Sunday, July 23, 2017

ಮಂಗಳೂರಿನ ಕೆಂಪು ಮತ್ತು ಕಲಬುರಗಿಯ ಕಂಪು

ಮಂಗಳೂರಿನ ಕೆಂಪು ಮತ್ತು ಕಲಬುರಗಿಯ ಕಂಪು

 “ಸೂಜಿ ಚುಚ್ಚಿದರೆ ಸಾಕು ಪೂತ್ಕರಿಸುವ ಘಟಸರ್ಪದ
ಕೋರೆಯಿಂದ ವಿಷದ ಚಿಲುಮೆ ಚಿಮ್ಮುತ್ತಿದೆ

ನಮ್ಮ ಕುವೆಂಪು ಕಾರಂತರ ಸಮಕಾಲೀನರಾಗಿದ್ದ ಇಪ್ಪತ್ತನೆಯ ಶತಮಾನದ ಉರ್ದು ಸಾಹಿತ್ಯದ ಮೇರುಪ್ರತಿಭೆ ಫೈಜ್ ಅಹ್ಮದ್ ಫೈಜ್ ಅವರ ಕವಿತೆಯೊಂದರ ಎರಡು ಸಾಲುಗಳಿವು. ಪಾಕಿಸ್ತಾನದಿಂದ ಬೇರ್ಪಡೆಯಾದ ಪೂರ್ವಬಂಗಾಳವು `ಬಾಂಗ್ಲಾದೇಶ’ವಾಗಿ ಉದಯವಾಗುವ ಕಾಲಘಟ್ಟದಲ್ಲಿ ಅಲ್ಲಿನ ಪರಿಸ್ಥಿತಿಯನ್ನೂ ಜನರ ಮನಸ್ಥಿತಿಯನ್ನೂ ಅನುಭವಿಸಿ ಬರೆದ ಪದ್ಯವೊಂದರ ಈ ಸಾಲುಗಳು (ಅನು:ಬಾಗೇಶ್ರೀ) ನಮ್ಮ ದಕ್ಷಿಣಕನ್ನಡ ಜಿಲ್ಲೆಯ ಈಗಿನ ಪರಿಸ್ಥಿತಿ ಮತ್ತು ಅಲ್ಲಿನ ಕೆಲವರ ಮನಸ್ಥಿತಿಯನ್ನು ಅರ್ಥಪೂರ್ಣವಾಗಿ ಕಟ್ಟಿಕೊಡುತ್ತವೆ. ಒಂದು ಕಾಲದಲ್ಲಿ ದಕ್ಷಿಣಕನ್ನಡ ಎಂದರೆ ಅದರ ಹೆಸರಿನಲ್ಲಿಯೇ ಅಡಕವಾಗಿರುವ `ಕನ್ನಡ’ದ ಕಾರಣಕ್ಕೋ ವಿಶಾಲವಾದ ಕಡಲಿನ ಕಾರಣಕ್ಕೋ ನಮ್ಮೆಲ್ಲರಿಗೂ ಒಂದು ಆಕರ್ಷಣೆಯಾಗಿತ್ತು. ಇಂದು ಆ ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ವಾಕರಿಕೆ ಹಾಗನ್ನುವುದಕ್ಕಿಂತ ಹೆದರಿಕೆಯಾಗುತ್ತಿದೆ. ಘಟ್ಟ ಇಳಿಯಲು ಖುಷಿಪಡುತ್ತಿದ್ದ ನಾವೆಲ್ಲ ಇಳಿದರೆ ಮೇಲಕ್ಕೆ ಸುರಕ್ಷಿತವಾಗಿ ಬರುತ್ತೇವೋ ಇಲ್ಲವೋ ಎಂದು ಆತಂಕಪಡುವಂತಾಗಿದೆ.

ಇದೇ ಹೊತ್ತಿನಲ್ಲಿ ಕಲಬುರಗಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಕಲಾವಿದ ಮಂಡ್ಯ ರಮೇಶ್ ಅವರು `ದಕ್ಷಿಣಕನ್ನಡ ಜಿಲ್ಲೆಗೆ ಕಲಬುರಗಿ ಜಿಲ್ಲೆ ಮಾದರಿಯಾಗಬೇಕು’ ಎಂದು ಹೇಳಿರುವುದು ವರದಿಯಾಗಿದೆ. ಕಳೆದ ಕೆಲವು ದಿನಗಳಿಂದ ದಕ್ಷಿಣಕನ್ನಡ ಜಿಲ್ಲೆಯ ಸಾಮಾನ್ಯ ಜನರ ನೆಮ್ಮದಿಯನ್ನು ಹಾಳುಮಾಡಿರುವ ಕೋಮಗಲಭೆಗಳ ಹಿನ್ನಲೆಯಲ್ಲಿಯೇ ಅವರು ಈ ಮಾತನ್ನು ಆಡಿದ್ದಾರೆ ಎಂಬುದು ಮೇಲುನೋಟಕ್ಕೇ ತಿಳಿಯುವ ಸಂಗತಿ. ಬಹಳಷ್ಟು ವಿಷಯದಲ್ಲಿ ದಕ್ಷಿಣಕನ್ನಡ ಜಿಲ್ಲೆಯನ್ನು ಮುಂದುವರೆದ ಜಿಲ್ಲೆಯೆಂದೂ ಇತರ ಜಿಲ್ಲೆಗಳಿಗೆ ಮಾದರಿ ಎಂದೂ ಹೇಳಲಾಗುತ್ತದೆ. ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆಗಳ ಫಲಿತಾಂಶ, ಸಾಕ್ಷರತೆ, ಸ್ವಚ್ಚತೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ಹೀಗೆ ಕೆಲವನ್ನು ಹೆಸರಿಸಬಹುದು. ಕಲಬುರಗಿಯನ್ನು ಇಂತಹ ವಿಷಯಗಳಲ್ಲಿ ಮಾದರಿ ಎಂದು ತೋರಿಸಿರುವುದು ಇಲ್ಲ ಎನ್ನಬಹುದಾದಷ್ಟು ಕಡಿಮೆ ಎಂದೇ ಹೇಳಬೇಕು. ಬಹಳಷ್ಟು ವಿಷಯಗಳಲ್ಲಿ `ಹಿಂದುಳಿದ’ ಎಂದೇ ಸಂಬೋಧಿಸಲ್ಪಡುವ ಈ ಜಿಲ್ಲೆ `ಮುಂದುವರಿದ’ ಹಣೆಪಟ್ಟಿ ಕಟ್ಟಿಕೊಂಡಿರುವ ದಕ್ಷಿಣಕನ್ನಡ ಜಿಲ್ಲೆಗೆ `ಕೋಮುಸಾಮರಸ್ಯ’ದ ಬಹುಮುಖ್ಯವಾದ ಒಂದು ವಿಷಯದಲ್ಲಿ ಬುದ್ದಿಹೇಳುವ ಹಂತದಷ್ಟು ಎತ್ತರದಲ್ಲಿದೆ ಎಂದು ಈ ಕಲಾವಿದ ಭಾವಿಸಿರುವುದು ಸರಿಯಾಗಿಯೇ ಇದೆ ಅನಿಸುತ್ತದೆ.

ಮೇಲ್ನೋಟಕ್ಕೆ ಇದು ಎರಡು ಜಿಲ್ಲೆಗಳ ಹೋಲಿಕೆಯಾಗಿ ಕಂಡರೂ ವಾಸ್ತವದಲ್ಲಿ ಇದು ಎರಡು ಭೂಪ್ರದೇಶಗಳ ಹೋಲಿಕೆಯೆಂದು ಅನಿಸುತ್ತದೆ. ಇಲ್ಲಿ ಕಲಬುರಗಿ ಅಂದರೆ ಇಡೀ `ಕಲ್ಯಾಣ ಕರ್ನಾಟಕ’ ಎಂದೂ ದಕ್ಷಿಣಕನ್ನಡ ಎಂದರೆ `ಕರಾವಳಿ ಕರ್ನಾಟಕ’ ಎಂದೂ ಇದನ್ನು ವಿಸ್ತರಿಸಿಕೊಂಡು ಸದ್ಯದ ವಿದ್ಯಮಾನವನ್ನು ಚರ್ಚಿಸುವ ಅನುಕೂಲತೆಗಳಿವೆ. ಯಾಕೆ ಈ ಕಲ್ಯಾಣ ಕರ್ನಾಟಕವು ಕೋಮುಸೌಹಾರ್ದತೆಯ ವಿಷಯದಲ್ಲಿ ಕರಾವಳಿ ಕರ್ನಾಟಕಕ್ಕೆ ಬುದ್ಧಿಕಲಿಸುವ ಹಂತದಲ್ಲಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಲು ಇದರಿಂದ ಸಾಧ್ಯವಾಗುತ್ತದೆ. ಅಂತಹ ಪರಿಶೀಲನಾಪ್ರಯತ್ನ ಈ ಲೇಖನದ ಉದ್ದೇಶ.

ಈ ಮೊದಲೇ ಹೇಳಿದಂತೆ ದಕ್ಷಿಣಕನ್ನಡ ಜಿಲ್ಲೆ ವರ್ತಮಾನದಲ್ಲಿ ಮಾತ್ರವಲ್ಲ ಹಿಂದಿನಿಂದಲೂ ಹಲವು ವಿಷಯಗಳಲ್ಲಿ ನಾಡಿನ ಗಮನ ಸೆಳೆದ ಜಿಲ್ಲೆ. ಆದರೆ ಈ ಗಮನ ಸೆಳೆಯುವಿಕೆಯ ಕಾರಣಗಳು ಈಗ ನಕಾರಾತ್ಮಕವಾಗಿದ್ದರೆ ಆಗ ಸಕಾರಾತ್ಮಕವಾಗಿದ್ದವು. ಯುರೋಪಿಯನ್ನರ ಆಗಮನದ ಆರಂಭಿಕ ಹೆಜ್ಜೆಗುರುತುಗಳು, ಸಮುದ್ರ ವ್ಯಾಪಾರ-ವಹಿವಾಟು, ಇಂಗ್ಲಿಷ್ ಶಿಕ್ಷಣ, ಬ್ರಿಟೀಶ್ ವಿದ್ವಾಂಸರು ಬಾಸೆಲ್ ಮಿಶಿನ್ ಮೂಲಕ ಮಾಡಿದ ಸಾಹಿತ್ಯ-ಸಂಸ್ಕೃತಿ ಸಂಬಂಧಿ ಕೆಲಸಗಳು, ಯಕ್ಷಗಾನದಂತಹ ಒಂದು ಅಪರೂಪದ ಕಲೆ ಹೀಗೆ ಹೆಮ್ಮೆ ಪಡುವ ಹಲವು ಸಂಗತಿಗಳಿಂದ ಅದು ನಾಡಿನ ಗಮನವನ್ನು ಸೆಳೆಯುತ್ತಿತ್ತು. ಈಗ ಅದು ಮುಖ್ಯವಾಗಿ ಗಮನ ಸೆಳೆಯುತ್ತಿರುವುದು ಕೋಮುಕಲಹಗಳಿಗಾಗಿ. ಈಗ ಅಲ್ಲಿನ ಪರಿಸ್ಥಿತಿ ಹೇಗೆಲ್ಲ ಆಗಿದೆ ಎಂಬುದನ್ನು ಯಾರೂ ಯಾರಿಗೂ ವರ್ಣಿಸಿ ಹೇಳಬೇಕಾದ ಅವಶ್ಯಕತೆಯೇ ಇಲ್ಲದಷ್ಟು ಅದು ನಾಡಿಗೆ ಪರಿಚಿತವಾಗಿದೆ. ಈ ಪ್ರದೇಶವು ವಿವಿಧ ಧರ್ಮ-ಸಂಸ್ಕೃತಿಗಳು ವಿಭಿನ್ನ ಆಚಾರ ವಿಚಾರಗಳಗಳ ಜನರನ್ನು ಎಷ್ಟೋ ವರ್ಷಗಳಿಂದ ಬಾಳಿಬದುಕಿಸಿದೆಯಾದರೂ ಈಗಿನ ವಿದ್ಯಮಾನಗಳು ಆ ಪ್ರದೇಶದ ಘನತೆ-ಗೌರವಗಳನ್ನು ತಗ್ಗಿಸುತ್ತಿವೆ.

