ಎರಡು ರಾಜ್ಯಗಳ ವಿಚಿತ್ರಕೂಟ ಈ ಚಿತ್ರಕೂಟ
ʻ
ಚಿತ್ರಕೂಟʼ ಕನ್ನಡಿಗರಿಗೆ ಮಾತ್ರವಲ್ಲ ಭಾರತೀಯರಿಗೆಲ್ಲ ಬಹುತೇಕ ಚಿರಪರಿಚಿತʼ ಹೆಸರು. ಅಪ್ಪನ ಮಾತು ನಡೆಸಿಕೊಡುವುದಕ್ಕಾಗಿ ಏನೂ ತಪ್ಪು ಮಾಡದ ರಾಮ, ಅವನ ಹೆಂಡತಿ ʻಸತಿ ಶಿರೋಮಣಿʼ ಸೀತಾ ಮತ್ತು ರಾಮನ ಹಿಂಬಾಲಕ ತಮ್ಮ ಲಕ್ಷ್ಮಣ ಇವರೆಲ್ಲ ಅಷ್ಟೇನೂ ಸಾಮಾಜಿಕ ಮಹತ್ವವಲ್ಲದ ಕೌಟಂಬಿಕ ಬಿಕ್ಕಟ್ಟನ್ನು ನಿವಾರಿಸಲೋಸುಗ ಹನ್ನೆರಡು ವರ್ಷಗಳ ಕಾಲ ವನವಾಸ ಮಾಡಿದ ಕಥೆಯನ್ನು ವಾಲ್ಮೀಕಿ ರಾಮಾಯಣ ಸೇರಿದಂತೆ ಬಹುತೇಕ ರಾಮಾಯಣಗಳು ಹೇಳುತ್ತವೆ.ಈ ರಾಮಾಯಣಗಳ ಪ್ರಕಾರ ಅವರು ಈ ವನವಾಸವನ್ನು ಕಳೆದದ್ದು ಇಂದಿನ ವಿಂಧ್ಯಪರ್ವತ ಶ್ರೇಣಿಯಲ್ಲಿ ಬರುವ ʻಚಿತ್ರಕೂಟʼ ಎಂಬ ಪ್ರದೇಶದಲ್ಲಿ. ಕನ್ನಡದಲ್ಲಿ ಕುವೆಂಪು ಅವರ ರಾಮಾಯಣ ದರ್ಶನಂ ಮೊಯಿಲಿಯವರ ಶ್ರೀ ರಾಮಾಯಣ ಮಹಾನ್ವೇಷಣಂ ಮಹಾಕಾವ್ಯಗಳು ಈ ಚಿತ್ರಕೂಟದಲ್ಲಿ ರಾಮ ಪರಿವಾರ ಕಳೆದ ದಿನಗಳ ವಿವರಗಳನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿವೆ. ಲಕ್ಷ್ಮಣ ತಂದುಕೊಡುವ ಹಸಿಕಟ್ಟಿಗೆಯನ್ನು ಒಲೆಗೆಹಾಕಿ ಅಡುಗೆಮಾಡಲು ಕಣ್ಣಲ್ಲಿ ಹೊಗೆ ತುಂಬಿಕೊಂಡು ಗೋಳಾಡುವ ಮತ್ತು ಅದಕ್ಕಾಗಿ ಮೈದುನನ ಮೇಲೆ ಹುಸಿಮುನಿಸಿನ ಕೋಪ ತೋರಿ ಅವನನ್ನು ತರಾಟೆಗೆ ತೆಗೆದುಕೊಳ್ಳುವ ಚಿತ್ರಣವನ್ನು ಕುವೆಂಪು ತಮ್ಮ ರಾಮಾಯಣದಲ್ಲಿ ವರ್ಣಿಸಿದ್ದನ್ನು ಆ ಕಾವ್ಯ ಓದಿಯೇ ಆನಂದಿಸಬೇಕು! ಅತ್ರಿ, ಮಾರ್ಕಂಡೇಯ ಸೇರಿದಂತೆ ಬಹಳಷ್ಟು ಋಷಿಮುನಿಗಳ ವಾಸಸ್ಥಾನವಾಗಿತ್ತೆನ್ನುವ ಈ ಪ್ರದೇಶದ ಬಗ್ಗೆ ವಾಲ್ಮಕಿ ಭಾರದ್ವಾಜ ಮುನಿ ಸೇರಿದಂತೆ ಅನೇಕರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ
