`ನೈರುತ್ಯ’ ಮತ್ತು ಕಳ್ಳಬಸಿರಿನ ತಾಯಿಯರು
ಶಿಕ್ಷಕ
ಮಿತ್ರರೊಬ್ಬರು ‘ನೈರುತ್ಯ’ ‘ನೈಋತ್ಯ’ ಈ ಪದಪ್ರಯೋಗಗಳಲ್ಲಿ
ಯಾವುದು ಸರಿ ಎಂದು ಕೇಳಿದ್ದಾರೆ.
ಬಹುಶಃ ಈ ಪ್ರಶ್ನೆ ಅವರಿಗೆ
ಇಷ್ಟುದಿನವಿಲ್ಲದ್ದು ಈಗೇಕೆ ಬಂದಿತು ಎಂದು
ನಾವು ಊಹಿಸಿಕೊಳ್ಳಲು ಸಾಧ್ಯವಿದೆ. ಪದವೀಧರ ಮತ್ತು ಶಿಕ್ಷಕ
ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ನಿಂತ
ಅಭ್ಯರ್ಥಿಗಳಿಂದ
ದಿನನಿತ್ಯ ರಾಶಿರಾಶಿಯಾಗಿ ಬಂದು ಬೀಳುತ್ತಿರುವ
ಅಭ್ಯರ್ಥಿಗಳ ಸಾಧನಾ ಪರಿಚಯ ಮತ್ತು ಮನವಿ ಪತ್ರಗಳಲ್ಲಿ ಒಬ್ಬಿಬ್ಬರು ‘ನೈಋತ್ಯ’ ಪದವನ್ನೂ ಬಹಳಷ್ಟು
ಜನರು ‘ನೈರುತ್ಯ’ ಪದವನ್ನೂ ಬಳಸಿದ್ದನ್ನೂ ನಾನೂ ಗಮನಿಸಿದ್ದೆ. ಒಬ್ಬ ಭಾಷಾ ಶಿಕ್ಷಕರಾಗಿ ಅವರಿಗೆ
ಇಂತಹ ಪ್ರಶ್ನೆ ಸಾಂದರ್ಭಿಕವಾಗಿ ಹುಟ್ಟಿದ್ದು ಸಹಜವಾದದ್ದು ಮಾತ್ರವಲ್ಲ ಅಪೇಕ್ಷಣೀಯವಾದದ್ದು. ಅವರ
ಜೊತೆಗೆ ಅವರಂತೆ ಇತರರಿಗೆ ಈ ಬಗ್ಗೆ ಇದ್ದಿರಬಹುದಾದ ಗೊಂದಲಗಳು ತಿಳಿಯಾಗಬಹುದೇನೋ ಅಂದೆನಿಸಿ ಅದನ್ನು
ನೆಪಮಾಡಿಕೊಂಡು ಪ್ರಸ್ತುತ ವಿದ್ಯಮಾನವನ್ನೂ ಅವಲೋಕಿಸಿ ಈ ಲೇಖನವನ್ನು ಇಲ್ಲಿ ಕೊಡಲಾಗುತ್ತಿದೆ.
ಅವರ
ಪ್ರಶ್ನೆಗಳ ಜೊತೆಗೆ ಇನ್ನಷ್ಟು ಪ್ರಶ್ನೆಗಳನ್ನು ಇಲ್ಲಿ ಸೇರಿಸಿಕೊಳ್ಳಬಹುದು. ಅವೆಂದರೆ `ರಸರುಷಿ
ಕುವೆಂಪು’ ಅನ್ನುವಾಗ ‘ರಸರುಷಿ’ ಸರಿಯೋ ಅಥವಾ ‘ರಸಋಷಿ’ ಸರಿಯೋ? ಹಾಗೆಯೇ ಪತ್ರ ಬರೆಯುವಾಗ ಬರೆಯುವವರ
ವಿಳಾಸವನ್ನು ಪ್ರಾರಂಭಿಸುವಾಗ ‘ಇಂದ’ ಎಂದು ಬರೆಯಬೇಕೋ ಅಥವಾ ‘ಯಿಂದ’ (ಕೆಲವರು ಇದನ್ನು ‘ಯಿಂದಾ’
ಎಂದೂ ಬರೆಯುವುದುಂಟು) ಬರೆಯಬೇಕೋ?.... ಇತ್ಯಾದಿ
ಕನ್ನಡ
ಭಾಷಾಪರಿಸರದಲ್ಲಿ ಈ ಎಲ್ಲ ಬಳಕೆಗಳು ಇರಲು ಕಾರಣ ಕನ್ನಡದ ಕೆಲವು ಗುಣಿತಾಕ್ಷರಗಳು ಮತ್ತು ಸ್ವರಾಕ್ಷರಗಳ
ನಡುವಿನ ಧ್ವನಿಸಾಮ್ಯತೆ. ಕನ್ನಡದ ಸ್ವರಗಳಾದ ಇ,ಉ,ಋ,ಎ ಮತ್ತು ಇವುಗಳ ಅಕ್ಕಂದಿರು ಅಂದರೆ ದೀರ್ಘಗಳು
ಮತ್ತು ಗುಣಿತಾಕ್ಷರಗಳಾದ ಯಿ,ವು,ರು,ಯೆ ಮತ್ತು ಇವುಗಳ ಅಕ್ಕಂದಿರೇ ಒಬ್ಬರ ಬದಲು ಇನ್ನೊಬ್ಬರು ಯಾರ
ಯಾರ ಪಕ್ಕವೋ ತಪ್ಪಾಗಿ ಬಂದು ಕುಳಿತುಕೊಳ್ಳುವುದುಂಟು. ಗೊತ್ತು ಪರಿಚಯ ಇದ್ದವರು ಇವರನ್ನು ಎಬ್ಬಿಸಿ
ಕಳಿಸಿದರೆ ಉಳಿದವರು ಹೋಗಲಿಬಿಡಿ ಎಂದು ಸುಮ್ಮನಿರುತ್ತಾರೆ.
ಕನ್ನಡದ
ಭಾಷೆಯ ಜಾಯಮಾನವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಯಾವುದು ಸರಿಯಾದ ಮತ್ತು ಯಾವುದು ತಪ್ಪಾದ ಪ್ರಯೋಗ
ಎಂದು ನಮಗೆ ಸ್ಪಷ್ಟವಾಗುತ್ತದೆ. ಮೊದಲೇ ಹೇಳಿದಂತೆ ಇವುಗಳ ಮಧ್ಯೆ ಧ್ವನಿಸಾಮ್ಯತೆ ಇದ್ದರೂ ಬಳಕೆಯಲ್ಲಿ
ಒಂದರ ಬದಲು ಇನ್ನೊಂದನ್ನು ಬಳಸುವುದು ಸರಿಯಾದ ಕ್ರಮ ಎನಿಸುವುದಿಲ್ಲ. ಇದಕ್ಕೆ ಇರುವ ಸೂತ್ರವೆಂದರೆ
ಈ ಧ್ವನಿಗಳನ್ನು ನಾವು ಶಬ್ದದ ಆರಂಭಕ್ಕೆ ಬಳಸಬೇಕಾದರೆ ಸ್ವರವನ್ನೂ ಶಬ್ದದ ಮಧ್ಯ ಮತ್ತು ಅಂತ್ಯದಲ್ಲಿ
ಬಳಸಬೇಕಾದರೆ ಗುಣಿತಾಕ್ಷರವನ್ನೂ ಬಳಸಬೇಕು. ಈ ಕಾರಣದಿಂದ ‘ಇಂದ’ ಸರಿಯಾದ ಪ್ರಯೋಗವಾದರೆ ‘ಯಿಂದ’ ಅಥವಾ
‘ಯಿಂದಾ’ ತಪ್ಪು ಪ್ರಯೋಗಗಳು. ‘ಉಡ’ ಸರಿಯಾದ ಬಳಕೆ ಅದರೆ ‘ಕಾಉ’ ತಪ್ಪುಬಳಕೆ. ‘ಕಾವು’ ಸರಿಬಳಕೆ.
