Monday, November 6, 2017

ಮಾಸ್ತಿ ಹೇಳುವ ಟಿಪ್ಪು ಕಥೆ….

ಮಾಸ್ತಿ ಹೇಳುವ ಟಿಪ್ಪು ಕಥೆ….
ಕನ್ನಡಕ್ಕೆ ನಾಲ್ಕನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ `ಚಿಕವೀರ ರಾಜೇಂದ್ರ’ ಮೈಸೂರು-ಕೊಡಗು ರಾಜ್ಯಗಳನ್ನು ಬ್ರಿಟೀಷರು ವಶಪಡಿಸಿಕೊಳ್ಳುವ ಕಾಲಘಟ್ಟದ ಮಹತ್ವದ ಸಮಾಜೋರಾಜಕೀಯ ವಿದ್ಯಮಾನಗಳನ್ನು ದಾಖಲಿಸುವ ಕೃತಿ. ಅನೇಕ ದೇಶೀಯ ರಾಜರ ಮತ್ತು ಬ್ರಿಟಿಷ್ ಸರ್ಕಾರದ ದಾಖಲೆಗಳನ್ನು ಹಾಗೇ ವಿದ್ವಾಂಸರ ಸಂಶೋಧನಾ ಸತ್ಯಗಳನ್ನು ಬಳಸಿಕೊಂಡಿರುವ ಈ ಕೃತಿ ನಮ್ಮ ನಾಡಿನ ಹಾಗೇ ದೇಶದ ಆಧುನಿಕ ಕಾಲಘಟ್ಟದ ಇತಿಹಾಸದ ಮೇಲೆ ಬೆಳಕುಚೆಲ್ಲುವ ಅನೇಕ ಅಂಶಗಳನ್ನು ಒಳಗೊಂಡಿದೆ. ಕರ್ನಾಟಕ ಏಕೀಕರಣವಾದ ವರ್ಷವೇ (1956) ಪ್ರಕಟವಾದ ಈ ಕೃತಿಯನ್ನು ಬರೆದ ಮಾಸ್ತಿಯವರು ಕನ್ನಡದ ಅಗ್ರಗಣ್ಯ ಸಾಹಿತಿಯಾಗಿದ್ದವರು ಮಾತ್ರವಲ್ಲ; ಬ್ರಿಟೀಷ್ ಸರ್ಕಾರದ ಉನ್ನತ ಹುದ್ದೆಯಲ್ಲಿ ಇದ್ದವರು; ಆ ಕಾರಣಕ್ಕೆ ಆ ಸರ್ಕಾರದ `ಒಳಗೂ’ `ಹೊರಗೂ’ ಬಲ್ಲವರು.

 ಅವರು ಕೊಡಗು ಮೈಸೂರು ಭಾಗದಲ್ಲಂತೂ ಹಳ್ಳಿಹಳ್ಳಿಯಲ್ಲಿ ತಿರುಗಾಡಿ ಜನರ ಬದುಕು ಭಾವನೆಗಳನ್ನು ಖುದ್ದಾಗಿ ಕಂಡು ಅನುಭವ ಪಡೆದಿದ್ದವರು. ಅವರ ಈ ಕೃತಿಯಲ್ಲಿ ಮೈಸೂರು ಮತ್ತು ಕೊಡಗು ರಾಜ್ಯಗಳು ಬ್ರಿಟೀಷರ ವಶವಾಗಲು ಕಾರಣವಾದ ಅನೇಕ ಮುಖ್ಯವಾದ ಅಂಶಗಳನ್ನು ದಾಖಲಿಸಿದ್ದಾರೆ. ಅದರಲ್ಲಿ ಮುಖ್ಯವಾದ ಎರಡು ಸಂಗತಿಗಳನ್ನು ಇಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಗುತ್ತಿದೆ. ಅವೆಂದರೆ ಮೊದಲನೆಯದು `ಟಿಪ್ಪು-ಬ್ರಿಟೀಷರು-ಮೈಸೂರು’ ಈ ಬಗ್ಗೆ ಇರುವ ಸಂಗತಿಗಳು, ಎರಡನೆಯದು ಹೈದರ್-ಟಿಪ್ಪು-ಬ್ರಿಟೀಷರು-ಕೊಡಗು’ ಈ ಬಗ್ಗೆ ಇರುವ ಸಂಗತಿಗಳು. ಮುಖ್ಯವಾದ ಎರಡು ಸಂದರ್ಭಗಳಲ್ಲಿ ಇವು ಕೃತಿಯಲ್ಲಿ ದಾಖಲಾಗಿವೆ. ಈ ಎರಡೂ ಸನ್ನಿವೇಶಗಳು ಬರುವುದು ಕೊಡಗಿನ ಕೊನೆಯ ರಾಜ ಚಿಕವೀರ ರಾಜೇಂದ್ರನ ಆತಿಥ್ಯವನ್ನು ಸ್ವೀಕರಿಸಿ ಅರಾಮಾಗಿರಲೆಂದು ಒಂದು ವಾರದ ಮಟ್ಟಿಗೆ ಕೊಡಗಿನಲ್ಲಿ ಇರಲು ಬರುವ ಬ್ರಿಟೀಷ್ ಅಧಿಕಾರಿಗಳ ತಂಡದ ಉಪಚಾರದ ಭಾಗವಾಗಿ. ಅವುಗಳಲ್ಲಿ ಮೊದಲು ಮೈಸೂರು ರಾಜ್ಯದ ಕುರಿತು ಇರುವ ವಿವರಗಳನ್ನು ನೋಡಬಹುದು.

