Wednesday, January 22, 2025

‘ಪರಾಕ್ರಮಿ’ ನೆನಪುಗಳ ಸಾಂಗತ್ಯದಲ್ಲಿ……

 

ಪರಾಕ್ರಮಿನೆನಪುಗಳ ಸಾಂಗತ್ಯದಲ್ಲಿ…….

 

ಜನವರಿ 23, ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ನಾವೆಲ್ಲ ಮರೆಯಲಾರದ ಮತ್ತು ಮರೆಯಬಾರದ ಕ್ರಾಂತಿಕಾರಕ ಕಾರ್ಯವನ್ನು ಮಾಡಿ ನಿಗೂಢವಾಗಿ ನಮ್ಮನ್ನಗಲಿದ ಸುಭಾಶ್ಚಂದ್ರ ಭೋಸ್ ಅವರ ಜನ್ಮದಿನ. ನೇತಾಜಿ ಕುಟುಂಬದವರು ಮತ್ತು ಫಾರ್ವರ್ಡ್ ಬ್ಲಾಕ್ ಗಳಿಂದ ಜನರಿಂದ ದೇಶಪ್ರೇಮ ದಿವಸ್ ಎಂದೂ ಬಂಗಾಳಿ ಜನರಂದ ದೇಶ ನಾಯಕ ದಿವಸ್ ಎಂದೂ ಅವರ ಜನ್ಮದಿನ ಘೋಷಣೆಯಾಗಬೇಕು ಎಂಬ ಒತ್ತಡ ಇತ್ತಾದರೂ ಇದು ಕೇಂದ್ರ ಸರ್ಕಾರದಿಂದ 2021 ರಲ್ಲಿ ಅಧಿಕೃತವಾಗಿ ಪರಾಕ್ರಮ ದಿವಸ್ ಎಂದು ಘೋಷಣೆಯಾಗಿ ಆಚರಿಸಲ್ಪಡುತ್ತಿದೆ.

1897 ದಿವಸದಂದು ಆಗಿನ ಬ್ರಿಟಿಷ್ ಇಂಡಿಯಾದ ಬಂಗಾಳ ಪ್ರಾಂತ್ಯದ ಓರಿಸ್ಸಾ ವಿಭಾಗದ (ಈಗಿನ ಓಡಿಸ್ಸಾ ರಾಜ್ಯದ) ಕಟಕ್ ನಲ್ಲಿ ಜನಿಸಿದ ಸುಭಾಶ್ಚಂದ್ರ ಅವರದು ಆರಂಭದಿಂದಲೂ ಕ್ರಾಂತಿಕಾರಕ ಬದುಕು. ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಭಾರತೀಯ ವಿದ್ಯಾರ್ಥಿಗಳನ್ನು ಕೀಳಾಗಿ ಕಾಣುತ್ತಿದ್ದ ಬ್ರಿಟಿಷ್ ಪ್ರೊಫೆಸರ್ ಮೇಲೆ ಹಲ್ಲೆಮಾಡಿ ಕಾಲೇಜಿನಿಂದ ಹೊರದಬ್ಬಲ್ಪಟ್ಟಲ್ಲಿಂದಲೇ ಬ್ರಿಟಿಷ್ ವಿರೋಧಿ ಹೋರಾಟ ಆರಂಭವಾಗುತ್ತದೆ. ಮುಂದೆ ಕಾಲದ ಅತಿದೊಡ್ಡ ಸಾರ್ವಜನಿಕ ಪರೀಕ್ಷೆಯಾದ ಐಸಿಎಸ್. (ಈಗಿನ ಐಎಎಸ್ ಗೆ ಸರಿಸಮಾನವಾದದ್ದು) ಪಾಸುಮಾಡಿದರೂ ತಮ್ಮ ಕ್ರಾಂತಿಕಾರಕ ನಿಲುವಿನಿಂದಾಗಿ ದೊಡ್ಡ ಅಧಿಕಾರಿಯಾಗದೇ ದೊಡ್ಡ ಹೋರಾಟಗಾರರಾದವರು.


