Friday, September 15, 2017

ಕುವೆಂಪು - ಲಂಕಿಣಿ - ಗೌರಿ

ಕುವೆಂಪು - ಲಂಕಿಣಿ - ಗೌರಿ

ಒಂದು ನಾಡಿನ-ದೇಶದ ಕಲೆ, ಸಾಹಿತ್ಯ ಸಂಸ್ಕೃತಿಗಳನ್ನು ಆ ದೇಶದ ಮಕ್ಕಳಿಗೆ ಯುವಜನತೆಗೆ ಸರಿಯಾದ ರೀತಿಯಲ್ಲಿ ಪರಿಚಯ ಮಾಡಿಕೊಡದೆ ಅವರ ತಲೆಗೆ ಮತಧರ್ಮಗಳ ಲದ್ಧಿಯನ್ನು ತುಂಬಿದರೆ ಏನಾಗುತ್ತದೆ ಎಂಬುದಕ್ಕೆ ಈ ದೇಶದ ವರ್ತಮಾನ ಮತ್ತು ಭವಿಷ್ಯವನ್ನು ಹೆಗಲಮೇಲೆ ಹೊತ್ತುಕೊಂಡಿರುವ ಯುವ ಸಮುದಾಯದ ಒಂದು ಭಾಗ ಗೌರಿ ಲಂಕೇಶ್ ಅವರ ಹತ್ಯೆಯ ಸಂದರ್ಭವನ್ನು ಸಂಭ್ರಮಾಚರಣೆಯನ್ನಾಗಿ ಸ್ವೀಕರಿಸುವಂತಹ ವಿಕೃತ ಮನಸ್ಥಿತಿಗೆ ಇಳಿದ ಘಟನೆ ಸೂಕ್ಷ್ಮವಾಗಿ ಸೂಚಿಸುತ್ತದೆ.

ಈ ಯುವಕರಲ್ಲಿ ಕೆಲವರು ಗೌರಿಯವರನ್ನು ಟೀಕಿಸುವ ಭರಾಟೆಯಲ್ಲಿ ಅವರನ್ನು `ಲಂಕಿಣಿ’ `ಲಂಕಿಣಿ’ ಎಂದು ಕರೆದು ಕುಣಿದು ಕುಪ್ಪಳಿಸಿದರು. (ಹೀಗೆ ಸಂಭ್ರಮಾಚರಣೆಯನ್ನು ತನ್ನ ಟ್ವಿಟರ್ ಖಾತೆಯ ಮೂಲಕ ಆಚರಿಸಿದ ಒಬ್ಬಾತನನ್ನು ಪೋಲೀಸರು ಬಂಧಿಸಿದ್ದೂ ಈಗಾಗಲೇ ನಡೆದಿದೆ. ಆ ದಾರಿ ಒಂದು ಕಡೆ ಇರಲಿ) ಗೌರಿಯನ್ನು `ಲಂಕಿಣಿ’ ಎಂದು ಕರೆಯುವ ಮೂಲಕ ಅವರನ್ನು ತೆಗಳುತ್ತಿದ್ದೇವೆಯೋ ಹೊಗಳುತ್ತಿದ್ದೇವೆಯೋ ಎಂಬ ಪರಿಜ್ಞಾನವೂ ಇಲ್ಲದ ಖಾಲಿಕೊಡಗಳಾಗಿ ಈ ಯುವಕರು ವರ್ತಿಸಿದ್ದು ಮಾತ್ರ ದುಃಖದಲ್ಲೂ ತಮಾಸೆಯಾಗಿ ಕಾಣುವ ವ್ಯಂಗವಾಗಿತ್ತು!

