡಿ ಉಳಿದ ಗಂಟೆಗಳು ಬೇರೆಯವರಿಗೆ ಮೋಸವಂಚನೆ ಮಾಡುವುದರಲ್ಲಿ ಅರ್ಥವಿಲ್ಲ. ಅದರ ಬದಲು ತಾವು ಮಾಡಬೇಕಾದ ಕೆಲಸವನ್ನೇ ದೇವರಿಗೆ ಮಾಡುತ್ತಿರುವ ಪೂಜೆಯೆಂದು ತಿಳಿದು ಅತ್ಯಂತ ಶ್ರದ್ಧೆಯಿಂದಲೂ ಗೌರವದಿಂದಲೂ ಮಾಡಬೇಕು. ಗುರುಲಿಂಗಜಂಗಮಗಳಿಗೆ ಗೌರವ ತೋರಬೇಕು. ಆದರೆ ಕಾಯಕದಲ್ಲಿ ನಿರತನಾಗಿದ್ದಾಗ ಇವುಗಳಿಗೆ ಗೌರವಶ್ರದ್ಧೆ ತೋರಲಿಕ್ಕಾಗಿ ಕಾಯಕವನ್ನು ಬಿಟ್ಟುಬರಬಾರದು.”
          “ನಮ್ಮ ಅಸಹಾಯಕ ಸ್ಥಿತಿಯನ್ನು ಹೊರತುಪಡಿಸಿ ಉಳಿದ ಎಲ್ಲ ಸಂದರ್ಭಗಳಲ್ಲಿಯೂ ನಮ್ಮ ಪರಿಶ್ರಮಕ್ಕೆ ಪ್ರತಿಫಲವಾಗಿ ಬರುವ ಸಂಪತ್ತನ್ನು ಮಾತ್ರ ನಾವು ಸ್ವೀಕರಿಸಬೇಕು. ದುಡಿದೇ ಉಣ್ಣಬೇಕು. ದುಡಿಯದೇ ಊಟಮಾಡುವುದು ಕಳ್ಳತನಕ್ಕೆ ಸಮಾನ. ಕಳ್ಳತನ ಮಾಡಬಾರದು, ಕೊಲೆಮಾಡಬಾರದು. ತನ್ನನ್ನು ತಾನು ಹೊಗಳಿಕೊಳ್ಳುವುದು, ಬೇರೆಯವರನ್ನು ನಿಂದಿಸುವುದು, ಸುಳ್ಳು ಹೇಳುವುದು, ಮೋಸವಂಚನೆ ಮಾಡುವುದು ತಪ್ಪು. ಕೋಪಮಾಡಿಕೊಳ್ಳದೆ ಶಾಂತರೀತಿಯಿಂದ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಬೇಕು. ನಡೆನುಡಿಗಳಲ್ಲಿ ಹೊಂದಾಣಿಕೆ ಇರಬೇಕು. ಗರ್ವಪಡಬಾರದು, ತಾನು ಕಷ್ಟಪಟ್ಟು ಪರಿಶ್ರಮದಿಂದ ಗಳಿಸಿದ ಸಂಪತ್ತಾದರೂ ಅದನ್ನು ಸಂಪೂರ್ಣವಾಗಿ ತಾನೊಬ್ಬನೇ ತಿನ್ನಬಾರದು. ಅದರಲ್ಲಿ ಒಂದಿಷ್ಟು ಭಾಗವನ್ನಾದರೂ ಸಮಾಜಕ್ಕೆ ದಾಸೋಹದ ರೂಪದಲ್ಲಿ ಮತ್ತೆ ಹಂಚಬೇಕು. ಕಸಿದುತಿನ್ನುವುದು ಬದುಕಲ್ಲ. ಕೊಟ್ಟುತಿನ್ನುವುದು ಬದುಕು. ನಾವು ಮನುಷ್ಯನ ಹುಟ್ಟಿನ ಆಧಾರದ ಮೇಲೆ ಮನುಷ್ಯರನ್ನು ವಿಭಾಗಿಸುವ ಜಾತಿವ್ಯವಸ್ಥೆಯನ್ನು ನಿರಾಕರಿಸಬೇಕು. ಮನುಷ್ಯರಲ್ಲಿ ಭಕ್ತರು ಮತ್ತು ಭವಿಗಳು ಎಂಬ ಎರಡೇ ಜಾತಿಗಳು. ಎಲ್ಲರೂ ಭಕ್ತರಾಗಬೇಕು.(ಭವಿಗಳು ಎಂದರೆ ದೇವರ ಕೃಪೆಗೆ ಪಾತ್ರರಾಗದವರು). ಮಹಿಳೆ ಮತ್ತು ಪುರುಷರ ನಡುವೆ ಗಂಡು ಮತ್ತು ಹೆಣ್ಣು ಎಂಬ ಕಾರಣಕ್ಕೆ ಬೇಧಭಾವ ಮಾಡಬಾರದು (ಮೊಲೆಮುಡಿ ಬಂದಡೆ ಹೆಣ್ಣೆಂಬರು ಗಡ್ಡಮೀಸೆ ಬಂದಡೆ ಗಂಡೆಂಬರು. ನಡುವೆ ಸುಳಿವ ಆತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲ). ನಮ್ಮ ಬದುಕನ್ನು