Thursday, March 11, 2021

ಶಿವರಾತ್ರಿ: ಶಿವತತ್ವದಿಂದ ತಿಳಿಯ ಬೇಕಾದ ಮಹತ್ವದ ಸಂಗತಿಗಳು

 

ಶಿವರಾತ್ರಿ: ಶಿವತತ್ವದಿಂದ ತಿಳಿಯ ಬೇಕಾದ ಮಹತ್ವದ ಸಂಗತಿಗಳು

(ಸ್ವಾತಂತ್ರ್ಯ ಭಾರತದ ಮೊದಲ ಘಟ್ಟವಾದ ನೆಹರೂ ಯುಗದ ಮಹತ್ವದ ಟೀಕಾಕಾರರಾಗಿದ್ದ ಖ್ಯಾತ ಸಮಾಜವಾದಿ ಚಿಂತಕ ಡಾ. ರಾಮ ಮನೋಹರ ಲೋಹಿಯಾ ಅವರ ‘Rama, Krishna and Shiva’ ಲೇಖನದ ಆಯ್ದ ಭಾಗಗಳು)

 

….ರಾಮ ಮತ್ತು ಕೃಷ್ಣ ಮನುಷ್ಯ ಜೀವನವನ್ನೇ ಬದುಕಿದವರಾದರೆ ಶಿವ ಹುಟ್ಟಿಲ್ಲದವನು, ಸಾವೂ ಇಲ್ಲದವನು. ದೇವಸಹಜವೆನ್ನುವಂತೆ ಅವನು ಅನಂತ; ಆದರೆ ದೇವತ್ವಕ್ಕೆ ವಿರುದ್ಧವಾಗಿ ಅವನ ಜೀವನ, ಕಾಲದ ಅವಧಿಯಲ್ಲೇಸಂಭವಿಸಿದಂಥ ಘಟನೆಗಳಿಂದ ತುಂಬಿಕೊಂಡಿದೆ. ಮೆಟ್ಟಿಲು ಮೆಟ್ಟಿಲು ತೋರುವ ಹಾಗಿದೆ. ಕಾರಣಕ್ಕೆ ಅವನನ್ನು ದೇವರು ಎನ್ನುವುದಕ್ಕಿಂತ ಗಾತ್ರಾತೀತನೆನ್ನಬೇಕು. ಪ್ರಾಯಃ, ಮಾನವ ಕುಲಕ್ಕೆ ಗೊತ್ತಿರುವಂಥ ಗಾತ್ರಾತೀತತೆಯ ಕಥಾಕಲ್ಪನೆ ಅಥವಾ ಪುರಾಣ ನಿರ್ಮಿತಿ ಇವನೊಬ್ಬನದೇ ಸರಿ. ದೃಷ್ಟಿಯಿಂದ ಅವನ ಹತ್ತಿರಕ್ಕೆ ಬರಬಹುದಾದ ಕಲ್ಪನೆ ಇನ್ನೊಂದಿಲ್ಲ ಎಂಬುದಂತೂ ನಿಶ್ಚಿತ.

