Tuesday, August 29, 2017

ಪಂಪೀ ಒತ್ತಡ ಮತ್ತು ಕುಂವೀ ಸಂಕಟ

ಪಂಪೀ ಒತ್ತಡ ಮತ್ತು ಕುಂವೀ ಸಂಕಟ

ಇತ್ತೀಚೆಗಷ್ಟೆ ಕೆಲವು ಪಂಚಪೀಠಾಧೀಶ  'ಜಗದ್ಗುರು'ಗಳ ಬಗ್ಗೆ ಹಿರಿಯ ಲೇಖಕ ಮಿತ್ರರಾದ ಕುಂಬಾರ ವೀರಭದ್ರಪ್ಪ ಅವರು ತಮ್ಮ ಸಹಜಶೈಲಿಯ ಮಾತಿನ ಚಾಟಿ ಬೀಸಿದ್ದರು. ಅವರು ಆಗ ಮಾತನಾಡಿದ್ದು ಅವರ ನಿಜವಾದ ಮತ್ತು ಸಹಜವಾದ ಅಭಿಪ್ರಾಯ ಎಂದು ನಂಬಲು ಕಾರಣಗಳಿವೆ. ಏಕೆಂದರೆ ಆ ಮಾತುಗಳನ್ನು ಆಡುವಾಗ ಅವರ ಮೇಲೆ ಯಾವುದೇ ಒತ್ತಡಗಳಿದ್ದಂತೆ ತೋರುವುದಿಲ್ಲ. ಆಗ ಅವರು ಆಡಿದ ಮಾತುಗಳು ಕೆಲವು ಪಂಪೀಗಳ ಅರ್ಥರಹಿತವಾದ ಕೆಲವು ಆಚರಣೆಗಳ ಬಗೆಗಿನ ಅವರ ವಿರೋಧವೇ ಹೊರತು ಆ 'ಮಹಾಗುರು' ಗಳನ್ನು ವೈಯಕ್ತಿಕವಾಗಿ ವಿರೋಧಿಸುವ ಉದ್ದೇಶ ಅವರಿಗಿದ್ದಂತೆ ತೋರುವುದಿಲ್ಲ.

ಆದರೆ ಅದೇ ಕುಂವೀ ಇಂದು ಈ ಪಂಪೀಗಳ ಕುರಿತು ಈ ಮೊದಲು ಆಡಿದ್ದ ತಮ್ಮ ಮಾತು 'ತುಟಿತಪ್ಪಿ ಆಡಿದ್ದು' ಎಂದೂ ಪಂಪೀಗಳ ಬಗ್ಗೆ ತಮಗೆ 'ಅಪಾರವಾದ ಗೌರವವಿದೆ' ಎಂದೂ ಹೇಳಿಕೆ ನೀಡಿದ್ದು ವರದಿಯಾಗಿದೆ. ಈ ಬಗ್ಗೆ ಅನೇಕ ಸ್ನೇಹಿತರು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ವಿರೋಧ ಅಭಿಪ್ರಾಯಗಳಿರುವ ಅರ್ಥಪೂರ್ಣ ಚರ್ಚೆ ನಡೆಸಿದ್ದಾರೆ.

ಕುಂವೀ ಈ ಹೇಳಿಕೆ ನೀಡಲು ಅವರ  ಮೇಲೆ ಕೆಲವು ಪಂಪೀಗಳು ನೇರವಾಗಿಯೋ ತಮ್ಮನ್ನು ಹೊರುವ 'ಭಕ್ತರ' ಮೂಲಕವೋ ಒತ್ತಡ ಹೇರಿದ್ದಾರೆ, ಬೆದರಿಕೆ ಒಡ್ಡಿದ್ದಾರೆ ಎಂಬುದು ಇಲ್ಲಿ ಚರ್ಚಿಸಲ್ಪಡುತ್ತಿರುವ ಒಂದು ಮುಖ್ಯವಾದ ಸಂಗತಿ. ಇದನ್ನು ನಾವು ಸುಲಭವಾಗಿ ಅಲ್ಲಗಳೆಯುವಂತಿಲ್ಲ. ವಿಚಾರಗಳನ್ನು ವಿಚಾರಗಳಿಂದ ಎದುರಿಸುವ ಸಾಮರ್ಥ್ಯ ಇಲ್ಲದ ಕಾರಣದಿಂದ ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಎದುರಾಳಿಗಳ ಮೇಲೆ ಇಂತಹ ಒತ್ತಡ ಹೇರುವುದು ಪ್ರಾಣಬೆದರಿಕೆ ಒಡ್ಡುವುದು ಅಷ್ಟೇ ಏಕೆ ದೈಹಿಕ ಹಲ್ಲೆಗೂ ಇಳಿಯುವ 'ಭಕ್ತರ ಕೆಟ್ಟಚಾಳಿ' ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ  ಸಾಮಾನ್ಯ ಸಂಗತಿಯಾಗಹತ್ತಿದೆ.

