Thursday, November 2, 2017

ವಿಧಾನಸೌಧ ನಿರ್ಮಾಣ; ಆಗಲಿತ್ತೇ ಕೆಂಗಲ್ ಹತ್ಯೆ?

ವಿಧಾನಸೌಧ ನಿರ್ಮಾಣ; ಆಗಲಿತ್ತೇ ಕೆಂಗಲ್ ಹತ್ಯೆ?
ನಮ್ಮ ವಿಧಾನಸೌಧ ನಿರ್ಮಾಣಕ್ಕೆ ಅರವತ್ತು ವರ್ಷಗಳು ತುಂಬಿದ ಹಿನ್ನಲೆಯಲ್ಲಿ ವಜ್ರಮಹೋತ್ಸವದ ಆಚರಣೆಯ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ಇಂದು ತಾನೆ (25-10-2017) ನಡೆದಿದೆ. ಈ ಭವ್ಯಕಟ್ಟಡಕ್ಕೆ ಆಗಿನ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಶಂಕುಸ್ಥಾಪನೆ ಮಾಡಿದ್ದರೆ ಈಗಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ವಜ್ರಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ಮಹೋತ್ಸವದ ನಿಮಿತ್ತ ವಿಧಾನಸೌಧದ ನಿರ್ಮಾಣದ ಕಾಲಘಟ್ಟದ ಕೆಲವು ಮುಖ್ಯಸಂಗತಿಗಳನ್ನು ನೆನಪುಮಾಡಿಕೊಳ್ಳುವ ಬಹುಮುಖ್ಯಕಾರ್ಯವೂ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ, ಬಹುಶಃ ಪ್ರಚಾರಕ್ಕೆ ಬರಲೇ ಇಲ್ಲ ಎಂಬಂತಿರುವ, ಆ ಕಾಲಘಟ್ಟದ ಒಂದು ಮುಖ್ಯಘಟನೆ ಮತ್ತು ಅದರ ಸುತ್ತಮುತ್ತಲ ವಿದ್ಯಮಾನಗಳನ್ನು ನೆನಪುಮಾಡಿಕೊಡುವುದು ಈ ಲೇಖನದ ಉದ್ದೇಶ. `ವಿಧಾನಸೌಧದ ಶಿಲ್ಪಿ’ ಎಂದೇ ಖ್ಯಾತರಾದ ಹಳೇಮೈಸೂರು ರಾಜ್ಯದ ಎರಡನೇ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಕೊಲೆಯ ಯತ್ನವೊಂದು ಆ ಕಾಲದಲ್ಲಿ ನಡೆದಿತ್ತೇ? ಹೌದೆನ್ನುತ್ತದೆ ಅವರ ಮಂತ್ರಿಮಂಡಲದಲ್ಲಿ ಲೋಕೋಪಯೋಗಿ ಸಚಿವರೂ ಅವರ ನಂತರ ಎರಡೂವರೆ ತಿಂಗಳ ಚಿಕ್ಕ ಕಾಲಾವಧಿಗೆ ಹಳೆಯ ಮೈಸೂರು ರಾಜ್ಯದ ಕೊನೆಯ ಮುಖ್ಯಮಂತ್ರಿಯೂ ಆಗಿದ್ದ ಕಡಿದಾಳ್ ಮಂಜಪ್ಪನವರ ಆತ್ಮಕಥೆ.




