Friday, February 26, 2021

ಎಡಎಡವಿ ಬೀಳುತಿಹ ಎಡೆಬಿಡದ ನಡಿಗೆ....

 

ರಾಷ್ಟ್ರೀಯ ವಿಜ್ಞಾನದಿನದ ವಿಶೇಷ ಲೇಖನ 

ಎಡಎಡವಿ ಬೀಳುತಿಹ ಎಡೆಬಿಡದ ನಡಿಗೆ....


ವಿಶ್ವರಹಸ್ಯವ ಭೇದಿಸುವ
ಸುಪ್ತ ಸತ್ಯಗಳ ಶೋಧಿಸುವ
ಬಾಳಿಗೆ ಶ್ರೇಯವ ಸಾಧಿಸುವ
ಶ್ರೀ ವಿಜ್ಞಾನಿಗೆ ನಮೋ ನಮೋ

-      - ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ

ಭಾರತದಲ್ಲಿ ಶಿಕ್ಷಕರ ದಿನಾಚರಣೆಯಂತೆ ಎರಡು ದಿನ ಆಚರಿಸಲ್ಪಡುವ ಮತ್ತೊಂದು ದಿನವೆಂದರೆ ಅದು ವಿಜ್ಞಾನ ದಿನ. ‘ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನಎಂದು ಪ್ರತಿವರ್ಷ ನವೆಂಬರ್ 10 ರಂದುವಿಶ್ವ ವಿಜ್ಞಾನದಿನ’ ಆಚರಿಸಲ್ಪಟ್ಟರೆ, ಪ್ರತಿವರ್ಷ ಫೆಬ್ರವರಿ 28ರಂದುರಾಷ್ಟ್ರೀಯ ವಿಜ್ಞಾನದಿನ’ ಆಚರಿಸಲ್ಪಡುತ್ತದೆ. ವಿಶ್ವ ವಿಜ್ಞಾನದಿನವು ಯುನೆಸ್ಕೋ ದಿಂದ 2001 ರಲ್ಲಿ ಪ್ರಥಮಬಾರಿಗೆ ಘೋಷಿಸಲ್ಪಟ್ಟು 2002 ರಿಂದ ಆಚರಿಸಲ್ಪಡುತ್ತಿದೆ. ದಿನನಿತ್ಯ ಸಂಭವಿಸುತ್ತಿರುವ ಜಾಗತಿಕ ಮಟ್ಟದ ವೈಜ್ಞಾನಿಕ ಸಂಗತಿಗಳ ಚರ್ಚೆಗಳು ಕೇವಲ ವಿಜ್ಞಾನಿಗಳು, ವೈಜ್ಞಾನಿಕ ಸಂಶೋಧಕರ ಚರ್ಚೆಯ ಸಂಗತಿಗಳಾಗದೇ ಅವುಗಳಲ್ಲಿ ಸಾಮಾನ್ಯ ಜನತೆಯನ್ನು ಹೆಚ್ಚಿನಮಟ್ಟದಲ್ಲಿ ತೊಡಗುವಂತೆ ಮಾಡುವುದು ಮತ್ತು ಜಾಗತಿಕ ಪ್ರಗತಿಯಲ್ಲಿ ವಿಜ್ಞಾನದ ಮಹತ್ವವನ್ನು ಗುರುತಿಸಿ ಅದರ ಅರಿವನ್ನುಂಟು ಮಾಡಲು ಅಗತ್ಯ ಕಾರ್ಯಕ್ರಮವನ್ನು ರೂಪಿಸುವುದು ದಿನದ ಆಚರಣೆಯ ಹಿಂದಿನ ಉದ್ದೇಶ.

ರಾಷ್ಟ್ರೀಯ ವಿಜ್ಞಾನ ದಿನದ ಉದ್ದೇಶವೂ ಹೆಚ್ಚುಕಡಿಮೆ ಇದೇ ಆಗಿದೆ. 1986 ರಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಸಂಸ್ಥೆ (NCSTC) ಭಾರತ ಸರ್ಕಾರಕ್ಕೆ ಪ್ರತಿವರ್ಷ ಫೆ.28ನ್ನು ರಾಷ್ಟ್ರೀಯ ವಿಜ್ಞಾನದಿನವನ್ನಾಗಿ ಆಚರಿಸಲು ಮನವಿಮಾಡಿಕೊಂಡದ್ದರ ಮೇರೆಗೆ ಆಚರಣೆ ಜಾರಿಗೆ ಬಂದು ಈಗ ದೇಶದ ಎಲ್ಲ ಶಾಲೆ, ಕಾಲೇಜುಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿ ಸಂಘ ಸಂಸ್ಥೆಗಳಲ್ಲೆಲ್ಲ ಆಚರಿಸಲ್ಪಡುತ್ತಿದೆ. ಅನೇಕ ಕಡೆ ತಜ್ಞರಿಂದ ಉಪನ್ಯಾಸಗಳು, ಮಕ್ಕಳಿಗೆ ವಿಜ್ಞಾನದ ಅರಿವನ್ನು ಹೆಚ್ಚಿಸುವ ವಿವಿಧ ರೀತಿಯ ಸ್ಪರ್ಧೆಗಳು, ಯುವವಿಜ್ಞಾನಿಗಳ ಸಾಧನೆಗಳನ್ನು ಗುರುತಿಸಿ ಗೌರವಿಸುವ ಬೆಲೆಯುಳ್ಳ ಕಾರ್ಯಗಳು ದಿನದ ನೆಪದಲ್ಲಿ ನಡೆಯುವುದು ಅಪೇಕ್ಷಣೀಯ. ನಮ್ಮೆಲ್ಲರ ಜೀವನದಲ್ಲಿ ವಿಜ್ಞಾನ ಉಂಟುಮಾಡಿರುವ ಬದಲಾವಣೆ, ಸುಧಾರಣೆಗಳ ಅರಿವನ್ನು ಜನತೆಯಲ್ಲಿ ಮೂಡಿಸಿ ವಿಜ್ಞಾನವನ್ನು ಅದರ ಮುಂದುವರೆಗೆ ಭಾಗವಾದ ತಂತ್ರಜ್ಞಾನವನ್ನು ನಾವು ಹೇಗೆಲ್ಲ ಬಳಸಿಕೊಳ್ಳಬೇಕಿತ್ತು ಮತ್ತು ಹೇಗೆಲ್ಲ ಬಳಸಿಕೊಳ್ಳುತ್ತಿದ್ದೇವೆ. ಎಂಬುದರ ಕಡೆಗೆ ಜನರ ಗಮನವನ್ನು ಸೆಳೆಯುವುದು ಮತ್ತು ವಿಜ್ಞಾನ ತಂತ್ರಜ್ಞಾನವನ್ನು ಸುಧಾರಣೆಗಿಂತ ವಿನಾಶಕ್ಕಾಗಿ ಬಳಸಿಕೊಳ್ಳುತ್ತಿರುವುದರ ಅಪಾಯದ ಅರಿವನ್ನು ಮೂಡಿಸುವ ಮೂಲಕ ವೈಜ್ಞಾನಿಕ ತಿಳಿವಳಿಕೆಯನ್ನು ಜನಮಾನಸದಲ್ಲಿ ಹೆಚ್ಚಿಸುವುದು ದಿನದ ಆಚರಣೆಯ ಹಿಂದಿರುವ ಕಾಳಜಿ.

