Wednesday, November 29, 2017

ಪುಟ್ಟಪ್ಪ ಕೈ ಎತ್ತಿದರೆ………

ಪುಟ್ಟಪ್ಪ ಕೈ ಎತ್ತಿದರೆ………
”ಕನ್ನಡಕ್ಕಾಗಿ  ಕೈ ಎತ್ತು
ಮುಗಿಯುವವರಿಗೆ ನವೆಂಬರ್ ಮೂವತ್ತು”

ಇದು ಯಾರೋ ತಮಾಸೆಗಾಗಿ `ನವೆಂಬರ್ ಕನ್ನಡ ಪ್ರೇಮ’ವನ್ನು ಟೀಕಿಸಲು ಬರೆದ ಒಂದು ವ್ಯಂಗ್ಯೋಕ್ತಿಪದ್ಯ. ಇದನ್ನು ಇಲ್ಲಿ ಉಲ್ಲೇಖಿಸಲು ಕಾರಣ ಇಂದು ನವೆಂಬರ್ ಮೂವತ್ತು. ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಪ್ರಾಮಾಣಿಕವೋ ನಾಟಕೀಯವೋ ಒಟ್ಟಿನಲ್ಲಿ ನಮ್ಮ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಗಳು ಈ ವರ್ಷದ ಮಟ್ಟಿಗೆ ನಿಲ್ಲುವ ದಿವಸ. ಈ ವರ್ಷದ ನವೆಂಬರ್ ತಿಂಗಳಲ್ಲಿ ಕಳೆದ ಒಂದನೇ ತಾರೀಖಿನಿಂದ ಇಂದಿನವರೆಗೆ `ಇಂದಿನ ನುಡಿ’ ಎಂಬ ಶಿರೋನಾಮೆಯಲ್ಲಿ ನಾನು ಏಕೀಕರಣದ ಇತಿಹಾಸದ ಬಹಳಷ್ಟು ಅಪರಿಚಿತವಾದ ಆದರೆ ಮಹತ್ವದ ಅನೇಕ ಸಂಗತಿಗಳನ್ನು ಹಾಗೇ ನಮ್ಮ ನುಡಿಯ ಬಗ್ಗೆ ನಾಡಿನ ಬಗ್ಗೆ ಗತಕಾಲೀನ ಮತ್ತು ಸಮಕಾಲೀನ ವಿದ್ವಾಂಸರ ಮಹತ್ವದ ಹೇಳಿಕೆಗಳನ್ನು ದಿನಕ್ಕೊಂದರಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತ ಬಂದು ಇಂದು ಕುವೆಂಪು ಅವರ ನುಡಿಯೊಂದರೊಂದಿಗೆ ಈ ಸರಣಿಯನ್ನು ಮುಗಿಸುತ್ತಿರುವೆ. `ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’ ಎಂದು ಹೇಳಿದ ಕುವೆಂಪು ಕಾಲದಲ್ಲಿ ಕೇವಲ ಕನ್ನಡಕ್ಕೆ ಮಾತ್ರವಲ್ಲ ತಮಗೆ ಬೇಕಾದ ಯಾವುದಕ್ಕೆ ಆದರೂ ಯಾರಾದರೂ ಕೈಯೆತ್ತಿದರೆ ಎತ್ತಿದ ಅವರ ಕೈ ಕಲ್ಪವೃಕ್ಷವಾಗದಿದ್ದರೂ ಕತ್ತರಿಸಿ ಹೋಗುತ್ತಿರಲಿಲ್ಲ ಎಂಬುದಂತೂ ಸತ್ಯ. ಆದರೆ ನಾವು ಇಂದು ಆ ಕಾಲಘಟ್ಟದಲ್ಲಿಲ್ಲ.  ನಮಗೆ ಇಷ್ಟಬಂದ ಯಾವುದಕ್ಕಾದರೂ ನಾವು ಈಗ ಕೈಯೆತ್ತುವಾಗ ಎರಡೆರಡು ಬಾರಿ ಯೋಚಿಸಬೇಕಾದ ಕಾಲದಲ್ಲಿದ್ದೇವೆ. ಏಕೆಂದರೆ `ಕೈಯೆತ್ತಿದರೆ ನಿಮ್ಮ ಕೈ ಕತ್ತರಿಸುತ್ತೇವೆ’ ಎಂಬ ಮಾತುಗಳು ಕಿವಿಗೆ ಅಪ್ಪಳಿಸಿ ಆತಂಕವನ್ನುಂಟುಮಾಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಏಕೀಕರಣದ ಇತಿಹಾಸದ ಬಹಳಷ್ಟು ಪ್ರಸಿದ್ಧವಲ್ಲದ ಆದರೆ ಬಹುಮುಖ್ಯವಾದ ಕೆಲವು ಸಂಗತಿಗಳನ್ನು ಅದರಲ್ಲಿಯೂ ವಿಶೇಷವಾಗಿ ಕುವೆಂಪು ಅವರಿಗೆ ಸಂಬಂಧಿಸಿದ ಘಟನೆಯೊಂದನ್ನು ನೆನಪು ಮಾಡಿಕೊಳ್ಳವುದು ಈ ಲೇಖನದ ಉದ್ದೇಶ.


ಆಧುನಿಕ ಕರ್ನಾಟಕದ ಇತಿಹಾಸದಲ್ಲಿ ನಡೆದ ಬಹುಮುಖ್ಯವಾದ ಎರಡು ಚಳವಳಿಗಳೆಂದರೆ ಅವು ಒಂದು ಸ್ವಾತಂತ್ರ್ಯ ಚಳವಳಿ ಮತ್ತೊಂದು ಕರ್ನಾಟಕ ಏಕೀಕರಣ ಚಳವಳಿ ಎಂಬುದನ್ನು ಎಲ್ಲರೂ ಬಲ್ಲರು. ಕರ್ನಾಟಕದ ಮಟ್ಟಿಗೆ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ಏಕೀಕರಣ ಚಳವಳಿಯ ಹೋರಾಟಗಾರರೂ ಆಗಿದ್ದು ತೀರಾ ಸಾಮಾನ್ಯ ಸಂಗತಿಯೇ ಆಗಿತ್ತು ಎಂಬುದು ನಿಜ. ಈಗಿನ ಕರ್ನಾಟಕದ ಬಹುಭಾಗ ಹಿಂದೆ ಅನೇಕ ರಾಜವಂಶಗಳ ಆಳ್ವಿಕೆಯನ್ನು ಅನುಭವಿಸಿದ್ದು ನಿಜವಾದರೂ ಮೇಲಿನ ಆಳ್ವಿಕೆ ಬದಲಾಗುತ್ತಿತ್ತೇ ಹೊರತು ಸಾಮಾನ್ಯ ಜನಜೀವನದಲ್ಲಿ ತೀವ್ರತರವಾದ ಬದಲಾವಣೆಗಳೇನೂ ಆಗುತ್ತಿರಲಿಲ್ಲ. ಯಾರು ರಾಜರಾದರೂ ಬಹಳಕಾಲ ಕನ್ನಡಿಗರು ಬೇರೆ ಬೇರೆ ಆಡಳಿತಗಳಿಗೆ ಸೇರಬೇಕಾದ ಪರಿಸ್ಥಿತಿ ಉಂಟಾಗಲಿಲ್ಲ. ಆದರೆ ಯಾವಾಗ  ವಿಜಯನಗರ ಸಾಮ್ರಾಜ್ಯದ ಪತನಗೊಂಡಿತೋ ಕನ್ನಡ ಮಾತನಾಡುವ ಜನ ಮೊಟ್ಟಮೊದಲ ಬಾರಿಗೆ ಬೇರ್ಪಡುವಿಕೆಯ ಬಿಸಿಯನ್ನು ಅನುಭವಿಸುವಂತಾಯಿತು.  ಈ ಬಿಸಿ ಆಗ ಅಷ್ಟೇನೂ ದೊಡ್ಡಮಟ್ಟದಲ್ಲಿ ಆಗಲಿಲ್ಲ; ಆದರೆ ಯಾವಾಗ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಮರಣವನ್ನಪ್ಪಿದನೋ ಕನ್ನಡಿಗರ ಪಾಲಿಗೆ ದುರ್ದೆಸೆ ಆರಂಭವಾಗಿ ಆ ಘಟನೆ ಕನ್ನಡಿಗರ ಪಾಲಿಗೆ ಕರಾಳ ಅಧ್ಯಾಯವನ್ನೇ ಆರಂಭಿಸಿತು ಎನ್ನಬೇಕು.

ಟಿಪ್ಪುವಿನ ಮರಣದ ನಂತರ ಕನ್ನಡ ಮಾತನಾಡುವ ಜನರು ಮುಂಬೈ, ಹೈದರಾಬಾದು, ಮದ್ರಾಸ್, ಮೈಸೂರು, ಕೊಡಗು ಹೀಗೆ ವಿವಿಧ ಆಡಳಿತ ಭಾಗಗಳಿಗೆ ಹರಿದು ಹಂಚಿಹೋದ ಕಾರಣ ಅಗಲಿಕೆಯ ನೋವು ತೀವ್ರಗೊಂಡಿತು. ಮುಂಬೈಗೆ ಸೇರಿದವರು ಮರಾಠಿಗರಿಗೆ, ಹೈದರಾಬಾದಿಗೆ ಸೇರಿದವರು ಉರ್ದು ಭಾಷಿಕರಿಗೆ, ಮದ್ರಾಸಿಗೆ ಸೇರಿದವರು ತಮಿಳರಿಗೆ ಅಡಿಯಾಳಾಗಿ ಬದುಕುವ ದುರ್ದೆಸೆಗೀಡಾದರು ಮಾತ್ರವಲ್ಲ ಕನ್ನಡ ಭಾಷೆ ಈ ಭಾಷೆಗಳ ತೊತ್ತಾಗಿ ಬದುಕಬೇಕಾಯಿತು. ಇದ್ದದ್ದರಲ್ಲಿ ಪರಮಸುಖಿಗಳಾಗಿದ್ದವರೆಂದರೆ ಆಗಿನ ಹಳೇಮೈಸೂರು ಸಂಸ್ಥಾನಕ್ಕೆ ಸೇರಿದ ಈಗಿನ ಮೈಸೂರು, ಮಂಡ್ಯ, ಹಾಸನ, ಬೆಂಗಳೂರು, ರಾಮನಗರ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು,  ಎಂಟೊಂಬತ್ತು ಜಿಲ್ಲೆಗಳ ಜನ ಅನ್ನಬೇಕು. ಏಕೆಂದರೆ ಈ ಭಾಗದ ಜನಕ್ಕೆ ಪರಕೀಯತೆಯ, ಅಥವಾ ಕೀಳರಿಮೆಯ ಭಾವನೆ ಉಂಟಾಗುವ ಸಂದರ್ಭವೇ ನಿರ್ಮಾಣವಾಗಲಿಲ್ಲ. ಮೊದಲೂ ಅವರನ್ನು ಮೈಸೂರು ರಾಜರೇ ಆಳಿದರು. ಟಿಪ್ಪುವಿನ ಮರಣದ ನಂತರವೂ ಅವರನ್ನು ಮೈಸೂರು ಅರಸರೇ ಆಳಿದರು. ಮೈಸೂರು ಅರಸರು ಸ್ವತಃ ಪ್ರಜಾಕಂಟಕರಾಗಿದ್ದಿಲ್ಲವಾದ್ದರಿಂದ, ಎಲ್ಲರಿಗೂ ರಾಜರಾಗುವ ಅವಕಾಶ ಇರಲಿಲ್ಲ ಅನ್ನುವುದನ್ನು ಬಿಟ್ಟರೆ ಪ್ರಜೆಗಳು ಸುಖವಾಗಿಯೇ ಇದ್ದರು.

ಆದರೆ ಮೇಲೆ ಉಲ್ಲೇಖಿಸಿದ ಇತರ ಭಾಷಿಕರ ಅಧೀನಕ್ಕೆ ಹೋದ ಕನ್ನಡಿಗರ ಪಾಡು ಈಗ `ನಾಯಿಪಾಡು’ ಅಂಥಾರಲ್ಲ ಹಾಗೇ ಆಯಿತು ಅನ್ನಬೇಕು. ದಕ್ಷಿಣ ಮಹಾರಾಷ್ಟ್ರ ಎಂದು ಕರೆಯಲ್ಪಡುತ್ತಿದ್ದ ಈಗಿನ ವಿಜಯಪುರ, ಬಾಗಲಕೋಟೆ, ಬೆಳಗಾಗಿ, ಉತ್ತರ ಕನ್ನಡ, ಗದಗ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಕನ್ನಡದ ಸ್ಥಾನ ನೆಲಕಚ್ಚಿ ಮರಾಠಿ ಮೆರೆಯತೊಡಗಿತು. ಇಲ್ಲಿನ ಪ್ರತಿಭಾವಂತರು ಉನ್ನತ ವ್ಯಾಸಂಗಕ್ಕಾಗಿ ದೂರದ ಪುಣೆಗೆ ಹೋಗಬೇಕಾಯಿತು. ಹೀಗೆ ಪುಣೆಗೆ ಉನ್ನತ ವ್ಯಾಸಂಗಕ್ಕೆ ಹೋದ ಈ ಭಾಗದ ಆ ಕಾಲದ ತರುಣರನ್ನು `ಕಾನಾಡಿಯಪ್ಪ’ ಎಂದು ತುಚ್ಚೀಕರಿಸಿ ಅಲ್ಲಿನವರು ಮಾತನಾಡಿಸಿ ವಿಕೃತ ಆನಂದವನ್ನು ಪಡೆಯತೊಡಗಿದರು. `ಎಲ್ಲಿ ದಮನ ಹೆಚ್ಚಾಗುತ್ತದೆಯೋ ಅಲ್ಲಿಯೇ ಅದನ್ನುಪ್ರತಿಭಟಿಸುವ ಕೆಚ್ಚೂ ಹುಟ್ಟಿಕೊಳ್ಳುತ್ತದೆ’ ಎನ್ನುವಂತೆ ಹೀಗೆ ತಿರಸ್ಕಾರಕ್ಕೊಳಗಾದ ಈ `ಕಾನಾಡಿಯಪ್ಪ’ಗಳೇ  ಕರ್ನಾಟಕದ ಏಕೀಕರಣಕ್ಕೆ ಬೀಜಹಾಕಿದ ಮೊದಲಿಗರು ಎನ್ನಬಹುದು. ರಾ.ಹಾ. ದೇಶಪಾಂಡೆ, ವೆಂಕಟರಂಗೋಕಿಟ್ಟಿ, ಆಲೂರು ವೆಂಕಟರಾಯ, ಅಂದಾನಪ್ಪ ಮೇಟಿ, ತುರುಮುರಿ ಶೇಷಗಿರಿರಾಯರು ಇಂತಹ ಹಲವು ನಾಯಕರು ಆ ಕಾಲದಲ್ಲಿ ಏಕೀಕರಣಕ್ಕೆ ಹಾಕಿದ ಮೊದಲ ಹೋರಾಟದ ಹೆಜ್ಜೆಗಳು ಅವಿಸ್ಮರಣೀಯವಾದಂಥವು.

ಆರಂಭದ ಕಾಲಘಟ್ಟದಲ್ಲಿ ಕರ್ನಾಟಕ ಏಕೀಕರಣ ಕುರಿತ ಚಳವಳಿ ಸಭೆ, ಸಮಾರಂಭ, ಹರತಾಳ, ಪ್ರತಿಭಟನೆ ಎಲ್ಲವೂ ನಡೆದದ್ದು ಈಗಿನ ಉತ್ತರ ಕರ್ನಾಟಕ ಭಾಗದಲ್ಲಿಯೇ. ಮೊದಲು ಕಿತ್ತೂರು ಕರ್ನಾಟಕ ಭಾಗದಲ್ಲಿ ಇದು ವ್ಯಾಪಕವಾಗಿ ಬೆಳೆಯಿತಾದರೂ ನಂತರ ಕಲ್ಯಾಣ ಕರ್ನಾಟಕದ ಭಾಗಕ್ಕೂ ವಿಸ್ತರಿಸಿ ಚಳವಳಿಯು ತನ್ನ ತೆಕ್ಕೆಗೆ ಆ ಪ್ರದೇಶವನ್ನು ಕೂಡ ತೆಗೆದುಕೊಂಡಿತು. ಹೀಗೆ ಉತ್ತರ ಕರ್ನಾಟಕ ಭಾಗದಲ್ಲಿ ಕನ್ನಡ ಮಾತನಾಡುವ ಜನರೆಲ್ಲ ಒಂದಾಗಬೇಕು ಎಂದು ಚಳವಳಿ ಅಷ್ಟೊಂದು ಪ್ರಮಾಣದಲ್ಲಿ ನಡೆಯುತ್ತಿರುವಾಗ ಈಗಿನ ದಕ್ಷಿಣ ಕರ್ನಾಟಕದ ಭಾಗದ ಜನ, ಜನ ಅನ್ನುವುದಕ್ಕಿಂತ ರಾಜಕೀಯ ಮತ್ತು ಸಾಂಸ್ಕೃತಿಕ ನಾಯಕರು ಹೇಗೆ ಸ್ಪಂದಿಸಿದರು ಎಂಬುದು ಅಧ್ಯಯನ ದೃಷ್ಟಿಯಿಂದ ಕುತೂಹಲ ಹುಟ್ಟಿಸುವ ಸಂಗತಿಯಾಗಿದೆ. ಸೂಕ್ಷ್ಮವಾಗಿ ನೋಡಿದರೆ ಕರ್ನಾಟಕದ ಏಕೀಕರಣದ ಬಹುಪಾಲು ಕೀರ್ತಿ ಹೋಗಬೇಕಾದದ್ದು ಈಗಿನ ಹ`ಳೈಮೈಸೂರು ಪ್ರಾಂತ್ಯ’ದ ಹೊರಗಿನವರಿಗೇ ಎನ್ನಬೇಕು. ಹಳೇಮೈಸರೂರು ಭಾಗದವರು ಏಕೀಕರಣಕ್ಕೆ ಹೋರಾಡುವುದಿರಲಿ ಹೊಸದಾಗಿ ರಚಿಸಲು ಶ್ರಮಿಸುತ್ತಿರುವ ರಾಜ್ಯದಲ್ಲಿ ಸೇರಿಕೊಳ್ಳುತ್ತೇವೆಯೊ ಇಲ್ಲವೋ ಎಂಬುದನ್ನು ಹೇಳಲಿಕ್ಕೂ ಕೂಡ ಎಷ್ಟೋ ವರ್ಷ ತೆಗೆದುಕೊಂಡರು! ಕೊನೆಗೂ `ನಾವೂ ಹೊಸರಾಜ್ಯದಲ್ಲಿ ಸೇರಿಕೊಳ್ಳುತ್ತೇವೆ’ ಎಂದು ಹೇಳಿದ್ದೇ ಈ ಕಡೆಯ ದೊಡ್ಡ ಸಾಧನೆ ಎಂದು ಹೇಳಬಹುದು.