ಕುಂವೀ ಮೇಲೆ ಪಂಪೀಗಳು ಈ ರೀತಿ ಒತ್ತಡ ತಂದದ್ದು ನಿಜವೇ ಆಗಿದ್ದಲ್ಲಿ ಅದು ಅತ್ಯಂತ ಖಂಡನೀಯ. ಒಂದುವೇಳೆ ಅಂತಹ ಪಾಪದ ಕೆಲಸಕ್ಕೆ ಅವರು ಕೈ ಹಾಕಿದ್ದು ನಿಜವಾಗಿದ್ದರೆ ಅದಕ್ಕೆ ತಕ್ಕ ಪ್ರತಿಫಲವನ್ನು ಅವರು ತಡವಾಗಿಯಾದರೂ ಉಣ್ಣಬೇಕಾಗುತ್ತದೆ. ಅವರ ವರ್ತನೆ ಹೀಗೇ ಮುಂದುವರೆದರೆ ಮುಂದಿನ ದಿನಗಳಲ್ಲಿ  ಅವರು ತಮ್ಮ  ಅಡ್ಡಪಲ್ಲಕ್ಕಿ ಹೊರಲಿಕ್ಕೂ ಜನರಿಲ್ಲದಂತೆ ಮಾಡಿಕೊಳ್ಳುವುದು ಗ್ಯಾರಂಟಿ. ಅದನ್ನು ಅವರು ಈಗಲೇ ಅರಿತರೆ ಒಳ್ಳೆಯದು. ದೇವರು - ಧರ್ಮ ಕುರಿತು, ದೇವಮಾನವರನ್ನು ಕುರಿತು ದೇಶಾದ್ಯಂತ ನಡೆಯುತ್ತಿರುವ ವಿದ್ಯಮಾನಗಳು ಅವರ ಕಣ್ಣು ತೆರೆಸಬೇಕು. ಅವರ ಕಣ್ಣು ತೆರೆದರೆ ಅವರನ್ನು ನಂಬಿ ಮಠಗಳಿಗೆ ಬರುವ ಭಕ್ತರ ಕಣ್ಣೂ ತೆರೆದಾವು.

ಇಲ್ಲದಿದ್ದರೆ ಕುಂವೀ ಅವರ 'ಯಾಪಿಲ್ಲು' ಕಾದಂಬರಿಯ ಪಾತ್ರವೊಂದು  "ಹೋಗ್ರೋ ಇವನೌನ್ ದೇವ್ರು ಬ್ಯಾಡ ದಿಂಡ್ರು ಬ್ಯಾಡ, ಬಡವ್ರು ಬೊಗ್ರು ಬರಂಗಿಲ್ಲ ಹೋಗಂಗಿಲ್ಲ" ಎಂದು ಗೊಣಗುವಂತೆ ಜನ ಮಠ ಮಂದಿರಗಳ ಬಗ್ಗೆ ಬರುಬರುತ್ತಾ ಜಿಗುಪ್ಸೆ ತಾಳಿ ಅವುಗಳಿಂದ ದೂರವಾದಾರು. ಅಥವಾ ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿ ಸರ್ಕಾರಿ ಶಾಲೆ ತೊರೆದು ಕಾನ್ವೆಂಟಿಗೆ ಮುಖಮಾಡಿದ ಅಲ್ಲಿನ ಮಕ್ಕಳು, "ಟಿಂಕಲ್ ಟಿಂಕಲ್ ಲಿಟ್ಟಲ್ ಸ್ಟಾರೂ... ಗೋರಮೆಂಟಿಚ್ಕೂಲು ವುಯ್ ಡೋಂಟು ಕೇರೂ" ಎಂದು ಹಾಡುತ್ತಾ ಸರ್ಕಾರಿ ಶಾಲೆಯನ್ನು ಗೇಲಿಮಾಡುತ್ತಾ ಹೋಗುವಂತೆ ಭಕ್ತರು ಕೂಡ "ಮಠ ಗಿಟ ವುಯ್ ಡೋಂಟ್ ವಾಂಟು,   ಸ್ವಾಮಿ ಗೀಮಿ ವುಯ್ ಡೋಂಟ್ ಕೇರೂ ...." ಎಂದು ಇವರನ್ನೂ ಇವರ ಮಠಗಳನ್ನೂ ಗೇಲಿಮಾಡುತ್ತಾ ಹೋದಾರು!!

ತಮ್ಮನ್ನು ಕುಂವೀ ಅಂಥವರು ವಿಮರ್ಶಿಸಿ ಮಾತನಾಡಿದಾಗ ಆ ವಿಮರ್ಶೆಯ ಮಾತುಗಳ ಹಿಂದಿರುವ ಸದಾಶಯವನ್ನು  ಅರ್ಥಮಾಡಿಕೊಂಡು ತಮ್ಮಅರ್ಥರಹಿತವಾದ ಆಚರಣೆಗಳನ್ನು ಕಾಲಕ್ಕೆ ಸಲ್ಲದ ತಮ್ಮ ಕೆಲವು ನಡೆವಳಿಕೆಗಳನ್ನು ತಿದ್ದಿಕೊಳ್ಳುವ ಕಡೆ ನಮ್ಮ ಪಂಪೀಗಳ ಗಮನ ಹರಿಯಬೇಕಾಗಿತ್ತೇ ಹೊರತು ಆ ಮಾತುಗಳನ್ನು ಆಡಿದ್ದ ಕುಂವೀಯವರ ಬಾಯಿ ಮುಚ್ಚಿಸುವ ಕಡೆಗಲ್ಲ. ಅದು ಎಲ್ಲರ ಆರೋಗ್ಯದ ದೃಷ್ಟಿಯಿಂದಲೂ  ಒಂದು ಒಲಕ್ಳೆಯ ನಡೆಯಾಗುತ್ತಿತ್ತು. ಆದರೆ ಹಾಗೆ ಅಗದಿದ್ದದ್ದು ವಿಷಾದದ ಸಂಗತಿ.

