‘ಮರಣವೆಂಬುದು
ಮಹಾನವಮಿ’ ಇದು ವಚನ ಸಾಹಿತ್ಯದಲ್ಲಿ
ಬರುವ ಬಹಳ ಶಕ್ತಿಯುತವಾದ ಮತ್ತು
ಹೆಚ್ಚು ಪ್ರಸಿದ್ಧವಿರುವ ಒಂದು ಮಾತು. ನನಗೆ
ತಿಳಿದಂತೆ ವಚನ ಸಾಹಿತ್ಯದಲ್ಲಿ ಇದು
ಮುಖ್ಯವಾಗಿ ಎರಡು ವಚನಗಳಲ್ಲಿ ಕಂಡುಬರುತ್ತದೆ.
ಆ ಎರಡು ಮುಖ್ಯವಚನಗಳು ಇಬ್ಬರು
ಪ್ರಮುಖ ವಚನಕಾರರಾದ ಬಸವಣ್ಣ ಮತ್ತು ಪ್ರಭುದೇವ ಅವರಿಗೆ ಸಂಬಂಧಿಸಿದವುಗಳೇ ಆಗಿವೆ ಎಂಬುದನ್ನೂ ನಾನಿಲ್ಲಿ ಒತ್ತುಕೊಟ್ಟು ಹೇಳಬೇಕು. ವಚನಾಂದೋಲನದ ಶಕ್ತಿಕೇಂದ್ರ ಪ್ರಭುದೇವ ಆಗಿದ್ದರೆ ಅದರ ಚಾಲಕ ಶಕ್ತಿ
ಯಾಗಿದ್ದವರು ಬಸವಣ್ಣ. ಇವರಿಬ್ಬರ ವಚನಗಳಲ್ಲಿಯೇ ಈ ಮಾತು ಕಾಣಿಸಿಕೊಳ್ಳುವುದು
ಅತ್ಯಂತ ಸಹಜವಾದದ್ದು ಕೂಡ. ಆ ವಚನಗಳು
ಕ್ರಮವಾಗಿ ಹೀಗಿವೆ:
ಜೋಳವಾಳಿಯಾನಲ್ಲ,
ವೇಳೆವಾಳಿಯವ ನಾನಯ್ಯಾ
ಹಾಳುಗೆಟ್ಟೋಡುವ
ಆಳು ನಾನಲ್ಲವಯ್ಯಾ
ಕೇಳು,
ಕೂಡಲಸಂಗಮದೇವಾ,
ಮರಣವೆ
ಮಹಾನವಮಿ
ಕಾಮನ
ಕೈ ಮುರಿದಡೆ ಮೋಹ ಮುಂದುಗೆಟ್ಟಿತ್ತು.
ಆಮಿಷ
ತಾಮಸಧಾರಿಗಳೆಲ್ಲ ಎಳತಟವಾದರು.
ಅಕ್ಕಟಾ,
ಅಯ್ಯಲಾ, ನಿಮ್ಮ ಕಂಡವರಾರೊ?
ಆಳವಿಲ್ಲದ
ಸ್ನೇಹಕ್ಕೆ ಮರಣವೆ ಮಹಾನವಮಿ
ಗುಹೇಶ್ವರನನರಿಯದೆ
ರಣಭೂಮಿಗಳುಲಿದವು !
ಮೇಲಿನ
ಎರಡು ವಚನಗಳಲ್ಲಿ ಹೆಚ್ಚುಕಡಿಮೆ ಮರಣವೆಂಬುದು ಮಹಾನವಮಿ ಎಂಬ ಮಾತು ‘ಇದಕಾರಂಜುವರು
ಇದಕಾರಳುಕುವರು’ ಎಂಬ ಧೈರ್ಯದಿಂದ ಹುಟ್ಟಿರುವಂಥದ್ದೇ.