ಅತ್ಯಂತ ಸರಳವಾಗಿಯೂ ನಿರ್ಮಲವಾಗಿಯೂ ಇಟ್ಟುಕೊಂಡು ಭಗವಂತನ ಮೇಲೆ ಭಾರಹಾಕಿ ಬರುವ ಎಡರುತೊಡರುಗಳನ್ನು ಧೈರ್ಯದಿಂದ ಎದುರಿಸಬೇಕಲ್ಲದೆ ಅವುಗಳಿಗೆ ಹೆದರಬಾರದು. ನಾಳೆ ಬಪ್ಪುದು ಇಂದೇ ಬರಲಿ; ಇಂದು ಬಪ್ಪುದು ಈಗಲೇ ಬರಲಿ ಇದಕಾರಂಜುವರು ಇದಕಾರಳುಕುವರು ಎಂಬ ಧೈರ್ಯ ನಮ್ಮದಾಗಿರಬೇಕು. ತನ್ನಷ್ಟಕ್ಕೆ ತಾನು ಬರುವ ಮರಣಕ್ಕೆ ಎಂದೂ ಹೆದರಬಾರದು. ಮರಣವೆಂಬುದು ನಮಗೆ ಮಹಾನವಮಿ ಎಂದು ತಿಳಿದು ಬದುಕು ತೀರಿದಾಗ ಮರಣವನ್ನು ಸಂತೋಷದಿಂದ ಅಪ್ಪಿಕೊಂಡು ಬದುಕನ್ನು ಮುಗಿಸಬೇಕು.”
ಹೀಗೆ `ಲಿಂಗಾಯತ’ ಎನ್ನುವುದು ಆ ಕಾಲಕ್ಕೆ ಸಾಕಷ್ಟು `ವೈಚಾರಿಕ’ ಎನ್ನುವಂತಹ ನಿಲುವನ್ನು ಪ್ರಕಟಿಸಿತು. ಇದು ಅನೇಕ ಕಂದಾಚಾರ, ಅನಿಷ್ಠಪದ್ಧತಿಗಳನ್ನು ವಿರೋಧಿಸಿದ ಧರ್ಮ. ಪೂಜೆಯೂ ಒಂದು ಕಾಯಕವಾಗಿರುವುದನ್ನು ತಿರುವುಮುರುವು ಮಾಡಿ ಕಾಯಕವನ್ನೇ ಪೂಜೆಯ ಸ್ಥಾನಕ್ಕೆ ಏರಿಸಿದ ಧರ್ಮ. ಕಾರ್ಲಮಾರ್ಕ್ಸ್ `ಶ್ರಮಗೌರವ” (Dignity of Labour) ತತ್ವವನ್ನು ಪ್ರತಿಪಾದನೆ ಮಾಡುವ ಎಷ್ಟೋ ನೂರು ವರ್ಷಗಳ ಹಿಂದೆಯೇ ಅದಕ್ಕೂ ಮಿಗಿಲಾದ `ಶ್ರಮದೈವತ್ವ’ (Divinity of Labour) ತತ್ವವನ್ನು ಪ್ರತಿಪಾದಿಸಿದ ಕ್ರಾಂತಿಕಾರಿಧರ್ಮ. ಅನುಭವಮಂಟಪದಂತಹ ಸಾಮೂಹಿಕ ಅಭಿಪ್ರಾಯರೂಪಿ ಕೇಂದ್ರವನ್ನು ಆರಂಭಿಸಿದ್ದು ಅದರ ಒಂದು ಹೆಗ್ಗಳಿಕೆ. ಇದು ವಿಶೇಷವಾಗಿ ಕಲಬುರ್ಗಿಯವರು ಅಭಿಪ್ರಾಯಪಡುವಂತೆ ಕನ್ನಡಿಗರು ಸ್ಥಾಪಿಸಿದ ಮೊದಲ ಮತ್ತು ಏಕೈಕಧರ್ಮ. ಇದನ್ನು ಸ್ಥಾಪಿಸಿದ “ವಚನಕಾರರು ಸಂಸ್ಕೃತದ ಆಚಾರ್ಯರಲ್ಲ; ಅಚ್ಚಕನ್ನಡದ ಬೇಸಾಯಗಾರರು.”[xii] ಈ ವಚನಕಾರರು ಆ ಕಾಲಕ್ಕೆ ಅತ್ಯಂತ ಪ್ರಗತಿದಾಯಕ ಎನ್ನುವಂತಹ ಅಂತರ್ಜಾತಿ ವಿವಾಹಗಳಂತಹ ಕ್ರಾಂತಿಕಾರಕ ಕಾರ್ಯಗಳಿಗೆ ಕೈಹಾಕಿದರು. ಆ ಕಾಲಕ್ಕೆ ಅದು ಒಂದಿಷ್ಟು ಅವಸರದ ನಿರ್ಧಾರವಾತು ಎಂಬಂತೆ ಅದು ಕಲ್ಯಾಣಕ್ರಾಂತಿಯಂತಹ ನಡೆಯಬಾರದ ಘಟನೆಗೆ ದಾರಿಯಾಯಿತಾದರೂ ಅದು ಹಾಕಿದ ಕ್ರಾಂತಿಯ ಬೀಜ ಹುಸಿಯಾಗಲಿಲ್ಲ. ಮುಂದೆ ಕನ್ನಡದ ನೆಲದಲ್ಲಿ ನಡೆದ ಅನೇಕ ಸಮಾಜೋಧಾರ್ಮಿಕ ಚಳವಳಿಗಳಿಗೆ ಅದು ಸ್ಪೂರ್ತಿಯಾಗಿ ನಿಂತಿತು.