ಕಾಂಗ್ರೆಸ್
ನಲ್ಲಿ ಗಾಂಧಿಯವರೊಂದಿಗಿನ ಅವರ ಸಂಘರ್ಷ ಮತ್ತು ಗಾಂಧಿಯವರ ಹಟಮಾರಿತನ ಅಸಹಕಾರ ಅವರು ನಿಯಮಾನುಸಾರ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರೂ ಕೆಲಸಮಾಡಲಾಗದೇ ರಾಜಿನಾಮೆ ಕೊಡುವಂತೆ ಮಾಡಿದವು. ಮುಂದೆ ದೇಶವಿದೇಶ ಸುತ್ತಿ ಕ್ರಾಂತಿಕಾರಿ ಸಂಘಟನೆಗಳನ್ನು ಕಟ್ಟಿ ತಮ್ಮ ಕೊನೆಯುಸಿರು ಇರುವವರೆಗೂ ಭಾರತದ ಸ್ವಾತಂತ್ರ್ಯದ ಕನಸುಕಂಡು ಹೋರಾಡಿದ ಸುಭಾಶ್ಚಂದ್ರ ಭೋಸ್ ಅವರಿಗೆ ನೇತಾಜಿ ಎಂಬ ಬಿರುದು ದೊರೆತದ್ದು ಜರ್ಮನಿಯಲ್ಲಿ. ಅವರ ಜರ್ಮನಿಯ ನಾಜಿ ಸಂಪರ್ಕ ನಮಗೆಲ್ಲ ತುಸು ಕಸಿವಿಸಿ ಮಾಡುವುದು ನಿಜವಾದರೂ ಅವರ ಕಾಲದ ಪರಿಸ್ಥಿತಿಯನ್ನು ನೋಡಿದರೆ ಅವರು ಮಾಡಿದ್ದು ಆಗ ತಪ್ಪಲ್ಲವೇನೋ ಅನ್ನಿಸುತ್ತದೆ.

ಇಂತಹ ಮಹಾವೀರನ ಅಂತ್ಯವು ಕೊನೆಗೂ ನಿಗೂಢವಾಗಿಯೇ ಉಳಿಯಿತು. ವಿಮಾನ ಅಪಘಾತದಲ್ಲಿ ಮಡಿದರೆಂಬ (1945ರಲ್ಲಿ) ವರದಿಯನ್ನು ಮನಸಾರೆ ಒಪ್ಪಿಕೊಳ್ಳಲಾರದ ಜನತೆಯ ತೀವ್ರಗೊಂಡ ಭಾವನೆಗಳು 60 ದಶಕದಲ್ಲಿ ನೇತಾಜಿ ಸನ್ಯಾಸಿಯಾಗಿ ಮಾರುವೇಶದಲ್ಲಿ ಬದುಕುತ್ತಿದ್ದಾರೆಂಬ ದೊಡ್ಡ ಸುದ್ಧಿಯನ್ನು ಉಂಟುಮಾಡಿದವು. ಇದು ಸರ್ಕಾರದ ಮೇಲೆ ಒತ್ತಡ ತಂದು 70 ದಶಕದಲ್ಲಿ ಸರ್ಕಾರ ತನಿಖೆಗಾಗಿ ಒಂದು ಏಕಸದಸ್ಯ ಸಮಿತಿಯನ್ನೂ ರಚಿಸುವಂತೆ ಮಾಡಿತು. ಆದರೆ ಫಲಿತಾಂಶ ಜನರ ಮನಸ್ಸಿನ ಸಂಶಯಗಳನ್ನು ಮಾತ್ರ ಬಗೆಹರಿಸಲಿಲ್ಲ.

ನಡುವೆ ರಾಜಕೀಯ ಪಕ್ಷಗಳು ನೇತಾಜಿ ಸಾವನ್ನು ತಮ್ಮ ತಮ್ಮ ಸ್ವಾರ್ಥಕ್ಕೆ ವಿರೋಧಿಗಳ ಮೇಲೆ ಗೂಬೆ ಕೂರಿಸುವುದಕ್ಕೆ ಬಳಸಿಕೊಳ್ಳುವುದೂ ನಡೆಯಿತು. ನೆಹರೂ ಅವರು ನೇತಾಜಿಯವರ ಕಣ್ಮರೆಯ ಬಗ್ಗೆ ತನಿಖೆ ಮಾಡಲು ಆಸಕ್ತಿ ತೋರಲಿಲ್ಲವೆಂದೂ, ಅವರ ಕುಟುಂಬಕ್ಕೆ ಅನ್ಯಾಯ ಮಾಡಿದರೆಂದೂ ಪುಕಾರುಗಳು ಎದ್ದವು. ಮಧ್ಯೆ ಇದೇ ಪುಕಾರನ್ನು ಅಧಿಕೃತ ಗೊಳಿಸಲೆಂದೋ ಏನೋ ನೇತಾಜಿ ಕಡತಗಳ ಸಾರ್ವಜನಿಕಗೊಳಿಸುವಿಕೆಗೆ ಚಾಲನೆಯೂ ಸಿಕ್ಕಿತು. ಇದುವರೆಗೆ ಅನೇಕ ಕಡತಗಳು ಸಾರ್ವಜನಿಕಗೊಂಡಿವೆಯಾದರೂ ನೆಹರೂ ಸರ್ಕಾರ ನೇತಾಜಿ ಕುಟುಂಬಕ್ಕೆ ಅನ್ಯಾಯ ಮಾಡಿತು ಎಂದು ಸಾಬೀತುಪಡಿಸುವ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಬದಲಾಗಿ ಅವರ ಕುಟುಂಬಕ್ಕೆ ಸಹಾಯಮಾಡಿದ ವಿವರ ದೊರೆತಿದೆ. ಏನೋ ಮಾಡಲು ಹೋಗಿ ಏನೋ ಆಯಿತು ಅಂತಾರಲ್ಲ ಹಾಗೆ.