ಹೌದು ಶರಣ ಸಂಸ್ಕೃತಿಯ ಹರಿಕಾರ
ಮತ್ತು ಗುರಿಕಾರ ಆಗಿದ್ದ ಈ ಎರಡು ಚೇತನಗಳು
ಅವ್ಯವಸ್ಥೆಯ ಲಾಭಗಳನ್ನು ಉಂಡು ಸುಖಿಸುವ ‘ಉಂಡುಕೋರ’ರಾಗಿರದೇ ಅದರ ವಿರುದ್ಧ ಬಂಡೆದ್ದ
‘ಬಂಡುಕೋರ’ರು!
ಸಮಾಜ
ಸುಧಾರಣೆಯ ಮುಂದಾಳತ್ವವನ್ನು ವಹಿಸುವವರ ಬಹುಮುಖ್ಯ ಹೊಣೆಗಾರಿಕೆಗಳಲ್ಲಿ ತನ್ನೊಂದಿಗಿರುವ ಚಳವಳಿಯ ಕಾರ್ಯಕರ್ತರು ಧೈರ್ಯಕಳೆದುಕೊಳ್ಳದಂತೆ ನೋಡಿಕೊಳ್ಳುವುದು ಕೂಡ ಬಹುಮುಖ್ಯವಾದದ್ದಾಗಿರುತ್ತದೆ. ಏಕೆಂದರೆ ಯಾವುದೇ ಕಾಲದ ಯಾವುದೇ ಚಳವಳಿ
ಇರಬಹುದು ಅದು ಆಯಾ ಕಾಲದ
ಸಮಾಜದಿಂದ ಪುರಸ್ಕಾರಕ್ಕೆ ಒಳಗಾಗುವುದಿಲ್ಲ. ಅದು ಆರಂಭದಲ್ಲಿ ತಿರಸ್ಕಾರಕ್ಕೆ
ಒಳಗಾಗುತ್ತದೆ! ಚಳವಳಿಗಾರನೊಬ್ಬನನ್ನು ವರ್ತಮಾನವು ಹಿಂಸಿಸುತ್ತದೆ ಭವಿಷ್ಯವು ಪೂಜಿಸುತ್ತದೆ!! ಈ ಸತ್ಯವನ್ನು ಚಳವಳಿಗಾರರಿಗೆ
ಮನವರಿಕೆಮಾಡಿಕೊಡಬೇಕಾದದ್ದು
ಚಳವಳಿಯ ನೇತಾರನ ಬಹುಮುಖ್ಯ ಕೆಲಸವಾಗಿರುತ್ತದೆ. ಇದರ ಜೊತೆಗೆ ಭವಿಷ್ಯ
ಅವನನ್ನು ಪೂಜಿಸುವುದು ನಿಜವಾದರೂ ಭವಿಷ್ಯದವರೆಗೆ ಬದುಕಲು ವರ್ತಮಾನದ ಹಿಂಸೆಯನ್ನು ಅವನು ತಾಳಿಕೊಳ್ಳಬೇಕಾಗುತ್ತದೆ. ಈ ತಾಳಿಕೊಳ್ಳುವಿಕೆಗೆ
ಒಂದು ಸದೃಢವಾದ ಮನಸ್ಥಿತಿ ರೂಪುಗೊಳ್ಳಬೇಕಾಗುತ್ತದೆ. ಮೇಲಿನ ಎರಡೂ ವಚನಗಳು ಈ
ಮನಸ್ಥಿತಿಯ ರೂಪಿಸುವಿಕೆಗಾಗಿ ಬಳಕೆಯಾಗಿರುವುದನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು.
