Tuesday, July 14, 2020

'ಒಡೆದು ಹೇ(ಆ)ಳುವ ಶಿಕ್ಷಕರು: 'ಅರಮನೆ’ಯ ದೌಲತ್ತಿನಲ್ಲಿ ನೆನಪಾಗದ ‘ಅಜ್ಜಿಮನೆ’

 'ಒಡೆದು ಹೇ(ಆ)ಳುವ' ಶಿಕ್ಷಕರು: 
 'ಅರಮನೆ’ಯ ದೌಲತ್ತಿನಲ್ಲಿ ನೆನಪಾಗದ ‘ಅಜ್ಜಿಮನೆ’ 
-ಡಾ.‌ ರಾಜೇಂದ್ರ ಬುರಡಿಕಟ್ಟಿ

‘ಭಾಷೆ ಎಂಬುದು ಆಸೆ, ಕವಿಗಳ ತಮಾಷೆ
ಭಾಷೆಯೊಳಗಿರಬೇಕು ನರನ ಅಭಿಲಾಷೆ
ಭಾಷೆ ಮಾನವ ಶಕ್ತಿ ಪವನಗಳ ಉಕ್ತಿ
ಭಾಷೆಯಿಂದಲೆ ನಮಗೆ ಜೀವನದ ಮುಕ್ತಿ’

ಇವು ಕನ್ನಡದ ವಿಡಂಬನ ಸಾಹಿತ್ಯ ಪ್ರಕಾರಕ್ಕೆ ತಮ್ಮ ಮೊನಚಾದ ಚೌಪದಿಗಳ ಮೂಲಕ ದೊಡ್ಡ ಕಾಣಿಕೆ ನೀಡಿ `ಚೌಪದಿಕವಿ’ ಎಂದೇ ಹೆಸರಾದ ದಿನಕರ ದೇಸಾಯಿಯವರ ಚೌಪದಿಯೊಂದರ ನಾಲ್ಕು ಸಾಲುಗಳು. ಭಾಷೆಯ ಬಗೆಗೆ ಇರುವ ಈ ನಾಲ್ಕೇ ನಾಲ್ಕು ಸಾಲುಗಳ ಈ ಚಿಕ್ಕ ಚೌಪದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸೋಜಿಗವೆನಿಸುತ್ತದೆ. ಮೊದಲನೆಯ ಸಾಲು  ವಾಸ್ತವವನ್ನೂ ಎರಡನೆಯ ಸಾಲು ಕವಿಯ ಆಶಯವನ್ನೂ ಬಿಂಬಿಸಿದರೆ ಮೂರನೆಯ ಸಾಲು ಅತಿಶಯೋಕ್ತಿಯನ್ನೂ ನಾಲ್ಕನೆಯ ಸಾಲು ಅದರ ಮುಂದುವರಿಕೆಯ ಭಾಗವಾಗಿ ಅತಿರೇಖವನ್ನೂ ದಾಖಲಿಸುವಂತೆ ಕಂಡುಬರುತ್ತವೆ. ಭಾಷೆಯ ಬಗೆಗಿನ ಈ ಪುಟ್ಟ ಚೌಪದಿಯ ವಿಶ್ಲೇಷಣೆಯೇ ಈ ಲೇಖನದ ಉದ್ದೇಶವಲ್ಲವಾದರೂ ಇದನ್ನು ಇಲ್ಲಿ ಪೀಠಿಕೆಯಾಗಿ ಬಳಸಿಕೊಳ್ಳುತ್ತಿರುವುದು ಇದರ ಎರಡನೆಯ ಸಾಲು ಭಾಷೆಯನ್ನು ಕುರಿತು ನಮಗೆ ಅಂದರೆ ಸಾಮಾನ್ಯಾರ್ಥದಲ್ಲಿ ಎಲ್ಲ ಮನುಷ್ಯರಿಗೆವಿಶೇಷವಾಗಿ ಲೇಖಕರು ಮತ್ತು ಬೋಧಕರಿಗೆ ಇರಬೇಕಾದ `ಅಭಿಲಾಷೆ’ಯನ್ನು ಕುರಿತು ಹೇಳುತ್ತಿರುವ ಕಾರಣಕ್ಕಾಗಿ.

'ಭಾಷಾಪ್ರಯೋಗ' ಭಿನ್ನ ನೋಟಗಳು
ಭಾಷೆಯನ್ನು `ಪ್ರಯೋಗಿಸುವುದು’ ಎಂದರೆ ಅದನ್ನು ಬಳಸುವುದು ಎಂದರ್ಥ. ಆದರೆ ಬಳಸುವುದು ಅನ್ನುವುದಕ್ಕೆ ಏನರ್ಥ?  ಅದು ನೇರವಾಗಿ ಒಂದೇ ಅರ್ಥವನ್ನು ಕೊಡುತ್ತದೆ ಎಂದು ಹೇಳಲಿಕ್ಕೆ ಬರುವುದಿಲ್ಲವಾದ ಕಾರಣ ಈ ಪ್ರಶ್ನೆ ಇಲ್ಲಿ ಹುಟ್ಟಿಕೊಳ್ಳುತ್ತದೆ. ಇಲ್ಲಿ ಭಾಷೆಯನ್ನು ಬಳಸುವುದು ಎಂದರೆ ಸ್ವತಂತ್ರವಾಗಿ ಕೃತಿರಚನೆಮಾಡಲೂ ಇರಬಹುದು ಅಥವಾ ಬೇರೆಯವರು ರಚನೆ ಮಾಡಿದ್ದನ್ನು ಲೀಲಾಜಾಲವಾಗಿ ಆಕರ್ಷಣೀಯವಾಗಿ ಅರ್ಥೈಸುವುದು, ವ್ಯಾಖ್ಯಾನಿಸುವುದು ಇತ್ಯಾದಿಯೂ ಇರಬಹುದು. ಸಾಹಿತ್ಯ ಸಂಸ್ಕೃತಿಯ ಕ್ಷೇತ್ರದಲ್ಲಿರುವ ಬಹುತೇಕ ಎಲ್ಲರಿಗೂ ಚಿರಪರಿಚಿತವಾಗಿರುವ ಕವಿರಾಜ ಮಾರ್ಗಕಾರನ ಬಹುಪ್ರಸಿದ್ಧವಾದ `ಪದನರಿದು ನುಡಿಯಲುಂ…’ ಕಂದಪದ್ಯದಲ್ಲಿ ಬರುವ ‘ನಾಡವರ್ಗಳ್ ಚದುರರ್ ನಿಜದಿಂ ಕುರಿತೋದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್’ ಎಂಬ ಮಾತನ್ನೇ ಗಮನಿಸಿ. ಬಹುತೇಕ ವಿದ್ವಾಂಸರು ಈ ಮಾತನ್ನು, `ಯಾವುದೇ ವಿಷಯದ ಬಗ್ಗೆ ಗಂಭೀರ ಅಧ್ಯಯನವನ್ನು ಮಾಡದೆಯೂ ಕೃತಿರಚನೆ ಮಾಡುವ ಸಾಮರ್ಥ್ಯವನ್ನು ಕನ್ನಡ ನಾಡಿನ ಸಾಮಾನ್ಯ ಜನ ಹೊಂದಿದ್ದರು’ ಎಂದು ಅರ್ಥೈಸುತ್ತಾರೆ.

ಆದರೆ ಕಿ.ರಂ. ಅಂತಹ ವಿದ್ವಾಂಸರು ಇದನ್ನು ಭಿನ್ನವಾಗಿ ಅರ್ಥೈಸುತ್ತಿದ್ದರು. “ಇಲ್ಲಿ `ಕಾವ್ಯಪ್ರಯೋಗ’ ಎಂದರೆ ‘ಕಾವ್ಯದ ರಚನೆ’ ಎಂದು ಕಡ್ಡಾಯವಾಗಿ ಅರ್ಥಮಾಡಿಕೊಳ್ಳಬೇಕಾದ ಅಗತ್ಯವನ್ನು ಕಾವ್ಯವೇನೂ ಹೇಳುವುದಿಲ್ಲ; ಅದಕ್ಕೆ ಒತ್ತಾಯ ಮಾಡುವ ಅಂಶಗಳೂ ಅಲ್ಲಿ ಇಲ್ಲ; ಹಾಗೆ ನೋಡಿದರೆ ನಾಡಿನ ಸಾಮಾನ್ಯ ಜನರು ಕಾವ್ಯರಚನೆಯ ಸಾಮರ್ಥ್ಯಹೊಂದಿದ್ದರು ಅದೂ ಗಂಭೀರ ಅಧ್ಯಯನ ಮಾಡದೆಯೇ ಎಂಬುದು ನಂಬಲು ಕಷ್ಟವಾದ ಸಂಗತಿ; ಹಾಗಾಗಿ ಇಲ್ಲಿರುವ `ಕಾವ್ಯಪ್ರಯೋಗ’ ಎಂಬುದನ್ನು `ಕಾವ್ಯದ ಉಪಯೋಗ’ ಎಂದೂ ಅರ್ಥೈಸಿಕೊಳ್ಳಲು ಸಾಧ್ಯವಿದೆ” ಎಂಬುದು ಅವರ ವ್ಯಾಖ್ಯಾನವಾಗಿತ್ತು. `ಕಾವ್ಯಪ್ರಯೋಗ ಪರಿಣಿತ ಮತಿಗಳ್’ ಎಂಬುದಕ್ಕೆ “ಕನ್ನಡ ನಾಡಿನ ಜನ ಕಾವ್ಯವನ್ನು ನಾಟಕ, ಗಮಕ ಮುಂತಾದವುಗಳಲ್ಲಿ ನಿಜಾರ್ಥದಲ್ಲಿ `ಪ್ರಯೋಗಿಸುವ’ ಆಲಿಸುವ, ಆಸ್ವಾದಿಸುವ ಸಾಮರ್ಥ್ಯವನ್ನು ಹೊಂದಿದ ಬುದ್ಧಿವಂತರಾಗಿದ್ದರು” ಎಂಬುದು ಅವರಿಗೆ ಹೆಚ್ಚು ಇಷ್ಟವಾಗುವ ವ್ಯಾಖ್ಯಾನವಾಗಿತ್ತು.