ಈ ಚಿತ್ರಕೂಟ ಪ್ರದೇಶದಲ್ಲಿ ಸುತ್ತಾಡಲೆಂದು ಮೊನ್ನೆ ಹೋಗಿದ್ದೆ. ಈಗಿನ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆ ಮತ್ತು ಮಧ್ಯಪ್ರದೇಶದ ಸತ್ನಾ ಜಿಲ್ಲೆ ಇವುಗಳಲ್ಲಿ ಹರಡಿಕೊಂಡಿರುವ ವಿಂದ್ಯಾ ಪರ್ವತ ಶ್ರೇಣಿಯಲ್ಲಿ ಬರುವ ಈ ಚಿತ್ರಕೂಟ ಒಂದು ರೀತಿಯಲ್ಲಿ ಎರಡೂ ರಾಜ್ಯಗಳ ವಿಚಿತ್ರಕೂಟವೆಂದೇ ಹೇಳಬೇಕು. ಚಿತ್ರಕೂಟಕ್ಕೆ ಸಂಬಂಧಿಸಿದ ಪೌರಾಣಿಕ ಐತಿಹ್ಯದ ಸ್ಥಳಗಳು ಈ ಎರಡೂ ರಾಜ್ಯಗಳ್ಳಿ ಹಂಚಿಕೊಂಡಿವೆ ಅಷ್ಟೇ ಅಲ್ಲ ರಾಮಘಾಟ್‌ನ ಬಳಿಯ ಒಂದು ಊರಿನ ಮಧ್ಯೆಯೇ ಈ ರಾಜ್ಯವಿಭಜನ ರೇಖೆ ಇದ್ದು ಒಂದು ಮನೆ ಉತ್ತರಪ್ರದೇಶಕ್ಕೆಸೇರಿದರೆ ಅದರ ಮುಂದಿನ ಮನೆ ಮಧ್ಯಪ್ರದೇಶಕ್ಕೆ ಸೇರಿದೆ!
ಉತ್ತರ ಪ್ರದೇಶ ರಾಜ್ಯದಲ್ಲಿ ಬರುವ ಚಿತ್ರಕೂಟಧಾಮ ರೈಲ್ವೇಸ್ಟೇಷನ್ನಿನಲ್ಲಿ ಬೆಳಿಗ್ಗೆ ಇಳಿದಾಗ ಬೆಳಿಗ್ಗೆ ಹನ್ನೊಂದಾಗಿತ್ತು ಮೇ ಬಿಸಿಲು ಬಡಿಯುತ್ತಿತ್ತು. ಕಾಡು ಪ್ರದೇಶ ಅಷ್ಟೇನೂ ಬಿಸಿಲು ತಟ್ಟಲಿಕ್ಕಿಲ್ಲ ಅನ್ನಿಸಿದ್ದು ಸುಳ್ಳಾಗಿತ್ತು. ರೈಲು ಇಳಿದು ಹೆಂಡತಿಯೊಂದಿಗ ಒಂದು ಆಟೋ ತೆಗೆದುಕೊಂಡು ಹೊರಟ ನನ್ನ ಹತ್ತಿರ ಇದ್ದದ್ದು ಒಟ್ಟು ಐದುಗಂಟೆಗಳ ಸಮಯ ಮಾತ್ರ ಮತ್ತೆ ಸಂಜೆ ನಾಲ್ಕುಗಂಟೆಗೆ ಮರಳಿ ಇದೇ ಸ್ಟೇಷನ್ನಿನ್ನಿಗೆ ಬಂದು ನಾನು ಕಾಶಿಗೆ ಹೋಗುವ ರೈಲು ಹತ್ತಬೇಕಿತ್ತು. ಅಪರಿಚಿತ ಪ್ರದೇಶಕ್ಕೆ ಪ್ರವಾಸ ಹೋಗುವ ನಮಗೆ ಒಂದೊಂದು ಸಲ ಟ್ರ್ಯಾಕ್ಸಿ, ಆಟೊ ಡ್ರೈವರ್ ಗಳು ಬಹಳ ಒಳ್ಳೆಯವರು ಸಿಗುತ್ತಾರೆ ಕೆಲವು ಸಲ ತಲೆ ತಿನ್ನುವವರು ಸಿಗುತ್ತಾರೆ. ಆದರೆ ಇಲ್ಲಿ ಸಿಕ್ಕ ಡ್ರೈವರ್ ಬಹಳ ಒಳ್ಳೆಯವನಾಗಿದ್ದು ನನ್ನ ತಿರುಗಾಟ ಚೆನ್ನಾಗಿ ಆಯಿತು.
