Monday, June 19, 2017

ಮುಚ್ಚುತ್ತಿರುವ ಶಾಲೆಗಳು ಕಾರಣ ಯಾರು? ಪರಿಹಾರ ಏನು?

ಬಾಲಕೃಷ್ಣ ಮತ್ತು ಪೂತನಿಯ ಮೊಲೆಹಾಲು
`ಶಾಲೆಯಲ್ಲಿರುವ ಮಕ್ಕಳು ಕಡಿಮೆಯಾದರೆ ಅದಕ್ಕೆ ಅಲ್ಲಿನ ಶಿಕ್ಷಕರನ್ನೇ ಹೊಣೆಮಾಡಲಾಗುತ್ತದೆ’ ಎಂದು ಶಿಕ್ಷಣ ಸಚಿವ ತನ್ವೀರ್ ಸೇಟ್ ಅವರು ತೇರದಾಳದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆಂದು ವರದಿಯಾಗಿದೆ. ಕರ್ನಾಟಕದ ಸಾರ್ವಜನಿಕ ಶಿಕ್ಷಣವು ಇತರೆ ರಾಜ್ಯಗಳ ಹಾಗೆಯೇ ಅತ್ಯಂತ ಗಂಭೀರವಾದ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಂಕೀರ್ಣ ಸಂದರ್ಭವೊಂದರಲ್ಲಿ ಅದರ ಗುಣಮಟ್ಟವನ್ನು ಹೆಚ್ಚಿಸಬೇಕೆಂಬ ಸದುದ್ದೇಶದಿಂದಲೇ ಹೇಳಿರಬಹುದೆಂದು ಭಾವಿಸಬಹುದಾದ ಅವರ ಈ ಮಾತು ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಬೇಕೆಂಬ ಅವರ ಕಾಳಜಿಯನ್ನು ತೋರಿಸುತ್ತದೆಯಾದರೂ ಶಾಲೆಗಳ ದುಸ್ಥಿತಿಗೆ ಕಾರಣವಾದ ಬಹುಮುಖ್ಯ ಅಂಶಗಳನ್ನು ಅವರು ಸರಿಯಾಗಿ ಗ್ರಹಿಸಿಲ್ಲವೇನೋ ಎಂದು ಭಾವಿಸುವಂತೆ ಮಾಡಿದೆ.  ನಮ್ಮ ಶಿಕ್ಷಣ ಇಂದು ಹಿಡಿಯಬಾರದ ಹಾದಿ ಹಿಡಿದು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಿಕ್ಕಟ್ಟುಗಳಿಗೆ ಕಾರಣಗಳೇನು ಎಂಬುದನ್ನು ತಲಸ್ಪರ್ಶಿಯಾಗಿ ಅಧ್ಯಯನಮಾಡಿ ಸೂಕ್ತಕ್ರಮಗಳನ್ನು ತೆಗೆದುಕೊಳ್ಳದೇ ಹೋದರೆ ಮುಂದೊಂದು ದಿನ ನಮ್ಮ ಸಮಾಜ ಅದಕ್ಕೆ ಅಪಾರವಾದ ಬೆಲೆಯನ್ನು ತೆರಬೇಕಾಗುತ್ತದೆ ಎಂಬುದು ಕೂಡ ನಮಗೆಲ್ಲ ತಿಳಿದಿರುವ ಸಂಗತಿಯೇ ಆಗಿದೆ. ಆದರೆ ಈ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳು ತೃಪ್ತಿಕರವಾಗಿಲ್ಲವೆಂದು ಹೇಳದೇ ಗತ್ಯಂತರವಿಲ್ಲ.


ಒಂದು ಊರಿನ ಸರ್ಕಾರಿ ಶಾಲೆ ಮುಚ್ಚುವುದು ಅಂದರೆ ಅದು ಕೇವಲ ಪಾಠಮಾಡುವ ಒಂದು ಕೆಲಸ ಅಲ್ಲಿ ನಿಂತಂತೆ ಅಲ್ಲ. ಬದಲಾಗಿ ಒಂದು ಊರಿನ ಸಮಾಜಕಟ್ಟುವ ಕೆಲಸವೇ ನಿಂತಂತೆ. ಈ ಮಹತ್ವವನ್ನು ನಾವು ಸರಿಯಾಗಿ ಗ್ರಹಿಸಲು ಸಾಧ್ಯವಾಗದಿದ್ದುದೋ ಅಥವಾ ಅದು ಸಾಧ್ಯವಾಗಿಯೂ ನಮ್ಮ ಪ್ರಲೋಭನೆಗಳ ಕಾರಣವಾಗಿಯೋ ಅಸಹಾಯಕತೆಯಿಂದಲೋ ನಾವು ಸರ್ಕಾರಿ ಶಾಲೆಗಳ ಸಬಲೀಕರಣವನ್ನು ಆದ್ಯತೆಯ ಅಂಶವಾಗಿ ಸ್ವೀಕರಿಸಿಲ್ಲವೆಂಬುದು ಸತ್ಯ. ಸರ್ಕಾರಿ ಶಾಲೆಗಳಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಈ ಕಾರಣದಿಂದ ಅನೇಕ ಶಾಲೆಗಳು ಮುಚ್ಚಿರುವಂಥದ್ದು ಮತ್ತು ಇನ್ನೂ ಅನೇಕ ಶಾಲೆಗಳು ಮುಚ್ಚುವ ಹಂತವನ್ನು ತಲುಪುತ್ತಿರುವುದು ಸಾರ್ವಜನಿಕ ಶಿಕ್ಷಣದ ಮಹತ್ವವನ್ನು ಅರಿತ ಯಾರಿಗಾದರೂ ನೋವನ್ನುಂಟುಮಾಡುವ ಸಂಗತಿಯೇ ಆಗಿದೆ. ಆ ಶಾಲೆಗಳು ಹಿಂದಿನ ಕಾಲದಲ್ಲಿದ್ದಂತೆ ಮಕ್ಕಳಿಂದ ತುಂಬಿತುಳುಕಬೇಕು ಎಂಬ ಇಂತಹ ವ್ಯಕ್ತಿಗಳೆಲ್ಲರ ಬಹುದಿನಗಳ ಕನಸು ನನಸಗಾದ ಕನಸಾಗಿಯೇ ಇನ್ನೂ ಉಳಿದುಕೊಂಡೇ ಬರುತ್ತಿದೆ.
