ʼಭೀಮʼನೆಂಬ ಅಡುಗೆ ಭಟ್ಟನೂ ʻಸಂವಿಧಾನ ರಚನೆʼ ಎಂಬ ಅಡುಗೆಯೂ…
ಭಾರತ ಸಂವಿಧಾನದ ಮೂರನೆಯ ಮತ್ತು ಅಂತಿಮ ಕರುಡು ವಾಚನವನ್ನು ಅಂಬೇಡ್ಕರ್ ಅವರು ೧೯೪೯ರ ನವೆಂಬರ್ ೧೭ ರಂದು ಸಂವಿಧಾನ ರಚನಾ ಸಭೆಯಲ್ಲಿ ಮಾಡಿದರು. ಅದರ ನಂತರ ಸಂವಿಧಾನ ರಚನಾ ಸಭೆಯ ಸದಸ್ಯರನೇಕರು ತಮ್ಮ ʻವಂದನಾರ್ಪಣಾ ಭಾಷಣʼ (Concluding Speech) ಮಾಡಿದರು. ಅದುವರೆಗೆ ಸಂವಿಧಾನದ ಕರುಡಿನ ಮೇಲೆ ಅನೇಕ ದಿನಗಳು ದೀರ್ಘವಾದ ಚರ್ಚೆ ಸಂವಾದಗಳು ನಡೆದಿದ್ದವು. ಕೆಲವು ವಿಧಿಗಳ ಬಗ್ಗೆ ಅತ್ಯಂತ ಬಿರುಸಿನ ವಾಗ್ವಾದಗಳೂ ನಡೆದಿದ್ದವು. ಬಹಳಷ್ಟು ಜನ ಸಂಪ್ರದಾಯವಾದಿಗಳೇ ಇದ್ದ ಸಂವಿಧಾನ ರಚನಾ ಸಭೆಯು ಅಷ್ಟು ಸುಲಭವಾಗಿ ಅಂಬೇಡ್ಕರ್ ಅವರ ಪ್ರಗತಿಶೀಲತೆಯನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.
ಮಹಿಳೆಯರಿಗೆ ಪುರುಷರಂತೆ ಸಮಾನತೆ ನೀಡುವುದು, ಎಲ್ಲ ಜಾತಿ ಧರ್ಮಗಳವರನ್ನು
ಸಮಾನವಾಗಿ ಕಾಣುವುದು ಇಂತಹುಗಳನ್ನು ಅವರೆಲ್ಲ ಹೇಗೆ ತಾನೆ ಒಪ್ಪಿಕೊಳ್ಳಲು ಸಾಧ್ಯ? ಅವರು ತಕರಾರು
ತೆಗೆದಾಗಲೆಲ್ಲ ಅಂಬೇಡ್ಕರ್ ಅದಕ್ಕೆ ತಮ್ಮ ಅಪಾರ ಪಾಂಡಿತ್ಯ ಮತ್ತು ತುಳಿತಕ್ಕೊಳಗಾದವರ ಬಗೆಗಿನ ತಾಯ್ತನದ
ಭಾವನೆ ಇವುಗಳಿಂದಾಗಿ ಸಮರ್ಪಕವಾಗಿ ಉತ್ತರ ಕೊಟ್ಟು ತಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದರು.
ಆದರೂ ಶೇಕಡಾ ನೂರರಷ್ಟು ಅವರು ತಮ್ಮ ಕೆಲಸಗಳನ್ನು ಮಾಡಲು ಇವರು ಬಿಡಲಿಲ್ಲ. ಕೆಲವಕ್ಕೆ ಒಪ್ಪಿಕೊಂಡರು.
ಮತ್ತೆ ಕೆಲವಕ್ಕೆ ಮೊಂಡಾಟ ಮಾಡಿ ತೆಗೆದು ಹಾಕಲು ಅದಾಗದಿದ್ದರೆ ಕೊನೆಪಕ್ಷ ತಿದ್ದುಪಡಿ ತರಲು ಸಮರ್ಥರಾದರು.
