Wednesday, January 9, 2019

ಕನ್ನಡಪರ ಹೋರಾಟ ಮತ್ತು ಮೊಮ್ಮಕ್ಕಳ ಇಂಗ್ಲಿಷ್ ಶಿಕ್ಷಣ




ಕೆಲದಿನಗಳಿಂದ ಗರಿಗೆದರಿಕೊಂಡಿದ್ದ ಶಾಲಾಮಕ್ಕಳ ಶಿಕ್ಷಣ ಮಾಧ್ಯಮದ ಚರ್ಚೆ ಇದೀಗ ಧಾರವಾಡದಲ್ಲಿ ಮುಕ್ತಾಯಗೊಂಡ 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಸರ್ಕಾರ 2019-20ನೇ ಸಾಲಿನಿಂದ ತೆರೆಯಲು ಹೊರಡಿಸಿರುವ ಆದೇಶವನ್ನು ವಾಪಸ್ಸು ಪಡೆಯಬೇಕೆಂಬ ಒಕ್ಕೊರಲಿನ ನಿರ್ಣಯ ಕೈಗೊಳ್ಳುವುದರೊಂದಿಗೆ ಒಂದು ನಿರ್ಧಿಷ್ಠ ಹಂತ ತಲುಪಿ ಕಾದುನೋಡುವ ಅಲ್ಪಕಾಲದ ನಿಲುಗಡೆಯನ್ನು ತಲುಪಿದೆ. ಸಮ್ಮೇಳನಾಧ್ಯಕ್ಷರೂ ಆಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ. ಚಂದ್ರಶೇಖರ ಕಂಬಾರ ಸೇರಿದಂತೆ ನಾಡಿನ ಕೆಲವು ಹಿರಿಯ ಸಾಹಿತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕೆಲದಿನಗಳ ಹಿಂದೆ ಸಭೆ ನಡೆಸಿ ಸರ್ಕಾರ ತನ್ನ ನೇರ ನಿಯಂತ್ರಣದ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಬರುವ ವರ್ಷದಿಂದ ಇಂಗ್ಲಿಷ್ ಮಾಧ್ಯಮದ ಬೋಧನೆಯನ್ನು ಆರಂಭಿಸಲು ಮಾಡಿರುವ ನಿರ್ಧಾರವನ್ನು ವಿರೋಧಿಸಿ, ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಗೋಕಾಕ್ ಮಾದರಿಯ ಚಳವಳಿಯನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದಾಗ ಚರ್ಚೆ ಮುನ್ನೆಲೆಗೆ ಬಂದಿತ್ತು ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿ ಬೆಳಗಾವಿ ಅಧಿವೇಶನದ ಅವಧಿಯಲ್ಲಿ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲವೆಂದು ಪ್ರಕಟಿಸಿದಾಗ ಚರ್ಚೆ ಕಾವೇರಿತ್ತು.

ನಿರೀಕ್ಷೆಯಂತೆಯೇ ಧಾರವಾಡ ಸಾಹಿತ್ಯ ಸಮ್ಮೇಳನ ಶಾಲಾಮಕ್ಕಳ ಕಲಿಕಾ ಮಾಧ್ಯಮದ ವಿಷಯದಲ್ಲಿ ವ್ಯಾಪಕ ಚರ್ಚೆಗೆ ವೇದಿಕೆಯಾಯಿತು. ನಿರೀಕ್ಷಿತ ಸಮಯಕ್ಕಿಂತ ನಾಲ್ಕು ಗಂಟೆಗಳಷ್ಟು ತಡವಾಗಿ ಆರಂಭವಾದ ಸಮ್ಮೇಳನದ ಉದ್ಘಾಟನಾ ಸಮಾರಂಭದಿಂದಲೇ ಚರ್ಚೆ ಆರಂಭವಾಯಿತು. ಬಹುತೇಕ ಇದೇ ಕಾರಣದಿಂದ ಸಮ್ಮೇಳನದ ಉದ್ಘಾಟನೆಯನ್ನು ಮಾಡಿದ ಮುಖ್ಯಮಂತ್ರಿಗಳು ಸಂಪ್ರದಾಯದಂತೆ ಎಲ್ಲರಿಗಿಂತ ಮೊದಲೇ ಮಾಡಬೇಕಾಗಿದ್ದ ತಮ್ಮ ಉದ್ಘಾಟನಾ ಭಾಷಣವನ್ನು ಸಂಪ್ರದಾಯ ಮುರಿದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷರ ಭಾಷಣ ಮತ್ತು ಸಮ್ಮೇಳನಾಧ್ಯಕ್ಷರ ಭಾಷಣಗಳ ನಂತರ ಮಾಡುವಂತೆ ವ್ಯವಸ್ಥೆಮಾಡಲಾಯಿತು. ಅವರಿಬ್ಬರ ಭಾಷಣಗಳಿಗೆ ರಾಜ್ಯದ ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ಪ್ರತಿಕ್ರಿಯೆ ನೀಡಲು ಅನುಕೂಲವಾಗಲಿ ಎಂಬುದು ಇದರ ಹಿಂದಿದ್ದ ಕಾಳಜಿ. ಮಕ್ಕಳ ಕಲಿಕಾಮಾಧ್ಯಮವನ್ನು ಇಷ್ಟೊಂದು ಮಹತ್ವದ ವಿಷಯವಾಗಿ ಪರಿಗಣಿಸಿದ್ದು ನಿಜಕ್ಕೂ ಅಭಿನಂದನೀಯ.

ಹೀಗೆ ಮುಖ್ಯಮಂತ್ರಿಗಳಿಗಿಂತ ಮೊದಲು ಭಾಷಣಮಾಡಿದ ಇಬ್ಬರು `ಚಂದ್ರಶೇಖರ'ರೂ ನಿರೀಕ್ಷೆಯಂತೆ ಕನ್ನಡಪರವಾದ ತಮ್ಮ ನಿಲುವನ್ನು ಸ್ಪಷ್ಟಪಡಿಸಿ ಸರ್ಕಾರದ ನಡೆ ನಾಡುನುಡಿಯ ಕುತ್ತಿಗೆ ಹಿಚುಕುವ ಕ್ರಮಮಾತ್ರವಾಗದೇ ನಾಡಮಕ್ಕಳ ಭವಿಷ್ಯವನ್ನೂ ಹೇಗೆ ಬಲಿತೆಗೆದುಕೊಳ್ಳುವ ಕೆಟ್ಟಕ್ರಮವಾಗಿದೆ ಎಂಬುದನ್ನು ಸ್ಪಷ್ಟಪಡಿಸಿ ಸರ್ಕಾರ ನಡೆಯಿಂದ ಹಿಂದೆ ಸರಿಯಲು ಒತ್ತಡ ಹೇರಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲ ತಮ್ಮ ಕನ್ನಡಪರ ನಿಲುವನ್ನು ಬಿಚ್ಚುಮನಸ್ಸಿನಿಂದ ಮತ್ತು ಚುಚ್ಚುಮಾತಿನಿಂದ ಅಧಿಕಾರ ಕೇಂದ್ರಕ್ಕೆ ತಿವಿದು ಮುಖ್ಯಮಂತ್ರಿಗಳಿಂದ ಬಗ್ಗೆ ಸ್ಪಷ್ಟನೆ ಬಯಸಿದರೆ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರ, ಹಿಂಭಾರ ಮತ್ತು ಮುಂಭಾರ ಎರಡೂ ಆಗದಂತೆ `ಸಮತೋಲನ' ಕಾಯ್ದುಕೊಂಡು ಅದನ್ನೇ ಹೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮಾತನಾಡಿದ ಮುಖ್ಯಮಂತ್ರಿಗಳು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ತೆರೆಯುವುದು ಏಕೆ ಅನಿವಾರ್ಯವಾಯಿತು ಎಂಬುದನ್ನು ಹೇಳಿ ತಮ್ಮ ಕ್ರಮವನ್ನು ಸಾಮಾಜಿಕ ನ್ಯಾಯದ ಕ್ರಮವಾಗಿ ಸಮರ್ಧಿಸಿಕೊಳ್ಳುತ್ತಲೇ ನಾಡು ನುಡಿಯ ವಿಷಯದಲ್ಲಿ ಸರ್ಕಾರದ ಬದ್ಧತೆಯನ್ನು ಸಂಶಯಪಡಬೇಕಾಗಿಲ್ಲವೆಂದೂ ಹೇಳಿದರು. ಬಗ್ಗೆ ನಾಡುನುಡಿಗೂ ಧಕ್ಕೆಯಾಗದಂತೆ, ಬಡಮಕ್ಕಳಿಗೂ ಅನ್ಯಾಯವಾಗದಂತೆ ಏನು ಮಾಡಬಹುದೆಂದು ನಾವೆಲ್ಲರೂ ಕುಳಿತು ಚರ್ಚಿಸೋಣ ಎಂಬ ಅವರ ಮಾತಿನೊಂದಿಗೆ ದೀಪ ಅಡ್ಡಗೋಡೆಯ ಮೇಲೆ ಸಧ್ಯಕ್ಕೆ ನಿಂತಿತು. ನಂತರ ನಡೆದ ಅನೇಕ ಗೋಷ್ಠಿಗಳಲ್ಲಿ ಅಡ್ಡಗೋಡೆಯ ದೀಪಕ್ಕೆ ಎಣ್ಣೆಹಾಕುವ ಬತ್ತಿಹಿಂಡುವ ಕಾರ್ಯ ನಡೆದು ಕೊನೆಗೆ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಕರಣದ ಜೊತೆಗೆ ಇಂಗ್ಲಿಷ್ ಮಾಧ್ಯಮದ ಶಾಲೆಗಳ ಆರಂಭಕ್ಕೆ ವಿರುದ್ಧವಾದ ನಿರ್ಣಯವನ್ನು ಕೈಗೊಳ್ಳುವ ಮೂಲಕ ದೀಪ ಮತ್ತಷ್ಟು ಪ್ರಕರವಾಗಿ ಉರಿವಂತೆ ಮಾಡಲಾಯಿತು.

