Sunday, June 21, 2020


ಅಂತರರಾಷ್ಟ್ರೀಯ ಯೋಗದಿನದ ವಿಶೇಷ ಲೇಖನ
`ಜೀವನಯೋಗ’ದ ಮೇಲೆ ನಿಂತು ನೃತ್ಯಗೈಯ್ಯುತ್ತಿರುವ `ಪ್ರದರ್ಶನ ಯೋಗ’
















****


ಮತ್ತೊಂದು ಯೋಗದಿನಾಚರಣೆ  ಬರುತ್ತಿದೆ. ‘ಯೋಗ’ ಅಂದರೆ ಏನು? ಇದರ ಅವಶ್ಯಕತೆ ಎಲ್ಲರಿಗೂ ಇದೆಯೇ? ನಾವು ಮಾಡುತ್ತಿರುವ ಯೋಗ ಎಷ್ಟರಮಟ್ಟಿಗೆ ಸರಿಯಿದೆ? ಇತ್ಯಾದಿ ಅಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಿರುವ, ಕೆಲ ವರ್ಷಗಳ ಹಿಂದಿನ ನನ್ನ ಈ ಲೇಖನವನ್ನು ಕೆಲವಿಷ್ಟು ಅಗತ್ಯ ತಿದ್ದುಪಡಿಯೊಂದಿಗೆ ಕೊಡುತ್ತಿದ್ದೇನೆ. ತಮ್ಮ ವೈಚಾರಿಕ ಓದಿಗಾಗಿ… ( ಮೌಢ್ಯ ಅಳಿಯಲಿ; ವೈಚಾರಿಕತೆ ಬೆಳೆಯಲಿ )  ರಾಬು – 20-06-2023
****

`ಯೋಗ’ ಎಂದರೇನು? ಶಬ್ದಕೋಶಗಳ ಅರ್ಥದಲ್ಲಿ ಈ ಪದಕ್ಕೆ `ಕೂಡುವುದು’ `ಸೇರುವುದು’ `ಒಂದಾಗುವುದು’ ಎಂದು ಅರ್ಥಕೊಡಬಹುದು. ಅದನ್ನು ಸ್ವಲ್ಪ ದೇವರು ಧರ್ಮ ಇತ್ಯಾದಿಗಳ ಕಡೆಗೆ ಎಳೆದುಕೊಂಡರೆ `ಜೀವಾತ್ಮ ಪರಮಾತ್ಮನಲ್ಲಿ ಸೇರುವುದು’, `ಭಕ್ತನು ದೇವರಲ್ಲಿ ಒಂದಾಗುವುದು’ ಇತ್ಯಾದಿಯಾಗಿ ಅರ್ಥೈಸಬಹುದು. `ಯೋಗ’ ಎಂಬುದು ಭಾರತೀಯರಿಗೆ ಹೊಸದೇನಲ್ಲ. ಹಾಗೆ ನೋಡಿದರೆ ಅದರ ಹುಟ್ಟನ್ನು ಇಲ್ಲಿಯೇ ಗುರುತಿಸಲಾಗುತ್ತದೆ.  ಭಗವದ್ಗೀತೆ ಸೇರಿದಂತೆ ಅನೇಕ ಪ್ರಾಚೀನ ಭಾರತೀಯ ಗ್ರಂಥಗಳಲ್ಲಿ ಇದರ ಉಲ್ಲೇಖಗಳಿವೆ. ಜೀವಾತ್ಮನು ಪರಮಾತ್ಮನನ್ನು ಸೇರುವ ಮುಕ್ತಿಯನ್ನು ಮನುಷ್ಯ ಜೀವನದ ಪರಮಗುರಿ ಎಂದು ಸಾರುವ ನಮ್ಮ ಧಾರ್ಮಿಕ ಸಾಹಿತ್ಯ ಈ ಗುರಿಸಾಧನೆಗೆ ಮನುಷ್ಯನಿಗೆ ನಾಲ್ಕು ದಾರಿಗಳನ್ನು ನೀಡುತ್ತದೆ. ಅವನ್ನು ಜ್ಞಾನಯೋಗ, ರಾಜಯೋಗ, ಭಕ್ತಿಯೋಗ ಮತ್ತು ಕರ್ಮಯೋಗ ಎಂದು ಗುರುತಿಸಲಾಗುತ್ತದೆ.

ಜ್ಞಾನದ ಮೂಲಕ ದಿವ್ಯತೆಯನ್ನು ಅರಿಯುವುದು ಜ್ಞಾನಯೋಗವಾದರೆ ಮನಸ್ಸಿನ ನಿಗ್ರಹದಿಂದ ಮನುಷ್ಯ ತನ್ನ ದಿವ್ಯತೆಯನ್ನು ಅರಿಯುವುದು ರಾಜಯೋಗ. ಹಾಗೆಯೇ ದೇವರ ಮೇಲೆ ಭಕ್ತಿಯಿಟ್ಟು ತನ್ನನ್ನು ದೇವರಿಗೆ ಸಮರ್ಪಿಸಿಕೊಳ್ಳುವ ಮೂಲಕ ದಿವ್ಯತೆಯನ್ನು ಅರಿಯುವುದು ಭಕ್ತಿಯೋಗವಾದರೆ ತನ್ನ ಪಾಲಿನ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡುವ ಮೂಲಕ ತನ್ನ ದಿವ್ಯತೆಯನ್ನು ಅರಿತು ಆ ಮೂಲಕ ಭಗವಂತನನ್ನು ಸೇರುವುದು ಕರ್ಮಯೋಗ. ಸ್ವಾಮಿ ವಿವೇಕಾನಂದರ ಈ ಯೋಗವಿಧಗಳ ಈ ವಿವರಣೆಯೇ ಬಹುತೇಕ ಎಲ್ಲ ಯೋಗಾಚಾರ್ಯರ ವಿವರಣೆಯೂ ಆಗಿದೆ ಎನ್ನಬಹುದು. ಈ ವಿವರಣೆಯನ್ನು ನೀಡುವ ವಿವೇಕಾನಂದರು ಇವುಗಳೆಲ್ಲ ದೇವರೆಂಬ ಒಂದೇ ಗುರಿಯೆಡೆಗೆ ಒಯ್ಯುವ ಹಲವು ಮಾರ್ಗಗಳು, ಒಂದಕ್ಕಿಂತ ಹೆಚ್ಚು ಮಾರ್ಗಗಳಿರುವುದು ಸೌಲಭ್ಯವೇ ಹೊರತು ಸಂಕಟವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.


ಯೋಗ ಮತ್ತು ಭಗವದ್ಗೀತೆ:

‘ಯೋಗ ಎಂಬ ಪದ `ಸಂದರ್ಭ’ `ಅವಕಾಶ’ ಅನ್ನುವ ಅರ್ಥದಲ್ಲಿಯೂ ಬಳೆಕೆಯಾಗುವುದಿದೆ. ಭಗವದ್ಗೀತೆಯ ಎಲ್ಲ ಹದಿನೆಂಟು ಅಧ್ಯಾಯಗಳೂ `ಯೋಗ’ ಎಂಬ ಪದವನ್ನು ತಮ್ಮೆಲ್ಲ ಶೀರ್ಷಿಕೆಯಲ್ಲೂ ಒಳಗೊಂಡಿರುವುದು ಬಹುಶಃ ಇದೇ ಅರ್ಥದಲ್ಲಿ. ಈ ಯೋಗದ ಹುಟ್ಟು ಬೆಳವಣಿಗೆಯ ಬಗ್ಗೆ ಗೀತೆಯಲ್ಲಿ ಕೃಷ್ಣನ ಬಾಯಿಂದ ಅರ್ಜುನನಿಗೆ ಹೇಳಿಸಲಾಗಿರುವ ಮಾತು ಹೀಗಿದೆ. ‘ಈ ಅವ್ಯಯವಾದ ಯೋಗವನ್ನು ನಾನು ಸೂರ್ಯನಿಗೆ ಹೇಳಿದೆನು; ಸೂರ್ಯನು ಮನುವಿಗೆ ಹೇಳಿದನು; ಮನುವು ಇಕ್ಷ್ವಾಕುವಿಗೆ ಹೇಳಿದನು. ಹೀಗೆ ಪರಂಪರೆಯಿಂದ ಬಂದ ಇದನ್ನು ರಾಜರ್ಷಿಗಳು ತಿಳಿದಿದ್ದರು. ಆ ಯೋಗವು ದೀರ್ಘಕಾಲವಾದುದರಿಂದ ಇಲ್ಲಿ ನಷ್ಟವಾಯಿತು. (ನೀನು) ನನಗೆ ಭಕ್ತನೂ ಸ್ನೇಹಿತನೂ ಆಗಿರುವುದರಿಂದ ಈ ಪುರಾತನ ಯೋಗವೇ ಈಗ ನನ್ನಿಂದ ನಿನಗೆ ಹೇಳಲ್ಪಡುತ್ತಿದೆ; ಏಕೆಂದರೆ ಇದು ಉತ್ತಮವಾದ ರಹಷ್ಯವು” (ಭಗೀ:4:1-3).

ಗೀತೆಯ ಈ ಮಾತುಗಳು ಯೋಗದ ಬಗ್ಗೆ ಕೆಲ ಸಂಗತಿಗಳನ್ನು ದೃಢಪಡಿಸುತ್ತವೆ. ಅವೆಂದರೆ ಮೊದಲನೆಯದಾಗಿ ಯೋಗವು ಅತ್ಯಂತ ಪುರಾತನವಾಗಿದ್ದು ಪರಂಪರೆಯಿಂದ ಹರಿದುಬಂದಂಥದ್ದು. ಎರಡನೆಯದು ಅದನ್ನು ರಾಜರ್ಷಿಗಳು ತಿಳಿದಿದ್ದರು. ಅಂದರೆ ಜನಸಾಮಾನ್ಯರಿಗೆ ಅದು ತಿಳಿದಿರಲಿಲ್ಲ ಅಥವಾ ಅದು ಅವರಿಗೆ ಬೇಕಿರಲಿಲ್ಲ. ಇನ್ನೊಂದು ಬಹಳ ಮುಖ್ಯವಾದದ್ದು ಇದನ್ನು ತಮಗೆ ಬೇಕಾದವರಿಗೆ ಮಾತ್ರ ಗುಟ್ಟಾಗಿ ಕಲಿಸಲಾಗುತ್ತಿತ್ತು. ಇದನ್ನೇ ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಿಸುವುದಾದರೆ ಯೋಗವು ಯಾವ ಕಾಲದಲ್ಲಿಯೂ ಜನಸಾಮಾನ್ಯರೂ ಸೇರಿದಂತೆ ಎಲ್ಲರೂ ಸಾಮೂಹಿಕವಾಗಿ ಭೇದಭಾವವಿಲ್ಲದೇ ಯಾವುದೇ ರಹಸ್ಯವಿಲ್ಲದೇ ತೆರೆದ ಮನಸ್ಸು ಹೃದಯಗಳಿಂದ ಮಾಡುವಂಥದ್ದಾಗಿರಲಿಲ್ಲ ಎಂದು ನಾವು ಹೇಳಬಹುದು. ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಸಂಗತಿ ಎಂದೆ ಅದು ಯೋಗವಿರಬಹುದು ಆಯುರ್ವೇದ ಪದ್ಧತಿಯ ಔಷಧಕ್ರಮ ಇರಬಹುದು ಇವುಗಳಲ್ಲೆಲ್ಲ `ರಹಸ್ಯ’ವನ್ನು ಕಾಪಾಡಿಕೊಂಡು ಬರಲಾಗುತ್ತಿತ್ತು ಮತ್ತು ಅದರ ಪ್ರಯೋಜನಗಳು ಎಲ್ಲರಿಗೂ ಸಿಗದಂತೆ ನೋಡಿಕೊಳ್ಳಲಾಗುತ್ತಿತ್ತು ಎನ್ನುವುದು!


ಸರ್ವರೋಗಕ್ಕೂ ಯೋಗವೇ ಮದ್ದು!

ಈಗ ಈ ಯೋಗಕ್ಕೆ ಜನ ಸಮೂಹಸನ್ನಿಯಂತೆ ಮುಗಿಬಿದ್ದಿದ್ದಾರೆ. ಮನುಷ್ಯನ ಎಲ್ಲ ಬಗೆಯ ದೈಹಿಕ ಮತ್ತು ಮನಸ್ಸಿನ ಸಮಸ್ಯೆ ಸಂಕೋಲೆಗಳಿಗೆ ಯೋಗವು ಏಕೈಕ ಮದ್ದೇನೊ ಎನ್ನುವಂತೆ ಜನರ ಬೆಂಬಲ ಈಗ ಅದಕ್ಕೆ ದಕ್ಕಿದೆ. ಕಳೆದ ಕೆಲವು ವರ್ಷಗಳ ಹಿಂದೆ ಜೂನ್ 21ನ್ನು ‘ಅಂತರರಾಷ್ಟ್ರೀಯ ಯೋಗದಿನ’ವೆಂದು ಘೋಷಿಸಿದ ಮೇಲಂತೂ ಈಗದು ಅಂತರರಾಷ್ಟ್ರೀಯ ವಿದ್ಯಮಾನವಾಗಿದೆ. ಅದಕ್ಕಾಗಿ ದೇಶದ ಜನರೆಲ್ಲ ಹೆಮ್ಮೆಯಿಂದ ಬೀಗುತ್ತಿದ್ದಾರೆ. ಭಾರತೀಯ ಜೀವನ ಪದ್ಧತಿಯೊಂದು ವಿಶ್ವದ ಗಮನ ಸೆಳೆಯಿತು ಎಂಬ ಬಗ್ಗೆ ದೇಶವಾಸಿಗಳಿಗೆ ಹೆಮ್ಮೆಯುಂಟಾಗುವುದು ತಪ್ಪಲ್ಲ. ಆದರೆ ಅಭಿಮಾನವೆಂಬುದು ಮಿತಿಮೀರಿ ತಾರಕಕ್ಕೇರಿದರೆ ಅದು ಒಳಿತು ಕೆಡುಕುಗಳನ್ನು ಸ್ವೀಕರಿಸಿ ಆಲೋಚಿಸುವ ಮನಸ್ಥಿತಿಯನ್ನು ಹೊಸಕಿಹಾಕಿಬಿಡುತ್ತದೆ ಎಂಬುದು ಕೂಡ ಅಷ್ಟೇ ಸತ್ಯ.

