ರಾಷ್ಟ್ರೀಯ ಯುವದಿನ: ಸ್ವಾಮಿ ವಿವೇಕಾನಂದರ ಆಯ್ದ ಮಾತುಗಳು
ಆತ್ಮೀಯರೆ, ನಮ್ಮ ಜನಮಾನಸವನ್ನು ಅತ್ಯಂತ ಹೆಚ್ಚು ಪ್ರಭಾವಿಸಿದ ಇದುವರೆಗಿನ ಭಾರತದ ಸಾಧು-ಸಂತರಲ್ಲಿ ವಿವೇಕಾನಂದರೇ ಮೊದಲಿಗರು ಎನ್ನುವುದರಲ್ಲಿ ಎರಡು ಮಾತಿಲ್ಲ; ವಿವೇಕಾನಂದರ ವಿಚಾರಧಾರೆ ಕುರಿತು ನಮ್ಮಲ್ಲಿ ವೈವಿಧ್ಯಮಯ ವ್ಯಾಖ್ಯಾನಗಳಿವೆ. ಅವೆಲ್ಲವಕ್ಕೂ ಸಮರ್ಥಿಸಬಲ್ಲ ಸಾಕ್ಷ್ಯಾಧಾರಗಳೂ ಇವೆ. ಅವರು ಹಿಂದೂ ಧರ್ಮದ ಪ್ರತಿಪಾದಕರು ಎಂದು ಹಿಂದೂಗಳಿಗಿಂತ ಹಿಂದುತ್ವವಾದಿಗಳು ಅವರನ್ನು ಹೊತ್ತುಮೆರವಣಿಗೆ ಮಾಡುವ ಮೂಲಕ ಅವರಿಗೆ ಸನಾತನಿಯಪಟ್ಟ ಕಟ್ಟುತ್ತಿದ್ದಾರೆ. ಅದಕ್ಕೆ ವಿರುದ್ಧವಾಗಿ ನಾಡಿನ-ದೇಶದ ಪ್ರಗತಿಪರರು ವಿವೇಕಾನಂದರು ʼಕುರುಡುಹಿಂದೂಧರ್ಮದʼ ಪ್ರತಿಪಾದಕರಾಗಿರದೇ ಒಬ್ಬ ಕ್ರಾಂತಿಕಾರಿಯಾಗಿದ್ದರು ಎಂದು ವಾದಿಸುತ್ತಿದ್ದಾರೆ. ಇವುಗಳಲ್ಲಿ ಯಾವುದು ಸತ್ಯ; ಯಾವುದು ಮಿಥ್ಯ? ವಿವೇಕಾನಂದರ ಸಮಗ್ರ ಭಾಷಣ ಬರೆಹಗಳನ್ನು ಓದಿದರೆ ವಿವೇಕಾನಂದರ ಬಗ್ಗೆ ಹೀಗೆ ಗೆರೆಕೊರೆದಂತೆ ಹೇಳುವುದು ಕಷ್ಟ ಎಂದೇ ನನಗನ್ನಿಸುತ್ತದೆ. ಅವರು ಭಾರತದ ಹೊರಗೆ ಮಾತನಾಡುವಾಗ ಭಾರತದ ಧರ್ಮ ಆಚಾರ ವಿಚಾರಗಳನ್ನು ಹೊಗಳಿ ಮಾತನಾಡಿದ್ದು ಮತ್ತು ಭಾರತದ ಒಳಗಡೆ ಮಾತನಾಡುವಾಗ ಇಲ್ಲಿನ ಧರ್ಮ ಸಮಾಜದಲ್ಲಿರುವ ಲೋಪದೋಷಗಳನ್ನು ಒತ್ತುಕೊಟ್ಟು ಎತ್ತಿತೋರಿಸಿದ್ದನ್ನು ನಾವು ಸೂಕ್ಷ್ಮವಾಗಿ ನೋಡಿದರೆ ಕಂಡುಬರುತ್ತದೆ. ಇದರರ್ಥವೇನು?
