Tuesday, January 11, 2022

ವಿಕಾರಾನಂದರ ಕೈಯೊಳಗಿರುವ ವಿವೇಕಾನಂದ

'ವಿಕಾರಾನಂದ' ಕೈಯೊಳಗಿರುವ ವಿವೇಕಾನಂದ!

(ವಿವೇಕಾನಂದರ ಜನ್ಮದಿನ-ರಾಷ್ಟ್ರೀಯ ಯುವಜನೋತ್ಸವ ನಿಮಿತ್ತ ವಿಶೇಷ ಲೇಖನ)

ಜನವರಿ ಹನ್ನೆರಡು ವಿವೇಕಾನಂದರ ಜನ್ಮದಿನ. ಇದನ್ನು ರಾಷ್ಟ್ರೀಯ ಯುವದಿನವನ್ನಾಗಿ ಅನೇಕ ವರ್ಷಗಳಿಂದ ನಾವು ಆಚರಿಸುತ್ತಾ ಬರುತ್ತಿದ್ದೇವೆ. ಆಚರಣೆಯನ್ನು ನಾವು ವಿವೇಕಾನಂದರ ವಿಚಾರಗಳನ್ನು ತಿಳಿದುಕೊಳ್ಳಲು ಎಷ್ಟರಮಟ್ಟಿಗೆ ಬಳಸಿಕೊಂಡಿದ್ದೇವೆ ಎಂಬುದನ್ನು ತುಸು ಸೂಕ್ಷ್ಮವಾಗಿ ಪರಿಶೀಲಿಸಿದರೆ ನಿರಾಶೆಯಾಗುವುದು ಸಹಜ.

ವಿವೇಕಾನಂದರು ವಿಶ್ವವಿಖ್ಯಾತವಾದ ಚಿಕ್ಯಾಗೊ ಭಾಷಣಮಾಡಿ 125 ವರ್ಷಗಳು ತುಂಬಿದ ಪ್ರಯುಕ್ತ ಎರಡು ವರ್ಷಗಳ ಹಿಂದೆ ದೇಶಾದ್ಯಂತ ನಡೆದ ವಿಶೇಷ ಕಾರ್ಯಕ್ರಮದ ಸ್ವರೂಪವನ್ನು ನೆನಪಿಸಿಕೊಳ್ಳಿ. ಅದನ್ನು ಒಂದು ನೆಪವನ್ನಾಗಿ ಮಾಡಿಕೊಂಡು ನಮ್ಮ ಯುವಕರಿಗೆ ವಿವೇಕಾನಂದರ ವಿಚಾರಗಳನ್ನು ಎಷ್ಟೊಂದು ಪರಿಣಾಮಕಾರಿಯಾಗಿ ತಲುಪುವಂತೆ ಮಾಡಬಹುದಿತ್ತು. ಚಿಕ್ಕಮಕ್ಕಳು ಓದುವ ಪ್ರಾಥಮಿಕ ಪ್ರೌಢಶಾಲೆಗಳಲ್ಲಿ ಕಲಾವಿದರನ್ನು ಬಳಸಿಕೊಂಡು ವಿವೇಕಾನಂದರ ಬಹು ಪ್ರಸಿದ್ಧವಾದ ವೇಷದ ರೂಪದರ್ಶಿಗಳನ್ನು ರೂಪಿಸಿ ಅವರ ಶೈಲಿಯಲ್ಲಿಯೇ ಚಿಕ್ಕಚಿಕ್ಕ ಪ್ರವಚನ, ಭಾಷಣಗಳನ್ನು ಮಾಡಿಸಬಹುದಿತ್ತು ಇದರಿಂದ ಎಳೆಯ ಮಕ್ಕಳಲ್ಲಿ ವಿವೇಕಾನಂದರ ಚಿತ್ರ ಬಹಳಕಾಲ ಉಳಿಯುವಣತೆ ಮಾಡಬಹುದಿತ್ತು. ಇದು ಮುಂದೆ ಅವರೆಲ್ಲ ವಿವೇಕಾನಂದರನ್ನು ಓದಲು ಪ್ರೇರೇಪಣೆ ನೀಡುತ್ತಿತ್ತು. ಬುದ್ದಿ ಬೆಳೆದ ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿ ವಿವೇಕಾನಂದರ ಪ್ರಮುಖ ಬರೆಹಗಳನ್ನು ಸಂಗ್ರಹಿಸಿ ಮುದ್ರಿಸಿ ಉಚಿತವಾಗಿ ಅಥವಾ ಸುಲಭ ಬೆಲೆಗೆ ವಿದ್ಯಾರ್ಥಿಗಳಿಗೆ ಹಂಚಿ ಅವರೇ ಸ್ವತಃ ವಿವೇಕಾನಂದರನ್ನು ಓದುವಂತೆ ಮಾಡಬಹುದಿತ್ತು. ಅವರ ಭಾಷಣಗಳನ್ನು ಕಲಾವಿದರನ್ನು ಬಳಸಿಕೊಂಡು ಬಹುಮಾಧ್ಯಮದಲ್ಲಿ ನೋಡಲು, ಕೇಳಲು ಸಾಧ್ಯವಾಗುವಂತೆ ಪುನಃ ಸೃಷ್ಟಿಸಬಹುದಿತ್ತು.

