Tuesday, July 11, 2017


ಇದು ಇಪ್ಪತ್ತೈದು ವರ್ಷಗಳ ಹಿಂದೆ ನಾನು ಕಾಲೇಜಿನಲ್ಲಿ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿದ್ದಾಗ ಕೇಳಿದ ಮತ್ತು ಇಂದಿಗೂ ಅಚ್ಚಳಿಯದೇ ನನ್ನ ಮನಸ್ಸಿನಲ್ಲಿ ಉಳಿದ `ತೆರಿಗೆ’ ಕುರಿತ ಪಾಠದ ಒಂದು ಅಂಶ. ಪ್ರಾಚೀನ ಕಾಲದ ಬಹಳಷ್ಟು ವಿದ್ವಾಂಸರು ಮತ್ತು ಅರ್ಥಶಾಸ್ತ್ರಜ್ಞರ ಚಿಂತನಾ ಕ್ರಮವನ್ನು ಆದರಿಸಿ ನನ್ನ ಪ್ರಾಧ್ಯಾಪಕರು ತರಗತಿಯಲ್ಲಿ ಹೇಳಿದ್ದ ಈ ಹೇಳಿಕೆ ಕಾಲದೇಶಗಳ ವಿದ್ಯಮಾನಗಳ ಕಾರಣಕ್ಕೋ ಏನೋ ಮನಸ್ಸಿನ ಆಳದಿಂದ ಎದ್ದು ಮುನ್ನೆಲೆಗೆ ಬಂದಿತು. ತೆರಿಗೆ ಎಂದರೇನು ಮತ್ತು ಅದನ್ನು ಹೇಗೆ ವಸೂಲಿ ಮಾಡಬೇಕು ಎಂಬುದಕ್ಕೆ ಈ ಹೇಳಿಕೆ ಎಂದಿಗೂ ಪಾಠವಾಗಬಲ್ಲದು.

ಇಂದು ಭಾರತದ ತೆರಿಗೆ ವಿಧಾನ ಹಿಡಿದಹಾದಿ ನೋಡಿದರೆ ಕೆಲವೊಮ್ಮೆ ಆತಂಕವೂ ಮತ್ತೆ ಕೆಲವೊಮ್ಮೆ ನಾಚಿಕೆಯೂ ಆಗುತ್ತಿದೆ. ಆತಂಕ ಏಕೆಂದರೆ ಎಲ್ಲರೊಂದಿಗೆ ಎಲ್ಲರ ವಿಕಾಸ ಎಂದರೆ ಎಲ್ಲರೂ ಸಮಾನವಾಗಿ ತೆರಿಗೆ ಕೊಡಬೇಕು ಎಂದು ಅರ್ಥಮಾಡಿಕೊಳ್ಳಬೇಕೇನೋ ಎಂದು. ಅಸಮಾನ ಆರ್ಥಿಕತೆಯ ವ್ಯವಸ್ಥೆಯಲ್ಲಿ ಅಸಮಾನ ತೆರಿಗೆ ವ್ಯವಸ್ಥೆಯಿಂದ ಮಾತ್ರ ಸಮಾನತೆಯನ್ನು ತರುವಕಡೆ ನಾವು ಹೆಜ್ಜೆ ಇಡಬಹುದು. ಇದನ್ನು ಒಂದು ಉದಾಹರಣೆಯ ಮೂಲಕ ಸರಳವಾಗಿ ಅರ್ಥೈಸಬಹುದು: ಸಾಮಾನ್ಯನಾದ ವೈದ್ಯ ಒಬ್ಬ ರೋಗಿಗೆ 100 ನೂರು ರೂಪಾಯಿಗಳ ಶುಲ್ಕ ಎಂದು ನಿಗಧಿಮಾಡಿ ಯಾರೇ ಬರಲಿ ಚಿಕಿತ್ಸೆ ನೀಡಿ ಹಾಗೇ ವಸೂಲಿ ಮಾಡುತ್ತಾ ಹೋಗುತ್ತಾನೆ. ಆದರೆ ಒಬ್ಬ ಅಂತಃಕರಣವುಳ್ಳ ವೈದ್ಯ ತಿನ್ನಲು ಅನ್ನಸಿಗದೆ ರೋಗಕ್ಕೆ ತುತ್ತಾಗಿ ತನ್ನಲ್ಲಿಗೆ ಬಂದ ಒಬ್ಬ ರೋಗಿಗೆ ಉಚಿತವಾಗಿ ಚಿಕಿತ್ಸೆ ನೀಡಿ, ತಿಂದು ಹೆಚ್ಚಾಗಿ ಅಜೀರ್ಣದಿಂದ ರೋಗಕ್ಕೆ ತುತ್ತಾಗಿ ತನ್ನಲ್ಲಿಗೆ ಬರುವ ಇನ್ನೊಬ್ಬ ರೋಗಿಯಿಂದ 200 ರೂ ವಸೂಲಿ ಮಾಡಿಕೊಳ್ಳುತ್ತಾನೆ. ತನ್ನ ಆದಾಯಕ್ಕೆ ಕುತ್ತೂ ಬರಬಾರದು. ಬಡವರ ಕತ್ತೂ ಹಿಚುಕಬಾರದು ಅಂತಹ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಬೇಕಾದರೆ ಪ್ರಜಾಪತಿಯೊಬ್ಬನಿಗೆ ಹಿಟ್ಟಿನ ಮೇಲಿನ ತೆರಿಗೆಯನ್ನು ತೆಗೆದು ಅದನ್ನು ರೊಟ್ಟಿಯ ಮೇಲೆ ಹಾಕುವ ಚಾಣಾಕ್ಷತನ ಮಾತ್ರವಿದ್ದರೆ ಸಾಲದು. ಅದರ ಜೊತೆಗೆ ಹಸಿದ ಹೊಟ್ಟೆಗಳ ಬಗ್ಗೆ ಅಂತಃಕರಣವೂ ಇರಬೇಕಾಗುತ್ತದೆ.

