ಬಾಲದ ಮಾತಿಗೆ ಬೆಂಕಿಯ ಬಾವುಟ!
ಲೇಖಕಿ ವಿನಯಾ ವಕ್ಕುಂದ ಅವರು ಬಸವಣ್ಣನವರನ್ನು ಕುರಿತು ಆಡಿದರೆನ್ನಲಾದ ಮಾತು ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಫೇಸ್ಬುಕ್ಕಿನಲ್ಲಿ ಒಂದಿಷ್ಟು ಚರ್ಚೆಗೆ ಗ್ರಾಸವಾಗಿದೆ. ವಿದ್ವಾಂಸರೊಬ್ಬರು ನಮ್ಮ ಸಾಂಸ್ಕೃತಿಕ ನಾಯಕರನ್ನು ಕುರಿತು ಬಹುಜನ ಒಪ್ಪಿತ ಅಭಿಪ್ರಾಯಕ್ಕೆ ಭಿನ್ನವಾದ ಹೇಳಿಕೆಗಳನ್ನು ನೀಡಿದಾಗ ಇಂತಹ ಚರ್ಚೆ ಹುಟ್ಟಿಕೊಳ್ಳುವುದು ಹೊಸದೇನಲ್ಲ. ಆದರೆ ಇಂತಹ ಚರ್ಚೆಗಳು ಸರಿಯಾದ ದಿಕ್ಕಿನಲ್ಲಿ ಗೌರವಯುತ ಅಭಿಪ್ರಾಯ ವಿನಿಮಯದ ಮೂಲಕ ನಡೆದಾಗ ಅದರಿಂದ ಅನೇಕ ಸಾಹಿತ್ಯಕ ಸಾಮಾಜಿಕ ಲಾಭಗಳಾಗುತ್ತವೆ. ಆದರೆ ಈ ಚರ್ಚೆಗಳು ಹಾದಿಬಿಟ್ಟಾಗ ಯಾವುದೇ ಜ್ಞಾನವನ್ನು ಸೃಷ್ಟಿಸಲಾರದೆ ಮಾತುಗಳು ಬೀದಿಬೈಗುಳಗಳ ಮಟ್ಟಕ್ಕೆ ಇಳಿದುಬಿಡುತ್ತವೆ. ಹಿಂದಿನ ಅನೇಕ ಉದಾಹರಣೆಗಳಂತೆ ವಿನಯಾ ಅವರ ಮಾತು ಹುಟ್ಟಿಸಿದ ಚರ್ಚೆ ಕೂಡ ಹೀಗೆ ಬೀದಿಬೈಗುಳಗಳ ಮಟ್ಟಕ್ಕೆ ಇಳಿದಿರುವುದು ಒಂದು ಕೆಟ್ಟಬೆಳವಣಿಗೆಯಲ್ಲದಿದ್ದರೂ ಒಳ್ಳೆಯ ಲಕ್ಷಣವಂತೂ ಅಲ್ಲ.
ಈ ಮೊದಲೇ ಹೇಳಿದಂತೆ
ವಿದ್ವಾಂಸರೊಬ್ಬರು ಸಾಂದರ್ಭಿಕವಾಗಿ ಯಾವುದೋ ಗೋಷ್ಠಿಯಲ್ಲೋ ಭಾಷಣದಲ್ಲೋ ಆಡುವ ಮಾತುಗಳು ಹೀಗೆ ಚರ್ಚೆಯನ್ನು ಹುಟ್ಟುಹಾಕುವುದು ಮತ್ತು ಈ ಚರ್ಚೆಗಳು ಸಂವಾದಗಳಾಗದೇ ವಿವಾದಗಳಾಗುವುದು ಮತ್ತು ಏನನ್ನೂ ಸಾಧಿಸಲಾರದೆ ಕೊನೆಗೆ ತಣ್ಣಗಾಗುವುದು ಕನ್ನಡಕ್ಕೆ ಇದೇ ಹೊಸತೇನೂ ಅಲ್ಲ. ಕೆಲವನ್ನು ಸಾಂದರ್ಭಿಕವಾಗಿ
ಸುಮ್ಮನೆ ನೆನಪು ಮಾಡಿಕೊಳ್ಳಬಹುದು.
ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ಇರಬಹುದು. ಕುಪ್ಪಳಿಯಲ್ಲಿ ರಾಜ್ಯದ ಮಹಿಳಾ ಲೇಖಕಿಯರನೇಕರು ಕುವೆಂಪು ಸಾಹಿತ್ಯವನ್ನು ಕುರಿತ ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಂಡು ತಮ್ಮ ತಮ್ಮ ಪ್ರಬಂಧಗಳನ್ನು ಮಂಡಿಸಿದರು. ಆಗ ವಿಜಯಪುರ ಮಹಿಳಾ ವಿ.ವಿ.ಯ ಪ್ರಾಧ್ಯಾಪಕರಾಗಿದ್ದ ಡಾ. ವಿಜಯಾದೇವಿ ಅವರು, “ನಾವು ನಾಡಗೀತೆಯಾಗಿ ಸ್ವೀಕರಿಸಿರುವ ಕುವೆಂಪು ಅವರ ಗೀತೆಯಲ್ಲಿ ಅಷ್ಟೊಂದು ಮಹಾವ್ಯಕ್ತಿಗಳು ಹೆಸರಿವೆಯಲ್ಲ; ಅವುಗಳಲ್ಲಿ ಒಬ್ಬರಾದರೂ ಮಹಿಳೆಯ ಹೆಸರು ಇಲ್ಲವಲ್ಲ. ಅಂತಹ ಸಾಧನೆಯನ್ನು ನಮ್ಮ ಮಹಿಳೆಯರು ಯಾರೂ ಮಾಡಲೇ ಇಲ್ಲವೇ?” ಎಂಬ ಪ್ರಶ್ನೆಯೊಂದನ್ನು ಎತ್ತಿದರು. ನಾನು ಅದು ಮುಖ್ಯವಾದ ಪ್ರಶ್ನೆ ಎನಿಸಿ ಪತ್ರಿಕೆಗೆ ಆ ಮಾತನ್ನು ಒತ್ತುಕೊಟ್ಟು ಬರೆದು ಸುದ್ಧಿ ಕಳಿಸಿದ್ದೆ. ಅದು ಪ್ರಕಟವಾಗಿ ಒಂದಿಷ್ಟು ಚರ್ಚೆ ಹುಟ್ಟುಹಾಕಿತ್ತು. ಕುವೆಂಪು ಅವರು ಸ್ರೀಯರಿಗೆ ಎಷ್ಟು ಗೌರವ ಕೊಟ್ಟಿದ್ದರು ಎಂಬುದಕ್ಕೆ ʼಹೇಮಿಯ ಗಂಡʼ ಪದಪುಂಜವನ್ನು ಉದಾಹರಿಸಿ ದೊಡ್ಡ ಮಹಿಳಾ ಲೇಖಕಿಯೊಬ್ಬರು ಅವರು ವಿಜಯಾದೇವಿಯವರ ಅಭಿಪ್ರಾಯವನ್ನು ತಳ್ಳಿಹಾಕಿದರು. ಕೊನೆಗೆ ಒಂದಿಷ್ಟು ಜನ ಆ ಕಡೆ ಇನ್ನೊಂದಿಷ್ಟು ಜನ ಈ ಕಡೆಗೆ ತಾಳ ಬಾರಿಸಿ ಕೊನೆಗೆ ಭಜನೆ ಮುಗಿಯಿತು!
ಇನ್ನೊಂದು ಸಲ ಇದೇ ಕುವೆಂಪು ಅವರ ಸಾಹಿತ್ಯವನ್ನು ಕುರಿತು ಮಾತನಾಡುತ್ತಾ ವಿಮರ್ಶಕಿ ಎಂ.ಎಸ್. ಆಶಾದೇವಿ, ಅವರ ಎಲ್ಲ ಬಗೆಯ ಸಾಧನೆಗಳನ್ನೂ ಹೇಳಿ, ಕೊನೆಯಲ್ಲಿ ʼಒಟ್ಟಾರೆಯಾಗಿ ಹೇಳುವುದಾದರೆ ಕುವೆಂಪು ಸಾಹಿತ್ಯದಲ್ಲಿ ಹೊಸ ಹೆಣ್ಣೊಬ್ಬಳ ಉದಯ ಆಗುವುದಿಲ್ಲ.” ಎಂದರು. ಇದಕ್ಕೂ ಕೂಡ ಅದೇ ʼಹೇಮಿಯ ಗಂಡʼ ಎಂದಾಗ ಸ್ವರ್ಗದ ಬಾಗಿಲು ತೆರೆದದ್ದು, ಕುವೆಂಪು ಅವರು ಎರಡೂ ಕಾದಂಬರಿಗಳಿಗೆ ಹೆಣ್ಣಿನ ಹೆಸರನ್ನೇ ಇಟ್ಟದ್ದೂ, ಯಾವ ಕವಿಯೂ ಬರೆಯಲಾಗದಷ್ಟು ಅಂದರೆ ಮೂರು ಕವನ ಸಂಕಲನಗಳನ್ನು ಗಂಡು ಹೆಣ್ಣಿನ ಪ್ರೇಮವನ್ನು ಕುರಿತೇ ಬರೆದದ್ದು ಇವು ಮುಂದೆ ಬಂದು ಚರ್ಚೆಯನ್ನು ಮುಂದುವರೆಸದೆ
ಮೇಲಿನಂತೆಯೇ ಆಕಡೆ ಒಂದಿಷ್ಟು ಈ ಕಡೆ ಒಂದಿಷ್ಟು ತಾಳ ಬಾರಿಸುವ ಕೆಲಸವಾಗಿ ಭಜನೆ ಸಮಾಪ್ತಿಯಾಯಿತು.