ಕುವೆಂಪು ಕೂಡ ಭಾಷೆಯ ಉಪಯೋಗವನ್ನು ಮುಖ್ಯವಾಗಿ ಎರಡು ಸ್ತರಗಳಲ್ಲಿ ಗುರುತಿಸುತ್ತಾರೆ. ಅವಕ್ಕೆ ಅವರು ಭಾಷೆಯ `ಭಾವೋಪಯೋಗಿ’ ಮತ್ತು `ಲೋಕೋಪಯೋಗಿ’ ಬಳಕೆ ಎಂದು ಹೆಸರಿಸುತ್ತಾರೆ.  ಲೋಕೋಪಯೋಗಿ ಎಂದರೆ ವ್ಯವಹಾರಕ್ಕೆ ಭಾಷೆಯನ್ನು ಬಳಸುವುದು. ಭಾವೋಪಯೋಗಿ ಎಂದರೆ ನಮ್ಮ ಭಾವನೆಗಳಾದ ಸಂತೋಷ ದುಃಖ, ನೋವು, ನಲಿವು, ಸಿಟ್ಟು, ದ್ವೇಷ ಇತ್ಯಾದಿಗಳನ್ನು ವ್ಯಕ್ತಪಡಿಸಲು ಬಳಸುವಂಥದ್ದು. ಭಾಷೆಯ ಲೊಕೋಪಯೋಗಿ ಬಳಕೆಯಲ್ಲಿ ಭಾಷೆಯ ಶಬ್ದಗಳು ನೀಡುವ ವಾಸ್ತವ ಅರ್ಥಕ್ಕೆ ಹೆಚ್ಚು ಬೆಲೆ. ಅದು ನೇರವಾಗಿರುತ್ತದೆ ಕೂಡ. ಆದರೆ ಭಾಷೆಯ ಭಾವೋಪಯೋಗಿ ಬಳಕೆಯಲ್ಲಿ ಶಬ್ಧಗಳು ಕೊಡುವ ವಾಸ್ತವ ಅಂದರೆ ಅಕ್ಷರಶಃ ಅರ್ಥಕ್ಕೆ ಅರ್ಥವಿರುವುದಿಲ್ಲ. ಅಲ್ಲಿ ಅದರ ಹೆಸರೆ ಸೂಚಿಸುವಂತೆ ಭಾವಕ್ಕೆ ಅರ್ಥವಿರತ್ತದೆ. ಒಂದೆರಡು ಉದಾಹರಣೆಗಳೊಂದಿಗೆ ಇದನ್ನು ನೋಡುವುದಾದರೆ ಒಬ್ಬ ವ್ಯಕ್ತಿ ಪ್ರೀತಿಯಿಂದ ತರುಣಿಯೊಬ್ಬಳನ್ನು `ಬಾರಮ್ಮ ಇಲ್ಲಿ’ ಎಂದು ಕರೆದಾಗ `ಆ ಚಿಕ್ಕ ಹುಡುಗಿ ಈ ದೊಡ್ಡ ವ್ಯಕ್ತಿಗೆ ಹೇಗೆ `ಅಮ್ಮ’ ಆಗುತ್ತಾಳೆ. ಇವನು ಹೇಗೆ ಅವಳಿಗೆ ಮಗ ಆಗುತ್ತಾನೆ’ ಎಂದು ಯಾರೂ ನಗುವುದಿಲ್ಲ. ಅದೇ ರೀತಿ ಒಬ್ಬ ವ್ಯಕ್ತಿ ಸಿಟ್ಟಿನಲ್ಲಿ ಇನ್ನೊಬ್ಬನಿಗೆ `ಸೂಳೆಮಗನೆ’ ಎಂದು ಬೈಯ್ಯುತ್ತಾನೆ ಎಂದಿಟ್ಟುಕೊಳ್ಳಿ. ಆಗ ಬಯ್ಯುವವನಿಗೆ ಕೂಡ ಅವನು `ಸೂಳೆಯ ಮಗ ಅಲ್ಲ’ ಎಂಬುದು ಗೊತ್ತಿರುತ್ತದೆ. ಸುತ್ತಲೂ ಇದ್ದವರು ಕೂಡ ಬೈಸಿಕೊಂಡವನು `ಸೂಳೆಯ ಮಗ’ ಎಂದು ಅರ್ಥಮಾಡಿಕೊಳ್ಳುವುದಿಲ್ಲ. ಬದಲಾಗಿ ಬೈದವನಿಗೆ ಬೈಸಿಕೊಂಡವನ ಮೇಲೆ ಯಾವ ಮಟ್ಟದ ಸಿಟ್ಟಿದೆ ಎಂದು ಅರ್ಥಮಾಡಿಕೊಳ್ಳುತ್ತಾರೆ! ಇವು ಭಾಷೆಯ ಭಾವೋಪಯೋಗಿ ಬಳಕೆಗೆ ಕೆಲವು ಉದಾಹರಣೆಗಳು.

ಲುಪ್ತ, ಲಿಪ್ತ ಮತ್ತು ಅಲಿಪ್ತ ಮಾರ್ಗದಾಳುಗಳು
ಸಾಹಿತ್ಯ ಮತ್ತು ಶಿಕ್ಷಣದ ಸಂದರ್ಭದಲ್ಲಿ ಭಾಷೆಯ ನಾವಿನ್ಯಯುತ ಬಳಕೆ ಎಂಬುದು ಬಹಳ ಪ್ರಮುಖವಾದ ಮತ್ತು ಅಷ್ಟೇ ಮಹತ್ವದ ಅಂಶ. ಭಾಷೆಯ ಬಳಕೆಯನ್ನು ಲೇಖಕರು ಹೇಗೆ ಮಾಡಬೇಕು ಎಂಬುದನ್ನು ಹೇಳುತ್ತಾ ಮೇಲೆ ಉಲ್ಲೇಖಿಸಿದ ದಿನಕರ ದೇಸಾಯಿಯವರು,` ಭಾಷೆ ಎಂಬುದು ವಿಡಂಬನದ ಬಂದೂಕು / ಹಾರಿಸಲು ಪ್ರತಿಯೊಬ್ಬ ಕವಿ ಕಲಿತಿರಬೇಕು’ ಎಂದು ಹೇಳುತ್ತಾರೆ ಮಾತ್ರವಲ್ಲ ಈ ಭಾಷೆಯನ್ನು ಪ್ರಯೋಗಿಸುವವರು ಅಂದರೆ ಅದನ್ನು ರಚಿಸುವವರು, ರುಚಿನೋಡುವವರು ಮತ್ತು ಇವರ ಮಧ್ಯೆ ಇರುವ ವಿದ್ವಾಂಸ, ಗಮಕಿ, ಬೋಧಕ ಇತ್ಯಾದಿ ಸಾಹಿತ್ಯಸಾಗಾಟದ `ಮಾರ್ಗದಾಳು’ಗಳು ಇವರನ್ನು ದೃಷ್ಟಿಯಲ್ಲಿಟ್ಟುಕೊಂಡು, ‘ಭಾಷೆಯೊಳಗಿರಬೇಕು ಶಬ್ದ ನಾವಿನ್ಯ / ರಸಿಕರಿಗೆ ಬರವಣಿಗೆಯಾಗುವುದು ಮಾನ್ಯ’ ಎಂದೂ ಹೇಳುತ್ತಾರೆ. ಒಟ್ಟಾರೆ ಸಂಖ್ಯಾ ದೃಷ್ಟಿಯಿಂದ ಹೇಳುವುದಾದರೆ ಸಾಹಿತ್ಯದ ಹಿನ್ನಲೆಯಲ್ಲಿ ಭಾಷೆಯನ್ನು ಬಳಸುವವರಲ್ಲಿ ಅಸ್ವಾದಿಸುವವರು ಅಂದರೆ ಇತ್ತೀಚೆಗೆ `ನೋಡುಗ’ರಾಗಿ ಬದಲಾಗಿರುವ `ಹಿಂದಿನ ಕಾಲದ ಓದುಗರು’ ಅಥವಾ `ಅದಕ್ಕೂ ಹಿಂದಿನ ಕಾಲದ ಕೇಳುಗರು’ ಯಾವಾಗಲೂ ಬಹುಸಂಖ್ಯಾತರು. ಸಾಹಿತ್ಯ ರಚನಾಕಾರರು ಅಲ್ಪಸಂಖ್ಯಾತರು. ಇವರ ಮಧ್ಯೆ ಇರುವ `ಸಾಹಿತ್ಯ ಸಾಗಾಣಿಕೆ’ ಮಾಡುವ ಮೇಲೆ ಹೇಳಲಾದ `ಮಾರ್ಗದಾಳು’ಗಳು ಸಂಖ್ಯಾದೃಷ್ಟಿಯಿಂದಲೂ ಮಧ್ಯಮರು!

ಈ ಮಾರ್ಗದಾಳುಗಳು ಸಾಮಾನ್ಯರಲ್ಲ. ಜನರಲ್ಲಿ ಸಾಹಿತ್ಯದ ಪ್ರೇಮವನ್ನು ಉದ್ಧೀಪನ ಮಾಡುವ ಉದ್ದೀಪನ ಮದ್ದನ್ನೂ ಇವರು ಕೊಡಬಲ್ಲರು. ಹಾಗೆ ಇನ್ನೆಂದೂ ಜನ ಸಾಹಿತ್ಯದ ಕಡೆ ತಲೆಹಾಕಿ ಕೂಡ ಮಲಗದಂತೆ ದೀರ್ಘದಂಡಪ್ರಣಾಮ ಹಾಕಿ ಹೋಗುವಂತೆಯೂ ಮಾಡಬಲ್ಲರು. ಈ ಅರ್ಥದಲ್ಲಿ ಹೇಳುವುದಾದರೆ ಇವರು ನಿಜಾರ್ಥದಲ್ಲಿ ಕವಿರಾಜಮಾರ್ಗಕಾರ ಹೇಳುವ `ಚದುರರ್’ ಮತ್ತು `ಪರಿಣಿತ ಮತಿಗಳ್’! ಗಮಕಿಗಳು, ಕೀರ್ತನಕಾರರು, ಪ್ರವಚನಕಾರರು ಇಂಥವರು ಕೃತಿಯಲ್ಲಿ ಇದ್ದದ್ದು ಒಂದಾದರೆ ಅದಕ್ಕೆ ತಮ್ಮದೇ ಆದ ಹತ್ತನ್ನು ಸೇರಿಸಿಕೊಂಡು ಹನ್ನೊಂದು ಮಾಡಿ ಹೇಳುಂಥವರು. ಇದ್ದದ್ದು ಇಲ್ಲದ್ದೂ ಸೇರಿಸಿಕೊಂಡು ಬೇಕಾಗಿದ್ದು ಬೇಡಾಗಿದ್ದು ಎಲ್ಲವನ್ನು ಕಡೆದು ರಸಮಾಡಿ ಭಾವಜೀವಿಗಳಿಗೆ ಕುಡಿಸಿ ಅವರನ್ನು ಮತ್ತೇರಿಸುವಂಥವರು.

ಇನ್ನು ವಿಮರ್ಶಾಕ್ರಮದ ವಿದ್ವಾಂಸರು ಕೃತಿಯಲ್ಲಿ ಹತ್ತು ಅಂಶ ಇದ್ದರೆ ‘ಆ ಕಾರಣಕ್ಕೆ ಅದು ಮುಖ್ಯವಲ್ಲ ಈ ಕಾರಣಕ್ಕೆ ಇದು ಮುಖ್ಯವಲ್ಲ’ ಎಂದು ಆರಿಸಿ, ಕೆಲವನ್ನು ಗಾಳಿಗೆ ಹಾರಿಸಿ, ಒಂಬತ್ತು ಅಂಶಗಳನ್ನು ಸೋಸಿ ತೆಗೆದು ಹಾಕಿ ಯಾವುದೋ ಒಂದು ಅಂಶವನ್ನು ಮಾತ್ರ ಒಪ್ಪಿಕೊಂಡು `ಇಷ್ಟೆಲ್ಲ ಮಿತಿಗಳ ನಡುವೆ ಈ ಅಂಶವನ್ನು ಮಾತ್ರ ನಾವು ಈ ಕೃತಿಯಲ್ಲಿ ಗೌರವಿಸಲೇಬೇಕು’ ಎಂದು ಹೇಳುವಂಥವರು. ಇದರಿಂದ ಜನಸಾಮಾನ್ಯರು ಒಂದು ಅಂಶ ಚೆನ್ನಾಗಿರುವುದನ್ನು ತಿಳಿದುಕೊಳ್ಳಲು ಒಂಬತ್ತು ಚೆನ್ನಾಗಿರದ ಅಂಶಗಳನ್ನು ಯಾಕೆ ಓದುವ ಪ್ರಯತ್ನ ಮಾಡಬೇಕು, ಇದಕ್ಕಿಂತ ಅರ್ಧಗಂಟೆಯ ಧಾರವಾಹಿಯಲ್ಲಿ  ಕಾಲುಗಂಟೆ ಜಾಹಿರಾತು ಕೊಟ್ಟು ಇನ್ನು ಕಾಲುಗಂಟೆ ಕಥೆ ತೋರಿಸಿದರೂ ಶೇ. 50 ರಷ್ಟು `ಸಾಹಿತ್ಯ’ ಸಿಗುತ್ತದೆ. ಅದು ಇಲ್ಲಿನ ಶೇ. 10ಕ್ಕಿಂತ ಲಾಭದಾಯಕವೇ ಎಂದು ಟಿವಿನೋಡಲು ಹೊರಟರೂ ಹೊರಡಬಹುದು!