ಹಾಗೆಯೇ ಪ್ರತ್ಯೇಕವಾಗಿ ಬರೆಯುವಾಗ ‘ಋಷಿ’ ಸರಿಯಾದ ಪ್ರಯೋಗ. ಆದರೆ ‘ರಸಋಷಿ’ ಸರಿಯಾದ ಪ್ರಯೋಗವಲ್ಲ.
ಈ ಸಂದರ್ಭದಲ್ಲಿ ‘ರಸರುಷಿ’ ಸರಿಯಾದ ಪ್ರಯೋಗ. ಅದೇ
ರೀತಿ ಶಬ್ದದ ಮೊದಲಸ್ಥಾನದ ಪ್ರಯೋಗವಾಗಿ ‘ಎಲೆ’ ಸರಿಯಾದ ಪ್ರಯೋಗ. ಆದರೆ ಇದೆ `ಎ’ ಅನ್ನು ಶಬ್ದದ ಕೊನೆಗೆ
ಬಳಸಬೇಕಾದಾಗ ‘ಮಾಎ’ ತಪ್ಪಾಗಿಬಿಡುತ್ತದೆ. ಅದು ‘ಮಾಯೆ’ ಆಗಬೇಕಾಗುತ್ತದೆ. ಇಷ್ಟು ಮಾಹಿತಿಯಿಂದ ‘ನೈರುತ್ಯ’
‘ನೈಋತ್ಯ’ ಯಾವುದು ಸರಿ ಎಂಬ ಪ್ರಶ್ನೆಗೆ ‘ನೈರುತ್ಯ’ ಸರಿಯೆಂಬುದು ಖಚಿತವಾಯಿತು ಅಂದುಕೊಳ್ಳುತ್ತೇನೆ.
ಈ ಚುನಾವಣೆಯನ್ನು ನಡೆಸುವ ಚುನಾವಣಾ ಆಯೋಗವೇ ತನ್ನ ಜಾಲತಾಣದಲ್ಲಿನ ಮಾಹಿತಿಗಳಲ್ಲಿ ಈ ಪದವನ್ನು ‘ನೈಋತ್ಯ’
ಎಂದು ಬಳಸಿದೆ. ಆದರೆ ಯಾರೋ ಬಳಸಿದರು ಎಂಬ ಸಂಗತಿಯು ಅದು ಸರಿಯೆಂಬುದಕ್ಕೆ ಅಧಿಕೃತತೆಯನ್ನು ಒದಗಿಸುವುದಿಲ್ಲ
ಎಂಬುದನ್ನು ಶಿಕ್ಷಕರು ಅರಿಯಬೇಕಾಗುತ್ತದೆ; ಅರಿಯುವಂತೆ ಮಾಡಬೇಕಾಗುತ್ತದೆ.
***
ಈ
‘ನೈರುತ್ಯ’ ಪದಬಳಕೆಯ ವಿಶ್ಲೇಷಣೆಯ ಸಾಂದರ್ಭಿಕ ಚರ್ಚೆಯಾಗಿ ಇನ್ನೊಂದು ಮಹತ್ವದ ವಿಷಯವನ್ನು ನಾನು
ಇಲ್ಲಿ ಪ್ರಸ್ತಾಪಿಸಬೇಕು. ವಿಧಾನ ಪರಿಷತ್ತಿನ ಚುನಾವಣೆಯ ಕಾರಣಕ್ಕೆ ‘ನೈರುತ್ಯ’ ಪದದ ಎಳೆಯನ್ನು ಹಿಡಿದು
ಇಷ್ಟು ಎಳೆದಿರುವ ನಾನು ಇನ್ನೊಂದಿಷ್ಟನ್ನು ಎಳೆದರೆ ಅದು ಈ ಸಂದರ್ಭಕ್ಕೆ ಅನುಚಿತವಾಗಲಾರದೇನೋ ಎನ್ನಿಸುತ್ತಿದೆ.
ಈ ಪ್ರಶ್ನೆಯನ್ನು ಶಿಕ್ಷಕರೊಬ್ಬರು ನನಗೆ ಕಳಿಸಿದ ಸಂದರ್ಭದಲ್ಲಿಯೇ ಈ ಕ್ಷೇತ್ರದಿಂದ ನಡೆಯುತ್ತಿರುವ
ಚುನಾವಣೆಯ ಅನೇಕ ವಿದ್ಯಮಾನಗಳೂ ನನಗೆ ತಲುಪುತ್ತಿದ್ದವು. ನನಗೆ ತಿಳಿದಿರುವಂತೆ ಈ ಕ್ಷೇತ್ರದಿಂದ ನಡೆಯುತ್ತಿರುವ
ಶಿಕ್ಷಕರ ಚುನಾವಣೆಯಲ್ಲಿ ಅನೇಕ ಶಿಕ್ಷಕರು ಈ `ಶಬ್ದ’ಕ್ಕಿಂತ ‘ಅರ್ಥ’ಕ್ಕೆ ಮಾರುಹೋಗಿದ್ದರು. ಅರ್ಥಕ್ಕೆ
ಎರಡು ಅರ್ಥವಿರುವುದು ಸಹಜವಷ್ಟೆ! ಇಂತಹ ಸಂದರ್ಭದಲ್ಲಿ ಶಿಕ್ಷಕರೊಬ್ಬರು ಭಾಷೆಯ ರಾಚನಿಕ ಸಂಗತಿಯೊಂದರ
ವಿವರಣೆ ಬಯಸಿದ್ದು ಸಹಜವಾಗಿಯೇ ನನಗೆ ಈ ಲೇಖನವನ್ನು ಬರೆಯುವಂತೆ ಮಾಡಿತು.
ವಿಧಾನ
ಪರಿಷತ್ತಿನ ಚುನಾವಣೆಯನ್ನು ಮೇಲ್ಮನೆಯ ಚುನಾವಣೆಯೆಂದು ಕರೆಯುವ ವಾಡಿಕೆ ಇದೆ. ಇದನ್ನು ಒಂದರ್ಥದಲ್ಲಿ
`ಪ್ರಜ್ಞಾವಂತರ ಕೂಟ’ ಎಂದು ಕರೆಯಬಹುದು. ಆದರೆ ಅದು ಇಂದು ತಲುಪಿರುವ ಗತಿ ನೋಡಿದರೆ ಮರುಕ ಹುಟ್ಟುತ್ತದೆ.
ಪರಿಷತ್ತಿನ ಚುನಾವಣೆಗಳು ಕೂಡ ವಿಧಾನಸಭೆಯ ಚುನಾವಣೆಯ ಹಾದಿಯನ್ನೇ ಹಿಡಿದದು ಕಲುಷಿತಗೊಳ್ಳುತ್ತಿರುವುದು
ದುರಂತ. ಇಂತಹ ಸಂದರ್ಭದಲ್ಲಿ ಕೊನೆಯಪಕ್ಷ ಪ್ರಜ್ಞಾವಂತರೆಂದು ಬೇರೆಯವರಿಂದ ಕರೆಯಲ್ಪಡುವ ಪದವೀಧರ ಮತ್ತು
ಶಿಕ್ಷಕರ ಕ್ಷೇತ್ರಗಳಾದರೂ ಕಲುಷಿತಗೊಳ್ಳದಂತೆ ಇರಬೇಕಾಗಿತ್ತು ಎಂಬುದು ನಮ್ಮಂಥವರ ನಿರೀಕ್ಷೆ. ಅದರಲ್ಲೂ
ಶಿಕ್ಷಕರ ಕ್ಷೇತ್ರ ಎಂದರೇನೇ ಅದನ್ನು ಕಲುಷಿತಗೊಳಿಸಲು ಬರುವವರು ಅಂಜುವ ಸಂದರ್ಭ ಇತ್ತೀಚಿನವರೆಗೂ
ಇತ್ತು. ಆದರೆ ಕಳೆದ ಒಂದೆರಡು ಚುನಾವಣೆಗಳನ್ನು ನೋಡಿದರೆ ಈ ಕ್ಷೇತ್ರ ಎಷ್ಟು ಹೊಲಸಾಗುತ್ತಿದೆ ಎಂದರೆ
ಇದೇ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ ಶಿಕ್ಷಕರಿಗೆ ಯಾವುದೇ ಬಗೆಯ ಗೌರವ ಘನತೆಗಳೂ ಉಳಿಯಲಿಕ್ಕಿಲ್ಲ
ಅನ್ನಿಸುತ್ತಿದೆ.
