Monday, April 14, 2025

ಸತ್ತ ನಂತರವೂ ನಿತ್ಯ ಬೆಳೆಯುತ್ತಿರುವ ಅಂಬೇಡ್ಕರ್‌ : ಅವರು ಹೇಳಿದ್ದೇನು? ನಾವು ಮಾಡುತ್ತಿರುವುದು ಏನು? ....

 ಸತ್ತ ನಂತರವೂ ನಿತ್ಯ ಬೆಳೆಯುತ್ತಿರುವ  ಅಂಬೇಡ್ಕರ್‌ : ಅವರು ಹೇಳಿದ್ದೇನು? ನಾವು ಮಾಡುತ್ತಿರುವುದು ಏನು? ....

 ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎರಡು ವರ್ಷ ಮಾತ್ರ ಆಗಿತ್ತು. 1949ರ ಏಪ್ರಿಲ್‌ 14 ರಂದು ʼಹೈದರಾಬಾದ್‌ ರಾಜ್ಯ ಪರಿಶಿಷ್ಠ ಜಾತಿಗಳ ಒಕ್ಕೂಟʼ ಅಂಬೇಡ್ಕರ್‌ ಅವರ ಜನ್ಮದಿನದ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಅದನ್ನು ಉದ್ದೇಶಿಸಿ ಅಂಬೇಡ್ಕರ್‌ ಹೀಗೆ ಹೇಳಿದ್ದರು: “ಭಾರತದಲ್ಲಿ ರಾಜಕೀಯ ನಾಯಕರನ್ನು ಪ್ರವಾದಿಗಳ ಸ್ಥಾನದಲ್ಲಿರಿಸುವುದು ಒಂದು ಖೇಧದ ಸಂಗತಿಯಾಗಿದೆ. ಬೇರೆ ದೇಶಗಳಲ್ಲಿ ಪ್ರವಾದಿಗಳ ಜನ್ಮದಿನಗಳನ್ನು ಮಾತ್ರ ಆಚರಿಸಲಾಗುತ್ತದೆ. ಭಾರತದಲ್ಲಿ ಮಾತ್ರ ಪ್ರವಾದಿಗಳು ಮತ್ತು ರಾಜಕೀಯ ನಾಯಕರ ಜನ್ಮದಿನಗಳನ್ನು ಆಚರಿಸಲಾಗುತ್ತದೆ. ನಾನು ನನ್ನ ಜನ್ಮದಿನವನ್ನು ಆಚರಿಸುವುದನ್ನು ಇಷ್ಟಪಡುವುದಿಲ್ಲ. ನಾನು ಪ್ರಜಾಪ್ರಭುತ್ವವಾದಿ ಮತ್ತು ಇಂತಹ ವ್ಯಕ್ತಿಪೂಜೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯು ಹಳಿತಪ್ಪುವಂತೆ ಮಾಡುತ್ತವೆಯಾದ್ದರಿಂದ ಇವು ಇರಬಾರದು ಎಂಬ ಆಲೋಚನೆಯವನು. ರಾಜಕೀಯ ನಾಯಕರ ಮತ್ತು ಅವರ ಅನುಯಾಯಿಗಳ ಬಗ್ಗೆ, ಅವರು ಅರ್ಹರಾಗಿದ್ದರೆ, ಪ್ರೀತಿ, ವಿಶ್ವಾಸ, ಗೌರವ ಇವುಗಳನ್ನು ಜನ ಇಟ್ಟುಕೊಳ್ಳಬಹುದು. ಆದರೆ ಇಂತಹ ವ್ಯಕ್ತಿಪೂಜೆಗಳು ಅದನ್ನು ಮಾಡುವವರು ಮತ್ತು ಮಾಡಿಸಿಕೊಳ್ಳುವವರು ಇಬ್ಬರನ್ನೂ ನೈತಿಕ ಅಧಪತನಕ್ಕೆ ಈಡುಮಾಡುತ್ತವೆ. ಏಕೆಂದರೆ ಒಂದು ಸಾರೆ ರಾಜಕೀಯ ನಾಯಕನೊಬ್ಬನನ್ನು ಪ್ರವಾದಿಯ ಸ್ಥಾನದಲ್ಲಿರಿಸಿದರೆ ಆನಂತರ ಅವನು ಪ್ರವಾದಿಯ ಪಾತ್ರವಹಿಸಿಕೊಂಡು ಪ್ರವಾದಿಗಳಂತೆ ಸಂದೇಶ ನೀಡಬೇಕಾಗುತ್ತದೆ.”

