Friday, March 21, 2025

 

ಸುನೀತಾ ಸಾಧನೆ : ʻಗಣೇಶʼ ʼಭಗವದ್ಗೀತೆʼ ಮತ್ತು ʻಗೆದ್ದ ಎತ್ತ್ತಿನ ಬಾಲ ಹಿಡಿಯುವಿಕೆʼ

ಸುನೀತಾ ವಿಲಿಯಮ್ಸ್ ತಮ್ಮ ದೀರ್ಘಾವಧಿಯ ಅಂತರಿಕ್ಷಯಾನವನ್ನು ಯಶಸ್ವಿಯಾಗಿ ಪೂರೈಸಿ ಭೂಮಿಗೆ ಮರಳಿದ್ದಾರೆ. ಅವರು ಕೈಗೊಂಡದ್ದು ಅತ್ಯಂತ ಅಪಾಯಕಾರಿಯಾದ ಒಂದು ದುಸ್ಸಾಹಸದ ಕಾರ್ಯವಾಗಿದ್ದುಅದನ್ನು ಅವರು ಧೈರ್ಯದಿಂದ ಕೈಗೊಂಡು ಯಶಸ್ವಿಯಾಗಿ ಪೂರೈಸಿದ್ದು ಅವರ ಈ ಯಾನ ಭಾರತ ಮಾತ್ರವಲ್ಲ ಇಡೀ ಮನುಕುಲದ ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಮುಂದಿನ ದಿನಗಳಲ್ಲಿ ಅನೇಕ ವಿಧದಲ್ಲಿ ನೆರವಾಗಬಹುದಾಗಿದ್ದರಿಂದ ನಾವೆಲ್ಲರೂ ಅಂದರೆ ಭಾರತೀಯರು ಮಾತ್ರವಲ್ಲ ವಿಶ್ವದ ಜನರು ಹೆಮ್ಮೆ ಪಡಬೇಕಾದ ಸಂಗತಿ.

ಆದರೆ ಅವರ ಈ ಸಾಧನೆಯನ್ನು ನಮ್ಮಲ್ಲಿ ಕೆಲವು ಜನ ಕೊಂಡಾಡುವುದು ಬೇರೆಯದೇ ಆದ ಕಾರಣಕ್ಕಾಗಿ. ಸುನೀತಾ ಭಾರತೀಯ ಮೂಲದವರು ಎಂದು ಇವರು ಕೊಂಡಾಲಿಕ್ಕೆ ಕಾರಣ ಅವರ ʼಭಾರತೀಯತೆʼ ಅಲ್ಲ. ಅವರ ಕೆಲವು ಮಾತು ಮತ್ತು ನಡವಳಿಕೆಗಳು ಇವರ ಮೂಗಿಗೆ ʼಹಿಂದೂʼ ವಾಸನೆಯನ್ನು ಬಡಿಸಿರುವುದರಿಂದ. ಸುನೀತಾ ಅವರು ಅಂತರಿಕ್ಷದಲ್ಲಿ ತೊಂದರೆಯಲ್ಲಿ ಸಿಲುಕಿಕೊಂಡಾಗ ಇವರೆಲ್ಲ ದೇವಸ್ಥಾನಗಳಲ್ಲಿ ವಿಶೇಶ ಪೂಜೆ ಪ್ರಾರ್ಥನೆ ಸಲ್ಲಿಸಿ ಅವರನ್ನು ಸಂಕಷ್ಟದಿಂದ ಪಾರುಮಾಡಿದ್ದರು! ಕೊರೊನಾ ಕಾಲದಲ್ಲಿ ಕೂಡ ಇವರು ಹೀಗೆ ಮಾಡಿ, ರಸ್ತೆಗಳಲ್ಲಿ ಪಾತ್ರೆ ಪಡಗ ಬಾರಿಸಿ ಅದರ ಸೌಂಡಿನಿಂದಲೇ ದೇಶದಿಂದ ಹೊರದಬ್ಬಿದ್ದರು!!