ಜೈನ-ಬೌದ್ಧ-ವೈಷ್ಣವ-ಶೈವ-ಮುಂತಾದ `ಅಧಿಕೃತ’ ಧರ್ಮಗಳ ಕೆಲವು `ಪ್ರತಿಷ್ಠಿತ’ ದೇವರುಗಳ ಜೊತೆ `ಅನಧಿಕೃತ’ ಎಂದು ಅಲಕ್ಷಿಸಲ್ಪಟ್ಟಿರುವ ಚೌಡಿ, `ಕಲ್ಲುಕುಟಿಕ’ ಮುಂತಾದ ಎಷ್ಟಫ ದೈವಗಳ ಆರಾಧಕರೂ ಅಲ್ಲಿದ್ದಾರೆ. ಅವರೆಲ್ಲರ ನಡುವೆ ಹೇಳಿಕೊಳ್ಳುವಷ್ಟು ದೊಡ್ಡ ಮಟ್ಟದ ದ್ವೇಷ-ವೈಷಮ್ಯಗಳು ಇವೆಯೆಂದು ಎನಿಸುವುದಿಲ್ಲ. ಆದರೆ ಅಲ್ಲಿನ ಬಹುದೊಡ್ಡ ಎರಡು ಜನಸಮುದಾಯಗಳಾದ `ಹಿಂದೂ’ ಮತ್ತು `ಮುಸ್ಲಿಂ’ ಸಮುದಾಯಗಳ ವಾರಸುದಾರರು ಎಂದು ಹೇಳಿಕೊಳ್ಳುವ ಕೆಲವು ವ್ಯಕ್ತಿ ಮತ್ತು ಸಂಘಟನೆಗಳು ಅಲ್ಲಿನ ಪರಿಸ್ಥಿತಿಯನ್ನು ಎಷ್ಟು ಕೆಡಿಸಿದ್ದಾರೆಂದರೆ ಅಲ್ಲಿನ ಸಾಮಾನ್ಯ ಜನಜೀವನ ದಿನದಿನಕ್ಕೂ ಅಸಹನೀಯವಾಗುತ್ತಿದೆ. ಹಸುಸಾಗಿಸುವವರನ್ನು ಹಿಡಿದು ಹೊಡೆಯುವುದು, ಗೋವಿನ  ಮಾಂಸವನ್ನು ಇಟ್ಟುಕೊಂಡಿದ್ದರೆಂದು ಮನೆನುಗ್ಗಿ ಪರಿಶೀಲನೆಗೆ ತೊಡಗುವುದು, ಲವ್ ಜಿಹಾದ್ ಕಾರಣವಿಟ್ಟುಕೊಂಡು ಹುಡುಗರನ್ನು ತಳಿಸುವುದು ಮತ್ತು ಇಂತಹ ಕಾರಣಗಳಿಗಾಗಿ ಹಲ್ಲೆಗೊಳಗಾದವರು ಪ್ರತಿಕಾರಕ್ಕಾಗಿ ಪ್ರತಿಹಲ್ಲೆಮಾಡುವುದು ಇವೆಲ್ಲ ಅಲ್ಲಿನ ನಿತ್ಯದ ವರ್ತಮಾನವಾಗುತ್ತಿವೆ. ಪರಿಸ್ಥಿತಿ ಯಾವ ಹಂತಕ್ಕೆ ಹೋಗಿದೆ ಎಂದರೆ ಈ ಸಮುದಾಯಗಳಿಗೆ ಸೇರಿದ ವಯಸ್ಸಿಗೆ ಬಂದು ಒಬ್ಬ ಹುಡುಗಿ-ಹುಡುಗ ಸಾರ್ವಜನಿಕ ಸ್ಥಳಗಳಲ್ಲಿ ನಿಂತುಕೊಂಡು ಮಾತನಾಡುವುದೂ ಅಲ್ಲಿ ಅಪರಾಧವಾಗಿಬಿಟ್ಟಿದೆ!

ಅಂದಮಾತ್ರಕ್ಕೆ ಅಲ್ಲಿ ನಡೆಯುತ್ತಿವೆ ಎನ್ನಲಾಗಿರುವ ಅಪರಾಧಿ ಚಟುವಟಿಕೆಗಳನ್ನು ನೋಡಿಕೊಂಡು ಕೈಕಟ್ಟಿಕುಳಿತುಕೊಳ್ಳಬೇಕು ಎಂಬುದು ನನ್ನ ಮಾತಿನ ಅರ್ಥವಲ್ಲ. ಹಾಗೆ ಇರುವುದು ಪ್ರಜ್ಞಾವಂತ ಪ್ರಜೆಗಳ ಲಕ್ಷಣವೂ ಅಲ್ಲ. ಆದರೆ ನಾವು ಅಂತಹ ಚಟುವಟಿಕೆಗಳನ್ನು ಹೇಗೆ ನಿಯಂತ್ರಿಸಬೇಕು ಎಂಬುದು ಮುಖ್ಯ. ಕಾನೂನಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ಯಾರಾದರೂ ತೊಡಗಿದ್ದರೆ ಅವನ್ನು ನಿಗ್ರಹಿಸಲು, ನಿಯಂತ್ರಿಸಲು ನಮ್ಮಲ್ಲಿ ಕಾನೂನು ಕೋರ್ಟು ಪೋಲೀಸು ಇವೆ. ಅವುಗಳನ್ನು ನಾವು ಸರಿಯಾಗಿ ಬಳಸಿಕೊಂಡೇ ಇಂತಹ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಬೇಕೇ ಹೊರತು ನಾವೇ ಅವೆಲ್ಲವೂ ಆಗಿ ಕಾನೂನು ಕೈಗೆ ತೆಗೆದುಕೊಂಡರೆ ಅರಾಜಕತೆ ಸೃಷ್ಟಿಯಾಗುತ್ತದೆ. ದಕ್ಷಿಣಕನ್ನಡದ ನೆಲದಲ್ಲಿ ದಿನದಿನಕ್ಕೂ ಉಂಟಾಗುತ್ತಿರುವ ಈ ಅರಾಜಕತೆ ಸಾಮಾನ್ಯರ ನೆಮ್ಮದಿಯನ್ನೇ ಕಸಿದುಕೊಂಡು ಅವರೆಲ್ಲ ಕೈಯಲ್ಲಿ ಜೀವಹಿಡಿದುಕೊಂಡು ಬದುಕಬೇಕಾದ `ಭಯಾನಕ’ ವಾತಾವರಣವನ್ನು ಸೃಷ್ಟಿಸುತ್ತಿದೆ. ಬೇರೆ ಧರ್ಮವನ್ನಿರಲಿ ತಮ್ಮ ಧರ್ಮವನ್ನೂ ಸರಿಯಾಗಿ ಅರಿಯಲಾರದ ಕೆಲವು ಅವಿವೇಕಿ ಮಂಗಗಳು ಇಂದು ಆ ಪ್ರದೇಶವನ್ನು `ಮತಧರ್ಮಗಳ ಮರಕೋತಿ ಆಟ’ ಆಡುವ ಅಂಗಣವನ್ನಾಗಿ ಮಾಡಿಕೊಂಡು ಕುಣಿಯುತ್ತಿವೆ. ಪರಸ್ಪರ ಪ್ರೀತಿ-ವಿಶ್ವಾಸದಿಂದ ಬದುಕಬೇಕು ಎಂದು ಆಸೆ ಹೊಂದಿರುವ,

`ಜಾತಿಧರ್ಮ ಜನಾಂಗಗಳ ಹೆಸರಿನಲಿ
ಮನುಜ ಮನುಜರ ಮಧ್ಯೆ ಗೋಡೆ
ಕಟ್ಟುವ ದುರುಳ ಭಸ್ಮಾಸುರರನು
ಮಟ್ಟಹಾಕಲು ರುದ್ರ ಮೇಣ ಭದ್ರನಾಗುವಾಸೆ’ (ಅಶೋಕ ನರೋಡೆ)

ಇಟ್ಟುಕೊಂಡು ಈ ಎರಡೂ ಸಮುದಾಯಗಳಲ್ಲಿ ಇದ್ದಿರಲೇಬಹುದಾದ ಅಸಂಖ್ಯಾತ ಸಜ್ಜನರು ಈ ಆಟವನ್ನು ಅಸಹಾಯಕರಾಗಿ ನೋಡುತ್ತಾ ಕೂರುವಂತಾಗಿದೆ ಮಾತ್ರವಲ್ಲ, ತಮ್ಮ ಈ ಆಸೆ ಕೈಗೂಡದಿರುವ ವಿಷಾಧದ ಹೊಗೆಯೂ ಅವರ ಮೂಗುಬಾಯಿಹೊಕ್ಕು ಉಸಿರಾಡುವುದನ್ನೇ ಕಷ್ಟಮಾಡಿ ಮಾತುಹೊರಡದಂತೆ ಮಾಡಿದೆ. ಈ ಮಂಗಗಳ ಮರಕೋತಿ ಆಟಕ್ಕೆ ಇತ್ತೀಚೆಗೆ ಎರಡೂ ಸಮುದಾಯಗಳಿಂದ ಒಬ್ಬೊಬ್ಬರಂತೆ ಬಲಿಯಾದ ಇಬ್ಬರು ಯುವಕರ ಕೊಲೆಗಳು ಮಾನವೀಯತೆ ಇರುವ ಯಾರ ಮನಸ್ಸನ್ನೇ ಆಗಲಿ ಮರುಗಿಸದೇ ಇರಲಾರವು. ಇದು ಆ ಜಿಲ್ಲೆಗೆ ಮಾತ್ರವಲ್ಲ ಇಡೀ ನಾಡಿಗೆ ಕಳಂಕ ತರುವಂಥದ್ದು.