'ಮಾಡಬಾರದ್ದನ್ನು ಮಾಡಲು ಹೋದರೆ ಆಗಬಾರದ್ದು ಆಗುತ್ತದೆ' ಎಂಬುದೊಂದು ನಮ್ಮ ಹಿರಿಯರ ಅನುಭವ ನುಡಿ. ಇದಕ್ಕೆ ಸದ್ಯದ ಪ್ರಮುಖವಾದ ಮತ್ತು ತಾಜಾ ಉದಾಹರಣೆ ಎಂದರೆ ಹರ್ಯಾಣದಲ್ಲಿ ಮುಗ್ಧ ಜನರ ಭಕ್ತಿಯನ್ನು 'ತೊರುಂಬ ಲಾಭ' ಮಾಡಿಕೊಂಡು, ಯಾವ ರಾಜಕಾರಣಿಗೂ ಉದ್ಯಮಿಗೂ ಚಿತ್ರನಟ-ನಟಿಗೂ ಕಡಿಮೆ ಇಲ್ಲದಂತೆ ಭೋಗಜೀವನ ನಡೆಸಿ ಮೆರೆದ ದೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮಿಟ್ ರಾಮರಹೀಮ್ ಸಿಂಗ್ ಎಂಬ ದೇವಮಾನವನದ್ದು.

ಇಬ್ಬರು ಭಕ್ತೆಯರ ಮೇಲಿನ ಅತ್ಯಾಚಾರದ ಎರಡು ಪ್ರಕರಣದಲ್ಲಿ ದೋಷಿ ಎಂದು ಸಿ.ಬಿ.ಐ. ಕೋರ್ಟಿನಿಂದ ತೀರ್ಮಾನಿಸಲ್ಪಟ್ಟ ಆತ ಇದೀಗ ಮೂವತ್ತು ಲಕ್ಷ ದಂಡಕ್ಕೂ ಹತ್ತು ಹತ್ತು ಒಟ್ಟು ಇಪ್ಪತ್ತು ವರ್ಷಗಳ ಜೈಲುಶಿಕ್ಷೆಗೂ  ಗುರಿಯಾಗಿದ್ದಾನೆ. ಮಾಡಿದ್ದುಣ್ಣೋ ಮಾರಾಯ!! ಆತನ ಪ್ರಕರಣ ನೇರವಾಗಿ ನಮ್ಮ ಪಂಪೀಗಳಿಗೆ  ಸಂಬಂಧಪಡದಿರಬಹುದು. ಆತನಿಗೆ ತಮ್ಮನ್ನು ಹೋಲಿಸುವುದು 'ಅವಮಾನಕರ' ಎಂದೂ ಇವರಿಗೆ ಅನ್ನಿಸಿ ವಾಸ್ತವಿಕವಾಗಿ ಬರಬಾರದ ಸಿಟ್ಟ್ಟೂ ಬರಬಹುದು.  ಹಾಗೇನೂ ಅಗಬೇಕಿಲ್ಲ. ಭಕ್ತರ ಬದುಕಿನಲ್ಲಿ ಆಟವಾಡುವುದು ಅಥವಾ ಅವರನ್ನು ಅಜ್ಞಾನದಲ್ಲಿ ಇಟ್ಟುಕೊಂಡು ಬೇಳೆ ಬೇಯಿಸಿಕೊಳ್ಳುವ ಕೆಲಸ ಯಾರಿಗೇ ಆಗಲಿ ಮುಂದಿನ ದಿನಗಳಲ್ಲಿ ಸುಲಬವಾದ ಕೆಲಸವಲ್ಲ ಎಂಬ ಎಚ್ಚರಿಕೆಯ ಗಂಟೆಯನ್ನಂತೂ ಈ ಪ್ರಕರಣ ಬಾರಿಸಿದಂತಾಗಿದೆ. ಇದನ್ನು ಸಂಬಂಧಪಟ್ಟವರು ಅಲಕ್ಷಿಸಬಾರದು.

