Friday, September 29, 2017

ಎಲ್.ಇ.ಡಿ. ಸೀರೆ ಮತ್ತು ಡುಮ್ಮಿ ಟಿ.ವಿ.

ಇದು ಎಲ್.ಇ.ಡಿ. ಸೀರೆಯಂತೆ! ಏಳು ಸೆಕೆಂಡಿನ ಈ ವಿಡಿಯೋವನ್ನು ಆಮೇಲೆ ಗಮನಿಸಿ. ಹೊಸದಾಗಿ ಮದುವೆಯಾದಾಗ ಇಪ್ಪತ್ತು ವರ್ಷಗಳ ಹಿಂದೆ ನಾನು ನನ್ನ ಹೆಂಡತಿ ಹೋಗಿ ತಂದಿದ್ದ ಒನಿಡಾ ಡುಮ್ಮಿ ಟಿವಿನೇ ಇನ್ನೂ ನಾವು ಎಲ್.ಇ.ಡಿ.ಗೆ ಬದಲಿ ಮಾಡಿಕೊಂಡಿಲ್ಲ. ಅಷ್ಟರೊಳಗೇ ಸೀರೆಯೂ ಎಲ್.ಇ.ಡಿ. ಬಂತಾ?

ಎಲ್ಲ ಹೆಂಗಸರೇ (ಸಹೋದರಿಯರೇ, ಗೆಳತಿಯರೇ, ಮಾತೆಯರೇ ಹಿಂಗೆಲ್ಲ ಏನೇ ಪದ ಬಳಸಿದರೂ ಒಂದಿಷ್ಟು ಜನ ಆ ಪದದ ವ್ಯಾಪ್ತಿಯಿಂದ ಹೊರಗೆ ಉಳಿಯುವುದರಿಂದ ಹೀಗನ್ನುತ್ತಿರುವೆ ಅಷ್ಟೇ, ಒರಟೆನಿಸಿದರೆ ಸಹಿಸಿಕೊಂಡು ಕ್ಷಮಿಸಿ) ಹೇಗಿದ್ದರೂ `ನಿಮ್ಮ’ ಗಂಡಸರೆಲ್ಲ ಇವತ್ತು ವಿಜಯದಶಮಿ ಹಬ್ಬ ಅಂತ ಮನೆಯಲ್ಲಿಯೇ ಇರ್ತಾರೆ. “ಮೈಸೂರು ದಸರಾ ಎಷ್ಟೊಂದು ಸುಂದರಾ” ಎಂದು ಮಂಜುಳಾ ರಾಜಕುಮಾರನ ಜೊತೆಗೆ ಕುಣಿಯುವ ಹಾಡನ್ನು ಟಿವಿಯವರು ತೋರಿಸುವುದನ್ನು ನೋಡ್ತಾ ಒಂದ್ತರಾ ಹ್ಯಾಪಿ ಮೂಡಿನಲ್ಲಿ ಇರ್ತಾರೆ. ಅವರು ಈ ಹಬ್ಬಕ್ಕೆ ಹೊಸ ಸೀರೆ ಕೊಡಿಸಿದರೇನು ಬಿಟ್ಟರೇನು ನೀವು ಮಾತ್ರ ಪೂಜೆ ಪುನಸ್ಕಾರ ಮಾಡುವುದರಲ್ಲಿಯಾಗಲಿ ಸಿಹಿ ಅಡುಗೆ ಮಾಡುವುದರಲ್ಲಾಗಲೀ ಏನೂ ಕಡಿಮೆ ಮಾಡದೇ ಏನೇನು ಮಾಡಬೇಕೋ ಅದೆಲ್ಲ ಮಾಡಿ ಅವರ ಮನಸ್ಸನ್ನು ಗೆದ್ದಿರ್ತಿರಾ.

