Wednesday, August 23, 2017

ತ್ರಿವಳಿ ತಲಾಕ್: ಆಗದವರ ಮೇಲೆ ಆಲದಮರ ಬಿದ್ದಾಗ...

ತ್ರಿವಳಿ ತಲಾಕ್:  ಆಗದವರ ಮೇಲೆ ಆಲದಮರ ಬಿದ್ದಾಗ...


ಕುವೆಂಪು ರಾಮಾಯಣದಲ್ಲಿ ಒಂದು ಪ್ರಸಂಗ ಬರುತ್ತದೆ. ರಾವಣನ ಹೆಂಡತಿಯಾದ ಮಂಡೋದರಿ ಒಂದು ರಾತ್ರಿ ಗಂಡನ ಕಣ್ಣು ತಪ್ಪಿಸಿ ಕದ್ದು ಅಶೋಕವನಕ್ಕೆ ಬಂದು ತನ್ನ ಗಂಡ ಹೊತ್ತುಕೊಂಡು ಬಂದು ಅಲ್ಲಿ ಇಟ್ಟಿದ್ದ ಸೀತೆಯನ್ನು ಭೇಟಿಮಾಡುತ್ತಾಳೆ. ಪರಸ್ಪರ ವಿರೋಧಿ ಪಾಳೆಯಕ್ಕೆ ಸೇರಿದ ಈ ಇಬ್ಬರು ಮಹಿಳೆಯರ ನಡುವೆ ನಡೆಯುವ ಮನಕಲುಕುವ ಸಂಭಾಷಣೆ ಯಾವುದೇ ತಾಯಿಮಗಳ ನಡುವಿನ ಹೃದಯಸಂಭಾಷಣೆಗಿಂತ ಮಿಗಿಲು ಎನ್ನುವಂತಿದೆ. ತನ್ನ ಮುಖವನ್ನು ಮಂಡೋದರಿಯ ಎದೆಯಲ್ಲಿ ಹುದುಗಿಸಿಕೊಂಡು ಬಿಕ್ಕುವ ಸೀತೆಯನ್ನು ಅಪ್ಪಿಕೊಂಡು ಅವಳ ತಲೆ ನೇವರಿಸುತ್ತಾ  ಮಂಡೋದರಿಯ ಬಾಯಿಂದ ಬರುವ ಒಂದು ಮಾತು ಇದು: 'ನಾನಕ್ಕನ್ ತಂಗೆ, ನಿನಗೆ ವಯಸ್ಸಿನಂದಂತೆ ದುಕ್ಕದೊಳ್.'

ತ್ರಿವಳಿ ತಲಾಕ್ ವಿರುದ್ಧ ಸುಪ್ರೀಮ್ ಕೋರ್ಟ್ ನೀಡಿರುವ ತೀರ್ಪು ಹಲವು ಕಾರಣಗಳಿಂದ ಮಹತ್ವದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಗದ್ವೇಷಗಳಿಂದ ಮುಕ್ತವಾದ ಸಮಸಮಾಜ ನಿರ್ಮಾಣದ ಕನಸನ್ನು ಕಾಣುತ್ತಿರುವ ಎಲ್ಲ ಮಾನವ ಪ್ರೇಮಿಗಳಿಗೆ ಇದು ಹೊಸ ಭರವಸೆಯನ್ನುಂಟುಮಾಡಿದೆ. ಪರಸ್ಪರ ವಿರೋಧಿ ಆಲೋಚನಾ ಕ್ರಮವನ್ನು ಹೊಂದಿರುವ ವಿವಿಧ ಕ್ಷೇತ್ರಗಳ ನಾಯಕರು, ಮತ್ತು  'ಕಾಂಬಿಎ' ಪಕ್ಷಗಳು (ಕಾಂಗ್ರಸ್, ಬಿಜೆಪಿ, ಎಡಪಕ್ಷಗಳು) ಒಟ್ಟಾಗಿ ಈ ರೀತಿ ಸುಪ್ರೀಮ್ ಕೋರ್ಟಿನ ತೀರ್ಪನ್ನು ಸ್ವಾಗತಿಸಿದ ವಿದ್ಯಮಾನ ಇತ್ತೀಚಿನ ವರ್ಷಗಳಲ್ಲಿಯೇ ಅಪರೂಪದ್ದು ಎನ್ನಬಹುದು.