ಕೋಮುಗಲಭೆಗಳು ಎಲ್ಲಿಯೇ ನಡೆಯಲಿ ಅಲ್ಲಿ ಸಂಕಷ್ಟಕ್ಕೆ ಸಿಲುಕುವವರು ಬಹಳಷ್ಟುಮಟ್ಟಿಗೆ ಅಮಾಯಕರಾದ ಜನ. ತಮ್ಮ ತುತ್ತಿನಚೀಲವನ್ನು ತುಂಬಿಕೊಳ್ಳಲು ದಿನವಿಡೀ ಹೆಣಗಾಡುವ ಈ ಶ್ರಮಜೀವಿಗಳು ತಮ್ಮದಲ್ಲದ ತಪ್ಪಿಗಾಗಿ ಶಿಕ್ಷೆಯನ್ನು ಅನುಭವಿಸುವ ಹಿಂಸೆ ಹೇಳತೀರದು. ಲೇಖಕಮಿತ್ರ ಅಬ್ಬಾಸ್ ಮೇಲಿನಮನಿ ಅವರದೊಂದು ಕಥೆ ಇದೆ. ಅದರಲ್ಲಿ ಹೀಗೇ ಒಂದು `ಹಿಂದೂ-ಮುಸ್ಲಿಂ’ ಗಲಭೆಯಲ್ಲಿ ಒಬ್ಬ ಅಮಾಯಕ ಮಹಿಳೆ ಸಿಕ್ಕಿಹಾಕಿಕೊಳ್ಳುತ್ತಾಳೆ. ನಿರ್ಜನವಾದ ಸ್ಮಶಾನಮೌನದ ಬೀದಿಯಲ್ಲಿ ಏಕಾಂಗಿಯಾಗಿ ನಡೆದುಹೋಗಬೇಕಾದ ಅನಿವಾರ್ಯತೆಗೆ ಒಳಗಾದ ಅವಳು ತಾನು ಹಾದು ಹೋಗಬೇಕಾದದ್ದು ಮುಸ್ಲಿಮರ ಪ್ರದೇಶ ಎಂದೋ ಏನೋ `ಸ್ವರಕ್ಷಣಾತಂತ್ರ’ವಾಗಿ ಮುಸ್ಲಿಮ್ ಮಹಿಳೆಯಂತೆ ವೇಷಹಾಕಿಕೊಂಡು ಹೊರಡುತ್ತಾಳೆ. ಆದರೆ ಹಾಗೆ ಹೊರಟ ಅವಳು ಒಂದು `ಉಗ್ರಹಿಂದೂ’ಗಳ ಗುಂಪಿಗೆ ಎದುರಾಗಿಬಿಡುತ್ತಾಳೆ; ಅವರಿಂದ ಅತ್ಯಾಚಾರಕ್ಕೊಳಗಾಗಿಬಿಡುತ್ತಾಳೆ! ಈ ದೌರ್ಜನ್ಯದಿಂದ ಜರ್ಝರಿತವಾದ ಅವಳು ಸುಧಾರಿಸಿಕೊಂಡು ಅಲ್ಲಿಂದ ಮುಂದೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ನಡೆಯತೊಡಗುತ್ತಾಳೆ. ತನ್ನ ಅನುಭವ ಕಲಿಸಿದ ಪಾಠದಿಂದಾಗಿ ಅವಳು ಮುಸ್ಲಿಮ್ ಮಹಿಳೆಯ ಉಡುಪು ತೆಗೆದುಹಾಕಿ ಈ ಬಾರಿ ಹಿಂದೂ ಮಹಿಳೆಯ ಉಡುಪು ಧರಿಸಿ ಹೊರಡುತ್ತಾಳೆ. ಒಂದಿಷ್ಟು ದೂರ ನಡೆದ ಮೇಲೆ ಈ ಸಲ ಅವಳು `ಉಗ್ರ ಮುಸ್ಲಿಮ್’ ಗುಂಪಿಗೆ ಸಿಕ್ಕಿಬಿದ್ದು ಮತ್ತೊಮ್ಮೆ ಅತ್ಯಾಚಾರಕ್ಕೆ ಒಳಗಾಗುತ್ತಾಳೆ.!  ಈ ಕಥೆ ನಮಗೆ ಕಟ್ಟಿಕೊಡುವ ತಾತ್ವಿಕತೆ ಅಂದರೆ ಇಂತಹ ದುರ್ಭರ ಭವಣೆಯ ಸಂದರ್ಭಗಳು ನಮ್ಮ ಅನುಭವದಿಂದ ಕಲಿತ ಪಾಠಗಳೂ ನಮ್ಮ ರಕ್ಷಣೆಗೆ ಬರದಂತಹ ಪರಿಸ್ಥಿತಿಯನ್ನು ನಿರ್ಮಿಸುತ್ತವೆ ಎಂಬುದು. ಇದು ಮಂಗಳೂರಿರಲಿ ಬೆಂಗಳೂರಿರಲಿ ಎಲ್ಲ ಕಡೆಗೂ ಸತ್ಯವಾದದ್ದು.

ಕೋಮುಗಲಭೆಗಳು ನಮ್ಮ ರಾಜ್ಯದಲ್ಲಿ ಅಥವಾ ಕೇವಲ ದಕ್ಷಿಣಕನ್ನಡದಲ್ಲಿ ಮಾತ್ರ ನಡೆಯುತ್ತಿಲ್ಲವಾದರೂ ಹೋಲಿಕೆ ಮಾಡಿದರೆ ನಮ್ಮ ರಾಜ್ಯದ ಉಳಿದೆಲ್ಲ ಪ್ರದೇಶಗಳಿಗಿಂತ ಅವುಗಳ ಸಂಖ್ಯೆ ಇಲ್ಲಿ ಗಣನೀಯವಾಗಿ ಹೆಚ್ಚುತ್ತಿವೆ ಎಂಬುದು ಎದ್ದುಕಾಣುತ್ತಿರುವ ಅಂಶ. ಹಾಗೆ ನೋಡಿದರೆ ಈ `ದಕ್ಷಿಣಕನ್ನಡ’ ಎಂಬುದು ಒಂದು ರೀತಿಯಲ್ಲಿ ನಮ್ಮ ರಾಜ್ಯದ `ದೇವರಜಿಲ್ಲೆ’. ಬಹುಶಃ ಇಲ್ಲಿರುವಷ್ಟು ಪ್ರಸಿದ್ಧ ಮತ್ತು ಪ್ರತಿಷ್ಠಿತ ದೇವಾಲಯಗಳು ನಮ್ಮ ರಾಜ್ಯದ ಬೇರೆ ಎಲ್ಲಿಯೂ ಇಲ್ಲವೇನೋ. ಈ ಜಿಲ್ಲೆಯಲ್ಲಿ ಯಾರಾದರೂ ಎಡವಿಬಿದ್ದರೆ ಅವರ ತಲೆ ಯಾವುದಾದರೂ ದೇವರ ಪಾದಕ್ಕೇ ಬೀಳುತ್ತದೆ’ ಎಂಬುದೊಂದು ಅತಿಶಯೋಕ್ತಿ. ಈ ಲೇಖನದಲ್ಲಿ ಉಲ್ಲೇಖಿಸಿರುವ ಕಲಬುರಗಿ ಮಾತ್ರವಲ್ಲ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಅಪಾರವಾದ ಸಂಖ್ಯೆಯ ಜನ ಇಲ್ಲಿನ ದೇವದೇವತೆಗಳು ಒಳ್ಳೆಯದನ್ನು ಮಾಡುತ್ತಾರೆಂದು ನಂಬಿ ಬರುತ್ತಾರೆ. ಅವರಿಗೆಲ್ಲ ಅಷ್ಟೊಂದು ಒಳ್ಳೆಯದನ್ನು ಮಾಡುವ ಈ ದೇವದೇವತೆಗಳು ತನ್ನ ಮಡಿಲಿನಲ್ಲಿಯೇ ಇರುವ ತನ್ನ ಮಕ್ಕಳನ್ನು ಈ ರೀತಿಯ ಜೀವಮಾರಕ ಆಟವಾಡಲು ಬಿಟ್ಟದ್ದಾದರೂ ಏಕೆ ಎಂದು ನಾನು ಪ್ರಶ್ನಿಸಿದರೆ ಅದು ಉಡಾಫೆಯಾಗಲರದೇನೋ.

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಕೋಮುಕಲಹಗಳು ಹೆಚ್ಚು ಆಗುತ್ತಿರುವುದಕ್ಕೆ ಸ್ಪಷ್ಟವಾದ ಕಾರಣಗಳು ಏನಿರಬಹುದು ಮತ್ತು ಇಂತಹ ಕಲಗಹಗಳಿಗೆ ಕಾರಣವಾಗುವಂತಹ ವಿಷಬೀಜಗಳು ಅಲ್ಲಿನ ಮಣ್ಣಿನಲ್ಲಿಯೇ ಹಿಂದಿನಿಂದಲೂ ಇದ್ದುಕೊಂಡೇ ಬಂದಿವೆಯೋ ಅಥವಾ ಎತ್ತಲಿಂದಾದರೂ ಹಾರಿಬಂದಂತಹುಗಳೇ ಎಂಬುದು ಹೆಚ್ಚಿನ ಅಧ್ಯಯನವನ್ನು ನಿರೀಕ್ಷಿಸುವ ಸಂಗತಿ. ಮೇಲುನೋಟಕ್ಕೆ ಕಂಡುಬರುವ ಸಂಗತಿಗಳ ಆಧಾರದ ಮೇಲೆ ಹೇಳುವುದಾದರೆ ಉಡುಪಿಯನ್ನೂ ಒಳಗೊಂಡ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಮತ್ತು ಅದರ ಸುತ್ತಮುತ್ತಲ `ತುಳುನಾಡು’ ತನ್ನ ಇತಿಹಾಸದ ಗರ್ಭದಲ್ಲಿ ಈ ವಿಷಬೀಜಗಳನ್ನು ಇಟ್ಟುಕೊಂಡಂತಿಲ್ಲ. ಇದನ್ನು ಇಲ್ಲಿನ ಸಾಹಿತ್ಯ ಕಲೆಗಳು ತೋರಿಸಿಕೊಟ್ಟಿವೆ.

ಕನ್ನಡ ಸಾಹಿತ್ಯ ಸಂಸ್ಕೃತಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಮತ್ತು ನಾಡು ಎಂದೆಂದೂ ಮರೆಯಬಾರದ ಮುಖ್ಯ ಲೇಖಕರನ್ನು ಈ ಪ್ರದೇಶ ನೀಡಿದೆ. ತೀರಾ ಹಿಂದಕ್ಕೆ ಹೋಗದೆ ನೋಡುವುದಾದರೂ ಹೊಸಗನ್ನಡದ ಅರುಣೋದಯದ ಮುಂಗೋಳಿ ಎಂದು ಕರೆಯಲ್ಪಡುವ ನಮ್ಮ ಮುದ್ದಣ-ಮನೋರಮೆಯರು ಬಾಳಿಬದುಕಿದ್ದು ಈ ಪ್ರದೇಶದಲ್ಲಿ. ನವೋದಯದ ಆರಂಭಿಕ ಕಾಲಘಟ್ಟದ ಮಹತ್ವದ ಕವಿಗಳಾದ ಮಂಜೇಶ್ವರ ಗೋವಿಂದ ಪೈಗಳು, ಪಂಜೆ ಮಂಗೇಶರಾಯರು ಇಲ್ಲಿಯವರು. ತಮ್ಮ ಅಪಾರ ಜೀವನಾನುಭದ ಕಾದಂಬರಿಗಳ ಮೂಲಕ ಈ ಪ್ರದೇಶ ಮಾತ್ರವಲ್ಲ ಇಡೀ ನಾಡಿನ ಕೀರ್ತಿಯನ್ನು ಬೆಳಗಿದ ಶಿವರಾಮ ಕಾರಂತ, ಸಂಶೋಧಕ ಸೇಡಿಯಾಪು ಕೃಷ್ಣಭಟ್, ಮಳಿಯ ತಿಮ್ಮಪ್ಪಯ್ಯ, ಕಯ್ಯಾರ ಕಿಞ್ಞಣ್ಣ ರೈ ಅವರಂಥ ದಿಗ್ಗಜರು ಹುಟ್ಟಿಬೆಳೆದದ್ದು ಇಲ್ಲಿ. ವರ್ತಮಾನದ ಲೇಖಕರಾದ ಸಾರಾ ಅಬೂಬಕ್ಕರ್, ನಾ. ದಾಮೋದರ ಶೆಟ್ಟಿ, ವೈದೇಹಿ, ಕೆ.ಟಿ.ಗಟ್ಟಿ, ವಿವೇಕ ರೈ, ಕಟ್ಪಾಡಿ, ಬೋಳುವಾರು, ಪುರುಷೋತ್ತಮ ಬಿಳಿಮಲೆ, ಜಿ.ರಾಜಶೇಖರ್, ಫಣಿರಾಜ್, ದಿನೇಶ ಅಮಿನಮಟ್ಟು, ಪಾರ್ವತಿ ಐತಾಳ್ ಮುಂತಾದವರೆಲ್ಲರೂ ಈ ಪ್ರದೇಶದವರು. ನನ್ನ ಓದಿನ ಪರಿಮಿತಿಯಲ್ಲಿ ಪ್ರಾಮಾಣಿಕವಾಗಿ ಹೇಳುವುದಾದರೆ ಇವರಲ್ಲಿ ಯಾರೂ  ಪ್ರತ್ಯಕ್ಷವಾಗಿಯಾಗಿಯಾಗಲೀ ಪರೋಕ್ಷವಾಗಿಯಾಗಲೀ ತಮ್ಮ ಬರಹ ಅಥವಾ ಭಾಷಣಗಳ ಮೂಲಕ ಕೋಮುದ್ವೇಷವನ್ನು ಪ್ರಚೋದಿಸಿದವರಲ್ಲ. ಬದಲಾಗಿ ಕೂಡಿಬಾಳುವುದನ್ನು ಹೇಳಿಕೊಟ್ಟವರು.