ಇನ್ನು ಕುಂವೀ ಬಗ್ಗೆ ಹೇಳುವುವಾದರೆ ಅವರೆಂಥವರು ಎಂಬುದು ನಾಡಿನ ಬಹುತೇಕ ಎಲ್ಲ ವಿದ್ಯಾವಂತ ಜನಕ್ಕೂ ಗೊತ್ತಿದೆ. ಕೊಟ್ಟೂರಿನಂಥ ಬಿಸಿಲೂರಿನಲ್ಲಿ ಶ್ರಮಜೀವಿಗಳ ಕುಟುಂಬದಲ್ಲಿ ಹುಟ್ಟಿಬೆಳೆದ 'ಗಾಂಧೀಕ್ಲಾಸಿನ ಹುಡುಗನೊಬ್ಬ ಇಂದು ಕನ್ನಡ ಸಾಹಿತ್ಯ ಲೋಕದ ಶಕ್ತಶಾಲಿ ಬರಹಗಾರನಾಗಿ ರೂಪುಗೊಂಡಿರುವಂಥದ್ದೇ ಒಂದು ಅಚ್ಚರಿಯ ಸಂಗತಿ.  ಕರ್ನಾಟಕದ ಹೊರಭಾಗದಲ್ಲಿ, ಹತ್ತಿಪ್ಪತ್ತು ರೂಪಾಯಿಗಳಿಗೂ ಮನುಷ್ಯರ ಜೀವವನ್ನೇ ತೆಗೆಯಲು ಸಿದ್ದರಿರುವ ಜನಸಮೂಹದ ನಡುವಿದ್ದು ಅವರ ಮಕ್ಕಳಿಗೆ ಪಾಠಹೇಳುವ ಕೆಲಸದಲ್ಲಿ ಬಹುತೇಕ ತಮ್ಮ ವೃತ್ತಿಬದುಕನ್ನು ಕಳೆದವರು. ತನ್ನ ಕೈಯಲ್ಲಿ ಪಾಠ ಹೇಳಿಸಿಕೊಂಡ ಯಾವನೇ ಒಬ್ಬ ವಿದ್ಯಾರ್ಥಿ ಫೇಲಾಗುವುದು ಎಂದರೆ ಅದು ತನಗೆ ದೊಡ್ಡ insult ಎಂದು ಬಗೆದು ಪ್ರೈಮರಿ ಸ್ಕೂಲ್ ಮೇಷ್ಟ್ರ ಕೆಲಸವನ್ನು ಯುನಿವರ್ಸಿಟಿ ಪ್ರೊಫೆಸರ್ ಕೆಲಸಕ್ಕಿಂತ ಸೀರಿಯಸ್ ಆಗಿ ತೆಗೆದುಕೊಂಡು ವೃತ್ತಿಯಲ್ಲಿ ತೊಡಗಿಕೊಂಡು ನಿವೃತ್ತರಾದವರು.

ಕುಂವೀ ಪ್ರಾಥಮಿಕ ಶಾಲೆಯ ಮೇಷ್ಟ್ರಾಗಿಯೇ ಇದ್ದುಕೊಂಡು ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾದ ಮತ್ತು ಅಲ್ಲಿನ ಪ್ರೊಫೆಸರ್ ಗಳು  ಘನವಾಗಿ ಚಿಂತನ-ಮಂಥನ ಮಾಡಿದಂಥ ಹಲವಾರು ಕೃತಿಗಳನ್ನು ಬರೆದ, ದಲಿತ-ಬಂಡಾಯದ ಹಿನ್ನೆಲೆಯಿಂದ ಬಂದ,  ಬಳ್ಳಾರಿ ಸ್ಟೈಲಿನ ಕನ್ನಡದ ಬಹುಮುಖ್ಯ ಲೇಖಕರು.  ಜನಪರವಾದ ಸಾಹಿತ್ಯ, ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಾನೂ ಬೆಳೆಯುತ್ತ ನಮ್ಮ ಸಾಹಿತ್ಯವನ್ನೂ ಬೆಳೆಸಿದ, ಒಳಗೊಂದು ಹೊರಗೊಂದು ಇಲ್ಲದ ನೇರ ನಡೆನುಡಿಯ ಮನುಷ್ಯ. ತಳಸಮುದಾಯಗಳ ನೋವು-ನಲಿವುಗಳನ್ನು ನಮ್ಮ ಸಮಾಜಕ್ಕೆ ಎತ್ತಿತೋರಿಸುವ ಮೂಲಕ ಆ ವರ್ಗಕ್ಕೊಂದು ಅಸ್ಮಿತೆಯನ್ನು ದೊರಕಿಸಿಕೊಟ್ಟ ಚಿಂತಕರು.

ಎಲ್ಲರೂ ಓದಬಹುದಾದ ಮಹತ್ವದ ಅನೇಕ ಕೃತಿಗಳನ್ನು ಬರೆದರೂ ಯಾರೂ ಸರಿಯಾಗಿ ಸರಾಗವಾಗಿ ಓದಲಾಗದ ಕೃತಿಯೊಂದಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಬಹುಮಾನ ಪಡೆದ ಸಾಹಿತಿ!  ದೇಶದಲ್ಲಿ ಅಸಹಿಷ್ಣುತೆ ವಿರುದ್ಧ ನಡೆದ ಪ್ರಶಸ್ತಿ ಪುರಸ್ಕಾರ ವಾಪಸಾತಿ ಚಳವಳಿಯಲ್ಲಿ ಪಾಲ್ಗೊಂಡು ಪ್ರಶಸ್ತಿ ವಾಪಸ್ಸು.ಕೊಡಲು ಹೋದಾಗ ಅದನ್ನು ಮರಳಿ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿಲ್ಲ ಎಂದು ಸಬೂಬು ಹೇಳಿದ ಅಧಿಕಾರಿಯ ಟೇಬಲ್ಲಿನ ಮೇಲೆ ಅವನ್ನೆಲ್ಲ ಬೀಸಾಕಿ 'ಏನರ ಮಾಡ್ಕ್ಯ' ಎಂದು ಹೇಳಿ ಹೊರಗೆ ಬರುವ ಮೂಲಕ ಸಾಮಾಜಿಕ ಬದ್ದತೆಯನ್ನುತೋರಿಸಿದ ವ್ಯಕ್ತಿ.

