Thursday, May 26, 2022

ಎಸ್.ಎಸ್.ಎಲ್.ಸಿ. ಫಲಿತಾಂಶ: ಕೆಸರು ಕಪ್ಪೆ ಕೊಂಡಾಟ ಮತ್ತು ಪಾದುಕಾ ಪೂಜೆ!

 ಎಸ್.ಎಸ್.ಎಲ್.ಸಿ. ಫಲಿತಾಂಶ: ಕೆಸರು ಕಪ್ಪೆ ಕೊಂಡಾಟ ಮತ್ತು ಪಾದುಕಾ ಪೂಜೆ!

ವರ್ಷದ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗಿ ಒಂದು ವಾರ ಕಳೆಯಿತು. ಉದ್ದೇಶಪೂರ್ವಕವಾಗಿ ಒಂದು ವಾರದ ನಂತರ ಲೇಖನ ಬರೆಯುತ್ತಿದ್ದೇನೆ. ಫಲಿತಾಂಶ ಬಂದ ವಾರ ಸಹಜವಾಗಿ ಅಭಿನಂಧನೆಗಳು, ಕೊಂಡಾಟ ಮೊಂಡಾಟಗಳು, ಬೆನ್ನುತಟ್ಟಿಕೊಳ್ಳುವ ಚಟುವಟಿಕೆಗಳಿಂದ ಮಾಧ್ಯಮಗಳು ತುಂಬಿಹೋಗುವುದರಿಂದ ಇಡೀ ಶಿಕ್ಷಣ ಕ್ಷೇತ್ರವನ್ನು ಒಂದು ರೀತಿಯ ಮಹಾಪೂರ ಆವರಿಸಿರುತ್ತದೆ. ಮಹಾಪೂರ ಇಳಿದ ಮೇಲೆ ಕೆಲವರನ್ನಾದರೂ ಚಿಂತನೆಗೆ ಹಚ್ಚಬಹುದೇನೋ ಎಂಬ ಆಶಯ ಲೇಖನದ್ದೇ ಹೊರತು ಇಡೀ ವ್ಯವಸ್ಥೆಯನ್ನಾಗಲೀ ಯಾವುದೇ ವ್ಯಕ್ತಿಯನ್ನಾಗಲಿ ಟೀಕಿಸುವುದಲ್ಲ ಎಂಬುದನ್ನು ಆರಂಭದಲ್ಲಿಯೇ ಸ್ಪಷ್ಟಪಡಿಸುತ್ತೇನೆ ಮತ್ತು  ಪ್ರಾಮಾಣಿಕವಾಗಿ ಶ್ರಮಪಟ್ಟು ಪಾಠಮಾಡಿ ಉತ್ತಮ ಫಲಿತಾಂಶ ಪಡೆದ ಶಿಕ್ಷಕರು ಇಲ್ಲಿಯ ನಕಾರಾತ್ಮಕ ಅಂಶಗಳು ತಮಗೆ ಸಂಬಂಧಿಸಿದ್ದಲ್ಲವೆಂದು ಭಾವಿಸಲು ಕೋರುತ್ತೇನೆ. ಹಾಗೆ ಮಾಡದೇ ಇದು ಶಿಕ್ಷಕ ಸಮುದಾಯಕ್ಕೇ ಮಾಡುವ ಅವಮಾನವೆಂದು ಅವರೇನಾದರೂ ಗ್ರಹಿಸಿದರೆ ಇಡೀ ಲೇಖನದ ಆಶಯವೇ ಬುಡಮೇಲಾಗುತ್ತದೆ ಎಂಬುದನ್ನು ವಿನಮ್ರವಾಗಿ ಸೂಚಿಸಬಯಸುತ್ತೇನೆ.