ಭಾರತವು ಸ್ವಾತಂತ್ರ್ಯ ಪಡೆಯು ನಲವತ್ತೇಳರ ಆಸುಪಾಸಿನ ವರ್ಷಗಳ ಕಾಲಘಟ್ಟದಲ್ಲಿ ಮೈಸೂರು ಪ್ರದೇಶ ಕಾಂಗ್ರೆಸ್ಸಿನಲ್ಲಿ ಬಹುಮುಖ್ಯವಾಗಿ ಎರಡು ಗುಂಪುಗಳಿರುತ್ತವೆ. ಒಂದು ಕೆ.ಸಿ.ರೆಡ್ಡಿ ಗುಂಪು. ಇನ್ನೊಂದು ಕೆಂಗಲ್ ಹನುಮಂತಯ್ಯನವರ ಗುಂಪು. ಸಾಹುಕಾರ್ ಚನ್ನಯ್ಯ, ಟಿ.ಮರಿಯಪ್ಪ ಮುಂತಾದ ಬಲಾಢ್ಯರು ಕೆ.ಸಿ.ರೆಡ್ಡಿಯವರ ಗುಂಪಿನಲ್ಲಿದ್ದರೆ ಕೆಂಗಲ್ ಗುಂಪಿನಲ್ಲಿ ದೇವರಾಜ್ ಅರಸು, ಎಚ್.ಎಂ. ಚೆನ್ನಬಸಪ್ಪ ಮುಂತಾದ ಗಣ್ಯರು ಗುರುತಿಸಿಕೊಂಡಿರುತ್ತಾರೆ. ಈ ಗುಂಪುಗಳು ಎಷ್ಟು ಪ್ರಬಲವಾಗಿದ್ದವು ಎಂದರೆ ಆಡಳಿತ ನಡೆಸುವವರಿಗೆ ಭಯವಿರುತ್ತಿದ್ದದ್ದು ವಿರೋಧಪಕ್ಷದ ಬಗ್ಗೆ ಅಲ್ಲ; ಬದಲಾಗಿ ತಮ್ಮನ್ನು ಕಾಲೆಳೆಯಲು ಸದಾ ಹವಣಿಸುವ ತಮ್ಮದೇ ಆದ ಪಕ್ಷದ ಇನ್ನೊಂದು ಗುಂಪಿನ ಬಗ್ಗೆಯೇ! ದೇಶ ಸ್ವಾತಂತ್ರ ಪಡೆದ ಮೂರು ತಿಂಗಳೊಳಗೆ ಅಂದರೆ 25-10-1947ರಂದು ಮೊದಲ ಬಾರಿಗೆ `ಮೈಸೂರು ವಿಧಾನಸಭೆ’ ಅಸ್ತಿತ್ವಕ್ಕೆ ಬಂದು ಕೆ.ಸಿ.ರೆಡ್ಡಿ ಮುಖ್ಯಮಂತ್ರಿಯಾಗುತ್ತಾರೆ.  ಈ `ಮೈಸೂರು ವಿಧಾನಸಭೆ’ ಅಸ್ತಿತ್ವಕ್ಕೆ ಬರುವ ಮೊದಲು ಅಲ್ಲಿ `ಮೈಸೂರು ಸಂವಿಧಾನ ಸಭೆ’ ಎಂಬ ಒಂದು ಸಮಿತಿ ಅಸ್ತಿತ್ವದಲ್ಲಿತ್ತು. ಮೈಸೂರು ರಾಜ್ಯ ರಾಜಪ್ರಭುತ್ವವನ್ನು ಬಿಟ್ಟು ಪ್ರಜಾಪ್ರಭುತ್ವಕ್ಕೆ ಹೊರಳುವ ಆ ಕಾಲಘಟ್ಟದಲ್ಲಿ ಮೈಸೂರು ರಾಜ್ಯಕ್ಕೆ ಒಂದು ಪ್ರತ್ಯೇಕ ಸಂವಿಧಾನ ರಚಿಸುವ ಕಾರ್ಯಕ್ಕೆ ಈ ಸಮಿತಿ ನೇಮಕವಾಗಿತ್ತು. ಆ ಕಾಲದ ಕನ್ನಡ ಮೇದಾವಿ ಡಾ. ಡಿ.ವಿ.ಗುಂಡಪ್ಪ ಕೂಡ ಈ ಸಮಿತಿಯಲ್ಲಿದ್ದರು.

ಆ ಕಾಲದ ದೇಶದ ರಾಜಕೀಯ ವಿದ್ಯಮಾನಗಳ ಕಾರಣಕ್ಕಾಗಿ ಈ ಸಮಿತಿಯಲ್ಲಿ ಭಿನ್ನಾಭಿಪ್ರಾಯವುಂಟಾಗಿ ಎರಡು ಗುಂಪುಗಳಾಗುತ್ತವೆ. ಒಂದು ಗುಂಪು `ಮೈಸೂರು ಸರ್ಕಾರಕ್ಕೇ ಪ್ರತ್ಯೇಕ ಸಂವಿಧಾನವಿರಬೇಕು’ ಎಂದು ವಾದಿಸುವ ಗುಂಪು. ಇನ್ನೊಂದು ಸಧ್ಯದಲ್ಲಿ ಜಾರಿಯಾಗಲಿದ್ದ `ಭಾರತ ಸಂವಿಧಾನವೇ ಮೈಸೂರು ರಾಜ್ಯಕ್ಕೂ ಅನ್ವಯವಾಗಬೇಕು, ಮೈಸೂರು ರಾಜ್ಯಕ್ಕೆ ಪ್ರತ್ಯೇಕ ಸಂವಿಧಾನ ಅಗತ್ಯವಿಲ್ಲವೆಂದು ವಾದಿಸುವ ಗುಂಪು. ಮೊದಲನೇ ಅಭಿಪ್ರಾಯದ ಗುಂಪು ಚಿಕ್ಕದಿದ್ದು ಎರಡನೇ ಅಭಿಪ್ರಾಯದ ಗುಂಪು ದೊಡ್ಡದಿದ್ದ ಕಾರಣ ಕೊನೆಗೆ ‘ಭಾರತ ಸಂವಿಧಾನವೇ ಮೈಸೂರಿಗೂ ಅನ್ವಯಿಸತಕ್ಕದ್ದು; ಮೈಸೂರಿಗೆ ಪ್ರತ್ಯೇಕ ಸಂವಿಧಾನ ಅವಶ್ಯಕತೆಯಿಲ್ಲ’ ಎಂಬ ತೀರ್ಮಾನವಾಗುತ್ತದೆ.  ಹೊಸಸಂವಿಧಾನ ಜಾರಿಯಾಗಿ ಅದರ ಅನ್ವಯ ಚುನಾವಣೆಗಳು ನಡೆಯುವವರೆಗೆ ಹಾಲಿ ಚಾಲ್ತಿಯಲ್ಲಿದ್ದ `ಮೈಸೂರು ಸಂವಿಧಾನ ಸಭೆ’ಯೇ `ಮೈಸೂರು ವಿಧಾನಸಭೆ’ಯಾಗಿ ಕಾರ್ಯನಿರ್ವಹಿಸತಕ್ಕದ್ದು ಎಂದು ಮಹಾರಾಜರು ಘೋಷಣೆ ಹೊರಡಿಸುತ್ತಾರೆ. ಪರಿಣಾಮವಾಗಿ ಭಾರತ ಸಂವಿಧಾನ ಅಸ್ತಿತ್ವಕ್ಕೆ ಬರುವ ಮೊದಲೇ `ಮೈಸೂರು ವಿಧಾನಸಭೆ’ ಅಸ್ತಿತ್ವಕ್ಕೆ ಬಂದು ಕೆ.ಸಿ.ರೆಡ್ಡಿ ಮುಖ್ಯಮಂತ್ರಿಯಾಗುತ್ತಾರೆ!