‘ಮರಣವೆಂಬುದು
ಮಹಾನವಮಿ’ ಎಂಬ ಸಾವಿಗಾಗಿ ಹೆದರದೆ
ಚಳವಳಿಯಲ್ಲಿ ಮುನ್ನುಗ್ಗುವ ಧೈರ್ಯತಾಳಲು ಹೇಳಿದ ಈ ಮಾತೇ ಆ
ಕಾಲದಲ್ಲಿ ಅವರನ್ನು ಸಾಯಿಸುವ ವಾತಾವರಣವೊಂದಿತ್ತು ಎಂಬುದನ್ನು ದೃಢಪಡಿಸುತ್ತದೆ. ವಚನಾಂದೋಲನ ಪ್ರಚಲಿತವಿದ್ದ ಸಮಾಜದ ಏರುಪೇರುಗಳನ್ನು ಸರಿಪಡಿಸಿ ಎಲ್ಲರೂ ಒಂದೆಂದು ಭಾವಿಸುವ ಸರ್ವಸಮಾನತೆಯ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ನಡೆದ ಒಂದು ಚಳವಳಿ.
ನಮ್ಮದು ಕನಸಿನಲ್ಲಿಯೂ ಮನುಷ್ಯರೆಲ್ಲರೂ ಸಮಾನರೆಂದು ಕಂಡರಿಯದ ಸಮಾಜ. ಈ ಚಳವಳಿ ಸಹಜವಾಗಿಯೇ
ವೈದಿಕಶಾಹಿಗಳಿಗೆ ಕಣ್ಣುರಿ ಮತ್ತು ಹೊಟ್ಟೆಯುರಿ ಎರಡನ್ನೂ ಉಂಟುಮಾಡಿತು. ಇದರ ಪ್ರತಿಫಲವಾಗಿ ರಾಜತ್ವದ
ಮೇಲೆ ತನ್ನದೇ ಆದ ನಿಯಂತ್ರಣವನ್ನು ಹೊಂದಿದ್ದ
ಪುರೋಹಿತಶಾಹಿ ರಾಜನನ್ನು ಶರಣರ ಮೇಲೆ ಎತ್ತಿಕಟ್ಟುವ
ಕಾರ್ಯಕ್ಕೆ ಕೈಹಾಕಿತು. ಇದು ಸಹಜವಾಗಿಯೇ ಘರ್ಷಣೆಗೆ
ಕಾರಣವಾಗಿ ಇದೇ ಮುಂದೆ ಇತಿಹಾಸಪ್ರಸಿದ್ಧ
ಕಲ್ಯಾಣ ಕ್ರಾಂತಿಗೆ ಕಾರಣವಾಯಿತು.
‘ಕಲ್ಯಾಣಕ್ರಾಂತಿ’ ಎಂಬುದು ಕರ್ನಾಟಕದ ಸಮಾಜೋರಾಜಕೀಯ ಚರಿತ್ರೆಯಲ್ಲಿ ನಾವೆಂದೂ ಮರೆಯಲಾರದ ಮರೆಯಬಾರದ ಒಂದು ರಕ್ತಸಿಕ್ತ ಅಧ್ಯಾಯ. ಪ್ರಧಾನವಾಗಿ ಬ್ರಾಹ್ಮಣ ಸಮುದಾಯದ ಹುಡುಗಿಯೊಬ್ಬಳನ್ನು ತಳಸಮುದಾಯದ ಹುಡುಗನಿಗೆ ಮದುವೆಮಾಡಿಕೊಡುವ ಕಾರ್ಯವನ್ನು ಶರಣರು ನಡೆಸಿದ್ದು ಮತ್ತು ಈ ಅಂತರ ಜಾತಿಯ ವಿವಾಹವೇ ಕಲ್ಯಾಣಕ್ರಾಂತಿಗೆ ಕಾರಣವೆಂದು ಗುರುತಿಸಲಾಗುತ್ತದೆ. ಅದು ಎದ್ದು ಕಾಣುವ ಪ್ರಧಾನ ಕಾರಣ ನಿಜವಾದರೂ ಮೂಲತಃ ಅದೊಂದೇ ಈ ಕ್ರಾಂತಿಗೆ ಕಾರಣವಾಗಿರಲಿಲ್ಲವೆಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಮ್ಮ ಸಮಾಜದಲ್ಲಿ