ತೀರಾ
ಇತ್ತೀಚಿನವರೆಗೂ ಶಿಕ್ಷಕರ ಕ್ಷೇತ್ರವೆಂದರೆ ಚುನಾವಣಾ ಭ್ರಷ್ಟಾಚಾರ ಮಾಡುವವರು ಅಂಜುತ್ತಿದ್ದರು. ದುಡ್ಡು
ಹೆಂಡ, ಇತ್ಯಾದಿ ಹಂಚಿ ಇಲ್ಲಿ ಗೆದ್ದುಬರಲು ಸಾಧ್ಯವಿಲ್ಲ ಎಂದು ಅವರಿಗೆ ಅನ್ನಿಸಿತ್ತು. ಆದರೆ ಈಗ
ಪರಿಸ್ಥಿತಿ ಹೇಗಾಗಿದೆ ಎಂದರೆ ಈ ಮೇಷ್ಟ್ರನ್ನೂ ನಾವು ಜೀತದಾಳುಗಳಂತೆ ಖರೀದಿ ಮಾಡಬಹುದು ಎಂಬುದು ಅವರಿಗೆ
ಮನದಟ್ಟಾಗಿಬಿಟ್ಟಿದೆ. ಇದಕ್ಕೆ ನಾವು ಯಾವುದೇ ಅಭ್ಯರ್ಥಿಗಳನ್ನು ದೂರುವುದು ಸಲ್ಲ. ಇಂತಹ ಪರಿಸ್ಥಿತಿ
ನಿರ್ಮಾಣವಾಗುವುದಕ್ಕೆ ಆಸ್ಪದಕೊಟ್ಟಿರುವುದು ಶಿಕ್ಷಕರ ಸಮುದಾಯವೇ ಎಂದರೇ ಬಹಳಷ್ಟು ಜನರಿಗೆ ಸಿಟ್ಟು
ಬರಲಾರದೇನೋ. ಆರಂಭದಲ್ಲಿ ಒಬ್ಬಿಬ್ಬರು, ಡೈರಿ, ಕ್ಯಾಲೆಂಡರ್, ವಾಟರ್ ಬಾಟೆಲ್, ಥರ್ಮಾಸ್ ಪ್ಲಾಸ್ಕ್
ಇತ್ಯಾದಿಗಳನ್ನು ‘ಉಡುಗೊರೆ’ಯಾಗಿ ನೀಡುವ ಕೆಲಸ ಆರಂಭಿಸಿ ಇವರನ್ನು ಬುಟ್ಟಿಗೆ ಹಾಕಿಕೊಳ್ಳುವ ಕೆಲಸ
ಆರಂಭಿಸಿದರು. ಅದಕ್ಕೆ ಸಿಕ್ಕ ಮೌನ ಅನುಮೋದನೆಯಿಂದಾಗಿ ಕಳೆದ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯಿಂದ
ಬ್ಯಾಗ್ ಗಳು ವಿತರಣೆಯಾದವು. ಆದರೆ ಶಿಕ್ಷಕರು ತೀರಾ ಮಾನಗೆಟ್ಟವರಲ್ಲ ಅವರೊಳಗೆ ಒಂದು ಆತ್ಮಸಾಕ್ಷಿ
ಇದ್ದು ಅದು ಅವರನ್ನು ಕಾಡುತ್ತದೆ ಎಂಬುದಕ್ಕೆ ಒಂದು ನಿದರ್ಶನವೆಂದರೆ ಬಹಳಷ್ಟು ಜನ ಆ ಬ್ಯಾಗನ್ನು
ಪಡೆದರಾದರೂ ಅದರ ಮೇಲೆ ಯಾರ ಹೆಸರು ಇದ್ದಿಲ್ಲವಾದರೂ ಅದರ ಮೇಲಿನ ಒಂದು ಸೂಕ್ತಿಯಿಂದ ಈ ಚೀಲ ಹೆಗಲಿಗೆ
ಹಾಕಿಕೊಂಡವನು ಅಥವಾ ಹಾಕಿಕೊಂಡವಳು ಯಾರ ಕಾಲಡಿ ಇರುವ `ಚೇಲಾ’ ಎಂದು ಗೊತ್ತಾಗಿ ಬಿಡುತ್ತಿತ್ತಾದ್ದರಿಂದ
ಅವರು ಅದನ್ನು ಸಾರ್ವಜನಿಕವಾಗಿ ಬಳಸಲೇ ಇಲ್ಲ…
‘ನಮ್ಮ ಶಿಕ್ಷಕರೂ ಭ್ರಷ್ಟರೂ ಆಗಬೇಕು ಮತ್ತು ಅದು ಗೊತ್ತಾಗದಂತೆಯೂ ಇರಬೇಕು’ ಅಂದರೆ `ಹಾದರ ನಡೆಯಬೇಕು ಆದರೆ ಅದು ಹಾದಿಬೀದಿ ಸುದ್ಧಿಯಾಗಬಾರದು’ ಅಂತಾರಲ್ಲ ಅಂತಹ ‘ಪ್ರಜ್ವಲನೀತಿ’ಯೊಂದನ್ನು ಅಳವಡಿಸಿಕೊಂಡು ಅವರ ಘನತೆಗೆ ಚ್ಯುತಿ ಬರದಂತೆ ಅವರು ಸಾರ್ವಜನಿಕರಿಗೆ ಮರ್ಯಾದಸ್ತರಂತೆಯೇ ಕಾಣಬೇಕೆಂದು ಬಯಸಿದ ಕೆಲವು ಅಭ್ಯರ್ಥಿಗಳು ಈ ಸಲ `ಕವರ್’ ಗಳನ್ನು ಕಳಿಸುತ್ತಿದ್ದಾರಂತೆ. ಕೆಲವು ಕಡೆ ಈ ಕವರ್ `ನನಗೆ ಬಂದಿಲ್ಲ ನಿನಗೆ ಬಂದಿಲ್ಲ` ಎಂದು ಶಿಕ್ಷಕರು ಮುಖ ಊದಿಸಿಕೊಂಡ ಉದಾಹರಣೆಗಳೂ ಇವೆ. ಶಿಕ್ಷಕರ ಸಂಘಗಳ ಕೆಲವು ‘ಅಅಗಳು’(ಅವಿವೇಕಿ ಅಧ್ಯಕ್ಷರುಗಳು) (ಎಲ್ಲರೂ ಅಲ್ಲ) ಇಲಾಖೆಯಿಂದ ಕಾಲಮಿತಿ ಬಡ್ತಿ, ಇನ್ಕ್ರಿಮೆಂಟ್, ಇತ್ಯಾದಿಗಳನ್ನು ಶಿಕ್ಷಕರಿಗೆ ಕೊಡಿಸುವುದು ಹೇಗೋ ಹಾಗೇ ಈ ಕವರ್ ಗಳನ್ನು ಸರಿಯಾದ ರೀತಿಯಲ್ಲಿ ಶಿಕ್ಷಕರಿಗೆ ತಲುಪುವಂತೆ ಮಾಡುವುದೂ ಕೂಡ ನಮ್ಮ ಜವಾಬ್ದಾರಿಯೆಂದು ತಿಳಿದು ಈ ಹೇಸಿಗೆ ಹಂಚಿಕೆ ಕಾರ್ಯದಲ್ಲಿ ತೊಡಗಿರುವುದು ಸುಳ್ಳೆನ್ನಬಹುದೆ?