ಮೊದಲ ಸನ್ನಿವೇಶದಲ್ಲಿ ಕಾದಂಬರಿಯ ಯಾವ ಪಾತ್ರದ ಬಾಯಿಂದಲೂ ಹೇಳಿಸದೇ ಕೃತಿಯ ಲೇಖಕರಾದ ಮಾಸ್ತಿಯವರೇ ನೇರವಾಗಿ ಹೇಳುವ ಈ ಮಾತುಗಳನ್ನು ಗಮನಿಸಿ: “ಹೈದರನೊಂದಿಗೆ ಜಗಳಮಾಡುವಂದು ಮೈಸೂರಿನ ಭೂಮಿಯ ಮೇಲೆ ಓಡಾಡಿ, ದೊಡ್ಡವೀರರಾಜನೊಂದಿಗೆ ಸಹಕರಿಸುತ್ತ ಕೊಡಗಿನ ಭೂಮಿಯಲ್ಲಿ ಸುತ್ತಿ ಆಂಗ್ಲರು, ‘ಮೈಸೂರಾಗಲಿ ಕೊಡಗಿನ ನಾಡಾಗಲಿ ಚಿನ್ನದ ಭೂಮಿ; ಇಂಥ ನೆಲ ಕೈಗೆ ಸಿಕ್ಕುವುದು ಅಪರೂಪದ ಪುಣ್ಯ’ ಎಂದು ಮನಗಂಡಿದ್ದರು. ಟಿಪ್ಪು ಕೊನೆಯ ಸಲ ಸೋತು ಮೈಸೂರು ರಾಜ್ಯದ ಪುನರ್ವ್ಯವಸ್ಥೆ ಚರ್ಚೆಗೆ ಬಂದಾಗ ಆಂಗ್ಲ ಅಧಿಕಾರಿಗಳಲ್ಲಿ ಎರಡು ಪಂಗಡವೇ ಏರ್ಪಟ್ಟವು. ‘ರಾಜ್ಯವನ್ನು ನಮಗೆ ಹಿಂದಕ್ಕೆ ಕೊಡಿಸಿ ಎಂದು ಕೇಳಿ ಆ ಕೆಲಸದಲ್ಲಿ ರಾಜಮಾತೆ ನಮಗೆ ತುಂಬಾ ಸಹಾಯ ನೀಡಿದರು ಅವರ ವಿಶ್ವಾಸಕ್ಕೆ ನಾವು ದ್ರೋಹ ಮಾಡಬಾರದು. ಅವರ ರಾಜ್ಯವನ್ನು ಅವರಿಗೆ ಕೊಡುವುದೇ ನ್ಯಾಯ’ ಎಂದು ಒಂದು ಗುಂಪಿನ ವಾದ. ‘ನ್ಯಾಯ ನೋಡುತ್ತ ಕುಳಿತರೆ ರಾಜ್ಯವನ್ನು ಸಂಪಾದಿಸುವುದು ಹೇಗೆ? ಈ ಜನಕ್ಕೆ ಆಳುವ ಯೋಗ್ಯತೆ ಇದೆಯೇ? ಇವರನ್ನು ಗಾದಿಯ ಮೇಲೆ ಕೂಡಿಸಿದರೆ ಇವರನ್ನು ನಾವೇ ನೋಡಿಕೊಳ್ಳಬೇಕು. ಈ ಸುತ್ತುಬಳಸಿನ ವರ್ತನೆಯಿಂದ ಏನು ಪ್ರಯೋಜನ? ರಾಜರಾಗಿದ್ದವರು ಸಹಾಯ ಮಾಡಿದರಲ್ಲ ಎನ್ನುವುದಾದರೆ ಕೆಲವು ಲಕ್ಷ ವರ್ಷಾಶನ ಕೊಡೋಣವಂತೆ. ದೇಶವನ್ನು ನಾವು ಕೈಗೆ ತೆಗೆದುಕೊಳ್ಳುವುದೇ ಸರಿ’ ಎನ್ನುವುದು ಪ್ರತಿಪಕ್ಷ. ಈ ಪಕ್ಷಗಳ ಮಧ್ಯದ ವಾದ ಹರಿಯುವುದು ಕಷ್ಟವಾಯಿತು.

 
ಕೊನೆಗೆ ಅದು ಹರಿದದ್ದಾದರೂ ಧರ್ಮ ನ್ಯಾಯಗಳ ದೃಷ್ಟಿಯಿಂದ ಅಲ್ಲ. ‘ಟಿಪ್ಪುವನ್ನು ಸೋಲಿಸಬೇಕಾದರೆ ನಿಜಾಮ, ಮರಾಠ, ಆಂಗ್ಲರಿಗೆ ಸಹಾಯ ನೀಡಿದ್ದರು. ಮೈಸೂರನ್ನು ಅರಸರಿಗೆ ಒಪ್ಪಿಸಿಲ್ಲವೆಂದರೆ ಟಿಪ್ಪುವಿನ ಕೈಯಲ್ಲಿದ್ದ ಈ ವಿಸ್ತಾರದ ನೆಲವನ್ನು ಆಂಗ್ಲ ಒಬ್ಬನೇ ನುಂಗುವಂತಿಲ್ಲ. ನಿಜಾಮನಿಗೆ ಪಾಲು ಕೊಡಬೇಕು; ಮರಾಠನಿಗೆ ಪಾಲು ಕೊಡಬೇಕು. ಟಿಪ್ಪುವನ್ನು ಸೋಲಿಸಲು ನಾವು ನಿಮಗೆ ಸಾಹಯ ಮಾಡಿದವರು ಎಂದು ಅವರಿಬ್ಬರಿಗೂ ಸೊಕ್ಕು. ಅವರು ಈಗಾಗಲೇ ಪ್ರಬಲರಾಗಿದ್ದಾರೆ ಮತ್ತಷ್ಟು ನೆಲ ಕೊಟ್ಟರೆ ಅವರನ್ನು ಹಿಡಿಯುವವರಾರು? ಒಬ್ಬ ಟಿಪ್ಪುವನ್ನು ಸೋಲಿಸಿ ಇಬ್ಬರು ಟಿಪ್ಪುಗಳನ್ನು ಉತ್ಥಾಪನೆ ಮಾಡಿದಂತಾದೀತು. ಮೈಸೂರು ರಾಜ್ಯವನ್ನು ಹಿಂದೂ ರಾಜನಿಗೆ ಕೊಟ್ಟರೆ ಆಂಗ್ಲರು ಉಪಕಾರ ಮಾಡಿದರು ಎಂದು ಅವನು ಕೃತಜ್ಞತೆಯಿಂದ ನಡೆಯುತ್ತಾನೆ; ನಿಜಾಮನಿಗೆ ಮರಾಠನಿಗೆ ಪ್ರತಿಕಕ್ಷಿಯಾಗಿ ಮೂರನೆಯ ಒಂದು ಶಕ್ತಿಯಾಗಿ ಅವಶ್ಯಕ ಬಿದ್ದಾಗ ನಮ್ಮ ಪಕ್ಕದಲ್ಲಿ ನಿಲ್ಲುತ್ತಾನೆ’ ಹೀಗೆಂಬ ಒಂದು ಯೋಚನೆಯಿಂದ ಆಂಗ್ಲರು ಮೈಸೂರನ್ನು ಹಿಂದೂ ರಾಜನಿಗೆ ಹಿಂದಕ್ಕೆ ಕೊಟ್ಟರು.