ಈ ವಚನಧರ್ಮದ ಭಾಷೆ ಕನ್ನಡ. ಬದುಕು ಕನ್ನಡ. ಕಾರ್ಯಕ್ಷೇತ್ರ ಕನ್ನಡ ನಾಡು. ಒಂದರ್ಥದಲ್ಲಿ ಅದು ಕನ್ನಡಿಗರ ಜೀವನಾಡಿ. ವಚನಸಾಹಿತ್ಯ ಇಡೀ ಪ್ರಪಂಚದಲ್ಲಿ ಒಂದು ವಿಶಿಷ್ಟ ಬಗೆಯ ಸಾಹಿತ್ಯ ಪ್ರಕಾರವಾಗಿ ಕನ್ನಡದಲ್ಲಿ ಗುರುತಿಸಿಕೊಂಡಿದೆ. ಭಾವಗೀತೆ, ನಾಟಕ, ಮಹಾಕಾವ್ಯ, ಕಾದಂಬರಿ ಹೀಗೆ ಹತ್ತು ಹಲವು ಪ್ರಕಾರಗಳನ್ನು ನಾವು ಬೇರೆ ದೇಶಗಳಿಂದ ಆಮದು ಮಾಡಿಕೊಂಡಿದ್ದೇವೆ. ಅವೆಲ್ಲ ಋಣವನ್ನು ಈ ಸಾಹಿತ್ಯ ಪ್ರಕಾರವೊಂದರಿಂದ ತೀರಿಸುವ ಸಾಮರ್ಥ ಅದಕ್ಕಿದೆ. ಅದುವರೆಗೆ ಸೈನಿಕರ ಸರ್ಪಕಾವಲಿನಲ್ಲಿ ಸುತ್ತುವರೆಯಲ್ಪಟ್ಟ ವೈಭವದ ಅರಮನೆಯ ಆಸ್ಥಾನದಲ್ಲಿ ಬಂಧಿಯಾಗಿ ನರಳುತ್ತಿದ್ದ ಕನ್ನಡ ಸಾಹಿತ್ಯವನ್ನು ಆ ಬಂಧನದಿಮದ ಬಿಡುಗಡೆಗೊಳಿಸಿ ವಚನರೂಪದಲ್ಲಿ ಅದು ಜನಸಾಮಾನ್ಯರು ವಾಸಿಸುವ ಬೀದಿಬೀದಿಗಳಲ್ಲಿ ಹರಿಯುವಂತೆ ಮಾಡಿದ ಕೀರ್ತಿ ವಚನಕಾರರಿಗೆ ಸಲ್ಲಬೇಕು. ವಚನಸಾಹಿತ್ಯ ಶ್ರೀಸಾಮಾನ್ಯರಿಂದ ಶ್ರೀಸಾಮಾನ್ಯರಿಗಾಗಿ ಶ್ರೀಸಾಮಾನ್ಯರೇ ರಚಿಸಿದ ಮೊದಲ `ಪ್ರಜಾಸಾಹಿತ್ಯ’ ಪ್ರಕಾರ. ಏಕೆಂದರೆ ಅದಕ್ಕೂ ಮೊದಲಿದ್ದದ್ದೆಲ್ಲ `ಪ್ರಭುಸಾಹಿತ್ಯ’  ಹಾಗಾಗಿ ಜನಸಾಮಾನ್ಯರ ನೋವು-ನಲಿವು ನಿತ್ಯಸಂಕಟಗಳು ಹೆಚ್ಚು ಪ್ರಕಟವಾಗಿ ಸಾಂತ್ವಾನಸಿಗುವ ಆಶ್ರಯತಾಣವಾಗಿ ಮಾರ್ಗದರ್ಶನ ಕೇಂದ್ರವಾಗಿ ವಚನಸಾಹಿತ್ಯವಿದೆ. ಹೀಗಾಗಿ `ಜನಕೆ ನೆರವು ನೀಡದಿರುವ ಧರುಮವೇತಕೆ?’ ಎಂಬ ಪ್ರಶ್ನೆ ಇಲ್ಲಿ ಎದುರಾಗುವುದಿಲ್ಲ.