ಹೀಗೆ ಹೇಳಿದ ವ್ಯಕ್ತಿಯ ಜನ್ಮದಿನವನ್ನೇ ನಾವು ಇಂದು ಆಚರಿಸುತ್ತಿದ್ದೇವೆ. ಇದು ತಪ್ಪಲ್ಲ. ಆದರೆ ಅದನ್ನು ಹೇಗೆ ಆಚರಿಸುತ್ತಿದ್ದೇವೆ ಎಂಬುದು ಬಹಳ ಮುಖ್ಯ. ಭಾರತದ ಶೇಕಡಾ ತೊಂಬತ್ತರಷ್ಟು ಜನರು ಇಂದು ಸ್ವಾಭಿಮಾನದಿಂದ ತಲೆಯೆತ್ತಿ ಬದುಕುವಂತಾದದ್ದು ಡಾ ಅಂಬೇಡ್ಕರ್‌ ಅವರ ದೂರದೃಷ್ಟಿಯ ಸಂವಿಧಾನದಿಂದ. ಅವರಷ್ಟು ಓದಿಕೊಂಡ ವ್ಯಕ್ತಿ ಈ ಕಾಲದಲ್ಲಿಯೇ ಇಲ್ಲವೆನ್ನುವಷ್ಟು ವಿರಳವಾಗಿರುವಾಗ ಆ ಕಾಲದಲ್ಲಂತೂ ಇರಲೇ ಇಲ್ಲ. ಪರಸ್ಪರ ಸಂಬಂಧವಿಲ್ಲದ ವಿಷಯಗಳು ಎಂದು ನಾವೆಲ್ಲರೂ ಭಾವಿಸುವ ಅನೇಕ ಜ್ಞಾನಶಿಸ್ತುಗಳಲ್ಲಿ ಅವರಿಗಿದ್ದ ಪಾಂಡಿತ್ಯ ಅಪಾರವಾದದ್ದು. ಆ ಪಾಂಡಿತ್ಯವನ್ನು ಅವರು ಈ ದೇಶದ ಜನರ ಬದುಕು ಹಸನಾಗುವಂತೆ ಮಾಡಲು ಬಳಸಿದ್ದು ಅವರ ಸಾಧನೆ. ಭಾರತದ ಜನನಾಯಕರಲ್ಲಿಯೇ ಅತ್ಯಂತ ವೇಗವಾಗಿ ಮತ್ತು ವ್ಯಾಪಕವಾಗಿ ಸತ್ತನಂತರವೂ ನಿತ್ಯ ಬೆಳೆಯುತ್ತಿರುವ ವ್ಯಕ್ತಿ ಅಂದರೆ ಅದು ಅಂಬೇಡ್ಕರ್‌ ಮಾತ್ರ.