ಇವರ ವಿಶೇಷತೆ ಎಂದರೆ ತಮಗೆ ಇಷ್ಟಬರುವುದನ್ನು ಯಾರಾದರೂ ಆಡಿದರೆ ಇಷ್ಟಬರುವುದನ್ನು ಯಾರಾದರೂ ಮಾಡಿದರೆ ಅವರೆಲ್ಲ ಜಾತಿ ಜನಾಂಗ ಧರ್ಮ ಯಾವುದಿದ್ದರೂ ಇವರಿಗೆ ಹತ್ತಿರದ ನೆಂಟರಾಗಿಬಿಡುತ್ತಾರೆ! ಹೀಗಾಗಿಯೇ ಕೆಲವರು ಸುನೀತಾ ಗಣಪತಿ ಮೂರ್ತಿಗೆ ಆರತಿ ಬೆಳಗುವ ಫೋಟೋವನ್ನು ಹಂಚಿಕೊಂಡು ಸಂಭ್ರಮಿಸಿದರು. ಒಬ್ಬ ಮತಿಗೇಡಿ ʼಸುನೀತಾ ಅಂತರಿಕ್ಷಕ್ಕೆ ಒಯ್ದದ್ದು ಭಗವದ್ಗೀತೆಯನ್ನೇ ಹೊರತು ಬುದ್ಧನ ಬುರಡೆ ಮಾತುಗಳನ್ನಲ್ಲʼ ಎಂದು ಬುದ್ಧನ ಮೇಲಿನ ತನ್ನ ಸಿಟ್ಟನ್ನು ಕಾರಿಕೊಂಡ. ಸುನೀತಾ ಅವರು ತನ್ನ ಕಷ್ಟಕಾಲದಲ್ಲಿ ಉಪನ್ನಿಷತ್ತಿನ ವಾಕ್ಯಗಳೋ ಅಥವಾ ಭಗವದ್ಗೀತೆಯ ಸಂದೇಶವೋ ತನ್ನಲ್ಲಿ ಚೈತನ್ಯ ತುಂಬುತ್ತದೆ ಎಂದು ನಂಬಿಕೊಂಡಿದ್ದರೆ ಮತ್ತು ಅದೇ ಕಾರಣಕ್ಕೆ ಗಣೇಶನ ವಿಗ್ರಹವನ್ನೋ ಅಥವಾ ಭಗವದ್ಗೀತೆಯ ಪ್ರತಿಯನ್ನೋ ತಮ್ಮೊಂದಿಗೆ ಅಂತರಿಕ್ಷಕ್ಕೆ ಒಯ್ದಿದ್ದರೆ ಅದು ಅವರ ವೈಯಕ್ತಿಕ ನಂಬಿಕೆ. ಅದರಿಂದ ಯಾರಿಗೂ ತೊಂದರೆ ಇಲ್ಲ; ಹಾಗಾಗಿ ನಾವು ಅದನ್ನು ವಿರೋಧಿಸಬೇಕಾಗಿಲ್ಲ.

ಆದರೆ ನಾವು ಸೂಕ್ಷ್ಮವಾಗಿ ಗಮನಿಸಬೇಕಾದದ್ದು ನಮ್ಮ ʻಧರ್ಮವೀರʼರ ಅಂಧಭಕ್ತಿಯನ್ನು. ಗಣೇಶನ ವಿಗ್ರಹವನ್ನೋ ಭಗವದ್ಗೀತೆಯ ಪ್ರತಿಯನ್ನೋ ಒಯ್ದದ್ದರಿಂದಲೇ ಅವರು ಆ ದೊಡ್ಡ ಸಾಧನೆಯನ್ನು ಮಾಡಲಿಕ್ಕೆ ಸಾಧ್ಯವಾಯಿತು ಎಂಬುದೇ ಇವರ ಆ ಅಂಧಭಕ್ತಿ! ಒಂದು ವೇಳೆ ಸುನೀತಾ ಅವರು ತಮ್ಮ ದೇಶದ ಬಹುಸಂಖ್ಯಾತರ ಧರ್ಮವಾದ ಕ್ರಿಶ್ಚಿಯನ್‌ ಧರ್ಮದ ಧರ್ಮಗ್ರಂಥವಾದ ಬೈಬಲ್‌ ಅನ್ನೋ ಅಥವಾ ಕುರಾನನ್ನೋ ಒಯ್ದಿದ್ದರೆ ಇವರ ವರ್ತನೆ ಬೇರೆಯದೇ ಆಗಿರುತ್ತಿತ್ತು ಎಂದು ಬೇರೆ ಹೇಳಬೇಕಿಲ್ಲ. ಕ್ರಿ‍ಶ್ಚಿಯನ್‌ ಮತ್ತು ಮುಸಲ್ಮಾನರ ಹೆಸರನ್ನು ಕೇಳಿದರೇನೆ ಒಂಥರಾ ಹೊಟ್ಟೆನೋವು ಶುರುವಾಗುವ ಇವರಿಗೆಲ್ಲ ಗಣೇಶನ ವಿಗ್ರಹ ಮತ್ತು ಭಗವದ್ಗೀತೆಯನ್ನು ಗೌರವಿಸಿದ್ದಕ್ಕಾಗಿ ಸುನೀತಾ ಕ್ರಿಶ್ಚಿಯನ್‌ ವ್ಯಕ್ತಿಯನ್ನು ಮದುವೆಯಾದರೂ ಇವರಿಗೆಲ್ಲ ಕ್ರಿಶ್ಚಿಯನ್‌ ಆಗಿ ಕಾಣುತ್ತಿಲ್ಲ; ಬದಲಾಗಿ ಇವರ ಅಕ್ಕನೋ ತಂಗಿಯೋ ಆಗಿ ಕಾಣುತ್ತಿದ್ದಾರೆ!