ಇಂತಹ ಸಂದರ್ಭದಲ್ಲಿ ಯೋಗದ ಬಗ್ಗೆ ಟೀಕೆ ಇರಲಿ ವಿಮರ್ಶೆಯನ್ನು ಕೇಳುವ ಮನಸ್ಥಿತಿ ಕೂಡ ಸಾಮಾನ್ಯವಾಗಿ ಜನಸಮುದಾಯಕ್ಕೆ ಇರುವುದಿಲ್ಲವಾದರೂ ಸತ್ಯಸಂಗತಿಗಳ ಬೌದ್ಧಿಕ ಚರ್ಚೆಯನ್ನು ನಿಲ್ಲಿಸಲು ಬರುವುದಿಲ್ಲ. ಕಾಲವನ್ನು ಜೀವಂತವಾಗಿಡಲಿಕ್ಕೆ ಇಂತಹ ವೈಚಾರಿಕೆ ಚರ್ಚೆಗಳು ಅನಿವಾರ್ಯ. ಇಲ್ಲಿ ಇದಕ್ಕೆ ಪೂರಕವಾದ ಇನ್ನೊಂದು ಸಂಗತಿಯನ್ನು ಉಲ್ಲೇಖಿಸಿದರೆ ತಪ್ಪಾಗಲಾರದೇನೋ. ಯೋಗದಂತೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ ಕೂಡ ಅಂತರರಾಷ್ಟ್ರೀಯ ಮಹತ್ವ ಪಡೆದು ಏಪ್ರಿಲ್ 14ನ್ನು ವಿಶ್ವಸಂಸ್ಥೆ `ಜಾಗತಿಕ ಜ್ಞಾನದ ದಿನ’ ಎಂದು ಘೋಷಿಸಿದೆ. ಆದರೆ ಯೋಗದಿನದಂತೆ ಜ್ಞಾನದಿನಕ್ಕೆ ನಮ್ಮಜನ ಏಕೆ ಮುಗಿಬೀಳುತ್ತಿಲ್ಲ. ಅದನ್ನು ಇನ್ನೂ ಬಾಬಾಸಾಹೇಬರ ಭಾವಚಿತ್ರಕ್ಕೊಂದು ಮಾಲೆಹಾಕಿ ಫೋಟೋ ಹೊಡೆದುಕೊಂಡು ದಾಖಲೀಕರಣ ಮಾಡುವ ಕಾಟಾಚಾರದ ಹಂತದಲ್ಲಿಯೇ ನಮ್ಮ ಜನ ಇಟ್ಟುಕೊಂಡಿರುವುದೇಕೆ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ನಮಗೆ ಎದುರಾಗಬೇಕು. ಆಗ ನಮಗೆ ಉತ್ತರ ಹೊಳೆಯುತ್ತದೆ. `ಜ್ಞಾನವು ವಿಚಾರವಂತಿಕೆಯನ್ನು ಬೆಳೆಸುವ ಸಾಧನ. ಯೋಗ ಅದಕ್ಕೆ ವಿರುದ್ಧವಾಗಿ `ಮೋಡಿ’ ಮಾಡುವಂಥದ್ದು! ಜ್ಞಾನವು ನಮ್ಮ ಕಣ್ಣು ತೆರೆಸುವಂಥದ್ದು; ಯೋಗವು ಕಣ್ಣುಮುಚ್ಚುವುದನ್ನು ಕಲಿಸುವಂಥದ್ದು. ನಮಗೆ ಕಣ್ಣುತೆರೆಸುವಂಥದ್ದಕ್ಕಿಂತ ನಮ್ಮನ್ನು ಎಚ್ಚರಿಸುವಂಥದ್ದಕ್ಕಿಂತ ನಮ್ಮ ಕಣ್ಣುಮುಚ್ಚುವಂಥದ್ದು ನಮ್ಮನ್ನು ಮೋಡಿಗೊಳಪಡಿಸುವಂಥದ್ದೇ ಹೆಚ್ಚು ಇಷ್ಟ! ಏಕೆಂದರೆ ನಾವು ಭಾವಜೀವಿಗಳು!!


ಯೋಗ ಮತ್ತು ಅದರ ತಾತ್ವಿಕತೆ:

ಭಾರತೀಯ ಯೋಗವನ್ನು `ಮೋಡಿ’ ಮಾಡುವಂಥದ್ದನ್ನು ಎನ್ನುವಲ್ಲಿ ನನಗೆ ಅದರ ಮಹತ್ವವನ್ನು ಅಲ್ಲಗಳೆಯುವ ಯಾವ ಉದ್ದೇಶವೂ ಇಲ್ಲ. ಅದರ ಅಗತ್ಯವೂ ನನಗಿಲ್ಲ. ಜನಸಾಮಾನ್ಯರ ಮೇಲೆ ಅದು ಮಾಡುವ ಪರಿಣಾಮಕ್ಕಷ್ಟೇ ಈ ಮಾತನ್ನು ಅನ್ವಯಿಸಿಕೊಳ್ಳಬೇಕು. ಈಗ ಯೋಗವನ್ನು ಕುರಿತ ಕೆಲವು ಅಭಿಪ್ರಾಯಗಳನ್ನು ನೋಡೋಣ. ಕೆಲವು ಪ್ರಾಚೀನ ಸಾಹಿತ್ಯ ಉಲ್ಲೇಖಗಳನ್ನು ಗಮನಿಸುವುದಾದರೆ ಬ್ರಾಹ್ಮಣಗಳು ಹೇಳುವಂತೆ ಯೋಗವು ಸಾಂಖ್ಯದ ಒಂದು ರೂಪವಷ್ಟೆ. ಇದು ಮನಸ್ಸಿನ ಏಕಾಗ್ರತೆಯನ್ನು ಗಳಿಸುವ ಸಲುವಾಗಿ ಒಂದು ರೀತಿಯ ಸಮಾನ ಶಿಸ್ತನ್ನು ಕ್ರಮಬದ್ಧಗೊಳಿಸುವ ಪ್ರಯತ್ನ. ನಮ್ಮ ದೇಶದಲ್ಲಿ ಬಹುತೇಕ ಎಲ್ಲ ಯೋಗಾಚಾರ್ಯರು ಯೋಗವನ್ನು ಕಲಿಸಲು ಬಳಸುವ ಅತ್ಯಂತ ಪ್ರಾಚೀನ ಶಾಸ್ತ್ರಗ್ರಂಥವೆಂದರೆ ಅದು ಪತಂಜಲಿ ಮಹರ್ಷಿಗಳ `ಯೋಗಸೂತ್ರ’. ಅದರ ಮಹತ್ವವನ್ನು ವಿವರಿಸುತ್ತ ಭಾರತದ ಬಹುಮುಖ್ಯ ತತ್ವಜ್ಞಾನಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ತಮ್ಮ ಅಭಿಪ್ರಾಯವನ್ನು ದಾಖಲಿಸುವುದು ಹೀಗೆ:

“ಪತಂಜಲಿಯ ಪ್ರಕಾರ ಯೋಗವೆಂದರೆ ಭೌತಿಕವೂ, ಮಾನಸಿಕವೂ ಆದ ಮಾನವ ಸ್ವಭಾವದ ಹಲವಾರು ಗುಣಗಳನ್ನು ನಿಗ್ರಹಿಸುವ ಮೂಲಕ ಪರಿಪೂರ್ಣತೆಯನ್ನು ಸಾಧಿಸುವ ಶಿಸ್ತುಬದ್ಧ ಪ್ರಯತ್ನ. ಪತಂಜಲಿಯು ದೇಹವನ್ನು ಅದರ ಅಶಾಂತತೆಯಿಂದ ಮುಕ್ತಗೊಳಿಸಲು ಮತ್ತು ಅದರ ಕಲ್ಮಶಗಳಿಂದ ಬಿಡುಗಡೆಗೊಳಿಸಲು ಕೆಲವು ಅಭ್ಯಾಸಗಳನ್ನು ಸೂಚಿಸುತ್ತಾನೆ. ಈ ವಿಧಾನಗಳಿಂದ ಪಡೆಯುವ ಶಕ್ತಿಯನ್ನು ತೊಡಗಿಸಿ ಪರಮಾವಧಿಯ ಯೌವನವನ್ನು ಮತ್ತು ದೀರ್ಘಾಯಸ್ಸನ್ನು ಪಡೆಯಬಹುದು ಮತ್ತು ಅವನ್ನು ಆಧ್ಯಾತ್ಮಿಕ ಬಿಡುಗಡೆಯ ಆಸಕ್ತಿಗಳಲ್ಲಿ ತೊಡಗಿಸಬಹುದು.”
ರಾಧಾಕೃಷ್ಣನ್ ಅವರ ಅಭಿಪ್ರಾಯದಂತೆ ಅದು ಮನಸ್ಸನ್ನು ಅಶಾಂತತೆಯಿಂದ ಬಿಡುಗಡೆಗೊಳಿಸುವುದೋ ಇಲ್ಲವೋ ಅದನ್ನು ಕಲ್ಮಶಗಳಿಂದ ಬಿಡುಗಡೆಗೊಳಿಸಲು ಎಷ್ಟರಮಟ್ಟಿಗೆ ಪ್ರಯತ್ನಿಸುತ್ತದೋ ಆದರೆ ಅದೊಂದು ಶಿಸ್ತುಬದ್ಧ ಪ್ರಯತ್ನವಂತೂ ಹೌದು. ಅದರ ಕ್ರಮಬದ್ಧ ಆಚರಣೆ ನಮಗೆ ಒಂದಿಷ್ಟು ಲಾಭಗಳನ್ನು ತರಲಿಕ್ಕೆ ಸಾಧ್ಯವಿದೆ. ಆದರೆ ಅದರ ತಾತ್ವಿಕತೆಯಲ್ಲಿನ ಮನುಷ್ಯ ವಿರೋಧಿಯಾದ ಅಂಶವೊಂದರ ಕಡೆ ರಾಧಾಕೃಷ್ಣನ್ ಅವರ ಗಮನ ಕೂಡ ಹರಿದಿಲ್ಲವೆಂಬುದನ್ನು ನಾವು ಗಮನಿಸಬೇಕು. ಆ ತಾತ್ವಿಕತೆ ಏನು ಎಂಬುದನ್ನು ಚರ್ಚಿಸುವ ಮುನ್ನ ಪ್ರಾಚೀನ ಸಾಹಿತ್ಯದಲ್ಲಿಯೇ ಯೋಗದ ಬಗ್ಗೆ `ಭಿನ್ನಾಭಿಪ್ರಾಯ’ ಇದ್ದ ಬಗ್ಗೆ ನಮಗೆ ಪುರಾವೆಗಳು ಸಿಗುವುದನ್ನು ತಜ್ಞರು ಗುರುತಿಸಿರುವುದನ್ನು ಒಂದು ಕ್ಷಣ ಗಮನಿಸೋಣ. ಪ್ರಸಿದ್ಧ ಮೀಮಾಂಸ ತತ್ವಕಾರ ಕುಮಾರಿಲಭಟ್ಟನ `ಯೋಗಾನುಭವವು ಕೇವಲ ಮಾನಸಿಕ ಕಲ್ಪನೆ. ಆದ್ದರಿಂದ ಅದು ಮನಸ್ಸಿನ ಇತರ ಕಲ್ಪನೆಗಳಿಗಿಂತ ಯಾವ ರೀತಿಯಿಂದಲೂ ಭಿನ್ನವಲ್ಲ’ ಎಂಬ ಅಭಿಪ್ರಾಯ ಇಂಥವುಗಳಲ್ಲಿ ಒಂದು.