ಇದಕ್ಕೆ ಕಾರಣವೇನೆಂದರೆ ಆ ಕಾಲದ ಮೈಸೂರು ಕಾಂಗ್ರೆಸ್ಸಿನಲ್ಲಿ ಮುಖ್ಯವಾಗಿ ಎರಡು ಗುಂಪುಗಳಿದ್ದವು. ಅವು ಮುಖ್ಯವಾಗಿ ಕೆ.ಸಿ.ರೆಡ್ಡಿ ಗುಂಪು ಮತ್ತು ಕೆಂಗಲ್ ಹನುಮಂತಯ್ಯ ಗುಂಪು. ಈ ಎರಡೂ ಗುಂಪುಗಳು ಎಷ್ಟು ಬಲಿಷ್ಠವಾಗಿದ್ದವು ಎಂದರೆ ಯಾರು ಅಧಿಕಾರಕ್ಕೆ ಏರಿದರೂ ಅವರು ಸದಾ ಹೆದರುತ್ತಿದ್ದುದು ವಿರೋಧ ಪಕ್ಷಕ್ಕಲ್ಲ; ಬದಲಾಗಿ ತಮ್ಮದೇ ಪಕ್ಷದ ಇನ್ನೊಂದು ಗುಂಪಿಗೆ! ಈ ಎರಡು ಗುಂಪುಗಳಲ್ಲಿ ಕೆ.ಸಿ. ರೆಡ್ಡಿ ಗುಂಪು ಏಕೀಕರಣವನ್ನು ಪ್ರಬಲವಾಗಿ ವಿರೋಧಿಸುತ್ತಿತ್ತು. ಕೆಂಗಲ್ ಗುಂಪು ಏಕೀಕರಣವನ್ನು ಬೆಂಬಲಿಸುತ್ತಿತ್ತು. ಏಕೀಕರಣ ಬೆಂಬಲಿಸುವ ಗುಂಪು ಕನ್ನಡ ಮಾತನಾಡುವ ಜನರೆಲ್ಲ ಒಂದು ಆಡಳಿತಕ್ಕೆ ಸೇರಬೇಕು ಎಂಬ ಮೈಸೂರು ಹೊರಭಾಗದ ಚಳವಳಿಗಾರರ ನಿಲುವನ್ನು ಹೊಂದಿತ್ತು. ಏಕೀಕರಣ ವಿರೋಧಿಸುವ ಗುಂಪು ಬಹುಮುಖ್ಯವಾಗಿ ಎರಡು ಕಾರಣಗಳಿಗಾಗಿ ಏಕೀಕರಣವನ್ನು ವಿರೋಧಿಸುತ್ತಿತ್ತು. ಮೊದಲನೇ ಕಾರಣ ಮೈಸೂರು ರಾಜ್ಯ ಅಲ್ಲಿನ ರಾಜರು ಮತ್ತು ದಿವಾನರುಗಳ ಕಾರಣದಿಂದ ಆಗಲೇ ಎಲ್ಲ ವಿಷಯಗಳಲ್ಲು ಸಮೃದ್ಧವಾಗಿದ್ದು `ಮಾದರಿರಾಜ್ಯ’ ಎಂಬ ಕೀರ್ತಿಗೆ ಪಾತ್ರವಾಗಿತ್ತು. ಮಹಾತ್ಮಾಗಾಂಧಿ ಕೂಡ ಈ ರಾಜ್ಯವನ್ನು ಇತರ ರಾಜ್ಯಗಳಿಗೆ ಮಾದರಿಯಾಗಿ ತೋರಿಸುತ್ತಿದ್ದರು. ಇಂತಹ ಮಾದರಿರಾಜ್ಯದಲ್ಲಿ ಸುಖವಾಗಿರುವ ತಾವು ಆ ಕಡೆಯವರೊಂದಿಗೆ ಕೂಡಿಕೊಂಡರೆ ಅವರ ಬಡತನವನ್ನು ಹಂಚಿಕೊಳ್ಳಬೇಕಾಗುತ್ತದೆ ಎಂಬುದು. ಎರಡನೆಯದು ಉತ್ತರ ಭಾಗದಲ್ಲಿ ಲಿಂಗಾಯತ ಸಮುದಾಯದ ಜನಸಂಖ್ಯೆ ಅಧಿಕವಾಗಿದ್ದು, ಅವರನ್ನೆಲ್ಲ ಸೇರಿಸಿಕೊಂಡು ರಾಜ್ಯ ರಚಿಸಿಕೊಂಡರೆ, ಬಹುತೇಕ ಅಧಿಕಾರದ ಸ್ಥಾನಮಾನಗಳು ಅವರ ವಶವಾಗುತ್ತವೆ ಎಂಬುದು ಈ ಭಾಗದ ಬಹುಸಂಖ್ಯಾತರಾದ ಗೌಡ ಮುಂತಾದ ಸಮುದಾಯದ ನಾಯಕರುಗಳಲ್ಲಿ ಮೂಡಿದ್ದ ಆತಂಕ! ಹೀಗಾಗಿ ಏಕೀಕರಣ ಬೆಂಬಲಿತ ಚಳವಳಿಯಂತೆ ಏಕೀಕರಣ ವಿರೋಧಿ ಚಳವಳಿ ಕೂಡ ನಡೆದು ಮಂಡ್ಯದಲ್ಲಿ `ಏಕೀಕರಣ ವಿರೋಧಿ ಸಮಾವೇಶ’ ಕೂಡ ನಡೆದೇಬಿಟ್ಟಿತು.

ಈ ತಿಕ್ಕಾಟ ತೀವ್ರತರವಾಗಿ ನಡೆಯುತ್ತಲೇ ಇತ್ತು. 1947ರಲ್ಲಿ ದೇಶ ಸ್ವಾತಂತ್ಯವಾದರೂ ಮೈಸೂರು ಸಂಸ್ಥಾನದಲ್ಲಿ ನಮ್ಮ ರಾಷ್ಟ್ರೀಯಧ್ವಜ ಹಾರಲಿಲ್ಲ! ಅದಕ್ಕೆ ಕಾರಣ ಹೊಸದಾಗಿ ರಚನೆಯಾಗುತ್ತಿರುವ ಭಾರತ ದೇಶದಲ್ಲಿ ತಮ್ಮ ರಾಜ್ಯವನ್ನು ವಿಲೀನಗೊಳಿಸಲು ಮೊದಲು ಒಪ್ಪಿಕೊಂಡಿದ್ದ ಮೈಸೂರು ಮಹಾರಾಜರು ಕೊನೆಗಳಿಗೆಯಲ್ಲಿ ತಮ್ಮ ನಿಲುವು ಬದಲಿಸಿ ಉಲ್ಟಾಹೊಡೆದದ್ದು! ಜನ ಸುಮ್ಮನಿರಲಿಲ್ಲ. ರಾಜಸತ್ತೆಯ ವಿರುದ್ಧ ಸಿಡಿದೆದ್ದು `ಮೈಸೂರು ಚಲೋ’ ಚಳವಳಿ ಆರಂಭಿಸಿದರು. ಈ ಚಳವಳಿ ತೀರ್ವಗೊಂಡು ಅನೇಕ ಸಾವುನೋವು ಸಂಭವಿಸುವ ಹಂತಕ್ಕೆ ಹೋದಾಗ ಅನಿವಾರ್ಯವಾಗಿ ಒತ್ತಡಕ್ಕೆ ಮಣಿದ ಮೈಸೂರು ಮಹಾರಾಜರು ತಮ್ಮ ರಾಜ್ಯವನ್ನು ಭಾರತ ಗಣರಾಜ್ಯದಲ್ಲಿ ವಿಲೀನಗೊಳಿಸಲು ಒಪ್ಪಿಕೊಳ್ಳಲೇಬೇಕಾಯಿತು. ತತ್ಪರಿಣಾಮವಾಗಿ 1948ರ ಅಕ್ಟೋಬರ್ ತಿಂಗಳಲ್ಲಿ (ವಿಜಯದಶಮಿಯಂದು) ಮೈಸೂರು ಭಾಗದಲ್ಲಿ ಮೊದಲಬಾರಿ ಜವಾಬ್ದಾರಿಯುತ ಸರ್ಕಾರ ರಚನೆಯಾಗಿ ಕೆ.ಸಿ.ರೆಡ್ಡಿ ಮುಖ್ಯಮಂತ್ರಿಯಾದರು.

ವಿಶೇಷತೆಯೆಂದರೆ ಭಾರತ ಸಂವಿಧಾನ ರಚನೆಯಾಗಿ ಜಾರಿಗೆ ಬರುವ ಮೊದಲೇ `ಮೈಸೂರು ವಿಧಾನಸಭೆ’ ಅಸ್ತಿತ್ವಕ್ಕೆ ಬಂದದ್ದು! ಅದು ಹೇಗೆ ಎಂದರೆ ಆ ಕಾಲದಲ್ಲಿ ಭಾರತ ಸಂವಿಧಾನ ರಚಿಸುವ ಪ್ರಕ್ರಿಯೆ ದೆಹಲಿಮಟ್ಟದಲ್ಲಿ ನಡೆಯುತ್ತಿದ್ದಂತೆ ಮೈಸೂರಲ್ಲಿ ಮೈಸೂರು ರಾಜ್ಯಕ್ಕೊಂದು ಸಂವಿದಾನ ರಚಿಸಲು ಸಮಿತಿಯೊಂದು ನೇಮಕವಾಗಿತ್ತು. ದೇಶದ ವಿದ್ಯಮಾನಗಳ ಕಾರಣದಿಂದ ಈ ಸಮಿತಿಯಲ್ಲಿ ಅಭಿಪ್ರಾಯಭೇದ ಉಂಟಾಗಿ ಸಮಿತಿ ಹೋಳಾಯಿತು. ಒಂದು ಗುಂಪು `ಮೈಸೂರು ರಾಜ್ಯಕ್ಕೆ ಪ್ರತ್ಯೇಕ ಸಂವಿಧಾನ ಇರಬೇಕು’ ಎಂದು ವಾದಿಸತೊಡಗಿದರೆ ಇನ್ನೊಂದು ಗುಂಪು `ಅದರ ಅವಶ್ಯಕತೆಯಿಲ್ಲ; ಸಧ್ಯದಲ್ಲಿ ಭಾರತದೇಶಕ್ಕೇ ಅನ್ವಯವಾಗುವ ಸಂವಿಧಾನ ಜಾರಿಗೆ ಬರಲಿದ್ದು ಅದೇ ಸಂವಿಧಾನ ಮೈಸೂರಿಗೂ ಅನ್ವಯಿಸತಕ್ಕದ್ದು’ ಎಂದು ವಾದಿಸತೊಡಗಿತು. ಎರಡನೇ ಗುಂಪು ದೊಡ್ಡದಾಗಿದ್ದ ಕಾರಣ ಮೈಸೂರು ಸಂವಿಧಾನ ರಚನೆ ಪ್ರಸ್ತಾಪ ಬಿದ್ದುಹೋಗಿ ಭಾರತ ಸಂವಿಧಾನವನ್ನೇ ಒಪ್ಪಿಕೊಳ್ಳುವುದೆಂದು ತೀರ್ಮಾನವಾಯಿತು. ಈ ಮೈಸೂರು ಸಂವಿಧಾನ ರಚನೆಗಾಗಿ ನೇಮಿಸಲಾಗಿದ್ದ ಸಮಿತಿಯನ್ನೇ ಮೈಸೂರು ರಾಜರು ಆದೇಶ ಹೊರಡಿಸುವ ಮೂಲಕ `ಮೈಸೂರು ವಿಧಾನಸಭೆ’ಯಾಗಿ ತಾತ್ಕಾಲಿಕವಾಗಿ (ಹೊಸ ಸಂವಿಧಾನ ಜಾರಿಗೆ ಬರುವವರೆಗೆ) ಅಸ್ತಿತ್ವಕ್ಕೆ ತಂದರು!

ಹೀಗೆ ದೇಶ ಸ್ವಾತಂತ್ರ್ಯಗಳಿಸಿದ ಎರಡೇ ತಿಂಗಳಲ್ಲಿ ಪ್ರಜಾಪ್ರಭುತ್ವ ಮಾದರಿಯ ಚಿಕ್ಕಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತಾದರು ಏಕೀಕರಣಕ್ಕೆ ತೀವ್ರತರದ ಹಿನ್ನಡೆಯಾಯಿತು. ಅದಕ್ಕೆ ಮುಖ್ಯಕಾರಣ ಏಕೀಕರಣವನ್ನು ವಿರೋಧಿಸುತ್ತಿದ್ದ ಕೆ.ಸಿ.ರೆಡ್ಡಿ ಮುಖ್ಯಮಂತ್ರಿಯಾಗಿದ್ದುದು. ಆದರೆ ಮೈಸೂರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಏಕೀಕರಣದ ಪರವಾಗಿದ್ದ ಕೆಂಗಲ್ ಹನುಮಂತಯ್ಯ ಇದ್ದರು. ಅವರೂ ತಮ್ಮ ನಿಲುವನ್ನು ಪ್ರಕಟಿಸುತ್ತಿದ್ದರು. ಸರ್ಕಾರ ಅವರ ಹೇಳಿಕೆಗಳನ್ನು ವೈಯಕ್ತಿಕ ಹೇಳಿಕೆಗಳು ಎಂದು ತಿರಸ್ಕರಿಸುತ್ತಿತ್ತು! ಹೀಗೆ ಏಕೀಕರಣದ ಬಗ್ಗೆ ಈ ಭಾಗದಲ್ಲಿ ರಾಜಕೀಯ ನಾಯಕರಲ್ಲಿ ನಡೆಯುತ್ತಿದ್ದ ಹಗ್ಗಜಗ್ಗಾಟ ಮುಂದುವರೆಯುತ್ತಲೇ ಹೋಯಿತು. ಆದರೆ 1950ರಲ್ಲಿ ಸಂವಿಧಾನ ಜಾರಿಗೆ ಬಂದಮೇಲೆ ಅದರ ಅನ್ವಯ 1952 ರಲ್ಲಿ ನಡೆದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಏಕೀಕರಣ ಪರವಾಗಿದ್ದ ಕೆಂಗಲ್ ಮುಖ್ಯಮಂತ್ರಿಯಾದ್ದರಿಂದ ಮತ್ತು ಕೆ.ಸಿ.ರೆಡ್ಡಿ ಕೇಂದ್ರದ ಮಂತ್ರಿಯಾಗಿ ರಾಷ್ಟ್ರರಾಜಕಾರಣಕ್ಕೆ ಹೋಗುವ ಮೂಲಕ ಬೇರೆದಾರಿ ಕಂಡುಕೊಂಡದ್ದರಿಂದ ಏಕೀಕರಣಕ್ಕೆ ಒಂದಿಷ್ಟು ಮುನ್ನಡೆಯಾಯಿತಾದರು ಕೆ.ಸಿ.ರೆಡ್ಡಿ ಗುಂಪು ಕಾಲೆಳೆಯುತ್ತಲೇ ಇತ್ತು.

ಸುಮಾರು ಎಂಟೊಂಬತ್ತು ವರುಷಗಳ ಕಾಲ ನಡೆದ ರಾಜಕೀಯ ನಾಯಕರ ಈ ಹಗ್ಗ ಜಗ್ಗಾಟದಿಂದ ಜನರೋಷಿಹೋದರು. ಆಗ ಶಿವಮೊಗ್ಗ ಜಿಲ್ಲೆಯ ಮೂಲಕ ಮೂವರು ನಾಯಕರು ಮೈಸೂರಿನ ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಮುಖರಾಗಿದ್ದರು. ಅವರಲ್ಲಿ ರಾಜಕೀಯ ಕ್ಷೇತ್ರಕ್ಕೆ ಸೇರಿದವರು ಇಬ್ಬರು. ಸಾಂಸ್ಕೃತಿಕ ಕ್ಷೇತ್ರಕ್ಕೆ ಸೇರಿದವರು ಒಬ್ಬರು. ಮೊದಲ ಇಬ್ಬರು ಕಡಿದಾಳ್ ಮಂಜಪ್ಪ ಮತ್ತು ಶಾಂತವೇರಿ ಗೋಪಾಲಗೌಡ. ಕೊನೆಯ ಒಬ್ಬರು ಕುವೆಂಪು. ಈ ಮೂವರು ಮೂರು ರೀತಿಯ ಕರ್ನಾಟಕವನ್ನು ಪ್ರತಿಪಾದಿಸಿದರು! ಕಡಿದಾಳ್ ಮಂಜಪ್ಪ `ತುಂಡು ಕರ್ನಾಟಕ’ (ಎರಡು ಕರ್ನಾಟಕ ರಚನೆ) ವನ್ನು ಪ್ರತಿಪಾದಿಸಿದರು. (ಕಡಿದಾಳ್ ಅವರ ಈ ನಿಲುವನ್ನು ತೀರ್ವವಾಗಿ ಖಂಡಿಸಿದ ಆ ಕಾಲದ ಪ್ರಮುಖ ಏಕೀಕರಣ ಹೋರಾಟಗಾರ ಪಾಟೀಲ ಪುಟ್ಟಪ್ಪ ಕಡಿದಾಳ್ ಮಂಜಪ್ಪ ಅವರನ್ನು `ಕಡಿದು ಆಳುವ ಮಂಜಪ್ಪ’ ಎಂದು ಟೀಕಿಸಿ ಲೇಖನ ಕೂಡ ಬರೆದರು) ಶಾಂತವೇರಿ ಗೋಪಾಲಗೌಡ `ಅಖಂಡ ಕರ್ನಾಟಕ’ವನ್ನು ಪ್ರತಿಪಾದಿಸಿದರು. ಕುವೆಂಪು ಇವೆರಡಕ್ಕೂ ಭಿನ್ನವಾದ `ಸಾಂಸ್ಕೃತಿಕ ಕರ್ನಾಟಕ’ವನ್ನು ಪ್ರತಿಪಾದಿಸಿದರು. ಅದನ್ನು ಬೆಂಬಲಿಸುವುದಕ್ಕಾಗಿ ಹುಟ್ಟಿದ್ದು ಅವರ `ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಪ್ರಸಿದ್ಧ ಗೀತೆ.

ಮೈಸೂರು ರಾಜಕಾರಣಿಗಳಲ್ಲಿ ಏಕೀಕರಣದ ಬಗ್ಗೆ ಈ ರೀತಿ ದ್ವಂದ್ವ ನಿಲುವು ಇದ್ದದ್ದು ನಿಜವಾದರೂ ಸಾಂಸ್ಕೃತಿಕ ನಾಯಕರಲ್ಲಿ ಈ ದ್ವಂದ್ವ ಇರದೇ ಬಹುತೇಕ ಎಲ್ಲರೂ ಮೈಸೂರು ರಾಜ್ಯದಾಚೆಗಿನ ಸಾಹಿತಿಗಳಂತೆಯೇ ಏಕೀಕರಣದ ಪರವಾಗಿದ್ದರು ಎಂಬುದನ್ನು ನಾವು ಗಮನಿಸಬೇಕು. ಕುವೆಂಪು ಅವರ ಮೇಲಿನ ನಿಲುವನ್ನು ನೋಡಿದ್ದೇವೆ. 1956 ಏಕೀಕರಣದ ಹಿಂದಿನ ವರ್ಷ ಮೈಸೂರಿನಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಡಾ. ಶಿವರಾಮ ಕಾರಂತ ಮೈಸೂರು ಪ್ರಾಂತ್ಯದಲ್ಲಿನ ಏಕೀಕರಣ ವಿರೋಧಿ ಗುಂಪಿನ ನಿಲುವನ್ನು ತೀವ್ರವಾಗಿ ಖಂಡಿಸಿ ಏಕೀಕರಣಪರವಾಗಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಧ್ವನಿಯೆತ್ತಿದರು. ಈ ಎಲ್ಲ ಘಟನೆಗಳ ಪರಿಣಾಮದಿಂದ ಅಂತೂ ಇಂತೂ ಹಳೇಮೈಸೂರು ರಾಜ್ಯ ತನ್ನ ಅಸ್ತಿತ್ವವನ್ನು ಕಳೆದುಕೊಂಡು 1956ರಲ್ಲಿ ವಿಶಾಲ ಮೈಸೂರು ರಾಜ್ಯದಲ್ಲಿ ಸೇರಿಕೊಂಡಿತಾದರೂ ಯಾರು ಏಕೀಕರಣದ ಮುಂಚೂಣಿಯಲ್ಲಿ ನಿಂತು ಹೋರಾಟಮಾಡಿದ್ದರೋ ಯಾರೂ ಏಕೀಕರಣಕ್ಕಾಗಿ ತಮ್ಮ ಜೀವವನ್ನೆಲ್ಲ ತ್ಯಾಗಮಾಡಿದ್ದರೋ ಅವರೆಲ್ಲರಿಗೂ ಅಂದರೆ ಮೈಸೂರಾಚೆಯ ಜನನಾಯಕರಿಗೆ ಅಸಮಾಧಾನವಾಗುವಂತೆಯೇ ರಾಜ್ಯೋದಯವಾಯಿತು. 

