Wednesday, June 14, 2017

ಸಗಣಿ ತಿನ್ನಿಸಿದ ಮಾಂತ್ರಿಕ!

ಚಿಕಿತ್ಸೆಯ ಹೆಸರಿನಲ್ಲಿ ಮುಗ್ಧ ಯುವತಿಯೋರ್ವಳಿಗೆ ನಮ್ಮ ಬೀದರಿನಲ್ಲಿ ಸಗಣಿ ತಿನ್ನಿಸಿದ ಮಾಂತ್ರಿಕನೊಬ್ಬನ ವಿರುದ್ಧ ಮಹಾರಾಷ್ಟ್ರದ ಚಾಕೂರ್ ಪೋಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿರುವುದು ವರದಿಯಾಗಿದೆ. ದಾಖಲಾದ ಈ ಪ್ರಕರಣ ಇಂತಹ ಅಯೋಗ್ಯರಿಗೆ ಶಿಕ್ಷೆ ಕೊಡಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆಯೋ ಗೊತ್ತಿಲ್ಲ. ಆದರೆ ಕೊನೆಯ ಪಕ್ಷ ಪ್ರಕರಣ ದಾಖಲಾಗಲು ಮಹರಾಷ್ಟ್ರ ಸರ್ಕಾರವು ಜಾರಿಗೆ ತಂದಿರುವ ಮಾಢ್ಯ ನಿಷೇಧ ಕಾಯ್ದೆ ಸ್ಪಷ್ಟವಾಗಿ ನೆರವಾಗಿದ್ದು ಮಾತ್ರ ಒಂದು ಒಳ್ಳೆಯ ಬೆಳವಣಿಗೆಯಾಗಿದೆ ಎನ್ನಬೇಕು.
ಈ ಅಸಹ್ಯಕರ ಕೃತ್ಯಕ್ಕೆ ಬಲಿಯಾದ ಹದಿನೆಂಟು ವರ್ಷದ ಯುವತಿ ಅನಕ್ಷರಸ್ಥೆಯಲ್ಲ. ಬಿ.ಎ. ವ್ಯಾಸಂಗ ಮಾಡುತ್ತಿರುವ ಕಾಲೇಜು ಹುಡುಗಿ. ಅಂದರೆ ಹನ್ನೆರಡು ವರ್ಷಗಳ ಶಾಲಾ ಶಿಕ್ಷಣವನ್ನು ಮುಗಿಸಿರುವಂಥವಳು. ಹನ್ನೆರಡು ವರ್ಷಗಳ ದೀರ್ಘ ಅವಧಿಯಲ್ಲಿ ಅವಳಿಗೆ ನೀಡಲ್ಪಟ್ಟಿರುವ ಶಿಕ್ಷಣವು `ಸಗಣಿ ತಿನ್ನುವುದು ಅಸಹ್ಯವಾದದ್ದು, ಮೂರ್ಛೆರೋಗ ಅಥವಾ ಮಾಟ-ಮಂತ್ರಗಳಿಂದ ಆಗಿದೆ ಎನ್ನಲಾದ ತೊಂದರೆಗಳಿಗೆ ಪರಿಹಾರವು ಇದರಿಂದ ಸಿಗುವುದಿಲ್ಲ. ಇದು ಒಂದು ಮೂಢನಂಬಿಕೆ’ ಎಂಬ ಕನಿಷ್ಠ ಪ್ರಜ್ಞೆಯನ್ನೂ ಅವಳಲ್ಲಿ ಬೆಳಸಲಿಲ್ಲವೋ ಅಥವಾ ಅದು ಅವಳಲ್ಲಿ ಬೆಳದಿದ್ದರೂ ಅವಳ ಪಾಲಕರೂ ಸೇರಿದಂತೆ ಸುತ್ತಮುತ್ತಲ ಸಮಾಜ ಅವಳನ್ನು ಬಲತ್ಕಾರವಾಗಿ ಇಂತಹ ಕೃತ್ಯಕ್ಕೆ ದೂಡಿತೋ ಅದಿನ್ನೂ ಸ್ಪಷ್ಟವಾಗಬೇಕಾಗಿದೆ. ಕಾರಣ ಏನೇ ಇರಲಿ ನಮ್ಮ ಸಮಾಜ ಯಾವ ಹಂತದಲ್ಲಿದೆ ಮತ್ತು ಯಾವ ಕಡೆ ಚಲಿಸುತ್ತಿದೆ ಎಂಬುದು ಈ ಒಂದು ಘಟನೆ ನಮಗೆ ಬೆರಳುಮಾಡಿ ತೋರಿಸುತ್ತದೆ.