ಈ ಶಾಲೆಗಳು ಹೀಗೆ ದುಸ್ಥಿತಿಗೆ ತಲುಪಲು ಕಾರಣಗಳೇನು ಎಂಬುದನ್ನು ಕಂಡುಹಿಡಿಯುವ ಪ್ರಯತ್ನಗಳು ಸರ್ಕಾರದ ಕಡೆಯಿಂದ ಎಷ್ಟರಮಟ್ಟಿಗೆ ಆಗಿವೆಯೋ ಆದರೆ ವೈಯಕ್ತಿಕ ಹಂತದಲ್ಲಿ ಮತ್ತು ಸಾಂಘಿಕವಾಗಿ ಅನೇಕ ಪ್ರಾಮಾಣಿಕ ಪ್ರಯತ್ನಗಳು ಈ ನಿಟ್ಟಿನಲ್ಲಿ ನಡೆದಿವೆ. ಅನೇಕ ಚಿಕ್ಕದೊಡ್ಡ ಅಧ್ಯಯನಗಳು ನಡೆದು ವರದಿಗಳು ಬೆಳಕುಕಂಡಿವೆ. ಹೀಗೆ ಬಂದ ವರದಿಗಳಲ್ಲಿ ಯಾವೊಂದು ವರದಿಯೂ `ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಅಲ್ಲಿನ ಶಿಕ್ಷಕರ ಕಳೆಪೆ ಬೋಧನೆಯೇ ಕಾರಣ’ ಎಂದು ಹೇಳಿದಂತಿಲ್ಲ. ಇದರ ಬದಲು ಅನೇಕ ವರದಿಗಳು `ಶಾಲೆಗಳು ಸುಸಜ್ಜಿತ ಕಟ್ಟಡಗಳನ್ನು ಹೊಂದಿದ್ದರೂ, ಅನೇಕ ಸೌಲಭ್ಯಗಳು ಇದ್ದರೂ ಉತ್ತಮವಾಗಿ ಬೋಧಿಸುವ ಶಿಕ್ಷಕರನ್ನು ಹೊಂದಿದ್ದರೂ ಮಕ್ಕಳಿಲ್ಲದೆ ಸೊರಗುತ್ತಿವೆ’ ಎಂಬರ್ಥದ ಮಾತುಗಳನ್ನು ಹೇಳಿವೆ. ಸರ್ಕಾರದ ಬಳಿಯೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಶಿಕ್ಷಕರೇ ಕಾರಣವೆಂದು ನಿರೂಪಿಸುವಷ್ಟು ಆಧಾರಗಳು ಇವೆಯೆಂದು ಅನ್ನಿಸುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಯಾವ ಅಂಶ ಮತ್ತು ಆಧಾರಗಳ ಮೇಲೆ  ಮತ್ತು ಹೇಗೆ ಸಚಿವರು ಶಿಕ್ಷಕರನ್ನು ಇಂತಹದ್ದಕ್ಕೆಲ್ಲ ಹೊಣೆಗಾರರನ್ನಾಗಿ ಮಾಡುತ್ತಾರೋ ತಿಳಿಯದು!