ಆಳವಾಗಿ ಬೇರುಬಿಟ್ಟಿದ್ದ ಜಾತಿ,ಲಿಂಗ, ವರ್ಗ ಬೇಧಗಳ ವಿರುದ್ಧ ಶರಣ ಚಳವಳಿ ಧ್ವನಿಯೆತ್ತಿದ್ದು ಪುರೋಹಿತಶಾಹಿಗೆ ನುಂಗಲಾರದ ತುತ್ತಾಗಿತ್ತು. ಅದು ಅವರ ಅಸ್ಥಿತ್ವದ ಪ್ರಶ್ನೆಯಾಗಿತ್ತು. ಏನಾದರೂ ಮಾಡಿ ಶರಣರ ಮೇಲೆ ಸೇಡು ತೀರಿಸಿಕೊಳ್ಳಲು ಈ ಸಮುದಾಯ ಸದಾ ಹವಣಿಸುತ್ತಿತ್ತು. ಆದರೆ ಬಸವಣ್ಣನಂತಹ ವ್ಯಕ್ತಿತ್ವ ಅವರ ದುರುದ್ಧೇಶಕ್ಕೆ ಪ್ರಬಲ ತಡೆಯನ್ನುಂಟುಮಾಡಿತ್ತು. ಬಸವಣ್ಣನ ಬಗ್ಗೆ ಬಿಜ್ಜಳನನ್ನು ಎತ್ತಿಕಟ್ಟುವುದೂ ಕೂಡ ಅವರಿಗೆ ಆರಂಭದಲ್ಲಿ ಸುಲಭವಾಗಿರಲಿಲ್ಲ. ಆದರೆ ಈ ಮದುವೆ ಅವರಿಗೆ ಒಂದು ಒಳ್ಳೆಯ ಅವಕಾಶವನ್ನು ಕಲ್ಪಿಸಿತು.
ಕೊನೆಗೂ
ಪುರೋಹಿತಶಾಹಿ ತನ್ನ ಕುತಂತ್ರವನ್ನು ಯಶಸ್ವಿಗೊಳಿಕೊಳ್ಳುವಲ್ಲಿ
ಯಶಸ್ವಿಯಾಯಿತು. ಈ ಮದುವೆಯ ನೆಪವನ್ನು
ಮಾಡಿಕೊಂಡು ಬಸವಣ್ಣ ಮತ್ತು ಅವನ ಅನುಯಾಯಿಗಳು `ಧರ್ಮಬಾಹಿರ’
ಕೆಲಸವನ್ನು ಮಾಡುತ್ತಿರುವದರಿಂದ ಅವರನ್ನು`ಧರ್ಮದ್ರೋಹಿಗಳು’ ಎಂದು ಬಿಂಬಿಸುವಲ್ಲಿ ಅದು
ಗೆಲುವು ಸಾಧಿಸಿತು. ಈ ಕಲ್ಪಿತ ‘ಧರ್ಮದ್ರೋಹ’ವು ‘ರಾಜದ್ರೋಹ’ ಆಗುವಂತೆ
ನೋಡಿಕೊಳ್ಳುವಲ್ಲಿಯೂ ಅದು ಗೆದ್ದಿತು! ರಾಜದ್ರೋಹವೆಂದಮೇಲೆ
ಅದಕ್ಕೆ ತಕ್ಕ ಶಿಕ್ಷೆ ಆಗಲೇಬೇಕಾಗುತ್ತದೆ.
ಸರಿ ಅದಕ್ಕಾಗಿ ಒಂದು ‘ಒಳ್ಳೆಯ ದಿನ’ವನ್ನು ಗುರುತಿಸಲಾಯಿತು.
