Saturday, January 25, 2025

ಯಕ್ಷಿಯೆಂಬ ಸಂತಾನ ದೇವತೆಯೂ ಭಾರತ ಸಂವಿಧಾನವೂ…..‌

 ಯಕ್ಷಿಯೆಂಬ ಸಂತಾನ ದೇವತೆಯೂ ಭಾರತ ಸಂವಿಧಾನವೂ…..‌

ಇದು ಭಾರತ ಸಂವಿಧಾನದ ಕರುಡಿನ ಮೇಲೆ ಸಂವಿಧಾನ ರಚನಾ ಸಭೆಯಲ್ಲಿ ದೀರ್ಘ ಚರ್ಚೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ೧೯೪೮ರ ನವೆಂಬರ್ ೧೪ ರಂದು ಆಗಿನ ಶಂಕರ್ಸ್ ವೀಕ್ಲಿಯಲ್ಲಿ ಪ್ರಕಟವಾದ ಒಂದು ವ್ಯಂಗಚಿತ್ರ!

ಅಂಬೇಡ್ಕರ್ ಭಾರತ ಸಂವಿಧಾನದ ಕರುಡನ್ನು ಮೊದಲಸಲ ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಿದರು. ಅದರ ಬಗ್ಗೆ ಮುಂದಿನ ದಿನಗಳಲ್ಲಿ ದೀರ್ಘ ಚರ್ಚೆಗಳು ನಡೆದಿರುವುದು ಇತಿಹಾಸ.  ಅಂಬೇಡ್ಕರ್ ಅವರ ನೇತೃತ್ವದ ಸಂವಿಧಾನವನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವ ಸ್ಥಿತಿ ಭಾರತದಲ್ಲಿ ಆಗ ಇರಲಿಲ್ಲ. ಮನುಷ್ಯರೆಲ್ಲರೂ ಸಮಾನರು ಎಂಬುದನ್ನು ಕನಸಿನಲ್ಲಿಯೂ ಕಂಡಿರದಿದ್ದ ಒಂದು ಸಮಾಜದಲ್ಲಿ ಹಾಗೆ ಹೇಳುವು ಅದನ್ನು ಕಾನೂನಾಗಿ ಸ್ವೀಕರಿಸುವ ಸಂವಿಧಾನವೊಂದು ದಢೀರನೆ ಬಂದಾಗ ಏನೆಲ್ಲ ಅಲ್ಲೋಲ ಕಲ್ಲೋಲಗಳು ಆಗಬಹುದೋ ಅದೆಲ್ಲವೂ ವಿವಿಧ ರೀತಿಯಲ್ಲಿ ಆದವು. ನಮ್ಮ ಸಂವಿಧಾನದ ಮೇಲೆ ನಡೆದ ಚರ್ಚೆಗಳಲ್ಲಿ ಅದು ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವುದನ್ನು, ದುಡಿವ ಜನಕ್ಕೆ ವಿಶೇಷವಾಗಿ ತಳಸಮುದಾಯದವರಿಗೆ ಘನತೆಯ ಬದುಕೊಂದನ್ನು ದೊರಕಿಸಲು ಬದ್ಧವಾಗಿರುವುದು ಅನೇಕ ಸಂಪ್ರದಾಯಿ ಮನಸ್ಸುಗಳಿಗೆ ಸರಿತೋರಲಿಲ್ಲ. ಇವುಗಳೂ ಸೇರಿದಂತೆ ಅನೇಕ ವಿಷಯಗಳಲ್ಲಿ ಇಲ್ಲಿನ ಸಂಪ್ರದಾಯಿಗಳು ಸಂವಿಧಾನದ ಕೆಲವು ಅಂಶಗಳಿಗೆ ತೀರ್ವವಾದ ವಿರೋಧವನ್ನು ಎತ್ತುತ್ತಾರೆ. 