ಹಂಪಿ ರಾಜಧಾನಿಯಾಗಲಿಲ್ಲ; ದುರ್ಗಾದೇವಿ/ ಬನಶಂಕರಿ ನಾಡದೇವಿಯಾಗಲಿಲ್ಲ; ರಾಜ್ಯ ಕರ್ನಾಟಕ ಎಂದು ಹೆಸರು ಪಡೆಯಲಿಲ್ಲ. ರಾಜ್ಯಕ್ಕೆ ಮೈಸೂರು ಎಂದು ಹೆಸರಿಡಲಾಯಿತು (ಮೈಸೂರಿಗರು ತಮ್ಮ ಚಿಕ್ಕರಾಜ್ಯವನ್ನು ಏಕೀಕರಣವಾಗಿ ಹುಟ್ಟಲಿರುವ ಹೊಸರಾಜ್ಯದಲ್ಲಿ ವಿಲೀನಗೊಳಿಸಲು ಒಪ್ಪಿಕೊಂಡ ಕಾರಣಕ್ಕೆ ಅವರನ್ನು ಖುಷಿಪಡಿಸಲು). ರಾಜ್ಯಪಾಲರಾಗಿ ಮೈಸೂರು ರಾಜರೇ ಆಯ್ಕೆಯಾದರು (ರಾಜಪದವಿಯನ್ನು ಬಿಟ್ಟುಕೊಟ್ಟದ್ದಕ್ಕೆ). ಬೆಂಗಳೂರೇ ರಾಜಧಾನಿಯಾಯಿತು. ಭುವನೇಶ್ವರಿಯೇ ನಾಡದೇವಿಯಾದಳು! ಎಲ್ಲವೂ ಮೈಸೂರುಮಯವಾಗಿಬಿಟ್ಟಿತು! ಮೈಸೂರಿನ ಹೊರಗಿನವರಿಗೆ ಉಸಿರಾಡುವಷ್ಟು ಸಮಾಧಾನ ತಂದುಕೊಟ್ಟ ಸಂಗತಿಯೆಂದರೆ ಮೈಸೂರು ಭಾಗದ ಹೊರಗಿನ ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾದ ಒಂದೇ ಒಂದು ಸಂಗತಿ. ಆದರೆ ಅವರ ಅಸಮಾಧಾನದ ಅಗಾಧತೆಯನ್ನು ಈ ಚಿಕ್ಕ ಅಂಶ ಶಮನಗೊಳಿಸಲು ಆಗಲಿಲ್ಲ. ಅವರ ಅಸಮಾಧಾನವನ್ನು ಅಭಿವ್ಯಕ್ತಗೊಳಿಸಿದ ಎರಡು ಪ್ರಮುಖ ನಿದರ್ಶನಗಳು ಇತಹಾಸದಲ್ಲಿ ದಾಖಲಾಗಿವೆ. ಅವೆಂದರೆ ಒಂದು: ಏಕೀಕರಣದ ದಿನ ಕರ್ನಾಟಕ ಕುಲಪುರೋಹಿತರೆಂದು ಖ್ಯಾತರಾಗಿದ್ದ ಆಲೂರು ವೆಂಕಟರಾಯರು ನೀಡಿದ, “ಈಗ ಮೈಸೂರು ರಾಜ್ಯವೆಂದು ತಪ್ಪಾಗಿ ಕರೆಯಲ್ಪಟ್ಟಿರುವ ಕರ್ನಾಟಕ ರಾಜ್ಯವು ಆಯುಷ್ಮಂತವಾಗಲಿ…” ಎಂದು ನೀಡಿದ `ಅಸಮಾಧಾನ ಶುಭಸಂದೇಶ’. ಇನ್ನೊಂದು ಆಗಿನ ಮೈಸೂರೇತರ ಏಕೀಕರಣ ನಾಯಕರು ಸೋಲಿನ ದನಿಯಲ್ಲಿ ಪರಸ್ಪರರು ಮಾತಾಡಿಕೊಂಡ, “ಈಗ ಆದದ್ದು ಕರ್ನಾಟಕದ ಏಕೀಕರಣವಲ್ಲ; ಬದಲಾಗಿ ಮೈಸೂರಿನ ವಿಸ್ತರಣೆ” (Not the Unification of Karnataka but the Extention of Mysore) ಎಂಬ ಮಾತು. `ಮೈಸೂರಿಗರು ನಮ್ಮನ್ನು ಸೋಲಿಸಿ ತಮ್ಮ ರಾಜ್ಯವನ್ನು ವಿಸ್ತರಿಸಿಕೊಂಡರು’ ಎಂಬ ಅವರ ನೋವಿನ ನುಡಿ.

ಕರ್ನಾಟಕ ಏಕೀಕರಣ ಕುರಿತು ಕುವೆಂಪು ಅವರ ನಿಲುವು ಏನಿತ್ತು ಎಂಬ ಸಂಗತಿ ಈ ಮೊದಲೇ ಬಂದಿದೆ. ಅವರ ನಿಲುವು ಮತ್ತು ಅದಕ್ಕಾಗಿ ಅವರ ಬದ್ಧತೆ ಹೇಗಿತ್ತು ಎಂಬುದನ್ನು ತೋರಿಸುವ ಅವರ ಜೀವನದ ಒಂದು ಘಟನೆಯನ್ನು ನೆನಪಿಸಿಕೊಂಡು ಈ ಲೇಖನವನ್ನು ಮುಗಿಸುತ್ತೇನೆ. ಆ ಘಟನೆ ಹೀಗಿದೆ: ಕೆ.ಸಿ.ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಕಾಲ. ಮೈಸೂರಿನಲ್ಲಿ ಕುವೆಂಪು ಪ್ರಾಧ್ಯಾಪಕರಾಗಿದ್ದರು. ಏಕೀಕರಣ ಚಳವಳಿ ತೀವ್ರಗೊಂಡಿತ್ತು. ಮುಖ್ಯಮಂತ್ರಿ ಏಕೀಕರಣ ವಿರೋಧಿ. ಕುವೆಂಪು ಅದರ ಪರವಾದಿ. ಕುವೆಂಪು ಏಕೀಕರಣದ ಪರವಾಗಿ ಅನೇಕ ಕಡೆ ಭಾಷಣಮಾಡುತ್ತಿದ್ದರು. ಕವಿತೆ ಬರೆಯುತ್ತಿದ್ದರು. ಅವರ ಈ ನಡವಳಿಕೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಯಿತು. ಸರಿ. ಕೆ.ಸಿ. ರೆಡ್ಡಿ ಸರ್ಕಾರ ಅವರಿಗೆ ನೋಟೀಸ್ ಜಾರಿಮಾಡಿತು. `ಸರ್ಕಾರದ ಸೇವೆಯಲ್ಲಿರುವ ನೀವು ಸರ್ಕಾರದ ನಿಲುವಿಗೆ ವಿರೋಧವಾಗಿ ಏಕೀಕರಣವನ್ನು ಬೆಂಬಲಿಸುತ್ತಿರುವುದಕ್ಕೆ ಕಾರಣಕೊಡಿ’ ಎಂಬುದು ನೋಟೀಸಿನ ಸಾರಾಂಶ. ಕುವೆಂಪು ಈ ನೋಟಿಸ್ಸಿಗೆ ಉತ್ತರವಾಗಿ ಒಂದು ದೊಡ್ಡ ಪದ್ಯವನ್ನೇ ಬರೆದು ಸರ್ಕಾರದ ಮುಖಕ್ಕೆ ಎಸೆದರು. ಆ ಪದ್ಯದ ಕೆಲವು ಸಾಲುಗಳು ಹೀಗಿದ್ದವು: “ನೃಪತುಂಗನೆ ಚಕ್ರವರ್ತಿ/ ಪಂಪನಿಲ್ಲಿ ಮುಖ್ಯಮಂತ್ರಿ/ ರನ್ನ ಜನ್ನ ನಾಗವರ್ಮ/ ರಾಘವಾಂಕ ಹರಿಹರ/ ಬಸವೇಶ್ವರ ನಾರಾಣಪ್ಪ/ ಸರ್ವಜ್ಞ ಷಡಕ್ಷರ/ ಸರಸ್ವತಿಯೆ ರಚಿಸಿದೊಂದು/ ನಿತ್ಯಸಚಿವ ಮಂಡಲ/ ತನಗೆ ರುಚಿರ ಕುಂಡಲ/ ಅಖಂಡ ಕರ್ನಾಟಕ/ ಅಲ್ತೊ ನಮ್ಮ ಕೀರ್ತಿಶನಿಯ  ರಾಜಕೀಯ ನಾಟಕ”

ಕುವೆಂಪು ಬರೆದ ಈ ಪದ್ಯರೂಪದ ಉತ್ತರ ಕೆ.ಸಿ.ರೆಡ್ಡಿಯವರ ಸರ್ಕಾರವನ್ನು ಮತ್ತಷ್ಟು ಕೆರಳಿಸುತ್ತದೆ. ಆಗ ಕುವೆಂಪು ಅವರನ್ನು ಏನು ಮಾಡಬಹುದೆಂದು ಸರ್ಕಾರ ನಿಟ್ಟೂರು ನಿಟ್ಟೂರು ಶ್ರೀನಿವಾಸರಾಯರನ್ನು ಸಲಹೆ ಕೇಳುತ್ತದೆ.  ನಿಟ್ಟೂರು ಶ್ರೀನಿವಾಸರಾಯರು ಆ ಕಾಲದ ಬಹುದೊಡ್ಡ ಕಾನೂನು ಪಂಡಿತರು. ಮೈಸೂರು ರಾಜ್ಯದ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿಗಳಾಗಿದ್ದವರು. ಮುಂದೆ ನೆಹರೂ ನೇತೃತ್ವದ ಮೊದಲ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ ಆ ಸರ್ಕಾರ ರಚಿಸಿದ ಕೇಂದ್ರ ವಿಚಕ್ಷಣಾ ಆಯೋಗ (Central Vigilance Commission) ದ ಮೊದಲ ಮುಖ್ಯಸ್ಥರಾಗುವ ಗೌರವಕ್ಕೆ ಪಾತ್ರರಾದವರು. ಕಾನೂನಿನ ವಿಷಯದಲ್ಲಿ ಹೀಗೆ ಪ್ರಕಾಂಡ ಪಂಡಿತರಾಗಿದ್ದ ನಿಟ್ಟೂರು ಶ್ರೀನಿವಾರಾಯರು ಕೇವಲ ಕಾನೂನಿನ ದೃಷ್ಟಿಕೋನದಿಂದಷ್ಟೇ ನೋಡದೇ ಎಲ್ಲಕಡೆಯಿಂದಲೂ ಸಮಸ್ಯೆಯನ್ನು ನೋಡಿ ಪರಿಶೀಲಿಸಿ ಅಂತಿಮವಾಗಿ ಸರ್ಕಾರಕ್ಕೆ ಕೊಟ್ಟ ಸಲಹೆ ಹೀಗಿತ್ತು: “ಪುಟ್ಟಪ್ಪ ಕೈ ಎತ್ತಿದರೆ ಕರ್ನಾಟಕವೇ ಕೈ ಎತ್ತುತ್ತದೆ. ಆದ್ದರಿಂದ ಸರ್ಕಾರ ಅವರಿಗೆ ನೀಡಿದ ನೋಟಿಸನ್ನು ವಾಪಸ್ಸು ಪಡೆಯುವುದು ಒಳ್ಳೆಯದು.”


ಅಲ್ಲಿಗೆ ಆ ನೋಟೀಸಿನ ಕಥೆ ಮುಗಿಯಿತು; ಇಲ್ಲಿಗೆ ನನ್ನ ಈ ಲೇಖನ ಕೂಡ!

******
ಡಾ. ರಾಜೇಂದ್ರ ಬುರಡಿಕಟ್ಟಿ
2017, ನವೆಂಬರ್ 30


Thursday, November 16, 2017

ಟಿಪ್ಪು ಶೃಂಗೇರಿ ಮಠಕ್ಕೆ ಬರೆದ ಪತ್ರಗಳ ಆಯ್ದ ಭಾಗಗಳು

ಟಿಪ್ಪು ಶೃಂಗೇರಿ ಮಠಕ್ಕೆ ಬರೆದ ಪತ್ರಗಳ ಆಯ್ದ ಭಾಗಗಳು
ಎಲ್ಲ ಪತ್ರಗಳ ಆರಂಭವು ಸಾಮಾನ್ಯವಾಗಿ ಹೀಗಾಗುತ್ತದೆ:

"ಶ್ರೀ ಮತ್ಪರಮಹಂಸಾದಿ ಯಥೋಕ್ತ ಬಿರುದಾಂಕಿತರಾದಂಥ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರಿಗೆ ಟೀಪು ಸುಲ್ತಾನ ಬಾದಶಹಾರವರ ಸಲಾಂ ಅದಾಗಿ . . . . ."
ಕೆಲವು ಪತ್ರಗಳ ಆಯ್ದಭಾಗಗಳು:
ಪತ್ರ 1
“ನೀವು ದೊಡ್ಡವರು, ತಪಸ್ವಿಗಳು; ಬಹುಜನ ಕ್ಷೇಮ, ಚಿಂತಿಸುವಂಥಾದು ನಿಮಗೆ ವಿಹಿತಧರ್ಮವಾದ ಕಾರನ ಶತ್ರುಗಳು ಯಾವತ್ತೂ ಪರಾಜಿತರಾಗಿ ಪಲಾಯನವಾಗುವ ಹಾಗೂ ಸ್ವದೇಶದ ಯಾವತ್ತೂ ಜನವೂ ಕ್ಷೇಮದಿಂದ ಇರುವ ಹಾಗೂ ನೀವು, ನಿಮ್ಮ ಬ್ರಾಹ್ಮಣರು ಸಹಿತವಾಗಿ ಈಶ್ವರ ಪ್ರಾರ್ಥನೆ ಮಾಡಿ ಸಕಲರೂ ಸುರಕ್ಷಿತವಾಗಿ ಇರುವ ಹಾಗೆ ಆಶೀರ್ವಾದ ಮಾಡಿಸಬೇಕು.”


ಪತ್ರ 2
“ಕಳುಹಿಸಿದ ಪತ್ರಿಕೆಯಿಂದ ಸಕಲಾಭಿಪ್ರಾಯವು ತಿಳಿಯಲಾಯಿತು. ಮರಾಟೇರ ಕಡೆ ಕುದುರೆಯವರು ಬಂದು ಶೃಂಗೇರಿಯಲ್ಲಿ ಇದ್ದ ಬ್ರಾಹ್ಮಣರು ಮುಂತಾದವರನ್ನು ಬಹಳ ಘಾತಪಾತಗಳ ಮಾಡಿ, ಶಾರದಾ ಅಮ್ಮನವರನ್ನು ಕಿತ್ತುಹಾಕಿ, ಮಠದಲ್ಲಿ ಇದ್ದ ಯಾವತ್ತೂ ಸಾಮಾನು ತೆಗೆದುಕೊಂಡು ಹೋದ ಕಾರಣ, ನಾಲ್ಕು ಜನ ಶಿಷ್ಯರು ಸಹ ಕಾರಕಳಕ್ಕೆ ಬಂದು ಇರುವುದರಿಂದ ಶಾರದಾ ಅಮ್ಮನವರು ಯುಗಾಂತರದಲ್ಲಿ ಪ್ರತಿಷ್ಠೆ ಆದದ್ದೇ ಹೊರತು ಮತ್ತೊಂದಲ್ಲ. ಈ ದೇವರ ಪ್ರತಿಷ್ಠೆ ಆಗಬೇಕಾದರೆ ಸರಕಾರದಿಂದ ಕುಮ್ಮಕ್ಕು ಆಗಿ ದೇವರ ಪ್ರತಿಷ್ಠೆ ಮಾಡಿಸಿದಲ್ಲಿ ಸೂರ್ಯಚಂದ್ರರು ಉಳ್ಳ ಪರಿಯಂತರ ಕೀರ್ತಿ ನಿಲ್ಲುತ್ತಾ ಇದ್ದೀತು. ಈ ಬಗೆ ದವಸ, ಜಿನಸು, ಸಹ ಕೊಡುವ ಹಾಗೆ ಅಪ್ಪಣೆ ಆದಲ್ಲಿ ಸಂತರ್ಪಣೆ ಮಾಡಿಸಿ, ಪ್ರತಿಷ್ಠೆ ಮಾಡಿಸುವುದಾಗಿ ಬರೆದು ಇದ್ದುದು ಸರಿಯಷ್ಟೆ. ಅಂಥಾ ಸ್ಥಳಕ್ಕೆ ಈಗ್ಗೆ ದ್ರೋಹಿತನಾ ಮಾಡಿದ ಮೇಲೆ ಕಲಿಯುಗದಲ್ಲಿ ಮಾಡಿದ್ದನ್ನು ತ್ವರೆಯಿಂದಲೇ ಅವರು ನುಭವಿಸಬೇಕಾದೀತು. ಗುರುದ್ರೋಹ ಮಾಡಿದ್ದಕ್ಕೆ ವಂಶ ನಾಶ ಆಗುವುದರಲ್ಲಿ ಸಂದೇಹವಿಲ್ಲ. ಈ ತುಂಟ ಜನರು ಪ್ರಜೆಗಳು ಮುಂತಾದವರಿಗೆ ಸಂಕಟಪಡಿಸುವರು ನೀವು ಪ್ರತ್ಯಕ್ಷ ನೋಡಿಯೇ ಇದ್ದೀರಿ. ಇದಕ್ಕೆ ಅವರು ಯಾವ ಪ್ರಕಾರ ಕ್ಷೀಣಗತಿ ಆಗಬೇಕೋ ಆ ಮೇರೆಗೆ ಆಶೀರ್ವಾದ ಮಾಡುವುದು.”
“ಪ್ರಕೃತ ಶಾರದಾ ಅಮ್ಮನವರ ಪ್ರತಿಷ್ಠೆ ಬಗ್ಗೆ ನಗದೂನು ಇನ್ನೂರು ರಹತಿ, ದವಸಾನೂ ಇನ್ನೂರು ರಹತಿ, ಉಭಯಂ ನಾನೂರು ರಹತಿ ಸರಕಾರದಿಂದ ಕೊಡುವ ಹಾಗೂ ಇದು ಹೊರತು ಇನ್ನೂ ಏನು ಜಿನಿಸು ಬೇಕಾದರೂ ಕ್ರಯಕ್ಕೆ ಕೊಡಿಸುವ ಹಾಗೆ ಸಹ ನಗರದ ಅಸಫನಿಗೆ ಮನಷೂರ್ ಮಲಪೂಫಿ ಮಾಡಿ ಕಳುಹಿಸಿ ಇದ್ದೀತು. ಮನಷೂರನ್ನು ಅಸಫನ ಬಳಿಗೆ ಕಳುಹಿಸಿ, ನಗದು –ದವಸ ಸಹ ತರಿಸಿಕೊಂಡು, ಸಂತರ್ಪಣೆ ಮಾಡಿಸಿ, ಶಾರದಾ ಅಮ್ಮನವರ ಪ್ರತಿಷ್ಠೆ ಮಾಡಿಸಿ, ದೇವರ ಸೇವೆಯು ನಡೆಯುವಂತೆ ಮಾಡಿಸುತ್ತಾ, ನಮ್ಮ ಶ್ರೇಯಸ್ಸು ಅಭಿವೃದ್ಧಿ ಆಗುವ ಹಾಗೂ ಶತ್ರುನಾಶ ಆಗುವ ಪ್ರಕಾರಕ್ಕೆ (ಸಹ) ತಪಸ್ಸು ಮಾಡಿಕೊಂಡು, ಸ್ವಸ್ಥದಲ್ಲಿ ಇರುವಂತೆ ಮಾಡಿಸುವುದು.”
ಪತ್ರ 3
“ತಮ್ಮ ಸ್ವಾರಿ ಬಗ್ಗೆ ಒಂದು ಪಾಲಕಿ, ಅದರ ಸರಂಜಾವು ಸುದಾ ಕೊಡಿಸುವ ಹಾಗೆ ನಗರದ ಅಸಫನಿಗೆ ಬರೆಯಲಾಗಿದೆ.” . . . .”ಶತ್ರುನಾಶ ಆಗುವ ಪ್ರಕಾರ, ಸರಕಾರದ ಶ್ರೇಯೋಭಿವೃದ್ಧಿ ಆಗುವ ಮೇರೆಗೆ ಆಶೀರ್ವಾದ ಮಾಡುತ್ತಾ ಬರಬೇಕು.”
“ರಾಜದ್ರೋಹ ಮಾಡಿದವರಿಗೆ ನಾಶವಾಗುವಂತೆ ಸಹ ಈಶ್ವರ ಧ್ಯಾನವನ್ನು ಮಾಡುವುದು. ಈಶ್ವರನ ಕಟಾಕ್ಷದಿಂದಲೂ ನಿಮ್ಮ ಆಶೀರ್ವಾದದಿಂದಲೂ ಲೋಕಕ್ಕೆ ಉಪದ್ರವ ಶೀಘ್ರ ಪರಿಹಾರವಾದೀತು.”.. “ಈಶ್ವರ ಧ್ಯಾನ ಏಕನಿಷ್ಠೆಯಿಂದ ಮಾಡುವ ಸಮಯದಲ್ಲಿ ಸರಕಾರ ಅಹಮ್ಮದಿಗೋಸ್ಕರ ಸಕಲ ಮನೋರಥ ಸಿದ್ಧಿ ಆಗುವಂತೆ ಆಶೀರ್ವಾದ ಮಾಡುವುದು.”
ಪತ್ರ 5
“ದಿನೇ ದಿನೇ ಜಯವಾಗುವ ಹಾಗೂ ಲೋಕಾರಿಷ್ಟ ಪರಿಹಾರವಾಗುವ ಹಾಗೂ, ಜನರು ಸೌಖ್ಯವಾಗಿರುವಂತೆಯೂ, ಗುರುದ್ರೋಹ ಮೊದಲಾದ ದ್ರೋಹಗಳ ಮಾಡಿದವರು ನಾಶ ಹೊಂದುವಂತೆ ಸಹ ಈಶ್ವರಧ್ಯಾನವನ್ನು ಏಕನಿಷ್ಠೆಯಿಂದ ಮಾಡುತ್ತಾ ಬರುವುದು.”
ಪತ್ರ 6
“ರಾಜಕ್ಷೋಭೆ ಪರಿಹಾರವಾಗಿ ಪ್ರಜೆಗಳು ಸ್ವಸ್ಥದಲ್ಲಿ ಇರುವ ಬಗ್ಗೆ ಸರ್ಕಾರದ ಶ್ರೇಯೋಭಿವೃದ್ಧಿ ಆಗಿ, ಶತ್ರುನಾಶ ಾಗಬೇಕೆಂದು ತಮ್ಮ ಚಿತ್ತಕ್ಕೆ ತಂದು, ಸಹಸ್ರ ಚಂಡಿ ಜಪ ಮಾಡಿಸಬೇಕೆಂದು ಬರೆಸಿ ಕಳುಹಿಸಿದ್ದು ನೋಡಿ, ಸಂತೋಷವಾಯಿತು. ಅದೇ ಪ್ರಕಾರ ಜಪ ಮಾಡತಕ್ಕ ಬಗ್ಗೆ ಬೇಕಾದ ಸಾಮಾನು ಯಾವತ್ತು ತರಿಸಿಕೊಡುವ ಹಾಗೆ ಹುಕುಂನಾಮೆ ಬರೆಸಿ, ಖಾಸ್ ದಸಕತ್ ಮೊಹರ ಮಾಡಿ, ಅಸಫನ ಬಳಿಗೆ ಕಳುಹಿಸಿ ಇದ್ದೀತು.”
ಪತ್ರ: 7
“ವಿದ್ಯುಕ್ತವಾಗಿ ಜಪವನ್ನು ಮಾಡಿಸುತ್ತಾ, ಬ್ರಾಹ್ಮಣರಿಗೆ ದಕ್ಷಿಣೆ ಮುಂತಾಗಿ ಕೊಡಿಸಿ, ನಿತ್ಯದಲ್ಲೂ ಸಹಸ್ರ ಬ್ರಾಹ್ಮಣರು ಭೋಜನವನ್ನು ಆಗುವ ಹಾಗೆ ಮಾಡಿಸಿ, ಸರಕಾರದ ಶ್ರೇಯೋಭಿವೃದ್ಧಿ ಆಗುವ ಹಾಗೂ ಶತ್ರುನಾಶವಾಗಿ ಪ್ರಜೆಗಳು ಸ್ವಸ್ಥದಲ್ಲಿ ಇರುವ ಪ್ರಕಾರ ಜಪ ಮಾಡುವಂತೆ ಮಾಡಿಸುವುದು”. . . “ಈಶ್ವರ ಪ್ರಾರ್ಥನೆ ಮಾಡಿ ಸರ್ವದಾ ಆಶೀರ್ವಾದ ಮಾಡುವಂತೆ ಮಾಡಿಸುವುದು.”
ಪತ್ರ 8
ಜಪವನ್ನು ಸಾಂಗವಾಗಿ ನೆರವೇರಿಸಲು ತುಂಟರು ಬಂದು ಮಠಾಧಿಕಾರಿಗಳಿಗೆ ತೊಂದರೆ ಮಾಡದಂತೆ ಬಂದೋಬಸ್ತ್ ಮಾಡುವ ಹಾಗೆ ಮಹಮದ್ ರಜಾಗೆ ಪರವಾನೆ ಕಳುಹಿಸಿರುವುದಾಗಿ ತಿಳಿಸುತ್ತದೆ.
ಪತ್ರ 9
“ಮಠದಿಂದ ಅರವತ್ತು ಲಕ್ಷ ರೂಪಾಯಿ ಸಾಮಾನು ಲೂಟಿಸಿ ಹೋಗಿ ಇರುವುದು ಕೊಟ್ಟು ಕಳುಹಿಸಿದ್ದೀರಷ್ಟೆ. ಈ ತಾಕೀತಿ ಪರಶುರಾಮನಿಗೆ ತೋರಿಸಿ, ಸಾಮಾನು ಕೊಡು, ಎಂಬುದಾಗಿ ಕೇಳುವುದು. ಸಾಮಾನು ಕೊಟ್ಟರೆ ಸರಿ; ಇಲ್ಲವಾದರೆ ತಾಕೀತಿ ಹಿಂದಕ್ಕೆ ತೆಗೆದುಕೊಂಡು, ಸಾಬೀತು ಅಪ್ಪಣೆ ಕೊಡಿಸಿ ಇರುವ ಮೇರೆಗೆ ಮುಂದೆ ಸಾಹಿ ಹೋಗುವ ಹಾಗೆ ಸಹ ಬರೆದು ಕಳುಹಿಸುವುದು”
*****
ಮೂಲ: ನಮ್ಮ ಹಿಂದಿನ ತಲೆಮಾರಿನ ಬಹುಮುಖ್ಯ ಪತ್ರಕರ್ತರೂ ಸಾಹಿತಿಗಳೂ ಆಗಿದ್ದ ತಿ.ತಾ.ಶರ್ಮ ಅವರು 1962-63ರಲ್ಲಿ ಹೊತ್ತಿಗೆ `ಕರ್ಮವೀರ’ ಪತ್ರಿಕೆಯಲ್ಲಿ ಬರೆದ ಲೇಖನ ಸರಣಿ “ಮೈಸೂರು ಇತಿಹಾಸದ ಹಳೆಯ ಪುಟಗಳು’ ಕೃತಿ.
ಮೋದಲ ಸಂಗ್ರಹ: ವಿಶ್ರಾಂತ ನ್ಯಾಯಮೂರ್ತಿಗಳೂ ಹಿರಿಯ ಸಾಹಿತಿಗಳೂ ಆದ ಕೋ. ಚೆನ್ನಬಸಪ್ಪ ಅವರು.
ನಂತರದ ಸಂಗ್ರಹ: ಡಾ. ರಾಜೇಂದ್ರ ಬುರಡಿಕಟ್ಟಿ
ಗಮನಿಸಿ:ತಿರುಮಲೆ ತಾತಾಚಾರ್ಯ ಶರ್ಮಾ ಅವರು ಹಿಂದೂಧರ್ಮವನ್ನು ಉದ್ಧಾರ ಮಾಡಲೆಂದೇ ಸ್ಥಾಪನೆಯಾದ ವಿಜಯನಗರ ಸಾಮ್ರಾಜ್ಯದ ರಾಜ ಪುರೋಹಿತರ ವಂಶಸ್ಥರು. ಹಿಂದೂಧರ್ಮದ ಬಗ್ಗೆ ಅಪಾರವಾದ ಶ್ರದ್ಧೆ ಇಟ್ಟುಕೋಂಡಿದ್ಗ ಮಹಾನ್ ವಿದ್ವಾಂಸರು. ಇತಿಹಾಸ ಸಂಶೋಧಕರೂ ಆಗಿದ್ದ ಅವರು ಭಾರತ ಸರ್ಕಾರದ ಶಾಸನ ಇಲಾಖೆಯಲ್ಲಿ ಹಲವು ವರ್ಷ ಕೆಲಸಮಾಡಿ ಈ ಬಗ್ಗೆ ಅನುಭವ ಪಡೆದವರು. ಕಾಸರಗೋಡು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದ ಮಹನೀಯರು. ಅವರು ಮೊಟ್ಟಮೊದಲು ಸಾರ್ವಜನಿಕಗೋಳಿಸಿದ ಟಿಪ್ಪುವಿನ ಈ ಪತ್ರಗಳು ಕನ್ನಡದಲ್ಲಿಯೇ ಬರೆಯಲ್ಲಪಟ್ಟಿವೆ. ಕೆಲವನ್ನು ಮಾತ್ರ ಇಲ್ಲಿ ಕೊಡಲಾಗಿದೆ. ಇವಲ್ಲದೇ ಇನ್ನೂ ಮುಖ್ಯವಾದ ಪತ್ರಗಳೂ ಇವೆ.
*****
ಡಾ. ರಾಜೇಂದ್ರ ಬುರಡಿಕಟ್ಟಿ
09-11-2017