ಕರ್ನಾಟಕದಲ್ಲಿಯೂ ಇಂತಹ ಮೂಢನಂಬಿಕೆಗಳನ್ನು ನಿಷೇಧಿಸುವ, ಜನರಲ್ಲಿ ವೈಜ್ಞಾನಿಕತೆ, ವೈಚಾರಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂಥದೊಂದು ಕಾನೂನು ಇಷ್ಟರೊಳಗೆ ಜಾರಿಗೆ ಬಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅನ್ನಿಸುತ್ತಿದೆ. ಮಹಾರಾಷ್ಟ್ರ ಮಾದರಿಯ ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ತರಲು ನಮ್ಮಲ್ಲಿಯೂ ಒತ್ತಡ ಹೆಚ್ಚಾದಾಗ ಕುಂಟುತ್ತಾ ಕುಂಟುತ್ತಾ ಅಂತೂ ಒಂದು ಕರಡು ಸಿದ್ಧವಾದರೂ ಅದು ಕಾನೂನಾಗಿ ಜಾರಿಗೆ ಬರಲು ಇನ್ನೂ ಮೀನಮೇಷ ಎಣಿಸುತ್ತಿದೆ. ಸರ್ಕಾರ ಅದರ ಕರಡನ್ನು ಸಿದ್ಧಪಡಿಸಲು ಎಷ್ಟೋ ದಿವಸ ತೆಗೆದುಕೊಂಡಿತು. ಅಂತೂ ಕೊನೆಗಾದರೂ ಪ್ರಕಟವಾಯಿತಲ್ಲ ಎಂದು ಸಮಾಧಾನದ ನಿಟ್ಟುಸಿರು ಬಿಡುವ ವೇಳಗೇ ಅದು ಮುಂದೆ ಹೋಗದಂತೆ ಕಾಲೆಳೆಯುವ ಪ್ರಯತ್ನಗಳು ಶುರುವಾದವು. ಸರ್ಕಾರ ತರಲು ಹೊರಟಿರುವ ಈ ಉದ್ದೇಶಿಸಿತ ಕಾನೂನಿನ ಬಗ್ಗೆ ನಮ್ಮ ಕೆಲವು `ಧಾರ್ಮಿಕ ಮುಖಂಡರು’, `ರಾಜಕೀಯ ಮುತ್ಸದ್ಧಿಗಳು’ ಮತ್ತು `ಧರ್ಮರಕ್ಷಕರು’ ಇದು `ಹಿಂದೂ ಧರ್ಮದ ಆಚರಣೆಗಳ ಮೇಲೆ ನಿರ್ಬಂಧ ಹೇರುವ ಹುನ್ನಾರ’ ಎಂದು ಕ್ಯಾತೆ ತೆಗೆದು ಎದ್ವಾತದ್ವ ಹೇಳಿಕೆ ನೀಡಿ ಜನರಲ್ಲಿ ಅನಗತ್ಯ ಗೊಂದಲವನ್ನುಂಟುಮಾಡಿಬಿಟ್ಟರು!
