Tuesday, June 26, 2018


ಹಾಲುತುಪ್ಪಗಳಲ್ಲಿ ಬೆರೆತ ಹಾಲಾಹಲ…..
(`ಮೂಲಭೂತವಾದ’ `ಕೋಮುವಾದ’`ರಾಷ್ಟ್ರಭಕ್ತಿ’`ವಿಚಾರವಾದಕುರಿತು ಕೆಲವು ಟಿಪ್ಪಣಿಗಳು)

ಮುಖಪುಟದಲ್ಲಿ ನಾನು ಬರೆದ ಟಿಪ್ಪಣಿಯೊಂದಕ್ಕೆ ಪ್ರತಿಕ್ರಿಯೆಯಾಗಿ, ‘ಮೂಲಭೂತವಾದಿಗಳು, ಕೋಮುವಾದಿಗಳು ಅಂದರೆ ಯಾರು ಸ್ವಲ್ಪಬಿಡಿಸಿ ಹೇಳಿಎಂದು ಗೆಳೆಯರೊಬ್ಬರು ಕೇಳಿದ್ದಾರೆ. ಕೇಳ್ವಿಗೆ, “ಮೂಲಭೂತವಾದವನ್ನು ಒಪ್ಪಿಕೊಂಡು ಅನುಸರಿಸುವವರು ಮೂಲಭೂತವಾದಿಗಳು, ಕೋಮುವಾದವನ್ನು ಒಪ್ಪಿ ಅದರಂತೆ ನಡೆಯುವವರು ಕೋಮುವಾದಿಗಳುಎಂದು ಉತ್ತರಿಸಿ ಕೈತೊಳೆದುಕೊಳ್ಳುವ ಸೌಲಭ್ಯವಿದೆ. ಆದರೆ ತಾಂತ್ರಿಕವಾಗಿ ಉತ್ತರ ಸರಿಯಾಗಬಹುದಾದರೂ ತಾತ್ವಿಕವಾಗಿ ಸ್ಪಷ್ಟತೆಯನ್ನು ಕೊಡುವುದಿಲ್ಲ. ಏಕೆಂದರೆ ಅದು, ಮೂಲಭೂತವಾದ ಅಂದರೇನು? ಕೋಮುವಾದ ಅಂದರೇನು? ಎಂಬ ಮತ್ತೆರೆಡು ಬೀಜಪ್ರಶ್ನೆಗಳ ಹುಟ್ಟಿಗೆ ಕಾರಣವಾಗುತ್ತದೆ. ಹೀಗಾಗಿ ಮಿತ್ರರು ಕೇಳಿದ `ಮೂಲಭೂತವಾದಮತ್ತು `ಕೋಮುವಾದಇವುಗಳ ಜೊತೆಗೆ ಅವುಗಳ ಜೊತೆಜೊತೆಯಾಗಿಯೇ ಮತ್ತು ಹಲವು ವೇಳೆ ಒಂದರೊಳಗೊಂದು ಸೇರಿಕೊಂಡು ಗೊಂದಲವನ್ನು ಸೃಷ್ಟಿಸುವ ಪರಿಕಲ್ಪನೆಗಳಾದ `ವಿಚಾರವಾದಮತ್ತು `ರಾಷ್ಟ್ರಭಕ್ತಿ ಎರಡನ್ನೂ ಸೇರಿಸಿಕೊಂಡು ಒಟ್ಟು ನಾಲ್ಕು ಪರಿಕಲ್ಪನೆಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ವಿಶ್ಲೇಷಣೆಗೆ ಒಳಪಡಿಸಿದೆ. ಮೊದಲು ನಾಲ್ಕರ ವ್ಯಾಖ್ಯೆಗಳನ್ನು ಪರಿಶೀಲಿಸಬಹುದು:
ಮೂಲಭೂತವಾದ:
ಒಂದು ಮತಧರ್ಮದ ನಾಯಕರು ಅಥವಾ ಮುಖಂಡರೆನಿಸಿಕೊಂಡವರು ತಮ್ಮಧರ್ಮವು ಉಳಿದೆಲ್ಲ ಧರ್ಮಗಳಿಗಿಂತ ಶ್ರೇಷ್ಠವಾದದ್ದೆಂದು ಭಾವಿಸಿ, ತಮ್ಮ ಧರ್ಮವನ್ನು ಹೊರತುಪಡಿಸಿ ಬೇರೆಧರ್ಮವನ್ನೂ ಯಾರೂ ಅನುಸರಿಸಬಾರದು ಮತ್ತು ಬೇರೆಧರ್ಮದ ವಿಚಾರಗಳನ್ನು (ಅವು ಎಷ್ಟೇ ಒಳ್ಳೆಯವಾಗಿದ್ದರೂ) ಸ್ವೀಕರಿಸಬಾರದು ಎಂದು ತಮ್ಮದೇ ಧರ್ಮದ ಜನರ ಮೇಲೆ ತರುವ ಒತ್ತಡವನ್ನು ಮೂಲಭೂತವಾದ ಎಂದು ಕರೆಯಲಾಗುತ್ತದೆ. ಇದು ಪ್ರಪಂಚದಲ್ಲಿ ಯಾವುದೇ ದೇಶದಲ್ಲಿ ಸಾಮಾನ್ಯವಾಗಿ ಅಲ್ಪಸಂಖ್ಯಾತರಲ್ಲಿ ಕಂಡುಬರುತ್ತದೆ.
ಕೋಮುವಾದ:
ಒಂದು ಮತಧರ್ಮದ ನಾಯಕರು ಅಥವಾ ಮುಖಂಡರೆನಿಸಿಕೊಂಡವರು (ಮೂಲಭೂತವಾದದಂತೆಯೇ) ತಮ್ಮಧರ್ಮವು ಉಳಿದೆಲ್ಲ ಧರ್ಮಗಳಿಗಿಂತ ಶ್ರೇಷ್ಠವಾದದ್ದೆಂದು ಭಾವಿಸಿ, ತಮ್ಮ ಧರ್ಮವನ್ನು ಹೊರತುಪಡಿಸಿ ಬೇರೆಧರ್ಮವನ್ನೂ ಯಾರೂ ಅನುಸರಿಸಬಾರದು ಮತ್ತು ಬೇರೆಧರ್ಮದ ವಿಚಾರಗಳನ್ನು (ಅವು ಎಷ್ಟೇ ಒಳ್ಳೆಯವಾಗಿದ್ದರೂ) ಸ್ವೀಕರಿಸಬಾರದು ಎಂದು ತಮ್ಮದೇ ಧರ್ಮದ ಜನರ ಮೇಲೆ ಒತ್ತಡ ತರುವುದರ ಜೊತೆಗೆ ತಮ್ಮ ಧರ್ಮಾನುಯಾಯಿಗಳ ಗಡಿಯನ್ನೂ ದಾಟಿ ಆಚೆಗಿರುವ ಅಂದರೆ ಇತರೆ ಧರ್ಮಗಳನ್ನು ಅನುಸರಿಸುತ್ತಿರುವ ಜನರ ಮೇಲೆಯೂ `ನಿಮ್ಮ ಧರ್ಮಕ್ಕಿಂತ ನಮ್ಮ ಧರ್ಮಶ್ರೇಷ್ಠ ಆದ್ದರಿಂದ ನೀವೂ ನಮ್ಮ ಧರ್ಮವನ್ನೇ ಅನುಸರಿಸಬೇಕುಎಂದು ತರುವ ಒತ್ತಡವನ್ನು ಕೋಮುವಾದ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಯಾವುದೇ ದೇಶದಲ್ಲಿ ಬಹುಸಂಖ್ಯಾತರಲ್ಲಿ ಕಂಡುಬರುತ್ತದೆ.
ವಿಚಾರವಾದ:
ನಮ್ಮ ಗಮನಕ್ಕೆ ಬರುವ ಯಾವುದೇ ಸಂಗತಿ ಅಥವಾ ವಿಚಾರವನ್ನು ಯಾರಾದರೂ ಹೇಳಿದರು ಎಂಬ ಕಾರಣಕ್ಕೋ ಅಥವಾ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ ಎನ್ನುವ ಕಾರಣಕ್ಕೋ ಅಥವಾ ಯಾವುದೋ ಧರ್ಮಗ್ರಂಥದಲ್ಲಿ ಹೇಳಿದೆ ಎನ್ನುವ ಕಾರಣಕ್ಕೋ ಸುಮ್ಮನೇ ಒಪ್ಪಿಕೊಳ್ಳದೇ, ಸಂಗತಿಯ ಕಾಲದೇಶಗಳ ಪ್ರಸ್ತುತತೆಯನ್ನು ತನ್ನ ಬುದ್ಧಿ ಮತ್ತು ವಿವೇಕಗಳನ್ನು ಬಳಸಿ ವಿಚಾರಮಾಡಿ ಸರಿಕಂಡರೆ ಮಾತ್ರ ಒಪ್ಪಿಕೊಳ್ಳುವ ಒಂದು ಆಲೋಚನಾ ಕ್ರಮವನ್ನು ವಿಚಾರವಾದ ಎನ್ನುವರು.