ಲಿಂಗಾಯತ ಧರ್ಮ ಕೂಡ ಉಳಿದ ಧರ್ಮಗಳ ಹಾಗೆ ಕೆಲವು ಆಚರಣೆಗಳ ಬಗ್ಗೆ ಹೇಳುತ್ತದೆ. ದೇಹದ ಮೇಲೆ ಇಷ್ಟಲಿಂಗವನ್ನು ಧರಿಸುವುದು, ಷಟಸ್ಥಲಗಳನ್ನು ಅನುಸರಿಸುವುದು, ಪಂಚಾಚಾರಗಳು, ಅಷ್ಟಾವರಣಗಳು, ಸಪ್ತಶೀಲಗಳು ಗುರು,ಲಿಂಗ, ಜಂಗಮ ಸಂಬಂಧಿ ಕೆಲವು ಆಚರಣೆಗಳು ಹೀಗೆ ಕೆಲವು ಆಚರಣೆಗಳಿವೆ. ಆದರೆ ಅವೆಲ್ಲವುಗಳು ತೀರಾ ಸಾಂಕೇತಿಕವಾಗಿವೆ. ಅವುಗಳ ಆಚರಣೆಗಳಲ್ಲಿ ತಪ್ಪಿದರೂ ಧರ್ಮದ ತಾತ್ವಿಕತೆಯನ್ನು ಮೈಗೂಡಿಸಿಕೊಂಡು ಜೀವನ ನಡೆಸಿದರೆ ಅದು ಅದರ ಅಪರಾಧವಾಗಲಾರದು. ಆದರೆ ಈ ಸಾಂಕೇತಿಕವಾದ ಆಚರಣೆಗಳನ್ನು ತೀರಾ ಶ್ರದ್ಧೆಯಿಂದ ಮಾಡಿ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ ಮಾತ್ರ ಈ ಧರ್ಮದ ಪ್ರಕಾರ ಘೋರ ಅಪರಾಧ. ಶರಣರ ಭಾಷೆಯಲ್ಲಿಯೇ ಹೇಳಬೇಕಾದರೆ ಅವರಿಗೆ `ನಾಯಕನರಕ” ಕಟ್ಟಿಟ್ಟ ಬುತ್ತಿ.
ವಿರಕ್ತಮಠಗಳು ಮತ್ತು ಅವುಗಳ ಚರಮೂರ್ತಿಗಳು
ಹನ್ನೆರಡನೆಯ ಶತಮಾನದಲ್ಲಿ ಹೀಗೆ ಉದ್ಭವಿಸಿ ಪ್ರವರ್ಧಮಾನಕ್ಕೆ ಬಂದ ಲಿಂಗಾಯತ ಧರ್ಮವನ್ನು ಉಳಿಸಿಕೊಂಡು ಬೆಳಸಿಕೊಂಡು ಹೋಗಬೇಕಾದ ಜವಾಬ್ದಾರಿ ಬಿದ್ದದ್ದು ನಾಡಿನ ವಿರಕ್ತಮಠಗಳ ಮೇಲೆ.  ವಿರಕ್ತಮಠಗಳು ಪಂಚಪೀಠಗಳ ಶಾಖಾಮಠಗಳಿಗಿಂತ ಭಿನ್ನವಾದ ಮಠಗಳು. ಹನ್ನೆರಡನೇ ಶತಮಾನದಲ್ಲಿ ಅಲ್ಲಮಪ್ರಭು ಕಲ್ಯಾಣದಲ್ಲಿ ಶೂನ್ಯಪೀಠವನ್ನು ಏರಿದ ನೆನಪಲ್ಲಿ ವಚನಧರ್ಮವನ್ನು ಸಾರಲೆಂದು ನಾಡಿನಾಧ್ಯಂತ ಹುಟ್ಟಿಕೊಂಡ ಮಠಗಳೇ ವಿರಕ್ತಮಠಗಳು. ಇವು ಕರ್ನಾಟಕದ ಬಹುತೇಕ ಎಲ್ಲಕಡೆ ಇವೆ. ವಚನಧರ್ಮದ ತತ್ವವನ್ನು ಪಾಲಿಸುವುದು