ನಾವು ಮೊದಲು ಹೋದದ್ದು ವನವಾಸ ಕಾಲದಲ್ಲಿ ರಾಮನ ಪರಿವಾರ ಗುಡಿಸಲು ಕಟ್ಟಿಕೊಂಡು ಬಹಳಷ್ಟು ವರ್ಷಗಳ ಕಾಲ ವಾಸವಾಗಿತ್ತು ಎಂದು ಜನ ನಂಬಿಕೊಂಡಿರುವ ಚಿತ್ರಕೂಟ ಪ್ರದೇಶದ ಹನುಮಾನ್ ಗರಿ ಎಂಬ ಪರ್ವತಕ್ಕೆ. ಇದು ವಿಂದ್ಯಾ ಪರ್ವತ ಶ್ರೇಣಿಯಲ್ಲಿ ಬರುವ ಒಂದು ಬೆಟ್ಟ. ಈಗ ಮಧ್ಯಪ್ರದೇಶ ಭಾಗದಲ್ಲಿ ಬರುತ್ತದೆ. ದೊಡ್ಡದಾದ ಈ ಬೆಟ್ಟವನ್ನು ಹತ್ತಲು ಈಗ ಮೆಟ್ಟಿಲುಗಳ ಜೊತೆಗೆ ʼರೋಪ್ ವೇʼ ವ್ಯವಸ್ಥೆ ಕೂಡ ಇದೆ. ಮೈಯಲ್ಲಿ ಶಕ್ತಿ ಇದ್ದವರು ಬೆಳಗಿನ ಸಮಯವಾದರೆ ಬೆಟ್ಟವನ್ನು ಹತ್ತಿಕೊಂಡೇ ಹೋಗಿ ಆನಂದಿಸಬಹುದು. ಇಲ್ಲವಾದರೆ ರೋಪ್ ವೇ ಮೂಲಕ ಬೆಟ್ಟದ ಮೇಲೆ ಹೋಗಬಹುದು. ಅಲ್ಲಿ ಹೋದ ತಕ್ಷಣ ನಮಗೆ ಸಿಗುವುದು ಆಂಜನೇಯನ ಮೂರ್ತಿ ಇರುವ ಒಂದು ಕಲ್ಲುಗುಡಿ. ಅದನ್ನು ನೋಡಿಕೊಂಡು ಅಲ್ಲಿಂದ ಮತ್ತೆ ನೂರು ಇನ್ನೂರು ಮೆಟ್ಟಿಲು ಹತ್ತಿಹೋದರೆ ಅಲ್ಲಿ ಸೀತೆಯ ಅಡುಗೆ ಮನೆ ʻಸೀತಾ ಕಿ ರಸೋಯಿʼ ಸಿಗುತ್ತದೆ. ಇಲ್ಲಿ ಸೀತೆ ಅಡುಗೆ ಮಾಡುತ್ತಿದ್ದಳು ಎಂದು ಬಣ್ಣದಲ್ಲಿ ಕಚ್ಚಾರೀತಿ ಬರೆದಿರುವ ಒಂದು ಚಿಕ್ಕ ಗುಡಿ ರೂಪದ ರಚನೆ ಇದೆ. ಇದರ ಜೊತೆಗೆ ನಮ್ಮ ವಿವಿಧ ಪುರಾಣಗಳಲ್ಲಿ ಬರುವ ಯಾವುದ್ಯಾವುದೋ ದೇವಿಯರ ಮುನಿಗಳ ಮೂರ್ತಿಗಳಿರುವ ಚಿಕ್ಕಚಿಕ್ಕ ಗುಡಿಸಲುಗಳು ಇವೆ. ಇಲ್ಲೆಲ್ಲ ʻಹತ್ತುರೂಪಾಯಿನ ದಾನಮಾಡಿʼ ʻಇಪ್ಪತ್ತು ರೂಪಾಯಿನದಾನ ಮಾಡಿʼ ಎಂದು ತಲೆ ತಿನ್ನುವ ಜನ ತಟ್ಟೆಹಿಡಿದುಕೊಂಡು ಕಿರಿಕಿರಿಮಾಡುವುದು ಹಿಂಸೆಯಾಗುತ್ತದೆಯಾದರೂ ಅವನ್ನೆಲ್ಲ ತುಸು ಸಮಾಧಾನದಿಂದ ಸಹಿಸಿಕೊಂಡು ಮುನ್ನೆಡದರೆ ಹನುಮಂತನ ಅವತಾರ ವಾದ ಮಂಗಗಳು ಇಲ್ಲಿ ಬಹಳಷ್ಟು ಇರುತ್ತವೆ. ಇವಕ್ಕೆ ನೀವು ಕಾಳು ಇತ್ಯಾದಿ ಆಹಾರ ನೀಡಿ ಧನ್ಯರಾಗುವುದಾದರೆ ಹತ್ತಿಪ್ಪತ್ತು ರೂಪಾಯಿ ತೆಗೆದುಕೊಂಡು ಈ ಮಂಗಗಳಿಗೆ ಆಹಾರವನ್ನು ನಿಮಗೆ ಕೊಡಲು ಇಲ್ಲಿ ಸಾಕಷ್ಟು ಜನ ಇದ್ದಾರೆ.ಬೆಟ್ಟದ ಮೇಲೆ ಹೋಗಿ ನಿಂತು ನೋಡಿದರೆ ಕೆಳಗಿನ ದೃಶ್ಯ ಮನಮೋಹಕವಾಗಿ ಕಾಣುತ್ತದೆ. ಬಹುತೇಕ ಕಾಡು ಈಗ ಕೃಷಿಭೂಮಿಯಾಗಿ ರಸ್ತೆ ಕಟ್ಟಡಗಳಾಗಿ ಬದಲಾಗಿದೆ. ಕಾಡಿನ ಭಯಂಕರತೆ ಇಲ್ಲವಾಗಿದೆ. ಈಗ ಅಲೆಮಾರಿಗಳು ಬೆಟ್ಟವಾಸಿ ಜನರ ವಾಸಸ್ಥಾನಗಳಾಗಿರುವ, ಅವರು ನಮ್ಮನ್ನು ತಮ್ಮ ಹೊಟ್ಟೆಪಾಡಿಗಾಗಿ ಕಾಡಿಬೇಡಿ ಜೀವನ ನಡೆಸುವ ತಾಣವಾಗಿರುವ ಇದು ಆ ಕಾಲದಲ್ಲಿ ರಾಮಲಕ್ಷ್ಮಣರೂ ಬೀಡು ಬಿಟ್ಟಿರಲೂ ಬಹುದು ಅನ್ನಿಸುವ ಸ್ಥಳವಾಗಿದೆ.
ಅಲ್ಲಿಂದ ಮುಂದೆ ತುಸು ದೂರದಲ್ಲಿ ʻಜಾನಕಿಕುಂಡʼವಿದೆ. ಅದನ್ನು ನೋಡಿಕೊಂಡು ಇನ್ನೂ ತುಸು ದೂರಹೋದರೆ ʻಸ್ಪಟಿಕಶಿಲಾʼ ಸಿಗುತ್ತದೆ. ಇವೆಲ್ಲ ಕಾಡಿನಲ್ಲಿ ಹರಿಯುವ ಒಂದು ಚಿಕ್ಕನದಿಯ ದಂಡೆಯಲ್ಲಿಯೇ ಇದ್ದು ಈಗಲು ತಕ್ಕಮಟ್ಟಿನ ಪ್ರೌಕೃತಿಕ ಸೌಂದರ್ಯವನ್ನು ಉಳಿಸಿಕೊಂಡಿವೆ. ಇವುಗಳನ್ನು ನೋಡಿಕೊಂಡು ನಾನು ʻರಾಮದರ್ಶನʼ ಎಂದು ಕರೆಯಲ್ಪಡುವ ಒಂದು ವಸ್ತು ಮತ್ತು ಚಿತ್ರಸಂಗ್ರಹಾಲಕ್ಕೆ ಹೋದೆ. ಇದು ಮಧ್ಯಪ್ರದೇಶ ಸರ್ಕಾರದ ಒಂದು ಸಂಗ್ರಹಾಲಯ. ಇದರಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ವಿವಿಧ ಘಟನಾವಳಿಗಳ ಸುಂದರವಾದ ಪೇಯಿಂಟಿಗ್ ಗಳನ್ನು ಸಂಗ್ರಹಿಸಲಾಗಿದೆ. ಕೈಕೆಯಿಯ ವರಕೇಳುವಿಕೆ, ವಿಶ್ವಾಮಿತ್ರ ಅರಣ್ಯಕ್ಕೆ ರಾಮಲಕ್ಷ್ಮಣರನ್ನು