ಕೆಲವರ ಹೇಳಿಕೆಗಳನ್ನು ನೋಡಿದರೆ ಅವರು ಈ ಕಾನೂನಿನ ಕರಡನ್ನು ನೋಡಲೇ ಇಲ್ಲ ಎಂದು ಯಾರಾದರೂ ಹೇಳಬಹುದಿತ್ತು. ಹೀಗೆ ಕರಡನ್ನು ಓದದೇ ಮಾಧ್ಯಮದೆದುರು ಹೇಳಿಕೆ ನೀಡಲು ಹಿಂದೆ ರಾಜಕಾರಣಿಗಳು ಅಂಜುತ್ತಿದ್ದರು. ಮರುಪ್ರಶ್ನೆ ಮಾಡಿದರೆ ಏನುಗತಿ ಎಂಬುದು ಅವರ ಅಂಜಿಕೆಯ ಹಿಂದೆ ಇರುತ್ತಿದ್ದ ಕಾರಣವಾಗಿತ್ತು. ಆದರೆ ಇಂದು ಅವರಿಗೆ ಆ ಅಂಜಿಕೆ ಇಲ್ಲ. ಹೀಗೆ ಬೇಜವಾಬ್ದಾರಿಯಿಂದ ಹೇಳಿಕೆ ನೀಡಿದಾಗ ಅದನ್ನು ನೀಡಿದವರಿಗೆ ಮರಳಿ ಪ್ರಶ್ನೆಮಾಡಿ ಸತ್ಯಾಸತ್ಯತೆಯನ್ನು ಧೃಡಪಡಿಸಿಕೊಂಡೇ ಜನತೆಗೆ ಸಂದೇಶ ರವಾನಿಸುವ ಜವಾಬ್ದಾರಿಯುತ ಮಾಧ್ಯಮಗಳ ಸಂಖ್ಯೆ ದಿನದಿನಕ್ಕೆ ಕುಸಿಯುತ್ತಿದ್ದು ಅವರು ಹೇಳಿದ್ದನ್ನು ಹಸಿಹಸಿಯಾಗಿ ಜನರಿಗೆ ಯಥಾವತ್ತಾಗಿ ದಾಟಿಸುವ, ಇನ್ನೂ ಸಾಧ್ಯವಾದರೆ ಇನ್ನಷ್ಟು `ಉಪ್ಪುಕಾರ’ ಹಾಕಿ ಮಸಾಲೆಮಾಡಿ ಜನತೆಗೆ ದಾಟಿಸುವ ಮಾಧ್ಯಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಅವರ ಅಂಜಿಕೆ ಇಲ್ಲವಾಗಲು ಬಹುಶಃ ಕಾರಣವಾಗಿರಬಹುದು.
ಹೀಗೆ ಹೇಳಿಕೆ ನೀಡಿದ ಯಾರೊಬ್ಬರೂ ಈ ಉದ್ದೇಶಿತ ಕಾನೂನಿನಲ್ಲಿಯ ಯಾವ ಅಂಶ ಇವರ ಧರ್ಮದ ಯಾವ ಆಚರಣೆಗಳನ್ನು ಯಾವ ರೀತಿಯಲ್ಲಿ ನಿರ್ಬಂಧಿಸುತ್ತದೆ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಲಿಲ್ಲ. ಅವರು ಹೇಳಿದ್ದನ್ನೇ `ವೇದವಾಕ್ಯ’ ಮಾಡಿಕೊಂಡ ಅವರ ಹಿಂಬಾಲಕ ಪಡೆ ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಎಲ್ಲೆಂದರಲ್ಲಿ ಈ ನಾಯಕರ ಹೇಳಿಕೆಗಳನ್ನೇ ಪುನರುಚ್ಚರಿಸಿ `ಇದರಲ್ಲಿ ಎನೋ ದೊಡ್ಡ ಸಂಚು ಅಡಗಿದೆ ಈ ಕಾನೂನು ಬಂದರೆ ಹಿಂದೂ ಧರ್ಮಕ್ಕೆ ದೊಡ್ಡ ನಷ್ಟವಾಗಲಿದೆ’ ಎಂದು ಸಾಮಾನ್ಯ ಜನರನೇಕರು ಭಾವಿಸುವಂತೆ ಮಾಡಿಬಿಟ್ಟರು. ಒಟ್ಟಿನಲ್ಲಿ ಎಲ್ಲರೂ ಸೇರಿ ಇದನ್ನೊಂದು ಗೊಂದಲದ ಗೂಡನ್ನಾಗಿ ಮಾಡಿ ಆಗಲೇಬೇಕಾಗಿದ್ದ ಅತ್ಯಂತ ಮಹತ್ವದ ಕೆಲಸವೊಂದಕ್ಕೆ ಕಲ್ಲುಹಾಕಿ ತಡೆಯೊಡ್ಡಿದರು. ಒಂದು ವೇಳೆ ಇವರು ಭಾವಿಸುವಂತಹ ತಮ್ಮ ಧಾರ್ಮಿಕ ಆಚರಣೆಗಳನ್ನು ನಿರ್ಬಂಧಿಸುವ ಅಂಶಗಳೇನಾದರೂ ಅದರಲ್ಲಿ ಇದ್ದರೆ ಅವನ್ನು ಎತ್ತಿತೋರಿಸಿ ಪರಿಷ್ಕರಣೆಗೆ ಒತ್ತಾಯಿಸುವ ಅವಕಾಶವಿದ್ದರೂ ಹಾಗೆ ಮಾಡದೆ ಅದನ್ನು ವಿನಾಕಾರಣ ತಡೆಯುವ ಪ್ರಯತ್ನ ನಡೆಸಿದ್ದು ಮಾತ್ರ ಜನತೆಯ ವೈಚಾರಿಕತೆ ಬೆಳೆಸುವಲ್ಲಿ ಉಂಟಾದ ಒಂದು ಹಿನ್ನಡೆಯಲ್ಲದೆ ಬೇರೇನೂ ಅಲ್ಲ.
