Friday, January 17, 2025

ಮೂಳೆಯ ರಚನೆ ಮತ್ತು ಭಾರತ ಸಂವಿಧಾನ:

 

ಮೂಳೆಯ ರಚನೆ ಮತ್ತು ಭಾರತ ಸಂವಿಧಾನ:

ಭಾರತ ಸ್ವಾತಂತ್ರ್ಯ ಪಡೆದ ಕ್ಷಣದಲ್ಲಿ ನೆಹರು ನೇತೃತ್ವದ ತಾತ್ಕಾಲಿಕ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣವೇ ಸಂವಿಧಾನ ರಚನೆಯ ಪ್ರಕ್ರಿಯೆಗೆ ಚಾಲನೆ ದೊರೆಯಿತು. ೧೯೪೭ರ ಆಗಸ್ಟ್‌ ೨೯ ರಂದು ಅಂಬೇಡ್ಕರ್‌ ಅವರನ್ನು ಸಂವಿಧಾನ ಕರುಡು ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ. ಅವರು ಸಂವಿಧಾನದ ಕರುಡು ಪ್ರತಿಯನ್ನು ಸಂವಿಧಾನ ಸಭೆಯ ಮುಂದೆ ಮೊದಲಬಾರಿ ಮಂಡಿಸಿದ್ದು ೧೯೪೮ರ ನವೆಂಬರ್‌ ೪ ರಂದು. ಅಂದರೆ ಒಂದು ವರ್ಷ ಎರಡು ತಿಂಗಳಲ್ಲಿಯೇ ಸಂವಿಧಾನ ರಚನೆಯ ಪ್ರಕ್ರಿಯೆಯನ್ನು ಅವರು ಪೂರ್ಣಗೊಳಿಸಿದರು. ಅಂಬೇಡ್ಕರ್‌ ಅವರು ಒಬ್ಬರೇ ಸಂವಿಧಾನ ರಚಿಸಲಿಲ್ಲವೆಂದೂ ಅವರೊಡನೆ ಒಂದು ಸಮಿತಿ ಇತ್ತೆಂದೂ ನಾವು ಹೇಳಬಹುದಾದರೂ ಸಮಿತಿಯ ಉಳಿದೆಲ್ಲ ಸದಸ್ಯರು ಯಾವುದ್ಯಾವುದೋ ಕಾರಣಗಳಿಂದ ಇಂತಹ ಬಹಳ ಮುಖ್ಯವಾದ ಕಾರ್ಯದಿಂದ ಹೇಗೆಲ್ಲ ದೂರ ಉಳಿದರು ಮತ್ತು ಅಂಬೇಡ್ಕರ್‌ ಅವರೊಬ್ಬರ ಮೇಲೆ ಇಂತಹ ದೊಡ್ಡ ಹೊಣೆಗಾರಿಕೆ ಹೇಗೆಲ್ಲ ಬಿತ್ತು ಎಂಬ ಬಗ್ಗೆ ಈಗಾಗಲೇ ಅನೇಕ ಸಾರ್ವಜನಿಕ ಚರ್ಚೆ ನಡೆದಿವೆ. ತಮ್ಮ ಅಗಾಧ ಓದುವಿಕೆಯಿಂದ  ಆ ಕಾಲಕ್ಕೆ ಬಹುಮುಖ್ಯವೆನಿಸುವ ಪ್ರಪಂಚದ ಅನೇಕ ರಾಷ್ಟ್ರಗಳ ಸಂವಿಧಾನಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಭಾರತದ ಬೃಹತ್‌ ಸಂವಿಧಾನವನ್ನು ಅವರು ರಚಿಸಿಕೊಟ್ಟದ್ದು ಇತಿಹಾಸ.