ಭಾರತದಲ್ಲಿ ಕೆಲವು ದಿನಾಚರಣೆಗಳು ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಮಹನೀಯರ ಜನ್ಮದಿನದಂದು ಆಚರಿಸಲ್ಪಡುತ್ತಿವೆ. ಶಿಕ್ಷಕರ ದಿನ, ಇಂಜನಿಯರ್ಸ್  ದಿನ, ಇತ್ಯಾದಿಗಳನ್ನು ನೆನಪಿಸಿಕೊಳ್ಳಬಹುದು. ಆದರೆ ವಿಜ್ಞಾನದಿನ ಇದಕ್ಕಿಂತ ತುಸು ಭಿನ್ನವಾದದ್ದು. ಇದು ವಿಜ್ಞಾನದ ಪ್ರಕಾರ ಅಷ್ಟೇನೂ ವಿಶೇಷವಲ್ಲದ ಜನ್ಮದಿನಕ್ಕೆ ಮಹತ್ವಕೊಡದೆ ಅಪರೂಪದ ಒಂದು ಸಂಶೋಧನೆ ಬೆಳಕಿಗೆ ಬಂದ ಸಂದರ್ಭವನ್ನು ಆಧರಿಸಿದ್ದೇ ವಿಶೇಷ. ದಿನಾಚರಣೆ ಭಾರತದ ಹೆಮ್ಮೆಯ ಭೌತವಿಜ್ಞಾನಿ ಸರ್. ಸಿ.ವಿ. ರಾಮನ್ ಅವರ ಹೆಸರಿನೊಂದಿಗೆ ಬೆರೆತುಕೊಂಡಿರುವುದು ನಿಜವಾದರೂ ಫೆ.28 ಅವರ ಜನ್ಮದಿನವಲ್ಲ. ಬದಲಾಗಿ ಅವರುಬೆಳಕಿನ ವಕ್ರೀಭವನ’ (Scattering of Light) ಕುರಿತು ತಾವು ಮಂಡಿಸಿದ ಸಂಶೋಧನೆಯನ್ನು ಪ್ರಕಟಿಸಿದ ದಿನ


1928 ರ ಈ ದಿನದಂದು  ಪ್ರಕಟಿಸಲ್ಪಟ್ಟ ಅವರ ಸಂಶೋಧನೆ ಮುಂದೆರಾಮನ್ ಪರಿಣಾಮ ಎಂದೇ ಜಗದ್ವಿಖ್ಯಾತವಾಯಿತು! ಇದೇ ಸಂಶೋಧನೆಗೆ ಅವರು ಎರಡು ವರ್ಷಗಳ ನಂತರ 1930 ರಲ್ಲಿ ಭೌತವಿಜ್ಞಾನಕ್ಕಾಗಿ ಭಾರತಕ್ಕೆ ಪ್ರಥಮ ನೋಬೆಲ್ ಪ್ರಶಸ್ತಿ ತಂದುಕೊಟ್ಟರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತ ಗಳಿಸಿದ ಎರಡು ನೋಬೆಲ್ ಪ್ರಶಸ್ತಿಗಳಲ್ಲಿ  ಟ್ಯಾಗೋರರು ಸಾಹಿತ್ಯಕ್ಕಾಗಿ ಪಡೆದದ್ದು (1913) ಮೊದಲನೆಯದಾದರೆ ಇವರು ಭೌತಶಾಸ್ತ್ರಕ್ಕಾಗಿ ಪಡೆದದ್ದು ಎರಡನೆಯದು. ಇಂಥದ್ದೊಂದು ಮಹತ್ವದ ಸಾಧನೆಯು ಬೆಳಕಿಗೆ ಬಂದ ದಿನವನ್ನು ರಾಷ್ಟ್ರೀಯ ವಿಜ್ಞಾನದಿನವಾಗಿ ಆಚರಿಸುವುದು ಅರ್ಥಪೂರ್ಣವಾಗಿಯೇ ಇದೆ