'ಒಡೆದು ಹೇ(ಆ)   ನೀತಿ'
ಸಾಹಿತ್ಯದ ಬಗ್ಗೆ ಭಾಷೆಯ ಬಗ್ಗೆ ಹೆಚ್ಚುಕಡಿಮೆ ಅತ್ತ `ಲಿಪ್ತ’ವೂ ಅಲ್ಲದ ಇತ್ತ `ಲುಪ್ತ’ವೂ ಅಲ್ಲದ `ಅಲಿಪ್ತನೀತಿ’ಯನ್ನು ಅನುಸರಿಸುವವರು ಎಂದರೆ ಈಗಿನ ಸಾಮಾನ್ಯ ಶಿಕ್ಷಕರು. ಈ ರೀತಿಯ ಶಿಕ್ಷಕರು ಪ್ರಾಥಮಿಕ ಹಂತದಿಂದ ಹಿಡಿದು ಸ್ನತಕೋತ್ತರ ಹಂತದವರೆಗೂ ಹರಡಿಕೊಂಡಿದ್ದಾರೆ ಮತ್ತು ದೊಡ್ಡ ಸಂಖ್ಯೆಯಲ್ಲಿದ್ದಾರೆ ಕೂಡ. ಇವರು ಕವಿಯ ಆಶಯದ ಕಡೆಯೂ ಹೆಚ್ಚು ಗಮನ ಹರಿಸುವುದಿಲ್ಲ. ವಿದ್ಯಾರ್ಥಿಯ ಜೀವನದ ಭವಿಷ್ಯದ ಕಡೆಯೂ ಹೆಚ್ಚು ಗಮನ ಹರಿಸುವುದಿಲ್ಲ. ಇವರು ಗಮನ ಹರಿಸುವುದು ಒಂದರ ಕಡೆಗೆ ಮಾತ್ರ. ಅದೆಂದರೆ ಪರೀಕ್ಷೆ. ಪರೀಕ್ಷೆಯಲ್ಲಿ ಪ್ರಶ್ನೆ ಹೇಗೆ ಬರುತ್ತದೆ ಮತ್ತು ಅದಕ್ಕೆ ಹೇಗೆ ಉತ್ತರ ಬರೆದರೆ ಒಳ್ಳೆಯ ಅಂಕ ಬರುತ್ತದೆ ಎಂಬುದಷ್ಟೇ ಅವರಿಗೆ ಮುಖ್ಯವಾದದ್ದು. ಕನ್ನಡದ ಖ್ಯಾತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ತಾವು ಬರೆದ ಪುಸ್ತಕದ ಮೇಲೆ ತಾವೇ ಪರೀಕ್ಷೆ ಬರೆಯಬೇಕಾಗಿ ಬಂದಾಗ ಅವರಿಗೆ ನಲತ್ತರಿಂದ ಐವತ್ತರೊಳಗೆ ಅಂಕನೀಡಿ ಕೈತೊಳೆದುಕೊಂಡವರು ಇಂತಹ ಶಿಕ್ಷಕರೆ.

ಇವರಲ್ಲಿ ಯಾರೂ ವಿದ್ಯಾರ್ಥಿಗಳನ್ನು ಜೀವನಕ್ಕೆ ತಯಾರುಮಾಡುವವರಲ್ಲ. ಬದಲಾಗಿ ಅವರನ್ನು ಪರೀಕ್ಷೆಗೆ ತಯಾರುಮಾಡುವವರು. ಶಿಕ್ಷಕ ತನ್ನನ್ನು ಜೀವನಕ್ಕೆ ತಯಾರುಮಾಡಿದರೆ ವಿದ್ಯಾರ್ಥಿ ಜೀವನಪರ್ಯಂತ ಅಂತಹ ಶಿಕ್ಷಕರನ್ನು ನೆನಪಿಸಿಕೊಳ್ಳಬಲ್ಲ. ಪರೀಕ್ಷೆಗೆ ತಯಾರುಮಾಡುವ ಶಿಕ್ಷಕರನ್ನು ಪರೀಕ್ಷೆ ಮುಗಿಯುವತನಕ ಮಾತ್ರ ವಿದ್ಯಾರ್ಥಿ ನೆನಪಿಸಿಕೊಳ್ಳಬಲ್ಲ. ಆಮೇಲೆ ಆ ಶಿಕ್ಷಕರು ಅವನಿಗೆ `ಬಳಸಿ ಬೀಸಾಡಿ’ಗಳಾಗಿ ಕಂಡರೆ ಅದು ಅವನ ತಪ್ಪಲ್ಲ. ಈ ಶಿಕ್ಷಕರು ಹಾಗೆ ವರ್ತಿಸಲು ನಾವು ಕೇವಲ ಅವರನ್ನು ಮಾತ್ರ ಲೇವಡಿಮಾಡಬೇಕಾಗಿಲ್ಲ. ಹಾಗಂತ ಅವರು ಲೇವಡಿಗೆ ಪಾತ್ರರೇ ಅಲ್ಲ ಎಂದೂ ಹೇಳಬೇಕಾಗಿಲ್ಲ. `ಅವರೇ ಕಾರಣ’ವಲ್ಲದಿದ್ದರೂ `ಅವರೂ ಕಾರಣ’ ಎಂಬುದನ್ನಂತೂ ನಾವು ಒಪ್ಪಿಕೊಳ್ಳಲೇಬೇಕು.

ಶಾಲೆ ಕಾಲೇಜುಗಳ ಶೈಕ್ಷಣಿಕ ವರ್ಷದ ಆರಂಭದ ತಿಂಗಳಿನಲ್ಲಿಯೇ ಕೈಯಲ್ಲಿ ಪಾಸಿಂಗ್ ಪ್ಯಾಕೇಜ್ ಹಿಡಿದುಕೊಂಡು ತರಗತಿಗೆ ಹೋಗಿ, “ಇದನ್ನು ಮಾತ್ರ ಓದಿಕೊಳ್ಳಿ, ಅದು ಬೇಡ” ಎಂದು ಪಠ್ಯವನ್ನು `ಒಡೆದು ಹೇಳುವ’ (Devide and Teach) ಇವರ ನೀತಿಯು ಬ್ರಿಟೀಷರು ಅನುಸಸರಿಸಿದ `ಒಡೆದು ಆಳುವ’ (Devide and Rule) ನೀತಿಯಷ್ಟೇ ಗಂಭೀರ ಪರಿಣಾಮ ಬೀರುವಂಥದ್ದು.  ತಾವೇ ನೋಟ್ಸ್ ಕೊಟ್ಟು ಅದನ್ನೇ ವಿದ್ಯಾರ್ಥಿಗಳ ಕೈಯಿಂದ ಪರೀಕ್ಷೆಗಳಲ್ಲಿ ಬರೆಸಿಕೊಂಡು ತಮ್ಮ ಉತ್ತರವನ್ನು ತಾವೇ ಮೌಲ್ಯಮಾಪನ ಮಾಡಿಕೊಳ್ಳುವಂತಹ ಇಂತಹ ಶಿಕ್ಷಕರಿಂದ ನೂರಕ್ಕೆ ನೂರು ಅಂಕಗಳನ್ನು ಪಡೆಯುವ, `ಅಂಕವೀರರು’ ರಚನೆಯಾಗಬಹುದೇ ಹೊರತು ಒಬ್ಬ ಸಾಹಿತಿ, ಚಿಂತಕ, ಲೇಖಕ, ವಿಜ್ಞಾನಿ ಸೃಷ್ಟಿಯಾಗಲಾರ. ಏಕೆಂದರೆ ಇವರು ಎಂದಿಗೂ ಮಕ್ಕಳಲ್ಲಿ ಸ್ವತಂತ್ರ ಆಲೋಚನೆ ಬೆಳೆಯುವುದನ್ನು ಪ್ರಚೋದಿಸುವುದಿಲ್ಲ.

ನೆನಪಾಗದ ಕಜ್ಜಾಯದ ಅಜ್ಜಿ
ಇಂತಹ ಶಿಕ್ಷಕರು ಈ ವ್ಯವಸ್ಥೆಯ ಕಿರಿಕಿರಿ ಮತ್ತು ತಮ್ಮ ಸ್ವಂತಃ ನಿರಾಸಕ್ತಿ ಇವುಗಳ ಕಾರಣದಿಂದ ತಮ್ಮೊಳಗೆ ಇರುವ ಸೃಜನಶೀಲತೆಯನ್ನು ಎಳ್ಳಷ್ಟೂ ಬಳಸಿಕೊಳ್ಳದೇ ಎಷ್ಟು ಜಡ್ಡುಗಟ್ಟಿಹೋಗಿರುತ್ತಾರೆ ಎಂಬುದಕ್ಕೆ ಒಂದು ಉದಾಹರಣೆಯನ್ನು ಇಲ್ಲಿ ದಾಖಲಿಸಬೇಕು ಅನ್ನಿಸುತ್ತದೆ. ಒಮ್ಮೆ ಕುತೂಹಲಕ್ಕಾಗಿ ಹತ್ತಾರು ಊರುಗಳ ಹತ್ತಾರು ಶಾಲೆಗಳಿಗೆ ಹೋಗುವ ಹೈಸ್ಕೂಲ್ ಮಕ್ಕಳ ಕನ್ನಡ ವ್ಯಾಕರಣದ ನೋಟ್ಸ್ ತೆಗೆದುಕೊಂಡು ಪರಿಶೀಲಿಸಿದೆ. ಅದರಲ್ಲಿ ಎಲ್ಲ ಶಾಲೆಗಳ ಮಕ್ಕಳ ನೋಟ್ಸಗಳಲ್ಲಿ ಸಂಧಿ ಸಮಾಸ ಇವುಗಳಿಗೆ ಶಿಕ್ಷಕರು ಬರೆಸಿದ ಉದಾಹರಣೆಗಳನ್ನು ಗಮನಿಸಿದರೆ ಬಹುತೇಕ ಅವು ಒಂದೇ ರೀತಿಯ ಉದಾಹರಣೆಗಳಾಗಿದ್ದವು. ಅವುಗಳಲ್ಲಿ `ಸಮಾಸ’ ಅಧ್ಯಾಯದಲ್ಲಿ ತತ್ಪುರುಷ ಸಮಾಸಕ್ಕೆ ಉದಾಹರಣೆಯಾಗಿ, ಅರಸನ + ಮನೆ = ಅರಮನೆ ಎಂಬ ಒಂದು ಉದಾಹರಣೆಯನ್ನಂತೂ ನೂರಕ್ಕೆ.ತೊಂಬತ್ತಕ್ಕಿಂತಲೂ ಹೆಚ್ಚು ಶಿಕ್ಷಕರು ಬರೆಸಿದ್ದರು! ನಾನು ಚಿಕ್ಕವನಿದ್ದಾಗ ನಮ್ಮ ಹೈಸ್ಕೂಲ್ ಮೇಷ್ಟ್ರು ಕೂಡ ನನಗೆ ಬರೆಸಿದ ಐದಾರು ಉದಾಹರಣೆಗಳಲ್ಲಿ ಈ ಅರಮನೆ ಇತ್ತು. ಈಗಲೂ ಈ ಎಲ್ಲ ಮಕ್ಕಳ ನೋಟ್ಸನಲ್ಲಿ ಅದು ಇತ್ತು!