ಅವರು ನಮ್ಮ ಸಂವಿಧಾನವನ್ನು ಟೀಕಿಸಿದ ಒಂದು ಅಂಶ ಅದು ಅನೇಕ ವಿದೇಶಿ ಸಂವಿಧಾನಗಳ ಭಾರದಿಂದ ನಲುಗುತ್ತಿದೆ ಎನ್ನುವುದಾಗಿತ್ತು. ಅಂಬೇಡ್ಕರ್ ಆ ಕಾಲದ ವಿಶ್ವದ ಪ್ರಮುಖ  ದೇಶಗಳಾದ ಅಮೇರಿಕ, ಕೆನಡಾ, ದಕ್ಷಿಣ ಅಮೇರಿಕ, ರಷ್ಯಾ, ಬ್ರಿಟನ್, ಆಷ್ಟ್ರೇಲಿಯ ಮುಂತಾದವುಗಳ ಸಂವಿಧಾನಗಳನ್ನು ಅಭ್ಯಸಿಸಿ ಅವುಗಳಲ್ಲಿ ಭಾರತಕ್ಕೆ ಹೊಂದಿಕೆಯಾಗಬಹುದಾದ ಅನೇಕ ಮುತ್ತಮ ಅಂಶಗಳನ್ನು ಹೆಕ್ಕಿತೆಗೆದು ಅವನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿದ್ದು ಅವರ ಈ ಟೀಕೆಗೆ ಕಾರಣವಾಗಿತ್ತು. 

ಈ ಟೀಕೆಯ ಸಂದರ್ಭದಲ್ಲಿ ಅಂಬೇಡ್ಕರ್ ಉತ್ತರ ಕೊಡುವ ತಮ್ಮ ಮಾತುಗಳಲ್ಲಿ ʼಸಾಂವಿಧಾನಿಕ ನೈತಿಕತೆʼ (Constitutional Morality) ಎಂಬ ಪದಪುಂಜವನ್ನು ಟಂಕಿಸಿ ಅದನ್ನು ಅಳವಡಿಸಿಕೊಳ್ಳುವುದರ ಮಹತ್ವವನ್ನು ಕುರಿತು ಹೀಗೆ ಹೇಳುತ್ತಾರೆ, “ಸಾಂವಿಧಾನಿಕ ನೈತಿಕತೆ ಎನ್ನುವುದು ಸ್ವಾಭಾವಿಕವಾಗಿ ಬರುವಂಥದ್ದಲ್ಲಿ; ಬದಲಾಗಿ ಅದನ್ನು ನಾವು ರೂಢಿಸಿಕೊಳ್ಳಬೇಕು. ನಮ್ಮ ಜನತೆ ಅದನ್ನು ಇನ್ನೂ ಕಲಿಯಬೇಕಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.  ʻಪ್ರಜಾಪ್ರಭುತ್ವʼ ಎನ್ನುವುದು ಮೂಲತಃ ಪ್ರಜಾಪ್ರಭುತ್ವ ವಿರೋಧಿ ಗುಣದ ಭಾರತಕ್ಕೆ ಒಂದು ಮೇಲುಡಿಗೆ (Top-dressing) ಮಾತ್ರ!” 