ಈಗ ಯೋಗದ ಮನುಷ್ಯ ವಿರೋಧಿ ತಾತ್ವಿಕತೆಯೊಂದನ್ನು ಚರ್ಚಿಸಬಹುದು. ಯಾವುದೇ ಯೋಗಾಚಾರ್ಯನು ತನ್ನ ಶಿಷ್ಯರಿಗೆ ಯೋಗಾಭ್ಯಾಸವನ್ನು ಆರಂಭಿಸುವ ಮೊದಲು ಯೋಗವೆಂದರೇನು ಎಂದು ಹೇಳುವಾಗ ಸಾಮಾನ್ಯವಾಗಿ ಹೇಳಿಯೇ ಹೇಳುವ ಮಾತೆಂದರೆ ಅದು ಪತಂಜಲಿಯ `ಯೋಗಃ ಚಿತ್ತವೃತ್ತಿ ನಿರೋಧಃ’ ಎಂಬ ಧ್ಯೇಯವಾಕ್ಯ. ಈ ವಾಕ್ಯದ ಅರ್ಥವನ್ನು ಬಹಳಜನ ಹೇಗೆ ಬೇಕೋ ಹಾಗೇ ಅದನ್ನು ಎಳೆದುಕೊಂಡು ಅರ್ಥೈಸುವುದುಂಟು. ಅದು ಮನಸ್ಸಿನ ಕೆಟ್ಟ ಭಾವನೆಗಳನ್ನು ನಿರೋಧಿಸುವುದು ಎಂದು ಹೇಳುವುದೂ ಉಂಟು. ಆದರೆ `ಚಿತ್ತವೃತ್ತಿ’ ಎನ್ನುವಲ್ಲಿ ಒಳ್ಳೆಯ ಮತ್ತು ಕೆಟ್ಟ ಎಂಬ ಭೇದವನ್ನೇನೂ ಅಲ್ಲಿ ಮಾಡಲಾಗಿಲ್ಲ.  ಪತಂಜಲಿ ಸ್ಪಷ್ಟಪಡಿಸುವಂತೆ ಯೋಗದ ಮೂಲ ಉದ್ದೇಶವೇ ಒಟ್ಟಾರೆ `ಚಿತ್ತವೃತ್ತಿಗಳನ್ನು ನಿರೋಧಿಸುವುದು’ ಅಂದರೆ ‘ಮನಸ್ಸಿನ ಆಲೋಚನೆಗಳನ್ನು ಇಲ್ಲವಾಗಿಸುವುದು’. ಇಲ್ಲಿ ಮನಸ್ಸಿನ ಆಲೋಚನೆಗಳನ್ನು ಇಲ್ಲವಾಗಿಸುವುದು ಅಂದರೇನು? ನಮ್ಮ ಸ್ವತಂತ್ರ  ಆಲೋಚನಾ ಶಕ್ತಿಯನ್ನು ನಾಶಪಡಿಸಿ ನಮ್ಮನ್ನು ಹೇಳಿದಂತೆ ಕೇಳುವ ಗೊಂಬೆಗಳನ್ನಾಗಿ ಮಾಡುವುದಲ್ಲದೇ ಬೇರೇನೂ ಅಲ್ಲ ಎಂಬುದನ್ನು ಈಗಾಗಲೇ ಹಲವಾರು ವಿದ್ವಾಂಸರು ವಿಶ್ಲೇಷಣೆ ಮಾಡಿದ್ದಾರೆ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ಇದು ಕೇವಲ ಯೋಗಶಾಸ್ತ್ರದ ತಪ್ಪಲ್ಲ. ಏಕೆಂದರೆ ಚಿತ್ತವೃತ್ತಿ ಅಂದರೆ ಮನಸ್ಸಿನ ವ್ಯಾಪಾರಗಳು (ಆಲೋಚನೆಗಳು) ಮನುಷ್ಯ ಪರಮಾತ್ಮನನ್ನು ಸೇರಲು ಇರುವ ಅಡೆತಡೆಗಳು ಎಂದೇ ನಮ್ಮ ಶಾಸ್ತ್ರಗಳು ಬಿಂಬಿಸಿವೆ! ಈ ಹಿನ್ನಲೆಯಲ್ಲಿ ಯೋಗವು ಹಾಗೆ ಹೇಳಿದ್ದರೆ ಅದು ಶಾಸ್ತ್ರಸಮ್ಮತವೇ ಆಗುತ್ತದೆಯಲ್ಲ!

ಜ್ಞಾನ ಮತ್ತು ಗೀತೆ
ಇದೇ ತತ್ವವನ್ನು ಭಗವದ್ಗೀತೆಯಲ್ಲಿ ಕೂಡ ಪ್ರತಿಪಾದಿಸಲಾಗಿದೆ. ಭಗವದ್ಗೀತೆಯಲ್ಲಿ ಬರುವ `ನಹೀ ಜ್ಞಾನೇನ ಸದೃಶಂ’ ಎಂಬ ಒಂದು ಮಾತು ಅತ್ಯಂತ ಜನಪ್ರಿಯವಾದದ್ದು. ಜ್ಞಾನದ ಮಹತ್ವವನ್ನು ಹೇಳಬೇಕಾದ ಸಂದರ್ಭ ಬಂದಾಗಲೆಲ್ಲ ನಮ್ಮ ಲೇಖಕರು, ಭಾಷಣಕಾರರು ಬಹುವಾಗಿ ಉಲ್ಲೇಖಿಸುವ ಈ ಹೇಳಿಕೆ ಕರ್ನಾಟಕದ ಒಂದು ವಿಶ್ವವಿದ್ಯಾಲಯದ ಧ್ಯೇಯವಾಕ್ಯಕೂಡ ಆಗಿದೆ! ಇಲ್ಲಿ ತಮಾಸೆಯ ಸಂಗತಿ ಎಂದರೆ ಇವತ್ತು ಯಾವುದನ್ನು ಇಡೀ ಆಧುನಿಕ ಪ್ರಪಂಚ `ಜ್ಞಾನ’ವೆಂದು ಪರಿಗಣಿಸಿದೆಯೋ ಅದು ಭಗವದ್ಗೀತೆಯ ಪ್ರಕಾರ ಜ್ಞಾನವೇ ಅಲ್ಲ! ಜ್ಞಾನಕ್ಕೆ ಮೂಲ ಕಾರಣಗಳೆಂದು ಪರಿಗಣಿತವಾಗಿರುವ ಬುದ್ಧಿ, ಮನಸ್ಸು, ಅವುಗಳಿಗೆ ಸಹಾಯಕಾಗಿರುವ ಇಂದ್ರಿಯಗಳು ಇವು ಅದರ ಪ್ರಕಾರ ಜ್ಞಾನಕ್ಕೆ ಸೌಲಭ್ಯಗಳಲ್ಲ; ಬದಲಾಗಿ ಅಡೆತಡೆಗಳು!


ಈ ಹಿನ್ನಲೆಯಲ್ಲಿ ನೋಡಿದಾಗ ಗೀತೆಯ ಪ್ರಕಾರ ಅದರ ಶ್ಲೋಕಭಾಗವನ್ನು ವಾಕ್ಯವನ್ನು ಧ್ಯೇಯವಾಕ್ಯವಾಗಿ ಹೊಂದಿರುವ ಮೇಲಿನ ವಿಶ್ವವಿದ್ಯಾಲಯ ಸೇರಿದಂತೆ ಪ್ರಪಂಚದ ಬಹತೇಕ ವಿಶ್ವವಿದ್ಯಾಲಯಗಳು ನೀಡುವ ಪದವಿಗಳು, ಮಾಡಿರುವ ಸಂಶೋಧನೆಗಳು ಜ್ಞಾನದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಏಕೆಂದರೆ ಅವೆಲ್ಲ ಗೀತೆಯು ಜ್ಞಾನಕ್ಕೆ ಅಡೆತಡೆಗಳೆಂದು ಪ್ರತಿಪಾದಿಸುವ ಮನಸ್ಸಿನ ಆಲೋಚನೆಯಿಂದ ಜನ್ಮತಾಳಿರುವಂಥವು! ಹಾಗಾದರೆ ಗೀತೆಯ ಪ್ರಕಾರ ಜ್ಞಾನವೆಂದರೇನು ಎಂಬ ಪ್ರಶ್ನೆ ಇಲ್ಲಿ ಏಳುತ್ತದೆ. ಅದರ ಪ್ರಕಾರ ಜ್ಞಾನವೆಂದರೆ ಮನುಷ್ಯ ಮನಸ್ಸು, ಬುದ್ದಿ, ಮೆದುಳು ಸೇರಿದಂತೆ ತನ್ನ ಇಂದ್ರಿಯಗಳನ್ನು ಬಳಸಿಕೊಳ್ಳದೆ ಪಡೆಯುವ ಎಂಥದೋ ಒಂದು ರೀತಿಯ ಅನುಭವ! (ಹಾಗೆ ಅನುಭವವೊಂದನ್ನು ಪಡೆಯಲು ಸಾಧ್ಯವಿದೆಯೇ ಎನ್ನುವುದು ಹೆಚ್ಚು ಚರ್ಚೆಯನ್ನು ನಿರೀಕ್ಷಿಸುವ ಅಂಶ.) ಒಟ್ಟಿನಲ್ಲಿ ಸಾರಾಂಶೀಕರಿಸಿ ಹೇಳುವುದಾದರೆ ಆಧುನಿಕ ಪ್ರಪಂಚ ಯಾವುದನ್ನು ಜ್ಞಾನವೆಂದು ಒಪ್ಪಿಕೊಂಡಿದೆಯೋ ಅದು ಗೀತೆಯ ಪ್ರಕಾರ ಜ್ಞಾನವಲ್ಲ; ಅದರ ಪ್ರಕಾರ ಜ್ಞಾನವಾದದ್ದು ಆಧುನಿಕ ಪ್ರಪಂಚದ ಪ್ರಕಾರ ಜ್ಞಾನವಲ್ಲ!

ಮತ್ತೆ ಗೀತೆಯನ್ನು ಬಿಟ್ಟು ಯೋಗಕ್ಕೆ ಬರುವುದಾದರೆ, ಈ ಪ್ರಕೃತಿಯಲ್ಲಿ ಮನುಷ್ಯ ಇತರ ಪ್ರಾಣಿಗಳಿಂದ ಬೇರೆಯಾಗಿರುವುದೇ ಅವನ ಯೋಚನಾಶಕ್ತಿಯಿಂದ. ಅದೇ ಅವನನ್ನು ತನ್ನ ಸಹಜೀವಿಗಳಿಂದ ಬೇರ್ಪಡಿಸಿರುವ ಮುಖ್ಯ ಅಂಶ. ಈ ಯೋಚನಾಶಕ್ತಿ ಎಂಬುದು ಚಿತ್ತವೃತ್ತಿಗಳಿಂದಲೇ ಅಂದರೆ ಮನಸ್ಸಿನ ಯೋಚನೆಗಳಿಂದಲೇ ಉತ್ಪತ್ತಿಯಾಗುವಂಥದ್ದು. ಮನುಷ್ಯ ಎಂಬ ಪದ ಬಂದಿರುವುದೇ ಮನಸ್ಸು ಎಂಬ ಪದದಿಂದ. ಮನಸ್ಸು ಇಲ್ಲದವನನ್ನು ಮನುಷ್ಯ ಎಂದು ಕರೆಯಲಾಗದು. ಹೀಗೆ ಮನುಷ್ಯನ ಅಸ್ತಿತ್ವ ನಿಂತಿರುವುದೇ ಅವನ ಮನಸ್ಸಿನ ವ್ಯಾಪಾರಗಳಿಂದ. ಯೋಗದ ಉದ್ದೇಶ ಮನಸ್ಸಿನ ಆಲೋಚನಾ ಕ್ರಮವನ್ನೇ ನಿಲ್ಲಿಸುವುದು ಎಂದರೆ ಮನಸ್ಸಿಲ್ಲದ ಮನುಷ್ಯನನ್ನು ತಯಾರುಮಾಡುವುದು. ಇದು ಮಾನವ ವಿರೋಧಿ ಮಾತ್ರವಲ್ಲ ಪ್ರಕೃತಿಯ ವಿರೋಧಿಕೂಡ ಹೌದು ಎಂಬುದನ್ನು ಹಲವಾರು ವಿದ್ವಾಂಸರು ಈಗಾಗಲೇ ತಮ್ಮ ಅಧ್ಯಯನಗಳಿಂದ ತೋರಿಸಿಕೊಟ್ಟಿದ್ದಾರೆ. ಆದರೆ ಅವು ನಮ್ಮ ಜನರಿಗೆ ಮುಟ್ಟಿದ್ದು ಕಡಿಮೆ. ಅದಕ್ಕೆ ಕಾರಣ ಅವು ಜ್ಞಾನಕ್ಕೆ ಸಂಬಂಧಿಸಿದಂಥವು. ನಮ್ಮಲ್ಲಿ ಜ್ಞಾನಕ್ಕಿಂತ ಮೋಡಿಗೆ ಮುಗಿಬೀಳುವವರ ಸಂಖ್ಯೆ ಹೆಚ್ಚಿರುವುದು ಇದಕ್ಕೆ ಕಾರಣ.

ಯೋಗವನ್ನು ಅನುಸರಿಸುವ ಜನರ ಎರಡು ಗುಂಪುಗಳು

ಯೋಗದ ತಾತ್ವಿಕತೆಯ ಬಗ್ಗೆ ಭಿನ್ನಾಭಿಪ್ರಾಯಗಳು ಏನೇ ಇರಲಿ ಅದನ್ನು ಒಂದು ವಿದ್ಯೆ ಎಂದು ನಾವೆಲ್ಲ ಒಪ್ಪಿಕೊಳ್ಳಲೇಬೇಕು. ಹಾಗಿಲ್ಲದಿದ್ದರೆ ಅದು ಇಂದು ವಿಶ್ವವ್ಯಾಪಿಯಾಗುತ್ತಿರಲಿಲ್ಲ. ಆದರೆ ಆ ವಿದ್ಯೆಯ ಅಗತ್ಯ ಯಾರಿಗೆ ಮತ್ತು ಏತಕ್ಕೆ ಇದೆ ಎಂಬುದನ್ನು ವಿವೇಚಿಸಿ ನಿರ್ಧರಿಸಿಕೊಳ್ಳುವಲ್ಲಿ ನಾವು ಎಡವಿದ್ದೇವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಯೋಗವನ್ನು ಅಭ್ಯಾಸ ಮಾಡುವವರನ್ನು ಮುಖ್ಯವಾಗಿ ಎರಡುವಿಧವಾಗಿ ವಿಂಗಡಿಸಲಾಗುತ್ತದೆ. ಅವರೆಂದರೆ ಮುಮುಕ್ಷುಗಳು ಮತ್ತು ಜನಸಾಮಾನ್ಯರು. ಮುಮುಕ್ಷುಗಳು ಅಂದರೆ ಯೋಗಿಗಳು. ಅವರು ದೇವರು ಧರ್ಮ, ಅಧ್ಯಾತ್ಮ ಇವುಗಳಲ್ಲಿ ತೀವ್ರ ಆಸಕ್ತಿಯುಳ್ಳಂಥ ಜನರು. ಯೋಗವನ್ನು ಅವರು ತಮ್ಮ ಜೀವನದ ಬಹುಮುಖ್ಯ ಭಾಗವಾಗಿ ಸ್ವೀಕರಿಸಿ ದಿನದ ಬಹುಪಾಲು ಸಮಯವನ್ನು ಯೋಗಾಭ್ಯಾಸದಲ್ಲಿಯೇ ತೊಡಗಿಕೊಂಡು, ಮನುಷ್ಯ ಹುಟ್ಟುಸಾವುಗಳಿಗೆ ಅತೀತವಾದಂಥ, ದೇವರನ್ನು ಸೇರಿ ಮುಕ್ತಿ ಪಡೆಯುವ ಮಾರ್ಗವಾಗಿ ಅನುಸರಿಸುತ್ತಾರೆ. ಅವರ ಅನುಭವವು ` ಪ್ರಯೋಗಕ್ಕೆ ದಕ್ಕದ ಅನುಭವ’ ಅಂದರೆ ಎಕ್ಸಪಿರಿಮೆಂಟಿಗೆ ಒಳಪಡದ ಎಕ್ಸಪೀರಿಯನ್ಸ್’ ಆಗಿರುವುದರಿಂದ ಆ ಬಗ್ಗೆ ಯಾವುದೇ ರೀತಿಯ ಚರ್ಚೆ ಅಸಾಧ್ಯ. ಹಾಗಾಗಿ ಅದನ್ನು ಅಲ್ಲಗಳೆಯುವುದು ಉದ್ಧಟತನವಾಗಬಹುದು. ಹಾಗಾಗಿ ಅಲ್ಲಿ ನಮಗಿರುವ ಆಯ್ಕೆ ಎರಡೇ ಒಂದು ಒಪ್ಪುವುದು ಇನ್ನೊಂದು ಬಿಡುವುದು.

