Friday, June 2, 2017

ಮಳೆಗಾಗಿ ಪರ್ಜನ್ಯಹೋಮ ಮೌಢ್ಯ ಬಿತ್ತುವ ಕಾರ್ಯ


ಮುಂಗಾರು ಮಳೆಗಾಗಿ ಸರ್ಕಾರ ಪರ್ಜನ್ಯ ಹೋಮ ಮಾಡಿಸಲು ಹೊರಟಿರುವ ಕ್ರಮ ನಮ್ಮ ಸಂವಿಧಾನದ ಬಹುಮುಖ್ಯ ಆಶಯಗಲ್ಲಿ ಒಂದಾದ ಜನರಲ್ಲಿ ‘ವೈಜ್ಞಾನಿಕ ಮನೋಭಾವ' ಬೆಳೆಸುವ ಜವಾಬ್ದಾರಿಗೆ ವಿರುದ್ಧವಾದದ್ದು. ಮೌಢ್ಯನಿಷೇಧ ಕಾಯ್ದೆಯನ್ನು ತನ್ನ ಅಧಿಕಾರಾವಧಿಯು ಕೊನೆಗೊಳ್ಳುವದರೊಳಗೆಯಾದರೂ ಜಾರಿಗೆ ತರಬಹುದೇನೋ ಎಂಬ ವಿಶ್ವಾಸವನ್ನು ಅಲ್ಲದಿದ್ದರೂ ಆಶಾಭಾವನೆಯನ್ನು ಇಟ್ಟುಕೊಂಡಿರುವ ನಾಡಿನ ಬಹುತೇಕ ಜನರಿಗೆ ಸರ್ಕಾರದ ಈ ಕಡೆಯಿಂದ ಭರವಸೆ ಬತ್ತುವಂತಾಗಿದೆ.