ಐದು ಸಾವಿರ ವರ್ಷಗಳಷ್ಟು ಇತಿಹಾಸವಿದೆ ಎಂದು ಗರ್ವಪಡುವ ದೇಶವೊಂದಕ್ಕೆ, ಲೆಕ್ಕವಿಲ್ಲದಷ್ಟು ಧಾರ್ಮಿಕ ಕೃತಿಗಳನ್ನು ಹೊಂದಿರುವ ದೇಶವೊಂದಕ್ಕೆ, ಎಡಬಿ ಬಿದ್ದರೆ ಯಾವುದೋ ದೇವಸ್ಥಾನಕ್ಕೋ ಮಠಕ್ಕೋ ನಮ್ಮ ತಲೆ ತಾಗುವಷ್ಟು ಸಂಖ್ಯೆಯ ಧಾರ್ಮಿಕ ಕ್ಷೇತ್ರಗಳಿರುವ ದೇಶವೊಂದಕ್ಕೆ, ಇಡೀ ಪ್ರಪಂಚದ ಎಲ್ಲ ರಾಷ್ಟ್ರಗಳಿಗೂ ಅಗತ್ಯವಿರುವಷ್ಟು ರಪ್ತುಮಾಡಿದರೂ ಉಳಿಯಬಹುದಾದಷ್ಟು ದೇವಮಾನವರು, ಬಾಬಾಗಳು ಮುಂತಾದವರನ್ನು ಹೊಂದಿರುವ ದೇಶವೊಂದಕ್ಕೆ ತನ್ನ ದೇಶದ ಸಂವಿಧಾನವೊಂದನ್ನು ರಚಿಸಿಕೊಳ್ಳುವ ಸಂದರ್ಭದಲ್ಲಿ ಎಲ್ಲಮನುಷ್ಯರನ್ನು ಒಂದಾಗಿ ಕಾಣುವ, ಮನುಷ್ಯನ ಘನತೆಯನ್ನು ಎತ್ತಿಹಿಡಿಯುವ, ಸಹೋದರತೆ, ಸಮಾನತೆ, ಮುಂತಾದ ಗುಣಗಳನ್ನು ಅಳವಡಿಸಿಕೊಳ್ಳಲು ಅದು ಪರದೇಶಗಳ ಕಡೆಗೆ ನೋಡಬೇಕಾಗಿ ಬಂದದ್ದು ವಿಪರ್ಯಾಸವಾದರೂ ಸತ್ಯವಾದದ್ದು! ಇಲ್ಲಿರುವ ಅಸಮಾನತೆಯನ್ನೇ ಶಾಸನಬದ್ಧಗೊಳಿಸಿಕೊಳ್ಳುವ ಹುನ್ನಾರದಲ್ಲಿದ್ದ ಕ್ಷುದ್ರ ಮನಸ್ಥಿತಿಗಳಿಗೆ ಈ ಹೊಸಸಂವಿಧಾನದಲ್ಲಿ ʼನಮ್ಮದು ಅನ್ನುವುದು ಇಲ್ಲವೇ ಇಲ್ಲʼ ಅನ್ನಿಸಿದ್ದು ತೀರಾ ಸ್ವಾಭಾವಿಕ.

ಹೀಗೆ ಹೊಸ ಸಂವಿಧಾನದ ಚರ್ಚೆಗಳು ಜೋರಾಗಿ ನಡೆಯುತ್ತಿರುವ ಸಂದರ್ಭದಲ್ಲಿಯೇ ಆಗ ʻಸರ್ಕಾರಿ ಭವನʼ ಎಂದು ಕರೆಯಲ್ಪಡುತ್ತಿದ್ದ ಈಗಿನರಾಷ್ಟ್ರಪತಿ ಭವನ ದಲ್ಲಿ ಭಾರತದ ಮೊದಲ ಮತ್ತು ಕೊನೆಯ ಗೌರ್ನರ್ ಜನರಲ್  ಚಕ್ರವತ್ತಿ ರಾಜಗೋಪಾಲಾಚಾರಿ (ರಾಜಾಜಿ) ಅವರ ಆ ವರ್ಷದ (೧೯೪೮) ನವೆಂಬರ್ ೬ ರಿಂದ ೩೧ ರವರೆಗೆ ʼಭಾರತೀಯ ಕಲಾ ಪ್ರದರ್ಶನʼ ಎಂಬ ಒಂದು ಪ್ರದರ್ಶನ ನಡೆಯಿತು. ಸುಮಾರು ಐದು ಸಾವಿರ ವರ್ಷಗಳ ಭಾರತದ ಇತಿಹಾಸವನ್ನು ಪ್ರತಿನಿಧಿಸುವಂತಿದ್ದ ಈ ಕಲಾ ಪ್ರದರ್ಶನದಲ್ಲಿ ಸಿಂಧೂಕೊಳ್ಳದ ನಾಗರಿಕತೆಯಿಂದ ಆರಂಭವಾಗಿ ಭಾರತದ ಪ್ರಾಚೀನ ಮತ್ತು ಮಧ್ಯಕಾಲೀನ ರಾಜಮನೆತನಗಳಾದ ಮೌಯ್ಯ, ಗುಪ್ತ, ಸುಂಗ,  ಕುಶಾನ, ಅವಧಿಗಳ ಶಿಲ್ಪಗಳೂ ಮೊಗಲ್, ಪಹಾರಿ, ರಾಜಸ್ತಾನಿಮುಂತಾದ ಕಾಲಘಟ್ಟದ ಅನೇಕ ಪೇಯಿಂಟಿಂಗ್ ಗಳೂ ಪ್ರದರ್ಶಿತವಾಗಿದ್ದವು. ಸಾರಾನಾಥ, ಗ್ವಾಲಿಯರ್, ಮಥುರಾ ಮುಂತಾದ ಕಡೆಯಿಂದ ತರಲಾಗಿದ್ದ ಯಕ್ಷ ಯಕ್ಷಿಯರರನ್ನು ಈ ಪ್ರದರ್ಶನ ಒಳಗೊಂಡಿತ್ತು.