ಸಮ್ಮೇಳನವೇನೋ ಕನ್ನಡನಾಡು ಮತ್ತು ನುಡಿಪರವಾದ ನಿರ್ಣಯವನ್ನು ತೆಗೆದುಕೊಂಡಿತು. ಆದರೆ ಹೀಗೆ ನಿರ್ಣಯ ತೆಗೆದುಕೊಂಡ ಸಾಹಿತಿಗಳ ಜೊತೆಗೆ ಇಡೀ ರಾಜ್ಯ ಇದೆ ಎಂದು ಹೇಳಲು ಬರುವಂತಿಲ್ಲ. ಜನಸಾಮಾನ್ಯರಲ್ಲಿ ಸಮ್ಮೇಳನದ ನಿರ್ಧಾರವನ್ನು ಸ್ವಾಗತಿಸುವವರಷ್ಟೇ ಅಥವಾ ಅದಕ್ಕೂ ತುಸು ಹೆಚ್ಚೇ ಎನ್ನುವಷ್ಟು ಜನ ಅದನ್ನು ವಿರೋಧಿಸುತ್ತಿದ್ದಾರೆ ಎಂಬುದು ವಾಸ್ತವ. ಇದು ಸಾರ್ವಜನಿಕವಾಗಿ ವ್ಯಾಪಕವಾಗಿ ನಡಯಲೇಬೇಕಾದ ಚರ್ಚೆಯಾದರೂ ಅದು ಈಗ ಸಾಗುತ್ತಿರುವ ದಿಕ್ಕು ಸರಿಯಾಗಿಲ್ಲ ಎಂಬುದನ್ನು ನಾವು ಗಮನಿಸಬೇಕು. ಕನ್ನಡ ಸಾಹಿತಿಗಳು ಕನ್ನಡಪರವಾಗಿ ಆಡಿದ ಮಾತುಗಳನ್ನು ಕೆಲವರು ಅವರನ್ನು ವೈಯಕ್ತಿಕವಾಗಿ ತೆಗಳಲಿಕ್ಕೆ ಬಳಸಿಕೊಂಡು ಲೇವಡಿ ಮಾಡುತ್ತಿದ್ದಾರೆ. ` ಸಾಹಿತಿಗಳು ತಮ್ಮ ಮೊಮ್ಮಕ್ಕಳನ್ನು ಯಾವ ಶಾಲೆಗಳಲ್ಲಿ ಯಾವ ಮಾಧ್ಯಮದಲ್ಲಿ ಓದಿಸುತ್ತಿದ್ದಾರೆ ಎಂಬುದನ್ನು ಮೊದಲು ಪ್ರಕಟಿಸಲಿ' ಎಂದು ಕೆಲವರು ಸವಾಲು ಹಾಕಿದ್ದಾರೆ. (ಹೀಗೆ ಹಾಕಿದ ಸ್ವತಃ ಮುಖ್ಯಮಂತ್ರಿಯವರ ಒಂದು ಸವಾಲಿಗೆ ಸಾಹಿತಿ ಚಂಪಾ ಅವರು ತೀಕ್ಷ್ಣ ಉತ್ತರ ಕೊಟ್ಟು, `ನನ್ನ ಮೊಮ್ಮಗ `ಕನ್ನಡ' ಬೇಕಾದರೆ ಮುಖ್ಯಮಂತ್ರಿಗಳು ತಮ್ಮ ಗುಪ್ತಚರ ಇಲಾಖೆಯ ಮೂಲಕ ತನಿಖೆ ಮಾಡಿಸಿಕೊಳ್ಳಲಿ' ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು). ಸಾಹಿತಿಗಳೆಲ್ಲ ತಮ್ಮ ಮೊಮ್ಮಕ್ಕಳನ್ನು ಖಾಸಗೀ ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸುತ್ತಾ, ಬಡವರ ಮಕ್ಕಳು ತಮ್ಮ ಮೊಮ್ಮಕ್ಕಳು ಪಡೆಯುತ್ತಿರುವ ಅವಕಾಶವನ್ನು ಪಡೆಯಬಾರದು ಎಂದು ಹೀಗೆಲ್ಲ ಸಂಚು ಮಾಡುತ್ತಾರೆ ಎಂಬುದು ಅವರ ಮೇಲೆ ಇಂಗ್ಲಿಷ್ ಪ್ರೇಮಿ ಪಾಲಕರು ಹೊರಿಸಲಾಗುತ್ತಿರುವ ಪ್ರಮುಖ ಆರೋಪ.

ಆರೋಪ ಮುಖ್ಯವಾಗಿ ಎರಡು ಅಂಶಗಳನ್ನು ಹೊಂದಿದೆ. ಮೊದಲನೆಯದು `ಅವರು ತಮ್ಮ ಮೊಮ್ಮಕ್ಕಳನ್ನು ಖಾಸಗೀ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಓದಿಸುತ್ತಿರುವುದರಿಂದ ಬಡವರ ಮಕ್ಕಳು ಓದುವ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೇಡ ಎಂದು ಹೇಳುವ ನೈತಿಕ ಹಕ್ಕು ಅವರಿಗಿಲ್ಲ' ಎಂಬುದು. ಎರಡನೆಯದು ` ಸಾಹಿತಿಗಳು ಆಡಳಿತದ ಪರ ಆಮೂಲಕ ಕಾರ್ಪೋರೇಟ್ ವಲಯದ ಪರ ಇದ್ದು ಬಡವರ ಮಕ್ಕಳಿಗೆ ಅನ್ಯಾಯ ಮಾಡಲೆಂದು ಹೀಗೆಲ್ಲ ಮಾಡುತ್ತಾರೆ' ಎಂಬುದು. ಒಂದೊಂದನ್ನೇ ನೋಡುವುದಾದರೆ ಮೊದಲನೆಯ ಟೀಕೆಯನ್ನು ಸಕಾರಾತ್ಮಕವಾದುದಲ್ಲ ಎನ್ನಬಹುದು. ಏಕೆಂದರೆ ಮೊಮ್ಮಕ್ಕಳನ್ನು ಯಾವ ಶಾಲೆಯಲ್ಲಿ ಯಾವ ಮಾಧ್ಯಮದಲ್ಲಿ ಓದಿಸಬೇಕೆಂದು ನಿರ್ಧರಿಸುವ ಹಕ್ಕು ಮತ್ತು ಸ್ವಾತಂತ್ರ್ಯಗಳು ಬಹುತೇಕ ಯಾರ ಮನೆಯಲ್ಲೂ ಅಜ್ಜಅಜ್ಜಿಯರ ಹತ್ತಿರ ಇರುವುದಿಲ್ಲ. ಬಗ್ಗೆ ಅವರು ಒಂದಿಷ್ಟು ಸಲಹೆಸೂಚನೆಗಳನ್ನು ನೀಡಬಹುದಾದರೂ ಬಗ್ಗೆ ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳುವವರು ಮಗುವಿನ ಅಪ್ಪಅಮ್ಮಂದಿರೇ ಆಗಿರುತ್ತಾರೆ. ಇದು ವಾಸ್ತವ. ಹೀಗಿರುವಾಗ ಅವರ ಮೊಮ್ಮೊಕ್ಕಳನ್ನು ಎದುರಿಗಿಟ್ಟುಕೊಂಡು ಅವರನ್ನು ಟೀಕಿಸುವುದು ಸರಿಯಲ್ಲ. ಮಾತಿಗೆ ತಕ್ಷಣ ಬರಬಹುದಾದ ಟೀಕೆ ಎಂದರೆ ತಮ್ಮ ಮಕ್ಕಳು ಮೊಮ್ಮಕ್ಕಳ ಮೇಲೆಯೇ ಪ್ರಭಾವ ಬೀರಲಾರದವರಿಗೆ ಊರಿಗೆಲ್ಲ ಬುದ್ಧಿಹೇಳುವ ಹಕ್ಕು ಎಲ್ಲಿಂದ ಬರುತ್ತದೆ ಎಂಬುದು.

                ಆದರೆ ನಮಗೆ ಸ್ಪಷ್ಟವಾಗಿ ಅರಿವಿರಬೇಕಾದ ಸಂಗತಿ ಎಂದರೆ ಸಾಹಿತಿಗಳಿಗೆ ವಿಷಯದಲ್ಲಿ ನಾವು ಕೊಡುವ ಗೌರವ ಅಥವಾ ಅವರನ್ನು  ನಾವು ಪ್ರಶ್ನಿಸುವುದು ಅವರು ಆಡುವ ಮಾತುಗಳು ಮತ್ತು ಪ್ರತಿಪಾದಿಸುವ ತತ್ವಗಳು ನಮ್ಮ ಸಮಾಜದ ಅಭಿವೃದ್ಧಿಗೆ ಪೂರಕವಾಗಿವೆಯೇ ಇಲ್ಲವೇ ಎಂಬುದನ್ನು ಅವಲಂಬಿಸಿರಬೇಕೇ ಹೊರತು ಅವರು ತಮ್ಮ ಕುಟುಂಬದ ಸದಸ್ಯರಿಂದ ಎಷ್ಟು ಗೌರವಕ್ಕೆ ಪಾತ್ರನಾಗಿದ್ದಾರೆ ಎಂಬ ಅಂಶವನ್ನಲ್ಲ. ಏಕೆಂದರೆ ಸಾಹಿತಿಯೊಬ್ಬನು ಆಡುವ ನುಡಿಬೀಜಗಳು ಬಿದ್ದು ಬೆಳೆಯಲು ಅವನ ಮನೆಯ ಜನರ ಕಿವಿಗಳೇ ನೆಲವಾಗಬೇಕಾದ ಅನಿವಾರ್ಯತೆಯೇನೂ ಇರುವುದಿಲ್ಲ. ಅವನ ಮಾತನ್ನು ಆಲೋಚನೆಯನ್ನು ಒಪ್ಪಿ ಬೆಲೆಕೊಡುವವರು ಅವನ ಮನೆಯಲ್ಲಿ ಇಲ್ಲದಿರಬಹುದು; ಆದರೆ ಹೊರಗೂ ಇರುವುದಿಲ್ಲವೇ? ಅಷ್ಟಕ್ಕೂ ಕೇವಲ ತನ್ನ ಮನೆಯವರಿಂದ ಗೌರವಿಸಲ್ಪಡುವವನನ್ನು `ಮನೆಯ ಸಾಹಿತಿ' ಅನ್ನಬಹುದೇ ಹೊರತು `ನಾಡಿನ ಸಾಹಿತಿ' ಅನ್ನಲು ಬರುವುದಿಲ್ಲ. `ಮನೆಗೆದ್ದು ಮಾರುಗೆಲ್ಲು' ಎಂಬ ಗಾದೆ ಹೀಗೆ ಟೀಕೆ ಮಾಡುವವರ ಮನಸ್ಸಿನಲ್ಲಿ ಇರಬಹುದು. ಅದು ತಪ್ಪಲ್ಲ. ಆದರೆ ಅನೇಕಬಾರಿ `ಮನೆಯನ್ನು ಗೆಲ್ಲಲು ನಿಂತವರು ಮಾರುದ್ದವೂ ಹೋಗುವುದಿಲ್ಲ' ಎಂಬುದನ್ನೂ ನಾವು ಅರ್ಥಮಾಡಿಕೊಳ್ಳಬೇಕು. ಹೀಗಾಗಿ ಯಾವುದೇ ಸಾಹಿತಿಗಳ ಮೊಮ್ಮಕ್ಕಳು ಖಾಸಗೀ ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದಾರೆ ಎಂಬ ಅಂಶವು ಅವರನ್ನು ಕನ್ನಡಪರವಾಗಿ ಮಾತನಾಡಲು ಅನರ್ಹರನ್ನಾಗಿ ಮಾಡುವುದಿಲ್ಲ.