ಮೊಟ್ಟಮೊದಲನೆಯದಾಗಿ ವರ್ಷವಿಡೀ ಶ್ರಮಪಟ್ಟು ನಿಷ್ಟೆಯಿಂದ ಮಕ್ಕಳಿಗೆ ಭೋಧನೆಮಾಡಿ ಒಳ್ಳೆಯ ಫಲಿತಾಂಶ ತಂದುಕೊಂಡು ಧನ್ಯತೆ ಅನುಭವಿಸುತ್ತಿರುವ ಶಿಕ್ಷಕ ಶಿಕ್ಷಕಿಯರನ್ನು ಅತ್ಯಂತ ಗೌರವದಿಂದ ಅಭಿನಂಧಿಸುತ್ತೇನೆ. ಅನಂತರವೇ ಮುಂದಿನ ವಿಷಯಕ್ಕೆ ಬರುತ್ತಿದ್ದೇನೆ. ಇವತ್ತಿನ ರಾಜ್ಯ ಪತ್ರಿಕೆಯೊಂದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಮನಗರದಲ್ಲಿ ನಡೆದಿದೆ ಎನ್ನಲಾದ ಹಗರಣವೊಂದರ ಬಗ್ಗೆ ಮುಖಪುಟವರದಿಮಾಡಿದೆ. ರಾಜ್ಯವ್ಯಾಪಿ ಸುದ್ಧಿಮಾಡಿರುವ ಪಿ.ಎಸ್. ಆಯ್ಕೆ ಹಗರಣ ತನಿಖೆಯ ಮುಂದುವರೆದ ಭಾಗವಾಗಿ ಹಗರಣ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಅಲ್ಲಿನ ಶಿಕ್ಷಕರು ಪರೀಕ್ಷಾ ಕೆಂದ್ರದ ಮುಖ್ಯಸ್ಥರು ಸೇರಿಕೊಂಡು ಪ್ರಶ್ನೆಪತ್ರಿಕೆಗೆ ತಜ್ಞ ಶಿಕ್ಷಕರಿಂದ ಉತ್ತರ ಬರೆಸಿ ಪರೀಕ್ಷಾ ಕೊಠಡಿಗಳಿಗೆ ಕಳಿಸಿ ಬರೆಸಿದ್ದಾರಂತೆ. ಬರೀ ರಾಮನಗರದ ಕಥೆ ಇದಾಗಿದ್ದರೆ ನಾನು ಲೇಖನವನ್ನು ಬರೆಯುತ್ತಿರಲಿಲ್ಲ. ಇಂಥ ಅಯೋಗ್ಯ ಕೆಲಸಗಳು ಬಹಳಷ್ಟು ಕಡೆ ಬೆಳಕಿಗೆ ಬಂದಿಲ್ಲ ನಿಜ. ಆದರೆ ನಡೆದಿಲ್ಲ ಎಂಬುದು ನಿಜವಲ್ಲ.

ಕೆಸರು ನೀರು ಮತ್ತು ಶುದ್ಧಜಲ

ವರ್ಷ ಉತ್ತಮ ಫಲಿತಾಂಶ ಬಂದದ್ದು ಒಬ್ಬ ಶಿಕ್ಷಕನಾಗಿ ನನಗಂತೂ ಖುಷಿಕೊಡಲಿಲ್ಲ. ಇದಕ್ಕೆ ಕಾರಣ ಫಲಿತಾಂಶ ಬಹಳ ಕಡೆ ಪ್ರಾಮಾಣಿಕ ಪ್ರತಿಫಲದಿಂದ ಬಂದ ಫಲಿತಾಂಶವಾಗಿಲ್ಲ ಎಂಬುದು. ಕೆಲವು ಶಾಲೆಗಳಿಗಂತೂ ಮಳೆಗಾಲದಲ್ಲಿ ಮಹಾಪೂರ ಬಂದು ಕೊಳಚೆನೀರೆಲ್ಲ ಮನೆನುಗ್ಗುವಂತೆ ಎರ್ರಾಬಿರ್ರಿ ಫಲಿತಾಂಶ ಬಂದಿದೆ. ಸಾರೆ ಒಟ್ಟಾರೆ ರಾಜ್ಯದಲ್ಲಿ ಉತ್ತಮ ಫಲಿತಾಂಶ ಬರಲು ಉತ್ತಮ ಶಿಕ್ಷಕರಿಗಿಂತ ಕೆಟ್ಟ ಶಿಕ್ಷಕರ ಕೊಡುಗೆಯೇ ಹೆಚ್ಚೇನೋ ಅನಿಸುತ್ತಿದೆ. ಅನೇಕ ಕಡೆ ಫಲಿತಾಂಶ ಅಸಹಜತೆಯಿಂದ ಕೂಡಿದ್ದನ್ನು ನಾವು ಸಮೀಕ್ಷೆ ವಿಶ್ಲೇಷಣೆ ಮಾಡಿ ತಿಳಿಯಬಹುದಾಗಿದೆ. ನಮ್ಮ ನಿರೀಕ್ಷೆಗಿಂತ ಅತ್ಯಂತ ಕಡಿಮೆ ಫಲಿತಾಂಶ ಬಂದಾಗ ನಮಗೆ ಹೇಗೆ ನೋವಾಗುತ್ತದೆಯೋ ಹಾಗೆಯೇ ನಿರೀಕ್ಷೆಗಿಂತ ಅತ್ಯಂತ ಹೆಚ್ಚು ಫಲಿತಾಂಶ ಬಂದಾಗಲೂ ನೋವಾಗಬೇಕು! ಏಕೆಂದರೆ ಇವುಗಳಲ್ಲಿ ಮೊದಲನೆಯದು ಲೋ ಬಿಪಿ ಆದರೆ ಎರಡನೆಯದು ಹೈ ಬಿಪಿ. ಎರಡೂ ಕಾಯಿಲೆಗಳೇ!