ರಾಷ್ಟ್ರಭಕ್ತಿ (ದೇಶಭಕ್ತಿ):
ನಾವು ಹುಟ್ಟಿದ ಅಥವಾ `ಪ್ರಜೆಗಳಾಗಿ ಬದುಕುತ್ತಿರುವ ರಾಷ್ಟ್ರವೊಂದರಲ್ಲಿ, ರಾಷ್ಟ್ರದ ಮೇಲೆ ಗೌರವನ್ನಿಟ್ಟುಕೊಂಡು ರಾಷ್ಟ್ರದ ಸಂವಿಧಾನದ ಆಶಯಗಳನ್ನು ಹೃತ್ಪೂರ್ವಕವಾಗಿ ಒಪ್ಪಿಕೊಂಡು ಅದು ವಿಧಿಸುವ ವಿಧಿನಿಷೇಧಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬದುಕುವ ಸಾರ್ವಜನಿಕ ಬದುಕಿನ ಒಂದು ಕ್ರಮವನ್ನು `ರಾಷ್ಟ್ರಭಕ್ತಿಅಥವಾ `ದೇಶಭಕ್ತಿಎನ್ನುವರು.
`ಮೂಲಭೂತವಾದಮತ್ತು `ಕೋಮುವಾದಯಾವುದು ಮತ್ತು ಏಕೆ ಹೆಚ್ಚು ಅಪಾಯಕಾರಿ?
ಮೂಲಭೂತವಾದ ಮತ್ತು ಕೋಮುವಾದ ಇವುಗಳಲ್ಲಿ ಯಾವುದು ಕೆಟ್ಟದ್ದು ಯಾವುದು ಒಳ್ಳೆಯದು ಎಂಬ ಪ್ರಶ್ನೆ `ಹೊಟ್ಟೆನೋವು ಮತ್ತು ತಲೆನೋವುಎರಡರಲ್ಲಿ ಯಾವುದು ಒಳ್ಳೆಯದ್ದು ಮತ್ತು ಯಾವುದು ಕೆಟ್ಟದ್ದು?’ ಎಂಬ ಪ್ರಶ್ನೆಯಂಥದ್ದೇ ಆಗಿದೆ. ಇಲ್ಲಿ ಉತ್ತರ ಸರಳವೂ ಆಗಿರುವುದಿಲ್ಲ; ವಸ್ತುನಿಷ್ಠವೂ ಆಗಿರುವುದಿಲ್ಲ. ಅದುವರೆಗೂ ತಲೆನೋವು ಅನುಭವಿಸಿದವರು `ಯಾವ ನೋವನ್ನಾದರೂ ಸಹಿಸಿಕೊಳ್ಳಬಹುದು ತಲೆನೋವನ್ನು ಮಾತ್ರ ಸಹಿಸಿಕೊಳ್ಳಲಾಗದುಎನ್ನುತ್ತಾರೆ. ಅದುವರೆಗೂ ಹೊಟ್ಟೆನೋವನ್ನು ಅನುಭವಿಸಿದವರುಯಾವ ನೋವನ್ನಾದರೂ ಸಹಿಸಿಕೊಳ್ಳಬಹುದು ಹೊಟ್ಟೆನೋವನ್ನು ಮಾತ್ರ ಸಹಿಸಿಕೊಳ್ಳಲಾಗದು.’ ಎನ್ನುತ್ತಾರೆ. ವಾಸ್ತವದಲ್ಲಿ ಯಾವ ನೋವೂ ಸಹಿಸಿಕೊಳ್ಳುವಂತಿರುವುದಿಲ್ಲ. ಮೂಲಭೂತವಾದ ಮತ್ತು ಕೋಮವಾದಗಳು ಕೂಡ ತಲೆನೋವು ಮತ್ತು ಹೊಟ್ಟೆನೋವುಗಳಂಥವೆ. ಹಾಗಾಗಿ ಅವುಗಳಲ್ಲಿ ಯಾವುದು ಒಳ್ಳೆಯದ್ದು ಯಾವುದು ಕೆಟ್ಟದ್ದು ಎಂಬ ಪ್ರಶ್ನೆ ಹುಟ್ಟುವುದಿಲ್ಲ. ಭಾರತದಂತಹ ಬಹುಸಂಸ್ಕೃತಿಯ ಸಮಾಜವ್ಯವಸ್ಥೆಯನ್ನು ಗೆದ್ದಲು ಹುಳುವಿನಂತೆ ಹಂತಹಂತವಾಗಿ ತಿಂದು ತೇಗುವ ಇವೆರಡೂ ಇಲ್ಲಿನ ಕೂಡುಬಾಳುವೆಯನ್ನು ಹಾಳುಗೆಡಹುವ ಎರಡು ಅಪಾಯಕಾರಿ ವಿದ್ಯಮಾನಗಳು. ಏಕೆಂದರೆ ಇವೆರಡಕ್ಕೂ ತನ್ನಾಭಿಪ್ರಾಯದೊಂದಿಗೆ ಭಿನ್ನಾಭಿಪ್ರಾಯವನ್ನು ಗೌರವಿಸುವುದು ಗೊತ್ತಿರುವುದಿಲ್ಲ. ಎರಡೂ ತಮ್ಮ ಮೂಗಿನ ನೇರಕ್ಕೇ ಸತ್ಯವನ್ನು ಎಳೆದುಕೊಳ್ಳಲು ಪ್ರಯತ್ನಿಸುವಂಥವು.
ಮೂಲಭೂತವಾದ ಮತ್ತು ಕೋಮುವಾದಗಳನ್ನು ಒಳ್ಳೆಯದು ಮತ್ತು ಕಟ್ಟದ್ದು ಎಂದು ವಿಭಾಗಿಸಲು ಸಾಧ್ಯವಿಲ್ಲವಾದರೂ ಅವುಗಳಲ್ಲಿ ಕಡಿಮೆ ಅಪಾಯಕಾರಿ ಮತ್ತು ಹೆಚ್ಚು ಅಪಾಯಕಾರಿ ಎಂದು ಗುರುತಿಸಿಕೊಳ್ಳಲು ಸಾಧ್ಯವಿದೆ. ಅಧ್ಯಯನದ ಆದ್ಯತೆಯ ದೃಷ್ಟಿಯಿಂದ ಹೀಗೆ ಗುರುತಿಸಿಕೊಳ್ಳುವುದು ತಪ್ಪಲ್ಲವೆನ್ನುವುದಾದರೆ ಮೂಲಭೂತವಾದವನ್ನು ಕಡಿಮೆ ಅಪಾಯಕಾರಿ ಎಂದೂ ಕೋಮುವಾದವನ್ನು ಹೆಚ್ಚು ಅಪಾಯಕಾರಿ ಎಂದೂ ಗುರುತಿಸಿಕೊಳ್ಳಬಹುದಾಗಿದೆ. ಐತಿಹಾಸಿಕವಾಗಿ ನೋಡುವುದಾದರೆ ಹುಟ್ಟಿನ ಕಾಲದ ದೃಷ್ಟಿಯಿಂದ ಮೂಲಭೂತವಾದವು ಕೋಮುವಾದಕ್ಕಿಂತ ಪ್ರಾಚೀನವಾದದ್ದು. ಕೋಮುವಾದ ತೀರಾ ಇತ್ತೀಚಿನ ಬೆಳವಣಿಗೆ. ಹಿಟ್ಲರನ ಕಾಲದಲ್ಲಿದ್ದ `ಜನಾಂಗ ಶ್ರೇಷ್ಠತಾ ವಾದ ಸಂತಾನದ ಕುಡಿಯಾಗಿ ಈಗಿನ ಕೋಮುವಾದದ ವಿಕಾರ ಕೂಸು ಜನ್ಮತಾಳಿದೆ ಎನ್ನಬಹುದು. ಹೀಗೆ ಹುಟ್ಟಿನಿಂದ ಮೂಲಭೂತವಾದಕ್ಕಿಂತ ಅರ್ವಾಚೀನವಾದರೂ ಕೋಮುವಾದವು ಮೂಲಭೂತವಾದಕ್ಕಿಂತ ಹೆಚ್ಚು ಅಪಾಯಕಾರಿಯಾದದ್ದು ಎಂದು ಗುರುತಿಸಲು ಕಾರಣವಿದೆ.
ಮೂಲಭೂತವಾದ ಹೆಚ್ಚೆಂದರೆ ಒಂದು ಮತಧರ್ಮದ ಜನರು ಬೇರೆ ಮತಧರ್ಮಗಳಿಗೆ ಹೋಗದಂತೆ, ಮತ್ತು ಬೇರೆ ಮತಧರ್ಮಗಳಲ್ಲಿ ಇದ್ದಿರಬಹುದಾದ ಒಳ್ಳೆಯ ಅಂಶಗಳನ್ನು ಪಡೆಯದಂತೆ ಜನರನ್ನು ನಿರ್ಬಂಧಿಸಿ ಅವರು ಕೂಪಮಂಡೂಕರಾಗುವಂತೆ ಮಾಡುವ ಮೂಲಕ ಅವರು ತಮ್ಮದೇ ಧರ್ಮದಲ್ಲಿಯೇ (ಅದು ಅನೇಕ ಅಸಂಬದ್ಧ ಆಚರಣೆಗಳನ್ನು ಪ್ರತಿಪಾದಿಸಿದರೂ ಅವನ್ನೇ ಅನುಸರಿಸಬೇಕು ಎಂಬ ಒತ್ತಡ ತರುವ ಮೂಲಕ) ಬಿದ್ದು ಕೊಳೆಯುವಂತೆ ಮಾಡುತ್ತದೆ. ಆದರೆ ಕೋಮುವಾದ ಉಂಟುಮಾಡುವ ಅನಾಹುತ ಅದಕ್ಕಿಂತ ಹೆಚ್ಚು ವ್ಯಾಪಕವಾಗಿರುತ್ತದೆ. ಅದು ತಮ್ಮ ಧರ್ಮವನ್ನು ತ್ಯಜಿಸದಂತೆ ತಮ್ಮ ಧರ್ಮದ ಅನುಯಾಯಿಗಳ ಮೇಲೆ ಮೂಲಭೂತವಾದದಂತೆ ಒತ್ತಡ ತರುವಲ್ಲಿಗೆ ತನ್ನ ಕಾರ್ಯವನ್ನು ಮಿತಗೊಳಿಸಿಕೊಳ್ಳದೇ ಅದರಾಚೆಯೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಅನ್ಯಮತಾವಲಂಬಿಗಳ ಮೇಲೂ ತಮ್ಮ ರಾಕ್ಷಸೀಹಸ್ತವನ್ನು ಚಾಚಿ ಅವರನ್ನೂ ತನ್ನೆಡೆಗೆ ಎಳೆದುಕೊಳ್ಳಲು ಹವಣಿಸುಸುತ್ತದೆ. ಅವರ ಮೇಲೂ ತನ್ನನ್ನು ಅನುಸರಿಸಲು ಒತ್ತಡ ತರುತ್ತದೆ! ಮೂಲಭೂತವಾದದ್ದು `ನನ್ನದು ನನಗೆ ನಿನ್ನದು ನಿನಗೆಎಂಬ ತತ್ವವಾದರೆ ಕೋಮುವಾದದ್ದು `ನನ್ನದು ನನಗೆ; ನಿನ್ನದೂ ನನಗೆಎಂಬ ತತ್ವ! ಕಾರಣದಿಂದಲೇ ಅದು ಮೂಲಭೂತವಾದಕ್ಕಿಂತ ಹೆಚ್ಚು ಅಪಾಯಕಾರಿ.