ಇಂತಹ ಹತ್ತು ಹಲವು ಉದಾಹರಣೆಗಳನ್ನು ಕೊಡಬಹುದಾದರೂ ಇನ್ನೊಂದು ಉದಾಹರಣೆಯನ್ನು ನೀಡಿ ಮುಂದೆ ಹೋಗುತ್ತೇನೆ. ವೀರಪ್ಪ ಮೊಯ್ಲಿಯವರು ಒಂದು ಸಲ ವೇದಿಕೆಯೊಂದರ ಮೇಲೆ ಮಾತನಾಡುತ್ತಾ ಕನ್ನಡ ವಿಶ್ವವಿದ್ಯಾಲಯದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅದನ್ನು ಯಾವ ಘನ ಉದ್ದೇಶದಿಂದ (ಅವರು ಮುಖ್ಯಮಂತಿಯಾಗಿದ್ದಾಗ) ಸ್ಥಾಪಿಸಲಾಗಿತ್ತೋ ಆ ಉದ್ದೇಶವನ್ನು ಈಡೇರಿಸುವ ಕೆಲಸವನ್ನು ಅದು ಮಾಡುತ್ತಿಲ್ಲವೆಂಬುದನ್ನು ಹೇಳುತ್ತಾ ಕೊನೆಯಲ್ಲಿ, “ಇಂತಹ ಕೆಲಸಗಳನ್ನು ಮಾಡಲು ಆಗದಿದ್ದರೆ ಆ ವಿಶ್ವವಿದ್ಯಾಲಯವನ್ನು ಇಟ್ಟುಕೊಂಡಾದರೂ ಏನು ಪ್ರಯೋಜನ ಅದನ್ನು ಮುಚ್ಚಿಬಿಡುವುದೇ ಒಳ್ಳೆಯದು” ಎಂದು ಹೇಳಿದರು. ಮರುದಿನ ಅವರು ಆಡಿದ ಮಾತಿನ ಆಶಯವನ್ನು ಅರ್ಥಮಾಡಿಕೊಳ್ಳದ, ಮತ್ತು ಅವರ ಮಾತುಗಳ ವಾಚ್ಯಾರ್ಥವನ್ನು ಮಾತ್ರ ಗ್ರಹಿಸಲು ಸಾಧ್ಯವಾದ ಪತ್ರಿಕೆಯೊಂದು ʻಕನ್ನಡ ವಿಶ್ವವಿದ್ಯಾಲಯವನ್ನು ಮುಚ್ಚಲು ಮೊಯ್ಲಿ ಕರೆʼ ಎಂಬ ತಲೆಬರೆಹವನ್ನು ಕೊಟ್ಟು ಸುದ್ಧಿಯೊಂದನ್ನು ಪ್ರಕಟಿಸಿತು! ಇದೂ ಒಂದಿಷ್ಟು ವಿವಾದವನ್ನು ಹುಟ್ಟುಹಾಕಿತು. ಕೊನೆಗೆ ಆಗಿನ ಕನ್ನಡ ವಿವಿಯ ಕುಲಪತಿ, ಪತ್ರಿಕಾ ಹೇಳಿಕೆಯೊಂದನ್ನು ನೀಡಿ, ಕನ್ನಡ ವಿಶ್ವವಿದ್ಯಾಲಯ ಏನೇನು ಒಳ್ಳೆಯ ಕೆಲಸವನ್ನು ಮಾಡುತ್ತಿದೆ ಎಂಬುದನ್ನೆಲ್ಲ ಹೇಳಿ, “ಮೊಯ್ಲಿಯವರು ವಿವಿಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನವಿದ್ದರೆ ನನಗೆ ಹೇಳಿ ಮಾಡಬಹುದಾದ ಒಳ್ಳೆಯ ಕೆಲಸಗಳ ಬಗ್ಗೆ ನಮಗೆ ಸಲಹೆ ಕೊಡಬಹುದಿತ್ತು” ಎಂದು ಹೇಳಬೇಕಾಯಿತು!