ಪ್ರಶ್ನೆಪತ್ರಿಕೆಗಳನ್ನು ಅಗತ್ಯಮೀರಿ ಸರಳೀಕರಿಸುವುದು, ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಅಕ್ರಮಗಳು, ಮೌಲ್ಯಮಾಪನದ ಔದಾರ್ಯ, ಇಂತಹ ಅಂಶಗಳು ಅನೇಕ ವೇಳೆ ಫಲಿತಾಂಶವನ್ನು ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚು ಎತ್ತರಕ್ಕೆ ಒಯ್ಯುತ್ತವೆ. ವರ್ಷದ ಇಂತಹ ಹೈಬಿಪಿ ಫಲಿತಾಂಶಕ್ಕೂ ಇಂಥದ್ದೇ ಅಂಶಗಳು ಹೆಚ್ಚು ಕಾರಣವಾದದ್ದು ಎಂಬುದನ್ನು ನಾವು ಗಮನಿಸಿಬೇಕು.  ಪ್ರಶ್ನೆಪತ್ರಿಕೆಯ ಮಿತಿಮೀರಿದ ಸರಳತೆ ಸಾರ್ವಜನಿಕವಾಗಿ ಎದ್ದು ಕಾಣುವುದರಿಂದ ಅದನ್ನಿಲ್ಲಿ ನಾನು ವಿಸ್ತರಿಸುತ್ತಿಲ್ಲ. ಇನ್ನು ಮೌಲ್ಯಮಾಪನ. ಇದರ ಕಥೆ ಇವತ್ತು ಯಾವ ಅಧೋಗತಿಗೆ ಇಳಿದುಬಿಟ್ಟಿದೆ ಎಂಬುದನ್ನು ನೆನಸಿಕೊಂಡರೆ ಖೇಧವೆನಿಸುತ್ತದೆ. ಇದಕ್ಕೆ ಶಿಕ್ಷಕರಷ್ಟೇ ಕಾರಣ ಅಲ್ಲ ನಿಜ. ಹಾಗಂತ ಅವರು ಕಾರಣವೇ ಅಲ್ಲ ಎನ್ನಲಾಗದು. ನಾನು ಮುಖ್ಯವಾಗಿ ಲೇಖನದಲ್ಲಿ ಮೂರನೆಯ ಮತ್ತು ಕೊನೆಯದಾದ ಪರೀಕ್ಷಾ ಅಕ್ರಮಗಳ ಬಗ್ಗೆ ತುಸು ದೀರ್ಘವಾಗಿ ಹೇಳಬೇಕಾಗಿರುವುದರಿಂದ ಮೌಲ್ಯಮಾಪನದ ಕಥೆಯನ್ನು ಇಲ್ಲಿಯೇ ಮೊಟಕುಗೊಳಿಸುತ್ತೇನೆ.