ಮತ್ತು ಪ್ರಸಾರ ಮಾಡುವುದು ಇವುಗಳ ಮುಖ್ಯ ಉದ್ದೇಶ. ಬಹಳಷ್ಟು ಮಠಗಳು ಈ ಕೆಲಸವನ್ನು ಸಮರ್ಪಕವಾದ ರೀತಿಯಲ್ಲಿ ಮುಂದುವರೆಸಿಕೊಂಡು ಬಂದವೆ. ಮತ್ತು ಈಗಲೂ ಆ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿವೆ. ಇಂತಹ ಕ್ರಾಂತಿಕಾರಿ ಕೆಲಸವನ್ನು ತಮ್ಮ ಕರ್ತವ್ಯವನ್ನು ಮಾಡಿಕೊಂಡಿರುವ ಈ ಪೀಠಗಳ ಚರಮೂರ್ತಿಗಳಿಗೆ ಬಹಳಷ್ಟು ವಿಚಾರಗಳಲ್ಲಿ ವಚನಕಾರರ ನಿಲುವುಗಳು ಮತ್ತು ತತ್ವಗಳಿಗೆ ವಿರುದ್ಧವಾಗಿರುವ ಪಂಚಾಚಾರ್ಯರನ್ನು ಕಟ್ಟಿಕೊಂಡು ಸ್ವತಂತ್ರಧರ್ಮ ಸ್ಥಾನಮಾನಕ್ಕೆ ಹೋರಾಡುವುದು ಹೇಗೆ ಎಂಬ ಆತಂಕ ಈಗ ಸಹಜವಾಗಿಯೇ ಎದುರಾಗಿದೆ.  ಅವರನ್ನು ಬಿಟ್ಟರೆ ಜನ ಕಡಿಮೆಯಾಗಬಹುದು. ಧರ್ಮದ ಸ್ಥಾನಮಾನ ಸಿಗದೇಹೋಗಬಹುದು. ಅವರನ್ನು ಸೇರಿಸಿಕೊಂಡರೆ ಲಿಂಗಾಯತ ಧರ್ಮ ಮುಂದಿನ ದಿನಗಳಲ್ಲಿ ಹಿಡಿಯಬಾರದ ಹಾದಿ ಹಿಡಿದು ಕರ್ನಾಟಕದಲ್ಲಿ ಹುಟ್ಟಿದ ಈ ವಚನಧರ್ಮ ಕರ್ನಾಟಕದ ನೆಲದಲ್ಲಿಯೇ ಸಮಾದಿಯಾಗಿಬಿಡಬಹುದು. ಉಗುಳಲೂ ಆಗದ ನುಂಗಲೂ ಆಗದ ಬಿಸಿತ್ತುಪ್ಪ ಅನ್ನುತಾರಲ್ಲ ಆ ಸ್ಥಿತಿ ಈಗ ಇವರಿಗೆ ಎದುರಾಗಿದೆ. ಈ ಮಧ್ಯೆ ಇತ್ತೀಚೆಗೆ ಕೆಲವು ವಿರಕ್ತ ಮಠಗಳು ಕೂಡ ಯಾವುದನ್ನು ಬಸವಾದಿ ಪ್ರಮಥರು ವಿರೋಧಿಸಿಕೊಂಡು ಬಂದರೋ ಅಂತಹ ಜಾತಿ-ಮತ-ವರ್ಗ ಇಂತಹ ಸಿಕ್ಕುಗಳ ಕಡೆಗೆ, ಅರ್ಥರಹಿತ ಧಾರ್ಮಿಕ ಆಚಾರಣೆಗಳ ಕಡೆಗೆ ವಾಲುತ್ತಿರುವುದು ಈ ವಿರಕ್ತಮಠಗಳ ಚರಮೂರ್ತಿಗಳಿಗೆ ಮಾತ್ರವಲ್ಲ ನಿಜವಾಗಿ ಲಿಂಗಾಯತಧರ್ಮವನ್ನು ತಾತ್ವಿಕವಾಗಿ ಒಪ್ಪಿಕೊಂಡ ಜನರಿಗೂ ಆತಂಕವನ್ನು ಹೆಚ್ಚಿಸಿವೆ.