ಮೈಸೂರು ಮಹಾರಾಜರ ಕಾಲದಿಂದಲೂ ಈ ಸಂಪ್ರದಾಯ ಇತ್ತು ಎಂದು ಸರ್ಕಾರ ನೀಡಿದೆ ಎನ್ನಲಾದ ಸಮರ್ಥನೆ ಸರಿಯಲ್ಲ. ನಮ್ಮಪೂರ್ವಜರು ನಡೆಸಿಕೊಂಡು ಬಂದಿರುವ ಅನೇಕ ಆಚರಣೆಗಳನ್ನು ನಾವಿಂದು ಬಿಟ್ಟಿದ್ದೇವೆ ಅಥವಾ ಮಾರ್ಪಡಿಸಿಕೊಂಡು ಮುಂದುವರೆಸಿದ್ದೇವೆ. ಹಿಂದೆ ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸಲು (ಖುಷಿಪಡಿಸಲು) ರಾತ್ರಿ ಅವರೊಳಗೆ ಮನೆಯ ಮಹಿಳೆಯರನ್ನು ‘ಇದಗಿಸುವುದು’ ಕೂಡ ನಮ್ಮ ಸಂಪ್ರದಾಯವಾಗಿತ್ತು! 'ಬೆತ್ತಲೆಸೇವೆ' ಕೂಡ ನಮ್ಮ ಸಂಪ್ರದಾಯವಾಗಿತ್ತು. ಅವನ್ನು ಇಂದು ನಾವು ಬಿಟ್ಟಿಲ್ಲವೇ? ಇದೇ ಮೈಸೂರು ಮಹಾರಾಜರ ಕಾಲದಲ್ಲಿ ದಸರಾ ಮೆರವಣಿಗೆಯಲ್ಲಿ ಅಂಬಾರಿಯಲ್ಲಿ ರಾಜರನ್ನು ಕೂರಿಸಿ ಮೆರವಣಿಗೆ ಮಾಡುವ ಕ್ರಮವಿತ್ತು. ಅದನ್ನು ಇಂದು ನಾವು ಬದಲಿಸಿಕೊಂಡಿಲ್ಲವೇ? ಹೀಗೆ ಸಂಪ್ರದಾಯಗಳನ್ನು ಬಿಟ್ಟುಕೊಡುವಿಕೆ ಅಥವಾ ಮಾರ್ಪಡಿಸಿಕೊಳ್ಳುವಿಕೆ ಚಲನಶೀಲ ಸಮಾಜವೊಂದರ ಸಹಜ ಲಕ್ಷಣ. ಕಾಲದ ಅವಶ್ಯಕತೆಯಾದ ಇದು ನಮ್ಮ ಪರಂಪರೆಗೆ ಕೊಡುವ ನಿಜವಾದ ಗೌರವ. ಅದನ್ನು ಬಿಟ್ಟು ಒಂದು ಕಾಲದ ಆಚರಣೆಯನ್ನು ಯಥಾವತ್ತಾಗಿ ಇನ್ನೊಂದು ಕಾಲದಲ್ಲಿ ನಡೆಸಲು ಹೋಗುವುದು ಅನೇಕವೇಳೆ ಮೂರ್ಖತನವಾಗುತ್ತದೆ.
ಆಡಳಿತ ನಡೆಸುವವರಿಗೆ ಯಾವುದೇ ವಿಚಾರವಿರಲಿ ಒಂದು ಸ್ಪಷ್ಟತೆ ಇರಬೇಕು. ಮಳೆ ಬರದಿರಲು ಕಾರಣಗಳೇನು ಮತ್ತು ಏನುಮಾಡುವುದರಿಂದ ಮಳೆಬರುತ್ತದೆ ಎಂಬುದು ಶಾಲಾ ಮಕ್ಕಳಾಗಿದ್ದಾಗಲೇ ತಿಳಿದುಕೊಳ್ಳಬೇಕಾದ ಚಿಕ್ಕ ಸಂಗತಿ. ಕಾಡು ನಾಶವೂ ಸೇರಿದಂತೆ ಪರಿಸರದ ಮೇಲೆ ಮಾಡಬಾರದ ಅನಾಚಾರಗಳನ್ನೆಲ್ಮ ಮಾಡಿ ಪರ್ಜನ್ಯ ಹೋಮ ಮಾಡಿ ಮಳೆ ತರಿಸುತ್ತೇವೆ ಎಂಬುದು ಹಾಸ್ಯಾಸ್ಪದವಾಗುತ್ತದೆ. ಹೀಗೆ ಮಳೆ ಬರಿಸಲು ಸಾಧ್ಯ ಎಂದು ಒಪ್ಪಿಕೊಂಡರೆ ಅರಣ್ಯ ಇಲಾಖೆಯು ಕೋಟಿಗಟ್ಟಲೆ ಖರ್ಚುಮಾಡಿ ಗಿಡಮರ ಬೆಳೆಸುವ ಅಗತ್ಯವೇ ಬರುವುದಿಲ್ಲ. ‘ಅದನ್ನೂ ಮಾಡುತ್ತೇವೆ; ಇದನ್ನೂ ಮಾಡುತ್ತೇವೆ. ಒಟ್ಟಿನಲ್ಲಿ ಹೇಗಾದರೂ ಸರಿ ಮಳೆಬಂದರಾಯಿತು' ಎನ್ನುವುದು ಎಡಬಿಡಂಗಿತನವಾಗುತ್ತದೆ. ಈ ಹೋಮದ ಶಕ್ತಿಯ ಬಗ್ಗೆ ಒಂದುವೇಳೆ ಅಷ್ಟೊಂದು ನಂಬಿಕೆ ಇದ್ದಿದ್ದರೆ ಮೇ ತಿಂಗಳ ಉರಿಬಿಸಿಲಿನಲ್ಲಿ ಜನ ಕುಡಿಯುವ ನೀರಿಗೆ ಆಹಾಕಾರಪಡುತ್ತಿದ್ದಾಗ ಅದನ್ನು ಮಾಡಬಹುದಿತ್ತು. ಆಗ ಅದನ್ನು ಮಾಡದೇ ನಮ್ಮ ಹವಾಮಾನ ಇಲಾಖೆ ಇನ್ನೇನು ಎರಡು ಮೂರು ದಿನಗಳಲ್ಲಿ ಮಳೆಯಾಗುತ್ತದೆ ಎಂದು ಹೇಳಿರುವಾಗ ಮಾಡಹೊರಟಿರುವುದು ನೋಡಿದರೆ ಈ ಹೋಮದ ‘ಅದ್ಭುತಶಕ್ತಿ’ಯಾರಿಗಾದರೂ ಅರಿವಾಗದೇ ಇರದು. ಇಂಥ ಕ್ರಮಗಳಿಂದ ಪುರೋಹಿತಶಾಹಿಯ ಹೊಟ್ಟೆ ಬೆಳೆಯುತ್ತದೆಯೇ ಹೊರತು ಮಳೆಯಾಗುವುದಿಲ್ಲ.
ಸರ್ಕಾರ ಇಂತಹ ಅಸಂಬದ್ದ ಕಾರ್ಯಗಳಿಗೆ ಸಾರ್ವಜನಿಕ ಹಣ ಮತ್ತು ತನ್ನ ಅಮೂಲ್ಯ ಸಮಯಗಳನ್ನು ಪೋಲುಮಾಡದೇ ಈ ನಿಟ್ಟಿನಲ್ಲಿ ಸ್ಪಷ್ಟತಿಳಿವಳಿಕೆ ಹೊಂದಿ ತಮ್ಮಷ್ಟಕ್ಕೆ ತಾವು ‘ಬೀಜದುಂಡೆ ಅಭಿಯಾನ' (Seed-ball Campaign) ದಂತಹ ಪರಿಸರ ಉಳಿಸಿಬೆಳೆಸುವ ಕಾರ್ಯದಲ್ಲಿ ರಾಜ್ಯದ ಬೇರೆಬೇರೆ ಕಡೆಗಳಲ್ಲಿ ನಿರತರಾಗಿರುವ ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳಿಗೆ ಧನಸಹಾಯವೂ ಸೇರಿದಂತೆ ಎಲ್ಲ ಅಗತ್ಯ ನೆರವನ್ನು ನೀಡುವ ಮೂಲಕ ಮಳೆಬರಿಸುವ ನಿಜಕಾರ್ಯಕ್ಕೆ ಕೈಜೋಡಿಸಬೇಕು
- ಡಾ. ರಾಜೇಂದ್ರ ಬುರಡಿಕಟ್ಟಿ

No comments:

Post a Comment