ಈ ಕೂಡಿಬಾಳುವಿಕೆಯನ್ನು ಇಲ್ಲಿನ ಸಾಹಿತ್ಯ ಹೇಗೆ ಬೆಂಬಲಿಸಿದೆ ಮತ್ತು ಪ್ರತಿಪಾದಿಸಿದೆ ಎಂಬುದಕ್ಕೆ ಹತ್ತುಹಲವು ಉದಾಹರಣೆಗಳನ್ನು ಕೊಡಬಹುದಾದರೂ  ಎರಡನ್ನು ಮಾತ್ರ ಇಲ್ಲಿ ಮಾದರಿಯಾಗಿ ಎತ್ತಿಕೊಳ್ಳುತ್ತಿದ್ದೇನೆ. ಒಂದು: ಈ ತುಳುನಾಡಿನವರೇ ಆದ ಕನ್ನಡದ ಪ್ರಥಮ ರಾಷ್ಟ್ರಕವಿ ಎಂಬ ಅಭಿಧಾನಕ್ಕೆ ಪಾತ್ರರಾದ, ಸ್ವತಃ ಕ್ರೈಸ್ತರೂ ಅಲ್ಲದ ಬೌದ್ಧರೂ ಅಲ್ಲದ  ಎಂ. ಗೋವಿಂದ ಪೈಗಳು ಸುಮಾರು ಎಂಬತ್ತು ವರುಷಗಳ ಹಿಂದೆಯೇ ಕ್ರಿಸ್ತನ ಜೀವನದ ಕೊನೆಯ ದಿನವನ್ನು ವರ್ಣಿಸುವ `ಗೋಲ್ಗೊಥಾ’ ಮತ್ತು ಬುದ್ಧನ ಕೊನೆಯ ದಿನವನ್ನು ವರ್ಣಿಸುವ `ವೈಶಾಖಿ’ ಎಂಬ ಎರಡು ಖಂಡಕಾವ್ಯಗಳನ್ನು ಬರೆದು ಅವುಗಳಲ್ಲಿ ಬರುವ ಜೀವನಮೌಲ್ಯಗಳನ್ನು ಜನರಿಗೆ ತಿಳಿಸಿದರು. ಅಷ್ಟೇ ಅಲ್ಲ ಇವುಗಳಲ್ಲಿ ಒಂದು ಕಾವ್ಯವನ್ನು ತಮ್ಮ ತಮ್ಮಂದಿರ ಮಕ್ಕಳಿಗೆ ಅರ್ಪಿಸುತ್ತಾ ಅವರು `ಎಲ್ಲರಥಕೊಂದೆ ಪಥ…ಇಂತಖಿಲ ಧರ್ಮಗಳೊಳೇಕ ದೇವನನೋವಲೆಂದು ಮಕ್ಕಳಿರ ನಿಮಗಿತ್ತೇನೀ ಕಾವ್ಯಂ’ ಎಂದೂ ಬರೆದರು. ಚಿಕ್ಕಮಕ್ಕಳಿಗೆ ಅನ್ಯಧರ್ಮಗಳ ಬಗ್ಗೆ ಅನ್ಯ ಧರ್ಮೀಯರ ಬಗ್ಗೆ ಅತ್ಯಂತ ದ್ವೇಷಮತ್ಸರಗಳನ್ನು ಬೆಳೆಸುತ್ತಿರುವ ಕೆಟ್ಟ ಸಂದರ್ಭವೊಂದರಲ್ಲಿ ಬದುಕುತ್ತಿರುವ ನಾವೆಲ್ಲ ನಮ್ಮ ಮಕ್ಕಳಿಗೆ ಯಾವ ಭಾವನೆಯನ್ನು ಬೆಳೆಸಬೇಕು ಎಂಬುದಕ್ಕೆ ಅಂದು ಗೋವಿಂದ ಪೈಗಳು ತಮ್ಮ ಮಕ್ಕಳಿಗೆ ಹೇಳಿಕೊಟ್ಟ `ಎಲ್ಲ ಧರ್ಮಗಳಲ್ಲಿಯೂ ಒಬ್ಬನೇ ದೇವನನ್ನು ಕಾಣುವ’ ಮತ್ತು `ಎಲ್ಲ ಧರ್ಮಗಳೆಂಬ ರಥಗಳು ನಡೆಯುವುಕ್ಕೆ ಇರುವುದು ಒಂದೇ ಹಾದಿ’ ಎಂಬ ಪಾಠಗಳು ನಮ್ಮ ಕಣ್ಣುಗಳನ್ನು ತೆರೆಸಬೇಕಿದೆ.

ಇನ್ನೊಂದು ಉದಾಹರಣೆ ಕೊಡುವುದಾದರೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೂ ಆಗಿದ್ದ ಲೇಖಕ ಬಾಗಲೋಡಿದೇವರಾಯ ಅವರು `ಮಗ್ಗದ ಸಾಹೇಬ’ ಎಂಬ ಒಂದು ಕಥೆಯನ್ನು ಬರೆದರು. ಆ ಕಥೆಯಲ್ಲಿ ಅವರ ಊರಿನಲ್ಲಿ ಮುಸಲ್ಮಾನ ಉದಾರಿ ಧನಿಕನೊಬ್ಬ ಮಸೀದಿ ಜೊತೆಗೆ ದೇವಸ್ಥಾನವನ್ನೂ ಕಟ್ಟಿಸಿದ್ದನ್ನೂ ಎರಡೂ ಸಮುದಾಯಗಳಿಂದ ಅಪಾರ ಗೌರವಕ್ಕೆ ಪಾತ್ರವಾಗಿದ್ದನ್ನೂ ಚಿತ್ರಿಸಿದ್ದಾರೆ. ಅವರು ಕಟ್ಟಿಸಿದ್ದ ಆ ದೇವಾಲಯದಲ್ಲಿ ರಥೋತ್ಸವದ ಸಂದರ್ಭದಲ್ಲಿ ಆ ಮುಸಲ್ಮಾನ ಧನಿಕನ ಮನೆತನದ ಹಿರಿಯ ಪ್ರತಿನಿಧಿಯೊಬ್ಬರಿಗೆ ಎಲ್ಲರಿಗಿಂತಲೂ ಮುಂದಾಗಿ ಪ್ರಸಾದ ಸ್ವೀಕರಿಸುವ `ಹಕ್ಕು’ ಇತ್ತಂತೆ. ಅದೇ ರೀತಿ ಆ ಊರಿನಲ್ಲಿ ಮುಸಲ್ಮಾನರು ಆಚರಿಸುತ್ತಿದ್ದ `ಉರುಸ್’ ಸಂದರ್ಭದಲ್ಲಿ ಹಿಂದೂಗಳಾದ ಈ ಲೇಖಕರ ಮನೆತನದ ಯಾರಾದರು ಹಿರಿಯರು ಇರಲೇಬೇಕು ಎಂಬ ಸಂಪ್ರದಾಯವಿತ್ತಂತೆ. ಮುಸಲ್ಮಾನ ಅಧಿಕಾರಿಯೊಬ್ಬನ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಣವಾಗಿರುವುದರಿಂದ ಹಿಂದೂ ಸಂಪ್ರದಾಯಕ್ಕೆ ಅಪಚಾರವಾಯಿತು ಎಂದು ದೊಂಬಿಮಾಡಿ ದೇವಾಲಯದ ಉತ್ಸವವನ್ನೇ ತಡೆದು ಹೊಸದಾಗಿ ಆ ಹೆಸರನ್ನು ಬಿಟ್ಟು ಆಮಂತ್ರಣ ಮಾಡಿಸುವಂತೆ ಮಾಡಿದ್ದು ನಮ್ಮ ಸಂಸ್ಕೃತಿಯೋ ಅಥವಾ ಬಾಗಲೋಡಿ ದೇವರಾಯರು ಕೊಡುವ ಚಿತ್ರಣ ನಮ್ಮ ಸಂಸ್ಕೃತಿಯೋ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಈ ಧರ್ಮದ ಅಪವ್ಯಾಖ್ಯಾನ ಕೇವಲ ಒಂದು ಕಡೆಯಿಂದ ಅಂದರೆ `ಹಿಂದೂ’ ಅನ್ನಿಸಿಕೊಂಡವರಿಂದ ಮಾತ್ರ ಅಲ್ಲಿ ನಡೆಯುತ್ತಿದೆ ಎನ್ನಲಾಗದು. ಇಸ್ಲಾಮ್ ಧರ್ಮ ಮತ್ತು ಅದರ ಮುಖ್ಯ ಧರ್ಮಗ್ರಂಥವೆಂದು ಪರಿಗಣಿಸಲ್ಪಟ್ಟಿರುವ ಪವಿತ್ರ ಕುರಾನಿನ ಅಪವ್ಯಾಖ್ಯಾನವೂ ಬೇರೆಕಡೆಗೆ ಆದಂತೆ ಅಲ್ಲಿನ ಕ್ಷೋಭೆಗೆ ಕಾರಣವಾಗಿರಬಹುದು. ಹಿಂದೂಗಳಿಗೆ ಹೋಲಿಸಿದರೆ ಸಾಮಾನ್ಯ ಶಿಕ್ಷಣಕ್ಕೆ ಮುಖಮಾಡಿದವರ ಸಂಖ್ಯೆ ಮುಸ್ಲಿಂ ಸಮುದಾಯದಲ್ಲಿ ಸಹಜವಾಗಿಯೇ ಕಡಿಮೆ ಇರುವುದು ಅಂಕಿಸಂಖ್ಯೆಗಳಿಂದ ತಿಳಿದುಬರುವ ಸಂಗತಿ. ಹೀಗಾಗಿ ಧಾರ್ಮಿಕ ವಿಷಯಗಳಲ್ಲಿ ಇನ್ನೊಬ್ಬರ ಅವಲಂಬನ ಅವರಲ್ಲಿ ಹೆಚ್ಚೆಂದೇ ಹೇಳಬೇಕು.  ಇದು  ಜನಸಾಮಾನ್ಯರು ಸ್ವಸಾಮರ್ಥ್ಯದಿಂದ ಧರ್ಮಗ್ರಂಥಗಳನ್ನು `ಓದಿ ಆಚರಿಸುವುದಕ್ಕಿಂತ’ ಬೇರೆಯವರು ಹೇಳುವುದನ್ನು `ಕೇಳಿ ಪಾಲಿಸುವುದು’ ಹೆಚ್ಚಾಗುವಂತೆ ಮಾಡಿದೆ. ಈ ಪರಾವಲಂಬನ ಪ್ರಕ್ರಿಯೆ ಉಂಟುಮಾಡುವ ಪರಿಣಾಮ ಯಾವ ರೀತಿಯಲ್ಲಿ ಇರುತ್ತದೆ ಎಂದು ಹೇಳುವುದು ಕಷ್ಟ. ಒಬ್ಬ `ಗುರು’ ಸರಿಯಾಗಿ ಬೋಧಿಸಿದರೆ ಏಕಕಾಲದಲ್ಲಿ ನೂರಾರು, ಸಾವಿರಾರು ಜನರ ಹೃದಯಗಳಲ್ಲಿ ಬೆಳಕು ಮೂಡಬಹುದು; ಹಾಗೆ ಆ ಗುರು ಏನಾದರೂ ಧರ್ಮಗ್ರಂಥವನ್ನು ವ್ಯಾಖ್ಯಾನಮಾಡುವಲ್ಲಿ ಎಡವಿ ಅಪವ್ಯಾಖ್ಯಾನ ಮಾಡಿಬಿಟ್ಟರೆ ಏಕಕಾಲದಲ್ಲಿ ಸಾವಿರಾರು ಜನರ ಹೃದಯದಲ್ಲಿ ಬೆಳಕು ಮೂಡಬೇಕಿದ್ದ ಸ್ಥಳದಲ್ಲಿ ಬೆಂಕಿ ಹತ್ತಿಕೊಳ್ಳಬಹುದು.