ಕೊನೆಯಲ್ಲಿ ಮತ್ತೆ ಆರಂಭದ ಮಾತುಗಳಿಗೆ ಹಿಂತಿರುಗಬಹುದು. `ಹಿಂದೂ’ದಿಂದ ಕಳಚಿಕೊಂಡು `ಲಿಂಗಾಯತ’ ಎಂಬುದು ಒಂದು ಸ್ವತಂತ್ರ ಧರ್ಮ ಆಗಬಹುದು ಆಗದೆಯೂ ಇರಬಹುದು. ಅವೆಲ್ಲವು ಬಹುವಾಗಿ ರಾಜಕೀಯ ನಿರ್ಧಾರಗಳು. ಇಲ್ಲಿ ಲಿಂಗಾಯತ ಮತ್ತು ವೀರಶೈವ ಅಂದರೆ ಪಂಚಪೀಠ ಮತ್ತು ವಿರಕ್ತಮಠದವರು ಕೂಡಲು ಸಾಧ್ಯವೇ ಎಂಬುದನ್ನು ನೋಡಿಕೊಳ್ಳಬೇಕು. ಈಗ ಇರುವ ಪರಿಸ್ಥಿತಿಯನ್ನು ನೋಡಿದರೆ ಅವರು ಒಟ್ಟಾಗಬಹುದೇ ಹೊರತು ಒಂದಾಗಲಾರರು. ಒಂದಾಗುವುದು ಎಂದರೆ ಹೊಳೆಯು ಸಮುದ್ರವನ್ನು ಸೇರುವ ಮೂಲಕ ತನ್ನ ಮೂಲ ಅಸ್ಥಿತ್ವವನ್ನು ಕಳೆದುಕೊಂಡು ಇನ್ನೊಂದರಲ್ಲಿ ಲೀನವಾಗುವುದು. ಒಟ್ಟಾಗುವುದು ಇಂದರೆ ನಮ್ಮ ನಮ್ಮ ಅಸ್ಥಿತ್ವವನ್ನು ಇಟ್ಟುಕೊಂಡೇ ಒಂದು ಸಾಮಾನ್ಯ ಕಾರಣಕ್ಕಾಗಿ ಜೊತೆಗಿದ್ದು ಹೋರಾಟಮಾಡುವುದು. ವಿರಕ್ತ ಮಠದವರಂತೂ ಅವರಿಗಿರುವ ಭದ್ರವಾದ ವಚನಸಾಹಿತ್ಯ ನೆಲೆಯನ್ನು ಬಿಟ್ಟು ಆ ಕಡೆ ಈ ಕಡೆ ಹೋಗಲು ಸಾಧ್ಯವಿಲ್ಲ. ಈ ಅವಕಾಶ ಇರುವುದು ಪಂಚಪೀಠಾದೀಶರಿಗೆ ಮಾತ್ರ. ಅವರು ದೊಡ್ಡಮನಸ್ಸುಮಾಡಿ ವಿರಕ್ತಮಠದವರೊಂದಿಗೆ ಒಟ್ಟಾದರೆ ಹೋರಾಟ ಸಫಲವಾಗಿ ಸ್ವತಂತ್ರಧರ್ಮ ಸ್ಥಾನ ಸಿಗಲೂಬಹುದು. ಆದರೆ ಅದರ ಆಯುಷ್ಯ ಎಷ್ಟುದಿನ ಎಂದು ಹೇಳಲಾಗದು. ವೀರಶೈವ-ಲಿಂಗಾಯತರ ಬಹುದೊಡ್ಡ ಸಾಮಾಜಿಕ ಸಂಘಟನೆ ಇರುವುದು `ವೀರಶೈವ’ ಎಂಬ ತಮ್ಮ ಕಡೆಗೆ ಎಂಬ ಅಹಂಕಾರಕ್ಕೆ ಒಳಗಾಗದೇ ಒಂದು ವೇಳೆ ಪಂಚಾಚಾರ್ಯರೆಲ್ಲರೂ ವಿರಕ್ತಮಠಗಳಿಗೆ ನದಿಗಳು ಸಮುದ್ರಕ್ಕೆ ಸೇರುವಂತೆ ಒಂದಾಗಲು ಸಾಧ್ಯವಾದರೆ ಅದೊಂದು ಮಹತ್ವದ ಪರಿಣಾಮಬೀರಬಹುದು. ಆದರೆ ಅದು ಅಷ್ಟು ಸುಲಭವೇ? ಹಾಗೆ ಆಗಬೇಕಾದರೆ ಪಂಚಪೀಠದ ಸ್ವಾಮಿಗಳು ಕಿರೀಟಧರಿಸಿಕೊಂಡು ಕೈಯಲ್ಲಿ ತ್ರಿಶೂಲ ಹಿಡಿದುಕೊಂಡು ದೇವರಂತೆ ಬರುವುದನ್ನು ಬಿಡಬೇಕಾಗುತ್ತದೆ. `ವೀರಸಿಂಹಾಸನಾಧೀಶ’ರಾಗುವುದನ್ನು ಬಿಡಬೇಕಾಗುತ್ತದೆ. ತಾವು ಈಗ ಮಾಡುತ್ತಿರುವ ವೈದಿಕ ಆಚರಣೆಗಳಿಗೆ ಮಂಗಳಹಾಡಿ ಬಸವಾದಿ ಪ್ರಮಥರನ್ನೂ ವಚನಸಾಹಿತ್ಯವನ್ನೂ ಗೌರವಿಸುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಅರ್ಥರಹಿತವಾದ ಅಡ್ಡಪಲ್ಲಕ್ಕಿ ಏರಿ ತಮ್ಮಂತೆಯೇ ಇರುವ ಇತರ ಮನುಷ್ಯರ ಮೇಲೆ ಸವಾರಿ ಮಾಡುವುದನ್ನು ಬಿಟ್ಟು ನೆಲದಮೇಲೆ ನಡೆಯುವುದನ್ನು ಕಲಿಯಬೇಕಾಗುತ್ತದೆ. ಬಸವಾದಿ ಪ್ರಮಥರಂತೆ ಎಲ್ಲರೊಳಗೊಂದಾಗಬೇಕಾಗುತ್ತದೆ. ಇವೆಲ್ಲ ಸಾಧ್ಯವೇ? ಕಾಲವೇ ಉತ್ತರಿಸಬೇಕು.