ರಾಷ್ಟ್ರಭಕ್ತಿಯೊಂದಿಗೆ ಕೋಮುವಾದದ ಹೊಕ್ಕಾಟ
ಮೂಲಭೂತವಾದ ಮತ್ತು ಕೋಮುವಾದ ಇವುಗಳ ಬಹುದೊಡ್ಡ ಸಮಸ್ಯೆಗಳೆಂದರೆ ಅವು ಧರ್ಮ ಮತ್ತು ದೇಶಪ್ರೇಮಗಳೆಂಬ ಎರಡು ಒಳ್ಳೆಯ ತತ್ವಗಳೊಂದಿಗೆ ತಮ್ಮನ್ನು ಸಮೀಕರಿಸಿಕೊಂಡು ಸಾಮಾನ್ಯಜನರಲ್ಲಿ ಅನಗತ್ಯಗೊಂದಲ ಸೃಷ್ಟಿಸುವುದು. ಮನುಷ್ಯನ ಮೂಲಕ ಸಮಾಜದ ಏಳಿಗೆಯನ್ನು ಪ್ರತಿಪಾದಿಸುವ `ಧರ್ಮಮತ್ತು ಆಧುನಿಕ ಕಾಲಘಟ್ಟದ ಸಾಮಾಜಿಕ ಕೂಡುಜೀವನದ ವ್ಯವಸ್ಥೆಯಲ್ಲಿ ನಾವು ಸೃಷ್ಟಿಸಿಕೊಂಡಿರುವ `ರಾಷ್ಟ್ರಮತ್ತು ಎರಡು ಆದರ್ಶಗಳ ಒಳಗೆ ಎರಡು ಗೆದ್ದಲು ಹುಳುಗಳು ಸೇರಿಕೊಂಡು ಅವೆರಡನ್ನೂ ದುರ್ಬಲಗೊಳಿಸುತ್ತವೆ. ಸೂಕ್ಷ್ಮವಾಗಿ ನೋಡಿದರೆ ಮೂಲಭೂತವಾದವು ಧರ್ಮದ ಕಡೆಗೂ ಕೋಮುವಾದವು `ಧರ್ಮಮತ್ತು `ದೇಶಎರಡರ ಕಡೆಗೂ ನುಗ್ಗಿ ಇಡೀ ರಾಷ್ಟ್ರೀಯ ಜೀವನವನ್ನು ತಿಂದುಹಾಕುತ್ತಿದೆ.
ಪ್ರಪಂಚದ ಯಾವುದೇ ಧರ್ಮಗಳ ವಿಷಯಗಳಲ್ಲಿಯೂ ನಾವು ಸಾಮಾನ್ಯವಾಗಿ ಹೇಳಬಹುದಾದ ಒಂದು ಮಾತೆಂದರೆ ಬಹುತೇಕ ಎಲ್ಲ ಧರ್ಮಗಳೂ `ಶಾಸ್ವತ ಸತ್ಯಗಳುಮತ್ತು `ತಾತ್ಕಾಲಿಕ ಸತ್ಯಗಳುಎಂಬ ಎರಡು ಸತ್ಯಗಳನ್ನು ಒಳಗೊಂಡಿರುತ್ತವೆ. `ಶಾಶ್ವತ ಸತ್ಯಗಳುಎಂದರೆ ಕಾಲ ಎಷ್ಟೇ ಬದಲಾದರೂ ಮೌಲ್ಯಕಳೆದುಕೊಳ್ಳದ, ಎಂದೆಂದಿಗೂ ಪ್ರಸ್ತುತವಾಗುವ ಮೌಲ್ಯಗಳು. ಉದಾಹರಣೆಗೆ ಒಂದು ಧರ್ಮವು `ಹಿರಿಯರನ್ನು ಗೌರವಭಾವನೆಯಿಂದ ಕಿರಿಯರು ನೋಡಿಕೊಳ್ಳಬೇಕುಎಂದು ಹೇಳಿದರೆ ಅದು ಒಂದು ಶಾಶ್ವತ ಸತ್ಯ. `ತಾತ್ಕಾಲಿಕ ಸತ್ಯಎಂದರೆ ಆಯಾ ಕಾಲಘಟ್ಟದ ಪರಿಸ್ಥಿತಿಯನ್ನು ಅನುಸರಿಸಿ ಧರ್ಮಗಳು ಹೇಳಿರುವ ಮೌಲ್ಯಗಳು. ಉದಾಹರಣೆಗೆ ಒಂದು ಧರ್ಮದಲ್ಲಿ `ಹೆಣ್ಣುಮಕ್ಕಳಿಗೆ ಹತ್ತು ವರ್ಷದೊಳಗೆ ಮದುವೆ ಮಾಡಬೇಕುಎಂದು ಹೇಳಿರಬಹುದು. ಅದು ಯಾವುದ್ಯಾವುದೋ ಕಾರಣಕ್ಕೆ ಆಗ ಸರಿಯೂ ಇರಬಹುದು. ಕಾಲಕ್ಕೆ ಅದು ಹೊಂದಿಕೊಳ್ಳುವುದಿಲ್ಲ.
ಮತೀಯವಾದಿಗಳು (ಅಂದರೆ ಮೂಲಭೂತವಾದಿಗಳು ಮತ್ತು ಕೋಮುವಾದಿಗಳು) ಸಾಮಾನ್ಯವಾಗಿ ಧರ್ಮಗಳು ಬೋಧಿಸುವ ಬಗೆಯ ತಾತ್ಕಾಲಿಕ ಸತ್ಯಗಳಿಗೆ ಜೋತುಬೀಳುತ್ತಾರೆ. ಅಲ್ಲಿ ಹೇಳಲಾದದ್ದನ್ನು ಚಾಚೂತಪ್ಪದೇ ಧರ್ಮಾನುಯಾಯಿಗಳು ಅನುಸರಿಸಬೇಕೆಂದು ನಿರೀಕ್ಷಿಸುತ್ತಾರೆ. ಯಾವುದೇ ಸಮಾಜ ನಿಂತ ನೀರಲ್ಲ. ಅದು ನಿರಂತರ ಹರಿಯುವ ನದಿ. ಬದಲಾವಣೆ ಅದರ ಸಹಜ ಸ್ವಭಾವ. ಸಮಾಜ ಬದಲಾದಂತೆ ಧರ್ಮಗ್ರಂಥಗಳು ಅಥವಾ ಧಾರ್ಮಿಕ ವಿಧಿವಿಧಾನಗಳನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶವನ್ನು ಮತೀಯವಾದಿಗಳು ನೀಡುವುದಿಲ್ಲವಾದ್ದರಿಂದ ಎಂದೋ ಹೇಳಿದ ತತ್ವಗಳು ಇಂದಿನ ಕಾಲಕ್ಕೆ ಅಸಂಬದ್ಧವಾಗಿ ಸಾಮಾಜಿಕ ಸಂಘರ್ಷಗಳಿಗೆ ಎಡೆಮಾಡಿಕೊಡುತ್ತವೆ.