*****

ಶಿವ ಹಣೆಗಣ್ಣನ್ನು ತೆರೆದು, ಕಾಮನನ್ನು ಉರಿಸಿ, ಭಸ್ಮ ಕೇವಲ ಮಾಡಿದಾಗ, ಅವನ ಮನಃಪ್ರಿಯೆಯಾದ ರತಿ, ಕಣ್ಣುಗಳು ಅಶ್ರುಕಲುಷಿತವಾಗಿರಲು, ಶಿವನ ಹತ್ತಿರ ಬಂದು ತನ್ನ ಗಂಡನನ್ನು ಬದುಕಿಸುವಂತೆ  ಬೇಡಿಕೊಂಡಳು. ಕಾಮನೇನೋ ನಿಸ್ಸಂದೇಹವಾಗಿ ಮಹಾಪರಾಧದ ದೋಷಕ್ಕೆ ಗುರಿಯಾಗಿದ್ದ. ಶಿವನನ್ನೇ ಕ್ಷೋಭೆಗೊಳಿಸಲು ಯತ್ನಿಸಿದ್ದ….ಅದರಲ್ಲೇ ಸಾವನ್ನಪ್ಪಿದ್ದ. ಹರ್ಷೋಲ್ಲಾಸಗಳ ಚಿರಲಹರಿಯಾಗಿದ್ದ ರತಿ, ಮೊತ್ತಮೊದಲಸಲ ಶೋಕತಪ್ತಳಾಗಿದ್ದಳು. ಅದಕ್ಕೂ ಮುಖ್ಯವಾಗಿ ವಿಧವೆಯಾಗಿದ್ದಳು. ಇಡೀ ಜಗತ್ತು ದುರ್ವಿಧಿಯ ಧರೆಯಂಚಿಗೆ ಬಂದು ನಿಂತಂತಾಗಿತ್ತು. ಇನ್ನು ಮುಂದೆ ರತಿ ಇಲ್ಲದೆಯೇ ರತಿಕ್ರೀಡೆ ನಡೆಯಬೇಕಾಗಿತ್ತು. ಆದರೆ ಶಿವನಾದರೂ ಆಗಿದ್ದನ್ನು ಮನ್ನಿಸಿ ಬದಲಿಸುವಹಾಗಿರಲಿಲ್ಲ. ಶಿಕ್ಷೆಯೇನೋ ಅಪರಾಧಕ್ಕೆ ತಕ್ಕದ್ದೇ ಆಗಿತ್ತು. ಆದರೆ ರತಿ ಪ್ರಲಾಪಿಸುತ್ತಿದ್ದಳು. ದುರ್ವಿಧಿಯ ಸೆಳೆತಕ್ಕೆ ಸಿಕ್ಕ ಜಗತ್ತನ್ನು ಕಂಡೋ ಅಥವಾ ರತಿಯ ಶೋಕವನ್ನು ಕಂಡೋ ಶಿವನಿಗೆ ಕರುಣೆಯುಕ್ಕಿತು. ಕಾಮನಿಗೆ ಜೀವಕೊಟ್ಟ. ಆದರೆ ಅನಂಗನಾಗಿರುವಂತೆ ವಿಧಿಸಿದ. ಅಲ್ಲಿಂದ ಕಾಮ ಅನಂಗನಾಗಿಯೇ ಇದ್ದಾನೆ. ಅನಂಗನಾಗಿರುವ ಕಾರಣ
ಅವನನ್ನು ತಡೆಯಬಲ್ಲ ಮೇರೆ ಮರ್ಯಾದೆಗಳಿಲ್ಲ; ಅವನು ಎಲ್ಲವನ್ನೂ ಮುಟ್ಟಬಲ್ಲ; ಎಲ್ಲವನ್ನು ಆವರಿಸಿ ವ್ಯಾಪಿಸಬಲ್ಲ, ಹೊಕ್ಕು ಬಳಸಬಲ್ಲ; ಪತ್ತೆಯಿಲ್ಲದೆ ಬಂದು ಒಳಸೇರಿ ಕಿರಿಕಿರಿಹಚ್ಚಿ ಕಾಡಬಲ್ಲ….

*****

ಧರ್ಮ ಮತ್ತು ರಾಜಕಾರಣ, ದೇವರು ಮತ್ತು ರಾಷ್ಟ್ರ (ಅಥವಾ ಜನಾಂಗ) ಒಂದಕ್ಕೊಂದು ಮಿಶ್ರವಾಗಿಬಿಡುವುದುಂಟು, ಎಲ್ಲ ಕಡೆಗೂ ಎಲ್ಲ ಕಾಲದಲ್ಲೂ. ಇಂಥದ್ದು ಉಳಿದೆಲ್ಲ ಕಡೆಗಳಿಗಿಂತ ಇಂಡಿಯಾದಲ್ಲಿ ಹೆಚ್ಚು….