ಮುಖ್ಯಮಂತ್ರಿಯಾಗುವ ಮೊದಲು ಕೆ.ಸಿ.ರೆಡ್ಡಿಯವರು ಮೈಸೂರು ಪ್ರದೇಶ ಕಾಂಗ್ರೇಸ್ಸಿನ ಅಧ್ಯಕ್ಷರಾಗಿದ್ದವರು. ಅವರು ಮುಖ್ಯಮಂತ್ರಿಯಾದ ಕಾರಣ ಅವರ ನಂತರ ಅಧ್ಯಕ್ಷಸ್ಥಾನ ಕೆಂಗಲ್ ಅವರಿಗೆ ಸಿಗುತ್ತದೆ. ಕೆ.ಸಿ.ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗಿನಿಂದ 1952ರ ಪ್ರಥಮ ಸಾರ್ವತ್ರಿಕ ಚುನಾವಣೆಗಳು ನಡೆಯುವ ತನಕ ಕೆಂಗಲ್ ಗುಂಪು ರೆಡ್ಡಿಯವರ ಗುಂಪನ್ನು ಕಾಲೆಳೆಯುತ್ತಲೇ ಇರುತ್ತದೆ. ಆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯುತ್ತದೆಯಾದರೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಲ್ಲಿ ಕೆ.ಸಿ.ರೆಡ್ಡಿ ಗುಂಪು ಪರಾಭವಗೊಂಡು ಕೆಂಗಲ್ ಗುಂಪು ವಿಜಯಸಾಧಿಸಿದ ಕಾರಣ ಹನುಮಂತಯ್ಯ ಮುಖ್ಯಮಂತ್ರಿಯಾಗುತ್ತಾರೆ. ಕೆ.ಸಿ.ರೆಡ್ಡಿ ಕೇಂದ್ರದ ಮಂತ್ರಿಯಾಗಿ ನಂತರ ರಾಜ್ಯಪಾಲರಾಗಿ ಇನ್ನೊಂದು ದಾರಿಯನ್ನು ನೋಡಿಕೊಳ್ಳಬೇಕಾಗುತ್ತದೆ.

ಸ್ವಾತಂತ್ರ್ಯಪೂರ್ವದಲ್ಲಿ ಮೈಸೂರು ಭಾಗದಲ್ಲಿ ಇದ್ದಂತಹವು ಎರಡು ಪ್ರಜಾಸತ್ತಾತ್ಮಕ ಸಭೆಗಳು. ಒಂದು `ಮೈಸೂರು ಪ್ರಜಾಪ್ರತಿನಿಧಿ ಸಭೆ’. ಇನ್ನೊಂದು ‘ಮೈಸೂರು ನ್ಯಾಯವಿಧಾಯಕ ಸಭೆ’. ಇದರಲ್ಲಿ ಪ್ರಜಾಪ್ರತಿನಿಧಿ ಸಭೆಯ ಕಾರ್ಯಕಲಾಪಗಳು ಮೈಸೂರಿನಿಂದಲೇ ನಡೆಯುತ್ತಿದ್ದವು. ನ್ಯಾಯವಿಧಾಯಕ ಸಭೆ ಮಾತ್ರ ಬೆಂಗಳೂರಿನ ಆಗಿನ ಅಠಾರ ಕಛೇರಿಯಿಂದ ಕಾರ್ಯನಿರ್ವಹಿಸುತ್ತಿತ್ತು. ಹೊಸದಾಗಿ ಜಾರಿಯಾಗಲಿರುವ ಸಂವಿಧಾನದ ಪ್ರಕಾರ, ವಿಧಾನಸಭೆ ಮತ್ತು ವಿಧಾನ ಪರಿಷತ್ತು ಅಸ್ತಿತ್ವಕ್ಕೆ ಬರಬೇಕಾದ್ದರಿಂದ ಅವೆರಡೂ ಒಂದೆಡೆ ಅಧಿವೇಶನ ನಡೆಸಲು ಅನುಕೂಲವಾಗುವಂತಹ ಒಂದು ಹೊಸ ಕಟ್ಟಡ ನಿರ್ಮಾಣದ ಅವಶ್ಯಕತೆಯುಂಟಾಗುತ್ತದೆ. ತತ್ವರಿಣಾಮವೇ ಈಗಿನ ವಿಧಾನಸೌಧದ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯುತ್ತದೆ. ವಾಸ್ತವವಾಗಿ ಇಂಥದೊಂದು ಕಟ್ಟಡ ನಿರ್ಮಾಣದ ರೂಪರೇಷೆಗಳು ಕೆ.ಸಿ. ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗಲೇ ಆರಂಭವಾಗುತ್ತವೆ. ಹೊಸ ಕಟ್ಟಡಕ್ಕೆ ಪ್ರಧಾನಿ ನೆಹರೂ ಅವರನ್ನು ಕರೆತಂದ ಕೆ.ಸಿ.ರೆಡ್ಡಿ 1951ರ ಜುಲೈನಲ್ಲಿ ಶಂಕುಸ್ಥಾಪನೆಯನ್ನೂ ಮಾಡಿಸುತ್ತಾರೆ.