ಇಂತದ್ದೇ ಈಗ ವಿನಯಾ ಅವರ ಮಾತಿಗೂ ಆಗಿದೆ. ಚರ್ಚೆಗೆ ಗ್ರಾಸವಾದ ಮೇಲಿನ ಯಾವ ಮಾತುಗಳೂ ಕೂಡ ಯಾರನ್ನು ಅಥವಾ ಯಾವುದನ್ನು ಕುರಿತು ಅವರು ಆಡಿದ್ದಾರೋ ಅವರನ್ನು ಅಥವಾ ಅದನ್ನು ಅಗೌರವಿಸುವ, ಅವಮಾನಿಸುವ, ಅನುಮಾನಿಸುವ, ಕುಹಕವಾಡುವ ಯಾವುದೇ ರೀತಿಯ ನಕಾರಾತ್ಮಕ ಉದ್ದೇಶವನ್ನು ಹೊಂದಿರುವಂಥವುಗಳಲ್ಲ. ಈ ಎಲ್ಲ ಮಾತುಗಳು ಆ ವ್ಯಕ್ತಿ ಅಥವಾ ಸಂಸ್ಥೆಯ ಬಗ್ಗೆ ಹೇಳಬಹುದಾದ ಒಳ್ಳೆಯ ಅಂಶಗಳನ್ನೆಲ್ಲ ಹೇಳಿ ಅಲ್ಲಿರುವ ಒಂದಿಷ್ಟು ಕೊರತೆಗಳನ್ನೂ ಗುರುತಿಸಿ ಅವೂ ಸರಿಯಿರಬೇಕಾಗಿತ್ತುʼ ಎಂಬ ಸದಾಶಯದಿಂದ ಆಡಿದ ಮಾತುಗಳು. ಹೀಗೆ ಸದಾಶಯದಿಂದ ಆಡುವ ಮಾತುಗಳು ಒಂದು ರೀತಿಯ ಹಗಲುಕಾಯಿ ಪಲ್ಯದಂತೆ ಇರುತ್ತವೆ. ಅವಕ್ಕೆ ಕಹಿಗುಣ ಸ್ವಾಭಾವಿಕವಾಗಿ ಇರುತ್ತದೆ. ಆದರೆ ʼಕಹಿʼ ಮತ್ತು ʻವಿಷʼ ಇವೆರಡರ ಸೂಕ್ಷ್ಮ ವ್ಯತ್ಯಾಸವನ್ನು ಗ್ರಹಿಸಲು ನಮಗೆ ಸಾಧ್ಯವಾಗದಿದ್ದಾಗ ಸ್ವಾಭಾವಿಕವಾಗಿ ʼಹಗಲಕಾಯಿ ಪಲ್ಯ ತುಂಬಾ ವಿಷʼ ಅಂದು ಬಿಡುತ್ತೇವೆ. ಇಲ್ಲಿ ಆದದ್ದೂ ಅದೇ.
ಹೀಗೆ ಸದಾಶಯದಿಂದ ಆಡುವ ಕಹಿಮಾತುಗಳು ಸ್ವಾಭಾವಿಕವಾಗಿ ಭಾಷಣಕಾರನ ಮಾತಿನ ಕೊನೆಯಲ್ಲಿ ಬರುವುದೇ ಹೆಚ್ಚು. ಹೀಗಾಗಿ ಇವಕ್ಕೆ ʼಬಾಲದ ಮಾತುಗಳುʼ ಎಂದು ಕರೆಯಬಹುದು. ಸ್ವಾಭಾವಿಕವಾಗಿ ಈ ಬಾಲದ ಮಾತುಗಳು ನಮ್ಮ ಹತಾಶೆಯ ಅಭಿವ್ಯಕ್ತಿಯಾಗಿ ಬರುವುದು ಹೆಚ್ಚು. ಅಂದರೆ ಯಾವುದೋ ಒಂದು ಆಗಲೇಬೇಕಾದ ಕೆಲಸ ಆಗಬೇಕಿತ್ತು ಆದರೆ ಆಗಲಿಲ್ಲʼ ಎಂಬ ನೋವು ನಮ್ಮನ್ನು ಇಂತಹ ಮಾತುಗಳನ್ನು ಆಡಲು ಹಚ್ಚುತ್ತದೆ. ಇದು ತಪ್ಪಲ್ಲ. ಅಂತಹ ಹತಾಶೆಯ ಮಾತುಗಳು ನಮ್ಮ ಓದು ಮತ್ತು ಕಾರ್ಯವನ್ನು ನಾವು ಪುನರ್ ವಿಮರ್ಶೆಗೆ ಒಳಪಡಿಸಲು ಅಡಿಗಲ್ಲು ಹಾಕುತ್ತವೆ. ಆದ್ದರಿಂದ ಇಂತಹ ಮಾತುಗಳನ್ನು ನಾವು ಬಹಳ ಗೌರವದಿಂದ ಆಲಿಸಬೇಕು ಮತ್ತು ಸಮಸ್ಯೆಯನ್ನು ಹೊಸ ಆಯಾಮದಿಂದ ನೋಡುವುದನ್ನು ಕಲಿಯಬೇಕು. ಅದನ್ನು ಬಿಟ್ಟು ಈ ಬಾಲದ ಮಾತುಗಳಿಗೆ ಬೆಂಕಿಯ ಬಾವುಟಗಳನ್ನು ಕಟ್ಟುವ ಕೆಲಸವನ್ನು ಯಾರೂ ಮಾಡಬಾರದು. ಅನಗತ್ಯವಾಗಿ ನಾವು ಭಾವೋದ್ರೇಕಕ್ಕೆ ಒಳಗಾಗಿ ಪ್ರತಿಕ್ರಿಯೆ ನೀಡುವುದರಿಂದ ಸಂವಾದವಾಗಬೇಕಾದ ಅಂಶಗಳೆಲ್ಲ ವಿವಾದದ ಸ್ವರೂಪ ತಾಳುತ್ತವೆ. ಇದರಿಂದ ವ್ಯಕ್ತಿಗತವಾಗಿಯಾಗಲಿ ಸಾಮಾಜಿಕವಾಗಿಯಗಲೀ ಯಾರಿಗೂ ಎಳ್ಳಷ್ಟೂ ಲಾಭವಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.
