Wednesday, November 24, 2021

ನಾನೊಬ್ಳೇನಾ ಹೀಗೆ ರಜೆ ಹಾಕ್ತಿರೋದು?

 

 ರಜಾ ಸೌಲಭ್ಯಗಳು ಮತ್ತು ಶಿಕ್ಷಕರಲ್ಲಿ ಕುಸಿಯುತ್ತಿರುವ ನೈತಿಕತೆ….

(ಶಿಕ್ಷಣದ ಕತೆಗಳು – 4)

ಸುಮಾರು ಇಪ್ಪತ್ತು ವರ್ಷಗಳ ಕಾಲ ಶಾಲೆಯೊಂದರ ಮುಖ್ಯೋಪಾಧ್ಯಾಯನಾಗಿ ಕಾರ್ಯನಿರ್ವಹಿಸಿದ ನನಗೆ ಒಂದು ಕ್ರಮ ಅಭ್ಯಾಸವಾಗಿ ಹೋಗಿದೆ. ಅದೆಂದರೆ ನನ್ನ ಸ್ನೇಹಿತರು ಅಥವಾ ಜೊತೆಗೆ ಕೆಲಸ ಮಾಡುವವರು ಯಾರಾದರೂ ವೈದ್ಯಕೀಯ ರಜೆಯ ಮೇಲೆ ಹೋದರೆ ಮೂರುನಾಲ್ಕು ದಿನಗಳಿಗೊಮ್ಮೆ ಅವರಿಗೆ ಫೋನ್ ಮಾಡಿ, “ಹೇಗಿದ್ದೀರಿ? ಆರೋಗ್ಯ ಹೇಗಿದೆ?” ಎಂದು ಅವರ ಆರೋಗ್ಯ ವಿಚಾರಿಸಿಕೊಳ್ಳುವುದು. ಶಾಲೆಯ ಮುಖ್ಯಶಿಕ್ಷಕನಾಗಿದ್ದಾಗ ಶುರುವಾದ ಅಭ್ಯಾಸ (ಈ ಅಭ್ಯಾಸ ಕೆಟ್ಟದ್ದೊ ಒಳ್ಳೆಯದೋ ಎಂದು ಇನ್ನೂ ನನಗೆ ಸರಿಯಾಗಿ ಅರ್ಥವಾಗಿಲ್ಲ)   ಹುದ್ದೆಯಿಂದ ಹೊರಬಂದ ಮೇಲೂ ನನ್ನನ್ನು ಬಿಡುತ್ತಿಲ್ಲ. ಆಗ ನನ್ನ ಸಹಶಿಕ್ಷಕರಿಗೆ ರಜೆ ಸಿಗುವ ವ್ಯವಸ್ಥೆಮಾಡಿ ನನ್ನ ಕೆಲಸ ಮುಗಿಯಿತು ಎಂದು ಸುಮ್ಮನಿರದೆ ಅದರಾಚೆಯೂ ನಾನು ಹೀಗೆ ಆಗಾಗ ಅವರ ಯೋಗಕ್ಷೇಮ ವಿಚಾರಿಸಿಕೊಳ್ಳುವ ಕ್ರಮ ಶಾಲಾ ಆಡಳಿತದ ಮೇಲೆ ಬಹಳಷ್ಟು ಧನಾತ್ಮಕ ಪರಿಣಾಮ ಬೀರುತ್ತಿದ್ದುದು ನನ್ನ ಅರಿವಿಗೆ ಬಂದಿತ್ತು. ಅಷ್ಟಲ್ಲದೇ ನನ್ನ ಬಗ್ಗೆ ಶಿಕ್ಷಕರಿಗೂ ಬಹಳಷ್ಟು ಗೌರವ ಭಾವನೆ ಉಂಟಾಗುತ್ತಿತ್ತು. ಸಂಬಂಧಗಳನ್ನು ವ್ಯಕ್ತಿಗತ ನೆಲೆಯಲ್ಲಿ ಗಟ್ಟಿಗೊಳಿಸಿ ವೃತ್ತಿಬದುಕಿಗೂ ಬಲವನ್ನು ಕೊಡುತ್ತಿತ್ತು. ಹತ್ತುದಿನ ರಜೆ ಹಾಕಿದವರು ಎಂಟು ದಿನಕ್ಕೇ ಶಾಲೆಗೆ ಬಂದದ್ದೂ ಇದೆ!

