Wednesday, September 6, 2017



·      ಜನವರಿ 29 ರ ಬೆಳಿಗ್ಗೆ 6.55ಕ್ಕೆ ನನಗೆ ಡೆಲಿವರಿ ಆಯಿತು. ಹೆಣ್ಣು ಮಗು. ಒಂಭತ್ತು ಪೌಂಡ್ ತೂಗುತ್ತಿದ್ದಳು. ಮಗುವನ್ನು ನನಗೆ ತೋರಿಸಿದರು. ಅವಳು ಎಷ್ಟು ಮುದ್ದಾಗಿದ್ದಳು ಅಂದರೆ ಅಷ್ಟು ಚೆಂದದ ಮಗುವನ್ನು ನಾನೆಲ್ಲೂ ನೋಡಿಲ್ಲವೇನೋ ಅನ್ನಿಸಿತು. ನನ್ನ ಮಗುವಿನ ಮುಖ ನೋಡಿದ ತಕ್ಷಣ ನಾನು ಅನುಭವಿಸಿದ ನೋವಿನ ನೆನಪೂ ಇಲ್ಲದಂತೆ ಮಾಯವಾಯಿತು. ನನ್ನನ್ನು ವಾರ್ಡ್‍ಗೆ ಶಿಫ್ಟ್ ಮಾಡಿದರು. ಲಂಕೇಶರು ಆಗ ಸರ್ಕಾರಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರಿಂದ (ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್) ನನಗೆ ಉಚಿತ ಸ್ಪೆಷಲ್ ವಾರ್ಡ್ನ  ಅನುಕೂಲವಿತ್ತು

        ಲಂಕೇಶರು ನಮ್ಮ ಮೊದಲ ಮಗುವನ್ನು ನೋಡಲು ಬಂದರು.  ಲಂಕೇಶರು ತಮ್ಮ ಮಗಳನ್ನು ಎಷ್ಟೋ ಹೊತ್ತು ಹಾಗೆಯೇ ನೋಡುತ್ತಾ ಕುಳಿತರು. ಆವತ್ತು ಅವರ ಕಣ್ಣಿನಲ್ಲಿ ಇದ್ದ ಸಂತೋಷವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ.

·         ನನ್ನ ಅತ್ತೆ ದೇವಿರಮ್ಮ ಮತ್ತು ಮಾವ ನಂದಿಬಸಪ್ಪ ಬಂದರು. ಹೆಣ್ಣು ಮಗುವನ್ನು ನೋಡಿ ನನ್ನ ಅತ್ತೆ, “ಹೆಣ್ಣಾ? ಮನೆಯಲ್ಲಿ ಇರುವ ಹೆಣ್ಣುಗಳು ಸಾಲದಿತ್ತಾ, ಈಗ ಇನ್ನೊಂದು” ಎಂದರು.

·         ಲಂಕೇಶರು ಅಂಗಡಿಗೆ ಹೋಗಿ ಮಗಳಿಗೆ ಪ್ರಾಕ್,  ಜುಬ್ಬಾ ಎಲ್ಲಾ ತೆಗೆದುಕೊಂಡು ಬಂದು ಮಗುವಿಗೆ ಹಾಕಲು ಹೇಳಿದರು. ನನ್ನ ಅಜ್ಜಿ ಚೆನ್ನಮ್ಮ “ಹಾಗೆಲ್ಲ ಹೊಸ ಕೂಸಿಗೆ ಹೊಸಬಟ್ಟೆ ಹಾಕಬಾರದು. ಮೊದಲು ಬೇರೆ ಮಕ್ಕಳ ಹಳೆಬಟ್ಟೆ ಹಾಕಬೇಕು” ಎಂದರೂ ಇವರು ಕೇಳಲಿಲ್ಲ. “ ಈ ಬಟ್ಟೆಗಳನ್ನು ಮಗೂಗೆ ಹಾಕಿ, ನಾನು ನನ್ನ ಮಗಳನ್ನು ಈ ಬಟ್ಟೆಯಲ್ಲಿ ನೋಡಬೇಕು.” ಎಂದು ಹಠಹಿಡಿದರು. ಆಗ ಚೆನ್ನವಜ್ಜಿ ವಿಧಿಯಿಲ್ಲದೆ ಆ ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ಅವುಗಳನ್ನು ಆಸ್ಪತ್ರೆಯ ಆವರಣದಲ್ಲಿದ್ದ ಒಂದು ಹಸುವಿನ ಮೇಲೆ ಹಾಕಿ ಆ ಮೇಲೆ ಅದನ್ನು ನನ್ನ ಮಗಳಿಗೆ ತೊಡಿಸಿದರು.