ಮೂವತ್ತು ವರುಷದ ಹಿಂದೆ ಆ ಹೊಸದರಲ್ಲಿ ಸ್ಥಳವಾಸಿಯಾಗಿರಲು ಬಂದ ಅಧಿಕಾರಿ, ಅವನ ಸಹಾಯಕರು, ಇವರಲ್ಲಿ ಮೂರು ಪಾಲು ಜನ ‘ಅಯ್ಯೋ ಇಂಥ ನೆಲವನ್ನು ನಾವು ಸ್ವಂತಕ್ಕಿಟ್ಟುಕೊಳ್ಳದೆ ಹಿಂದಕ್ಕೆ ಕೊಟ್ಟೆವೇ’ ಎಂದು ದುಃಖಪಟ್ಟವರೆ. ಆ ಮೇಲೆ ಇಪ್ಪತ್ತು ವರುಷದಲ್ಲಿ ಟಿಪ್ಪುವಿನ ಸೋಲಿನ ಸಂದರ್ಭದ ಕಾವು ಆರಿ ಆಂಗ್ಲ ಮನೋಧರ್ಮ ಮತ್ತಷ್ಟು ಬೇರೆಯಾಯಿತು. ಆಗ ಪ್ರತಿಕಕ್ಷಿಯಾಗಿದ್ದ ಮರಾಠ ಈಗ ಮೂಲೆಗೆ ಬಿದ್ದಿದ್ದ; ಒಬ್ಬೊಂಟಿಯಾಗಿ ನಿಜಾಮ ಮರಾಠನ ಗತಿ ತನಗೂ ಬಂದೀತೆಂದು ಭೀತಿಯಲ್ಲಿದ್ದ. ಹೆಬ್ಬಾವಿನ ಮನೋಧರ್ಮದ ಆಂಗ್ಲ ಅಧಿಕಾರಿಗಳು ಸಮಯ ಬಂದೀತೇ ಎಂದು ಕಾದರು; ಮೈಸೂರಿನ ಅರಸನ ಅಧಿಕಾರಿಗಳ ಮುಟ್ಟಾಳತನದಿಂದ ರಾಜ್ಯದಲ್ಲಿ ಗೊಂದಲ ಎದ್ದಾಗ ಅದನ್ನೇ ನೆಪ ಮಾಡಿಕೊಂಡರು; ಅರಸನನ್ನು ಗಾದಿಯಿಂದಿಳಿಸಿದರು; ಮೈಸೂರನ್ನು ಕಬಳಿಸಿದರು.”
         
ಮಾಸ್ತಿ ಕೊಡುವ ಮೇಲಿನ ವಿವರಗಳಿಂದ ಬಹುಮುಖ್ಯವಾದ ಎರಡು-ಮೂರು ಸಂಗತಿಗಳು ಮನನವಾಗುತ್ತವೆ. ಅವೆಂದರೆ ಬ್ರಿಟೀಷರು ಕೊಡಗು ಮತ್ತು ಮೈಸೂರು ರಾಜ್ಯಗಳ ಪ್ರಾಕೃತಿಕ ಸಂಪತ್ತಿನ  ಮೇಲೆ ಕಣ್ಣಿಟ್ಟು ಅವನ್ನು ವಶಪಡಿಸಿಕೊಳ್ಳಲು ಆದ್ಯತೆ ನೀಡಿ ಸಮಯ ಕಾಯುತ್ತಿದ್ದರು. ಎರಡನೆಯದು ಟಿಪ್ಪುವನ್ನು ಸೋಲಿಸಲು ಮೈಸೂರಿನ ರಾಣಿ `ಬಹಳ ದೊಡ್ಡಮಟ್ಟದ’ ಸಹಾಯವನ್ನು ಬ್ರಿಟೀಷರಿಗೆ ಮಾಡಿದಳು. ಮೂರನೆಯದು ಬ್ರಿಟೀಷರು ಗೆದ್ದ ಮೈಸೂರು ರಾಜ್ಯವನ್ನು ಹಂಚುವಾಗ ಹೈದರ್ ಮತ್ತು ಟಿಪ್ಪು ಕಾಲದಲ್ಲಿ ವಿಸ್ತರಿಸಲ್ಪಟ್ಟಿದ್ದ ಭಾಗವನ್ನು ಮರಾಠರಿಗೆ ಮತ್ತು ನಿಜಾಮನಿಗೆ ಹಂಚಿ ಉಳಿದ ಸಣ್ಣ ಮೈಸೂರು ರಾಜ್ಯವನ್ನು ಮೈಸೂರು ರಾಣಿಗೆ ಮರಳಿಕೊಡುವಲ್ಲಿ ಅವರಿಗೆ ಮತೀಯ ಅಂಶಗಳನ್ನು ಬೆರೆತ ರಾಜಕೀಯ ಲೆಕ್ಕಾಚಾರಗಳಿದ್ದವು.

ಮಾಸ್ತಿ ಟಿಪ್ಪುವನ್ನು ಸೋಲಿಸಲು ಮೈಸೂರು ರಾಣಿ ಬ್ರಿಟೀಷರಿಗೆ `ಬಹಳಷ್ಟು ಸಹಾಯ’ ಮಾಡಿರುವುದನ್ನು ಬ್ರಿಟೀಷ್ ಅಧಿಕಾರಿಗಳ ಬಾಯಿಂದಲೇ `ಕೃತಜ್ಞತೆ’ಯ ಭಾಗವಾಗಿ ಹೇಳಿಸಿದ್ದು ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕು. ಮಾಸ್ತಿ ಕೊಡುವ ವಿವರಕ್ಕೆ ಪೂರಕವಾಗಿ ಹೇಳುವುದಾದರೆ, “ಟಿಪ್ಪು ಮಂಗಳೂರು ಮಲಬಾರ್ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಹೋದಾಗ ಅವನ ಅನುಪಸ್ಥಿತಿಯಲ್ಲಿ ಶ್ರೀರಂಗಪಟ್ಟಣದಲ್ಲಿ ಮೈಸೂರಿನ ರಾಣಿ ತುಂಬಾ ಕ್ರಿಯಾಶೀಲಳಾಗಿದ್ದಳು. ಆಕೆ ಟಿಪ್ಪುವಿನ ಆಡಳಿತದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತಿದ್ದ ಕೆಲವು `ಅತೃಪ್ತ’ ಅಧಿಕಾರಿಗಳಾದ ರಂಗಯ್ಯ, ಸಿಂಗಯ್ಯ, ಅಂಚೆ ಶಾಮಯ್ಯ, ಸುಬ್ಬರಾಜ್ ಮುಂತಾದವರ ನಿರಂತರ ಸಂಪರ್ಕದಲ್ಲಿದ್ದು ಟಿಪ್ಪುವನ್ನು ಅಧಿಕಾರದಿಂದ ಕೆಳಗಿಳಿಸಲು ಭಾರೀ ಪ್ರಯತ್ನ ಮಾಡಿದಳು” ಎಂಬುದನ್ನು ವಿಲ್ಕ್ಸ್ ತನ್ನ `ಹಿಸ್ಟರಿ ಆಫ್ ಮೈಸೂರ್’ ಕೃತಿಯಲ್ಲಿ ಕೂಡ ದಾಖಲಿಸಿರುವುದನ್ನು ಕೂಡ ಗಮನಿಸಬಹುದು. ಗಂಡನನ್ನು ಕಳೆದುಕೊಂಡ, ರಾಜ್ಯವನ್ನೂ ಕಳೆದುಕೊಂಡ ರಾಜಮಹಿಳೆಯೊಬ್ಬಳು ಕಳೆದುಕೊಂಡ ತನ್ನ ರಾಜ್ಯವನ್ನು ಮರಳಿ ಪಡೆಯಲು ಮಾಡಿದ ಈ ಪ್ರಯತ್ನ ತಪ್ಪಲ್ಲ ಎಂದು ವಾದಿಸಲು ಸಾಧ್ಯವಿದೆ. ವೈಯಕ್ತಿಕ ನೆಲೆಯಲ್ಲಿ ಇದು ಸರಿಯಾಗಿ ಕಾಣಬಹುದು. ಆದರೆ ಸಾಮೂಹಿಕ ನೆಲೆಯಲ್ಲಿ ಇದು ಕನ್ನಡ ನಾಡು ನುಡಿಯ ಮೇಲೆ ಮಾಡಿದ ಭಯಂಕರವಾದ ಪರಿಣಾಮಗಳನ್ನು ನೋಡಿದಾಗ ರಾಣಿಯ ಕೃತ್ಯ ಅತ್ಯಂತ ಕೆಟ್ಟದ್ದು ಎನ್ನದೇ ವಿಧಿಯಿಲ್ಲ.