ಹೀಗೆ ಯಾರಾದರೂ ಒಬ್ಬರು ಗಣನೀಯ ಸಾಧನೆಯನ್ನು ಮಾಡಿದಾಗ ಅವರನ್ನು ತಲೆಯ ಮೇಲೆ ಹೊತ್ತುಕೊಂಡು ಕುಣಿಯುವ ಮತ್ತು ಹತ್ತಿರ ಎಳೆದುಕೊಂಡು ಸಂಭ್ರಮಿಸುವ ʻಆಲಿಂಗನಗುಣʼ ನಮ್ಮ ಭಾರತೀಯರಿಗೆ ಹೊಸದಲ್ಲ; ಆದರೆ ಸುನೀತಾ ಭಾರತೀಯ ಮೂಲದವರಾದರೂ ಅವರ ಕುಟುಂಬದ ಮೂಲವನ್ನು ಲೆಕ್ಕಕ್ಕೆ ತೆಗೆದುಕೊಂಡು ʼಹೊರಗಿನವಳುʼ ಎಂಬ ಯಾವುದೇ ಭೇದ ಮಾಡದೆ ಅವರ ಪ್ರತಿಭೆಯನ್ನು ಗೌರವಿಸಿ ಅವರನ್ನು ಇಂತಹ ದೊಡ್ಡ ಸಾಧನೆ ಮಾಡಲು ಸಹಕರಿಸಿದ್ದು ಅಮೇರಿಕ! ಅವರಿಗೆ ಭಗವದ್ಗೀತೆಯ ಬಗ್ಗೆಯೋ ಗಣೇಶನ ವಿಗ್ರಹದ ಬಗ್ಗೆಯೋ ಸುನೀತಾ ಹೊಂದಿರುವ ಗೌರವದ ಭಾವನೆ ತಮ್ಮ ಧರ್ಮಕ್ಕೆ ಮಾಡುವ ದ್ರೋಹ ಎಂದು ಅನ್ನಿಸಲಿಲ್ಲ! ಅದು ಅವರ ದೊಡ್ಡ ಗುಣ. ಆದರೆ ನಮ್ಮ ದೇಶದಲ್ಲಿ ಯಾರಾದರೂ ಅಂತರಿಕ್ಷಕ್ಕೆ ಕುರಾನನ್ನೋ ಬೈಬಲ್‌ ಅನ್ನೋ ತೆಗೆದುಕೊಂಡು ಹೋದರೆ ಆಕಸ್ಮಿಕವಾಗಿ ಅವರು ದುರಂತಕ್ಕೆ ಎಡೆಯಾದರೆ ಈ ಭಕ್ತರು ಆ ವ್ಯಕ್ತಿಯ ದುರಂತಕ್ಕೆ ಈ ಪುಸ್ತಕಗಳೇ ಕಾರಣ ಎಂದು ಬೊಬ್ಬೆಹೊಡೆಯುವುದನ್ನು ಯಾರಾದರೂ ಊಹಿಸಿಕೊಳ್ಳಬಹುದು. ಒಂದು ವೇಳೆ ಸುನೀತಾ ಅವರು ನಮ್ಮಲ್ಲಿ ಇದ್ದಿದ್ದರೆ ನಾವೂ ಅವರ ಹಿನ್ನಲೆ ಮುನ್ನೆಲೆ ಏನೂ ನೋಡದೆ ಅವರ ಪ್ರತಿಭೆಯನ್ನು ಮಾತ್ರ ಗಣನೆಗೆ ತೆಗೆದುಕೊಂಡು ಇಷ್ಟು ಎತ್ತರಕ್ಕೆ ಬೆಳೆಯಲು ಬಿಡುತ್ತಿದ್ದೆವು ಎಂದು ಹೇಳುವುದೂ ಕಷ್ಟ!