ಧರ್ಮಭಕ್ತಿ ಮತ್ತು ರಾಷ್ಟ್ರಭಕ್ತಿ
ಇನ್ನು ರಾಷ್ಟ್ರಭಕ್ತಿಯೊಂದಿಗೆ ಧರ್ಮಭಕ್ತಿಯ ಮಿಶ್ರಣವನ್ನು ನೋಡೋಣ. ರಾಷ್ಟ್ರಭಕ್ತಿ ಎಂದರೆ ಏನು ಎಂಬುದಕ್ಕೆ ಜಗತ್ಪ್ರಸಿದ್ಧ ನಾಟಕಕಾರ ಬರ್ನಾಲ್ಡ ಶಾ, `ತಾನು ಹುಟ್ಟಿದ್ದೇನೆ ಎಂಬ ಒಂದೇ ಕಾರಣಕ್ಕೆ ತನ್ನ ದೇಶವನ್ನು ಉಳಿದೆಲ್ಲ ದೇಶಗಳಿಗಿಂದ ಶ್ರೇಷ್ಠವಾದದ್ದು ಎಂದು ಭಾವಿಸುವುದೇ ರಾಷ್ಟ್ರಭಕ್ತಿಎಂದು ಹೇಳುತ್ತಿದ್ದನಂತೆ. ಅವನು ತಮಾಸೆಗೆ ಹೇಳಿರಬಹುದಾದ ಮಾತು ಕೇವಲ ತಮಾಸೆ ಅನ್ನಿಸುವುದಿಲ್ಲ ಎಂಬುದನ್ನು ನಾವು ಗಮನಿಸಿಬೇಕು. ಭೌತಿಕವಾಗಿ ನಾವು ಹುಟ್ಟಿದ ರಾಷ್ಟ್ರದ ಸಂವಿಧಾನದ ಆಶಯಗಳನ್ನು ಹೃತ್ಪೂರ್ವಕವಾಗಿ ಒಪ್ಪಿಕೊಂಡು ಅದು ವಿಧಿಸುವ ವಿಧಿನಿಷೇಧಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬದುಕುವ ಕ್ರಮವನ್ನು ರಾಷ್ಟ್ರಭಕ್ತಿ ಎನ್ನಬಹುದು ಎಂಬುದನ್ನು ನಾವೀಗಾಗಲೇ ನೋಡಿದ್ದೇವೆ. `ಧರ್ಮಭಕ್ತಿ ಎಂದರೆ ನಾವು ಇಷ್ಟಪಡುವ ಯಾವುದೋ ಒಂದು ಧರ್ಮವನ್ನು ಒಪ್ಪಿಕೊಂಡು ಶ್ರದ್ಧೆಯಿಂದ ಅದರ ತತ್ವಗಳಂತೆ ನಮ್ಮ ವೈಯಕ್ತಿಕ ಜೀವನವನ್ನು ನಡೆಸುವ ಒಂದು ಕ್ರಮ. ಧರ್ಮಪ್ರೇಮಿಯೊಬ್ಬನ ಪವಿತ್ರಗ್ರಂಥ ಅವನ ಧರ್ಮಗ್ರಂಥವಾಗಿರಬಹುದು. ಆದರೆ ರಾಷ್ಟ್ರಪ್ರೇಮಿಯೊಬ್ಬನ ಪವಿತ್ರ ಗ್ರಂಥ ಎಂದರೆ ಅದು ದೇಶದ ಸಂವಿಧಾನವೇ ಹೊರತು ಯಾವುದೋ ಧರ್ಮಗ್ರಂಥವಲ್ಲ. ತನ್ನ ಧರ್ಮಗ್ರಂಥ ಹೇಳುವಂತೆ ಶ್ರದ್ಧೆಯಿಂದ ಬದುಕುವವನ ಭಕ್ತಿ `ಧರ್ಮಭಕ್ತಿಯೇ ಹೊರತು ದೇಶಭಕ್ತಿ ಎನಿಸುವುದಿಲ್ಲ. ನಾವು ಯಾವುದೇ ಧರ್ಮದ ಅನುಯಾಯಿಯಾಗಿದ್ದರೂ ಅಷ್ಟೇ ಏಕೆ ಯಾವ ಧರ್ಮದ ಅನುಯಾಯಿಯಾಗಿರದಿದ್ದರೂ ದೇಶಪ್ರೇಮಿಯಾಗಿರಲು ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಭಾರತದಂತಹ ದೇಶದಲ್ಲಿ ನಡೆಯುವ ಜನಾಂಗೀಯ ಕಲಹಗಳಲ್ಲಿ ಯುವಕರು ಅತ್ಯಂತ ಉತ್ಸಾಹದಿಂದ ಭಾಗವಹಿಸುವಂತೆ ಮಾಡುತ್ತಿರುವ ಪ್ರಮುಖ ಕಾರಣವೆಂದರೆ `ರಾಷ್ಟ್ರಭಕ್ತಿಎಂಬುದನ್ನು ತಪ್ಪಾಗಿ ವ್ಯಾಖ್ಯಾನ ಮಾಡುತ್ತಿರುವುದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅದನ್ನು ಧರ್ಮಭಕ್ತಿಯೊಂದಿಗೆ ಸೇರಿಸಿ ಗೊಂದಲವನ್ನುಂಟುಮಾಡುತ್ತಿರುವುದು. ಭಾರತವು ಹಲವು ಧರ್ಮಗಳ ತೊಟ್ಟಿಲು. ತೊಟ್ಟಿಲು ಒಂದೇ ಧರ್ಮದ ಕೂಸುಗಳನ್ನು ತೂಗಿ ಬೆಳಸಿಲ್ಲ. ಹತ್ತು ಹಲವು ಧರ್ಮಗಳ ಮಕ್ಕಳನ್ನು ಬೆಳಸಿದೆ. ನಮ್ಮ ತರುಣರು ರಾಜಕೀಯ, ಸಾಮಾಜಿಕ ಸನ್ನಿವೇಶಗಳನ್ನು ಪ್ರತಿಕ್ರಿಯೆ ನೀಡುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರಿಗೆ ಧರ್ಮಭಕ್ತಿ ಮತ್ತು ರಾಷ್ಟ್ರಭಕ್ತಿ ಇವುಗಳ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ತಿಳಿದಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಅನೇಕ ಸಾರಿ ಧರ್ಮಭಕ್ತಿಯನ್ನೇ ರಾಷ್ಟ್ರಭಕ್ತಿಯಾಗಿ, ರಾಷ್ಟ್ರಭಕ್ತಿಯನ್ನು ಧರ್ಮಭಕ್ತಿಯಾಗಿ ಅರ್ಥೈಸಿಕೊಂಡು ಗೊಂದಲಕ್ಕೀಡಾಗುತ್ತಾರೆ. ಬಗ್ಗೆ ಅವರಿಗೆ ಒಂದು ಸ್ಪಷ್ಟತೆ ಇರಬೇಕಾದದ್ದು ಅಪೇಕ್ಷಣೀಯ.
ಇನ್ನು ಹತ್ತು ಹಲವು ವೇಳೆ ದೇಶಭಕ್ತಿಯ ಹೆಸರಿನಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಕೆಲವು ಧರ್ಮದ ಆಚರಣೆಗಳನ್ನು ವಿಜೃಂಭಿಸುವುದನ್ನು ಕಾಣುತ್ತೇವೆ. ತಮ್ಮ ಧರ್ಮದ ತತ್ವಗಳನ್ನು ವಿರೋಧಿಸುವವರನ್ನು `ದೇಶದ್ರೋಹಿಗಳೆಂದು ಕೂಗಾಡುವುದನ್ನು ನಾವು ನಿತ್ಯ ಕಾಣುತ್ತೇವೆ. ಧರ್ಮದ ತತ್ವಗಳನ್ನು ವಿರೋಧಿಸುವವನನ್ನು `ಧರ್ಮದ್ರೋಹಿಎಂದು ಕರೆಯಬಹುದೇ ಹೊರತು `ದೇಶದ್ರೋಹಿಎಂದಲ್ಲ. ದೇಶದ ಸಂವಿಧಾನವನ್ನು ವಿರೋಧಿಸುವವನು ಅದನ್ನು ಅಗೌರವಿಸುವವನು ಅವನು ಧಾರ್ಮಿಕವಾಗಿ ಎಷ್ಟೇ ಶ್ರದ್ಧಾವಂತನಾಗಿದ್ದರೂ ಸ್ಪಷ್ಟವಾಗಿ `ದೇಶದ್ರೋಹಿಯಾಗಿರುತ್ತಾನೆ.
ಮತೀಯವಾದವನ್ನು ಪ್ರತಿಭಟಿಸಲು ಬೆಳೆದ ವಿಚಾರವಾದ
ವಿಚಾರವಾದ ಎಂದರೆ ಏನು ಎಂಬುದನ್ನು ಈಗಾಗಲೇ ವ್ಯಾಖ್ಯೆರೂಪದಲ್ಲಿ ನಾವು ನೋಡಿದ್ದೇವೆ. `ವಿಚಾರವಾದಅಥವಾ `ವೈಚಾರಿಕತೆಬಹುತೇಕ ಹದಿನೆಂಟನೆಯ ಶತಮಾನದಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಆರಂಭವಾದ enlightenment ಚಳವಳಿಯಿಂದ ಪ್ರೇರೇಪಿತವಾಗಿ ಹುಟ್ಟಿಕೊಂಡ ಪರಿಕಲ್ಪನೆ. ಡೆನಿಸ್ ಡೆಡಿರಾಟ್, ಯುರೋಪಿನಲ್ಲಿ ಬುದ್ಧಿಜೀವಿ ಚಳವಳಿಯ ಮುಂಚೂಣಿಯಲ್ಲಿದ್ದರೆ ಅಮೇರಿಕಾದಲ್ಲಿ ಚಳವಳಿಯ ನೇತೃತ್ವವನ್ನು ವಹಿಸಿದವನು ಥಾಮಸ್ ಪೇಯಿನ್. ದೇವರು ಧರ್ಮಗಳ ಹೆಸರಿನಲ್ಲಿ ಜನರನ್ನು ಅಜ್ಞಾನದಲ್ಲಿಟ್ಟು ತಮ್ಮ ಸ್ವಾರ್ಥಸಾಧನೆ ಮಾಡಿಕೊಳ್ಳುತ್ತಿದ್ದ ಪಟ್ಟಭದ್ರರ ವಿರುದ್ಧವಾಗಿ ಜನರಲ್ಲಿ ವೈಚಾರಿಕತೆಯ ಮೂಲಕ ಸ್ವತಂತ್ರ ಆಲೋಚನಾಶಕ್ತಿಯನ್ನು ಬೆಳಸುವುದು ಇದರ ಮುಖ್ಯ ಗುರಿಯಾಗಿತ್ತು. ಕಾಲದಲ್ಲಿ ಪ್ರಕಟಗೊಂಡ `ಸಾಮಾನ್ಯ ಜ್ಞಾನ’, `ಮಾನವ ಹಕ್ಕುಗಳು’ `ವೈಚಾರಿಕಯುಗ’ `ಮೊಸೆಸ್ನ ಕೆಲವು ತಪ್ಪುಗಳು’ `ದೇವರು ದೆವ್ವಗಳು ಮೂಡನಂಭಿಕೆಗಳು’ `ನಂಬಿಕೆಯ ಕೆಲವು ತಳಹದಿಗಳು’ `ಧರ್ಮ ಅಂದರೇನು?’ ಮುಂತಾದ ಪುಸ್ತಕಗಳು ಚಳವಳಿಯನ್ನು ಪ್ರಪಂಚದ ಬಹಳಷ್ಟ್ರು ರಾಷ್ಟ್ರಗಳಿಗೆ ಹರಡಿದವು.