ಈ ಪ್ರದರ್ಶನ ನಡೆಯುವಾಗಲೇ(ನವೆಂಬರ್ ೧೪, ೧೯೪೮) ಶಂಕರ್ರ್ಸ್ ವೀಕ್ಲಿಯಲ್ಲಿ ಪ್ರಕಟವಾದ  ಶಂಕರ್ ಅವರ ಈ ವ್ಯಂಗಚಿತ್ರಕ್ಕೆ ಈ ಸಂವಿಧಾನ ಕುರಿತ ಚರ್ಚೆ ಮತ್ತು ಕಲಾ ಪ್ರದರ್ಶನ ಪ್ರೇರಣೆ ನೀಡಿರುವುದು ಸ್ಪಷ್ಟ. ಕಲಾವಿದ ಇಲ್ಲಿ ಸಂತಾನದೇವತೆಯೆಂದು ಪ್ರಸಿದ್ಧವಾಗಿ ಯಕ್ಷಿಗೆ ದುರ್ಗೆಯ ಕೈಗಳನ್ನು ಜೋಡಿಸಿ ಎಲ್ಲ ಕೈಗಳಲ್ಲಿಯೇ ಬೇರೆ ಬೇರೆ ಸಂವಿಧಾನಗಳನ್ನು ಕೊಟ್ಟು ಈ ಚಿತ್ರವನ್ನು ರಚಿಸಿದ್ದಾರೆ. ಪೌರಾಣಿಕ, ಜಾನಪದೀಯ ದೇವತೆಗಳನ್ನು ಆಧುನಿಕ ಮಹಿಳೆಗೆ ಸಂಯೋಜಿಸಿರುವುದು, ಪಕ್ಕದಲ್ಲಿ ಅಂಬೇಡ್ಕರ್ ಅವರನ್ನು ನಿಲ್ಲಿಸಿರುವುದು ಇದರ ಅರ್ಥವೇನೆಂಬುದನ್ನು ಈ ಚಿತ್ರ ಪರಿಣಾಮಕಾರಿಯಾಗಿ ಧ್ವನಿಸುತ್ತದೆ.

ರಾಬು

೨೫-೦೧-೨೦೨೫

Wednesday, January 22, 2025

‘ಪರಾಕ್ರಮಿ’ ನೆನಪುಗಳ ಸಾಂಗತ್ಯದಲ್ಲಿ……

 

ಪರಾಕ್ರಮಿನೆನಪುಗಳ ಸಾಂಗತ್ಯದಲ್ಲಿ…….

 

ಜನವರಿ 23, ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ನಾವೆಲ್ಲ ಮರೆಯಲಾರದ ಮತ್ತು ಮರೆಯಬಾರದ ಕ್ರಾಂತಿಕಾರಕ ಕಾರ್ಯವನ್ನು ಮಾಡಿ ನಿಗೂಢವಾಗಿ ನಮ್ಮನ್ನಗಲಿದ ಸುಭಾಶ್ಚಂದ್ರ ಭೋಸ್ ಅವರ ಜನ್ಮದಿನ. ನೇತಾಜಿ ಕುಟುಂಬದವರು ಮತ್ತು ಫಾರ್ವರ್ಡ್ ಬ್ಲಾಕ್ ಗಳಿಂದ ಜನರಿಂದ ದೇಶಪ್ರೇಮ ದಿವಸ್ ಎಂದೂ ಬಂಗಾಳಿ ಜನರಂದ ದೇಶ ನಾಯಕ ದಿವಸ್ ಎಂದೂ ಅವರ ಜನ್ಮದಿನ ಘೋಷಣೆಯಾಗಬೇಕು ಎಂಬ ಒತ್ತಡ ಇತ್ತಾದರೂ ಇದು ಕೇಂದ್ರ ಸರ್ಕಾರದಿಂದ 2021 ರಲ್ಲಿ ಅಧಿಕೃತವಾಗಿ ಪರಾಕ್ರಮ ದಿವಸ್ ಎಂದು ಘೋಷಣೆಯಾಗಿ ಆಚರಿಸಲ್ಪಡುತ್ತಿದೆ.