ಮಾಸ್ತಿ ಕಾದಂಬರಿ ದಾಖಲಿಸುವ ಇನ್ನೊಂದು ಮುಖ್ಯವಾದ ಸಂಗತಿಯಾದ `ಹೈದರ್-ಟಿಪ್ಪು-ಬ್ರಿಟೀಷರು-ಕೊಡಗು’ ಈ ಬಗ್ಗೆ ನೋಡಬಹುದಾದರೆ ಅದಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಎರಡು ಸಂದರ್ಭಗಳಲ್ಲಿ ಬರುವ ಕೆಳಗಿನ ಲೇಖಕರ ಮಾತುಗಳನ್ನು ಗಮನಿಸಬಹುದು:  “ಕೊಡಗಿನ ನೆಲ ಒಂದರ್ಥಕ್ಕೆ ಈ ಜನರಿಗೆ ಮೈಸೂರಿಗಿಂತ ಚೆನ್ನ. ಕೊಡಗಿನ ಮಲೆ, ವನ, ಹೊಳೆ ಕಣಿವೆ, ಗದ್ದೆ ತೋಟ, ಅದನ್ನು ಅವರ ಬೈಬಲ್ಲಿನ ಗಾರ್ಡನ್ ಆಫ್ ಈಡನ್ ನಂದನವನಕ್ಕೆ ಸಮನಾಗಿ ಮಾಡಿದ್ದುವು. ತಮ್ಮ ದ್ವೀಪದ ಸ್ಕಾಟ್ಲೆಂಡ್ ಪ್ರಾಂತದ ಪರ್ವತ ಪ್ರದೇಶ ತುಂಬ ಸುಂದರ ಎನ್ನುವುದು ಆಂಗ್ಲರ ಒಂದು ತಿಳಿವಳಿಕೆ. ಕೊಡಗಿನ ಚೆಲುವು ಸ್ಕಾಟ್ಲೆಂಡಿನ ಪರ್ವತ ಪ್ರದೇಶದ ಚೆಲುವಿಗೆ ಒಂದು ಕೈ ಮೇಲೆ ಎಂಬಂತಿತ್ತು. ಮೈಸೂರನ್ನು ಕಬಳಿಸಿದಂತೆ ಕೊಡಗನ್ನು ಕಬಳಿಸುವುದಕ್ಕೆ ಬಹುಜನ ಆಂಗ್ಲರ ಬಾಯಿ ನೀರೂರುತ್ತಿತ್ತು. ಅರಸನೊಂದಿಗೆ ವಿವಾದಗಳು ಬೆಳೆಯಲಿ ಎಂದು ಇಂಥವರಿಗೆ ಆಸೆ. ಈ ಮೊದಲು ಬಂದಿದ್ದ ಹಲವು ವಿವಾದ ಊಟಕ್ಕೆ ಸಿದ್ಧವಾಗುತ್ತಿದ್ದ ಕಜ್ಜಾಯದ ನರುಗಂಪಿನಂತೆ ಇವರ ಆಸೆಯನ್ನು ಕೆರಳಿಸಿದ್ದವು; ಅರಕಲಗೂಡಿನಿಂದ ಬಂದ ದೂರಿನ ಪತ್ರಗಳಿಂದ ಈ ಜನಕ್ಕೆ ತುಂಬ ಸಂತೋಷವಾಯಿತು. ಈಗ ಮೈಸೂರಿನ ಪ್ರಭುತ್ವ ಆಂಗ್ಲ ಅಧಿಕಾರಿ ಮಂಡಳಿಯ ಕೈಯಲ್ಲಿತ್ತು. ಮ್ಯಾಕ್ಲಿಯಾಡ್ ಎಂಬಾತ ಛೀಫ್ ಕಮೀಷನರ್ (ಮುಖ್ಯಾಧಿಕಾರಿ) ಆಗಿದ್ದನು; ಕ್ಯಾಸಾಮೈಜರ್ ರೆಸಿಡೆಂಟ್ (ಸ್ಥಳವಾಸಿ); ಹಾಕರ್ ಇವನಿಗೆ ಸಹಾಯಕ. ಕ್ಯಾಸಾಮೈಜರ್ ಕೊಡಗನ್ನು ನುಂಗಬೇಕೆಂಬ ಮನಸ್ಸಿನ ಮನುಷ್ಯ; ಈಚೆಗೆ ಈ ದಿಕ್ಕಿನ ವ್ಯವಹಾರವನ್ನೆಲ್ಲ ರೆಸಿಡೆಂಟ್ ನೋಡಿಕೊಳ್ಳತಕ್ಕದ್ದೆಂದು ವ್ಯವಸ್ಥೆಯಾಗಿತ್ತು.”