ಗೌರಿ ಲಂಕೇಶ್ ಯಾರು ಏನು ಎಂಬುದನ್ನು ಇಂದು ಇಡೀ ಜಗತ್ತು ಹೇಳುತ್ತಿದೆ. ಅವರ ಹತ್ಯೆಗೆ ಹೊರದೇಶಗಳಿಂದ ಬಂದ ಇಷ್ಟೊಂದು ದೊಡ್ಡ ಮಟ್ಟದ ಪ್ರತಿಭಟನಾ ಪ್ರತಿಕ್ರಿಯೆ ನನಗೆ ಗೊತ್ತಿದ್ದಂತೆ ಇತ್ತೀಚಿನ ದಿನಗಳಲ್ಲಿ ಬೇರಾವ ಕನ್ನಡಿಗರಿಗೂ ಬಂದಂತಿಲ್ಲ. ಅವರ ಹತ್ಯೆಯನ್ನು ಖಂಡಿಸಿ ವಿಶ್ವಸಂಸ್ಥೆ ಖಂಡನಾ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ, ಪ್ರಪಂಚದ ಬೇರೆಬೇರೆ ರಾಷ್ಟ್ರಗಳ ವಿವಿಧ ಸಂಘಟನೆಗಳು ಪ್ರತಿಭಟನೆಯನ್ನು ಮಾಡುವ ಮೂಲಕ ಇದು ಜಾಗತಿಕ ಮಟ್ಟದ ಸುದ್ಧಿಯಾಯಿತು! ಆ ಮೂಲಕ ಭಾರತ ‘ಸಹಿಷ್ಣುತೆಯ ದೇಶ’ ಮತ್ತು ಅದರ ಭಾಗವಾದ ಕರ್ನಾಟಕ `ಸರ್ವಜನಾಂಗದ ಶಾಂತಿಯ ತೋಟ’ ಎಂಬಿತ್ಯಾದಿ ಭಾವನಾತ್ಮಕ ಹೇಳಿಕೆಗಳು ಮರುಪರಿಶೀಲನೆಗೆ ಒಳಪಡುವಂತಾಯಿತು ಕೂಡ. ಈ ಘಟನೆಯಿಂದಾಗಿ ರಾಜ್ಯದ ಮತ್ತು ಆ ಮೂಲಕ ದೇಶದ ಮರ್ಯಾದೆಯನ್ನೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಕ್ಕಮಟ್ಟಿಗೆ ಹರಾಜು ಹಾಕಿದಂತಾಗಿದ್ದೂ ಸುಳ್ಳಲ್ಲ.

ಗೌರಿಯವರನ್ನು `ಅವಳು ಅಂಥವಳು’ `ಅವಳು ಇಂಥವಳು’ `ಅವಳು ನಕ್ಷಲೀಯಳು’ `ಅವಳು ಸೈನಿಕರನ್ನು ಅವಮಾನಿಸುತ್ತಿದ್ದಳು’ `ಅವಳು ರಾಷ್ಟ್ರದ್ರೋಹಿಯಾಗಿದ್ದಳು’ ಎಂಬಿತ್ಯಾದಿ ನಮ್ಮ ರಾಷ್ಟ್ರಭಕ್ತರ `ಭಜನೆ’ಗೆ ಜಾಗತಿಕ ಸಮುದಾಯ ಕಿವಿಗೊಡದೇ ಒಬ್ಬ ದಿಟ್ಟಪತ್ರಕರ್ತೆಗೆ, ವಿಚಾರವಾದಿಗೆ ಸಲ್ಲಿಸಬೇಕಾದ ಗೌರವವನ್ನು ಸಲ್ಲಿಸಿತು.

ಗೌರಿ ಲಂಕೇಶ್ ಅವರ ವ್ಯಕ್ತಿತ್ವದ ಘನತೆಯನ್ನು ತಿಳಿದುಕೊಳ್ಳುವ ಯೋಗ್ಯತೆ ಅಥವಾ ಇಚ್ಚೆ `ಸಂಗ್ತಿಸವಾಸ’ದಿಂದಾಗಿ ಇವರಿಗೆಲ್ಲ ಇಲ್ಲದಿರಬಹುದು. ಅದು ಸಹಜ ಕೂಡ. ಆದರೆ ಮಾತೆತ್ತಿದರೆ ತಮ್ಮನ್ನು ಈ ದೇಶದ ಧರ್ಮ ಮತ್ತು ಸಂಸ್ಕೃತಿಗಳ ಅಧಿಕೃತ ವಾರಸುದಾರರು ಎಂದು ಬಿಂಬಿಸಿಕೊಳ್ಳುವ ಇವರ `ದೇಶಪ್ರೇಮಿ’ ಗುರುಗಳು ಇವರಿಗೆ ಕೊನೆಯ ಪಕ್ಷ, ತಾವು ಈ ದೇಶದ ಸಂಸ್ಕೃತಿಯ ಪ್ರತೀಕಗಳೆಂದು ಸಾರಲಾಗುತ್ತಿರುವ ರಾಮಾಯಣ, ಮಹಾಭಾರತ ಅವುಗಳ ಅಂಗಗಳಾದ ರಾಮ, ಸೀತೆ, ಅಯೋಧ್ಯೆ, ರಾವಣ, ಲಂಕೆ, ಲಂಕಿಣಿ, ಪಾಂಡವರು, ಕೌರವರು ಇಂತಹ ಸಂಗತಿಗಳಲ್ಲಿಯಾದರೂ ಒಂದು ಮಟ್ಟದ ಪಾಠವನ್ನೂ ಹೇಳಿಕೊಡದಿದ್ದರೆ ಹೇಗೆ?

