Friday, April 21, 2017

ಕರ್ನಾಟಕದ ವಿಶ್ವವಿದ್ಯಾಲಯಗಳ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಯಿಂದ ಆರಂಭವಾದ ಕನ್ನಡ ವಿ.ವಿ.ಯ ಮತ್ತೊಂದು ನುಡಿಹಬ್ಬ ಇಂದು ನಡೆಯುತ್ತಿದೆ. ಇದು ನನಗೆ ಕಳೆದ ವರ್ಷದ ಒಂದು ಕಹಿನೆನಪನ್ನು ತರುತ್ತಿದೆ. ಕಳೆದ ಬಾರಿ ನುಡಿಹಬ್ಬದ ವಿಶೇಷ ಭಾಷಣಕ್ಕಾಗಿ ದೂರದ ದೆಹಲಿಯಿಂದ ಬಂದಿದ್ದ ಹಿರಿಯ ಭಾಷಾವಿಜ್ಞಾನಿ, ವಿದ್ವಾಂಸ ಡಾ. ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಭಾಷಣವನ್ನು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅದನ್ನು ಮೊಟಕುಗೊಳಿಸಲು ವಿವಿಯ ಕುಲಾಧಿಪತಿಗಳೂ ಆದ ರಾಜ್ಯಪಾಲರು ಸೂಚನೆ ನೀಡಿ ಕಾರ್ಯಕ್ರಮಕ್ಕೆ ಮಾತ್ರವಲ್ಲ ಇಡೀ ವಿದ್ವತ್ ವಲಯಕ್ಕೇ ಅವಮಾನಮಾಡಿದ್ದರು. ಇದರಿಂದ ಬಿಳಿಮಲೆಯವರಿಗೆ ಉಂಟಾದ ಅವಮಾನ, ಅವರನ್ನು ಕರೆಸಿಕೊಂಡವರಿಗೆ ಆದ ಮುಜುಗರ ಇವನ್ನೆಲ್ಲ ತಕ್ಕಮಟ್ಟಿಗೆ ಸರಿಪಡಿಸಲೆಂಬಂತೆಯೋ ಏನೋ ಕುಲಪತಿ ಪ್ರೊ.ಮಲ್ಲಿಕಾ ಘಂಟಿ ಅವರು ಬಿಳಿಮಲೆಯವರನ್ನು ವಿ.ವಿ. ಇನ್ನೊಂದು ಕಾರ್ಯಕ್ರಮಕ್ಕೆ ಕರೆಸಿಕೊಂಡು ಅವರಿಗೆ ಮಾತನಾಡಲು ಅವಕಾಶ ಮಾಡಿಕೊಡಬೇಕಾಯಿತು!.
ರಾಜ್ಯದ ಅನೇಕ ತರುಣ ವಿದ್ವಾಂಸರು ಕಷ್ಟಪಟ್ಟು ಅಧ್ಯಯನ ಮಾಡಿ ಪದವಿಪಡೆಯಲಿರುವ ಈ ಅತಿಮುಖ್ಯ ಕಾರ್ಯಕ್ರಮ ಇತ್ತೀಚಿನ ಕುಲಾಧಿಪತಿಗಳಿಗೆ ಎಂಥದೋ ಒಂದು ಜುಜುಬಿ ಕಾರ್ಯಕ್ರಮವಾಗಿ ತೋರುತ್ತಿದೆಯೋ ಏನೋ! ಅನೇಕ ವಿ.