ಕೆಲವು
ವರ್ಷಗಳ ಹಿಂದೆ ಯಾವುದೋ ಒಂದು ಸಂಸ್ಥೆಯವರು ಶಿಕ್ಷಕರ ಬಗ್ಗೆ ಒಂದು ಸಮೀಕ್ಷೆ ಮಾಡಿ ಕೆಲವು ಮಹತ್ವದ
ಅಂಕಿ ಅಂಶಗಳನ್ನು ಕೊಟ್ಟದ್ದನ್ನು ನೋಡಿದ್ದೆ. ಅದರ ವಿವರಗಳು ಮರೆತುಹೋಗಿವೆಯಾದರೂ ಒಂದು ಅಂಶಮಾತ್ರ
ಇನ್ನೂ ನೆನಪಿದೆ. ಅವರು ಕರ್ತವ್ಯ ನಿಷ್ಠತೆ ಮತ್ತು ಭ್ರಷ್ಟತೆಯನ್ನು ಆದರಿಸಿ ಶಿಕ್ಷಕರನ್ನು ಮೂರು
ಗುಂಪುಗಳಾಗಿ ವಿಂಗಡಿಸಿದ್ದರು. ಅವರ ಪ್ರಕಾರ ನಮ್ಮ ಸಮಾಜದಲ್ಲಿ ಶೇ 40 ರಷ್ಟು ಅತ್ಯಂತ ಉತ್ತಮ ಶಿಕ್ಷಕರಿದ್ದಾರಂತೆ.
ಶೇಕಡಾ 20 ರಷ್ಟು ಅತ್ಯಂತ ಕೆಟ್ಟುಹೋಗಿರುವ ಶಿಕ್ಷಕರಿದ್ದಾರಂತೆ. ಉಳಿದ ಶೇಕಡಾ 40 ರಷ್ಟು ಶಿಕ್ಷಕರನ್ನು
ಅವರು ಅತ್ತ ಒಳ್ಳೆಯವರೂ ಅಲ್ಲದ ಇತ್ತ ಕೆಟ್ಟವರೂ ಅಲ್ಲದ ‘ಟ್ರೆಮಂಡಸ್’ ಗ್ರೂಫ್ ಎಂದಿದ್ದರು. ಈ ಟ್ರೆಮಂಡಸ್
ಗ್ರೂಫ್ ಯಾವಾಗ ಕೆಟ್ಟದ್ದಾಗುತ್ತೆ ಯಾವಾಗ ಒಳ್ಳೆಯದಾಗಿರುತ್ತೆ ಎಂದು ನಿಖರವಾಗಿ ಹೇಳುವುದು ಕಷ್ಟ
ಎಂದಿದ್ದ ಅವರು ಶಿಕ್ಷಣ ವ್ಯವಸ್ಥೆ ಉತ್ತಮವಾಗಬೇಕು ಎಂದು ಬಯಸುವ ಮಂತ್ರಿಮಹೋದಯರು, ಮೇಲಧಿಕಾರಿಗಳು
ಹಾಗೂ ಸಾರ್ವಜನಿಕರೆಲ್ಲರೂ ಅತ್ಯಂತ ಫೋಕಸ್ ಕೊಟ್ಟು ಗಮನಿಸಬೇಕಾದದ್ದು ಒಟ್ಟು ಶಿಕ್ಷಕರಲ್ಲಿ ಶೇಕಡಾ
40 ರಷ್ಟಿರುವ ಕೇವಲ ಇದೊಂದೇ ಗುಂಪನ್ನು ಎಂದಿದ್ದರು. ಏಕೆಂದರೆ ಮೊದಲ ವಿಭಾಗದಲ್ಲಿ ಬರುವ ಶೇಕಡಾ
40 ರಷ್ಟು ಒಳ್ಳೆಯ ಶಿಕ್ಷಕರು ಎಷ್ಟು ಒಳ್ಳೆಯವರು ಎಂದರೆ ಅವರಿಗೆ ಅವರ ವೃತ್ತಿಗೌರವ, ಘನತೆ, ಬದ್ಧತೆ
ಮುಂತಾದವುಗಳ ಸ್ಪಷ್ಟ ಅರಿವಿದ್ದು ಅವರು ಯಾವುದೇ ಮೇಲಧಿಕಾರಿ ಅಷ್ಟೇ ಏಕೆ ಶಿಕ್ಷಣ ಇಲಾಖೆ ಎಂಬುದು
ಇಲ್ಲದಿದ್ದರೂ ತಮ್ಮ ಕೆಲಸವನ್ನು ತಾವು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವವರು. ಇವರಿಗೆ ಯಾವ ಅಧಿಕಾರಿಯ
ಅವಶ್ಯಕತೆಯೂ ಇಲ್ಲ.
ಇನ್ನು
ಕೆಟ್ಟುಹೋಗಿರುವ ಶೇಕಡಾ 20 ರಷ್ಟು ಜನ ಶಿಕ್ಷಕರು ಎಷ್ಟು ಕೆಟ್ಟುಹೋಗಿದ್ದಾರೆಂದರೆ ತಾಲ್ಲೂಕಿಗೆ ಏಳು
ಎಂಟು ಜನ ಬಿಇಒ ಇತ್ಯಾದಿ ಅಧಿಕಾರಿಗಳನ್ನು ಹಾಕಿದರೂ ಇವರನ್ನು ಸರಿಮಾಡಲು ಸಾಧ್ಯವಿಲ್ಲವಂತೆ. ಇವರು
ರಿಪೇರಿ ಮಾಡಲಾಗದಷ್ಟು ಕೆಟ್ಟುಹೊಗಿರುವುದರಿಂದ ಇವರ ಬಗ್ಗೆ ಗಮನ ಕೇಂದ್ರೀಕರಿಸುವುದು ಕೂಡ ಸಮಯ ಮತ್ತು
ಹಣದ ಅಪವ್ಯಯವಾಗುತ್ತದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಇನ್ನು ಉಳಿದದ್ದು ಮೂರನೆಯದಾದ ‘ಟ್ರೆಮಂಡಸ್
ಗ್ರೂಫ್’. ಈ ‘ಟ್ರೆಮಂಡಸ್ ಗ್ರೂಫ್’ ಹೇಗಿರುತ್ತದೆ ಎಂದರೆ ಇದು ಶಾಶ್ವತವಾಗಿ ಒಳ್ಳೆಯದ್ದಾಗಲಿ ಕೆಟ್ಟದ್ದಾಗಿ
ಆಗಲಿ ಇರದೆ ಸಮಯ ಸಂದರ್ಭ ಗಮನಿಸಿ ತನ್ನ ವರ್ತನೆಯನ್ನು ಬದಲಿಸಿಕೊಳ್ಳುತ್ತದೆಯಂತೆ. ತಮ್ಮ ಸುತ್ತಮುತ್ತಲ
ಪರಿಸರ, ಮೇಲಧಿಕಾರಿಗಳು ಇವರೆಲ್ಲ ಒಳ್ಳೆಯವರಾಗಿದ್ದಾಗ ಇವರಷ್ಟು ಒಳ್ಳೆಯವರೇ ಇಲ್ಲ ಅನ್ನುವಷ್ಟು ಒಳ್ಳೆಯ
ಕೆಲಸವನ್ನು ಇವರು ಮಾಡುತ್ತಾರಂತೆ. ಆದರೆ ಸುತ್ತಮುತ್ತಲ ಪರಿಸರ ಹಾಗೂ ಹೀಗೂ ಇದ್ದು ಮೇಲಧಿಕಾರಿಗಳು
ಒಂದಿಷ್ಟು ಭ್ರಷ್ಟರೂ ಆಸೆಬಡುಕರು ಇತ್ಯಾದಿ ಇದ್ದಾಗ ಇವರು ತಕ್ಷಣಕ್ಕೆ ತಮ್ಮ ವರ್ತನೆಯನ್ನು ಬದಲಿಸಿಕೊಂಡು
ಸ್ವಲ್ಪಭ್ರಷ್ಟರನ್ನು ಮಹಾಭ್ರಷ್ಟರನ್ನಾಗಿ ಮಾಡಿ ಇಡೀ ವ್ಯವಸ್ಥೆಯನ್ನೇ ಗಬ್ಬೆಬ್ಬಿಸಿಬಿಡುತ್ತಾರಂತೆ.