ಇದರ ಜೊತೆಗೆ ತಮ್ಮ ಆತಿಥ್ಯದಲ್ಲಿದ ಬ್ರಿಟೀಷ್ ಅಧಿಕಾರಿಗಳ ತಂಡದ ಮನರಂಜನೆಗಾಗಿ ನಾಟಕ ಆಡಿ ತೋರಿಸುವ ಸನ್ನಿವೇಶವೊಂದು ಕಾದಂಬರಿಯಲ್ಲಿ ಬರುತ್ತದೆ. ಅದರ ವಿವರಗಳನ್ನು ಕೊಡುತ್ತಾ ಮಾಸ್ತಿ ಹೇಳುವ ಮಾತಿವು, “ಮಾರನೆಯ ದಿನ, ದೊಡ್ಡವೀರರಾಜ ಟಿಪ್ಪುವಿಗೆ ವಿರೋಧವಾಗಿ ಆಂಗ್ಲರಿಗೆ ಸಹಾಯ ಮಾಡಿದ ಕಥೆ. ಟಿಪ್ಪುವಿನ ಕಡೆಯ ಮುಸಲ್ಮಾನ ಫೌಜುದಾರರು ಕೊಡಗಿನ ಜನರನ್ನು ಹಿಂಸಿಸಿದ್ದು; ದೊಡ್ಡವೀರರಾಜ ಸೆರೆಯಿಂದ ಬಿಡಿಸಿಕೊಂಡು ಬಂದು ಜನರನ್ನು ಗುಂಪುಕಟ್ಟಿ ಫೌಜುದಾರರನ್ನೆದುರಿಸಿ ಅವರನ್ನೋಡಿಸಿ ಕೊಡಗನ್ನು ವಶಮಾಡಿಕೊಂಡದ್ದು; ತಲಚೇರಿ, ಮಂಗಳೂರಿಂದ ಆಂಗ್ಲರು ದಂಡೆತ್ತಿ ಹೋಗುವಾಗ ಅವರಿಗೆ ಸಹಾಯ ಮಾಡಿದ್ದು; ‘ನೀನು ನಮ್ಮ ದೇಶದವನು; ಆಂಗ್ಲರು ಪರದೇಶದವರು; ನಾವಿಬ್ಬರೂ ಅವರನ್ನು ಹೊಡೆದಟ್ಟಬೇಕು. ಗೆದ್ದ ರಾಜ್ಯದಲ್ಲಿ ನಿನಗರ್ಧವನ್ನು ಕೊಡುತ್ತೇನೆ, ಬಾ,’ ಎಂದು ಟಿಪ್ಪು ವೀರರಾಜನನ್ನು ಕರೆದ್ದು; ಅವನು `ಆಂಗ್ಲರು ನನ್ನ ಸ್ನೇಹಿತರಾಗಿದ್ದಾರೆ, ಸಾಲದ್ದಕ್ಕೆ ನೀನು ನನ್ನ ದೇಶವನ್ನು ಹಿಂಸಿಸಿದವನು’ ಎಂದು ಅವನ ಆಹ್ವಾನವನ್ನು ನಿರಾಕರಿಸಿದ್ದು; ಆಂಗ್ಲರು ಇದನ್ನು ಮೆಚ್ಚಿ ವೀರರಾಜನಿಗೆ ಗೌರವಾರ್ಥವಾಗಿ ಒಂದು ಕತ್ತಿಯನ್ನು ಕೊಟ್ಟದ್ದು; ಇದರ ಕಥೆಯನ್ನು ಆಡಿದರು…….
 
ಮಾರನೆಯ ದಿನ ಮಲಬಾರಿನ ಮುಸಲ್ಮಾನ ರಾಣಿಯನ್ನು ಟಿಪ್ಪು ಅವಳ ರಾಜ್ಯದಿಂದ ಹೊಡೆದು ಅಟ್ಟಿದ್ದು; ಅವಳು ವೀರರಾಜನ ಬಳಿಗೆ ಶರಣಾಗತಿ ಹೇಳಿ ದೂತನನ್ನು ಕಳುಹಿಸಿದ್ದು; ವೀರರಾಜ ತಲಚೇರಿಗೆ ಟೆಯಿಲರ್ ಸಾಹೇಬನಿಗೆ ಹೇಳಿ ಕಳುಹಿಸಿ ಆಂಗ್ಲರ ಸಹಾಯ ಪಡೆದು ಟಿಪ್ಪುವಿನ ಸೇನೆಯನ್ನು ಸೋಲಿಸಿ ಮಲೆಯಾಳದಿಂದ ಓಡಿಸಿ ಬೀಬೀಗೆ ಅವಳ ರಾಜ್ಯವನ್ನು ಮರಳಿ ಕೊಟ್ಟದ್ದು; ಇದರ ಕಥೆ. ಇದರಲ್ಲಿ `ಕೊಡಗಿನ ಅರಸರು ಪರನಾರಿಯನ್ನು ಸೋದರಿಯಂತೆ ಕಾಣುತ್ತಾರೆ, ಶರಣಾಗತತನ್ನು ತಮ್ಮ ಜೀವವನ್ನಾದರೂ ಕೊಟ್ಟು ರಕ್ಷಿಸುತ್ತಾರೆ, ಒಮ್ಮೆ ಸ್ನೇಹವೆಂದಮೇಲೆ ದ್ರೋಹವನ್ನು ಮಾಡುವವರಲ್ಲ’ ಎಂದು ಹೆಮ್ಮೆಯ ಮಾತು ತುಂಬಾ ಚೆನ್ನಾಗಿ ಬಂದಿತು. ಇದರ ಅರ್ಥವನ್ನೂ ಆಂಗ್ಲ ಅತಿಥಿಗಳು ಬಹಳ ಒಪ್ಪಿಕೊಂಡರು.”  