ಇಂತಹ ಒಬ್ಬ ಮಹಾನಾಯಕನ ದಿನವನ್ನು ಬಹಳ ಕಡೆ ಹೇಗೆಲ್ಲ ಆಚರಿಸುತ್ತಿದ್ದಾರೆ ಎಂಬುದನ್ನು ನೋಡಿದರೆ ನಿಜಕ್ಕೂ ಖೇಧವೆನಿಸುತ್ತದೆ. ಇದನ್ನು ಸರ್ಕಾರಗಳು ಅಧಿಕೃತವಾಗಿ ಆಚರಿಸುವ ಮೊದಲು ಅಭಿಮಾನದಿಂದ ಕೆಲವು ಸಂಘಟನೆಗಳು ಆಚರಿಸುವಾಗ ಅದರ ಕಿಮ್ಮತ್ತೇ ಬೇರೆ ಇತ್ತು. ಈಗ ಇದು ಸರ್ಕಾರಿ ಆಚರಣೆ ಆಗಿರುವುದರಿಂದ ಅನೇಕ ಕಛೇರಿಗಳಲ್ಲಿ ಕಾಟಾಚಾರದ ʻಫೋಟೋ ಆಚರಣೆʼ ಆಗಿರುವುದೇ ಹೆಚ್ಚು. ಯಾವುದೇ ವ್ಯಕ್ತಿಯ ಜಯಂತಿಯನ್ನು ಆಚರಿಸುವುದರ ಉದ್ದೇಶ ಆ ವ್ಯಕ್ತಿಯ ಬದುಕು ಸಾಧನೆಗಳಿಂದ ನಾವು ಪ್ರೇರಣೆ ಪಡೆಯುವುದೇ ಆಗಿದೆ. ಆ ವ್ಯಕ್ತಿಯ ಬದುಕು, ಸಾಧನೆ ಬರೆಹ ಇವುಗಳನ್ನು ಕುರಿತು ಬಹುಮುಖ್ಯವಾಗಿ ಉಪನ್ಯಾಸ, ಚರ್ಚೆ, ಸಂವಾದ ಇಂಥವು ನಡೆದರೇನೇ ಅದು ಅರ್ಥಪೂರ್ಣ. ಅಂಬೇಡ್ಕರ್‌ ಅವರಂಥ ಮೇಧಾವಿಗಳ ವಿಷಯದಲ್ಲಂತೂ ಇದು ಆಗಲೇ ಬೇಕಾಗಿರುವ ಅತ್ಯಗತ್ಯ ಕೆಲಸ. ಉಳಿದ ಕಛೇರಿಗಳಿಗಿಂತ ಈ ಕೆಲಸ ಶಾಲಾ ಕಾಲೇಜುಗಳಲ್ಲಿ ಅತ್ಯಂತ ಸಂಭ್ರಮದಿಂದ ನಡೆಯಬೇಕು.

ಆದರೆ ವಾಸ್ತವ ಬಹಳ ಕೆಟ್ಟದ್ದಾಗಿದೆ. ಈ ದಿನಾಚರಣೆ ಬರುವ ಏಪ್ರಿಲ್‌ ಹದಿನಾಲ್ಕು ರಾಜ್ಯದ ಬಹುತೇಕ ಕೆಳಹಂತದ ಶಾಲೆಗಳಿಗೆ ರಜೆ ಇರುತ್ತದೆ. ರಜೆಯಿದ್ದರೂ ಅಂಬೇಡ್ಕರ್‌ ಜಯಂತಿಗೆ ಸ್ವಯಂ ಇಚ್ಚೆಯಿಂದ ಬರುವಂತೆ ಮಾಡುವಲ್ಲಿ ನಮ್ಮ ವ್ಯವಸ್ಥೆ ಸೋತಿದೆ. ಇನ್ನು ಶಿಕ್ಷಕರು. ಅವರಾದರೂ ತಾವೇ ಒಂದಿಷ್ಟುಹೊತ್ತು ಅಂಬೇಡ್ಕರ್‌ ಅವರ ಜೀವನ ಸಾಧನೆಗಳು, ಅವರ ವಿಚಾರಧಾರೆ ಕುರಿತು ಚಿಂತನ-ಮಂಥನ ಮಾಡಿ ಅದನ್ನು ಇದ್ದದ್ದರಲ್ಲಿಯೇ ಅರ್ಥಪೂರ್ಣಗೊಳಿಸಲು ಸಾಧ್ಯವಿದೆ. ಆದರೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ತಮ್ಮ ಮೇಲಿರುವ ಅಂಬೇಡ್ಕರ್‌ ಅವರ ಋಣ ತೀರಿಸಲು ಬರುವವರಿಗಿಂತ ʼಕಡ್ಡಾಯʼ ಎಂಬ ಕಾರಣಕ್ಕೆ ಸಂಕಟದಿಂದ ಬರುವವರೇ ಹೆಚ್ಚು. ಬರುಬರುತ್ತಿದ್ದಂತೆಯೇ ಅವರು ಹೊರಡುವ ಆತುರದಲ್ಲಿರುತ್ತಾರೆ! ಇವರೆಲ್ಲ ಸೇರಿ ಮಾಡುವ ಆಚರಣೆ ಎಷ್ಟು ಅರ್ಥಹೀನವಾಗಿರುತ್ತದೆ ಎಂದರೆ ಅದು ʻಸರಸ್ವತಿ ಪೂಜೆʼಯ ಕಾರ್ಯಕ್ರಮವೋ ಅಥವಾ ʻಸತ್ಯನಾರಾಯಣ ವ್ರತʼವೋ ಆಗುವುದೇ ಹೆಚ್ಚು. ಅಂಬೇಡ್ಕರ್‌ ಅವರ ಫೋಟೋ ಇಟ್ಟು ಅದಕ್ಕೆ ಕಾಯಿ ಒಡೆದು ಕರ್ಪೂರ ಬೆಳಗಿ ಕೊಬ್ಬರಿ ತಿಂದು ಅದರ ಆಚೆ ಈಚೆ ನಿಂತು ಮದುವೆ ರಿಶಪ್ಶನ್‌ ನಂತೆ ʻಹಾಜರಿಫೋಟೋʼ ಹೊಡೆಸಿಕೊಂಡರೆ ಅದೇ ಅಂಬೇಡ್ಕರ್‌ ದಿನಾಚರಣೆ!