ಈ ಉದಾಹರಣೆ ಯಾಕೆ ಇಷ್ಟು ಬಳಕೆಯಾಗಿದೆ ಎಂದು ನಾನು ಕುತೂಹಲಕ್ಕಾಗಿ ಚಿಕ್ಕ ಸಂಶೋಧನೆಯೊಂದನ್ನು ಮಾಡಿದಾಗ ತಿಳಿದುಬಂದ ಸಂಗತಿ ಎಂದರೆ ಈ ಎಲ್ಲ ಶಿಕ್ಷಕರು ವ್ಯಾಕರಣ ಹೇಳಲು ಬಳಸುವ ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ಎಲ್ಲ ಚಿಕ್ಕದೊಡ್ಡ ವ್ಯಾಕರಣ ಪುಸ್ತಕಗಳಲ್ಲಿ ಈ ಉದಾಹರಣೆ ಇದ್ದೇ ಇತ್ತು. ಈ ವ್ಯಾಕರಣ ಪುಸ್ತಕಗಳನ್ನು ಯಾವ ಗ್ರಂಥಗಳನ್ನು ಆಕರವಾಗಿ ಇಟ್ಟುಕೊಂಡು ರಚಿಸಿದ್ದಾರೆ ಎಂದು ನೋಡಿದಾಗ ಬಹುತೇಕ  ಆ ಎಲ್ಲ ವ್ಯಾಕರಣ ಪುಸ್ತಕಗಳನ್ನು ಬರೆದ ಲೇಖಕರು (ಅದರಲ್ಲಿ ಬಹಳ ಜನ ಮೇಷ್ಟ್ರೇ ಆಗಿದ್ದವರು ಇದ್ದರು) ಬಳಸಿದ್ದು ಬೇರೆ ಬೇರೆ ಆಕರಗ್ರಂಥಗಳಾಗಿದ್ದರೂ ಆ ಆಕರಗ್ರಂಥಗಳಿಗೆ ಆಕರವಾಗಿರುವಂಥದ್ದು ಮೂಲದಲ್ಲಿ ಒಂದೇ ಒಂದು ಗ್ರಂಥವಾಗಿತ್ತು! ಆ ಗ್ರಂಥವೆಂದರೆ `ಕನ್ನಡ ವ್ಯಾಕರಣ ದರ್ಪಣ’ ಇದು 1971ರಲ್ಲಿ ಆಗಿನ ಮೈಸೂರು ಸರ್ಕಾರದ ಪಠ್ಯಪುಸ್ತಕ ಇಲಾಖೆ `ಎಂಟು ಒಂಬತ್ತು ಮತ್ತು ಹತ್ತನೆಯ ತರಗತಿಗಳಿಗೆ’ ಎಂದು ಪ್ರಕಟಿಸಿದ ವ್ಯಾಕರಣ ಪುಸ್ತಕ. ಅದರಲ್ಲಿ ತತ್ಪುರುಷ ಸಮಾಸದ ಪರಿಚಯವನ್ನು ‘ಅರಮನೆ’ ಪದದಿಂದ ಮಾಡಲಾಗಿತ್ತು. ಅದನ್ನು ಆದರಿಸಿ ತಮ್ಮ ವ್ಯಾಕರಣ ಪುಸ್ತಕಗಳನ್ನು ಬರೆಯುತ್ತಾ ಹೋದ ಮುಂದಿನ ಎಲ್ಲರೂ ಆ ಉದಾಹರಣೆಯನ್ನೂ ಯಾಂತ್ರಿಕವಾಗಿ ಹಾಗೆ ಅಲ್ಲಿಂದ ಎತ್ತಿ ತಮ್ಮ ತಮ್ಮ ಪುಸ್ತಕಗಳಲ್ಲಿ ಬರೆಯುತ್ತಾ ಹೋಗಿದ್ದರು. ಅವರಾಗಲಿ ಅವರ ಪುಸ್ತಕಗಳನ್ನು ಹಿಡಿದುಕೊಂಡ ಶಿಕ್ಷಕರಾಗಲಿ ಬೇರೊಂದು ಉದಾಹರಣೆಯನ್ನು ಕೊಡುವ ಗೋಜಿಗೆ ಹೋಗಿರಲಿಲ್ಲ. ಹಾಗಾಗಿಯೇ ನಾನು ಚಿಕ್ಕವನಿದ್ದಾಗಿನಿಂದಲೂ ಈಗಿನವರೆಗೂ ಈ ಅರಮನೆಯನ್ನು ಬಿಟ್ಟು ತತ್ಪುರುಷ ಸಮಾಸ ಹೊರಗೆ ಬರುತ್ತಲೇ ಇಲ್ಲ.

ಸೂಕ್ಷ್ಮವಾಗಿ ಗಮನಿಸಿ: ನಾನು ಶಾಲೆಯಲ್ಲಿ ವ್ಯಾಕರಣ ಕಲಿಯುವಾಗ ಅರಸನನ್ನು ನೋಡಿರಲಿಲ್ಲ. ಈಗಲೂ ನೋಡಲು ಆಗಿಲ್ಲ! ಇನ್ನು ಅವನ ಮನೆ ಅಂದರೆ ಅರಮನೆಯನ್ನು ನಾನು ನೋಡಿದ್ದು ಪದವಿ ಕಾಲೇಜಿನಲ್ಲಿ ಓದುವಾಗ. ಅಂದರೆ ಅರಸನನ್ನೂ ನೋಡದೆ ಅರಮನೆಯನ್ನೂ ನೋಡದೆ ಅದರ ಸ್ವಾನುಭವವಿಲ್ಲದೆ ಅರಮನೆಯನ್ನು ತತ್ಪುರುಷ ಸಮಾಸಕ್ಕೆ ಉದಾಹರಣೆಯಾಗಿ ಕಲಿತಿದ್ದೆ. ಅದು ಬಾಯಿಪಾಠವೋ ಕಂಠಪಾಠವೋ ಆಗಿರದೆ ಮತ್ತೇನಾಗಿರಲು ಸಾಧ್ಯ? ನಮ್ಮ ಶಿಕ್ಷಕರು ಈಗಲೂ ಅದೇ ಅರಮನೆಯ ಉದಾಹರಣೆಯನ್ನೇ ಕೊಡುತ್ತಿದ್ದಾರೆ ಎಂದರೆ ಅದು ಅವರ ಜಡ್ಡುಗಟ್ಟಿರುವಿಕೆಗೆ ಸಾಕ್ಷಿಯಲ್ಲವೇ? ಹಾಗಾದರೆ ಒಂದು ಸಮಾಸಕ್ಕೆ ಹೊಸದೊಂದು ಉದಾಹರಣೆಯನ್ನು ಕೊಡಲಾರದಷ್ಟು ಈ ಶಿಕ್ಷಕರು ದಡ್ಡರೆ? ಖಂಡಿತಾ ಅಲ್ಲ. ಒಂದು ಕ್ಷಣ ಯೋಚಿಸಿದರೆ ಅಂತಹ ಹತ್ತಾರು ಉದಾಹರಣೆಗಳನ್ನು ತಾವೇ ಸೃಷ್ಟಿಸಿ ಕೊಡುವ ಸಾಮರ್ಥ್ಯ ಅವರಿಗಿದೆ. ಆದರೆ ಸೋಮಾರಿಗಳು. ಒಂದು ಉದಾಹರಣೆ ಇರುವಾಗ ಬೇರೆಯದು ಏತಕ್ಕೆ? ಒಟ್ಟಿನಲ್ಲಿ ವ್ಯಾಖ್ಯೆಗೆ ಉದಾಹರಣೆ ಸರಿಹೊಂದುತ್ತದೆಯಲ್ಲ. ಮತ್ಯಾಕೆ ಬೇರೆಯದನ್ನು ಕೊಡಬೇಕು ಎಂಬ ಮನೋಭಾವದವರು.

ಒಂದು ವೇಳೆ ಈ ಶಿಕ್ಷಕರು ಇದೇ ತತ್ಪುರುಷ ಸಮಾಸಕ್ಕೆ `ಅರಮನೆ’ ಬದಲು `ಅಜ್ಜಿಮನೆ’ ಕೊಟ್ಟಿದ್ದರೆ ಆಗುತ್ತಿದ್ದ ಪರಿಣಾಮ ಗಮನಿಸಿ. ಮೇಷ್ಟರು `ಅಜ್ಜಿಯ + ಮನೆ = ಅಜ್ಜಿಮನೆ’ ಎಂದು ಹೇಳುತ್ತಿದ್ದಂತೆಯೇ ಮಗುವಿನ  ಭಾವಕೋಶ ಅರಳುತ್ತದೆ. ಏಕೆಂದರೆ ಮಗುವಿಗೆ ರಾಜ ಮತ್ತು ಅವನ ಮನೆ ಹಾಗೆ ಅಜ್ಜಿ ಮತ್ತು ಅವಳ ಮನೆ ಅಪರಿಚಿತವಲ್ಲ.  ಅಜ್ಜಿ ಮತ್ತು ಅಜ್ಜಿಮನೆ ಪದಗಳು ಶಿಕ್ಷಕರ ಬಾಯಿಂದ ಬರುತ್ತಿದ್ದಂತೆಯೇ ಮಗು ತನ್ನ ಅಜ್ಜಿಯ ಮುಖವನ್ನು ಕಣ್ಣಿಗೆ ತಂದುಕೊಳ್ಳುತ್ತದೆ. ಅಜ್ಜಿ ಮಜ್ಜಿಗೆ ಕುಡಿಸಿದ್ದನ್ನೊ ಕಜ್ಜಾಯ ಮಾಡಿಕೊಟ್ಟದ್ದನ್ನೊ ನೆನಪು ಮಾಡಿಕೊಳ್ಳುತ್ತದೆ. ಅಜ್ಜಿಯ ಮನೆಯ ಕಟ್ಟೆಯ ಮೇಲೆ ಗೆಳೆಯರೊಂದಿಗೆ ಆಟವಾಡಿದ್ದನ್ನು ನೆನಪಿಸಿಕೊಳ್ಳುತ್ತದೆ. ಆಗ ಮೇಷ್ಟರು ಹೇಳಿದ ತತ್ಪುರುಷ ಸಮಾಸ ಮಗುವಿನ ಮನಸ್ಸಿನ ಆಳಕ್ಕೆ ಇಳಿದು ಅಂತರ್ಗತವಾಗುತ್ತದೆ. ಮಗುವಿನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಇಂಥದ್ದು ಮಾತ್ರ ನಿಜವಾದ ಶಿಕ್ಷಣವಾಗುತ್ತದೆ.