ಆದರೆ ಈಗ ಪರಿಸ್ಥಿತಿ ಯಾವ ಹಂತ ತಲುಪಿದೆ ಎಂಬುದನ್ನು ನನ್ನ ಅನುಭವಕ್ಕೆ ತಂದಿರುವ ಇತ್ತೀಚಿನ ಕೆಲವು ಘಟನೆಗಳು ನನ್ನ ವಾಡಿಕೆಯ ಕ್ರಮವನ್ನು ಬಿಟ್ಟುಬಿಡುವುದೇ ಒಳ್ಳೆಯದೇನೊ ಎಂದು ನಾನು ವಿಚಾರಿಸುವಂತೆ ಮಾಡಿವೆ. ಒಂದೆರಡು ಘಟನೆಗಳನ್ನು ಗಮನಸಿ. ಮೊನ್ನೆ ಇದ್ದಕ್ಕಿದ್ದಂತೆ ನನಗೆ ಪರಿಚಿತವಿರುವ ಶಾಲೆಯ ಮುಖ್ಯೋಪಾಧ್ಯಾಯರಿಗೆ ಯಾವುದೋ ಕೆಲಸದ ನಿಮಿತ್ತ ಫೋನ್ ಮಾಡಿ ಮಾತನಾಡುವಾಗ ತೀರಾ ಸಹಜವೆಂಬಂತೆ ಶಾಲೆಯಲ್ಲಿ ಸಹಶಿಕ್ಷಕರಾಗಿದ್ದ ನನ್ನ ಸ್ನೇಹಿತೆರೊಬ್ಬರ ಬಗ್ಗೆ ಕೇಳಿ ಶಾಲೆಯಲ್ಲಿ ಇದ್ದಾರೆಯೇ ಎಂದು ಕೇಳಿದೆ. ಅವರು, “ಇಲ್ಲ. ಅವರ ಮಗಳಿಗೆ ಹುಷಾರಿಲ್ಲವಂತೆ ಹದಿನೈದು ದಿನ ರಜೆಹಾಕಿದ್ದಾರೆಎಂದರು

ನನಗೆ ಸಹಜವಾಗಿ ಆತಂಕವಾಯಿತು. ತಕ್ಷಣ ಶಿಕ್ಷಕಿಗೆ ಫೋನ್ ಮಾಡಿ, “ಏನಾಗಿದೆ ಮಗುವಿಗೆ? ರಜೆ ಹಾಕಿದೆಯಂತಲ್ಲ. ಏನಾದರೂ ಸಹಾಯ ಬೇಕೆ? ನನಗೆ ಒಂದು ಮಾತು ಹೇಳಲಿಕ್ಕೆ ಆಗಲಿಲ್ಲವೇ?” ಎಂದು ಪ್ರೀತಿಯಿಂದ ದಬಾಯಿಸಿದೆ.” ನನ್ನ ಜೊತೆ ಮುಚ್ಚುಮರೆಯಿಲ್ಲದೆ ಮಾತನಾಡುವಷ್ಟು ಸಲುಗೆ ಇದ್ದ ಆಕೆ ಕಡೆಯಿಂದ ಫೋನಿನಲ್ಲಿ ಹೇಳಿದಳು, “ಏಯ್ ಏನೂ ಆಗಿಲ್ಲಪ್ಪ ಮಗಳಿಗೆ. ಅವ್ಳು ಚೆನ್ನಾಗಿದ್ದಾಳೆ. ಏನಾದ್ರೂ ಆಗಿದ್ರೆ ನಿನ್ಗೆ ಹೇಳ್ತಿರಲಿಲ್ಲವೇ? ಅವ್ಳು ಮನೆಯಲ್ಲಿ ಇಲ್ವಲ್ಲ. ರೆಸಿಡೆನ್ಸಿಯಲ್ ಸ್ಕೂಲಲ್ಲಿ ಓದ್ತಿದಾಳೆ. ಇನ್ನೊಂದೆರಡು ವರ್ಷಕ್ಕೆ ಅವಳಿಗೆ ಹದಿನೆಂಟು ವರ್ಷ ಆಗುತ್ತಲ್ಲ. ಶಿಶುಪಾಲನಾ ರಜೆ ಆಮೇಲೆ ಹಾಕಲಿಕ್ಕೆ ಬರಲ್ಲಲ. ಸುಮ್ನೆ ವೇಸ್ಟ್ ಆಗುತ್ತಲ್ಲ. ಅದನ್ನೂ ಎನೋ ವಾಪಸ್ ತಗೊಳ್ತಾರೆ ಅಂತಾ ಬೇರೆ ವಾಟ್ಸಪ್ನಲ್ಲಿ ಬರ್ತಿತ್ತು. ಅದ್ಕೆ ಸುಮ್ನೆ ಹಾಕಿದೆ.” ಅಂದರೆ ಯಾವುದೋ ಊರಿನಲ್ಲಿ `ಶಿಶು’ ಚೆಂದಾಗಿ ಶಾಲೆಗೆ ಹೋಗಿ ಪಾಠ ಕೇಳುತ್ತಿತ್ತು. ಈ ಊರಿನಲ್ಲಿ ಶಿಶುವಿನ ತಾಯಿ ಅದನ್ನು ಆರೈಕೆ ಮಾಡುವ ಕಾರಣ ಕೊಟ್ಟು ಶಾಲಾ ಮಕ್ಕಳಿಗೆ ಪಾಠಹೇಳುವ ಪವಿತ್ರ ಕಾರ್ಯವನ್ನು ಬಿಟ್ಟು ಕಾಲಕಳೆಯುತ್ತಿದ್ದರು!!  ನಾನು ಮುಂದೆ ಮಾತನಾಡಲು ಮನಸ್ಸಾಗದೆ ಫೋನ್ ಕಟ್ ಮಾಡಿದೆ.