ಆದರೆ ಸ್ವತಃ ಓದಿ ಅರ್ಥಮಾಡಿಕೊಳ್ಳುವಲ್ಲಿ ಲಾಭವಾಗಲೀ ನಷ್ಟವಾಗಲೀ ಇಷ್ಟೊಂದು ದೊಡ್ಡಮಟ್ಟದಲ್ಲಿರುವುದಿಲ್ಲ. ಒಬ್ಬ ಸರಿಯಾಗಿ ಓದದೆ ತಪ್ಪಾಗಿ ಅರ್ಥೈಸಿಕೊಂಡರೆ ಬಹಳ ಎಂದರೆ ಅದು ಅವನೊಬ್ಬನಿಗೆ ಆಗುವ ಹಾನಿ. ಇಲ್ಲಿ ಹಾಗಾಗುವುದಿಲ್ಲ. ಹಿಂದೂ ಧರ್ಮ ಎಂಬುದು ಹಿಂದೂ ಮಹಾಸಾಗರವೇ ಇದ್ದಂತೆ. ಹಿಂದೂ ಧರ್ಮ ಅಂದರೇನು ಮತ್ತು ಅದರ ಮುಖ್ಯ ತತ್ವಗಳೇನು ಎಂಬುದನ್ನು ಸರಿಯಾಗಿ ಸ್ಪಷ್ಟವಾಗಿ ಹೇಳಲು ಇನ್ನೂ ಯಾರಿಗೂ ಸಾಧ್ಯವಾಗಿಲ್ಲ. ಅದು ಒಂದು ಧರ್ಮ ಹೌದಾ ಅಲ್ಲವಾ ಎಂಬುದೂ ದೊಡ್ಡ ಮಟ್ಟದ ಚರ್ಚೆಯ ವಿಷಯ. ಇದನ್ನು ಅಂದರೆ `ಹಿಂದೂ ಅಂದರೇನು ಅದು ಧರ್ಮ ಹೌದಾ ಅಲ್ಲವಾ ಎಂದು ಹೇಳಲು ನಮ್ಮ ಸುಪ್ರಿಂ ಕೋರ್ಟೇ ಎಷ್ಟು ಒದ್ದಾಡಿದೆ ಎಂದು ಎಲ್ಲರಿಗೂ ಗೊತ್ತಿದೆ. ಕೊನೆಗೂ ಅದು ಅದನ್ನು ಒಂದು `ಧರ್ಮ’ (Riligion) ಎಂದು ಕರೆಯದೆ `ಜೀವನಮಾರ್ಗ’ (Way of Life) ಎಂದು  ಹೇಳಿ ಕೈತೊಳೆದುಕೊಂಡಿದೆ.ಹೀಗಾಗಿ ಅದರ ಚರ್ಚೆಯನ್ನು ಇಲ್ಲಿ ಎತ್ತಿಕೊಳ್ಳದೆ ಆ ಜೀವನ ಮಾರ್ಗ ಯಾವುದು ಎಂಬುದನ್ನು ಮೇಲಿನ ಕೆಲವು ಉದಾಹರಣೆಗಳೊಂದಿಗೆ ವಿವರಿಸಿರುವ ನಾನು ಹೆಸರಿನ ವಿಷಯದಲ್ಲಿ ಇಂತಹ ಬಹಳಷ್ಟು ಗೊಂದಲಗಳಿರದ ಇಸ್ಲಾಂ ಬಗ್ಗೆ ಚರ್ಚೆಯನ್ನು ಮುಂದುವರೆಸುತ್ತಿದ್ದೇನೆ.

`ಇಸ್ಲಾಂ’ ಅಂದರೆ ಏನು ಮತ್ತು ಸಹಬಾಳ್ವೆ ಹಾಗೂ ಮತಾಂತರ ಕುರಿತು ಅದು ಏನು ಹೇಳುತ್ತದೆ ಎಂಬುದನ್ನು ನೋಡೋಣ. `ಇಸ್ಲಾಂ’ ಎಂಬುದು ಬಹುವಾಗಿ ಈಗ ಒಂದು ಧರ್ಮದ ಹೆಸರಾಗಿ ಈಗ ಪ್ರಚಲಿತವಾಗಿದೆಯಾದರೂ ಅರಬ್ಬೀ ಭಾಷೆಯ ಈ ಪದ ಮುಖ್ಯವಾಗಿ ಮತ್ತು ಮೂಲವಾಗಿ ಒಂದು ಗುಣದ ಹೆಸರು. ಅರಬ್ಬೀಯಲ್ಲಿ `ಇಸ್ಲಾಂ’ ಅಂದರೆ `ಅನುಸರಣೆ ಮತ್ತು ವಿಧೇಯತೆ’. `ಇಸ್ಲಾಂ’ ಧರ್ಮವು ಮುಖ್ಯವಾಗಿ ಅಲ್ಲಾಹನ ಅನುಸರಣೆ ಮತ್ತು ವಿಧೇಯತೆಯಾಗಿರುವುದರಿಂದ ಅದಕ್ಕೆ ಆ ಹೆಸರು ಬಂದಿದೆ. “ಇಸ್ಲಾಂ ಮನುಸ್ಯನ ಪ್ರಾಕೃತಿಕ ಧರ್ಮ, ಅದು ಯಾವುದೇ ಜನಾಂಗ, ದೇಶ, ಭಾಷೆಗಳಿಗೆ ಸೀಮಿತವಾದುದಲ್ಲ, ಎಲ್ಲ ಕಾಲ, ಜನಾಂಗ, ದೇಶ, ಭಾಷೆಗಳಲ್ಲಿನ ದೈವಭಕ್ತರೂ ಸತ್ಯಸಂದರೂ ಆದ ಜನರೆಲ್ಲರ ಧರ್ಮ ಈ ಇಸ್ಲಾಮೇ ಆಗಿತ್ತು, ಅವರವರ ಭಾಷೆಗಳಲ್ಲಿ ಅವರ ಧರ್ಮದ ಹೆಸರು ಇಸ್ಲಾಂ ಆಗಿರಲಿ ಅಥವಾ ಇನ್ಯಾವುದೇ ಆಗಿರಲಿ ಅವರೆಲ್ಲರೂ ಮುಸ್ಲಿಮರಾಗಿದ್ದರು” ಎಂದು ಅದು ಭಾವಿಸುತ್ತದೆ.

ಇದನ್ನೂ ಒಳಗೊಂಡಂತೆ ಇಸ್ಲಾಮಿನ ಕೆಲವು ವಿಚಾರಧಾರೆಗಳು ಅನೇಕಕಡೆ ಅಪವ್ಯಾಖ್ಯಾನಕ್ಕೆ ಗುರಿಯಾಗಿ ಇಡೀ ಜಗತ್ತನ್ನು ಇಸ್ಲಾಮಿಕರಣ ಮಾಡಬೇಕು ಎಂಬ ಆಲೋಚನೆ ಕೆಲವರಿಗೆ ಬಂದು ಅವರು ಆ ಧರ್ಮಕ್ಕೆ ಬೇರೆ ಧರ್ಮದ ಜನರನ್ನು ಬಲಾತ್ಕಾರದಿಂದ ಮತಾಂತರ ಮಾಡುತ್ತಿರುವ ಸಂಗತಿಗಳೂ ಬೆಳಕಿಗೆ ಬಂದಿವೆ. ಇದರ ಭಾಗವಾಗಿ ಭಾರತದಲ್ಲಿಯೂ ಈ ಚಟುವಟಿಕೆಗಳು ನಡೆಯುತ್ತಿವೆಯೆಂದೂ ಹೇಳಲಾಗುತ್ತಿದೆ. ಇದಕ್ಕೆ ಪ್ರತಿರೋಧವೆಂಬಂತೆ `ಅವರು ಇಡೀ ಪ್ರಪಂಚವನ್ನು `ಇಸ್ಲಾಮಿಕ್ ಸ್ಟೇಟ್’ ಮಾಡಲು ಹೊರಟಿರುವಾಗ ನಾವು ಕನಿಷ್ಠ ನಮ್ಮ ದೇಶವನ್ನಾದರೂ `ಹಿಂದೂರಾಷ್ಟ್ರ’ವನ್ನಾಗಿ ಮಾಡಿಕೊಳ್ಳುವುದರಲ್ಲಿ ತಪ್ಪೇನು ಎಂದು ಇನ್ನು ಕೆಲವರು ಅದಕ್ಕೆ ಕಂಕಣಬದ್ಧರಾಗಿ ಹೋರಾಡುತ್ತಿರುವುದು ಮಂಗಳೂರಲ್ಲಿ ಮಾತ್ರವಲ್ಲ ಇಡೀ ನಮ್ಮ ದೇಶದಲ್ಲಿಯೇ ನಡೆಯುತ್ತಿರುವ ಈ ಬಗೆಯ ಸಂಘರ್ಷಗಳಿಗೆ ಮೂಲಕಾರಣ. `ಧರ್ಮನಿರಪೇಕ್ಷತೆ’ಯನ್ನು ಜೀವಾಳವಾಗಿಟ್ಟುಕೊಂಡು ನಾವು ಇತ್ತೀಚೆಗಷ್ಟೇ ಕಟ್ಟಿಕೊಂಡಿರುವ ನಮ್ಮ `ಭಾರತ’ದ ಭದ್ರತೆ ಮತ್ತು ಬಾಳುವಿಕೆ ಎರಡಕ್ಕೂ ಈ ಎರಡೂ ಆಲೋಚನಾ ಕ್ರಮಗಳು ಅಪಾಯಕಾರಿಯೇ.

ಮಂಗಳೂರು ಭಾಗದ ಈಗಿನ ಮತೀಯ ಕಲಹಗಳಿಗೆ ತೋರಿಕೆಯ ನೆಪಮಾತ್ರದ ಕಾರಣಗಳು ಏನೇ ಇರಲಿ ಅವುಗಳು ನೆಲದೊಳಗೆ ಹುದುಗಿರುವ ಈ ಎರಡು ದೊಡ್ಡದಾದ ತಾಯಿಬೇರಿನಿಂದ ಮೇಲೆಬಂದ ಚಿರುರುಗಳೇ ಎಂದು ಬೇರೆ ಹೇಳಬೇಕಿಲ್ಲ. ಇದು ಏದನಾದರೂ ಇರಲಿ ಆದರೆ ಇಸ್ಲಾಮಿನ ಪವಿತ್ರ ಗ್ರಂಥವೆಂದು ಪರಿಗಣಿಸಲ್ಪಟ್ಟಿರುವ ಕುರಾನ್ ಸಹಬಾಳ್ವೆ ಮತ್ತು ಮತಾಂತರ ವಿಷಯಗಳ ಕುರಿತು ಏನು ಹೇಳುತ್ತದೆ ನೋಡೋಣ. ಮೊದಲು ಸಹಬಾಳ್ವೆ ಕುರಿತು: ಕುರಾನಿನ ಪ್ರಕಾರ ದೇವರು (ಅಲ್ಲಾಹ್) ಕೇವಲ ಮುಸ್ಲಿಮರ ಸೃಷ್ಟಿಕರ್ತನಲ್ಲ. ಅವನು ಸಕಲ ಮಾನವರ ಕರ್ತನಾಗಿದ್ದಾನೆ ಮತ್ತೂ ಎಲ್ಲರಿಗೂ ಅತ್ಯಂತ ನಿಕಟವಾದವನಾಗಿದ್ದಾನೆ (ಪ.ಕು.50.16). ಜಗತ್ತಿನ ಎಲ್ಲ ಮಾನವರು ಅಲ್ಲಾಹ್ ಸೃಷ್ಟಿಸಿದ ಒಂದು ಜೀವದಿಂದ ವಿಕಸನಗೊಂಡವರು (ಪ.ಕು.4:1). ಆರಂಭದಲ್ಲಿ ಮಾನವರೆಲ್ಲರೂ ಒಂದೇ ಸಮುದಾಯದವರಾಗಿದ್ದು ನಂತರದಲ್ಲಿ ವಿವಿಧ ತತ್ವಾದರ್ಶಗಳನ್ನು ಮಾಡಿಕೊಂಡರು(ಪ.ಕು.10:19). ಹೀಗಾಗಿ ಕುರಾನಿನ ಪ್ರಕಾರ ಇಡೀ ಮಾನವಕುಲವೇ ಒಂದು. ಅವರೆಲ್ಲ ಸೋದರಸಂಬಂಧಿಗಳು! ಹೀಗಿದ್ದ ಮೇಲೆ ಹಿಂದೂಗಳನ್ನು ಮಾತ್ರವಲ್ಲ ಈಗ ಯಾರು ಮುಸ್ಲಿಮರಾಗಿಲ್ಲವೋ ಅಂತಹ ಯಾರನ್ನೇ ಆಗಲಿ ವಿರೋಧಿಗಳೆಂದು ಭಾವಿಸುವವನು ನಿಜವಾದ ಮುಸ್ಲಿಮನಾಗಿರಲು ಸಾಧ್ಯವಿಲ್ಲ.