ಇಂತಹ ದಾರಿತಪ್ಪಿಸುವ ಗುರುಗಳ ಸಹವಾಸ ಬಿಟ್ಟು ದಾರಿತೋರಿಸುವ ಗುರುಗಳಾದ ಸಾಹಿತಿ-ಸಂಸ್ಕೃತಿ ಚಿಂತಕರ ಕಡೆ ಬಂದು ನಿಮ್ಮ ವ್ಯಕ್ತಿತ್ವವನ್ನು ಪೂರ್ಣಪ್ರಮಾಣದಲ್ಲಿ ಬೆಳಸಿಕೊಳ್ಳಿ ಎಂದು ಈ ದಾರಿಬಿಡುತ್ತಿರುವ ಯುವಜನತೆಗೆ ಪ್ರೀತಿಪೂರ್ವಕ ವಿನಂತಿ ಮಾಡಿಕೊಳ್ಳುತ್ತಾ ಲಂಕಿಣಿ ಯಾರು ಎಂಬುದನ್ನು ನಮ್ಮ ಕನ್ನಡ ಸಂಸ್ಕೃತಿ ಕಂಡ ಬಗೆಯ ಒಂದು ಉದಾಹರಣೆಯನ್ನು ಕೊಡುತ್ತೇನೆ ಗಮನಿಸಿ:

ಕನ್ನಡದ ಮಹಾಕವಿ ಕುವೆಂಪು ಅವರು ತಮ್ಮ `ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಕೊಡುವ ಲಂಕಿಣಿಯ ಚಿತ್ರಣವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಕಾಡಿನ ಮಧ್ಯೆ ಹೆಂಡತಿಯನ್ನು ಕಳೆದುಕೊಂಡ ರಾಮ ಅಕ್ಷರಶಃ ಅಲೆಮಾರಿ ಗಾಯಕನಾಗಿಬಿಡುತ್ತಾನೆ. ದೇವರ ಅವತಾರ ಎಂದು ನಾವೆಲ್ಲ ತಿಳಿದುಕೊಂಡಿರುವ ಈ ರಾಮ ಬುದ್ಧಿಸ್ಥಿಮಿತ ಕಳೆದುಕೊಂಡ ಸಾಮಾನ್ಯ ಮನುಷ್ಯನಂತೆ (ಮರಗಿಡಗಳನ್ನೆಲ್ಲ ನನ್ನ ಹೆಂಡತಿಯನ್ನು ಕಂಡಿರಾ ಕಂಡಿರಾ ಹೇಳಿರಿ ಹೇಳಿರಿ ಎಂದು ಕೇಳುತ್ತಾ) ಅಲೆದಾಡುವ ಸಂದರ್ಭ ನಿರ್ಮಾಣವಾಗಿ ಈ ದೇವಮಾನವ ಕಳೆದುಹೋದ ತನ್ನ ಸ್ವಂತ ಹೆಂಡತಿಯನ್ನೂ ಸ್ವಶಕ್ತಿಯಿಂದ ಹುಡುಕಿಕೊಳ್ಳಲಾರದ ಅಸಹಾಯಕ ಸ್ಥಿತಿಗೆ ತಲುಪಿಬಿಡುತ್ತಾನೆ!