ಅದು ಯಾವ ದಿನ? ವಿಜಯದಶಮಿಯ
ದಿನ! ಹೌದು ಪುರೋಹಿತ ಶಾಹಿ
ರಾಜನನ್ನು ತನ್ನ ಕುತಂತ್ರಕ್ಕೆ ಅಸ್ತ್ರವನ್ನಾಗಿ
ಮಾಡಿಕೊಂಡು ಹನ್ನೆರಡನೆಯ ಶತಮಾನದ ಶರಣರನ್ನು ಸಿಕ್ಕಸಿಕ್ಕಲ್ಲಿ ಕೊಂದುಹಾಕಿ ವಚನಗಳನ್ನು ನಾಶಪಡಿಸಿ ಪುಂಡಾಟಿಕೆ ನಡೆಸಿದ್ದು, ಈ ಮದುವೆಯ ಕಾರಣಕ್ಕೆ
ತಳಸಮುದಾಯದ ಗಂಡು, ಅವನ ಪಾಲಕರನ್ನು ಆನೆಯ
ಕಾಲಿಗೆ ಕಟ್ಟಿ ಎಳಸಿ ಚಿತ್ರಹಿಂಸೆಕೊಟ್ಟು ಪ್ರಗತಿಪರವಾದ
ಆಲೋಚನೆಯ ಮೇಲೆ ಎಂದೆಂದೂ ಅಳಿಸಲಾರದ
ಬರೆಯೆಳೆದ ದಿನಗಳು ಇದೇ ವಿಜಯದಶಮಿಯ ದಿನಗಳು!!.
ಅವು ವೈಚಾರಿಕತೆಯ ವಿರುದ್ಧ ಸನಾತನವಾದ ಜಯಗಳಿಸಿದ ದಿನಗಳು. ಸಮಸಮಾಜ ನಿರ್ಮಾಪಕರ ವಿರುದ್ಧ ಜಾತಿವಾದಿಗಳು, ಸಂಪ್ರದಾಯವಾದಿಗಳು ಜಯಗಳಿಸಿದ ದಿನಗಳು!!
ವಿಜಯದಶಮಿಯನ್ನು
ಕೆಟ್ಟದ್ದರ ವಿರುದ್ಧ ಒಳ್ಳೆಯದರ ಜಯಗಳಿಸುವಿಕೆಯ ಸಂಕೇತವೆಂದು ಹೇಳಲಾಗುತ್ತದೆ. ಇದಕ್ಕೆ ಜನರ ಕಿವಿಯಲ್ಲಿ ಹೂವು
ಇಡುವ ಅನೇಕ ಕಥೆಗಳನ್ನು ಹೆಣೆದು
ಇಡಲಾಗಿದೆ. ನಮ್ಮ ಯುವ ಸಮುದಾಯ
ಇದನ್ನು ಕುರುಡಾಗಿ ನಂಬುತ್ತಿದೆ. ಇದು ಅವರ ತಪ್ಪಲ್ಲ.
ಸತ್ಯ ಅವರಿಗೆ ಗೊತ್ತಿಲ್ಲ. ಕರ್ನಾಟಕದಲ್ಲಿ ಇಂದು ಬಸವಣ್ಣನ ಅನುಯಾಯಿಗಳೆಂದು
ಹೇಳಿಕೊಳ್ಳುವ ಅವರ ಬಗ್ಗೆ ಗೌರವದ
ಭಾವನೆಯನ್ನು ಇಟ್ಟುಕೊಂಡಿರುವ ಅನೇಕ ಜನ ವಿಜಯದಶಮಿಯನ್ನು
ವಿಜಯದ ಸಂಕೇತವೆಂದೇ ನಂಬಿ ಆಚರಿಸುತ್ತಿದ್ದಾರೆ. ಅವರಿಗೆ ಗೊತ್ತಿಲ್ಲ.