ಈ ಕಾನೂನು ಈಗಿನ ಮುಖ್ಯಮಂತ್ರಿಯ ಕಾಲದಲ್ಲಿ ಜಾರಿಗೆ ಬರದಿದ್ದರೆ ಇನ್ಯಾರ ಕಾಲದಲ್ಲಿ ಬರಲು ಸಾಧ್ಯ? ಈ ಸರ್ಕಾರದ ಅವಧಿ ಮುಗಿಯಲು ಇರುವ ಇನ್ನೊಂದು ವರ್ಷದ ಅವಧಿಯೊಳಗೆ ಏನಾದರೂ ಮಾಡಿ ಅದನ್ನು ಜಾರಿಗೆ ತರಲೇಬೇಕೆಂದು ಅನೇಕ ಪ್ರಗತಿಪರ ಚಿಂತಕರು, ಪ್ರಗತಿಪರ ಆಲೋಚನಾ ಕ್ರಮದ ಮಠಾದೀಶರೂ ಈ ನಿಟ್ಟಿನಲ್ಲಿ ಮಾಡಿರುವ ಮತ್ತು ಮಾಡುತ್ತಿರುವ ಪ್ರಯತ್ನಗಳು ನಿರೀಕ್ಷಿತಮಟ್ಟದಲ್ಲಿ ಯಶಸ್ಸು ನೀಡಿಲ್ಲವಾದರೂ ಹುಸಿಯಾಗಬಹುದೆಂಬ ನಿರಾಶೆಯನ್ನುಂಟುಮಾಡಿಲ್ಲ ಎಂಬುದು ಸಮಾಧಾನದ ಸಂಗತಿ. ಸರ್ಕಾರ ಕೊನೆಗಳಿಗೆಯಲ್ಲಿಯಾದರೂ ಅದನ್ನು ಜಾರಿಗೆ ತರಬಹುದೆಂಬ ಭರವಸೆ ಇನ್ನೂ ಅಳಿಸಿಲ್ಲ.
ಒಂದು ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಕೆಲದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಯಾವುದೋ ಒಂದು ಹಳ್ಳಿಯಲ್ಲಿ ಆ ಊರಿನ ಆಂಜನೇಯ ಸ್ವಾಮಿಯ ಜಾತ್ರೆಯ ದಿನದಂದೋ ಏನೋ ಒಬ್ಬ ಬಾಲಕನಿಗೆ ಮಿತಿಮೀರಿ ನೀರನ್ನೋ ಎಳೆನೀರನ್ನೋ ಕುಡಿಸಿ ಅವನಿಗೆ ಉಚ್ಚೆ ಬರುವಂತೆ ಮಾಡಿ ಆ ಉಚ್ಚೆಯನ್ನು `ಆಂಜನೇಯಸ್ವಾಮಿಯ ತೀರ್ಥ’ ಎಂದು ಊರಿಗೆಲ್ಲ ಹಂಚುತ್ತಿರುವ ಘಟನೆ ಟಿ.ವಿ.ವಾಹಿನಿಯೊಂದರಲ್ಲಿ ಪ್ರಸಾರವಾಯಿತು. ಈ ಬಗ್ಗೆ ನಡೆದ ಟಿ.ವಿ.ಚರ್ಚೆಯಲ್ಲಿ ಆ ಊರಿನ ದೇವಸ್ಥಾನದ ಅರ್ಚಕರು ಮತ್ತು ಊರಿನ ಮುಖಂಡರು ಒಟ್ಟಾಗಿ `ನಮ್ಮ ಊರಿನಲ್ಲಿ ಆ ಬಾಲಕನ ಮೂತ್ರವನ್ನು ಮೂತ್ರವೆಂದು ಯಾರೂ ಭಾವಿಸುವುದಿಲ್ಲ. ಅದನ್ನು ಆಂಜನೇಯ ಸ್ವಾಮಿಯ ತೀರ್ಥವೆಂದೇ ಶ್ರದ್ಧೆಯಿಂದ ಸ್ವೀಕರಿಸುತ್ತೇವೆ.ಇದರಿಂದ ನಮ್ಮ ಊರಿಗೆ ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎಂಬುದು ನಮ್ಮ ನಂಬಿಕೆ. ಇದನ್ನು ನಾವು ಬದಲಿಸಿಕೊಳ್ಳಲು ಒಪ್ಪುವುದಿಲ್ಲ’ ಎಂದು ಬಹಳಷ್ಟು ಶ್ರದ್ಧೆಯಿಂದಲೇ ಹೇಳಿದರು!