          ಹಾಗೆ ನೋಡಿದರೆ  ಈ ವಿರಕ್ತ ಮಠಗಳ ಸ್ವಾಮಿಗಳ ಮೇಲೆ ಈಗ ಇರುವ ಬಹುದೊಡ್ಡ ಜವಾಬ್ದಾರಿ ಎಂದರೆ ನನ್ನ ಪ್ರಕಾರ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಸ್ಥಾನಮಾನವನ್ನು ದೊರಕಿಸಿಕೊಡುವ ಹೋರಾಟದ ಮುಂದಾಳತ್ವ ವಹಿಸುವುದಲ್ಲ. ಆ ವಿಷಯವು ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರವನ್ನು ನೊಂದಿರುವುದರಿಂದ ಅದನ್ನು ಯಾರು ಯಾರೋ ರಾಜಕಾರಣಿಗಳು, ಅವರು ಇವರು ಸೇರಿಕೊಂಡು ಮುಂದೆನಿಂತು  ಮಾಡುತ್ತಾರೆ. ಅಲ್ಲಿ ಇವರು ತೋರಿಕೆಗೆ ಎಲ್ಲರಿಗೂ ಕಾಣುವಂತೆ ಇದ್ದರೆ ಸಾಕಾಗುತ್ತದೆ. ಆ ಕೆಲಸ ಆಗುವುದರಿಂದ ಮತ್ತು ಆಗದೇ ಇರುವುದರಿಂದ ತಾತ್ವಿಕವಾಗಿ ಆ ಧರ್ಮಕ್ಕೆ ಬಹುದೊಡ್ಡ ಲಾಭನಷ್ಟಗಳೇನಿಲ್ಲ.  ಇವರ ಮೇಲೆ ಈಗ ಇರುವ ಬಹುದೊಡ್ಡ  ಜವಾಬ್ದಾರಿ ಎಂದರೆ ಬಹುಶಃ ಬೇರೆ ಯಾರಿಂದಲೂ ಸಾಧ್ಯವಿಲ್ಲದ ಮತ್ತು ಇವರಿಗೆ ಮಾತ್ರ ಸಾಧ್ಯವಿರುವಂತಹ ಒಂದು ದೊಡ್ಡ ಕೆಲಸವಿದೆ. ಅದೆಂದರೆ ಬಸವಾದಿ ಪ್ರಮಥರು ಪ್ರತಿಪಾದಿಸಿದ ಲಿಂಗಾಯತ ಧರ್ಮದ ಅನುಯಾಯಿಗಳಲ್ಲಿ ಬಹಳಷ್ಟು ಜನ ಈಗ ಆ ಧರ್ಮದಿಂದ ತಾತ್ವಿಕವಾಗಿ ದಿನದಿನಕ್ಕೂ ದೂರದೂರ ಹೋಗುತ್ತಿದ್ದು ಈ ಅಪಾಯಕಾರಿ ಹೊರಹರಿವನ್ನು ತಡೆಯಲು ಅಗತ್ಯವಾದ ಅರಿವಿನ ಆಂದೋಲನವನ್ನು ನಿಜಲಿಂಗಾಯತರ ಬೆಂಬಲದೊಂದಿಗೆ ಸಂಘಟಿಸಿ ಅದರ ಮುಂದಾಳತ್ವವಹಿಸಿಕೊಳ್ಳುವುದು. ಆ ಮೂಲಕ ಅವರು ಕೇವಲ ಜಾತಿಲಿಂಗಾಯತರಾಗಿ ಉಳಿಯದೆ ಜ್ಯೋತಿಲಿಂಗಾಯತರಾಗಿ ಬಾಳುವಂತೆ ಮಾಡುವುದು. ಇದು ಅತ್ಯಂತ ಕಷ್ಟದ ಕಾರ್ಯ ಎಂಬುದು ನಿಜವಾದರೂ ನಿಧಾನವಾಗಿಯಾದರೂ ಆಗಲೇಬೇಕಾದ ಕಾರ್ಯ. ಆ ಕಡೆ ಎಲ್ಲರ ಚಿತ್ತ ಹರಿಯಲಿ. ಜಾತಿಲಿಂಗಾಯತರೆಲ್ಲ ನೀತಿಲಿಂಗಾಯತರಾರುವ ಮೂಲಕ ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ದೇವನೂರ ಮಹಾದೇವ ಅವರ ಹೇಳಿಕೆಯಂತೆ ಜಾತಿಯ ಬಚ್ಚಲಿನಿಂದ ಮೇಲೆದ್ದು ಬಂದು ಲಿಂಗಾಯತ ಜಗತ್ತಿಗೆ ಬೆಳಕಾಗಲಿ. ಅದು ಕೆಟ್ಟಜಾತಿ ಆಗದೆ  ಮಹೋನ್ನತ ಧರ್ಮವಾಗಿ ಜಗತ್ತಿಗೇ ಬೆಳಕು ನೀಡಲಿ.