ಪ್ರತಿವರ್ಷ ರಾಷ್ಟ್ರೀಯ ವಿಜ್ಞಾನದ ದಿನವನ್ನು ಒಂದೊಂದು ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತದೆ. ಮೂಲಕ ವರ್ಷ ವಿಷಯಕ್ಕೆ ಒತ್ತುಕೊಟ್ಟು ಅರಿವು ಮೂಡಿಸುವುದು  ಮತ್ತು ಕಾರ್ಯಕ್ರಮಗಳನ್ನು ರೂಪಿಸುವುದು ಇದರ ಹಿಂದಿನ ಉದ್ದೇಶ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಅಂದರೆ ಕ್ರಿ.. 2000  ವರ್ಷದ ರಾಷ್ಟ್ರೀಯ ವಿಜ್ಞಾನದಿನವನ್ನುಮೂಲಭೂತ ವಿಜ್ಞಾನದಲ್ಲಿ ಆಸಕ್ತಿಯನ್ನು ಪುನಃ ಹುಟ್ಟಿಸುವುದು’ (Recreation Interest in Basic Science)  ಎಂಬ ಧ್ಯೇಯವಾಕ್ಯವನ್ನು ಮುಂದಿಟ್ಟುಕೊಂಡು ಆಚರಿಸಿದರೆ ಅದರ ಮುಂದಿನ ವರ್ಷವನ್ನು ಅಂದರೆ 2001ನ್ನುವಿಜ್ಞಾನಶಿಕ್ಷಣಕ್ಕಾಗಿ ಮಾಹಿತಿ ತಂತ್ರಜ್ಞಾನಎಂಬ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಆಚರಿಸಲಾಯಿತು. ಹಾಗೇ 2002ರಲ್ಲಿ ದಿನಕ್ಕೆಕಸದಿಂದ ರಸ’ (Wealth from Waste), 2004ರಲ್ಲಿಜನಸಮೂಹದಲ್ಲಿ ವೈಜ್ಞಾನಿಕ ಅರಿವಿನ ಪ್ರೋತ್ಸಾಹಿಸುವಿಕೆ’ 2005 ರಲ್ಲಿಭೌತಶಾಸ್ತ್ರವನ್ನು ಆಚರಿಸೋಣ’ 2006ರಲ್ಲಿನಮ್ಮ ಭವಿಷ್ಯಕ್ಕಾಗಿ ನಮ್ಮ ಪರಿಸರ (Nature Nature for our Future) ಎಂಬವು ಧ್ಯೇಯವಾಕ್ಯಗಳಾಗಿದ್ದವು

ಧ್ಯೇಯವಾಕ್ಯಗಳು ಆಯಾ ವರ್ಷಗಳಲ್ಲಿ ಅಗತ್ಯಗಳನ್ನು ಗಮನಿಸಿ ರೂಪಿಸಲ್ಪಟ್ಟಿವೆ ಎಂಬುದನ್ನು ಗಮನಿಸಬೇಕು. ಅನೇಕ ವೇಳೆ ಇವು ವಿಜ್ಞಾನದಿಂದ ಸಾಮಾಜಿಕ  ಆಯಾಮಕ್ಕೂ ವಿಸ್ತರಿಸಿಕೊಂಡದ್ದು ಕಂಡುಬರುತ್ತದೆ. 2007 ದಿನ ನೀರಿನ ಮಹತ್ವಕ್ಕೆ ಕೇಂದ್ರೀಕರಿಸಿದರೆ,  2010 ಲಿಂಗಸಮಾನತೆಯನ್ನು ಅಭಿವೃದ್ಧಿಯೊಂದಿಗೆ ತಾಳೆಹಾಕಿಕೊಂಡಿತ್ತು. ವರ್ಷಗಳ ಕೆಲವು ಧ್ಯೇಯವಾಕ್ಯಗಳನ್ನು ನೋಡುವುದು ಕುತೂಹಲಕಾರಿಯಾಗಬಲ್ಲದು. 2014ನ್ನುವೈಜ್ಞಾನಿಕ ಮನೋಭಾವದ ಉದ್ಧೀಪನ’ (Fostering Scientific Temper) ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಿದರೆ 2015ನ್ನು ರಾಷ್ಟ್ರನಿರ್ಮಾಣಕ್ಕಾಗಿ ವಿಜ್ಞಾನಎಂಬ ಧ್ಯೇಯವನ್ನಿಟ್ಟುಕೊಂಡು ಆಚರಿಸಲಾಯಿತು. ಇತ್ತೀಚೆಗಿನ ಮೂರು ವರ್ಷಗಳನ್ನು ಅಂದರೆ 2018, 2019 ಮತ್ತು 2020 ಇವುಗಳನ್ನು ಕ್ರಮವಾಗಿಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ’ “ಜನತೆಗಾಗಿ ವಿಜ್ಞಾನ; ವಿಜ್ಞಾನಕ್ಕಾಗಿ ಜನತೆಹಾಗೂವಿಜ್ಞಾನದಲ್ಲಿ ಮಹಿಳೆಎಂಬ ಧ್ಯೇಯವಾಕ್ಯಗಳನ್ನಿಟ್ಟುಕೊಂಡು ಆಚರಿಸಲಾಗಿದೆ.


ಎಲ್ಲ ಧ್ಯೇಯವಾಕ್ಯಗಳನ್ನು ಗಮನಿಸಿದರೆ ಅವು ವಿಜ್ಞಾನಕ್ಕೆ ನಾವು ಎಷ್ಟೊಂದು ಬದ್ಧರಾಗಿ ಕೆಲಸ ಮಾಡಲು ಉದ್ದೇಶಿಸಿದ್ದೆವು ಎಂಬುದು ಸ್ಪಷ್ಟವಾಗುತ್ತದೆ. ವರ್ಷದ (2023)  ದಿನವು,  ‘ಜಾಗತಿಕ ಯೋಗಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ’ (Global Science for Global Wellbeing) ಎಂಬಧ್ಯೇಯವಾಕ್ಯದೊಂದಿಗೆ ಮತ್ತೊಮ್ಮೆ ಆಚರಣೆಗೆ ಬಂದಿದೆ. ದಿನವು ನಾವು ವಿಜ್ಞಾನವನ್ನು ನಮ್ಮ ವ್ಯಕ್ತಿಗತ ಜೀವನದಲ್ಲಿ ಮತ್ತು ರಾಷ್ಟ್ರೀಯ ಜೀವನದಲ್ಲಿ ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದೇವೆ, ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಸಾಧನೆ ಯಾವಮಟ್ಟದಲ್ಲಿದೆ ನಮ್ಮ ದೇಶದ ಜನರ ವೈಜ್ಞಾನಿಕ ದೃಷ್ಟಿಕೋನವನ್ನು ಹೆಚ್ಚಿಸುವಲ್ಲಿ ವಿಜ್ಞಾನವನ್ನು ನಾವು ಎಷ್ಟರಮಟ್ಟಿಗೆ ಬಳಸಿಕೊಂಡಿದ್ದೇವೆ ಎಂಬ ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಿಕೊಳ್ಳಲಿಕ್ಕೆ ಮತ್ತು ಒತ್ತುಕೊಡಬೇಕಾದ ಕಡೆ ಒತ್ತುಕೊಟ್ಟು ಕಾರ್ಯೋನ್ಮಖರಾಗಲಿಕ್ಕೆ ಬಳಸಿಕೊಂಡರೆ ಮಾತ್ರ ಇಂಥದ್ದೊಂದು ದಿನಾಚರಣೆ ಅರ್ಥಪೂರ್ಣವಾಗಬಲ್ಲುದು.

ಧರ್ಮಕ್ಕೂ ವಿಜ್ಞಾನಕ್ಕೂ ಪ್ರಪಂಚದಲ್ಲಿ ಯಾವಾಗಲೂ ದೊಡ್ಡಮಟ್ಟದ ಜಗಳ ತಿಕ್ಕಾಟ ನಡೆದುಕೊಂಡೇ ಬಂದಿದೆ. ಭಾರತ ಪಾಕಿಸ್ತಾನ ಇಂತಹ ದೇಶಗಳಲ್ಲಿಯಂತೂ ಇದು ಒಂದಿಷ್ಟು ದೊಡ್ಡಮಟ್ಟದಲ್ಲಿಯೇ ಇದೆ ಎನ್ನಬೇಕು. ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ವಿಜ್ಞಾನದ ಸಾಧನೆ ಹೇಳಿಕೊಳ್ಳುವಂಥ ಮಟ್ಟದಲ್ಲಿ ಇಲ್ಲ. ವಿಶ್ವಮಟ್ಟದ ವಿಜ್ಞಾನ ಪತ್ರಿಕೆಗಳು ನಿಯತಕಾಲಿಕೆಗಳು ಆಗಾಗ ಪ್ರಕಟಿಸುವ ವಿಜ್ಞಾನ ಸಾಧನೆಯ ದೇಶಗಳ ಪಟ್ಟಿಯಲ್ಲಿ ನಮ್ಮದೇಶ  ಗ್ಲೋಬನ್ನು ಜೋರಾಗಿ ತಿರುಗಿಸಿದರೆ ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರುವ ಅನೇಕ ದೇಶಗಳಿಗಿಂತ ಹಿಂದೆ ಇರುವುದನ್ನು ನಾವು ಕಾಣುತ್ತೇವೆ.  ನೋಬೆಲ್ ಪುರಸ್ಕಾರಕ್ಕೆ ಅರ್ಹವಾಗುವಂತಹ ಸಂಶೋಧನೆಗಳು ನಮ್ಮಲ್ಲಿ ನಡೆದದ್ದೂ ಬೆರಳೆಣಿಕೆಯಷ್ಟೇ. ಸಿ.ವಿ. ರಾಮನ್, ವಿಕ್ರಮ ಸಾರಾಬಾಯಿ, ಅಬ್ದುಲ್ ಕಲಾಂ ಅವರಂಥ ಬೆರಳೆಣಿಕೆಯ ವಿಜ್ಞಾನಿಗಳನ್ನು ಬಿಟ್ಟರೆ ಆ ಕ್ಷೇತ್ರದಲ್ಲಿ ದೊಡ್ಡ ವಿಜ್ಞಾನಿಗಳು ಹೇಳಿಕೊಳ್ಳುವಷ್ಟು ಸಂಖ್ಯೆಯಲ್ಲಿ ನಮ್ಮಲ್ಲಿ ಬರಲಿಲ್ಲ.

