Sunday, October 14, 2018


`ಅವರವರ ಭಾವಕ್ಕೆ':
ಚುಂಬಕ ಶಕ್ತಿಯ ಚಿಂತನ ಚಿತ್ರಗಳು
`ಅಂಕಣ ಬರಹ' ಎಂಬುದು ಅಂಕುಷದ ಅಂಚಿನಲ್ಲಿಯೇ ನಡೆಯುವ ಅಂಕೆಯಿಲ್ಲದ ಬರಹ. ಅಂಕಣಕಾರ ಯಾವ ಅಂಕಣದಲ್ಲಿ ಯಾವ ವಿಷಯವನ್ನು ಕುರಿತು ಏನು ಬರೆಯುತ್ತಾನೆ ಎಂಬುದು ಅದನ್ನು ಪ್ರಕಟಿಸುವ ಪತ್ರಿಕೆಗಳಿಗಿರಲಿ ಸ್ವತಃ ಅದನ್ನು ಬರೆಯುವ ಲೇಖಕನಿಗೂ ಹಲವುಬಾರಿ ಬಹಳಷ್ಟು ಮುಂಚಿತವಾಗಿ ಗೊತ್ತಿರುವುದಿಲ್ಲ. ಅದಕ್ಕೆ ಪದಮಿತಿ, ಕಾಲಮಿತಿಯಂತಹ ತಾಂತ್ರಿಕ ಇತಿಮಿತಿಗಳು ಇವೆಯೇ ಹೊರತು  ವಿಷಯ ವ್ಯಾಪಕತೆಯ ತಾತ್ವಿಕ ಮಿತಿ ಇಲ್ಲ. ಒಂದು ಕಥೆಯನ್ನೋ ಲೇಖನವನ್ನೋ ಪೂರ್ತಿಯಾಗಿ ಓದಿ `ಪತ್ರಿಕೆಯ ಮನೋಧರ್ಮ'ಕ್ಕೆ ಹೊಂದಿಕೊಳ್ಳುತ್ತದೆಯೋ ಇಲ್ಲವೋ ಎಂಬುದನ್ನು ಮೊದಲೇ ತೀರ್ಮಾನಿಸಿಕೊಂಡು ಪ್ರಕಟಣೆಗೆ ಎತ್ತಿಕೊಳ್ಳುವ, ಅಥವಾ ಕಿತ್ತು ಬೀಸಾಡುವ ಸ್ವಾತಂತ್ರ್ಯ ಇಲ್ಲಿ ಪತ್ರಿಕೆಯವರಿಗೆ ಇರುವುದಿಲ್ಲ. ಏನನ್ನೂ ನಂಬಿಕೊಂಡು `ಬರೆಯಿರಿ' ಎಂದು ಹೇಳಿದ ಅವರಿಗೆ ಅಂಕಣಕಾರನಿಂದ ತಾವು ನಿರೀಕ್ಷಿಸಿರದ ಬರಹಗಳು ಬರತೊಡಗಿದಾಗ ಸೈದ್ಧಾಂತಿಕ ಘರ್ಷಣೆ ಉಂಟಾಗಿ ಅನೇಕ ಅಂಕಣಬರಹಗಳು ಪತ್ರಿಕೆಗಳಲ್ಲಿ ಇದ್ದಕ್ಕಿದ್ದಂತೆ ಓದುಗರಿಗೆ ಯಾವುದೇ ಮುನ್ಸೂಚನೆಯೂ ಇಲ್ಲದೇ ನಿಂತುಬಿಡುವುದುಂಟು!
ಪ್ರಕಾಶ್ ರೈ ಅವರ `ಅವರವರ ಭಾವಕ್ಕೆ' ಕೃತಿಯ ವಿಶ್ಲೇಷಣೆಗೆ ಪೂರ್ವಪೀಠಿಕೆಯಾಗಿ ಮಾತುಗಳನ್ನು ಹೇಳಲು ಕಾರಣವಿದೆ. ಇದು ಅವರ ಎರಡನೆ ಕೃತಿ, ಒಟ್ಟು ಕೃತಿಯಾಗಿ ಹಾಗೇ ಅಂಕಣ ಬರಹಗಳ ಕೃತಿಯಾಗಿ ಕೂಡ. ಅವರ ಮೊದಲ ಕೃತಿ `ಇರುವುದೆಲ್ಲವ ಬಿಟ್ಟು..' ಕನ್ನಡದ ದಿನಪತ್ರಿಕೆಯೊಂದರಲ್ಲಿ ಮೇಲೆ ಹೇಳಲಾದಂತೆ ಆರಂಭಗೊಂಡು ಮಧ್ಯಕ್ಕೆ ನಿಂತುಹೋದ ಅಂಕಣಗಳ ಬರಹಗಳ ಕೃತಿ. ಅದು ಪ್ರಕಟವಾಗಿ ಈಗಾಗಲೇ ಹಲವು ಮುದ್ರಣಗಳನ್ನು ಕಂಡಿದೆ. ಇತ್ತೀಚೆಗಷ್ಟೇ ಮೈಸೂರಿನಲ್ಲಿ ಬಿಡುಗಡೆಯಾದ `ಅವರವರ ಭಾವಕ್ಕೆ' ಪ್ರಜಾವಾಣಿಯಲ್ಲಿ ಹಲವು ವಾರಗಳಿಂದ ಪ್ರಕಟವಾಗುತ್ತಿರುವ ಅದೇ ಹೆಸರಿನ ಅವರ ಅಂಕಣದ ಇದುವರೆಗಿನ ಪ್ರಕಟಿತ ಬರಹಗಳ ಸಂಕಲನ. ಲೇಖಕ ಜೋಗಿ ಅವರ ಬೆನ್ನುಡಿ ಇರುವ, ಬೆಂಗಳೂರಿನ ಸಾವಣ್ಣ ಬುಕ್ಸ್ ಪ್ರಕಟಿಸಿರುವ, ಅಷ್ಟದಳ ಡೆಮಿಯ 160 ಪುಟಗಳ ಸಂಕಲನದಲ್ಲಿ ಒಟ್ಟು ಮೂವತ್ತು ಲೇಖನಗಳು ಇವೆ.