·         ಹೆರಿಗೆ ಆದ ಹದಿನೈದು ದಿನಗಳ ನಂತರ ನನ್ನ ಅಜ್ಜಿ ಚೆನ್ನವಜ್ಜಿ “ಮನೆ ಮತ್ತು ಇಬ್ಬರು ಬಾಣಂತಿಯರ ಕೆಲಸಗಳನ್ನು ನಾನೊಬ್ಬಳೇ ಮಾಡಲಾಗುವುದಿಲ್ಲ ಎಂದು ನನ್ನನ್ನೂ ಮತ್ತು ನನ್ನ ಅಕ್ಕನನ್ನೂ ತಮ್ಮ ಮಕ್ಕಳೊಂದಿಗೆ ತಮ್ಮ ಕೊಕ್ಕನೂರಿಗೆ ಅಂದರೆ ನನ್ನ ತಾಯಿಯ ತವರುಮನೆಗೆ (ಹರಿಹರ ತಾಲ್ಲೂಕು ಮಲೇಬೆನ್ನೂರ ಸಮೀಪದ ಹಳ್ಳಿ) ಕರೆದುಕೊಂಡು ಹೋದರು. ಲಂಕೇಶರು ಪ್ರತಿ ಶನಿವಾರ ಕಾಲೇಜ್ ಮುಗಿದ ನಂತರ ಸ್ಕೂಟರ್ ನಲ್ಲಿ ಶಿವಮೊಗ್ಗದಿಂದ 68 ಕಿ.ಮೀ. ದೂರದ ಕೊಕ್ಕನೂರಿಗೆ ಬಂದು ಮತ್ತೆ ಸೋಮವಾರ ಬೆಳಗ್ಗೆ ಆರೂವರೆಗೆ ಶಿವಮೊಗ್ಗಕ್ಕೆ ಹೊರಡುತ್ತಿದ್ದರು.

·         ನಮ್ಮ ಮಗಳಿಗೆ ಗೌರಿ ಎಂದು ಹೆಸರಿಟ್ಟೆವು. ಅದು ನನ್ನ ತಾಯಿಯ ಹೆಸರು. ನನ್ನ ಮಗಳಿಗೆ ಎರಡೂವರೆ ತಿಂಗಳಾದ ನಂತರ ನಾನು ಶಿವಮೊಗ್ಗೆಯ ನಮ್ಮ ಮನೆಗೆ ವಾಪಸ್ ಬಂದೆ. ನಾನಿನ್ನೂ ಮಗಳನ್ನು ಎತ್ತಿಕೊಂಡು ಮನೆಯ ಒಳಗೆ ಹೋಗುತ್ತಿರುವಾಗ ಮನೆಯ ಮುಂದೆ ಒಂದು ಸ್ಕೂಟರ್ ಬಂದು ನಿಂತಿತು. ಯಾರು ಅಂತ ನೋಡಿದೆ. ಒಳ್ಳೆ ಅಜಾನುಬಾಹು ವ್ಯಕ್ತಿ. “ ಇವರು ತೇಜಸ್ವಿ ಅಂತ” ಎಂದು ಲಂಕೇಶರು ಪರಿಚರು ಮಾಡಿಸಿದರು.

lMkEಕೇಶರು ಹಸಿರು ಬಣ್ಣದ ಹೊಸ ತೊಟ್ಟಿಲನ್ನು ತಂದು, ಅದರೊಳಗೆ ಹಾಸಿಗೆ ದಿಂಬು ಎಲ್ಲಾ ಇಟ್ಟು ಅದನ್ನು ಮಗಳಿಗೆ ರೆಡಿ ಮಾಡಿಟ್ಟಿದ್ದರು. ಅದೇ ತೊಟ್ಟಿಲಿನಲ್ಲಿ ನಮ್ಮ ಇನ್ನೂ ಇಬ್ಬರು ಮಕ್ಕಳು ಬೆಳೆದರು. ಈಗಲೂ ಆ ತೊಟ್ಟಿಲು ಮರುಳಸಿದ್ಧಪ್ಪನವರ (ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಅಳಿಯರೂ ಆದ ಹಿರಿಯ ಲೇಖಕರು) ಮನೆಯಲ್ಲಿದೆ. ಅವರ ಮಗ ಚೈತನ್ಯ ಮಾತ್ರವಲ್ಲ ಚೈತನ್ಯನ ಮಗು ಕೂಡ ಆ ತೊಟ್ಟಿಲಿನಲ್ಲೇ ಬೆಳೆದಿದ್ದಾರೆ.