                ಇನ್ನು ಎರಡನೆಯದು ಸಾಹಿತಿಗಳು ಆಡಳಿತದ ಪರ ಮೂಲಕ ಕಾರ್ಪೋರೇಟ್ ವಲಯದ ಪರ ಇದ್ದು ಬಡವರ ಮಕ್ಕಳಿಗೆ ಅನ್ಯಾಯ ಮಾಡಲೆಂದು ಹೀಗೆಲ್ಲ ಮಾಡುತ್ತಾರೆ ಎಂಬುದು. ಇದಂತೂ ಹುರುಳಿಲ್ಲದ ಟೀಕೆ. ಬೇರೆ ರಾಜ್ಯಗಳಲ್ಲಿ ಹೇಗೋ ಏನೋ ಆದರೆ ಕರ್ನಾಟಕದಲ್ಲಿ ಮಾತ್ರ ಭಾಷಾವಾರು ರಾಜ್ಯ ಸ್ಥಾಪನೆಯಾದಾಗಿನಿಂದಲೂ (ಅಷ್ಟೇ ಏಕೆ ಅದಕ್ಕಿಂತ ಮೊದಲಿನಿಂದಲೂ ಅಂದರೂ ಸರಿ) ನಾಡು ನುಡಿಗೆ ಕಂಟಕಗಳು ಎದುರಾದಾಗಲೆಲ್ಲ ತಮ್ಮ ವೈಯಕ್ತಿಕ ಆಲೋಚನಾ ಕ್ರಮ, ಸೈದ್ಧಾಂತಿಕ ಭಿನ್ನಾಭಿಪ್ರಾಯ, ತಮ್ಮ ಘನತೆಗೌರವಗಳಿಗೆ ಬರಬಹುದಾದ ಧಕ್ಕೆ, ಕೇಳಬೇಕಾದ ಟೀಕೆಗಳು, ಬರಬಹುದಾದ ಕೆಟ್ಟಹೆಸರು ಇವು ಯಾವುವನ್ನೂ ಲೆಕ್ಕಿಸದೇ ಮುಂಚೂಣಿಯಲ್ಲಿ ನಿಂತು ಹೋರಾಟಗಳನ್ನು ಮುನ್ನೆಡಿಸಿದವರು ನಮ್ಮ ಸಾಹಿತಿಗಳೇ ಎಂಬುದನ್ನು ಇದುವರೆಗಿನ ಎಲ್ಲ ಕನ್ನಡಪರ ಹೋರಾಟಗಳ ಚರಿತ್ರೆಯೇ ದಾಖಲಿಸಿದೆ. ಒಬ್ಬನಾದರೂ ಕನ್ನಡ ಸಾಹಿತಿಯಿಲ್ಲದೇ ನಡೆದ ಒಂದೇ ಒಂದು ಕನ್ನಡ ನಾಡುನುಡಿಪರ ಹೋರಾಟವನ್ನು ಎತ್ತಿತೋರಿಸುವ ಧೈರ್ಯ ಕರ್ನಾಟಕದಲ್ಲಿ ಯಾರಿಗಾದರೂ ಇದೆಯೇ? ಈಗಿನ ಪ್ರಕರಣವನ್ನೇ ನೋಡಿದರೂ ಪರಸ್ಪರ ವಿರುದ್ಧವಾದ ನಿಲುವುಗಳ, ಸೈದ್ಧಾಂತಿಕವಾಗಿ ಪರಸ್ಪರ ವಿರೋಧಿಗಳಾಗಿರುವ ಗಣ್ಯ ಸಾಹಿತಿಗಳನೇಕರು ವಿಚಾರದಲ್ಲಿ ತಮ್ಮ ಭಿನ್ನಾಭಿಪ್ರಾಯಗಳ ನಡುವೆಯೂ ನಾಡುನುಡಿಯ ದೃಷ್ಟಿಯಿಂದ ಮಾರಕವಾದ ನಿರ್ಧಾರವನ್ನು `ಸಮಾನಶತ್ರು' ಎಂದು ಪರಿಗಣಿಸಿ ತಮ್ಮ ವಿರೋಧವನ್ನು ಒಂದಾಗಿ ಪ್ರಕಟಿಸಿರುವುದನ್ನು ಕಾಣುತ್ತೇವೆ. ಪರಿಸ್ಥಿತಿ ಹೀಗಿರುವಾಗ ಅವರ ನಾಡುನುಡಿಪರವಾದ ಕಾಳಜಿ, ಆತಂಕಗಳನ್ನು ಸಂಶಯಪಡುವುದು, ಲೇವಡಿಮಾಡುವುದು ಎಷ್ಟು ಸರಿ? ಹಾಗಂದ ಮಾತ್ರಕ್ಕೆ ಅವರೆಲ್ಲ ಪ್ರಶ್ನಾತೀತರೆಂದು ಪರಿಗಣಿಸಬೇಕಿಲ್ಲ. ನಾಡುನುಡಿಪರವಾದ ಅವರ ಅಭಿಪ್ರಾಯಗಳನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂದೇನೂ ಇಲ್ಲ. ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಎತ್ತಿ ಚರ್ಚೆ ಸೈದ್ಧಾಂತಿಕವಾಗಿ ನಡೆಯುವಂತೆ ನೋಡಿಕೊಳ್ಳಬೇಕೆ ಹೊರತು, ಅದು ವೈಯಕ್ತಿಕವಾಗಿ ನಡೆಯುವಂತೆ ಮಾಡಬಾರದು. ಅದರಿಂದ ನಾಡುನುಡಿಗೆ ಯಾವುದೇ ಪ್ರಯೋಜನ ಆಗಲಾರದು.

         ಇಷ್ಟಕ್ಕೂ ಭಾಷಾಮಾಧ್ಯಮದ ಸಮಸ್ಯೆ ಅಷ್ಟೊಂದು ಸರಳರೇಖಾತ್ಮಕವಾಗಿಲ್ಲ. ಹೀಗಾಗಿ ಸಾಹಿತಿಗಳ ಕನ್ನಡ ಪರ ನಿಲುವನ್ನು ಟೀಕೆಮಾಡುವವರನ್ನೂ ನಾವು ಏಕಾಏಕಿ ಟೀಕಿಸುವಂತಿಲ್ಲ. ಸಾಹಿತಿಗಳು ಹೇಗೆ ನಾಡುನುಡಿಯ ವಿಷಯದಲ್ಲಿ ಆತಂಕಕ್ಕೊಳಗಾಗಿದ್ದಾರೋ ಅವರನ್ನು ಟೀಕಿಸುವವರೂ ಕೂಡ ಅವರವರ ಮಕ್ಕಳ ಭವಿಷ್ಯದ ವಿಷಯದಲ್ಲಿ ಅಷ್ಟೇ ಆತಂಕಕ್ಕೆ ಒಳಗಾಗಿದ್ದಾರೆ! ಪಾಲಕರ ಆತಂಕಕ್ಕೆ ಕಾರಣವೇ ಇಲ್ಲ ಎಂದು ಹೇಳುವ ಸ್ಥಿತಿಯಲ್ಲಿ ಪರಿಸ್ಥಿತಿ ಇಲ್ಲ. ಇದಕ್ಕೆಲ್ಲ ನಾವು ಅಳವಡಿಸಿಕೊಂಡಿರುವ `ಪಂಕ್ತಿಭೇದ ಶಿಕ್ಷಣ ನೀತಿ' ಮೂಲಕಾರಣ. ಉಳ್ಳವರ ಮಕ್ಕಳಿಗೆ ಒಂದು ರೀತಿಯ ಶಿಕ್ಷಣ, ಬಡವರ ಮಕ್ಕಳಿಗೆ ಇನ್ನೊಂದು ರೀತಿಯ ಶಿಕ್ಷಣ ಈಗಿರುವ ನಮ್ಮ ಶಿಕ್ಷಣಪದ್ಧತಿ. ಸಂವಿಧಾನದ ಪ್ರಧಾನ ಆಶಯವಾದ `ಸಮಸಮಾಜ ನಿರ್ಮಾಣ'ಕ್ಕೆ ವಿರುದ್ಧವಾಗಿ ಸಮಾಜವನ್ನು ಒಡೆಯುವ ಕೆಲಸವನ್ನು ನಮ್ಮ ಶಿಕ್ಷಣ ಮಾಡುತ್ತಿದೆ ಎಂಬುದನ್ನು ನಾವು ಮರೆಯಬಾರದು. ಖಾಸಗೀ ಶಾಲೆಗಳಲ್ಲಿ ಅದರಲ್ಲೂ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ಮಕ್ಕಳು ನಮ್ಮ ಸಮಾಜದ ಉನ್ನತ ಹುದ್ದೆಗಳನ್ನು ಪಡೆದು ಉತ್ತಮ ಜೀವನ ರೂಪಿಸಿಕೊಳ್ಳುತ್ತಾರೆ ಎಂಬ ಬಡಮಕ್ಕಳ ತಂದೆತಾಯಿಗಳ ಆತಂಕ ಸಂಪೂರ್ಣ ಸತ್ಯವಲ್ಲವಾದರೂ ಸಂಪೂರ್ಣ ಸುಳ್ಳೂ ಅಲ್ಲ. ಹಾಗಾಗಿ ತಮ್ಮ ಮಕ್ಕಳು ಓಟದಲ್ಲಿ ಹಿಂದೆಬೀಳುತ್ತಾರೆ ಎಂದು ಅವರೆಲ್ಲ ಸರ್ಕಾರಿ ಶಾಲೆಯಲ್ಲಿಯೇ ಇಂಗ್ಲಿಷ್ ಶಿಕ್ಷಣ ಆರಂಭಿಸುವುದನ್ನು ಸ್ವಾಗತಿಸುತ್ತಿದ್ದಾರೆ; ಮತ್ತು ಅದೇ ಕಾರಣಕ್ಕಾಗಿ ಅದನ್ನು ವಿರೋಧಿಸುತ್ತಿರುವ ಸಾಹಿತಿಗಳನ್ನು ವಿರೋಧಿಸುತ್ತಿದ್ದಾರೆ. ಸಾಹಿತಿಗಳನ್ನು ತಮ್ಮ ಮಕ್ಕಳ ಭವಿಷ್ಯಕ್ಕೆ ಕಲ್ಲುಹಾಕುತ್ತಿರುವ ಖಳನಾಯಕರಂತೆ ಅವರು ಕಲ್ಪಿಸಿಕೊಳ್ಳುತ್ತಿದ್ದಾರೆ. ಸಾಹಿತಿಗಳು ತಮ್ಮ ಮಕ್ಕಳ ಒಳ್ಳೆಯದಕ್ಕಾಗಿಯೇ ಹೀಗೆಲ್ಲ ಹೇಳುತ್ತಿದ್ದಾರೆ ಎಂಬ ಸತ್ಯವನ್ನು ಅವರು ಅರಿಯಲಾರದವರಾಗಿದ್ದಾರೆ. ಇದರ ಜೊತೆಗೆ ಮಕ್ಕಳ ಕಲಿಕೆಯ ವಿಚಾರದಲ್ಲಿ ಏನೇನೂ ಅಧ್ಯಯನವನ್ನೇ ಮಾಡಿರದ ಪ್ರಾಯೋಗಿಕ ಅನುಭವವೂ ಇಲ್ಲದ ಕೆಲವು `ನಾಯಕರು' ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ.