ಇತ್ತೀಚೆಗೆ ನಾನು ಓಡಿಸ್ಸಾ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ತಿರುಗಾಡುವಾಗ ನೇತಾಜಿ ಹುಟ್ಟಿದ ಕಟಕ್ನಲ್ಲಿ ಅವರ ಮೂಲಮನೆ ಇತ್ಯಾದಿ ನೋಡಲು ಆಗಲಿಲ್ಲವಾದರೂ ಓಡಿಸ್ಸಾ ರಾಜಧಾನಿ ಭುವನೇಶ್ವರದಲ್ಲಿ ಅಲ್ಲಿನ ವಿಧಾನಸೌಧ ಹತ್ತಿರದ ಮುಖ್ಯರಸ್ತೆಯ ಗೋಡೆಗಳ ಮೇಲೆ ಬರೆದ ಚಿತ್ರಗಳು ನನ್ನ ಬೆಳಗಿನ ವಾಕಿಂಗ್ ಸಮಯದಲ್ಲಿ ಗಮನ ಸೆಳೆದವು. ನೇತಾಜಿಯ ಹೋರಾಟಕ ಬದುಕಿನ ಮುಖ್ಯ ಸಂಗತಿಗಳನ್ನು ಅಲ್ಲಿ ಸಾರ್ವಜನಿಕರಿಗೆ ಪ್ರೇರಣೆನೀಡುವಂತೆ ಬರೆಸಿದ್ದು ನೋಡಿ ಖುಷಿಯಾಯಿತು. ಬೆಳಗಿನ ಎಳೆಬಿಸಿಲಲ್ಲಿ ಖುಷಿಯಿಂದ ಕೆಲವು ಫೋಟೋ ತೆಗೆದುಕೊಂಡೆ.

ಮುಂದೆ ಕಲ್ಕತ್ತಾ ನಗರದಲ್ಲಿ ತಿರುಗಾಡುವಾಗ ನನ್ನ ಡ್ರೈವರ್‌ ಗೆ ಇಂಗ್ಲಿಷು ಹಿಂದಿ ಸರಿಯಾಗಿ ಬರುತ್ತಿಲ್ಲವಾದ್ದರಿಂದ ಮತ್ತು ನನಗೆ ಬಂಗಾಳಿ ಸರಿಯಾಗಿ ಬರುತ್ತಿಲ್ಲವಾದ್ದರಿಂದ ಒಂದಿಷ್ಟು ಸಂವಹನ ಕೊರತೆಯಿಂದಾಗಿ  ನೇತಾಜಿ ಅವರು ವಾಸಿಸುತ್ತಿದ್ದ ಮನೆ ನೋಡಲು ಹೋದಾಗ ಆಗಲೆ ಆರೂವರೆ ಆಗಿಬಿಟ್ಟಿತು. ಹಾಗಾಗಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಿರುವ ಅವರ ಮನೆಯ ಎಲ್ಲ ಒಳಕೋಣೆಗಳನ್ನು ನೋಡಲು ಆಗದೆ ತುಸು ನಿರಾಶೆಯಾಯಿತು. ಆದರೆ ಮನೆ ಹೊರ ಆವರಣದಲ್ಲಿ ಒಂದಿಷ್ಟು ಹೊತ್ತು ಸುತ್ತಾಡಿದೆ. ಅವರು ಬಳಸುತ್ತಿದ್ದ ಕಾರು ನೋಡಿ ಪುಲಕಿತನಾದೆ.  ಮನೆಯ ವರಾಂಡದಲ್ಲಿ ತಿರುಗಾಡಿ ಬಂದೆ. ಅವರ ಜನ್ಮದಿನದ ನೆಪದಲ್ಲಿ ಇವೆಲ್ಲ ನೆನಪಾದವು.

ಕೆಲವು ಫೋಟೋ ನಿಮಗಾಗಿ

ರಾಬು (22-01-2024)

ಪರಾಕ್ರಮ ದಿವಸ್. 2024

No comments:

Post a Comment