ಈ ಘಟನೆ ಒಂದು ಉದಾಹರಣೆ ಮಾತ್ರ. ಮಕ್ಕಳಾಗದೆ ಚಿಂತಾಕ್ರಾಂತರಾದ ಮಹಿಳೆಯರನ್ನು ತಮ್ಮ ತೆವಲು ತೀರಿಸಿಕೊಳ್ಳಲು ಬಳಸಿಕೊಳ್ಳುವ ಮೂಲಕ ಲೈಂಗಿಕ ಶೋಷಣೆಗೊಳಪಡಿಸುವ ಘಟನೆಗಳೂ ಸೇರಿದಂತೆ ಈ ರೀತಿಯ ಮೌಢ್ಯವನ್ನು ಜನರಲ್ಲಿ ಬಿತ್ತುವ ಘಟನೆಗಳು ನಮ್ಮಲ್ಲಿ ದಿನದಿನಕ್ಕೂ ಹೆಚ್ಚುತ್ತಿವೆ. ಅನೇಕ ಪದವಿ ಪಡೆದ ಯುವ ಜನತೆಯೂ ಸಂಪ್ರದಾಯ-ಧರ್ಮ-ನಂಬಿಕೆ ಇತ್ಯಾದಿಗಳ ಹೆಸರಿನಲ್ಲಿ ಮೂಢನಂಬಿಕೆಗಳಿಗೆ ಜೋತು ಬೀಳುತ್ತಿರುವುದನ್ನು ನೋಡಿದರೆ ಜನತೆಯಲ್ಲಿ ವಿದ್ಯಾಭ್ಯಾಸ ಹೆಚ್ಚಿದಂತೆ ಇವೆಲ್ಲ ಕಡಿಮೆ ಆಗುತ್ತವೆ ಎಂಬ ನಿರೀಕ್ಷೆ ಹುಸಿಯಾಗುತ್ತಿದೆಯೇನೋ ಅನ್ನಿಸುತ್ತಿದೆ. ಇಂತಹ ಘಟನೆಗಳಿಗೆ ಕಡಿವಾಣ ಬೇಡವೇ? ಈ ರೀತಿಯ ಘಟನೆಗಳಿಗೆ ನಮ್ಮ ಪ್ರತಿಕ್ರಿಯೆ ಏನಾಗಿರಬೇಕು? ಅವು ಅವರ ನಂಬಿಕೆ ಎಂದು ನಾವು ಅವನ್ನು ಗೌರವಿಸಬೇಕೆ? ಏನಾದರೂ ಮಾಡಿಕೊಳ್ಳಲಿ ನಮಗೇನು ಎಂದು ಸುಮ್ಮನಿರಬೇಕೆ? ಬಹುಶಃ ಇವೆರಡೂ ಜವಾಬ್ದಾರಿಯುತ ನಡವಳಿಕೆ ಎನಿಸಲಾರವು. ನಾಗರಿಕ ಸಮಾಜ ತಲೆತಗ್ಗಿಸುವಂತಹ ಇಂತಹ ಅಸಹಯಕರ ಕೃತ್ಯಗಳನ್ನು ನಾವೆಲ್ಲ ವಿರೋಧಿಸಬೇಕಾಗಿದೆ.