ಅವರ ನೇರ ಮಾತುಗಾರಿಕೆಗೆ ಒಂದು ಉದಾಹರಣೆ ಗಮನಿಸಿ: ಚಿತ್ರದುರ್ಗದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಹಿರಿಯ ಚಿಂತಕ ಡಾ.ಎಲ್.ಬಸವರಾಜು ಅವರು ಮಠ-ಮಾನ್ಯಗಳ ಬಗ್ಗೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಎತ್ತಿದ್ದ ಕೆಲವು ಮಹತ್ವ ಪ್ರಶ್ನೆಗಳು ಅಲ್ಲಿನ ಊಟದ ಪೆಂಡಾಲು ಸೇರಿದಂತೆ ಎಲ್ಲೆಡೆ ಬುಗಿಲೆದ್ದ ವಿಪರೀತ ಕೆಂದೂಳಿನಲ್ಲಿ ಕಳೆದು ಹೋದವಾದರೂ ನಂತರ ಬಹಳಷ್ಟು ದಿನ ರಾಜ್ಯದ ಯಾವುದೇ ಭಾಗದಲ್ಲಿ ಸಾಹಿತ್ಯದ ಕಾರ್ಯಕ್ರಮ ನಡೆದರೂ ಅವುಗಳ ಪ್ರಸ್ತಾಪವಾಗುವ ಮೂಲಕ ಅವು ಅನುರಣನಗೊಳ್ಳುತ್ತಿದ್ದ ಸಂದರ್ಭ.

ಈ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕೊನೆಯ ಗೋಷ್ಟಿಯೊಂದರಲ್ಲಿ ಭಾಗವಹಿಸಿದ್ದ, ತಮ್ಮ ಹರಕು  ಬಾಯಿಯಿಂದ ರಾಜ್ಯದಲ್ಲಿಯೇ ಕುಖ್ಯಾತರಾಗಿದ್ದ ಜಿಲ್ಲೆಯ ಪ್ರಮುಖ ರಾಜಕಾರಣಿಯೊಬ್ಬ ಎಲ್. ಬಸವರಾಜು ಅವರ ಬಗ್ಗೆ ಹಗುರವಾಗಿ ಮಾತನಾಡಿ, 'ಇಂತಹ ಸಾಹಿತಿಗಳ ಬಗ್ಗೆ ಜನತೆ ಎಚ್ಚರಿಕೆಯಿಂದ ಇರಬೇಕು' ಎಂದು ಬುದ್ದಿ ಹೇಳಿ ತನ್ನ ಅಜ್ಞಾನ ಪ್ರದರ್ಶಿಸಿದ.

ಆ ಗೋಷ್ಟಿಯ ನಂತರ ಸಮಾರೋಪ ಸಮಾರಂಭವಿದ್ದು ಕುಂವೀ ಸಮಾರೋಪ ಭಾಷಣಮಾಡುವುದಿತ್ತು. ಸಭಾಂಗಣದಲ್ಲಿದ್ದ ನಾನು ನನ್ನ ಪಕ್ಕ ಕುಳಿತಿದ್ದ  ಲೇಖಕ ಮಿತ್ರ ರಂಗರಾಜ ವನದುರ್ಗ ಅವರಿಗೆ 'ಕುಂವೀ ಅವರ ಗಮನಕ್ಕೆ ಈ ರಾಜಕಾರಣಿಯ ಮಾತನ್ನು ತಂದು ಅವರಿಂದ ಪ್ರತಿಕ್ರಿಯೆ ಕೊಡಿಸಿದರೆ ಚೆನ್ನಾಗಿತ್ತು' ಎಂದೆ. ಅದು ಅವರಿಗೂ ಸರಿ ಅನ್ನಿಸಿ ತಕ್ಷಣ ಫೋನು ಎತ್ತಿಕೊಂಡು ಇನ್ನೂ ಬಸ್ಸಿನಲ್ಲಿ ಕಾರ್ಯಕ್ರಮಕ್ಕೆ ಬರುತ್ತಲಿದ್ದ ಕುಂವೀಗೆ ವಿಷಯ ತಿಳಿಸಿಯೇಬಿಟ್ಟರು.

