Sunday, April 23, 2017

ಅಂಬೇಡ್ಕರ್ `ತೀರ್ಥಸ್ಥಳಗಳು ಮತ್ತು `ಹಿಂದೂ ಧರ್ಮದ ಒಗಟುಗಳು


ಯಾರು ಅಂಬೇಡ್ಕರ್ ಅವರನ್ನು ಅವರ ಜೀವಿತ ಅವಧಿಯಲ್ಲಿ ಮಾತ್ರವಲ್ಲ ಅವರ ಸಾವಿನ ನಂತರವೂ ಅಂದರೆ ತೀರಾ ಇತ್ತೀಚಿನವರೆಗೂ ಅಸ್ಪೃಶ್ಯರನ್ನಾಗಿಯೇ ದೂರತಳ್ಳುತ್ತಾ ಕೆಳಗೆ ತುಳಿಯುತ್ತಾ ಬಂದರೋ, ಯಾರು ಅವರನ್ನು `ಸುಳ್ಳುದೇವರು’ ಎಂದು ಅಸಹನೆ ತೋರುತ್ತಾ, ಸಂವಿಧಾನದ ಮೂಲ ಕರಡನ್ನು ಬರೆದದ್ದು ಅವರಲ್ಲ ಮೇಲ್ವರ್ಗದ ಒಬ್ಬ ಅನಾಮದೇಯ ವ್ಯಕ್ತಿ ಅಂತೆಲ್ಲ ಹೇಳುತ್ತಾ ಬಂದರೋ ಅವರೆಲ್ಲರಿಗೆ ಯಾಕೋ ಏನೋ ದಿಢೀರನೆ ಒಂದೆರಡು ವರ್ಷಗಳಿಂದ ಅಂಬೇಡ್ಕರ್ ಒಬ್ಬ ಮಹಾತ್ಮನಾಗಿ ಕಾಣತೊಡಗಿದ್ದಾರೆ. ನಿಜವಾಗಿ ಅಂಬೇಡ್ಕರ್ ಅವರ ವ್ಯಕ್ತಿತ್ವವನ್ನು ಅರ್ಥಮಾಡಕೊಂಡು ಈ ಬದಲಾವಣೆ ಬಂದಿದ್ದರೆ ಬಹಳ ಸಂತೋಷಪಡಬಹುದಿತ್ತೇನೋ ಆದರೆ ಅದು ಹಾಗೆ ಆದಂತಿಲ್ಲ. ಹೇಗೆಲ್ಲ ಸಾಧ್ಯವೋ ಹಾಗೆಲ್ಲ ಅವರ ವ್ಯಕ್ತಿತ್ವಕ್ಕೆ ಮಸಿಬಳಿಯಲು ಹೋಗಿ ಅದು ಏನೂ ವರ್ಕೌಟ್ ಆಗದಿದ್ದಕ್ಕಾಗಿ ಅನಿವಾರ್ಯವಾಗಿ `ಪ್ಲೇಟ್’ ಬದಲಾಗಿದ್ದು ನಿಚ್ಚಳವಾಗಿ ಕಾಣುತ್ತಿದೆ.
ಇಂದು ನಮ್ಮ ರಾಜ್ಯದ ಮುಖ್ಯಮಂತ್ರಿಯೊಬ್ಬರು ಬೆಂಗಳೂರಿನಲ್ಲಿ ಮಾತನಾಡುತ್ತಾ `ನಮ್ಮ ಪ್ರಧಾನಮಂತ್ರಿಯವರು ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು `ತೀರ್ಥಕ್ಷೇತ್ರ’ಗಳನ್ನಾಗಿ ಮಾಡುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಿರುವುದನ್ನು ಯಾವುದೋ ಟಿ.ವಿ.ಚಾನೆಲ್ನಲ್ಲಿ ಗಮನಿಸಿದೆ. ಬಹುಶಃ `ತೀರ್ಥ’ `ಪ್ರಸಾದ’ ಇವಿಲ್ಲದಿದ್ದರೆ ಇವರು ಬದುಕಲಾರರೇನೋ? ಯಾವ ತೀರ್ಥ, ಪ್ರಸಾದಗಳ ವಿರುದ್ಧ ತಮ್ಮ ಜೀವಿತದ ಬಹುಮುಖ್ಯ ಭಾಗವನ್ನು ಹೋರಾಟದಲ್ಲಿ ಕಳೆದರೋ ಅಂತಹ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು `ತೀರ್ಥಸ್ಥಳ’ ಮಾಡುವುದು ಅಂದರೇನೇ ಅವರ ವಿಚಾರಧಾರೆಯನ್ನು ಮಣ್ಣುಮಾಡುವ ಕಾರ್ಯದ ಮೊದಲ ಹೆಜ್ಜೆ.