ಮೌಢ್ಯ ನಿಷೇದ ಕಾಯ್ದೆ ಜಾರಿಗೆ ಬಂದರೆ ನಮ್ಮಲ್ಲಿ ಸಾಮಾನ್ಯ ಜನರ ಭಕ್ತಿ, ಧಾರ್ಮಿಕತೆ, ಆಧ್ಯಾತ್ಮಿಕತೆ ಇತ್ಯಾದಿಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡು ಹೊಟ್ಟೆಹೊರೆಯುವ, ಜನರನ್ನು ಶೋಷಣೆ ಮಾಡುತ್ತಿರುವ ಅನೇಕ ಕಪಟ ದೇವಮಾನವರ ಅಂತಸ್ತು ಮತ್ತು ಆದಾಯ ಎರಡಕ್ಕೂ ಕತ್ತರಿ ಬೀಳುವುದರಿಂದ ಅವರಿಗೆ ಈ ಕಾನೂನು ಜಾರಿಗೆ ಬರುವುದು ಬೇಕಾಗಿಲ್ಲ. ಹಾಗಾಗಿ ಮುಗ್ದ ಜನರಲ್ಲಿ ತಪ್ಪು ತಿಳಿವಳಿಕೆಯನ್ನು ನೀಡಿ ಈ ಕಾನೂನು ಜಾರಿಗೆ ಬರದಂತೆ ಏನು ಮಾಡಬಹುದೋ ಅದನ್ನೆಲ್ಲ ಅವರು ಮಾಡುತ್ತಿದ್ದಾರೆ. ಜನರ ಧಾರ್ಮಿಕ ಭಾವನೆಗಳ ತಂತಿಯನ್ನು ಮೀಟುತ್ತಿದ್ದಾರೆ ಅವರ ತಾಳಕ್ಕೆ ತಕ್ಕಂತೆ ಕುಣಿಯುವ ರಾಜಕಾರಣಿಗಳು ಮತ್ತು ಈ ರಾಜಕಾರಣಿಗಳ ವಿವೇಕರಹಿತ ಹೇಳಿಕೆಗಳಿಗೆ ಕಣ್ಣುಮುಚ್ಚಿಕೊಂಡು ಸಿಳ್ಳೆಹಾಕಿ ಬೆಂಬಲ ಸೂಚಿಸುತ್ತಿರುವ ನಮ್ಮ ಕೆಲವು ಯುವಪಡೆಗಳು ಈ ಕಾನೂನು ಜಾರಿಗೆ ಬರುವಲ್ಲಿ ಇರುವ ಮುಖ್ಯವಾದ ತೊಡಕಾಗಿದ್ದಾರೆ.
ಈ ಕಾನೂನಿನ ವಿಷಯದಲ್ಲಿ ನಾವೆಲ್ಲ ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ. ನನಗೆ ತಿಳಿದಮಟ್ಟಿಗೆ ಯಾವ ಧರ್ಮದ ಆಚರಣೆಗಳಿಗೂ ಈ ಉದ್ದೇಶಿತ ಕಾಯ್ದೆ ನಿಯಂತ್ರಣವನ್ನಾಗಲೀ ನಿರ್ಬಂಧವನ್ನಾಗಲೀ ಹೇರುವುದಿಲ್ಲ. ಬದಲಾಗಿ ಧರ್ಮ, ದೇವರು ಇತ್ಯಾದಿಗಳನ್ನು ಬಳಸಿಕೊಂಡು ಮಾಡುವ ಕೆಲವು ಮೌಢ್ಯಾಚರಣೆಗಳನ್ನು ಮಾತ್ರ ಅಪರಾಧವೆಂದು ಪರಿಗಣಿಸುತ್ತದೆ. ನಾವು ಬಹಳ ಎಚ್ಚರದಿಂದ ಗಮನಿಸಬೇಕಾದ ಸಂಗತಿಯೆಂದರೆ ಮನುಷ್ಯನ ಮೂತ್ರವನ್ನು ದೇವರ ತೀರ್ಥವೆಂದು ಸ್ವೀಕರಿಸುವ ಹಂತಕ್ಕೆ ಇಳಿದಿರುವ ಸಮಾಜ ಮನುಷ್ಯನ ಹೇಸಿಗೆಯನ್ನು ದೇವರ ಪ್ರಸಾದವೆಂದು ಸ್ವೀಕರಿಸುವ ಹಂತಕ್ಕೆ ತಲುಪಲು ಬಹಳ ದಿನ ತೆಗೆದುಕೊಳ್ಳುವುದಿಲ್ಲ ಎಂಬುದು. ಹಾಗಾಗದಿರಲಿ ಎಂಬುದೇ ಬಹುತೇಕ ಎಲ್ಲರ ನಿರೀಕ್ಷೆಯಾಗಿರುತ್ತದೆ.