ನಮ್ಮ ಶಿಕ್ಷಕರು ಯಾಂತ್ರೀಕೃತ ಬೋಧನೆಯಲ್ಲಿ ತೊಡಗಿದಷ್ಟೂ ಶಿಕ್ಷಣ ಸೊರಗುತ್ತಾ ಹೋಗುತ್ತದೆ. ಹೌದು ಅವರಿಗೆ ಹತ್ತಾರು ಮಿತಿಯೊತ್ತಡಗಳಿವೆ. ಆದರೂ ಕ್ರಿಯಾಶೀಲವಾಗಿರುವ ಶಿಕ್ಷಕರು ತಮ್ಮ ಮಿತಿಯ ಕಥೆ ಹೇಳುತ್ತಾ ಕೂರುವುದಿಲ್ಲ. ಬದಲಾಗಿ ಮಿತಿಯ ಒಳಗೂ ಅಪರಿಮಿತ ಸಾಧನೆಯನ್ನು ಮಾಡಿ ತೋರಿಸುತ್ತಾರೆ. ಇಂತಹ ಶಿಕ್ಷಕರನ್ನು ಉಳಿದವರೂ ಅನುಸರಿಸಬೇಕು. ಆಗ ಅವರೆಲ್ಲ  ಅಪರಿಚಿತವೂ, ಭಯವನ್ನು ತರಿಸುಂಥದ್ದೂ ಆದ ದೌಲತ್ತಿನ `ಅರಮನೆ’ ತೊರೆದು ಮಮತೆಯ ಮಡಿಲೂ, ಸಿಹಿನೆನಪಿನ ಒಡಲೂ ಆಗಿರುವ, ಕಜ್ಜಾಯ ಮಾಡಿಕೊಡುವ `ಅಜ್ಜಿಮನೆ’ಯನ್ನು ನೆನಪುಮಾಡಿಕೊಳ್ಳಬಲ್ಲರು. ಯಾಂತ್ರೀಕರಣಗೊಳಿಸಿಕೊಂಡಿರುವ ಶಿಕ್ಷಣವನ್ನು ಸೃಜನಶೀಲಗೊಳಿಸಬಲ್ಲರು. ಹಾಗಾಗಲಿ ಎಂದು ಆಶಿಸೋಣ. ಕೊನೆಯಲ್ಲಿ,  ಹಾಗಾಗದಿದ್ದರೆ ಏನಾಗಬಹುದು ಎನ್ನುವುದನ್ನು ಸೂಚಿಸುವ ದಿನಕರ ದೇಸಾಯಿಯವರದ್ದೇ ಆದ ಇನ್ನೊಂದು ಚೌಪದಿ:

ಭಾಷೆ ಕುಣಿದರೆ ಮಾತ್ರ ಕವಿತೆ ಕಾಯಮ್ಮು
ಕುಣಿಯದಿದ್ದರೆ ಪಾಪ ಹಿಡಿಯುವುದು ದಮ್ಮು
ಭಾಷೆಗಿರಬೇಕು, ಸಖಿ ಸುಗ್ಗಿಯ ತುರಾಯಿ,
ಬೋಳುತಲೆ ಕಾಣಿಸಲು ಬೊಗಳುವುದು ನಾಯಿ
*****
ಡಾ. ರಾಜೇಂದ್ರ ಬುರಡಿಕಟ್ಟಿ
Saturday, July 04, 2020

Wednesday, July 8, 2020


ಎಸ್.ಎಸ್.ಎಲ್.ಸಿ:
ಶಾಲೆಗೆ ಹೋಗುವವರಿಗೇಕೆ ಶಾಲೆಬಿಡುವ’ ಪತ್ರ!?
- ಡಾರಾಜೇಂದ್ರ ಬುರಡಿಕಟ್ಟಿ

ರೋಗದ ವೇಗದ ಗಾಳಿಗೆ ಹರಿಯದೆ
ವಾದವಿವಾದದ ಸುಳಿಯಲಿ ಮುಳುಗದೆ
ಮೆಲ್ಲನೆ ತೇಲುತ ದಡವನು ಸೇರಿತು
ಶಾಲೆಗೆ ಹೋಗುವ ಮಗುವಿಗೆ ನೀಡುವ
ಶಾಲೆ ಬಿಡುವ ಪತ್ರ!
ಇವು ಮೊನ್ನೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿದಾಗ ಹುಟ್ಟಿಬಂದ ಕವಿತೆಯೊಂದರ ಸಾಲುಗಳು. ಇಡೀ ಜಗತ್ತನ್ನು ತಲ್ಲಣಗೊಳಿಸಿ ಅದರ ಕಾರ್ಯವೈಖರಿಯನ್ನೇ ಬದಲಿಸಿದ ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ  ಭಾರತದಲ್ಲಿ ಅತಿಹೆಚ್ಚು ಸಾರ್ವಜನಿಕ ಚರ್ಚೆಗೆ ಒಳಗಾದ ಕ್ಷೇತ್ರಗಳು ಮೂರು. ಮೊದಲನೆಯದು ಆರೋಗ್ಯ. ಎರಡನೆಯದಾಗಿ ವಲಸೆ ಕಾರ್ಮಿಕರ ಸಮಸ್ಯೆ. ಮೂರನೆಯದು ಶಿಕ್ಷಣ. ಮೊದಲೆರಡಸು ಕ್ಷೇತ್ರಗಳ ಚರ್ಚೆಗಳು ಒಂದು ಹಂತವನ್ನು ತಲುಪಿದ ನಂತರ ಶಿಕ್ಷಣದ ಚರ್ಚೆಯ ಮುನ್ನೆಲೆಗೆ ಬಂತು. ಈ ಚರ್ಚೆಯಲ್ಲಿ ಮುಖ್ಯವಾಗಿ ಎರಡು ಅಂಶಗಳು ಪ್ರಾಮುಖ್ಯತೆ ಪಡೆದುಕೊಂಡವು. ಒಂದು ಮುಗಿದು ಹೋಗಿರುವ ಕಳೆದ ಸಾಲಿನ ಉಳಿದುಕೊಂಡ ಪರೀಕ್ಷೆಯ ಪ್ರಕ್ರಿಯೆಯ ಪೂರ್ಣಗೊಳಿಸುವಿಕೆ ಇನ್ನೊಂದು ಆರಂಭವಾಗುತ್ತಿರುವ ಹೊಸ ವರ್ಷದ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆ.
ಕರ್ನಾಟಕದಲ್ಲಿ ಈ ಶೈಕ್ಷಣಿಕ ಚರ್ಚೆಯ ಮುಂದಿನ ಸಾಲಿನಲ್ಲಿ ನಿಂತು ಆದ್ಯತೆಯ ವಿಷಯವಾಗಿ ತನ್ನನ್ನು ಚರ್ಚೆಗೆ ಒಳಪಡಿಸಿಕೊಂಡದ್ದು ಎಸ್.ಎಸ್.ಎಲ್.ಸಿ. ಪರೀಕ್ಷೆ. ಅದು ಎಷ್ಟರ ಮಟ್ಟಿಗೆ ಚರ್ಚೆಗೆ ಒಳಗಾಯಿತು ಎಂದರೆ ಉಳಿದೆಲ್ಲ ಶೈಕ್ಷಣಿಕ ಚರ್ಚೆಯ ವಿಷಯ ಒಂದು ತೂಕವಾದರೆ ಅದೊಂದೇ ಒಂದು ತೂಕ ಅನ್ನುವಷ್ಟರ ಮಟ್ಟಿಗೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಅದು ನಮ್ಮ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯಲ್ಲಿ ನಡೆಯುವ ಮೊದಲ ಕೇಂದ್ರೀಕೃತ ಪರೀಕ್ಷೆ. ಚಿಕ್ಕಮಕ್ಕಳು ಬರೆಯುವ ಪರೀಕ್ಷೆ. ಜೊತೆಗೆ ಭಾವಹಿಸಿಸುವವ ಅಭ್ಯರ್ಥಿಗಳ ಸಂಖ್ಯಾದೃಷ್ಟಿಯಿಂದ ರಾಜ್ಯದ ಅತಿದೊಡ್ಡ ಪರೀಕ್ಷೆ ಕೂಡ. ಹಾಗಾಗಿಯೇ ಈ ಪರೀಕ್ಷೆ ಸಾರ್ವಜನಿಕ ಗಮನವನ್ನು ಅತಿಹೆಚ್ಚು ಪಡೆಯುವುದು ಸಹಜವೇ. ಈ ಪರೀಕ್ಷೆಯನ್ನು ನಡೆಸಬೇಕೆ ಅಥವಾ ಬೇಡವೇ ಎಂಬ ಚರ್ಚೆ ನಮ್ಮಲ್ಲಿ ಬಿರುಸಿನಿಂದಲೇ ನಡೆಯಿತು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.