ಸರ್ಕಾರಿ ಶಾಲೆಗಳ ಅಧೋಗತಿಗೆ ಕಾರಣಗಳೇನು ಎಂಬುದನ್ನು ಪತ್ತೆಹಚ್ಚುವ ಕೆಲಸ ಬಹುತೇಕ ಮುಗಿದಿದೆ. ಉಳಿದಿರುವುದು ಈ ಕಾರಣಗಳಿಗೆ ಪರಿಹಾರವನ್ನು ಕಂಡುಕೊಂಡುಕೊಳ್ಳುವಲ್ಲಿ ತೆಗೆದುಕೊಳ್ಳಬೇಕಾದ ಕೆಲವು `ಕಠಿಣ’ ಕ್ರಮಗಳು ಮಾತ್ರ. ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಅವೈಜ್ಞಾನಿಕವಾಗಿ ಖಾಸಗೀ ಶಾಲೆಗಳು ನಾಯಿಕೊಡೆಗಳಂತೆ ಎಲ್ಲೆಂದರಲ್ಲಿ ತಲೆಯೆತ್ತಿರುವುದು, ಶಿಕ್ಷಣ ಹಕ್ಕು ಕಾಯ್ದೆಯನ್ನು ಅದರ ಅನೇಕ ಒಳ್ಳೆಯ ಅಂಶಗಳನ್ನು ಅಲಕ್ಷಿಸಿ ಕೇವಲ ಸರ್ಕಾರಿ ಶಾಲೆಯ ಮಕ್ಕಳನ್ನು ಖಾಸಗೀ ಶಾಲೆಗಳಿಗೆ ಕಳಿಸುವುದಕ್ಕಾಗಿ ಬಳಸಿಕೊಳ್ಳುತ್ತಿರುವುದು, ಕನ್ನಡ ಮಾಧ್ಯಮ ಬೋಧನೆಗೆ ಅನುಮತಿ ಪಡೆದು ರಾಜಾರೋಷವಾಗಿ (ಕದ್ದುಮುಚ್ಚಿ ಅಲ್ಲ) ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುತ್ತಿರುವ ಖಾಸಗೀ ಶಾಲೆಗಳ ಆಡಳಿತ ಮಂಡಳಿಗಳು ಮತ್ತು ಇಂತಹ ಇಂಗ್ಲಿಷ್‍ ಮಾಧ್ಯಮದ ಬಗ್ಗೆ ಪಾಲಕರಲ್ಲಿರುವ ಅರ್ಥರಹಿತ ಮೋಹ, ಇವು ಮುಖ್ಯವಾಗಿ ಸರ್ಕಾರಿ ಶಾಲೆಗಳ ಕತ್ತು ಹಿಚುಕುತ್ತಿರುವ ಬಹುಮುಖ್ಯವಾದ ಅಂಶಗಳಾಗಿವೆ ಎಂಬುದು ಬಹುತೇಕ ಅಧ್ಯಯನ ವರದಿಗಳ ಸಾರಾಂಶ. ಇತ್ತೀಚೆಗೆ ನಡೆದ ಅಧ್ಯಯನ ವರದಿಯೊಂದರ ಪ್ರಕಾರ ಕಳೆದ ಹತ್ತು ವರ್ಷಗಳ ದೀರ್ಘ ಅವಧಿಯಲ್ಲಿ ಸುಮಾರು ಹತ್ತು ಸಾವಿರ ಶಾಲೆಗಳು ಮುಚ್ಚಿದ್ದರೆ ಅದಕ್ಕೆ ಸರಿಸಮನಾದ ಹತ್ತು ಸಾವಿರ ಶಾಲೆಗಳು ಕೇವಲ ಎರಡು-ಮೂರು ವರ್ಷಗಳ ಅವಧಿಯಲ್ಲಿ ಖಾಸಗೀ ಕ್ಷೇತ್ರದಲ್ಲಿ ತೆರೆದಿವೆಯಂತೆ!!
ಇನ್ನೊಂದು ಅಂಶವೆಂದರೆ ಇತ್ತೀಚೆಗೆ ಆರ್.ಟಿ.ಇ.ಯನ್ನು `ಸರ್ಕಾರಿ ಶಾಲೆಗಳ ಮಕ್ಕಳನ್ನು ಖಾಸಗೀ ಶಾಲೆಗಳಿಗೆ ಕಳಿಸುವ ಮತ್ತು ಆ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಯೋಜನೆ’ ಎಂದು ಹಿರಿಯ ರಾಜಕಾರಣಿಯೇ ಒಬ್ಬರು ಮಾಡಿದ ಟೀಕೆ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದನ್ನು ಬಹುತೇಕ ಎಲ್ಲರೂ ಗಮನಿಸಿದ್ದಾರೆ. ಇಂಥದ್ದಕ್ಕೆಲ್ಲ ಯಾರು ಕಾರಣ? ಈ ಅಂಶಗಳೆಲ್ಲ ಶಿಕ್ಷಕರ ಕಾರ್ಯವ್ಯಾಪ್ತಿ ಮತ್ತು ನಿಯಂತ್ರಣದ ಹೊರಗಿರುವಾಗ ಅವರೇನು ಮಾಡಲು ಸಾಧ್ಯವಿದೆ? ಈ ಬಗ್ಗೆ ನಿಯಮ ರೂಪಿಸುವವರು ಮತ್ತು ಅವನ್ನು ಅನುಷ್ಠಾನಕ್ಕೆ  ತರಬೇಕಾದ ಹೊಣೆಗಾರಿಕೆಯನ್ನು ಹೊತ್ತಿರುವ ಉನ್ನತ ಮಟ್ಟದ ಅಧಿಕಾರಿಗಳು ಈ ಬಗ್ಗೆ ಮಾಡಬೇಕಾದದ್ದು ಬಹಳಷ್ಟಿದೆ ಅನ್ನಿಸುವುದಿಲ್ಲವೇ? ಇದಕ್ಕೆ ಯಾರೆಲ್ಲ ಕಾರಣ ಎಂದು ಆಲೋಚಿಸುವಾಗ ನನಗೊಂದು ಘಟನೆ ನೆನಪಿಗೆ ಬರುತ್ತಿದೆ.