               ಇಂಗ್ಲಿಷ್ ಮಾಧ್ಯಮದ ಬಗ್ಗೆ ನಮ್ಮ ಸಮಾಜದಲ್ಲಿ ಇರುವ ತಪ್ಪು ತಿಳಿವಳಿಕೆ ಅಷ್ಟಿಷ್ಟಲ್ಲ. ಬಹಳಷ್ಟು ಜನರಿಗೆ `ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವಿಕೆ' ಮತ್ತು ಇಂಗ್ಲಿಷ್ ಭಾಷೆ ಕಲಿಯುವಿಕೆ' ಎರಡೂ ಒಂದೆಯೇ. ಬಗ್ಗೆ ಸಾಮಾನ್ಯ ಜನರಲ್ಲಿರುವ ಒಂದು ಮುಖ್ಯವಾದ ತಪ್ಪು ತಿಳಿವಳಿಕೆ ಎಂದರೆ ಬಹಳ ಚಿಕ್ಕವಯಸ್ಸಿನಲ್ಲಿಯೇ ಇಂಗ್ಲಿಷ್ ಮಾಧ್ಯಮದಲ್ಲಿ ಓದತೊಡಗಿದರೆ ಮಕ್ಕಳು ಇಂಗ್ಲಿಷ್ನಲ್ಲಿ ಪ್ರಭುತ್ವ ಪಡೆದುಕೊಳ್ಳುತ್ತಾರೆ, ಆರಂಭಿಕ ಶಿಕ್ಷಣವನ್ನು ಕನ್ನಡದಲ್ಲಿ ಪಡೆದರೆ ಮುಂದೆ ಉನ್ನತ ಶಿಕ್ಷಣವನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಪಡೆಯಬೇಕಾಗಿ ಬಂದಾಗ ಅವರು ಹಿಂದೆ ಬೀಳುತ್ತಾರೆ ಎಂಬುದು. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಆದರೆ ಇದಕ್ಕೆ ವಿರುದ್ಧವಾದ ತಾತ್ವಿಕತೆಗೆ ಅನೇಕ ಆಧಾರಗಳು ನಮಗೆ ಸಿಗುತ್ತವೆ. ಯಾವುದೇ ಮಗು ತನ್ನ ಆರಂಭಿಕ ಶಿಕ್ಷಣವನ್ನು ತನ್ನ ಮಾತೃಭಾಷೆಯಲ್ಲಿ ಪಡೆಯುವುದರಿಂದ ಅದರ ವ್ಯಕ್ತಿತ್ವದ ಸಹಜವಾದ ಮತ್ತು ಪರಿಣಾಮಕಾರಿಯಾದ ಬೆಳವಣಿಗೆಯಾಗುತ್ತದೆ ಮತ್ತು ಮಾತೃಭಾಷೆಯನ್ನು ಕಲಿಯುವ ಭಾಷಾ ಕೌಶಲವನ್ನು ಪರಿಣಾಮಕಾರಿಯಾಗಿ ರೂಢಿಸಿಕೊಂಡ ಮಗುಮಾತ್ರ ಇತರೆ ಭಾಷೆಗಳನ್ನು ಪರಿಣಾಮಕಾರಿಯಾಗಿ ಕಲಿಯಲು ಸಮರ್ಥವಾಗುತ್ತದೆ ಎಂಬುದು ಬಹುತೇಕ ವಿಶ್ವದ ಎಲ್ಲ ಶಿಕ್ಷಣ ತಜ್ಞರ ಅಭಿಪ್ರಾಯ.
               ಇದಕ್ಕೆ ಪೂರಕವಾದ ಪ್ರಾಯೋಗಿಕ ಅನುಭವವೊಂದನ್ನು ಕೊಡಲಿಚ್ಚಿಸುತ್ತೇನೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ನಿಯಂತ್ರಣದಲ್ಲಿ ಬರುವ ಜವಾಹರ್ ನವೋದಯ ವಿದ್ಯಾಲಯಕ್ಕೆ ಪ್ರತಿವರ್ಷ ಪ್ರವೇಶ ಪಡೆಯುವ ಮಕ್ಕಳಲ್ಲಿ ಶೇ. 80 ರಷ್ಟು ಮಕ್ಕಳು ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದಲ್ಲಿ ಐದನೇ ತರಗತಿಯವರೆಗೆ ಓದಿದವರು. ಶೇ. 20 ರಷ್ಟು ಮಕ್ಕಳು ಮಾತ್ರ ನಗರಪ್ರದೇಶದಿಂದ ಪ್ರವೇಶ ಪಡೆಯುತ್ತಾರೆ. ಹೀಗೆ ನಗರದ ಪ್ರದೇಶದಿಂದ ಪ್ರವೇಶ ಪಡೆಯುವ ಮಕ್ಕಳಲ್ಲಿಯೂ ಎಲ್ಲರೂ ಇಂಗ್ಲಿಷ್ ಮಾಧ್ಯಮದಿಂದ ಬಂದವರಾಗಿರುವುದಿಲ್ಲ. ನವೋದಯ ಶಾಲೆಗಳ ಕಲಿಕಾ ಮಾಧ್ಯಮ ಇಂಗ್ಲಿಷ್. ಐದು ವರ್ಷ ಕನ್ನಡ ಮಾಧ್ಯಮದಲ್ಲಿ ಓದಿ ಬಂದ ಹಳ್ಳಿಗಾಡಿನ ಮಕ್ಕಳೆಲ್ಲ ಆರನೇ ತರಗತಿಗೆ ಇಲ್ಲಿ ಸೇರಿದ ಹೊಸತರಲ್ಲಿ ನಮ್ಮೆಲ್ಲ ಪಾಲಕರು ಅಭಿಪ್ರಾಯಪಡುವಂತೆ ಹೊಸಮಾಧ್ಯಮಕ್ಕೆ ಹೊಂದಿಕೊಳ್ಳಲು ಒಂದಿಷ್ಟು ಗೋಳಾಡುತ್ತಾರೆ. ಆದರೆ ಒಂದೆರಡು ವರ್ಷ ಹೀಗೆ ಗೋಳಾಡಿದ ಮಕ್ಕಳೆಲ್ಲ ಯಾವ ಮಟ್ಟದಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಹೊಂದಿಕೊಂಡು ಪ್ರಗತಿ ಸಾಧಿಸುತ್ತಾರೆ ಎಂದರೆ ಹುಟ್ಟಿದಾಗಿನಿಂದ ಅಥವಾ ತಾಯಿಯ ಹೊಟ್ಟೆಯಲ್ಲಿದ್ದಾಗಿನಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿಯೇ ಕೇಳುತ್ತಾ ಅಥವಾ ಓದುತ್ತಾ ಬಂದವರನ್ನು ಹಿಂದೆಹಾಕಿ ಮುಂದೆ ಹೋಗುತ್ತಾರೆ. ನಾನು ಕುತೂಹಲಕ್ಕೆಂದು ನಾಲ್ಕಾರು ಇಂತಹ ಶಾಲೆಗಳ ಹಲವು ವರ್ಷಗಳ ಹನ್ನೆರಡನೇ ತರಗತಿಯ ಫಲಿತಾಂಶವನ್ನು ಗಮನಿಸಿದಾಗ ಕಂಡುಕೊಂಡ ಕುತೂಹಲಕಾರಿ ಅಂಶವೆಂದರೆ ಯಾವ ವರ್ಷವೂ ಯಾವ ಶಾಲೆಯಲ್ಲಿಯೂ ಹುಟ್ಟಿದಾಗಿನಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಓದಿಕೊಂಡು ಬಂದಂತಹ ವಿದ್ಯಾರ್ಥಿಗಳು `ಟಾಪರ್ಸ್' ಎಂದು ಕರೆಯಲ್ಪಡುವ ಮೇಲ್ಮಟ್ಟದ ಫಲಿತಾಂಶವನ್ನು ಪಡೆದಿರಲಿಲ್ಲ. ಎಲ್ಲ ಸ್ಥಾನಗಳನ್ನು ಐದನೇ ತರಗತಿವರೆಗೆ ಹಳ್ಳಿಗಾಡಿನ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಓದಿಬಂದಿದ್ದ ಮಕ್ಕಳೇ ಪಡೆದುಕೊಂಡಿದ್ದರು! ಇದು ಮಾತೃಭಾಷಾ ಶಿಕ್ಷಣದ ಶಕ್ತಿ!
ಕನ್ನಡದ ಸಾಹಿತಿಗಳು ಕೇವಲ ವಾಸ್ತವಪ್ರಜ್ಞೆಯಿಲ್ಲದೆ ಯಾವುದೋ ಕಾಲದ ತಾತ್ವಿಕತೆಯನ್ನು ಪ್ರತಿಪಾದಿಸು ಒಣವೇದಾಂತಿಗಳಲ್ಲ. ಅವರಿಗೆ ಇಂಗ್ಲಿಷ್ ಹೇಗೆ ಇಂದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂಬ ಪ್ರಜ್ಞೆಯಿದೆ. ಅವರು ಭಾಷಾ ಮಾಧ್ಯಮದ ಬಗ್ಗೆ ನೀಡುವ ಹೇಳಿಕೆಗಳು ವಿವೇಕವನ್ನು ಮೀರಿಲ್ಲ. ಇಂಗ್ಲಿಷ್ ಭಾಷೆಯನ್ನು ಕಲಿಸುವುದನ್ನು ಯಾವೊಬ್ಬ ಸಾಹಿತಿಯೂ ಇದುವರೆಗೂ ವಿರೋಧಿಸಿಲ್ಲ ಎಂಬುದನ್ನು ನಾವು ಸ್ಪಷ್ಟವಾಗಿ ಗಮನಿಸಬೇಕು. ಅವರೆಲ್ಲ ವಿರೋಧಿಸುತ್ತಿರುವುದು ಇಂಗ್ಲಿಷ್ ಮಾಧ್ಯಮವನ್ನು ಮಾತ್ರ. ಅದು ಮಕ್ಕಳ ಕಲಿಕಾ ಪ್ರಕ್ರಿಯೆ ಮತ್ತು ನಾಡಿನ ನುಡಿ ಸಂಸ್ಕೃತಿ ಎರಡರ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುವುದರಿಂದ ಹಾಗೆ ಅವರು ಹೇಳುವುದು ಸರಿಯಾಗಿಯೇ ಇದೆ. ಅವರ ನಿಲುವಿನಲ್ಲಿ ಇದುವರೆಗೂ ಯಾವುದೇ ಬದಲಾವಣೆಯಾಗಿಲ್ಲ. ಇದರಲ್ಲಿ ಕೇವಲ ನಾಡುನುಡಿಯ ಹಿತಮಾತ್ರ ಅಡಗಿಲ್ಲ. ಬಡಮಕ್ಕಳ ಭವಿಷ್ಯವೂ ಅಡಗಿದೆ ಎಂಬುದನ್ನು ನಾವು ಮರೆಯಬಾರದು. `ಕನ್ನಡ ಮಾಧ್ಯಮದಲ್ಲಿ ಓದಿದವರು ಕೊಳೆಯುತ್ತಾರೆ; ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರು ಬೆಳೆಯುತ್ತಾರೆ' ಎಂಬಂತೆ ಬಿಂಬಿಸುವುದು ಸರಿಯಲ್ಲ