ಪ್ರಕಾಶ್ ರೈ ಒಬ್ಬ ನಟನಾಗಿ ಏನು ಎಂಬುದನ್ನು ಅವರ ಅಭಿನಯದ ಚಲನಚಿತ್ರಗಳು ಈಗಾಗಲೇ ತೋರಿಸಿಕೊಟ್ಟಿವೆ. ಇಡೀ ದಕ್ಷಿಣ ಭಾರತದಲ್ಲಿ ಬಹಳಷ್ಟು ಬೇಡಿಕೆ ಇರುವ ನಟರಲ್ಲಿ ಒಬ್ಬರಾಗಿರುವ ಅವರು ತಮ್ಮ ಅಮೋಘ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಅದ್ಭುತ ಕಲಾವಿದ. ಆದರೆ ರೈ ಒಬ್ಬ ಲೇಖಕನಾಗಿ ಏನು ಎಂಬುದಕ್ಕೆ ಅವರ `ಅವರವರ ಭಾವಕ್ಕೆ' ಕೃತಿಯನ್ನು ನಾವು ಓದಬೇಕು. `ಬರೆಯುತ್ತೇನೆ ಅಂದುಕೊಂಡಿರಲಿಲ್ಲ. ಬೆಯಲು ಸಾಧ್ಯ ಎಂಬ ಭ್ರಮೆಯೂ ನನಗಿರಲಿಲ್ಲ. ಆದರೆ ಅವರವರ ಭಾವಕ್ಕೆ, ಎರಡನೆಯ ಪುಸ್ತಕವಾಗಿ ನಿಮ್ಮ ಮುಂದಿದೆ' ಎಂಬ ಪುಸ್ತಕದ ಮೊದಲನೇ ವಾಕ್ಯವೇ ಹೇಳುತ್ತದೆ ಒಬ್ಬ ನಟನಾಗಿ ಬೆಳೆಯಲು ಅವರು ಇಟ್ಟುಕೊಂಡ ಕನಸು ಅದನ್ನು ನನಸಾಗಿಸಿಕೊಳ್ಳಲು ಮಾಡಿಕೊಂಡ ತಯಾರಿ, ಶ್ರಮಭರಿತ ತಾಲೀಮು ಇಂಥದ್ದೆಲ್ಲವನ್ನೂ ಅವರು ಲೇಖಕರಾಗಲು ಮಾಡಿಕೊಂಡಿರಲಿಲ್ಲ ಎಂಬುದನ್ನು. ಪರಿಸ್ಥಿತಿ ಹೀಗಿದ್ದಾಗ್ಯೂ ಶ್ರಮಪಟ್ಟು ಕರಗತಮಾಡಿಕೊಂಡ ನಟನೆಯು ಅವರನ್ನು ಒಬ್ಬ ಉತ್ತಮ ಕಲಾವಿದರನ್ನಾಗಿ ರೂಪಿಸಿದಂತೆಯೇ ಅಷ್ಟೇನೂ ಶ್ರಮ ಇಲ್ಲದೇ ಅನಿರೀಕ್ಷಿತವಾಗಿ ಉಂಟಾದ ಬರಹವೂ ಅವರನ್ನು ಒಬ್ಬ ಉತ್ತಮ ಲೇಖಕರನ್ನಾಗಿಸಿದೆ ಎಂಬುದು ವಿಶಿಷ್ಟವಾದ ಸಂಗತಿ.