ಇನ್ನು ನಾಚಿಕೆ ಏಕೆಂದರೆ ಪ್ರಸ್ತುತ ಹೊಸತೆರಿಗೆ ವ್ಯವಸ್ಥೆ ಮನುಷ್ಯ ಜೀವನದ ಕೆಲವು `ಸೂಕ್ಷ್ಮ’ ಸಂಗತಿಗಳನ್ನು ಹಾದಿಬೀದಿ ರಂಪಾಟವಾಗುವಂತೆ ಮಾಡಿದ್ದು. ಸ್ವಭಾವತಃ ನಮ್ಮ ಮಹಿಳೆಯರು ನಾಚಿಕೆ ಮತ್ತು ಮುಜುಗರದ ಸ್ವಭಾವದವರು. ಯಾವ ಸಂಗತಿಗಳನ್ನು ಅವರು ಬಹಿರಂಗವಾಗಿ ಹೇಳಿಕೊಳ್ಳಲು ಮುಜುಗರಪಡುತ್ತಾರೋ ಅಂತಹ ಸಂಗತಿಗಳನ್ನು ಅವರು ಬೀದಿಗಿಳಿದು ಬಾಯಿಬಿಟ್ಟು ಗಟ್ಟಿದನಿಯಲ್ಲಿ ಪ್ರತಿಭಟಿಸುವಂತೆ ಮಾಡಿದ್ದು ಆಡಳಿತ ನಡೆಸುವವರಿಗೆ ಮತ್ತು ನಾಗರಿಕವೆನಿಸಿಕೊಳ್ಳುವ ಸಮಾಜವೊಂದಕ್ಕೆ ಗೌರವತರುವ ಸಂಗತಿಯಲ್ಲ. ನಮ್ಮ`ಪ್ರಜಾಪತಿ’ಯು ಭಾರತದ `ಭಾಗ್ಯವಿಧಾತ’ನಾಗಿ ನಮ್ಮೆಲ್ಲರ ಸಮಸ್ಯೆಗಳನ್ನು ಬಗೆಹರಿಸಲು ಬಂದಿರುವ `ಅವತಾರ ಪುರುಷ’ನೆಂದು ಮುಗ್ದವಾಗಿಯಾದರೂ ಪ್ರಾಮಾಣಿಕವಾಗಿ ನಂಬಿರುವ ನಮ್ಮ ಕೆಲವು ಯುವಸ್ನೇಹಿತರು ಸಾಮಾಜಿಕ ಜಾಲತಾಣಗಳಗಳ ಮೂಲಕ ಹೊಸತೆರಿಗೆ ವ್ಯವಸ್ಥೆಯಿಂದ ನಮಗೆಲ್ಲ ಎಷ್ಟೊಂದು ಲಾಭವಾಗಿದೆ ಎಂಬುದನ್ನು ತೋರಿಸುವ ತೆರಿಗೆ ಕಡಿಮೆಯಾದ ವಸ್ತುಗಳ ದೊಡ್ಡದೊಡ್ಡ ಪಟ್ಟಿಗಳನ್ನು ದೊಡ್ಡ ಪ್ರಮಾಣದಲ್ಲಿ ಬಿಡುಗಡೆಮಾಡಿ (ತೆರಿಗೆ ಹೆಚ್ಚಳವಾದ ಸರಕು-ಸೇವೆಗಳನ್ನು ಅವರು ಈ ಪಟ್ಟಿಯಲ್ಲಿ ಸೇರಿಸುವುದಿಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯವಿರಲಾರದು) `ತಿಳಿಹೇಳಲು’ ಏನೆಲ್ಲ ಪ್ರಯತ್ನ ಮಾಡುತ್ತಿದ್ದರೂ, ಇಂದು ಮುಟ್ಟಿನಬಟ್ಟೆಗೆ ತೆರಿಗೆ ಹಾಕಿದವರು ನಾಳೆ ಹುಟ್ಟುವ ಕೂಸಿಗೆ `ಹೆರಿಗೆತೆರಿಗೆ’ (Pregnancy Tax) ಹಾಕದಿರುತ್ತಾರೆಯೇ? ಎಂಬ ಈ ಮಹಿಳೆಯರ ಆತಂಕವನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಆಡಳಿತಗಾರರು ಯಾರೇ ಇರಲಿ ಅವರು ಸೂಕ್ಷ್ಮಮನಸ್ಸಿನವರಾಗಿದ್ದರೆ ಅವರಿಗೆ ಇನ್ನೊಬ್ಬರ ಮನಸ್ಸಿನ ಸೂಕ್ಷ್ಮತೆಗಳು ಅರ್ಥವಾಗುತ್ತವೆ. ಇಲ್ಲದೇ ಹೋದರೆ ಇವೆಲ್ಲ ಒಳ್ಳೆಯ ನಾಯಕರಿಗೆ-ಸರ್ಕಾರಕ್ಕೆ ಕೆಟ್ಟ ಹೆಸರು ತರುವ ರಾಜಕೀಯ ಷಡ್ಯಂತ್ರಗಳಾಗಿಯೂ, `ವಿರೋಧ ಪಕ್ಷಗಳ ಚಿತಾವಣೆಗಳಾಗಿಯೂ ಕಂಡುಬಿಡುತ್ತವೆ!