ವಿವಾದದ ಸುಳಿಯಲ್ಲಿಯೂ ಈಜಿ ದಡಸೇರಿದ ಪರೀಕ್ಷೆ

ರಾಜ್ಯದ ಅನೇಕ ಶಿಕ್ಷಣ ತಜ್ಞರು, ಸಂಸ್ಕೃತಿ ಚಿಂತಕರು ಇಂತಹ ಸಾಂಕ್ರಾಮಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಪರೀಕ್ಷೆಯನ್ನು ನಡೆಸದೆಯೇ ಮಕ್ಕಳನ್ನು ಸಾರ್ವತ್ರಿಕವಾಗಿ ಉತ್ರೀರ್ಣಗೊಳಿಸುವ ಸಲಹೆಯನ್ನು ನೀಡಿದರು. ಕೆಲವರು ಈ ವರ್ಷವನ್ನು ಶೂನ್ಯವರ್ಷವೆಂದು ಪರಿಗಣಿಸಲು ಸೂಚಿಸಿದರು. ಸರ್ಕಾರ ಈ ಹಂತದಲ್ಲಿ ಭಾಗೀದಾರರ ಸಲಹೆ ಕೇಳುವ ನಿರ್ಧಾರವನ್ನು ಪ್ರಕಟಿಸಿತು. ಎಲ್ಲ ಶಾಲೆಗಳಿಂದ ಮಕ್ಕಳ ಪಾಲಕರು, ಎಸ್.ಡಿ.ಎಂ.ಸಿಯವರು ಇವರ ಅಭಿಪ್ರಾಯವನ್ನು ಕೇಳಿ ಮುಂದುವರೆಯುವುದಾಗಿ ಭರವಸೆ ನೀಡಿತು ಮತ್ತು ಆ ಕಾರ್ಯಕ್ಕೆ ಮುಂದಾಯಿತು ಕೂಡ. ಕರ್ನಾಟಕದಲ್ಲಿ ಈ ಚರ್ಚೆ ಹೀಗೆ ತೂಗುಯ್ಯಾಲೆಯಲ್ಲಿ ತೂಗುತ್ತಿರಬೇಕಾದರೆ ಅಕ್ಕಪಕ್ಕದ ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳು ಪರೀಕ್ಷೆ ನಡೆಸದೆಯೇ ಅಲ್ಲಿನ ಮಕ್ಕಳನ್ನು ಸಾರ್ವತ್ರಿಕವಾಗಿ ಉತ್ತೀರ್ಣಗೊಳಿಸುವ ತಮ್ಮ ಸರ್ಕಾರಗಳ ನಿರ್ಧಾರಗಳನ್ನು ಪ್ರಕಟಿಸಿದರು. ಇದರಿಂದಾಗಿ  ಕರ್ನಾಟಕದಲ್ಲಿ ಪರೀಕ್ಷೆ ಬೇಡ ಎನ್ನುವವರಿಗೆ ಒಂದಿಷ್ಟು ಬೆಂಬಲವೂ ಸಿಕ್ಕಂತಾಗಿ ಅವರು ತಮ್ಮ ಒತ್ತಡವನ್ನು ಮತ್ತಷ್ಟು ತೀವ್ರಗೊಳಿಸಿದರು. ಸರ್ಕಾರ ತಮಗೆ ಸ್ಪಂದಿಸುತ್ತಿದೆ ಎಂಬ ಭರವಸೆ ಇಲ್ಲವಾಗಿ ಈ ಪ್ರಕರಣ ಹೈಕೋರ್ಟು ಮತ್ತು ಸುಪ್ರೀಂ ಕೋರ್ಟಿಗೂ ಹೋಯಿತು.
ತಾನು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡೇ ಪರೀಕ್ಷೆ ನಡೆಸುವುದಾಗಿ ಭರವಸೆ ಕೊಟ್ಟದ್ದರಿಂದ ಹೈಕೋರ್ಟು ಸರ್ಕಾರಕ್ಕೆ ಪರೀಕ್ಷೆ ನಡೆಸಲು ಅನುವುಮಾಡಿಕೊಟ್ಟಿತು. ಪ್ರಕರಣ ಸುಪ್ರೀಂ ಕೋರ್ಟಿಗೆ ಹೋದಾಗ ಸುಪ್ರೀಂ ಕೋರ್ಟು ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದಾಗ ಕಾರಣ ಪರೀಕ್ಷೆ ನಡೆಯುವುದು ಬಹುತೇಕ ಖಾತ್ರಿಯಾಯಿತು. ಈ ಹಂತದಲ್ಲಿ ಕರ್ನಾಟಕದ  ಈ ಪರೀಕ್ಷೆಯ ಮೇಲೆ ಇಡೀ ದೇಶದ ಕಣ್ಣು ನೆಟ್ಟಿತು. ಏಕೆಂದರೆ ದಿನದಿನಕ್ಕೂ ಹೆಚ್ಚುತ್ತಿರುವ ಸಾಂಕ್ರಾಮಿಕ ಸೋಂಕಿನ ಅಪಾಯಕಾರಿ ಸಂದರ್ಭದಲ್ಲಿಯೇ ಸರ್ಕಾರ ಚಿಕ್ಕಮಕ್ಕಳ ಈ ಪರೀಕ್ಷೆಯನ್ನು ನಡೆಸಲು ಮುನ್ನುಗ್ಗುತ್ತಿತ್ತು. ಈ ಸಂದರ್ಭದಲ್ಲಿ ಪರೀಕ್ಷೆ ನಡೆಸಬೇಡಿ ಎಂದು ಹೇಳುವವರು ಕೋರ್ಟಿನ ತೀರ್ಪಿನಿಂದಾಗಿ ಸುಮ್ಮನಾಗಬೇಕಾಯಿತು. ಸರ್ಕಾರದ ಜವಾಬ್ದಾರಿ ಹೆಚ್ಚಾಯಿತು. ಕೊಟ್ಟ ಭರವಸೆಯಂತೆ ಪರೀಕ್ಷೆಯನ್ನು ಮಕ್ಕಳಿಗೆ ಯಾವ ತೊಂದರೆಯೂ ಆಗದಂತೆ ನಡೆಸಲು ಅದು ತೀವ್ರಗಮನ ಕೊಡಬೇಕಾಯಿತು.
ಈ ಸಂದರ್ಭದಲ್ಲಿ ಕರ್ನಾಟಕದ ಶಿಕ್ಷಣ ಸಚಿವರು ತೆಗೆದುಕೊಂಡ ಜವಾಬ್ದಾರಿ ಮಾತ್ರ ಬಹಳ ಪ್ರಶಂಸೆಗೆ ಪಾತ್ರವಾಯಿತು. ಅವರು ಸ್ವತಃ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಹೋಗಿ ಕೇವಲ ತಮ್ಮ ಶಿಕ್ಷಣ ಇಲಾಖೆಯಲ್ಲದೆ ಪೊಲೀಸ್, ಆರೋಗ್ಯ ಸೇರಿದಂತೆ ಅನೇಕ ಇಲಾಖೆಗಳ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆಲ್ಲ ಈ ಪರೀಕ್ಷೆ ಕೇವಲ ಶಿಕ್ಷಣ ಇಲಾಖೆಯ ಜವಾಬ್ದಾರಿಯಲ್ಲ ಇದೊಂದು ಸಾಮೂಹಿಕ ಜವಾಬ್ದಾರಿಯಾಗಿದ್ದು ಇದರ ಯಶಸ್ವಿಗೊಳಿಸುವಿಕೆ ಎಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು. ಅದರ ಪ್ರತಿಫಲವಾಗಿ ಈ ಪರೀಕ್ಷೆ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ರಾಜ್ಯದ ಮಕ್ಕಳಲ್ಲಿ ಶೇ. 95ಕ್ಕಿಂತಲೂ ಹೆಚ್ಚು ಮಕ್ಕಳು ಪಾಲ್ಗೊಂಡದ್ದು ಸಣ್ಣ ಸಾಧನೆಯೇನಲ್ಲ. ಒಟ್ಟಿನಲ್ಲಿ ವಿವಾದದ ಸುಳಿಯಲ್ಲಿಯೂ ಈ ಪರೀಕ್ಷೆ ಈಜಿ ದಡಸೇರಿತು. ಇಲ್ಲಿ ಶಿಕ್ಷಣ ಸಚಿವರ ಜೊತೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಅದಕ್ಕಿಂತ ಮುಖ್ಯವಾಗಿ ಶಿಕ್ಷಕರು ಇವರೆಲ್ಲರಿಗಿಂತ ಮುಖ್ಯವಾಗಿ ಆ ಚಿಕ್ಕ ಮಕ್ಕಳು ತೋರಿದ ಶಿಸ್ತು ಮತ್ತು ಬದ್ಧತೆ ಮೆಚ್ಚುವಂಥದ್ದು. ಮಕ್ಕಳ ಈ ನಡೆ ದೊಡ್ಡವರಿಗೂ ಮಾದರಿ ಎಂದು ರಾಜ್ಯದ ಪತ್ರಿಕೆಯೊಂದು ಶ್ಲಾಘಿಸಿ ಸಂಪಾದಕೀಯವನ್ನು ಬರೆದದ್ದು ಸರಿಯಾಗಿಯೇ ಇದೆ.