ವಿಶಿಷ್ಟತೆ ಹೇಗೆ ಬಂತು ಎಂಬುದಕ್ಕೂ ಇಲ್ಲಿನ ಲೇಖನಗಳಲ್ಲಿಯೇ ಉತ್ತರ ಸಿಗುತ್ತದೆ. ರೈ ಅವರು ಬರಹಗಾರನಾಗಿ ಬೆಳೆಯುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಿಲ್ಲದಿರಬಹುದು. ಆದರೆ ಅವರು ಒಬ್ಬ ಓದುಗನಾಗಿ ಕನ್ನಡ ಸಾಹಿತ್ಯ ಸಂಸ್ಕೃತಿಗಳೊಂದಿಗೆ ಇಟ್ಟುಕೊಂಡಿದ್ದ ಸಂಬಂಧ ಅತ್ಯಂತ ಗಾಢವಾದದ್ದು. ಅವರ ಸಾಹಿತ್ಯದ ಓದು ಎಷ್ಟೊಂದು ಆಳವಾಗಿ ಇದೆ ಎಂಬುದನ್ನು ಅವರು ಕನ್ನಡದ ಮುಖ್ಯ ಲೇಖಕರನೇಕರ ಬರಹಗಳನ್ನು ಉಲ್ಲೇಖಿಸಿ ಅವುಗಳನ್ನು ಅವರು ಅರ್ಥೈಸಿಕೊಂಡ ಬಗೆಯನ್ನೂ ಅವುಗಳು ಅವರ ವ್ಯಕ್ತಿತ್ವ ರೂಪಿಸುವಲ್ಲಿ ಉಂಟುಮಾಡಿದ ಪರಿಣಾಮವನ್ನೂ ದಾಖಲಿಸುವಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಶ್ರದ್ಧಾಪೂರ್ವಕ ಓದೇ ಅವರನ್ನು ಅನಿರೀಕ್ಷಿತವಾಗಿಯಾದರೂ ಮಹತ್ವದ ಲೇಖಕನನ್ನಾಗಿ ರೂಪಿಸುತ್ತಿದೆ ಅನ್ನಬಹುದು. ಹಿನ್ನಲೆಯಲ್ಲಿ ನೋಡಿದಾಗ `ಪ್ರಕಾಶ ಯಾವ ಕೆಲಸವನ್ನು ಕೊಟ್ಟರೂ ಅತ್ಯಂತ ಶ್ರದ್ಧೆಯಿಂದ ಕೆಲಸವನ್ನು ಮಾಡಿ ಇನ್ಯಾರೂ ಅದಕ್ಕಿಂತ ಹೆಚ್ಚು ಚೆನ್ನಾಗಿ ಮಾಡಲು ಸಾಧ್ಯವಿಲ್ಲ ಎನ್ನುವಂತೆ ಮಾಡಿತೋರಿಸುವಂಥವನು. ಒಂದು ಬೀದಿ ಗುಡಿಸುವ ಕೆಲಸವನ್ನು ಅವನಿಗೆ ನೀಡಿದರೂ ಬೀದಿಯನ್ನು ಇನ್ಯಾರೂ ಅಷ್ಟು ಚೆನ್ನಾಗಿ ಗುಡಿಸಲು ಸಾಧ್ಯವಿಲ್ಲ ಎನ್ನುವಂತೆ ಗುಡಿಸಿ ಅತ್ಯಂತ ಮಹತ್ವದ ಪೌರಕಾರ್ಮಿಕ ಎಂದು ಹೆಸರಾಗುವಂಥವನು' ಎಂದು ಕಲಾವಿದ ಮಂಡ್ಯ ರಮೇಶ್ ಹೇಳುವ ಮಾತು ಕೇವಲ ಸ್ನೇಹಕ್ಕಾಗಿ ಹೇಳಿದ ಮಾತು ಅನ್ನಿಸುವುದಿಲ್ಲ.
ಇಲ್ಲಿನ ಮೂವತ್ತು ಬರಹಗಳಲ್ಲಿ ಇರುವ ವಿಷಯ ವೈವಿಧ್ಯತೆಯೂ ಅಂಕಣ ಬರಹಗಳ ಸಾಮಾನ್ಯ ಲಕ್ಷಣವಾಗಿದೆ. ಇವುಗಳ ವಸ್ತುವಿಷಯದ ಹರವು ಎಷ್ಟು ವಿಶಾಲವಾಗಿದೆಯೆಂದರೆ ಮಗಳೊಬ್ಬಳು ಹುಟ್ಟಿ ಬಾಲ್ಯದಲ್ಲಿ ಅವಳ ಲೀಲೆಗಳನ್ನುನೋಡಿ ಸಂತೋಷಪಡುವ ಸಾಮಾನ್ಯ ತಂದೆಯೊಬ್ಬನ ಸಹಜ ಸಂತೋಷದಿಂದ ಹಿಡಿದು ದೇವರು ಧರ್ಮಗಳಂತಹ ಸಹಸ್ರಾರು ವರ್ಷಗಳ ಚರ್ಚೆಯ ನಂತರವೂ `ಇದೇ ಸತ್ಯ' ಎಂದು ಇತ್ಯರ್ಥವಾಗದ ಘನಗಂಭೀರ ವಿಷಯಗಳ ವಿಶ್ಲೇಷಣೆಯವರೆಗೂ ಅದು