ವಿ. ಘಟಿಕೋತ್ಸವಗಳು ರಾಜ್ಯಪಾಲರ ಅನುಪಸ್ಥಿತಿಯಲ್ಲಿ ನಡೆಯುವುದು ಇತ್ತಿಚೆಗೆ ಸಾಮಾನ್ಯವಾಗಿದೆ. ಅವರ ಸಮಯ ಗೊತ್ತುಪಡಿಸಿಕೊಂಡೇ ಘಟಿಕೋತ್ಸವಗಳು ಏರ್ಪಡುತ್ತವೆಯಾದರೂ ಹೀಗಾಗುತ್ತಿವೆ. ಆಗೆಲ್ಲ ಸಿಗುವ ಕಾರಣ ಅವರ ಅನಾರೋಗ್ಯ. ಒಂದು ವೇಳೆ ಬಂದರೂ ಅವಸರ. ಬೆಂಗಳೂರಿನ ಯಾವುದ್ಯಾವುದೋ ಚಿಕ್ಕಪುಟ್ಟ ಸಂಘ-ಸಂಸ್ಥೆಗಳ ಕೆಲಸಕ್ಕೆ ಬಾರದ ಕಾರ್ಯಕ್ರಮಗಳಿಗೆ ಲಭ್ಯವಾಗುವ ನಮ್ಮ ರಾಜ್ಯಪಾಲರುಗಳ ಉಪಸ್ಥಿತಿ ವಿವಿಗಳ ಘಟಿಕೋತ್ಸವಗಳಂತಹ ಬಹುಮುಖ್ಯ ಕಾರ್ಯಕ್ರಮಗಳಿಗೆ ಲಭ್ಯವಾಗದೇ ಇರುವುದು ಒಂದು ವಿಪರ್ಯಾಸವೇ ಸರಿ. ಕುಲಾಧಿಪತಿಗಳ ಅನಾರೋಗ್ಯ ಅಥವಾ ಅವಸರ ನಮ್ಮ ವಿ.ವಿಗಳ ಆರೋಗ್ಯವನ್ನೂ ವಿದ್ವತ್ ವಲಯದ ಉತ್ಸಾಹವನ್ನೂ ಹಾಳುಮಾಡದಿರಲಿ.
ಹಂಪಿ ಕನ್ನಡ ವಿವಿಯ ಕಳೆದ ವರ್ಷದ ಘಟನೆಯನ್ನು ವಿವರಿಸಿ ಹೀಗಾಗದಂತೆ ನೋಡಿಕೊಳ್ಳಲು ಎಲ್ಲಾ ರಾಜ್ಯಪಾಲರುಗಳಿಗೆ ಸೂಚನೆ ನೀಡಿ ಎಂದು ನಾನು ಗೌರವಾನ್ವಿತ ರಾಷ್ತ್ರಪತಿಗಳಿಗೆ ಒಂದು ಪತ್ರವನ್ನು ಇ-ಮೇಲ್ ಮೂಲಕ ಕಳಿಸಿದ್ದೆ. ಅದು ಎಂಥ ಆಯಿತೋ ಗೊತ್ತಾಗಲಿಲ್ಲ. ಆ ಪತ್ರವನ್ನು ನಿಮ್ಮ ಗಮನಕ್ಕೆ ತರೋಣ ಅಂಥ ಹುಡುಕಿದರೆ ಅದು ಕಂಪ್ಯೂಟರ್‍ನಲ್ಲಿ ಎಲ್ಲಿ ಸೇರಿಕೊಂಡಿದೆಯೋ ಸಿಗುತ್ತಿಲ್ಲ. ಹಂಪಿಯಲ್ಲಿ ಕಳೆದ ವರ್ಷ ಬಿಳಿಮಲೆಯವರಿಗೆ ಆದ ಅವಮಾನ ಈ ವರ್ಷದ ಅಲ್ಲಿನ ಘಟಿಕೋತ್ಸವ ಭಾಷಣಕಾರರಿಗೆ ಮಾತ್ರವಲ್ಲ ಯಾವುದೇ ವಿವಿಯ ಘಟಿಕೋತ್ಸವದ ಯಾವುದೇ ಭಾಷಣಕಾರರಿಗೆ ಯಾವುದೇ ವರ್ಷ ಆಗದಿರಲಿ - ಡಾ. ರಾಜೇಂದ್ರ ಬುರಡಿಕಟ್ಟಿ

No comments:

Post a Comment