ಅದರೆ ಆದದ್ದೇನು? ವಿವೇಕಾನಂದರ ಬರೆಹ ಮತ್ತು ಭಾಷಣಗಳನ್ನು ಎಷ್ಟೂ ಓದದಿದ್ದ ಮುಟ್ಠಾಳರೆಲ್ಲ ತಮಗಿರುವ ಸ್ಥಾನಮಾನದ ಕಾರಣದಿಂದ ರಾಷ್ಟ್ರದ ಯುವಜನಾಂಗದ ಬುದ್ಧಿವಿಕಾಸದ ಬಹುಮುಖ್ಯ ಸ್ಥಳಗಳಾದ ಕಾಲೇಜುಗಳಲ್ಲಿ ವೇದಿಕೆಗಳನ್ನು ಸೃಷ್ಟಿಸಿಕೊಂಡು, ಅವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು `ವಿವೇಕಾನಂದರು ಹಾಗೆ ಹೇಳಿದ್ದಾರೆ ಹೀಗೆ ಹೇಳಿದ್ದಾರೆಎಂದೆಲ್ಲ ಬೊಗಳೆ ಭಾಷಣ ಬಿಗಿದರು! ಮಾಧ್ಯಮದವರು ವಿವೇಕಾನಂದರ ಮಾತುಗಳಿಗಿಂತ ದೊಡ್ಡದಾಗಿ ಇವರು ಹೇಳಿದ `ಅವರಮಾತುಗಳನ್ನೇ ದೊಡ್ಡದೊಡ್ಡ ಅಕ್ಷರಗಳ ತೆಲೆಬರೆಹಕೊಟ್ಟು ವರದಿಮಾಡಿದರು. ಹೀಗೆ ಅಯೋಗ್ಯನೊಬ್ಬ ವೇದಿಕೆಯ ಮೇಲೆ ವಿವೇಕಾನಂದರು ಚಿಕ್ಯಾಗೋ ವಿಶ್ವಧರ್ಮ ಸಮ್ಮೇಳನಲ್ಲಿ ಹಾಗೆ ಹೇಳಿದರು. ಹೀಗೆ ಹೇಳಿದರು ಎಂದು ಭಾರೀ ವೀರಾವೇಶದಿಂದ ಮಾತನಾಡಿದ ವರದಿಯನ್ನು ನೋಡಿ ನನಗೆ ಅನುಮಾನ ಬಂದು ವಿವೇಕಾನಂದರ ಭಾಷಣವನ್ನು ತೆಗೆದು ನೋಡಿದೆ. ಅವನು ವಿವೇಕಾನಂದರು ಅಲ್ಲಿನ ಭಾಷಣದಲ್ಲಿ ಹೇಳಿದ್ದಾರೆಂದು ಹೇಳಿದ್ದ ಅಂಶಗಳಲ್ಲಿ ಶೇಕಡಾ ಹತ್ತೂ ಭಾಷಣದಲ್ಲಿ ಇರಲಿಲ್ಲ! `ವಿಕಾರಾನಂದನೇ ತನ್ನ ಮೈಮೇಲೆ `ವಿವೇಕಾನಂದರನ್ನು ಆವಾಹಿಸಿಕೊಂಡು ಎಂಥೆಂಥದೋ ಹೇಳಿದ್ದ!! ಪತ್ರಿಕೆಯವರೂ ಅವನು ಹೇಳಿದ್ದು ಸರಿಯೋ ತಪ್ಪೋ ಎಂದು ವಿಚಾರಮಾಡಿ ವರದಿಮಾಡುವು ಗೋಜಿಗೂ ಹೋಗಿರಲಿಲ್ಲ. ಇದು ಎಲ್ಲೋ ಒಂದು ಕಡೆ ಒಬ್ಬನಿಂದ ನಡೆದ ಸಂಗತಿಯಾಗಿದ್ದರೆ ಅದನ್ನು ಇಲ್ಲಿ ಉಲ್ಲೇಖಿಸುವ ಅವಶ್ಯಕತೆಯಿರಲಿಲ್ಲ. ಆದರೆ ಬಹುತೇಕ ವೇದಿಕೆಗಳಲ್ಲಿ ಆಗಿದ್ದು ಇದೇ ಆದ್ದರಿಂದ ಅದನ್ನಿಲ್ಲಿ ಉಲ್ಲೇಖಿಸಬೇಕಾಯಿತು.