ಅಂಬೇಡ್ಕರ್ ಅವರ ಬಗ್ಗೆ ಇವರೆಲ್ಲ ತೋರಿಸುವ ಪ್ರೀತಿ ಗೌರವ ನಿಜವಾದದ್ದೇ ಆದರೆ ಇವರು ಅವರ ಸ್ಥಳಗಳನ್ನು ಈಗ ಹೇಗೆ ಇವೆಯೋ ಹಾಗೇ ಬಿಡಬೇಕು! ಇವರು ಕಾಲಿಟ್ಟು ಅವನ್ನು ಮಲಿನಗೊಳಿಸಬಾರದು. ಇವರು ನಿಜವಾಗಿ ಮಾಡಬೇಕಾಗಿರುವ ಕೆಲಸ ಎಂದರೆ ಅಂಬೇಡ್ಕರ್ ತಮ್ಮ ಆಳವಾದ ಅಧ್ಯಯನದಿಂದ ಭಾರತೀಯ ಪುರಾಣಶಾಸ್ತ್ರ ಗ್ರಂಥಗಳನ್ನೆಲ್ಲ ತಲಸ್ಪರ್ಶಿ ಅಧ್ಯಯನ ಮಾಡಿ `ಹಿಂದೂ ಧರ್ಮದ ಒಗಟುಗಳು’ ಎಂಬ ಸುಮಾರು ಇಪ್ಪತ್ತೈದು ಒಗಟುಗಳು ಇರುವ ಒಂದು ಮಹತ್ವದ ಕೃತಿ ರಚಿಸಿದ್ದಾರೆ. ಅಲ್ಲಿ ಅವರು ಎತ್ತಿರುವ ಪ್ರಶ್ನೆಗಳಿಗೆ ಇದುವರೆಗೂ ಯಾವ ಪುಣ್ಯಾತ್ಮನೂ ಸರಿಯಾದ ಉತ್ತರ ಕೊಡಲು ಆಗಿಲ್ಲ. ಯಾರು ಯಾರನ್ನೆಲ್ಲ ದೇವಮಾನವರು, ಮಹಾನ್ ಸಂತರು, ಮಠಾಧೀಶರು ಅಂತೆಲ್ಲ ಇವರು ಪರಿಗಣಿಸುತ್ತಾರೋ ಅವರನ್ನೆಲ್ಲ ಒಂದೆಡೆ ಕೂರಿಸಿ `ಚಿಂತನ-ಮಂಥನ’ ಮಾಡಿಸಿ ಅಂಬೇಡ್ಕರ್ ಅವರ ಅಂದಿನ ಈ ಒಗಟುಗಳಿಗೆ ಇಂದಾದರೂ ಉತ್ತರ ಕೊಡಲಿಕ್ಕೆ ಆಗುತ್ತಾ ಅಂಥಾ ನೋಡಬೇಕು. ಇದು ನಮ್ಮ ಯುವಜನಾಂಗಕ್ಕೆ ಇವರು ಮಾಡಬಹುದಾದ ದೊಡ್ಡ ಕೊಡುಗೆ ಆದೀತು. ನಮ್ಮ ಯುವ ಜನಾಂಗ ಕೂಡ ಅಂಬೇಡ್ಕರ್ ಅವರ ಈ ಪುಸ್ತಕವನ್ನು ಅವಶ್ಯವಾಗಿ ಓದಬೇಕು. ಆ ಪ್ರಶ್ನೆಗಳು ಆಗ ತಮ್ಮ ಪ್ರಶ್ನೆಗಳೂ ಹೌದು ಅನ್ನಿಸಿದರೆ ಮತಧರ್ಮಗಳ ಕೆಸರನ್ನು ತಮ್ಮ ತಲೆಗೆ ತುಂಬಲು ಬರುವ ಹುಂಬರಿಗೆ ಈ ಪ್ರಶ್ನೆಗಳನ್ನು ಅವರೂ ಕೇಳಿಯೇ ಕೇಳುತ್ತಾರೆ. ಆ ಮೂಲಕ ಯುವಕರು ನಿಜಾರ್ಥದಲ್ಲಿ ತಮ್ಮ ಸ್ವಂತ ಅರಿವಿನ ಮೂಲಕ ಅಭಿಪ್ರಾಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.