ಟಿಪ್ಪು ಬಗ್ಗೆ ಮಹಾತ್ಮಾಗಾಂಧಿ ಅಭಿಪ್ರಾಯವೇನು ?

 ಟಿಪ್ಪು ಬಗ್ಗೆ ಮಹಾತ್ಮಾಗಾಂಧಿ ಅಭಿಪ್ರಾಯವೇನು ?
“ಪಾಶ್ಚಾತ್ಯ ಇತಿಹಾಸಕಾರರ ಅಭಿಪ್ರಾಯದಲ್ಲಿ ಮೈಸೂರಿನ ಅರಸ ಫತ್ತೆ ಆಲಿ ಟಿಪ್ಪು ಒಬ್ಬ ಮೂಢ, ಮೂರ್ಖ ಮುಸ್ಲಿಂ. ಅವನು ತನ್ನ ಪ್ರಜೆಗಳಾದ ಹಿಂದುಗಳನ್ನು ಹಿಡಿದು ಬಲವಂತವಾಗಿ ಇಸ್ಲಾಂ ಮತಕ್ಕೆ ಸೇರಿಸಿದ. ಆದರೆ ಇದೊಂದು ದೊಡ್ಡ ಸುಳ್ಳಿನ ಕಂತೆ. ಆಗ ಹಿಂದು-ಮುಸ್ಲಿಂಗಳ ಬಾಂಧವ್ಯ ಸ್ನೇಹಮಯವಾಗಿತ್ತು; ಇದು ಸತ್ಯಾಂಶ. ಟೀಪುವಿನ ಜೀವನ ಕಾಲದಲ್ಲಿ ಅವನು ಸಾಧಿಸಿದ ಕೆಲಸವೇ ಸಾಕು – ಅದೊಂದು ಆನಂದದ ಮೂಲ; ಅದೊಂದು ಸ್ಪೂರ್ತಿಯ ಮೂಲ. ಆ ಕಾಲದಲ್ಲಿ ಹಿಂದೂಗಳೂ ಮುಸ್ಲಿಮರೂ ಇಬ್ಬರೂ ತಮ್ಮ ಬಾಗಿಲ ಬಳಿಯ ಪರದೇಶಿ ಶತ್ರುವನ್ನು ನೋಡದೇ ಉದಾಸೀನ ಮಾಡಿದರು; ತಮ್ಮಲ್ಲಿ ತಾವೇ ಹೊಡೆದಾಡಲಾರಂಭಿಸಿದರು. ಮಹಾಪ್ರಭು ಆ ಟಿಪ್ಪುವಿನ ಮಹಾಮಂತ್ರಿ ಯಾರು ? ಅವನೊಬ್ಬ ಹಿಂದು. ಸ್ವಾತಂತ್ರ್ಯ ಪ್ರವಾದಿ ಈ ಟಿಪ್ಪುವನ್ನು ಶತ್ರುಗಳಿಗೆ ಹಿಡಿದೊಪ್ಪಿಸಿದ ಸ್ವಾಮಿದ್ರೋಹಿ ಇವನೇ ಎಂಬುದನ್ನು ನಾನು ನಾಚಿಕೆಯಿಂದ ಒಪ್ಪಿಕೊಳ್ಳಬೇಕು”
- ಮಹಾತ್ಮಾ ಗಾಂಧಿ
(ಟಿಪ್ಪು ಸ್ಮಾರಕೋತ್ಸವ (1945) ಸಂದರ್ಭದಲ್ಲಿ ಎ.ಜೆ. ಖಲೀಲರಿಗೆ ಬರೆದ ಪತ್ರದಲ್ಲಿ)
*****
ಉಲ್ಲೇಖ: ವಿಶ್ರಾಂತ ನ್ಯಾಯಮೂರ್ತಿಗಳೂ ಬಿಜಾಪುರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರೂ ಆದ ಸಾಹಿತಿ ಕೋ.ಚೆನ್ನಬಸಪ್ಪನವರು.
********
ರಾಜೇಂದ್ರ ಬುರಡಿಕಟ್ಟಿ
೦೭-೧೧-೨೦೧೭

Monday, November 6, 2017

ಮಾಸ್ತಿ ಹೇಳುವ ಟಿಪ್ಪು ಕಥೆ….

ಮಾಸ್ತಿ ಹೇಳುವ ಟಿಪ್ಪು ಕಥೆ….
ಕನ್ನಡಕ್ಕೆ ನಾಲ್ಕನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ `ಚಿಕವೀರ ರಾಜೇಂದ್ರ’ ಮೈಸೂರು-ಕೊಡಗು ರಾಜ್ಯಗಳನ್ನು ಬ್ರಿಟೀಷರು ವಶಪಡಿಸಿಕೊಳ್ಳುವ ಕಾಲಘಟ್ಟದ ಮಹತ್ವದ ಸಮಾಜೋರಾಜಕೀಯ ವಿದ್ಯಮಾನಗಳನ್ನು ದಾಖಲಿಸುವ ಕೃತಿ. ಅನೇಕ ದೇಶೀಯ ರಾಜರ ಮತ್ತು ಬ್ರಿಟಿಷ್ ಸರ್ಕಾರದ ದಾಖಲೆಗಳನ್ನು ಹಾಗೇ ವಿದ್ವಾಂಸರ ಸಂಶೋಧನಾ ಸತ್ಯಗಳನ್ನು ಬಳಸಿಕೊಂಡಿರುವ ಈ ಕೃತಿ ನಮ್ಮ ನಾಡಿನ ಹಾಗೇ ದೇಶದ ಆಧುನಿಕ ಕಾಲಘಟ್ಟದ ಇತಿಹಾಸದ ಮೇಲೆ ಬೆಳಕುಚೆಲ್ಲುವ ಅನೇಕ ಅಂಶಗಳನ್ನು ಒಳಗೊಂಡಿದೆ. ಕರ್ನಾಟಕ ಏಕೀಕರಣವಾದ ವರ್ಷವೇ (1956) ಪ್ರಕಟವಾದ ಈ ಕೃತಿಯನ್ನು ಬರೆದ ಮಾಸ್ತಿಯವರು ಕನ್ನಡದ ಅಗ್ರಗಣ್ಯ ಸಾಹಿತಿಯಾಗಿದ್ದವರು ಮಾತ್ರವಲ್ಲ; ಬ್ರಿಟೀಷ್ ಸರ್ಕಾರದ ಉನ್ನತ ಹುದ್ದೆಯಲ್ಲಿ ಇದ್ದವರು; ಆ ಕಾರಣಕ್ಕೆ ಆ ಸರ್ಕಾರದ `ಒಳಗೂ’ `ಹೊರಗೂ’ ಬಲ್ಲವರು.

 ಅವರು ಕೊಡಗು ಮೈಸೂರು ಭಾಗದಲ್ಲಂತೂ ಹಳ್ಳಿಹಳ್ಳಿಯಲ್ಲಿ ತಿರುಗಾಡಿ ಜನರ ಬದುಕು ಭಾವನೆಗಳನ್ನು ಖುದ್ದಾಗಿ ಕಂಡು ಅನುಭವ ಪಡೆದಿದ್ದವರು. ಅವರ ಈ ಕೃತಿಯಲ್ಲಿ ಮೈಸೂರು ಮತ್ತು ಕೊಡಗು ರಾಜ್ಯಗಳು ಬ್ರಿಟೀಷರ ವಶವಾಗಲು ಕಾರಣವಾದ ಅನೇಕ ಮುಖ್ಯವಾದ ಅಂಶಗಳನ್ನು ದಾಖಲಿಸಿದ್ದಾರೆ. ಅದರಲ್ಲಿ ಮುಖ್ಯವಾದ ಎರಡು ಸಂಗತಿಗಳನ್ನು ಇಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಗುತ್ತಿದೆ. ಅವೆಂದರೆ ಮೊದಲನೆಯದು `ಟಿಪ್ಪು-ಬ್ರಿಟೀಷರು-ಮೈಸೂರು’ ಈ ಬಗ್ಗೆ ಇರುವ ಸಂಗತಿಗಳು, ಎರಡನೆಯದು ಹೈದರ್-ಟಿಪ್ಪು-ಬ್ರಿಟೀಷರು-ಕೊಡಗು’ ಈ ಬಗ್ಗೆ ಇರುವ ಸಂಗತಿಗಳು. ಮುಖ್ಯವಾದ ಎರಡು ಸಂದರ್ಭಗಳಲ್ಲಿ ಇವು ಕೃತಿಯಲ್ಲಿ ದಾಖಲಾಗಿವೆ. ಈ ಎರಡೂ ಸನ್ನಿವೇಶಗಳು ಬರುವುದು ಕೊಡಗಿನ ಕೊನೆಯ ರಾಜ ಚಿಕವೀರ ರಾಜೇಂದ್ರನ ಆತಿಥ್ಯವನ್ನು ಸ್ವೀಕರಿಸಿ ಅರಾಮಾಗಿರಲೆಂದು ಒಂದು ವಾರದ ಮಟ್ಟಿಗೆ ಕೊಡಗಿನಲ್ಲಿ ಇರಲು ಬರುವ ಬ್ರಿಟೀಷ್ ಅಧಿಕಾರಿಗಳ ತಂಡದ ಉಪಚಾರದ ಭಾಗವಾಗಿ. ಅವುಗಳಲ್ಲಿ ಮೊದಲು ಮೈಸೂರು ರಾಜ್ಯದ ಕುರಿತು ಇರುವ ವಿವರಗಳನ್ನು ನೋಡಬಹುದು.

ಮೊದಲ ಸನ್ನಿವೇಶದಲ್ಲಿ ಕಾದಂಬರಿಯ ಯಾವ ಪಾತ್ರದ ಬಾಯಿಂದಲೂ ಹೇಳಿಸದೇ ಕೃತಿಯ ಲೇಖಕರಾದ ಮಾಸ್ತಿಯವರೇ ನೇರವಾಗಿ ಹೇಳುವ ಈ ಮಾತುಗಳನ್ನು ಗಮನಿಸಿ: “ಹೈದರನೊಂದಿಗೆ ಜಗಳಮಾಡುವಂದು ಮೈಸೂರಿನ ಭೂಮಿಯ ಮೇಲೆ ಓಡಾಡಿ, ದೊಡ್ಡವೀರರಾಜನೊಂದಿಗೆ ಸಹಕರಿಸುತ್ತ ಕೊಡಗಿನ ಭೂಮಿಯಲ್ಲಿ ಸುತ್ತಿ ಆಂಗ್ಲರು, ‘ಮೈಸೂರಾಗಲಿ ಕೊಡಗಿನ ನಾಡಾಗಲಿ ಚಿನ್ನದ ಭೂಮಿ; ಇಂಥ ನೆಲ ಕೈಗೆ ಸಿಕ್ಕುವುದು ಅಪರೂಪದ ಪುಣ್ಯ’ ಎಂದು ಮನಗಂಡಿದ್ದರು. ಟಿಪ್ಪು ಕೊನೆಯ ಸಲ ಸೋತು ಮೈಸೂರು ರಾಜ್ಯದ ಪುನರ್ವ್ಯವಸ್ಥೆ ಚರ್ಚೆಗೆ ಬಂದಾಗ ಆಂಗ್ಲ ಅಧಿಕಾರಿಗಳಲ್ಲಿ ಎರಡು ಪಂಗಡವೇ ಏರ್ಪಟ್ಟವು. ‘ರಾಜ್ಯವನ್ನು ನಮಗೆ ಹಿಂದಕ್ಕೆ ಕೊಡಿಸಿ ಎಂದು ಕೇಳಿ ಆ ಕೆಲಸದಲ್ಲಿ ರಾಜಮಾತೆ ನಮಗೆ ತುಂಬಾ ಸಹಾಯ ನೀಡಿದರು ಅವರ ವಿಶ್ವಾಸಕ್ಕೆ ನಾವು ದ್ರೋಹ ಮಾಡಬಾರದು. ಅವರ ರಾಜ್ಯವನ್ನು ಅವರಿಗೆ ಕೊಡುವುದೇ ನ್ಯಾಯ’ ಎಂದು ಒಂದು ಗುಂಪಿನ ವಾದ. ‘ನ್ಯಾಯ ನೋಡುತ್ತ ಕುಳಿತರೆ ರಾಜ್ಯವನ್ನು ಸಂಪಾದಿಸುವುದು ಹೇಗೆ? ಈ ಜನಕ್ಕೆ ಆಳುವ ಯೋಗ್ಯತೆ ಇದೆಯೇ? ಇವರನ್ನು ಗಾದಿಯ ಮೇಲೆ ಕೂಡಿಸಿದರೆ ಇವರನ್ನು ನಾವೇ ನೋಡಿಕೊಳ್ಳಬೇಕು. ಈ ಸುತ್ತುಬಳಸಿನ ವರ್ತನೆಯಿಂದ ಏನು ಪ್ರಯೋಜನ? ರಾಜರಾಗಿದ್ದವರು ಸಹಾಯ ಮಾಡಿದರಲ್ಲ ಎನ್ನುವುದಾದರೆ ಕೆಲವು ಲಕ್ಷ ವರ್ಷಾಶನ ಕೊಡೋಣವಂತೆ. ದೇಶವನ್ನು ನಾವು ಕೈಗೆ ತೆಗೆದುಕೊಳ್ಳುವುದೇ ಸರಿ’ ಎನ್ನುವುದು ಪ್ರತಿಪಕ್ಷ. ಈ ಪಕ್ಷಗಳ ಮಧ್ಯದ ವಾದ ಹರಿಯುವುದು ಕಷ್ಟವಾಯಿತು.