ಕೊನೆಗೆ ಮನುಷ್ಯರಿಗಿಂತ ಅಂತಸ್ತಿನಲ್ಲಿ ಒಂದು ಹೆಜ್ಜೆ ಕೆಳಗೆ ಎಂದು ಗುರುತಿಸಲ್ಪಟ್ಟಿದ್ದ ಸುಗ್ರೀವನ ಸಹಾಯವನ್ನು ಅವನು ಪಡೆಯುವಂತಾಗಿಬಿಡುತ್ತದೆ! ಕಂಗಾಲಾಗಿ ಅಂಗಲಾಚುವ ಸ್ಥಿತಿಯಲ್ಲಿದ್ದ ರಾಮಲಕ್ಷ್ಮಣರಿಗೆ ಈ ಸುಗ್ರೀವಸಖ್ಯದಿಂದಾಗಿಯೇ ಸೀತೆಯನ್ನು ಹುಡುಕಲು ಯೋಜನೆ ರೂಪಿಸಲು ಸಾಧ್ಯವಾಗುತ್ತದೆ. ಈ ಯೋಜನೆಯ ಪ್ರಕಾರ ಲಂಕೆಗೆ ಹೋದ ಹನುಮಂತನಿಗೆ ಲಂಕೆಯ ಪ್ರವೇಶದ್ವಾರದಲ್ಲಿ ಮೊದಲಿಗೆ ಸಿಗುವವಳೇ ಈ ಲಂಕಿಣಿ. ಅವಳು ತನ್ನನ್ನು ‘ದಶಶಿರ ಕಲಕಲಕ್ಷ್ಮಿ, ಲಂಕಾದೇವಿ, ಲಂಕಿಣಿಯೆನಾಂ’ ಎಂದು ಹನುಮಂತನಿಗೆ ಪರಿಚಯಿಸಿಕೊಳ್ಳುತ್ತಾಳೆ. ಅವಳು ಇಡೀ ಲಂಕಾ ಸಾಮ್ರಾಜ್ಯವನ್ನು ರಕ್ಷಿಸುವ ಲಂಕೆಯ ಅಧಿದೇವತೆ! ವೈರಿಪಾಳೆಯದಿಂದ ಬಂದ ಹನುಮಂತನನ್ನು ಆರಂಭದಲ್ಲಿ ಒಳಗೆ ಬಿಡಲು ಒಪ್ಪದ ಇವಳು ನಂತರ ಹನುಮಂತನ ಜೊತೆ ದೀರ್ಘಚರ್ಚೆಮಾಡಿ ಸಾವಧಾನದಿಂದ ಅವನ ಮಾತುಗಳನ್ನು ಆಲಿಸಿ ಅವನು ಬಂದ ಸದುದ್ದೇಶವನ್ನು ತಿಳಿದುಕೊಳ್ಳುತ್ತಾಳೆ.

ಕಾಡಿನಿಂದಲೇ ಬಂದಿದ್ದ ಸ್ವತಃ ಕಾಡುಮನುಷ್ಯನೇ ಆಗಿದ್ದ (ನಮ್ಮಲ್ಲಿ `ಹಳ್ಳಿಗಮಾರ’ ಅನ್ನುವ ನಿಂದನಾಪದ ಇದೆಯಲ್ಲ! ) ಹನುಮಂತ ಆಧುನಿಕತೆಯ ಅವತಾರವಾಗಿರುವ ಭವ್ಯನಗರವಾದ ಲಂಕೆಯ ವೈಭವವನ್ನು ಕಂಡು ಕೀಳರಿಮೆಯಿಂದ ಕುಗ್ಗಿಹೋಗುತ್ತಾನೆ. ಹಳ್ಳಿಯಿಂದ ಹೊಸದಾಗಿ ನಗರಕ್ಕೆ ಹೋದ ವ್ಯಕ್ತಿಯೊಬ್ಬ ಅಲ್ಲಿನ ನಯನಾಜೂಕುಗಳಿಗೆ ಹೊಂದಿಕೊಳ್ಳಲಾಗದೆ ಅನುಭವಿಸುವ ಹಿಂಸೆ ಕೀಳರಿಮೆಗಳನ್ನೆಲ್ಲ ಈ ಹನುಮಂತ ಅನುಭವಿಸುತ್ತಾನೆ.