ಇನ್ನೊಂದು ಘಟನೆಯಲ್ಲಿ ಶಿಕ್ಷಕರೊಬ್ಬರು ಮೆಡಿಕಲ್ ಲೀವ್ ಪಡೆದರೆಂದು ಕೇಳಿಹುಂಬನಾದ ನಾನು ಅವರಿಗೂ ಫೋನ್ ಮಾಡಿ ಆರೋಗ್ಯ ವಿಚಾರಿದೆ. ಅವರು, “ನನಗೆ ಏನೂ ಆಗಿಲ್ಲಣ. ಸೈಟ್ ತಗೊಂಡಿದ್ನಲ. ಮನೆ ಕಟ್ಟಿಸ್ತಿದೀನಿ. ಬೇರೆ ರಜೆ ಎಲ್ಲ ಖಾಲಿ ಆಗಿತ್ತು. ಅದ್ಕೆ ಮೆಡಿಕಲ್ ಲೀವ್ ಹಾಕಿದಿನಿ. ಮನೆ ಇನ್ನೇನು ಎರಡು ಮೂರು ತಿಂಗ್ಳಲ್ಲಿ ಮುಗಿಯುತ್ತೆ. ಎಲ್ಲ ಕುಟುಂಬ ಸಮೇತ ಗೃಹಪ್ರವೇಶಕ್ಕೆ ಬರ್ಬೇಕುಎಂದು ಆಗಲೇ ನನಗೆ ಆಮಂತ್ರಣ ನೀಡಿದರು.

ಆರಂಭದ ದಿನಗಳಲ್ಲಿ ನಾನು ಹೀಗೆ ವೈದ್ಯಕೀಯ ಕಾರಣ ಹೇಳಿ ರಜೆತೆಗೆದುಕೊಂಡವರಿಗೆ ಫೋನ್ ಮಾಡಿ ಯೋಗಕ್ಷೇಮ ವಿಚಾರಿಸಿದಾಗ ನನಗೆ ಧನ್ಯತೆಯ ಭಾವವೂ ಅವರಿಗೆ ಕೃತಜ್ಞತೆಯ ಭಾವವೂ ಉಂಟಾಗುತ್ತಿದ್ದವು. ಪರಸ್ಪರ ಗೌರವಗಳೂ ಹೆಚ್ಚುತ್ತಿದ್ದವು. ಬಾಂಧವ್ಯ ವೃದ್ಧಿಸುತ್ತಿತ್ತು. ಈಗ ಇದಕ್ಕೆ ತದ್ವಿರುದ್ಧವಾಗಿದೆ ಸ್ಥಿತಿ ಇದೆ. ಹೀಗೆ ನಾನು ಯಾರಿಗಾದರೂ ಫೋನ್ ಮಾಡಿದಾಗ ನಮ್ಮನ್ನು ಪರೀಕ್ಷೆ ಮಾಡ್ಲಿಕ್ಕೆ ಇವನು ಹೀಗೆ ಫೋನ್ ಮಾಡಿದ್ದಾನೆಎಂದು ಅವರು ತಿಳಿದುಕೊಳ್ಳುತ್ತಿದ್ದಾರೆ ಅಥವಾ ಅವರು ಹಾಗೆ ತಿಳಿದುಕೊಳ್ಳಬಹುದು ಎಂದು ನನಗೇ ಅನ್ನಿಸಿಬಿಡುತ್ತಿದೆ. ಸಂದರ್ಭದಲ್ಲಿ ನನಗೆ ಎರಡು ಘಟನೆಗಳು ನೆನಪಿಗೆ ಬರುತ್ತಿವೆ:

ಹಬ್ಬದ ರಜೆಯನ್ನು ಆಸ್ಪತ್ರೆಗೆ ಬಳಸಲೊಪ್ಪದ ಆದರ್ಶ ಶಿಕ್ಷಕ

ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು. ಅದೇ ಆಗ ನಾನು ಹೊಸದಾಗಿ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ್ದೆ. ಮಲೆನಾಡಿನ ಹಳ್ಳಿಯೊಂದಕ್ಕೆ ನನ್ನನ್ನು ಹಾಕಲಾಗಿತ್ತು. ಆಗ ನಡೆದ ಒಂದು ಘಟನೆ ನನ್ನ ಇಡೀ ವೃತ್ತಿಬದುಕಿನ ಮೇಲೆ ಗಾಢವಾದ ಪರಿಣಾಮವನ್ನು ಬೀರಿತು. ಘಟನೆ ಏನೆಂದರೆ ಒಂದು ದಿನ ಒಬ್ಬ ಶಿಕ್ಷಕರು ಒಂದು ಪರಿಮಿತ ರಜೆ (ಆರ್.ಎಚ್.) ಬೇಕೆಂದು ಅರ್ಜಿಕೊಟ್ಟರು. ಶಿಕ್ಷಕರಿಗೆ ಮುಖ್ಯೋಪಾಧ್ಯಾಯರು ಒಂದು ದಿನ ಮೊದಲೇ ರಜೆಯನ್ನು ಮಂಜೂರು ಮಾಡಿದರು. ಸರಿ, ಶಿಕ್ಷಕರು ಮನೆಗೆ ಹೋದರು.  ಪರಿಮಿತ ರಜೆಗಳು ಸಾಮಾನ್ಯವಾಗಿ ಧಾರ್ಮಿಕ ಹಬ್ಬಗಳೊಂದಿಗೆ ನಂಟು ಹೊಂದಿರುತ್ತವೆ. ಭಾರತವು ಬಹುಸಂಸ್ಕೃತಿಯ ನಾಡಾಗಿರುವುದರಿಂದ ಮತ್ತು ಹಬ್ಬಗಳ ಸಂಖ್ಯೆ ತುಸು ಹೆಚ್ಚೇ ಇವೆ. ಎಲ್ಲ ರಜೆಗಳಿಗೂ ಸಾರ್ವತ್ರಿಕ ರಜೆಯನ್ನು ಕೊಡುವುದು ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಷ್ಟಕ್ಕೂ ಎಲ್ಲ ಹಬ್ಬಗಳನ್ನೂ ಎಲ್ಲರೂ ಮಾಡುವುದಿಲ್ಲವಾಗಿ ಹಾಗೆ ರಜೆ ಕೊಡುವ ಅವಶ್ಯಕತೆಯೂ ಇರುವುದಿಲ್ಲ. ಹೀಗಾಗಿ ಅವಶ್ಯವಿದ್ದವರು ಮಾತ್ರ ಬಳಸಿಕೊಳ್ಳಲು ಅನುಕೂಲವಾಗಲೆಂಬುದು ರಜೆಗಳ ನೀಡಿಕೆಯ ಉದ್ದೇಶ.