ಚಾಚಿಕೊಂಡಿದೆ. ಮಧ್ಯೆ, ಜೀವನ ಪಯಣದಲ್ಲಿ ನಮಗೆ ಎದುರಾಗುವ ಅನೇಕ ನೋವು ನಲಿವಿನ ಕ್ಷಣಗಳು, ಬುದ್ಧಿಹೇಳಿದ ವ್ಯಕ್ತಿಗಳು, ನಮ್ಮನ್ನು ತಿದ್ದಿತೀಡಿದ ಸಂದರ್ಭಗಳು, ಸನ್ನಿವೇಶಗಳು, ಸೇರಿಕೊಂಡಿವೆ. ರಾಚನಿಕ ದೃಷ್ಟಿಯಿಂದ ` ಬರಹಗಳ ಸಾಮಾನ್ಯ ಲಕ್ಷಣಗಳು' ಎಂದು ನಾಲ್ಕಾರು ಲಕ್ಷಣಗಳನ್ನು ಗುರುತಿಸಲಾಗದಂತೆ ಅವುಗಳನ್ನು ನಿರೂಪಿಸುವ ರೀತಿಯಲ್ಲಿ ಕೂಡ ವೈವಿಧ್ಯತೆ ಇರುವುದು ಬರಹಗಳ ಮತ್ತೊಂದು ವಿಶಿಷ್ಟತೆ. ಒಂದು ಲೇಖನ ಯಾವುದೋ ಒಬ್ಬ ಕವಿಯ ಎರಡು ಸಾಲುಗಳ ನೆನಪಿಂದ ಆರಂಭವಾಗಿ ಅದು ನಮ್ಮ ಬದುಕನ್ನು ಪರಿಭಾವಿಸುವ ಮತ್ತು ಪ್ರಭಾವಿಸುವ ಪರಿಯನ್ನು ವಿಶ್ಲೇಷಿಸುತ್ತಾ ಹೋದರೆ ಇನ್ನಾವುದೋ ಒಂದು ಲೇಖನ ತಮ್ಮ ಜೀವನದ ಯಾವುದೋ ಘಟನೆಯ ನೆನಪಿಂದ ಆರಂಭವಾಗಿ ಅದು ತನ್ನ ವ್ಯಕ್ತಿತ್ವವನ್ನು ರೂಪಿಸಿದ ಪರಿಯನ್ನು ಪರಿಶೀಲಿಸತೊಡಗುತ್ತದೆ. ಕೆಲವನ್ನು ನೋಡಬಹುದು:
ಪ್ರಕಾಶ್ ತಮ್ಮ ಜೀವನ ಮೀಮಾಂಸೆಯನ್ನು `ಪಯಣಗಳ ಪಕ್ವತೆ' ಎಂಬ ಲೇಖನದಲ್ಲಿ ಪ್ರಕಟಿಸುವ ಮಾತುಗಳನ್ನು ಗಮನಿಸಬೇಕು. ನಾಗತಿಹಳ್ಳಿ ಚಂದ್ರಶೇಖರ್ ಅವರ ಕಥೆಯೊಂದರ ಪೀಠಿಕೆಯೊಂದಿಗೆ ಆರಂಭವಾಗಿ ಅವರು ರಾಷ್ಟ್ರಪ್ರತಿಯಿಂದ ಎರಡುಬಾರಿ ಪ್ರಶಸ್ತಿ ಪಡೆಯುವಾಗಿನ ವಿವರಗಳೊಂದಿಗೆ ಬೆಳೆಯುವ ಲೇಖನದಲ್ಲಿ ಬರುವ ಮಾತಿದು: 'ಒಂದೆಡೆ ನಿಂತ ಕೊಳ ಅದು ಎಷ್ಟೇ ದೊಡ್ಡದಿದ್ದರೂ ಪಾಚಿ ಕಟ್ಟಿಯೇ ನಿಲ್ಲುತ್ತದೆ. ಓಡುವುದು ಸಣ್ಣ ಝರಿಯಾದರೂ ನೀರು ಕನ್ನಡಿಯೇ. ಜೀವನದ ಯಾವ ಘಟ್ಟದಲ್ಲೂ ಇದೇ ನನ್ನ ಸ್ಥಳ ಅಂತು ನಿಂತು ಬಿಡಬಾರದು ಎನ್ನುವುದು ನನ್ನ ದೃಢ ನಿಧರ್ಾರ. ಬಹು ದೂರ ಪ್ರಯಾಣ ಮಾಡುವಾಗ ಆಯಾಸವಾಗುವುದು ಸಹಜ. ಆಗ ನಾವು ತೆಗೆದುಕೊಳ್ಳುವ ವಿಶ್ರಾಂತಿ ಬಸ್ ಸ್ಟಾಪಿನಲ್ಲಿ ನಿಂತು ಮತ್ತೊಂದು ಬಸ್ಸಿಗಾಗಿ ಕಾಯುವಂತೆ ಇರಬೇಕು.' ಹೀಗೆ ಬದುಕು ಹೇಗೆ ಬರುತ್ತದೆಯೋ ಹಾಗೇ ಅದನ್ನು ಎದುರುಗೊಳ್ಳಬೇಕು ಎನ್ನುವ ತಾತ್ವಿಕತೆಯ ಅವರು ಬಂದು ತಲುಪುವುದು 'ಪ್ರಯಾಣಗಳನ್ನು ನಾನು ತೀಮರ್ಾನಿಸುವುದಿಲ್ಲ. ಪ್ರಯಾಣವೇ ನನ್ನನ್ನು ತೀಮರ್ಾನಿಸುತ್ತದೆ ಎಂಬ ತಾರ್ಕಿಕ ಅಂತ್ಯಕ್ಕೆ.