ಆದರೆ ಬಹುಚಾಣಾಕ್ಷಮತಿಯಾದ ಲಂಕಿಣಿ ಅವನ `ಹಳ್ಳಿತನ’ದಲ್ಲಿರುವ `ಒಳ್ಳೆಯತನ’ವನ್ನು ಸೂಕ್ಷ್ಮವಾಗಿ ಗುರುತಿಸುತ್ತಾಳೆ. ಒಂದು ಹಂತದಲ್ಲಿ ಹನುಮಂತನೇ ಅವಳಿಗೆ, `ಮನ್ನಿಸೆನ್ನೊರಟುತನಮಂ’ ಎಂದು ಕ್ಷಮೆ ಕೇಳಿ ದೊಡ್ಡವನಾಗುತ್ತಾನೆ. ಆದರೆ ಒಳ್ಳೆಯತನ ತೋರಿಸುವಲ್ಲಿ ಅವನಿಗೂ ಒಂದು ಹೆಜ್ಜೆ ಮುಂದೆ ಹೋಗುವ ಈ ಲಂಕಿಣಿ, `ಸೋಲೊಪ್ಪಿದೆನ್! ನಿನಗೆ ವಶಳಾದೆನ್’ ಎಂದು ಹೇಳುವ ಮೂಲಕ ಅವನಿಗಿಂತಲೂ ದೊಡ್ಡವಳಾಗಿಬಿಡುತ್ತಾಳೆ! ಹನುಮಂತನ ಹೇಳಿಕೆ ಮತ್ತು ರಾವಣನ ಕಾರ್ಯ ಎರಡನ್ನೂ ಕೂಲಂಕಷವಾಗಿ ವಿಚಾರಿಸಿನೋಡಿ ಕೊನೆಗೆ ಈ ಹನುಮಂತನನ್ನು ಲಂಕೆಯ ಒಳಗೆ ಹೋಗಲು ಬಿಟ್ಟುಬಿಡುತ್ತಾಳೆ!!

ಲಂಕೆಯನ್ನು ಕಾಯಲು ಇದ್ದ ಲಂಕಿಣಿ ಹೀಗೆ ವೈರಿ ಪಾಳೆಯದಿಂದ ಬಂದ ಹನುಮಂತನನ್ನು ಲಂಕೆಯ ಒಳಗೆ ಬಿಟ್ಟದ್ದು ಅವಳ ಕರ್ತವ್ಯಲೋಪ ಆದಂತಾಗಲಿಲ್ಲವೇ ಎಂದು ಅವಳ ನಿರ್ಧಾರದಿಂದ ನಮಗೆ ಅನ್ನಿಸಬಹುದು. ಅವಳಿಗೂ ಈ ಪ್ರಶ್ನೆ ಆರಂಭದಲ್ಲಿ ಕಾಡುತ್ತದೆ. ಆಗ ಅವಳ ಮುಂದೆ ಎರಡು ಆಯ್ಕೆಗಳಿದ್ದವು. ಒಂದು: ಹನುಮಂತನಿಗೆ ಲಂಕಾಪ್ರವೇಶಕ್ಕೆ ಅನುಮತಿ ಕೊಡುವುದು. ಇನ್ನೊಂದು ಅವನಿಗೆ ಪ್ರವೇಶ ನಿರಾಕರಿಸುವುದು: ಮೊದಲ ಆಯ್ಕೆಯನ್ನು ಅವಳು ಮಾಡಿಕೊಂಡು ಅವನನ್ನು ಒಳಗೆ ಬಿಟ್ಟರೆ ನ್ಯಾಯಕ್ಕೆ ಬೆಂಬಲಕೊಟ್ಟಂತಾಗುತ್ತದೆ ನಿಜ; ಆದರೆ ಅದು ತನ್ನೊಡೆಯನಾದ ಲಂಕೇಶ ರಾವಣನಿಗೆ ದ್ರೋಹಬಗೆದಂತಾಗುತ್ತದೆ! ಎರಡನೆಯದನ್ನು ಆಯ್ದುಕೊಂಡು ಅವನಿಗೆ ಲಂಕಾಪ್ರವೇಶವನ್ನು ನಿರಾಕರಿಸಿದರೆ ತನ್ನೊಡೆಯ ರಾವಣನಿಗೆ `ಸ್ವಾಮಿನಿಷ್ಠೆ’ ತೋರಿಸಿದಂತಾಗುತ್ತದೆ ನಿಜ; ಆದರೆ ಅದು ಅನ್ಯಾಯಕ್ಕೆ ಬೆಂಬಲವನ್ನು ಕೊಟ್ಟಂತಾಗುತ್ತದೆ. ಯಾವುದನ್ನು ಆಯ್ಕೆಮಾಡಿಕೊಳ್ಳಬೇಕು ಎಂಬ ಬಗ್ಗೆ ಅವಳು ತೀವ್ರ ಗೊಂದಲಕ್ಕೆ ಬೀಳುತ್ತಾಳೆ. `ನನ್ನವಳಿಯಲ್ ಅತ್ತಲುಮ್ ಇತ್ತಲುಮ್ ಕತ್ತರಿಪುದಿರ್ಬಾಯ ಖಡ್ಗದೋಲ್’ ಎನ್ನುವ ಅವಳು ಮಾತು ಎರಡು ಅಲಗಿನ ಕತ್ತಿಗೆ ಸಿಕ್ಕು ಒದ್ದಾಡುವ ಅವಳ ಮನಸ್ಸುನ್ನು ಬಿಂಬಿಸುತ್ತದೆ.