ಚಳವಳಿಯ ಮುಂದುವರಿಕೆಯ ಭಾಗವಾಗಿಯೇ ಕನ್ನಡದಲ್ಲಿಯೂ ವೈಚಾರಿಕ ಚಳವಳಿ ಆರಂಭವಾಗಿ ಬೆಳೆದುಬಂದಿದೆ. ನಮ್ಮ ನಾಡಿನ ನೂರಾರು ಚಿಂತಕರು ತಮ್ಮ ಕೃತಿಗಳ ಮೂಲಕ ಜನರ ಆಲೋಚನಾಶಕ್ತಿಯನ್ನು ಬೆಳೆಸುವ ಕೆಲಸವನ್ನು ಮಾಡಿದ್ದಾರೆ. ಕನ್ನಡದ ಹೊರಗಿನ ಚಿಂತಕರಾದ ಎಂ.ಎನ್. ರಾಯ್, ಲೋಹಿಯಾ, ಅಬ್ರಹಾಂ ಟಿ. ಕೋವೂರ್, ಅಂಬೇಡ್ಕರ್, ನಾರಾಯಣಗುರು, ಅವರ ಬದುಕು-ಬರಹಗಳು ನಾಡಿನ ವೈಚಾರಿಕತೆಯನ್ನು ಬೆಳೆಸುವಲ್ಲಿ ಮಾಡಿದ ಪ್ರಭಾವವೂ ಚಿಕ್ಕದಲ್ಲ. ಆದರೆ ನಮ್ಮಲ್ಲಿ ವೈಚಾರಿಕತೆಯನ್ನು ಬಹಳಷ್ಟು ಜನ ತಪ್ಪಾಗಿ ಅರ್ಥೈಸುತ್ತಿದ್ದಾರೆ ಅನ್ನಿಸುತ್ತಿದೆ. ಏಕೆಂದರೆ ವಿಚಾರವಾದವೆಂದರೆ ದೇವರು ಧರ್ಮಗಳನ್ನು ವಿರೋಧಿಸುವುದು, ವಿಚಾರವಾದಿ ಎಂದರೆ ದೇವರು ಧರ್ಮಗಳನ್ನು ವಿರೋಧಿಸುವವರು ಎಂದು ತಿಳಿದುಕೊಂಡವರೇ ಹೆಚ್ಚು. ಇದಕ್ಕೆ ಬಹುಮುಖ್ಯವಾದ ಕಾರಣ ವಿಚಾರವಾದ ಎಂಬುದು ನಾಸ್ತಿಕವಾದಕ್ಕೆ ಹತ್ತಿರವಾಗಿ ಚರ್ಚೆಗೊಳಗಾಗುತ್ತಿರುವುದೇ ಆಗಿದೆ. ಏಕೆಂದರೆ ದೇವರು ಧರ್ಮ ಇತ್ಯಾದಿಗಳನ್ನು ವಿರೋಧಿಸುವವನನ್ನು `ವಿಚಾರವಾದಿಎಂದು ಕರೆಯುವಲ್ಲಿ ನಾವು ಹಿಂದೆಮುಂದೆ ನೋಡುವುದಿಲ್ಲ. ಆದರೆ ದೇವರು ಧರ್ಮಗಳನ್ನು ನಂಬಿಕೊಂಡೂ `ವಿಚಾರವಾದಿಆಗಿರಲು ಸಾಧ್ಯವೆಂಬುದನ್ನು ನಾವು ಸಹಜವಾಗಿ ಸ್ವೀಕರಿಸುವುದಿಲ್ಲ. ವಾಸ್ತವವಾಗಿ ವೈಚಾರಿಕತೆ ಎಂಬುದು ಕೇವಲ ನಾಸ್ತಿಕವಾದವನ್ನು ಮಾತ್ರ ಪ್ರತಿಪಾದಿಸುವುದಿಲ್ಲ. `ಆಸ್ತಿಕಅಥವಾನಾಸ್ತಿಕಎರಡೂ ಆಲೋಚನಾ ಕ್ರಮದವರೂ ವಿಚಾರವಾದಿಗಳಾಗಿರಲು ಸಾಧ್ಯ.
ಭೌತಿಕ ಮತ್ತು ದಾರ್ಶನಿಕ ವಿಚಾರವಾದ:
ವಿಚಾರವಾದವನ್ನು ಅದರ ತಾತ್ವಿಕ ಸ್ವರೂಪದ ಮೇಲೆ ಮುಖ್ಯವಾಗಿ `ಭೌತಿಕ ವಿಚಾರವಾದಮತ್ತು `ದಾರ್ಶನಿಕ ವಿಚಾರವಾದಎಂದು ವಿಭಾಗಿಸಬಹುದು. ವಿಜ್ಞಾನದ ಕಾರ್ಯಕಾರಣ ಸಂಬಂಧವನ್ನು ಮಾತ್ರ ಒಪ್ಪಿಕೊಳ್ಳುವ ಆಲೋಚನಾ ಕ್ರಮವನ್ನು ವೈಜ್ಞಾನಿಕ ವಿಚಾರವಾದ ಎನ್ನುವರು. ಆಲೋಚನಾ ಕ್ರಮದವರು ಕೇವಲ ಇಂದ್ರಿಯಗ್ರಾಹ್ಯವಾದದ್ದನ್ನು ಮಾತ್ರ ನಂಬುತ್ತಾರೆ. ವೈಜ್ಞಾನಿಕವಾಗಿ ಸಿದ್ಧಪಡಿಸಿ ತೋರಿಸಲು ಸಾಧ್ಯವಾಗದ್ದನ್ನು ಅವರು ನಂಬುವುದಿಲ್ಲ. ಇದರ ಪ್ರಕಾರ ಪ್ರಪಂಚದಲ್ಲಿ ಯಾವುದೇ ಒಂದು ಘಟನೆ ಸಂಭವಿಸಬೇಕಾದರೆ ಅದಕ್ಕೊಂದು ಕಾರಣ ಇರಲೇಬೇಕು. ಇದನ್ನೇ ತಿರುಗಿಸಿ ಹೇಳುವುದಾದರೆ ಪ್ರಪಂಚಲ್ಲಿನ ಯಾವೊಂದು ಕಾರಣವೂ ಒಂದು ಪರಿಣಾಮದಲ್ಲಿ ಪರ್ಯವಸಾನಗೊಳ್ಳುತ್ತದೆ. ಜಗತ್ ಪ್ರಸಿದ್ಧವಾದ ಡಾರ್ವಿನ್ನನ ವಿಕಾಸವಾದವನ್ನು ಬಗೆಯ ವಿಚಾರವಾದಕ್ಕೆ ಉದಾಹರಣೆ ನೀಡಬಹುದು. ಇಂಥವರಲ್ಲಿ ಬಹುತೇಕರು ನಾಸ್ತಿಕರಾಗಿರುತ್ತಾರೆ. ದೇವರು ಧರ್ಮ ಇಂತಹ ಕೇವಲ `ನಂಬಿಕೆಆಧಾರದ ಮೇಲೆ ಒಪ್ಪಿಕೊಳ್ಳಬೇಕಾದ ಸಂಗತಿಗಳನ್ನು ಇವರು ಸ್ಪಷ್ಟವಾಗಿ ನಿರಾಕರಿಸುತ್ತಾರೆ.