1897 ದಿವಸದಂದು ಆಗಿನ ಬ್ರಿಟಿಷ್ ಇಂಡಿಯಾದ ಬಂಗಾಳ ಪ್ರಾಂತ್ಯದ ಓರಿಸ್ಸಾ ವಿಭಾಗದ (ಈಗಿನ ಓಡಿಸ್ಸಾ ರಾಜ್ಯದ) ಕಟಕ್ ನಲ್ಲಿ ಜನಿಸಿದ ಸುಭಾಶ್ಚಂದ್ರ ಅವರದು ಆರಂಭದಿಂದಲೂ ಕ್ರಾಂತಿಕಾರಕ ಬದುಕು. ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಭಾರತೀಯ ವಿದ್ಯಾರ್ಥಿಗಳನ್ನು ಕೀಳಾಗಿ ಕಾಣುತ್ತಿದ್ದ ಬ್ರಿಟಿಷ್ ಪ್ರೊಫೆಸರ್ ಮೇಲೆ ಹಲ್ಲೆಮಾಡಿ ಕಾಲೇಜಿನಿಂದ ಹೊರದಬ್ಬಲ್ಪಟ್ಟಲ್ಲಿಂದಲೇ ಬ್ರಿಟಿಷ್ ವಿರೋಧಿ ಹೋರಾಟ ಆರಂಭವಾಗುತ್ತದೆ. ಮುಂದೆ ಕಾಲದ ಅತಿದೊಡ್ಡ ಸಾರ್ವಜನಿಕ ಪರೀಕ್ಷೆಯಾದ ಐಸಿಎಸ್. (ಈಗಿನ ಐಎಎಸ್ ಗೆ ಸರಿಸಮಾನವಾದದ್ದು) ಪಾಸುಮಾಡಿದರೂ ತಮ್ಮ ಕ್ರಾಂತಿಕಾರಕ ನಿಲುವಿನಿಂದಾಗಿ ದೊಡ್ಡ ಅಧಿಕಾರಿಯಾಗದೇ ದೊಡ್ಡ ಹೋರಾಟಗಾರರಾದವರು.


ಕಾಂಗ್ರೆಸ್
ನಲ್ಲಿ ಗಾಂಧಿಯವರೊಂದಿಗಿನ ಅವರ ಸಂಘರ್ಷ ಮತ್ತು ಗಾಂಧಿಯವರ ಹಟಮಾರಿತನ ಅಸಹಕಾರ ಅವರು ನಿಯಮಾನುಸಾರ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರೂ ಕೆಲಸಮಾಡಲಾಗದೇ ರಾಜಿನಾಮೆ ಕೊಡುವಂತೆ ಮಾಡಿದವು. ಮುಂದೆ ದೇಶವಿದೇಶ ಸುತ್ತಿ ಕ್ರಾಂತಿಕಾರಿ ಸಂಘಟನೆಗಳನ್ನು ಕಟ್ಟಿ ತಮ್ಮ ಕೊನೆಯುಸಿರು ಇರುವವರೆಗೂ ಭಾರತದ ಸ್ವಾತಂತ್ರ್ಯದ ಕನಸುಕಂಡು ಹೋರಾಡಿದ ಸುಭಾಶ್ಚಂದ್ರ ಭೋಸ್ ಅವರಿಗೆ ನೇತಾಜಿ ಎಂಬ ಬಿರುದು ದೊರೆತದ್ದು ಜರ್ಮನಿಯಲ್ಲಿ. ಅವರ ಜರ್ಮನಿಯ ನಾಜಿ ಸಂಪರ್ಕ ನಮಗೆಲ್ಲ ತುಸು ಕಸಿವಿಸಿ ಮಾಡುವುದು ನಿಜವಾದರೂ ಅವರ ಕಾಲದ ಪರಿಸ್ಥಿತಿಯನ್ನು ನೋಡಿದರೆ ಅವರು ಮಾಡಿದ್ದು ಆಗ ತಪ್ಪಲ್ಲವೇನೋ ಅನ್ನಿಸುತ್ತದೆ.