ಈಗ ವಿನಯಾ ಅವರು ಆಡಿದ ಮಾತಿಗೆ ಬರೋಣ. ಅವರು ಹೇಳಿದ್ದಾದರೂ ಏನು? ಪತ್ರಿಕೆಯಲ್ಲಿ ನಾನು ಓದಿದ ವರದಿಯನ್ನು ಆದರಿಸಿ ಹೇಳುವುದಾದರೆ, “ಬಸವಣ್ಣನವರಂಥವರಿಗೂ ಪುರುಷ ಅಹಂಕಾರದಿಂದ ಹೊರಬರಲು ಆಗಿರಲಿಲ್ಲ” ಎಂದಿದ್ದಾರೆ. ಅವರು ಆಡಿದ ಮಾತು ಪತ್ರಿಕೆಯಲ್ಲಿ ವರದಿಯಾದಂತೆ ಇದೇ ಆಗಿದ್ದರೆ ಇದರಲ್ಲಿ ಅಪರಾಧವೇನೂ ನನಗೆ ಕಾಣಲಿಲ್ಲ. ನಾನು ಇದುವರೆಗೂ ಲಭ್ಯವಾಗಿರುವ ಬಸವಣ್ಣನವರ ಎಲ್ಲ ವಚನಗಳನ್ನು ಒಂದೆರಡು ಸಲವಾದರೂ ಓದಿದ್ದೇನೆ. ಆದರೆ ವಿನಯಾ ಅವರ ಈ ಮಾತನ್ನು ಓದಿದ ಮೇಲೆ ನನಗೆ ಅವರ ಮೇಲೆ ಸಿಟ್ಟು ಬರಲಿಲ್ಲ; ಬದಲಾಗಿ ಬಸವಣ್ಣನವ ಎಲ್ಲ ವಚನಗಳನ್ನೂ ಅವರ ಮಾತಿನ ಹಿನ್ನಲೆಯಲ್ಲಿ ಇನ್ನೊಮ್ಮೆ ಓದಿನೋಡಬೇಕು; ಅವರ ಮಾತಿನ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಿ ಪರಿಶೀಲಿಸಿಕೊಳ್ಳಬೇಕು ಅನ್ನಿಸಿತು. ಬಹುಶಃ ವಿದ್ಯಾವಂತರಾದವರು, ಅಥವಾ ಹಾಗೆ ಅನ್ನಿಸಿಕೊಂಡವರು ಮಾಡಬೇಕಾದದ್ದು ಇಂಥದ್ದನ್ನು ಎಂದು ನನಗೆ ಅನ್ನಿಸುತ್ತದೆ.
ಅವರ ಮಾತಿನಲ್ಲಿ ಬಳಸಿದ , ʻಬಸವಣ್ಣನವರಂಥವರಿಗೂʼ ಎಂಬ ಪದಪುಂಜವನ್ನೇ ಭಾಷೆಯ ದೃಷ್ಟಿಯಿಂದ ಸೂಕ್ಷ್ಮವಾಗಿ ಗಮನಿಸಿದರೆ,
ಬಸವಣ್ಣ ಒಬ್ಬ ಗೌರವಕ್ಕೆ ಅರ್ಹವಾದ ಮಹಾನ್ ವ್ಯಕ್ತಿ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಇಲ್ಲದೇ ಹೋಗಿದ್ದರೆ ಭಾಷಾ ಪ್ರಯೋಗದಲ್ಲಿ ಕೊನೆಯ ಅಕ್ಷರಕ್ಕೆ ಒತ್ತು ಬೀಳದೆ, ಸಾಮಾನ್ಯವಾಗಿ, ʻಬಸವಣ್ಣನಂಥವಿರಗೆʼ ಎಂದಾಗಿಬಿಡುತ್ತಿತ್ತು. ಹೀಗೆ ಕರ್ನಾಟಕದ ಸಮಾಜೋಧಾರ್ಮಿಕ ಪರಿಸರವನ್ನು ಬಹುವಾಗಿ ಪ್ರಭಾವಿಸಿದ ಒಬ್ಬ ಮಹಾನ್ ವ್ಯಕ್ತಿಯ ಬಗ್ಗೆ ಇಟ್ಟುಕೊಳ್ಳಬೇಕಾದ ಎಲ್ಲ ಗೌರವವನ್ನೂ ಇಟ್ಟುಕೊಂಡು, ಅವರ ಸಾಧನೆಗಳನ್ನು ಚರ್ಚಿಸಿ, ತಮ್ಮ ಓದಿನ ಪರಿಮಿತಿಯಲ್ಲಿ ಕಂಡುಬಂದ ಅವರ ವ್ಯಕ್ತಿತ್ವದ ಕೊರತೆ ಎನ್ನಿಸಬಹುದಾದ ಒಂದೆರಡು ಅಂಶಗಳನ್ನು ಅವರು ಹೇಳಿದರೆ ಅದರಲ್ಲಿ ತಪ್ಪೇನು? ವಿದ್ವಾಂಸರ ಕೆಲಸ ಸಾಮಾನ್ಯ ಜನರನ್ನು ವಿಚಾರಶೀಲರನ್ನಾಗಿ ಮಾಡುವುದೇ ಹೊರತು, ಭಜನೆ ಮಾಡಿಸುವಂಥದ್ದಲ್ಲ. ಹಾಗಾಗಿ ವಿನಯಾ ಅವರು ಆ ಕೆಲಸವನ್ನು ಸರಿಯಾಗಿಯೇ ಮಾಡಿದ್ದಾರೆ.