*****

ಸೃಷ್ಟಿಕರ್ತನಾದ ಬ್ರಹ್ಮನಿಗೂ ಸ್ಥಿತಿಕಾರನಾದ ವಿಷ್ಣುವಿಗೂ ಒಮ್ಮೆ ತಮ್ಮಲ್ಲಿ ಕಾದಾಡಿಕೊಳ್ಳಲು ತೊಡಗಿದರಂತೆ, ತಮ್ಮಲ್ಲಿ ಯಾರು ಮೊದಲು ಮತ್ತು ಯಾರು ಹೆಚ್ಚು ಎಂಬ ಪ್ರಶ್ನೆಗಾಗಿ. ಆಮೇಲೆ ಅವರು ಅದರ ತೀರ್ಪಿಗಾಗಿ, ಸಂಹಾರಕನಾದ ಶಿವನ ಬಳಿಗೆ ಹೋದರು. ಶಿವ, ಅವರಲ್ಲಿ ಒಬ್ಬನನ್ನು ತನ್ನೆ ತಲೆದೆಸೆಗೂ ಇನ್ನೊಬ್ಬನನ್ನೂ ಕಾಲದೆಸೆಗೂ ಕಳಿಸಿದ; ತುದಿ ಮುಟ್ಟಿಬರುವಂತೆ ಹೇಳಿ. ಅದರಲ್ಲಿ ಯಾರು ಮೊದಲು ತುದಿ ಕಂಡು ಬರುತ್ತಾರೋ ಅವರು ವಾದದಲ್ಲಿ ಗೆದ್ದವರೆಂದು ತೀರ್ಪು ಸಿಕ್ಕುತ್ತಿತ್ತು. ಇಬ್ಬರೂ ಹೋದರು. ಅನೇಕ ಯುಗಗಳು ಕಳೆದವು. ಕೊನೆಯಲ್ಲಿ ಇಬ್ಬರೂ ಸೋತು ಕೋಡುಮುರಿದಂತಾಗಿ ಹಿಂತಿರುಗಿದ್ದರು. ಶಿವ ಹೀಗೆ ಇಬ್ಬರಿಗೂ ಅಹಂ ಮುರಿದು ಎಚ್ಚರಿಸಿದ….

*****

ಶಿವನ ಇನ್ನೊಂದು ಕೃತಿ,.. ಒಮ್ಮೆ ಅವನು ಪಾರ್ವತಿಯ ಸಂಗಡ ಪಂಥ ಕಟ್ಟಿ ನರ್ತಿಸಿದ್ದು. ಹೆಜ್ಜೆಗೆ ಹೆಜ್ಜೆ ಕೊಟ್ಟು ಶಿವನನ್ನು ಮೀರಿಸಿದಳು ಪಾರ್ವತಿ. ಕುಣಿತದ ಗತಿ ತೀವ್ರಕ್ಕೆ ಏರುತ್ತಿತ್ತು. ಪಾರ್ವತಿಯನ್ನು ಸೋಲಿಸುವುದಕ್ಕೆ ಆಗದೆಂದು ಕಂಡು ಶಿವ ಕ್ಷಣದಲ್ಲಿ ನೃತ್ಯಚಾರಿಯನ್ನೇ ಬದಲಿಸಿದ, ಕಾಲನ್ನು ಅಷ್ಟೆತ್ತರಕ್ಕೆತ್ತಿದ. ಪಾರ್ವತಿ ಮೂಕ ವಿಸ್ಮಿತಳಾಗಿ ನಿಬ್ಬೆರಗಾಗಿ ನಿಂತುಬಿಟ್ಟಳು. ಹೆಣ್ಣಿನ ಮರ್ಯಾದೆಗೆ ತೀರ ಮೀರಿದಂಥ ಭಂಗಿಯನ್ನು ಅಭಿನಯಿಸಲು, ಅವಳಿಗೆ ಅಸಾಧ್ಯವಾಗಿತ್ತು. ತನ್ನ ಪತಿ ಇಂಥ ಅಸಾಧು ಮಾರ್ಗಕ್ಕೆ ಮೊರೆಹೊಕ್ಕದ್ದು ಕಂಡು ಆಕೆ ಅಪ್ರತಿಭಳಾದಳು. ಆದರೆ ಬದುಕಿನ ಕುಣಿತದಲ್ಲಿ ಅಂಥ ಹುಚ್ಚು ಕುಣಿತಗಳಿವೆ, ಯಾವುದನ್ನು ಲೋಕದ ಮಡಿಬುದ್ಧಿ ಅಶ್ಲೀಲವೆನ್ನುತ್ತದೆಯೋ ಮತ್ತು ಅಂಥದರಿಂದ ತನ್ನ ಹೆಣ್ಣುಗಳ ಮರ್ಯಾದೆಯನ್ನು ರಕ್ಷಿಸಲು ಹೆಣಗುತ್ತದೆಯೋ ಅಂಥ ನೆಗೆತಗಳು. ಶಿವ ಇಂಥ  ವೀರ್ಯವತ್ತಾದ ಭಂಗಿಯನ್ನು ತೋರಿದ್ದು, ಪಂಥವೊಂದರಲ್ಲಿ ತಾನು ಸೋತು ಹೋಗಲಿದ್ದಾಗ, ಅದನ್ನು ಮೋಸದಿಂದ ಮರೆಸಿ ಹೇಗೋ ಗೆಲುವು ಪಡೆಯುವ ಸಲುವಾಗಿಯೇ.