·         ಒಂದು ದಿನ ಲಂಕೇಶರು, ನಾನು, ನನ್ನ ಮುತ್ತಜ್ಜಿ ಮತ್ತು ನಮ್ಮ ಪುಟ್ಟ ಮಗಳೂ ಜೋಗ್‍ಗೆ ಹೊರಟೆವು. ಲಂಕೇಶರಿಗೆ ಮತ್ತು ನನಗೆ ಪಾಲ್ಸ್ ಕೆಳಗೆ ಇಳಿದು ನೋಡಬೇಕೆನ್ನಿಸಿತು. ನನ್ನ ಮುತ್ತಜ್ಜಿ “ ನೀವು ಹೋಗಿ ಬನ್ನಿ. ನಾನು ಮಗುವನ್ನು ಇಟ್ಟುಕೊಂಡು ಕುಳಿತಿರುತ್ತೇನೆ” ಎಂದು ನಮ್ಮನ್ನು ಕಳುಹಿಸಿದರು. ನಾನು ಮಗುವಿಗೆ ಹಾಲುಕುಡಿಸಿ ಹೊರಟೆ. ….ನಾವಿಬ್ಬರೂ…. ಮೇಲೆ ಹತ್ತಿ ಬರುವ ಹೊತ್ತಿಗೆ ಸಂಜೆಯಾಗಿತ್ತು. ನನ್ನ ಮಗಳಿಗೆ ಹಸಿವಾಗಿ ಅಳಲಾರಂಭಿಸಿದಾಗ ನನ್ನ ಮುತ್ತಜ್ಜಿ ತನ್ನ ಬತ್ತಿದ ಎದೆಯನ್ನೆ ಆಕೆಗೆ ಕೊಟ್ಟು ಚೀಪಿಸುತ್ತಾ ಕುಳಿತಿದ್ದರು. ನಾನು ಬಂದು ಆಕೆಗೆ ಹಾಲು ಕುಡಿಸಿದೆ. ನಾವು ಶಿವಮೊಗ್ಗಕ್ಕೆ ಬಂದಾಗ ಎಲ್ಲರೂ “ಮಗುವಾಗಿ ಇನ್ನು ಮೂರು ತಿಂಗಳೂ ಸರಿಯಾಗಿ ಆಗಿಲ್ಲ. ಆಗಲೇ ಫಾಲ್ಸ್ ಇಳಿದು ಹೋಗಿದ್ದೀಯ” ಅಂತ ಬೈದರು.

·         ಗೌರಿ ಎಂಟು ತಿಂಗಳ ಮಗುವಾಗಿದ್ದಾಗ ಲಂಕೇಶರಿಗೆ ಬೆಂಗಳೂರಿಗೆ ಟ್ರಾನ್ಸ್‍ಫರ್‍ ಆಯಿತು. ಲಂಕೇಶರು ರಾಜಾಜಿನಗರದಲ್ಲಿ ಒಂದು ಮನೆ ನೋಡಿದ್ದರು. ನನ್ನನ್ನು ಮನೆ ತೋರಿಸಲು ಕರೆದುಕೊಂಡು ಹೋದರು…..ನಮ್ಮ ಹೊಸ ಸಂಸಾರ ಆ ಮನೆಯಲ್ಲಿ ಶುರುವಾಯಿತು.

·         ಗೌರಿಗೆ ಎರಡು ವರ್ಷ ಎರಡು ತಿಂಗಳಾದಾಗ ನಾನು ಮತ್ತೆ ಗರ್ಭಿಣಿ ಆದೆ. ಇಷ್ಟು ಬೇಗ ಇನ್ನೊಂದು ಮಗು ಬೇಡವೆಂದು ಏನೇನೋ ಪ್ಲಾನ್ ಮಾಡಿದ್ಧರೂ ಮತ್ತೆ ಮಗು ಹೊತ್ತಿದ್ದೆ… ಆಗ  ಲಂಕೇಶರಿಗೆ ಮೊದಲಿನಂತೆ ಜಾಸ್ತಿ ಬಿಡುವ ಸಿಗುತ್ತಿರಲಿಲ್ಲ. ಪ್ರತಿದಿನ ಮನೆಗೆ ಸ್ವಲ್ಪ ತಡವಾಗಿ ಬರಲು ಶುರು ಮಾಡಿದರು. ಈ ಮಧ್ಯೆ ನಮ್ಮ ವಾಸ್ವ್ಯವನ್ನು ಜಯನಗರದಿಂದ ಜರ್ನಲಿಸ್ಟ್ ಕಾಲೋನಿಗೆ ಬದಲಾಯಿಸಿದ್ದೆವು.