ಇದಕ್ಕೆ ಕಾರಣವೂ ಇದೆ. ನಮ್ಮ ದೇಶದ ಸಂಶೋಧನೆಗಳುಗೋಮೂತ್ರ’ಗೋವಿನ ಸಗಣಿ’ ಇವುಗಳ ಸುತ್ತವೇ ಗಿರಕಿಹೊಡೆಯುತ್ತಾ ನಿಂತಂತಿದೆ. ಪ್ರಪಂಚದ ಜನತೆಯ ಬಾಳಿಗೆ ಬೆಳಕಾಗಬಲ್ಲ ಸಂಶೋಧನೆ ಮಾಡುವವರಿಗೆ ಆಡಳಿತಗಳಿಂದಲೂ ದೊಡ್ಡಮಟ್ಟದ ಪ್ರೋತ್ಸಾಹ ಬೇಕಾಗುತ್ತದೆ. ಅದನ್ನು ಮಾಡಲು ಆಡಳಿತಗಾರರು ಧರ್ಮಕ್ಕಿಂತ ವಿಜ್ಞಾನಕ್ಕೆ ಒಲಿದವರಾಗಿರಬೇಕಾಗುತ್ತದೆ. ಆ ವಿಷಯದಲ್ಲಿ  ಭಾರತಕ್ಕೆ ಒಳ್ಳೆಯ ಭವಿಷ್ಯವಿದ್ದಂತಿಲ್ಲ.  ಎಲ್ಲ ರೀತಿಯ ವಿಜ್ಞಾನವೂ ನಮ್ಮ ಪೂರ್ವಜರಿಗೆ ತಿಳಿದಿತ್ತು. ನಾವು ಯಾರಿಂದಲೂ ಕಲಿಯುವಂಥದ್ದೇನಿಲ್ಲ ಎಂಬ ಗರ್ವವೂ ನಮ್ಮನ್ನು ವಿಜ್ಞಾನ ಕ್ಷೇತ್ರದಲ್ಲಿ ಮುಂದುವರೆಯಲು ಅಡ್ಡಗಾಲು ಹಾಕುತ್ತಿದ್ದಂತೆ ಕಾಣುತ್ತಿದೆ.  ಆಡಳಿತಗಾರರು ವಿಜ್ಞಾನಕ್ಕಿಂತ ದೇವರು ಧರ್ಮ ಇಂಥವುಗಳಲ್ಲಿ ಆಸಕ್ತಿ ತೋರತೊಡಗಿದಾಗ ದೇಶದ ಭವಿಷ್ಯ ಮಸುಕಾಗುವುದು ತೀರಾ ಸಹಜ.

ಇಂದಿನ ನಮ್ಮ ಸಮಾಜದ ವಿದ್ಯಮಾನಗಳನ್ನು ಗಮನಿಸಿದರೆ ನಾವು ಮುಂದೆ ಸಾಗುತ್ತಿದ್ದೇವೆಯೋ ಹಿಂದೆಕ್ಕೆ ನಡೆಯುತ್ತಿದ್ದೇವೆಯೋ ಎನ್ನುವುದೇ ಸಂಶಯಬರುವಂತಿದೆ. ಜನರಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವುದಕ್ಕಿಂತ ಅವವರನ್ನು ಧರ್ಮ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ಅಂಧಕಾರದಲ್ಲಿಡುವುದಕ್ಕೇ ನಾವು ಹೆಣಗಾಡುತ್ತಿರುವುದು ಕಣ್ಣಿಗೆ ರಾಚುತ್ತಿದೆ. ಬೆಳ್ಳಂಬೆಳಿಗ್ಗೆ ಎದ್ದು ಟಿವಿ ಜ್ಯೋತಿಷಿಗಳು ಜನರ ತಲೆತಿಕ್ಕುವ ಕೆಲಸ ಆರಂಭಿಸುವುದರಿಂದಲೇ ಇದು ಆರಂಭವಾಗುತ್ತದೆ. ನಮ್ಮ ಯುವಜನತೆಯಲ್ಲಿ ಪ್ರಶ್ನಿಸುವ ಮನೋಭಾವವನ್ನೇ ಹತ್ತಿಕ್ಕಿ ಅವರನ್ನು ಹೇಳಿದಂತೆ ಕೇಳುವ ‘ಹೌದಪ್ಪ’ಗಳನ್ನಾಗಿ ಮಾಡಲಾಗುತ್ತಿದೆ. ತಿಳಿವಳಿಕೆಯ ಕೊರತೆಯ ಕಾರಣದಿಂದ ವೈಜ್ಞಾನಿಕವಾಗಿ ಯೋಚಿಸಲಾರದ ಅಪ್ಪಅಮ್ಮಂದಿರು, ರಾಹುಕಾಲ ಗುಳಿಕಕಾಲ ನೋಡಿ ರಾಕೆಟ್ ಹಾರಿಸುವ ವಿಜ್ಞಾನಿಗಳು, ತಮ್ಮ ಭವಿಷ್ಯವೇನು ತಮ್ಮ ದಿನದ ದುಡಿಮೆ ಏನು ಎಂಬುದನ್ನೇ ತಿಳಿಯಲಾರದ ಜ್ಯೋತಿಷಿಗಳು ಹೇಳುವ ಜ್ಯೋತಿಷ್ಯಕ್ಕೆ ತಲೆತಿಕ್ಕಿಸಿಕೊಂಡು, ಸರ್ಕಾರಿ ಕಛೇರಿಗಳನ್ನೇ ವಾಸ್ತುವಿನ ಹೆಸರಿನಲ್ಲಿ ಒಡೆದು ಹಾಕುವ ಮಂತ್ರಿಮಹೋದಯರು ಇಂಥವರ ಮಧ್ಯೆ ನಮ್ಮ ಭವ್ಯಭಾರತದ ಪ್ರಜೆಗಳು ಬೆಳೆಯುತ್ತಿದ್ದಾರೆ.