ದೂರದಿಂದ ಸಂಬಂಧಿಯೂ ಆಗಬೇಕಿದ್ದ ನನ್ನ ಸ್ನೇಹಿತನೊಬ್ಬ ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ಜಿಲ್ಲಾಮಟ್ಟದ ಅಧಿಕಾರಿಯಾಗಿದ್ದ. ಅವನು ಅಧಿಕಾರಿಯಾಗಿರುವ ವೇಳೆಯಲ್ಲಿಯೇ ಖಾಸಗೀ ಶಾಲೆಯೊಂದು ಕನ್ನಡ ಮಾಧ್ಯಮ ಬೋಧನೆಗೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುತ್ತಿರುವುದು ಯಾಕೋ ಏನೋ ಸುದ್ಧಿಯಾಗಿ ವಿವಾದ ಉಂಟಾಯಿತು. ಆಗ ಅವನೂ ಸೇರಿದಂತೆ ಅನೇಕ ಅಧಿಕಾರಿಗಳು `ಸೂಕ್ತಕ್ರಮ’ ತೆಗೆದುಕೊಳ್ಳಲು ಆ ಶಾಲೆಗೆ ಭೇಟಿ ನೀಡುವುದು, `ವಿಚಾರಣೆ ಮಾಡುವುದು’ ಇತ್ಯಾದಿಗಳೆಲ್ಲ ನಡೆಯುತ್ತಿರುವುದು ಪತ್ರಿಕೆಗಳಲ್ಲಿ ಸುದ್ದಿಯಾಗಿ ಬರುತ್ತಿತ್ತು. ಇದು ನನಗೆ ಆಶ್ಚರ್ಯ ಎನಿಸಿ ಅವನಿಗೆ ಫೋನ್ ಮಾಡಿ, “ಪತ್ರಿಕೆಯಲ್ಲಿ ಬರುವವರೆಗೂ ನಿಮಗ್ಯಾರಿಗೂ ಅವರು ಕನ್ನಡ ಮಾಧ್ಯಮ ಬೋಧನೆಗೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಪಾಠಮಾಡುವ ವಿಚಾರ ಗೊತ್ತಿರಲಿಲ್ಲವೇ?” ಎಂದು ಕೇಳಿದೆ. ಅವನು ಏಕೋ ಗಂಟಲು ಕಟ್ಟಿದಂತೆ ಹಿಡಿದು ಹಿಡಿದು ಹಾರಿಕೆಯ ಎರಡು ಮಾತುಗಳನ್ನು ಆಡಿ, “ಒಂದು ಅರ್ಜೆಂಟ್ ಮೀಟಿಂಗ್‍ಗೆ ಹೊರಟಿದ್ದೇನೆ, ಆಮೇಲೆ ಫೋನ್ ಮಾಡುತ್ತೇನೆ” ಎಂದು ಮಾತು ಮುಗಿಸಿದ.
ನಾನು ಅವನನ್ನು ಹಾಗೆ ಕೇಳಲು ಕಾರಣವೇನೆಂದರೆ ವಿವಾದಕ್ಕೆ ಗುರಿಯಾದ ಖಾಸಗೀ ಶಾಲೆಯು ಯಾರೋ ನಕ್ಸಲೀಯರೋ ಇನ್ಯಾರೋ ನಡೆಸುತ್ತಿದ್ದ ಯಾರಿಗೂ ಗೊತ್ತಾಗದ ಯಾವುದೋ ಕಾಡಿನ ಮಧ್ಯದ ಅಜ್ಞಾನ ಸ್ಥಳದಲ್ಲಿ ಇರುವಂಥದ್ದಾಗಿರಲಿಲ್ಲ. ಬದಲಾಗಿ ಅವನು ಮುಖ್ಯಸ್ಥನಾಗಿರುವ ಜಿಲ್ಲಾ ಶಿಕ್ಷಣ ಕಛೇರಿಗೆ ಹೋಗುವ ಹೆದ್ದಾರಿಯಲ್ಲಿ ಅವನ ಕಛೇರಿಯ ಹತ್ತಿರವೇ ಇತ್ತು. ಏನಿಲ್ಲವೆಂದರೂ ಆ ಕಛೇರಿಯ ವಿವಿಧ ಹಂತಹ ಹತ್ತಿಪ್ಪತ್ತು ಅಧಿಕಾರಿಗಳಾದರೂ ದಿನಕ್ಕೆ ಎರಡು ಮೂರು ಬಾರಿಯಾದರೂ ಆ ಶಾಲೆಯ ಮುಂದೆಯೇ ಹೋಗುವುದೂ ಬರುವುದೂ ಮಾಡಬೇಕಾಗಿತ್ತು. ಹೀಗಿದ್ದೂ ಆ ಶಾಲೆಯಲ್ಲಿ ಅಕ್ರಮವಾಗಿ ಇಂಗ್ಲಿಷ್ ಬೋಧಿಸುತ್ತಿದ್ದುದು ಇವರಾರಿಗೂ ತಿಳಿಯದೇ ಉಳಿದುಕೊಂಡದ್ದು ಹೇಗೆ ಎಂಬುದು ನನ್ನ ಆಶ್ಚರ್ಯಕ್ಕೆ ಕಾರಣವಾಗಿತ್ತು! ಆಮೇಲೆ ಫೋನ್ ಮಾಡುತ್ತೇನೆ ಎಂದ ಆ ನನ್ನ ಮಿತ್ರ ನನಗೆ ಮರಳಿ ಫೋನ್ ಮಾಡಲಿಲ್ಲ. ಕೆಲವು ದಿನಗಳು ಕಾಯ್ದು ನಾನೇ ಫೋನ್ ಮಾಡೋಣ ಎಂದು ಒಂದು ದಿನ ಫೋನ್ ಎತ್ತಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಇದನ್ನು ತಿಳಿದ ನನ್ನ ಹೆಂಡತಿ ಹೇಳಿದಳು; “ಅವನ ಮಗಳೂ ಅದೇ ಶಾಲೆಯಲ್ಲಿ ಎರಡನೇ  ಕ್ಲಾಸ್ನಲ್ಲಿ ಓದ್ತಿದಾಳೆ.” ಎಂದು. ನನಗೆ ಕೇಳುವುದು ಹೇಳುವುದೂ ಏನೂ ಇಲ್ಲವೆನಿಸಿ ಫೋನ್ ಮಾಡುವುದನ್ನು ಬಿಟ್ಟೆ.
ಇದು ಅಧಿಕಾರಶಾಹಿಯ ಮನೋಧೋರಣೆಯನ್ನು ತೋರಿಸಿದರೆ ಆಡಳಿತಶಾಹಿ ಇನ್ನೊಂದು ನಿಟ್ಟಿನಿಂದ ನಮ್ಮ ಸರ್ಕಾರಿ ಶಾಲೆಗಳ ಕುತ್ತಿಗೆ ಕೊಯ್ಯುತ್ತಿದೆ. ನಮ್ಮ ಬಹುತೇಕ ಜನಪ್ರತಿನಿಧಿಗಳು ಒಂದಲ್ಲ ಒಂದು ಶಿಕ್ಷಣ ಸಂಸ್ಥೆಯ ಒಡೆಯರಾಗಿರುವಂಥವರು! ಅವರಲ್ಲಿ ಬಹಳಷ್ಟು ಜನರಿಗೆ ಅದು ಒಂದು ಲಾಭಧಾಯಕ ಉದ್ಯಮ. ಅದನ್ನು ಅವರು ಹೇಗೆತಾನೆ ಬಿಟ್ಟುಕೊಡುತ್ತಾರೆ? ಹಿಂದೆ ಅನೇಕ ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರರು ಸೇವಾ ಮನೋಭಾವದಿಂದ ಸ್ಥಾಪಿಸಿದಂತಹ ಕೆಲವು `ವಿದ್ಯಾವರ್ಧಕ’ ಸಂಘಗಳು ಕೂಡ ಇಂದು ಲಾಭಕೋರರ ಕಪಿಮುಷ್ಠಿಯಲ್ಲಿ ಸಿಕ್ಕು `ವಿದ್ಯಾವರ್ತಕ’ ಸಂಘಗಳಾಗಿ ಮಾರ್ಪಟ್ಟು ಪರಿಸ್ಥಿತಿಯನ್ನು ಬಿಗಡಾಯಿಸಿವೆ. ಇನ್ನು ಮೂರನೆಯವರು ಕೆಲವು ಪಾಲಕರು. ಅವರ ಮನಸ್ಥಿತಿ ಹೇಗಿದೆ ಎಂದರೆ ತಮ್ಮ ಮಕ್ಕಳು ಒಂದು ಹಂತದವರೆಗೆ ಅಂಕಗಳನ್ನು ಸುರಿಸುವ ಮಿಶಿನ್ ಆಗಿರಬೇಕೆಂದು ಮತ್ತು ಆ ಹಂತ ಮುಗಿದ ತಕ್ಷಣ  ಈ ಅಂಕ ಸುರಿಸುವ ಮಿಶಿನ್‍ಗಳು ಹಣ ಸುರಿಸುವ ಎ.ಟಿ.ಎಂ.ಗಳಾಗಿ ಪರಿವರ್ತನೆ ಹೊಂದಬೇಕೆಂದು ಅವರು ಬಯಸುತ್ತಿದ್ದಾರೆ!