ರಾಷ್ಟ್ರೀಯ ಯುವದಿನದ ಹೆಸರಲ್ಲಿ ವಿವೇಕಾನಂದರನ್ನು ಹೊತ್ತುಮೆರೆಸುವ ಬದಲು ಅವರ ಬರೆಹ ಮತ್ತು ಭಾಷಣಗಳಲ್ಲಿನ ಕೆಲವು ಮುಖ್ಯಸಂಗತಿಗಳನ್ನು ಎಲ್ಲರೂ ವಿಶೇಷವಾಗಿ ನಮ್ಮ ಯುವಜನತೆ ಓದಿ ಅರ್ಥಮಾಡಿಕೊಂಡು ವಿವೇಕಾನಂದರ ಬಗ್ಗೆ ಸ್ವತಃ ತಮ್ಮದೇ ಆದ ಆಲೋಚನ ಕ್ರಮವನ್ನು ಬೆಳಸಿಕೊಳ್ಳುವುದು ಬಹಳ ಮುಖ್ಯ ಎಂದು ನನಗೆ ಅನಿಸುತ್ತದೆ. ಇದರಿಂದ ವಿವೇಕಾನಂದರ ಬಗೆಗಿನ ಅಪವ್ಯಾಖ್ಯಾನಕ್ಕೆ ಅವರು ಬಲಿಯಾಗುವುದು ತಪ್ಪುತ್ತದೆ ಮಾತ್ರವಲ್ಲ; ಅವರ ಬದುಕಿಗೂ ಗಣನೀಯ ಪ್ರಯೋಜನವಾಗುತ್ತದೆ. ಈ ಹಿನ್ನಲೆಯಲ್ಲಿ ವಿವೇಕಾನಂದರು ಬೇರೆ ಬೇರೆ ಸಂದರ್ಭಗಳಲ್ಲಿ ಸ್ಥಳಗಳಲ್ಲಿ ಆಡಿದ ಮಾತು, ಬರೆದ ಬರೆಹಗಳಲ್ಲಿ ಕೆಲವನ್ನು ಅವರ ಸಮಗ್ರ ಸಾಹಿತ್ಯದಿಂದ ಆಯ್ದು ಇಲ್ಲಿ ಕೊಡುತ್ತಿರುವೆ. ದೊಡ್ಡಪ್ರಮಾಣದಲ್ಲಿ ಇರುವ ಅವರ ಸಮಗ್ರ ಕೃತಿಶ್ರೇಣಿಯನ್ನು ಓದಲು ಆಗದವರಿಗೆ ಅವರ ಮುಖ್ಯವಿಚಾರಗಳನ್ನು ಇದರಿಂದ ಗ್ರಹಿಸಲು ಸಾಧ್ಯವಾಗಬಹುದೆಂದೂ ಅದರಿಂದ ಸಾಕಷ್ಟು ಪ್ರಯೋಜನವಾದೀತೆಂದು ಭಾವಿಸುವೆ. ಎಲ್ಲರಿಗೂ ರಾಷ್ಟ್ರೀಯ ಯುವದಿನದ ಹಾರ್ದಿಕ ಶುಭಾಷಯಗಳು.