ಕೆ.ಸಿ. ರೆಡ್ಡಿ ಕಾಲದಲ್ಲಿ ಶಂಕುಸ್ಥಾಪನೆಯಾದರೂ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿಲ್ಲ. ಅದಕ್ಕೆ ಚಾಲನೆ ದೊರೆತದ್ದು 52ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕೆಂಗಲ್ ಅವರು ಮುಖ್ಯಮಂತ್ರಿಯಾದ ಮೇಲೆಯೇ. ಆಗಿನ ಮೈಸೂರು ರಾಜ್ಯದ ಆದಾಯದ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ ಬರಲಿರುವ ಉಭಯ ಸದನಗಳೂ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಕೇಂದ್ರ ಕಛೇರಿಗಳೂ ಒಂದೇ ಕಟ್ಟಡದಲ್ಲಿರುವಂತೆ ಕಟ್ಟಡದ ಯೋಜನೆ ರೂಪಿಸಲಾಗುತ್ತದೆ. ಆಗ ಸಚಿವ ಸಂಪುಟ ತೀರ್ಮಾನಿಸಿದ ಇಡೀ ಕಟ್ಟಡದ ಅಂದಾಜು ವೆಚ್ಚ ಈಗ ನಾವು ಒಂದು ಒಳ್ಳೆಯ ಎರಡಂತಸ್ತಿನ ಮನೆಯನ್ನೂ ಮಾಡಿಕೊಳ್ಳಲು ಸಾಧ್ಯವಾಗದ ಐವತ್ತು ಲಕ್ಷ ರೂಪಾಯಿ ಮಾತ್ರ! (ಕಟ್ಟಡ ಮುಗಿಯುವಾಗ ಅದರ ವೆಚ್ಚ ಈ ಮಿತಿಯನ್ನು ಮೀರಿತಾದರೂ ಅದು ಅತೀದೂರ ಹೋಗಲಿಲ್ಲ) ಆ ಕಾಲದ ರಾಜಕಾರಣದ ಮನಸ್ಥಿತಿ ಹೇಗಿತ್ತೆಂದರೆ ಸಚಿವ ಸಂಪುಟದಲ್ಲಿ ತಮಗೆ ಬೇಕಾದವರಿಗೆ ಕಂಟ್ರಾಕ್ಟ್ ಕೊಡಿಸಿ ಅದರಿಂದ ಕಮಿಷನ್ ಪಡೆಯುವ ಆಲೋಚನೆ ಅವರಿಗಿರಲಿಲ್ಲ. ಕಂಟ್ರಾಕ್ಟ್ ಕೊಟ್ಟರೆ ಹೆಚ್ಚು ಹಣ ಸರ್ಕಾರದಿಂದ ಖರ್ಚಾಗುತ್ತದೆ ಎಂದು ಮಿತವ್ಯಯದಿಂದ ಕಟ್ಟಡ ನಿರ್ಮಾಣ ಮಾಡಲು ಸರ್ಕಾರದ ಲೋಕೋಪಯೋಗಿ ಇಲಾಖೆಯೇ ಅದರ ಕಾರ್ಯ ನಿರ್ವಹಿಸಬೇಕೆಂದು ತೀರ್ಮಾನವಾಗುತ್ತದೆ.

