Friday, September 22, 2017

ಆಚಾರವೇ ಅನಾಚಾರವಾದಾಗ - ಪಿ. ಲಂಕೇಶ್

ಆಚಾರವೇ ಅನಾಚಾರವಾದಾಗ - ಪಿ. ಲಂಕೇಶ್
ಮೊನ್ನೆ ನಮ್ಮ ಬಿ.ವಿ. ವೀರಭದ್ರಪ್ಪನವರ `ವೇದಾಂತ ರೆಜಿಮೆಂಟ್’ ಪುಸ್ತಕ ಬಿಡುಗಡೆ ಮಾಡಲು ಶೂದ್ರ ಸಭೆ ಏರ್ಪಡಿಸಿದ್ದ ಸಂದರ್ಭ. ಶರ್ಮರ ಭಾಷಣ, ಕಿ.ರಂ. ನಾಗರಾಜನ ವಿಮರ್ಶೆ, ಮತ್ತು ವೀರಭದ್ರಪ್ಪನವರ ಒಂದೆರಡು ಮಾತುಗಳು. ನಮ್ಮ ಜನ ಇತ್ತೀಚೆಗೆ ಏನನ್ನು ಹೇಳಲೂ ಹಿಂಜರಿಯುತ್ತಿದ್ದಾರೆ; ಅವರು ಹಿಂಜರಿಯಲು ಕಾರಣಗಳಿವೆ. ಇಲ್ಲಿಯ ಕಂದಾಚಾರ, ಜಾತೀಯತೆ, ಮೂಢನಂಬಿಕೆಯ ವಿರುದ್ಧ ಸದಾ ಪ್ರತಿಭಟಿಸುವ ಒಂದು ಗುಂಪಿತ್ತು. ಅದರಲ್ಲಿ ದಲಿತರು, ಬಂಡಾಯದವರು, ಸಮಾಜವಾದಿಗಳು, ಕಮ್ಯುನಿಷ್ಟರು ಇದ್ದರು. ಇವರು ತುಂಬಾ ಉಗ್ರವಾಗಿ ಪ್ರತಿಭಟಿಸುತ್ತ ಇದ್ದದ್ದು ಸುಮಾರು ಮೂವತ್ತು ವರ್ಷಗಳ ಹಿಂದೆ; ಇಲ್ಲಿ ಸಮಾಜವಾದಿ ಸರ್ಕಾರ ಬರಲು ಸಾಧ್ಯವಿಲ್ಲ ಎಂಬುದು ಅವರಿಗೆ ಗ್ಯಾರಂಟಿಯಾಗಿದ್ದಾಗ, ಈ ಪ್ರತಿಭಟನಾಕಾರರು ಪೂಜ್ಯರೂ ಪುನೀತರೂ ಆಗುವ ಸಂಭವವೇ ಇಲ್ಲ ಎಂಬುದು ನಿಶ್ಚಿತವಾಗಿದ್ದಾಗ…


ಆಮೇಲೇನಾಯಿತು ಅಂದರೆ, ಇವರಲ್ಲಿ ಅನೇಕರು ಸಾಂಪ್ರದಾಯಿಕ ಮದುವೆ ಮಾಡಿಕೊಂಡರು, ಕೆಲವರು ಪ್ರೇಮವಿವಾಹವಾಗಿ ವಿಚ್ಛೇದನಗೊಂಡರು. ಗುಟ್ಟಾಗಿ ವರದಕ್ಷಿಣೆ ತೆಗೆದುಕೊಂಡರು, ಜಗದ್ಗುರುಗಳ ನೇತೃತ್ವದ ಕಾಲೇಜಿನಲ್ಲಿ ಕೆಲಸಕ್ಕಾಗಿ ಜಗದ್ಗುರು ಮತ್ತು ಮ್ಯಾನೇಜ್ಮೆಂಟಿನ ಕಾಲಿಗೆ ಎರಗಿದರು. ಜನತಾದಳ, ಜನತಾ ಸರ್ಕಾರದಲ್ಲಿ ಸಾಕಷ್ಟು ತಿಂದು ಕೆಟ್ಟರು. ಕಾಂಗೈಗಳೊಂದಿಗೆ ಹೊಂದಾಣಿಕೆ ನಡೆಸಿಕೊಂಡು ಕೃತಾರ್ಥರಾದರು. ಇವರೆಲ್ಲರ ಪ್ರತಿಭಟನೆ ಸ್ಫೂರ್ತಿ ಕಳೆದುಕೊಂಡು ಶಿವಪೂಜೆಯ ಗುಣ ಪಡೆಯತೊಡಗಿತು. ಇದೊಂದು ವ್ಯರ್ಥವಾಗಿ ಹಾರಾಡುವವರ ಗುಂಪಾಗಿ ಜನ ಪರಿಗಣಿಸಿದರು.