ರಜೆಯನ್ನು ಪಡೆದ ಶಿಕ್ಷಕರ ವಿಷಯದಲ್ಲಿ ಏನಾಯಿತು ಎಂದರೆ ಅದು ಡಿಸೆಂಬರ್ ತಿಂಗಳು. ಅಂದು ಪರಿಮಿತ ರಜೆ ಯಾವ ಹಬ್ಬಕ್ಕಾಗಿ ಇತ್ತೋ ಹಬ್ಬವನ್ನು ವಾಸ್ತವವಾಗಿ ಶಿಕ್ಷಕರ ಮನೆಯಲ್ಲಿ ಮಾತ್ರವಲ್ಲ ಅವರ ಸಮುದಾಯದವರು ಯಾರೂ ಮಾಡುತ್ತಿರಲಿಲ್ಲ. ಆದರೆ ಅವರ ಹತ್ತಿರದ ಸ್ನೇಹಿತನೊಬ್ಬ ಬೇರೆ ಧರ್ಮಕ್ಕೆ ಸೇರಿದವನಾಗಿದ್ದ. ಆತ ಶಿಕ್ಷಕರಿಗೆ ಒತ್ತಾಯ ಮಾಡಿ, “ನಿಮ್ಮಲ್ಲಿ ಹಬ್ಬ ಮಾಡುವುದಿಲ್ಲವಲ್ಲ. ದಯವಿಟ್ಟು ನಮ್ಮ ಮನೆಗೆ ಬನ್ನಿ. ಕೂಡಿ ಹಬ್ಬ ಮಾಡೋಣಎಂದು ಆಮಂತ್ರಿಸಿದ್ದ. ಇವರಿಗೂ ಹೋಗಲು ಮನಸ್ಸಾಯಿತು. ಈಗಿನಂತೆ ಇನ್ನೊಂದು ಧರ್ಮವನ್ನು ದ್ವೇಷಿಸುವುದೇ ನಾವು ನಮ್ಮ ಧರ್ಮಕ್ಕೆ ಕೊಡುವ ಗೌರವ ಎನ್ನುವ ಕೆಟ್ಟ ವಾತಾವರಣ ಆಗ ಇರಲಿಲ್ಲ. ಇನ್ನೊಂದು ಧರ್ಮದವರ ಹಬ್ಬಹರಿದಿನಗಳಲ್ಲಿ ಭಾಗವಹಿಸುವವರನ್ನು ಕೆಂಗಣ್ಣಿನಿಂದ ನೋಡುವ `ಧರ್ಮರಾಕ್ಷಸ ಹಾವಳಿಯೂ ಆಗ ಇರಲಿಲ್ಲ. ಜನ ಸಹಜವಾಗಿ ಬೆರೆಯುವ ವಾತಾವರಣವಿತ್ತು. ಹೀಗಾಗಿ ಶಿಕ್ಷಕರು ಹಬ್ಬಕ್ಕಾಗಿ ರಜೆಕೋರಿ ಅರ್ಜಿಕೊಟ್ಟು ರಜೆಪಡೆದು ಮನೆಗೆ ಬಂದರು.

ಆದರೆ ಮರುದಿನ ಬೆಳಿಗ್ಗೆ ಸ್ನೇಹಿತನ ಮನೆಗೆ ಹಬ್ಬಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಒಂದು ಚಿಕ್ಕ ದುರ್ಘಟನೆ ನಡೆಯಿತು. ಬೆಳಿಗ್ಗೆ ಹೆಂಡತಿಗೆ ತೆಂಗಿನ ಕಾಯಿ ಸುಲಿದುಕೊಡಲು ಹೋದ ಶಿಕ್ಷಕರ ಕೈಗೆ ಕತ್ತಿ ತಗುಲಿ ಚಿಮ್ಮುವ ಗಾಯವಾಗಿಬಿಟ್ಟಿತು. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಅವರು ಸ್ನೇಹಿತನ ಮನೆಗೆ ಹಬ್ಬಕ್ಕೆ ಹೋಗುವ ಕಾರ್ಯಕ್ರಮವನ್ನು ರದ್ದುಮಾಡಿ ಆಸ್ಪತ್ರೆಗೆ ಹೋಗಿ ಕೈಗೆ ಸೂಕ್ತಚಿಕಿತ್ಸೆಮಾಡಿಸಿಕೊಂಡು ಬಂದು ಮನೆಯಲ್ಲಿ ವಿಶ್ರಾಂತಿ ಪಡೆದರು.

ಮರುದಿನ ಎಂದಿನಂತೆ ಶಾಲೆಗೆ ಬಂದ ಅವರು ಮುಖ್ಯಶಿಕ್ಷಕರಿಗೆ ಇನ್ನೊಂದು ಅರ್ಜಿಯನ್ನು ಕೊಟ್ಟರು. ಅದರಲ್ಲಿ ಅವರು ಹಿಂದಿನ ದಿನ ನಡೆದ ಘಟನೆಯ ವಿವರಗಳನ್ನು ತಿಳಿಸಿ ಕಾರಣದಿಂದ ನಾನು ಯಾವ ಉದ್ದೇಶಕ್ಕಾಗಿ ಆರ್. ಎಚ್. ಪಡೆದಿದ್ದೆನೋ ಉದ್ದೇಶಕ್ಕಾಗಿ ಅದನ್ನು ನನ್ನ ಶಕ್ತಿಗೆ ಮೀರಿದ ಕಾರಣಕ್ಕಾಗಿ ಬಳಸಲು ಆಗಲಿಲ್ಲ. ಆದ್ದರಿಂದ ತಾವು ಮಂಜೂರು ಮಾಡಿರುವ ಆರ್.ಎಚ್. ಅನ್ನು ವಾಪಸ್ಸು ಪಡೆದು ಅದರ ಬದಲು ಒಂದು ಸಿ.ಎಲ್. (ಸಾಂದರ್ಭಿಕ ರಜೆ) ಮಂಜೂರು ಮಾಡಬೇಕಾಗಿ ವಿನಂತಿಎಂದು ಬರೆದಿದ್ದರು. ಇದನ್ನು ನೋಡಿದ ಮುಖ್ಯೋಪಾಧ್ಯಾಯರಿಗೆ ಇದು ವಿಚಿತ್ರವಾಗಿ ತೋರಿತು. ಅವರು ಮೊದಲು ಅವರು ಹಬ್ಬದ ಬದಲು ಆಸ್ಪತ್ರೆಗೆ ಹೋಗಬೇಕಾಗಿ ಬಂದದ್ದಕ್ಕೆ ಒಂದಿಷ್ಟು ವಿಷಾದವನ್ನು ವ್ಯಕ್ತಪಡಿಸಿ, “ಯಾವ ರಜೆ ಆದ್ರೆ ಏನು ಬಿಡಿ. ಅದೇನು ಸಮಸ್ಯೆಯಲ್ಲ. ಒಂದು ದಿನ ನೀವು ಇರ್ಲಿಲ್ಲ. ಅದಕ್ಕೆ ಒಂದು ದಿನ ರಜೆ ಪಡೆದಿದ್ದೀರಿ. ಅದಕ್ಕೆ ಮೊದಲು ಕೊಟ್ಟ ಪರಿವರ್ತಿತ ರಜೆಯೇ ಆಗುತ್ತೆಎಂದರು.

ಬಹಳಷ್ಟು ಜನ ಮುಖ್ಯಶಿಕ್ಷಕರು ಅಥವಾ ಕಚೇರಿ ಮುಖ್ಯಸ್ಥರಿಗೆ ಇಷ್ಟೇ ಆಲೋಚನೆ ಮಾಡಲು ಸಾಧ್ಯವಾಗುತ್ತದೆ. ಅವರಿಗೆ ತಾಂತ್ರಿಕ ಕಾರಣಗಳು ಮುಖ್ಯವಾಗುತ್ತವೆಯೇ ಹೊರತು ತಾತ್ವಿಕ ಕಾರಣಗಳಲ್ಲ. ಅವರ ಪ್ರಕಾರ ಶಿಕ್ಷಕರು ಒಂದು ದಿನ ಶಾಲೆಯಲ್ಲಿ ಇರಲಿಲ್ಲ. ಅದಕ್ಕೆ ಒಂದು ದಿನ ರಜೆಕೊಡಲಾಗಿದೆ. ಅಲ್ಲಿಗೆ ವಿಷಯ ಮುಗಿಯಿತು. ಅದನ್ನು ಬದಲಿಸುವುದು ಅನವಶ್ಯಕ. ಹಾಗಾಗಿಯೇ ಅವರು ಮುಂದುವರೆದು ಹೇಳಿದರು, “ಸಿ.ಎಲ್. ಉಳಿದರೆ ಇನ್ನೊಂದು ದಿನ ಬಳಸಿಕೊಳ್ಳಬಹದು. ಆದರೆ ಆರ್. ಎಚ್. ಉಳಿದ್ರೆ ಬಳಸಿಕೊಳ್ಳಲು ಬರುವುದಿಲ್ಲ. ಅದನ್ನು ಬಳಸಿಕೊಳ್ಳಲು ಇವತ್ತೇ ಕಡೇ ದಿನ”. ಆದರೆ ಶಿಕ್ಷಕರ ಮನಸ್ಸು ಒಪ್ಪಲಿಲ್ಲ. ಅವರ ಸಲಹೆಯನ್ನು ಶಿಕ್ಷಕರು ಗೌರವಯುತವಾಗಿ ನಿರಾಕರಿಸಿ ರಜೆ ಪರಿವರ್ತನೆಗೆ ಮತ್ತೆ ಕೇಳಿಕೊಂಡರು. ಇವರ ಒತ್ತಾಯಕ್ಕೆ ಮಣಿದು ಕೊನೆಗೂ ಮುಖ್ಯೋಪಾಧ್ಯಾಯರು, ಇವರಿಗೆ ಮಂಜೂರು ಮಾಡಿದ್ದ ಪರಿವರ್ತಿತ ರಜೆಯನ್ನು ಮರಳಿ ಪಡೆದು ಅದರ ಬದಲು ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿದರು. ಶಿಕ್ಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟು ತರಗತಿಯ ಪಾಠಕ್ಕೆ ತೆರಳಿದರು. ಮುಖ್ಯೋಪಾಧ್ಯಾಯರು ಹೇಳಿದಂತೆ ಅವರ ಪರಿವರ್ತಿತ ರಜೆ ಬಳಕೆಯಾಗದೇ ಹಾಗೇ ಉಳಿಯಿತು! ಆದರೆ ಶಿಕ್ಷಕರಿಗೆ ಅದು ನಮ್ಮ ಬಹಳಷ್ಟು ಜನ ಶಿಕ್ಷಕರಿಗೆ ಅನ್ನಿಸುವಂತೆವೇಸ್ಟ್ಆಯಿತು ಅನ್ನಿಸಲಿಲ್ಲ. ಘಟನೆ ನನ್ನ ಇಡೀ ವೃತ್ತಿಜೀವನದಲ್ಲಿ ರಜೆಯನ್ನು ಹಾಕುವಾಗಲೆಲ್ಲ ನೆನಪಿಗೆ ಬರುತ್ತದೆ ಮಾತ್ರವಲ್ಲ ರಜೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿದೆ.