ವಿಧಾನ ಸೌಧದ ನಿರ್ಮಾಣ ಹೀಗೆ ಲೋಕೋಪಯೋಗಿ ಇಲಾಖೆಯ ಜವಾಬ್ದಾರಿಗೆ ಬಂದಾಗ ಆ ಇಲಾಖೆಯ ಮಂತ್ರಿಯಾಗಿದ್ದವರು ಕಡಿದಾಳ್ ಮಂಜಪ್ಪನವರು. ವಿಧಾನಸೌಧದ ನಿರ್ಮಾಣದ ವಿಷಯದಲ್ಲಿ ಕೆಂಗಲ್ ಅವರಿಗೂ ಮಂಜಪ್ಪನವರಿಗೂ ಸೈದ್ಧಾಂತಿಕವಾಗಿ ಬಹಳಷ್ಟು ಭಿನ್ನಾಭಿಪ್ರಾಯವಿಲ್ಲದಿದ್ದರೂ ಅವರಿಬ್ಬರ ಗುರಿಯಲ್ಲಿ ಸ್ಪಷ್ಟವಾಗಿ ವ್ಯತ್ಯಾಸವಿತ್ತು. ಅದನ್ನು ಮಂಜಪ್ಪನವರ ಈ ಮಾತುಗಳು ಸ್ಪಷ್ಟಪಡಿಸುತ್ತವೆ: “ಶ್ರೀ ಹನುಮಂತಯ್ಯನವರು ರಾಷ್ಟ್ರದ ಕೆಲವುಕಡೆಗಳಲ್ಲಿದ್ದ ಪ್ರಸಿದ್ಧವಾದ ಕಟ್ಟಡಗಳನ್ನು ನೋಡಿಕೊಂಡು ಬಂದು ಅವರಿಗೆ ಮೆಚ್ಚುಗೆಯಾಗಿದ್ದ ವಿನ್ಯಾಸವನ್ನು ವಿಧಾನಸೌಧದ ನಿರ್ಮಾಣಕ್ಕೆ ಅಳವಡಿಸಿಕೊಳ್ಳಬೇಕೆಂದು ವಿಶೇಷ ಇಂಜನಿಯರಿಗೂ (ಮುನಿಯಪ್ಪ), ವಾಸ್ತುಶಿಲ್ಪಿಗೂ(ಮಾಣಿಕ್ಯಂ) ಆದೇಶ ನೀಡುತ್ತಿದ್ದರು. ಉಭಯ ಶಾಸನ ಸಭೆಗಳೂ, ವಿವಿಧ ಇಲಾಖೆಗಳ ಸಚಿವಾಲಯಗಳೂ ಒಂದೇ ಕಟ್ಟಡದಲ್ಲಿ ಸುಗಮವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಒಂದು ಸುಂದರ ಕಟ್ಟಡವನ್ನು ಹೆಚ್ಚೆಂದರೆ ಐವತ್ತು ಲಕ್ಷ ರೂಪಾಯಿಗಳಿಗೆ ಮೀರದ ವೆಚ್ಚದಿಂದ ಕಟ್ಟಿಸುವುದು ನನ್ನ ಗುರಿಯಾಗಿತ್ತು. ಆದರೆ ಹನುಮಂತಯ್ಯನವರ ಗುರಿ ಬೇರೆಯಾಗಿತ್ತು. ಕರ್ನಾಟಕ ಸಂಸ್ಕೃತಿ ಹಾಗೂ ದಕ್ಷಿಣ ಭಾರತದ ವಾಸ್ತುಶಿಲ್ಪಕಲೆಯ ಹಿರಿಮೆಯನ್ನು ಪ್ರತಿಬಿಂಬಿಸುವ ಜಗತ್ಪ್ರಸಿದ್ಧವಾದ ಒಂದು ಭವ್ಯವಾದ ಸೌಧವನ್ನು ನಿರ್ಮಿಸುವುದು ಅವರ ಗುರಿಯಾಗಿತ್ತು.”

ಈ ವಿಧಾನಸೌಧದ ನಿರ್ಮಾಣದಲ್ಲಿ ಕೆಂಗಲ್ ಅತ್ಯಂತ ಮುತುವರ್ಜಿವಹಿಸಿದ್ದರು. ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ಈ ಕಾರ್ಯ ನಡೆಯುತ್ತಿದ್ದರೂ ಅದಕ್ಕೆ ಮಾಣಿಕ್ಯಂ ಅವರು ವಾಸ್ತುಶಿಲ್ಪಿಗಳಾಗಿ ಮತ್ತು ಮುನಿಯಪ್ಪನವರು ಮುಖ್ಯ ವಿಶೇಷ ಇಂಜನಿಯರ್ ಆಗಿ ಕೆಲಸ ಮಾಡುತ್ತಿದ್ದರೂ ಇಲಾಖಾ ಮಂತ್ರಿ ಕಡಿದಾಳ್ ಅವರು ತುಂಬಾ ಜವಾಬ್ದಾರಿಯಿಂದ ಉಸ್ತುವಾರಿ ನಡೆಸುತ್ತಿದ್ದರಾದರೂ ಕೆಂಗಲ್ ತಮ್ಮ ಕನಸಿನ ಕೂಸಾದ ವಿಧಾನಸೌಧದ ನಿರ್ಮಾಣದ ಪ್ರತಿಹಂತದಲ್ಲೂ ವಿಶೇಷ ಆಸಕ್ತಿವಹಿಸಿ ಖುದ್ದಾಗಿ ಇವರೆಲ್ಲರ ಮೇಲೆ ಉಸ್ತುವಾರಿ ಮಾಡುತ್ತಲೇ ಇರುತ್ತಾರೆ. ಅದರ ನೀಲಿನಕ್ಷೆಯನ್ನು ಕೊನೆಗೂ ಅವರೇ ಅಂತಿಮಗೊಳಿಸಿರುತ್ತಾರೆ. ಉಳಿದವರೆಲ್ಲ ಅದನ್ನು ಒಪ್ಪಿಕೊಂಡಿರುತ್ತಾರೆ. ಹೀಗೆ ಈ ಕಟ್ಟಡ ನಡೆಯುವಾಗ ಅದರ ಉಸ್ತುವಾರಿಗೆ ಹೋದ ಒಂದು ಸಂದರ್ಭದಲ್ಲಿ ಅವರ ಹತ್ಯೆಯ ಒಂದು ವಿಫಲಪ್ರಯತ್ನವೂ ನಡೆದುಬಿಡುತ್ತದೆ. ಬಹುಶಃ ಕೆಂಗಲ್ ಅವರು ಅದನ್ನು ಗಂಭೀರವಾಗಿ ಪರಿಗಣಿಸದಿದ್ದಕ್ಕೋ ಏನೋ ಆ ಘಟನೆ ಹೆಚ್ಚು ಪ್ರಚಾರ ಪಡೆಯಲಿಲ್ಲವೆನಿಸುತ್ತದೆ. ಆ ಘಟನೆ ನಡೆದದ್ದು ಹೀಗೆ:

1952ರಲ್ಲಿಯೇ ಆರಂಭವಾದ ವಿಧಾನಸೌಧದ ನೆಲಮಹಡಿಯ ಕಟ್ಟಡ ಕಾರ್ಯಮುಗಿದು 1953ರಲ್ಲಿ ಮೊದಲ ಮಹಡಿಯ ಕಾರ್ಯ ನಡೆಯುತ್ತಿರುತ್ತದೆ. ಒಂದು ದಿನ ಮುಖ್ಯಮಂತ್ರಿ ಹನುಮಂತಯ್ಯ ಕಡಿದಾಳ್ ಮಂಜಪ್ಪನವರ ಮನೆಗೆ ಬಂದು ನಿರ್ಮಾಣ ಹಂತದಲ್ಲಿದ್ದ ವಿಧಾನಸೌಧದ ಕಟ್ಟಡ ನೋಡಬೇಕು ಬನ್ನಿ ಹೋಗೋಣ ಎಂದು ಕರೆಯುತ್ತಾರೆ. ಸ್ವತಃ ಮುಖ್ಯಮಂತ್ರಿ ತನ್ನ ಕೈಕೆಳಗೆ ಕೆಲಸ ಮಾಡುತ್ತಿರುವ ಮಂತ್ರಿಯ ಮನೆಗೆ ಹೋಗಿ ಆತನನ್ನು ಕರೆಯುವುದು ಆ ಕಾಲದ ರಾಜಕಾರಣಿಗಳಿಗೆ ಅವಮಾನದ ಸಂಗತಿಯಾಗಿರಲಿಲ್ಲ. `ನಾನು ಕರೆದ ತಕ್ಷಣ ಅವನೇ ಓಡಿಬರಬೇಕು’ ಎಂದು ಅವರು ನಿರೀಕ್ಷಿಸುತ್ತಲೂ ಇರಲಿಲ್ಲ. ಸ್ವತಃ ಲೋಕೋಪಯೋಗಿ ಮಂತ್ರಿಯಾಗಿದ್ದ ಮಂಜಪ್ಪ ಮತ್ತು ಮುಖ್ಯಮಂತ್ರಿ ಕೆಂಗಲ್ ಅವರು ಕೆಂಗಲ್ ಅವರ ಕಾರಿನಲ್ಲಿಯೇ ವಿಧಾನಸೌಧದ ಕಡೆ ಹೊರಡುತ್ತಾರೆ. ಇಬ್ಬರ ಅಂಗರಕ್ಷಕರೂ ಕಟ್ಟಡದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮುಖ್ಯ ಇಂಜಿನಿಯರ್ ಇವರೆಲ್ಲ ಸೇರಿ ಹಿಂದೆ ಇನ್ನೊಂದು ಕಾರಿನಲ್ಲಿ ಅವರನ್ನು ಹಿಂಬಾಲಿಸುತ್ತಾರೆ. ಒಬ್ಬ ಮುಖ್ಯಮಂತ್ರಿ ಹೊರಟರೆ ಮೂವತ್ತು ನಲವತ್ತು ಕಾರುಗಳ ಅವರ ವಾಹನದ ಹಿಂದೆ ಮುಂದೆ ಕುಂಯ್ ಕುಂಯ್ ಅನ್ನುತ್ತಾ ಹೊರಡುವ ಪರಿಪಾಠ ಆಗಿನ್ನೂ ಶುರುವಾಗಿರಲಿಲ್ಲ. ಮುಖ್ಯಮಂತ್ರಿ ಮತ್ತು ಒಬ್ಬ ಸಹಾಯಕ ಮಂತ್ರಿ ಇಬ್ಬರೂ ಹೊರಟಾಗ ಅವರ ಅಂಗರಕ್ಷಕರದ್ದೂ ಸೇರಿ ಹೊರಟದ್ದು ಎರಡೇ ಕಾರುಗಳು!
 