ರಾಮನಗರದ ಹಗರಣದ ವಿವರಣೆಗಳನ್ನು ನೋಡಿದರೆ ಅಂತಹ ಅನೇಕ ಪ್ರಕರಣಗಳು ಬಹಳಷ್ಟುಕಡೆ ನಡೆದೂ ಬೆಳಕಿಗೆ ಬಂದಿಲ್ಲದಿರಬಹುದು. ಅನೇಕ ಕೇಂದ್ರಗಳಲ್ಲಿ (ಎಲ್ಲ ಅಲ್ಲ) ಪರೀಕ್ಷಾ ಅಕ್ರಮಗಳನ್ನು ಶಿಕ್ಷಕರೇ ಮುಂದೆ ನಿಂತು ನಡೆಸುವುದನ್ನು ನೋಡಿ, ಕೇಳಿ ಮೂವತ್ತು ವರ್ಷಗಳ ಕಾಲ ಶಿಕ್ಷಕನಾಗಿ ಕಾರ್ಯನಿರ್ವಹಿಸಿದ ನನಗೆ ಸಹಜವಾಗಿಯೇ ಅವರ ಮೇಲೆ ಸಾತ್ವಿಕ ಕೋಪ (ದ್ವೇಷವಲ್ಲ). ಉಂಟಾಗುತ್ತದೆ. ನಮ್ಮ ಶಿಕ್ಷಕರೇಕೆ ಇಂತಹ ಕೆಟ್ಟ ಕೆಲಸಗಳಿಗೆ ಕೈಹಾಕಿ ಇಡೀ ಶಿಕ್ಷಕ ಸಮುದಾಯಕ್ಕೆ ಕೆಟ್ಟ ಹೆಸರು ತರುತ್ತಾರೆ ಎಂದು ಕಿರಿಕಿರಿಯಾಗುತ್ತದೆ. ಅನೇಕ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರೇ ಅಕ್ಕಪಕ್ಕದ ಶಾಲೆಗಳಿಂದತಜ್ಞಶಿಕ್ಷಕರನ್ನು ಕರೆಸಿಕೊಂಡು ಅವರಿಂದ ಉತ್ತರ ಬರೆಸಿಕೊಂಡು ಕೊಠಡಿಗಳಿಗೆ ಕಳಿಸಿಕೊಡುವುದೂ ಉಂಟು.

ಹೀಗಾಗಿ ಇಂಗ್ಲಿಷಿನಲ್ಲಿ ಒಂದು ವಾಕ್ಯವನ್ನು ಬರೆಯಲಾಗದವರು ವಿಷಯದಲ್ಲಿ ಅರವತ್ತು ಎಪ್ಪತ್ತು ಅಂಕಗಳನ್ನು ಪಡೆಯುವುದೂ ಗಣಿತದ ಮೂಲಕ್ರಿಯೆಗಳನ್ನೇ ಮಾಡಲಾಗದ ಮಕ್ಕಳು ಗಣಿತದಲ್ಲಿ ದೊಡ್ಡ ಮಟ್ಟದ ಅಂಕಗಳನ್ನು ಪಡೆಯುವುದೂ ಸಾಧ್ಯವಾಗಿಬಿಡುತ್ತದೆ. ಉಳಿದ ವಿಷಯಗಳೂ ಇದಕ್ಕೆ ಹೊರತಲ್ಲ. ಹೀಗಾಗಿ ನಾನು ಕೇಳಿದ ಅನೇಕ ಶಾಲೆಗಳಲ್ಲಿ ಫೇಲಾಗಬೇಕಾದ ಮಕ್ಕಳೆಲ್ಲರೂ ಪಾಸಾಗಿದ್ದಾರೆ. ಮೂವತ್ತು ನಲವತ್ತು ಅಂಕ ಪಡೆದು ಪಾಸಾಗಬೇಕಾದವರು ಎಪ್ಪತ್ತು ಎಂಬತ್ತು ಅಂಕ ಪಡೆದುಕೊಂಡಿದ್ದಾರೆ. ಅಲ್ಲಿ ಇರಬೇಕಾವರು ಗರಿಷ್ಠಮಿತಿ ನೂರಕ್ಕೆ ನೂರರ ಗಡಿರೇಖೆ ಮುಟ್ಟಿದ್ದಾರೆ. ಹೀಗೆ ಬರುವ ಫಲಿತಾಂಶವನ್ನು ಹಿಡಿದುಕೊಂಡು ನಾವು ನಮ್ಮ ಶಿಕ್ಷಣ ವ್ಯವಸ್ಥೆ ಸುಧಾರಿಸುತ್ತಿದೆ ಎಂದುಕೊಂಡರೆ ನಮ್ಮಂಥ ಮೂರ್ಖರೇ ಇಲ್ಲವೆನ್ನಬೇಕಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಕೆಸರು ನೀರು ಮತ್ತು ಶುದ್ಧಜಲಗಳ ವ್ಯತ್ಯಾಸ ಸ್ಪಷ್ಟವಾಗಿ ತಿಳಿದಿರಬೇಕಾದದ್ದು ಅಪೇಕ್ಷಣೀಯ.