ಇವರ ಮೊಂಡಾಟಕ್ಕೆ ಅಂಬೇಡ್ಕರ್ ಕೂಡ ಕೆಲವು ಸಲ ಅನಿವಾರ್ಯವಾಗಿ ಮಣಿದು ಸಂವಿಧಾನದ ಕೆಲವು ಅತ್ಯಂತ
ಪ್ರಗತಿಪರ ವಿಧಿಗಳಿಗೆ ತಿದ್ದುಪಡಿ ಮಾಡಬೇಕಾಯಿತು.
ಅಂಬೇಡ್ಕರ್ ಅವರ ಅಂತಿಮ ಓದಿಗೆ ಪ್ರಮುಖ ಸದಸ್ಯರು ಮಾಡಿದ ವಂದನಾರ್ಪಣಾ ನುಡಿಗಳಲ್ಲಿ ಅಂಬೇಡ್ಕರ್ ಅವರೊಂದಿಗಿನ ಅದುವರೆಗಿನ ಭಿನ್ನಾಭಿಪ್ರಾಯಗಳೇನೇ ಇದ್ದರೂ ಮತ್ತು ಸಂವಿಧಾನದ ಕೆಲವು ಪ್ರಗತಿಪರ ವಿಧಿಗಳ ಬಗ್ಗೆ ಅವರಿಗೆ ಈಗಲೂ ಅಸಮಾಧಾನವಿದ್ದರೂ ಅವೆಲ್ಲವನ್ನು ಮರೆತು ಅವರು ಸಂವಿಧಾನ ರಚನೆಯ ಕಾರ್ಯದಲ್ಲಿ ಅಂಬೇಡ್ಕರ್ ಅವರ ಅಪಾರ ಪರಿಶ್ರಮದ ಕೊಡುಗೆಯನ್ನು ಕೊಂಡಾಡಿ ಮಾತನಾಡಿದರು. ಕರಡು ಸಮಿತಿಯಲ್ಲಿನ ಉಳಿದ ಸದಸ್ಯರೆಲ್ಲ ಏನೇನೋ ಕಾರಣಗಳಿಂದ ತಮ್ಮ ಕಾರ್ಯಗಳನ್ನು ಸರಿಯಾಗಿ ಮಾಡದೆ ಕರಡು ರಚನೆಯ ಶೇ ತೊಂಬತ್ತರಷ್ಟು ಕೆಲಸವನ್ನು ಅಂಬೇಡ್ಕರ್ ಅವರೊಬ್ಬರೇ ಮಾಡಿದ್ದು ಸೂರ್ಯಪ್ರಕಾಶದಷ್ಟು ಸ್ಪಷ್ಟವಾಗಿ ಕಾಣುತ್ತಿದ್ದುದರಿಂದ ಅವರು ಅಂಬೇಡ್ಕರ್ ಅವರನ್ನು ಹೊಗಳಿ ಮಾತನಾಡಿದ್ದರಲ್ಲಿ ಅತಿಶಯೋಕ್ತಿ ಏನೂ ಇರಲಿಲ್ಲ.
ಅಂಬೇಡ್ಕರ್ ಅವರು ರಚಿಸಿದ ನಮ್ಮ ಸಂವಿಧಾನದ ಬಗ್ಗೆ ಬಂದ ಬಹಳಷ್ಟು ತಕರಾರುಗಳಲ್ಲಿ ಬಹುಮುಖ್ಯವಾದ ಎರಡು ತಕರಾರುಗಳೆಂದರೆ ಮೊದಲನೆಯದು ನಮ್ಮ ಸಂವಿಧಾನ ಗಾಂಧಿತತ್ವ ಹೇಳುವ ಅಧಿಕಾರ ವಿಕೇಂದ್ರಿಕರಣವನ್ನು ಬೆಂಬಲಿಸುವ ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ಕಡೆಗಣಿಸಿ ಅಧಿಕಾರದ ಕೇಂದ್ರೀಕರಣವನ್ನು ಬೆಂಬಲಿಸುತ್ತದೆ ಎಂಬುದು. ಇದಕ್ಕೆ ಅಂಬೇಡ್ಕರ್ ಅವರ ಉತ್ತರ ಆ ರೀತಿ ಪಂಚಾಯತಿಗಳಿಗೆ ಹಳ್ಳಿಮಟ್ಟದಲ್ಲಿ ಅಧಿಕಾರ ಸಿಕ್ಕರೆ ಅಲ್ಲಿನ ಮೇಲ್ವರ್ಗದವರು ಸಹಜವಾಗಿ ಅಧಿಕಾರ ಹಿಡಿಯುತ್ತಾರೆ ಮತ್ತು ಹಿಂದುಳಿದವರು ದಲಿತರು ಇವರ ಮೇಲೆ ಅವರು ಇದುವರೆಗೂ ಮಾಡುತ್ತಿರುವವ ಶೋಷಣೆ ಇನ್ನಷ್ಟು ಬಲಪಡೆದು ಮುಂದುವರೆಯುತ್ತದೆ ಎಂಬುದಾಗಿತ್ತು. (ಮುಂದೆ ದಮನಿತರ ಶಿಕ್ಷಣ ಮುಂತಾದವುಗಳಿಂದ ಪರಿಸ್ಥಿತಿ ಸುಧಾರಿಸಿದ ಮೇಲೆ ಪಂಚಾಯತ್ ವ್ಯವಸ್ಥೆ ಸಂವಿಧಾನದ ತಿದ್ದುಪಡಿಯ ಮೂಲಕ ಜಾರಿಗೆ ಬಂತು.)