–
ರಾಜೇಂದ್ರ ಬುರಡಿಕಟ್ಟಿ
*****
ಸ್ವಾಮಿ ವಿವೇಕಾನಂದರ ಆಯ್ದ ಮಾತುಗಳು
·
ಜಾತಿ, ಮತ, ಪಂಥ, ಪರಮತದ್ವೇಷ, ಅದರ ಭೀಕರ ಸಂತತಿಯಾದ ಸ್ವಮತಭ್ರಾಂತಿ
ಈ ಸುಂದರ ವಸುಂಧರೆಯನ್ನು ಬಡಿದುಕೊಂಡಿವೆ. ಅದರಿಂದ ಲೋಕ ಹಿಂಸೆಯಿಂದ ತುಂಬಿದೆ. ಪದೇ ಪದೇ ಮಾನವರಕ್ತದಿಂದ
ಈ ಲೋಕ ತೊಯ್ದುಹೋಗಿದೆ. ಇಂದು ಬೆಳಿಗ್ಗೆ ಈ ಮಹಾಧಿವೇಶನ ಪ್ರಾರಂಭೋತ್ಸವದ ಗೌರವಾನುಸೂಚಕವಾಗಿ ಬಾರಿಸಿದ
ಗಂಟೆಯ ನಿನಾದವೇ, ಈ ಪರಮತ ದ್ವೇಷ, ಸ್ವಮತಭ್ರಾಂತಿಯ ಮರಣಸೂಚಕ ಧ್ವನಿಯಾಗಲಿ ಎಂದು ನಾನು ಹೃತ್ಪೂರ್ವಕವಾಗಿ
ಹಾರೈಸುತ್ತೇನೆ.
(೧೮೯೩ ಸೆಪ್ಟಂಬರ್ ೧೧ರ ವಿಶ್ವಪ್ರಸಿದ್ಧ ಚಿಕ್ಯಾಗೋ ಸರ್ವಧರ್ಮ ಸಮ್ಮೇಳನದ ಉದ್ಘಾಟನ ಅಧಿವೇಶನದ ಭಾಷಣದಲ್ಲಿ)
· ವೇದಾಂತ ತತ್ವದ ಅತ್ಯುನ್ನತ ಆಧ್ಯಾತ್ಮಿಕ ಶಿಖರಕ್ಕೇರಿದ ಸತ್ಯದಿಂದ ಹಿಡಿದು ಅತ್ಯಂತ ಕುಬ್ಜ ಭಾವನೆಗಳ ಮೂರ್ತಿಪೂಜೆಯವರೆಗೂ, ಬೌದ್ಧರ ನಿರೀಶ್ವರವಾದಕ್ಕೂ, ಜೈನರ ನಾಸ್ತಿಕವಾದಕ್ಕೂ ಎಲ್ಲಕ್ಕೂ ಇಲ್ಲಿ (ಭಾರತದಲ್ಲಿ) ಎಡೆ ಇದೆ. -“ನಾವೇಕೆ ಬಡಿದಾಡುತ್ತೇವೆ” ಚಿಕ್ಯಾಗೋ ಉಪನ್ಯಾಸ (೧೫-೦೯-೧೮೯೩)
· ಮಾನವರನ್ನು ಪಾಪಿಗಳು ಎಂದು ಕರೆಯುವುದೇ ಪಾಪ! ಮಾನವ ಸ್ವಭಾವಕ್ಕೆ ಅದೊಂದು ಅಳಿಸಲಾರದ ಕಳಂಕ. – ಮೇಲಿನಂತೆ
· ಭಾರತದಲ್ಲಿ ಬಹುದೈವವಾದ ಎಲ್ಲವೇ ಇಲ್ಲವೆಂದು ನಾನು ಹೇಳಲಿಚ್ಚಿಸುತ್ತೇನೆ. ಏಕೆಂದರೆ ನೀವು ಯಾವು ಗಜಡಿಯಲ್ಲಿಯೇ ನಿಂತು ಪೂಜಾರಿ ವಿಗ್ರಹವನ್ನು ಸಂಬೋಧಿಸುವುದನ್ನು ಕೇಳಿದರೆ, ಆ ಪೂಜಾರಿ ದೇವರ ಎಲ್ಲ ಗುಣಗಳನ್ನೂ ಆ ವಿಗ್ರಹಕ್ಕೇ ಅನ್ವಯಿಸುತ್ತಾನೆ” – ಮೇಲಿನಂತೆ.