ಸಮಾರೋಪ ಭಾಷಣ ಮಾಡಲು ತುಸು  ಸ್ಟ್ರಾಂಗ್ ಆಗಿಯೇ ವೇದಿಕೆ ಏರಿದ ಕುಂವೀ ಆ ರಾಜಕಾರಣಿಯ ಮಾತಿಗೆ,  "ನಮ್ಮ ರಾಜಕಾರಣಿಗಳಿಗೆ ಏನು ಆಗಿದೆಯೋ. ಕನ್ನಡದಲ್ಲಿ ಯಾವೊಬ್ಬ ಸಾಹಿತಿಯೂ ರಾಜಕಾರಣಿಗಳನ್ನು ಟೀಕಿಸುವಾಗ ಬಾಯಿಗೆ ಬಂದಂತೆ ಮಾತನಾಡುವುದಿಲ್ಲ; ಗಂಭೀರವಾಗಿ ತಾತ್ವಿಕವಾದ ಭಿನ್ನಾಭಿಪ್ರಾಯ ಎತ್ತುವ ಮೂಲಕ ಟೀಕಿಸುತ್ತಾರೆ. ಆದರೆ ಅದೇ ರಾಜಕಾರಣಿಗಳು ಸಾಹಿತಿಗಳ ಬಗ್ಗೆ ಟೀಕಿಸುವಾಗ ಕನಿಷ್ಟ. ಸೌಜನ್ಯವನ್ನೂ ಇಟ್ಟುಕೊಳ್ಳದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸಾಹಿತಿಗಳಿಂದ ನಮ್ಮ ರಾಜಕಾರಣಿಗಳಿಗೆ ಬೇರೆ ಏನನ್ನೂ ಕಲಿಯಲು ಆಗದಿದ್ದರೂ ಕೊನೆಯಪಕ್ಷ ಬೇರೆಯವರನ್ನು ಟೀಕಿಸುವುದು ಹೇಗೆ ಎಂಬುದನ್ನಾದರೂ ಕಲಿಯಬೇಕು" ಎಂದು ತೀಕ್ಷಣವಾಗಿ ಪ್ರತಿಕ್ರಿಯಿಸಿ,  "ಬಸವರಾಜು ಎಷ್ಟು ದೊಡ್ಡವರು ಎಂದರೆ ಅವರು ಜೀವನದಲ್ಲಿ ಉಪ್ಪು ತಿಂದಷ್ಟು ನಮ್ಮಲ್ಲಿ ಬಹಳಷ್ಟು ಜನ ಅನ್ನವನ್ನೂ ತಿಂದಿಲ್ಲ. ಅಂತಹ ಹಿರಿಯರ ಬಗ್ಗೆ ಮಾತನಾಡುವಾಗ ಮೈಮೇಲೆ ಎಚ್ಚರಿಕೆ ಇಟ್ಟುಕೊಂಡು ಮಾತನಾಡಬೇಕು" ಎಂದು ಚಾಟಿ ಬೀಸಿ ಇಡೀ ಸಭಾಂಗಣದಲ್ಲಿ ಕರತಾಡನ ಪಡೆದರು!

ಇನ್ನೊಂದು ಸಂದರ್ಭ: ಕೆಲವು ವರ್ಷಗಳ ಹಿಂದೆ ನಾವೆಲ್ಲ ಸಹೋದರ ಪತ್ರಕರ್ತ ಕುಮಾರ್ ಬುರಡಿಕಟ್ಟಿ ಅವರ ಮದುವೆಯನ್ನು ಯಾವುದೇ ಧಾರ್ಮಿಕ ಕ್ರಿಯೆಗಳನ್ನು ನಡೆಸದೇ ವೈಚಾರಿಕತೆಯ ಅರಿವಿನ ಕಾರ್ಯಕ್ರಮವಾಗಿ ಶಿಕಾರಿಪುರ ತಾಲ್ಲೂಕಿನ ಕಡೇನಂದಿಹಳ್ಳಿ ಎಂಬ ನಮ್ಮ ಊರಿನಲ್ಲಿ ರೂಪಿಸಿದ್ದೆವು. ಅದೇ ಆಗ ರಿಟೈರ್ಡ್ ಆಗಿದ್ದ ಕುಂವೀ ಸರಿಯಾದ ರಸ್ತೆಯೂ ಇಲ್ಲದ ನಮ್ಮ ಊರಿಗೆ ಸರಳವಾದ ಕೆಂಪು ಬಸ್ಸಿನಲ್ಲೇ ಬಂದು ಕೆಂಪು ಭಾಷಣವನ್ನು ಮಾಡಿ ಅಷ್ಟೇ ಸರಳವಾಗಿ ಅದೇ ಕೆಂಪು ಬಸ್ಸಿನಲ್ಲೇ  ಮರಳಿ ಹೋಗುವ ಮೂಲಕ ಬಹಳ ಹತ್ತಿರವಾದರು. ಅಂದು ನಮ್ಮ ಕಾರ್ಯಕ್ರಮದಲ್ಲಿ ಇದ್ದ ಗೌರಿ ಲಂಕೇಶ್,  ಶಿವಸುಂದರ್, ಬಿಳಿದಾಳೆ ಈಶ,  ವಿ.ಎಸ್. ಶ್ರೀಧರ್ ಸೇರಿದಂತೆ ನಮ್ಮ ಹಳ್ಳಿಯ ಜನರೆಲ್ಲರೂ ಮೌಢ್ಯ ಸಂಪ್ರದಾಯಗಳ ವಿರುದ್ಧವಾಗಿ ಕುಂವೀ ಆಡಿದ ಅಪ್ರಾಮಾಣಿಕವಲ್ಲದ ಮಾತುಗಳಿಂದ ಸಂತುಷ್ಟರಾಗಿದ್ದು ನಮ್ಮ ಖಾಸಗೀ ಬದುಕಿನ ಅಂತೆಯೇ ಸಾರ್ವಜನಿಕ ಬದುಕಿನ ಒಂದು ಮುಖ್ಯ ಘಟನೆ ಎಂದೇ ನಾನು ಭಾವಿಸಿದ್ದೇನೆ.