ಹಾಗಿದ್ದೂ ಜನರೇಕೆ ಅವರನ್ನೂ ಮತ್ತು ಅವರ ತಾತ್ವಿಕತೆಯನ್ನೂ ವಿರೋಧಿಸುತ್ತಿದ್ದಾರೆ ಎಂಬುದು ಇಲ್ಲಿ ಮುಖ್ಯವಾದ ಪ್ರಶ್ನೆ. ಜಾಗತೀಕರಣ ಮತ್ತು ಅದರ ಖಾಸಾ ಗೆಳೆಯನಾದ ಖಾಸಗೀಕರಣ ಇವುಗಳ ವಿಶ್ವವ್ಯಾಪಿ ಪ್ರಸರಣದಿಂದಾಗಿ ಜನರೆಲ್ಲ ಇಂದು ಹಣದ ಹಿಂದೆ ಬಿದ್ದಿದ್ದಾರೆ. ಅವರೆಲ್ಲ ಶಾಲೆಗಳಲ್ಲಿ ತಮ್ಮ ಮಕ್ಕಳು ಪರಿಪೂರ್ಣವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂಬುದನ್ನು ಇಂದು ಆದ್ಯತೆಯಾಗಿ ಇಟ್ಟುಕೊಂಡಿಲ್ಲ. ಅವರೆಲ್ಲ ಆದ್ಯತೆಯಾಗಿ ಇಟ್ಟುಕೊಂಡಿರುವುದು ತಮ್ಮ ಮಕ್ಕಳನ್ನು ಅತಿಹೆಚ್ಚು ಹಣಗಳಿಸುವ ವ್ಯಕ್ತಿಗಳಾಗಿ ಮಾಡುವುದು ಹೇಗೆ ಎಂಬುದನ್ನು. ಶಾಲೆಯಲ್ಲಿ ತಮ್ಮ ಮಕ್ಕಳು ಅತಿ ಹೆಚ್ಚು ಅಂಕಗಳನ್ನು ಗಳಿಸುವ `ಅಂಕಯಂತ್ರ'ಗಳಾಗುವುದನ್ನೇ ಅವರು ಇಚ್ಚೆಪಡುತ್ತಾರೆ. ಮತ್ತು ಹೀಗೆ ಒಂದು ಹಂತದವರೆಗೆ ಹೆಚ್ಚು ಹೆಚ್ಚು ಅಂಕಗಳನ್ನು ಉದುರಿಸುವ ಅಂಕಯಂತ್ರಗಳು ಮುಂದೊಂದು ಕಾಲಘಟ್ಟದಲ್ಲಿ ಅಂಕದ ಬದಲು ಹಣವನ್ನು ಉದುರಿಸುವ ಎಟಿಎಂಗಳಾಗಿ ಪರಿವರ್ತಿತವಾಗಬೇಕೆಂಬುದು ಅವರ ಅಂತರಾಳದ ಇಚ್ಚೆ. ಅವರೆಲ್ಲರಿಗೆ ಅವರ ಮಕ್ಕಳ ಶಿಕ್ಷಣದ ಅಂತಿಮ ಗುರಿ ಇದೇ ಆಗಿದೆ. ಹಾಗಾಗಿ ಸಾಹಿತಿಗಳು ಶಿಕ್ಷಣ ತಜ್ಞರು ಹೇಳುವ ಯಾವ ಮಾತನ್ನೂ ಅವರು ಕೇಳುವ ಸ್ಥಿತಿಯಲ್ಲಿಲ್ಲ. ಇಂತಹ ಮನಸ್ಥಿತಿಯವರೇ ಹೆಚ್ಚಿರುವ ಇಂದಿನ ನಮ್ಮ ಸಮಾಜದಲ್ಲಿ `ಗೋಕಾಕ್ ಮಾದರಿಯ ಹೋರಾಟ ಕಟ್ಟುವ ಕೆಲಸ ಅಷ್ಟು ಸುಲಭವಲ್ಲ ಎಂಬುದೂ ನಮ್ಮ ಗಮನದಲ್ಲಿರಬೇಕು.