·         ನನ್ನ ಮೊದಲ ಮಗಳು ಗೌರಿಯನ್ನು ಗಾಂಧಿಬಜಾರಿನಲ್ಲಿದ್ದ ದಿ ಹೋಮ್ ಸ್ಕೂಲ್‍ಗೆ ಸೇರಿಸಿದೆವು.  ಆಗಿನ ಕಾಲದಲ್ಲಿ ಅದು ತುಂಬಾ ಒಳ್ಳೆಯ ಮತ್ತು ದುಬಾರಿ ಶಾಲೆ ಅಂತ ಹೆಸರು ಪಡೆದಿತ್ತು. ಜರ್ನಲಿಸ್ಟ್ ಕಾಲೋನಿಯಿಂದ ಸ್ಕೂಲ್‍ಗೆ ಗೌರಿ ಜಟಕಾ ಗಾಡಿಯಲ್ಲಿ ಹೋಗಿ ಬರುತ್ತಿದ್ದಳು… ಒಮ್ಮೆ ಸ್ಪೋರ್ಟ್ಸ ಡೇ ಇತ್ತು. ನಾನು ಮತ್ತು ಲಂಕೇಶರು ನಮ್ಮ ಮಗಳು ಸ್ಪೋರ್ಟ್ಸ್‍ನಲ್ಲಿ ಫಸ್ಟ್ ಬರುತ್ತಾಳೆ ಎಂಬ ಉಮೇದಿನಿಂದ ಹೋದೆವು. ಆದರೆ ನಮ್ಮ ಮಗಳು ಲಾಸ್ಟ್ ಬಂದಳು. ಅವಳು ತುಂಬಾ ಸಾಫ್ಟ್ ಆಗಿದ್ದಳು, ಆಗ.

·         ಮಕ್ಕಳಿಗೆ ಬೇಸಿಗೆ ರಜೆ ಬಂದಾಗ ಅವರನ್ನು ಕರೆದುಕೊಂಡು ಶಿವಮೊಗ್ಗ, ಕೊನಗವಳ್ಳಿ, ಎರಗನಾಳು, ಕೊಕ್ಕನೂರು ಎಂದು ಲಂಕೇಶರ ಮತ್ತು ನನ್ನ ಅಪ್ಪಯ್ಯ ಮತ್ತು ಅಜ್ಜಿಯ ಊರುಗಳಿಗೆ ಹೋಗುತ್ತಿದ್ದೆ. ಅದಕ್ಕೆಂದು ಲಂಕೇಶರು ನನಗೆ ಎಂಟು ಅಥವಾ ಹತ್ತು ದಿನಗಳ ಟೈಮ್ ಕೊಡುತ್ತಿದ್ದರು. ಒಂದೊಂದು ಊರಿನಲ್ಲಿ ಎರಡೆರಡು ದಿನ ಮಾತ್ರ ಇರುತ್ತಿದ್ದೆ. ಅಕಸ್ಮಾತ್ 11ನೇ ದಿನಕ್ಕೆ ನಾನು ಬೆಂಗಳೂರಿಗೆ ವಾಪಸ್ ಬರಲಿಲ್ಲ ಎಂದರೆ ಲಂಕೇಶರು ಟಿಲಿಗ್ರಾಮ್ ಕಳುಹಿಸುತ್ತಿದ್ದರು. ಆ ಟೆಲಿಗ್ರಾಮ್‍ನಲ್ಲಿ `Start immediately’ ಎಂಥಲೋ, ‘ನಿನಗೇನು ಮನೆ ಬಗ್ಗೆ ಯೋಚನೆ ಇಲ್ಲವೇ?’ ಎಂಥಲೋ ಆಜ್ಞೆ ಮಾಡುತ್ತಿದ್ದರು. ಅದನ್ನು ಕಂಡಕೂಡಲೆ ನಾನು ಮಕ್ಕಳನ್ನು ಕರೆದುಕೊಂಡು ಪಾಪಸ್ ಬರುತ್ತಿದ್ದೆ.

·         ಇನ್ನು ನಾನು ಅಪರೇಷನ್ ಮಾಡಿಸಿಕೊಳ್ಳುವ ವಿಷಯ (ಮೂರು ಮಕ್ಕಳಾದ ಮೇಲೆ) ಲಂಕೇಶರ ಅಣ್ಣ ಶಿವರುದ್ರಪ್ಪನವರಿಗೆ ತಿಳಿದಾಗ ಅವರು, “ಅವಳು ಹಡೆಯಲಾರದವಳು, ಅವನು ದುಡಿಯಲಾರದವನು. ಅದಕ್ಕೇ ಮಾಡಿಸಿಕೊಳ್ಳುತ್ತಿದ್ದಾಳೆ”  ಎಂದು  ವ್ಯಂಗವಾಡಿದ್ದರು.