ಆದ್ದರಿಂದಲೇ ವೀರಭದ್ರಪ್ಪ ತಮ್ಮೆಲ್ಲ ಕಷ್ಟಗಳ ನಡುವೆ, ಒತ್ತಡಗಳ ನಡುವೆ ನಮ್ಮ ತರುಣ ಜನಾಂಗಕ್ಕೆ ಉಪಯುಕ್ತವಾಗಬಲ್ಲ ಲೇಖನಗಳನ್ನು ಬರೆದಾಗ ಅವನ್ನೆಲ್ಲ ಸೇರಿಸಿ ಪುಸ್ತಕ ಮಾಡಿದೆವು. ಇವತ್ತು ಹೊಸ ಜನಾಂಗ, ಹೊಸ ಸ್ಫೂರ್ತಿಯಿಂದ, ಕಟ್ಟಕಡೆಯವರೆಗೆ ಇರಬಲ್ಲ ಕನಿಷ್ಠ ಕಾಳಜಿಯಿಂದ, ಬದುಕುವ ರೀತಿಯ ಅಂಗವಾಗಿಯೇ ಪ್ರತಿಭಟಿಸುವುದನ್ನು, ವೈಚಾರಿಕ ಪ್ರಶ್ನೆ ಕೇಳುವುದನ್ನು ಕಲಿಯಬೇಕಾಗಿದೆ. ಎಂದಿಗಿಂತ ಇವತ್ತು ವೈಚಾರಿಕತೆಯ ಅವಶ್ಯಕತೆ ಇದೆ. ವೈಚಾರಿಕತೆ ಎಂದರೆ ಕೇವಲ ತರ್ಕವಲ್ಲ, ಒಣವಾದವಲ್ಲ. ವೈಚಾರಿಕತೆ ಎಂದರೆ ನಮ್ಮ ಪಂಚೇಂದ್ರಿಯ ಮತ್ತು ಅಂತರಾಳಕ್ಕೆ ಗೋಚರಿಸುವ ಸತ್ಯಗಳ ಬಗ್ಗೆ ನಿಷ್ಠರಾಗಿರುವುದು, ನಮ್ಮಂತೆಯೇ ಅನುಭವಿಸುವ ಎಲ್ಲರೊಂದಿಗೆ ಆ ಸತ್ಯಗಳನ್ನು ಹಂಚಿಕೊಳ್ಳುವುದು. ಕಣ್ಣೆದುರು ಕಾಣುವ ಅನ್ಯಾಯ, ಅನಾಚಾರ, ಮೌಢ್ಯ, ಸ್ವಾರ್ಥದ ವಿರುದ್ಧ ಸೊಲ್ಲೆತ್ತುವ ದಿಟ್ಟತನ, ಸ್ಪಷ್ಟತೆ ಬೆಳಸಿಕೊಳ್ಳುವುದು.



ಮಾರ್ಕ್ಸ್ ತೀರಿಕೊಂಡಿರುವುದಾಗಿ ಲೋಹಿಯಾ, ಜೆ.ಪಿ, ಗಾಂಧಿಗಳೆಲ್ಲ ಕಣ್ಮರೆಯಾಗಿರುವುದಾಗಿ ಬೀಗುತ್ತಿರುವ ಕೊಳಕರಾದ ಹುಂಬರು ಈ ಪ್ರತಿಭಟನೆಯ ಅರ್ಥ ತಿಳಿದುಕೊಳ್ಳದಿದ್ದರೆ ಮಣ್ಣುಮುಕ್ಕುತ್ತಾರೆ. ಭಾರತದ ಬಂಡವಾಳಶಾಹಿ ಮತ್ತು ಸಮಾಜವಾದ, ಸಮತಾವಾದಗಳೆಲ್ಲ ಕ್ಲೀಷೆಗಳಾಗಿವೆಯೇ ಹೊರತು ಸತ್ತುಹೋಗಿಲ್ಲ. ಇವಕ್ಕೆಲ್ಲ ಹೊಸ ಅರ್ಥ ಮತ್ತು ಚಾಲನೆ ಬರಬೇಕಾದರೆ ಚಿಂತನೆ ಮತ್ತು ಕ್ರಿಯೆಗೆ ಜೀವ ಬರಬೇಕಾಗಿದೆ.
*****

ಇದು ನಿನ್ನೆ - 21-09-2017- ನಮ್ಮ ಭೌತಿಕ ಜಗತ್ತಿನಿಂದ ಕಳಚಿಕೊಂಡ ನಾಡಿನ ವೈಚಾರಿಕ ಸಾಹಿತ್ಯದ ಪ್ರಮುಖ ಕೊಂಡಿ, ಕನ್ನಡದ ಆಚೆಗೆ ಹೋಗಿ ತೆಲುಗು ಇಂಗ್ಲಿಷ್ ಭಾಷೆಗಳಿಗೂ ಅನುವಾದ ಗೊಂಡಿದ್ದ ಬಹುಮುಖ್ಯ ವೈಚಾರಿಕ ಕೃತಿಗಳ ಲೇಖಕ ಪ್ರೊ.ಬಿ.ವಿ.ವೀರಭದ್ರಪ್ಪನವರ `ವೇದಾಂತ ರೆಜಿಮೆಂಟ್’ ಇಪ್ಪತ್ತೈದು ವರ್ಷಗಳ ಹಿಂದೆ (1991-92) ಬಿಡುಗಡೆಯಾದ ಸಂದರ್ಭದಲ್ಲಿ ಅದನ್ನು ನೆಪಮಾಡಿಕೊಂಡು ಆಗಿನ ಬಹುಮುಖ್ಯ ಲೇಖಕ ಪಿ.ಲಂಕೇಶ್ ತಮ್ಮ `ಲಂಕೇಶ್ ಪತ್ರಿಕೆ’ಯಲ್ಲಿ ಆ ಕಾಲದ ವೈಚಾರಿಕ ಸಾಹಿತ್ಯ ಕ್ಷೇತ್ರದ ಸೂಕ್ಷ್ಮ ಒಳನೋಟವನ್ನು ಕೊಡುತ್ತಾ ಬರೆದ ಲೇಖನ - ಎತ್ತಿಕೊಟ್ಟದ್ದು: ರಾಜೇಂದ್ರ ಬುರಡಿಕಟ್ಟಿ)

No comments:

Post a Comment