ಒಟ್ಟಾರೆಯಾಗಿ ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು. ಹಾಲಲ್ಲಿ ಜೇನಾಗಿ ನೀರಲ್ಲಿ ಮೀನಾಗಿ ಹಾಯಾಗಿರುವ
ಗುಂಪು ಇದು. ಹೀಗಾಗಿ ಅವರು ಒತ್ತಿ ಹೇಳಿದ್ದು ಎಲ್ಲರ ಗಮನ ಇರಬೇಕಾದದ್ದು ಈ ‘ಟ್ರೆಮಂಡಸ್ ಗ್ರೂಫ್’
ಕಡೆಗೆ. ಏಕೆಂದರೆ ಇವರು ಒಳ್ಳೆಯವರಾದರೆ ಸಮಾಜದಲ್ಲಿ ಒಳ್ಳೆಯ ಶಿಕ್ಷಕರ ಸಂಖ್ಯೆ ಶೇಕಡಾ 80ಕ್ಕೆ ಏರುತ್ತದೆ!
ಆದರೆ ಇವರು ಕಟ್ಟವರಾದರೆ ಸಮಾಜದಲ್ಲಿ ಒಳ್ಳೆಯ ಶಿಕ್ಷಕರ ಸಂಖ್ಯೆ ಶೇ. 40ಕ್ಕೆ ಇಳಿದು ಕೆಟ್ಟ ಶಿಕ್ಷಕರ
ಸಂಖ್ಯೆ ಶೇ. 60ಕ್ಕೆ ಏರಿಬಿಡುತ್ತದೆ; ಶಿಕ್ಷಣ ದುರಂತದ ಕಡೆ ಮುಖಮಾಡಿಬಿಡುತ್ತದೆ.
ಈ
ಚುನಾವಣೆಯ ವಿದ್ಯಮಾನಗಳ ಹಿನ್ನಲೆಯಲ್ಲಿ ಈ ಮೂರೂ ಬಗೆಯ ಶಿಕ್ಷಕರನ್ನೂ ನಾನು ಕಂಡಿದ್ದೇನೆ. ಯಾರಾದರೂ
ಏನಾದರೂ ಕೊಡಲು ಬಂದರೆ ಹಾವನ್ನು ಕಂಡವರಂತೆ ಓಡಿಹೋಗುವ ಮೊದಲನೆಯ ಗುಂಪಿನ ಸಜ್ಜನರನ್ನೂ ಕಂಡಿದ್ದೇನೆ.
ಇನ್ನು ಕೊಡುವುದಕ್ಕೆ ಹಸಿದನಾಯಿಗಳಂತೆ ಬಾಯಿತೆಗೆದುಕೊಂಡು ಕುಳಿತಿರುವ, ಬರದಿದ್ದರೆ ತಗಾದೆ ತೆಗೆಯುವ
ಕೊನೆಯ ಗುಂಪಿನ ದುರ್ಜನರನ್ನೂ ಕಂಡಿದ್ದೇನೆ. ಹಾಗೆಯೇ ಈ ಮೂರನೆಯ ಗುಂಪಿನವರನ್ನೂ ಕೂಡ. ಮೊದಲನಯ ಗುಂಪಿನವರು
ಈ ದೇಶದ ಸೌಭಾಗ್ಯ. ಅವರು ಕಂಡರೆ ಕಾಲುಹಿಡಿದು ನಮಸ್ಕರಿಸಬೇಕು ಎನ್ನಿಸುತ್ತದೆ. ಕೊನೆಯವರನ್ನು ಕಂಡರೆ
……. ಅನ್ನಿಸುತ್ತದೆ. ಶಿಕ್ಷಣ ಸುಧಾರಿಸಲು ಈ ಎರಡೂ ಗುಂಪುಗಳಿಗೆ ಶಿಕ್ಷಣಾಧಿಕಾರಿಗಳ ಮತ್ತು ಸಮಾಜದ
ನಿಗಾ ಹೇಗೆ ಅವಶ್ಯಕತೆ ಇಲ್ಲವೋ ಹಾಗೆಯೇ ಈ ಎರಡೂ ಗುಂಪುಗಳಿಗೆ ನನ್ನ ಲೇಖನದ ಅವಶ್ಯಕತೆಯೂ ಇರುವುದಿಲ್ಲ.
ಮೊದಲನೆಯ ಗುಂಪಿಗೆ ಈ ಕಠಿಣ ಮಾತುಗಳು ಅನ್ವಯಿಸುವುದೇ ಇಲ್ಲ. ಕೊನೆಯ ಗುಂಪಿಗೆ ಹೇಳಿ ಉಪಯೋಗವಿಲ್ಲ.
ಏಕೆಂದರೆ ತಾವು ತಿನ್ನುತ್ತಿರುವುದು ಅಮೃತವೋ ಅಮೇದ್ಯವೋ ಎಂದು ಅರಿಯಲಾರದೆ “ಎಲ್ಲರೂ ತಿನ್ನುವಾಗ ನಾವು
ತಿಂದರೆ ಏನು ತಪ್ಪು” ಎಂದು ವಾದಿಸುವವರಿಗೆ ಏನಾದರೂ ಹೇಳಲು ಹೋಗುವುದು ಗೋರ್ಕಲ್ಲ ಮೇಲೆ ಮಳೆ ಸುರಿದಂತೆ.
ಅವರ ಆಲೋಚನಾ ಕ್ರಮ ಹೇಗಿರುತ್ತದೆ ಎಂದರೆ ದೇಶದಲ್ಲಿ ಯಾರೂ ಸಾಚಾ ಅಲ್ಲ ಎಂಬುದೇ ಅವರ ವಾದ. ಅಂಥವರೊಂದಿಗೆ
ಸಂವಾದ ಅಸಾಧ್ಯ. ಮತ್ತು ವಿವಾದ ಮಾತ್ರ ಸಾಧ್ಯ!!
ಹಾಗಾಗಿ
ಮೂರನೆಯ ಗುಂಪಿಗೆ ಮಾತ್ರ ನನ್ನ ಲೇಖನ. ಸಾವಿರದಲ್ಲಿ ಒಬ್ಬರಿಗಾದರೂ ಇದು ಆತ್ಮಾವಲೋಕನ ಮಾಡಿಕೊಳ್ಳಲು
ಹಚ್ಚುತ್ತದೆ ಎಂಬ ನಂಬಿಕೆಯಲ್ಲಿ ಈ ಲೇಖನ ಬರೆಯುತ್ತಿರುವಾಗಲೇ ಅಪರೂಪಕ್ಕೆ ದೂರದ ಊರಿನಿಂದ ಗೆಳತಿಯೊಬ್ಬಳು
ಫೋನ್ ಮಾಡಿದಳು. ಇದೇ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆಗೆ ನಿಂತಿದ್ದ ಅಭ್ಯರ್ಥಿಯೊಬ್ಬನ
ಕಡೆಯವರು ಶಾಲೆಗೇ ಬಂದು ಎಲ್ಲರಿಗೂ ಒಂದೊಂದು ಕವರ್ ಕೊಟ್ಟು ಫೋನ್ ನಂಬರ್ ತೆಗೆದುಕೊಂಡು ಹೋದರೆಂದೂ
ಕವರ್ ಒಳಗೆ ಎರಡೆರೆಡು ಸಾವಿರ ರೂಪಾಯಿ ಇದ್ದವೆಂದೂ ಹೇಳಿದಳು. ಅವಳಿಗೆ ಅದನ್ನು ನನಗೆ ಹೇಳಬೇಕು ಎಂದು
ಏಕೆ ಅನ್ನಿಸಿತೋ ಗೊತ್ತಿಲ್ಲ. ಏನಾದರೂ ಸಮಾಧಾನ ಆಗುವಂಥ ಪರಿಹಾರ ಹೇಳಬಹುದುದೆಂದು ಅವಳು ನನಗೆ ಕಾಲ್
ಮಾಡಿದ್ದಾಳೆ ಎಂದು ಊಹಿಸಿಕೊಂಡೆ. ಅವಳು ಆಡಿದ ಮಾತಿನ ಧಾಟಿಯನ್ನು ಗಮನಿಸಿ ನನಗೆ ಅನ್ನಿಸಿದ್ದು ಇಷ್ಟು.