ನಿಜವಾದ ಶಿಕ್ಷಕರು ನಿಜವಾದ ಶಿಕ್ಷಕರು ಹೇಗಿರುತ್ತಾರೆ?

ನಿಜವಾದ ಶಿಕ್ಷಕರು ಪಾಠಮಾಡುವಾಗ ತಾಯಿಯಂತೆ, ಪರೀಕ್ಷಾ ಕೊಠಡಿಯಲ್ಲಿ ಪೋಲೀಸ್ ಇನಸ್ಪೆಕ್ಟರಂತೆ, ಮೌಲ್ಯಮಾಪನ ಮಾಡುವಾಗ ನ್ಯಾಯಾಧೀಶರಂತೆ ಕಾರ್ಯ ನಿರ್ವಹಿಸಬೇಕು. ಆದರೆ ನಮ್ಮಲ್ಲಿ ಅನೇಕರು ಪಾಠಮಾಡುವಾಗ ಪೋಲೀಸರಂತೆ ಇದ್ದು ಪರೀಕ್ಷಾ ಕೊಠಡಿಯಲ್ಲಿ ತಾಯಿಯಾಗಿಬಿಡುತ್ತಾರೆ. ಇನ್ನು ಮೌಲ್ಯಮಾಪನ ಮಾಡುವಾಗ ನ್ಯಾಯಾಧೀಶರಂತೆ ಇರದೆಜಳ್ಳುಪತ್ರಿಕೆ’ಗಳನ್ನುತಳ್ಳುಸೇವೆ’ ಮೂಲಕ ಸಾಗುಹಾಕುವಸುಗಮಕಾರರಾಗಿಬಿಡುತ್ತಾರೆ! ಇಂಥವರಿಂದ ಶಿಕ್ಷಣ ವ್ಯವಸ್ಥೆಯ ಸುಧಾರಣೆಯಾಗುವುದಿರಲಿ ಇರುವ ಸ್ಥಿತಿಕೂಡ ಅಧೋಗತಿಗಿಳಿಯುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.

ನಾವು ಬೇರೆ ಯಾರಾದರೂ ತಪ್ಪು ಮಾಡಿದರೆ ಸಹಿಸಿಕೊಳ್ಳಬಹುದು. ಆದರೆ ಶಿಕ್ಷಕರು ತಪ್ಪುಗಳನ್ನು ಮಾಡಿದರೆ ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಏಕೆಂದರೆ ಸಮಾಜ ಇನ್ನು ಸಾವಿರ ವರ್ಷಕ್ಕೆ ಸರಿಯಾಗುವುದಾದರೂ ಅದಕ್ಕೆ ಇರುವುದು ಒಂದೇ ದಾರಿ. ಅದು ಶಿಕ್ಷಣ. ದಾರಿಯ ದ್ವಾರಬಾಗಿಲಿನಲ್ಲಿ ನಿಂತವರು ಶಿಕ್ಷಕರು! ಇಂತಹ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿಕ್ಷಕರು ಇಂತಹ ಕೆಟ್ಟ ಕೆಲಸದಲ್ಲಿ ತೊಡಗಬಾರದು. ಹೀಗೆ ತೊಡಗುವವರು ಬಹುಶಃ ಸರಿಪಡಿಸಲು ಸಾಧ್ಯವಾಗದಷ್ಟು ಕೆಟ್ಟುಹೋದವರೇ ಆಗಿರುತ್ತಾರೆ. ಇಂತಹವರನ್ನು ಸರಿದಾರಿಗೆ ತರುವುದು ಸಮಾಜಕ್ಕೆ ಎಷ್ಟರಮಟ್ಟಿಗೆ ಸರಿಯಾಗುತ್ತದೆಯೋ ಆದರೆ ಪರೀಕ್ಷಾ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುವುದು ಮಕ್ಕಳ ಮಾತ್ರವಲ್ಲ ಸಮಾಜ ಮತ್ತು ದೇಶದ ಭವಿಷ್ಯದ ದೃಷ್ಟಿಯಿಂದ ಕೂಡ ಅತ್ಯಂತ ಅಗತ್ಯವಾದದ್ದು.