ನಾನೊಬ್ಳೇನಾ ಹೀಗೆ ರಜೆ ಹಾಕೋದು?

ಕನ್ನಡದ ಸೂಕ್ಷ್ಮಮನಸ್ಸಿನ ಸಂವೇದನಾಶೀಲ ಕಲಾವಿದ, ಬಹುಭಾಷಾ ನಟ ಪ್ರಕಾಶ್ ರೈ ತಮ್ಮಅವರವರ ಭಾವಕ್ಕೆಕೃತಿಯ ಲೇಖನವೊಂದರಲ್ಲಿ ಒಂದು ಮುಖ್ಯವಾದ ಘಟನೆಯನ್ನು ದಾಖಲಿಸುತ್ತಾರೆ. ಅವರು ಒಂದು ಸಲ ತಮ್ಮ ಸ್ನೇಹಿತನ ಮನೆಗೆ ಹೋಗುತ್ತಾರೆ. ಸ್ನೇಹಿತನ ಹೆಂಡತಿ ಶಾಲೆಯೊಂದರಲ್ಲಿ ಅಧ್ಯಾಪಕಿಯಾಗಿದ್ದರು. ಇವರು ಹೋದಾಗ ಅವರು ತಮ್ಮ ಮನೆಯಲ್ಲಿ ತನ್ನ ಮಗನಿಗೆ ಪಾಠ ಮಾಡುತ್ತಿರುತ್ತಾರೆ. ಸಲಿಗೆಯಿದ್ದದ್ದರಿಂದ ಇವರು ಸಹಜವಾಗಿ, “ಇವತ್ತು ಶಾಲೆಯಿಲ್ಲವೇ?” ಎಂದು ಕೇಳುತ್ತಾರೆ, ಅದಕ್ಕೆ ಅವರು, “ಇದೆ ಮೆಡಿಕಲ್ ಲೀವ್ ಹಾಕಿದಿನಿ, ಮಗನಿಗೆ ಪಾಠ ಹೇಳಿಕೊಡಬೇಕಲ್ಲಎನ್ನುತ್ತಾರೆ. “ಹಾಗಾದರೆ ಶಾಲೆಯಲ್ಲಿ ನಿಮ್ಮ ಬಳಿ ಕಲಿಯುವ ಮಕ್ಕಳ ಗತಿಎಂದು ನಗುತ್ತ ಸ್ವಲ್ಪ ಸೀರಿಯಸ್ ಆಗಿಯೇ ಕೇಳುತ್ತಾರೆ. ಅದಕ್ಕೆ ಅವರು ಪ್ರಕಾಶ್ ರೈಗೆ ಶಾಕ್ ಹೊಡೆದಂತೆ ಉತ್ತರ ಕೊಡುತ್ತಾರೆ, “ಅದಕ್ಕೆ ನಾನೇನು ಮಾಡ್ಲಿ? ನಾನೊಬ್ಳೇನಾ ಹೀಗೆ ರಜಾ ತಗೋಳೋದು?”