ಒಯ್ಯುವಿಕೆ, ಸೀತಾ ಸ್ವಯಂವರ, ಅಹಲ್ಯಾ ಪ್ರಕರಣ, ತಾಟಕಿ ಸಂಹಾರ, ಸೀತಾಪರಣ, ವಾಲಿಯ ಕೊಲೆ, ಶೂರ್ಪನಖಿ ಪ್ರಕರಣ, ಸೀತಾ ಅಗ್ನಿಪ್ರವೇಶ ಹೀಗೆ ಮುಖ್ಯಘಟನೆಗಳ ಚಿತ್ರಾವಳಿಗಳು ಕಣ್ಮನ ಸೆಳೆಯುತ್ತವೆ. ಕೇವಲ ಭಾರತ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಲ್ಲಿ ನಮ್ಮ ರಾಮಾಯಣ ಕಥೆಯನ್ನು ಹೇಗೆಲ್ಲ ಜನ ಗ್ರಹಿಸಿದ್ದಾರೆ ಎಂಬುದನ್ನು ತೋರಿಸುವ ಜನರ ಮುಖವಾಡಗಳು, ಆಯುಧಗಳು, ಪರಿಕರಗಳು ಚಿತ್ರಪಟಗಳು ಇವುಗಳ ಸಂಗ್ರಹ ಮತ್ತು ಆ ದೇಶಗಳ ರಾಮಾಯಣಗಳ ಬಗ್ಗೆ ಪೇಯಿಂಟಿಂಗ್ ಗಳನ್ನು ಸಂಗ್ರಹಿಸಿದ್ದು ಇಲ್ಲಿನ ವಿಶೇಷ. ರಾಮದರ್ಶನ ಎಂಬ ಹೆಸರನ್ನು ಸಾರ್ಥಕಗೊಳಿಸುವಂತೆ ತನ್ನ ಎದೆ ಬಗೆದು ರಾಮನನ್ನು ತೋರಿಸುವ ಹನುಮಂತನ ಬೃಹತ್ ಮೂರ್ತಿಯೊಂದು ಇಲ್ಲಿನ ವಿಶೇಷ ಆಕರ್ಷಣೆಯಾಗಿದೆ.ಈ ಸಂಗ್ರಹಾಲಯದ ಎದುರಿಗೇ ಮಹಾತ್ಮಾಗಾಂಧಿ ಚಿತ್ರಕೂಟ ಗ್ರಾಮೋದ್ಯೋಗ ವಿಶ್ವವಿದ್ಯಾಲಯವಿದೆ. ಅದರ ಒಳಗೆ ಹೋಗಲು ಸಮಯವಿರಲಿಲ್ಲವಾದ ಕಾರಣ ಹೊರಗಿನಿಂದಲೇ ಒಂದು ಫೋಟೋ ಹೊಡೆದುಕೊಂಡು ನಾನು ಹೊರಡಬೇಕಾಯಿತು.
ರಾಮಘಾಟ್ ಎಂಬ ಸ್ಥಳ ಕೂಡ ಬಹಳಷ್ಟು ಸುಂದರಾಗಿದೆ. ಇದರ ಒಂದು ಭಾಗ ಮಧ್ಯಪ್ರದೇಶಕ್ಕೆ ಸೇರಿದರೆ ಇನ್ನೊಂದು ಭಾಗ ಉತ್ತರಪ್ರದೇಶಕ್ಕೆ ಸೇರಿದೆ. ನಾನು ಹೋಗಿದ್ದು ಮೇ ತಿಂಗಳಾದ ಕಾರಣ ನದಿಯಲ್ಲಿ ನೀರು ತಳಮಟ್ಟದಲ್ಲಿದ್ದು ಕೊಳಕಾಗಿ ಕಾಣುತ್ತಿತ್ತು. ದೋಣಿವಿವಾರಕ್ಕೆ ಇಲ್ಲಿ ಅಲಂಕೃತ ದೋಡಿಗಳ ದಂಡೇ ಇದ್ದು ಬಹುಶಃ ನದಿಯಲ್ಲಿ ನೀರು ಹೆಚ್ಚು ಇರುವ ಸಮಯದಲ್ಲಿ ವಿಹಾರ ಮನಸ್ಸಿಗೆ ಬಹಳ ಮುದನೀಡಬಹುದೇನೋ.