ಇಂತಹ ಒಂದು ಅನುಭವವನ್ನು ಕುತೂಹಲಕ್ಕೆ ನೋಡುವುದಾದರೆ, ವಿಶ್ವಕವಿ ರವೀಂದ್ರ ನಾಥ್ ಠಾಕೂರ್, ಜಗತ್ಪ್ರಸಿದ್ಧ ಭಾರತೀಯ ಭೌತವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರೊಡನೆ ನಿಕಟ ಸಂಪರ್ಕ ಹೊಂದಿದ್ದ, ವಿಶ್ವವಿಖ್ಯಾತ ಯೋಗಿ ಪರಮಹಂಸ ಯೋಗಾನಂದ ಅವರ ಒಂದು ಟಿಪ್ಪಣಿಯನ್ನು ನೋಡಬಹುದು. ಜಗತ್ತಿನ ಬಹುತೇಕ ಎಲ್ಲ ಪ್ರಮುಖ ದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವ ಭಾರತದ ಕೆಲವೇ ಗ್ರಂಥಗಳಲ್ಲಿ ಒಂದಾದ ಅವರ `ಯೋಗಿಯ ಆತ್ಮಕಥೆ’ (ಅಟೋಬಯಾಗ್ರಫಿ ಆಫ್ ಎ ಯೋಗಿ)ಯಲ್ಲಿ ಅವರು ಹೀಗೆ ಬರೆಯುತ್ತಾರೆ:

“ಕೇವಲ ಜ್ಞಾನವನ್ನು ಹೊಂದಲು ಸಮರ್ಥವಾಗುವಂತೆ ಮಾನವನ ಮೆದುಳು ಪರಿಪುಷ್ಟಿಗೊಳ್ಳಬೇಕಾದರೆ ಒಂದು ದಶಲಕ್ಷ ವರ್ಷಗಳ ಸಾಧಾರಣ ರೋಗರಹಿತ ವಿಕಾಸದ ಅಗತ್ಯವಿದೆಯೆಂದು ಶಾಸ್ತ್ರಗ್ರಂಥಗಳು ಒತ್ತಿ ಹೇಳುತ್ತವೆ. ಒಂದು ದಿನದಲ್ಲಿ ಎಂಟೂವರೆ ಗಂಟೆಗಳ ಅವಧಿಯಲ್ಲಿ, ಒಂದು ಸಾವಿರ ಬಾರಿ ಅಭ್ಯಸಿಸಲ್ಪಟ್ಟ, `ಕ್ರಿಯಾ’ ಒಬ್ಬ ಯೋಗಿಗೆ, ಒಂದು ಸಾವಿರ ವರ್ಷಗಳಲ್ಲಿ ಸ್ವಾಭಾವಿಕವಾಗಿ ಉಂಟಾಗುವ ವಿಕಾಸವನ್ನು ತಂದುಕೊಡುತ್ತದೆ. ಒಂದು ವರ್ಷದಲ್ಲಿ 3,65,000 ವರ್ಷಗಳಷ್ಟು ವಿಕಾಸವಾಯಿತು. ಒಬ್ಬ ಕ್ರಿಯಾಯೋಗಿ ಪ್ರಜ್ಞಾಪೂರ್ವ ಸ್ವಪ್ರಯತ್ನದಿಂದ ಪೃಕೃತಿ ಒಂದು ದಶಲಕ್ಷ ವರ್ಷಗಳ ಅವಧಿಯಲ್ಲಿ ತಂದುಕೊಡುವಂತಹ ಪರಿಣಾಮವನ್ನೇ ಸತತ ಅಭ್ಯಾಸದ ಮೂರು ವರ್ಷಗಳಲ್ಲಿ ಪಡೆಯಬಲ್ಲ.” 

ಯೋಗದ ಈ ಶಕ್ತಿಯ ವಿವರ ದಾಖಲಿಸಿದ ಅವರು ಅದರಿಂದ ಪವಾಡಗಳು ಹೇಗೆ ಸಾಧ್ಯವಾಗುತ್ತವೆ ಇತ್ಯಾದಿ ವಿವರಗಳನ್ನು ನಮಗೆ ನೀಡುತ್ತಾರೆ ಮಾತ್ರವಲ್ಲ `ತನ್ನ ದೇಹ ಮನಸ್ಸುಗಳ ಮೇಲೆ ಪ್ಭುತ್ವ ಸಾಧಿಸಿದ ಕ್ರಿಯಾಯೋಗಿ ಕಟ್ಟಕಡೆಯದಾಗಿ ತನ್ನ `ಅಂತಿಮ ಶತ್ರು’ವೆನಿಸಿದ ಮರಣವನ್ನು ಸಹ ಜಯಿಸಿಬಿಡುತ್ತಾನೆ’ ಎಂಬ ನಿರ್ಧಾರಕ್ಕೆ ಬರುತ್ತಾರೆ. ಅವರ ಈ ಅಭಿಪ್ರಾಯವನ್ನು `ಅಲ್ಲ’ ಅನ್ನುವ ಅಧಿಕಾರ ನಮಗೆ ಬರುವುದು ಅವರು ಹೇಳಿದಂತೆ ಮಾಡಿದ ನಂತರವೇ. ಹಾಗಾಗಿ ಇಲ್ಲಿ ನಮಗಿರುವ ಆಯ್ಕೆಗಳು ನಾನು ಮೊದಲೇ ಹೇಳಿದಂತೆ `ಒಪ್ಪುವುದು’ `ಬಿಡುವುದು’ ಎರಡೆ! ಹಾಗಿದ್ದೂ ನಾವು ಒಪ್ಪಿಕೊಳ್ಳಲೇಬೇಕಾದ ಸತ್ಯವೆಂದರೆ ಹೀಗೆ ಯೋಗದಿಂದ ಮರಣವನ್ನೇ ಜಯಿಸಬಹುದು ಎಂದು ಹೇಳಿದ ಈ ಮಹಾಯೋಗಿ ಕೂಡ 1952ರಲ್ಲಿ ಮರಣಹೊಂದಿದರು ಎಂಬುದು!!

ಸಾಮಾನ್ಯರ ಯೋಗ: ಮತ್ತು ಮಾರುಕಟ್ಟೆಯ ತಂತ್ರಗಳು

ಇನ್ನು ಯೋಗವನ್ನು ಅನುಸರಿಸುವ ಎರಡನೆಯ ವರ್ಗ ಎಂದರೆ ಅದು ಜನಸಾಮಾನ್ಯರು. ಅಥವಾ ಯೋಗಿಗಳಲ್ಲದ ಇತರರು. ಇವತ್ತು ಯೋಗ ಅಂತರರಾಷ್ಟ್ರೀಯ ಮನ್ನಣೆ ಪಡೆದದ್ದು ಇಂಥವರ ಅಧಿಕ ಪಾಲ್ಗೊಳ್ಳುವಿಕೆಯಿಂದಲೇ ಎಂಬುದನ್ನು ನಾವು ಗಮನಿಸಬೇಕು. ಅಂತರರಾಷ್ಟ್ರಿಯ ಮನ್ನಣೆ ಎಂಬದು ಬರುವಾಗ ಅದಕ್ಕೆ ಹತ್ತು ಹಲವು ಕಾರಣಗಳು ಹಿತಾಸಕ್ತಿಗಳೂ ಕೆಲಸಮಾಡಿರುತ್ತವೆ ಎಂಬುದು ಅಲ್ಲಗಳೆಯಲಾಗದ ಮಾತು. ಕೇವಲ ಯೋಗಕ್ಕಿರುವ ಮಹತ್ವದಿಂದಲೇ ಅಂಥದ್ದೊಂದು ಮಾನ್ಯತೆ ಬಂತೆಂದು ನಂಬುವುದು ಸರಿಯಾಗಲಾರದು. ಆ ಮಹತ್ವದ ಜೊತೆಗೆ ಅದನ್ನು `ವಿದ್ಯೆ’ಯಿಂದ `ಉದ್ಯಮ’ವನ್ನಾಗಿ ಮಾಡಿಕೊಂಡ ಹಿತಾಸಕ್ತಿಗಳ ಪಾತ್ರ ಬಹಳ ದೊಡ್ಡಮಟ್ಟದಲ್ಲಿಯೇ ಇರುತ್ತದೆ. `ಅಪ್ಪಂದಿರ ದಿನ’ `ಅಮ್ಮಂದಿರ ದಿನ’ `ಪ್ರೇಮಿಗಳ ದಿನ’ ಹೀಗೆಲ್ಲ ದಿನಗಳು ಘೋಷಣೆಯಾಗುವುದು ನಮಗೆ ನಮ್ಮ ಪ್ರೀತಿಪಾತ್ರರನ್ನು ಪ್ರೀತಿಸುವುದನ್ನು ನೆನಪು ಮಾಡಿಕೊಡಲೆಂದೇ ಎಂದು ಕೊಂಡರೆ ತೀರಾ ಬಾಲಿಶವಾದೀತು.

ಈ ದಿನಗಳ ನೆಪದಲ್ಲಿ ಗ್ರೀಟಿಂಗ್ಸ್, ಉಡುಗೊರೆಗಳು, ಬಟ್ಟೆಬರೆಗಳು ಇತ್ಯಾದಿಗಳ ಮಾರಾಟವನ್ನು ಹೆಚ್ಚುಗೊಳಿಸುವ ಒಂದು ಮಾರುಕಟ್ಟೆಯ ತಂತ್ರ ದೊಡ್ಡಪ್ರಮಾಣದಲ್ಲಿ ಕೆಲಸಮಾಡುತ್ತದೆ. ಇದು ಮನುಷ್ಯ ಮನುಷ್ಯರ ನಡುವೆ ಸಂಬಂಧವನ್ನು ಉಳಿಸಿಕೊಳ್ಳಲು ಅಗತ್ಯವಾಗಿ ಖರ್ಚುಮಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಮಾಡುವ ತಂತ್ರ. `ಪ್ರೇಮಿಗಳ ದಿನ’ದಂದು ಒಂದಾದರೂ ಉಡುಗೊರೆಯನ್ನು ಕೊಡಿಸದಿದ್ದರೆ ಅವನು ಅಥವಾ ಅವಳು ತನ್ನ ಪ್ರಿಯತಮೆಗೆ ಅಥವಾ ಪ್ರಿಯಕರನಿಗೆ ಮುಖತೋರಿಸುವುದಾದರೂ ಹೇಗೆ? `ಹೆಂಡತಿಯರ ದಿನ’ ಹೆಂಡತಿಗೆ ಒಂದು ಹೊಸ ಸೀರೆಯನ್ನಾದರೂ ಕೊಂಡುಕೊಳ್ಳದೇ ಗಂಡಸರು ಸಂಜೆ ಮನೆಗೆ ಹೋಗುವ ಧೈರ್ಯ ಮಾಡುವುದಾದರೂ ಹೇಗೆ? ಇಂತಹ ಮಾರುಕಟ್ಟೆಯ ತಂತ್ರಗಳು  ಯೋಗವು ಅಂತರರಾಷ್ಟ್ರೀಯ ದಿನವಾಗಲು ತಮ್ಮ ಪಾತ್ರವನ್ನು ವಹಿಸಿರಲು ಸಾಧ್ಯವಿಲ್ಲವೆನ್ನುವುದನ್ನು ನಂಬುವುದಾದರೂ ಹೇಗೆ?