ಸ್ಟಾಫ್ ರೂಮಿನಲ್ಲಿ ಎಲ್ಲರೂ ತೆಗೆದುಕೊಳ್ಳುವಾಗ ಇವಳೊಬ್ಬಳೇ `ಬೇಡ’ ಎಂದು ಹೇಳಿ ದುರ್ಜನ ಸಹೋದ್ಯೋಗಿಗಳ ಕೆಂಗಣ್ಣ ಕೋಪಕ್ಕೆ
ಗುರಿಯಾಗಲಾರದೆ ಸುಮ್ಮನೆ ಕವರ್ ತೆಗೆದುಕೊಂಡಿದ್ದಾಳೆ. ಆದರೆ ಅವರು ಹೋದ ಮೇಲೆ ಅವಳಿಗೆ ಅದು ತಪ್ಪು
ಅನ್ನಿಸಿದೆ. ಮನೆಗೆ ಬಂದ ಮೇಲೂ, ‘ಮಕ್ಕಳಿಗೆ ಸರಿತಪ್ಪುಗಳ ಬುದ್ಧಿಹೇಳುವ ಸ್ಥಾನದಲ್ಲಿರುವ ನಾನು ಈ
ಕೆಲಸ ಮಾಡಿದ್ದು ಎಷ್ಟುಸರಿ’ ಎಂಬ ಜಿಜ್ಞಾಸೆ ಅವಳಿಗೆ ಕಾಡಿದೆ. ಹೀಗೆ ಆತ್ಮಸಾಕ್ಷಿ ಕಾಡುವುದು ಕೇವಲ
ಈ ಮೂರನೆಯ ಗುಂಪಿನವರಿಗೆ ಮಾತ್ರ. ಮೊದಲನೆಯ ಗುಂಪಿನವರು ಸ್ವಭಾವತಃ ಇಂತಹ ಕಾರ್ಯದಲ್ಲಿ ಪಾಲ್ಗೊಳ್ಳುವುದಿಲ್ಲವಾದ್ದರಿಂದ
ಅವರಿಗೆ ಪಾಪಪ್ರಜ್ಞೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇನ್ನು ಎರಡನೆಯ ಗುಂಪಿನವರು ನಾಚಿಕೆ, ಮಾನ
ಮರ್ಯಾದೆ ಎಲ್ಲವನ್ನೂ ಬಿಟ್ಟಿರುವುದರಿಂದ ಅವರಿಗೆ ಆತ್ಮಸತ್ತುಹೋಗಿರುವುದರಿಂದ ಅದು ಕಾಡುವ ಪ್ರಶ್ನೆಯೇ
ಬರುವುದಿಲ್ಲ. ತೊಳಲಾಟ ಏನಿದ್ದರೂ ಈ ಮೂರನೆಯ ಗುಂಪಿನವರಿಗೇ.
ಅವಳಿಗೆ ನಾನು ಹೇಳಿದ್ದು ಇಷ್ಟು: ನಿನ್ನಂತೆ ಅನೇಕರು ಪರಿಸ್ಥಿತಿಯ ಒತ್ತಡ, ಇನ್ಯಾವುದ್ಯಾವುದೋ ಕಾರಣಕ್ಕಾಗಿ ತಪ್ಪು ಮಾಡುತ್ತಿರುತ್ತಾರೆ. ಹೀಗೆ ತಪ್ಪುಮಾಡುವವರ ಒಳಗೆ ಒಂದು ಆತ್ಮಸಾಕ್ಷಿ ಎನ್ನುವುದು ಇದ್ದು ಇದು ಅವರನ್ನು ಕಾಡುತ್ತಿರುತ್ತದೆ. ಅದೇ ನಿನಗೂ ಕಾಡುತ್ತಿದೆ. ತೆಗೆದುಕೊಂಡ ಹಣವನ್ನು ನೀನು ಬಳಸಿಕೊಳ್ಳಬೇಡ. ಹಾಗಂತ ಅದನ್ನು ಈಗ ಮರಳಿ ಕೊಡಲು ಹೋಗುವುದೂ ಈಗ ಸರಿ ಆಗಲಿಕ್ಕಿಲ್ಲ. ಅದನ್ನು ನೀನು ಕಲಿಸುವ ಮಕ್ಕಳಿಗೆ ಏನನ್ನಾದರೂ ಕೊಡಿಸಿ ಖರ್ಚುಮಾಡಿಬಿಡು. ಇದು ಅತ್ಯುತ್ತಮ ಮಾರ್ಗವಲ್ಲದಿದ್ದರೂ ಸಧ್ಯಕ್ಕೆ ಇರುವ ಉತ್ತಮ ಆಯ್ಕೆ. ಇದರಿಂದ ಒಳ್ಳೆಯದನ್ನು ಮಾಡಿದೆ ಎಂಬ ಹೆಮ್ಮೆ ಮೂಡದಿದ್ದರೂ ಕೆಟ್ಟಪಾಪವನ್ನು ತೊಳೆದುಕೊಂಡೆ ಎಂಬ ಸಮಾಧಾನವಾದರೂ ಸಿಗುತ್ತದೆ. ಇಲ್ಲದೇ ಹೋದರೆ ಕಳ್ಳಬಸಿರಿನ ತಾಯಿಗೆ ಮಗು ಎದುರಿಗೆ ಬಂದಾಗಲೆಲ್ಲ ಚುಚ್ಚುವ ಮುಳ್ಳನೆನಪುಗಳಂತೆ ಇಂತಹ ಘಟನೆಗಳ ನೆನಪುಗಳು ಸದಾ ನಿನ್ನನ್ನು ಹಿಂಡುತ್ತಲೇ ಇರುತ್ತವೆ.” ಅವಳಿಗೆ ಸಮಾಧಾನವಾದಂತೆ ಕಂಡಿತು. ಫೋನ್ ಇಟ್ಟಳು.