ಪರೀಕ್ಷೆ ಹತ್ತಿರವಾಗುತ್ತಿದ್ದರೂ ಸುಪ್ರೀಂ ಕೋರ್ಟಿನಿಂದ ಹಸಿರು ನಿಶಾನೆ ಸಿಕ್ಕರೂ ವಿವಾದ ಸಂಪೂರ್ಣವಾಗಿ ಮುಗಿದಿರಲಿಲ್ಲ. ಈ ಮಧ್ಯೆ ‘ಸರ್ಕಾರ ಖಾಸಗೀ ಶಾಲೆಗಳ ಒತ್ತಡಗಳಿಗೆ ಮಣಿದು ಈ ಪರೀಕ್ಷೆಯನ್ನು ಮಕ್ಕಳ ಜೀವವನ್ನು ಅಪಾಯಕ್ಕೆ ಒಡ್ಡಿ ಪ್ರತಿಷ್ಠೆಗಾಗಿ ನಡೆಸುತ್ತಿದೆ’ ಎಂದು ಕೆಲವರು ಭಿನ್ನಾಭಿಪ್ರಾಯವನ್ನು ಎತ್ತಿದ್ದರು. ಆಗ “ಸರ್ಕಾರ ಯಾರ ಒತ್ತಡಕ್ಕೂ ಮಣಿದಿಲ್ಲ ಪರೀಕ್ಷೆಯನ್ನು ಯಾರ ಪ್ರತಿಷ್ಠೆಗೂ ನಡೆಸುತ್ತಿಲ್ಲ. ಮಕ್ಕಳ ಭವಿಷ್ಯಕ್ಕಾಗಿ ನಡೆಸುತ್ತೇವೆ. ಮತ್ತು ಇದನ್ನು ಮಕ್ಕಳ ಸುರಕ್ಷತೆಗೆ ಆಧ್ಯತೆ ನೀಡಿಯೇ ನಡೆಸುತ್ತೇವೆ” ಎಂದು ಶಿಕ್ಷಣ ಸಚಿವರು ಸ್ಪಷ್ಟವಾಗಿ ಹೇಳಿ ಪರೀಕ್ಷೆ ನಡೆಸುವ ತಮ್ಮ ಬದ್ಧತೆಯನ್ನು ಸಮರ್ಥಿಸಿಕೊಂಡರು. ಅದು ಸರಿಯೂ ಇರಬಹುದು. ಆದರೆ ಪರೀಕ್ಷೆಯನ್ನು ವಿರೋಧಿಸುವವರನ್ನು ವಿರೋಧಿಸುವಲ್ಲಿ ಅವರು ಇನ್ನಷ್ಟು ಪ್ರಬುದ್ಧತೆಯನ್ನು ತೋರಬಿಕಿತ್ತೇನೋ. ಏಕೆಂದರೆ ಅವರ ಕಾಳಜಿಯೂ ಕೂಡ ತಮ್ಮಂತೆಯೇ ಮಕ್ಕಳ ಸುರಕ್ಷತೆ ಮತ್ತು ಭವಿಷ್ಯವೇ ಆಗಿತ್ತೇ ಹೊರತು ಬೇರೇನೂ ಆಗಿರಲಿಲ್ಲ. ಎರಡೂ ಕಡೆಯವರ ಗುರಿ ಕಾಳಜಿಗಳು ಒಂದೇ ಇದ್ದರೂ ಮಾರ್ಗಮಾತ್ರ ಭಿನ್ನವಾದಂತಹವುಗಳು ಎಂಬುದನ್ನು ಗ್ರಹಿಸುವಲ್ಲಿ ವ್ಯವಸ್ಥೆಗೆ ಸಾಧ್ಯವಾದಾಗ ಹಾಗೆ ಸೈದ್ಧಾಂತಿಕವಾಗಿ ವಿರೋಧಿಸುವವರು ಕಿಡಿಗೇಡಿಗಳಂತೆ, ಸಮಾಜಘಾತುಕರಂತೆ ಕಂಡುಬರುವುದಿಲ್ಲ; ಅವರ ವಿಚಾರವನ್ನು ಒಪ್ಪಿಕೊಳ್ಳಲು ಆಗದಿದ್ದರೂ ಕೂಡ!
ಇಲ್ಲಿ ಖಾಸಗೀ ಶಾಲೆಗಳ ಒತ್ತಡಕ್ಕೆ ಸರ್ಕಾರ ಮಣಿಯದಿರಬಹುದು. ಆದರೆ ಅಂಥದೊಂದು ಒತ್ತಡ ಯಾವುದೇ ಸರ್ಕಾರಕ್ಕೆ ಇದ್ದೇ ಇರುತ್ತದೆ ಎಂಬುದನ್ನು ಅಲ್ಲಗಳೆಯಲಾಗದು. ಬಹುತೇಕ ಖಾಸಗೀ ಶಾಲೆಗಳವರು ‘ಪರೀಕ್ಷೆ ನಡೆಸಬೇಕು’ ಎನ್ನುವ ಕಡೆಗೆ ಇರುವವರು. ಪರೀಕ್ಷೆ ನಡೆದು ಫಲಿತಾಂಶ ಪ್ರಕಟವಾದರೆ ಅವರಿಗೆ ಎಷ್ಟೆಷ್ಟು ಅಂಕಗಳನ್ನು ಪಡೆದವರಿಗೆ ಎಷ್ಟೆಷ್ಟು ಡೊನೇಶನ್ನು ಎಂಬುದನ್ನು ಫಿಕ್ಸ್ ಮಾಡಲು ಅನುಕೂಲ. ಶೇಕಡಾ ತೊಂಬತ್ತರ ಮೇಲೆ ಅಂಕಪಡೆದ ಶೇ.10 ರಷ್ಟು ಮಕ್ಕಳಿಗೆ ಫೀ, ಡೊನೇಶನ್ನು ಎಲ್ಲವನ್ನೂ ಫ್ರೀ’ ಎಂದು ಘೋಷಣೆ ಮಾಡಿ ಆ ವಿದ್ಯಾರ್ಥಿಗಳ ಫೋಟೋಗಳನ್ನು ತಮ್ಮ ಶಾಲೆ ಕಾಲೇಜು ಪ್ರವೇಶದ್ವಾರದಲ್ಲಿ ಫ್ಲೆಕ್ಸ್ ಮಾಡಿ ಹಾಕಿ ಅದನ್ನು ನೋಡಿ ಒಳಬರುವ ಶೇ. 90ಕ್ಕಿಂತ ಕಡಿಮೆ ಅಂಕದ ಶೇ. 90 ರಷ್ಟು ವಿದ್ಯಾರ್ಥಿಗಳಿಗೆ ಒಂದೊಂದೇ ಸಾವಿರ ಡೊನೇಶನ್ ಹೆಚ್ಚಿಗೆ ಮಾಡಿದರೂ ಅವರಿಗೆ ಭರ್ಜರಿ ಲಾಭವೇ ಆಗುತ್ತದೆ. ಎಲ್ಲರನ್ನೂ ಪಾಸುಮಾಡಿದರೆ ಅವರಿಗೆ ಅವರ ವ್ಯವಹಾರಕ್ಕೆ ಗೊಂದಲವುಂಟಾಗುತ್ತದೆ.ಇಂತಹ ಸಂದರ್ಭಗಳಲ್ಲಿ ಪರೀಕ್ಷೆ ನಡೆಸಲು ಅವರ ಒತ್ತಡ ಇರುವುದು ಸಹಜವೆ.
ಸರ್ಕಾರ ಎಲ್ಲ ಶಾಲೆಗಳಿಂದ ಪಾಲಕರಿಂದ ಅಭಿಪ್ರಾಯ ಕೇಳಿ ಬಹುಪಾಲು ಜನ ಹೇಳುವಂತೆ ಮಾಡುತ್ತೇವೆ ಎಂದು ಹೇಳಿದ್ದೇನೋ ನಿಜ. ಶಾಲೆಗಳಿಂದ ಅಭಿಪ್ರಾಯ ತರಿಸಿಕೊಂಡದ್ದೂ ನಿಜ. ಆದರೆ ಯಾವ ಶಾಲೆಗಳ ಪಾಲಕರು ಏನು ಹೇಳಿದರು ಎಂದು ಉಳಿದವರಿಗೆ ಗೊತ್ತಾಗಲಿಲ್ಲ. ರಾಜ್ಯದ ಬಹುಪಾಲು ಪಾಲಕರು ಏನು ಹೇಳಿದರು, ಒಟ್ಟಾರೆ ಈ ಪರೀಕ್ಷೆಯ ಬಗ್ಗೆ ಭಾಗಿದಾರರಿಂದ ಬಂದ ಬಹುಮತದ ಅಭಿಪ್ರಾಯ ಏನಾಗಿತ್ತು ಎಂಬುದು ಸಾರ್ವಜನಿಕವಾಗಿ ಪ್ರಕಟವಾದಂತಿಲ್ಲ. ಸುಪ್ರೀಂ ಕೋರ್ಟಿನ ರಹದಾರಿ ಸಿಕ್ಕದ್ದರಿಂದ ಈ ಜನಾಭಿಪ್ರಾಯದ ಕಡೆ ಯಾರ ಗಮನವೂ ಹೋಗಲಿಲ್ಲ. ಒಟ್ಟಿನಲ್ಲಿ ಪರೀಕ್ಷೆ ಮುಗಿದು ಯಾವುದೋ ಯುದ್ಧವೊಂದನ್ನು ಗೆದ್ದ, ಮಹಾಕಂಟಕವೊಂದನ್ನು ದಾಟಿಬಂಧ ಭಾವ ಇಂದು ಶೈಕ್ಷಣಿಕ ವಲಯದಲ್ಲಿ ಮತ್ತು ಅದರ ಭಾಗಿದಾರರೆಲ್ಲರಲ್ಲೂ ಆವರಿಸಿ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