ಇದಕ್ಕೆ ಪೂರಕವಾಗಿ ನಮ್ಮ ವ್ಯವಸ್ಥೆಯ ಲೋಪಕೂಡ ಸೇರಿಕೊಂಡಿದೆ. ನಮ್ಮಲ್ಲಿ ಇರುವ ಖಾಸಗಿ ಮತ್ತು ಸರ್ಕಾರಿ ಎಂಬ ಎರಡು ಶಿಕ್ಷಣ ವ್ಯವಸ್ಥೆಗಳು ಪರಸ್ಪರ ಹೆಗಲಮೇಲೆ ಕೈಹಾಕಿಕೊಂಡು ನಡೆಯದೆ ಮುಖತಿರುಗಿಸಿಕೊಂಡು ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿವೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ಹೊತ್ತಿನಲ್ಲಿ ನಮ್ಮಲ್ಲಿ ಸಾಕ್ಷರತೆಯ ಪ್ರಮಾಣ ಎಷ್ಟು ಕೆಳಮಟ್ಟದಲ್ಲಿತ್ತೆಂದರೆ ಅದು ಇಂದಿನ ಅನಕ್ಷರತೆಯ ಪ್ರಮಾಣದಷ್ಟಿತ್ತು; ಅಂದರೆ ಶೇ.23ರಷ್ಟು!. ಅಷ್ಟೊಂದು ಕೆಳಮಟ್ಟದಲ್ಲಿದ್ದ ಸಾಕ್ಷರತೆಯ ಪ್ರಮಾಣವನ್ನು ಎತ್ತರಿಸಬೇಕಾದರೆ ಯಾವ ಪಕ್ಷ ಆಗ ಅಧಿಕಾರಕ್ಕೆ ಬಂದಿದ್ದರೂ ಯಾವ ವ್ಯಕ್ತಿ ಆಡಳಿತ ಚುಕ್ಕಾಣಿ ಹಿಡಿದಿದ್ದರೂ ಅದು ಕೇವಲ ಸರ್ಕಾರದಿಂದ ಆಗುವ ಕೆಲಸವಾಗಿರಲಿಲ್ಲ. ಶಿಕ್ಷಣ ವರ್ಧನೆಯಲ್ಲಿ ಆಗ ಖಾಸಗೀಯವರ ಪಾಲ್ಗೊಳ್ಳುವಿಕೆ ಒಂದು ಅನಿವಾರ್ಯ ಸಂಗತಿಯೇ ಆಗಿತ್ತು. ಹೀಗೆ ಶಿಕ್ಷಣದಲ್ಲಿ ಆರಂಭವಾದ ಖಾಸಗೀ ಒಡೆತನವನ್ನು, ಸರ್ಕಾರ ತಾನೇ ದೇಶವಾಸಿಗಳಿಗೆಲ್ಲ ಶಿಕ್ಷಣವನ್ನು ಕೊಡುವ ಸಾಮಥ್ರ್ಯವನ್ನು ಗಳಿಸಿಕೊಂಡ ಯಾವುದೋ ಒಂದು ಹಂತದಲ್ಲಿ ನಿಯಂತ್ರಿಸಿ, ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಿಕೊಂಡು ಮುನ್ನಡೆಯಬೇಕಿತ್ತು. ಕೆಲಸ ಆಗಲಿಲ್ಲ. ಲೋಪ ಇಂದು ಎಂತಹ ಪರಿಸ್ಥಿತಿಗೆ ದೇಶದ ಶಿಕ್ಷಣವನ್ನು ತಂದು ನಿಲ್ಲಿಸಿದೆ ಎಂದರೆ `ತುತ್ತು ಕೊಡಲು ಬಂದಿದ್ದವರೇ ಕತ್ತುಹಿಚುಕುತ್ತಿದ್ದಾರೆ ನೋಡಿ' ಎನ್ನುವಂತಾಗಿದೆ. ಸರ್ಕಾರಿ ಮತ್ತು ಖಾಸಗೀ ಶಿಕ್ಷಣಗಳ ನಡುವಿನ ಕಂದಕ ಇಂದು ಭಯ ಹುಟ್ಟಿಸುವಷ್ಟು ಅಗಲವಾಗುತ್ತಿದೆ. ಇದು ದೇಶವನ್ನು ಮತ್ತೊಮ್ಮೆ `ವಿಭಜಿಸಿ ಆಳು' ಹಂತಕ್ಕೆ ಒಯ್ದರೆ ಆಶ್ಚರ್ಯಪಡುವಂಥದ್ದೇನೂ ಇಲ್ಲ.

                ಖಾಸಗೀ ಶಿಕ್ಷಣದ ಮೇಲೆ ನಿಯಂತ್ರಣ ತರದೇ ಸರ್ಕಾರಿ ಶಾಲೆಗಳನ್ನು ಅವುಗಳಿಗೆ ಸ್ಪರ್ಧೆ ಕೊಡುವಂತೆ ರೂಪಿಸಬೇಕು ಎಂಬ ಒಂದು ವಾದವಿದೆ. ಇದು ವಾಸ್ತವದಲ್ಲಿ ಸಾಧ್ಯವಿಲ್ಲದ ಸಂಗತಿ. ಹಾಗೆ ಮಾಡಲು ಇದುವರೆಗೆ ಮಾಡಿದ ಅನೇಕ ಪ್ರಯತ್ನಗಳು ಯಶಸ್ಸುಕಂಡಿಲ್ಲ. ಮುಂದೆಯೂ ಕಾಣುವುದಿಲ್ಲ. ಒಂದು ಉದಾಹರಣೆಯನ್ನು ಮಾತ್ರ ಇಲ್ಲಿ ಚರ್ಚೆಗೆ ಎತ್ತಿಕೊಳ್ಳುತ್ತೇನೆ. `ಖಾಸಗೀ ಶಾಲೆಗಳಲ್ಲಿ ಆರಂಭದಿಂದ ಇಂಗ್ಲಿಷ್ ಕಲಿಸುತ್ತಾರೆ ಅದರ ವ್ಯಾಮೋಹದಿಂದಾಗಿ ಜನರು ತಮ್ಮ ಮಕ್ಕಳನ್ನು ಖಾಸಗೀ ಶಾಲೆಗಳಿಗೆ ಕಳಿಸುತ್ತಾರೆ. ಇದರಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ' ಎಂಬ ವಾದವೊಂದು ಹುಟ್ಟಿಕೊಂಡು ಸುಮಾರು ಹತ್ತು ಹನ್ನೆರಡು ವರ್ಷಗಳ ಹಿಂದೆ ನಮ್ಮಲ್ಲಿ ದೊಡ್ಡಮಟ್ಟದ ಸಾರ್ವಜನಿಕ ಚರ್ಚೆ ನಡೆಯಿತು. ವಾದದಲ್ಲಿ ಸತ್ಯಾಂಶವಿರುವುದು ಕಂಡುಬಂತು. ಹಾಗಾದರೆ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಏನು ಮಾಡಬೇಕು ಎಂಬ ಚರ್ಚೆ ಶುರುವಾಯಿತು. ಸಮಸ್ಯೆಯನ್ನು ಬಗೆಹರಿಸಲು ಸರ್ಕಾರದ ಮುಂದೆ ಎರಡು ಆಯ್ಕೆಗಳಿದ್ದವು. ಒಂದು ನಿಯಮಬಾಹಿರವಾಗಿ ಮಕ್ಕಳ ಮನಶ್ಶಾಸ್ತ್ರ ಅಥವಾ ಶಿಕ್ಷಣ ತಜ್ಞರ ಯಾವುದೇ ತತ್ವದ ಬೆಂಬಲವಿಲ್ಲದೆ ಎಳೆಯ ಮಕ್ಕಳಿಗೆ ಹೇಗೆ ಬೇಕೋ ಹಾಗೆ ಇಂಗ್ಲಿಷ್ ಕಲಿಸುತ್ತಿದ್ದ ಖಾಸಗೀ ಶಾಲೆಗಳ ಕ್ರಮವನ್ನು ಕಾನೂನಿನ ಸಮರ್ಪಕ ಬಳಕೆಯಿಂದ ತಡೆಯುವುದು. ಇನ್ನೊಂದು ಅವರು ಮಾಡುತ್ತಿರುವ ಕಾರ್ಯವನ್ನೇ ಕುರುಡಾಗಿ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ಅನುಸರಿಸುವುದು. ಮೊದಲನೆಯದು ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸ. ಎರಡನೆಯದು ಮೂಗಿಗೆ ಜೇನುತುಪ್ಪವನ್ನು ಸವರುವ ಕೆಲಸ. ಸಹಜವಾಗಿ ಆಗ ಸರ್ಕಾರ ಆಯ್ದುಕೊಂಡದ್ದು ಮೊದಲನೆಯದ್ದನ್ನಲ್ಲ; ಬದಲಾಗಿ ಎರಡನೆಯದನ್ನೆ!

ಇದರ ಪರಿಣಾಮವಾಗಿ ಸರ್ಕಾರಿ ಶಾಲೆಗಳಲ್ಲಿ ಆರಂಭದಿಂದಲೇ ಇಂಗ್ಲಿಷ್ ಕಲಿಸಬೇಕು ಎಂಬ ವಾದ ಮುನ್ನೆಲೆಗೆ ಬಂತು. ಕೆಲವರು ಅದನ್ನು ವಿರೋಧಿಸಿದರು. `ಒಂದನೇ ತರಗತಿಯಿಂದಲೇ ಉರುಳು' ಎಂಬು ಪುಸ್ತಕಗಳೂ ಪ್ರಕಟವಾದವು. ಇದೇ ನಿಲುವನ್ನು ಕೆಲವರು ಬೆಂಬಲಿಸಿದರು. ಇನ್ನೂ ಕೆಲವರು ಮಧ್ಯಮ ಮಾರ್ಗತಾಳಿ, `ಆರಂಭದಿಂದಲೂ ಬೇಡ, ತೀರಾ ತಡವಾಗಿಯೂ ಬೇಡ' ಎಂಬ ನಿಲುವು ತಾಳಿ ಮೂರನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ಪ್ರಸ್ತಾವವನ್ನು ಇಟ್ಟರು(ಬರಗೂರು ರಾಮಚಂದ್ರಪ್ಪ). ಅನೇಕ ಶಿಕ್ಷಣತಜ್ಞರು ಇದರ ದುಷ್ಪರಿಣಾಮಗಳನ್ನು ತಿಳಿಸಿದರಾದರೂ ಅವರ ಧ್ವನಿಕ್ಷೀಣವಾಯಿತು. ಕೊನೆಗೂ ಸಾರ್ವಜನಿಕರ ಅಭಿಪ್ರಾಯಕ್ಕೆ `ಮನ್ನಣೆ' ನೀಡಿದ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷನ್ನು ಒಂದು `ಸಂವಹನಭಾಷೆ'ಯಾಗಿ ಕಲಿಸಲು ಅಂತಿಮವಾಗಿ ನಿರ್ಧರಿಸಿ ಅದನ್ನು `ಅನುಷ್ಠಾನಕ್ಕೆ' ತಂದಿತು.