ಸಾಹಿತ್ಯದ ಓದಿನಿಂದ ಸಂತೋಷಪಡುವವರನ್ನು ನಾವು ಸಾಕಷ್ಟು ಜನರನ್ನು ಕಾಣುತ್ತೇವೆ. ಆದರೆ ಓದಿನಿಂದ ಬದುಕನ್ನು ಕಟ್ಟಿಕೊಳ್ಳುವವರನ್ನು ಕಾಣುವುದು ಬಹಳ ಅಪರೂಪ. ಕನ್ನಡದ ಬಹುಮುಖ್ಯ ಕತೆಗಳಲ್ಲಿ ಒಂದಾದ ಆನಂದರ `ನಾನು ಕೊಂದ ಹುಡುಗಿ' ಕತೆಯಿಂದ ಅವರು, `ನನ್ನ ನಂಬಿಕೆಗಳನ್ನು ಇನ್ನೊಬ್ಬರ ಮೇಲೆ ಹೇರಬಾರದೆನ್ನುವುದಕ್ಕೆ ಕತೆಯೇ ಕಾರಣ' ಎಂದು ದಾಖಲಿಸುತ್ತಾರೆ. ನಂಬಿಕೆ ಮೂಢನಂಬಿಕೆಗಳ ಜಿಜ್ಞಾಸೆ ನಡೆಸುವ ಬರಹವೊಂದರಲ್ಲಿ, ಸ್ವತಃ ದೇವರು ಧರ್ಮ ಇಂತಹ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರದ ರೈ `ನನಗೆ ಇವುಗಳ ಬಗ್ಗೆ ನಂಬಿಕೆ ಇಲ್ಲ ಎನ್ನುವ ಕಾರಣಕ್ಕಾಗಿ ಮತ್ತೊಬ್ಬರಿಗೆ ಅದರ ಅವಶ್ಯಕತೆ ಇಲ್ಲ ಎಂದೋ, ಅದು ತಪ್ಪೆಂದೋ ವಿಮರ್ಶಿಸುವ ಹಕ್ಕು ನನಗಿಲ್ಲ,' ಎಂದು ತಮ್ಮ ಪ್ರಜಾತಾಂತ್ರಿಕ ನಿಲುವನ್ನು ಪ್ರಕಟಪಡಿಸುತ್ತಾರೆ. ಅವರ ನಿಲುವಿನಂತೆಯೇ ಅಥವಾ ಅದಕ್ಕಿಂತ ಕೊಂಚ ಹೆಚ್ಚಾಗಿ ಲೇಖಕನ ಜವಾಬ್ದಾರಿಯನ್ನು ಜ್ಞಾಪಿಸುತ್ತದೆ ಅವರ ಮಾತು: 'ಬೆಕ್ಕು ಅಡ್ಡಬಂದರೆ ಅಪಶಕುನ, ಹೋಗುವ ಕೆಲಸ ಆಗೊಲ್ಲ ಅನ್ನೋದು ಬರೀ ಮೂರ್ಖತನವಲ್ಲ ಅದು ಮೂಢನಂಬಿಕೆ ಕೂಡ ಹೌದು. ಬೆಕ್ಕಿನ ವಿಚಾರದಲ್ಲಿ `ಹೋಗಲಿ ಬಿಡು' ಎಂದು ಒಪ್ಪಿಕೊಳ್ಳಬಹುದು. ಆದರೆ ಹೆತ್ತತಾಯಿ ವಿಧವೆ ಆದಳು ಅನ್ನುವ ಕಾರಣಕ್ಕೆ, ಮನೆಯ ಶುಭ ಕಾರ್ಯಗಳಿಂದ ಆಕೆಯನ್ನು ದೂರವಿಟ್ಟರೆ ಅದು ಅವರ ವೈಯಕ್ತಿಕ ನಂಬಿಕೆ ಎಂದು ಸುಮ್ಮನೆ ಇರಲು ಆಗದು. ಅದನ್ನು ಖಂಡಿಸಿಯೇ ತೀರುತ್ತೇನೆ.'
ಗಂಡುಹೆಣ್ಣಿನ ನಡುವಿನ ಸಂಬಂಧದ ವಿವಿಧ ಮಜಲುಗಳು ಇಲ್ಲಿನ ಹಲವು ಲೇಖನಗಳಲ್ಲಿ ಜೀವಸೆಲೆಯಾಗಿ ಹರಿದಾಡಿವೆ, ಕೌತುಕ ಹುಟ್ಟಿಸುವ ಗುಪ್ತಗಾಮಿನಿಯಂತೆ ಅಲ್ಲ; ಬದಲಿಗೆ ಉಲ್ಲಾಸವನ್ನುಂಟುಮಾಡುವ, ಕೆಲವುಸಾರೆ ಪ್ರಶಾಂತವಾಗಿಯೂ ಮತ್ತೆ ಕೆಲವುಸಲ ದುಮ್ಮಿಕ್ಕಿಯೂ ಪರಿಸ್ಥಿತಿಗೆ ತಕ್ಕಂತೆ ರೂಪಬದಲಿಸಿಕೊಂಡು ಹರಿವ ತೆರೆದ ತೊರೆಯಂತೆ. ಮಾನವನ ಬದುಕಿನಲ್ಲಿ ಗಂಡುಹೆಣ್ಣಿನ ನಡುವಿನ ಆಕರ್ಷಣೆ, ಏರ್ಪಡುವ ಸಂಬಂಧಗಳು ಚಿತ್ರವಿಚಿತ್ರವಾಗಿರುತ್ತವೆ. ಅವುಗಳ ಆರಂಭ ಅಂತ್ಯಗಳು ಹಲವುಸಾರೆ ಅನೂಹ್ಯವಾಗಿರುತ್ತವೆ. ಲೇಖಕನೊಬ್ಬನ ಅದರಲ್ಲಿಯೂ ಚಲನಚಿತ್ರಕ್ಷೇತ್ರದಲ್ಲಿ ಅಪಾರಮನ್ನಣೆ ಗಳಿಸಿದ ನಟನೊಬ್ಬನ ಬರೆಹಗಳಲ್ಲಿ ಬಗೆಗಿನ ವಿವರಗಳಿಗಾಗಿ ಓದುಗರು ಕುತೂಹಲದಿಂದ ಹುಡುಕಾಡುವುದು ಅಸಹಜವಲ್ಲ