· “ಅಂಧಶ್ರದ್ಧೆ ಮನುಷ್ಯನ ದೊಡ್ಡ ಶತ್ರು. ಆದರೆ ಸ್ವಮತಭ್ರಾಂತಿ ಅದಕ್ಕಿಂತ ಕೀಳು” – ಮೇಲಿನಂತೆ.
· ನಾನು ಬೌದ್ಧನಲ್ಲ. ಆದರೂ ನಾನು ಬೌದ್ಧನೇ. ಚೀನಾ, ಜಪಾನ್, ಸಿಲೋನಿನಲ್ಲಿ ಆ ಮಹಾಗುರುವಿನ ಬೋಧನೆಗಳನ್ನು ಅನುಸರಿಸುತ್ತಾರೆ. ಹಿಂದೂ ಧರ್ಮ ಮತ್ತು ಬೌದ್ಧಧರ್ಮಕ್ಕೂ ಇರುವ ಸಂಬಂಧ ಬಹು ಮಟ್ಟಿಗೆ ಜೂಡಾಹಿಸಂ ಮತ್ತು ಕ್ರೈಸ್ತಧರ್ಮಕ್ಕೂ ಇರುವ ಸಂಬಂಧವೇ. – ಚಿಕ್ಯಾಗೋ ಉಪನ್ಯಾಸ ʼಹಿಂದೂ ಧರ್ಮದ ಪರಿಪೂರ್ಣತೆ ಬೌದ್ಧಧರ್ಮʼ ದಿ: ೨೬-೦೯-೧೮೯೩
· ಬೌದ್ಧಧರ್ಮವಿಲ್ಲದೆ ಹಿಂದೂಧರ್ಮವಿರಲಾರದು; ಹಿಂದೂಧರ್ಮವಿಲ್ಲದೆ ಬೌದ್ಧಧರ್ಮ ಇರಲಾರದು. ಬ್ರಾಹ್ಮಣರ ಬುದ್ಧಿಶಕ್ತಿಯಿಲ್ಲದೆ ಬೌದ್ಧರು ನಿಲ್ಲಲಾರರು. ಬೌದ್ಧರ ಕರುಣಾಮಯ ಹೃದಯವಿಲ್ಲದೆ ಬ್ರಾಹ್ಮಣರು ಉಳಿಯಲಾರರು. – ಮೇಲಿನಂತೆ
· ಯಾವುದೇ ಒಂದು ಧರ್ಮವು ಇನ್ನುಳಿದ ಎಲ್ಲ ಧರ್ಮಗಳನ್ನೂ ನಾಶಪಡಿಸಿ ತನ್ನ ಯಶಸ್ಸನ್ನು ಬೆಳಗಿಸುವುದರಿಂದ ದೊಡ್ಡಸ್ತಿಕೆ ಸಾಧ್ಯವಿಲ್ಲ. – ಚಿಕ್ಯಾಗೋ ಧರ್ಮಸಮ್ಮೇಳನದ ಮುಕ್ತಾಯ ಅಧಿವೇಶನದ ಭಾಷಣ – ೨೬-೦೯-೧೮೯೩
· ಈ ಲೋಕದಲ್ಲಿ ಯಾವುದಾದರೂ ಒಂದು ಮತದ ಗುತ್ತಿಗೆಯಿಲ್ಲ. ಎಲ್ಲ ಧರ್ಮಗಳಲ್ಲೂ ಅತ್ಯಂತ ಸದ್ಗುಣ, ಸದ್ಗುಣಿಗಳು ಇದ್ದಾರೆ. ಆದ ಕಾರಣ: ʼಒಂದಾಗಿರಿ ಬಡಿದಾಡಬೇಡಿʼ ʻಧ್ವಂಸಮಾಡಬೇಡಿ ಜೀರ್ಣಿಸಿಕೊಳ್ಳಿʼ - ಮೇಲಿನಂತೆ