ಹೀಗೆ ಸರ್ಕಾರಿ ಶಾಲೆಗಳಲ್ಲಿ ಆರಂಭದಿಂದಲೇ ಇಂಗ್ಲಿಷ್ ಕಲಿಸುವ ಕ್ರಮವನ್ನು ತಂದದ್ದು ಎಷ್ಟರಮಟ್ಟಿಗೆ ಪ್ರಯೋಜನವನ್ನು ನೀಡಿತು ಎಂಬುದನ್ನು ಕ್ರಮಬಂದು ಹತ್ತುವರ್ಷಗಳಿಗಿಂತ ಹೆಚ್ಚುಕಾಲವಾದರೂ ನಾವು ಇದುವರೆಗೆ ಸ್ಪಷ್ಟವಾಗಿ ಮೌಲ್ಯಮಾಪನವನ್ನು ಮಾಡಿಕೊಂಡಿದ್ದೇವೆಯೇ? ಇದರಿಂದ ಖಾಸಗೀ ಶಾಲೆಗಳಿಗೆ ಹೋಗುತ್ತಿದ್ದ ಮಕ್ಕಳ ಹೊರಹರಿವು ಒಂದಿಷ್ಟಾದರೂ ನಿಂತಿತೆ? ಮತ್ತು ರೀತಿಯ ಕ್ರಮದಿಂದ ನಮ್ಮ ಸರ್ಕಾರಿ ಶಾಲಾ ಮಕ್ಕಳ ಇಂಗ್ಲಿಷ್ ಕಲಿಕೆಯಲ್ಲಿ ಸ್ವಲ್ಪಮಟ್ಟದ ಸುಧಾರಣೆಯಾದರೂ ಆಯಿತೆ? ಬಗ್ಗೆ ನಮ್ಮಲ್ಲಿ ಸಂಶೋಧನಾತ್ಮಕವಲ್ಲದಿದ್ದರೂ ಕೊನೆಪಕ್ಷ ಸಮೀಕ್ಷಾತ್ಮಕವಾದ ಅಂಕಿಅಂಶಗಳಾದರೂ ಇವೆಯೇ? ಬಹುತೇಕ ಇಲ್ಲ ಎಂದೇ ಹೇಳಬೇಕು. ಸುಮಾರು ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಶಾಲೆಯೊಂದರ ಮುಖ್ಯಸ್ಥನಾಗಿದ್ದ ನಾನು ನನ್ನ ಅನುಭವವನ್ನು ಪ್ರಾಮಾಣಿಕವಾಗಿ ಹೇಳುವುದಾದರೆ ಎರಡೂ ಆಗಲಿಲ್ಲ. ಮೊದಲನೆಯದರ ಬಗ್ಗೆ ಹೇಳುವುದಾದರೆ ಸರ್ಕಾರಿ ಶಾಲೆಗಳ ಮಕ್ಕಳನ್ನು ತಮ್ಮ ಶಾಲೆಗಳಿಗೆ ಕರೆದೊಯ್ಯಲು ಹಳ್ಳಿಗಳಿಗೆ ಬರುತ್ತಿದ್ದ ಖಾಸಗೀ ಶಾಲೆಗಳ ಬಸ್ಸುಗಳ ಸಂಖ್ಯೆ ಆಗ ಎರಡಿದ್ದರೆ ಅದು ಆರಾಗಿದೆ! ಏಕೆಂದರೆ ಹಳ್ಳಿ ಶಾಲೆಗಳಲ್ಲಿ ಕೇವಲ ಒಂದು ವಿಷಯವನ್ನು (ಭಾಷೆಯನ್ನು) ಮಾತ್ರ ಇಂಗ್ಲಿಷ್ನಲ್ಲಿ ಕಲಿಸುತ್ತಾರೆ; ಅಲ್ಲಿ ಖಾಸಗೀ ಶಾಲೆಗಳಲ್ಲಿ ಎಲ್ಲ ವಿಷಯಗಳನ್ನೂ ಇಂಗ್ಲಿಷ್ನಲ್ಲಿ ಕಲಿಸುತ್ತಾರೆ. ಇದರಿಂದ ನಮ್ಮ ಮಕ್ಕಳು ಅಲ್ಲಿ ಹೆಚ್ಚು ಇಂಗ್ಲಿಷ್ ಕಲಿಯುತ್ತಾರೆ ಎಂಬ ತಪ್ಪು ತಿಳಿವಳಿಕೆಯ ಭೂತ ಪಾಲಕರ ತಲೆಯಿಂದ ಹೊರಗೆ ಬರಲೇಇಲ್ಲ. ಇನ್ನು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಯ ಮಟ್ಟದ ಬಗ್ಗೆ ಹೇಳುವುದಾದರೆ ಅದಂತೂ ಒಂದು ಹೆಜ್ಜೆಯನ್ನೂ ಮುಂದಿಡಲಿಲ್ಲ. ಹಾಗಾಗಲು ಅದಕ್ಕೆ ಅದರದ್ದೇ ಆದ ಸಮಸ್ಯೆಗಳಿವೆ. ಕೆಲವನ್ನು ನೋಡಬಹುದು.
            ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಭಾಷೆಯನ್ನು ಕಲಿಸುವುದನ್ನು ಸರ್ಕಾರ ಅಧಿಕೃತಗೊಳಿಸಿ ಆದೇಶವನ್ನು ಹೊರಡಿಸಿದಾಗ ಅದನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಲು ಬೇಕಾದ ಸಿದ್ಧತೆ ಸರ್ಕಾರಿ ಶಾಲೆಗಳಲ್ಲಿ ವಾಸ್ತವದಲ್ಲಿ ಇರಲಿಲ್ಲ. ಅದಕ್ಕಾಗಿ ಇಂಗ್ಲಿಷ್ ಬರುವ ವಿಶೇಷ ಶಿಕ್ಷಕರೇನೂ ನೇಮಕವಾಗಲಿಲ್ಲ. ಅಲ್ಲಿದ್ದ ಶಿಕ್ಷಕರಿಗೆ ಒಂದಿಷ್ಟು ಅಂತದೂ ಇಂತದೂ ತರಬೇತಿ ನೀಡಿ ಅವರನ್ನೇ ಇಂಗ್ಲಿಷ್ ಕಲಿಸಲು ನಿಯುಕ್ತಿಗೊಳಿಸಲಾಯಿತು. ಹೀಗೆ ಇಂಗ್ಲಿಷ್ ಕಲಿಸಲು ನಿಯುಕ್ತರಾದ ನೂರಾರು ಶಿಕ್ಷಕರನ್ನು ಅನೇಕ ತರಬೇತಿ, ಕಾರ್ಯಾಗಾರಗಳ ಸಂದರ್ಭದಲ್ಲಿ ಭೇಟಿಮಾಡಿ ಅವರೊಡನೆ ಮಾತನಾಡಿರುವ ನನಗೆ ಕಂಡುಬಂದ ಸಂಗತಿಯೆಂದರೆ ಹೀಗೆ ಇಂಗ್ಲಿಷ್ ಕಲಿಯಲು ನಿಯುಕ್ತರಾದ ಅವರಲ್ಲಿ ಶೇ. 80ಕ್ಕೂ ಹೆಚ್ಚು ಜನರಿಗೆ ಸರಾಗವಾಗಿ ಇಂಗ್ಲಿಷ್ನಲ್ಲಿ ನಾಲ್ಕಾರು ಮಾತುಗಳನ್ನೂ ಆಡಲು ಬರುತ್ತಿರಲಿಲ್ಲ. ಆದರೂ ಅವರೆಲ್ಲ ಇಂಗ್ಲಿಷ್ ಕಲಿಸುತ್ತಿದ್ದರು! ಹಾಗಾದರೆ ಏನನ್ನು ಕಲಿಸುತ್ತಿದ್ದರು? ಅವರಲ್ಲಿ ಬಹುತೇಕ ಎಲ್ಲರಿಗೂ ಒಂದು ಮಟ್ಟದಲ್ಲಿ ಇಂಗ್ಲಿಷ್ `ಓದುವುದು' ಮತ್ತು `ಬರೆಯುವುದು' ಬರುತ್ತಿತ್ತು. ಅದನ್ನೇ ಅವರು ಕಲಿಸುತ್ತಿದ್ದರು! ಆದರೆ ಸರ್ಕಾರ ಹಂತದಲ್ಲಿ ಇಂಗ್ಲಿಷ್ ಇಟ್ಟದ್ದು ಓದುವುದನ್ನು ಮತ್ತು ಬರೆಯುವುದನ್ನು ಕಲಿಸುವುದಕ್ಕಲ್ಲ. ಮಾತನಾಡುವುದನ್ನು ಕಲಿಸುವುದಕ್ಕೆ. ಅದಕ್ಕಾಗಿ ಅದನ್ನು `ಸಂವಹನಭಾಷೆ'ಯಾಗಿ ಎಂದು ಸ್ಪಷ್ಟವಾಗಿ ಹೆಸರಿಸಲಾಗಿತ್ತು.

ಯಾವುದೇ ಭಾಷೆಯನ್ನು ಕಲಿಯಲು ಬಹುಮುಖ್ಯವಾದ ನಾಲ್ಕು ಕೌಶಲಗಳನ್ನು ನಾವು ರೂಢಿಸಿಕೊಳ್ಳಬೇಕಾಗುತ್ತದೆ. ಅವುಗಳ ವಶಪಡಿಸುವಿಕೆ ಅನುಕ್ರಮವಾಗಿ ನಡೆದರೆ ಮಾತ್ರ ಭಾಷೆಯ ಪ್ರಾವಿಣ್ಯತೆ ನಮಗೆ ಲಭಿಸುತ್ತದೆ. ಕೌಶಲಗಳೆಂದರೆ ಕ್ರಮವಾಗಿ, ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಕೊನೆಯದಾಗಿ ಬರೆಯುವಿಕೆ. ಸಂವಹನಭಾಷೆ ಎಂದರೆ ಅಲ್ಲಿ ನಡೆಯಬೇಕಾದ ಮುಖ್ಯ ಚಟುವಟಿಕೆಗಳೆಂದರೆ ಆಲಿಸುವಿಕೆ ಮತ್ತು ಮಾತನಾಡುವಿಕೆಗಳೇ ಹೊರತು ಓದುವಿಕೆ ಮತ್ತು ಬರೆಯುವಿಕೆ ಅಲ್ಲ. ಇಲ್ಲಿ ಶಿಕ್ಷಕರಿಗೆ ಇಂಗ್ಲಿಷನ್ನು ಸರಾಗವಾಗಿ ಮಕ್ಕಳೆದರು ಲೀಲಾಜಾಲವಾಗಿ ಮಾತನಾಡಲು ಬರದ ಕಾರಣ ಮತ್ತು ಶಾಲೆಗಳಿಗೆ ಬರುವ ಮಕ್ಕಳ ಮನೆಯಲ್ಲಿ ಕೂಡ ಇಂಗ್ಲಿಷ್ ವಾತಾವರಣ ಇರದ ಕಾರಣ ಇಂಗ್ಲಿಷ್ ಭಾಷೆಯನ್ನು ಆಲಿಸುವ ಅವಕಾಶ ಮಕ್ಕಳಿಗೆ ಇಲ್ಲದಾಯಿತು. ಆಲಿಸುವುದೇ ಆಗಲಿಲ್ಲ ಎಂದರೆ ಅದನ್ನು ಅನುಕರಿಸಿ ನಡೆಯುವ ಅದರ ಮುಂದಿನ ಹಂತವಾದ ಮಾತನಾಡುವಿಕೆ ಹೇಗೆತಾನೆ ಆದೀತು? ಹೀಗೆ ಕ್ರಮವಲ್ಲದ ಕ್ರಮದಲ್ಲಿ ಇಂಗ್ಲಿಷ್ ಕಲಿಸತೊಡಗಿದ್ದರಿಂದ ಇಂದಿಗೂ ಹನ್ನೆರಡನೇ ತರಗತಿಯನ್ನು ಉತ್ತೀರ್ಣರಾದ, ಹನ್ನೆರಡು ವರ್ಷಗಳ ಕಾಲ ಇಂಗ್ಲಿಷ್ ಕಲಿತ ವಿದ್ಯಾರ್ಥಿಗಳನೇಕರಿಗೆ ಹನ್ನೆರಡು ವಾಕ್ಯಗಳನ್ನೂ ಸರಳವಾಗಿ ಮಾತನಾಡುವ ಸಾಮರ್ಥ್ಯ ಇಲ್ಲವಾಗಿದೆ; ಇದು ವಾಸ್ತವ.