ವಿಷಯದಲ್ಲಿ ಪ್ರಕಾಶ್ ಅವರು ಓದುಗರಿಗೆ ನಿರಾಸೆಯನ್ನುಂಟುಮಾಡುವುದಿಲ್ಲ. ಅವನ್ನು ಅತ್ಯಂತ ಸಹಜವಾಗಿ ನಿರ್ಲಿಪ್ತವಾಗಿ ದಾಖಲಿಸುತ್ತಾರೆ. ವಿಷಯಗಳಲ್ಲಿ ಅವರ ನಿಲುವು ಕುವೆಂಪು ಡಿ.ವಿ.ಜಿ. ಅಂತಹವರಂಥದ್ದಲ್ಲ; ಬದಲಿಗೆ ಲಂಕೇಶ್, ಶಿವರಾಮ ಕಾರಂತ ಅಂಥವರದ್ದು. ಪ್ರೀತಿ ಪ್ರೇಮ ಕಾಮಗಳ ವಿಷಯದಲ್ಲಿ ಅನವಶ್ಯಕ ಆದರ್ಶ ಮತ್ತು ಅಸಹಜ ಅನಾಧರಣೆ ಎರಡನ್ನೂ ಅವರು ನಿರಾಕರಿಸಿ ಸಹಜತೆಯನ್ನು ಪ್ರತಿಪಾದಿಸುತ್ತಾರೆ. ಮಾತುಗಳನ್ನು ನೋಡಿ: 'ಕಾಮವನ್ನು ಹೇಗಾದರೂ ಪಡೆಯಬೇಕು ಎಂದು ಯೋಚಿಸುವವನು ಕಾಮುಕನಾಗುತ್ತಾನೆ. ಕಾಮವನ್ನು ಮೀರಿ ಹೋಗಬೇಕು ಎನ್ನುವವನು ದೇವರಾಗಿಬಿಡುತ್ತಾನೆ. ಕಾಮವನ್ನು ಅನುಭವವನ್ನಾಗಿ ನೋಡುವವನು ಮನುಷ್ಯನಾಗುತ್ತಾನೆ. ನಾನು ಕಾಮವನ್ನು ಕಂಡು ಓಡುವುದೂ ಇಲ್ಲ. ಅದನ್ನು ಅವಿತಿಡಿವುದೂ ಇಲ್ಲ. ಯಾಕೆಂದರೆ ಕಾಮುಕನಾಗುವುದು ತಪ್ಪು. ದೇವರಾಗುವ ಆಸೆ ನನಗಿಲ್ಲ. ಮನುಷ್ಯನಾಗಿರುವುದರಲ್ಲಿಯೇ ಸಂತೋಷವಿದೆ ನನಗೆ.'
ಇಲ್ಲಿನ ಅನೇಕ ಲೇಖನಗಳು `ವೈಯಕ್ತಿಕ' ಮತ್ತು `ಸಾಮಾಜಿಕ' ಎಂದು ಸ್ಥೂಲವಾಗಿಯಾದರೂ ವಿಭಾಗಿಸಲು ಸಾಧ್ಯವಿಲ್ಲದಂತಹ ಸಮ್ಮಿಶ್ರ ಸ್ವರೂಪದಲ್ಲಿವೆ. ತೀರಾ ಸಹಜ ಘಟನೆಯನ್ನೋ, ಓದಿದ ಪುಸ್ತಕದ ಸಾಲುಗಳನ್ನೋ ನೆನಪು ಮಾಡಿಕೊಂಡು ಆರಂಭವಾಗಿ ಬೆಳೆಯುತ್ತಾ ಬೆಳೆಯುತ್ತಾ ಹೋಗಿ ಕೊನೆಗೆ ಅಂತ್ಯದಲ್ಲಿ ಘನವಾದ ತಾತ್ವಿಕತೆಯೊಂದನ್ನು ಕಟ್ಟಿಕೊಡುವ ಪರಿ ಬೆರಗುಗೊಳಿಸುವಂಥದ್ದು. ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ನಟನೆಗಿಂತಲೂ ಹೆಚ್ಚಾಗಿ ತಮ್ಮ ರಾಜಕೀಯ ನಿಲುವುಗಳಿಂದಾಗಿ ಹಲವರ ಬಾಯಿಗೆ ಬೆಂಕಿಯಾಗಿ ಬಿದ್ದವರು. ಯಾರು ಏನೇ ಅಂದರೂ ತಮ್ಮ ಆಲೋಚನೆ ಮತ್ತು ನಿಲುವುಗಳಂತೆಯೇ ಬದುಕುವುದು ಸರಿಯಾದ ಬದುಕು ಎಂದು ನಂಬಿ ಅದರಂತೆ ಬದುಕುತ್ತಿರುವವರು. ಯಾರನ್ನೋ ಮೆಚ್ಚಿಸಲಿಕ್ಕಾಗಿ ಅಥವಾ ಯಾರಿಗೋ ಸರಿಕಾಣುವುದಿಲ್ಲವೆಂಬುದಕ್ಕಾಗಿಯೋ ನಮ್ಮಿಷ್ಟಕ್ಕೆ ವಿರುದ್ಧವಾಗಿ ಬದುಕುವ ಬದುಕು ನಿಜವಾದ ಬದುಕಲ್ಲ; ಯಾರೇನೇ ಅಂದರೂ ನಮಗಿಷ್ಟದಂತೆಯೇ ನಾವು ಬದುಕಬೇಕು ಎಂಬುದು ಅವರ ನಿಲುವು.