`ಇನ್ನು ಮತಾಂತರದ ಬಗ್ಗೆ ಕುರಾನ್ ಹೇಳುವುದೇನು? `ಧರ್ಮಪ್ರಚಾರ’ ಎಂಬುದು ಮುಸ್ಲಿಮ್ ಆದವನ ನೈತಿಕ ಮತ್ತು ಧಾರ್ಮಿಕ ಕರ್ತವ್ಯವೆಂದು ಅದು ಒತ್ತಿಹೇಳಿದೆ ನಿಜ. ಆದರೆ ಅದನ್ನು ಹೇಗೆ ಮಾಡಬೇಕು ಎಂಬುದನ್ನೂ ಅದು ಹೇಳಿದೆ, ಸ್ವತಃ ಪೈಗಂಬರರಿಗೇ ಅದು, “ಯುಕ್ತಿ ಮತ್ತು ಸದುಪದೇಶದ ಮೂಲಕ ನಿಮ್ಮ ಪ್ರಭುವಿನ ಮಾರ್ಗಕ್ಕೆ ಜನರನ್ನು ಆಹ್ವಾನಿಸಿರಿ ಮತ್ತು ಜನರೊಂದಿಗೆ ಅತ್ಯುತ್ತಮ ರೀತಿಯಿಂದ ವಾದಿಸಿರಿ” (ಪ.ಕು.16:125) ಎಂದು ಆಜ್ಞಾಪಿಸಿದೆ. ಇಸ್ಲಾಮಿಗೆ ಜನರನ್ನು ಆಕರ್ಷಿಸಲು `ಯುಕ್ತಿ’ `ಸದುಪದೇಶ’ ಮತ್ತು `ವಾದ’ ಗಳನ್ನು ಅದು ಮುಂದುಮಾಡಿದೆಯೇ ಹೊರತು `ಶಕ್ತಿ’ `ದುರುಪದೇಶ’ ಮತ್ತು `ಖಡ್ಗ’ ಇವುಗಳನ್ನು ಅಲ್ಲ ಎಂಬುದನ್ನು ನಾವು ಸೂಕ್ಷ್ಮವಾಗಿ ಮತ್ತು ಸ್ಪಷ್ಟವಾಗಿ ಗಮನಿಸಬೇಕು. ಕುರಾನ್ ಇಷ್ಟು ಹೇಳಿ ಸುಮ್ಮನಾಗಲಿಲ್ಲ. `ನಮ್ಮ ಸಂದೇಶವಾಹಕರಿಗೆ ಸುಸ್ಪಷ್ಟ ಆಜ್ಞೆಗಳನ್ನು ತಲುಪಿಸುವ ಹೊಣೆಗಾರಿಕೆ ಮಾತ್ರವಿತ್ತೆಂಬುದನ್ನು ಅರಿತುಕೊಳ್ಳಿರಿ” (ಪ.ಕು.5:92), ‘ಸಂದೇಶವಾಹಕರ ಮೇಲೆ ಸಂದೇಶವನ್ನು ತಲುಪಿಸುವ ಹೊಣೆಗಾರಿಕೆ ಮಾತ್ರವಿದೆ’ (ಪ.ಕು.5:99) ಎಂಬ ಎಚ್ಚರಿಕೆಗಳನ್ನೂ ನೀಡಿದೆ. ಇದರರ್ಥ ಯಾರನ್ನೇ ಆಗಲಿ ಒತ್ತಾಯದಿಂದ ಇಸ್ಲಾಮಿಗೆ ಮತಾಂತರ ಮಾಡುವುದು ಕುರಾನಿಗೆ ಆ ಮೂಲಕ ಇಸ್ಲಾಮಿಗೆ ಮಾಡುವ ದೊಡ್ಡ ದ್ರೋಹವಾಗುತ್ತದೆ. ಸಾರಾಂಶೀಕರಿಸ ಹೇಳುವುದಾದರೆ ಕುರಾನ್ ಬೆಂಬಲಿತ ಇಸ್ಲಾಂ ಮನುಷ್ಯ ಒಳ್ಳೆಯವನಾಗುವುದನ್ನು ದೈವಭಕ್ತನಾಗಿರುವುದನ್ನು ಮತ್ತು ಮನುಷ್ಯಮನುಷ್ಯರ ನಡುವಿನ ಸಾಮರಸ್ಯವನ್ನು ಸಾರುತ್ತದೆಯೇ ಹೊರತು ಇಡೀ ಜಗತ್ತಿನ ಎಲ್ಲರೂ ಇಸ್ಲಾಮಿಗೆ ಸೇರಬೇಕೆಂದು ಒತ್ತಾಯಪಡಿಸುವುದಿಲ್ಲ.

ಕಲಬುರಗಿಯ ಹೋಲಿಕೆ ಈ ಲೇಖನದಲ್ಲಿ ಪ್ರಾಸಂಗಿಕವಾಗಿ ಬಂದಿರುವುದರಿಂದ ಅದು ಇರುವ ಕಲ್ಯಾಣ ಕರ್ನಾಟಕದ  ಬಗ್ಗೆ ನಾಲ್ಕಾರು ಮಾತುಗಳನ್ನು ಹೇಳಲೇಬೇಕು. ಆ ಪ್ರದೇಶ ಕರಾವಳಿ ಪ್ರದೇಶಕ್ಕೆ ಹೋಲಿಸಿದರೆ ಆರ್ಥಿಕವಾಗಿ ಬಡತನದ ಪ್ರದೇಶ. ಪ್ರತಿವರ್ಷ ಹೊಟ್ಟೆಪಾಡಿಗಾಗಿ ಬೆಂಗಳೂರು, ಮಂಗಳೂರು, ಹೈದರಾಬಾದು, ಮುಂಬೈ ಮುಂತಾದ ನಗರಗಳಿಗೆ ಹೊಟ್ಟೆತುಂಬಿಸಿಕೊಳ್ಳಲು ವಲಸೆಹೋಗುವ ಮತ್ತು ಹೀಗೆ ವಲಸೆ ಹೋದವರಲ್ಲಿ ಕಟ್ಟಡ ಕುಸಿದೋ ಕೆಲಸಮಾಡುವಾಗ ಬಿದ್ದೋ ಕೆಲವರು ಸತ್ತಾಗ ಈ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ಧಿ ಮತ್ತು ಆ ಹಿನ್ನಲೆಯಲ್ಲಿ ಪ್ರಕಟಗೊಳ್ಳುವ ಲೇಖನಗಳು ಪ್ರತಿವರ್ಷ ಇದನ್ನು ಸಾಬೀತುಗೊಳಿಸುತ್ತವೆ. ಮಂಗಳೂರಿನಲ್ಲಿ ಸುರಿವ ಮಳೆಯಷ್ಟೆ ಭಯಂಕರವಾದದ್ದು ಕಲಬುರಗಿಯಲ್ಲಿ ಉರಿವ ಬಿಸಿಲು.ಅಲ್ಲಿಗೂ ಇಲ್ಲಿಗೂ ಇರುವ ಸಾಮ್ಯತೆ ಎಂದರೆ `ಬೆವರು’ ಮಾತ್ರ.  ಕರಾವಳಿ ಕರ್ನಾಟಕಕ್ಕೆ ಹೋಲಿಸಿದರೆ ಈ ಪ್ರದೇಶಗಳಲ್ಲಿ ಮತೀಯ ಕಲಹಗಳು ಇಲ್ಲವೆನ್ನುವಷ್ಟು ಕಡಿಮೆ. ಹಾಗೆ ನೋಡಿದರೆ ಬೇರೆ ಬೇರೆ ಧರ್ಮಗಳಿಗೆ ಸೇರಿದ ಜನರು ಈ ಭಾಗಗಳಲ್ಲಿ ಕರಾವಳಿಗಿಂತಲೂ ಹೆಚ್ಚಿದ್ದಾರೆ. ಅವರೆಲ್ಲ ಇಲ್ಲಿ ಸೌಹಾರ್ದತೆಯಿಂದ ಕೂಡಿ ಬಾಳುವಂತೆ ಮಾಡಿರುವ ಅಂಶಗಳು ಯಾವುವಿರಬಹುದು ಎಂದು ನಾನು ಹಲವುಬಾರಿ ಯೋಚಿಸಿದ್ದಿದೆ. ಧಾರ್ಮಿಕ ಕ್ಷೇತ್ರಗಳೇ, ರಾಜಕಾರಣಿಗಳೇ, ಸಾಹಿತ್ಯ ಸಂಸ್ಕೃತಿಗಳೇ ಎಂದು ತಲೆಕೆಡಿಸಿಕೊಂಡದ್ದಿದೆ. ಅವೆಲ್ಲವೂ ಕೆಲಮಟ್ಟಿಗೆ ಇಲ್ಲಿ ಸೌಹಾರ್ದ ಕದಡದಂತೆ ನೋಡಿಕೊಂಡಿರುವುದು ಸುಳ್ಳಲ್ಲ.