ಕಟ್ಟಡ ಕೆಲಸ ನಡೆಯುತ್ತಿದ್ದ ವಿಧಾನಸೌಧಕ್ಕೆ ಬಂದ ಹನುಮಂತಯ್ಯ ಮತ್ತು ಇಬ್ಬರು ಇಂಜನಿಯರ್ ಕಟ್ಟಡದ ಒಳಗೆ ಹೋಗಿ ನಿರ್ಮಾಣ ಕಾರ್ಯ ನೋಡುತ್ತಾ ನೋಡುತ್ತಾ ಸಾಗುತ್ತಾರೆ. ಹನುಮಂತಯ್ಯ ಎಲ್ಲರಿಗಿಂತ ಮುಂದೆ ಇರುತ್ತಾರೆ. ಮಂಜಪ್ಪ ಅವರಿಗಿಂತ ತುಸು ಹಿಂದೆ ನಡೆಯುತ್ತಿರುತ್ತಾರೆ. ಆಗ ಆ ಸ್ಥಳದಲ್ಲಿ ಒಮ್ಮೆಲೆ ಪ್ರತ್ಯಕ್ಷನಾದ ಮಾಜಿ ಖೈದಿಯೊಬ್ಬ ಯಾವ ಪ್ರಚೋದನೆಯೂ ಇಲ್ಲದೆಯೂ ಒಮ್ಮೆಲೆ ಹನುಮಂತಯ್ಯನವರ ಕಡೆ ನುಗ್ಗಿ ತನ್ನ ಬಲಗೈಯಿಂದ ಹನುಮಂತಯ್ಯನವರ ತಲೆಗೆ ಹೊಡೆದುಬಿಡುತ್ತಾನೆ! ದೈಹಿಕವಾಗಿ ಸಾಕಷ್ಟು ಬಲಾಢ್ಯರಾಗಿದ್ದ ಕೆಂಗಲ್ ಹನುಮಂತಯ್ಯನವರು ಆ ಹೊಡೆತಕ್ಕೆ ಕೆಳಗೆ ಬೀಳುವುದಿಲ್ಲವಾದರೂ ಅವನ ಹೊಡೆತದ ರಭಸಕ್ಕೆ ಅವರ ತಲೆಯ ಮೇಲಿದ್ದ ಜರಿಯ ರುಮಾಲು ನೆಲಕ್ಕೆ ಬೀಳುತ್ತದೆ. ತಕ್ಷಣ ಆ ಖೈದಿ ಅಲ್ಲಿಯೇ ಬಿದ್ದಿದ್ದ ಕಬ್ಬಿಣದ ರಾಡೊಂದನ್ನು ತಗೆದುಕೊಂಡು ಬರಿತಲೆಯಲ್ಲಿದ್ದ ಕೆಂಗಲ್ ಅವರ ತಲೆಗೆ ಗುರಿಯಿಟ್ಟು ಹೊಡೆಯಲು ಕೈ ಮೇಲೆ ಎತ್ತಿಯೇಬಿಡುತ್ತಾನೆ! ಇನ್ನೇನು ಅವನ ಕೈಯಲ್ಲಿನ ರಾಡು ಕೆಂಗಲ್ ಅವರ ತಲೆಯನ್ನು ಅಪ್ಪಳಿಸಬೇಕು ಅನ್ನುವಷ್ಟರಲ್ಲಿ ಸ್ಥಳದಲ್ಲಿದ್ದ ಚಿಕ್ಕಬಳ್ಳಾಪುರದ ಚಿಕ್ಕಪುಟ್ಟಸ್ವಾಮಿ ಎಂಬ ವ್ಯಕ್ತಿ ಅವನನ್ನು ಹಿಂದಿನಿಂದ ಬಲವಾಗಿ ತಬ್ಬಿಹಿಡಿದು  ಅವನ ಕೈಯಲ್ಲಿದ್ದ ರಾಡನ್ನು ಕಸಿದುಕೊಳ್ಳುತ್ತಾರೆ. ಚಿಕ್ಕಪುಟ್ಟಸ್ವಾಮಿ ಆ ಖೈದಿಗಿಂತ ಬಲಿಷ್ಠರಾದುದರಿಂದ ಅವನು ಎಷ್ಟೇ ಕೊಸರಾಡಿದರೂ ಕೆಂಗಲ್ ಅವರಿಗೆ ಏಟುಕೊಡಲು ಸಾಧ್ಯವಾಗುವುದೇ ಇಲ್ಲ.