ಇವೆಲ್ಲವುಕ್ಕಿಂತ ದುರಂತದ ಸಂಗತಿ ಎಂದರೆ  ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಲು ಅತ್ಯಂತ ಮಹತ್ವದ ಪಾತ್ರವಹಿಸಬಲ್ಲ ಶಾಲಾ ಕಾಲೇಜುಗಳೇ ಇಂದು ಅವೈಜ್ಞಾನಿಕ ಚಟುವಟಿಕೆಗಳ ತಾಣವಾಗುತ್ತಿರುವುದು. ಯಾವ ಶಿಕ್ಷಕರು ಮಕ್ಕಳಲ್ಲಿ ಸಂವಿಧಾನದ ಪ್ರಧಾನ ಆಶಯವಾದ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ಗುರುತರ ಜವಾಬ್ದಾರಿಯನ್ನು ಹೊತ್ತಿರುವರೋ ಅಂತಹ ಶಿಕ್ಷಕರಲ್ಲಿಯೇ ಬಹಳಷ್ಟು ಜನ ಇಂದು ಧರ್ಮ ಸಂಸ್ಕೃತಿಗಳ ಹೆಸರಿನಲ್ಲಿ ಮಕ್ಕಳ ತಲೆಯಲ್ಲಿ ಮೌಢ್ಯವನ್ನು ತುಂಬುವ ಕೆಲಸದಲ್ಲಿ ತೊಡಗಿಕೊಂಡಿರುವುದು ಪರಿಸ್ಥಿತಿಯನ್ನು ಬಿಗಡಾಯಿಸಿದೆ! ಶಾಲೆಯಲ್ಲಿ ಮಾಡುವ ಕೆಲಸ ಯಾವುದು ದೇವಸ್ಥಾನ ಮತ್ತು ಮನೆಗಳಲ್ಲಿ ಮಾಡುವ ಕೆಲಸ ಯಾವುದು ಎಂಬ  ಸರಿಯಾದ ಪರಿಜ್ಞಾನವಿಲ್ಲದ, ಪರೀಕ್ಷೆ ಹತ್ತಿರ ಬಂದಾಗ ಶಾಲೆಯಲ್ಲಿ ಸರಸ್ವತಿ ಪೂಜೆಮಾಡಿ, ಹಾಲ್ ಟಿಕೆಟ್ ಕೊಟ್ಟು ಪರೀಕ್ಷೆ ಬರೆಸುವ ಶಿಕ್ಷಕರು ಯಾವ ರೀತಿ ತಾನೆ ಮಕ್ಕಳಲ್ಲಿ ವೈಜ್ಞಾನಿಕ ವೈಚಾರಿಕ ಮನೋಭಾವನೆಯನ್ನು ಬೆಳೆಸಲಿಕ್ಕೆ ಸಾಧ್ಯ?  ಹಾಗೆ ಮಾಡುವುದರಿಂದ ವರ್ಷಪೂರ್ತಿ ಮಾಡಿದ ತಮ್ಮ ಪಾಠದ ಮೇಲೆ ತಮಗೇ ನಂಬಿಗೆಯಿಲ್ಲ ಎಂದೂ ತಾವು ಕಲಿಸುವ ಮಕ್ಕಳ ಅಧ್ಯಯನದ ಮೇಲೆ ತಮಗೆ ವಿಶ್ವಾಸವಿಲ್ಲವೆಂದೂ ಒಪ್ಪಿಕೊಂಡಂತೆ ಆಗುತ್ತದೆ ಎಂಬ ಅರಿವೂ ಅವರಿಗಿದ್ದಂತಿಲ್ಲ! ಅದೂ ಮಂಗಳವಾರ ಶುಕ್ರವಾರಗಳನ್ನೇ ಆಯ್ಕೆಮಾಡಿ ಪೂಜೆ ಮಾಡುವುದರಿಂದ ವಾರದ ದಿನಗಳಲ್ಲಿಯೂ ಕೂಡ ‘ಶ್ರೇಷ್ಠ-ಕನಿಷ್ಠ’ ಎಂಬ ಜಾತಿಭೇದವಿದೆ ಎಂಬ ತಪ್ಪು ಸಂದೇಶ ಮಕ್ಕಳಿಗೆ ರವಾನೆಯಾಗುತ್ತದೆ ಎಂಬುದರ ಕಡೆಗೂ ಅವರ ಗಮನವಿಲ್ಲ. ಫೇಲಾಗುವ ಒಬ್ಬ ವಿದ್ಯಾರ್ಥಿಯನ್ನು ಪಾಸುಮಾಡುವ ಸಾಮರ್ಥ್ಯ ಯಾರಿಗಾದರೂ ಇದೆ ಎನ್ನುವುದಾದರೆ ಅದು ಶಿಕ್ಷಕರಾದ ತಮಗೇ ಹೊರತೂ ಸರಸ್ವತಿಗಲ್ಲ ಎಂಬ ತಿಳಿವಳಿಕೆ ಈ ಶಿಕ್ಷಕರಿಗೆ ಎಲ್ಲಿಯವರೆಗೆ ಬರುವುದಿಲ್ಲವೋ ಅಲ್ಲಿಯವರೆಗೂ ಅವರು ಮಕ್ಕಳನ್ನು ವೈಜ್ಞಾನಿಕವಾಗಿ ವೈಚಾರಿಕವಾಗಿ ಪ್ರಭಾವಿಸಲು ಸಾಧ್ಯವಿಲ್ಲ.  ಕುರುಡ ಗುರುವಿನ  ಕೈಹಿಡಿದು ನಡೆವ ಕುರುಡ ಶಿಷ್ಯರು ಪದೇ ಪದೇ ಎಡವಿ ಬೀಳುವುದನ್ನೇ ಎಡಬಿಡದೇ ನಡೆಯುತ್ತಿದ್ದೇವೆ ಅಂದುಕೊಂಡಂತಾಗುತ್ತದೆ ಅಷ್ಟೆ!  