ಜನಸಾಮಾನ್ಯರು ಈ ಯೋಗೋದ್ಯಮಕ್ಕೆ ಬಲಿಯಾಗುವ ಕ್ರಿಯೆ ಒಂದುಕಡೆ ನಿಧಾನವಾಗಿ ಬೆಳೆಯುತ್ತಿರುವಾಗ ಅದರಕಡೆ ಅವರನ್ನು ಸೆಳೆಯುವ ಪ್ರಯತ್ನಗಳು ತೀವ್ರಸ್ವರೂಪಪಡೆದುಕೊಳ್ಳುತ್ತವೆ. ಇಂತಹ ಮಾರುಕಟ್ಟೆಯ ತಂತ್ರಗಳ ಜನಸಾಮಾನ್ಯರ ದೌರ್ಬಲ್ಯಗಳನ್ನು ಬಹಳ ನಾಜೂಕಾಗಿ ನಗದೀಕರಣಮಾಡಿಕೊಳ್ಳುತ್ತಿರುತ್ತವೆ. ಜನ ಯಾವುದಕ್ಕೆ ಹಾತೊರೆಯುತ್ತಿದ್ದಾರೆ ಎಂಬುದನ್ನು ಅವು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸುತ್ತವೆ. ಜನರು ಸಾಮಾನ್ಯವಾಗಿ ತಮಗೆ ಬೇಕಾದ ಯಾವುದು ತಮ್ಮಲ್ಲಿ ಇರುವುದಿಲ್ಲವೋ ಅಥವಾ ಯಾವುದನ್ನು ಕಳೆದುಕೊಂಡಿರುತ್ತಾರೋ ಅದಕ್ಕೆ ಹಾತೊರೆಯುತ್ತಿರುತ್ತಾರೆ. ಕೆಲವು ವರ್ಷಗಳ ಹಿಂದೆ ಜನರ ಕೈಯಲ್ಲಿ ದುಡ್ಡು ಆಡುತ್ತಿರಲಿಲ್ಲ. ಆಗ ದುಡ್ಡುಮಾಡುವ ಆಸೆ ಜನರಿಗೆ ಸಹಜವಾಗಿ ಇತ್ತು. ಅದಕ್ಕೆ ತಕ್ಕಂತೆ ದುಡ್ಡನ್ನು ಡಬ್ಬಲ್ ಮಾಡವ ತಂತ್ರವನ್ನು ಹೇಳಿಕೊಡುವ ಗುರುಗಳು, ಶಿಬಿರಗಳು ಎಲ್ಲಿಯಾದರೂ ಸಿಗುವುದನ್ನು ಕೇಳಿದರೆ ಜನ ಮುಗಿಬೀಳುತ್ತಿದ್ದರು. ಈಗ ಅದು ಜನಕ್ಕೆ ಸಾಕಾಗಿದೆ. ಈಗ ಯಾರಾದರೂ ಮನಸ್ಸಿಗೆ, ಶಾಂತಿ, ನೆಮ್ಮದಿ, ಆರೋಗ್ಯ ಇಂಥವನ್ನು ಹೇಳಿಕೊಡುತ್ತಾರೆ ಎಂದರೆ ಅದಕ್ಕೆ ಮುಗಿಬೀಳುತ್ತಿದ್ದಾರೆ. ಏಕೆಂದರೆ ಈಗ ಜನ ಇವನ್ನು ಕಳೆದುಕೊಂಡಿದ್ದಾರೆ. ಹಾಗಾಗಿಯೇ ಈಗ ಯೋಗದ ಗುರುಗಳಿಗೆ, ಆಯುರ್ವೇದದ ಹೆಸರಿನಲ್ಲಿ ನಕಲಿಮಾರಾಟ ಮಾಡುವ ತಜ್ಞರಿಗೆ ಬಾರಿ ಬೇಡಿಕೆ. ಅವರ ಶಿಬಿರಗಳೆಂದರೆ ಜನ ಮುಗಿಬೀಳುತ್ತಿದ್ದಾರೆ.

ಈಗಿನ ನಮ್ಮ ಯೋಗ ಆಚರಣೆಯ ವಿಧಾನ ಎಷ್ಟು ಕ್ರಮಬದ್ಧವಾಗಿದೆ?

ಯೋಗದ ಮಾರುಕಟ್ಟೆಯ ತಂತ್ರಗಳು ಮತ್ತು ಸುಲಿಗೆಗಳು ಏನಾದರೂ ಇರಲಿ ಅದನ್ನು ಒಂದು ವಿದ್ಯೆಯಾಗಿ ಕಲಿಯುವ ಕ್ರಮವಾದರೂ ಸರಿಯಿದೆಯೇ ಎಂದರೆ ಬಹುಪಾಲು ಸರಿಯಿಲ್ಲ ಎಂದೇ ಹೇಳಬೇಕು. ಇವತ್ತು ಯೋಗದ ಶಿಬಿರಗಳಲ್ಲಿ ಯಾವುದನ್ನು ಯೋಗ ಎಂದು ಕಲಿಸಲಾಗುತ್ತಿದೆಯೋ ಅದು ಬಹುತೇಕವಾಗಿ `ಯೋಗಾಸನಗಳು’ ಮತ್ತು `ಪ್ರಾಣಾಯಾಮ’ ಇವುಗಳಿಗೆ ಒತ್ತುಕೊಟ್ಟಿರುವಂಥದ್ದು. ಆದರೆ ಯೋಗಶಾಸ್ತ್ರದ ಪ್ರಕಾರ ಇದೇ ಸಂಪೂರ್ಣಯೋಗವಲ್ಲ. ಸಂಪೂರ್ಣಯೋಗವು ಒಂದು ಶೈಕ್ಷಣಿಕ ಶಿಸ್ತಾಗಿದ್ದು ಕ್ರಮಬದ್ಧವಾದ ಹಂತಗಳನ್ನು ಒಳಗೊಂಡಿದೆ. ನಮ್ಮ ಶೈಕ್ಷಣಿಕ ಶಿಸ್ತಿನಲ್ಲಿ ಹೇಗೆ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ಹೀಗೆ ನಾಲ್ಕೈದು ಹಂತಗಳಿವೆಯೋ ಹಾಗೆಯೇ ಯೋಗದಲ್ಲಿಯೂ ಬಹುಮುಖ್ಯವಾದ ಏಳೆಂಟು ಹಂತಗಳಿವೆ. ಪತಂಜಲಿ ಮಹರ್ಷಿ ಹೇಳುವ ಅಷ್ಟಾಂಗಯೋಗ ಎಂಟು ಹಂತಗಳನ್ನು ಒಳಗೊಂಡಿರುವಂಥದ್ದು. ಅವೆಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ. ಪತಂಜಲಿ ಇವನ್ನು ಅಷ್ಟಮಾರ್ಗಗಳು ಎನ್ನದೇ ಅಷ್ಟಾಂಗ ಮಾರ್ಗ ಎನ್ನುವುದನ್ನು ನೋಡಿದರೆ ಇವು ಪರಸ್ಪರ ಸಂಬಂಧವಿರದ ಪ್ರತ್ಯೇಕವಾದ ಸಾಧನಾ ಮಾರ್ಗಗಳಾಗಿರದೇ ಒಂದೇ ಮಾರ್ಗದಲ್ಲಿರುವ ಕ್ರಮಬದ್ಧವಾದ ಹಂತಗಳು ಎಂಬುದು ನಿರ್ವಿವಾದ. ಅದರ ಪ್ರಕಾರ ನಾವು ಹಂತಹಂತವಾಗಿ ಕ್ರಮಬದ್ಧವಾಗಿ ಇವನ್ನು ಅಭ್ಯಾಸ ಮಾಡುತ್ತಾ ಹೋಗಬೇಕಾಗುತ್ತದೆ.

ಆದರೆ ನಮ್ಮಲ್ಲಿ ಮಾಡುತ್ತಿರುವುದೇನು? ಯೋಗದ ಒಂದೆರಡು ಅಂಗಗಳಾದ `ಆಸನ’ ಮತ್ತು `ಪ್ರಾಣಾಯಾಮ’ ಇವುಗಳನ್ನೇ `ಯೋಗ’ ಎಂದು ಕಲಿಸಲಾಗುತ್ತಿದೆ. ಹೆಚ್ಚೆಂದರೆ ಕೆಲವರು ಧ್ಯಾನಕ್ಕೂ ಒಂದಿಷ್ಟು ಪ್ರವೇಶ ಪಡೆದಿರಬಹುದು ಅಷ್ಞೆ. ಉಳಿದ ಐದು ಹಂತಗಳು ಬಹುಪಾಲು ಜನರಿಗೆ ಅಪರಿಚಿತ. ಯೋಗಶಾಸ್ತ್ರದದಲ್ಲಿ `ಆಸನ’ ಅಥವಾ `ಯೋಗಾಸನ’ ಎಂಬುದು ಮೂರನೆಯ ಹಂತವಾದರೆ `ಪ್ರಾಣಾಯಾಮ’ ಎನ್ನುವುದು ನಾಲ್ಕನೆಯ ಹಂತ. ಇದಕ್ಕೆ ಪೂರ್ವಭಾವಿಯಾಗಿ ಆರಂಭದ ಎರಡು ಹಂತಗಳಾದ `ಯಮ’ ಮತ್ತು `ನಿಯಮ’ ಇವುಗಳನ್ನು ಸರಿಯಾಗಿ ಪಾಲಿಸಿಕೊಂಡೇ ಈ ಹಂತಗಳಿಗೆ ಪ್ರವೇಶ ಪಡೆಯಬೇಕು. ಆದರೆ ಆರಂಭದ ಈ ಎರಡು ಹಂತಗಳ ಕಡೆ ನಮ್ಮ ಈ ಜನರ ಗಮನವೇ ಇಲ್ಲ. ಕೆಲವರಿಗೆ ಗಮನವಿದ್ದದೂ ಅದು ಲಾಭದಾಯಕವಲ್ಲದ ಕಾರಣ ಅದು ಅವರಿಗೆ ಆದ್ಯತೆಯ ಸಂಗತಿಯಲ್ಲ. ಇದರಿಂದಾಗಿ ಪ್ರಾಥಮಿಕ ಮತ್ತು ಪ್ರೌಢಹಂತಗಳನ್ನು ಪೂರೈಸದೇ ವಿದ್ಯಾರ್ಥಿಗಳನ್ನು ನೇರವಾಗಿ ಕಾಲೇಜಿಗೆ ಕರೆದುಕೊಂಡು ಕೂರಿಸಿಕೊಂಡು ಪಾಠಹೇಳಿದರೆ ಏನು ಮತ್ತು ಎಷ್ಟು ಪರಿಣಾಮ ಪ್ರತಿಫಲಗಳು ದೊರೆಯಬಹುದೋ ಈ ಯೋಗದ್ದೂ ಅದೇ ಕಥೆಯಾಗಿದೆ.

ಹಾಗಾದರೆ ಯೋಗದ ಪ್ರಾಥಮಿಕ ಹಂತಗಳಾದ ಯಮ ನಿಯಮಗಳು ಹೇಳುವುದಾದರೂ ಏನು ಎಂಬುದನ್ನು ನೋಡಿಕೊಂಡರೆ ಇವು ಏಕೆ ಅಲಕ್ಷ್ಯ ಮತ್ತು ನಿರ್ಲಕ್ಷಕ್ಕೆ ಒಳಗಾಗಿವೆ ಎಂಬುದು ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಮೊದಲ ಹಂತವಾದ ಯಮ ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಎಂಬ ಐದು ವಿಧಿಗಳನ್ನು ವಿಧಿಸುತ್ತದೆ. ಜೊತೆಗೆ ಕ್ಷಮಾ, ದೃತಿ, ದಯಾ, ಸರಳತೆ, ಮಿತಾಹಾರಗಳನ್ನು ಒತ್ತಿಹೇಳುತ್ತದೆ. ಅಂದರೆ ಯೋಗಾಭ್ಯಾಸಿಯ ಆರಂಭದ ಹಂತವೇ ಅವನು ಅಥವಾ ಅವಳು ಸುಳ್ಳು ಹೇಳುವುದನ್ನು ಬಿಡಬೇಕು, ಬೇರೆಯವರಿಗೆ ಹಿಂಸೆಯನ್ನು ಕೊಡಬಾರದು, ಕಳ್ಳತನ ಮಾಡಬಾರದು, ಲಂಚ ಇತ್ಯಾದಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಅದನ್ನು ಬಿಡಬೇಕು ಇನ್ನು ಎರಡನೆಯ ಹಂತವಾದ ನಿಯಮವು `ಶೌಚ’ `ಸಂತೋಷ’ `ತಪಸ್ಸು’ `ಸ್ವಾಧ್ಯಾಯ’ `ಈಶ್ವರ’ `ಪ್ರಣೀದಾನ’ವೆಂಬ ನೈತಿಕ ಕಟ್ಟಳೆಗಳನ್ನು ವಿಧಿಸುತ್ತದೆ. ಈ ಹಂತದಲ್ಲಿ ಮನಸ್ಸನ್ನು ಕಲ್ಮಶ ಭಾವನೆಗಳಿಂದ ದೂರೀಕರಿಸಿ ತ್ಯಾಗ, ವೈರಾಗ್ಯ, ವಿವೇಕಗಳಿಂದ ಸಂತೋಷಗೊಳಿಸಿಕೊಳ್ಳುವುದು ಬಹುಮುಖ್ಯವಾಗಿರುತ್ತದೆ. ಆಗ ನಮ್ಮ ದೇಹ ಮತ್ತು ಮನಸ್ಸು ಪ್ರಸನ್ನಗೊಂಡು ಮುಂದಿನ ಹಂತಕ್ಕೆ ಸಿದ್ಧತೆಯನ್ನು ಪಡೆದುಕೊಳ್ಳುತ್ತವೆ. ಹೀಗೆ ಈ ನಿಯಮ ಕಟ್ಟಳೆಗಳನ್ನು ಅನುಸರಿಸಿದವರು ಮಾತ್ರ ಮುಂದಿನ ಹಂತಗಳಾದ `ಆಸನ’ `ಪ್ರಾಣಾಯಾನ’ `ಧ್ಯಾನ’ ಇತ್ಯಾದಿಗಳಿಗೆ ಹೋಗುವ ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ.