ವಿಜಯದಶಮಿ ಎಂಬುದು ತಮ್ಮ ವಿಜಯವಲ್ಲವೆಂದು. ತಮ್ಮ
ಶರಣರನ್ನು ಬೀದಿಬೀದಿಗಳಲ್ಲಿ ಅಟ್ಟಿಸಿಕೊಂಡು ಹೋಗಿ ಕೊಚ್ಚಿಕೊಂದು ಸಂಪ್ರದಾಯವಾದಿಗಳು
ವಿಜಯಸಾಧಿಸಿದ ದಿನವೆಂದು. ಈ ಸತ್ಯಗೊತ್ತಾದರೆ ಅವರು
ವಿಜಯದಶಮಿಯನ್ನು ಸೂತಕದ ದಿನವೆಂದು ಆಚರಿಸಿಯಾರು!
ಆಯುಧಪೂಜೆಯ
ಹೆಸರಿನಲ್ಲಿ ಕೊಲ್ಲುವ ಕತ್ತಿಯೂ ಇಂದು ಪೂಜೆಗೊಳ್ಳುವ ಕೆಟ್ಟಕಾಲದಲ್ಲಿ
ನಾವು ಬದುಕುತ್ತಿದ್ದೇವೆ. ‘ಕತ್ತಿಹಿಡಿದವರೂ ಕತ್ತು ಬಗ್ಗಿಸಿದವರೂ ಸೇರಿಕೊಂಡು ನಾವೆಲ್ಲ ಒಂದು; ನಾವೆಲ್ಲ ಬಂಧು’ ಎನ್ನುವ ಘೋಷಣೆಗೆ ಮರುಳಾಗಿದ್ದೇವೆ. ಹಾಗಾಗಿ ನಮ್ಮ ನಿಜವಾದ ಶತ್ರುಗಳು
ಯಾರು ಎಂಬುದೂ ನಮಗೆ ಅರ್ಥವಾಗದ ಸ್ಥಿತಿಯೊಂದು
ನಿರ್ಮಾಣವಾಗುತ್ತಿದೆ. ಹಿಂದೆ ನಮ್ಮನ್ನೆಲ್ಲ ಕೊಲೆಮಾಡಿದವರೇ, ‘ಆಗಿದ್ದು ಆಗಿಹೋಯಿತು; ಹಳೆಯದನ್ನೆಲ್ಲ ಮರೆತು ಚೆನ್ನಾಗಿರೋಣ ಬನ್ನಿ’ ಎಂದು ನಮ್ಮನ್ನು ಕರೆದಾಗ
ನಾವು ಹೋಗಬಾರದೇ? ಹೋಗಬಹುದು ಆದರೆ ಈಗಲಾದರೂ ಹಾಗೆ
ನಮ್ಮನ್ನು ಕರೆಯುವಾಗ ಅವರ ಬಗಲಲ್ಲಿ ಕತ್ತಿಯನ್ನು
ಇಟ್ಟುಕೊಂಡೇ ಕರೆಯುತ್ತಿದ್ದಾರೋ ಏನೋ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು
ಆತ್ಮರಕ್ಷಣೆಯ ದೃಷ್ಟಿಯಿಂದ ಮುಖ್ಯವಾದದ್ದು!
`ಮರಣವೆಂಬುದು
ಮಹಾನವಮಿ’ ಎಂಬ ಧೈರ್ಯತುಂಬುವ ಹೇಳಿಕೆಯನ್ನು
ಅಕ್ಷರಶಃ ಪಾಲಿಸಿ ಹಾಗೆ ಹೇಳಿದವರನ್ನೆಲ್ಲ ಅದೇ
ಮಹಾನವಮಿಯ ದಿನದಂದೇ ಬೆನ್ನಟ್ಟಿ ಕೊಂದು ಹತ್ಯಾಕಾಂಡ ನಡೆಸಿ ಹಬ್ಬವೆಂದು ಆಚರಿಸಿದ ದಿನ ಮಹಾನವಮಿ! ದುರಂತವೆಂದರೆ
ಇಂದು ಶರಣಸಂಸ್ಕೃತಿಯ ವಾರಸುದಾರರೆಂದು ಹೇಳಿಕೊಳ್ಳುವ ಬಹಳಷ್ಟು ಜನ ತಿಳಿವಳಿಕೆಯ ಕೊರತೆಯಿಂದಾಗಿ
‘ಸಂಸ್ಕೃತಿ’ಯ ಹೆಸರಿನಲ್ಲಿ ಇದನ್ನು
ಹಬ್ಬವೆಂದು ಆಚರಿಸಿ ಸಂಭ್ರಮಿಸುತ್ತಿರುವುದು! ತಮ್ಮ ಶರಣರನ್ನು ಕೊಂದವರ
ಕತ್ತಿಯನ್ನೇ ಪೂಜಿಸುತ್ತಿರುವುದು! ಇದು ದುರಂತವಲ್ಲದೇ ಮತ್ತೇನು?