·         ನಮ್ಮ ಮೂವರು ಮಕ್ಕಳು ಶಿವಮೊಗ್ಗೆಯ ಮೆಗ್ಗನ್ ಆಸ್ಪತ್ರೆಯಲ್ಲೇ ಹುಟ್ಟಿದ್ದು. ಗೌರಿ ಹುಟ್ಟಿದಾಗ ಒಟ್ಟು 70 ರೂಪಾಯಿ ಖರ್ಚಾಗಿದ್ದರೆ, ಬೇಬಿ ಹುಟ್ಟಿದಾಗ 40 ರೂಪಾಯಿ ಖರ್ಚಾಗಿತ್ತು. ಆದರೆ ಮೂರನೇ ಹೆರಿಗೆ ಆದ ನಂತರ ಆಪರೇಶನ್ ಮಾಡಿಸಿಕೊಂಡಿದ್ದರಿಂದ ಆಸ್ಪತ್ರೆಯವರೇ ನನಗೆ 240 ರೂಪಾಯಿ ಕೊಟ್ಟಿದ್ದರು. ಅಂದರೆ ನಮ್ಮ ಮೂವರ ಮಕ್ಕಳ ಹೆರಿಗೆಗೆ ನಾನು ಆಸ್ಪತ್ರೆಗೆ ಒಟ್ಟು 110 ರೂಪಾಯಿ ಕೊಟ್ಟಿದ್ದರೆ ಅವರೇ ನನಗೆ 130 ರೂಪಾಯಿ ಹೆಚ್ಚಿಗೆ ಕೊಟ್ಟು ಕಳುಹಿಸಿದ್ದರು.

·         ಒಂದು ದಿನ ನನ್ನ ಮಗಳು ಗೌರಿ ಸೌತ್ ಎಂಡ್ ಸರ್ಕಲ್‍ನಲ್ಲಿ ಪಾನಿಪುರಿ ತಿಂದು ಮನೆಗೆ ಬಂದಳು. ಅವತ್ತು ರಾತ್ರಿ ಅವಳಿಗೆ ತುಂಬಾ ಜ್ವರ. ಆಕೆಯ ಮೈಮುಟ್ಟಿದರೆ ಕೆಂಡದಂತೆ ಸುಡುತ್ತಿತ್ತು. ಆಕೆ ಏನೇನೋ ಮಾತಾಡಲು ಶುರುಮಾಡಿದಳು. ಒಂದೂ ಅರ್ಥವಾಗುತ್ತಿರಲಿಲ್ಲ. ಇದು ಸಾಮಾನ್ಯ ಜ್ವರ ಅಲ್ಲ ಎಂದು ಗೊತ್ತಾಗಿ ರಾತ್ರಿ 11ರ ಹೊತ್ತಿಗೆ ಗಾಂಧಿಬಜಾರಿನಲ್ಲಿದ್ದ ಪಾಂಡು ನರ್ಸಿಂಗ್ ಹೋಂಗೆ ನಾನು ಮತ್ತು ಲಂಕೇಶರು ಕರೆದುಕೊಂಡು ಹೋದೆವು.

·         ಅಷ್ಟು ಹೊತ್ತಿಗೆ ಗೌರಿಗೆ ಪ್ರಜ್ಞೆ ತಪ್ಪಿತ್ತು. ಆದರೂ ಆಗೀಗ ಎಚ್ಚರಗೊಂಡು ಕಿರುಚಾಡುತ್ತಿದ್ದಳು. ಆಕೆಯನ್ನು ನೋಡಿದ ಡಾಕ್ಟರ್ “ನಿಮ್ಮ ಮಗುವನ್ನು ನೀವು ಸರಿಯಾಗಿ ಬೆಳಸಿಲ್ಲ. ಆಮೇಲೆ ಬಂದು ಅವಳನ್ನು ನೋಡುತ್ತೇನೆ ಎಂದು ಹೇಳಿ ಹೋದವರು 12 ಗಂಟೆಯಾದರೂ ವಾಪಸ್ ಬರಲಿಲ್ಲ. ನರ್ಸಿಂಗ್ ಹೋಂನಲ್ಲಿದ್ದ ನರ್ಸ್‍ಳನ್ನು ಕೇಳಿದರೆ ಆಕೆ “ಡಾಕ್ಟರ್ ಮತ್ತೆ ಬೆಳಗ್ಗೆ ಬರುತ್ತಾರೆ” ಎಂದಳು.