ನಮ್ಮ ಯುವಜನಾಂಗಕ್ಕೆ ವಿವೇಕಾನಂದರ ವಿಚಾರಗಳನ್ನು ತಿಳಿಸುವ ಪ್ರಯತ್ನಗಳು ಹಿಂದೆಯೂ ಸರಿಯಾಗಿ ಆಗಿಲ್ಲವಾದ್ದರಿಂದ ಅಯೋಗ್ಯರ ಮಾತುಗಳಿಗೆ ಮರುಪ್ರಶ್ನೆಗಳನ್ನು ಎತ್ತಲು ವಿದ್ಯಾರ್ಥಿಗಳಿಗೂ ಸಾಧ್ಯವಾಗಲಿಲ್ಲ. ಅವರೆಲ್ಲ ಅನಿವಾರ್ಯವಾಗಿ ಚೆಪ್ಪಾಳೆತಟ್ಟಿ ಸಿಳ್ಳೆಹಾಕಿ ಇವರನ್ನು ಬೀಳ್ಕೊಟ್ಟರು. ಅದು ಅವರ ತಪ್ಪಲ್ಲ. ರಾಜ್ಯದ ಕಾಲೇಜುಗಳಲ್ಲಿ `ವಿಕಾರಾನಂದರು ವಿವೇಕಾನಂದರನ್ನು ಕುರಿತು ಹೀಗೆ ಓದದೇ ದೊಡ್ಡದೊಡ್ಡ ಭಾಷಣಗಳನ್ನು ಚೀರಿ ಚೀರಿ ಮಾಡುತ್ತಿರುವ ಸಂದರ್ಭದಲ್ಲಿ ವಿವೇಕಾನಂದರ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಗೊತ್ತಾಗಿದ್ದು ಎರಡು ಅಂಶಗಳು. ಒಂದು ಅವರು ಅಮೇರಿಕೆಯ ಸರ್ವಧರ್ಮ ವೇದಿಕೆಯ ಮೇಲೆ ಅಮೇರಿಕೆಯ ಜನರನ್ನು ಉದ್ದೇಶಿಸಿ ಮಾತಿಗೆ ತೊಡಗುವ ಮೊದಲು ಸಭೆಯನ್ನುದ್ದೇಶಿಸಿ `ಅಮೇರಿಕೆಯ ನನ್ನ ಸಹೋದರ ಸಹೋದರಿಯರೇಎಂದಾಗ ಇಡೀ ಸಭೆ ಇಷ್ಟೋ ಹೊತ್ತು ಚಪ್ಪಾಳೆ ಹೊಡೆದು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದು. (ಅಲ್ಲಿ ಅವರು ಹೇಳುವಾಗ ಮೊದಲು ಸಿಸ್ಟರ್ಸ್ ಎಂದು ಆಮೇಲೆ ಬ್ರದರ್ಸ್ ಎಂದು ಅಂದರಂತೆ! ಆದರೆ ವೀರರು ಪುರುಷ ಪ್ರಧಾನ ವ್ಯವಸ್ಥೆಯ ವಾರಸುದಾರರಾದ್ದರಿಂದ ಕೊನೆಗಿದ್ದ ಬ್ರದರ್ಸ್ ಶಬ್ದವನ್ನು ಮೊದಲಿಗೇ ಹಾಕಿಕೊಂಡಿರಬೇಕು!). ಸಭೆ ಚಪ್ಪಾಳೆಹೊಡೆದ ಸಮಯವನ್ನು ಪ್ರತಿಯೊಬ್ಬ ಭಾಷಣಕಾರನೂ ಭಾವಾವೇಶದಿಂದ ಸಮಯ ಸಂದರ್ಭನೋಡಿ ಹಿಗ್ಗಿಸುತ್ತಾ ಹೋಗುತ್ತಿದ್ದದ್ದೂ ಉಂಟು!!

ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಮನದಟ್ಟಾದ ಇನ್ನೊಂದು ಅಂಶವೆಂದರೆ, `ಏಳಿ ಎದ್ದೇಳಿ ಗುರಿಮುಟ್ಟುವ ವರೆಗೂ ನಿಲ್ಲದಿರಿಎಂಬ ಅವರ ಜನಪ್ರಿಯ ಕರೆಹೇಳಿಕೆ. ವಿವೇಕಾನಂದರ ಹೇಳಿಕೆ ಒಂದು ಸ್ವತಂತ್ರ ಹೇಳಿಕೆ. ಕನ್ನಡ ಭಾಷೆಯಲ್ಲಿ `ಸರ್ವನಾಮಅಂಥ ಇವೆಯಲ್ಲ. ಅವುಗಳಂತೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ಬೇರೆ ಬೇರೆ ಅರ್ಥವನ್ನು ಕೊಡಬಲ್ಲ ಹೇಳಿಕೆ. ಹೇಳಿಕೆಯನ್ನು ನಾವು ಒಳ್ಳೆಯ ಕೆಲಸವನ್ನು ಮಾಡಲೂ ಚೋದಕ ಹೇಳಿಕೆಯನ್ನಾಗಿ ಬಳಸಿಕೊಳ್ಳಬಹುದು. ಹಾಗೇ ಬಾನಗಡಿ ಕೆಲಸಗಳನ್ನು ಮಾಡಲು ಕೂಡ! `ವಂದೇ ಮಾತರಂಎಂಬ ಘೋಷಣೆ ಸ್ವಾತಂತ್ರ ಹೋರಾಟ ಕಾಲದಲ್ಲಿ ಬ್ರಿಟೀಷರ ವಿರುದ್ಧ ಹೋರಾಡುವ ಭಾರತೀಯ ಹೋರಾಟಗಾರರಿಗೆ ಸ್ಪೂರ್ತಿ ನೀಡಿದಂತೆ, ಅದಕ್ಕೂ ಮೊದಲು ಬಂಗಾಲದಲ್ಲಿ ಮುಸ್ಲಿಮರನ್ನು ಹಿಂಸಿಸಲೂ ಸ್ಪೂರ್ತಿ ನೀಡಿದ್ದನ್ನು ಬಂಕಿಮ್ ಚಂದ್ರ ಚಟರ್ಜಿಯವರ `ಆನಂದಮಠಕಾದಂಬರಿ ತುಂಬಾ ಸೊಗಸಾಗಿ ವಿವರಿಸಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಹಾಗೇ ವಿವೇಕಾನಂದರ ಹೇಳಿಕೆಯನ್ನೂ ಇವರೆಲ್ಲ ಯಾವುದಕ್ಕೆ ಜನರನ್ನು ಹುರುದುಂಬಿಸಲು ಬಳಸಿಕೊಂಡರು ಮತ್ತು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.

ತಮ್ಮ ವಿಚಾರಗಳಿಂದ ಪ್ರಪಂಚದ ತತ್ವಶಾಸ್ತ್ರ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ ಅನೇಕ ಜ್ಯೋತಿಪುರುಷರನ್ನು ಜಾತಿನಾಯಕರನ್ನಾಗಿ ಮಾಡಿಕೊಂಡು ಜಾತಿಯ ಬಚ್ಚಲಿನಲ್ಲಿಯೇ ಒದ್ದಾಡುತ್ತಿರುವ ಸಮಾಜವೊಂದು ಅಲ್ಲಿಂದ ಹೊರಬರದೇ ಹೋದರೆ ಅದು ದಿನದಿನಕ್ಕೂ ಕೊಚ್ಚೆಯಲ್ಲಿ ಬಿದ್ದು ಕೊಳೆಯುತ್ತಾ ಹೋಗುವುದು ಸಹಜ. ಅಂತಹ ಸಮಾಜ ಮಹಾನ್ ನಾಯಕರನ್ನು `ತಮ್ಮವನೆಂದು ಪೂಜಿಸುವಲ್ಲಿಯೇ ನಿಂತುಬಿಡುತ್ತದೆಯೇ ಹೊರತು ಅವನ ಆಲೋಚನೆಗಳಿಂದ ಪ್ರೇರಣೆ ಪಡೆದು ಅವನ ವಿಚಾರಗಳನ್ನು ಅರಗಿಸಿಕೊಂಡು ಅವನ್ನು ಅನುಸರಿಸುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ ಅದು ನಿಂತಲ್ಲಿಯೇ ನಿಂತುಬಿಡುತ್ತದೆಯೇ ಹೊರತು ಮುಂದೆ ಹೋಗುವುದೇ ಇಲ್ಲ. ಅಂತಹ ಸಮಾಜಕ್ಕೆ ಇಂದು ಭಾರತವೂ ಉದಾಹರಣೆಯಾಗುತ್ತಿದೆ ಎಂಬುದನ್ನು ನಾವೆಲ್ಲ ಗಮನಿಸಬೇಕು.