ಸುನೀತಾ ಅವರು ಭಾರತದಲ್ಲಿ ಹುಟ್ಟಲಿಲ್ಲ; ಭಾರತದಲ್ಲಿ ಬೆಳೆಯಲಿಲ್ಲ; ಭಾರತದವನನ್ನು ಮದುವೆಯಾಗಲಿಲ್ಲ; ಭಾರತದ ಪೌರತ್ವವನ್ನು ಪಡೆದಿಲ್ಲ. ಅವರ ಹೆಸರು (ʼಸುನೀತʼ ಎಂದರೇನೇ ʻಒಳ್ಳೆಯ ನೀತಿಯʼ, ʻಒಳ್ಳೆಯ ನಡವಳಿಕೆಯʼ ಎಂದರ್ಥ) ಬಿಟ್ಟರೆ ಉಳಿದ ಏನೂ ʼಭಾರತೀಯʼ ಆಗಿಲ್ಲ. (ಇದು ಅವರ ಕೊರತೆಯೇನಲ್ಲ.) ಹಾಗಿದ್ದೂ ಅವರು ಇವರಿಗೆಲ್ಲ ʼಭಾರತೀಯಳುʼ! ಅವರ ಅಪ್ಪನೋ ಅಜ್ಜನೋ ಇಲ್ಲಿ ಹುಟ್ಟಿದ್ದರು ಎಂಬುದು ಇದಕ್ಕೆ ಕಾರಣ. ಅವರ ಅಜ್ಜ ಮುತ್ತಜ್ಜ ಏಕೆ ಏಳೆಂಟು ತಲೆಮಾರಿನ ಹಿಂದಿನವರು ಭಾರತದವರು ಎಂಬ ಎಳೆ ಸಿಕ್ಕರೂ ಸಾಕು ಇವರ ಕೊಂಡಾಟ ಶುರುವಾಗುತ್ತದೆ! ಆದರೆ ಇದೇ ಗುಣ ಬೇರೆ ದೇಶದ ಮೂಲದವರು ನಮ್ಮ ದೇಶಕ್ಕೆ ಬಂದು ಏನನ್ನಾದರೂ ಸಾಧನೆ ಮಾಡಿದರೆ ಅದನ್ನು ಗೌರವಿಸುವ ಗುಣ ಇಂಥವರಲ್ಲಿ ಇರುವುದಿಲ್ಲ. ಅಷ್ಟೇ ಏಕೆ ಅವರ ಸಾಧನೆಯನ್ನು ಅವರ ದೇಶಗಳಲ್ಲಿ ಸಂಭ್ರವಿಸುವುದನ್ನು ಕೂಡ ಸಹಿಸಿಕೊಳ್ಳುವ ಮನಸ್ಥಿತಿ ಇಂಥವರಿಗೆ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲೆಲ್ಲ ಇವರಿಗೆ ʻಹೊರಗಿನವರುʼ ಬಂದು ಇಲ್ಲಿ ಹೆಸರು ಮಾಡಿದ್ದಕ್ಕೆ ಒಳಗೊಳಗೇ ಹೊಟ್ಟೆ ಹಿಂಡತೊಡಗುತ್ತದೆ.