*****

ತನಗೆ ತಾನೇ ನ್ಯಾಯವೆಂದು  ನಿಸ್ಸಂದೇಹ ಸಮರ್ಥಿಸಿಕೊಳ್ಳಲಾಗದಂಥ ಯಾವುದೇ ಕಾರ್ಯವನ್ನು ಮಾಡಿದವನಲ್ಲ ಶಿವ. ರೀತಿಯಲ್ಲಿ ಅವನು ಮನುಷ್ಯಕುಲ ಬಲ್ಲ ಏಕೈಕ ಸೃಷ್ಟಿ- ಯಾವನ ಸಮಸ್ತ ಕೃತಿಗಳೂ ತಮ್ಮಿಂದ ತಾವೇ ಸಮರ್ಥನೆಗೊಳ್ಳಬಲ್ಲವೋ ಅಂಥವನು. ಅವನ ಯಾವುದೇ ಕೃತಿಯನ್ನು ಸಮರ್ಥಿಸುವ ಸಲುವಾಗಿ, ಹಿಂದಿನ ಮತ್ತೊಂದರಲ್ಲಿ ಕಾರಣವನ್ನಾಗಲಿ, ಮುಂದಿನದ್ದೊಂದರ ಪರಿಣಾಮವನ್ನಾಗಲೀ ಹುಡುಕಬೇಕಾದದ್ದಿಲ್ಲ. ಬದುಕು ಎನ್ನುವುದು ಕಾರ್ಯ ಕಾರಣಗಳ ಅತೀ ದೀರ್ಘವಾದ ಸರಪಳಿ. ಮನುಷ್ಯನೂ ದೇವತೆಗಳೂ ಇಬ್ಬರೂ ತಮ್ಮ ಕಾರ್ಯಗಳ ಸಮರ್ಥನೆಗಾಗಿ ದೀರ್ಘದ ಮೊರೆಹೊಕ್ಕಿದ್ದಾರೆ. ಅಂಥ ದೂರನಿಯಂತ್ರಣವಿದೆ ಎಂಬ ಕಲ್ಪನೆ ಸದಾ ದುರುಪಯೋಗಕ್ಕೆ ಕಾರಣವಾಗಿದೆ. ಸಂಪೂರ್ಣ ಅಸಮರ್ಥನೀಯ ಕಾರ್ಯಗಳನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಚಾತುರ್ಯದ ಬುದ್ಧಿತಂತ್ರಗಳನ್ನು ಬಳಸಲಾಗುತ್ತದೆ. ಇಂಥ ಬುದ್ಧಿವಂತಿಕೆಯಲ್ಲಿ ಸುಳ್ಳು ಸತ್ಯವಾಗಬಹುದು, ಬಂಧನವೇ ಸ್ವಾತಂತ್ರ್ಯವೆನಿಸಿಕೊಳ್ಳಬಹುದು, ಕೊಲೆ ಬದುಕೆನ್ನಿಸಿಕೊಳ್ಳಬಹುದು, ಅಂಥ ಬುದ್ಧಿತಂತ್ರಕ್ಕೆ ವಿರುದ್ಧವಿದ್ದು ಅದನ್ನು ನಿವಾರಿಸಬಲ್ಲ ಒಂದೇ ಒಂದು ಶಿವತತ್ವ. ಅವನ ಪ್ರತಿಯೊಂದು ಕೃತಿಯೂ ತಕ್ಷಣದಲ್ಲೇ ತನ್ನನ್ನು ಸಮರ್ಥಿಸಿಕೊಳ್ಳುವಂಥದ್ದು; ಅದಕ್ಕಾಗಿ ಹಿಂದಿನ ಅಥವಾ ಮುಂದಿನ ಕಾರ್ಯಕಾರಣಗಳನ್ನು ಕೆದಕಬೇಕಾಗಿಲ್ಲ. (ಶಿವನ ವರ್ತನೆ ಗೀತಾ ಬೋಧಕ ಕೃಷ್ಣನ ತತ್ವಕ್ಕೆ ಸಂಪೂರ್ಣ ವಿರುದ್ಧವಾದದ್ದುರಾಬು)