ಇಂತಹ ನಮ್ಮ ಮೆಚ್ಚಿನ ಕುಂವೀ ಕೆಲವು ವೇಳೆ ಸ್ವಭಾವತಃ ಅವರ ವ್ಯಕ್ತಿತ್ವಕ್ಕೆ ಹೊಂದಾಣಿಕೆಯಾಗದಂತಹ  ಅಪ್ರಾಮಾಣಿಕ ಹೇಳಿಕೆ ನೀಡುವ ಮೂಲಕ ನಮಗೆ ನಿರಾಸೆಯನ್ನೂ ಮಾಡುವುದಿದೆ. ಈಗ ಪಂಪೀಗಳ ಕುರಿತು ಇಂತಹ ಹೇಳಿಕೆಯನ್ನು ನೀಡಿದ್ದು ಇತ್ತೀಚಿನ ದಿನಗಳಲ್ಲಿ  ಅವರು ನೀಡಿರುವ ಈ ಬಗೆಯ ಎರಡನೆಯ ಹೇಳಿಕೆ ಅಂದುಕೊಂಡಿದ್ದೇನೆ.  ಈ ಮೊದಲು ಹಿಂದೊಮ್ಮೆ ಅವರು ಹೀಗೇ ತಾವು ಅನುಗಾಲದಿಂದಲೂ  ಎದುರಾಳಿಗಳೆಂದು ಭಾವಿಸಿಕೊಂಡು ಬಂದಿದ್ದ, 'ಕಲ್ಪಿತ ಹಿಂದುತ್ವ' ಮತ್ತು ಅದರ ವಾಕ್ತಾರರಾದ 'ದೇಶಭಕ್ತ' ರನ್ನು ಕುರಿತು  'ಅವರೆಲ್ಲ ಬಹಳ ಒಳ್ಳೆಯವರು' ಎಂಬರ್ಥ ಬರುವಂಥ ಮಾತಾಡಿದ್ದು ವರದಿಯಾಗಿತ್ತು.  ಆಗ ಅವರ ಈ ಬದಲಾದ ನಿಲುವನ್ನು ಟೀಕಿಸಿದ್ದ ಚಂಪಾ 'ಕುಂ.ವೀ' ಎಂಬ ಅಕ್ಷರಗಳನ್ನು 'ಕುಂಕುಮ ವೀರ' ಎಂದು ವಿಸ್ತರಿಸಿ ಅಸಮಾಧಾನ ಸೂಚಿಸಿದ್ದರು!

ಈಗ ಕುಂವೀ ಪಂಪೀಗಳನ್ನು ಕುರಿತು ಅಂಥದ್ದೇ ಹೇಳಿಕೆಯನ್ನು ನೀಡಿದ್ದು ಅವರನ್ನೂ ಅವರ  ಸಾಹಿತ್ಯವನ್ನೂ ಪ್ರೀತಿಸುವ ಪ್ರಗತಿಪರ ಆಲೋಚನ ಕ್ರಮದ ನನ್ನಂತಹ ಬಹಳಷ್ಟು ಜನರಿಗೆ ಬೇಸರವನ್ನುಂಟು ಮಾಡಿದೆ ಎಂಬುದು ಸುಳ್ಳಲ್ಲ. ಇಂದು ಕುಂವೀ ಅವರ ಇಂತಹ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ  ಟೀಕೆ ವ್ಯಕ್ತವಾಗುತ್ತಿರುವುದು ಕೂಡ ಅವರ ಮೇಲಿನ ಮತ್ತು ಅವರ ಸಾಹಿತ್ಯದ ಮೇಲಿನ ಗೌರವದಿಂದಲೇ ಹೊರತು ಬೇರೇನೂ ಆಗಿರಲಾರದು. ಪರಿಸ್ಥಿತಿ ಹೀಗಿರುವಾಗ ಕುಂವೀ ಹೀಗೇಕೆ ಆಗೊಮ್ಮೆ ಈಗೊಮ್ಮೆ ದ್ವಂದ್ವ ನಿಲುವು ತಾಳುತ್ತಾರೆ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಹುಟ್ಟಿಕೊಂಡು  ಗೊಂದಲಕ್ಕೆ ದಾರಿಮಾಡಿಕೊಡುವುದು ಸಹಜವಾದದ್ದು.

ಒಂದುವೇಳೆ ಈ 'ದ್ವಂದ್ವ' ಎಂಬುದು ಕುಂವೀ ಅವರ ನಿಲುವಿನಲ್ಲಿ ಸ್ವಾಭಾವಿಕವಾಗಿಯೇ ಉಂಟಾಗುತ್ತಿದ್ದರೆ ಅವರೇ ಅದನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಹಾಗೆ ಮಾಡುವ ಮೂಲಕ ಅವರು ಸ್ಪಷ್ಟವಾಗಿ ಒಂದುಕಡೆ  - ಅದೂ ಅವರು ತಮ್ಮ ಬದುಕಿನ ಉದ್ದಕ್ಕೂ ಒಪ್ಪಿಕೊಂಡು ಬಾಳಿ ಬದುಕುತ್ತಾ ಬಂದಿರುವ 'ಸಮಸಮಾಜ ನಿರ್ಮಾಣ ಒಲವಿನ' ಕಡೆ - ನಿಲ್ಲುವ ಮೂಲಕ ಅದನ್ನು ಸರಿಪಡಿಸಿಕೊಳ್ಳಬೇಕು ಎಂಬುದು ಅವರಲ್ಲಿ ನನ್ನ ಪ್ರಿತಿಪೂರ್ವಕ ಆಗ್ರಹ.