ವಿವೇಕಾನಂದರನ್ನು ಇಂದು ಕೋಮುವಾದಿಗಳು ಮತ್ತು ವಿಚಿತ್ರ ರಾಷ್ಟ್ರವಾದಿಗಳು (ಒಳ್ಳೆಯವರಲ್ಲ) ತಮ್ಮ ಪಟ್ಟಭದ್ರ ಹಿತಾಸಕ್ತಿಯ ವಿಚಾರಗಳಿಗೆ ಆಚಾರಗಳಿಗೆ ಒತ್ತಾಸೆಯಾಗಿ ಬಳಸಿಕೊಳ್ಳುವ ಮೂಲಕ ಅವರನ್ನು ಅರಿಯುವ ಬದಲು ಆರಾಧಿಸಲು ಹುರುದುಂಬಿಸುತ್ತಿದ್ದಾರೆ. `ಕೋಮುವಾದಿಎಂಬ ಪದವೇ ಇಂದು ಎಷ್ಟು ಉದ್ರಿಕ್ತವಾಗಿದೆ ಎಂದರೆ ಅದನ್ನು ಯಾರ ಹೆಸರನ್ನು ಹೇಳದೇ ಸಾಮಾನ್ಯ ವಿಷಯ ವಿವರಣೆಗೆ ಬಳಸಿದರೂ ಕೆಲವರಿಗೆ ಸಿಟ್ಟು ಬರುತ್ತದೆ! ಅವರೊಳಗೆ ಒಬ್ಬ ಕೋಮುವಾದಿ ಇಲ್ಲದೇ ಹೋದರೆ ಸಿಟ್ಟು ಬರಲು ಕಾರಣವೇ ಇರುವುದಿಲ್ಲ!. ತಾವು ಹೀಗೆ ಕೋಮುವಾದಿಗಳಾದವರು ತಮ್ಮ ವಿಚಾರಕ್ಕೆ ತಕ್ಕಂತೆ ವಿವೇಕಾನಂದರನ್ನು ಬಳಸಿಕೊಳ್ಳುವ ಮೂಲಕ ನಾವು ವಿವೇಕಾನಂದರ ವಿಚಾರಧಾರೆಯಂತೆ ನಡೆಯುತ್ತಿದ್ದೇವೆ ಎಂಬ ಹುಸಿಭ್ರಮೆಯನ್ನು ಯುವಜನತೆಯಲ್ಲಿ ತುಂಬಲು ಹವಣಿಸುತ್ತಿದ್ದಾರೆ. ಮೂಲಕ ತಾವೂ ಘನಂಧಾರಿ ಕೆಲಸವೊಂದನ್ನು ಮಾಡುತ್ತಿರುವ ವ್ಯಕ್ತಿಗಳೆಂದುಕೊಂಡಿದ್ದಾರೆ. ಅದರೆ ಅದು ಎಲ್ಲಿಯವರೆಗೆ ನಡೆಯುತ್ತದೆ ಎಂದರೆ ವಿವೇಕಾನಂದರನ್ನು ನಮ್ಮ ಯುವಜನತೆ ತಾವೇ ಸ್ವತಃ ಓದಿಕೊಳ್ಳುವವರೆಗೆ. ಆವಾಗ ವಿವೇಕಾನಂದ ಇವರು ಹೇಳುವಂತೆ ನಿಜವಾಗಲೂ ಕೋಮುವಾದಿಯಾಗಿದ್ದರೇ ಅಥವಾ ವಿಶಾಲ ಹೃದಯಿಯಾಗಿದ್ದರೆ ಎಂಬುದು ಅರಿವಾಗಿ ಇಂಥವರ ಬೊಗಳೇ ಮಾತುಗಳಿಗೆ ವಿರಾಮ ಬೀಳುತ್ತದೆ.