·         ಅದನ್ನು ಕೇಳಿ ಲಂಕೇಶರಿಗೆ ತುಂಬಾ ಸಿಟ್ಟು ಬಂತು. ಮಗಳನ್ನು ಎತ್ತಿಕೊಂಡು ಅಲ್ಲಿಂದ ಹೊರಟರು. ಅವರನ್ನು ತಡೆಯಲು ನರ್ಸ್ ಪ್ರಯತ್ನಿಸಿದಳು, “ಡಾಕ್ಟರ್ ಅನುಮತಿ ಇಲ್ಲದೆ ಮಗುವನ್ನು ತೆಗೆದುಕೊಂಡು ಹೋಗುವಂತಿಲ್ಲ” ಎಂದಳು. ಆಗ ಲಂಕೇಶರು “ನಿಮ್ಮ ನರ್ಸಿಂಗ್ ಹೋಂನ ಗಾಜುಗಳಲ್ಲಿ ಒಂದೂ ಇರದಂತೆ ಎಲ್ಲವನ್ನು ಚಿಂದಿಮಾಡುತ್ತೇನೆ. ನಮ್ಮ ಮಗುವಿಗೆ ಜ್ವರ ಬಂದು ನರಳಾಡುತ್ತಿದ್ದರೆ ನಾವು ನಮ್ಮ ಮಗಳನ್ನು ಸರಿಯಾಗಿ ಸಾಕಿಲ್ಲ ಎನ್ನುತ್ತೀರಾ? ನಿಮ್ಮನ್ನು ನೋಡಿಕೊಳ್ಳುತ್ತೇನೆ” ಎಂದು ರೇಗಿದರು.

·         ನಾವಿಬ್ಬರೂ ಗೌರಿಯನ್ನು ಎತ್ತಿಕೊಂಡು ಆಟೋದಲ್ಲಿ ಮಾರ್ಥಾಸ್ ಆಸ್ಪತ್ರೆಗೆ ಹೋದೆವು. ಮಳೆ ಜೋರಾಗಿ ಸುರಿಯುತ್ತಿತ್ತು. ಅಷ್ಟು ಹೊತ್ತಿಗೆ ಮರುಳಸಿದ್ಧಪ್ಪ ಅವರಿಗೆ ಲಂಕೇಶ್ ಫೋನ್ ಮಾಡಿದ್ದರಿಂದ ಅವರೂ ಮಾರ್ಥಾಸ್ ಆಸ್ಪತ್ರೆಗೆ ಬಂದರು. ನಮ್ಮ ಮಗಳ ಸ್ಥಿತಿಯನ್ನು ನೋಡಿದ ಆ ಆಸ್ಪತ್ರೆಯ ಡಾಕ್ಟರ್‍ಗಳು ಆಕೆಯನ್ನು ಕೂಡಲೇ ಅಡ್ಮಿಟ್ ಮಾಡಿಕೊಂಡರು.

·         ಗೌರಿಗೆ ಮೆದುಳಿನ ಜ್ವರ ಆಗಿದೆ ಎಂದು ಹೇಳಿ ಆಕೆಗೆ ಟ್ರೀಟ್‍ಮೆಂಟ್ ಶುರುಮಾಡಿದರು. ಆಕೆಯ ಬೆನ್ನಿನ ಮೂಳೆಯ ರಕ್ತನಾಳದಿಂದ ದ್ರವ ತೆಗೆಯಬೇಕೆಂದು ವೈದ್ಯರು ಹೇಳಿದರು. ಗೌರಿಗೆ ತಾನೆಲ್ಲಿದ್ದೇನೆ, ತನಗೆ ಏನಾಗುತ್ತಿದೆ ಎಂಬುದರ ಅರಿವೇ ಇರಲಿಲ್ಲ. ಆಕೆಗೆ ಪ್ರಜ್ಞೆ ಇಲ್ಲದಿದ್ದರೂ ಚೀರಾಡುತ್ತಿದ್ದಳು. ಆಕೆಯನ್ನು ಹಿಡಿದಿದ್ದವರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಳು. ಆಗ ಆಕೆಯನ್ನು ನಾಲ್ಕುಜನ ಬಿಗಿಯಾಗಿ ಹಿಡಿದ ನಂತರವೇ ಆಕೆಯ ಬೆನ್ನು ಮೂಳೆಗೆ ಇಂಜೆಕ್ಷನ್ನಿನ ಸೂಜಿ ಚುಚ್ಚಿ ದ್ರವವನ್ನು ತೆಗೆಯಬೇಕಾಯಿತು.