ಎರಡನೆಯದು ನಮ್ಮ ಸಂವಿಧಾನದ ಮೇಲೆ ʻವಿದೇಶಿ ಸಂವಿಧಾನಗಳ ಪ್ರಭಾವ ಅತಿ ಹೆಚ್ಚಾಯಿತು ಮತ್ತು ಅದು ನಮ್ಮ ಪ್ರಾಚೀನ ಧಾರ್ಮಿಕ ಪಠ್ಯಗಳು ಹೇಳುವ ತತ್ವಗಳನ್ನು ಕಡೆಗಣಿಸಿದೆʼ ಎಂಬುದಾಗಿತ್ತು. ಅದು ನಿಜವೂ ಇತ್ತು; ಅದಕ್ಕೆ ಕಾರಣವೂ ಇತ್ತು. ಅಂಬೇಡ್ಕರ್ ಅವರಿಗೆ ಅದು ಅನಿವಾರ್ಯವೂ ಆಗಿತ್ತು. ನಮ್ಮ ಧಾರ್ಮಿಕ ಪಠ್ಯಗಳು ಏನೇ ಹೇಳಿದರೂ ಅವು ಸುತ್ತೂ ಬಳಸಿ ಕೊನೆಗೆ ಅಂತಿಮವಾಗಿ ಮನುಷ್ಯನನ್ನು ಸಮಾನವಾಗಿ ಕಾಣುವುದಕ್ಕೆ ವಿರುದ್ಧವಾಗಿಯೇ ನಿಲ್ಲುತ್ತಿದ್ದವು. ಅವು ಹೇಳುವ ʼಧರ್ಮʼ ಅದು ವರ್ಣಾಶ್ರಮ ಧರ್ಮವೇ ಆಗಿತ್ತು. ಅಂಬೇಡ್ಕರ್ ಅವರು ಅದನ್ನು ತಮ್ಮ ಅಪಾರ ಪರಿಶ್ರಮದಿಂದ ಓದಿ ಅರ್ಥೈಸಿಕೊಂಡಿದ್ದರು. ಹಾಗಾಗಿ ಅವರು ನಮ್ಮ ಸಂವಿಧಾನದ ಪ್ರಧಾನ ಆಶಯಗಳಾದ ಸಹೋದರೆ, ಸಮಾನತೆ, ಅಧಿಕಾರ ಮತ್ತು ಅವಕಾಶಗಳ ಸಮಾನತೆ, ಮನುಷ್ಯನ ವ್ಯಕ್ತಿತ್ವದ ಘನತೆ ಇಂತಹುಗಳಿಗಾಗಿ ವಿದೇಶಿ ಸಂವಿಧಾನಗಳನ್ನು ಆಶ್ರಯಿಸಬೇಕಾಯಿತು!