*****

ಗಾತ್ರಾತೀತವಾದ ವ್ಯಕ್ತಿತ್ವ , ತಾತ್ಕ್ಷಣಿಕತೆಯ ಮಹತ್ ಪುರಾಣ ತತ್ವ ಜಗತ್ತಿಗೆ ಮತ್ತೂ ಎರಡು ದರ್ಶನವೈಭವಗಳನ್ನು ಕೊಟ್ಟಿದೆ. ದೇವತೆಗಳು ಮತ್ತು ರಾಕ್ಷಸು ಸಮುದ್ರಮಥನ ಮಾಡಿದಾಗ, ಅಮೃತ ಬರುವ ಮೊದಲೇ ವಿಷಹೊರಟಿತು. ವಿಷವನ್ನು ಯಾರಾದರೂ ಕುಡಿದು ಮುಗಿಸಬೇಕಾಗಿತ್ತು. ಹಿಂದೆ ನಡೆದ ದೇವರಾಕ್ಷಸ ಯುದ್ಧಗಳಲ್ಲಾಗಲಿ, ಸಮುದ್ರಮಥನದ ಸಾಹಸದಲ್ಲಾಗಲೀ ಶಿವ ಪಾಲುಗೊಂಡವನಲ್ಲ. ಹಾಗಿದ್ದೂ, ಅವನು ಹುಟ್ಟಿದ ವಿಷವನ್ನು ಹೀರಿ ಕಥೆ ಮುಂದುವರಿಎಯುವಂತೆ ಮಾಡಿದ. ಕುಡಿದ ವಿಷವನ್ನು ಗಂಟಲಲ್ಲೆ ನಿಲ್ಲಿಸಿಕೊಂಡು ಅಲ್ಲಿಂದ ಮುಂದೆ ನೀಲಕಂಠನೆಂದು ಹೆಸರಾದ. ಶಿವತತ್ವದ ಇನ್ನೊಂದು ದರ್ಶನ ಎಲ್ಲ ಕಾಲಕ್ಕೂ, ಎಲ್ಲ ಹೊತ್ತಿನಲ್ಲೂ ಪೂಜಾರ್ಹವಾದದ್ದು. ಒಮ್ಮೆ ಯಾವನೋ ಭಕ್ತ ಶಿವನ ಜೊತೆಯಲ್ಲಿ ಪಾರ್ವತಿಗೂ ಪೂಜೆ ಸಲ್ಲಿಸಲು ನಿರಾಕರಿಸಿದಾಗ ಶಿವ ಅರ್ಧನಾರೀಶ್ವರನಾಗಿ ನಿಂತ; ದೇಹಾರ್ಧ ತಾನಾಗಿ  ಮತ್ತೊಂದರ್ಧ ಪಾರ್ವತಿಯಾಗಿ ಪೂಜೆ ಕೊಂಡ. ಚಿತ್ರವನ್ನು ಮುಡಿಯಿಂದ ಅಡಿಯತನಕ  ವಿವರ ವಿವರವಾಗಿ ಇಡೀ ಕಲ್ಪಿಸಿಕೊಳ್ಳಲು ಯತ್ನಿಸಿ ತುಂಬ ಕಷ್ಟವಾಗಿದೆ ನನಗೆ, ಅನೇಕ ಸಲ. ಆದರೆ ದರ್ಶನ ಮಾತ್ರ  ತುಂಬ ಸುಂದರವಾದದ್ದು.