·         ಗೌರಿಯನ್ನು ಪರೀಕ್ಷಿಸಿದ ನಂತರ ವೈದ್ಯರು “ನಿಮ್ಮ ಮಗಳಿಗೆ 42 ಗಂಟೆಯ ಒಳಗೆ ಪ್ರಜ್ಞೆ ಬರಬೇಕು. ಇಲ್ಲವೆಂದರೆ ಅವಳು ಬದುಕುತ್ತಾಳೆ ಎಂದು ಗ್ಯಾರಂಟಿ ಕೊಡಲಾಗುವುದಿಲ್ಲ. ಆಕೆಗೆ ಪ್ರಜ್ಞೆ ಬಂದರೂ ಆಕೆ ಕುರುಡಿಯಾದರೂ ಆಗಬಹುದು” ಎಂದರು. ಅದನ್ನು ಕೇಳಿ ನಾವಿಬ್ಬರೂ ದಂಗಾಗಿ ಹೋದೆವು. ನನ್ನ ಮಗಳ ಕಣ್ಣುಗಳು ಅವಳ ಅಪ್ಪನ ಕಣ್ಣಿನಷ್ಟೇ ಚೆನ್ನ. “ನನ್ನ ಮಗಳ ಕಣ್ಣುಗಳ ಮುಂದೆ ಹೇಮಾಮಾಲಿನಿಯ ಕಣ್ಣು ಯಾವ ಲೆಕ್ಕಕ್ಕೂ ಇಲ್ಲ” ಎನ್ನುತ್ತಿದ್ದೆ ನಾನು. ಅಂತಹ ಮಗಳು ಕುರುಡಿಯಾದರೆ ಎಂಬ ಚಿಂತೆ ಆಯಿತು.

·         ನನ್ನ ಕಷ್ಟದ ದಿನಗಳು ಶುರುವಾದವು. ನನ್ನ ತಲೆ ಸಂಪೂರ್ಣ ಖಾಲಿಯಾಗಿತ್ತು. ಆಸ್ಪತ್ರೆಯಲ್ಲಿ ನನ್ನ ಮಗಳನ್ನೇ ನೋಡುತ್ತಾ ಕುಳಿತೆ. ಐದು ನಿಮಿಷಕ್ಕೊಮ್ಮೆ ಗಡಿಯಾರ ನೋಡುತ್ತಾ ಆದಷ್ಟು ಬೇಗೆ ಪ್ರಜ್ಞೆ ಪಡೆಯಲಿ ಎಂದು ಆಶಿಸುತ್ತಿದ್ದೆ. ಹಾಸಿಗೆಯ ಮೇಲೆ ಕಣ್ಣುಮುಚ್ಚಿ ಮಲಗಿದ್ದ ಗೌರಿ ಯಾವುದೇ ರೀತಿಯ ಚಲನೆ ಇಲ್ಲದೆ ಹಾಗೇ ಮಲಗಿದ್ದಳು. ಆಕೆ ಪ್ರಜ್ಞೆ ಕಳೆದುಕೊಂಡು 36 ಗಂಟೆಗಳ ನಂತರ ಸಣ್ಣಗೆ ಕೈ ಕಾಲು ಆಡಿಸಿದಳು ಆದರೆ ಕಣ್ಣು ಬಿಡಲಿಲ್ಲ. ಕೊನೆಗೆ 38 ಗಂಟೆಗೆ ಕಣ್ಣುಬಿಟ್ಟಳು.

·         ನನಗೆ ಹೋದ ಜೀವ ಬಂದಂತಾಯಿತು. ಆಕೆಗೆ ಕಣ್ಣು ಕಾಣಿಸುತ್ತಿತ್ತು. ಜ್ವರ ಬಂದ ನಾಲ್ಕೈದು ದಿನಗಳಲ್ಲಿ ಗೌರಿಯ ಕೈಕಾಲು ಬತ್ತಿಹೋಗಿದ್ದವು. ಆಕೆಗೆ ನಿಲ್ಲಲೂ ಶಕ್ತಿ ಇರಲಿಲ್ಲ ಆಕೆಯನ್ನು ಹಿಡಿದು ನಿಲ್ಲಿಸಿದರೆ ಬೀಳುತ್ತಿದ್ದಳು. ಅವಳನ್ನು ಕೆಲವು ದಿನಗಳ ಕಾಲ ಐಸಿಯುನಲ್ಲೇ ಇಟ್ಟಿದ್ದರು.

·         ಕೆಲದಿನಗಳ ನಂತರ ಗೌರಿಯನ್ನು ವಾರ್ಡ್‍ಗೆ ಶಿಫ್ಟ್ ಮಾಡಿದರು. ಆದರೂ ಆಕೆ ಚೇತರಿಸಿಕೊಳ್ಳಲು ಬಹಳ ದಿನಗಳೇ ಬೇಕಾದವು. ಅವತ್ತು ನಾವು ಗೌರಿಯನ್ನು ಮಾರ್ಥಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರದಿದ್ದರೆ ಅವಳು ಖಂಡಿತಾ ಬದುಕುಳಿಯುತ್ತಿರಲಿಲ್ಲ.

·         ಗೌರಿಹಬ್ಬದ ದಿನದಂತ ನಮ್ಮ ಮಗಳು ಗೌರಿಯನ್ನು ಆಸ್ಪತ್ರೆಯಿಂದ ಮನಗೆ ಕರೆದುಕೊಂಡು ಬಂದೆವು. ಒಂದು ವರ್ಷದಲ್ಲಿ ಇಷ್ಟೆಲ್ಲ ನಡೆಯಿತು.