 
ಕೊನೆಗೆ ಅದು ಹರಿದದ್ದಾದರೂ ಧರ್ಮ ನ್ಯಾಯಗಳ ದೃಷ್ಟಿಯಿಂದ ಅಲ್ಲ. ‘ಟಿಪ್ಪುವನ್ನು ಸೋಲಿಸಬೇಕಾದರೆ ನಿಜಾಮ, ಮರಾಠ, ಆಂಗ್ಲರಿಗೆ ಸಹಾಯ ನೀಡಿದ್ದರು. ಮೈಸೂರನ್ನು ಅರಸರಿಗೆ ಒಪ್ಪಿಸಿಲ್ಲವೆಂದರೆ ಟಿಪ್ಪುವಿನ ಕೈಯಲ್ಲಿದ್ದ ಈ ವಿಸ್ತಾರದ ನೆಲವನ್ನು ಆಂಗ್ಲ ಒಬ್ಬನೇ ನುಂಗುವಂತಿಲ್ಲ. ನಿಜಾಮನಿಗೆ ಪಾಲು ಕೊಡಬೇಕು; ಮರಾಠನಿಗೆ ಪಾಲು ಕೊಡಬೇಕು. ಟಿಪ್ಪುವನ್ನು ಸೋಲಿಸಲು ನಾವು ನಿಮಗೆ ಸಾಹಯ ಮಾಡಿದವರು ಎಂದು ಅವರಿಬ್ಬರಿಗೂ ಸೊಕ್ಕು. ಅವರು ಈಗಾಗಲೇ ಪ್ರಬಲರಾಗಿದ್ದಾರೆ ಮತ್ತಷ್ಟು ನೆಲ ಕೊಟ್ಟರೆ ಅವರನ್ನು ಹಿಡಿಯುವವರಾರು? ಒಬ್ಬ ಟಿಪ್ಪುವನ್ನು ಸೋಲಿಸಿ ಇಬ್ಬರು ಟಿಪ್ಪುಗಳನ್ನು ಉತ್ಥಾಪನೆ ಮಾಡಿದಂತಾದೀತು. ಮೈಸೂರು ರಾಜ್ಯವನ್ನು ಹಿಂದೂ ರಾಜನಿಗೆ ಕೊಟ್ಟರೆ ಆಂಗ್ಲರು ಉಪಕಾರ ಮಾಡಿದರು ಎಂದು ಅವನು ಕೃತಜ್ಞತೆಯಿಂದ ನಡೆಯುತ್ತಾನೆ; ನಿಜಾಮನಿಗೆ ಮರಾಠನಿಗೆ ಪ್ರತಿಕಕ್ಷಿಯಾಗಿ ಮೂರನೆಯ ಒಂದು ಶಕ್ತಿಯಾಗಿ ಅವಶ್ಯಕ ಬಿದ್ದಾಗ ನಮ್ಮ ಪಕ್ಕದಲ್ಲಿ ನಿಲ್ಲುತ್ತಾನೆ’ ಹೀಗೆಂಬ ಒಂದು ಯೋಚನೆಯಿಂದ ಆಂಗ್ಲರು ಮೈಸೂರನ್ನು ಹಿಂದೂ ರಾಜನಿಗೆ ಹಿಂದಕ್ಕೆ ಕೊಟ್ಟರು.

ಮೂವತ್ತು ವರುಷದ ಹಿಂದೆ ಆ ಹೊಸದರಲ್ಲಿ ಸ್ಥಳವಾಸಿಯಾಗಿರಲು ಬಂದ ಅಧಿಕಾರಿ, ಅವನ ಸಹಾಯಕರು, ಇವರಲ್ಲಿ ಮೂರು ಪಾಲು ಜನ ‘ಅಯ್ಯೋ ಇಂಥ ನೆಲವನ್ನು ನಾವು ಸ್ವಂತಕ್ಕಿಟ್ಟುಕೊಳ್ಳದೆ ಹಿಂದಕ್ಕೆ ಕೊಟ್ಟೆವೇ’ ಎಂದು ದುಃಖಪಟ್ಟವರೆ. ಆ ಮೇಲೆ ಇಪ್ಪತ್ತು ವರುಷದಲ್ಲಿ ಟಿಪ್ಪುವಿನ ಸೋಲಿನ ಸಂದರ್ಭದ ಕಾವು ಆರಿ ಆಂಗ್ಲ ಮನೋಧರ್ಮ ಮತ್ತಷ್ಟು ಬೇರೆಯಾಯಿತು. ಆಗ ಪ್ರತಿಕಕ್ಷಿಯಾಗಿದ್ದ ಮರಾಠ ಈಗ ಮೂಲೆಗೆ ಬಿದ್ದಿದ್ದ; ಒಬ್ಬೊಂಟಿಯಾಗಿ ನಿಜಾಮ ಮರಾಠನ ಗತಿ ತನಗೂ ಬಂದೀತೆಂದು ಭೀತಿಯಲ್ಲಿದ್ದ. ಹೆಬ್ಬಾವಿನ ಮನೋಧರ್ಮದ ಆಂಗ್ಲ ಅಧಿಕಾರಿಗಳು ಸಮಯ ಬಂದೀತೇ ಎಂದು ಕಾದರು; ಮೈಸೂರಿನ ಅರಸನ ಅಧಿಕಾರಿಗಳ ಮುಟ್ಟಾಳತನದಿಂದ ರಾಜ್ಯದಲ್ಲಿ ಗೊಂದಲ ಎದ್ದಾಗ ಅದನ್ನೇ ನೆಪ ಮಾಡಿಕೊಂಡರು; ಅರಸನನ್ನು ಗಾದಿಯಿಂದಿಳಿಸಿದರು; ಮೈಸೂರನ್ನು ಕಬಳಿಸಿದರು.”
         
ಮಾಸ್ತಿ ಕೊಡುವ ಮೇಲಿನ ವಿವರಗಳಿಂದ ಬಹುಮುಖ್ಯವಾದ ಎರಡು-ಮೂರು ಸಂಗತಿಗಳು ಮನನವಾಗುತ್ತವೆ. ಅವೆಂದರೆ ಬ್ರಿಟೀಷರು ಕೊಡಗು ಮತ್ತು ಮೈಸೂರು ರಾಜ್ಯಗಳ ಪ್ರಾಕೃತಿಕ ಸಂಪತ್ತಿನ  ಮೇಲೆ ಕಣ್ಣಿಟ್ಟು ಅವನ್ನು ವಶಪಡಿಸಿಕೊಳ್ಳಲು ಆದ್ಯತೆ ನೀಡಿ ಸಮಯ ಕಾಯುತ್ತಿದ್ದರು. ಎರಡನೆಯದು ಟಿಪ್ಪುವನ್ನು ಸೋಲಿಸಲು ಮೈಸೂರಿನ ರಾಣಿ `ಬಹಳ ದೊಡ್ಡಮಟ್ಟದ’ ಸಹಾಯವನ್ನು ಬ್ರಿಟೀಷರಿಗೆ ಮಾಡಿದಳು. ಮೂರನೆಯದು ಬ್ರಿಟೀಷರು ಗೆದ್ದ ಮೈಸೂರು ರಾಜ್ಯವನ್ನು ಹಂಚುವಾಗ ಹೈದರ್ ಮತ್ತು ಟಿಪ್ಪು ಕಾಲದಲ್ಲಿ ವಿಸ್ತರಿಸಲ್ಪಟ್ಟಿದ್ದ ಭಾಗವನ್ನು ಮರಾಠರಿಗೆ ಮತ್ತು ನಿಜಾಮನಿಗೆ ಹಂಚಿ ಉಳಿದ ಸಣ್ಣ ಮೈಸೂರು ರಾಜ್ಯವನ್ನು ಮೈಸೂರು ರಾಣಿಗೆ ಮರಳಿಕೊಡುವಲ್ಲಿ ಅವರಿಗೆ ಮತೀಯ ಅಂಶಗಳನ್ನು ಬೆರೆತ ರಾಜಕೀಯ ಲೆಕ್ಕಾಚಾರಗಳಿದ್ದವು.

ಮಾಸ್ತಿ ಟಿಪ್ಪುವನ್ನು ಸೋಲಿಸಲು ಮೈಸೂರು ರಾಣಿ ಬ್ರಿಟೀಷರಿಗೆ `ಬಹಳಷ್ಟು ಸಹಾಯ’ ಮಾಡಿರುವುದನ್ನು ಬ್ರಿಟೀಷ್ ಅಧಿಕಾರಿಗಳ ಬಾಯಿಂದಲೇ `ಕೃತಜ್ಞತೆ’ಯ ಭಾಗವಾಗಿ ಹೇಳಿಸಿದ್ದು ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕು. ಮಾಸ್ತಿ ಕೊಡುವ ವಿವರಕ್ಕೆ ಪೂರಕವಾಗಿ ಹೇಳುವುದಾದರೆ, “ಟಿಪ್ಪು ಮಂಗಳೂರು ಮಲಬಾರ್ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಹೋದಾಗ ಅವನ ಅನುಪಸ್ಥಿತಿಯಲ್ಲಿ ಶ್ರೀರಂಗಪಟ್ಟಣದಲ್ಲಿ ಮೈಸೂರಿನ ರಾಣಿ ತುಂಬಾ ಕ್ರಿಯಾಶೀಲಳಾಗಿದ್ದಳು. ಆಕೆ ಟಿಪ್ಪುವಿನ ಆಡಳಿತದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತಿದ್ದ ಕೆಲವು `ಅತೃಪ್ತ’ ಅಧಿಕಾರಿಗಳಾದ ರಂಗಯ್ಯ, ಸಿಂಗಯ್ಯ, ಅಂಚೆ ಶಾಮಯ್ಯ, ಸುಬ್ಬರಾಜ್ ಮುಂತಾದವರ ನಿರಂತರ ಸಂಪರ್ಕದಲ್ಲಿದ್ದು ಟಿಪ್ಪುವನ್ನು ಅಧಿಕಾರದಿಂದ ಕೆಳಗಿಳಿಸಲು ಭಾರೀ ಪ್ರಯತ್ನ ಮಾಡಿದಳು” ಎಂಬುದನ್ನು ವಿಲ್ಕ್ಸ್ ತನ್ನ `ಹಿಸ್ಟರಿ ಆಫ್ ಮೈಸೂರ್’ ಕೃತಿಯಲ್ಲಿ ಕೂಡ ದಾಖಲಿಸಿರುವುದನ್ನು ಕೂಡ ಗಮನಿಸಬಹುದು. ಗಂಡನನ್ನು ಕಳೆದುಕೊಂಡ, ರಾಜ್ಯವನ್ನೂ ಕಳೆದುಕೊಂಡ ರಾಜಮಹಿಳೆಯೊಬ್ಬಳು ಕಳೆದುಕೊಂಡ ತನ್ನ ರಾಜ್ಯವನ್ನು ಮರಳಿ ಪಡೆಯಲು ಮಾಡಿದ ಈ ಪ್ರಯತ್ನ ತಪ್ಪಲ್ಲ ಎಂದು ವಾದಿಸಲು ಸಾಧ್ಯವಿದೆ. ವೈಯಕ್ತಿಕ ನೆಲೆಯಲ್ಲಿ ಇದು ಸರಿಯಾಗಿ ಕಾಣಬಹುದು. ಆದರೆ ಸಾಮೂಹಿಕ ನೆಲೆಯಲ್ಲಿ ಇದು ಕನ್ನಡ ನಾಡು ನುಡಿಯ ಮೇಲೆ ಮಾಡಿದ ಭಯಂಕರವಾದ ಪರಿಣಾಮಗಳನ್ನು ನೋಡಿದಾಗ ರಾಣಿಯ ಕೃತ್ಯ ಅತ್ಯಂತ ಕೆಟ್ಟದ್ದು ಎನ್ನದೇ ವಿಧಿಯಿಲ್ಲ.

ಮಾಸ್ತಿ ಕಾದಂಬರಿ ದಾಖಲಿಸುವ ಇನ್ನೊಂದು ಮುಖ್ಯವಾದ ಸಂಗತಿಯಾದ `ಹೈದರ್-ಟಿಪ್ಪು-ಬ್ರಿಟೀಷರು-ಕೊಡಗು’ ಈ ಬಗ್ಗೆ ನೋಡಬಹುದಾದರೆ ಅದಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಎರಡು ಸಂದರ್ಭಗಳಲ್ಲಿ ಬರುವ ಕೆಳಗಿನ ಲೇಖಕರ ಮಾತುಗಳನ್ನು ಗಮನಿಸಬಹುದು:  “ಕೊಡಗಿನ ನೆಲ ಒಂದರ್ಥಕ್ಕೆ ಈ ಜನರಿಗೆ ಮೈಸೂರಿಗಿಂತ ಚೆನ್ನ. ಕೊಡಗಿನ ಮಲೆ, ವನ, ಹೊಳೆ ಕಣಿವೆ, ಗದ್ದೆ ತೋಟ, ಅದನ್ನು ಅವರ ಬೈಬಲ್ಲಿನ ಗಾರ್ಡನ್ ಆಫ್ ಈಡನ್ ನಂದನವನಕ್ಕೆ ಸಮನಾಗಿ ಮಾಡಿದ್ದುವು. ತಮ್ಮ ದ್ವೀಪದ ಸ್ಕಾಟ್ಲೆಂಡ್ ಪ್ರಾಂತದ ಪರ್ವತ ಪ್ರದೇಶ ತುಂಬ ಸುಂದರ ಎನ್ನುವುದು ಆಂಗ್ಲರ ಒಂದು ತಿಳಿವಳಿಕೆ. ಕೊಡಗಿನ ಚೆಲುವು ಸ್ಕಾಟ್ಲೆಂಡಿನ ಪರ್ವತ ಪ್ರದೇಶದ ಚೆಲುವಿಗೆ ಒಂದು ಕೈ ಮೇಲೆ ಎಂಬಂತಿತ್ತು. ಮೈಸೂರನ್ನು ಕಬಳಿಸಿದಂತೆ ಕೊಡಗನ್ನು ಕಬಳಿಸುವುದಕ್ಕೆ ಬಹುಜನ ಆಂಗ್ಲರ ಬಾಯಿ ನೀರೂರುತ್ತಿತ್ತು. ಅರಸನೊಂದಿಗೆ ವಿವಾದಗಳು ಬೆಳೆಯಲಿ ಎಂದು ಇಂಥವರಿಗೆ ಆಸೆ. ಈ ಮೊದಲು ಬಂದಿದ್ದ ಹಲವು ವಿವಾದ ಊಟಕ್ಕೆ ಸಿದ್ಧವಾಗುತ್ತಿದ್ದ ಕಜ್ಜಾಯದ ನರುಗಂಪಿನಂತೆ ಇವರ ಆಸೆಯನ್ನು ಕೆರಳಿಸಿದ್ದವು; ಅರಕಲಗೂಡಿನಿಂದ ಬಂದ ದೂರಿನ ಪತ್ರಗಳಿಂದ ಈ ಜನಕ್ಕೆ ತುಂಬ ಸಂತೋಷವಾಯಿತು. ಈಗ ಮೈಸೂರಿನ ಪ್ರಭುತ್ವ ಆಂಗ್ಲ ಅಧಿಕಾರಿ ಮಂಡಳಿಯ ಕೈಯಲ್ಲಿತ್ತು. ಮ್ಯಾಕ್ಲಿಯಾಡ್ ಎಂಬಾತ ಛೀಫ್ ಕಮೀಷನರ್ (ಮುಖ್ಯಾಧಿಕಾರಿ) ಆಗಿದ್ದನು; ಕ್ಯಾಸಾಮೈಜರ್ ರೆಸಿಡೆಂಟ್ (ಸ್ಥಳವಾಸಿ); ಹಾಕರ್ ಇವನಿಗೆ ಸಹಾಯಕ. ಕ್ಯಾಸಾಮೈಜರ್ ಕೊಡಗನ್ನು ನುಂಗಬೇಕೆಂಬ ಮನಸ್ಸಿನ ಮನುಷ್ಯ; ಈಚೆಗೆ ಈ ದಿಕ್ಕಿನ ವ್ಯವಹಾರವನ್ನೆಲ್ಲ ರೆಸಿಡೆಂಟ್ ನೋಡಿಕೊಳ್ಳತಕ್ಕದ್ದೆಂದು ವ್ಯವಸ್ಥೆಯಾಗಿತ್ತು.”

ಇದರ ಜೊತೆಗೆ ತಮ್ಮ ಆತಿಥ್ಯದಲ್ಲಿದ ಬ್ರಿಟೀಷ್ ಅಧಿಕಾರಿಗಳ ತಂಡದ ಮನರಂಜನೆಗಾಗಿ ನಾಟಕ ಆಡಿ ತೋರಿಸುವ ಸನ್ನಿವೇಶವೊಂದು ಕಾದಂಬರಿಯಲ್ಲಿ ಬರುತ್ತದೆ. ಅದರ ವಿವರಗಳನ್ನು ಕೊಡುತ್ತಾ ಮಾಸ್ತಿ ಹೇಳುವ ಮಾತಿವು, “ಮಾರನೆಯ ದಿನ, ದೊಡ್ಡವೀರರಾಜ ಟಿಪ್ಪುವಿಗೆ ವಿರೋಧವಾಗಿ ಆಂಗ್ಲರಿಗೆ ಸಹಾಯ ಮಾಡಿದ ಕಥೆ. ಟಿಪ್ಪುವಿನ ಕಡೆಯ ಮುಸಲ್ಮಾನ ಫೌಜುದಾರರು ಕೊಡಗಿನ ಜನರನ್ನು ಹಿಂಸಿಸಿದ್ದು; ದೊಡ್ಡವೀರರಾಜ ಸೆರೆಯಿಂದ ಬಿಡಿಸಿಕೊಂಡು ಬಂದು ಜನರನ್ನು ಗುಂಪುಕಟ್ಟಿ ಫೌಜುದಾರರನ್ನೆದುರಿಸಿ ಅವರನ್ನೋಡಿಸಿ ಕೊಡಗನ್ನು ವಶಮಾಡಿಕೊಂಡದ್ದು; ತಲಚೇರಿ, ಮಂಗಳೂರಿಂದ ಆಂಗ್ಲರು ದಂಡೆತ್ತಿ ಹೋಗುವಾಗ ಅವರಿಗೆ ಸಹಾಯ ಮಾಡಿದ್ದು; ‘ನೀನು ನಮ್ಮ ದೇಶದವನು; ಆಂಗ್ಲರು ಪರದೇಶದವರು; ನಾವಿಬ್ಬರೂ ಅವರನ್ನು ಹೊಡೆದಟ್ಟಬೇಕು. ಗೆದ್ದ ರಾಜ್ಯದಲ್ಲಿ ನಿನಗರ್ಧವನ್ನು ಕೊಡುತ್ತೇನೆ, ಬಾ,’ ಎಂದು ಟಿಪ್ಪು ವೀರರಾಜನನ್ನು ಕರೆದ್ದು; ಅವನು `ಆಂಗ್ಲರು ನನ್ನ ಸ್ನೇಹಿತರಾಗಿದ್ದಾರೆ, ಸಾಲದ್ದಕ್ಕೆ ನೀನು ನನ್ನ ದೇಶವನ್ನು ಹಿಂಸಿಸಿದವನು’ ಎಂದು ಅವನ ಆಹ್ವಾನವನ್ನು ನಿರಾಕರಿಸಿದ್ದು; ಆಂಗ್ಲರು ಇದನ್ನು ಮೆಚ್ಚಿ ವೀರರಾಜನಿಗೆ ಗೌರವಾರ್ಥವಾಗಿ ಒಂದು ಕತ್ತಿಯನ್ನು ಕೊಟ್ಟದ್ದು; ಇದರ ಕಥೆಯನ್ನು ಆಡಿದರು…….
 