ಬಹುಶಃ ಆ ದಿನ ಈ ಚಿಕ್ಕಪುಟ್ಟಸ್ವಾಮಿ ಅಲ್ಲಿ ಇಲ್ಲದಿದ್ದರೆ ನಡೆಯಬಾರದ ಒಂದು ಘಟನೆ ನಡದೇ ಹೋಗುತ್ತಿತ್ತೇನೋ! ಇಷ್ಟೆಲ್ಲ ಘಟನೆ ನಡೆದ ಮೇಲಷ್ಟೇ ಈ ಇಬ್ಬರು ಮಂತ್ರಿಗಳ ಅಂಗರಕ್ಷಕರು ಅವರ ಬಳಿ ಬರುತ್ತಾರೆ. ಈ ಘಟನೆಯ ಯಾವ ಮುನ್ಸೂಚನೆಯನ್ನೂ ನಿರೀಕ್ಷಿಸದಿದ್ದ ಅವರೆಲ್ಲ ಈ ಮಂತ್ರಿಗಳು ಒಳಗೆ ಕಟ್ಟಡ ನೋಡುತ್ತಿದ್ದಾಗ ಹೊರಗಡೆ ಹರಟೆಹೊಡೆಯುತ್ತಾ ನಿಂತಿರುತ್ತಾರೆ. ಈ ಘಟನೆಯನ್ನು ತಮ್ಮ ಆತ್ಮಕಥೆಯಲ್ಲಿ ದಾಖಲಿಸಿರುವ ಕಡಿದಾಳ್ ಮಂಜಪ್ಪನವರು ಘಟನೆ ನಡೆಯುತ್ತಿರುವಾಗ ತಮಗಾದ ಮನಸ್ಥಿತಿಯನ್ನು ದಾಖಲಿಸುವುದು ಹೀಗೆ, “ನಾನಂತೂ ಆ ಅನಿರೀಕ್ಷಿತ ಘಟನೆಯಿಂದ ಸ್ಥಂಭೀಭೂತನಾಗಿ ಮೂಕಪ್ರೇಕ್ಷಕನಾಗಿದ್ದೆ. ಹನುಮಂತಯ್ಯನವರ ಜೊತೆಗಿದ್ದ ಇಂಜನಿಯರರೂ ಹಾಗೇ ಇದ್ದರು. ಕೆಳಗಡೆ ಕಬ್ಬಿಣದ ಸರಳುಗಳೂ ಮತ್ತು ಸಲಾಖೆಗಳೂ ಯಥೇಚ್ಛವಾಗಿ ಬಿದ್ದಿದ್ದವು. ಅವುಗಳ ಪೈಕಿ ಯಾವುದಾದರೊಂದನ್ನು ಕೈಗಿತ್ತಿಕೊಂಡು ಹನುಮಂತಯ್ಯನವರ ಜೊತೆಗಿದ್ದ ಇಂಜನಿಯರಾಗಲೀ ನಾನಾಗಲೀ ಅವನ ತಲೆಯ ಮೇಲೆ ಹೊಡೆಯಬಹುದಾಗಿತ್ತೆಂಬ ಯೋಚನೆ ಆಮೇಲೆ ಹೊಳೆಯಿತು. ಆದರೆ ಮಿಂಚಿನ ವೇಗದಲ್ಲಿ ನಡೆದ ಕೃತ್ಯ ನಡೆದದ್ದರಿಂದ  ಯೋಚಿಸುವಷ್ಟು ಸಮಯವೂ ಇರಲಿಲ್ಲ.”

ಈ ಘಟನೆಯ ನಂತರ ಗಾಂಧಿವಾದಿಯಾಗಿದ್ದ ಕಡಿದಾಳ್ ಮಂಜಪ್ಪ ಕೂಡ ಆತ್ಮರಕ್ಷಣೆಗಾಗಿ ರಿವಲ್ವಾರ್ ಇಟ್ಟುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿಪಡೆದು ರಿವಲ್ವಾರ್ ಕೊಳ್ಳುತ್ತಾರೆ! ಈ ರಿವಲ್ವಾರ್ ಇಟ್ಟುಕೊಳ್ಳಬೇಕಾದ ಕಾರಣದಿಂದಾಗಿ  “ನಾನು ಅಹಿಂಸಾವಾದಿ ಎಂದು ಹೇಳಿಕೊಳ್ಳಲಾರೆ” ಎಂದು ವಿಷಾಧದಿಂದ ಅವರು ಬರೆಯುತ್ತಾರೆ. ಒಟ್ಟಿನಲ್ಲಿ ಅಂದು ಯಾವ ಘಟನೆ ನಡೆಯಬಾರದಿತ್ತೋ ಅದು ನಡೆಯಲಿಲ್ಲ ಎಂಬುದು ಸಮಾಧಾನದ ಸಂಗತಿ. ಒಂದು ವೇಳೆ ಅದು ನಡೆದಿದ್ದರೆ ಸ್ವತಂತ್ರ ಭಾರತದ ಇತಿಹಾಸ ಹೇಗೆ ಸ್ವತಂತ್ರಕ್ಕಾಗಿ ಹೋರಾಡಿದ ಮಹಾತ್ಮಗಾಂಧಿ ಕೊಲೆಯ ಕಪ್ಪುಕಲೆಯಿಂದಲೇ ಆರಂಭವಾಯಿತೋ ಹಾಗೇ ಕರ್ನಾಟಕದ ರಾಜ್ಯೋದಯ ಮತ್ತು ಅದರ ಕುರುಹಾದ ವಿಧಾನಸೌಧದ ಇತಿಹಾಸ ಕೂಡ ಅದರ ರೂವಾರಿ ಕೆಂಗಲ್ ಹನುಮಂತಯ್ಯನವರ ಕೊಲೆಯ ಕಪ್ಪುಚುಕ್ಕೆಯಿಂದಲೇ ಆರಂಭವಾಗುತ್ತಿತ್ತು!
*****
ಡಾ. ರಾಜೇಂದ್ರ ಬುರಡಿಕಟ್ಟಿ
25-10-2017

(ವಿಧಾನಸೌಧ ನಿರ್ಮಾಣದ ವಜ್ರಮಹೋತ್ಸವ ದಿನ)

No comments:

Post a Comment