· ನಾವು ಯಾವುದನ್ನೂ ದ್ವೇಷಿಸಬಾರದು. ಲೋಕದಲ್ಲಿ ಯಾವಾಗಲೂ ಒಳ್ಳೆಯದು, ಕೆಟ್ಟದ್ದು ಕೂಡಿಕೊಂಡೇ ಇದೆ. ದುರ್ಬಲರ ಬಗ್ಗೆ ಸಹಾನುಭೂತಿಯಿರಲಿ…. ನಾವು ಮತಭ್ರಾಂತಿಯುಳ್ಳವರಾಗಬಾರದು – Complete Works Vol: 1
· ಚಿಕ್ಕ ಗಿಡವನ್ನು ಬೆಳೆಸಲು ಬೇಲಿಕಟ್ಟಿದಂತೆ ಆಹಾರ ನಿಯಮಗಳನ್ನು ಅನುಸರಿಸಬೇಕು. ಅದು ಬೆಳೆದು ದೊಡ್ಡದಾದ ಮೇಲೆ ಬೇಲಿಯನ್ನು ತೆಗೆಯಬಹುದು - - ಮೇಲಿನಂತೆ
· ಇತರರಿಗೆ ಒಳಿತನ್ನುಂಟುಮಾಡುವುದಾದರೆ ಹಣ ಒಳ್ಳೆಯದೇ. ಇಲ್ಲದಿದ್ದರೆ ಅದೊಂದು ಕೇಡಿನ ರಾಸಿ. ಅದಷ್ಟು ಬೇಗ ತೊಲಗಿದರೆ ಅಷ್ಟು ಶ್ರೇಷ್ಠ. – ಮೇಲಿನಂತೆ
· ಧರ್ಮ ಪುಸ್ತಕದಲ್ಲೂ ಇಲ್ಲ; ಬೌದ್ಧಿಕ ಔನ್ನತ್ಯದಲ್ಲೂ ಇಲ್ಲ; ಕೇವಲ ತರ್ಕದಲ್ಲೂ ಇಲ್ಲ; ತರ್ಕ, ಶಾಸ್ತ್ರ, ಗ್ರಂಥ, ಆಚಾರ, ವಿಚಾರಗಳೆಲ್ಲವೂ ಧರ್ಮಕ್ಕೆ ನೆರವಾಗುವ ಊರುಗೋಲುಗಳು. ಧರ್ಮವಿರುವುದು ಅರಿವಿನಲ್ಲಿ. – ಮೇಲಿನಂತೆ
· ಆಯುಷ್ಯ, ಆರೋಗ್ಯ, ಭಾಗ್ಯಕ್ಕಾಗಿ ಪ್ರಾರ್ಥಿಸುವುದು ಭಕ್ತಿಯಲ್ಲ. ಭಕ್ತನಾಗಲು ಬಯಸುವವನು, ದೇವರನ್ನು ಪ್ರೀತಿಸಲಿಚ್ಚಿಸುವವನು ಇಂಥ ಪ್ರಾರ್ಥನೆಗಳನ್ನೆಲ್ಲ ಬಿಟ್ಟುಬಿಡಬೇಕು. ʼಗಂಗೆಯ ದಡದಲ್ಲಿಯೇ ಇದ್ದು ಕುಡಿವ ನೀರಿಗಾಗಿ ಭಾವಿ ತೋಡುವವನು ಕಡುಮೂರ್ಖ. ವಜ್ರದ ಗಣಿಯಲ್ಲೇ ಇದ್ದು ಗಾಜಿನ ಮಣಿಗಳಿಗಾಗಿ ಬೆದಕಾಡುವವನು ಶುದ್ಧಮೂರ್ಖನಲ್ಲವೇ? Complete Works Vol: 4
· ಒಂದು ಜಾತಿಯಲ್ಲಿ ಹುಟ್ಟುವುದು ತಪ್ಪಲ್ಲ. ಆದರೆ ಅದರಲ್ಲೇ ಸಾಯಬಾರದು. – ಮೇಲಿನಂತೆ