ಅಷ್ಟಕ್ಕೂ ವಿನಯಾ ಅವರ ಮಾತು ಈ ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪೇನೂ ಅಲ್ಲ. ಹಾಗಂತ ಅವರೂ ಹೇಳಿಕೊಂಡಿಲ್ಲ. ಅವರ ಓದಿನ ಅಭಿಪ್ರಾಯವನ್ನು ಅವರು ಹೇಳಿದ್ದಾರೆ ಅಷ್ಟೆ. ಅದನ್ನು ಒಪ್ಪುವ ಅಥವಾ ಬಿಡುವ ಎಲ್ಲ ಸ್ವಾತಂತ್ರ್ಯವೂ ಎಲ್ಲರಿಗೂ ಇದ್ದೇ ಇದೆ.
ಆದರೆ ಅವರು ಅದನ್ನು ಹೇಳಬಾರದಿತ್ತು ಎಂದು ಹೇಳುವ ಸ್ವಾತಂತ್ರ್ಯ ಮಾತ್ರ ನಮಗ್ಯಾರಿಗೂ ಇಲ್ಲ. ಅವರ ಮಾತಿಗೆ ಹಲವರು ಹಲವು ರೀತಿಯಲ್ಲಿ ಸಹಜವಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ಮಾತನ್ನು ಬೆಂಬಲಿಸಿದವರು ಸಾಕಷ್ಟು ವೈಚಾರಿಕವಾಗಿ ಗೌರವದಿಂದ ಪ್ರತಿಕ್ರಿಯಿಸಿದ್ದಾರೆ. ಆದರೆ ಅವರ ಮಾತನ್ನು ಅಲ್ಲಗಳೆದವರು ಈ ಗೌರವವನ್ನು ಇಟ್ಟುಕೊಂಡಿರುವುದು ಕಂಡುಬಂದಿಲ್ಲ. ಏಕೆಂದರೆ ಇವರಲ್ಲಿ ಕೆಲವರು ಬಸವಣ್ಣನವರಂಥ ಜ್ಯೋತಿಪುರುಷನನ್ನು
ʼಜಾತಿನಾಯಕʼನನ್ನಾಗಿ ಸ್ವೀಕರಿಸಿದ ʻಜಾತಿಲಿಂಗಾಯತರು. (ಜ್ಯೋತಿಲಿಂಗಾಯತರಲ್ಲ!). ಇವರಲ್ಲಿ ಬಹಳಷ್ಟು
ಜನ ಸಾಮಾನ್ಯವಾಗಿ ಬಸವಣ್ಣನವರ ವಚನಗಳನ್ನು ಓದಿಕೊಂಡವರಲ್ಲ. ಬಹಳ ಎಂದರೆ ಯಾವುದಾದರೂ ಲಿಂಗಾಯತ ಸ್ವಾಮಿಗಳು ಆಶೀರ್ವಚನ ಮಾಡುವಾಗ ಹೇಳುವ ಒಂದೆರಡು ಜನಪ್ರಿಯ ವಚನಗಳ ಸಾಲುಗಳನ್ನು ಕೇಳಿರಬಹುದಾದಂಥವರು. ಇನ್ನು ಕೆಲವರು ಹಾಗೆ ಜಾತಿ ಲಿಂಗಾಯತರಲ್ಲದಿದ್ದರೂ ಬಸವಣ್ಣನನ್ನು ʻಪ್ರಶ್ನಾತೀತ ವ್ಯಕ್ತಿʼ ಎಂಬ ಹುಂಬತನದವರು. ಇವರ್ಯಾರಿಗೂ ಬಸವಣ್ಣನವರ ಬಗ್ಗೆ ಒಂದೇ ಒಂದು ʼಭಿನ್ನಮತʼದ ಮಾತನ್ನು ಸಹಿಸಲು ಆಗುವುದಿಲ್ಲ.