ಹೀಗೆ ಮುಂದಾಲೋಚನೆ ಇಲ್ಲದೆ ನಿಯಮ ರೂಪಿಸುವ ಜನಪ್ರತಿನಿಧಿಗಳು, ಇರುವ ಒಳ್ಳೆಯ ಕೆಲವು ನಿಯಮಗಳನ್ನು ರಾಜಾರೋಷವಾಗಿ ಉಲ್ಲಂಘನೆ ಮಾಡುವ ಶಿಕ್ಷಣ ವ್ಯಾಪಾರಿಗಳು, ಈ ನಿಯಮಗಳ ಉಲ್ಲಂಘನೆ ಕಂಡೂ ಕಾಣದಂತೆ ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳುವ, ಸಾಧ್ಯವಾದರೆ `ಪಾಲುಪಡೆದು’ ಇಂತಹ ಉಲ್ಲಂಘನೆಗೆ ಪರೋಕ್ಷ ಬೆಂಬಲ ನೀಡುವ ಅಧಿಕಾರಿಗಳು, ಹಣದಹಿಂದೆ ಬಿದ್ದು ಹಪಹಪಿಸುತ್ತಿರುವ ಪಾಲಕರು ಈ ನಾಲ್ಕೂ ಶಿಕ್ಷಣದ ಬಹುಮುಖ್ಯ ಆಧಾರ ಸ್ಥಂಭಗಳನ್ನು ಗೆದ್ದಲ ಹುಳುವಾಗಿ ತಿನ್ನುತ್ತಿರುವುದು ಪರಿಸ್ಥಿತಿ ಹದಗೆಡಲು ಬಹುಮುಖ್ಯ ಕಾರಣ. ಈ ನಾಲ್ವರು ಮನಸ್ಸುಮಾಡಿದರೆ ಯಾವುದೇ ಕ್ಷಣದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಉನ್ನತ ಸ್ಥಿತಿಗೆ ಒಯ್ಯಬಹುದಾಗಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಎದುರಾಗಬಹುದಾದ ಪರಿಸ್ಥಿತಿ ಬರಬಹುದಾದ ಗಂಭೀರವಾದ ಅನಾಹುತಗಳ ಬಗ್ಗೆ ಅನೇಕ ತಜ್ಞರು, ಚಿಂತಕರು ನೀಡುತ್ತಿರುವ ಎಚ್ಚರಿಕೆಯ ಮಾತುಗಳನ್ನು ಕೇಳುವ ಸಮಯ-ಸಾವಧಾನಗಳು ಯಾರಿಗೂ ಇಲ್ಲವಾಗಿದೆ. ಸಮಸ್ಯೆ ಹೀಗೆ ಸಂಕೀರ್ಣವಾಗಿ ಬಲೆಹೆಣೆದುಕೊಂಡಿರುವಾಗ ನಿಯಮ ರೂಪಿಸುವವರೂ ಅಲ್ಲದ, ಉಲ್ಲಂಘಿಸುವವರೂ ಅಲ್ಲದ, ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಲು ಏನೂ ಅಧಿಕಾರವೂ ಇಲ್ಲದ ಶಾಲೆಯಲ್ಲಿರುವ ಶಿಕ್ಷಕರು ಏನುತಾನೆ ಮಾಡಬಲ್ಲರು? ಬಸವಣ್ಣವರ ವಚನವೊಂದರಲ್ಲಿ  ಬರುವ `ಬಡಪಶು ಪಂಕದಲ್ಲಿ ಬಿದ್ದಡೆ ಕಾಲಬಡಿವದಲ್ಲದೇ ಏನ ಮಾಡಬಲ್ಲದು?’ ಎಂಬಂತಾಗಿದೆ ಅವರ ಪರಿಸ್ಥಿತಿ.