ಹೀಗಿದ್ದೂ ಅವಳು ಅಂತಿಮವಾಗಿ ಆಯ್ಕೆಮಾಡಿಕೊಳ್ಳುವುದು ಹನುಮಂತನನ್ನು ಒಳಗೆ ಬಿಡುವ ಮೊದಲನೇ ಆಯ್ಕೆಯನ್ನೇ! ಇಲ್ಲಿ ಸಮಸ್ಯೆಯನ್ನು ಮೇಲ್ನೋಟದಲ್ಲಿ ಅಲ್ಲದೆ ಅಮೂಲಾಗ್ರವಾಗಿ ಗ್ರಹಿಸಿ ಅದರ ನಿವಾರಣೆ ಹೇಗೆ ಮಾಡಬಹುದೆಂದು ತೀರ್ಮಾನಿಸಿಯೇ ವೈರಿಪಾಳೆಯದ ಹನುಮಂತನನ್ನು ಒಳಗೆ ಬಿಡುವ ನಿರ್ಧಾರಕ್ಕೆ ಅವಳು ಬರುತ್ತಾಳೆ. ಆ ಮೂಲಕ ಬಹಳ ಬುದ್ಧಿವಂತ ನಿರ್ಧಾರ ತೆಗೆದುಕೊಳ್ಳುವ ಚಾಣಾಕ್ಷೆಯಾಗಿ ನಮಗೆ ತೋರುತ್ತಾಳೆ. ಅವಳು ಯಾವ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಳು ಎಂಬುದನ್ನು ಅವಳು ಹನುಮಂತನಿಗೆ ಹೇಳುವ ಈ ಮಾತು ಸ್ಪಷ್ಟಪಡಿಸುತ್ತದೆ: ‘ಸೀತಾನ್ವೇಷಣಂ ನಿನಗೆ; ನನಗದಂ ಕೂಡಿ, ಲಂಕಾಕ್ಷೇಮ ಚಿಂತನಂ’