ಇವೆಲ್ಲವೂ ಆಚರಣೆಗೆ ತರುವುದು ಅಷ್ಟು ಸುಲಭವೇ? ನಮ್ಮಲ್ಲಿ ಈಗ ಯೋಗಾಸನ ಮಾಡುವವರಲ್ಲಿ ಹೀಗಡೆ ಸುಳ್ಳುಹೇಳದ, ಯಾವುದೇ ಬಗೆಯ ಕಳ್ಳತನ ಮಾಡದ, ಲಂಚ ಇತ್ಯಾದಿಗಳಿಗೆ ಆಶಿಸದ, ಬೇರೆಯವಿಗೆ ಯಾವುದೇ ಬಗೆಯ ತೊಂದರೆ ಹಿಂಸೆಗಳನ್ನು ಕೊಡದೆ ಬೇರೆಯವರ ಸಂತೋಷದಲ್ಲಿಯೇ ತಮ್ಮ ಸಂತೋಷವನ್ನು ಕಂಡುಕೊಳ್ಳುವಂಥವರು ಎಷ್ಟು ಜನ ಸಿಗಬಹುದು? ಯೋಗವನ್ನು ಉದ್ಯಮ ಅಥವಾ ಉದ್ಯೋಗನ್ನಾಗಿ ಮಾಡಿಕೊಂಡವರಿಗೆ ಇವು ನುಂಗಲಾರದ ಬಿಸಿತುಪ್ಪ. ಅತ್ತ ಶಾಸ್ತ್ರನ್ನೂ ಬಿಡಲಾಗದು; ಇತ್ತ ಅದರಂತೆ ಜನರನ್ನು ತಯಾರುಮಾಡಲಿಕ್ಕು ಆಗದು. ಕಾರಣ ಇವನ್ನು ಶಾಸ್ತ್ರಕ್ಕೆ ಅನ್ನುವಂತೆ ಅಭ್ಯಾಸಿಗಳ ಕಿವಿಯ ಮೇಲೆ ಹಾಕಿ ಮುನ್ನೆಡೆಯುವ ಚತುರತೆ ಬಹಳ ಮಂದಿ ಯೋಗಾಚಾರ್ಯರದ್ದಾಗಿದೆ.

ಯೋಗಶಾಸ್ತ್ರದ ಪ್ರಕಾರವೇ ನಾವು ಮಾಡುತ್ತಿರುವ ಯೋಗದ ಕ್ರಮ ಸರಿಯಿಲ್ಲ ಎಂದಾದರೆ ಅದು ಸರಿಯಾದ ಪ್ರತಿಫಲ ಕೊಡುತ್ತದೆ ಎಂದು ನಿರೀಕ್ಷಿಸುವುದಾದರೂ ಹೇಗೆ? ಯಮ ನಿಯಮಗಳನ್ನು ಕಟ್ಟುನಿಟ್ಟಾಗಿ ಆಚರಿಸದೇ ಮೂರನೆಯ ಹಂತದ ಆಸನಗಳನ್ನು ಮಾಡುವುದು ದೇಹಕ್ಕೆ ಒಂದಿಷ್ಟು ವ್ಯಾಯಾಮ ಕೊಡಬಹುದು ಅಷ್ಟೇ ಅದೂ ಸರಿಯಾಗಿ ಅವುಗಳನ್ನು ಮಾಡಿದರೆ ಮಾತ್ರ. ಹಾಗಾಗಿ ಇಲ್ಲಿ ಯೋಗಾಚಾರ್ಯನೊಬ್ಬನು ಒಬ್ಬ ಒಳ್ಳೆಯ ವ್ಯಾಯಾಮ ಶಿಕ್ಷಕನಿಗಿಂತ ಹೆಚ್ಚೇನೂ ಮಾಡಲಾರದವನಾಗುತ್ತಾನೆ. ಇಲ್ಲಿ ಅದಕ್ಕಿರುವ ದೈವತ್ವ, ಪೂಜ್ಯಭಾವ ಮುಂತಾದವು ಸಹಜವಾಗಿಯೇ ಅರ್ಥಕಳೆದುಕೊಳ್ಳುತ್ತವೆ.

ಪ್ರಾಣಾಯಾಮ: ಮೀನಿಗೆ ಈಜುವುದನ್ನು ಕಲಿಸುವ ಪರಿ

ಇನ್ನು ಪ್ರಾಣಾಯಾಮದ ಬಗ್ಗೆ ಹೇಳುವ ಮೊದಲು ಒಂದು ಘಟನೆಯನ್ನು ನಾನು ಇಲ್ಲಿ ಉಲ್ಲೇಖಿಸಬೇಕು. ಯಾವುದೋ ಒಂದು ಯೋಗದ ತರಬೇತಿಯೊಂದಕ್ಕೆ ಹೋಗಿಬಂದ ವ್ಯಕ್ತಿಯೊಬ್ಬನು ಬೆಳಿಗ್ಗೆ ಪ್ರಾಣಾಯಾಮ ಮಾಡುತ್ತಿರುವುದನ್ನು ಗಮನಿಸಿದ ಹಳ್ಳಿಯೊಂದರ ವೃದ್ಧನೊಬ್ಬ `ಅವರೇಕೆ ಹಾಗೆ ಕತ್ತೆ ಉಸಿರುಬಿಟ್ಟಂತೆ ಉಸಿರು ಬಿಡುತ್ತಾರೆ?’ ಎಂದು ನನ್ನನ್ನು ಒಂದು ಬಾರಿ ಕೇಳಿದ್ದ. ಹಾಗೆ ಕೇಳಿದ ಆ ವೃದ್ಧ ಒಬ್ಬ ಅನಕ್ಷರಸ್ಥ ಹಳ್ಳಿಗನಾಗಿದ್ದು ಯೋಗಾಸನ ಪ್ರಾಣಾಯಾಮ ಇತ್ಯಾದಿಗಳ ಹೆಸರನ್ನೇ ಕೇಳದೇ ಅವೇನೆಂದು ತಿಳಿಯದೇ ಸುಮಾರು ಎಂಬತ್ತಕ್ಕೂ ಹೆಚ್ಚು ವರ್ಷಗಳ ಕಾಲ ತುಂಬಾ ಚಟುವಟಿಕೆಯಿಂದ ಬದುಕಿದ್ದ ಗಟ್ಟಿಮುಟ್ಟಾದ ಮನುಷ್ಯನಾಗಿದ್ದ. ಅವನಿಗೆ ವಾಸ್ತವದಲ್ಲಿ ಪ್ರಾಣಾಯಾಮವನ್ನು ಲೇವಡಿಮಾಡುವ ಅಥವಾ ಅವಹೇಳನ ಮಾಡುವ ಯಾವ ಉದ್ದೇಶವೂ ಇರಲಿಲ್ಲ. ಅವನ ಕೇಳಿಕೆ ಕೇವಲ ಕುತೂಹಲವನ್ನು ಅವಲಂಬಿಸಿತ್ತು ಮತ್ತು ತೀರಾ ಸಹಜವಾದದ್ದಾಗಿತ್ತು.

ಈ ಹಳ್ಳಿಗನಿಗೆ ನಾನು ಏನೆಂದು ಉತ್ತರಿಸಿದೆ ಎಂಬುದು ಇಲ್ಲಿ ಮುಖ್ಯವಲ್ಲ. ಆದರೆ ಮುಖ್ಯವಾದ ಸಂಗತಿ ಎಂದರೆ ಈ ಘಟನೆ ನಡೆದು ಎಷ್ಟೋ ವರ್ಷಗಳ ನಂತರ ನಾನು ಓದಿದ, ಜಗತ್ತಿನ ಬಹುಮುಖ್ಯ ಯೋಗದ ಗ್ರಂಥವೆಂದು ಪ್ರಸಿದ್ಧಿ ಪಡೆದಿರುವ ಮೇಲೆ ಉಲ್ಲೇಖಿಸಲ್ಪಟ್ಟ `ಯೋಗಿಯ ಆತ್ಮಕಥೆ’ಯಲ್ಲಿ ಬರುವ, `ತಪ್ಪು ದಾರಿಗೆಳೆಯಲ್ಪಟ್ಟ ಅನೇಕ ಛಲವಾದಿಗಳಿಂದ ಕಲಿತ ಅವೈಜ್ಞಾನಿಕ ಉಸಿರಾಟದ ಅಭ್ಯಾಸಗಳಿಗೂ ಕ್ರಿಯಾಯೋಗದ ಅಭ್ಯಾಸಕ್ಕೂ ಯಾವೊಂದು ಸಮಾನತೆಯೂ ಇಲ್ಲ. ಶ್ವಾಸಕೋಶಗಳಲ್ಲಿ ಬಲಾತ್ಕಾರವಾಗಿ ಉಸಿರನ್ನು ತಡೆಯಿಡಿಯುವುದು ಅಸ್ವಾಭಾವಿಕವಾದುದಲ್ಲದೆ ಖಂಡಿತವಾಗಿಯೂ ಅಸುಖಕರವಾದುದು.” ಎಂಬ ಮಾತುಗಳು ಕೂಡ ಈ ಹಳ್ಳಿಗನ ಅಭಿಪ್ರಾಯವನ್ನೇ ಪುಷ್ಟೀಕರಿಸುವಂತೆ ಇದ್ದದ್ದು. ಅಂದರೆ ಈ ಪ್ರಾಣಾಯಾಮದ ಬಗ್ಗೆ ಒಬ್ಬ ಜಗತ್ಪಸಿದ್ಧ ಮಹಾಯೋಗಿಯ ಅಭಿಪ್ರಾಯವೇ ಪ್ರಾಣಾಯಾಮದ ಗಂಧಗಾಳಿ ಗೊತ್ತಿಲ್ಲದ ಒಬ್ಬ ಹಳ್ಳಿಗನದ್ದೂ ಆಗಿತ್ತು. ತಾತ್ಪರ್ಯ ಇಷ್ಟೇ. ಮನುಷ್ಯನಿಗೆ ಉಸಿರಾಡುವುದನ್ನು ಕಲಿಸುವುದು ಅಂದರೆ ಮೀನಿಗೆ ಈಜುವುದನ್ನು ಕಲಿಸಲು ಹೋಗುವಷ್ಟು ಮೂರ್ಖತನವೂ ಆಗಬಹುದು ಎಂಬುದು.

ಆರೋಗ್ಯದ ದೃಷ್ಟಿಯಿಂದ ಪ್ರಾಣಾಯಾಮ ಎಲ್ಲರಿಗೂ ತೀರಾ ಅವಶ್ಯಕವೆಂದು ವಾದಿಸುವವರು ಮಹಾಯೋಗಿ ಪರಮಹಂಸ ಯೋಗಾನಂದರ ಈ ಅಭಿಪ್ರಾಯವನ್ನೂ ಅವಶ್ಯವಾಗಿ ಗಮನಿಸಬೇಕು: “ನಿದ್ರಿಸುವ ಮನುಷ್ಯ ಯೋಗಿಯೇ ಆಗಿರುತ್ತಾನೆ. ಪ್ರತಿರಾತ್ರಿಯೂ ಅವನು ತನಗರಿವಿಲ್ಲದಂತೆಯೇ ದೇಹಪ್ರಜ್ಞೆಯಿಂದ ತನ್ನನ್ನು ಬೇರ್ಪಡಿಸಿಕೊಳ್ಳುವ ಯೌಗಿಕ ಕ್ರಿಯೆಯನ್ನು ಮಾಡಿ ತನ್ನ ಪ್ರಾಣಶಕ್ತಿಯನ್ನು ಮೆದುಳಿನ ಮುಖ್ಯಭಾಗದಲ್ಲಿರುವ ಉಪಶಮನ ಶಕ್ತಿಪ್ರವಾಹದಲ್ಲಿಯೂ ಮೇರುದಂಡದ ಆರು ಕೇಂದ್ರಗಳಲ್ಲಿರುವ ಉಪಜನಕ ವಿದ್ಯುಜ್ಜನಕ ಯಂತ್ರಗಳಲ್ಲಿಯೂ ಬೆರೆಯುವಂತೆ ಮಾಡುತ್ತಾನೆ. ನಿದ್ರಿಸುವವನು ತಾನು ಕಳೆದುಕೊಂಡಿದ್ದ ಜೀವಶಕ್ತಿಯನ್ನು ಸಕಲ ಜೀವರಕ್ಷಕ ವಿಶ್ವಾತ್ಮಕ ಶಕ್ತಿಯಿಂದ ತನಗೆ ಅರಿವಿಲ್ಲದಂತೆಯೇ ಮತ್ತೆ ತುಂಬಿಕೊಳ್ಳುತ್ತಾನೆ.”