ಅಂದಮಾತ್ರಕ್ಕೆ ಶಿಕ್ಷಕರ ಹೊಣೆಗಾರಿಕೆ ಇಲ್ಲವೇ ಇಲ್ಲ ಎಂದರ್ಥವಲ್ಲ. ಯಾವುದೇ ಒಂದು ಶಾಲೆ ಹೊರಗಿನಿಂದ ಯಾವುದೇ ಬಗೆಯ ಬೆಂಬಲ ಅದು ಎಷ್ಟೇ ಇದ್ದರೂ ಆ ಶಾಲೆಯ ಏಳಿಗೆಗಾಗಿ  ಒಳಗಿರುವ ಶಿಕ್ಷಕರ ಹೃದಯ ಮಿಡಿಯದೇ ಹೋದರೆ ಆ ಶಾಲೆ ಏಳಿಗೆಯಾಗಲು ಸಾಧ್ಯವಿಲ್ಲ. ಹಳ್ಳಿಯೊಂದರಲ್ಲಿ ಶಿಕ್ಷಕರು ಮನಸ್ಸು ಮಾಡಿದರೆ ಈಗಲೂ ಅನೇಕ ಮಿತಿಗಳ ನಡುವೆಯೇ ಶಾಲೆಯೊಂದನ್ನು ಉನ್ನತಿಗೆ ತರಲು ಸಾಧ್ಯವಿದೆ ಎಂಬುದು ಸತ್ಯವಾದರೂ ಅದಕ್ಕೆ ತಮ್ಮವೇ ಆದ ಹತ್ತು ಹಲವು ಮಿತಿಗಳಿವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಮೊನ್ನೆ ಶಾಲಾ ಪ್ರಾರಂಭದ ದಿನಗಳ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ಗಮನಿಸಿ. ಸರ್ಕಾರಿ ಶಾಲೆಯೊಂದರ ಶಿಕ್ಷಕರು ಮಕ್ಕಳ ಕೈಯಲ್ಲಿ `ಪ್ಲೇ ಕಾರ್ಡ್’ ಹಿಡಿಸಿಕೊಂಡು ಊರಲ್ಲಿ `ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿ’ ಎಂದು ಘೋಷಣೆ ಕೂಗಿಸುತ್ತಾ ಮೆರವಣಿಗೆ ಹೋಗಿದ್ದಾರೆ. ದಾರಿಯಲ್ಲೊಬ್ಬ ಅವರನ್ನು ನಿಲ್ಲಿಸಿ, `ನಿಮ್ಮ ಮಕ್ಕಳನ್ನು ಎಲ್ಲಿಗೆ ಕಳಿಸುತ್ತಿದ್ದೀರಿ ಹೇಳಿ. ನೀವೆಲ್ಲ ನಿಮ್ಮ ಮಕ್ಕಳನ್ನು ಖಾಸಗೀ ಶಾಲೆಗೆ ಸೇರಿಸಿಕೊಂಡು ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಲು ಹೇಳಲಿಕ್ಕೆ ಬಂದಿದ್ದೀರಾ?” ಎಂದು ಜೋರುಮಾಡಿದ್ದಾನೆ. ಈ ಶಿಕ್ಷಕ-ಶಿಕ್ಷಕಿಯರಿಗೆ ಏನು ಹೇಳಬೇಕೆಂದು ತೋಚದೆ ಮೆರವಣಿಗೆಯನ್ನು ಅಲ್ಲಿಂದಲೇ ಹಿಂತಿರುಗಿಸಿ ಶಾಲೆಗೆ ಮರಳಿಬಂದಿದ್ದಾರೆ.
ಕಾನೂನಿಯ ಪ್ರಕಾರ ಈ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗೀ ಶಾಲೆಗಳಿಗೆ ಕಳಿಸಿ ಅವರು ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವುದು ತಪ್ಪಲ್ಲ. ಆದರೆ ಕೇವಲ ಕಾನೂನಿನ ಪ್ರಕಾರ ಸರಿಯಿರುವುದು ಸಾರ್ವತ್ರಿಕ ಶಿಕ್ಷಣವನ್ನು ಸುಧಾರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಮೇಲಿನಿಂದ ವ್ಯವಸ್ಥೆ ಸರಿಯಾಗುತ್ತಾ ಬಂದರೆ ಇಂತಹ ಶಿಕ್ಷಕರೂ ತಮ್ಮ ಮನಸ್ಸನ್ನು ಬದಲಿಸಿಕೊಂಡು ತಾವಿರುವ ಶಾಲೆಗಳಿಗೇ ತಮ್ಮ ಮಕ್ಕಳನ್ನು ಕರೆದುಕೊಂಡು ಬರುವ ಮನಸ್ಸುಮಾಡಬಹುದು. ಆ ಮೂಲಕ ಇತರೆ ಪಾಲಕರಲ್ಲೂ ಒಂದಿಷ್ಟು ಭರವಸೆಯನ್ನು ಮೂಡಿಸಬಹುದು. ಬಹುಶಃ ಇದಿಷ್ಟೇ ಇವರು ಮಾಡಬಹುದಾದ್ದು ಅನ್ನಿಸುತ್ತದೆ.
ಖಾಸಗೀ ಶಿಕ್ಷಣವೆಂಬ ಹೆಬ್ಬಾವು ಇಂದು ಸಾರ್ವಜನಿಕ ಶಿಕ್ಷಣವನ್ನು ಹಂತಹಂತವಾಗಿ ನುಂಗತೊಡಗಿದೆ. ನಮಗೆ ಇರುವ ಆಯ್ಕೆಗಳು ಎರಡೆ. ಒಂದು ಅದರ ಆಹಾರವಾಗಿ ಅಂತ್ಯವಾಗುವುದು. ಇನ್ನೊಂದು ಅದನ್ನು ಮೆಟ್ಟಿನಿಂತು ಅದನ್ನು ತುಳಿಯುವುದು. ಹೀಗಾಗಿ ಎಲ್ಲಿಯವರೆಗೆ ಖಾಸಗೀ ಶಿಕ್ಷಣದ ಮೇಲೆ ನಮಗೆ ನಿಯಂತ್ರಣ ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಸಾರ್ವಜನಿಕ ಶಿಕ್ಷಣ ಸಹಜಸ್ಥಿತಿಯಲ್ಲಿ ಉಸಿರಾಡಲು ಸಾಧ್ಯವಾಗುವುದಿಲ್ಲ. ಖಾಸಗೀ ಶಾಲೆಗಳಿಗೆ ಸರಿಸಮಾನವಾಗಿ ಪೈಪೋಟಿ ಕೊಡುವಂತೆ ನಮ್ಮ ಸರ್ಕಾರಿ ಶಾಲೆಗಳನ್ನು ರೂಪಿಸುವುದು ವಾಸ್ತವದಲ್ಲಿ ಸುಲಭವಾದ ಸಂಗತಿಯಲ್ಲ. ಹೀಗಾಗಿ ಈ ದೇಶದ ಭಾವೀ ಪ್ರಜೆಗಳೆಲ್ಲರೂ ಯಾವುದೇ ಜಾತಿ-ಮತ-ಭಾಷೆ-ಆಸ್ತಿ-ಅಂತಸ್ತುಗಳ ತರತಮಗಳಿಲ್ಲದೆ ಅಕ್ಕಪಕ್ಕ ಕುಳಿತು ಸಮಾನವಾಗಿ ಕಲಿಯುವ `ಏಕರೂಪ ಶಿಕ್ಷಣ’ ವೊಂದೇ ಇದಕ್ಕೆ ಶಾಶ್ವತ ಪರಿಹಾರ ನೀಡಬಲ್ಲದು ಎಂಬುದನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕು.