ಗಮನಿಸಿ: ಹನುಮಂತ `ನನಗೆ ಸೀತೆಯನ್ನು ಹುಡುಕುವುದು ಚಿಂತೆ’ ಎಂದಾಗ ಸಾಮಾನ್ಯ ಹೆಣ್ಣಾಗಿದ್ದರೆ ಅವಳು `ನನಗೆ ಲಂಕೆಯನ್ನು ಕಾಯುವುದು ಚಿಂತೆ’ ಎಂದು ಹೇಳಿಬಿಡುತ್ತಿದ್ದಳು. ಅವಳು ಹಾಗೆ ಹೇಳದೆ `ಸೀತೆಯ ಕ್ಷೇಮ ಮತ್ತು ಲಂಕೆಯ ಕ್ಷೇಮ ಎರಡನ್ನೂ ಮಾಡುವುದು ಹೇಗೆ ಎಂಬುದು ನನ್ನ ಚಿಂತನೆ’ ಎಂಬ ಅದ್ಭುತವಾದ ಮಾತನ್ನು ಹೇಳುತ್ತಾಳೆ. ಅವಳ ನಿರ್ಧಾರದಿಂದ ಆಗಬಹುದಾದ ಬಹುದೊಡ್ಡ ಅನಾಹುತವೊಂದು ತಪ್ಪುತ್ತದೆ.

`ಮಾತುಕತೆಯ ಮೂಲಕ ಅಂದರೆ ಚರ್ಚೆಯ ಮೂಲಕ ಎಂತಹ ಸಮಸ್ಯೆಯನ್ನಾದರೂ ನಾವು ಬಗೆಹರಿಸಿಕೊಳ್ಳಬಹುದು’ `ವೈರಿಗಳಲ್ಲಿಯೂ ಇರುವ ಒಳ್ಳೆಯತನವನ್ನು ನಾವು ಗೌರವಿಸಬೇಕು’ ಎನ್ನುವ ಎರಡು ಮುಖ್ಯ ತತ್ವಗಳನ್ನು ಪ್ರತಿಪಾದಿಸುವ ಲಂಕಿಣಿ ಇವುಗಳ ಜೊತೆಗೆ ಇವೆರಡಕ್ಕೂ ಮುಖ್ಯವಾದ ಇನ್ನೊಂದು ಮಹತ್ವದ ತತ್ವವನ್ನು ಪ್ರತಿಪಾದಿಸುತ್ತಾಳೆ. ಅದೆಂದರೆ `ನಾವು ಕೇವಲ ನಮ್ಮವರ ಯೋಗಕ್ಷೇಮವನ್ನಲ್ಲ ನಮ್ಮ ವೈರಿಗಳ ಯೋಗಕ್ಷೇಮವನ್ನೂ ಬಯಸುವ ಮೂಲಕ ಇಡೀ ನಾಡಿನ ಯೋಗಕ್ಷೇಮವನ್ನು ಚಿಂತಿಸಿ ಕಾರ್ಯಪ್ರವೃತ್ತರಾಗಬೇಕು’

ವೈರಿಗಳ ಯೋಗಕ್ಷೇಮವನ್ನೂ, ಇಡೀ ನಾಡಿನ ಯೋಗಕ್ಷೇಮವನ್ನೂ ಬಯಸಿದ ಕುಶಲಮತಿ ಮತ್ತು ವಿಶಾಲಮತಿ ಎರಡೂ ಆದ `ಲಂಕಿಣಿ’ಗೆ ನಮ್ಮ ಗೌರಿಯನ್ನು ಹೋಲಿಸಿ ಟೀಕಿಸುತ್ತಿದ್ದಾರೆ ನಮ್ಮ ಈ ಯುವಕರು! ಬಹುಶಃ ಗೌರಿ ಅವರಂತಹ ವಿಶಿಷ್ಟವೂ ಸಂಕೀರ್ಣವೂ ಆದ ವ್ಯಕ್ತಿತ್ವಗಳಿಗೆ ಮಾತ್ರ ಹೀಗೆ `ಬುದ್ಧಿಜೀವಿ’ಗಳಿಂದ ಪ್ರಜ್ಞಾಪೂರ್ವಕವಾಗಿ ಮತ್ತು `ಬುದ್ಧಿಗೇಡಿ’ಗಳಿಂದ ಅಪ್ರಜ್ಞಾಪೂರ್ವಕವಾಗಿ ಒಟ್ಟಿನಲ್ಲಿ ಎರಡೂ ವರ್ಗಗಳಿಂದಲೂ ಗೌರವಪಡೆಯಲು ಸಾಧ್ಯವೇನೋ!!

ಡಾ, ರಾಜೇಂದ್ರ ಬುರಡಿಕಟ್ಟಿ
15-09- 2017

No comments:

Post a Comment