ಧಾರ್ಮಿಕ ಕ್ಷೇತ್ರಕ್ಕೆ ಒಂದು ಉದಾಹರಣೆಯನ್ನು ಕೊಡುವುದಾದರೆ ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನ ಮತ್ತು ಅಲ್ಲಿನ ದರ್ಗಾಗಳ ನಡುವಿನ ಸಂಬಂಧವನ್ನು ನೋಡಬಹುದು. ಶರಣಬಸವೇಶ್ವರ ಸಂಸ್ಥಾನಕ್ಕೆ ಬಂದ ಭಕ್ತರಿಗೆಲ್ಲ ಆಶೀರ್ವಾದ ಮಾಡುತ್ತಾ ಅಲ್ಲಿನ ಗುರುಗಳು, `ದರ್ಗಾಕ್ಕೆ ಹೋಗಿ ಬಂದಿರಾ?’ ಎಂದು ವಿಚಾರಿಸುತ್ತಿದ್ದರಂತೆ. ಭಕ್ತರು, `ಇಲ್ಲ ಬುದ್ಧಿ’ ಎಂದರೆ `ಇಲ್ಲೇ ಹತ್ರಾನೆ ಇದೆ ಹೋಗುವಾಗ ಅಲ್ಲಿಗೂ ಹೋಗಿ’ ಎಂದು ಹೇಳುತ್ತಿದ್ದರಂತೆ. ಆ ಕಡೆ ದರ್ಗಾದಲ್ಲಿಯೂ ಮಠದ ಬಗ್ಗೆ ಇಂಥದ್ದೇ ಮಾತುಗಳನ್ನು ಹೇಳುತ್ತಿದ್ದರಂತೆ! ಇನ್ನು ರಾಜಕಾರಣವನ್ನು ನೋಡುವುದಾದರೆ ಎಲ್ಲಕಡೆಯಂತೆ ಜಾತಿಲೆಕ್ಕಾಚಾರ ಆ ಭಾಗದಲ್ಲಿಯೂ ಇದೆಯಾದರೂ ಮತೀಯ ಗುಂಪುಗಳನ್ನು ಉದ್ದೇಶಿಸಿ ಚೀರಿಚೀರಿ ಮಾತಾಡಿ ಜನರನ್ನು ಉದ್ರೇಕಿಸಿ ಮತೀಯ ಕಲಹಗಳನ್ನು ಹುಟ್ಟುಹಾಕಿ ತಮ್ಮ ರಾಜಕಾರಣಕ್ಕಾಗಿ ಬಳಸಿಕೊಂಡವರೂ ಅಲ್ಲಿ ಇಲ್ಲ ಎನ್ನುವಷ್ಟು ಕಡಿಮೆ ಎನ್ನಬೇಕು. ಇನ್ನು ಸಾಹಿತ್ಯ ಸಂಸ್ಕೃತಿಯ ವಿಷಯಕ್ಕೆ ಬಂದರೆ ಆ ಭಾಗದ ಸಾಹಿತಿಗಳಿಗೆ ಮಂಗಳೂರು ಭಾಗದಲ್ಲಿನ ಸಾಹಿತಿ ಚಿಂತಕರು ಮಾಡಿದ ಜನರನ್ನು ಬೆಸೆಯುವ ಕೆಲಸವನ್ನು ಮಾಡುವ ಅಗತ್ಯವೇ ಬರದಂತೆ ಸೌಹಾರ್ದ ಅನ್ನುವುದು ಅಲ್ಲಿ ಸ್ವಾಭಾವಿಕ ಸ್ಥಿತಿಯಾಗಿ ಉಳಿದು ಅವರು ಮನುಷ್ಯನ ಇನ್ನಿತರ ಸಮಸ್ಯೆಗಳ ಕಡೆ ಗಮನಹರಿಸುವಂತೆ ಮಾಡಿತು.

ಆದರೆ ನನಗೆ ತಿಳಿದಮಟ್ಟಿಗೆ ಕರಾವಳಿ ಭಾಗಗಳಂತೆ ಇಲ್ಲಿಯ ಮತೀಯ ಕಲಹಗಳು ಉಂಟಾಗದಂತೆ ಮತ್ತು ಜನರು ಸೌಹಾರ್ದತೆಯಿಂದ ಬಾಳಿಬದುಕುವುದಕ್ಕೆ ಇವೆಲ್ಲವುಗಳ ಜೊತೆಗೆ ಕಾರಣವಾದ ಬಹುದೊಡ್ಡ ಅಂಶವೆಂದರೆ ಬಡತನವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನರನ್ನು `ಹೊಟ್ಟೆಹಸಿದವರು’ ಮತ್ತು `ಹೊಟ್ಟೆ ತುಂಬಿದವರು’ ಎಂದು ನಾವು ವಿಭಾಗಿಸಬಹುದೇ ಹೊರತು ಹಿಂದೂ-ಮುಸ್ಲಿಮರು ಎಂದಲ್ಲ. ಅಲ್ಲಿನ ಬಹಳಷ್ಟು ಜನರು ಹೊಟ್ಟೆಹಸಿದವರು. ಯಾವಾಗಲೂ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಹೋರಾಟ ಮಾಡಬೇಕಾದ ಸ್ಥಿತಿಯಲ್ಲಿರುವ ಜನರಲ್ಲಿ ಮತೀಯ ಕಲಹಗಳನ್ನೆಬ್ಬಿಸಿ ಮಜಾ ತೆಗೆದುಕೊಳ್ಳಲು ಸಮಯವೂ ಇರುವುದಿಲ್ಲ; ಸಾಧ್ಯತೆಯೂ ಇರುವುದಿಲ್ಲ. ಅಂತಹದ್ದೇನಿದ್ದರೂ ಹೊಟ್ಟೆತುಂಬಿದವರ ಚಿನ್ನಾಟ. ಅಂತಹವರ ಸಂಖ್ಯೆ ಅಲ್ಲಿ ಅತ್ಯಂತ ಕಡಿಮೆ ಇದೆ. ಇದೇ ಅಲ್ಲಿನ ಸೌಹಾರ್ದತೆಯ ಜೀವನಕ್ಕೆ ಭದ್ರಬುನಾದಿಯಾದ ಅಂಶ. ಕರಾವಳಿ ಕರ್ನಾಟಕದಲ್ಲಿ ಹರಿದಾಡುವ `ದುಬೈದುಡ್ಡು’ ಮತ್ತು `ಕಾಡುಕನ್ನ’ದ ಚಟುವಟಿಕೆಗಳು ಅಲ್ಲಿನ ಇಂತಹ ಮತೀಯ ಕುಕೃತ್ಯಗಳಿಗೆ ಪ್ರೋತ್ಸಾಹಕವಾಗಿರಬಹುದು. ಕಲಬುರಗಿ ಕಡೆಯ `ಬರಗಾಲದ ಬವಣೆ’ ಮತ್ತು `ಹಸಿದ ಹೊಟ್ಟೆ’ ಅವರನ್ನು ಮತೀಯವಾದಿಗಳಾಗದಂತೆ ತಡೆದಿರಬಹುದು. `ತುಂಬಿದ ಜೇಬು ನೂರು ಆಟ ಆಡಿಸುತ್ತದೆ; ಖಾಲೀ ಜೇಬು ನೂರು ಪಾಠ ಕಲಿಸುತ್ತದೆ’ ಎಂಬುದು ಈ ಸಂದರ್ಭಕ್ಕೆ ಹೆಚ್ಚು ಹೊಂದಿಕೊಳ್ಳುವ ಮಾತು.

ಒಂದು ಸಂಗತಿಯನ್ನು ನೆನಪಿಸಿಕೊಂಡು ಈ ಚರ್ಚೆಯನ್ನು ಮುಗಿಸಬಹುದು. ಈ ಮೊದಲೇ ಉಲ್ಲೇಖಿಸಲ್ಪಟ್ಟ ತುಳುನಾಡಿನ ನಮ್ಮ ಹೆಮ್ಮೆಯ ರಾಷ್ಟ್ರಕವಿ ಎಂ. ಗೋವಿಂದ ಪೈಗಳು ತಮ್ಮ `ವೈಶಾಖಿ’ಯಲ್ಲಿ ಸಾವಿನ ಹಾಸಿಗೆಯಲ್ಲಿದ್ದ ಬುದ್ಧನ ಬಾಯಿಂದ ಹೇಳಿಸುವ, “ಯಾರು ಬೇರೆಯವರ ಧರ್ಮವನ್ನೂ ಸ್ವಾತಂತ್ರ್ಯವನ್ನೂ ಜನರನ್ನೂ ಗೌರವಿಸುವರೊ ಅವರ ಧರ್ಮ, ಸ್ವಾತಂತ್ರ್ಯ ಮತ್ತು ಜನ ಆಕಾಶದಂತೆ ವಿಶಾಲವಾಗಿ ಬೆಳೆಯುತ್ತದೆ; ಯಾರು ಬೇರೆಯವರ ಧರ್ಮವನ್ನೂ ಸ್ವಾತಂತ್ರ್ಯವನ್ನೂ ಜನವನ್ನೂ ಕೆಡಿಸುವರೋ ಅವರ ಧರ್ಮ, ಸ್ವಾತಂತ್ರ್ಯ ಮತ್ತು ಜನ ಮೇಲೆದ್ದ ತೆರೆ ಇಳಿಯುವಂತೆ ಕ್ಷಣಮಾತ್ರದಲ್ಲಿ ಕುಸಿಯುತ್ತದೆ” ಎಂಬ ಮಾತುಗಳು ನಮ್ಮೆಲ್ಲರ ವಿಶೇಷವಾಗಿ ಅನ್ಯಮತದ್ವೇಷವನ್ನು ತಮ್ಮೊಳಗೆ ತುಂಬಿಕೊಂಡು ಒಂದರ್ಥದಲ್ಲಿ `ವಿಷಪುರುಷ’ರಾಗಿರುವಂಥವರ ಮನಸ್ಸುಗಳನ್ನು ಮುಟ್ಟಲಿ; ಹೃದಯಗಳನ್ನು ತಟ್ಟಲಿ. ಹಾಗೇ ಕಲಬುರಗಿಯ ಕಡೆಯ ಸೌಹಾರ್ದದ ಗಾಳಿ ಮಂಗಳೂರಿನ ಕಡೆಗೂ ಬೀಸಿ ಅಲ್ಲಿನ ರಕ್ತದ ಕೆಂಪುಕಲೆಗಳನ್ನು ಅಳಿಸಿಹಾಕಿ ಸಹಬಾಳ್ವೆಯ ಕಂಪನ್ನು ಹರಡಲಿ.
******
ಡಾರಾಜೇಂದ್ರ ಬುರಡಿಕಟ್ಟಿ

Sunday, July 23, 2017

Tuesday, July 11, 2017


ಇದು ಇಪ್ಪತ್ತೈದು ವರ್ಷಗಳ ಹಿಂದೆ ನಾನು ಕಾಲೇಜಿನಲ್ಲಿ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿದ್ದಾಗ ಕೇಳಿದ ಮತ್ತು ಇಂದಿಗೂ ಅಚ್ಚಳಿಯದೇ ನನ್ನ ಮನಸ್ಸಿನಲ್ಲಿ ಉಳಿದ `ತೆರಿಗೆ’ ಕುರಿತ ಪಾಠದ ಒಂದು ಅಂಶ. ಪ್ರಾಚೀನ ಕಾಲದ ಬಹಳಷ್ಟು ವಿದ್ವಾಂಸರು ಮತ್ತು ಅರ್ಥಶಾಸ್ತ್ರಜ್ಞರ ಚಿಂತನಾ ಕ್ರಮವನ್ನು ಆದರಿಸಿ ನನ್ನ ಪ್ರಾಧ್ಯಾಪಕರು ತರಗತಿಯಲ್ಲಿ ಹೇಳಿದ್ದ ಈ ಹೇಳಿಕೆ ಕಾಲದೇಶಗಳ ವಿದ್ಯಮಾನಗಳ ಕಾರಣಕ್ಕೋ ಏನೋ ಮನಸ್ಸಿನ ಆಳದಿಂದ ಎದ್ದು ಮುನ್ನೆಲೆಗೆ ಬಂದಿತು. ತೆರಿಗೆ ಎಂದರೇನು ಮತ್ತು ಅದನ್ನು ಹೇಗೆ ವಸೂಲಿ ಮಾಡಬೇಕು ಎಂಬುದಕ್ಕೆ ಈ ಹೇಳಿಕೆ ಎಂದಿಗೂ ಪಾಠವಾಗಬಲ್ಲದು.