ಮಾರನೆಯ ದಿನ ಮಲಬಾರಿನ ಮುಸಲ್ಮಾನ ರಾಣಿಯನ್ನು ಟಿಪ್ಪು ಅವಳ ರಾಜ್ಯದಿಂದ ಹೊಡೆದು ಅಟ್ಟಿದ್ದು; ಅವಳು ವೀರರಾಜನ ಬಳಿಗೆ ಶರಣಾಗತಿ ಹೇಳಿ ದೂತನನ್ನು ಕಳುಹಿಸಿದ್ದು; ವೀರರಾಜ ತಲಚೇರಿಗೆ ಟೆಯಿಲರ್ ಸಾಹೇಬನಿಗೆ ಹೇಳಿ ಕಳುಹಿಸಿ ಆಂಗ್ಲರ ಸಹಾಯ ಪಡೆದು ಟಿಪ್ಪುವಿನ ಸೇನೆಯನ್ನು ಸೋಲಿಸಿ ಮಲೆಯಾಳದಿಂದ ಓಡಿಸಿ ಬೀಬೀಗೆ ಅವಳ ರಾಜ್ಯವನ್ನು ಮರಳಿ ಕೊಟ್ಟದ್ದು; ಇದರ ಕಥೆ. ಇದರಲ್ಲಿ `ಕೊಡಗಿನ ಅರಸರು ಪರನಾರಿಯನ್ನು ಸೋದರಿಯಂತೆ ಕಾಣುತ್ತಾರೆ, ಶರಣಾಗತತನ್ನು ತಮ್ಮ ಜೀವವನ್ನಾದರೂ ಕೊಟ್ಟು ರಕ್ಷಿಸುತ್ತಾರೆ, ಒಮ್ಮೆ ಸ್ನೇಹವೆಂದಮೇಲೆ ದ್ರೋಹವನ್ನು ಮಾಡುವವರಲ್ಲ’ ಎಂದು ಹೆಮ್ಮೆಯ ಮಾತು ತುಂಬಾ ಚೆನ್ನಾಗಿ ಬಂದಿತು. ಇದರ ಅರ್ಥವನ್ನೂ ಆಂಗ್ಲ ಅತಿಥಿಗಳು ಬಹಳ ಒಪ್ಪಿಕೊಂಡರು.”  

ಮಾಸ್ತಿ ಈ ಪ್ರಮುಖ ಸನ್ನಿವೇಶಗಳಲ್ಲದೇ ಕಾದಂಬರಿಯ ನಡುನಡುವೆ ಅನೇಕ ಬ್ರಿಟೀಷ್ ಅಧಿಕಾರಿಗಳು ಕೊಡಗು ಮತ್ತು ಮೈಸೂರು ರಾಜ್ಯಗಳನ್ನು ವಶಪಡಿಸಿಕೊಳ್ಳಲು ಮಾಡಿದ ಮತ್ತು ಮಾಡುತ್ತಿದ್ದ ಸಂಚಿನ ವಿವರಗಳನ್ನು ಅವರ ಪತ್ರವ್ಯವಹಾರಗಳ ಆಧಾರದ ಮೇಲೆ ದಾಖಲಿಸುತ್ತಾರೆ. ಅವರು ಕೃತಿಯಲ್ಲಿ ನೀಡುವ ಆಧಾರಗಳ ಮೇಲೆ ಈ ಬಗೆಗಿನ ವಿವರಗಳನ್ನು ಸಾರಾಂಶೀಕರಿಸುವುದಾದರೆ ಹೈದರನಿಗಾಗಲೀ ಟಿಪ್ಪೂಗಾಗಲೀ ಮೈಸೂರಿನ ಅರಸರ ಮೇಲಾಗಲೀ ಕೊಡಗಿನ ರಾಜರ ಮೇಲಾಗಲೀ ಅಲ್ಲಿನ ಜನರ ಮೇಲಾಗಲೀ ವಿಶೇಷವಾದ ಯಾವುದೇ ಮತೀಯ ಅಥವಾ ಜನಾಂಗೀಯ ದ್ವೇಷ ಇರುವುದಿಲ್ಲ. ಅವರ ಆ ಬಗೆಗಿನ ಸಂಘರ್ಷಗಳೇನಿದ್ದರೂ ಅವು ತಮ್ಮ ರಾಜ್ಯದ ಉಳಿವು ಮತ್ತು ವಿಸ್ತರಣೆಗಾಗಿ ಅವರು ಮಾಡುತ್ತಿದ್ದ ಆ ಕಾಲಘಟ್ಟದ ಯುಗಧರ್ಮದದ ಪ್ರಕಾರ `ಸರಿ’ಯಾದ ಸಾಮಾನ್ಯ ಸಂಗತಿಗಳಾಗಿದ್ದವು. ರಾಣಿಯ ಸಹಾಯದಿಂದ ಟಿಪ್ಪುವನ್ನು ಕೊಂದು ಮೈಸೂರನ್ನು ವಶಪಡಿಸಿಕೊಂಡ ಮೇಲೆ ಅಲ್ಲಿ ಬ್ರಿಟೀಷರು `ಗೊಂಬೆಸರ್ಕಾರ’ ವನ್ನು’ವನ್ನು ಸ್ಥಾಪಿಸಿದ್ದರಾದರೂ ಕೆಲವೇ ವರ್ಷಗಳಲ್ಲಿ `ಸರಿಯಾಗಿ ಆಡಳಿತ ನಡೆಯುತ್ತಿಲ್ಲ’ ಎಂಬ ನೆಪವೊಡ್ಡಿ ಮತ್ತೆ ಅದನ್ನು ಮರಳಿ ಪಡೆದು ತಾವೇ ಕಮಿಷನರೇಟ್ ಆಡಳಿತ ನಡೆಸತೊಡಗುತ್ತಾರೆ.(ಈ ಆಡಳಿತ ಸು. 1830 ರಿಂದ 1880 ರವರೆಗೆ ಸುಮಾರು 50 ವರ್ಷ ನಡೆಯುತ್ತದೆ.) ಇದರಿಂದ ಜನರು ತಿರುಗಿಬೀಳಬಹುದೆಂದು ಸ್ವಲ್ಪ ಹೆದರಿದ್ದ ಅವರು ಕೊಡಗನ್ನು ವಶಪಡಿಸಿಕೊಳ್ಳಲು ಅತ್ಯಂತ ಉತ್ಸುಕರಾಗಿದ್ದರೂ ತಕ್ಷಣ ಆ ಕೆಲಸಕ್ಕೆ ಮುನ್ನುಗ್ಗದೇ ಚಾಣಾಕ್ಷತನದಿಂದ ರಣತಂತ್ರ ರೂಪಿಸುತ್ತಿರುತ್ತಾರೆ.

ಆ ರಣತಂತ್ರದ ಬಹುಮುಖ್ಯಭಾಗವೆಂದರೆ “ಈ ದೇಶೀಯ ರಾಜರು ಚೆನ್ನಾಗಿ ಆಡಳಿತ ನಡೆಸುತ್ತಿಲ್ಲ. ನಮಗೆ ಬ್ರಿಟೀಷ್ ಸರ್ಕಾರವೇ ಬೇಕು, ಅವರಿಂದಲೇ ನಮ್ಮ ಉದ್ಧಾರವಾಗುವುದು” ಎಂದು ಆ ಭಾಗದ ಜನರೇ ಇಚ್ಚೆಪಡುವಂತೆ ಮಾಡುವುದು. ಇದಕ್ಕೆ ಪೂರಕವಾಗಿ ಕೊಡಗಿನ ಕೊನೆಯ ರಾಜನಾದ ಚಿಕವೀರರಾಜೇಂದ್ರ ಕೂಡ ಅತ್ಯಂತ ಬೇಜವಾಬ್ದಾರಿ ರಾಜನಾಗಿದ್ದ. ಅವನ ಕೌಟಂಬಿಕ ಕಲಹಗಳು ಮಿತಿಮೀರಿದ್ದವು. ವೈಯಕ್ತಿಕವಾಗಿ ನಡತೆಯೂ ಘನತೆಯಿಂದ ಕೂಡಿರಲಿಲ್ಲ. ಚಿಕ್ಕವಯಸ್ಸಿನಲ್ಲಿಯೇ ಮಂತ್ರಿ ಬಸವಯ್ಯನ ಸಹವಾಸಕ್ಕೆ ಸಿಕ್ಕ ಅವನು ಎಲ್ಲಬಗೆಯ ಕೆಟ್ಟಚಾಳಿಗಳನ್ನು ಕಲಿತು ತಾನೂ ಹಾಳಾಗುತ್ತಿದ್ದ; ರಾಜ್ಯವನ್ನೂ ಹಾಳುಮಾಡುತ್ತಿದ್ದ. ಅತ್ಯಂತ ಸ್ತ್ರೀಲೋಲುಪನಾದ ಅವನ ಸ್ವಭಾವವನ್ನು ಕುರಿತು ಲೇಖಕರು, “ಉಳಿದ ಜನ ಹೆಣ್ಣು ಎಂಬುದನ್ನು ಮೊದಲು ಕಾಣುವ ವಯಸ್ಸಿಗೆ, ತಾನು ಮೈಯಲ್ಲಿ ಶಕ್ತಿ ಇಲ್ಲ ಎಂಬ ಮಟ್ಟಿಗೆ ದುರಾಚಾರದಲ್ಲಿ ಬಾಳಿದನು.” ಎಂದು ಬರೆಯುತ್ತಾರೆ. ಇದರ ಜೊತೆ ಕೊಡಗಿನ ಸಾಮಾನ್ಯ ಜನರ ಮನಸ್ಥಿತಿ ಹೇಗಿತ್ತು ಎಂಬುದನ್ನು ಲೇಖಕರು ಹೇಳುವ ಈ ಮಾತು ಸ್ಪಷ್ಟಪಡಿಸುತ್ತದೆ, “ಬಿಳಿಯಜನ ನಮ್ಮನ್ನು ಒಪ್ಪಿಕೊಂಡಿದ್ದಾರೆ ಎಂದು ಕೊಡಗರಿಗೆ ಬಹಳ ಸಂತೋಷ. ಉಳಿದ ಜನಕ್ಕಾದರೂ ಈ ಹೊರದೇಶದ ಜನರೆದುರಲ್ಲಿ ನಮ್ಮವರು ಬುದ್ಧಿವಂತರೆನಿಸಿಕೊಂಡರು ಎಂದು ಹೆಮ್ಮೆಯೇ.”

ಕೊಡಗಿನ ರಾಜನ ಆತಿಥ್ಯವನ್ನು ಪಡೆದು ಬಂದ ಬ್ರಿಟೀಷ್ ಅಧಿಕಾರಿಗಳು ಮದ್ರಾಸ್ ಕೇಂದ್ರದ ಮೇಲಾಧಿಕಾರಿಗೆ ಪತ್ರಬರೆದು ಕೊಡಗಿನಲ್ಲಿ ರಾಜನ ವಿರೋಧವಾಗಿ ಅಲ್ಲಿನ ಜನ ಸಿಡಿದೇಳುವ ಲಕ್ಷಣಗಳು ನಮಗೆ ನಿಚ್ಚಳವಾಗಿ ಕಂಡುಬಂದಿವೆ. ಹಾಗಾಗಿ ಈಗಾಗಲೇ ನಾವು ಅವಸರ ಮಾಡಿ ಕೊಡಗಿನ ಮೇಲೆ ನುಗ್ಗದೆ ಪರಿಸ್ಥಿತಿ ಇನ್ನಷ್ಟು ಮಾಗುವವರೆಗೆ ಕಾಯುವುದು ಒಳ್ಳೆಯದು ಎಂದು ವರದಿ ಮಾಡುತ್ತಾರೆ. (ಕೊಡಗಿನಲ್ಲಿ ಅವರ ಮನರಂಜನೆಗೆ ಏರ್ಪಾಡಾಗಿದ್ದ ದಿನಗಳಲ್ಲಿ ಅಲ್ಲಿನ ಒಂದು ಕಲಾತಂಡ ರಾಜನ ಮತ್ತು ಬ್ರಿಟೀಷ್ ಅಧಿಕಾರಿಗಳ ಸಮ್ಮುಖದಲ್ಲಿಯೇ ರಾಜನನ್ನು ಅವಹೇಳನ ಮಾಡುವ ತೆಗಳುವ ಒಂದು ನಾಟಕವನ್ನು ಮಾಡಿರುತ್ತದೆ. ರಾಜಭಟರು ಅವರನ್ನು ಹಿಡಿಯಲು ಹೋಗುವ ವೇಳೆಗೆ ಅವರು ತಪ್ಪಿಸಿಕೊಂಡಿರುತ್ತಾರೆ. ಇದನ್ನು ಗಮನಿಸಿದ ಬ್ರಿಟೀಷ್ ಅಧಿಕಾರಿಗಳು ಈ ಹಿನ್ನಲೆಯಲ್ಲಿ ಈ ವರದಿಮಾಡುತ್ತಾರೆ).

ಇದಲ್ಲದೇ ಕೊಡಗು ತಮ್ಮ ಕ್ರೈಸ್ತಮತವನ್ನು ಬೆಳೆಸಲು ಉತ್ತಮವಾದ ಜಾಗೆಯಾಗಿದ್ದು ಅದಕ್ಕೂ ಅವರು ಸಂಚುಹೂಡಿರುತ್ತಾರೆ. ಅವರೆಲ್ಲ ಕೊಡಗಿನ ರಾಜನ ಆತಿಥ್ಯದಲ್ಲಿದ್ದಾಗಲೇ ಒಂದು ದಿನ `ಕ್ರೈಸ್ತಮತಶ್ರೇಷ್ಠವೆಂದೂ ಅದನ್ನು ವಿರೋಧಿಸುವವರು ನಿಮ್ಮಲ್ಲಿ ಯಾರಾದರೂ ಇದ್ದರೆ ವಾದಿಸಲಿ’ ಎಂದೂ ಬ್ರಿಟೀಷ ಪಾದ್ರಿಯೊಬ್ಬ ಅಧಿಕಾರಿಗಳನ್ನು ಒಪ್ಪಿಸಿ ಕೊಡಗಿನ ರಾಜನ ಸಮ್ಮುಖದಲ್ಲಿಯೇ ಒಂದು ದೊಡ್ಡ ಚರ್ಚೆಯನ್ನೇ ಏರ್ಪಾಡು ಮಾಡಿಸುವಲ್ಲಿ ಯಶಸ್ವಿಯಾಗಿರುತ್ತಾನೆ. ಆದರೆ ಅವನಂದುಕೊಂಡಂತೆ ಅಲ್ಲಿ ಅವನ ಬೇಳೆ ಬೇಯುವುದಿಲ್ಲ. ಚಿಕವೀರರಾಜೇಂದ್ರನ ರಾಜ್ಯದಲ್ಲಿ ಕಾಡಿನಲ್ಲಿ ಗುಡಿಸಲು ಕಟ್ಟಿಕೊಂಡ `ಭಗವತಿ’ ಎಂಬ ಸಾಧ್ವಿಯೊಬ್ಬಳು ಈ ಚರ್ಚೆಯಲ್ಲಿ ಪಾಲ್ಗೊಂಡು  ಈ ಪಾದ್ರಿಯ ಬೆವರಿಳಿಸಿಬಿಡುತ್ತಾಳೆ. ಕೊನೆಗೆ ಬಾಲಸುಟ್ಟ ಬೆಕ್ಕಿನಂತೆ ಇವರು ಮರಳಿರುತ್ತಾರಾದರೂ ತಮ್ಮ ಮತವನ್ನು ಬೆಳೆಸುವ ಅವಕಾಶ ಅಲ್ಲಿ ಹೇರಳವಾಗಿರುವ ಬಗ್ಗೆ ಅವರ ಆಶಾಭಾವನೆ ಕುಂದಿರುವುದಿಲ್ಲ. ಹೀಗೆ ರಾಜಕೀಯವಾಗಿ ಕೊಡಗಿನ ರಾಜನ ವಿರುದ್ಧ ಅವನ ದಾಯಾದಿಗಳು ಮತ್ತು ಜನ ಸಿಡಿದೇಳುವ ಮತ್ತು `ನಮಗೆ ಬ್ರಿಟೀಷ್ ಸರ್ಕಾರವೇ ಬೇಕು’ ಎಂದು ಅವರೇ ಒತ್ತಾಯಿಸುವಂತಹ ವಾತಾವರಣ ನಿರ್ಮಾಣವಾಗಲು ಮತ್ತು ಧಾರ್ಮಿಕವಾಗಿ ನಮಗೆ `ಕ್ರಿಸ್ತನೇ ಗುರು, ಕ್ರೈಸ್ತಮತದಿಂದಲೇ ನಮ್ಮ ಜೀವನ ಸಾರ್ಥಕವಾಗುವುದು’ ಎಂದು ಅವರೇ ಭಾವಿಸುವಂತಹ ವಾತಾವರಣ ನಿರ್ಮಾಣವಾಗಲು ಏನು ಬೇಕೋ ಅದನ್ನು ಅವರು ಮಾಡುತ್ತಾ ಹೋಗುತ್ತಾರೆ. ಅವರ ಈ ಕಾರ್ಯ ಫಲಕೊಟ್ಟು ಕೊನೆಗೂ 1834ರ ಹೊತ್ತಿಗೆ ಕೊಡಗು ಬ್ರಿಟೀಷರ ವಶವಾಗುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಕೊಡಗು ಹಾಳಾಗಲು, ಅಲ್ಲಿನ ಜನ ಹಾಳಾಗಲು ಟಿಪ್ಪು ಅಥವಾ ಹೈದರ್ ಎಷ್ಟೂ ಕಾರಣರಲ್ಲ. ಅದು ಹಾಳಾಗಿದ್ದು ಮುಖ್ಯವಾಗಿ ಅಲ್ಲಿನ ಅರಸರಿಂದ. ಮತ್ತು ಅವರ ದೌರ್ಬಲ್ಯದ ಲಾಭಪಡೆದ ಬ್ರಿಟೀಷರಿಂದ, ಹಾಗೂ ಬ್ರಿಟೀಷರಿಂದ ಹೊಗಳಿಸಿಕೊಳ್ಳುವುದನ್ನು `ಹೆಮ್ಮೆಯ ಸಂಗತಿ’ ಎಂದು ಭಾವಿಸಿದ್ದ ಅಲ್ಲಿನ ಜನರಿಂದ. ಈ ಕಡೆ ಮದ್ರಾಸ್ ಆ ಕಡೆ ಮಲಬಾರ್ (ಈಗಿನ ದಕ್ಷಿಣ ಕನ್ನಡದ ಭಾಗ) ಎರಡೂ ಬ್ರಿಟೀಷರ ಆಡಳಿತಕ್ಕೆ ಒಳಪಟ್ಟಿದ್ದು ಅವುಗಳ ಮಧ್ಯೆ ಈ ಎರಡು ಸಂಸ್ಥಾನಗಳು ಇದ್ದು ಜನ ಅತ್ತಿಂದಿತ್ತ ಅಡ್ಡಾಡುವ ಕಾರಣ ಕಳ್ಳತನ, ಹಾದರ ಇಂತಹ ಸಣ್ಣಪುಟ್ಟ ವ್ಯವಹಾರಗಳು ಕೂಡ ಒಂದು ರೀತಿಯಲ್ಲಿ ಈಗಿನ `ಅಂತರರಾಷ್ಟ್ರೀಯ ಸಮಸ್ಯೆ’ಯಂತೆ ಬಿಗಡಾಯಿಸಿಕೊಳ್ಳುತ್ತಿದ್ದವು. ಟಿಪ್ಪೂಗೆ ಕೊಡಗಿನ ಅಥವಾ ಮೈಸೂರಿನ ರಾಜರ ಬಗ್ಗೆ ಇದ್ದ ವೈರತ್ವವು `ಹಿಂದೂ-ಮುಸ್ಲಿಮ್’ ಜನಾಂಗೀಯ ಕಾರಣದಿಂದ ಅಥವಾ `ಹಿಂದೂ-ಇಸ್ಲಾಂ’ ಧಾರ್ಮಿಕ ಕಾರಣದಿಂದ ಹುಟ್ಟಿದ್ದಾಗಲೀ ಬೆಳದದ್ದಾಗಲೀ ಆಗಿರುವುದಿಲ್ಲ. ಅದು `ಶತ್ರುವಿನ ಮಿತ್ರನೂ ಶತ್ರುವೇ’ ಎಂಬ ತತ್ವದಂತೆ ತಾತ್ವಿಕ ಕಾರಣದಿಂದ ಹುಟ್ಟಿಬೆಳೆದದ್ದಾಗಿತ್ತು. ಯಾವ ಬ್ರಿಟೀಷರನ್ನು ಅವನು ಈ ನೆಲದಿಂದ ಕಾಲ್ಕೀಳುವಂತೆ ಮಾಡಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡುತ್ತಿದ್ದನೋ ಅದೇ ಬ್ರಿಟೀಷರನ್ನು ಇವರು ಬೆಂಬಲಿಸುತ್ತಿದ್ದುದು, ತಮಗೂ ಮುಂದೆ ಬರಬಹುದಾದ ಕುತ್ತನ್ನೂ ಲಕ್ಷಿಸದೇ ಅವರ ಜೊತೆಗೆ ಕೈಜೋಡಿಸಿ ತನ್ನನ್ನು ಮುಗಿಸಲು ಸಂಚುಹೂಡುತ್ತಿದ್ದುದು ಅವನನ್ನ ಕೆರಳಿಸಿದ್ದ ಮುಖ್ಯ ಸಂಗತಿಗಳಾಗಿದ್ದವು. ಹೈದರಾಬಾದ್ ನಿಜಾಮನು ಬ್ರಿಟೀಷರ ವಿರುದ್ಧ ತನಗೆ ಸಹಾಯ ಮಾಡದೇ ತನ್ನ ವಿರುದ್ಧ ಬ್ರಿಟೀಷರಿಗೆ ಸಹಾಯ ಮಾಡಿದ ಕಾರಣಕ್ಕೆ ಅವನೊಡನೆ ವೈವಾಹಿಕ ಸಂಬಂಧವನ್ನೂ ಟಿಪ್ಪು ನಿರಾಕರಿಸಿದ್ದು, ಮಾಸ್ತಿಯೇ ದಾಖಲಿಸುವಂತೆ ಮುಸ್ಲಿಂ ರಾಣಿಯನ್ನೇ ಪದಚ್ಯುತಗೊಳಿಸಿ ಓಡಿಸಿದ್ದು ನೋಡಿದರೆ ಅವನ ಹೋರಾಟಗಳು ಮತಧರ್ಮಗಳನ್ನು ಅವಲಂಬಿಸಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅದನ್ನೇ ಯಾವ ಪೂರ್ವಾಗ್ರಹಕ್ಕೂ ಒಳಗಾಗದೆ ಮಾಸ್ತಿ ಕಾದಂಬರಿ ದಾಖಲಿಸುತ್ತದೆ ಕೂಡ!
*****
ಡಾ. ರಾಜೇಂದ್ರ ಬುರಡಿಕಟ್ಟಿ

06-11-2017

Thursday, November 2, 2017

ವಿಧಾನಸೌಧ ನಿರ್ಮಾಣ; ಆಗಲಿತ್ತೇ ಕೆಂಗಲ್ ಹತ್ಯೆ?