ಯುರೋಪಿಯನ್ನರು ಅದರಲ್ಲಿಯೂ ವಿಶೇಷವಾಗಿ ಬ್ರಿಟೀಷರು ಈ ದೇಶಕ್ಕೆ ಬಂದು ಅವರ ವಿದ್ವಾಂಸರು ನಮ್ಮ ದೇಶಿಯ ಭಾಷೆ ಕಲೆ, ಸಾಹಿತ್ಯ ಆರೋಗ್ಯ ಇಂತಹ ಸೇವೆಗಳಲ್ಲಿ ಗಣನೀಯ ಸೇವೆಯನ್ನು ಮಾಡಿದಾಗ ಇವರು ಅದನ್ನು ಮೆಚ್ಚಿಕೊಳ್ಳುವುದಿಲ್ಲ. ಅಗೆಲ್ಲ ಇವರಿಗೆ ಅವರು ʼಹೊರಗಿನವರುʼ ಆಗಿಯೇ ಕಾಣುತ್ತಾರೆ. ಕಿಟಲ್, ಮದರ್ ತೆರೆಸಾ ಮುಂತಾದವರ ಸಾಧನೆಯಲ್ಲಿ ಇವರಿಗೆ ʼಧರ್ಮಪ್ರಚಾರʼ ʼಮತಾಂತರʼ ಇಂತಹ ಹುಳುಕುಗಳೇ ಕಾಣುವುದು ಇದೇ ಕಾರಣದಿಂದ. ಇವರ ಮನಸ್ಥಿತಿಯ ಇನ್ನೂ ಕೆಟ್ಟಸಂಗತಿ ಎಂದರೆ ಈ ದೇಶಕ್ಕೆ ಅಧಿಕೃತವಾಗಿ ಬಂದು ಈ ದೇಶದ ಪ್ರಜೆಯಾಗಿಯೇ ಇದ್ದು ಈ ದೇಶದ ಬದುಕು ಸಂಸ್ಕೃತಿಗಳನ್ನು ಗೌರವಿಸುತ್ತಾ ಬಾಳುವವರೂ ಇವರಿಗೆ ಈ ದೇಶದವರಾಗಿ ಕಾಣುವುದಿಲ್ಲ!

ಹೀಗೆ ʻನಮ್ಮವರುʼ ʼನಮ್ಮ ಊರಿನವರುʼ ʼನಮ್ಮ ದೇಶದವರುʼ ಎಂದು ಕೊಂಡಾಟ ಮಾಡುವ ಇವರೆಲ್ಲ ನಮ್ಮವರೆ ಬೇರೆ ಕಡೆಗೆ ಹೋಗಿ ಮಾಡಬಾರದ ಕೆಲಸವನ್ನು ಮಾಡಿ ಆರೋಪಿಗಳೋ ಅಪರಾಧಿಗಳೋ ಆದಾಗ ಬಹಳಷ್ಟು ಜಾಣತನದಿಂದ ಆದಷ್ಟೂ ಅವರಿಂದ ಅಂತರ ಕಾಪಾಡಿಕೊಳ್ಳುತ್ತಾರೆ! ಇದೇ ಕಾರಣದಿಂದ ನಮ್ಮಲ್ಲಿಯೇ ಹುಟ್ಟಿ ಈಗ ಬೇರೆ ದೇಶಗಳಲ್ಲಿ ಇರುವ ದೊಡ್ಡ ದೊಡ್ಡ ಆರೋಪಿಗಳನ್ನು ಇವರು ʼನಮ್ಮವರುʼ ಎನ್ನಲು ಹಿಂದೇಟು ಹಾಕುತ್ತಾರೆ. ಇದೇ ಸುನೀತಾ ಇಂತಹ ಸಾಧನೆಯನ್ನು ಮಾಡದೆ ಎಂಥದೋ ಕೆಟ್ಟ ಕೆಲಸ ಮಾಡಿ ಪ್ರಖ್ಯಾತಿಯ ಬದಲು ಕುಖ್ಯಾತಿ ಪಡೆದಿದ್ದರೆ ಇವರ ಪ್ಲೇಟ್ ಉಲ್ಟಾ ತಿರುಗತೊಡಗುತ್ತಿತ್ತು. ಅವರ ಪೂರ್ವಜರು ಯಾವುದೋ ಕಾಲದಲ್ಲಿ ಇಲ್ಲಿಂದ ಅಮೇರಿಕಕ್ಕೆ ಹೋಗಿದ್ದಾರೆ. ಹಾಗಿದ್ದಾಗ ಸುನೀತಾ ಭಾರತಕ್ಕೆ ಹೇಗೆ ಸಂಬಂಧಪಡುತ್ತಾರೆ? ಎಂದು ಇವರೆಲ್ಲ ವಕಾಲತ್ತು ಹೂಡುತ್ತಿದ್ದರು!