ಅಂಬೇಡ್ಕರ್‌ ನಮ್ಮ ಸಂವಿಧಾನದ ಕರುಡನ್ನು ಮೊದಲ ಸಲ ಸಂವಿಧಾನ ಸಭೆಯಲ್ಲಿ ಮಂಡಿಸಿದ ನಂತರ ಅದರ ಮೇಲೆ ಮುಂದೆ ಅನೇಕ ದಿನಗಳವರೆಗೆ ಬೆಲೆಯುಳ್ಳ ಚರ್ಚೆಗಳು ನಡೆಯುತ್ತವೆ. ಮೊದಲ ಸಲ ಸಂವಿಧಾನ ಸಭೆಗೆ ನಮ್ಮ ಸಂವಿಧಾನವನ್ನು ಮಂಡಿಸುವಾಗ ಅವರು ತಮ್ಮ ಮಾತಿನಲ್ಲಿ ಹೀಗೆ ಹೇಳುತ್ತಾರೆ, “ಕರುಡು ರಚನಾ ಸಮಿತಿಯು ರಚಿಸಿದ ಸಂವಿಧಾನವು ಈ ದೇಶವನ್ನು ಮುಂದಡಿಯಿಡಲು ಸಾಕಾಗುತ್ತದೆ. ಇದು ಕಾರ್ಯಸಾಧುವಾಗುತ್ತದೆ. ಇದು ಸಡಿಲತೆಯಿಂದ  ‍(Flexible) ಕೂಡಿ̧ದ್ದು ದೇಶವನ್ನು ಯುದ್ಧ ಮತ್ತು ಶಾಂತಿ ಎರಡೂ ಕಾಲದಲ್ಲಿಯೂ ಒಟ್ಟಾಗಿರುವಂತೆ ಮಾಡುವಂತಿದೆ. ನಿಜವಾಗಿಯೂ, ನಾನು ಹಾಗೆ ಹೇಳಬಹುದು ಎನ್ನುವುದಾದರೆ, ಒಂದು ವೇಳೆ ಈ ಹೊಸ ಸಂವಿಧಾನದ ಅಡಿಯಲ್ಲಿ ಏನಾದರೂ ಕಟ್ಟ ಘಟನೆಗಳು ನಡೆದರೆ ಅದಕ್ಕೆ ನಾವು ನಾವು ಹೊಂದಿರುವ ಸಂವಿಧಾನ ಕೆಟ್ಟದ್ದು ಎಂಬುದು ಕಾರಣವಲ್ಲ; ಬದಲಾಗಿ ವ್ಯಕ್ತಿ ನೀಚನಾಗಿರುವುದು ಎಂಬುದು ಕಾರಣವಾಗುತ್ತದೆ.”

ಅಂಬೇಡ್ಕರ್‌ ಸಂವಿಧಾನದ ಬಗ್ಗೆ ತಮ್ಮ ಮಾತಿನಲ್ಲಿ ಬಳಸಿದ ʼಸಡಿಲತೆʼ  (Flexibility) ಎಂಬ ಪದ ಮುಂದಿನ ದಿನಗಳಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿ ಅನೇಕ ಬಲಪಂಥೀಯ ಸಂಪ್ರದಾಯಿ ನಾಯಕರ ಹುಬ್ಬೇರುವಂತೆ ಮಾಡುತ್ತದೆ. ಅವರು ಮಾಡಿದ ಅನೇಕ ಟೀಕೆಗಳಲ್ಲಿ ಮುಖ್ಯವಾದ ಒಂದು ಟೀಕೆ ಎಂದರೆ ಆಗ ನೆಹರೂ ಅವರ ತಾತ್ಕಾಲಿಕ ಸರ್ಕಾರದಲ್ಲಿ ರಸ್ತೆಸಾರಿಗೆ ಮತ್ತು ರೈಲ್ವೇ ಇಲಾಖೆ (ಆಗ ಅವೆರಡೂ ಇನ್ನೂ ಬೇರೆ ಬೇರೆ ಆಗಿರಲಿಲ್ಲ) ಸಚಿವರಾಗಿದ್ದ  ಕೆ. ಸಂತಾನಮ್‌ ಅವರದ್ದು. ಅವರು ಅಂಬೇಡ್ಕರ್‌ ನೇತೃತ್ವದ ಸಮಿತಿ ರಚಿಸಿದ್ದ ಈ ಸಂವಿಧಾನವನ್ನು ʼಅತ್ಯಂತ ದುರ್ಬಲ ದಸ್ತಾವೇಜುʼ (Very Weak Document) ಎಂದು ಟೀಕಿಸಿ, ಈ ಸಂವಿಧಾನವು ʼಗಾಂಧಿಚಿಂತನೆಯʼ ಹಳಿತಪ್ಪುವಿಕೆಯನ್ನು ಉತ್ತೇಜಿಸುತ್ತದೆ ಎಂದು ಅಭಿಪ್ರಾಯಪಡುತ್ತಾರೆ.