               ಹೀಗೆ ಸಂಕೀರ್ಣವಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗೆ ಯಾವುದು? ಭಾಷಾಕ್ಷೇತ್ರದಲ್ಲಿ ಸಾಕಷ್ಟು ಕೆಲಸಮಾಡಿರುವ ಅಬ್ದುಲ್ ರೆಹಮಾನ್ ಪಾಶಾ ಅವರ ಅಭಿಪ್ರಾಯಪಡುವಂತೆ, “ಶಿಕ್ಷಣದ ಮಾಧ್ಯಮ ನಿರ್ಧರಿಸುವ ಹಕ್ಕು ಮಕ್ಕಳ ಪಾಲಕರದ್ದು ಅಂದಾಗ ಅದು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅಡ್ಡಿಯಾಗದಂತೆ ಆಗಬೇಕಾದರೆ, ಒಂದು ಅದು ಪಾಲಕರ `ಪ್ರಜ್ಞಾಪೂರ್ವಕ ಆಯ್ಕೆ’ (ಭಾವನಾತ್ಮಕ ಆಯ್ಕೆಯಲ್ಲ) ಆಗಬೇಕು. ಇನ್ನೊಂದು ಅದು ಅವರ `ಅನಿವಾರ್ಯ ಆಯ್ಕೆ’ಯಾಗಬೇಕು”. ಮೊದಲನೆಯದು ಈಗ ಆಗುತ್ತಿದೆ ಎನಿಸುತ್ತಿಲ್ಲ. ಹಾಗಾಗಿ ಸರ್ಕಾರ ಎರಡನೆಯದನ್ನು ಆಯ್ಕೆಮಾಡಿಕೊಳ್ಳುವುದು ಸೂಕ್ತ. ಅದಕ್ಕಿರುವ ಏಕೈಕ ಪರಿಹಾರವೆಂದರೆ ಈಗಿರುವ `ಪಂಕ್ತಿಭೇದ ಶಿಕ್ಷಣ'ವನ್ನು ತೆಗೆದುಹಾಕಿ ಅದರ ಸ್ಥಳದಲ್ಲಿ `ಏಕರೂಪದ ಶಿಕ್ಷಣ'ವನ್ನು ಜಾರಿಗೊಳಿಸುವುದು. ಇದಕ್ಕಿರುವ ರಾಜಮಾರ್ಗವೆಂದರೆ ಶಿಕ್ಷಣದ ರಾಷ್ಟ್ರೀಕರಣ.(ಧಾರವಾಡ ಸಾಹಿತ್ಯ ಸಮ್ಮೇಳನ ಕೂಡ ಪ್ರಾಥಮಿಕ ಒಂದನೇ ತರಗತಿಯಿಂದ ಏಳನೇ ತರಗತಿವರೆಗಿನ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಲು ಸರ್ವಾನುಮತದ ನಿರ್ಣಯ ಕೈಗೊಂಡಿರುವುದನ್ನು ಗಮನಿಸಬಹುದು). ಇದು ತಕ್ಷಣಕ್ಕೆ ಆಗಲಾರದ್ದು ಎಂದು ನಮಗೆ ಅನ್ನಿಸಿದರೂ ಆಗಬೇಕಾದದ್ದು ಅದೊಂದೇ ಎಂಬ ಬಗ್ಗೆ ನಮಗೆ ಸ್ಪಷ್ಟತೆಯಿರಬೇಕು.

ಕೇವಲ ಸೌಲಭ್ಯಗಳನ್ನು ಹೆಚ್ಚಿಸುವುದರಿಂದ ಯಾವುದೇ ಶಿಕ್ಷಣ ವ್ಯವಸ್ಥೆ ಪರಿಣಾಮಕಾರಿಯಾದ ಸುಧಾರಣೆಯನ್ನು ಕಾಣುವುದಿಲ್ಲ. ಅದು ರೀತಿ ಕ್ರಾಂತಿಕಾರಕ ಬದಲಾವಣೆಯನ್ನು ಕಾಣಬೇಕಾದರೆ ಸೌಲಭ್ಯಗಳ ಜೊತೆಜೊತೆಗೆ ಅಥವಾ ಅದಕ್ಕೂ ಮಿಗಿಲಾಗಿ ಅದರಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಬೇಕು. ಶಿಕ್ಷಣದ ರಾಷ್ಟ್ರೀಕರಣದಿಂದ ಇದು ಸಾಧ್ಯವಾಗುತ್ತದೆ. ಒಂದು ಹಳ್ಳಿಯಲ್ಲಿನ ಒಬ್ಬ ಆಗರ್ಭ ಶ್ರೀಮಂತ ಮತ್ತು ಅವನ ಮನೆಯಲ್ಲಿ ಕೆಲಸಕ್ಕೆ ಇರುವ ಒಬ್ಬ ಆಳು ಇವರಿಬ್ಬರ ಮಕ್ಕಳೂ ಆಯ್ಕೆಯಿಲ್ಲದೇ ಒಂದೇ ಶಾಲೆಯಲ್ಲಿ ಒಂದೇ ಬೆಂಚಿನಲ್ಲಿ ಅಕ್ಕಪಕ್ಕ ಕುಳಿತು ಕಲಿಯುವ ಸ್ಥಿತಿ ನಿರ್ಮಾಣವಾದಾಗ ಸಮುದಾಯದ ಪಾಲ್ಗೊಳ್ಳುವಿಕೆ ತೀವ್ರಗೊಂಡು, ಈಗ ಹಳಿತಪ್ಪಿರುವ ನಮ್ಮ ಸಾರ್ವಜನಿಕ ಶಿಕ್ಷಣ ಸಹಜವಾಗಿಯೇ ಹಳಿಯೇರಿ ಸರಿಯಾದ ದಿಕ್ಕಿನಲ್ಲಿ ನಡೆಯತೊಡಗುತ್ತದೆ. ಆಗ ದೇಶದ ಭಾವೀ ಪ್ರಜೆಗಳಾಗಿರುವ ನಮ್ಮ ಎಳೆಯ ಮಕ್ಕಳು ಅನಗತ್ಯವೂ ಅಹಿತಕರವೂ ಆದ ಸ್ಪರ್ಧೆ, ಈರ್ಷೆ, ಮಾನಸಿಕ ಹಿಂಸೆ, ಪರಸ್ಪರ ಮೇಲರಿಮೆ ಮತ್ತು ಕೀಳರಿಮೆ ಇವುಗಳಿಂದ ಮುಕ್ತರಾಗಿ ನಮ್ಮ ಸಂವಿಧಾನದ ಸೋದರ ಭಾವವನ್ನು ಮೈಗೂಡಿಸಿಕೊಂಡು `ಕೂಡಿ ಕಲಿಯೋಣ; ಕೂಡಿ ಬೆಳೆಯೋಣ' ಎಂಬ ತತ್ವದಡಿ ಕಲಿಯತೊಡಗುವುದರಿಂದ ನಮ್ಮೆಲ್ಲರ ಆತಂಕಗಳೂ ದೂರವಾಗುತ್ತವೆ. ಇದರಿಂದ ನಾಡಭಾಷೆಯೂ ಉಳಿಯುತ್ತದೆ; ನಾಡಮಕ್ಕಳೂ ಬೆಳೆಯುತ್ತಾರೆ. ಶಾಲೆ ಯಾವುದಿರಬೇಕು? ಮಾಧ್ಯಮ ಯಾವುದಿರಬೇಕು? ಇಂಗ್ಲಿಷ್ ಇರಬೇಕೋ ಬೇಡವೋ? ಇರಬೇಕು ಎನ್ನುವುದಾದರೆ ಎಷ್ಟು ಪ್ರಮಾಣದಲ್ಲಿರಬೇಕು ಮತ್ತು ಹೇಗಿರಬೇಕು? ಇಂತಹ ಎಲ್ಲ ಸಮಸ್ಯೆಗಳು ಆಗ ಲೆಕ್ಕಕ್ಕಿಲ್ಲದಷ್ಟು ಚಿಕ್ಕವಾಗಿ ತಮ್ಮಷ್ಟಕ್ಕೆ ತಾವೇ ಪರಿಹಾರಕಂಡುಕೊಳ್ಳುತ್ತವೆ. ಹಾಗಾಗಿ ನಮ್ಮೆಲ್ಲರ ಒಕ್ಕೊರಲಿನ ಒತ್ತಡ `ಏಕರೂಪದ ಶಿಕ್ಷಣ' ಎಂಬುದಾಗಲಿ. ಇದು ನಮ್ಮೆಲ್ಲರ ಅಂತೆಯೇ ಇಡೀ ದೇಶದ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.
*****
ಡಾ. ರಾಜೇಂದ್ರ ಬುರಡಿಕಟ್ಟಿ
buradikatti@gmail.com
07-01-2019