ಒಂದು ಉದಾಹರಣೆ ಕೊಡುವುದಾದರೆ ನಮ್ಮ ಕುಂದಾಪುರದ ಮಹಿಳೆಯೊಬ್ಬರು, ಬೆಂಕಿ-ಬಿರುಗಾಳಿಯ ʻಭೀಕರ ಭಾಷಣʼಮಾಡಿ ಧರ್ಮ ರಕ್ಷಣೆ ಮಾಡುವಾಗ ಅಲ್ಲಿನ ಅನೇಕರು ತನ್ನ ಹೆಸರಿಗೆ ಊರಿನ ಹೆಸರನ್ನೇ ತಗಲುಹಾಕಿಕೊಂಡ ಈ ಮಹಿಳೆ ಇಡೀ ಊರಿಗೆ ಕೀರ್ತಿ ತರುತ್ತಿದ್ದಾಳೆ ಎಂದು ಸಂಭ್ರಮಿಸಿದರು. ಆದರೆ ಅದೇ ಮಹಿಳೆ ಅದ್ಯಾವುದೋ ಪಕ್ಷದ ಟಿಕೆಟ್ ಕೊಡಿಸುವ ವಂಚನೆಯ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ಆ ಸುದ್ಧಿ ದಿನಾ ಪತ್ರಿಕೆಯಲ್ಲಿ ಬರತೊಡಗಿದಾಗ ಇವರೆಲ್ಲ ಮೂಗುಮುರಿದು ಆಕೆಯ ಹೆಸರಿನೊಂದಿಗೆ ನಮ್ಮ ಊರಿನ ಹೆಸರನ್ನು ಮಾಧ್ಯಮದವರು ಬಳಸಬಾರದು ಎಂದು ಅವಲತ್ತುಕೊಂಡರು! ಒಳ್ಳೆಯದಾದರೆ ಕೊಂಡಾಡಿ ʼತಬ್ಬಿಕೊಳ್ಳುವುದು; ಕೆಟ್ಟದ್ದಾದರೆ ಮೂಗುಮುರಿದು ದಬ್ಬಿಬಿಡುವುದು! ಇಂಥವರ ಮನಸ್ಥಿತಿ ಯಾವಾಗಲೂ ಗೆದ್ದೆತ್ತಿನ ಬಾಲ ಹಿಡಿಯುವ ಕಡೆಗೇ ಇರುತ್ತದೆ. ಇವರ ಅಪ್ಪ ದೊಡ್ಡ ಸಾಧನೆ ಮಾಡಿ ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದರೆ ಇವರು ತಮ್ಮನ್ನು ,ʼಇಂಥವರ ಮಗʼ ಎಂದು ಪರಿಚಯಿಸಿಕೊಳ್ಳುತ್ತಾರೆ. ಒಂದು ವೇಳೆ ಅಪ್ಪ ಅಂಥದ್ದೇನೂ ಸಾಧನೆ ಮಾಡಿರದ ವ್ಯಕ್ತಿಯಾಗಿರದೇ ಸಾಮಾನ್ಯ ವ್ಯಕ್ತಿಯಾಗಿದ್ದು ಹೆಣ್ಣುಕೊಟ್ಟ ಮಾವ ಏನಾರೂ ಅಂತಹ ಸಾಧನೆ ಮಾಡಿದ್ದರೆ ಆಗ ತಕ್ಷಣ ಇವರ ಪ್ಲೇಟ್ ಬದಲಿಯಾಗಿಬಿಡುತ್ತದೆ. ಆಗ ಇವರೆಲ್ಲ ನಾನು ಇಂಥವರ ಅಳಿಯʼ ಎಂದು ಪರಿಚಯಿಸಿಕೊಳ್ಳುತ್ತಾರೆ!