ಒಂದುವೇಳೆ ಈ 'ಧ್ವಂದ್ವ'ಎಂಬುದು ಬಾಹ್ಯ ಒತ್ತಡಗಳ ಕಾರಣದಿಂದ ಅವರಲ್ಲಿ ಉಂಟಾಗುತ್ತಿದ್ದರೆ ದಯವಿಟ್ಟು ತಮ್ಮ ಮೇಲಿರುವ ಅಂತಹ ಒತ್ತಡಗಳು ಯಾವುವು ಎಂಬುದನ್ನು ಸಾರ್ವಜನಿಕಗೊಳಿಸುವ ಧೈರ್ಯವನ್ನು ಕುಂವೀ ತೋರಬೇಕು. ಅವರಿಗಾಗಿ ಮಾತ್ರವಲ್ಲ ಕನ್ನಡ ಸಾಹಿತ್ಯ ಮತ್ತು ಸಂಸ್ಸೃತಿಯ ಆರೋಗ್ಯಯುತ ಬೆಳವಣಿಗೆಯ ದೃಷ್ಟಿಯಿಂದಲೂ ಇದು ಮಹತ್ವದ್ದು. ಯಾವುದೇ ಲೇಖಕರ ವಿಷಯದಲ್ಲಿ  ಕನ್ನಡ ಲೇಖಕ ಸಮೂಹ ಈ ಬಗೆಯ ಸಂಕಟಗಳ ಸಂದರ್ಭಗಳಲ್ಲಿ ಬಾಧಿತರ ಜೊತೆಗಿದ್ದು ಅವರಿಗೆ ನೈತಿಕ ಬೆಂಬಲವೂ ಸೇರಿದಂತೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುತ್ತಾ ಬಂದಿದೆ. ಕುಂವೀ ವಿಷಯದಲ್ಲಿಯೂ ಇದನ್ನು ಈ ಸಮೂಹ ಮಾಡಿಯೇ ಮಾಡುತ್ತದೆ. ಕುಂವೀ ಇಂತಹ ಪೊಳ್ಳು ಬೆದರಿಕೆಗಳಿಗೆ - ಅದರಲ್ಲಿಯೂ ತಮ್ಮ ಒಂದೂ ಕೃತಿಯನ್ನೂ ಬಹುಶಃ  ಓದಿರದವರ ಬೆದರಿಕೆಗಳಿಗೆ - ಮಣಿಯುವ ಯಾವ ಅವಶಯಕತೆಯೂ ಇಲ್ಲ. ಮಣಿಯಬಾರದು ಕೂಡ. ಅವರ ಜೊತೆಗೆ ನಾವೆಲ್ಲ ಇದ್ದೇವೆ ಎಂಬ ಧೈರ್ಯ ಅವರಿಗಿರಲಿ.

ಕನ್ನಡ ಸಾಹಿತ್ಯ ಲೋಕ ಈಗಾಗಲೇ ಪ್ರಗತಿಪರ ಆಲೋಚನ ಕ್ರಮದ ಬಹುಮುಖ್ಯವಾದ ಕೆಲವು ಲೇಖಕರನ್ನು ಕಳೆದುಕೊಂಡಿದೆ. ಈ ಕಳೆದುಕೊಳ್ಳುವಿಕೆ ಮುಖ್ಯವಾಗಿ ಎರಡು ನೆಲೆಯಲ್ಲಿ ನಡೆದಿದೆ. ಮೊದಲನೆಯದಾಗಿ ಕೆಲವರನ್ನು ದೈಹಿಕವಾಗಿ ಕಳೆದುಕೊಂಡಿದೆ. ಎರಡನೆಯದಾಗಿ  ಮತ್ತೆ ಕೆಲವರನ್ನು ತಾತ್ವಿಕವಾಗಿ ಕಳೆದುಕೊಂಡಿದೆ. ಕಲಬುರ್ಗಿ ಅವರನ್ನು ಮೊದಲನೆಯದಕ್ಕೆ ಉದಾಹರಿಸಬಹುದಾದರೆ ಸಿದ್ಧಲಿಂಗಯ್ಯ ಅವರನ್ನು ಎರಡನೆಯದಕ್ಕೆಉದಾಹರಿಸಬಹುದು. ಕುಂವೀ ಅವರನ್ನು ಈ ಯಾವ ನೆಲೆಯಿಂದಲೂ  ಕಳೆದುಕೊಳ್ಳಲು ಈ ಲೋಕ ಇಷ್ಟಪಡುವುದಿಲ್ಲ . ಇದನ್ನು ಎಲ್ಲರೂ ಅಂದರೆ ಕುಂವೀ, ಪಂಪೀಗಳು ಮತ್ತು ನಾವು - ಅರ್ಥಮಾಡಿಕೊಂಡು ಮುನ್ನಡೆಯಬೇಕಿದೆ. ಅಲ್ಲವೇ?

- ರಾಜೇಂದ್ರ.ಬುರಡಿಕಟ್ಟಿ

No comments:

Post a Comment