ಇದನ್ನು ದಾಖಲಿಸಿ ಪ್ರಕಾಶ್ ರೈ ನಮ್ಮ ದೇಶದ ಬಹಳ ಮುಖ್ಯವಾದ, ಗಂಭೀರವಾದ ಸಮಸ್ಯೆಗಳಲ್ಲಿ ಇದೂ ಒಂದು ಎನ್ನುತ್ತಾರೆ. ಅವರೇ ಮುಂದುವರೆದು ಬರೆಯುತ್ತಾರೆ, “ಒಬ್ಬ ಗುರು ಹಲವು ಪರೀಕ್ಷೆಗಳನ್ನಿಟ್ಟು ಪ್ರತಿಭಾವಂತನಾದ ಒಬ್ಬನನ್ನು ಆಯ್ಕೆಮಾಡಿಇವನೇ ನನ್ನ ಶಿಷ್ಯಎಂದು ಹೇಳುವ ಪ್ರಯತ್ನಕ್ಕಿಂತ, ಇಂಥವನೇ ನನ್ನ ಗುರು ಎಂದು ಒಬ್ಬ ಶಿಷ್ಯ ತನ್ನ ಗುರುವನ್ನು ಆರಿಸುವ ಪಕ್ವತೆ ದೊಡ್ದದು.”

ಒಬ್ಬ ಶಿಕ್ಷಕರಿಗೆ ಹಬ್ಬಕ್ಕೆ ಎಂದು ರಜೆಪಡೆದು ಅದನ್ನು ಆಸ್ಪತ್ರೆಗೆ ಹೋಗಲು ಬಳಸಿಕೊಂಡದ್ದು ಎಷ್ಟರಮಟ್ಟಿಗೆ ಸರಿ ಎಂಬ ನೈತಿಕ ಪ್ರಶ್ನೆಯೊಂದು ಎದುರಾಯಿತು. ಯೋಚಿಸಿ ನೋಡಿದಾಗ ಹಾಗೇ ಮಾಡುವುದುತಪ್ಪುಅನ್ನಿಸಿತು. ಹಬ್ಬಕ್ಕಿಂತ ಆಸ್ಪತ್ರೆಗೆ ಹೋಗಿದ್ದು ಬಹಳ ಮುಖ್ಯವಾದ ಘಟನೆಯಾಗಿದ್ದರೂ ಅದು ಅವರಿಗೆ ಅಪರಾಧವಾಗಿ ಕಂಡಿತು! ಅವರು ತಮ್ಮ ಅಪರಾಧಿಪ್ರಜ್ಞೆಯಿಂದ ಹೊರಬರಲು ಮರುದಿನ ಶಾಲೆಗೆ ಬಂದು ತಾವು ಪಡೆದ ರಜೆಯನ್ನು ಪರಿವರ್ತಿಸಿಕೊಂಡು ಅಪರಾಧಿ ಪ್ರಜ್ಞೆಯಿಂದ ಹೊರಬಂದು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಇನ್ನೊಬ್ಬರಿಗೆ ತಮಗೆ ಇಲ್ಲದ ಕಾಯಿಲೆಯನ್ನು ಸೃಷ್ಟಿಸಿಕೊಂಡು ರಜೆಪಡೆದದ್ದು ಅಪರಾಧವಾಗಿ ಕಾಣಲಿಲ್ಲ. ಮತ್ತೊಬ್ಬರಿಗೆ ಕಾರಣವೇ ಇಲ್ಲದೇ ರಜೆ ವೇಸ್ಟ್ ಆಗುತ್ತೆ ಅಂಥ ರಜೆಹಾಕಿ ಮನೆಯಲ್ಲಿ ಕುಳಿತುಕೊಳ್ಳುವುದು ತಪ್ಪಾಗಿ ಕಾಣಿಸಲಿಲ್ಲ….. ತಾವು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ನೈತಿಕ ಪ್ರಶ್ನೆಯೊಂದು ಇವರಲ್ಲಿ ಹುಟ್ಟಲೇ ಇಲ್ಲ.