ಹೀಗಾಗಿ ಇಂತಹ ಸಂಗತಿಗಳನ್ನು ನಾವು ಮುಕ್ತಮನಸ್ಸಿನಿಂದ ಸ್ವೀಕರಿಸಿ ಸಮಾಜದ ಮತ್ತು ಆಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಬೇಕು. ಅನಗತ್ಯವಾಗಿ ಇವಕ್ಕೆಲ್ಲ ಧರ್ಮದ ಲೇಪನ ಮಾಡುವುದನ್ನು ಬಿಡಬೇಕು. ನಾವು ಧಾರ್ಮಿಕರಾಗಿರುವುದು ತಪ್ಪಲ್ಲ ನಿಜ ಆದರೆ ಎಲ್ಲದನ್ನೂ ಧರ್ಮದ ಮಿತಿಯಲ್ಲಿಯೇ ನೋಡುವ ಧರ್ಮಾಂಧರಾಗಿರುವುದು ಮಾತ್ರ ತಪ್ಪೆ. `ಭಾರತೀಯರ ರಕ್ತವು ಔದಾರ್ಯ ಮತ್ತು ದೃಢತೆಗಳಿಗೆ ಹೆಸರಾಗಿದೆ. ಧರ್ಮಾಂಧತೆ ಇಲ್ಲಿನ ದೌರ್ಬಲ್ಯದ ಹೆಗ್ಗುರುತು’ ಎಂಬ ಖ್ಯಾತ ಸಮಾಜವಾದಿ ಚಿಂತಕ ಡಾ. ರಾಮ ಮನೋಹರ ಲೋಹಿಯಾ ಅವರ ಮಾತನ್ನು ನಾವು ಎಚ್ಚರದಿಂದ ಗಮನಿಸಬೇಕು. ನಮ್ಮ ಸಂವಿಧಾನವು ನೀಡಿರುವ ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯದ ನೆನಪನ್ನು ಪದೇಪದೇ ಮಾಡಿಕೊಳ್ಳುವ ನಾವು ಅದೇ ನಮ್ಮ ಸಂವಿಧಾನವು ವಿಧಿಸಿರುವ ಜನರಲ್ಲಿ ವೈಚಾರಿಕ ಮನೋಭಾವವನ್ನು ಬೆಳೆಸುವ ಜವಾಬ್ದಾರಿಯನ್ನೂ ಕೂಡ ಪದೇ ಪದೇ ನೆನಪು ಮಾಡಿಕೊಳ್ಳಬೇಕು. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಮೌಢ್ಯ ನಿಷೇಧ ಕಾಯ್ದೆ ಆದಷ್ಟು ಬೇಗ ಜಾರಿಗೆ ಬರಲು ನಮ್ಮನಿಮ್ಮೆಲ್ಲರ ಒತ್ತಡ ಹೆಚ್ಚಬೇಕಾಗಿದೆ. ಸರ್ಕಾರವು ಕೂಡ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡು ಅದನ್ನು ಜಾರಿಗೆ ತರುವ ಅಗತ್ಯವಿದೆ.ಇದು ಸರ್ಕಾರವು ಜನರಿಗೆ ನೀಡುತ್ತಿರುವ ಎಲ್ಲ `ಭಾಗ್ಯ’ಗಳಿಗಿಂತಲೂ ಮಿಗಿಲಾದ `ಭಾಗ್ಯ’ವಾಗುತ್ತದೆ. ಇದು ಆದರೆ ಮಾತ್ರ ಎಲ್ಲ ಜನರೂ ವೈಚಾರಿಕವಾಗಿ ಬೆಳೆಯಲು ಶೋಷಣೆಗೆ ಒಳಗಾಗದಿರಲು ಸಾಧ್ಯವಾಗುವ ಮೂಲಕ `ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಮಾತಿಗೆ ಅರ್ಥಬರುತ್ತದೆ.

No comments:

Post a Comment