ಆದರೆ ಕೆಲವು 'ದೇಶಭಕ್ತರು' ಈ ತೀರ್ಪಿಗೆ ವ್ಯಕ್ತಪಡಿಸುತ್ತಿರುವ 'ಅಪರಿಮಿತ' 'ಅತ್ಯಾನಂದ'ಭರಿತ ಹರ್ಷೋದ್ಗಾರವು  ಪ್ರಾಮಾಣಿಕವಾಗಿದ್ದಂತಿಲ್ಲ. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ನಡೆದಾಗಲೆಲ್ಲ ಅತ್ಯಾಚಾರಿಗಳನ್ನು ಖಂಡಿಸುವ ಬದಲು, "ಹೆಣ್ಣುಮಕ್ಕಳು ಮನೆಯಲ್ಲಿರುವುದನ್ನು ಬಿಟ್ಟು ಯಾವಾಗ ಬೇಕೋ ಆವಾಗೆಲ್ಲ ಹೊರಗೆ ಏಕೆ ತಿರುಗಾಡಲು ಹೋಗಬೇಕು?" ಎಂದು ವಾದಿಸುವ ಮತ್ತು 'ಸ್ತ್ರೀ ಸ್ವಾತಂತ್ರಮನರ್ಹತಿ' ಎಂಬ ಧರ್ಮಶಾಸ್ತ್ರವನ್ನೇ ಬರೆದುಕೊಂಡಿರುವ ಪುರುಷಪ್ರಧಾನ ವ್ಯವಸ್ಥೆಯ ಪ್ರತಿಪಾದಕರೆಲ್ಲ ಇಂದು 'ಮಿಂದು ಮಡಿಯನು ಉಟ್ಟು ನೊಸಲ ತಿಲಕವನಿಟ್ಟು' ಈ ತೀರ್ಪನ್ನು ಸ್ವಾಗತಿಸುವಲ್ಲಿ ಮುಂಚೂಣಿಯಲ್ಲಿ ನಿಂತಿದ್ದಾರೆ! 

ತಲಾಕ್ ಕೊಡದಿದ್ದರೂ ಮಹಿಳೆಯನ್ನು ತಮ್ಮಿಷ್ಟದಂತೆ 'ಪೂಜ್ಯ' ಮತ್ತು 'ತ್ಯಾಜ್ಯ' 'ವಸ್ತು'ವಾಗಿ ಪರಿಗಣಿಸುವ ಇವರೆಲ್ಲರೂ ಈ ತೀರ್ಪಿನ ಬಗ್ಗೆ ವ್ಯಕ್ತಪಡಿಸುತ್ತಿರುವ ಅಮಿತಾನಂದವು ಸಹಜವಾಗಿಯೇ ಯಾರಲ್ಲಿಯೇ ಆದರೂ ಅನುಮಾನಗಳನ್ನು ಹುಟ್ಟಿಸುವಂಥದ್ದು. ಏಕೆಂದರೆ ಇವರೆಲ್ಲರ ಸ್ತ್ರೀಸ್ವಾತಂತ್ರ್ಯ ಕಾಳಜಿ ಪ್ರಾಮಾಣಿಕವಾಗಿರುವಂಥದ್ದೇ ಆಗಿದ್ದರೆ ಭಾರತದಲ್ಲಿ 'ಸ್ತ್ರೀವಾದಿ ಚಳವಳಿಯೇ ಹುಟ್ಟುತ್ತಿರಲಿಲ್ಲ  ಎಂಬುದನ್ನು ನಾವು ಗಮನಿಸಬೇಕು. 

ಈ ಧರ್ಮ (ಪ್ರ)ವರ್ತಕರು ಕೋರ್ಟಿನ ಈ ತೀರ್ಪನ್ನು ಬೆಣ್ಣೆಮಾತುಗಳಿಂದ ಬಣ್ಣಿಸುವ ಪರಿ ನೋಡಿದರೆ 'ಆಪತ್ತಿನಲ್ಲಿದ್ದವರಿಗೆ ಆಸರೆ ದೊರೆಯಿತು' ಎಂಬ 'ಸಹಜಾನಂದ'ಕ್ಕಿಂತ 'ಆಗದವರ ಮೇಲೆ ಆಲದಮರ ಬಿದ್ದಿತು' ಎಂಬ 'ವಿಕಟಾನಂದ'ವೇ ಇವರ 'ಖುಷಿಗೆ' ಕಾರಣವಿದ್ದಂತಿದೆ. ಯಾವುದಕ್ಕೂ ನಾವು ಹುಷಾರಾಗಿರಬೇಕಾಗಿದೆ.