ಕರ್ನಾಟಕದಲ್ಲಿ
ಅನೇಕ ಶರಣಸಂಸ್ಕೃತಿಯ ಮಠಗಳಿವೆ. ಅವುಗಳಲ್ಲಿ ಬೆರಳೆಣಿಕೆಯ ಮಠಗಳನ್ನು ಬಿಟ್ಟರೆ ಉಳಿದವು ವೈದಿಕಮಠಗಳ ದಾರಿಯನ್ನೇ ಹಿಡಿದು ಶರಣ ಸಂಸ್ಕೃತಿಗೆ ಎಳ್ಳುನೀರು
ಬಿಡುತ್ತಿವೆ. ಹಾಗಂತ ನಾವೆಲ್ಲ ನಿರಾಶರಾಗಬೇಕಿಲ್ಲ. ಶರಣಸಂಸ್ಕೃತಿಯ ತಿರುಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅನುಷ್ಠಾನಗೊಳಿಸಿಕೊಂಡಿರುವ ಅನೇಕ ವ್ಯಕ್ತಿಗಳು, ಕೆಲವರಾದರೂ
ಈ ಮಠಗಳ ಸ್ವಾಮಿಗಳು ಇನ್ನೂ
ಇದ್ದಾರೆ. ಆದರೆ ಅವರೆಲ್ಲ ಶರಣ
ಸಂಸ್ಕೃತಿಯ ವಾರಸುದಾರರೆಲ್ಲ ಶರಣಸಂಸ್ಕೃತಿಯಿಂದ ದೂರವಾಗುತ್ತಿರುವುದನ್ನು ತಡೆಯಲು ಇನ್ನೂ ಚುರುಕಾಗಿ ಕಾರ್ಯಪ್ರವೃತ್ತರಾಗುವ ಅವಶ್ಯಕತೆಯಿದೆ. ಇಲ್ಲದೇ ಹೋದರೆ ಕರ್ನಾಟಕದಲ್ಲಿ ಶರಣಸಂಸ್ಕೃತಿಯ ಶವಸಂಸ್ಕಾರವನ್ನು ಈ `ಹಾದಿಬಿಟ್ಟ ಶರಣ’ರೇ ಮಾಡಿಯಾರು! ಈ
ಬಗ್ಗೆ ಜಾಗೃತಿಯ ಕೆಲಸ ತ್ವರಿತವಾಗಿ ಆಗಬೇಕಿದೆ.
ಒಬ್ಬಿಬ್ಬರಿಂದಲ್ಲ. ಸಮರೋಪಾದಿಯಾಗಿ ಸರ್ವರಿಂದ.