ಕೊನೆ ಟಿಪ್ಪಣಿ: ನಾನು ಮುಂಬೈಗೆ ಹೋದಾಗಲೆಲ್ಲ ತಪ್ಪದೇ ಭೇಟಿ ನೀಡುವ ಸ್ಥಳವೆಂದರೆ ದಾದರ್ನ ಅರಬ್ಬೀ ಸಮುದ್ರದ ದಂಡೆಯಲ್ಲಿರುವ `ಚೈತ್ಯಭೂಮಿ’ ಅಂಬೇಡ್ಕರ್ ಅವರು ಭೌತಿಕವಾಗಿ ನಮ್ಮನ್ನಗಲಿದಾಗ ನಮಗೆ ಪ್ರೇರಣೆ ಕೊಡಲು ನಿರ್ಮಿತವಾದ ಅವರ ಸ್ಮಾರಕ. ಮುಂಬೈನ ಪ್ರಸಿದ್ಧ ಸ್ಥಳಗಳೆಲ್ಲವನ್ನೂ, ಚಲನಚಿತ್ರತಾರೆಯರು, ಕ್ರಿಕೇಟಿಗರ ಮನೆಗಳನ್ನೂ ವಾಹನ ನಿಲ್ಲಿಸಿ ಪ್ರವಾಸಿಗರಿಗೆ ತೋರಿಸುವ ಅಲ್ಲಿನ ಪ್ರವಾಸಿ ವಾಹನಗಳವರು ಈ ಜಗತ್ಪ್ರಸಿದ್ಧ ವ್ಯಕ್ತಿಯೊಬ್ಬರ ಸ್ಮಾರಕದ ಪಕ್ಕದಲ್ಲಿಯೇ ತಮ್ಮ ವಾಹನಗಳು ಹಾದು ಹೋದರೂ ಅದರ ಪ್ರಸ್ತಾಪ ಮಾಡುವುದಿಲ್ಲ! ನಾನಂತೂ ಎಷ್ಟುಸಾರಿ ಹೋದರೂ ಅಲ್ಲಿಗೆ ಹೋಗಿ ಪ್ರಶಾಂತವಾಗಿರುವ ಬುದ್ಧ ಮತ್ತು ಅಂಬೇಡ್ಕರ್ ಅವರ ಪ್ರತಿಮೆಗಳ ಹತ್ತಿರ ಒಂದಿಷ್ಟು ಹೊತ್ತು ಕುಳಿತು ಬರದಿದ್ದರೆ ನನ್ನ ಮುಂಬೈ ಪ್ರವಾಸ ಅಪೂರ್ಣವೆಂದೇ ಬಗೆಯುವೆ. ಇನ್ನೂ ಒಂದು ಕುತೂಹಲಕಾರಿ ಅಂಶವೆಂದರೆ ಅಂಬೇಡ್ಕರ್ ವಿಚಾರಧಾರೆಗೆ ಸಂಪೂರ್ಣವಾಗಿ ವಿರುದ್ಧವಾದ ವಿಚಾರಧಾರೆಯ ನಾಯಕರಾಗಿದ್ದ ಬಾಳಾ ಠಾಕ್ರೆ ಅವರ ಸಮಾಧಿ ಇರುವುದು ಕೂಡ ಇಲ್ಲಿಯೇ ಅಂಬೇಡ್ಕರ್ ಸ್ಮಾರಕದಿಂದ ಕೂಗಳತೆಯ ದೂರದಲ್ಲಿರುವ ಶಿವಾಜಿ ಪಾರ್ಕಿನಲ್ಲಿ! ನಾನು ಇತ್ತೀಚೆಗೆ ಮುಂಬೈಗೆ ಹೋದಾಗಿನ ಚೈತ್ಯಭೂಮಿಯ ಫೋಟೋ ತಮಗಾಗಿ.
LikeShow more reactions
Comment

No comments:

Post a Comment