ಇಂತಹ ಅವೈಜ್ಞಾನಿಕ ಪರಿಸರದಲ್ಲಿ ನಮ್ಮ ದೇಶದ ಮುಂದಿನ ಪ್ರಜೆಗಳು ರೂಪುಗೊಳ್ಳುತ್ತಿರುವ ವಿಷಮಸ್ಥಿತಿ ನಮಗಿದೆ. ಮತಿಯ ವಿಕಸನಕ್ಕೆ ಮತ ಅಡ್ಡಿಯಾಗಿದೆ. ‘ಸಂಸ್ಕೃತಿಯ ಹೆಸರಿನಲ್ಲಿ ಮೌಢ್ಯವನ್ನು ಸಾಂಕ್ರಾಮಿಕ ರೋಗದಂತೆ ಹರಡುವ ಕೆಲಸಗಳು ಎಗ್ಗಿಲ್ಲದಂತೆ ನಡೆಯುತ್ತಿವೆ. ಭಾರತದ ಸಂವಿಧಾನವು ಭಾರತೀಯ ನಾಗರಿಕರಿಗೆಂದು ನಿಗಧಿಪಡಿಸಿರುವ ಮೂಲಭೂತ ಕರ್ತವ್ಯಗಳ ಪಟ್ಟಿಯಲ್ಲಿ, “ವೈಜ್ಞಾನಿಕ ಮನೋಭಾವ, ಮಾನವತಾವಾದ, ವೈಚಾರಿಕ ಬುದ್ಧಿ ಮತ್ತು ಸುಧಾರಣೆ ಬೆಳೆಸಲೇಬೇಕಾದದ್ದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ(It shall be the duty of every citizen of India to develop the scientific temper, humanism and the spirit of enquiry and reform) (51 A) ಎಂದು ಸ್ಪಷ್ಟವಾಗಿ ಹೇಳಿದ್ದರೂ ಅದನ್ನು ನಾವು ಯಾರೂ ಗಂಭೀರವಾಗಿ ತೆಗೆದುಕೊಂಡಂತೆಯೇ ಇಲ್ಲ.

ಸ್ವಾತಂತ್ರ್ಯ ಸಿಕ್ಕ ಕಾಲಘಟ್ಟದಲ್ಲಿಯೇ ಆಚಾರ್ಯ ವಿನೋಬಾ ಭಾವೆ ಅವರು, “ಈಗ ಮತ ಮತ್ತು ದರ್ಮಗಳ ಕಾಲ ಮುಗಿದುಹೋಗಿದೆ. ಇನ್ನೇನಿದ್ದರೂ ವಿಜ್ಞಾನ ಮತ್ತು ಅಧ್ಯಾತ್ಮದ ಕಾಲ’ ಎಂದಿದ್ದರು. ಅದಕ್ಕಿಂತ ಇಪ್ಪತ್ತೈದು ವರ್ಷಗಳ ಮೊದಲೇ ಕನ್ನಡದ ಮೇರು ಕವಿ ಕುವೆಂಪು, “ಹಳೆಮತದ ಕೊಳೆಯಲ್ಲ ಹೊಸಮತಿಯ ಹೊಳೆಯಲ್ಲಿ ಕೊಚ್ಚಿಹೋಗಲಿ; ಬರಲಿ ವಿಜ್ಞಾನ ಬುದ್ಧಿ” ಎಂದು ಬರೆದು ದೇಶದ ಯುವಕರಿಗೆ, “ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ” ಎಂದು ಕರೆ ನೀಡಿದ್ದರು. ನಾವಿಂದು ಅವರ ಹೇಳಿಕೆಗೆ ವಿರುದ್ಧ ದಾರಿಯಲ್ಲಿದ್ದೇವೆ. ನಮ್ಮ ಯುವಕರನ್ನು ಗುಡಿ ಚರ್ಚು ಮಸೀದಿಗಳ ಒಳಗೆ ಕಳಿಸುವ ಕೆಲಸದಲ್ಲಿ ನಿರತರಾಗಿದ್ದೇವೆ. ಹೀಗೇ ಮಾಡುತ್ತಾ ಹೋದರೆ ನಮ್ಮದೇಶ ‘ವಿಶ್ವಗುರು’ ಆಗುತ್ತದೆ ಎಂಬ ಮಾತು ಸುಳ್ಳಾಗುತ್ತದೆ. ಹಾಗಾಗಬಾರದು ಎಂದರೆ ಅದಕ್ಕಿರುವ ಏಕೈಕ ಮಾರ್ಗ ಎಂದರೆ ದೇಶದ ಜನರಲ್ಲಿ ಧಾರ್ಮಿಕ ಮನೋಭಾವನೆಗಿಂತ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವುದಕ್ಕೆ ಆಧ್ಯತೆ ನೀಡುವುದು.