ಇನ್ನು ವಿನಯಾ
ಅವರ ಮಾತಿಗೆ ಭಿನ್ನಮತವನ್ನು ಎತ್ತಿದವರಲ್ಲಿ ಕೇವಲ ಇಂತಹ ʼಭಕ್ತರುʼ ಮಾತ್ರವಿರದೇ ವಚನಗಳನ್ನು ಓದಿಕೊಂಡ
ಕೆಲವು ಪ್ರತಿಭಾವಂತರೂ ಇದ್ದಾರೆ. ಅವರು ಒಂದಿಷ್ಟು ಗೌರವಯುತವಾಗಿ ಪ್ರತಿಕ್ರಿಯಿಸಿದಂತೆ ಕಂಡರೂ ಅವರ
ಮಾತು ಮತ್ತು ಲೇಖನಗಳ ಒಳಗೆ, ಲೇಖಕಿಯನ್ನು ಪ್ರತಿಬಂಧಿಸುವ ಅಥವಾ ನಿಂದಿಸುವ ಪದಪ್ರಯೋಗಗಳಾಗಿವೆ. ʼಅವರು
ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಲು ಬೇರೆ ವೇದಿಕೆಯನ್ನು ಬಳಸಿಕೊಳ್ಳಬಹುದಿತ್ತುʼ ಎಂದು ಒಬ್ಬರು
ಬರೆದರೆ, ಇನ್ನೊಬ್ಬರು ಅವರು ಭಾಷಣದ ಚಟಕ್ಕಾಗಿಯೋ ಪ್ರಸಿದ್ಧಿ ಪಡೆಯಲೆಂದೋ ಹೀಗೆ ಹೇಳಿದ್ದಾರೆʼ ಎಂದು
ಪ್ರತಿಕ್ರಿಯಿಸಿದ್ದಾರೆ. ಒಬ್ಬ ಸ್ನೇಹಿತರು ಅವರ ಈ ಮಾತನ್ನು ʼಸ್ತ್ರೀ ಅಹಂಕಾರʼ ಎಂದು ಕರೆದಿದ್ದಾರೆ!
ಇವು ಯಾವೂ ಕೂಡ ಚರ್ಚೆಯನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸಲಾರವು. ಸುಮಾರು ಎರಡು ಸಾವಿರದಷ್ಟಿರುವ
ಬಸವಣ್ಣನವರ ವಚನಗಳಲ್ಲಿ ಕೆಲವು ವಚನಗಳನ್ನು ಆಧಾರವಾಗಿಟ್ಟುಕೊಂಡು ಅವರು ವಿನಯಾ ಹೇಳಿದಂತೆ ಪುರುಷ
ಅಹಂಕಾರವನ್ನು ಬಿಟ್ಟಿರಲಿಲ್ಲ ಎಂಬುದನ್ನು ವಾದಿಸುವುದಾಗಲೀ ಇನ್ನೊಂದಿಷ್ಟು ವಚನಗಳನ್ನು ಆಧಾರವಾಗಿಟ್ಟುಕೊಂಡು
ಅವರು ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾವ್ಯಕ್ತಿ ಎಂದು ವಾದಿಸಿ ಸಾಧಿಸಿ ತೋರಿಸುವುದು ಯಾರಿಗೂ
ಕಷ್ಟವಾಗಲಿಕ್ಕಿಲ್ಲ. ನಾವಾಡುವ ಮಾತು ಚಿಕ್ಕದ್ದೇ
ಇರಬಹುದು. ಆದರೆ ಅದಕ್ಕೆ ವ್ಯಾಪಕ ಓದಿನ ಹಿನ್ನಲೆ ಇರಬೇಕಾಗುತ್ತದೆ. ಬಸವಣ್ಣನವರ ಇಡೀ ವಚನಗಳನ್ನು
ಓದಿ ಒಟ್ಟಾರೆ ವಚನಗಳ ಧ್ವನಿ ಈ ಹಿನ್ನಲೆಯಲ್ಲಿ ಏನು ಎಂಬುದನ್ನು ಗುರುತಿಸಿಕೊಂಡಾಗ ಮಾತ್ರ ಇಂತಹ ಹೇಳಿಕೆಗಳು
ಶಕ್ತಿಯುತವಾಗುತ್ತವೆ. ಇಲ್ಲದೇ ಹೋದರೆ ಮೊದಲೇ ಹೇಳಿದಂತೆ ಬೀದಿಬೈಗುಳಗಳಾಗಿ ಬಿಡುತ್ತವೆ.
ಇನ್ನು ವಿನಯಾ
ಅವರ ಬಗ್ಗೆ ಒಂದೆರಡು ಮಾತು ಹೇಳದೇ ಹೋದರೆ ಈ ಲೇಖನ ಅಪೂರ್ಣ ಅನ್ನಿಸೀತು. ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ
ಸ್ನೇಹಿತರೊಬ್ಬರು ಅವರ ಈ ನಯನ್ನು ʼಸ್ತ್ರೀ ಅಹಂಕಾರʼ ಎಂದು ಕರೆದಿದ್ದಾರೆ. ಹೀಗೆ ಕರೆಯುವಾಗ ಅವರು
ವಿನಯಾ ಅವರ ಎಷ್ಟು ಲೇಖನಗಳನ್ನು ಓದಿದ್ದಾರೋ ಅಥವಾ ಎಷ್ಟು ಭಾಷಣಗಳನ್ನು ಕೇಳಿದ್ದಾರೋ ಗೊತ್ತಿಲ್ಲ.