ಕೊನೆಯಲ್ಲಿ ನಾನು ಮೊದಲು ಉಲ್ಲೇಖಿಸಿದ ನನ್ನ ಪಾಠದ ಅಂಶಕ್ಕೆ ಬರುವುದಾದರೆ ತೆರಿಗೆಗೆ ಸಂಬಂಧಿಸಿದಂತೆ ಅಲ್ಲಿ ಬಳಸಿರುವ `ಕಡ್ಡಾಯ ವಂತಿಕೆ’ (Compulsory Contribution) ಎಂಬ ಪದಪುಂಜವನ್ನು ವಿಶೇಷವಾಗಿ ಗಮನಿಸಬೇಕು. ಇಲ್ಲಿರುವ `ಕಡ್ಡಾಯ’ ಎಂಬ ಪದವು ನಮ್ಮಲ್ಲಿ ಉಂಟುಮಾಡಬಹುದಾದ ಭಯವನ್ನು `ವಂತಿಕೆ’ ಎಂಬ ಪದವು ಹೋಗಲಾಡಿಸಿ ಅಭಯ ನೀಡುವಂತಿದೆ. ತೆರಿಗೆ ಎಂಬುದು ಈ ಭಯ-ಅಭಯಗಳ ಒಂದು ಸಂಕೀರ್ಣ ವ್ಯವಸ್ಥೆಯಾಗಿದ್ದು ಅದನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಬೇಕಾಗುತ್ತದೆ. ಪ್ರಜೆಗಳು ಸಂತೋಷದಿಂದ ನಲಿಯುವ ಸಂದರ್ಭದಲ್ಲಿ ಅವರು ಆನಂದದಿಂದ ಮೈರೆತು ಕುಣಿಯುತ್ತಿರುವವಾಗ ಅವರ ಅರಿವಿಗೆ ಬರದಂತೆ ಎತ್ತಿಕೊಳ್ಳಬೇಕಾದ ಈ ತೆರಿಗೆಯನ್ನು ಅವರು ದುಃಖದಿಂದ ನರಳುವಂತೆ ಮಾಡಿ ಅವರ ಅರಿವಿನ ಆಳಕ್ಕೆ ಇರಿತವನ್ನುಂಟುಮಾಡಿ ಎತ್ತಿಕೊಳ್ಳುವುದರಿಂದ  ಜನರ ಮನಸ್ಸು ಸೂಕ್ಷ್ಮತೆ ಕಳೆದುಕೊಂಡು ಅವರು ರೂಕ್ಷರಾಗುವಂತೆ ಮಾಡುತ್ತದೆ. `ಮನಸ್ಸು ರೂಕ್ಷವಾಗುತ್ತಾ ಹೋದಂತೆ ಮನುಷ್ಯರು ರಾಕ್ಷಸರಾಗುತ್ತಾಹೋಗುತ್ತಾರೆ’ ಎಂಬುದು ಹಿರಿಯರು ಹೇಳುವ ಒಂದು ಅನುಭವನ ಮಾತು. ನಮ್ಮಲ್ಲಿ ಹಾಗಾಗದಿರಲಿ. – ರಾಜೇಂದ್ರ ಬುರಡಿಕಟ್ಟಿ

No comments:

Post a Comment