ಹೌದು ಇವರೆಲ್ಲರೂ ನಮ್ಮಗೌರವಾನ್ವಿತಶಿಕ್ಷಕರೆ. ನಮ್ಮ ಸಮಾಜವನ್ನು ದೇಶವನ್ನು ಕಟ್ಟಲು ಸ್ವಾರ್ಥರಹಿತ ಸೇವಾಮನೋಭಾವದ ಶಿಕ್ಷಕರ ಅವಶ್ಯಕತೆಯಿದೆ. ಅವರನ್ನು ಎಲ್ಲಿಂದ ತರುವುದು? ಇರುವವರನ್ನೇ ಸರಿಮಾಡುವ ಬಗೆ ಎಂಥದ್ದು. ಖಂಡಿತಾ ಇದು, ಬಲಪ್ರಯೋಗ, ಅಧಿಕಾರ ಮುಂತಾದವುಗಳಿಂದ ಆಗುವಂಥದ್ದಲ್ಲ. ಶಿಕ್ಷಕರ ಸಂಘಗಳು ಶಿಕ್ಷಕರಿಗೆ ರಜೆ ಕೊಡಿಸಲು ತೋರುವ ಉತ್ಸಾಹವನ್ನು ಮಿತಿಮೀರಿದ ಇಂತಹ ರಜೆಗಳಿಂದ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆಯೂ ಯೋಚಿಸಿ ಬದಲಿ ವ್ಯವಸ್ಥೆ ಮಾಡಿಸಲೂ ಉತ್ಸಾಹ ತೋರಿಸಬೇಕು. ಅದು ಅವುಗಳ ಜವಾಬ್ದಾರಿ ಕೂಡ ಹೌದು. ಆದರೆ ಅವು ಈ ಜವಾಬ್ದಾರಿಯನ್ನು ಎಷ್ಟರಮಟ್ಟಿಗೆ ನಿರ್ವಹಿಸುತ್ತಿವೆ? ಇನ್ನು ಶಿಕ್ಷಕರಿಗೆ ತಮ್ಮದೇ ಆದ ಸಾಮಾಸಿಕ ಹೊಣೆಗಾರಿಕೆ ಇದೆ. ಅದನ್ನು ಅವರು ಮರೆಯಬಾರದು. ಇತರ ನೌಕರರಿಗೆ ತಮ್ಮನ್ನು ಅವರು ಹೋಲಿಸಿಕೊಳ್ಳಲೂ ಬಾರದು. ಏಕೆಂದರೆ ಈಗಲೂ  ನಮ್ಮ ಸಮಾಜದಲ್ಲಿ ಶಿಕ್ಷಕರೆಂದರೆ ಕೇವಲ ಸರ್ಕಾರಿ ನೌಕರರಲ್ಲ. ಸರ್ಕಾರ ಅವರಿಗೆ ಸಾವಿರ ಸೌಲಭ್ಯಗಳನ್ನು ಕೊಡಬಹುದು. ಆದರೆ ಅವುಗಳಲ್ಲಿ ಎಷ್ಟನ್ನು ಬಳಸಿಕೊಳ್ಳಬೇಕು ಮತ್ತು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಸ್ವಯಂ ನ್ಯಾಯಾಧೀಶರಾಗಿ ಅವರು ತೀರ್ಮಾನಿಸಿಕೊಳ್ಳುವ ಉನ್ನತ ಮಟ್ಟವನ್ನು ಕಾಯ್ದುಕೊಳ್ಳಬೇಕು.  ‘ಸಿಗುವ ಸೌಲಭ್ಯವನ್ನು ಯಾಕೆ ಬಿಡಬೇಕು’ ಎಂದು ಆಲೋಚಿಸುವುದು ಒಳ್ಳೆಯ ಶಿಕ್ಷಕರ ಲಕ್ಷಣವಲ್ಲ. ಪರೋಕ್ಷವಾಗಿ ಶಿಕ್ಷಕರು ರಜೆ ಹಾಕುವುದೇ ಅಪರಾಧ ಎಂದು ಬಿಂಬಿಸುವುದು ನನ್ನ ಮಾತಿನ ಅರ್ಥವಲ್ಲ. ಅವರಿಗೂ ಎಲ್ಲರಂತೆ ಒಂದು ಖಾಸಗೀ ಬದುಕೆಂಬುದು ಇರುತ್ತದೆ. ಆದರೆ ಒಂದು ದಿನ ರಜೆಹಾಕುವಾಗ ಐವತ್ತು ಮಕ್ಕಳಿಗೆ ಪಾಠ ಇಲ್ಲದಂತೆ ಆಗುತ್ತದೆಯಾದ್ದರಿಂದ ರಜೆ ಹಾಕುವ ಕಾರಣವೂ ಅಷ್ಟೊಂದು ಗಂಭೀರವಾಗಿರಬೇಕು ಎಂದು ಅವರಿಗೆ ಅನ್ನಿಸಬೇಕು.

ಯಾವಾಗ ಒಬ್ಬ ಶಿಕ್ಷಕನಿಗೋ ಶಿಕ್ಷಕಿಗೋನನ್ನ ಒಂದು ಮಗುವಿಗೆ ಪಾಠಮಾಡಲಿಕ್ಕೆ ನನ್ನನ್ನು ನಂಬಿಕೊಂಡ ಐವತ್ತು ಮಕ್ಕಳಿಗೆ ಪಾಠಯಿಲ್ಲದಂತೆ ಮಾಡಿದೆಎಂಬ ಭಾವನೆ ಉಂಟಾಗುತ್ತದೆಯೋ ಯಾವಾಗ ನನಗೆ ಒಂದು ಮನೆಯನ್ನು ಕಟ್ಟಿಕೊಳ್ಳಲು ದೇಶವನ್ನೇ ಕೆಡವುವ ಕೆಲಸ ಮಾಡುತ್ತಿದ್ದೇನೆ ಅನ್ನಿಸುವ ಭಾವನೆ ಉಂಟಾಗುತ್ತದೆಯೋ ಯಾವಾಗ ರಜೆ ವೇಸ್ಟ್ ಆಗುತ್ತದೆ ಎಂದು ಕಾರಣವೇ ಇಲ್ಲದೆ ರಜೆಹಾಕಿ ಕುಳಿತುಕೊಂಡು ತಿನ್ನುವ ಅನ್ನ ಪಾಪದ್ದು ಅನ್ನುವ ಭಾವನೆ ಉಂಟಾಗುತ್ತದೆಯೋ ಅಂದೇ ಶಿಕ್ಷಕ ಅಥವಾ ಶಿಕ್ಷಕಿಯ ವ್ಯಕ್ತಿತ್ವ ಮಾತ್ರವಲ್ಲ ಇಡೀ ದೇಶದ ಚಿತ್ರಣವೇ ಬದಲಾವಣೆಗೆ ಮುಖಮಾಡುತ್ತದೆಹಾಗೆ ಆಗಲೆಂದು ನಾವೆಲ್ಲ ಆಶಿಸೋಣ…..

ಡಾ. ರಾಜೇಂದ್ರ ಬುರಡಿಕಟ್ಟಿ

Saturday, September 18, 2021