ಇಂತಹ ಮಹಾವೀರನ ಅಂತ್ಯವು ಕೊನೆಗೂ ನಿಗೂಢವಾಗಿಯೇ ಉಳಿಯಿತು. ವಿಮಾನ ಅಪಘಾತದಲ್ಲಿ ಮಡಿದರೆಂಬ (1945ರಲ್ಲಿ) ವರದಿಯನ್ನು ಮನಸಾರೆ ಒಪ್ಪಿಕೊಳ್ಳಲಾರದ ಜನತೆಯ ತೀವ್ರಗೊಂಡ ಭಾವನೆಗಳು 60 ದಶಕದಲ್ಲಿ ನೇತಾಜಿ ಸನ್ಯಾಸಿಯಾಗಿ ಮಾರುವೇಶದಲ್ಲಿ ಬದುಕುತ್ತಿದ್ದಾರೆಂಬ ದೊಡ್ಡ ಸುದ್ಧಿಯನ್ನು ಉಂಟುಮಾಡಿದವು. ಇದು ಸರ್ಕಾರದ ಮೇಲೆ ಒತ್ತಡ ತಂದು 70 ದಶಕದಲ್ಲಿ ಸರ್ಕಾರ ತನಿಖೆಗಾಗಿ ಒಂದು ಏಕಸದಸ್ಯ ಸಮಿತಿಯನ್ನೂ ರಚಿಸುವಂತೆ ಮಾಡಿತು. ಆದರೆ ಫಲಿತಾಂಶ ಜನರ ಮನಸ್ಸಿನ ಸಂಶಯಗಳನ್ನು ಮಾತ್ರ ಬಗೆಹರಿಸಲಿಲ್ಲ.

ನಡುವೆ ರಾಜಕೀಯ ಪಕ್ಷಗಳು ನೇತಾಜಿ ಸಾವನ್ನು ತಮ್ಮ ತಮ್ಮ ಸ್ವಾರ್ಥಕ್ಕೆ ವಿರೋಧಿಗಳ ಮೇಲೆ ಗೂಬೆ ಕೂರಿಸುವುದಕ್ಕೆ ಬಳಸಿಕೊಳ್ಳುವುದೂ ನಡೆಯಿತು. ನೆಹರೂ ಅವರು ನೇತಾಜಿಯವರ ಕಣ್ಮರೆಯ ಬಗ್ಗೆ ತನಿಖೆ ಮಾಡಲು ಆಸಕ್ತಿ ತೋರಲಿಲ್ಲವೆಂದೂ, ಅವರ ಕುಟುಂಬಕ್ಕೆ ಅನ್ಯಾಯ ಮಾಡಿದರೆಂದೂ ಪುಕಾರುಗಳು ಎದ್ದವು. ಮಧ್ಯೆ ಇದೇ ಪುಕಾರನ್ನು ಅಧಿಕೃತ ಗೊಳಿಸಲೆಂದೋ ಏನೋ ನೇತಾಜಿ ಕಡತಗಳ ಸಾರ್ವಜನಿಕಗೊಳಿಸುವಿಕೆಗೆ ಚಾಲನೆಯೂ ಸಿಕ್ಕಿತು. ಇದುವರೆಗೆ ಅನೇಕ ಕಡತಗಳು ಸಾರ್ವಜನಿಕಗೊಂಡಿವೆಯಾದರೂ ನೆಹರೂ ಸರ್ಕಾರ ನೇತಾಜಿ ಕುಟುಂಬಕ್ಕೆ ಅನ್ಯಾಯ ಮಾಡಿತು ಎಂದು ಸಾಬೀತುಪಡಿಸುವ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಬದಲಾಗಿ ಅವರ ಕುಟುಂಬಕ್ಕೆ ಸಹಾಯಮಾಡಿದ ವಿವರ ದೊರೆತಿದೆ. ಏನೋ ಮಾಡಲು ಹೋಗಿ ಏನೋ ಆಯಿತು ಅಂತಾರಲ್ಲ ಹಾಗೆ.