`ಸತ್ಯ ನಗ್ನವಾಗಿ ನಿಂತಿದೆ' ಎಂಬ ಲೇಖನದಲ್ಲಿ ಬರುವ `ಸತ್ಯಕ್ಕೆ ನೇರವಾಗಿ ಮುಖಾಮುಖಿಯಾಗುವ ಧೈರ್ಯವೇ ಬದುಕು. ಅದು ನೋವುಂಟುಮಾಡುತ್ತದೆ. ಉಸಿರುಗಟ್ಟಿಸುತ್ತದೆ. ಆದರೆ ಅದುವೇ ಸರಿ.' ಎಂಬ ಅವರ ಮಾತು ಇದನ್ನು ದೃಢಪಡಿಸುತ್ತದೆ.  ನಿಲುವು ಇಲ್ಲಿನ ಹಲವು ಬರೆಹಗಳಲ್ಲಿ ಸ್ಪಷ್ಟವಾಗಿ ಮೂಡಿಬಂದಿದೆ. ನಿಲುವು ಬರುವುದು ಅಷ್ಟು ಸಾಮಾನ್ಯವಲ್ಲ. ಅವರೇ ಹೇಳುವಂತೆ, `ನನ್ನತ್ತ ಕಲ್ಲುಗಳನ್ನು ತೂರಬೇಡಿ/ ಹಿಡಿದು ಮನೆಕಟ್ಟಿಕೊಳ್ಳುತ್ತೇನೆ/ ಬೆಂಕಿಯಿಂದ ಸುಡಲೆತ್ನಿಸಬೇಡಿ/ ಮನೆಗೆ ದೀಪವಾಗಿಸಿಕೊಳ್ಳುತ್ತೇನೆ' ಎನ್ನುವ ಎದೆಗಾರಿಕೆಯಿಂದ ಮಾತ್ರ ಇದು ಸಾಧ್ಯವಾಗುವಂಥದ್ದು. ಇದನ್ನು ಗಮನಿಸಿಯೋ ಏನೋ ಕನ್ನಡದ ಹಿರಿಯ ವಿದ್ವಾಂಸ .ಎಲ್. ನಾಗಭೂಷಣಸ್ವಾಮಿ, `ನಮ್ಮ ಇಷ್ಟದಂತೆಯೇ ನಾವು ಬದುಕಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ; ಆದರೆ ಹಾಗೆ ಬದುಕುವ ಧೈರ್ಯ ಎಲ್ಲರಿಗೂ ಇರುವುದಿಲ್ಲ. ಹಾಗಾಗಿ ಎಲ್ಲರೂ ಹಾಗೆ ಬದುಕಲು ಸಾಧ್ಯವಾಗುವುದಿಲ್ಲ. ಆಸೆ ಮತ್ತು ಧೈರ್ಯ ಎರಡೂ ಇರುವಂಥ ಪ್ರಕಾಶ ಅಂಥವರಿಗೆ ಮಾತ್ರ ಅದು ಸಾಧ್ಯವಾಗುತ್ತದೆ' ಎಂದು ಮಾರ್ಮಿಕವಾಗಿ ಹೇಳಿದ್ದು ಅತ್ಯಂತ ಅರ್ಥಪೂರ್ಣವಾಗಿದೆ.
ದೇಶದ ಬಹುಮುಖಿ ಸಂಸ್ಕೃತಿಯನ್ನು ಹಾಳುಗೆಡವಿ ದೇವರು ಧರ್ಮ ಸಂಸ್ಕೃತಿಗಳ ಹೆಸರಿನಲ್ಲಿ ದೇಶದ ಸಾಮಾನ್ಯ ಜನರನ್ನು ಮೂಲಕ ದೇಶದ ಸೌಹಾರ್ದ ಬದುಕನ್ನು ನಾಶಗೈಯುತ್ತಿರುವ ದುಷ್ಟಶಕ್ತಿಗಳ ಬಗ್ಗೆ ಅವರಿಗೆ ಇರುವುದು ಸಾತ್ವಿಕ ಕೋಪವೇ ಹೊರತು ದ್ವೇಷವಲ್ಲ. ದಾರಿತಪ್ಪುತ್ತಿರುವ ಯುವಜನತೆಯ ಬಗ್ಗೆ ಅವರಿಗಿರುವುದು ತಾಯ್ತನದ ಮರುಕವೇ ಹೊರತು ಸಿಟ್ಟಲ್ಲ. ಸ್ವಾರ್ಥರಹಿತ ಕೂಡುಬಾಳುವಿಕೆಯ ಮಹತ್ವವನ್ನು ಒಂದು ಜನಪದ ಕತೆಯ ಮೂಲಕ ಕಟ್ಟಿಕೊಡುವ ಲೇಖನವೊಂದರಲ್ಲಿ ಅವರ ಬಗೆಗಿನ ಆಲೋಚನೆ ಹೆಪ್ಪುಗಟ್ಟಿ ನಿಲ್ಲುವುದು ಹೀಗೆ: 'ಗೋಡೆಗಳನ್ನು ಕಟ್ಟುವವರು ನಾವೇ. ಬೇಲಿಗಳನ್ನು ಹಾಕುವವರಿಗೆ ದೇಶದ ವೈವಿಧ್ಯ ಅರ್ಥವಾಗುವುದು ಸಾಧ್ಯವೇ ಇಲ್ಲ. ನನ್ನನದಿ ಪವಿತ್ರ, ಇದಕ್ಕೆ ಬೇರೆ ಉಪನದಿಗಳ ನೀರು ಹರಿಯಲೇಬಾರದು ಎಂದು ಹೇಳುತ್ತಾ ಕೂತರೆ ಕೊನೆಗೆ ನಮ್ಮ ನದಿಯೇ ಬತ್ತಿಹೋಗುತ್ತದೆ. ನದಿಯೊಂದು ವಿಶಾಲವೂ ಆಳವೂ ಆಗುವುದು ಉಪನದಿಗಳು ಸೇರಿದಾಗಲೇ. ಬೇರೆ ಬೇರೆ ಉಪನದಿಗಳ ನೀರಿನ ರುಚಿ, ಅವು ಹೊತ್ತು ತರುವ ಬೇರೆ ಬೇರೆ ಪ್ರದೇಶದ ಮಣ್ಣು, ಬೇರೆ ಬೇರೆ ಸೆಳೆತಗಳು ಸೇರಿದಾಗಲೇ ಒಂದು ನೈಲ್, ಒಂದು ಗಂಗೆ, ಒಂದು ಕಾಳಿ ನದಿಯಾಗುತ್ತದೆ. ನದಿಯ ಗುಣ ಇಲ್ಲದ ದೇಶವಾಗಲೀ ಧರ್ಮವಾಗಲೀ ಬಹಳ ಕಾಲ ಬಾಳಲಾರದು.'