· ನಮ್ಮ ದೃಷ್ಟಿಗೆ ಅಭಿಪ್ರಾಯಕ್ಕೆ ಅನುಗುಣವಲ್ಲದ ಧರ್ಮವನ್ನು ಯಾರಾದರೂ ಹೇಳಿದರೆ, ಅವರೊಡನೆ ನಾವು ಹೊಡೆದಾಟಕ್ಕೆ ನಿಲ್ಲಬಾರದು. ತೋರಿಕೆಗೆ ತದ್ವಿರುದ್ಧವೆಂದು ಕಂಡುಬಂದರೂ ಅವೆರಡೂ ಸೇರಿ ಇರಬಹುದೆಂದು ನಾವು ಯಾವಾಗಲೂ ನೆನಪಿನಲ್ಲಿಡಬೇಕು. – ಮೇಲಿನಂತೆ
· ತಾನೇನು ಪೂಜಿಸುತ್ತೇನೋ ಇತರರೂ ಅದನ್ನೇ ಪೂಜಿಸಬೇಕೆಂದು ಬಲತ್ಕಾರ ಮಾಡಬಾರದು. ಎಲ್ಲರೂ ಒಂದೇ ದೇವರನ್ನು ಪೂಜಿಸಬೇಕೆಂದು, ಒಂದೇ ದೊಡ್ಡಿಯಲ್ಲಿ ಚಲ್ಲಾಪಿಲ್ಲಿಯಾಗಿ ಕೂಡಬೇಕೆಂದು, ಸೈನ್ಯ, ಬಲತ್ಕಾರವನ್ನು ಉಪಯೋಗಿಸಿದವರೆಲ್ಲ ಸೋತು ಹೋಗಿದ್ದಾರೆ; ಇನ್ನು ಮುಂದೆಯೂ ಯಾವಾಗಲೂ ಸೋತುಹೋಗುತ್ತಾರೆ. ಏಕೆಂದರೆ ಹಾಗೆ ಮಾಡುವುದು ಮಾನವ ಸ್ವಭಾವಕ್ಕೇ ವಿರುದ್ಧವಾಗಿದೆ. ಅಷ್ಟೇ ಅಲ್ಲ ಅದರಿಂದ ಎಲ್ಲ ತರದ ಬೆಳವಣಿಗೆಗಳು ನಿಂತುಹೋಗುವ ಅಪಾಯವಿದೆ. – ಮೇಲಿನಂತೆ
· ಕೊಳೆತ ಹೆಣವನ್ನು ಗುಲಾಬಿಯಿಂದ ಮುಚ್ಚಲಾರೆ. ಗುಲಾಬಿ ಬಾಡುತ್ತದೆ. ಕೊಳೆತ ಹೆಣ ಇನ್ನೂ ಅಸಹ್ಯವಾಗಿ ಬಯಲಿಗೆ ಬೀಳುತ್ತದೆ. ಹಾಗೆಯೇ ಈ ಬಾಳೂ ಕೂಡ – ಮೇಲಿನಂತೆ
· ನಮ್ಮ ರೋಗ ರುಜಿನಗಳನ್ನು ಬಂಗಾರದ ಎಲೆಗಳಿಂದ ಮುಚ್ಚುವುದರಿಂದ ಪರಿಷ್ಕಾರವಾಗುವುದಿಲ್ಲ. ಬಾಳು ಕಟು ಸತ್ಯವಾದುದು. ಧೈರ್ಯವಾಗಿ ಅದನ್ನು ಉತ್ತರಿಸಿರಿ. ಬರುವ ದುಃಖಗಳಿಗೆಲ್ಲ ಈ ಕಿರುಕುಳ ದೇವರುಗಳು ಕಾರಣವೆಂದು ಮೊರೆಯಿಡಬೇಡಿ. ನಮಗೆ ನಾವೇ ನಮ್ಮ ಅದೃಷ್ಟವನ್ನು ಬರೆದು ಅಳಿಸಬಹುದು – ಮೇಲಿನಂತೆ.