ಪ್ರತಿವರ್ಷ
ಜಂಬೂಸವಾರಿಯ ಅದ್ಧೂರಿ ಮಹಾನವಮಿ, ವಿಜಯದಶಮಿ ಉತ್ಸಹ ನೋಡಿ ನೋಡಿ ತಲೆಚಿಟ್ಟುಹಿಡಿದು
ಹೋಗಿತ್ತು. ಈ ವಿಜಯದಶಮಿ ಬಂದಾಗಲೆಲ್ಲ
ನನಗೆ ಶರಣರ ಹತ್ಯಾಕಾಂಡದ ಕರಾಳ
ನೆನಪೊಂದು ಬಂದು ಕಾಡತೊಡಗುತ್ತದೆ. ಮನಸ್ಸು
ಮುದುಡಿಕೊಳ್ಳುತ್ತದೆ. ಹೀಗಾಗಿ ಇದರಿಂದ ಬಿಡುಗಡೆ ಪಡೆಯಲೆಂದು ಅಂದಿನ ಶರಣ ಚಳವಳಿಯ ಕೇಂದ್ರ
ಕಾರ್ಯಸ್ಥಾನವಾದ ಕಲ್ಯಾಣಕ್ಕೆ ಹೋಗಿ ತಿರುಗಾಡಿ ಬಂದೆ.
ಅಲ್ಲಿನ ಅನುಭವ ಮಂಟಪದ ಶಾಂತವಾದ ವಾತಾವರಣದಲ್ಲಿ ಕುಳಿತು ಸಮಾಧಾನಮಾಡಿಕೊಂಡೆ. ಬಸವಣ್ಣನ ಅರಿವಿನ ಮನೆ, ಅಲ್ಲಮಪ್ರಭುಗಳ ಮಠ,
ಮಡಿವಾಳ ಮಾಚಿದೇವನ ಹೊಂಡ, ಅಕ್ಕನಾಗಮ್ಮನ ಗವಿ, ಎಲ್ಲೆಲ್ಲ ಸುತ್ತಾಡಿ
ಮನಸ್ಸನ್ನು ಹಗುರಮಾಡಿಕೊಂಡೆ. ಅಕ್ಕಮಹಾದೇವಿ ಕಿನ್ನರಿಬೊಮ್ಮಯರ ನಡೆವ ತಾತ್ವಿಕ ಸಂಘರ್ಷಣೆಯ
ಸ್ಥಳಕ್ಕೆ ಹೋಗಿ ಅವರಿಬ್ಬರ ಮೂರ್ತಿಗಳ
ನಡುವೆ ನಿಂತು ನಾನು ನಿಮ್ಮ ಮಾತಿಗೆ
ಸಾಕ್ಷಿದಾರ ಎನ್ನುವಂತೆ ಫೋಟೋ ತೆಗೆಸಿಕೊಂಡೆ. ಮನಸ್ಸು
ಒಂದಿಷ್ಟು ನಿರಾಳವಾಯಿತು.
ನನ್ನ
ಮಗ ಅಮೃತ ಭಾರ್ಗವ, ಹಿಂದೂ
ಪತ್ರಿಕೆ ವರದಿಗಾರ ಸಹೋದರ ಕುಮಾರ್ ಬುರಡಿಕಟ್ಟಿ ಜೊತೆಗೆ ಶರಣ ಸಾಹಿತ್ಯದ ಬಗ್ಗೆ
ಆಳವಾದ ಅರಿವುಳ್ಳ ವಿದ್ವಾಂಸೆ ಸ್ನೇಹಿತೆ ಕರ್ನಾಟಕ ಕೇಂದ್ರೀಯ ವಿವಿಯ ಪ್ರಾಧ್ಯಾಪಕಿ, ಡಾ. ಶಿವಗಂಗಾ ರುಮ್ಮಾ,
ಇದ್ದದ್ದನ್ನು ಇದ್ದಂತೆ ಕೆಲವು ಸಲ ಒದ್ದಂತೆ ಹೇಳುವ
ಅಪರೂಪದ ಸ್ನೇಹಿತ ಬೀದರಿನ ಸಿದ್ಧಪ್ಪ ಮೂಲಿಗೆ ಇಡೀ ದಿನ ಜೊತೆಗಿದ್ದು
ನನ್ನ ಭೇಟಿಯನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಿದರು.
ಕೆಲವು
ಫೋಟೋ ನಿಮಗಾಗಿ.
ಡಾ.ರಾಜೇಂದ್ರ ಬುರಡಿಕಟ್ಟಿ
27-10-2020
No comments:
Post a Comment