 ಈ ರೀತಿಯ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ತಮ್ಮ ತಮ್ಮ ಪಾಲಿನ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವುದೊಂದೇ ನಾವು ಮಾಡಬಹುದಾದ ಮತ್ತು ಮಾಡಲೇಬೇಕಾದ ತುರ್ತು ಕಾರ್ಯವಾಗಿದೆ. ಈ ತುರ್ತು ಕಾರ್ಯ ನಿರ್ವಹಿಸುವಾಗ ನಾವು ಇಟ್ಟುಕೊಳ್ಳಲೇಬೇಕಾದ ಒಂದು ಎಚ್ಚರ ಏನೆಂದರೆ ಔಷಧಿ ಎಷ್ಟೇ ಪರಿಣಾಮಕಾರಿಯಾಗಿದ್ದರೂ ಅದನ್ನು ನೀಡುವ ವೈದ್ಯ ಎಷ್ಟೇ ನಿಪುಣನಾಗಿದ್ದರೂ ಕಾಯಿಲೆ ಯಾವುದು ಎಂಬುದನ್ನು ಸರಿಯಾಗಿ ಪತ್ತೆಹಚ್ಚಿಕೊಳ್ಳುವಲ್ಲಿ ಎಡವಿ ಅದನ್ನು ಬಳಸುವುದರಿಂದ ಕಾಯಿಲೆ ವಾಸಿಯಾಗುವುದಕ್ಕಿಂತ ಅದು ಉಲ್ಬಣಗೊಳ್ಳುವ ಸಾಧ್ಯತೆಯೇ ಹೆಚ್ಚು ಎಂಬುದು. ಅಂತಹ ಪ್ರಮಾದ ನಮ್ಮ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಆಗದಿರಲಿ. ಕೊನೆಯ ಮಾತು: ಭಾಗವತದಲ್ಲಿ ಒಂದು ಸಂದರ್ಭ ಬರುತ್ತದೆ. ಪೂತನಿ ಎಂಬ ಒಬ್ಬ ರಾಕ್ಷಸಿ ಬಾಲಕೃಷ್ಣನಿಗೆ ಮೊಲೆಹಾಲು ಉಣ್ಣಿಸಲು ತಾಯಿಯ ರೂಪದಲ್ಲಿ ಬರುತ್ತಾಳೆ. ಹಾಲು ಉಣ್ಣಿಸಿ ಬದುಕಿಸುವುದು ಅವಳ ಉದ್ದೇಶವಲ್ಲ; ಅದರ ಬದಲು ತನ್ನನ್ನು ವಿಷ ಉಣ್ಣಿಸಿ ಕೊಲ್ಲುವುದೇ ಅವಳ ಉದ್ದೇಶ ಎಂದು ಸ್ಪಷ್ಟವಾಗಿ ಗ್ರಹಿಸಿದ ಬಾಲಕೃಷ್ಣ ತಾಯಿರೂಪದಲ್ಲಿದ್ದ ಈ ರಾಕ್ಷಸಿಯ ಮೊಲೆಯನ್ನು ಕಚ್ಚಿ ಕೊಂದುಹಾಕುತ್ತಾನೆ. ಅದೇ ಬಾಲಕೃಷ್ಣನ ಸ್ಥಾನದಲ್ಲಿರುವ ನಮ್ಮ ಸಾರ್ವಜನಿಕ ಶಿಕ್ಷಣ ಏನು ಮಾಡಬೇಕು ಎಂಬ ಪಾಠ ಇದರಿಂದ ದೊರೆಯಬಹುದು ಅನ್ನಿಸುತ್ತದೆ.
0-0-0-0
·         ಡಾ. ರಾಜೇಂದ್ರ ಬುರಡಿಕಟ್ಟಿ

Monday, June 19, 2017

No comments:

Post a Comment