Monday, February 27, 2023

ರಾಷ್ಟ್ರೀಯವಿಜ್ಞಾನ ದಿನಕ್ಕೆ ಕುವೆಂಪು ಸಂದೇಶ:


 







ರಾಷ್ಟ್ರೀಯವಿಜ್ಞಾನ ದಿನಕ್ಕೆ ಕುವೆಂಪು ಸಂದೇಶ:

ಸ್ನೇಹಿತರೆ, ಮತ್ತೊಂದು ವಿಜ್ಞಾನದ ದಿನದ ಆಚರಣೆಯ ಹೊಸ್ತಿಲಲ್ಲಿ ನಾವಿದ್ದೇವೆ.  ಸುಮಾರು ನೂರು ವರ್ಷಗಳ ಹಿಂದೆ ನಮ್ಮ ಹೆಮ್ಮೆಯ ರಾಷ್ಟ್ರಕವಿ ಕುವೆಂಪು ಆಡಿದ ಈ ಮಾತುಗಳನ್ನು ಗಮನಿಸಿ. ಇಂದೋ ನಿನ್ನೆಯೋ ಆಡಿದ ಮಾತುಗಳಂತೆ ಇವೆ. ಕುವೆಂಪು ಅವರ ಈ ಮಾತುಗಳು ಅವರ ಒಂದು ಪುಸ್ತಕ ಓದದಿದ್ದರೂ ಅವರ ಭಜನೆಮಾಡುವ ನಮ್ಮ ರಾಜಕಾರಣಿಗಳ ಅದಕ್ಕಿಂತಲೂ ಮುಖ್ಯವಾಗಿ ಶಾಲಾ ಕಾಲೇಜುಗಳ ಮಕ್ಕಳಲ್ಲಿ ವೈಜ್ಞಾನಿಕತೆ ಮತ್ತು ವೈಚಾರಿಕತೆ ಬೆಳೆಸುವ ಗುರುತರ ಜವಾಬ್ದಾರಿ ಹೊತ್ತಿರುವ ವಿವಿಧ ಹಂತದ ಶಿಕ್ಷಕರ ಕಣ್ಣುತೆರೆಸಲಿ. ಮಕ್ಕಳಿಗೆ ತಮ್ಮ ಜ್ಞಾನವನ್ನು ಧಾರೆಯೆರೆಯುವ ಬದಲು ಅಥವಾ ಜೊತೆಗೆ ತಮ್ಮ ಅಜ್ಞಾನ ಮತ್ತು ಮೌಢ್ಯವನ್ನು ಧಾರೆಯೆರೆದು ಅವರನ್ನು ಅಂಧಕಾರದ ಕೂಪಕ್ಕೆ ತಳ್ಳುವ ಪಾಪಕಾರ್ಯದಲ್ಲಿ ಮಗ್ನರಾಗಿರುವ ಶಿಕ್ಷಕರನ್ನು ಅವರ ಪಾಪಕಾರ್ಯದಿಂದ ಬಿಡಿಸಿ ವಿಚಾರವಂತರನ್ನಾಗಿ ಮಾಡಿ ಅವರು ಮಕ್ಕಳಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸುವ ಕಾರ್ಯದಲ್ಲಿ ತೊಡಗುವಂತೆ ಕುವೆಂಪು ಅವರ ಈ ನುಡಿಗಳು ಮಾಡಲಿ… (ರಾಬು, 27-02-2023)

*****

·         “ನಮ್ಮಲ್ಲಿ ಸಂಸ್ಕೃತಿಯ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಧರ್ಮದ ಸೋಗಿನಲ್ಲಿ ಪೂರ್ವಿಕರ ಪ್ರಾಚೀನ ವೈಭವಗಳ ಕರ್ಮಕಾಂಡವನ್ನು ಮತ್ತೆ ಜೀರ್ಣೋದ್ಧಾರ ಮಾಡಿ ಪ್ರತಿಷ್ಠಾಪಿಸುವ ಸ್ವಾರ್ಥತಾ ಮೂಲವಾದ ಕುರುಡು ನೆವದಲ್ಲಿ, ಅವಿವೇಕ ಮೌಢ್ಯಗಳಿಗೆ ವೈಜ್ಙಾನಿಕತೆಯ ಮತ್ತು ವಿಚಾರದ ಚಿನ್ನದ ಮುಲಾಮು ಹಚ್ಚಿ ಜನರನ್ನು ದಿಕ್ಕು ತಪ್ಪಿಸಿ, ವಂಚಿಸುವ ಮಹೋದ್ಯೋಗ ನಿರ್ಲಜ್ಜೆಯಿಂದ ಸಾಗುತ್ತಿರುವುದನ್ನು ದಿನದಿನವೂ ನೋಡುತ್ತಿದ್ದೇವೆ. ಅಂತಹ ಆತ್ಮವಂಚನ ಮತ್ತು ಪರವಂಚನಕರವಾದ ಉದ್ಯೋಗಪ್ರಸಿದ್ಧರೂ ಪ್ರತಿಷ್ಠಿತರೂ ಆದ ಸ್ವಾರ್ಥಸಾಧಕ ವ್ಯಕ್ತಿಗಳಿಂದಲೇ ಪರಿಪೋಷಿತವಾಗುತ್ತಿರುವುದನ್ನು ನೋಡಿದರೆ ಈ ದೇಶದಲ್ಲಿ ವಿಜ್ಞಾನದ ಯಂತ್ರವಿದ್ಯೆಯಿಂದ ಪಂಚವಾರ್ಷಿಕ ಯೋಜನೆಗಳು ಮುಂದುವರೆದರೂ ವೈಜ್ಞಾನಿಕ ದೃಷ್ಟಿಯಾಗಲಿ ವಿಚಾರವಾದವಾಗಲಿ ವಿಜಯ ಪಡೆಯುವ ಕಾಲ ಹತ್ತಿರದಲ್ಲಿ ಎಲ್ಲಿಯೂ ಗೋಚರವಾಗುತ್ತಿಲ್ಲ.”