ಈ ಮಧ್ಯೆ ಈ ತೀರ್ಪು ಬಂದದ್ದನ್ನು ತಿಳಿದ ಕೂಡಲೇ ಮುಂಬೈನಲ್ಲಿ ಕೆಲವು ಮುಸ್ಲಿಮ್ ಮಹಿಳೆಯರು ಸಂತೋಷದಿಂದ ಕುಣಿದು ಕುಪ್ಪಳಿಸಿದರೆಂದೂ ಅದಕ್ಕಾಗಿ ಮೋದಿಯವರಿಗೆ ಅಭಿನಂದಿಸಿದರೆಂದೂ ಕಾಂಗ್ರಸ್ ಸರ್ಕಾರ ಇದ್ದಿದ್ದರೆ ತಮ್ಮ ಸಮಸ್ಯೆ ಬಗೆಹರಿಯುತ್ತಿರಲಿಲ್ಲವೆಂದು ಹೇಳಿ ಸಂಭ್ರಮಿಸಿದರೆಂದೂ ಸಾಮಾಜಿಕ ಜಾಲತಾಣದಲ್ಲಿ ಯಾರೋ ಹಾಕಿದ ಫೋಟೋ ಸಹಿತ ಸುದ್ಧಿಯೊಂದು ನಮ್ಮಂಥವರಲ್ಲಿ ಆತಂಕವನ್ನುಂಟು ಮಾಡಿದೆ. ಕಾಂಗ್ರೆಸ್ ಬಿಜೆಪಿ ಎಂಬ ಕಾರಣಕ್ಕಾಗಿ ಅಲ್ಲ; ಈ ಮಹಿಳೆಯರು ತಮಗೆ ತೀರ್ಪು ಅಷ್ಟು ಸಂತೋಷವನ್ನುಂಟು ಮಾಡಿದ್ದರೆ  ಸುಪ್ರೀಂ ಕೋರ್ಟು ಮತ್ತು ಅಲ್ಲಿನ ನ್ಯಾಯಾಧೀಶರನ್ನು ಅಭಿನಂದಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರವನ್ನೂ ಪ್ರಧಾನ ಮಂತ್ರಿಗಳನ್ನು ಏಕೆ ಅಭಿನಂದಿಸಿದರು ಎಂಬ ಕಾರಣಕ್ಕಾಗಿ. 

ಇಂತಹ ಮಹತ್ವದ ಸಮಸ್ಯೆಗಳ ವಿಚಾರಣೆಗಳನ್ನು ನ್ಯಾಯಾಲಯಗಳೇ ಮಾಡುತ್ತವೆ ಮತ್ತು ನ್ಯಾಯಾದೀಶರೇ ತೀರ್ಪುಗಳನ್ನು ಬರೆದು ಪ್ರಕಟಿಸುತ್ತಾರೆ ಎಂದು ನಾವು ಬಲವಾಗಿ ನಂಬಿರುವುದು ನಮ್ಮ ಈ ಬಗೆಗಿನ ಆತಂಕಕ್ಕೆ ಕಾರಣವಿದ್ದೀತು. 

ಇದು ಏನೇ ಆಗಲಿ ತೀರ್ಪು ಭಾರತದಲ್ಲಿ ಬಹಳಷ್ಟು ಜನ ಅಭಿಪ್ರಾಯ ಪಟ್ಟಂತೆ ಲಿಂಗಸಮಾನತೆ ಸಾಧಿಸುವಕಡೆ ಬಹುಮುಖ್ಯವಾದ ಹೆಜ್ಜೆಯಾಗಬಹುದು, ಕೋಮುವಾದಿಗಳು ಮತ್ತು ಮೂಲಭೂತವಾದಿಗಳು ತಮಗೆ ಬೇಕಾದಂತೆ ಅದನ್ನು ಬಳಸಿಕೊಳ್ಳುವ ಅವಕಾಶವನ್ನು ನಾವು ನೀವೆಲ್ಲ ನೀಡದಿದ್ದರೆ. ಆ ನಿಟ್ಟಿನಲ್ಲಿ ನಮ್ಮ ನಮ್ಮ ಹಂತದಲ್ಲಿ ಏನೇನು ಸಾಧ್ಯವಿದೆಯೋ ಅದನ್ನೆಲ್ಲ ಮಾಡೋಣ. 

ನಾವೆಲ್ಲರೂ ವಿಶೇಷವಾಗಿ ನಮ್ಮ ಸಹೋದರಿಯರು ಸ್ಪಷ್ಟವಾಗಿ ಒಂದು ಸಂಗತಿಯನ್ನು ಅರ್ಥಮಾಡಿಕೊಳ್ಳಬೇಕು. ಅದೆಂದರೆ ನಮ್ಮಲ್ಲಿ ಮಹಿಳೆಯರೆಲ್ಲರೂ ಅವರು ಹಿಂದೂ ಇರಲಿ, ಮುಸ್ಲಿಮ್ ಇರಲಿ ಸಮಾನದುಃಖಿಗಳು. ಈ ದುಃಖದ ಪ್ರಮಾಣದಲ್ಲಿ ಒಂದಿಷ್ಟು ವ್ಯತ್ಯಾಸಗಳಿರಬಹುದು ಅಷ್ಟೇ. ಆರಂಭದಲ್ಲಿ ನಾನು ಉಲ್ಲೇಖಿಸಿದ ಕುವೆಂಪು ಕಾವ್ಯ ಹೇಳುವಂತೆ ಇವರೆಲ್ಲ ಕೇವಲ ವಯಸ್ಸಿನಲ್ಲಿ ಮಾತ್ರವಲ್ಲ ದುಃಖದಲ್ಲಿಯೂ ಅಕ್ಕತಂಗಿಯರು!!!

- ರಾಜೇಂದ್ರ ಬುರಡಿಕಟ್ಟಿ

No comments:

Post a Comment