ವಿಧಾನಸೌಧ ನಿರ್ಮಾಣ; ಆಗಲಿತ್ತೇ ಕೆಂಗಲ್ ಹತ್ಯೆ?
ನಮ್ಮ ವಿಧಾನಸೌಧ ನಿರ್ಮಾಣಕ್ಕೆ ಅರವತ್ತು ವರ್ಷಗಳು ತುಂಬಿದ ಹಿನ್ನಲೆಯಲ್ಲಿ ವಜ್ರಮಹೋತ್ಸವದ ಆಚರಣೆಯ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ಇಂದು ತಾನೆ (25-10-2017) ನಡೆದಿದೆ. ಈ ಭವ್ಯಕಟ್ಟಡಕ್ಕೆ ಆಗಿನ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಶಂಕುಸ್ಥಾಪನೆ ಮಾಡಿದ್ದರೆ ಈಗಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ವಜ್ರಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ಮಹೋತ್ಸವದ ನಿಮಿತ್ತ ವಿಧಾನಸೌಧದ ನಿರ್ಮಾಣದ ಕಾಲಘಟ್ಟದ ಕೆಲವು ಮುಖ್ಯಸಂಗತಿಗಳನ್ನು ನೆನಪುಮಾಡಿಕೊಳ್ಳುವ ಬಹುಮುಖ್ಯಕಾರ್ಯವೂ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ, ಬಹುಶಃ ಪ್ರಚಾರಕ್ಕೆ ಬರಲೇ ಇಲ್ಲ ಎಂಬಂತಿರುವ, ಆ ಕಾಲಘಟ್ಟದ ಒಂದು ಮುಖ್ಯಘಟನೆ ಮತ್ತು ಅದರ ಸುತ್ತಮುತ್ತಲ ವಿದ್ಯಮಾನಗಳನ್ನು ನೆನಪುಮಾಡಿಕೊಡುವುದು ಈ ಲೇಖನದ ಉದ್ದೇಶ. `ವಿಧಾನಸೌಧದ ಶಿಲ್ಪಿ’ ಎಂದೇ ಖ್ಯಾತರಾದ ಹಳೇಮೈಸೂರು ರಾಜ್ಯದ ಎರಡನೇ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಕೊಲೆಯ ಯತ್ನವೊಂದು ಆ ಕಾಲದಲ್ಲಿ ನಡೆದಿತ್ತೇ? ಹೌದೆನ್ನುತ್ತದೆ ಅವರ ಮಂತ್ರಿಮಂಡಲದಲ್ಲಿ ಲೋಕೋಪಯೋಗಿ ಸಚಿವರೂ ಅವರ ನಂತರ ಎರಡೂವರೆ ತಿಂಗಳ ಚಿಕ್ಕ ಕಾಲಾವಧಿಗೆ ಹಳೆಯ ಮೈಸೂರು ರಾಜ್ಯದ ಕೊನೆಯ ಮುಖ್ಯಮಂತ್ರಿಯೂ ಆಗಿದ್ದ ಕಡಿದಾಳ್ ಮಂಜಪ್ಪನವರ ಆತ್ಮಕಥೆ.




ಭಾರತವು ಸ್ವಾತಂತ್ರ್ಯ ಪಡೆಯು ನಲವತ್ತೇಳರ ಆಸುಪಾಸಿನ ವರ್ಷಗಳ ಕಾಲಘಟ್ಟದಲ್ಲಿ ಮೈಸೂರು ಪ್ರದೇಶ ಕಾಂಗ್ರೆಸ್ಸಿನಲ್ಲಿ ಬಹುಮುಖ್ಯವಾಗಿ ಎರಡು ಗುಂಪುಗಳಿರುತ್ತವೆ. ಒಂದು ಕೆ.ಸಿ.ರೆಡ್ಡಿ ಗುಂಪು. ಇನ್ನೊಂದು ಕೆಂಗಲ್ ಹನುಮಂತಯ್ಯನವರ ಗುಂಪು. ಸಾಹುಕಾರ್ ಚನ್ನಯ್ಯ, ಟಿ.ಮರಿಯಪ್ಪ ಮುಂತಾದ ಬಲಾಢ್ಯರು ಕೆ.ಸಿ.ರೆಡ್ಡಿಯವರ ಗುಂಪಿನಲ್ಲಿದ್ದರೆ ಕೆಂಗಲ್ ಗುಂಪಿನಲ್ಲಿ ದೇವರಾಜ್ ಅರಸು, ಎಚ್.ಎಂ. ಚೆನ್ನಬಸಪ್ಪ ಮುಂತಾದ ಗಣ್ಯರು ಗುರುತಿಸಿಕೊಂಡಿರುತ್ತಾರೆ. ಈ ಗುಂಪುಗಳು ಎಷ್ಟು ಪ್ರಬಲವಾಗಿದ್ದವು ಎಂದರೆ ಆಡಳಿತ ನಡೆಸುವವರಿಗೆ ಭಯವಿರುತ್ತಿದ್ದದ್ದು ವಿರೋಧಪಕ್ಷದ ಬಗ್ಗೆ ಅಲ್ಲ; ಬದಲಾಗಿ ತಮ್ಮನ್ನು ಕಾಲೆಳೆಯಲು ಸದಾ ಹವಣಿಸುವ ತಮ್ಮದೇ ಆದ ಪಕ್ಷದ ಇನ್ನೊಂದು ಗುಂಪಿನ ಬಗ್ಗೆಯೇ! ದೇಶ ಸ್ವಾತಂತ್ರ ಪಡೆದ ಮೂರು ತಿಂಗಳೊಳಗೆ ಅಂದರೆ 25-10-1947ರಂದು ಮೊದಲ ಬಾರಿಗೆ `ಮೈಸೂರು ವಿಧಾನಸಭೆ’ ಅಸ್ತಿತ್ವಕ್ಕೆ ಬಂದು ಕೆ.ಸಿ.ರೆಡ್ಡಿ ಮುಖ್ಯಮಂತ್ರಿಯಾಗುತ್ತಾರೆ.  ಈ `ಮೈಸೂರು ವಿಧಾನಸಭೆ’ ಅಸ್ತಿತ್ವಕ್ಕೆ ಬರುವ ಮೊದಲು ಅಲ್ಲಿ `ಮೈಸೂರು ಸಂವಿಧಾನ ಸಭೆ’ ಎಂಬ ಒಂದು ಸಮಿತಿ ಅಸ್ತಿತ್ವದಲ್ಲಿತ್ತು. ಮೈಸೂರು ರಾಜ್ಯ ರಾಜಪ್ರಭುತ್ವವನ್ನು ಬಿಟ್ಟು ಪ್ರಜಾಪ್ರಭುತ್ವಕ್ಕೆ ಹೊರಳುವ ಆ ಕಾಲಘಟ್ಟದಲ್ಲಿ ಮೈಸೂರು ರಾಜ್ಯಕ್ಕೆ ಒಂದು ಪ್ರತ್ಯೇಕ ಸಂವಿಧಾನ ರಚಿಸುವ ಕಾರ್ಯಕ್ಕೆ ಈ ಸಮಿತಿ ನೇಮಕವಾಗಿತ್ತು. ಆ ಕಾಲದ ಕನ್ನಡ ಮೇದಾವಿ ಡಾ. ಡಿ.ವಿ.ಗುಂಡಪ್ಪ ಕೂಡ ಈ ಸಮಿತಿಯಲ್ಲಿದ್ದರು.

ಆ ಕಾಲದ ದೇಶದ ರಾಜಕೀಯ ವಿದ್ಯಮಾನಗಳ ಕಾರಣಕ್ಕಾಗಿ ಈ ಸಮಿತಿಯಲ್ಲಿ ಭಿನ್ನಾಭಿಪ್ರಾಯವುಂಟಾಗಿ ಎರಡು ಗುಂಪುಗಳಾಗುತ್ತವೆ. ಒಂದು ಗುಂಪು `ಮೈಸೂರು ಸರ್ಕಾರಕ್ಕೇ ಪ್ರತ್ಯೇಕ ಸಂವಿಧಾನವಿರಬೇಕು’ ಎಂದು ವಾದಿಸುವ ಗುಂಪು. ಇನ್ನೊಂದು ಸಧ್ಯದಲ್ಲಿ ಜಾರಿಯಾಗಲಿದ್ದ `ಭಾರತ ಸಂವಿಧಾನವೇ ಮೈಸೂರು ರಾಜ್ಯಕ್ಕೂ ಅನ್ವಯವಾಗಬೇಕು, ಮೈಸೂರು ರಾಜ್ಯಕ್ಕೆ ಪ್ರತ್ಯೇಕ ಸಂವಿಧಾನ ಅಗತ್ಯವಿಲ್ಲವೆಂದು ವಾದಿಸುವ ಗುಂಪು. ಮೊದಲನೇ ಅಭಿಪ್ರಾಯದ ಗುಂಪು ಚಿಕ್ಕದಿದ್ದು ಎರಡನೇ ಅಭಿಪ್ರಾಯದ ಗುಂಪು ದೊಡ್ಡದಿದ್ದ ಕಾರಣ ಕೊನೆಗೆ ‘ಭಾರತ ಸಂವಿಧಾನವೇ ಮೈಸೂರಿಗೂ ಅನ್ವಯಿಸತಕ್ಕದ್ದು; ಮೈಸೂರಿಗೆ ಪ್ರತ್ಯೇಕ ಸಂವಿಧಾನ ಅವಶ್ಯಕತೆಯಿಲ್ಲ’ ಎಂಬ ತೀರ್ಮಾನವಾಗುತ್ತದೆ.  ಹೊಸಸಂವಿಧಾನ ಜಾರಿಯಾಗಿ ಅದರ ಅನ್ವಯ ಚುನಾವಣೆಗಳು ನಡೆಯುವವರೆಗೆ ಹಾಲಿ ಚಾಲ್ತಿಯಲ್ಲಿದ್ದ `ಮೈಸೂರು ಸಂವಿಧಾನ ಸಭೆ’ಯೇ `ಮೈಸೂರು ವಿಧಾನಸಭೆ’ಯಾಗಿ ಕಾರ್ಯನಿರ್ವಹಿಸತಕ್ಕದ್ದು ಎಂದು ಮಹಾರಾಜರು ಘೋಷಣೆ ಹೊರಡಿಸುತ್ತಾರೆ. ಪರಿಣಾಮವಾಗಿ ಭಾರತ ಸಂವಿಧಾನ ಅಸ್ತಿತ್ವಕ್ಕೆ ಬರುವ ಮೊದಲೇ `ಮೈಸೂರು ವಿಧಾನಸಭೆ’ ಅಸ್ತಿತ್ವಕ್ಕೆ ಬಂದು ಕೆ.ಸಿ.ರೆಡ್ಡಿ ಮುಖ್ಯಮಂತ್ರಿಯಾಗುತ್ತಾರೆ!

ಮುಖ್ಯಮಂತ್ರಿಯಾಗುವ ಮೊದಲು ಕೆ.ಸಿ.ರೆಡ್ಡಿಯವರು ಮೈಸೂರು ಪ್ರದೇಶ ಕಾಂಗ್ರೇಸ್ಸಿನ ಅಧ್ಯಕ್ಷರಾಗಿದ್ದವರು. ಅವರು ಮುಖ್ಯಮಂತ್ರಿಯಾದ ಕಾರಣ ಅವರ ನಂತರ ಅಧ್ಯಕ್ಷಸ್ಥಾನ ಕೆಂಗಲ್ ಅವರಿಗೆ ಸಿಗುತ್ತದೆ. ಕೆ.ಸಿ.ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗಿನಿಂದ 1952ರ ಪ್ರಥಮ ಸಾರ್ವತ್ರಿಕ ಚುನಾವಣೆಗಳು ನಡೆಯುವ ತನಕ ಕೆಂಗಲ್ ಗುಂಪು ರೆಡ್ಡಿಯವರ ಗುಂಪನ್ನು ಕಾಲೆಳೆಯುತ್ತಲೇ ಇರುತ್ತದೆ. ಆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯುತ್ತದೆಯಾದರೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಲ್ಲಿ ಕೆ.ಸಿ.ರೆಡ್ಡಿ ಗುಂಪು ಪರಾಭವಗೊಂಡು ಕೆಂಗಲ್ ಗುಂಪು ವಿಜಯಸಾಧಿಸಿದ ಕಾರಣ ಹನುಮಂತಯ್ಯ ಮುಖ್ಯಮಂತ್ರಿಯಾಗುತ್ತಾರೆ. ಕೆ.ಸಿ.ರೆಡ್ಡಿ ಕೇಂದ್ರದ ಮಂತ್ರಿಯಾಗಿ ನಂತರ ರಾಜ್ಯಪಾಲರಾಗಿ ಇನ್ನೊಂದು ದಾರಿಯನ್ನು ನೋಡಿಕೊಳ್ಳಬೇಕಾಗುತ್ತದೆ.

ಸ್ವಾತಂತ್ರ್ಯಪೂರ್ವದಲ್ಲಿ ಮೈಸೂರು ಭಾಗದಲ್ಲಿ ಇದ್ದಂತಹವು ಎರಡು ಪ್ರಜಾಸತ್ತಾತ್ಮಕ ಸಭೆಗಳು. ಒಂದು `ಮೈಸೂರು ಪ್ರಜಾಪ್ರತಿನಿಧಿ ಸಭೆ’. ಇನ್ನೊಂದು ‘ಮೈಸೂರು ನ್ಯಾಯವಿಧಾಯಕ ಸಭೆ’. ಇದರಲ್ಲಿ ಪ್ರಜಾಪ್ರತಿನಿಧಿ ಸಭೆಯ ಕಾರ್ಯಕಲಾಪಗಳು ಮೈಸೂರಿನಿಂದಲೇ ನಡೆಯುತ್ತಿದ್ದವು. ನ್ಯಾಯವಿಧಾಯಕ ಸಭೆ ಮಾತ್ರ ಬೆಂಗಳೂರಿನ ಆಗಿನ ಅಠಾರ ಕಛೇರಿಯಿಂದ ಕಾರ್ಯನಿರ್ವಹಿಸುತ್ತಿತ್ತು. ಹೊಸದಾಗಿ ಜಾರಿಯಾಗಲಿರುವ ಸಂವಿಧಾನದ ಪ್ರಕಾರ, ವಿಧಾನಸಭೆ ಮತ್ತು ವಿಧಾನ ಪರಿಷತ್ತು ಅಸ್ತಿತ್ವಕ್ಕೆ ಬರಬೇಕಾದ್ದರಿಂದ ಅವೆರಡೂ ಒಂದೆಡೆ ಅಧಿವೇಶನ ನಡೆಸಲು ಅನುಕೂಲವಾಗುವಂತಹ ಒಂದು ಹೊಸ ಕಟ್ಟಡ ನಿರ್ಮಾಣದ ಅವಶ್ಯಕತೆಯುಂಟಾಗುತ್ತದೆ. ತತ್ವರಿಣಾಮವೇ ಈಗಿನ ವಿಧಾನಸೌಧದ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯುತ್ತದೆ. ವಾಸ್ತವವಾಗಿ ಇಂಥದೊಂದು ಕಟ್ಟಡ ನಿರ್ಮಾಣದ ರೂಪರೇಷೆಗಳು ಕೆ.ಸಿ. ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗಲೇ ಆರಂಭವಾಗುತ್ತವೆ. ಹೊಸ ಕಟ್ಟಡಕ್ಕೆ ಪ್ರಧಾನಿ ನೆಹರೂ ಅವರನ್ನು ಕರೆತಂದ ಕೆ.ಸಿ.ರೆಡ್ಡಿ 1951ರ ಜುಲೈನಲ್ಲಿ ಶಂಕುಸ್ಥಾಪನೆಯನ್ನೂ ಮಾಡಿಸುತ್ತಾರೆ.

ಕೆ.ಸಿ. ರೆಡ್ಡಿ ಕಾಲದಲ್ಲಿ ಶಂಕುಸ್ಥಾಪನೆಯಾದರೂ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿಲ್ಲ. ಅದಕ್ಕೆ ಚಾಲನೆ ದೊರೆತದ್ದು 52ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕೆಂಗಲ್ ಅವರು ಮುಖ್ಯಮಂತ್ರಿಯಾದ ಮೇಲೆಯೇ. ಆಗಿನ ಮೈಸೂರು ರಾಜ್ಯದ ಆದಾಯದ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ ಬರಲಿರುವ ಉಭಯ ಸದನಗಳೂ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಕೇಂದ್ರ ಕಛೇರಿಗಳೂ ಒಂದೇ ಕಟ್ಟಡದಲ್ಲಿರುವಂತೆ ಕಟ್ಟಡದ ಯೋಜನೆ ರೂಪಿಸಲಾಗುತ್ತದೆ. ಆಗ ಸಚಿವ ಸಂಪುಟ ತೀರ್ಮಾನಿಸಿದ ಇಡೀ ಕಟ್ಟಡದ ಅಂದಾಜು ವೆಚ್ಚ ಈಗ ನಾವು ಒಂದು ಒಳ್ಳೆಯ ಎರಡಂತಸ್ತಿನ ಮನೆಯನ್ನೂ ಮಾಡಿಕೊಳ್ಳಲು ಸಾಧ್ಯವಾಗದ ಐವತ್ತು ಲಕ್ಷ ರೂಪಾಯಿ ಮಾತ್ರ! (ಕಟ್ಟಡ ಮುಗಿಯುವಾಗ ಅದರ ವೆಚ್ಚ ಈ ಮಿತಿಯನ್ನು ಮೀರಿತಾದರೂ ಅದು ಅತೀದೂರ ಹೋಗಲಿಲ್ಲ) ಆ ಕಾಲದ ರಾಜಕಾರಣದ ಮನಸ್ಥಿತಿ ಹೇಗಿತ್ತೆಂದರೆ ಸಚಿವ ಸಂಪುಟದಲ್ಲಿ ತಮಗೆ ಬೇಕಾದವರಿಗೆ ಕಂಟ್ರಾಕ್ಟ್ ಕೊಡಿಸಿ ಅದರಿಂದ ಕಮಿಷನ್ ಪಡೆಯುವ ಆಲೋಚನೆ ಅವರಿಗಿರಲಿಲ್ಲ. ಕಂಟ್ರಾಕ್ಟ್ ಕೊಟ್ಟರೆ ಹೆಚ್ಚು ಹಣ ಸರ್ಕಾರದಿಂದ ಖರ್ಚಾಗುತ್ತದೆ ಎಂದು ಮಿತವ್ಯಯದಿಂದ ಕಟ್ಟಡ ನಿರ್ಮಾಣ ಮಾಡಲು ಸರ್ಕಾರದ ಲೋಕೋಪಯೋಗಿ ಇಲಾಖೆಯೇ ಅದರ ಕಾರ್ಯ ನಿರ್ವಹಿಸಬೇಕೆಂದು ತೀರ್ಮಾನವಾಗುತ್ತದೆ.