ನಮ್ಮ ಯುವಕರು ಇಂತಹ ಖಾಲಿತಲೆಯ ವೀರಾವೇಷಿ ಭಾಷಣವೀರರ ಕೈಯಲ್ಲಿರುವ ವಿವೇಕಾನಂದರನ್ನು ಬಿಡಿಸಿಕೊಳ್ಳಬೇಕು. ಅವರ ಭಾಷಣಗಳಿಗೆ ಸಿಳ್ಳೇತಟ್ಟಿ ಚಪ್ಪಾಳೆಹಾಕುವುದನ್ನು ಬಿಟ್ಟು ತಾವೇ ವಿವೇಕಾನಂದರನ್ನು ಸ್ವತಃ ಓದಿಕೊಳ್ಳಬೇಕು. ಆಗ ಸ್ವಾಮಿ ವಿವೇಕಾನಂದರು ಹೇಳುವ `ಹಿಂದೂಧರ್ಮಮತ್ತು ಈಗ ಬಹುತೇಕ `ದೇಶಭಕ್ತರು ಪ್ರತಿಪಾದಿಸುವ `ಹಿಂದುತ್ವಇವುಗಳ ನಡುವೆ ಇರುವ ಸಾಗರದಷ್ಟು ಅಂತರ ಅವರ ಅರಿವಿಗೆ ಬರುತ್ತದೆ. ಒಂದು ಜಾತಿ-ಧರ್ಮ-ಜನಾಂಗಗಳನ್ನು ಒಳಗೊಳ್ಳುವಿಕೆಯನ್ನು ಪ್ರತಿಪಾದಿಸಿದರೆ ಇನ್ನೊಂದು ಅವುಗಳ ನಡುವೆ ಹೇಗೆಲ್ಲ ಹೊರದೂಡುವಿಕೆಯನ್ನು ಪ್ರತಿಪಾದಿಸುತ್ತದೆ ಎಂಬುದು ತಿಳಿಯುತ್ತದೆ. ವಿವೇಕಾನಂದರ ಬಹುತೇಕ ಎಲ್ಲ ಬರೆಹಗಳು ಇಂದು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯ ಇವೆ. ನಮ್ಮ ಯುವಕರ ಚಿತ್ತ ಅತ್ತ ಹರಿಯಲಿ.

ಸಂದರ್ಭದಲ್ಲಿ ವಿವೇಕಾನಂದರ ಪ್ರಮುಖ ಮಾತುಗಳನ್ನು ಅವರ ಬರೆಹ ಭಾಷಣಗಳಿಂದ ಆಯ್ದು ಕೊಡುತ್ತಿರುವೆ. ಇವು ಕೇವಲ ಅವರನ್ನು ಸಮಗ್ರವಾಗಿ ಓದಲು ಕೈಮರ ಮಾತ್ರ ಎಂದು ವಿನಯದಿಂದ ಹೇಳಲಿಚ್ಚಿಸುವೆ.

********

• “ಜಗತ್ತಿನ ಯಾವುದೇ ಮೂಲೆಯಿಂದ ಬಂದರೂ ಒಳ್ಳೆಯದನ್ನು ಸ್ವೀಕರಿಸುವುದೇ ನನ್ನ ಜೀವನ ಧ್ಯೇಯ.”

• “ಮತಾಂಧರಲ್ಲಿ ನೂರಕ್ಕೆ ತೊಂಬತ್ತು ಮಂದಿಗೆ ಯಕೃತ್ ಚೆನ್ನಾಗಿರಲಿಲ್ಲ. ಇಲ್ಲವೇ ಅವರು ಅಗ್ನಿಮಾಂಧ್ಯಕ್ಕೆ ಅಥವಾ ಇನ್ನೂ ಯಾವುದಾದರೂ ರೋಗಕ್ಕೆ ತುತ್ತಾಗಿದ್ದರು. ವೈದ್ಯರು ಮತಾಂಧತೆ ಎಂಬುದು ಒಂದು ಬಗೆಯ ಜಾಡ್ಯ ಎಂದು ಕಾಲ ಕ್ರಮೇಣ ಕಂಡುಹಿಡಿದರು. ನಾನು ಇಂತಹ ಹಲವಾರು ಜನರನ್ನು ಕಂಡಿರುವೆನು. ದೇವರು ನನ್ನನ್ನು ಅವರಿಂದ ದೂರವಿರಿಸಲಿ

• “ಮಹಮ್ಮದೀಯ ಧರ್ಮ ಜನಸಾಮಾನ್ಯರಿಗೆ ಒಂದು ಸಂದೇಶವನ್ನು ಕೊಡಲು ಬಂದಿತು. ಮೊದಲನೆ ಸಂದೇಶವೇ ಸಮಾನತೆಯ ಭಾವನೆ. ಪ್ರೇಮವೆಂಬ ಒಂದೇ ಧರ್ಮ ಇರುವುದು. ಅಲ್ಲಿ ಬಣ್ಣ ಜನಾಂಗ ಮುಂತಾದ ಪ್ರಶ್ನೆಗಳೇ ಇಲ್ಲ…..