ಕೇವಲ ಅವರ ಈ ಒಂದು ಹೇಳಿಕೆಯಿಂದಲೇ ಅವರ ವ್ಯಕ್ತಿತ್ವವನ್ನು ಅಳೆದು ತೂಗಿ ಅವರಿಗೆ ಬಿರುದುಕೊಡಲು ಹೋಗುವುದು
ಸರಿಯಾದ ಕ್ರಮವಲ್ಲ. ನಾನು ಅವರ ಅನೇಕ ಬರೆಹಗಳನ್ನು ಓದಿದ್ದೇನೆ ಮತ್ತು ಭಾಷಣಗಳನ್ನು ಕೇಳಿದ್ದೇನೆ.
ಅದರ ಆಧಾರದ ಮೇಲೆ ಹೇಳುವುದಾದರೆ ಅವರ ಹೆಸರೇ ಹೇಳುವಂತೆ ಅವರು ʼವಿನಯಾʼನೇ. ಎಂತಹ ಪ್ರಖರ ಭಿನ್ನಾಭಿಪ್ರಾಯವೇ ಇದ್ದರೂ ಅದನ್ನು ಮಂಡಿಸುವಾಗ,
ತನ್ನೊಳಗಿನ ʼಉರಿʼಯನ್ನು ಹೊರಹಾಕುವಾಗ ಅವರು ಬಳಸಿಕೊಳ್ಳುವುದು ʼತಂಗಾಳಿಯ ಸೋಂಕುʼ ತೀಡುವ ಮಾರ್ಗವನ್ನೇ
ಹೊರತು ʼಬೆಂಕಿ ಬಿರುಗಾಳಿಯʼ ಮಾರ್ಗವನ್ನಲ್ಲ!
ಕೊನೆಯಲ್ಲಿ ಒಂದು ಮಾತು. ಹಿರಿಯ ವಿಮರ್ಶಕರಾದ ಡಾ ರಹಮತ್ ತರೀಕೆರೆ ಒಂದುಸಲ ಒಂದು ಮಾತು ಹೇಳುತ್ತಿದ್ದರು. “ನಮ್ಮ ಸಾಂಸ್ಕೃತಿಕ ನಾಯಕರನ್ನು ಆರಾಧಿಸುವುದಕ್ಕಿಂತ ಅವರೊಡನೆ ತಾತ್ವಿಕವಾದ ಪ್ರೀತಿಯ ಜಗಳವಾಡುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ.” ಎಂದು. ಅವರು ಕುವೆಂಪು ಅವರನ್ನು ಕುರಿತು ಮಾತನಾಡುವಾಗ ಈ ಮಾತು ಹೇಳಿದ್ದಾದರೂ ಇದು ಬುದ್ಧ, ಬಸವ, ಯೇಸು, ಪೈಗಂಬರ್ ಅಷ್ಟೇ ಏಕೆ ಅಂಬೇಡ್ಕರ್ ಹೀಗೆ ನಮ್ಮೆಲ್ಲ ಸಾಂಸ್ಕೃತಿ ನಾಯಕರ ವಿಷಯದಲ್ಲೂ ಅನ್ವಯಿಸುವಂಥದ್ದು. ಈ ಪ್ರೀತಿಯ ಜಗಳ ಆ ಸಾಂಸ್ಕೃತಿಕ ನಾಯಕರ ವ್ಯಕ್ತಿತ್ವವನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡುತ್ತದೆ. ಅವರ ಕೊಡುಗೆಗಳನ್ನು ನಮ್ಮ ಕಾಲಕ್ಕೆ ಪ್ರಸ್ತುತಗೊಳಿಸುವ ಮೂಲಕ ನಮ್ಮ ಸಂಸ್ಕೃತಿ ಸಮಾಜಗಳನ್ನು ಉದ್ಧರಿಸುತ್ತದೆ. ಇದರ ಬದಲು ನಾವು ಈ ನಾಯಕರ ಸುತ್ತ ಅಂಧಾಭಿಮಾನದ ಹುತ್ತಕಟ್ಟಿಕೊಂಡರೆ ನಾವು ಉಸಿರುಕಟ್ಟಿಕೊಂಡು ಸಾಯುವ ಅಪಾಯ ಇದ್ದೇ ಇರುತ್ತದೆ. ಅಷ್ಟೇ ಅಲ್ಲ ಆ ಮಹಾನ್ ನಾಯಕರ ವ್ಯಕ್ತಿತ್ವಕ್ಕೂ ಕಾಲಕಳೆದಂತೆ ಕಳಂಕ ಹಿಡಿಯುತ್ತದೆ ಮಾತ್ರವಲ್ಲ ನಮ್ಮ ಸಮಾಜ ಸಂಸ್ಕೃತಿಗೂ ಅವರ ಕೊಡುಗೆ ಅಪ್ರಸ್ತುತವಾಗುತ್ತಾ ಹೋಗುತ್ತದೆ. ಈ ಎಚ್ಚರ ನಮ್ಮೆಲ್ಲರಿಗೂ ಇರಬೇಕಾದದ್ದು ತೀರಾ ಅವಶ್ಯಕ.
ಡಾ. ರಾಜೇಂದ್ರ
ಬುರಡಿಕಟ್ಟಿ
೩೦-೧೦-೨೦೨೪