`ಬಕಧ್ಯಾನವಾಗುತ್ತಿರುವ ಯಮನಿಯಮವಿಲ್ಲದ ಧ್ಯಾನ

ಇನ್ನು ಐದನೆಯ ಹಂತವಾದ ಧ್ಯಾನದ ಬಗ್ಗೆ ಒಂದು ಮಾತು. ಇದನ್ನು ಮುಖ್ಯವಾಗಿ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುವ ತಂತ್ರವಾಗಿ ಪ್ರಚಾರಮಾಡಲಾಗಿದೆ. ಇದನ್ನು ಕಲಿಸುವಾಗ ಕೂಡ ಆರಂಭದ ಹಂತಗಳಾದ ಯಮ ಮತ್ತು ನಿಯಮಗಳು ವಿಧಿಸುವ ವಿಧಿನಿಷೇಧಗಳನ್ನು ಅವರು ಪೂರೈಸಿದ್ದಾರೆಯೇ ಎಂಬುದನ್ನು ಅಲಕ್ಷಿಸಲಾಗುತ್ತದೆ. ಇದರಿಂದ ಇದರ ಪ್ರತಿಫಲವೂ ಸಕಾರಾತ್ಮಕವಾಗಿರುವುದು ಅನುಮಾನವೇ. ಒಟ್ಟಿನಲ್ಲಿ ಕಣ್ಣುಮುಚ್ಚಿಕೊಂಡು ಓಂಕಾರ `ಹೇಳಿ ಶಾಂತಿ ಶಾಂತಿ ಶಾಂತಿ’ ಎಂದು ಹೇಳಿ ಕೈಮತ್ತು ಕಣ್ಣುಗಳನ್ನು ಉಜ್ಜಿಕೊಂಡು ಕಣ್ಣುತೆರೆಯುವ ಒಂದು ಯಾಂತ್ರೀಕೃತ ಚಟುವಟಿಕೆಯ ಹಂತಕ್ಕೆ ಇದು ಈಗ ಬಂದು ನಿಂತಿದೆ. ಧ್ಯಾನ ಕ್ರಿಯೆ ಸಫಲವಾಗಬೇಕಾದರೆ ಮನಸ್ಸು ಪ್ರಸನ್ನಗೊಂಡಿರಬೇಕು. ಮನಸ್ಸು ಪ್ರಸನ್ನಗೊಳ್ಳಬೇಕಾದರೆ ಅದಕ್ಕೆ ಪೂರಕವಾಗಿ ಯಮನಿಯಮಗಳ ಆಚರಣೆ ಆಗಿರಬೇಕು. ಎಲ್ಲವೂ ಒಂದಕ್ಕೊಂದು ಒಳಸಂಬಂಧದ ಹೆಣಿಗೆಯನ್ನು ಹೊಂದಿರುವಂಥವು. ಅವಿಲ್ಲದೆ ನೇರವಾಗಿ ಧ್ಯಾನ ಪ್ರತಿಫಲಕೊಡದು. ಸದಾ ಲಂಚದ ದುಡ್ಡಿನ ಆಸೆಯನ್ನೇ ತಲೆಯಲ್ಲಿ ತುಂಬಿಕೊಂಡಿರುವ ವ್ಯಕ್ತಿಯೊಬ್ಬನು ಧ್ಯಾನಮಾಡುವಾಗ ಅವನು ತನ್ನ ಯೋಗಾಚಾರ್ಯ ಮನಸ್ಸನ್ನು ಇಷ್ಟದೇವತೆಯಲ್ಲಿ ಕೇಂದ್ರೀಕರಿಸಿ ಎಂದು ಎಷ್ಟು ಹೇಳಿದರೂ ಅವನ ಕಣ್ಣೆದುರು ಎರಡು ಸಾವಿರ ರೂಪಾಯಿಯ ನೋಟುಗಳ ಚಿತ್ರ ಬಂದು ನಿಲ್ಲಬಹುದೇ ಹೊರತು ಇಷ್ಟದೇವರ ಚಿತ್ರವಲ್ಲ!

ಧ್ಯಾನದ ವೈದ್ಯಕೀಯ ಪ್ರಯೋಜನಗಳ ಬಗ್ಗೆ ಇನ್ನೂ `ಇದೇ ಸತ್ಯ’ ಎನ್ನುವಷ್ಟರಮಟ್ಟಿಗೆ ಸಂಶೋಧನೆಗಳು ಆದಂತಿಲ್ಲ. ಧ್ಯಾನವನ್ನು ಒತ್ತಡದ ನಿಯಂತ್ರಣ (Stress Control)ಕ್ಕಾಗಿ ಬಳಸಿಕೊಳ್ಳಬಹುದು ಎನ್ನುವ ಅಭಿಪ್ರಾಯವಿದೆಯಾದರೂ ಅದು ಎಷ್ಟರ ಮಟ್ಟಿಗೆ ತನ್ನ ಪ್ರಭಾವವನ್ನು ಬೀರುತ್ತದೆ ಎಂಬುದನ್ನೂ ಇನ್ನು ಖಚಿತಗೊಳಿಸಿಕೊಳ್ಳಬೇಕಾಗಿದೆ. ನಾನು ಈ ಬಗ್ಗೆ ತಜ್ಞವೈದ್ಯರೊಬ್ಬರನ್ನು ವಿಚಾರಿಸಿದಾಗ, ಅವರು, “Meditation  ಎಂಬುದನ್ನು Medication ಆಗಿ ಪರಿವರ್ತಿಸಿಕೊಳ್ಳುವಲ್ಲಿ ನಾವು ಸಫಲವಾದರೆ ಮಾತ್ರ ಧ್ಯಾನ ವೈದ್ಯಕೀಯವಾಗಿ ಪ್ರಯೋಜನಕ್ಕೆ ಬರುತ್ತದೆ. ಆದರೆ ಧ್ಯಾನ ಮಾಡುವ ಸಮಯ ಮತ್ತು ಮನಸ್ಸಿಗೆ ಒತ್ತಡ ಉಂಟಾಗುವ ಸಮಯ ಮನುಷ್ಯನಲ್ಲಿ ಒಂದೇ ಇರುವುದಿಲ್ಲ. ದಿನದ ಯಾವುದೋ ಒಂದು ಸಮಯದಲ್ಲಿ ಮಾಡಿದ ಧ್ಯಾನದ ಪರಿಣಾಮವು (ಅಂದರೆ ಬೆಳಿಗ್ಗೆ ಒಂದರ್ಧಗಂಟೆ ಮಾಡಿದ ಧ್ಯಾನದ ಪರಿಣಾಮವು) ಅವನಿಗೆ ಕಛೇರಿಯಲ್ಲಿ ಕೆಲಸ ಮಾಡುವಾಗಲೋ ಯಾವಾಗಲೋ ಉಂಟಾಗುವ ಒತ್ತಡ ನಿಯಂತ್ರಣಕ್ಕೆ ಸಹಾಯಕ್ಕೆ ಬರುತ್ತದೆಯೇ ಎಂಬುದನ್ನು ಖಚಿತವಾಗಿ ಹೇಳಲು ಇನ್ನೂ ಸಾಧ್ಯವಾಗಿಲ್ಲ. ಆ ಬಗ್ಗೆ ಇನ್ನೂ ಸಂಶೋಧನೆಗಳು ಆಗಬೇಕಿದೆ’ ಎಂದರು.

ಯೋಗದ ಬಗ್ಗೆ ಇಷ್ಟೆಲ್ಲ ಗೊಂದಲ ಭಿನ್ನಾಭಿಪ್ರಾಯ ಇದ್ದಾಗ್ಯೂ ನಾವು ಅದನ್ನು ನಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸಬಲ್ಲ ಏಕೈಕ ಮೂಲವೇನೋ ಎನ್ನುವಷ್ಟರ ಮಟ್ಟಿಗೆ ಅದಕ್ಕೆ ಮುಗಿಬಿದ್ದಿದ್ದೇವೆ. ಶಾಲಾಕಾಲೇಜುಗಳಿಗೂ ಅದನ್ನು ವಿಸ್ತರಿಸುತ್ತಿದ್ದೇವೆ. ಇಂತಹ ಹೊತ್ತಿನಲ್ಲಿ ಶಿವರಾಮ ಕಾರಂತರಂಥ ಮೇದಾವಿಗಳು ಇದ್ದಿದ್ದರೆ ಇಂತಹ ಕ್ರಮವನ್ನು ಪ್ರಬಲವಾಗಿ ವಿರೋಧಿಸುತ್ತಿದ್ದರು ಎಂಬುದರಲ್ಲಿ ಅನುಮಾನವಿಲ್ಲ. ಏಕೆಂದರೆ ಚಿಕ್ಕಮಕ್ಕಳು ಅವರ ವಯಸ್ಸಿಗೆ ಅತ್ಯಂತ ಸಹಜವಾದ ಆಟ–ಪಾಠಗಳಂತಹ ಸಹಜವಾದ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಳ್ಳುವುದರಿಂದಲೇ ಅವರ ದೈಹಿಕ, ಮಾನಸಿಕ, ಭಾವನಾತ್ಮಕ ಹೀಗೆ ಅವರ ಸರ್ವಾಂಗೀಣ ವ್ಯಕ್ತಿತ್ವ ವಿಕಸನವಾಗುತ್ತದೆ, ಹಾಗಾಗಿ ಅವರಿಗೆ ಅಂತಹ ಸಹಜ ಚಟುವಟಿಕೆಗಳನ್ನು ಪೂರೈಸಬೇಕೆ ಹೊರತು ಅವರ ಮೇಲೆ ಈ `ಯೋಗ’ದಂತಹ ಭಾರವನ್ನು ಹೇರುವುದು ಸರಿಯಲ್ಲ ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು. ಅವರ `ಓದುವ ಆಟ’ ಇಂತಹ ಅನೇಕ ಚಟುವಟಿಕೆಗಳನ್ನು ಬೆಂಬಲಿಸುವ ಕ್ರಮವೇ ಆಗಿತ್ತು.

ಶಾಲಾಮಕ್ಕಳು ಮತ್ತು ಯೋಗ

ಶಾಲೆಗಳಲ್ಲಿ ಯೋಗವನ್ನು ಕಲಿಸಲಾಗುತ್ತಿರುವ ಕ್ರಮ ಎಷ್ಟೊಂದು ಎಡವಟ್ಟಿನ ಸ್ಥಿತಿಯಲ್ಲಿದೆ ಎಂಬುದನ್ನು ನೋಡಿಯೇ ತಿಳಿಯಬೇಕು. ಸಾಮಾನ್ಯವಾಗಿ ನಮ್ಮ ಶಾಲೆಗಳು ಆರಂಭಗೊಳ್ಳುವುದು ಬೆಳಿಗ್ಗೆ ಹತ್ತುಗಂಟೆಗೆ. ಬಿಡುವುದು ಸಂಜೆ ನಾಲ್ಕೂವರೆ ಐದಕ್ಕೆ. ಇಡೀ ಶಾಲಾ ಅವಧಿ ಯೋಗಕ್ಕೆ ಯಾವ ದೃಷ್ಟಿಯಿಂದಲೂ ಯೋಗಾಭ್ಯಾಸಕ್ಕೆ ಸರಿಯಾದ ಸಮಯವಲ್ಲ. ಹಾಗಿದ್ದೂ ಅವರು ಯೋಗ ಮಾಡಿಸಬೇಕು. ಏನು ಮಾಡಿಸುತ್ತಾರೆ? ಬೆಳಿಗ್ಗೆ ಹೊಟ್ಟೆತುಂಬ ತಿಂಡಿ ತಿಂದು ಬಂದ ಮಕ್ಕಳನ್ನು ಹಿಡಿದುಕೊಂಡು ಯೋಗಾಸನಕ್ಕೆ ಅವೈಜ್ಞಾನಿಕವಾಗಿ ತೊಡಗಿಸುವುದು, ಯಾವಾಗ ಬೇಕೋ ಆವಾಗ ಕಣ್ಣುಮುಚ್ಚಿ ಧ್ಯಾನಮಾಡಲು ಹೇಳುವುದು ಇಂಥದ್ದೆಲ್ಲ ಮಾಡುತ್ತಾರೆ. ಅದರ ಫೋಟೋ ಹೊಡೆದು ಕಳಿಸಬೇಕಾದವರಿಗೆ ಕಳಿಸಿ ದಾಖಲೆಯಲ್ಲಿ ಯೋಗ ಕಲಿಸುತ್ತಾರೆ. ಇಂತಹ ಕ್ರಮಗಳಿಂದ ಆಗುವ ಪ್ರಯೋಜನಗಳಿಂದ ಅಡ್ಡಪರಿಣಾಮಗಳೇ ಹೆಚ್ಚು ಎಂಬುದನ್ನು ನಾವು ಮರೆಯಬಾರದು.

ಯೋಗವನ್ನು ಒಂದು ಜೀವನಶಿಸ್ತಾಗಿ ಅನುಸರಿಸುವಾಗ ಅದಕ್ಕೆ ಸೂಕ್ತ ತರಬೇತಿಯನ್ನಾದರೂ ಪಡೆದುಕೊಳ್ಳಬೇಕಾಗುತ್ತದೆ. ಯೋಗದ ಬಹುತೇಕ ಆಸನಗಳು ಹಿಂದಿನ ಕಾಲದಲ್ಲಿ ಗುರುಗಳ ನೇರಮಾರ್ಗದರ್ಶನದಲ್ಲಿ ಅವರೆದುರೇ ನಡೆಯುವಂಥವಾಗಿದ್ದವು. ಅಲ್ಪಸ್ವಲ್ಪ ವ್ಯತ್ಯಾಸವಾದರೂ ಅಡ್ಡಪರಿಣಾಮ ಆಗುವ ಸಾಧ್ಯತೆ ಯೋಗದಲ್ಲಿ ಹೆಚ್ಚು. ಗುರುಗಳ ನೇರ ಮಾರ್ಗದರ್ಶನದ ಕಾರಣ ಈ ಅಡ್ಡಪರಿಣಾಮಗಳ ಪ್ರಮಾಣ ಆಗಿನ ಕಾಲದಲ್ಲಿ ಇಲ್ಲವೆನ್ನುವಷ್ಟು ಕಡಿಮೆ ಇದ್ದವು. ಮೇಲಾಗಿ ಆಗಿನ ಗುರುಗಳು ಯೋಗವನ್ನು ಒಂದು ಉದ್ಯಮವನ್ನಾಗಿ ಮಾಡಿಕೊಂಡೂ ಇರಲಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ.  ಯೋಗದ ಬಗ್ಗೆ ಏನೋ ಒಂದಿಷ್ಟು ತಿಳಿದುಕೊಂಡಿರುವ ಅನೇಕರು ದುಡ್ಡಿಗಾಗಿಯೋ ಅಥವಾ ಮತ್ತೇತಕ್ಕೋ ನಡೆಸುವ ಅರೆಬರೆ ತರಬೇತಿ ಪಡೆದು ಬಂದು ಟಿ.ವಿ. ನೋಡಿಕೊಂಡು ಯೋಗಾಭ್ಯಾಸ ಮಾಡುವ ಜನರೇ ಹೆಚ್ಚು. ಇವರೆಲ್ಲ ಯೋಗಾಸನಕ್ಕೆ ಬೇಕಾದ ಜಮಖಾನೆ, ಟವೆಲ್ಲು, ಒಳ್ಳೆಯ ಯುನಿಫಾರಂ ಇತ್ಯಾದಿ ಭೌತಿಕ ಸಲಕರಣೆಗಳ ಸಿದ್ಧತೆಯನ್ನು ಬಹಳ ಅಚ್ಚುಕಟ್ಟಾಗಿ ಮಾಡಿಕೊಂಡಿರುತ್ತಾರೆಯೇ ಹೊರತು ಅದಕ್ಕೆ ಬೇಕಾದ ದೈಹಿಕ ಮತ್ತು ಮಾನಸಿಕ ತಯಾರಿಯಾಗಿ ಯಮನಿಯಮಗಳನ್ನು ಪಾಲಿಸಿರುವುದಿಲ್ಲ. ಹಾಗಾಗಿ ನಿರೀಕ್ಷಿತ ಪ್ರತಿಫಲ ದೊರೆಯುವುದು ಹೇಗೆ ಸಾಧ್ಯ?