ಪ್ರಕಾಶ್ ರೈ ಅವರ `ಅವರವರ ಭಾವಕ್ಕೆ' ಸಂಕಲನದ ಎಲ್ಲ ಲೇಖನಗಳನ್ನೂ ಮನಸ್ಸಿನಲ್ಲಿಟ್ಟುಕೊಂಡು ನಾಲ್ಕು ಮಾತು ಹೇಳುವುದಾದರೆ ಇಲ್ಲಿ ನಮ್ಮ ವೈಯಕ್ತಿಕ ಬದುಕನ್ನು ಸರಿಯಾದ ರೀತಿಯಲ್ಲಿ ಮತ್ತು ಅಷ್ಟೇ ಸಮರ್ಥವಾಗಿ ಕಟ್ಟಿಕೊಳ್ಳಲು ಮಾರ್ಗದರ್ಶನ ಮಾಡಬಲ್ಲ ಹತ್ತು ಹಲವು ಸಂಗತಿಗಳಿವೆ. ಪ್ರಬಲ ತಾತ್ವಿಕತೆಯನ್ನೂ ವೈಚಾರಿಕತೆಯನ್ನೂ `ಬೌದ್ಧಿಕಭಾರ'ವಿಲ್ಲದೇ ನಿರಾಡಂಬರವಾಗಿ ನಿರೂಪಿಸುವ ಕಲೆಗಾರಿಕೆ ಇದೆ. ನಿರಾಡಂಬರವು ನಿಸ್ತೇಜಕ್ಕೆ ಕಾರಣವಾಗಿ ಬರೆಹಗಳನ್ನು ಸಪ್ಪೆಯಾಗದಂತೆ ರೂಪಕಗಳ ಮೂಲಕ ಸಶಕ್ತಗೊಳಿಸುವ ಕವಿಮನಸ್ಸಿದೆ. ಇವೆಲ್ಲಕ್ಕೂ ಮಿಗಿಲಾಗಿ ಇಂದಿನ ತುರ್ತು ಅಗತ್ಯವಾದ ದೇಶದ ದೇಶವಾಸಿಗಳೆಲ್ಲ ಕೂಡಿಬಾಳುವ ಸುಖವನ್ನು ಅನುಭವಿಸುವುದನ್ನು ಕಾಣುವುದೂ ಸೇರಿದಂತೆ ಹತ್ತು ಹಲವು ಕನಸುಗಳಿವೆ. ಕನಸುಗಳನ್ನು ನನಸಾಗಿಸಿಕೊಳ್ಳುವ ತುಡಿತವಿದೆ. ಅದಕ್ಕೆ ಶ್ರದ್ಧಾಪೂರ್ವಕ ದುಡಿತವೂ ಇದೆ. ಎಲ್ಲ ಸೂಕ್ಷ್ಮ ಎಳೆಗಳನ್ನು ಗಮನಿಸಿಯೋ ಏನೋ ಪುಸ್ತಕದ ಮೊದಲ ಪ್ರತಿಯನ್ನು ಸ್ವೀಕರಿಸಿದ ದೇವನೂರು ಮಹಾದೇವ ಕುರಿತು ಆಡಿದ್ದು ಒಂದೇ ಒಂದು ಮಾತು, `ಪ್ರಕಾಶ್ ಆಲೋಚನೆಮಾಡಿ ಬುದ್ಧಿಯಿಂದ ಬರೆಯುತ್ತಾರೆ ಅಂತ ನನಗೆ ಅನ್ನಿಸುವುದಿಲ್ಲ. ಅವರು ಹೃದಯದಿಂದ ಬರೆಯುತ್ತಾರೆ ಅಂತ ಅನ್ನಿಸುತ್ತೆ. ಅವರ ಬರಹಗಳ ಉಗುರು ಬೆಚ್ಚಗಿನ ಸ್ಪರ್ಶ ನಮಗೆ ಪರಿಣಾಮಕಾರಿ ಆಗಿ ತಲುಪುತ್ತೆ.'
ಹೌದು, ಉಗುರು ಬೆಚ್ಚಗಿನ ಸ್ಪರ್ಶಸುಖವನ್ನು ಅನುಭವಿಸಬೇಕಾದರೆ, ನಾವೆಲ್ಲರೂ ಅದರಲ್ಲಿಯೂ ವಿಶೇಷವಾಗಿ ನಮ್ಮ ಯುವಜನತೆ ಚುಂಬಕ ಶಕ್ತಿಯ ಚಿಂತನೆಯ ಚಿತ್ರಗಳಾದ ಪುಸ್ತಕದ ಲೇಖನಗಳನ್ನು ಒಮ್ಮೆ ಓದಬೇಕು; ಅವರನ್ನು ಮೆಚ್ಚಿಕೊಳ್ಳುವವರು ಮಾತ್ರವಲ್ಲ; ಅವರನ್ನು ದ್ವೇಷಿಸುವವರೂ ಕೂಡ.
*****
·        ಡಾ. ರಾಜೇಂದ್ರ ಬುರಡಿಕಟ್ಟಿ
buradikatti@gmail.com
09-10-2018