ಸರ್ಕಾರ ಹೀಗೆ ಮಾಡಲಿಕ್ಕೆಂದು ಅವರ ಜಯಂತಿಯನ್ನು ಮಾಡಿದೆಯೇ? ಹೀಗೆ ʻಪೂಜೆ-ಪ್ರಸಾದʼವೇ ಪ್ರಧಾನವಾದ ಆಚರಣೆ ಮಾಡುವುದಾದರೆ ಅದನ್ನು ಮನೆಯಲ್ಲೋ ದೇವಸ್ಥಾನದಲ್ಲಿಯೋ ಇನ್ನೂ ಚೆನ್ನಾಗಿ ಮಾಡಬಹುದಲ್ಲವೇ? ಅಂಬೇಡ್ಕರ್‌ ಪೋಟೋದೊಂದಿದೆ ಮನೆಯಲ್ಸೆಲಿಯೇ ಸೆಲ್ಪಿ ಹೊಡೆದುಕೊಂಡು ಕಳಿಸಬೇಕಾದವರಿಗೆ ಕಳಿಸಿದರೆ ಏನು ತಪ್ಪಾಗುತ್ತದೆ? ಶಾಲೆ-ಕಾಲೇಜು, ಕಛೇರಿಗಳಲ್ಲಿ ಎಲ್ಲ ಜಾತಿಧರ್ಮದ ಜನ ಸೇರಿ ಮಾಡುವ ಮಹಾವ್ಯಕ್ತಿಗಳ ಜಯಂತಿಗಳ ಮುಖ್ಯ ಉದ್ದೇಶವೇ ಅವರ ಕುರಿತು ವಿಚಾರ ಮಂಥನ. ಅದೇ ಮಾಯವಾದರೆ ಹೇಗೆ? ಹೀಗೆ ಮಾಡುವುದು ಅಂಬೇಡ್ಕರ್‌ ಅಂತಹ ಮೇಧಾವಿಗೆ ಮಾಡುವ ಅಪಚಾರವಲ್ಲದೆ ಮತ್ತೇನು? ಬೇರೆ ಕಛೇರಿಗಳಲ್ಲಿ ಆಗದಿದ್ದರೆ ದೇಶದ ಭಾವೀ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿ ಇರುವ ಶಾಲೆ ಕಾಲೇಜುಗಳಲ್ಲಿಯಾದರೂ ಇದು ಅರ್ಥಪೂರ್ಣವಾಗಿ ನಡೆಯುವಂತೆ ನೋಡಿಕೊಳ್ಳದಿದ್ದರೆ ಹೇಗೆ?