ಮುಂದುವರೆದು ಮಾತನಾಡುವ ಅವರು ʼಸಡಿಲತೆ ಎನ್ನುವುದು ಯಾವಾಗಲೂ ಒಂದು ಸದ್ಗುಣವಲ್ಲ ಈಗ ಭಾರತಕ್ಕೆ ಬೇಕಾಗಿರುವುದು ʻಸಡಿಲತೆʼಯಲ್ಲ; ಬದಲಾಗಿ ʼಬಿಗಿತʼ(Regidity) ಎಂದು ಹೇಳುತ್ತಾರೆ. ಸಂವಿಧಾನವನ್ನು ಅವರು ಮನುಷ್ಯನ ಎಲುಬಿನ ರಚನೆಗೆ ಹೋಲಿಸಿ, “ಭಾರತಕ್ಕೆ ಈಗ ಬೇಕಾಗಿರುವುದು ಬಿಗಿಯಾದ ಮೂಳೆಯ ರಚನೆಯೇ ಹೊರತು ಬಾಗುವ ಬಳುಕುವ ಮೂಳೆಯ ರಚನೆಯಲ್ಲ” ಎಂದು ಪ್ರತಿಪಾದಿಸುತ್ತಾರೆ.

ಅವರ ಈ ಅಭಿಪ್ರಾಯ ಸಾಕಷ್ಟು ಸಾರ್ವಜನಿಕ ಗಮನವನ್ನು ಸೆಳೆಯುತ್ತದೆ. ಮತ್ತು ಆ ಬಗ್ಗೆ ಹೆಚ್ಚು ಹೆಚ್ಚು ಚರ್ಚೆಯನ್ನು ಹುಟ್ಟುಹಾಕುತ್ತದೆ.  ಈ ವಿಷಯವನ್ನು ಕುರಿತು ೧೯೪೮ ರ ನವೆಂಬರ್‌ ೯ ರಂದು ಹಿಂದೂಸ್ತಾನ್‌ ಟೈಮ್ಸ್‌ ಪತ್ರಿಕೆಯಲ್ಲಿ ಪ್ರಕಟವಾದ ಒಂದು ವ್ಯಂಗಚಿತ್ರ ಜೊತೆಗಿದೆ ಗಮನಿಸಿ.  ಅದರಲ್ಲಿ ಅಂಬೇಡ್ಕರ್‌  ಸಂವಿಧಾನದ ʻಸಡಿತಲೆʼ ಅಂದರೇನು ಮತ್ತು ಅದು ಹೇಗೆ ಪ್ರಯೋಜನವಾಗುತ್ತದೆ ಎಂಬುದನ್ನು ಅದರ ಟೀಕಾಕಾರರಿಗೆ ಪ್ರಾಯೋಗಿಕವಾಗಿ ತೋರಿಸುತ್ತಿದ್ದಾರೆ. ʼಬಿಗಿತದʼ ಪ್ರತಿಪಾದನೆ ಮಾಡಿದ ಸನಾತನತೆಯ ಪ್ರತಿಪಾದಕರಾದ ಸಂತಾನಮ್‌ ಎದುರಿಗೆ ಆಶ್ಚರ್ಯದಿಂದ ನೋಡುತ್ತಿದ್ದಾರೆ!