ದಾರ್ಶನಿಕ ವಿಚಾರವಾದ ಎನ್ನುವುದು ಭೌತಿಕ ವಿಚಾರವಾದಕ್ಕಿಂತ ತುಸು ಭಿನ್ನವಾದದ್ದು. ಇದು `ವಿಜ್ಞಾನಕ್ಕಿಂತ `ದರ್ಶನವನ್ನು ಅವಲಂಬಿಸಿರುತ್ತದೆ. `ದರ್ಶನದಲ್ಲಿ ವಿಜ್ಞಾನದ ಇಂದ್ರಿಯಗ್ರಾಹ್ಯ ಅನುಭವದ ಜೊತೆಗೆ ಇಂದ್ರಿಯಗ್ರಾಹ್ಯ ಅನುಭವದಾಚೆಗೂ ಮನುಷ್ಯನಿಗೆ ನಿಲುಕುವ ಅತೀಂದ್ರಿಯ ಅನುಭವವನ್ನೂ ಇದು ಸ್ವೀಕರಿಸುತ್ತದೆ. ಹಾಗಾಗಿ ಕನಸುಗಳಲ್ಲಿ ಮುಂದೆ ನಡೆಯುವ ಘಟನೆಯ ಮುನ್ಸೂಚನೆ ತಿಳಿಯುವುದು. ಇದ್ದಕ್ಕಿದ್ದಂತೆ ಸಮಸ್ಯೆಯೊಂದಕ್ಕೆ ಪರಿಹಾರ ಹೊಳೆಯುವುದು, ಮುಂದಾಗುವ ಘಟನೆಗಳನ್ನು ಪ್ರಕೃತಿಯ ಯಾವುದ್ಯಾವುದೋ ಸಂಗತಿಗಳು ಪರೋಕ್ಷವಾಗಿ ನಮ್ಮ ಅನುಭವಕ್ಕೆ ತರುವುದು ಇತ್ಯಾದಿಗಳನ್ನು ವಿಚಾರವಾದವು ಸಾರಾಸಗಟಾಗಿ `ಮೂಢನಂಬಿಕೆಗಳುಎಂದು ತಳ್ಳಿಹಾಕುವುದಿಲ್ಲ. ಬಗೆಯ ವಿಚಾರವಾದಿಗಳಲ್ಲಿ ಬಹುತೇಕರು ದೇವರು ಧರ್ಮಗಳನ್ನು ಒಪ್ಪಿಕೊಂಡವರಾಗಿರುತ್ತಾರೆ. (ಹಾಗಂತ ದೇವರು ಮತ್ತು ಧರ್ಮಗಳ ಹೆಸರಲ್ಲಿ ನಡೆಯುವ ಕಂದಾಚಾರ, ವಂಚನೆ ಇತ್ಯಾದಿಗಳನ್ನು ಬೆಂಬಲಿಸುವವರಾಗಿರುತ್ತಾರೆ ಎಂದಲ್ಲ). ಕುವೆಂಪು ಅಂತಹವರನ್ನು ಬಗೆಯ ದಾರ್ಶನಿಕ ವಿಚಾರವಾದಿಗಳಿಗೆ ಉದಾಹರಿಸಬಹುದಾಗಿದೆ. ದಾರ್ಶನಿಕ ವಿಚಾರವಾದವಿರಲಿ ಭೌತಿಕ ವಿಚಾರವಾದವಿರಲಿ ಅವೆರಡರಲ್ಲಿ `ವಿಚಾರಎಂಬುದು ಕಡ್ಡಾಯವಾಗಿ ಇದೆ ಎಂಬುದನ್ನು ಮಾತ್ರ ನಾವು ಕಡ್ಡಾಯವಾಗಿ ಗಮನಿಸಬೇಕು. ವಿಚಾರವಾದ ಎಂಬುದು ದೇವರು ಧರ್ಮಗಳನ್ನೇ ವಿರೋಧಿಸುವುದಿಲ್ಲ. ಅವುಗಳ ಹೆಸರಿನಲ್ಲಿ ನಡೆಯುವ ಕಂದಾಚಾರ, ಮೌಢ್ಯಬಿತ್ತನೆ, ಶೋಷಣೆ ಇತ್ಯಾದಿಗಳನ್ನು ವಿರೋಧಿಸುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.
ಮೂಲಭೂತವಾದ, ಕೋಮುವಾದ ಮತ್ತು ವಿಚಾರವಾದಗಳ ತಾಕಲಾಟ
ಮತೀಯವಾದ ಮತ್ತು ವಿಚಾರವಾದ ಇವುಗಳ ನಡುವಿನ ತಾಕಲಾಟ ಇಂದು ನಿನ್ನೆಯದಲ್ಲ. ಬಹುಶಃ ವಿಚಾರವಾದದ ಹುಟ್ಟಿನೊಂದಿಗೇ ತಾಕಲಾಟ ಆರಂಭವಾಗಿದೆ. ಅದುವರೆಗೂ ಜನರನ್ನು ಅಜ್ಞಾನದಲ್ಲಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದವರಿಗೆಲ್ಲ ವಿಚಾರವಾದ ಹೊತ್ತಿಸಿದ ಅರಿವಿನ ಕಿಡಿ ತಮ್ಮ ಅಸ್ತಿತ್ವದ ಆಸನಕ್ಕೆ ಉರಿಯಾಗಿ ಕಾಡತೊಡಗಿದೆ. ಕಾರಣದಿಂದ `ಮೂಲಭೂತವಾದಿಮತ್ತು `ಕೋಮುವಾದಿಇಬ್ಬರೂ `ವಿಚಾರವಾದಿಯೊಬ್ಬನನ್ನು ತನ್ನ ಶತ್ರುವನ್ನಾಗಿ ಸ್ವೀಕರಿಸಿದ್ದಾರೆ. ಇದಕ್ಕೆ ಮುಖ್ಯವಾದ ಕಾರಣ ಅವರಿಬ್ಬರೂ ತಮ್ಮ ಧರ್ಮವೇ ಶ್ರೇಷ್ಠವೆಂಬ ವ್ಯಸನಕ್ಕೆ ಒಳಗಾಗಿರುತ್ತಾರೆ. ಅವರಿಬ್ಬರೂ ತಮ್ಮ ಧರ್ಮವನ್ನು ಅನುಸರಿಸುವವರು `ವಿಚಾರಮಾಡದೆ ಧರ್ಮದಲ್ಲಿ ಹೇಳಿದ್ದನ್ನು ಶ್ರದ್ಧೆಯಿಂದ ಅನುಸರಿಸಬೇಕು ಎಂದು ನಿರೀಕ್ಷಿಸುತ್ತಾರೆ. ವಿಚಾರವಾದಿಯೊಬ್ಬ ಪ್ರಶ್ನೆಮಾಡುವುದನ್ನು ಅವರು ಸಹಿಸಲಾರರು. ಹಾಗಾಗಿ ಅವನು ಅವರಿಗೆ ಧರ್ಮವಿರೋಧಿಯಾಗಿ ಕಂಡುಬರುತ್ತಾನೆ. ಆಮೂಲಕ ಅವರ ಶತ್ರುವಾಗುತ್ತಾನೆ. ಅವರ ಕಡೆಯವನೆಂದು ಇವರ ಕಡೆಯವರು ಇವರ ಕಡೆಯವನೆಂದ ಅವರ ಕಡೆಯುವರು ಅವನನ್ನು ವಿರೋಧಿಸುತ್ತಾರೆ! ವಾಸ್ತವವಾಗಿ ಅವನೂ ಯಾವ ಕಡೆಯವನೂ ಆಗಿರುವುದಿಲ್ಲ! `ಶ್ರದ್ಧೆಧರ್ಮದ ಶಕ್ತಿಯಾದರೆ, `ಪ್ರಶ್ನೆವೈಚಾರಿಕತೆಯ ಶಕ್ತಿ.
ವಿಚಾರವಾದಿಯ ಬಗ್ಗೆ ಮತೀಯವಾದಿಗಳ ಅಭಿಪ್ರಾಯ ಇಂತಾದರೆ ಇವರ ಬಗ್ಗೆ ವಿಚಾರವಾದಿಯ ಅಭಿಪ್ರಾಯ ಇನ್ನೊಂದು ರೀತಿಯಲ್ಲಿ ಇರುತ್ತದೆ. ಅವನಿಗೆ ಇವೆರಡೂ ಭಾರತದಂತಹ ಬಹುಸಂಸ್ಕೃತಿಯ ಜೀವನಕ್ರಮವನ್ನು ಅಳವಡಿಸಿಕೊಂಡಿರುವ ದೇಶದಲ್ಲಿ ಅಪಾಯಕಾರಿಯಾಗಿ ಕಂಡುಬರುತ್ತವೆ. ಅವನು ಮೂಲಭೂತವಾದ ಮತ್ತು ಕೋಮುವಾದ ಎರಡನ್ನೂ ವಿರೋಧಿಸುತ್ತಾನೆಯಾದರೂ ಅವನ ಅವುಗಳಲ್ಲಿಯೇ ಕೋಮುವಾದವನ್ನು ಹೆಚ್ಚು ಅಪಾಯಕಾರಿ ಎಂದು ಅವನು ಮೊದಲು ವಿವರಿಸಲಾದ ಕಾರಣಗಳಿಂದಾಗಿ ಗ್ರಹಿಸುವುದರಿಂದ ಅದರ ಬಗ್ಗೆ ಹೆಚ್ಚು ಮಾತನಾಡುತ್ತಾನೆ ಮತ್ತು ಪ್ರತಿಕ್ರಿಯಿಸುತ್ತಾನೆ. ಇದೇ ಕಾರಣಕ್ಕೆ ಮೂಲಭೂತವಾದಿಗಳಿಗಿಂತ ಕೋಮವಾದಿಗಳ ಕೋಪಕ್ಕೆ ಹೆಚ್ಚು ಗುರಿಯಾಗುತ್ತಾನೆ. ಕೆಲವುವೇಳೆ ಬಲಿಯೂ ಆಗುತ್ತಾನೆ. ವಿಚಾರವಾದಿಯೊಬ್ಬ ತನಗೆ ಅನ್ನಿಸಿದ್ದನ್ನು ಬಹಿರಂಗವಾಗಿ ಹೇಳುತ್ತಾನೆ. ಅದನ್ನು ಒಪ್ಪುವುದು ಬಿಡುವುದು ಬೇರೆ ಸಂಗತಿ. ಆದರೆ ಮಾತನ್ನು ಅವನು ಹೇಳಲೇಕೂಡದು ಎಂದು ಅವನ ಬಾಯಿ ಮುಚ್ಚಲು ಹೋಗುವುದು ಸರಿಯಾದ ಕ್ರಮವಲ್ಲ.