ಕೆಲಸಗಳನ್ನು ಹೇಗೆ ಮಾಡಬಹುದು? ಮೊಟ್ಟಮೊದಲನೆಯದಾಗಿ ಸಮಾಜ ಶಿಕ್ಷಕರೆದಂರೆ ದೇವರ ಸಮಾನ ಎಂದು ಎಲ್ಲ ಶಿಕ್ಷಕರಿಗೂಹುಂಬುಗೌರವಕೊಡುವುದನ್ನು ನಿಲ್ಲಿಸಬೇಕು. ಯಾವುದೋ ಕಾಲದಲ್ಲಿ ರಚಿತವಾದ ಗುರುಬ್ರಹ್ಮ ಗುರುವಿಷ್ಣು, ಗುರುದೇವೋ ಮಹೇಶ್ವರಎಂಬ ಶ್ಲೋಕ ಪಠಿಸುತ್ತಾ ಶಿಕ್ಷಕರೆಂದರೆ ಸಾಕ್ಷಾತ್ ದೇವರು ಎಂದು ತಿಳಿದು ಅವರ ಬಗ್ಗೆಆರಾಧನಾ ಮನೋಭಾವನೆ’ಯನ್ನು ತಳೆಯುವುದನ್ನು ಬಿಟ್ಟುಚಿಕಿತ್ಸಕ ಮನೋಭಾವನೆ’ಯನ್ನು ತಳೆಯಬೇಕು. ಶ್ಲೋಕದ ಕಾಲಕ್ಕೆ ಎಲ್ಲ ಶಿಕ್ಷಕರೂ ಒಳ್ಳೆಯವರಾಗಿದ್ದರೂ ಇದ್ದಿರಬಹುದು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ ಎಂಬ ವಾಸ್ತವನ್ನು ಅರ್ಥಮಾಡಿಕೊಳ್ಳಬೇಕು. ಶಿಕ್ಷಣ ಕ್ಷೇತ್ರ ಪವಿತ್ರವಾದದ್ದೆಂಬುದು ಸುಳ್ಳಲ್ಲ. ಆದರೆ ಅಲ್ಲಿರುವ ಶಿಕ್ಷಕರೆಲ್ಲರೂ ಪವಿತ್ರಾತ್ಮರು ಎಂಬುದು ನಿಜವಲ್ಲ! ಹಾಗಾಗಿ ಅವರನ್ನೂ ಮನುಷ್ಯರು ಎಂದು ಬಗೆದು ಒಳ್ಳೆಯವರಿಗೆ ಗೌರವನ್ನೂ ಕೆಟ್ಟು ಕೆಟ್ಟವರಿಗೆ ಗೌರವ ಕೊಡುವುದನ್ನು ನಿಲ್ಲಿಸಬೇಕು.

ದುಷ್ಟಶಿಕ್ಷಕರ ನಿಯಂತ್ರಣ: ಮೂರು ದಾರಿಗಳು

ಪರೀಕ್ಷಾ ಅಕ್ರಮಗಳನ್ನು ತಡೆಯಲು ಮುಖ್ಯವಾಗಿ ಮುಖ್ಯವಾಗಿ ಇಂತಹ ಶಿಕ್ಷಕರನ್ನು ಸುಧಾರಿಸುವುದು ಸಾಧ್ಯವಿಲ್ಲದಿದ್ದಲ್ಲಿ ಇವರ ಹಾವಳಿ ನಿಯಂತ್ರಿಸಲಾದರೂ ನಾವು ಕ್ರಮಕೈಗೊಳ್ಳಬೇಕಾಗುತ್ತದೆ. ಅದನ್ನು ಮುಖ್ಯವಾಗಿ ಮೂರು ರೀತಿಯಲ್ಲಿ ಮಾಡಬಹುದು ಎಂಬುದು ನನ್ನ ಸಲಹೆ. ಮೊದಲನೆಯದೆಂದರೆ ಅದು ಇಲಾಖೆಯ ಅಧಿಕಾರಿಗಳು ಮಾಡಬೇಕಾದ್ದು. ಪರೀಕ್ಷಾ ಅಕ್ರಮಗಳಲ್ಲಿ ತೊಡಗುವ ಶಿಕ್ಷಕರನ್ನು ಪತ್ತೆಹಚ್ಚಿ ಅಂತಹವರ ಮೇಲೆ ಕಠಿಣ ಕ್ರಮವನ್ನು ಅವರು ಜರುಗಿಸಬೇಕು. ಆದರೆ ಇದು ಹೇಳಲು ಮತ್ತು ಕೇಳಲು ಚೆನ್ನಾಗಿದೆ. ಆದರೆ ಇದರ ಬಗ್ಗೆ ನಾವು ಎಷ್ಟರ ಮಟ್ಟಿಗೆ ಭರವಸೆ ಇಟ್ಟುಕೊಳ್ಳಬಹುದು? ಅನೇಕ ಅಧಿಕಾರಿಗಳು ಶಾಲೆಗಳಿಗೆ ಬಂದಾಗಏನಾದರೂ ಮಾಡಿ ಸಲ ಇಷ್ಟು ಪರ್ಶೆಂಟ್ ರಿಜಲ್ಟ್ ಕೊಡಿಎಂದು ಶಿಕ್ಷಕರಿಗೆ ಹೇಳುವುದು ತೀರಾ ಸಾಮಾನ್ಯ. ಇಲ್ಲಿ ಅವರು ಬಳಸುವಏನಾದರೂ ಮಾಡಿಎಂಬ ಪದಪುಂಜವನ್ನು ನಾವು ಹೇಗಾದರೂ ಅರ್ಥಮಾಡಿಕೊಳ್ಳಬಹುದಾಗಿದೆ.