ಶಿಕ್ಷಕ ಕ್ಷೇತ್ರದ ಚುನಾವಣೆಗಳು ಹೇಗೆ ನಡೆಯಬೇಕು ಅಂದರೆ ಅಭ್ಯರ್ಥಿಗಳಾದವರು ತಮ್ಮ ಸಾಧನೆ ಪರಿಚಯ ಚುನಾಯಿತರಾದರೆ ಮಾಡಲು ಉದ್ದೇಶಿಸಿರುವ ಕೆಲಸಗಳು ಇತ್ಯಾದಿಗಳ ಒಂದು ಕರಪತ್ರವನ್ನೋ ಚಿಕ್ಕ ಪುಸ್ತಿಕೆಯನ್ನೋ ರಚಿಸಿ ಅದನ್ನು ಡಿಜಿಟಲ್ ಮಾಧ್ಯಮದಲ್ಲೋ ಅವಶ್ಯವೆನಿಸಿದರೆ ಮುದ್ರಿತ ರೂಪದಲ್ಲಿಯೋ ಶಿಕ್ಷಕರಿಗೆ ತಲುಪಿಸಬೇಕು. ಅದನ್ನು ಓದಿಕೊಂಡು ತಮ್ಮದೇ ಆದ ವಿವೇಚನಾಶಕ್ತಿಯನ್ನು ಬಳಸಿ ಯಾರನ್ನು ಆಯ್ಕೆಮಾಡಿದರೆ ಶಿಕ್ಷಕರನ್ನು ವಿಧಾನಪರಿಷತ್ತಿನಲ್ಲಿ ಸಮರ್ಥವಾಗಿ ಪ್ರತಿನಿಧಿಸಬಲ್ಲರು ಎಂದು ಅವರಿಗೆ ಅನ್ನಿಸುತ್ತದೆಯೋ ಅಂಥವರಿಗೆ ಮತಗಟ್ಟೆಗೆ ಹೋಗಿ ಶಿಕ್ಷಕರು ಮತಚಲಾಯಿಸಬೇಕು. ಇದಿಷ್ಟೇ ನಡೆಯಬೇಕಾದದ್ದು. ಇದರ ಹೊರತಾಗಿ ನಡೆಯುವುದೆಲ್ಲವೂ ಅನವಶ್ಯ ಮಾತ್ರವಲ್ಲ; ಶಿಕ್ಷಕರ ಘನತೆ-ಗೌರವಗಳಿಗೆ ಧಕ್ಕೆ ತರುವಂಥದ್ದು. ಹಾಗೆ ನೋಡಿದರೆ ‘ಅವರಿಗೆ ಮತಹಾಕಿ ಇವರಿಗೆ ಮತಹಾಕಿ’ ಎಂದು ಕೇಳುವುದೂ ಇಲ್ಲಿ ಇರಬಾರದು. ಏಕೆಂದರೆ ಇದರಿಂದ ಯಾರಿಗೆ ಮತಹಾಕಬೇಕು ಎಂದು ಸ್ವತಂತ್ರವಾಗಿ ವಿಚಾರಮಾಡುವ ಶಕ್ತಿಯೂ ಶಿಕ್ಷಕರಿಗಿಲ್ಲ ಎಂದು ಇದರಿಂದ ಭಾವಿಸಿದಂತಾಗುತ್ತದೆ.
ಆದರೆ ಈ ಚುನಾವಣೆಯ ಸ್ವರೂಪ ಎಷ್ಟು ಕೆಟ್ಟರೂಪವನ್ನು ತಾಳಿದೆ ನೋಡಿ. ಉಳಿದ ಚುನಾವಣೆಗಳಂತೆ ಇಲ್ಲಿಯೂ ಪ್ರೀ ವೆಡ್ಡಿಂಗ್ ಶೂಟ್ ಗಳ ರೀತಿಯಲ್ಲಿ ಪ್ರೀ ಎಲೆಕ್ಷನ್ ಕೂಟಗಳು ನಡೆಯುತ್ತಿವೆ. ಬಲಾಢ್ಯ ಮತ್ತು ಧನಾಢ್ಯ ಅಭ್ಯರ್ಥಿಗಳು ನಡೆಸುವ ಈ ಔತಣಕೂಟಗಳಲ್ಲಿ ನಮ್ಮ ಶಿಕ್ಷಕರು ಮದುವೆಮನೆ ಊಟಕ್ಕೆ ಹೋಗಿಬರುವಂತೆ ಯಾವ ಮುಜುಗರವೂ ಇಲ್ಲದೇ ಹೋಗಿ ‘ತೀರ್ಥ’ ‘ಪ್ರಸಾದ’ ಸ್ವೀಕರಿಸಿ ಬರುತ್ತಿದ್ದಾರೆ. ಅದರಲ್ಲಿಯೇ ಒಂದಿಷ್ಟು ಮಾನ ಮರ್ಯಾದೆ ಇಟ್ಟುಕೊಂಡವರು ತಾವು ಮತನೀಡಲು ಉದ್ದೇಶಿಸಿರುವ ಅಭ್ಯರ್ಥಿಗಳು ನಡೆಸುವ ಕೂಟಗಳಿಗೆ ಮಾತ್ರ ಹೋಗುತ್ತಿದ್ದರೆ ಮಾನ ಮರ್ಯಾದೆ ಎಲ್ಲವನ್ನೂ ಸಂಪೂರ್ಣ ಬಿಟ್ಟವರು ಎಲ್ಲ ಅಭ್ಯರ್ಥಿಗಳ ‘ಔತಣಕೂಟ’ಗಳಿಗೂ ಹಸಿದ ನಾಯಿಗಳಂತೆ ಓಡಿಹೋಗಿ, ತಿಂದು-ಕುಡಿದು ಬರುತ್ತಿದ್ದಾರೆ. ಇಂಥವರು ಹೀಗೆ ತಿಂದು-ಕುಡಿದು ಬಂದ ಎಲ್ಲ ಅಭ್ಯರ್ಥಿಗಳಿಗೂ ಮತಹಾಕಲು ಸಾಧ್ಯವಿಲ್ಲ. ಬಹಳ ಎಂದರೆ ಅವರಲ್ಲಿ ಒಬ್ಬರಿಗೆ ಮತಹಾಕಬಹುದು. ಉಳಿದವರ ಕೂಳು ತಿನ್ನುವಾಗ ಇವರಿಗೆ ಕನಿಷ್ಠ ಪಾಪಪ್ರಜ್ಞೆಯೂ ಕಾಡುವುದಿಲ್ಲ. ಏಕೆಂದರೆ ಪಾಪಪ್ರಜ್ಞೆ ಕಾಡಬೇಕಾದರೆ ಆತ್ಮಸಾಕ್ಷಿ ಇರಬೇಕಾಗುತ್ತದೆ. ಇಂಥವರಿಗೆ ‘ಶಿಕ್ಷಕ ಆತ್ಮ’ವೇ ಸತ್ತು ಪ್ರೇತಾತ್ಮವಾಗಿರುವುದರಿಂದ ಆತ್ಮಸಾಕ್ಷಿಯ ಪ್ರಶ್ನೆಯೇ ಹುಟ್ಟುವುದಿಲ್ಲ. ಇವರಲ್ಲಿ ಅನೇಕರನ್ನು ಚುನಾವಣಾ ಆಯೋಗ ಚುನಾವಣಾ ಸಮಯದಲ್ಲಿ ‘ಅಧ್ಯಕ್ಷಾಧಿಕಾರಿ’ಯಂಥ ಗೌರವಯುತ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿ ಕೂರಿಸುತ್ತದೆ. ಇವರನ್ನು ಅಧ್ಯಕ್ಷಾಧಿಕಾರಿಯಲ್ಲ ಚುನಾವಣಾಧಿಕಾರಿಯನ್ನೇ ಮಾಡಿದರೂ ಇವರು ಮಾಡುವುದು ಇಂತಹ ಕಚಡಾ ಕೆಲಸವನ್ನೇ. ನಮ್ಮೂರಕಡೆ ಒಂದು ಗಾದೆ ಇದೆ. ನಾಯಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಹೊರಟರೂ ಅದು ಹೇಸಿಗೆ ಕಂಡ ತಕ್ಷಣ ಕೆಳಗೆ ಹಾರುತ್ತದೆ ಎಂದು! ಅದಕ್ಕೂ ಇವರಿಗೂ ಏನೂ ವ್ಯತ್ಯಾಸವಿಲ್ಲ.