ಬೆಳಕಿಗೆ ಮರುಳಾಗಿ ಬೆಂಕಿಗೆ ಬೀಳುತ್ತಿರುವ ಯುವಸಮೂಹ:
ಮೂಲಭೂತವಾದ ಮತ್ತು ಕೋಮುವಾದಗಳು ಬಳಸಿಕೊಳ್ಳುವ ಜನಸಮೂಹ ಮತ್ತು ಆಯುಧಗಳ ಕಡೆ ಗಮನಹರಿಸಿದರೆ ಒಂದು ಅಂಶ ಮನದಟ್ಟಾಗುತ್ತದೆ. ಮೊದಲು ಜನಸಮೂಹವನ್ನು ನೋಡುವುದಾದರೆ ಇವೆರಡೂ ಬಳಸಿಕೊಳ್ಳುವುದು ಬಹುತೇಕವಾಗಿ ಹೆಚ್ಚು ಔಪಚಾರಿಕ ಶಿಕ್ಷಣವನ್ನು ಪಡೆಯದೇ ಮಧ್ಯಭಾಗದಲ್ಲಿ ಶಾಲೆಬಿಟ್ಟ ಯುವಸಮೂಹವನ್ನು. ಬೆಳಕಿಗೆ ಆಕರ್ಷಿತಗೊಂಡು ಬೆಂಕಿಯ ಪರಿಣಾಮವನ್ನು ಅರಿಯದೇ ದೀಪವೊಂದರ ಕಡೆಗೆ ನುಗ್ಗಿ ತಮ್ಮ ಜೀವವನ್ನೇ ಕಳೆದುಕೊಳ್ಳುವ ಪತಂಗಗಳಂತೆ ಇಂದು ದೊಡ್ಡಪ್ರಮಾಣದಲ್ಲಿ ಮೂಲಭೂತವಾದ ಮತ್ತು ಕೋಮುವಾದದ ಕಡೆಗೆ ನುಗ್ಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿರುವ ಬಹುದೊಡ್ಡ ಸಮೂಹ ಇದೇ ಆಗಿದೆ. ಕಾಲೇಜು ಶಿಕ್ಷಣ ಪಡೆದವರು ಮೂಲಭೂತವಾದಿಗಳು ಅಥವಾ ಕೋಮುವಾದಿಗಳು ಆಗಿಲ್ಲ ಎಂಬುದು ಇದರ ಅರ್ಥವಲ್ಲ; ಆದರೆ ಅವರ ಪ್ರಮಾಣ ಕಡಿಮೆ ಎಂಬುದನ್ನು ಗಮನಿಸಬೇಕು. ನಮ್ಮ ಔಪಚಾರಿಕ ಶಿಕ್ಷಣವು ತನ್ನ ಅನೇಕ ಗೊಂದಲು ಎಡರು ತೊಡರುಗಳ ನಡುವೆಯೂ ಒಂದಿಷ್ಟಾದರೂ ಆಲೋಚನಾ ಶಕ್ತಿಯನ್ನು ಬೆಳಸಿರುವುದು ಇದಕ್ಕೆ ಕಾರಣ.
ಇನ್ನು ಮತೀಯ ಕಲಹಗಳ ಸಂದರ್ಭಗಳಲ್ಲಿ ಮತೀಯವಾದಗಳೆರಡೂ ಬಳಸುವ ಆಯುಧಗಳನ್ನು ನೋಡುವುದಾದರೆ ಸಾಮಾನ್ಯವಾಗಿ ಕೋಮುವಾದಿಗಳು ದೊಣ್ಣೆ, ಸರಳು, ಶೂಲ ಇತ್ಯಾದಿ ಶಸ್ತ್ರಗಳನ್ನು ಹೆಚ್ಚು ಬಳಸುತ್ತಾರೆ. ಶಸ್ತ್ರಗಳು ಒಂದು ಬಳಕೆಗೆ ಒಬ್ಬರು ಅಥವಾ ಇಬ್ಬರನ್ನು ಬಲಿತೆಗೆದುಕೊಳ್ಳುವಂಥವು. ಆದರೆ ಮೂಲಭೂತವಾದಿಗಳು ಶಸ್ತ್ರಗಳಿಗಿಂತ ಏಕಕಾಲಕ್ಕೆ ನೂರಾರು ಜನರನ್ನು ಬಲಿತೆಗೆದುಕೊಳ್ಳುವಂತಹ ಬಾಂಬುಗಳಂತಹ ಅಸ್ತ್ರಗಳ ಮೊರೆಹೋಗುತ್ತಾರೆ. ಇದಕ್ಕೆ ಕೂಡ ಒಂದು ತಾತ್ವಿಕತೆ ಇದೆ. ಕೋಮುವಾದಿಗಳು ಬಹುಸಂಖ್ಯಾತರಾಗಿರುವುದರಿಂದ `ನಾವು ಒಬ್ಬೊಬ್ಬರು ಒಬ್ಬೊಬ್ಬರನ್ನು ಹೊಡೆದರೂ ಸಾಕು ಅವರನ್ನು ನಿರ್ನಾಮ ಮಾಡುತ್ತೇವೆಎಂಬ ಧೈರ್ಯ ಅವರಿಗೆ ಇರುತ್ತದೆ. ಹಾಗಾಗಿ ಅವರಿಗೆ ದೊಣ್ಣೆ, ಬಡಿಗೆ ಇತ್ಯಾದಿಗಳೇ ಸಾಕು ಎನ್ನಿಸುತ್ತದೆ. ಆದರೆ ಮೂಲಭೂತವಾದಿಗಳು ಅಲ್ಪಜನರಿರುವುದರಿಂದ ಅವರು ದೊಣ್ಣೆ, ಬಡಿಗೆಗಳ ಮೂಲಕ ಕೋಮುವಾದಿಗಳನ್ನು ನೇರವಾಗಿ ಎದುರಿಸಲು ಸಾಧ್ಯವಾಗುವುದಿಲ್ಲ. ಸಾವಿರಾರು ಜನರನ್ನು ಒಮ್ಮೆಲೆ ಬಲಿತೆಗೆದುಕೊಳ್ಳಲು ಏನು ಮಾಡಬಹುದು ಎಂದು ಅವರ ಮನಸ್ಸು ಯೋಚಿಸತೊಡಗುತ್ತದೆ. ಯೋಚನೆಯ ಫಲವಾಗಿಯೇ ಅವರು ಬಾಂಬುಗಳಂತಹ ಬಹು ವಿಸ್ತ್ರೃತ ವಿನಾಶವನ್ನುಂಟುಮಾಡುವ ಸಾಧನಗಳ ಮೊರೆಹೋಗುತ್ತಾರೆ!
ಮತೀಯವಾದಿಗಳು ತಮ್ಮ ಮತಧರ್ಮಗಳ ಬಗ್ಗೆ `ಶ್ರದ್ಧಾವಂತರಾಗಿರುವುದರ ಬಗ್ಗೆ ಸಂಶಯಗಳಿರಬಹುದು. ಆದರೆ ಅವರು `ವಿಚಾರಶೂನ್ಯರಾಗಿರುತ್ತಾರೆ ಎಂಬುದರ ಬಗ್ಗೆ ಸಂಶಯಗಳಿಲ್ಲ. ವಿಚಾರವಾದಿಗಳು ಎತ್ತುವ ಪ್ರಶ್ನೆಗಳಿಗೆ ಉತ್ತರ ಕೊಡುವ ಶಕ್ತಿ ಅವರಲ್ಲಿ ಇರುವುದಿಲ್ಲ. ಯಾರಿಗೆ ವಿಚಾರವನ್ನು ವಿಚಾರವನ್ನು ಎದುರಿಸಲು ಆಗುವುದಿಲ್ಲವೋ ಅವರು ಅನಿವಾರ್ಯವಾಗಿ ಆಯುಧಗಳ ಮೊರೆಹೋಗುತ್ತಾರೆ. ಕಾನೂನನ್ನು ಕೈಗೆ ತೆಗೆದುಕೊಂಡು ಹತ್ಯೆ, ಕೊಲೆ ಇತ್ಯಾದಿಗಳನ್ನು ಮಾಡಲು ಮುಂದಾಗುತ್ತಾರೆ. ಕೊನೆಗೊಮ್ಮೆ ಸಿಕ್ಕಿಹಾಕಿಕೊಂಡು ತಮ್ಮ ಬದುಕನ್ನೇ ಬರಡುಗೊಳಿಸಿಕೊಳ್ಳುತ್ತಾರೆ. ಅವರಲ್ಲಿ ಕೆಲವರಿಗೆ `ತಾವು ಹಾಗೆ ಮಾಡಬಾರದಿತ್ತುಎಂದು ಕೊನೆಯ ಗಳಿಗೆಯಲ್ಲಿ ಅನ್ನಿಸುವುದುಂಟು. ಆದರೆ ಕಾಲ ಮಿಂಚಿಹೋಗಿರುತ್ತದೆ. ಆದರೆ ಹಂತದಲ್ಲೂ ಅವರನ್ನು ಅಂತಹ ಕೆಲಸಕ್ಕೆ ತಳ್ಳಿದವರು ಮಾತ್ರ ಅವರ ಕಾರ್ಯವನ್ನು `ದರ್ಮ ರಕ್ಷಣೆಯ ಕಾರ್ಯ’ `ರಾಷ್ಟ್ರಭಕ್ತಿಯ ಕಾರ್ಯಎಂದು ಅವರನ್ನು ಹೊಗಳುತ್ತಲೇ ಮತ್ತಿಷ್ಟ್ರು ಯುವಕರನ್ನು ಅಪಾಯಕಾರಿ ಕೆಲಸಕ್ಕೆ ಪ್ರೇರೇಪಿಸುತ್ತಲೇ ಇರುತ್ತಾರೆ!