ಇದು ಮಾರ್ಚ್ ತಿಂಗಳು. ಸ್ವತಂತ್ರ ಭಾರತದ ಸಮಾಜೋರಾಜಕೀಯ ಕ್ಷೇತ್ರವನ್ನು ಬಹುವಾಗಿ ಪ್ರಭಾವಿಸಿರುವ ರಾಮಮನೋಹರ ಲೋಹಿಯಾ ಅವರ ಜನ್ಮ ಆದ ತಿಂಗಳು. ಅವರು ಪ್ರತಿಪಾದಿಸಿದ ಸಪ್ತಕ್ರಾಂತಿಯಲ್ಲಿನ ಒಂದು ಮುಖ್ಯ ಅಂಶ ʼವಿಶ್ವಸರ್ಕಾರʼ ರಚನೆ. ಅಂಥದ್ದೊಂದು ಕನಸು ನನಸಾದರೆ ನಾವೆಲ್ಲ ಆ ದೇಶದವರು, ಈ ದೇಶದವರು ಎಂಬ ಸಂಕುಚಿತತೆಯಿಂದ ಮುಕ್ತರಾಗಿ ಕುವೆಂಪು ಹೇಳುವಂತೆ ನಿಜಾರ್ಥದಲ್ಲಿ ʼವಿಶ್ವಪ್ರಜೆʼಗಳಾಗುತ್ತೇವೆ. ಅಂತಹ ಒಂದು ಸ್ಥಿತಿ ಸಧ್ಯಕ್ಕೆ ಕಾಣದಿದ್ದರೂ ಅತ್ತಕಡೆ ಮುಖಮಾಡಿ ನಡೆಯಬೇಕಾದದ್ದು ಪ್ರಜ್ಞಾವಂತರೆಲ್ಲರ ಕರ್ತವ್ಯ.

ಆ ಕರ್ತವ್ಯವನ್ನು ಮಾಡಬೇಕಾದರೆ ಇಂತಹ ಕ್ಷುಲ್ಲಕ ಮನಸ್ಥಿತಿಗಳಿಂದ ಹೊರಬಂದು ನಾವು ವಿಶ್ವಮಟ್ಟದಲ್ಲಿ ಆಲೋಚಿಸುವಂಥವರಾಗಬೇಕು. ಇಂತಹ ಕೊಂಡಾಟ, ಭಂಟಾಟಗಳಲ್ಲಿ ತೊಡಗಿಕೊಳ್ಳದೆ ವಿಶ್ವದ ಯಾವುದೇ ದೇಶದ ಯಾವುದೇ ಜನಾಂಗದ ವ್ಯಕ್ತಿ ಇಡೀ ವಿಶ್ವಕ್ಕೆ ಉಪಯುಕ್ತವಾಗಬಲ್ಲ ಏನನ್ನಾದರೂ ಸಾಧನೆ ಮಾಡಿದರೆ ಅವರು ನಮ್ಮವರು ತಮ್ಮವರು ಎಂಬ ಭೇದ ಮಾಡದೆ ಅವರ ಸಾಧನೆಯ ಕಾರಣಕ್ಕೇ ನಾವು ಅವರನ್ನು ಗೌರವಿಸುವುದನ್ನು ಕಲಿಯಬೇಕು. ಆಗ ಕುವೆಂಪು ಹೇಳುವ ವಿಶ್ವಮಾನವ ಪ್ರಜ್ಞೆ ನಮ್ಮದಾಗಬಹುದು; ಅದು ಲೋಹಿಯಾ ಪ್ರತಿಪಾದನೆಯ ವಿಶ್ವಸರ್ಕಾರ ರಚನೆಯ ಕಡೆ ನಮ್ಮದೃಷ್ಟಿಯನ್ನು ತಿರುಗಿಸಬಲ್ಲದು. ಸುನೀತಾ ಅವರನ್ನು ಅಂತರಿಕ್ಷಕ್ಕೆ ಕಳಿಸಿದ್ದೂ ವಿಜ್ಞಾನವೇ; ಅವರನ್ನು ಅಲ್ಲಿಂದ ಕರೆಸಿಕೊಂಡದ್ದೂ ವಿಜ್ಞಾನವೇ! ಇದನ್ನು ಧರ್ಮಕ್ಕೆ ಗಂಟುಹಾಕುವುದು ಅಜ್ಞಾನದ ಕೆಲಸವಲ್ಲದೇ ಬೇರೇನೂ ಅಲ್ಲ!!

ರಾಬು
೨೧-೦೩-೨೦೨೪

No comments:

Post a Comment