ಇನ್ನು ಎರಡನೆಯದು. ಶಿಕ್ಷಣ ಕ್ಷೇತ್ರದಲ್ಲಿರುವ ಒಳ್ಳೆಯ ಶಿಕ್ಷಕರು ಮಾಡಬಹುದಾದಂಥದ್ದು. ನಾನು ಗಮನಿಸಿದಂತೆ ಇಂತಹ ಕೆಟ್ಟ ಕೆಲಸದಲ್ಲಿ ತೊಡಗಿಕೊಂಡ ಶಿಕ್ಷಕರ ಸಂಖ್ಯೆ ಈಗಲೂ ಬಹಳ ದೊಡ್ಡ ಪ್ರಮಾಣದಲ್ಲಿ ಇಲ್ಲ. ಆದರೂ ಅವರ ಕಾರ್ಯ ಮಾಡುವ ಪರಿಣಾಮ ಚಿಕ್ಕದಲ್ಲ. ಇಂತಹ ಕೆಟ್ಟ ಶಿಕ್ಷಕರು ತಾವು ಮಾಡಿದ ಇಂತಹ ಕೆಟ್ಟ ಕೆಲಸಗಳನ್ನು ನಾಚಿಕೆ, ಮಾನ ಮರ್ಯಾದೆಗಳನ್ನು ಬಿಟ್ಟು ರಾಜಾರೋಷವಾಗಿ ಹೇಳಿಕೊಳ್ಳವಷ್ಟು ಮಾನಗೇಡಿಗಳಾಗಿರುತ್ತಾರೆ. ಇಂತಹ ಅಪಮಾರ್ಗದಿಂದ ತಾವು ಪಡೆದ ಫಲಿತಾಂಶವನ್ನೂ ಫೋಟೋಗಳನ್ನೂ ಸಾಮಾಜಿಕ ಜಾಲತಾಣದ ಗುಂಪುಗಳಲ್ಲಿ ಹಾಕಿಕೊಂಡು ಪರಸ್ಪರ ಅಭಿನಂದನೆ, ಶುಭಾಶಯಗಳ ಕೊಂಡಾಟದಲ್ಲಿ ತೊಡಗಿರುತ್ತಾರೆ. ಇದು ಥೇಟ್ ಕೆಸರುಗುಂಡಿಯಲ್ಲಿನ ಕಪ್ಪೆಗಳು ಪರಸ್ಪರ ಮೈಗೆ ಕೆಸರನ್ನು ಎರಚಿಕೊಂಡು ಸಂಭ್ರಮಪಡುವಂತೆಯೇ ಇರುತ್ತದೆ! ಇಂತಹ ಕಾರ್ಯಗಳನ್ನು ಸ್ಟಾಪ್ ರೂಮ್ ಗಳಲ್ಲಿ ಇವರು ಮಾಡುವಾಗ ಒಳ್ಳೆಯ ಶಿಕ್ಷಕರು ಇವರಿಗೆ ಛೀಮಾರಿ ಹಾಕಬೇಕೆ ಹೊರತು ಅವರು ಹೇಳಿದ್ದಕ್ಕೆ ಪಕಪಕ ಹಲ್ಲುಬಿಡುತ್ತಾ ಬೆಂಬಲ ಸೂಚಿಸಬಾರದು. ಇಂತಹ ಕೆಟ್ಟ ಕೆಲಸಗಳನ್ನು ಮಾಡಿದ ಶಿಕ್ಷಕ ಅಥವಾ ಶಿಕ್ಷಕಿ  ತಮ್ಮ ಪಕ್ಕದಲ್ಲಿದ್ದಾಗ ನಾನು ಹೇಸಿಗೆಯ ಪಕ್ಕ ನಿಂತಿದ್ದೇನೆ ಎಂಬ ಭಾವನೆ ಒಳ್ಳೆಯ ಶಿಕ್ಷಕರಿಗೆ ಮೂಡಬೇಕು.  ಅಷ್ಟೂ ಮಾಡದಿದ್ದರೆ ಒಳ್ಳೆಯವರ ಕೊಡುಗೆ ಸುಧಾರಣೆಗೆ ಏನೂ ಇಲ್ಲದಂತಾಗುತ್ತದೆ.