ಶಾಲೆಗೆ ಹೋಗುವವರಿಗೇಕೆ ಶಾಲೆ ಬಿಡುವ ಪ್ರಮಾಣ ಪತ್ರ?

ಇಷ್ಟೆಲ್ಲ ದೊಡ್ಡಮಟ್ಟದ ಆಡಳಿತ ವ್ಯವಸ್ಥೆಯನ್ನು ಜನಮಾನಸದ ಮನಸ್ಸನ್ನು ತನ್ನೆಡೆಗೆ ಕೇಂದ್ರೀಕಿಸಿಕೊಳ್ಳುವ ಈ ಎಸ್.ಎಸ್.ಎಲ್.ಸಿ. ಪರೀಕ್ಷೆ ನಿಜಕ್ಕೂ ವಾಸ್ತವದಲ್ಲಿ ಈಗ ಅಷ್ಟು ಮಹತ್ವದ್ದೆ, ಅದಕ್ಕೆ ನಾವು ಅಗತ್ಯಕ್ಕಿಂತ ಹೆಚ್ಚು ಆದ್ಯತೆ ನೀಡಿದ್ದೇವೆಯೆ ಎಂಬುದನ್ನು ನಾವಿಂದು ಪರಿಶೀಲಿಸಿಕೊಳ್ಳಬೇಕಾಗಿದೆ. ಎಸ್.ಎಸ್.ಎಲ್.ಸಿ. ಎಂಬ ಪ್ರಥಮಾಕ್ಷರಗಳಿಂದ ಕರೆಯಲ್ಪಡುವ ಈ ಪರೀಕ್ಷೆಯ ವಿಸ್ತೃತ ರೂಪ ಸೆಕೆಂಡರಿ ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್’ ಎಂಬುದು. ಇದರಲ್ಲಿನ `ಸ್ಕೂಲ್ ಲಿಂವಿಂಗ್ ಸರ್ಟಿಫಿಕೇಟ್’ ಪದಪುಂಜವು ಕೆಲವರಿಗಾದರೂ ಏಕೆ ಸೇರಿಕೊಂಡಿದೆ ಎಂಬ ಕುತೂಹಲವನ್ನು ಹುಟ್ಟಿಸೀತು. ನಾವು ಆ ಹಂತದ ಶಿಕ್ಷಣವನ್ನು ಮುಗಿಸಿದ ಮಕ್ಕಳಿಗೆ ಶಾಲೆಯನ್ನು ಮುಂದುವರೆಸುವ ಅರ್ಹತಾ ಪ್ರಮಾಣಪತ್ರವನ್ನು ಕೊಡುವ ಬದಲು ಶಾಲೆ ಬಿಡುವ ಪ್ರಮಾಣಪತ್ರವನ್ನು ಕೊಡುತ್ತಿದ್ದೇವಲ್ಲ ಅನ್ನಿಸದಿರದು. ನಮ್ಮಲ್ಲಿ ಅನೇಕ ಹೆಸರುಗಳನ್ನು ನಾವು ಪಳೆಯುಳಿಕೆಯ ರೀತಿ ಇಟ್ಟುಕೊಂಡೇ ಮುಂದುವರೆಯುತ್ತೇವೆ. ಅವುಗಳಲ್ಲಿ ಇದು ಕೂಡ ಒಂದು.
ಹಿಂದೆ ಬ್ರಿಟೀಷರು ಭಾರತದಲ್ಲಿ ಇಂಗ್ಲಿಷ್ ಮತ್ತು ವರ್ನಾಕುಲರ್ ಶಿಕ್ಷಣವನ್ನು ಆರಂಭಿಸಿದ ದಿನಗಳಲ್ಲಿ ತಮ್ಮ ಆಡಳಿತಕ್ಕೆ ಗುಮಾಸ್ತರನ್ನು ತಯಾರು ಮಾಡುವುದೇ ಅವರ ಉದ್ದೇಶವಾಗಿತ್ತು. ಆ ಕಾರಣದಿಂದ ಅವರು ಭಾರತದಲ್ಲಿ ಆರಂಭಿಸಿದ ಶಾಲಾ ವ್ಯವಸ್ಥೆಯಲ್ಲಿ ಬಹಳ ದಿನಗಳವರೆಗೆ ಪ್ರೌಢಶಿಕ್ಷಣವೇ ಲಭ್ಯವಿರುವ ಉನ್ನತ ಶಿಕ್ಷಣವಾಗಿತ್ತು. ಇಡೀ ಜಿಲ್ಲೆಗೆ ಒಂದೇ ಒಂದು ಪ್ರೌಢಶಾಲೆ ಜಿಲ್ಲಾಕೇಂದ್ರದಲ್ಲಿರುತ್ತಿತ್ತು. ಒಂದು ಕಾಲಘಟ್ಟದಲ್ಲಿ ಇಡೀ ಒಂದು ಜಿಲ್ಲೆಯಲ್ಲಿ ಇಬ್ಬರೇ ಇಬ್ಬರು `ಹಸಿರುಮಸಿ’ ಅಧಿಕಾರಿಗಳು ಇರುತ್ತಿದ್ದರು. ಅವರೆಂದರೆ ಒಬ್ಬ ಆ ಜಿಲ್ಲೆಯ ಕಲೆಕ್ಟರ್ ಅಂದರೆ ಜಿಲ್ಲಾಧಿಕಾರಿ. ಇನ್ನೊಬ್ಬ ಆ ಜಿಲ್ಲೆಯ ಹೈಸ್ಕೂಲ್ ಹೆಡ್ ಮಾಸ್ಟರ್! ಈ ಹೈಸ್ಕೂಲ್ ಹೆಡ್ ಮಾಸ್ಟರ್ ಹುದ್ದೆ ಎಂತಹ ಘನತೆ ಹೊಂದಿತ್ತು ಎಂದರೆ ಜಿಲ್ಲಾಧಿಕಾರಿಯು ಜಿಲ್ಲೆಯಿಂದ ಹೊರಗೆ ಹೋಗಬೇಕಾದಾಗಲೆಲ್ಲ ಜಿಲ್ಲಾಧಿಕಾರಿಯ ಚಾರ್ಜಿನಲ್ಲಿ ಇರುತ್ತಿದ್ದದ್ದು ಈ ಹೈಸ್ಕೂಲ್ ಹೆಡ್ ಮಾಸ್ಟರ್!! ಕನ್ನಡ ನವೋದಯ ಕಾಲಘಟ್ಟದ ಪ್ರಮುಖ ಲೇಖಕರಾದ `ನಾಗರಹಾವಿನ’ ಪಂಜೆ ಮಂಗೇಶರಾಯರು ಕೊಡಿಗಿನ ಜಿಲ್ಲಾಧಿಕಾರಿಯಾಗಿ ಆಗಾಗ ಕೆಲಸ ಮಾಡುತ್ತಿದ್ದದು ಈ ರೀತಿ ಅವರು ಮಡಿಕೇರಿ ಗೌರ್ಮೆಂಟ್ ಹೈಸ್ಕೂಲ್ ಹೆಡ್ ಮಾಸ್ಟರ್ ಆಗಿದ್ದರಿಂದಲೇ!
ಈ ಎಲ್ಲ ಕಾರಣಗಳಿಂದ ಆಗಿನ ಪ್ರೌಢಶಿಕ್ಷಣಕ್ಕೆ ಈಗಿನ ವಿಶ್ವಿವಿದ್ಯಾಲಯ ಹಂತದ ಶಿಕ್ಷಣದ ಘನತೆಯಿತ್ತು. ಪ್ರೌಢಶಿಕ್ಷಣದ ನಂತರದ ಶಿಕ್ಷಣವನ್ನು ಪಡೆಯಬೇಕಾದರೆ ಬೇರೆ ಬೇರೆ ದೇಶಗಳಿಗೆ ಹೋಗಬೇಕಾಗಿತ್ತು ಬೇರೆ ದೇಶಗಳಿಗೆ ಉನ್ನತ ಶಿಕ್ಷಣ ಪಡೆಯಲು ಹೋಗುವವರು ಬೆರಳೆಣಿಕೆಯಲ್ಲಿರುತ್ತಿದ್ದರು. ಉಳಿದಂತೆ ಬಹುಪಾಲು ಎಲ್ಲರೂ ಪ್ರೌಢಹಂತ ಮುಗಿಸಿ ಶಿಕ್ಷಣವನ್ನು ಬಿಡುತ್ತಿದ್ದರು. ಬಿಡುವಾಗ ಈ `ಲಿವಿಂಗ್ ಸರ್ಟಿಫಿಕೇಟ್’ ಅಥವಾ ಶಾಲೆ ಬಿಡುವ ಪ್ರಮಾಣಪತ್ರವನ್ನು ಕೊಡುವ ಕ್ರಮ ಸರಿಯಾಗಿಯೇ ಇತ್ತು. ಆ ಹಂತದ ಶಿಕ್ಷಣ ಮುಗಿಸಿದವರಿಗೆ ಈಗಿನ ಸಿ ದರ್ಜೆಯ ಹಂತದ ಹುದ್ದೆಗಳು ದೊರೆಯುತ್ತಿದ್ದವು. ಹಾಗಾಗಿ ಈ ಎಸ್.ಎಸ್.ಎಲ್.ಸಿ. ಲಿವಿಂಗ್ ಸರ್ಟಿಫಿಕೇಟಿಗೆ ಈಗಿನ ಪದವಿ ಪ್ರಮಾಣಪತ್ರಕ್ಕಿಂತ ಹೆಚ್ಚಿನ ಬೆಲೆಯಿತ್ತು!
ಈಗ ಪರಿಸ್ಥಿತಿ ಹಾಗಿದೆಯೇ? ಇಲ್ಲ. ಅದಕ್ಕೆ ವಿರುದ್ಧವಾದ ಸ್ಥಿತಿಯಲ್ಲಿದೆ. ಹಳ್ಳಿಹಳ್ಳಿಗೂ ಶಾಲೆ ಕಾಲೇಜುಗಳು ವಿಸ್ತರಣೆಯಾಗಿವೆ. ಈಗ ಎಸ್.ಎಸ್.ಎಲ್.ಸಿ. ಎಂದು ಕರೆಯಲಾಗುವ ಹತ್ತನೆಯ ತರಗತಿ ಕೂಡ ಉಳಿದ ಎಲ್ಲ ತರಗತಿಗಳಂತೆ ಒಂದು ಸಾಮಾನ್ಯ ತರಗತಿಯಾಗಿದೆ. ಹೀಗಾಗಿ ಈ ಪರೀಕ್ಷೆಯೂ ಈಗ ವಾಸ್ತವದಲ್ಲಿ ಅಷ್ಟೇನೂ ಮಹತ್ವದ ಪರೀಕ್ಷೆಯಾಗಿ ಉಳಿದಿಲ್ಲ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ, ಉದ್ಯೋಗ ಮತ್ತಿತರ ಅವಕಾಶಗಳ ಹಿನ್ನಲೆಯಲ್ಲಿ ಹೇಳುವುದಾದರೆ ಅದನ್ನು ಕನಿಷ್ಠ ಅಂಕಗಳನ್ನು ತೆಗೆದುಕೊಂಡು ಉತ್ತೀರ್ಣವಾಗುವ ವಿದ್ಯಾರ್ಥಿಗೂ ಉತ್ರೀರ್ಣವಾಗದ ವಿದ್ಯಾರ್ಥಿಗೂ ಅಷ್ಟೇನೂ ಅಂತರ ಇರುವುದಿಲ್ಲ. ಚಿಕ್ಕಪುಟ್ಟ ನೌಕರಿ ಪಡೆಯಲಿಕ್ಕೂ ಈಗ ಪಿ.ಯು.ಸಿ. ಕನಿಷ್ಠ ಅರ್ಹತೆಯಾಗಿದೆ. ಈಗ ಅದು ಬಹುಪಾಲು `ಪ್ರತಿಷ್ಠಿತ’ ಕಾಲೇಜುಗಳಿಗೆ `ಪ್ರತಿಭಾವಂತರನ್ನ’ ಆಯ್ಕೆಮಾಡಿಕೊಡುವ ಮಾನದಂಡವಾಗಿ ಕೆಲಸವನ್ನು ಮಾಡುತ್ತಿರುವಂತೆ ಕಾಣುತ್ತಿದೆ.
ಈ ಹಂತದಲ್ಲಿಯಾದರೂ ಎಸ್.ಎಸ್.ಎಲ್.ಸಿ.ಗೆ ಇರುವ ಹುಸಿಘನತೆಯನ್ನು ನಾವು ಬಿಟ್ಟುಹಾಕಬೇಕಿದೆ. ಹೊಸ ಶಿಕ್ಷಣ ನೀತಿಯನ್ವಯ ಶಾಲಾಹಂತದ ಪುನರ್ ರಚನಾ ಪ್ರಕ್ರಿಯೆ ತ್ವರಿತಗೊಂಡರೆ ಇದು ಸರಿಯಾಗಬಹುದು. ಉದ್ದೇಶಿತ ಒಂಬತ್ತರಿಂದ ಹನ್ನೆರಡನೆಯ ತರಗತಿಯವರೆಗೆ ಎರಡು ಹಂತದ ಮಾಧ್ಯಮಿಕ ಶಿಕ್ಷಣಕ್ರಮ ಜಾರಿಯಾದರೆ ಈಗ ಕೇಂದ್ರೀಯ ಕ್ರಮದಂತೆ ಹತ್ತನೆಯ ತರಗತಿ ಉಳಿದ ತರಗತಿಗಳಂತೆ ಒಂದು ಸಾಮಾನ್ಯ ತರಗತಿಯಾಗುತ್ತದೆ. ಅದಕ್ಕಿರುವ ಮಹತ್ವ ಹನ್ನೆರಡನೆ ತರಗತಿಗೆ ಸಹಜವಾಗಿ ವರ್ಗಾವಣೆಯಾಗುತ್ತದೆ. ಆದರೆ ಅದನ್ನು ಮಾಡಿಕೊಳ್ಳಲು ಸಧ್ಯಕ್ಕೆ ಆಗದಿದ್ದರೆ ಕೊನೆಯ ಪಕ್ಷ ಎಸ್.ಎಸ್.ಎಲ್.ಸಿ. ಎಂದು ಅದಕ್ಕಿರುವ ಹೆಸರನ್ನಾದರೂ ಬದಲಿಸಿಕೊಳ್ಳಬೇಕು ಎಂದು ನಮಗೆ ಅನ್ನಿಸಬೇಕು. ಏಕೆಂದರೆ ಅದನ್ನು ಮುಗಿಸಿದ ಬಹುಪಾಲು ಮಕ್ಕಳು ಈಗ ಶಾಲೆ ಬಿಡುತ್ತಿಲ್ಲ. ಮುಂದಿನ ವ್ಯಾಸಂಗಕ್ಕೆ ಹೋಗುತ್ತಿದ್ದಾರೆ. ಹೀಗೆ ಶಾಲೆಗೆ ಹೋಗಬೇಕಾದ ಮತ್ತು ಹೋಗಲು ತಯಾರಾಗಿರುವ ಮಕ್ಕಳಿಗೆ ನಾವಿನ್ನೂ ಆ ಹಳೆಯ ಕಾಲದ `ಶಾಲೆಯನ್ನು ಬಿಡುವ’ ಹೆಸರಿನ ಪ್ರಮಾಣಪತ್ರವನ್ನೇ ಕೊಡುತ್ತಿದ್ದೇವೆ! ಇದು ಎಷ್ಟರ ಮಟ್ಟಿಗೆ ಸರಿ? ಅದರ ಬದಲು ಪ್ರೌಢಹಂತವನ್ನು `ಪೂರೈಸಿರುವ’ `ಮುಂದಿನ ಶಿಕ್ಷಣಕ್ಕೆ ಅರ್ಹತೆ ಪಡೆದಿರುವ’ ಇತ್ಯಾದಿ ಅರ್ಥಗಳು ಬರುವಂತೆ ಅದನ್ನು ಬದಲಿಸುವುದು ಉಚಿತವಲ್ಲವೆ?
`ಹೆಸರಿನಲ್ಲಿ ಏನಿದೆ’ ಎಂದು ಕೆಲವರು ಕೇಳಬಹುದು. ಆದರೆ `ಹೆಸರಿನಲ್ಲಿ ಏನಿಲ್ಲ ಹೇಳಿ?’ ಕನ್ನಡದ ಹಿರಿಯ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಪದ್ಯದ ನಾಲ್ಕು ಸಾಲು ನಮ್ಮ ನಿಲುವು ದೋರಣೆಗಳನ್ನು ಹೇಳುವುದು ಹೀಗೆ:

ಅಪ್ಪ ನೆಟ್ಟ ಆಲದ ಗಿಡ
ಮಗನ ಕಾಲಕ್ಕೆ ಬರಿ ಬುಡ
ಮೊಮ್ಮಗನಿಗಿಲ್ಲ ಅದರ ಕಲ್ಪನೆ ಕೂಡ
ಹೀಗೇ ಬೆಳೆದಿದ್ದೇವೆ ನಾವು
*****
ಡಾ. ರಾಜೇಂದ್ರ ಬುರಡಿಕಟ್ಟಿ
Wednesday, July 08, 2020