*****

ಪುರಾಣ ಕಲ್ಪನೆಗಳು ಕಾಲಕಾಲಕ್ಕೆ ಕ್ರಮವಾಗಿ ದುಷ್ಪಾಕಗೊಳ್ಳುತ್ತ ಬಂದುದನ್ನೂ ಇಲ್ಲಿ ಗುರುತಿಸುವ ಇಚ್ಛೆಯಿಲ್ಲ ನನಗೆ. ಶತಮಾನ ಶತಮಾನಗಳ್ಲಲಿ ಹಾದು ಬರುವಾಗ ಇವೆಲ್ಲ ಅಧಃಪತನಕ್ಕೆ ಆಹಾರವಾಗಿವೆ. ಪೂರ್ಣತ್ವಕ್ಕೆ  ನೆರೆದ ಬೀಜ, ಕೆಲವು ಸಲ ಕೊಳೆತು ಪಿಶಾಚಪೀಡೆಯಾಗಿ ನಾರಿದೆ. ರಾಮನ ಭಕ್ತರು ಮತ್ತೆ ಮತ್ತೆ ಪತ್ನೀ ಪರಿತ್ಯಾಗಪರಾಯಣರಾಗಿದ್ದಾರೆ, ಕೃಷ್ಣನ ಭಕ್ತರು ಕಳ್ಳರಾಗಿದ್ದಾರೆ, ಶಿವಭಕ್ತರು ಹೊಲೆಗೊಳಕನ್ನೇ ಪ್ರೀತಿಸುವವರಾಗಿದ್ದಾರೆ. ಅಧಃಪತನಗೊಳ್ಳುತ್ತಾ ಹಾದಿತಪ್ಪುತ್ತ, ಸೀಮಿತ ವ್ಯಕ್ತಿತ್ವ ಕೂಪಮಂಡೂಕವಾಗುತ್ತದೆ, ಸಮೃದ್ಧವ್ಯಕ್ತಿತ್ವ ಅನೈತಿಕವಾಗುತ್ತದೆ, ಗಾತ್ರಾತೀತ ವ್ಯಕ್ತಿತ್ವ ಆಕಾರವಿಲ್ಲದ ಹೊಗೆಯಾಗುತ್ತದೆ, … ಕಥೆಗಷ್ಟೇ ಅನ್ನವಾಗುತ್ತದೆ. ಕುಲಮರಳಿದ ರಾಮ ಅಲ್ಪವ್ಯಕ್ತಿತ್ವದ ಪರಿಣತಿಯೂ, ಕುಲಮರಳಿದ ಕೃಷ್ಣ ಅನೈತಿಕತೆಯ ಪರಿಣತಿಯೂ, ಕುಲಮರಳಿದ ಶಿವ ಪ್ರೇತತ್ವದ ಪರಿಣತಿಯೂ ಆಗುತ್ತದೆ. ರಾಮ ಸೀಮಿತನೂ ಆಗಿ ಅಲ್ಪನೂ ಆಗಿ, ಕೃಷ್ಣ ಸಮೃದ್ಧನೂ ಆಗಿ ಕಾಮುಕನೂ ಆಗಿ, ಶಿವ ಗಾತ್ರಾತೀತನೂ ಆಗಿ ಕಾಲ್ಪನಿಕನೂ ಆಗಿ ಇಬ್ಬಂದಿ ಬದುಕು ಬಾಳುತ್ತಾರೆ. ಇದಕ್ಕೆ ಒಂದು ಪರಿಹಾರ ಸೂಚಿಸುವ ಮೂರ್ಖತನಕ್ಕೆ ಹೋಗದೆ ಇಷ್ಟೇ ಪ್ರಾರ್ಥಿಸುತ್ತೇನೆ: ತಾಯಿ ಭಾರತಿ, ನಮಗೆ ಶಿವನ ಮನಸ್ಸನ್ನೂ, ಕೃಷ್ಣನ ಹೃದಯವನ್ನೂ ರಾಮನ ಕಾರ್ಯಪ್ರಪಂಚವನ್ನೂ ಕೊಡು; ಪ್ರಮಾಣಾತೀತವಾದ ಮನಸ್ಸು, ಸಮೃದ್ಧವಾದ ಹೃದಯ, ಆದರೆ ಸೀಮಿತವಾದ ಬದುಕು- ಇವುಗಳಿಂದ ನಮ್ಮ ನಿರ್ಮಿಸು.

*****

ಇಂಗ್ಲಿಷ್ ಮೂಲ: ಡಾ. ರಾಮಮನೋಹರ ಲೋಹಿಯಾ
ಕನ್ನಡಕ್ಕೆ: ಕೆ.ವಿ. ಸುಬ್ಬಣ್ಣ
ಬರೆದ ವರ್ಷ: 1956.
ಮೂಲ ಆಕರ ಕೃತಿ: An Interval During Politics
ಅನುವಾದ ಆಕರ: ಸ್ವಾತಂತ್ರ್ಯದ ಅಂತರ್ಜಲ
ಆಯ್ದು ಕೊಟ್ಟದ್ದು: ಡಾ. ರಾಜೇಂದ್ರ ಬುರಡಿಕಟ್ಟಿ
ಶಿವರಾತ್ರಿ ದಿನ, 2021 (11-03-2021)