ಮಾಸ್ತಿ ಈ ಪ್ರಮುಖ ಸನ್ನಿವೇಶಗಳಲ್ಲದೇ ಕಾದಂಬರಿಯ ನಡುನಡುವೆ ಅನೇಕ ಬ್ರಿಟೀಷ್ ಅಧಿಕಾರಿಗಳು ಕೊಡಗು ಮತ್ತು ಮೈಸೂರು ರಾಜ್ಯಗಳನ್ನು ವಶಪಡಿಸಿಕೊಳ್ಳಲು ಮಾಡಿದ ಮತ್ತು ಮಾಡುತ್ತಿದ್ದ ಸಂಚಿನ ವಿವರಗಳನ್ನು ಅವರ ಪತ್ರವ್ಯವಹಾರಗಳ ಆಧಾರದ ಮೇಲೆ ದಾಖಲಿಸುತ್ತಾರೆ. ಅವರು ಕೃತಿಯಲ್ಲಿ ನೀಡುವ ಆಧಾರಗಳ ಮೇಲೆ ಈ ಬಗೆಗಿನ ವಿವರಗಳನ್ನು ಸಾರಾಂಶೀಕರಿಸುವುದಾದರೆ ಹೈದರನಿಗಾಗಲೀ ಟಿಪ್ಪೂಗಾಗಲೀ ಮೈಸೂರಿನ ಅರಸರ ಮೇಲಾಗಲೀ ಕೊಡಗಿನ ರಾಜರ ಮೇಲಾಗಲೀ ಅಲ್ಲಿನ ಜನರ ಮೇಲಾಗಲೀ ವಿಶೇಷವಾದ ಯಾವುದೇ ಮತೀಯ ಅಥವಾ ಜನಾಂಗೀಯ ದ್ವೇಷ ಇರುವುದಿಲ್ಲ. ಅವರ ಆ ಬಗೆಗಿನ ಸಂಘರ್ಷಗಳೇನಿದ್ದರೂ ಅವು ತಮ್ಮ ರಾಜ್ಯದ ಉಳಿವು ಮತ್ತು ವಿಸ್ತರಣೆಗಾಗಿ ಅವರು ಮಾಡುತ್ತಿದ್ದ ಆ ಕಾಲಘಟ್ಟದ ಯುಗಧರ್ಮದದ ಪ್ರಕಾರ `ಸರಿ’ಯಾದ ಸಾಮಾನ್ಯ ಸಂಗತಿಗಳಾಗಿದ್ದವು. ರಾಣಿಯ ಸಹಾಯದಿಂದ ಟಿಪ್ಪುವನ್ನು ಕೊಂದು ಮೈಸೂರನ್ನು ವಶಪಡಿಸಿಕೊಂಡ ಮೇಲೆ ಅಲ್ಲಿ ಬ್ರಿಟೀಷರು `ಗೊಂಬೆಸರ್ಕಾರ’ ವನ್ನು’ವನ್ನು ಸ್ಥಾಪಿಸಿದ್ದರಾದರೂ ಕೆಲವೇ ವರ್ಷಗಳಲ್ಲಿ `ಸರಿಯಾಗಿ ಆಡಳಿತ ನಡೆಯುತ್ತಿಲ್ಲ’ ಎಂಬ ನೆಪವೊಡ್ಡಿ ಮತ್ತೆ ಅದನ್ನು ಮರಳಿ ಪಡೆದು ತಾವೇ ಕಮಿಷನರೇಟ್ ಆಡಳಿತ ನಡೆಸತೊಡಗುತ್ತಾರೆ.(ಈ ಆಡಳಿತ ಸು. 1830 ರಿಂದ 1880 ರವರೆಗೆ ಸುಮಾರು 50 ವರ್ಷ ನಡೆಯುತ್ತದೆ.) ಇದರಿಂದ ಜನರು ತಿರುಗಿಬೀಳಬಹುದೆಂದು ಸ್ವಲ್ಪ ಹೆದರಿದ್ದ ಅವರು ಕೊಡಗನ್ನು ವಶಪಡಿಸಿಕೊಳ್ಳಲು ಅತ್ಯಂತ ಉತ್ಸುಕರಾಗಿದ್ದರೂ ತಕ್ಷಣ ಆ ಕೆಲಸಕ್ಕೆ ಮುನ್ನುಗ್ಗದೇ ಚಾಣಾಕ್ಷತನದಿಂದ ರಣತಂತ್ರ ರೂಪಿಸುತ್ತಿರುತ್ತಾರೆ.

ಆ ರಣತಂತ್ರದ ಬಹುಮುಖ್ಯಭಾಗವೆಂದರೆ “ಈ ದೇಶೀಯ ರಾಜರು ಚೆನ್ನಾಗಿ ಆಡಳಿತ ನಡೆಸುತ್ತಿಲ್ಲ. ನಮಗೆ ಬ್ರಿಟೀಷ್ ಸರ್ಕಾರವೇ ಬೇಕು, ಅವರಿಂದಲೇ ನಮ್ಮ ಉದ್ಧಾರವಾಗುವುದು” ಎಂದು ಆ ಭಾಗದ ಜನರೇ ಇಚ್ಚೆಪಡುವಂತೆ ಮಾಡುವುದು. ಇದಕ್ಕೆ ಪೂರಕವಾಗಿ ಕೊಡಗಿನ ಕೊನೆಯ ರಾಜನಾದ ಚಿಕವೀರರಾಜೇಂದ್ರ ಕೂಡ ಅತ್ಯಂತ ಬೇಜವಾಬ್ದಾರಿ ರಾಜನಾಗಿದ್ದ. ಅವನ ಕೌಟಂಬಿಕ ಕಲಹಗಳು ಮಿತಿಮೀರಿದ್ದವು. ವೈಯಕ್ತಿಕವಾಗಿ ನಡತೆಯೂ ಘನತೆಯಿಂದ ಕೂಡಿರಲಿಲ್ಲ. ಚಿಕ್ಕವಯಸ್ಸಿನಲ್ಲಿಯೇ ಮಂತ್ರಿ ಬಸವಯ್ಯನ ಸಹವಾಸಕ್ಕೆ ಸಿಕ್ಕ ಅವನು ಎಲ್ಲಬಗೆಯ ಕೆಟ್ಟಚಾಳಿಗಳನ್ನು ಕಲಿತು ತಾನೂ ಹಾಳಾಗುತ್ತಿದ್ದ; ರಾಜ್ಯವನ್ನೂ ಹಾಳುಮಾಡುತ್ತಿದ್ದ. ಅತ್ಯಂತ ಸ್ತ್ರೀಲೋಲುಪನಾದ ಅವನ ಸ್ವಭಾವವನ್ನು ಕುರಿತು ಲೇಖಕರು, “ಉಳಿದ ಜನ ಹೆಣ್ಣು ಎಂಬುದನ್ನು ಮೊದಲು ಕಾಣುವ ವಯಸ್ಸಿಗೆ, ತಾನು ಮೈಯಲ್ಲಿ ಶಕ್ತಿ ಇಲ್ಲ ಎಂಬ ಮಟ್ಟಿಗೆ ದುರಾಚಾರದಲ್ಲಿ ಬಾಳಿದನು.” ಎಂದು ಬರೆಯುತ್ತಾರೆ. ಇದರ ಜೊತೆ ಕೊಡಗಿನ ಸಾಮಾನ್ಯ ಜನರ ಮನಸ್ಥಿತಿ ಹೇಗಿತ್ತು ಎಂಬುದನ್ನು ಲೇಖಕರು ಹೇಳುವ ಈ ಮಾತು ಸ್ಪಷ್ಟಪಡಿಸುತ್ತದೆ, “ಬಿಳಿಯಜನ ನಮ್ಮನ್ನು ಒಪ್ಪಿಕೊಂಡಿದ್ದಾರೆ ಎಂದು ಕೊಡಗರಿಗೆ ಬಹಳ ಸಂತೋಷ. ಉಳಿದ ಜನಕ್ಕಾದರೂ ಈ ಹೊರದೇಶದ ಜನರೆದುರಲ್ಲಿ ನಮ್ಮವರು ಬುದ್ಧಿವಂತರೆನಿಸಿಕೊಂಡರು ಎಂದು ಹೆಮ್ಮೆಯೇ.”