ಮಹಾಪುರುಷರು (ಬುದ್ದ, ಏಸು, ಮಹಮ್ಮದ್) ದಾರಿಯಲ್ಲಿನ ಕೈಮರಗಳಂತೆ ಅಷ್ಟೇ. ಅವರು ಮುಂದೆ ಹೋಗಿ ಸಹೋದರರೆ ಎಂದು ಅವರು ಹೇಳುವರು. ನಾವು ಅವರಿಗೆ ಅಂಟಿಕೊಳ್ಳುತ್ತೇವೆ. ಮುಂದುವರಿಯಲು ಇಚ್ಚಿಸುವುದಿಲ್ಲ. ಸ್ವಯಂ ಆಲೋಚಿಸುವುದಕ್ಕೆ ಇಚ್ಛೆಯಿಲ್ಲ.” (1900 ಮಾರ್ಚ್ 25 ರಂದು ಅಮೇರಿಕದ ಸ್ಯಾನ್ ಫ್ರಾನ್ಸಿಸ್ಕೋ ಪ್ರದೇಶದಲ್ಲಿ ಮಹಮ್ಮದ್ ಪೈಗಂಬರ್ ಮೇಲೆ ನೀಡಿದ ಉಪನ್ಯಾಸದಲ್ಲಿ- ವಿವೇಕಾನಂದರು ಮಹಮ್ಮದ್ ಪೈಗಂಬರ್ ಅವರನ್ನು ಕುರಿತು ಉಪನ್ಯಾಸ ಮಾಡಿದ್ದಾರೆ ಎಂಬುದನ್ನು ಯಾವೊಬ್ಬ ಭಾಷಣಕಾರನೂ ನಮ್ಮ ಯುವಕರಿಗೆ ಹೇಳಿದ್ದು ನನ್ನ ಗಮನಕ್ಕೆ ಇದುವರೆಗೂ ಬಂದಿಲ್ಲ. ಅವರು ಕೇವಲ ಮಹಮ್ಮದ್ ಪೈಗಂಬರ್ ಬಗ್ಗೆ ಮಾತ್ರವಲ್ಲದೇ ಏಸುವನ್ನು ಕುರಿತು ಕೂಡ ಉಪನ್ಯಾಸ ನೀಡಿದ್ದರು!! – ರಾಬು)

• “ಧರ್ಮ ಒಂದು ಸಿದ್ಧಾಂತವಲ್ಲ, ಒಂದು ನಿಯಮಾವಳಿಯೂ ಅಲ್ಲ. ಅದೊಂದು ಬೆಳವಣಿಗೆಯ ಕ್ರಮ” (ಮೇಲಿನಂತೆ)

• “ಪುರೋಹಿತರು ಒಬ್ಬ ದೇವರಿರುವನೆಂದು ನಂಬುವರು. ಆದರೆ ದೇವರನ್ನು ತಮ್ಮ ಮೂಲಕ ಮಾತ್ರ ನೋಡಬಹುದು ಎನ್ನುತ್ತಾರೆ. ಪುರೋಹಿತರ ಅಪ್ಪಣೆ ಪಡೆದರೆ ಮಾತ್ರ ಭಗವಂತನ ಸನ್ನಿಧಿಗೆ ಹೋಗಬಲ್ಲರು. ಪುರೋಹಿತರು ನಿಮ್ಮನ್ನು ಆಳುವರು, ನೂರಾರು ಆಚಾರಗಳಿಂದ ನಿಮ್ಮನ್ನು ಬಲತ್ಕಾರವಾಗಿ ಬಿಗಿಯುವರು. ಅತಿ ಸರಳವಾದ ಸತ್ಯವನ್ನು ತಿಳಿಯದ ಒಂದು ಜಾಲವನ್ನಾಗಿ ಮಾಡುವರು”.

• “ಬುದ್ಧನೇ ನನ್ನ ದೇವರು. ಅವನು ಯಾವುದೇ ದೇವರ ಬಗ್ಗೆ ಸಿದ್ಧಾಂತವನ್ನು ಮಂಡಿಸಲಿಲ್ಲ. ಅವನು ಸ್ವತಃ ದೇವರಾಗಿದ್ದ.”

• “ಬೆಳವಣಿಗೆಯ ಒಂದೇ ಒಂದು ಷರತ್ತು ಎಂದರೆ ಸ್ವಾತಂತ್ರ್ಯ. ಅದನ್ನು ತೆಗೆದುಹಾಕಿದರೆ ಫಲಿತಾಂಶ ಸರ್ವನಾಶ.”

• “ ದೇಶವು ಬದುಕುತ್ತಿರುವುದು ಗುಡಿಸಲಿನಲ್ಲಿ ಎಂಬುದು ನಿಮಗೆ ನೆನಪಿರಲಿ

• “ಮನುಷ್ಯನಲ್ಲಿ ಮತ್ತು ಮನುಷ್ಯನಿಂದ ಮಾತ್ರ ನಾವು ದೇವರನ್ನು ಅರಿಯಬಲ್ಲೆವು.”