· ಮನುಷ್ಯನು ದೇಹ ಮನಸ್ಸುಗಳಿಂದ ಪರಿಶುದ್ಧನಾಗದೆ ದೇವಾಲಯಕ್ಕೆ ಬಂದು ಪೂಜೆ ಮಾಡುವುದು ನಿಷ್ಪ್ರಯೋಜನ. ಮೈ ಮನಸ್ಸುಗಳಲ್ಲಿ ಪರಿಶುದ್ಧರಾದವರ ಪ್ರಾರ್ಥನೆಯನ್ನು ಕೇಳಿ ಶಿವನು ಓಗೊಡುವನು. ಅಪವಿತ್ರವಾದ ಮನಸ್ಸಿನಿಂದ ದೇವಾಲಯದೊಳಗೆ ಹೋದರೆ ಅಂಥವನು ತನ್ನ ಪಾಪಕ್ಕೆ ಮತ್ತಷ್ಟು ಪಾಪವನ್ನು ಕೂಡಿಹಾಕಿಕೊಂಡು ಹಿಂದಿಗಿಂತಲೂ ಪಾಪಿಯಾಗಿ ಹಿಂದಿರುಗುವನು. – ತಮಿಳುನಾಡಿನ ರಾಮೇಶ್ವರ ದೇವಾಲಯದಲ್ಲಿ ಪೂಜೆಯನ್ನು ಕುರಿತು ಮಾಡಿದ ಭಾಷಣದಲ್ಲಿ.
· ಪರಿಶುದ್ಧನಾಗಿಯೂ ಪರೋಪಕಾರಿಯಾಗಿಯೂ ಇರುವುದೇ ಪೂಜೆ. ದರಿದ್ರರಲ್ಲಿಯೂ, ದುರ್ಬಲರಲ್ಲಿಯೂ, ರೋಗಿಗಳಲ್ಲಿಯೂ ಶಿವನನ್ನು ನೋಡುವಾತನೇ ನಿಜವಾದ ಶಿವಪೂಜಕ. ಯಾರು ಕುಲಗೋತ್ರಗಳನ್ನು ನೋಡದೆ ದರಿದ್ರನ ಸೇವೆ ಮಾಡುವನೋ ಅವನು ಕೇವಲ ಗುಡಿಯಲ್ಲಿ ಪೂಜೆ ಮಾಡುವವನಿಗಿಂತ ನೂರುಪಟ್ಟು ಅಧಿಕ ತೃಪ್ತಿಯನ್ನು ಪಡೆಯುವನು – ಮೇಲಿನಂತೆ.
· ನೀವು ಬಹುಜನರು ತಿಳಿದಿರುವಂತೆ ನಾನು ಅಮೇರಿಕೆಗೆ ಹೋದುದು ಸರ್ವಧರ್ಮ ಸಮ್ಮೇಳನಕ್ಕೆ ಅಲ್ಲ. ಹನ್ನೆರಡು ವರ್ಷ ಭರತ ಖಂಡದ ಆದ್ಯಂತ ಸಂಚರಿಸಿದೆ. ಇಲ್ಲಿ ನಮ್ಮ ದೇಶಬಾಂಧವರ ಉದ್ದಾರದ ದಾರಿ ಕಾಣಲಿಲ್ಲ. ಅಖಂಡ ಐಶ್ವರ್ಯಭರಿತ ಅಮೇರಿಕೆಯಿಂದ ಭಾರತದ ದಾರಿದ್ರ್ಯ ನಿವಾರಣೆ ಮಾಡಲು ಸಾಧ್ಯವೇ ಎಂಬುದನ್ನು ನೋಡಲು ಅಮೇರಿಕೆಗೆ ಹೋದೆ – ಮದ್ರಾಸ್ ನ ( ಈಗಿನ ಚೆನ್ನೈ) ವಿಕ್ಟೋರಿಯಾ ಹಾಲ್‌ನಲ್ಲಿ ಮಾಡಿದ ಭಾಷಣದಲ್ಲಿ)