ದಾರಿತಪ್ಪುತ್ತಿರುವ ಮಕ್ಕಳು ಮತ್ತು ತಂದೆತಾಯಿಗಳಿಗೆ ಕಿವಿಮಾತು:
ನಮ್ಮ ಯುವಜನತೆ ಹೀಗೆ ದಾರಿತಪ್ಪಿದ ಮಕ್ಕಳಾಗಿ ಸಮಾಜಕಂಟಕರಾಗುತ್ತಿರುವುದಕ್ಕೆ ನಾವ್ಯಾರೂ ಸಂತೋಷಪಡಬಾರದು. ಯಾವ ತಂದೆ ತಾಯಿಯರೂ ತಮ್ಮ ಮಕ್ಕಳು ಧರ್ಮರಕ್ಷಣೆಯ ಹೆಸರಿನಲ್ಲಿ ಕೊಲೆಗಡುಕರಾಗುವಂತೆ ಬೆಳೆಸುವುದಿಲ್ಲ; ಹಾಗಾಗಬೇಕೆಂದು ಬಯಸುವುದಿಲ್ಲ. ಆದರೆ ಅನೇಕ ತಂದೆತಾಯಿಗಳಿಗೆ ಗೊತ್ತಿರುವುದಿಲ್ಲ ನಮ್ಮ ಮಕ್ಕಳನ್ನು ನಮಗರಿವಿಲ್ಲದಂತೆ ಇನ್ಯಾರೋ ತಮಗೆ ಬೇಕಾದ ಹಾಗೆ ಬೆಳೆಸುತ್ತಿರುತ್ತಾರೆ ಎಂಬುದು! ಅಪ್ಪಅಮ್ಮಂದಿರ ಜವಾಬ್ದಾರಿ ಇಲ್ಲಿ ಅತಿ ಮುಖ್ಯವಾದದ್ದು. ಅನೇಕ ಮತೀಯವಾದಿಗಳು ತಮ್ಮ ಮಕ್ಕಳನ್ನು ಒಳ್ಳೆಯ ಶಾಲೆಗಳಿಗೆ ಸೇರಿಸಿ ಒಳ್ಳೆಯ ಶಿಕ್ಷಣ ಸಿಗುವಂತೆ ಮಾಡಿ ಅವರಿಗೆ ಒಳ್ಳೆಯ ಭವಿಷ್ಯ ದೊರೆಯುವಂತೆ ವ್ಯವಸ್ಥೆಮಾಡಿಕೊಂಡು ಬಡವರು, ಕೂಲಿಕಾರ್ಮಿಕರು, ದಲಿತರು ಇಂತಹವರ ಮಕ್ಕಳ ತಲೆಗೆ ಮತಧರ್ಮಗಳ ಕೆಸರು ತುಂಬಿ ಅವರು ಧರ್ಮವನ್ನು ದೆವ್ವದ ರೀತಿ ಮೈಮೇಲೆ ಆವಾಹಿಸಿಕೊಂಡು ಅನ್ಯಧರ್ಮಗಳ ಮೇಲೆ ದ್ವೇಷಕಾರುವ `ಧರ್ಮರಾಕ್ಷಸರಾಗುವಂತೆ ಮಾಡುತ್ತಾರೆ. ತಮ್ಮ ಮಕ್ಕಳು ಇಂತಹವರ ಕೈಗೆ ಸಿಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ತಂದೆ-ತಾಯಿ ಮಾಡಬೇಕಾದ ಬಹುಮುಖ್ಯ ಕಾರ್ಯ. ಒಂದು ಬಾರಿ ತಮ್ಮ ಮಕ್ಕಳು ತಮ್ಮ ಕೈತಪ್ಪಿಹೋದರೆ ಮತ್ತೆ ಅವರು ತಮ್ಮ ಮಕ್ಕಳಾಗಿ ತಮ್ಮ ಕೈಗೆ ಸಿಗುವುದು ಕಷ್ಟ. ತಮ್ಮ ಮಕ್ಕಳ ಕೈಗೆ ಚಿಕ್ಕಂದಿನಿಂದಲೇ ನಾಡಿನ ಹತ್ತು ಹಲವು ಒಳ್ಳೆಯ ಮನಸ್ಸುಗಳು, ಹಿರಿಯ ಚಿಂತಕರು, ಸಾಹಿತಿಗಳು ಬರೆದ ಪುಸ್ತಕಗಳನ್ನು ಕೈಗೆ ಕೊಡಬೇಕು. ಆಗ ಅವರು ಖಂಡಿತಾ ಮುಂದೆ ಕೈಗಳಿಂದ ಮತೀಯವಾದಿಗಳು ಕೊಡುವ `ಗನ್ನುಗಳನ್ನು ಹಿಡಿಯುವುದಿಲ್ಲ.
ನಮ್ಮ ಯುವಕರೂ ಕೂಡ ಯಾವುದ್ಯಾವುದೋ ಪ್ರಭಾವ ಪ್ರೇರಣೆಗಳಿಗೆ ಒಳಗಾಗಿ ತಮ್ಮ ವಿವೇಚನೆಯನ್ನು ಕಳೆದುಕೊಂಡು ಕೀ ಕೊಟ್ಟ ಗೊಂಬೆಗಳಂತೆ ವರ್ತಿಸಬಾರದು. ಅವರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು, ಯಾವ ಧರ್ಮಗಳೂ ಯಾರ ಖಾಸಗೀ ಆಸ್ತಿಗಳೂ ಅಲ್ಲ. ಅವುಗಳ ಬಗ್ಗೆ ಪೂಜ್ಯಭಾವನೆಯನ್ನು ಇಟ್ಟುಕೊಳ್ಳಲು ಕೆಲವರಿಗೆ ಸ್ವಾತಂತ್ರ್ಯವಿದೆ ಎನ್ನುವುದಾದರೆ ಅವುಗಳ ಬಗ್ಗೆ ತ್ಯಾಜ್ಯಭಾವನೆಯನ್ನೂ ಹೊಂದಲು ಅವಕಾಶ ಇದೆ. ಇದನ್ನು ಅರ್ಥಮಾಡಿಕೊಂಡರೆ ಸಮಸ್ಯೆಗಳೇ ಇರುವುದಿಲ್ಲ. ಇನ್ನೂ ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾದ ಸಂಗತಿ ಎಂದರೆ ಯಾವ ಯಾವ ಕ್ರಮಗಳನ್ನು ಇವರು `ಧರ್ಮರಕ್ಷಣೆಗೆಂದೂ ಮಾಡುತ್ತಾ ಹೋಗುತ್ತೀರೋ ಅವೇ ಕ್ರಮಗಳು ಅವರವರ ಧರ್ಮಗಳಿಗೆ `ಕೊಲೆಗಡುಕರ ಧರ್ಮಎಂಬ ಕಳಂಕವನ್ನೂ ತರುತ್ತವೆ. ಅನೇಕ ವೇಳೆ ಅವರು ಮಾಡುವ ಕಾರ್ಯಗಳಿಂದಾಗಿ ಅವರ ಧರ್ಮವು ಉನ್ನತಿಯ ಕಡೆಗೆ ಹೋಗುವ ಬದಲು ಅವನತಿಯ ಕಡೆಗೇ ಹೋಗುತ್ತದೆ. ನಮ್ಮ ಯುವಕರೆಲ್ಲರೂ ಇವನ್ನು ಎಚ್ಚರಿಕೆಯಿಂದ ಗಮನಿಸಬೇಕು.
ಕೊನೆಯ ಮಾತು: ನಮ್ಮ ವೈಯಕ್ತಿಕ ಬದುಕಿಗೆ ಬೆಳಕಾಗಬಲ್ಲ ನಿಜವಾದ `ಧರ್ಮಮತ್ತು ನಮ್ಮ ಕೂಡುಬಾಳುವೆಯ ಅಗತ್ಯವಾದ `ರಾಷ್ಟ್ರಭಕ್ತಿಎರಡೂ ಹಾಲುತುಪ್ಪಗಳು. ನಮ್ಮನ್ನು ವೈಚಾರಿಕವಾಗಿ ಕುಬ್ಜರನ್ನಾಗಿಸುವ `ಮೂಲಭೂತವಾದಮತ್ತು ಅನ್ಯಮತದ್ವೇಷವನ್ನು ಬಿತ್ತಿಬೆಳೆಯುವ `ಕೋಮುವಾದಎರಡನ್ನೂ ಪ್ರತಿನಿಧಿಸುವ `ಮತೀಯವಾದಎಂಬುದು ಹಾಲಾಹಲ. ಹಾಲುತುಪ್ಪದಲ್ಲಿ ಹಾಲಾಹಲವನ್ನು ಬೆರಸಿ ಕುಡಿಸುವ ದುಷ್ಟರ ಬಲೆಗೆ ನಮ್ಮ ಯುವಜನತೆ ಬೀಳುವುದು ಕೇವಲ ಅವರ ಜೀವಕ್ಕೆ ಮಾತ್ರ ಅಪಾಯವಲ್ಲ; ದೇಶದ ಜೀವಕ್ಕೂ ಕೂಡ!!
  • ಡಾ. ರಾಜೇಂದ್ರ ಬುರಡಿಕಟ್ಟಿ

              26-06-2018