• “ದೇವರನ್ನು ಹುಡುಕಿಕೊಂಡು ಏಕೆ ಅಲೆಯುವಿರಿ? ತುಳಿತಕ್ಕೊಳಗಾದವರು, ಸಂಕಟದಲ್ಲಿರುವವರು, ನೋವನ್ನು ಅನುಭವಿಸುತ್ತಿರುವವರು, ಬಡವರು ದೇವರಲ್ಲವೇ? ನೀವು ಅವರನ್ನು ಮೊದಲು ಏಕೆ ಪೂಜಿಸುತ್ತಿಲ್ಲ?”

• “ ತನಗೆ ತಾನು ಅಪಾಯ ತಂದುಕೊಳ್ಳದೇ ಯಾವೊಬ್ಬನೂ ಬೇರೆಯವರನ್ನು ದ್ವೇಷಿಸಲಾರ

• “ವಿಕಾಸವೇ ಜೀವನಸಂಕುಚಿತತೆಯೇ ಸಾವು. ಪ್ರೀತಿಯೇ ಜೀವನ. ದ್ವೇಷವೇ ಸಾವು.”

• “ಪುರೋಹಿತಶಾಹಿಯನ್ನು ಬೇರುಸಹಿತ ಕಿತ್ತುಹಾಕಿದರೆ ಇಡೀ ಪ್ರಪಂಚದಲ್ಲಿಯೇ ಅತ್ಯುತ್ತಮ ಧರ್ಮವೊಂದನ್ನು ಪಡೆಯುವಿರಿ.”

• “ನಾನೊಬ್ಬ ಜಾದೂಗಾರ ಅಲ್ಲ, ತತ್ವಜ್ಞಾನಿಯೂ ಅಲ್ಲ, ಸಂತನೂ ಅಲ್ಲ. ಆದರೆ ನಾನೊಬ್ಬ ಬಡವ. ಬಡವರನ್ನು ಪ್ರೀತಿಸುವೆ.”

• “ಹೊಟ್ಟೆಕಿಚ್ಚನ್ನು ಬಿಟ್ಟು ಎಲ್ಲರೂ ಒಗ್ಗೂಡಿ ಕೆಲಸಮಾಡಿ. ಇದು ದೇಶದ ಇಂದಿನ ತುರ್ತು ಅಗತ್ಯ

• “ ಭೂಮಿ ಸ್ವರ್ಗಕ್ಕಿಂತ ಮೇಲಿನದು. ಇದು ಇಡೀ ವಿಶ್ವದ ಅತ್ಯುತ್ತಮ ಶಾಲೆ.”

• “ಬಡವರು ತುಳಿತಕ್ಕೊಳಗಾದವರು ಮತ್ತು ಮುಗ್ದರು ಇವರೇ ನಿಮ್ಮ ದೇವರಾಗಲಿ

• “ ಭಾರತಕ್ಕೆ ಇರುವ ಒಂದೇ ಒಂದು ಆಶಾದಾಯಕ ಅಂಶವೆಂದರೆ ಇಲ್ಲಿನ ಸಾಮಾನ್ಯ ಜನ

• "My interests are international and not Indian alone."

• "Love makes no distinction between man and man, between Aryan and a Mlechchha, between a Brahmana and a Pariah, not even between an man and a woman. Love makes the whole universe as one’s own home."

******

ಕನಿಷ್ಠ ಮುಂದಿನ ಜನವರಿ ಹನ್ನೆರಡು ಬರುವುದರೊಳಗೆ ವಿವೇಕಾನಂದರ ಕೃತಿಶ್ರೇಣಿಯ ಒಂದೆರಡು ಸಂಪುಟಗಳನ್ನಾದರೂ ನಮ್ಮ ಯುವಕರು ಓದುವ ಸಂಕಲ್ಪ ಮಾಡಿಕೊಂಡರೆ ಲೇಖನ ಸಾರ್ಥಕವಾದೀತು. ಅವರ ಚಿತ್ತ ಅತ್ತ ಹರಿಯಲಿ; ಅವರು ವೈಚಾರಿಕವಾಗಿ ಸದೃಢವಾಗುವ ಮೂಲಕ ನಿಜವಾದ ಭವ್ಯಭಾರತ ನಿರ್ಮಾಣವಾಗಲಿ. ಎಲ್ಲರಿಗೂ ವಿಶೆಷವಾಗಿ ನಾನು ಬಹುವಾಗಿ ಪ್ರೀತಿಸುವ ಯುವಜನಾಂಗಕ್ಕೆ ರಾಷ್ಟ್ರೀಯ ಯವದಿನದ ಹಾರ್ದಿಕ ಶುಭಾಶಯಗಳು

ಡಾ. ರಾಜೇಂದ್ರ ಬುರಡಿಕಟ್ಟಿ

೧೨ ಜನವರಿ ೨೦೨೦.


No comments:

Post a Comment