·         “ವೈಜ್ಞಾನಿಕ ದೃಷ್ಟಿ ಮತ್ತು ವಿಚಾರವಾದಗಳನ್ನು ಬೋಧಿಸಿ, ಪ್ರಚೋದಿಸಿ ಸಾಧಿಸುವ ಕಾರ್ಯ ಯಾವ ಸಂಸ್ಥೆಗಳಿಗೆಡ ಮೀಸಲಾಗಬೇಕೋ ಆ ಸಂಸ್ಥೆಗಳಲ್ಲಿಯೇ ಅದು ಅವಮಾನಿತವಾಗುತ್ತಿರುವುದು ಅತ್ಯಂತ ನಿರಾಶಾಜನಕವಾಗಿದೆ. ವಿಜ್ಞಾನದ ಪಾಠ ಹೇಳಿಕೊಡುವ ಅಧ್ಯಾಪಕನೆ ತನ್ನ ಸ್ವಂತ ಬದುಕಿನಲ್ಲಿ ರಾಹುಕಾಲ ಪಂಚಾಂಗ ವಾರಭವಿಷ್ಯ ಇತ್ಯಾದಿ ಮೂಢ ನಂಬಿಕೆಗಳಿಂದ ಮೂರುಹೊತ್ತೂ ಮತ ಮೂರ್ಖನಾಗಿದ್ದರೆ ವಿದ್ಯಾರ್ಥಿಗಳಿಗೆ ಹೇಗೆತಾನೆ ಸಿದ್ಧಿಸೀತು ವಿಚಾರದೃಷ್ಟಿ.”


·  “"ಚತುರ್ಮುಖ ಬ್ರಹ್ಮನೇ ಸಾಕ್ಷಾತ್ತಾಗಿ ಬಂದು, ನಾನೀಗ ನಿಮ್ಮೊಡನೆ ಮಾತಾಡುತ್ತಿರುವಂತೆ, ಋಷಿಗಳಿಗೆ ವೇದಗಳನ್ನು ಉಪನ್ಯಸಿಸಿದೆನು ಎಂದು ಹೇಳಿದರೆ, ಕಣ್ಣುಮುಚ್ಚಿಕೊಂಡು ನಂಬಬೇಡಿ.”

·         ಮೌಢ್ಯವೇ ಈಶ್ವರ ನಿಂದೆ. ಯಾವ ರೂಪದಲ್ಲಯೇ ಆಗಲಿ, ಯಾವ ವೇಷದಲ್ಲಿಯೇ ಆಗಲಿ, ತಿಳಿದೂ ತಿಳಿದೂ ಮೌಢತನವನ್ನು ಆರಾಧಿಸಿ, ಬೋಧಿಸಿ, ಲಾಭ ಪಡೆಯುತ್ತ ನೆಮ್ಮದಿಯಾಗಿರುವವನು ಪಾಷಂಡಿಯಾಗುತ್ತಾನೆ.

·         ದೇವಾಲಯಗಳಿಗೆ ಹೋಗುವುದನ್ನು ಬಿಟ್ಟು, ಹೊರಗೆ ಪ್ರಕೃತಿ ಸೌಂದರ್ಯದಲ್ಲಿ, ಉದಯಿಸುವ ಸೂರ್ಯನಲ್ಲಿ, ಸಾಹಿತ್ಯದಲ್ಲಿ, ಸಂಸ್ಕೃತಿಯಲ್ಲಿ ದರಿದ್ರನಾರಾಯಣನ ಸೇವೆಯಲ್ಲಿ ತಮ್ಮ ದೇವಾಲಯಗಳನ್ನು ಕಟ್ಟಿಕೊಂಡು, ಮತದ ಅನೌದಾರ್ಯವನ್ನು ಮುರಿಯಬೇಕು.

*****

(ಮೇಲಿನ ಮಾತುಗಳು ರಾಷ್ಟ್ರಕವಿ ಕುವೆಂಪು ಅವರ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪ್ರಸಿದ್ಧ ಉಪನ್ಯಾಸ ಮತ್ತು ಅದರ ಮುದ್ರಣರೂಪಕ ಕೃತಿಗೆ ಅವರು ಬರೆದ ಮುನ್ನುಡಿಯಿಂದ ಆಯ್ದಭಾಗಗಳಾಗಿವೆ. ಆಯ್ಕೆಮಾಡಿ ಇಲ್ಲಿ ಕೊಟ್ಟಿದ್ದು: ಡಾ ರಾಜೇಂದ್ರ ಬುರಡಿಕಟ್ಟಿ)