ಕನಿಷ್ಠ
ಆತ್ಮಸಾಕ್ಷಿ ಇರುವ ಶಿಕ್ಷಕರು ಈ ಹಂತದಲ್ಲಿಯೂ ಮಾಡಬಹುದಾದ ಉತ್ತಮ ಕೆಲಸವೊಂದಿದೆ. ಅದೆಂದರೆ ಈ ರೀತಿ
ತಮಗೆ ಏನೇನೋ ಹಂಚಿಕೆ ಮಾಡಿದವರಿಗೆ ‘ಋಣ ತೀರಿಸುವ’ ಕೆಲಸ ಮಾಡದೆ ಅವರನ್ನು, ಅವರು ಯಾರೇ ಆಗಲಿ, ಚುನಾವಣೆಯಲ್ಲಿ
ಸೋಲಿಸುವ ಮೂಲಕ ಸಮಾಜಕ್ಕೆ ‘ನಾವು ಖರೀದಿಸಲ್ಪಡುವ ಜೀತದಾಳುಗಳಲ್ಲ’ ಎಂಬ ಸಂದೇಶ ನೀಡುವುದು.
ಈ
ದೇಶದಲ್ಲಿ ಈಗಲೂ ಶಿಕ್ಷಕರಿಗೆ ಒಂದಿಷ್ಟು ಬೆಲೆಯಿದೆ. ಈಗಲೂ ಒಬ್ಬ ಮೇಷ್ಟ್ರು ನಮ್ಮಲ್ಲಿ ಕೇವಲ ಒಬ್ಬ
ಸರ್ಕಾರಿ ನೌಕರ ಅಲ್ಲ. ಒಬ್ಬ ಶಿಕ್ಷಕನಿಗೆ ಅಥವಾ ಶಿಕ್ಷಕಿಗೆ ಶಾಲೆಬಿಟ್ಟಮೇಲೂ ಎದುರಿಗೆ ಬಂದ ಜನ
‘ನಮಸ್ಕಾರ’ ಅನ್ನುತ್ತಾರೆ. ಅವರು ವಾಸಿಸುವ ಮನೆಯನ್ನು ಹೆಸರಿನಿಂದ ಕರೆಯದೇ ‘ಮೇಷ್ಟ್ರಮನೆ’ ಎನ್ನುತ್ತಾರೆ.
ಅಷ್ಟೇ ಏಕೆ ಅವರು ಸತ್ತಮೇಲೂ ಆ ಮನೆಗೆ ‘ಮೇಷ್ಟ್ರಮನೆ’ ಎಂದು ಕರೆಯುತ್ತಾರೆ. ಈ ಮರ್ಯಾದೆಯನ್ನು ಕಳೆದುಕೊಳ್ಳುವ
ಕೆಲಸಗಳಿಗೆ ನಮ್ಮ ಶಿಕ್ಷಕರು ಕೈಹಾಕಬಾರದು. ಬಹಳಷ್ಟು ಶಿಕ್ಷಕರಿಗೆ ‘ಸಮಾಜ ಹಿಂದಿನಂತೆ ಶಿಕ್ಷಕರಿಗೆ
ಗೌರವ ಕೊಡುತ್ತಿಲ್ಲ’ ಎಂಬ ನೋವಿದೆ. ಅದಕ್ಕೆ ಬಹುಪಾಲು ನಾವೇ ಕಾರಣ ಎಂಬುದರ ಕಡೆಗೆ ಅವರಿಗೆ ಗಮನವಿಲ್ಲ.
ದೇಶದ ಹಿತ, ಸಮಾಜದ ಹಿತ ಬಯಸುವ ಶಿಕ್ಷಕರು ಸಣ್ಣ ತಪ್ಪು ಮಾಡಿದರೂ ಅದು ದೊಡ್ಡದಾಗಿ ಕಾಣುವುದು ಅವರ
ಮೇಲಿನ ಗೌರವದಿಂದಲೇ ಹೊರತು ಬೇರೆ ಏನೂ ಅಲ್ಲ. ಹಾಗಾಗಿ ಶಿಕ್ಷಕರು ಅದೂ ಕೈತುಂಬ ಸಂಬಳ ಪಡೆಯುವ ಈ ಕಾಲಘಟ್ಟದಲ್ಲಿ
ಯಾವುದೇ ಎಂಜಲಿಗೆ ಕೈಯೊಡ್ಡುವ, ಅದನ್ನು ‘ಮಹಾಪ್ರಸಾದ’ವೆಂದು ಸ್ವೀಕರಿಸಿ, ಸವಿಯುವ ಹಂತಕ್ಕೆ ಇಳಿಯಬಾರದು.
ಇಂತಹ ಹೇಸಿಗೆಹಣ ಸ್ವೀಕರಿಸುವ ಕೆಲಸ ಮಾಡುವ ಶಿಕ್ಷಕರು ತರಗತಿಯಲ್ಲಿ ಬಸವಣ್ಣನವರ ‘ಪರಧನವನೊಲ್ಲೆ,
ಪರಸತಿಯನೊಲ್ಲೆ’ ಎಂಬ ವಚನವನ್ನು ತಲೆಯೆತ್ತಿ ಮಕ್ಕಳ ಮುಖನೋಡಿ ಧೈರ್ಯದಿಂದ ಹೇಗೆ ಪಾಠಮಾಡಲು ಸಾಧ್ಯವಾಗುತ್ತದೆ.
ಮನಸ್ಸಿನೊಳಗೇ ವಚನವನ್ನು ‘ಪರಧನವ ಬಲ್ಲೆ; ಪರಸತಿಯನೂ ಬಲ್ಲೆ ಎಂದು ತಿದ್ದಿಕೊಳ್ಳಬೇಕಾಗುತ್ತದೆ ಅಷ್ಟೆ!
ಇಂತಹ ದಯನೀಯ ಸ್ಥಿತಿ ಯಾವ ಶಿಕ್ಷಕರಿಗೂ ಬರದಿರಲಿ.
ಯಾರಾದರೂ
`ನೀನು ಕೊಳಚೆಗುಂಡಿಯಲ್ಲಿ ಬಿದ್ದಿದ್ದೀಯಾ’ ಎಂದರೆ ಅದನ್ನು ಪರಿಶೀಲಿಸಿಕೊಂಡು ಸರಿಯಾಗಿದ್ದರೆ ಕೊಳಚೆಗುಂಡಿಯಿಂದ
ಮೇಲೆ ಬರುವುದರಕಡೆಗೆ ನಮ್ಮ ಗಮನ ಹರಿಯಬೇಕೆ ಹೊರತು ‘ನಾನೊಬ್ಬನೆ ಬಿದ್ದಿದ್ದೀನಾ. ನೋಡಿಲ್ಲಿ ಎಷ್ಟೊಂದು
ಜನ ಇದ್ದಾರೆ ಎಂದು ಕೊಳಚೆಗುಂಡಿಯಲ್ಲಿ ತನ್ನೊಂದಿಗೆ ಕುಣಿದುಸಂತೋಷಪಡುವವರನ್ನು ತೋರಿಸಿ ತನ್ನ ಕಾರ್ಯವನ್ನು
ಸಮರ್ಥಿಸಿಕೊಳ್ಳುವ ಕಡೆ ಗಮನ ಹರಿಸಬಾರದು. ಇದು ಶಿಕ್ಷಣದ ಅಭ್ಯುದಯದ ಕಡೆಗೆ ಇಡುವ ಬೆಲೆಯುಳ್ಳ ಹೆಜ್ಜೆ.
ಇಲ್ಲದೇ ಹೋದರೆ, ‘ಏರಿ ನೀರುಂಬುವೊಡೆ, ನಾರಿಯೇ ಮನೆಯಲ್ಲಿ ಕಳವುವೊಡೆ ಇನ್ಯಾರಿಗೆ ದೂರಲಯ್ಯ’ ಎಂಬ
ಅಸಹಾಯಕತೆಯ ಕತ್ತಲು ನಮ್ಮ ಸಮಾಜವನ್ನು ಆವರಿಸುತ್ತದೆ. ಹಾಗಾಗದಿರಲಿ.
ರಾಜೇಂದ್ರ
ಬುರಡಿಕಟ್ಟಿ
30 ಮೇ 2024