ಇದಕ್ಕೆ ಮುಖ್ಯವಾಗಿ ನಮ್ಮ ಶಿಕ್ಷಕ ಸಮುದಾಯ ಮನಸ್ಸು ಮಾಡಬೇಕು ಅದಕ್ಕೆ ಪೂರಕವಾಗಿ ಅವರಿಗೆ ಸಹಾಯ ಆಗುವಂತೆ ಇಲಾಖೆ ಮಾಡಬೇಕಾದ ಕೆಲಸವೆಂದರೆ ಏಪ್ರಿಲ್‌ ಹನ್ನೊಂದರಿಂದ ಕೊಡುತ್ತಿರುವ ಬೇಸಿಗೆ ರಜೆಯನ್ನು ನಾಲ್ಕು ದಿನ ಮುಂದಕ್ಕೆ ಹಾಕಿ ಏಪ್ರಿಲ್‌ ಹದಿನೈದರಿಂದ ಕೊಟ್ಟು ಶಾಲಾ ಪುನರಾರಂಭವನ್ನು ಕೂಡ ನಾಲ್ಕುದಿನ ತಡವಾಗಿ ಮಾಡಬೇಕು. ಮತ್ತು ಇಂತಹ ದಿನಾಚರಣೆಗಳಿಗೆ ಕನಿಷ್ಠ ಒಂದೆರಡಾದರೂ ಗಂಟೆಗಳ ಕಾಲವನ್ನಾದರೂ ಬಳಸುವುದನ್ನು ನಿಗಧಿಪಡಿಸಿ ಅದನ್ನು ಹೇಗೆಲ್ಲ ಮಾಡಬೇಕು ಎಂಬುದರ ಬಗ್ಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಕೊಡಬೇಕು. ಕೊನೆಯ ಪಕ್ಷ ಇಷ್ಟಾದರೂ ಮಾಡದಿದ್ದರೆ ಈ ಆಚರಣೆ ಇನ್ನೂ ಹಳ್ಳ ಹಿಡಿಯುವುದು ನಿಶ್ಚಿತ. ಈ ವರ್ಷದ ಅಕ್ಟೋಬರ್‌ ನಲ್ಲಿ ಬರುವ ಮಹಾತ್ಮಾ ಗಾಂಧಿ ಜಯಂತಿ ಕೂಡ ದಸರಾ ರಜೆಯ ಮಧ್ಯೆ ಬರುವಂತೆ ಶಾಲಾ ಕಾಲೇಜುಗಳ ಕ್ಯಾಲೆಂಡರ್‌ ಪ್ರಕಟವಾಗಿದ್ದನ್ನು ನೋಡಿದರೆ ಅಂಬೇಡ್ಕರ್‌ ಜಯಂತಿಗೆ ಬಂದ ಗತಿಯೇ ರಾಷ್ಟ್ರಪಿತನ ಜಯಂತಿಗೂ ಬರುವುದು ಗ್ಯಾರಂಟಿ. ಇದು ಈ ಮಹಾವ್ಯಕ್ತಿಗಳಿಗೆ ಮಾಡುವ ಅವಮಾನವಲ್ಲದೇ ಬೇರೇನೂ ಅಲ್ಲ. ಸಂಬಂಧಪಟ್ಟ ಎಲ್ಲರೂ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಒಂದು ಕವಿತೆಯ ನಾಲ್ಕು ಸಾಲುಗಳಿಂದ ಈ ಟಿಪ್ಪಣಿ ಮುಗಿಸುತ್ತೇನೆ.

ಅದೇ ಫೋಟೋ ಅದೇ ಹಾರ
ನಿನ್ನ ಆಚರಣೆಯಲ್ಲಿ ಉಳಿದಿಲ್ಲ ಸಾರ
ಮಣಭಾರವಿದ್ದರೂ ತಲೆಮೇಲೆ ನಿನ್ನ ಋಣ
ಆತ್ಮಸಾಕ್ಷಿಯು ಸತ್ತ ಹೊಣೆಗೇಡಿಗಳು ನಾವು….

ಡಾ. ರಾಜೇಂದ್ರ ಬುರಡಿಕಟ್ಟಿ
buradikatti@gmail̤com
14-04-2025

No comments:

Post a Comment