ಮೂರನೆಯದು ಮತ್ತು ಕೊನೆಯದು ಶಿಕ್ಷಕರಿಗೆ ಅನ್ನ ನೀಡುವ ದೇವರಾದ ಮಕ್ಕಳೇ ಮಾಡುವಂಥದ್ದು ಮತ್ತು ಅತ್ಯಂತ ಪರಿಣಾಮಕಾರಿಯಾಗಿರುವಂಥದ್ದು. ಮಕ್ಕಳು ಏನು ಮಾಡಬಹುದು? ಪರಿಕ್ಷಾ ಕೊಠಡಿಯಲ್ಲಿರುವ ಮಕ್ಕಳಲ್ಲಿ ಎಲ್ಲ ಮಕ್ಕಳೂ ಓದುವಲ್ಲಿ ಬೇಜವಾಬ್ದಾರಿಯಿಂದ ಬಂದು ಅವರಂತೆಯೇ ಬೇಜವಾಬ್ದಾರಿತೋರಿ ಅಪಮಾರ್ಗದಿಂದ ಶಿಕ್ಷಕರಾದ ಕೆಟ್ಟ ಶಿಕ್ಷಕರು ಕೊಡುವಬಿಕ್ಷೆಗಾಗಿ ಕಾಯುತ್ತಿರುವುದಿಲ್ಲ. ನಮ್ಮಲ್ಲಿ ಒಳ್ಳೆಯ ಶಿಕ್ಷಕರು ದೊಡ್ಡಪ್ರಮಾಣದಲ್ಲಿ ಇರುವುದರಿಂದ ಅವರಿಂದ ತಯಾರಾದ ಒಳ್ಳೆಯ ಮಕ್ಕಳೂ ಇರುತ್ತಾರೆ. ಅಂತಹ ಮಕ್ಕಳಲಿ ಒಂದು ಮಗು (ಒಂದೇ ಒಂದು ಮಗು) ಹೀಗೆ ಉತ್ತರಗಳನ್ನು ಹೇಳಿಕೊಡಲು ಪರೀಕ್ಷಾ ಕೊಠಡಿಯ ಒಳಗೆ ಇಂತಹ ಕೆಟ್ಟ ಶಿಕ್ಷಕ ಅಥವಾ ಶಿಕ್ಷಕಿ ಬಂದು ತಮ್ಮ ಕೆಲಸವನ್ನು ಮಾಡತೊಡಗುತ್ತಿದ್ದಂತೆಯೇ ಮೆಲ್ಲನೆ ಎದ್ದು ತಮ್ಮ ಕಾಲಿನ ಚೆಪ್ಪಲಿಯನ್ನು ತೆಗೆದುಕೊಂಡು ಆತನ ಅಥವಾ ಆಕೆಯ ಮುಖಕ್ಕೆ ಎಸೆದುಬಿಡಬೇಕು, ಪೂಜ್ಯಭಾವನೆಯಿಂದ ದೇವರ ಮೂರ್ತಿಗೆ ಹೂವನ್ನು ಹಾಕುವಂತೆ!!!

 *****

ರಾಜೇಂದ್ರ ಬುರಡಿಕಟ್ಟಿ

26-05-2022