ವಿಧಾನ ಸೌಧದ ನಿರ್ಮಾಣ ಹೀಗೆ ಲೋಕೋಪಯೋಗಿ ಇಲಾಖೆಯ ಜವಾಬ್ದಾರಿಗೆ ಬಂದಾಗ ಆ ಇಲಾಖೆಯ ಮಂತ್ರಿಯಾಗಿದ್ದವರು ಕಡಿದಾಳ್ ಮಂಜಪ್ಪನವರು. ವಿಧಾನಸೌಧದ ನಿರ್ಮಾಣದ ವಿಷಯದಲ್ಲಿ ಕೆಂಗಲ್ ಅವರಿಗೂ ಮಂಜಪ್ಪನವರಿಗೂ ಸೈದ್ಧಾಂತಿಕವಾಗಿ ಬಹಳಷ್ಟು ಭಿನ್ನಾಭಿಪ್ರಾಯವಿಲ್ಲದಿದ್ದರೂ ಅವರಿಬ್ಬರ ಗುರಿಯಲ್ಲಿ ಸ್ಪಷ್ಟವಾಗಿ ವ್ಯತ್ಯಾಸವಿತ್ತು. ಅದನ್ನು ಮಂಜಪ್ಪನವರ ಈ ಮಾತುಗಳು ಸ್ಪಷ್ಟಪಡಿಸುತ್ತವೆ: “ಶ್ರೀ ಹನುಮಂತಯ್ಯನವರು ರಾಷ್ಟ್ರದ ಕೆಲವುಕಡೆಗಳಲ್ಲಿದ್ದ ಪ್ರಸಿದ್ಧವಾದ ಕಟ್ಟಡಗಳನ್ನು ನೋಡಿಕೊಂಡು ಬಂದು ಅವರಿಗೆ ಮೆಚ್ಚುಗೆಯಾಗಿದ್ದ ವಿನ್ಯಾಸವನ್ನು ವಿಧಾನಸೌಧದ ನಿರ್ಮಾಣಕ್ಕೆ ಅಳವಡಿಸಿಕೊಳ್ಳಬೇಕೆಂದು ವಿಶೇಷ ಇಂಜನಿಯರಿಗೂ (ಮುನಿಯಪ್ಪ), ವಾಸ್ತುಶಿಲ್ಪಿಗೂ(ಮಾಣಿಕ್ಯಂ) ಆದೇಶ ನೀಡುತ್ತಿದ್ದರು. ಉಭಯ ಶಾಸನ ಸಭೆಗಳೂ, ವಿವಿಧ ಇಲಾಖೆಗಳ ಸಚಿವಾಲಯಗಳೂ ಒಂದೇ ಕಟ್ಟಡದಲ್ಲಿ ಸುಗಮವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಒಂದು ಸುಂದರ ಕಟ್ಟಡವನ್ನು ಹೆಚ್ಚೆಂದರೆ ಐವತ್ತು ಲಕ್ಷ ರೂಪಾಯಿಗಳಿಗೆ ಮೀರದ ವೆಚ್ಚದಿಂದ ಕಟ್ಟಿಸುವುದು ನನ್ನ ಗುರಿಯಾಗಿತ್ತು. ಆದರೆ ಹನುಮಂತಯ್ಯನವರ ಗುರಿ ಬೇರೆಯಾಗಿತ್ತು. ಕರ್ನಾಟಕ ಸಂಸ್ಕೃತಿ ಹಾಗೂ ದಕ್ಷಿಣ ಭಾರತದ ವಾಸ್ತುಶಿಲ್ಪಕಲೆಯ ಹಿರಿಮೆಯನ್ನು ಪ್ರತಿಬಿಂಬಿಸುವ ಜಗತ್ಪ್ರಸಿದ್ಧವಾದ ಒಂದು ಭವ್ಯವಾದ ಸೌಧವನ್ನು ನಿರ್ಮಿಸುವುದು ಅವರ ಗುರಿಯಾಗಿತ್ತು.”

ಈ ವಿಧಾನಸೌಧದ ನಿರ್ಮಾಣದಲ್ಲಿ ಕೆಂಗಲ್ ಅತ್ಯಂತ ಮುತುವರ್ಜಿವಹಿಸಿದ್ದರು. ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ಈ ಕಾರ್ಯ ನಡೆಯುತ್ತಿದ್ದರೂ ಅದಕ್ಕೆ ಮಾಣಿಕ್ಯಂ ಅವರು ವಾಸ್ತುಶಿಲ್ಪಿಗಳಾಗಿ ಮತ್ತು ಮುನಿಯಪ್ಪನವರು ಮುಖ್ಯ ವಿಶೇಷ ಇಂಜನಿಯರ್ ಆಗಿ ಕೆಲಸ ಮಾಡುತ್ತಿದ್ದರೂ ಇಲಾಖಾ ಮಂತ್ರಿ ಕಡಿದಾಳ್ ಅವರು ತುಂಬಾ ಜವಾಬ್ದಾರಿಯಿಂದ ಉಸ್ತುವಾರಿ ನಡೆಸುತ್ತಿದ್ದರಾದರೂ ಕೆಂಗಲ್ ತಮ್ಮ ಕನಸಿನ ಕೂಸಾದ ವಿಧಾನಸೌಧದ ನಿರ್ಮಾಣದ ಪ್ರತಿಹಂತದಲ್ಲೂ ವಿಶೇಷ ಆಸಕ್ತಿವಹಿಸಿ ಖುದ್ದಾಗಿ ಇವರೆಲ್ಲರ ಮೇಲೆ ಉಸ್ತುವಾರಿ ಮಾಡುತ್ತಲೇ ಇರುತ್ತಾರೆ. ಅದರ ನೀಲಿನಕ್ಷೆಯನ್ನು ಕೊನೆಗೂ ಅವರೇ ಅಂತಿಮಗೊಳಿಸಿರುತ್ತಾರೆ. ಉಳಿದವರೆಲ್ಲ ಅದನ್ನು ಒಪ್ಪಿಕೊಂಡಿರುತ್ತಾರೆ. ಹೀಗೆ ಈ ಕಟ್ಟಡ ನಡೆಯುವಾಗ ಅದರ ಉಸ್ತುವಾರಿಗೆ ಹೋದ ಒಂದು ಸಂದರ್ಭದಲ್ಲಿ ಅವರ ಹತ್ಯೆಯ ಒಂದು ವಿಫಲಪ್ರಯತ್ನವೂ ನಡೆದುಬಿಡುತ್ತದೆ. ಬಹುಶಃ ಕೆಂಗಲ್ ಅವರು ಅದನ್ನು ಗಂಭೀರವಾಗಿ ಪರಿಗಣಿಸದಿದ್ದಕ್ಕೋ ಏನೋ ಆ ಘಟನೆ ಹೆಚ್ಚು ಪ್ರಚಾರ ಪಡೆಯಲಿಲ್ಲವೆನಿಸುತ್ತದೆ. ಆ ಘಟನೆ ನಡೆದದ್ದು ಹೀಗೆ:

1952ರಲ್ಲಿಯೇ ಆರಂಭವಾದ ವಿಧಾನಸೌಧದ ನೆಲಮಹಡಿಯ ಕಟ್ಟಡ ಕಾರ್ಯಮುಗಿದು 1953ರಲ್ಲಿ ಮೊದಲ ಮಹಡಿಯ ಕಾರ್ಯ ನಡೆಯುತ್ತಿರುತ್ತದೆ. ಒಂದು ದಿನ ಮುಖ್ಯಮಂತ್ರಿ ಹನುಮಂತಯ್ಯ ಕಡಿದಾಳ್ ಮಂಜಪ್ಪನವರ ಮನೆಗೆ ಬಂದು ನಿರ್ಮಾಣ ಹಂತದಲ್ಲಿದ್ದ ವಿಧಾನಸೌಧದ ಕಟ್ಟಡ ನೋಡಬೇಕು ಬನ್ನಿ ಹೋಗೋಣ ಎಂದು ಕರೆಯುತ್ತಾರೆ. ಸ್ವತಃ ಮುಖ್ಯಮಂತ್ರಿ ತನ್ನ ಕೈಕೆಳಗೆ ಕೆಲಸ ಮಾಡುತ್ತಿರುವ ಮಂತ್ರಿಯ ಮನೆಗೆ ಹೋಗಿ ಆತನನ್ನು ಕರೆಯುವುದು ಆ ಕಾಲದ ರಾಜಕಾರಣಿಗಳಿಗೆ ಅವಮಾನದ ಸಂಗತಿಯಾಗಿರಲಿಲ್ಲ. `ನಾನು ಕರೆದ ತಕ್ಷಣ ಅವನೇ ಓಡಿಬರಬೇಕು’ ಎಂದು ಅವರು ನಿರೀಕ್ಷಿಸುತ್ತಲೂ ಇರಲಿಲ್ಲ. ಸ್ವತಃ ಲೋಕೋಪಯೋಗಿ ಮಂತ್ರಿಯಾಗಿದ್ದ ಮಂಜಪ್ಪ ಮತ್ತು ಮುಖ್ಯಮಂತ್ರಿ ಕೆಂಗಲ್ ಅವರು ಕೆಂಗಲ್ ಅವರ ಕಾರಿನಲ್ಲಿಯೇ ವಿಧಾನಸೌಧದ ಕಡೆ ಹೊರಡುತ್ತಾರೆ. ಇಬ್ಬರ ಅಂಗರಕ್ಷಕರೂ ಕಟ್ಟಡದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮುಖ್ಯ ಇಂಜಿನಿಯರ್ ಇವರೆಲ್ಲ ಸೇರಿ ಹಿಂದೆ ಇನ್ನೊಂದು ಕಾರಿನಲ್ಲಿ ಅವರನ್ನು ಹಿಂಬಾಲಿಸುತ್ತಾರೆ. ಒಬ್ಬ ಮುಖ್ಯಮಂತ್ರಿ ಹೊರಟರೆ ಮೂವತ್ತು ನಲವತ್ತು ಕಾರುಗಳ ಅವರ ವಾಹನದ ಹಿಂದೆ ಮುಂದೆ ಕುಂಯ್ ಕುಂಯ್ ಅನ್ನುತ್ತಾ ಹೊರಡುವ ಪರಿಪಾಠ ಆಗಿನ್ನೂ ಶುರುವಾಗಿರಲಿಲ್ಲ. ಮುಖ್ಯಮಂತ್ರಿ ಮತ್ತು ಒಬ್ಬ ಸಹಾಯಕ ಮಂತ್ರಿ ಇಬ್ಬರೂ ಹೊರಟಾಗ ಅವರ ಅಂಗರಕ್ಷಕರದ್ದೂ ಸೇರಿ ಹೊರಟದ್ದು ಎರಡೇ ಕಾರುಗಳು!
 
ಕಟ್ಟಡ ಕೆಲಸ ನಡೆಯುತ್ತಿದ್ದ ವಿಧಾನಸೌಧಕ್ಕೆ ಬಂದ ಹನುಮಂತಯ್ಯ ಮತ್ತು ಇಬ್ಬರು ಇಂಜನಿಯರ್ ಕಟ್ಟಡದ ಒಳಗೆ ಹೋಗಿ ನಿರ್ಮಾಣ ಕಾರ್ಯ ನೋಡುತ್ತಾ ನೋಡುತ್ತಾ ಸಾಗುತ್ತಾರೆ. ಹನುಮಂತಯ್ಯ ಎಲ್ಲರಿಗಿಂತ ಮುಂದೆ ಇರುತ್ತಾರೆ. ಮಂಜಪ್ಪ ಅವರಿಗಿಂತ ತುಸು ಹಿಂದೆ ನಡೆಯುತ್ತಿರುತ್ತಾರೆ. ಆಗ ಆ ಸ್ಥಳದಲ್ಲಿ ಒಮ್ಮೆಲೆ ಪ್ರತ್ಯಕ್ಷನಾದ ಮಾಜಿ ಖೈದಿಯೊಬ್ಬ ಯಾವ ಪ್ರಚೋದನೆಯೂ ಇಲ್ಲದೆಯೂ ಒಮ್ಮೆಲೆ ಹನುಮಂತಯ್ಯನವರ ಕಡೆ ನುಗ್ಗಿ ತನ್ನ ಬಲಗೈಯಿಂದ ಹನುಮಂತಯ್ಯನವರ ತಲೆಗೆ ಹೊಡೆದುಬಿಡುತ್ತಾನೆ! ದೈಹಿಕವಾಗಿ ಸಾಕಷ್ಟು ಬಲಾಢ್ಯರಾಗಿದ್ದ ಕೆಂಗಲ್ ಹನುಮಂತಯ್ಯನವರು ಆ ಹೊಡೆತಕ್ಕೆ ಕೆಳಗೆ ಬೀಳುವುದಿಲ್ಲವಾದರೂ ಅವನ ಹೊಡೆತದ ರಭಸಕ್ಕೆ ಅವರ ತಲೆಯ ಮೇಲಿದ್ದ ಜರಿಯ ರುಮಾಲು ನೆಲಕ್ಕೆ ಬೀಳುತ್ತದೆ. ತಕ್ಷಣ ಆ ಖೈದಿ ಅಲ್ಲಿಯೇ ಬಿದ್ದಿದ್ದ ಕಬ್ಬಿಣದ ರಾಡೊಂದನ್ನು ತಗೆದುಕೊಂಡು ಬರಿತಲೆಯಲ್ಲಿದ್ದ ಕೆಂಗಲ್ ಅವರ ತಲೆಗೆ ಗುರಿಯಿಟ್ಟು ಹೊಡೆಯಲು ಕೈ ಮೇಲೆ ಎತ್ತಿಯೇಬಿಡುತ್ತಾನೆ! ಇನ್ನೇನು ಅವನ ಕೈಯಲ್ಲಿನ ರಾಡು ಕೆಂಗಲ್ ಅವರ ತಲೆಯನ್ನು ಅಪ್ಪಳಿಸಬೇಕು ಅನ್ನುವಷ್ಟರಲ್ಲಿ ಸ್ಥಳದಲ್ಲಿದ್ದ ಚಿಕ್ಕಬಳ್ಳಾಪುರದ ಚಿಕ್ಕಪುಟ್ಟಸ್ವಾಮಿ ಎಂಬ ವ್ಯಕ್ತಿ ಅವನನ್ನು ಹಿಂದಿನಿಂದ ಬಲವಾಗಿ ತಬ್ಬಿಹಿಡಿದು  ಅವನ ಕೈಯಲ್ಲಿದ್ದ ರಾಡನ್ನು ಕಸಿದುಕೊಳ್ಳುತ್ತಾರೆ. ಚಿಕ್ಕಪುಟ್ಟಸ್ವಾಮಿ ಆ ಖೈದಿಗಿಂತ ಬಲಿಷ್ಠರಾದುದರಿಂದ ಅವನು ಎಷ್ಟೇ ಕೊಸರಾಡಿದರೂ ಕೆಂಗಲ್ ಅವರಿಗೆ ಏಟುಕೊಡಲು ಸಾಧ್ಯವಾಗುವುದೇ ಇಲ್ಲ.

ಬಹುಶಃ ಆ ದಿನ ಈ ಚಿಕ್ಕಪುಟ್ಟಸ್ವಾಮಿ ಅಲ್ಲಿ ಇಲ್ಲದಿದ್ದರೆ ನಡೆಯಬಾರದ ಒಂದು ಘಟನೆ ನಡದೇ ಹೋಗುತ್ತಿತ್ತೇನೋ! ಇಷ್ಟೆಲ್ಲ ಘಟನೆ ನಡೆದ ಮೇಲಷ್ಟೇ ಈ ಇಬ್ಬರು ಮಂತ್ರಿಗಳ ಅಂಗರಕ್ಷಕರು ಅವರ ಬಳಿ ಬರುತ್ತಾರೆ. ಈ ಘಟನೆಯ ಯಾವ ಮುನ್ಸೂಚನೆಯನ್ನೂ ನಿರೀಕ್ಷಿಸದಿದ್ದ ಅವರೆಲ್ಲ ಈ ಮಂತ್ರಿಗಳು ಒಳಗೆ ಕಟ್ಟಡ ನೋಡುತ್ತಿದ್ದಾಗ ಹೊರಗಡೆ ಹರಟೆಹೊಡೆಯುತ್ತಾ ನಿಂತಿರುತ್ತಾರೆ. ಈ ಘಟನೆಯನ್ನು ತಮ್ಮ ಆತ್ಮಕಥೆಯಲ್ಲಿ ದಾಖಲಿಸಿರುವ ಕಡಿದಾಳ್ ಮಂಜಪ್ಪನವರು ಘಟನೆ ನಡೆಯುತ್ತಿರುವಾಗ ತಮಗಾದ ಮನಸ್ಥಿತಿಯನ್ನು ದಾಖಲಿಸುವುದು ಹೀಗೆ, “ನಾನಂತೂ ಆ ಅನಿರೀಕ್ಷಿತ ಘಟನೆಯಿಂದ ಸ್ಥಂಭೀಭೂತನಾಗಿ ಮೂಕಪ್ರೇಕ್ಷಕನಾಗಿದ್ದೆ. ಹನುಮಂತಯ್ಯನವರ ಜೊತೆಗಿದ್ದ ಇಂಜನಿಯರರೂ ಹಾಗೇ ಇದ್ದರು. ಕೆಳಗಡೆ ಕಬ್ಬಿಣದ ಸರಳುಗಳೂ ಮತ್ತು ಸಲಾಖೆಗಳೂ ಯಥೇಚ್ಛವಾಗಿ ಬಿದ್ದಿದ್ದವು. ಅವುಗಳ ಪೈಕಿ ಯಾವುದಾದರೊಂದನ್ನು ಕೈಗಿತ್ತಿಕೊಂಡು ಹನುಮಂತಯ್ಯನವರ ಜೊತೆಗಿದ್ದ ಇಂಜನಿಯರಾಗಲೀ ನಾನಾಗಲೀ ಅವನ ತಲೆಯ ಮೇಲೆ ಹೊಡೆಯಬಹುದಾಗಿತ್ತೆಂಬ ಯೋಚನೆ ಆಮೇಲೆ ಹೊಳೆಯಿತು. ಆದರೆ ಮಿಂಚಿನ ವೇಗದಲ್ಲಿ ನಡೆದ ಕೃತ್ಯ ನಡೆದದ್ದರಿಂದ  ಯೋಚಿಸುವಷ್ಟು ಸಮಯವೂ ಇರಲಿಲ್ಲ.”

ಈ ಘಟನೆಯ ನಂತರ ಗಾಂಧಿವಾದಿಯಾಗಿದ್ದ ಕಡಿದಾಳ್ ಮಂಜಪ್ಪ ಕೂಡ ಆತ್ಮರಕ್ಷಣೆಗಾಗಿ ರಿವಲ್ವಾರ್ ಇಟ್ಟುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿಪಡೆದು ರಿವಲ್ವಾರ್ ಕೊಳ್ಳುತ್ತಾರೆ! ಈ ರಿವಲ್ವಾರ್ ಇಟ್ಟುಕೊಳ್ಳಬೇಕಾದ ಕಾರಣದಿಂದಾಗಿ  “ನಾನು ಅಹಿಂಸಾವಾದಿ ಎಂದು ಹೇಳಿಕೊಳ್ಳಲಾರೆ” ಎಂದು ವಿಷಾಧದಿಂದ ಅವರು ಬರೆಯುತ್ತಾರೆ. ಒಟ್ಟಿನಲ್ಲಿ ಅಂದು ಯಾವ ಘಟನೆ ನಡೆಯಬಾರದಿತ್ತೋ ಅದು ನಡೆಯಲಿಲ್ಲ ಎಂಬುದು ಸಮಾಧಾನದ ಸಂಗತಿ. ಒಂದು ವೇಳೆ ಅದು ನಡೆದಿದ್ದರೆ ಸ್ವತಂತ್ರ ಭಾರತದ ಇತಿಹಾಸ ಹೇಗೆ ಸ್ವತಂತ್ರಕ್ಕಾಗಿ ಹೋರಾಡಿದ ಮಹಾತ್ಮಗಾಂಧಿ ಕೊಲೆಯ ಕಪ್ಪುಕಲೆಯಿಂದಲೇ ಆರಂಭವಾಯಿತೋ ಹಾಗೇ ಕರ್ನಾಟಕದ ರಾಜ್ಯೋದಯ ಮತ್ತು ಅದರ ಕುರುಹಾದ ವಿಧಾನಸೌಧದ ಇತಿಹಾಸ ಕೂಡ ಅದರ ರೂವಾರಿ ಕೆಂಗಲ್ ಹನುಮಂತಯ್ಯನವರ ಕೊಲೆಯ ಕಪ್ಪುಚುಕ್ಕೆಯಿಂದಲೇ ಆರಂಭವಾಗುತ್ತಿತ್ತು!
*****
ಡಾ. ರಾಜೇಂದ್ರ ಬುರಡಿಕಟ್ಟಿ
25-10-2017

(ವಿಧಾನಸೌಧ ನಿರ್ಮಾಣದ ವಜ್ರಮಹೋತ್ಸವ ದಿನ)