ಅಂಬೇಡ್ಕರ್ ಸಂವಿಧಾನದ ಅಂತಿಮ ಕರುಡನ್ನು ಓದಿದ ಮೂರು ದಿನಗಳ ನಂತರ ಅಂದರೆ ೧೯೪೯ರ ನವೆಂಬರ್ ೨೦ ರಂದು ಇಲ್ಲಿರುವ ವ್ಯಂಗಚಿತ್ರ ಆಗಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಈ ಚಿತ್ರದಲ್ಲಿ ಅಂಬೇಡ್ಕರ್ ಅವರನ್ನುʼಕಲಿಯುಗ ಭೀಮʼ ಎಂದು ಕರೆದು ಅಡುಗೆಭಟ್ಟನನ್ನಾಗಿ ಚಿತ್ರಿಸಲಾಗಿದೆ. (ಮಹಾಭಾರತದಲ್ಲಿ ಪಾಂಡವರು ಅಜ್ಞಾತವಾಸದಲ್ಲಿರುವಾಗ ವಿರಾಟ ರಾಜನ ಆಶ್ರಯದಲ್ಲಿರುವಾಗ ʼಭೀಮ ಅಲ್ಲಿ ಅಡುಗೆಭಟ್ಟ ಆಗಿದ್ದನ್ನು ನೆನಪಿಸಿಕೊಳ್ಳಿ. ಅವನು ದ್ವಾಪರಯುತದ ಭೀಮನಾದರೆ ಇವನು ಕಲಿಯುಗದ ಭೀಮʼ ಎಂಬುದನ್ನು ಇದು ಧ್ವನಿಸುತ್ತದೆ.) ಮತ್ತು ಅಂಬೇಡ್ಕರ್ ನಿರ್ವಹಿಸಿದ ಸಂವಿಧಾನ ರಚನೆ ಯ ಕಾರ್ಯವನ್ನು ಆ ಅಡುಗೆಭಟ್ಟ ಮಾಡಿದ ಅಡುಗೆಗೆ ಹೋಲಿಸಿ ಚಿತ್ರಿಸಲಾಗಿದೆ. ಸಂವಿಧಾನ ರಚನಾ ಸಭೆಯ ಸದಸ್ಯರು ಎತ್ತಿದ ತಕರಾರುಗಳನ್ನು ಇಲ್ಲಿಅಡುಗೆಯ ಬಗ್ಗೆ ಎತ್ತಿದ ತಕರಾರುಗಳಾಗಿ ತೋರಿಸಲಾಗಿದೆ. ಒಬ್ಬರು ʻಹಲ್ವಾ ಎಲ್ಲಿ?ʼ ಎಂದು ಕೇಳುತ್ತಿದ್ದರೆ ಇನ್ನೊಬ್ಬರು ʻಉಪ್ಪು ಹೆಚ್ಚಾಯಿತುʼ ಎಂದೂ ಮತ್ತೊಬ್ಬರು ʻಖಾರ ಕಡಿಮೆ ಆಯಿತುʼ ಎಂದೂ ಹೇಳುತ್ತಿದ್ದಾರೆ. ಕೆಲವರು ಅಡುಗೆ ʻಸರಿಯಾಗಿ ಬೆಂದಿಲ್ಲʼವೆಂದರೆ ಮತ್ತೆ ಕೆಲವರು ಸಾಕಷ್ಟು ತರಕಾರಿ ಹಾಕಿಲ್ಲʼ ಎಂದು ಟೀಕಿಸುತ್ತಿದ್ದಾರೆ. ʼಮೀನು ಇಲ್ವಾ?ʼ ಎಂದು ಕೇಳಿದವರೂ ಇದ್ದಾರೆ. ಕೊನೆಯ ಕಾರ್ಡ್‌ಬೋರ್ಡಿನ ತಕರಾರನ್ನು ಸೂಕ್ಷ್ಮವಾಗಿ ನೋಡಿ. ʼನೀವು ವನಸ್ಪತಿಯನ್ನು ಏಕೆ ಬಳಸುವುದಿಲ್ಲ” ಎಂದು ಕೇಳಲಾಗಿದೆ. ಇಲ್ಲಿ ʼವನಸ್ಪತಿʼ ಎಂದರೆ ʼಭಾರತೀಯತೆʼ ಎಂದೇ ಅರ್ಥ!
ಡಾ. ರಾಜೇಂದ್ರ ಬುರಡಿಕಟ್ಟಿ
16-04-2025