ಇಂದು ಭಾರತದ ತೆರಿಗೆ ವಿಧಾನ ಹಿಡಿದಹಾದಿ ನೋಡಿದರೆ ಕೆಲವೊಮ್ಮೆ ಆತಂಕವೂ ಮತ್ತೆ ಕೆಲವೊಮ್ಮೆ ನಾಚಿಕೆಯೂ ಆಗುತ್ತಿದೆ. ಆತಂಕ ಏಕೆಂದರೆ ಎಲ್ಲರೊಂದಿಗೆ ಎಲ್ಲರ ವಿಕಾಸ ಎಂದರೆ ಎಲ್ಲರೂ ಸಮಾನವಾಗಿ ತೆರಿಗೆ ಕೊಡಬೇಕು ಎಂದು ಅರ್ಥಮಾಡಿಕೊಳ್ಳಬೇಕೇನೋ ಎಂದು. ಅಸಮಾನ ಆರ್ಥಿಕತೆಯ ವ್ಯವಸ್ಥೆಯಲ್ಲಿ ಅಸಮಾನ ತೆರಿಗೆ ವ್ಯವಸ್ಥೆಯಿಂದ ಮಾತ್ರ ಸಮಾನತೆಯನ್ನು ತರುವಕಡೆ ನಾವು ಹೆಜ್ಜೆ ಇಡಬಹುದು. ಇದನ್ನು ಒಂದು ಉದಾಹರಣೆಯ ಮೂಲಕ ಸರಳವಾಗಿ ಅರ್ಥೈಸಬಹುದು: ಸಾಮಾನ್ಯನಾದ ವೈದ್ಯ ಒಬ್ಬ ರೋಗಿಗೆ 100 ನೂರು ರೂಪಾಯಿಗಳ ಶುಲ್ಕ ಎಂದು ನಿಗಧಿಮಾಡಿ ಯಾರೇ ಬರಲಿ ಚಿಕಿತ್ಸೆ ನೀಡಿ ಹಾಗೇ ವಸೂಲಿ ಮಾಡುತ್ತಾ ಹೋಗುತ್ತಾನೆ. ಆದರೆ ಒಬ್ಬ ಅಂತಃಕರಣವುಳ್ಳ ವೈದ್ಯ ತಿನ್ನಲು ಅನ್ನಸಿಗದೆ ರೋಗಕ್ಕೆ ತುತ್ತಾಗಿ ತನ್ನಲ್ಲಿಗೆ ಬಂದ ಒಬ್ಬ ರೋಗಿಗೆ ಉಚಿತವಾಗಿ ಚಿಕಿತ್ಸೆ ನೀಡಿ, ತಿಂದು ಹೆಚ್ಚಾಗಿ ಅಜೀರ್ಣದಿಂದ ರೋಗಕ್ಕೆ ತುತ್ತಾಗಿ ತನ್ನಲ್ಲಿಗೆ ಬರುವ ಇನ್ನೊಬ್ಬ ರೋಗಿಯಿಂದ 200 ರೂ ವಸೂಲಿ ಮಾಡಿಕೊಳ್ಳುತ್ತಾನೆ. ತನ್ನ ಆದಾಯಕ್ಕೆ ಕುತ್ತೂ ಬರಬಾರದು. ಬಡವರ ಕತ್ತೂ ಹಿಚುಕಬಾರದು ಅಂತಹ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಬೇಕಾದರೆ ಪ್ರಜಾಪತಿಯೊಬ್ಬನಿಗೆ ಹಿಟ್ಟಿನ ಮೇಲಿನ ತೆರಿಗೆಯನ್ನು ತೆಗೆದು ಅದನ್ನು ರೊಟ್ಟಿಯ ಮೇಲೆ ಹಾಕುವ ಚಾಣಾಕ್ಷತನ ಮಾತ್ರವಿದ್ದರೆ ಸಾಲದು. ಅದರ ಜೊತೆಗೆ ಹಸಿದ ಹೊಟ್ಟೆಗಳ ಬಗ್ಗೆ ಅಂತಃಕರಣವೂ ಇರಬೇಕಾಗುತ್ತದೆ.

ಇನ್ನು ನಾಚಿಕೆ ಏಕೆಂದರೆ ಪ್ರಸ್ತುತ ಹೊಸತೆರಿಗೆ ವ್ಯವಸ್ಥೆ ಮನುಷ್ಯ ಜೀವನದ ಕೆಲವು `ಸೂಕ್ಷ್ಮ’ ಸಂಗತಿಗಳನ್ನು ಹಾದಿಬೀದಿ ರಂಪಾಟವಾಗುವಂತೆ ಮಾಡಿದ್ದು. ಸ್ವಭಾವತಃ ನಮ್ಮ ಮಹಿಳೆಯರು ನಾಚಿಕೆ ಮತ್ತು ಮುಜುಗರದ ಸ್ವಭಾವದವರು. ಯಾವ ಸಂಗತಿಗಳನ್ನು ಅವರು ಬಹಿರಂಗವಾಗಿ ಹೇಳಿಕೊಳ್ಳಲು ಮುಜುಗರಪಡುತ್ತಾರೋ ಅಂತಹ ಸಂಗತಿಗಳನ್ನು ಅವರು ಬೀದಿಗಿಳಿದು ಬಾಯಿಬಿಟ್ಟು ಗಟ್ಟಿದನಿಯಲ್ಲಿ ಪ್ರತಿಭಟಿಸುವಂತೆ ಮಾಡಿದ್ದು ಆಡಳಿತ ನಡೆಸುವವರಿಗೆ ಮತ್ತು ನಾಗರಿಕವೆನಿಸಿಕೊಳ್ಳುವ ಸಮಾಜವೊಂದಕ್ಕೆ ಗೌರವತರುವ ಸಂಗತಿಯಲ್ಲ. ನಮ್ಮ`ಪ್ರಜಾಪತಿ’ಯು ಭಾರತದ `ಭಾಗ್ಯವಿಧಾತ’ನಾಗಿ ನಮ್ಮೆಲ್ಲರ ಸಮಸ್ಯೆಗಳನ್ನು ಬಗೆಹರಿಸಲು ಬಂದಿರುವ `ಅವತಾರ ಪುರುಷ’ನೆಂದು ಮುಗ್ದವಾಗಿಯಾದರೂ ಪ್ರಾಮಾಣಿಕವಾಗಿ ನಂಬಿರುವ ನಮ್ಮ ಕೆಲವು ಯುವಸ್ನೇಹಿತರು ಸಾಮಾಜಿಕ ಜಾಲತಾಣಗಳಗಳ ಮೂಲಕ ಹೊಸತೆರಿಗೆ ವ್ಯವಸ್ಥೆಯಿಂದ ನಮಗೆಲ್ಲ ಎಷ್ಟೊಂದು ಲಾಭವಾಗಿದೆ ಎಂಬುದನ್ನು ತೋರಿಸುವ ತೆರಿಗೆ ಕಡಿಮೆಯಾದ ವಸ್ತುಗಳ ದೊಡ್ಡದೊಡ್ಡ ಪಟ್ಟಿಗಳನ್ನು ದೊಡ್ಡ ಪ್ರಮಾಣದಲ್ಲಿ ಬಿಡುಗಡೆಮಾಡಿ (ತೆರಿಗೆ ಹೆಚ್ಚಳವಾದ ಸರಕು-ಸೇವೆಗಳನ್ನು ಅವರು ಈ ಪಟ್ಟಿಯಲ್ಲಿ ಸೇರಿಸುವುದಿಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯವಿರಲಾರದು) `ತಿಳಿಹೇಳಲು’ ಏನೆಲ್ಲ ಪ್ರಯತ್ನ ಮಾಡುತ್ತಿದ್ದರೂ, ಇಂದು ಮುಟ್ಟಿನಬಟ್ಟೆಗೆ ತೆರಿಗೆ ಹಾಕಿದವರು ನಾಳೆ ಹುಟ್ಟುವ ಕೂಸಿಗೆ `ಹೆರಿಗೆತೆರಿಗೆ’ (Pregnancy Tax) ಹಾಕದಿರುತ್ತಾರೆಯೇ? ಎಂಬ ಈ ಮಹಿಳೆಯರ ಆತಂಕವನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಆಡಳಿತಗಾರರು ಯಾರೇ ಇರಲಿ ಅವರು ಸೂಕ್ಷ್ಮಮನಸ್ಸಿನವರಾಗಿದ್ದರೆ ಅವರಿಗೆ ಇನ್ನೊಬ್ಬರ ಮನಸ್ಸಿನ ಸೂಕ್ಷ್ಮತೆಗಳು ಅರ್ಥವಾಗುತ್ತವೆ. ಇಲ್ಲದೇ ಹೋದರೆ ಇವೆಲ್ಲ ಒಳ್ಳೆಯ ನಾಯಕರಿಗೆ-ಸರ್ಕಾರಕ್ಕೆ ಕೆಟ್ಟ ಹೆಸರು ತರುವ ರಾಜಕೀಯ ಷಡ್ಯಂತ್ರಗಳಾಗಿಯೂ, `ವಿರೋಧ ಪಕ್ಷಗಳ ಚಿತಾವಣೆಗಳಾಗಿಯೂ ಕಂಡುಬಿಡುತ್ತವೆ!


ಕೊನೆಯಲ್ಲಿ ನಾನು ಮೊದಲು ಉಲ್ಲೇಖಿಸಿದ ನನ್ನ ಪಾಠದ ಅಂಶಕ್ಕೆ ಬರುವುದಾದರೆ ತೆರಿಗೆಗೆ ಸಂಬಂಧಿಸಿದಂತೆ ಅಲ್ಲಿ ಬಳಸಿರುವ `ಕಡ್ಡಾಯ ವಂತಿಕೆ’ (Compulsory Contribution) ಎಂಬ ಪದಪುಂಜವನ್ನು ವಿಶೇಷವಾಗಿ ಗಮನಿಸಬೇಕು. ಇಲ್ಲಿರುವ `ಕಡ್ಡಾಯ’ ಎಂಬ ಪದವು ನಮ್ಮಲ್ಲಿ ಉಂಟುಮಾಡಬಹುದಾದ ಭಯವನ್ನು `ವಂತಿಕೆ’ ಎಂಬ ಪದವು ಹೋಗಲಾಡಿಸಿ ಅಭಯ ನೀಡುವಂತಿದೆ. ತೆರಿಗೆ ಎಂಬುದು ಈ ಭಯ-ಅಭಯಗಳ ಒಂದು ಸಂಕೀರ್ಣ ವ್ಯವಸ್ಥೆಯಾಗಿದ್ದು ಅದನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಬೇಕಾಗುತ್ತದೆ. ಪ್ರಜೆಗಳು ಸಂತೋಷದಿಂದ ನಲಿಯುವ ಸಂದರ್ಭದಲ್ಲಿ ಅವರು ಆನಂದದಿಂದ ಮೈರೆತು ಕುಣಿಯುತ್ತಿರುವವಾಗ ಅವರ ಅರಿವಿಗೆ ಬರದಂತೆ ಎತ್ತಿಕೊಳ್ಳಬೇಕಾದ ಈ ತೆರಿಗೆಯನ್ನು ಅವರು ದುಃಖದಿಂದ ನರಳುವಂತೆ ಮಾಡಿ ಅವರ ಅರಿವಿನ ಆಳಕ್ಕೆ ಇರಿತವನ್ನುಂಟುಮಾಡಿ ಎತ್ತಿಕೊಳ್ಳುವುದರಿಂದ  ಜನರ ಮನಸ್ಸು ಸೂಕ್ಷ್ಮತೆ ಕಳೆದುಕೊಂಡು ಅವರು ರೂಕ್ಷರಾಗುವಂತೆ ಮಾಡುತ್ತದೆ. `ಮನಸ್ಸು ರೂಕ್ಷವಾಗುತ್ತಾ ಹೋದಂತೆ ಮನುಷ್ಯರು ರಾಕ್ಷಸರಾಗುತ್ತಾಹೋಗುತ್ತಾರೆ’ ಎಂಬುದು ಹಿರಿಯರು ಹೇಳುವ ಒಂದು ಅನುಭವನ ಮಾತು. ನಮ್ಮಲ್ಲಿ ಹಾಗಾಗದಿರಲಿ. – ರಾಜೇಂದ್ರ ಬುರಡಿಕಟ್ಟಿ