ಇದು ಯಾವುದೂ ಸಾಧ್ಯವಾಗದೇ ಇದ್ದರೆ, ಕುವೆಂಪು ತಮ್ಮ ಅಂತಿಮ ಕಾಲದಲ್ಲಿ ಕೊಟ್ಟ ವಿಶ್ವಮಾನವ ಸಂದೇಶದಲ್ಲಿ ಹೇಳುವಂತೆ “ಮತಧರ್ಮಗಳು ಗುಂಪುಕಟ್ಟುವ ವಿಷಯಗಳಾಗಬಾರದು. ಯಾವೊಂದು ಧರ್ಮಗ್ರಂಥವೂ ಏಕೈಕ ಧರ್ಮಗ್ರಂಥವಾಗಬಾರದು. ಮನುಷ್ಯ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಎಲ್ಲ ಧರ್ಮಗಳಿಂದ ಧರ್ಮಗ್ರಂಥಗಳಿಂದ ಒಳ್ಳೆಯ ಅಂಶಗಳನ್ನು ಸ್ವೀಕರಿಸಿ ತನ್ನದೇ ಆದ ಸ್ವತಂತ್ರ ಧರ್ಮ ರೂಪಿಸಿಕೊಳ್ಳಬೇಕು. ಹೀಗಾಗಿ ಪ್ರಪಂಚದಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಧರ್ಮಗಳು ಇರಲು ಸಾಧ್ಯ” ಎಂಬ ಮಾತು ನಮ್ಮೊಳಗಿನ ಆಲೋಚನಾಕ್ರಮವನ್ನೇ ಬದಲಿಸಿ ನಮ್ಮ ನುಡಿ ಮತ್ತು ನಡೆ ಎರಡನ್ನೂ ಮುನ್ನೆಡಸಲಿ.
0-0-0-0
·         ಡಾ. ರಾಜೇಂದ್ರ ಬುರಡಿಕಟ್ಟಿ
04-08-2017



[i] ಕೆ.ಪಿ.ಶ್ರೀಧರಮೂರ್ತಿ, ಹಿಂದೂ ಎಂದರೆ ಯಾರು? ಸಂಕ್ರಮಣ, 347, ಜ-ಫೆ, 2003
[ii] ಅದೇ.
[iii] ಅದೇ.
[iv] ಅದೇ.
[v] `ಹಿಂದೂಧರ್ಮದ ಒಗಟುಗಳು’ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು ಸಂ.4 ಸಂ: ಎಂ.ಎಂ. ರಾಜಶೇಖರಯ್ಯ, ಡಾ.ಸಿದ್ಧಲಿಂಗಯ್ಯ ಮತ್ತು ದೇವನೂರು ಮಹಾದೇವ

[vi] ಅದೇ.
[vii] `ಹಿಂದೂಧರ್ಮದ ಒಗಟುಗಳು’ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು ಸಂ.4 ಸಂ: ಎಂ.ಎಂ. ರಾಜಶೇಖರಯ್ಯ, ಡಾ.ಸಿದ್ಧಲಿಂಗಯ್ಯ ಮತ್ತು ದೇವನೂರು ಮಹಾದೇವ
[viii] ವಿವರಕ್ಕೆ ಮೇಲಿನ ಕೃತಿಯನ್ನು ನೋಡಿ.
[ix] ಪ್ರಜಾವಾಣಿ ದಿ. 04-08-2017
[x] ಪ್ರಜಾವಾಣಿ, ಪತ್ರಿಕೆಯಲ್ಲಿ ವರದಿಯಾದಂತೆ.
[xi] ಪ್ರಜಾವಾಣಿ,04-08-2017
[xii]  ಎಂ.ಆರ್. ಶ್ರೀನಿವಾಸಮೂರ್ತಿ, `ವಚನಧರ್ಮಸಾರ’ ಕೃತಿಯಲ್ಲಿ ಹೇಳುವ ಮಾತು.