· ವಿದ್ಯಾಭ್ಯಾಸವು ಸಾಧ್ಯವಾದಷ್ಟೂ ಪ್ರಾಯೋಗಿಕವಾಗಿಯೂ ಪ್ರಯೋಜನಕಾರಿಯೂ ಆಗಿದ್ದು ರಾಷ್ಟ್ರಕ್ಕೆಲ್ಲ ಸಮಾನವಾದ ರಾಷ್ಟ್ರೀಯ ದೃಷ್ಟಿಯುಳ್ಳದ್ದಾಗಿರಬೇಕು – ಮದ್ರಾಸ್ ಹಾರಂಸ್ಟನ್ ಸರ್ಕಲ್ ಪೆವಿಲಿಯನ್ ಭಾಷಣ (೧೪-೦೨-೧೮೯೭)
· ನಾನು ಯಾವ ಪಂಗಡಕ್ಕೂ, ಯಾವ ಜಾತಿಗೂ ಸೇರಿದವನ್ಲಲ. ಆದರೆ ಎಲ್ಲ ಧರ್ಮಗಳೂ ನನಗೆ ಪೂಜ್ಯವಾದುವುಗಳೇ. ಎಲ್ಲ ಪುರಾತನ ಧರ್ಮಗಳಲ್ಲಿರುವ ಸತ್ಯವೂ ಶಾಶ್ವತವೂ ಆದ ಸಂಗತಿಗಳನ್ನು ಕಂಡುಹಿಡಿಯಲು ನನ್ನ ಬಾಳಿನುದ್ದಕ್ಕೂ ಪ್ರಯತ್ನಿಸುತ್ತಿದ್ದೇನೆ – ಲಾಹೋರ್ ನಗರದಲ್ಲಿ ಮಾಡಿದ ಭಾಷಣದಲ್ಲಿ.
· ಒಬ್ಬನ ಸಾವು ನೋವುಗಳು ನಿಮ್ಮ ಮಕ್ಕಳೇ ಅನುಭವಿಸುತ್ತಿರುವ ಸಂಕಟ ಎಂದು ನಿಮ್ಮ ಮನಸ್ಸಿನಲ್ಲಿ ಎಂದು ಮೂಡಿಬರುತ್ತದೆಯೋ ಅಂದೇ ನೀವು ನಿಜವಾದ ಹಿಂದೂಗಳಾಗುತ್ತೀರಿ. – ಮೇಲಿನಂತೆ.
· ಎಂದು ಮನುಷ್ಯನು ಹೊಸತನ್ನು ಕಲಿಯಲು ನಿರಾಕರಿಸುತ್ತಾನೋ ಅಂದೇ ಅವನು ಸತ್ತಂತೆ – ಮೇಲಿನಂತೆ.
· ನಾನು ತೀರಿದ ಮೇಲೆ ವಿವೇಕಾನಂದರೇ ಹುಟ್ಟುವುದಿಲ್ಲ ಎಂದು ಭಾವಿಸಿದ್ದೀರಾ? ಭಗವಂತನಿಗೆ ಬೇಕಾದರೆ ನನ್ನಂಥ ಸಹಸ್ರಾರು, ಲಕ್ಷೋಪಲಕ್ಷ ವಿವೇಕಾನಂದರನ್ನು ಹುಟ್ಟಿಸುತ್ತಾನೆ! – ಸಂದರ್ಶನವೊಂದರಲ್ಲಿ , Complete Works Vol: 5
*****
ಡಾ. ರಾಜೇಂದ್ರ ಬುರಡಿಕಟ್ಟಿ.
ರಾಷ್ಟ್ರೀಯ ಯುವದಿನ,
ಜನವರಿ ೧೨, ೨೦೨೫
No comments:
Post a Comment