`ತಿರುಕಕಲಿಸಿದ ಯೋಗ

ಈಗಿನ ಯುವಜನರಂತೆ ನಾನೂ ಕೂಡ ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ತಾರುಣ್ಯದಲ್ಲಿ ಯೋಗದ ಬಗ್ಗೆ `ಹುಚ್ಚು’ ಹಚ್ಚಿಕೊಂಡಿದ್ದೆ. ಎಷ್ಟರಮಟ್ಟಿಗೆ ಎಂದರೆ ಯೋಗವನ್ನು ಕಲಿಸುವ ಗುರುವೊಬ್ಬರು ಸಿಗುವವರೆಗೂ ನನಗೆ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಅದೇ ಸಮಯಕ್ಕೆ ಮಲ್ಲಾಡಿಹಳ್ಳಿಯಲ್ಲಿ ಮೂರುನಾಲ್ಕು ವಾರಗಳ ಯೋಗಶಿಕ್ಷಣ ತರಬೇತಿಯೊಂದನ್ನು ಏರ್ಪಡಿಸಿರುವುದು ನನ್ನ ಗಮನಕ್ಕೆ ಬರುತ್ತಿದ್ದಂತೆಯೇ ಅಲ್ಲಿಗೆ ಓಡಿದೆ. ಆ ಕಾಲದಲ್ಲಿ `ತಿರುಕ’ ಎಂಬ ಹೆಸರಿನಿಂದ ಹೆಸರಾಗಿದ್ದ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ರಾಘವೇಂದ್ರ ಸ್ವಾಮಿಯವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಈ ಶಿಬಿರದಲ್ಲಿ ಪಾಲ್ಗೊಂಡು ಒಂದು ಕ್ರಮಬದ್ಧವಾದ ಶಿಕ್ಷಣವನ್ನು ಪಡೆದು ನನ್ನ ಜೀವನದ ಬಹಳಷ್ಟು ವರ್ಷಗಳ ಕಾಲ ಅದನ್ನು ಮುಂದುವರೆಸಿದೆ.

ಅವರು ಸ್ಪಷ್ಟವಾಗಿ ಯೋಗ ಸಾಧಕರಿಗೆ ಬೇರೆ, ಸಂಸಾರಿ ಸಾಮಾನ್ಯರಿಗೆ ಬೇರೆ ಎಂಬುದನ್ನು ನಮಗೆ ಸ್ಪಷ್ಟಪಡಿಸಿ ಇರುವ ಸಾವಿರಾರು ಆಸನಗಳಲ್ಲಿ ದೇಹದ ಎಲ್ಲ ಅಂಗಗಳಿಗೂ ವ್ಯಾಯಾಮ ಸಿಗಬಲ್ಲ ಕೆಲವು ಆಸನಗಳನ್ನು ಆಯ್ದು `ಆರೋಗ್ಯಕ್ಕಾಗಿ ಯೋಗ’ ಮತ್ತು `ಸರ್ವಾಂಗ ಸುಂದರ ವ್ಯಾಯಾಮ’ ಎಂಬ ಎರಡು ಕೋರ್ಸ್ ಗಳನ್ನು ತಯಾರಿಸಿ ನಮ್ಮನ್ನು ತರಬೇತುಗೊಳಿಸಿದ್ದರು. ಸಂಸಾರಿಗಳಿಗೆ ಸಿಗುವ ಸಮಯದ ಮಿತಿಯನ್ನು ಗಮನಿಸಿ ಬೆಳಿಗ್ಗೆ ಮತ್ತು ಸಂಜೆ 45 ನಿಮಿಷ ಅಥವಾ ಒಂದು ಗಂಟೆಯನ್ನು ಬಳಸಿಕೊಂಡು ಹೇಗೆ ಯೋಗಾಭ್ಯಾಸ ಮಾಡಬಹುದು ಎಂಬುದನ್ನು ಹೇಳಿಕೊಟ್ಟಿದ್ದರು. ಬೆಳಿಗ್ಗಿನದು ದೇಹ ಮನಸ್ಸುಗಳ ಆರೋಗ್ಯವನ್ನು ಕೇಂದ್ರೀಕರಿಸಿದ್ದರೆ ಸಂಜೆಯದು ಸದೃಢವೂ ಸುಂದರವೂ ಆದ ದೇಹವನ್ನು ಅಂದರೆ ಅಂಗಸೌಸ್ಟವವನ್ನು ರೂಪಿಸಿಕೊಳ್ಳುವುದಾಗಿತ್ತು. ಇಂತಹ ಒಂದು ಶಿಸ್ತಿನ ಕ್ರಮಬದ್ಧತೆ ಇಲ್ಲದೇ ಎಲ್ಲೋ ಒಂದಿಷ್ಟು ಪುಸ್ತಕ ಓದಿ, ಟಿ.ವಿ ನೋಡಿ, ಅಥವಾ ನಾಲ್ಕಾರು ಆಸನಗಳನ್ನು ವ್ಯಾಯಾಮದ ರೀತಿ ಕೈಕಾಲು ಆಡಿಸಿ ಮಾಡಿ `ನಾನೂ ಯೋಗ ಮಾಡಿದೆ’ ಎಂದು ಹೇಳಿಕೊಳ್ಳುವ ಶೋಕಿಯಾದರೆ ಆಗ ಯೋಗಾಸನ ಎನ್ನುವುದು ಒಂದು `ಪ್ರದರ್ಶನ ಕಲೆ’ಯ ಹಂತವನ್ನು ತಲುಪುತ್ತದೆ.

ಜೀವನಯೋಗ ಮತ್ತು ಪ್ರದರ್ಶನ ಯೋಗ

ಅಷ್ಟಕ್ಕೂ ಜನಸಾಮಾನ್ಯರೆಲ್ಲರಿಗೂ ಈ ಮಾದರಿಯ ಯೋಗದ ಅವಶ್ಯಕತೆ ನಿಜವಾಗಲೂ ಇದೆಯೇ ಎಂಬುದನ್ನು ನಾವು ಯೋಚಿಸಬೇಕು. ಈ ದೇಶದ ಶೇಕಡಾ ಎಂಬತ್ತರಷ್ಟು ಜನ ಶ್ರಮಜೀವಿಗಳು. ದೇಹವನ್ನು ದಂಡಿಸಿ ದುಡಿಯುವವರು ಇಂತಹ ಯೋಗಾಸನ ಪ್ರಾಣಾಯಾಮ ಇತ್ಯಾದಿಗಳನ್ನು ಮಾಡುವುದಿಲ್ಲವಾದರೂ ಅವರೆಲ್ಲ ಆರೋಗ್ಯವಾದ ಬದುಕನ್ನು ಬದುಕಲು ಸಾಧ್ಯವಾಗಿದೆ. ಹನ್ನೆರಡನೆಯ ಶತಮಾನದ ಶರಣರು ಈ ಸಾಂಪ್ರದಾಯಿಕ ‘ಹಠಯೋಗ’ ಕ್ರಮಗಳನ್ನು ತಿರಸ್ಕರಿಸಿ ಅಥವಾ ಪರಿಷ್ಕರಿಸಿ `ಶಿವಯೋಗ’ದಂತಹ ಆಚರಣೆಯನ್ನು ಜನತೆಗೆ ನೀಡಿದರು. ಇದರಲ್ಲಿ ಯಮ ನಿಯಮ ಹೇಳುವ ವೈಯಕ್ತಿಕ ಶುದ್ಧತೆ, ಪರೋಪಕಾರ ಮನೋಭಾವ ಇತ್ಯಾದಿಗಳ ಜೊತೆಗೆ ದೈಹಿಕ ಶ್ರಮ ಕಡ್ಡಾಯವಾಗಿತ್ತು. ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ ಕೂಡ ಹೀಗೆ ಸಚ್ಚಾರಿತ್ರ್ಯದಿಂದೊಡಗೂಡಿದ ಜೀವನಕ್ರಮವೇ `ಸದ್ಧರ್ಮಯೋಗ’ ಎಂಬುದನ್ನು ಪ್ರತಿಪಾದಿಸುತ್ತದೆ.

ಅರ್ಥವಿಷ್ಟೇ ಯಾರು ಮೈಮುರಿದು ದುಡಿಯುವರೋ, ಯಾರು ತಮ್ಮ ಮನಸ್ಸಿನಲ್ಲಿ ಬೇರೆಯವರಿಗೆ ಕೆಡುಕನ್ನುಂಟು ಮಾಡುವ, ಬೇರೆಯವರನ್ನು ಯಾವುದೇ ರೀತಿ ಹಿಂಸಿಸುವ, ಕಳ್ಳತನ, ಲಂಚಗುಳಿತನ ಮುಂತಾದವುಗಳಿಂದ ಮನಸ್ಸನ್ನು ಭ್ರಷ್ಟಗೊಳಿಸಿಕೊಳ್ಳದೇ ಪ್ರಸನ್ನವಾಗಿಟ್ಟುಕೊಂಡು ನಿಸರ್ಗಕ್ಕೆ ಹೊಂದಿಕೊಂಡು ಬದುಕುವ ಒಂದು ಜೀವನಶೈಲಿಯನ್ನು ರೂಢಿಸಿಕೊಂಡಿರುತ್ತಾರೋ ಅವರಿಗೆ ಈ ಯಾವ ಯೋಗವೂ ಬೇಕಾಗುವುದಿಲ್ಲ.  ಅವರ ಜೀವನ ಶೈಲಿಯೇ ಒಂದು ಯೋಗ. ಅದು `ಜೀವನಯೋಗ’. ಆದರೆ ಯಾರು ಈ ದೈಹಿಕ ಶ್ರಮದ, ಸಚ್ಚಾರಿತ್ರ್ಯದಿಂದ ಕೂಡಿದ, ಸರಳ ಮತ್ತು ನಿಸರ್ಗಕ್ಕೆ ಪೂರಕವಾದ ಬದುಕಿನ ಶೈಲಿಯನ್ನು ರೂಢಿಸಿಕೊಳ್ಳದೆ ಇದಕ್ಕೆ ವ್ಯತಿರಿಕ್ತವಾಗಿ ಬದುಕುವ ಅಸಹಜ ಜೀವನ ಶೈಲಿಯನ್ನು ರೂಢಿಸಿಕೊಂಡಿರುತ್ತಾರೋ ಅವರಿಗೆ ಇಂಥದ್ದೆಲ್ಲ ಬೇಕಾಗಬಹುದು ಇನ್ನೂ ಮುಂದುವರೆದು ಹೇಳುವುದಾದರೆ ಇದೂ ಸಾಕಾಗದೇ ಹೋಗಬಹುದು.

ಕೊನೆಯಲ್ಲಿ ನಾವೆಲ್ಲ ಸ್ಪಷ್ಟವಾಗಿ ನೆನಪಿಡಬೇಕಾದ ಒಂದು ಸಂಗತಿ: ನಮಗೆ ಪ್ರಕೃತಿ ದೇಹವನ್ನು ನೀಡಿದ್ದು ಬಹುಮುಖ್ಯವಾಗಿ ಮುರು ಕಾರ್ಯವನ್ನು ನಿರ್ವಹಿಸಲು. ಅವೆಂದರೆ ದುಡಿಯುವುದು, ನಡೆಯುವುದು ಮತ್ತು ಹಡೆಯುವುದು (ಸಂತಾನಾಭಿವೃದ್ಧಿ ಮಾಡುವುದು). ಕೊನೆಯದನ್ನು ಎಲ್ಲರೂ ಮಾಡುತ್ತಾರೆ. ಆದರೆ ಮೊದಲೆರಡು? ಇವತ್ತು ದುಡಿಯುವುದು ಮತ್ತು ನಡೆಯುವುದು ಯಾರಿಗೂ ಬೇಡ! ಇದು ಪ್ರಕೃತಿಗೆ ವಿರುದ್ಧವಾದ ಜೀವನ ಶೈಲಿ! ತನಗೆ ವಿರುದ್ಧವಾಗಿ ಬದುಕುವರನ್ನು ಶಿಕ್ಷಿತರನ್ನಾಗಿ ಮಾಡುವ ಮಾತು ಕೇಳದಿದ್ದರೆ ಶಿಕ್ಷಿಸುವ ಎಲ್ಲ ಅಧಿಕಾರವನ್ನೂ ಈ ಪ್ರಕೃತಿ ತನ್ನಲ್ಲಿ ಇಟ್ಟುಕೊಂಡಿರುತ್ತದೆ. ಪರಿಸ್ಥಿತಿ ಹೀಗಿರುವಾಗ ನಾವು ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವುದೇ ಸರಿಯಾದ ಕ್ರಮ. ಈ ನಿಟ್ಟಿನಲ್ಲಿ ನಾವೇ ಆಯ್ದುಕೊಳ್ಳೋಣ `ಜೀವನಯೋಗಮತ್ತು `ಪ್ರದರ್ಶನಯೋಗಇವುಗಳಲ್ಲಿ ನಮ್ಮ ಆಯ್ಕೆ ಯಾವುದಾಗಬೇಕು ಎಂಬುದನ್ನು!
*****
ಡಾ. ರಾಜೇಂದ್ರ ಬುರಡಿಕಟ್ಟಿ
Sunday, June 21, 2020
Edited on June 20,2023