ಕೊಡಗಿನ ರಾಜನ ಆತಿಥ್ಯವನ್ನು ಪಡೆದು ಬಂದ ಬ್ರಿಟೀಷ್ ಅಧಿಕಾರಿಗಳು ಮದ್ರಾಸ್ ಕೇಂದ್ರದ ಮೇಲಾಧಿಕಾರಿಗೆ ಪತ್ರಬರೆದು ಕೊಡಗಿನಲ್ಲಿ ರಾಜನ ವಿರೋಧವಾಗಿ ಅಲ್ಲಿನ ಜನ ಸಿಡಿದೇಳುವ ಲಕ್ಷಣಗಳು ನಮಗೆ ನಿಚ್ಚಳವಾಗಿ ಕಂಡುಬಂದಿವೆ. ಹಾಗಾಗಿ ಈಗಾಗಲೇ ನಾವು ಅವಸರ ಮಾಡಿ ಕೊಡಗಿನ ಮೇಲೆ ನುಗ್ಗದೆ ಪರಿಸ್ಥಿತಿ ಇನ್ನಷ್ಟು ಮಾಗುವವರೆಗೆ ಕಾಯುವುದು ಒಳ್ಳೆಯದು ಎಂದು ವರದಿ ಮಾಡುತ್ತಾರೆ. (ಕೊಡಗಿನಲ್ಲಿ ಅವರ ಮನರಂಜನೆಗೆ ಏರ್ಪಾಡಾಗಿದ್ದ ದಿನಗಳಲ್ಲಿ ಅಲ್ಲಿನ ಒಂದು ಕಲಾತಂಡ ರಾಜನ ಮತ್ತು ಬ್ರಿಟೀಷ್ ಅಧಿಕಾರಿಗಳ ಸಮ್ಮುಖದಲ್ಲಿಯೇ ರಾಜನನ್ನು ಅವಹೇಳನ ಮಾಡುವ ತೆಗಳುವ ಒಂದು ನಾಟಕವನ್ನು ಮಾಡಿರುತ್ತದೆ. ರಾಜಭಟರು ಅವರನ್ನು ಹಿಡಿಯಲು ಹೋಗುವ ವೇಳೆಗೆ ಅವರು ತಪ್ಪಿಸಿಕೊಂಡಿರುತ್ತಾರೆ. ಇದನ್ನು ಗಮನಿಸಿದ ಬ್ರಿಟೀಷ್ ಅಧಿಕಾರಿಗಳು ಈ ಹಿನ್ನಲೆಯಲ್ಲಿ ಈ ವರದಿಮಾಡುತ್ತಾರೆ).