ಇತ್ತೀಚೆಗೆ ನಾನು ಓಡಿಸ್ಸಾ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ತಿರುಗಾಡುವಾಗ ನೇತಾಜಿ ಹುಟ್ಟಿದ ಕಟಕ್ನಲ್ಲಿ ಅವರ ಮೂಲಮನೆ ಇತ್ಯಾದಿ ನೋಡಲು ಆಗಲಿಲ್ಲವಾದರೂ ಓಡಿಸ್ಸಾ ರಾಜಧಾನಿ ಭುವನೇಶ್ವರದಲ್ಲಿ ಅಲ್ಲಿನ ವಿಧಾನಸೌಧ ಹತ್ತಿರದ ಮುಖ್ಯರಸ್ತೆಯ ಗೋಡೆಗಳ ಮೇಲೆ ಬರೆದ ಚಿತ್ರಗಳು ನನ್ನ ಬೆಳಗಿನ ವಾಕಿಂಗ್ ಸಮಯದಲ್ಲಿ ಗಮನ ಸೆಳೆದವು. ನೇತಾಜಿಯ ಹೋರಾಟಕ ಬದುಕಿನ ಮುಖ್ಯ ಸಂಗತಿಗಳನ್ನು ಅಲ್ಲಿ ಸಾರ್ವಜನಿಕರಿಗೆ ಪ್ರೇರಣೆನೀಡುವಂತೆ ಬರೆಸಿದ್ದು ನೋಡಿ ಖುಷಿಯಾಯಿತು. ಬೆಳಗಿನ ಎಳೆಬಿಸಿಲಲ್ಲಿ ಖುಷಿಯಿಂದ ಕೆಲವು ಫೋಟೋ ತೆಗೆದುಕೊಂಡೆ.

ಮುಂದೆ ಕಲ್ಕತ್ತಾ ನಗರದಲ್ಲಿ ತಿರುಗಾಡುವಾಗ ನನ್ನ ಡ್ರೈವರ್‌ ಗೆ ಇಂಗ್ಲಿಷು ಹಿಂದಿ ಸರಿಯಾಗಿ ಬರುತ್ತಿಲ್ಲವಾದ್ದರಿಂದ ಮತ್ತು ನನಗೆ ಬಂಗಾಳಿ ಸರಿಯಾಗಿ ಬರುತ್ತಿಲ್ಲವಾದ್ದರಿಂದ ಒಂದಿಷ್ಟು ಸಂವಹನ ಕೊರತೆಯಿಂದಾಗಿ  ನೇತಾಜಿ ಅವರು ವಾಸಿಸುತ್ತಿದ್ದ ಮನೆ ನೋಡಲು ಹೋದಾಗ ಆಗಲೆ ಆರೂವರೆ ಆಗಿಬಿಟ್ಟಿತು. ಹಾಗಾಗಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಿರುವ ಅವರ ಮನೆಯ ಎಲ್ಲ ಒಳಕೋಣೆಗಳನ್ನು ನೋಡಲು ಆಗದೆ ತುಸು ನಿರಾಶೆಯಾಯಿತು. ಆದರೆ ಮನೆ ಹೊರ ಆವರಣದಲ್ಲಿ ಒಂದಿಷ್ಟು ಹೊತ್ತು ಸುತ್ತಾಡಿದೆ. ಅವರು ಬಳಸುತ್ತಿದ್ದ ಕಾರು ನೋಡಿ ಪುಲಕಿತನಾದೆ.  ಮನೆಯ ವರಾಂಡದಲ್ಲಿ ತಿರುಗಾಡಿ ಬಂದೆ. ಅವರ ಜನ್ಮದಿನದ ನೆಪದಲ್ಲಿ ಇವೆಲ್ಲ ನೆನಪಾದವು.

ಕೆಲವು ಫೋಟೋ ನಿಮಗಾಗಿ

ರಾಬು (22-01-2024)

ಪರಾಕ್ರಮ ದಿವಸ್. 2024