·         ಗೌರಿಗೆ ಬ್ರೈನ್ ಫೀವರ್ ಆದಾಗ ಆಕೆ ಏಳನೇ ತರಗತಿ ಓದುತ್ತಿದ್ದಳು. ಆಕೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಮಯ ಹಿಡಿದಿದ್ದರಿಂದ ಆಕೆ  ಬಹಳಷ್ಟು ದಿನ ಶಾಲೆಯಿಂದ  ಹೊರಗೇ ಉಳಿದಿದ್ದಳು. ಎಲ್ಲಾ ವಿದ್ಯಾರ್ಥಿಗಳ ಜೀವನದಲ್ಲಿ ಏಳನೇ ತರಗತಿಯ ಪರೀಕ್ಷೆಗಳು ಒಂದು ಮುಖ್ಯಘಟ್ಟ. ಅದರಲ್ಲಿ ಚೆನ್ನಾಗಿ ಮಾರ್ಕ್ಸ್ ತೆಗೆದುಕೊಂಡರೆ ಉತ್ತಮ ಹೈಸ್ಕೂಲಿನಲ್ಲಿ ಪ್ರವೇಶ ಸಿಗುತ್ತದೆ. ಆದರೆ  ಬಹಳಷ್ಟು ಕ್ಲಾಸ್‍ಗಳನ್ನು ಗೌರಿ ಮಿಸ್ ಮಾಡಿಕೊಂಡಿದ್ದರಿಂದ ಆಕೆಯನ್ನು ಆ ವರ್ಷ ಪರೀಕ್ಷೆಗಳಿಗೆ ಕಳುಹಿಸುವುದು ಬೇಡವೆಂದು ನಾನು ಮತ್ತು ಲಂಕೇಶರು ನಿರ್ಧರಿಸಿದೆವು. ಆದರೆ ಗೌರಿ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತೇನೆ ಎಂದು ನಿರ್ಧರಿಸಿ ಫಸ್ಟ್ ಕ್ಲಾಸಿನಲ್ಲಿ ಪಾಸ್ ಕೂಡ ಆದಳು.
*******
(ಇವು ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್ ಅವರ ಜೀವನ ಕಥೆ, “ಹುಳಿಮಾವು ಮತ್ತು ನಾನು” ಕೃತಿಯಿಂದ ಆಯ್ದ ಭಾಗಗಳು. ಗೌರಿ ಅವರ ವೈಚಾರಿಕತೆ, ಸಾರ್ವಜನಿಕ ಬದುಕು ಎಲ್ಲದರ ಬಗ್ಗೆ ಅನೇಕ ಗೆಳೆಯರು ಮಹತ್ವದ ಅಂಶಗಳನ್ನಿಟ್ಟುಕೊಂಡು ಚರ್ಚಿಸುತ್ತಿದ್ದಾರೆ. ಅವುಗಳ ಮಧ‍್ಯೆ ಇಂತಹ ಭಾವಪೂರ್ಣ ಅಂಶಗಳೂ ಸಂಬಂಧಪಟ್ಟವರನ್ನು ಕಲಕಬಹುದು ಎಂದು ಇವನ್ನು ಇಲ್ಲಿ ಎತ್ತಿಕೊಡುತ್ತಿದ್ದೇನೆ. ಇವು ಅವರ ಜನನ ಬಾಲ್ಯ ಕುರಿತಾದ ವಿವರಗಳು ಮಾತ್ರ. ಅದರ ಮುಂದಿನ ಭಾಗವಾದ ಯೌವನ, ಮದುವೆ, ಉದ್ಯೋಗ, ಇತ್ಯಾದಿಗಳನ್ನು ಸಧ್ಯದಲ್ಲಿ ಭಾಗ-2 ರಲ್ಲಿ ಕೊಡುವೆ. – ಡಾ. ರಾಜೇಂದ್ರ ಬುರಡಿಕಟ್ಟಿ.)

(ನಮ್ಮ ನಾಡಿನ ವೈಚಾರಿಕತೆಯ ದೊಡ್ಡಧ್ವನಿಯೊಂದನ್ನು ಅಡಗಿಸಿದ ಪಾತಕಿಗಳಿಗೆ, ಈ ಹೇಯ ಕೃತ್ಯವನ್ನು ಮಹತ್ವವಾದ ಸಾಧನೆಯೆಂದು ಅಂದುಕೊಂಡು ಅವರ ಸಾವನ್ನು ಸಂಭ್ರಮಿಸುತ್ತಿರುವ ಪರಮನೀಚರಿಗೆ  ಇಡೀ ನಾಡಿನ ಜನತೆಯ ಎದೆಯ ಉರಿ ತಟ್ಟಲಿ.
*******

No comments:

Post a Comment