ವೈಜ್ಞಾನಿಕ  ಮನೋಧರ್ಮ ಎಂದರೇನು? ಯಾವುದನ್ನೇ ಆದರೂ ಕಾರ್ಯಕಾರಣಗಳ ಸಂಬಂಧದಿಂದ ವಿವೇಚಿಸಿ ತೀರ್ಮಾನಕ್ಕೆ ಬರುವುದು. ಈ ಮನೋಧರ್ಮವನ್ನು ಮುಖ್ಯವಾಗಿ ನಾಲ್ಕು ಪ್ರಧಾನ ಗುಣಗಳು ನಿರ್ಧರಿಸುತ್ತವೆ. ಅವೆಂದರೆ ಮೊದಲನೆಯದು ಶ್ರುತಿ ಅಂದರೆ ತಿಳಿದುಕೊಳ್ಳುವುದರ ಬಗ್ಗೆ ಇರುವ ಜ್ಞೇಯನಿಷ್ಟತೆ, ಎರಡನೆಯದು ಕೃತಿ ಅಂದರೆ ಕಾರ್ಯ-ಕಾರಣ ಸಂಬಂಧಗಳ ಅನ್ವೇಷಣೆ. ಮೂರನೆಯದು ಧೃತಿ ಅಂದರೆ ವೈಜ್ಞಾನಿಕ ವಿಧಾನದಿಂದ ಎಂದೂ ವಿಚಲಿತರಾದದ ಧೈರ್ಯ  ಮತ್ತು ಕೊನೆಯದಾಗಿ ಗತಿ. ಅಂದರ ಧಾರ್ಮಿಕ ಮತಮೌಢ್ಯಗಳಿಗೆ ಒಳಗಾಗದೆ ಈ ನಿಸರ್ಗದ ನಿಯಮಗಳಿಗೆ ಅನುಸಾರವಾಗಿ ನಡೆಯುವಿಕೆ. 


ಅತ್ಯಂತ ನಿಗೂಢವೂ ಕುತೂಹಲಕರವೂ ಅನೇಕ ವೇಳೆ ಅಭೇದ್ಯವೂ ಆಗಿರುವ ಈ ನಿಸರ್ಗದ ವಿದ್ಯಮಾನಗಳನ್ನು ಅರಿಯುವಲ್ಲಿ ನಾವು ಅನುಸರಿಸಬೇಕಾದ ಎರಡು ಮಾರ್ಗಗಳಿವೆ. ಒಂದು ಅರಿಸ್ಟಾಟಲ್ ಮಾರ್ಗ. ಇನ್ನೊಂದು ಗೆಲಿಲಿಯೋ ಮಾರ್ಗ. ಅರಿಸ್ಟಾಟಲ್ ಮಾರ್ಗ ಅನುಸರಿಸಿದರೆ ನಾವು ದೇವರು ಧರ್ಮ ಎಂದು ಹಿಂದಕ್ಕೆ ಹೋಗುತ್ತೇವೆ. ಗೆಲಿಲಿಯೋ ಮಾರ್ಗ ಅನುಸರಿಸಿದರೆ ನಿಸರ್ಗನಿಯಮದಂತೆ ವಿಜ್ಞಾನಕ್ಕೆ ಒಗ್ಗಿಕೊಂಡು ಮುನ್ನಡೆಯುತ್ತೇವೆ. ಆಗ ಗೆಲುವು ನಮ್ಮದಾಗುತ್ತದೆ. ಇಂಥದ್ದರ ಕಡೆ ನಾವು ಮುಖಮಾಡಲು ಚಿಂತಿಸಲು ವೇದಿಕೆಯಾದರೆ ಮಾತ್ರ ವಿಜ್ಞಾನದಿನಾಚರಣೆಗೆ ಒಂದು ಅರ್ಥ ಬರುತ್ತದೆ. ಇಲ್ಲದೇ ಹೋದರೆ ಅದೂ ಕೂಡ ಅನೇಕ ದಿನಾಚರಣೆಗಳಂತೆ ಸಿ.ವಿ. ರಾಮನ್ ಫೋಟೋ ಇಟ್ಟು ಕೈಮುಗಿದು ಕಾಯಿ ಒಡೆದು ಕೊಬರಿ ತಿನ್ನುವ ಅವೈಜ್ಞಾನಿಕ ಆಚರಣೆಯಾಗಿ ಅರ್ಥಹೀನವಾಗಿಬಿಡುತ್ತದೆ; ಹಾಗಾಗದಿರಲಿ.  ಭಾರತದ ನಿಜ ಭಾಗ್ಯವಿಧಾತನ ಈ ಮಾತು ಸದಾ ನಮ್ಮ ನೆನಪಿನಲ್ಲಿರಲಿ: “ಯಾವ ದೇಶದಲ್ಲಿ ಶಾಲೆಗಳ ಗಂಟೆಗಳ ಸದ್ದಿಗಿಂತ ದೇವಸ್ಥಾನಗಳ ಗಂಟೆಗಳ ಸದ್ದು ಹೆಚ್ಚಾಗಿ ಕೇಳುತ್ತದೆಯೋ ಆ ದೇಶ ಮುಂದುವರೆಯುವುದಿಲ್ಲ.”  ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರ ‘ಶ್ರೀ ವಿಜ್ಞಾನಿಗೆ’ ಎಂಬ ಕವಿತೆಯ ಮೊದಲ ನುಡಿಯಿಂದ ಪ್ರಾರಂಭಿಸಿದ ಈ ಲೇಖನವನ್ನು ಅದೇ ಕವಿತೆಯ ಕೊನೆಯ ನುಡಿಯಿಂದ ಮುಗಿಸುತ್ತೇನೆ:

ಪಾಚಿಗಟ್ಟಿರುವ ಮೌಢ್ಯವ ತೊಡೆಯುವ
ವಿಚಾರ ಶಕ್ತಿಯ ಹೊನಲನು ತರುವ
ಅರಿವಿನ ಪರಿಧಿಯ ವಿಸ್ತಾರಿಸುವ
ಶ್ರೀ ವಿಜ್ಞಾನಿಗೆ ನಮೋ ನಮೋ.

ಡಾ. ರಾಜೇಂದ್ರ ಬುರಡಿಕಟ್ಟಿ

26-02-2021 (updated on 26-02-2023)