ಈ ಚಿತ್ರಕೂಟದಲ್ಲಿ ಕೆಲವು ಧಾರ್ಮಿಕ ದೇವಾಲಯಗಳು ಇರುವುದು ನಿಜವಾದರೂ ನಾವು ಪೌರಾಣಿಕ ಮಹತ್ವದ ಸತಿ ಅನಸೂಯ ದೇವಾಲಯಕ್ಕೆ ಹೋಗಲೇಬೇಕು. ವಿಂದ್ಯಪರ್ವತ ಶ್ರೇಣಿಯಲ್ಲಿ ಬರುವ ಮಹೇಂದ್ರ ಪರ್ವತ ಎಂಬ ಎತ್ತರವಾದ ಬೆಟ್ಟದ ಬುಡದಲ್ಲಿ ಬೆಟ್ಟದ ಬೆನ್ನಿಗೇ ಹತ್ತಿಕೊಂಡು ನಿರ್ಮಿಸಿರುವ ಈ ದೇವಾಲಯ ಪ್ರಕೃತಿ ಮಧ್ಯೆ ಬಹಳಷ್ಟು ಚೆಂದವಾಗಿ ಕಾಣುತ್ತದೆ. ಸುತ್ತಬೆಟ್ಟಕಾಡುಗಳಿಂದ ಆವೃತವಾಗಿರುವ ಈ ಸ್ಥಳದಲ್ಲಿ ಅತ್ರಿಮುನಿಗಳು ತಮ್ಮ ಹೆಂಡತಿ ಅನಸೂಯಾಳೊಂದಿಗೆ ವಾಸವಾಗಿದ್ದರು ಎನ್ನಲಾಗುತ್ತಿದೆ. ಈಗ ಪರಮಹಂಸರೊಬ್ಬರ ಆಶ್ರಮವಾಗಿರುವ ಈ ಸ್ಥಳವನ್ನು ಒಂದು ವಸ್ತು ಮತ್ತು ಚಿತ್ರಸಂಗ್ರಹಾಲಯವಾಗಿ ಈಗ ರೂಪಿಸಲಾಗಿದೆ.
ರಾಮ ಪರಿವಾರ ಪ್ರಯಾಗ್ ರಾಜ್ ನಲ್ಲಿದ್ದ ಭಾರದ್ವಾಜ ಮುನಿಗಳನ್ನು ಭೇಟಿಮಾಡಿ ಅವರ ಸಲಹೆ ಮೇರೆಗೆ ಚಿತ್ರಕೂಟಕ್ಕೆ ಬಂದು ಇಲ್ಲಿ ಅತ್ರಿಮುನಿಗಳನ್ನು ಭೇಟಿಯಾದನೆಂದು ಹೇಳಲಾಗುತ್ತದೆ. ರಾಮ ಮುನಿಯನ್ನು ಭೇಟಿ ಆಗುವ ಮತ್ತು ಸೀತೆಗೆ ಸತಿ ಅನಸೂಯ ಹದಿಬದೆಯ ಧರ್ಮವನ್ನು ಬೋಧಿಸುವ ಭಾಗ ರಾಮಾಯಣದಲ್ಲಿ ಬಹಳ ಪ್ರಸಿದ್ಧವಾಗಿದೆ. ಅವುಗಳನ್ನು ಇಲ್ಲಿ ಗೊಂಬೆದೃಶ್ಯಗಳಾಗಿ ರೂಪಿಸಲಾಗಿದೆ. ಇವುಗಳ ಜೊತೆಗೆ ರಾಮಾಯಣ ಸೇರಿದಂತೆ ನಮ್ಮ ಪುರಾಣಗಳಲ್ಲಿ ಬರುವ ಅನೇಕ ಘಟನೆಗಳನ್ನು ಇಲ್ಲಿ ದೃಶ್ಯಾವಳಿಗಳಾಗಿ ರೂಪಿಸಲಾಗಿದೆ.