ಬಲಪಂಥೀಯರಿಗೂ ಎಲುಬಿನ ರಚನೆಗೂ ಒಂದು ಸಂಬಂಧವಿದೆ. ಹಿಂದೆ ಜನಾಂಗೀಯವಾದದ ಪ್ರತಿಪಾದಕರಾದ ಬಿಳಿಯರು ಎಲುಬಿನ ರಚನೆಗೂ ಜನಾಂಗೀಯ ಶ್ರೇಷ್ಠತೆಗೂ ಸಂಬಂಧವನ್ನು ಕಲ್ಪಿಸುವ ಗೀಳಿನವರಾಗಿದ್ದರು ಮತ್ತು ತಲೆಬುರುಡೆಯ ರಚನೆಯ ಮೇಲೆ ಮನುಷ್ಯನ ಶ್ರೇಷ್ಠತೆಯನ್ನು ನಿರ್ಣಯಿಸಬಹುದೆಂದು ತಿಳಿದಿದ್ದರು. ಹುಟ್ಟಿನಿಂದ ಐಯ್ಯಂಗಾರಿ ಬ್ರಾಹ್ಮಣರಾಗಿದ್ದ ಕೆ. ಸಂತಾನಮ್‌ ಭಾರತ ಸಂವಿಧಾನವನ್ನು ಮಾನವನ ಎಲುಬಿನ ರಚನೆಯ ರೂಪಕವನ್ನು ಬಳಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಸಂವಿಧಾನ ಎಲುಬಿನ ರಚನೆಯಲ್ಲ; ಅದು ಮನುಷ್ಯರು ಮನುಷ್ಯರಿಗಾಗಿ ಬರೆದುಕೊಂಡು ಹಾಳೆ ಮತ್ತು ಮಸಿಯ ದಾಖಲೆ ಎಂಬುದನ್ನು ಈ ಸನಾತನ ಸಂಪ್ರದಾಯವಾದಿಗೆ ಅರ್ಥವಾಗಿರಲಿಲ್ಲ!

ಇಲ್ಲಿ ಇನ್ನೊಂದು ಸಂಗತಿ ಬಹಳ ಆಸಕ್ತಿದಾಯಕವಾಗಿದೆ. ಈ ಚಿತ್ರವನ್ನು ಬರೆದದ್ದುಅನ್ವರ್‌ ಅಹಮದ್‌ ಎಂಬ ಕಲಾವಿದ. ಇದು ಪ್ರಕಟವಾದಾಗ ಹಿಂದೂಸ್ತಾನ್‌ ಟೈಮ್ಸ್‌ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿದ್ದವರು ಗಾಂಧೀಜಿಯ ಮಗ ದೇವದಾಸ್‌ ಗಾಂಧಿ! ಇದಕ್ಕೂ ಮೊದಲು ಅಲ್ಲಿ ವ್ಯಂಗಚಿತ್ರಕಾರರಾಗಿದ್ದ ಶಂಕರ್‌ ಅವರು ಒಂದಿಷ್ಟು ಸ್ವತಂತ್ರ ಆಲೋಚನೆಯವರಾದ್ದ ಕಾರಣ ಅವರನ್ನು ದೇವದಾಸ್‌ ಗಾಂಧಿ ಅಲ್ಲಿಂದ ತೆಗೆದುಹಾಕಿ ಆ ಸ್ಥಳಕ್ಕೆ ಈ ಅನ್ವರ್‌ ಅಹಮದ್‌ ಅವರನ್ನು ನೇಮಕಮಾಡಿಕೊಂಡಿರುತ್ತಾರೆ. ಈ ಅನ್ವರ್‌ ಅಹಮದ್‌ ಇದಕ್ಕೂ ಮೊದಲು ಮುಸ್ಲಿಂ ಲೀಗ್‌ ನ ಮುಖವಾಣಿ ʼಡಾನ್‌ʼನಲ್ಲಿ ʼಗಾಂಧಿವಿರೋಧಿʼ ವ್ಯಂಗಚಿತ್ರ ಬರೆಯುತ್ತಿದ್ದವರು. ಈಗ ಅಂಬೇಡ್ಕರ್‌ ಅವರಿಗೆ ಚಿಕಿತ್ಸೆ ಕೊಡುವುದು ಈ ಪತ್ರಿಕೆಯಲ್ಲಿ ಅನ್ವರ್‌ ಅವರ ಕೆಲಸವಾಗಿತ್ತು ಮತ್ತು ಇದರಿಂದ ತಮ್ಮ ಸಂಪಾದಕೀಯವನ್ನು ಚೆನ್ನಾಗಿ ಬರೆಯಬಹುದು ಎಂದು ದೇವದಾಸ್‌ ಗಾಂಧಿಗೆ ಅನ್ನಿಸಿತ್ತು!

 

ರಾಜೇಂದ್ರ ಬುರಡಿಕಟ್ಟಿ

17-01-2025

(ಪ್ರಜಾರಾಜ್ಯದಿನದ ಅಂಗವಾಗಿ ಸಂವಿಧಾನವನ್ನು ಕುರಿತ ಟಿಪ್ಪಣಿ ಸರಣಿ)

No comments:

Post a Comment