ಇದಲ್ಲದೇ ಕೊಡಗು ತಮ್ಮ ಕ್ರೈಸ್ತಮತವನ್ನು ಬೆಳೆಸಲು ಉತ್ತಮವಾದ ಜಾಗೆಯಾಗಿದ್ದು ಅದಕ್ಕೂ ಅವರು ಸಂಚುಹೂಡಿರುತ್ತಾರೆ. ಅವರೆಲ್ಲ ಕೊಡಗಿನ ರಾಜನ ಆತಿಥ್ಯದಲ್ಲಿದ್ದಾಗಲೇ ಒಂದು ದಿನ `ಕ್ರೈಸ್ತಮತಶ್ರೇಷ್ಠವೆಂದೂ ಅದನ್ನು ವಿರೋಧಿಸುವವರು ನಿಮ್ಮಲ್ಲಿ ಯಾರಾದರೂ ಇದ್ದರೆ ವಾದಿಸಲಿ’ ಎಂದೂ ಬ್ರಿಟೀಷ ಪಾದ್ರಿಯೊಬ್ಬ ಅಧಿಕಾರಿಗಳನ್ನು ಒಪ್ಪಿಸಿ ಕೊಡಗಿನ ರಾಜನ ಸಮ್ಮುಖದಲ್ಲಿಯೇ ಒಂದು ದೊಡ್ಡ ಚರ್ಚೆಯನ್ನೇ ಏರ್ಪಾಡು ಮಾಡಿಸುವಲ್ಲಿ ಯಶಸ್ವಿಯಾಗಿರುತ್ತಾನೆ. ಆದರೆ ಅವನಂದುಕೊಂಡಂತೆ ಅಲ್ಲಿ ಅವನ ಬೇಳೆ ಬೇಯುವುದಿಲ್ಲ. ಚಿಕವೀರರಾಜೇಂದ್ರನ ರಾಜ್ಯದಲ್ಲಿ ಕಾಡಿನಲ್ಲಿ ಗುಡಿಸಲು ಕಟ್ಟಿಕೊಂಡ `ಭಗವತಿ’ ಎಂಬ ಸಾಧ್ವಿಯೊಬ್ಬಳು ಈ ಚರ್ಚೆಯಲ್ಲಿ ಪಾಲ್ಗೊಂಡು  ಈ ಪಾದ್ರಿಯ ಬೆವರಿಳಿಸಿಬಿಡುತ್ತಾಳೆ. ಕೊನೆಗೆ ಬಾಲಸುಟ್ಟ ಬೆಕ್ಕಿನಂತೆ ಇವರು ಮರಳಿರುತ್ತಾರಾದರೂ ತಮ್ಮ ಮತವನ್ನು ಬೆಳೆಸುವ ಅವಕಾಶ ಅಲ್ಲಿ ಹೇರಳವಾಗಿರುವ ಬಗ್ಗೆ ಅವರ ಆಶಾಭಾವನೆ ಕುಂದಿರುವುದಿಲ್ಲ. ಹೀಗೆ ರಾಜಕೀಯವಾಗಿ ಕೊಡಗಿನ ರಾಜನ ವಿರುದ್ಧ ಅವನ ದಾಯಾದಿಗಳು ಮತ್ತು ಜನ ಸಿಡಿದೇಳುವ ಮತ್ತು `ನಮಗೆ ಬ್ರಿಟೀಷ್ ಸರ್ಕಾರವೇ ಬೇಕು’ ಎಂದು ಅವರೇ ಒತ್ತಾಯಿಸುವಂತಹ ವಾತಾವರಣ ನಿರ್ಮಾಣವಾಗಲು ಮತ್ತು ಧಾರ್ಮಿಕವಾಗಿ ನಮಗೆ `ಕ್ರಿಸ್ತನೇ ಗುರು, ಕ್ರೈಸ್ತಮತದಿಂದಲೇ ನಮ್ಮ ಜೀವನ ಸಾರ್ಥಕವಾಗುವುದು’ ಎಂದು ಅವರೇ ಭಾವಿಸುವಂತಹ ವಾತಾವರಣ ನಿರ್ಮಾಣವಾಗಲು ಏನು ಬೇಕೋ ಅದನ್ನು ಅವರು ಮಾಡುತ್ತಾ ಹೋಗುತ್ತಾರೆ. ಅವರ ಈ ಕಾರ್ಯ ಫಲಕೊಟ್ಟು ಕೊನೆಗೂ 1834ರ ಹೊತ್ತಿಗೆ ಕೊಡಗು ಬ್ರಿಟೀಷರ ವಶವಾಗುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಕೊಡಗು ಹಾಳಾಗಲು, ಅಲ್ಲಿನ ಜನ ಹಾಳಾಗಲು ಟಿಪ್ಪು ಅಥವಾ ಹೈದರ್ ಎಷ್ಟೂ ಕಾರಣರಲ್ಲ. ಅದು ಹಾಳಾಗಿದ್ದು ಮುಖ್ಯವಾಗಿ ಅಲ್ಲಿನ ಅರಸರಿಂದ. ಮತ್ತು ಅವರ ದೌರ್ಬಲ್ಯದ ಲಾಭಪಡೆದ ಬ್ರಿಟೀಷರಿಂದ, ಹಾಗೂ ಬ್ರಿಟೀಷರಿಂದ ಹೊಗಳಿಸಿಕೊಳ್ಳುವುದನ್ನು `ಹೆಮ್ಮೆಯ ಸಂಗತಿ’ ಎಂದು ಭಾವಿಸಿದ್ದ ಅಲ್ಲಿನ ಜನರಿಂದ. ಈ ಕಡೆ ಮದ್ರಾಸ್ ಆ ಕಡೆ ಮಲಬಾರ್ (ಈಗಿನ ದಕ್ಷಿಣ ಕನ್ನಡದ ಭಾಗ) ಎರಡೂ ಬ್ರಿಟೀಷರ ಆಡಳಿತಕ್ಕೆ ಒಳಪಟ್ಟಿದ್ದು ಅವುಗಳ ಮಧ್ಯೆ ಈ ಎರಡು ಸಂಸ್ಥಾನಗಳು ಇದ್ದು ಜನ ಅತ್ತಿಂದಿತ್ತ ಅಡ್ಡಾಡುವ ಕಾರಣ ಕಳ್ಳತನ, ಹಾದರ ಇಂತಹ ಸಣ್ಣಪುಟ್ಟ ವ್ಯವಹಾರಗಳು ಕೂಡ ಒಂದು ರೀತಿಯಲ್ಲಿ ಈಗಿನ `ಅಂತರರಾಷ್ಟ್ರೀಯ ಸಮಸ್ಯೆ’ಯಂತೆ ಬಿಗಡಾಯಿಸಿಕೊಳ್ಳುತ್ತಿದ್ದವು. ಟಿಪ್ಪೂಗೆ ಕೊಡಗಿನ ಅಥವಾ ಮೈಸೂರಿನ ರಾಜರ ಬಗ್ಗೆ ಇದ್ದ ವೈರತ್ವವು `ಹಿಂದೂ-ಮುಸ್ಲಿಮ್’ ಜನಾಂಗೀಯ ಕಾರಣದಿಂದ ಅಥವಾ `ಹಿಂದೂ-ಇಸ್ಲಾಂ’ ಧಾರ್ಮಿಕ ಕಾರಣದಿಂದ ಹುಟ್ಟಿದ್ದಾಗಲೀ ಬೆಳದದ್ದಾಗಲೀ ಆಗಿರುವುದಿಲ್ಲ. ಅದು `ಶತ್ರುವಿನ ಮಿತ್ರನೂ ಶತ್ರುವೇ’ ಎಂಬ ತತ್ವದಂತೆ ತಾತ್ವಿಕ ಕಾರಣದಿಂದ ಹುಟ್ಟಿಬೆಳೆದದ್ದಾಗಿತ್ತು. ಯಾವ ಬ್ರಿಟೀಷರನ್ನು ಅವನು ಈ ನೆಲದಿಂದ ಕಾಲ್ಕೀಳುವಂತೆ ಮಾಡಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡುತ್ತಿದ್ದನೋ ಅದೇ ಬ್ರಿಟೀಷರನ್ನು ಇವರು ಬೆಂಬಲಿಸುತ್ತಿದ್ದುದು, ತಮಗೂ ಮುಂದೆ ಬರಬಹುದಾದ ಕುತ್ತನ್ನೂ ಲಕ್ಷಿಸದೇ ಅವರ ಜೊತೆಗೆ ಕೈಜೋಡಿಸಿ ತನ್ನನ್ನು ಮುಗಿಸಲು ಸಂಚುಹೂಡುತ್ತಿದ್ದುದು ಅವನನ್ನ ಕೆರಳಿಸಿದ್ದ ಮುಖ್ಯ ಸಂಗತಿಗಳಾಗಿದ್ದವು. ಹೈದರಾಬಾದ್ ನಿಜಾಮನು ಬ್ರಿಟೀಷರ ವಿರುದ್ಧ ತನಗೆ ಸಹಾಯ ಮಾಡದೇ ತನ್ನ ವಿರುದ್ಧ ಬ್ರಿಟೀಷರಿಗೆ ಸಹಾಯ ಮಾಡಿದ ಕಾರಣಕ್ಕೆ ಅವನೊಡನೆ ವೈವಾಹಿಕ ಸಂಬಂಧವನ್ನೂ ಟಿಪ್ಪು ನಿರಾಕರಿಸಿದ್ದು, ಮಾಸ್ತಿಯೇ ದಾಖಲಿಸುವಂತೆ ಮುಸ್ಲಿಂ ರಾಣಿಯನ್ನೇ ಪದಚ್ಯುತಗೊಳಿಸಿ ಓಡಿಸಿದ್ದು ನೋಡಿದರೆ ಅವನ ಹೋರಾಟಗಳು ಮತಧರ್ಮಗಳನ್ನು ಅವಲಂಬಿಸಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅದನ್ನೇ ಯಾವ ಪೂರ್ವಾಗ್ರಹಕ್ಕೂ ಒಳಗಾಗದೆ ಮಾಸ್ತಿ ಕಾದಂಬರಿ ದಾಖಲಿಸುತ್ತದೆ ಕೂಡ!
*****
ಡಾ. ರಾಜೇಂದ್ರ ಬುರಡಿಕಟ್ಟಿ

06-11-2017

No comments:

Post a Comment