ಈ ಸತಿ ಅನುಸೂಯಾ
ದೇವಾಲಯ ಅಂದರೆ ಅತ್ರಿಮುನಿ ಆಶ್ರಮವೇ ಮಂದಾಕಿನಿ ನದಿಯ ಉಗಮಸ್ಥಾನ. ಇಲ್ಲಿ ಬೆಟ್ಟದ ಬುಡದಿಂದ ಪ್ರತ್ಯಕ್ಷವಾಗುವ
ಮಂದಾಕಿನ ನದಿ ಜಾನಕಿಕುಂಡ, ಸ್ಪಟಿಕಶಿಲಾ ರಾಮಘಾಟ್ ಸೇರಿದಂತೆ ಇಡೀ ಚಿತ್ರಕೂಟದ ಈ ಪೌರಾಣಿಕ ಸ್ಥಳಗಳಲ್ಲಿ
ಹರಿದು ಮುಂದೆ ರಾಮಚರಿತ ಮಾನಸ ಬರೆದ ತುಳಸಿದಾಸರ ಜನ್ಮಸ್ಥಳವಾದ ರಾಯಪುರದಲ್ಲಿ ಯಮುನಾನದಿಯನ್ನು ಸೇರಿಕೊಳ್ಳುತ್ತದೆ.
ಈ ನದಿ ಇಡೀ ಚಿತ್ರಕೂಟದ ಈ ಎಲ್ಲ ಸ್ಥಳಗಳಿಗೆ ಒಂದು ಜೀವನಾಡಿಯಾಗಿ ಹರಿದಿದೆ ಮಾತ್ರವಲ್ಲ ಈ ಪರಿಸರಕ್ಕೆ
ಒಂದು ವಿಶೇಷ ಕಳೆಯನ್ನೂ ಕಟ್ಟಿದೆ.
ರಾಮಾಯಣ ಪೌರಾಣಿಕ ಕಟ್ಟುಕಥೆಯೇ ಅಥವಾ ವಾಸ್ತವವಾಗಿ ನಡೆದ ಚರಿತ್ರೆಯೇ ಎಂಬುದು ವಾದಗ್ರಸ್ತ ಸಂಗತಿ. ಪುರಾಣವನ್ನು ಇತಿಹಾಸ ಮಾಡುವ ಮತ್ತು ಇತಿಹಾಸವನ್ನು ಪುರಾಣವಾಗಿ ಮಾಡುವ ಕೆಲಸಗಳು ಎಲ್ಲ ದೇಶಗಳ ಎಲ್ಲ ಸಮುದಾಯಗಳಲ್ಲಿ ಎಲ್ಲ ಕಾಲಕ್ಕೂ ನಡೆಯುತ್ತಲೇ ಇರುವುದು ಸಾಮಾನ್ಯ ಸಂಗತಿಯಾದರೂ ಭಾರತದಲ್ಲಿ ಈ ಕೆಲಸಗಳು ತುಸು ಹೆಚ್ಚೇ ಅನ್ನಬೇಕು. ಅದು ಏನೇ ಇರಲಿ ನೀವು ಧಾರ್ಮಿಕ ನಂಬಿಕೆಯುಳ್ಳ ಶ್ರದ್ಧಾವಂತರಾದರೆ ಈ ಸ್ಥಳಗಳ ವೀಕ್ಷಣೆ ನಿಮಗೆ ಹೆಚ್ಚು ಭಾವುಕರನ್ನಾಗಿ ಮಾಡಬಹುದು. ಅದರೆ ಆ ಶ್ರದ್ಧಾವಂತಿಕೆ ಇಲ್ಲದೇ ಇರುವವರನ್ನೂ ಈ ಚಿತ್ರಕೂಟ ನಿರಾಶೆಗೊಳಿಸುವುದಿಲ್ಲ. ಇಲ್ಲಿನ ಪ್ರಕೃತಿ ಸೌಂದರ್ಯ, ಬದಲಾದ ಪರಿಸರ, ಇತ್ಯಾದಿಗಳು ನಮ್ಮ ಮನಸ್ಸಿಗೆ ಮುದನೀಡುತ್ತವೆ ಮಾತ್ರವಲ್ಲ ನಮ್ಮ ಸಂಶೋಧನಾ ಬುದ್ಧಿಯನ್ನು ತುಸು ಚುರುಕುಗೊಳಿಸುತ್ತವೆ. ಆಸಕ್ತಿ ಇದ್ದರೆ ಅವಕಾಶವಾದರೆ ಒಮ್ಮೆ ಹೋಗಿಬನ್ನಿ ಚೆನ್ನಾಗಿರುತ್ತದೆ.
ರಾಬು
೧೧-೦೫-೨೦೨೫
No comments:
Post a Comment