ಈ ಸಮಯದಲ್ಲಿ ಗಂಡಸರಿಗೆ ನಿಮ್ಮ ಬಗ್ಗೆ ಒಂದು ಗುಡ್ ವಿಲ್ ಇದ್ದೇ ಇರ್ತದೆ. ಇದೇ ಒಳ್ಳೇ ಟೈಮು. ಗಂಡಸರು ಊಟಮಾಡುವಾಗ `ಸಾರು ತುಂಬಾ ಚೆನ್ನಾಗಿದೆ’ `ಪಾಯಸ ತುಂಬಾ ಟೇಸ್ಟಿದೆ’ ಎನ್ನುವ ಮಾತು ಅವರ ಬಾಯಿಂದ ಹೊರಬರುವ ಸಮಯ ನೋಡಿ, ಅವರು ತುತ್ತು ನೆತ್ತಿಗೆ ಹತ್ತದ ಹಾಗೆ ನೈಸಾಗಿ ಅವರ ಕಿವಿಗೆ ಈ ಸೀರೆ ಬಗ್ಗೆ ಒಂದು ಮಾತು ಹಾಕಿಡಿ. ತಗಳ್ಳುವುದೋ ಬಿಡೋದೋ ಆಮೇಲೆ ನೋಡಿದರಾಯಿತು.ಯಾವುದಕ್ಕೂ ದೀಪಾವಳಿ ಇನ್ನೂ ಒಂದು ತಿಂಗಳಿದೆಯಲ್ಲ! ಇಂತಹ ಹ್ಯಾಪಿ ಮೂಡಿನಲ್ಲಿರುವಾಗ ಈ ಸೀರೆಯನ್ನು ಕೊಡಿಸುವ ಬಗ್ಗೆ ಎಲ್ಲ ಗಂಡಸರೂ `ಭರವಸೆ’ ಕೊಟ್ಟೇಕೊಡ್ತಾರೆ. ಭರವಸೆ ಕೊಡದಿದ್ದರೆ ಕೊನೆಯ ಪಕ್ಷ `ಆಸ್ವಾಸನೆ’ಯನ್ನಾದರೂ ಕೊಡದಿದ್ದರೆ ಅವರ ಗಂಡಸುತನಕ್ಕೆ ಅವಮಾನವಾಗುವುದರಿಂದ ನಿಮ್ಮ ಪ್ರಯತ್ನ ಹುಸಿಹೋಗಲಿಕ್ಕಿಲ್ಲ!

ಮನೆಯಲ್ಲಿರುವ ಮಹಿಳೆಯರು ಸೀರೆಗಾಗಿ ಗಂಡಸರನ್ನು ಗೋಗರೆಯುವುದು ಭಾರತದಲ್ಲಿ ಸಾಮಾನ್ಯ ಬಿಡಿ. ಆದರೆ ಹೊರಗಡೆ ಹೋಗಿ ದುಡಿಯುವ ಬಹಳಷ್ಟು ಮಹಿಳೆಯವರು ಕೂಡ ತಮ್ಮ ದುಡಿಮೆಯ ಹಣದಲ್ಲಿಯೇ ಒಂದು ಹೊಸಸೀರೆಯನ್ನು ತೆಗೆದುಕೊಳ್ಳುವಾಗಲೂ ತಮ್ಮ ಗಂಡಂದಿರಿಗೆ `ಒಂದುಮಾತು ಹೇಳಿ ತಗೊಳ್ಳುವುದು’ ಅವರು ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯ! ಆ ಮೂಲಕ `ನಾನು ಈ ಮನೆಯ ಯಜಮಾನ ಅಲ್ಲ’ ಎಂಬ ಅಸುರಕ್ಷತೆಯ ಭಾವ ಗಂಡಸರಲ್ಲಿ ಮೂಡದಂತೆ ಅವರುನ್ನು ಕಾಪಾಡಿಕೊಂಡು ಅವರು ಬರುತ್ತಿದ್ದಾರೆ. ಅದು ಅವರ ದೊಡ್ಡಗುಣವೋ ಇರಬಹುದು ಅಸಹಾಯಕತೆಯೂ ಎಂಥದಾದರೂ ಇರ್ಲಿಬಿಡಿ. ಅದನ್ನ ಕಟ್ಟಿಕೊಂಡು ಆಗಬೇಕಾಗಿದ್ದಾದರೂ ಏನು? ಒಟ್ಟಿನಲ್ಲಿ “ಒಂದು ಗಂಡು ಒಂದು ಹೆಣ್ಣು ಹೇಗೋ ಸೇರಿ ಹೊಂದಿಕೊಂಡು…. ಬದುಕು ಹಗುರ ಎನ್ನುತಿರಲು ಪ್ರೇಮವೆನಲು ಹಾಸ್ಯವೇ’’ ಎಂಬ ಕವಿವಾಣಿಯಂತೆ ನೋಡೋಕೆ ಚೆನ್ನಾಗಿ ಕಾಣುವಂತೆ ಬದುಕುತ್ತಾರಲ್ಲ ಅಷ್ಟು ಸಾಕು.

ಗಂಡುಹೆಣ್ಣಿನ ಪ್ರೀತಿಗೂ ಇಂತಹ ಸೀರೆಗಳಿಗೂ ಎಂತೆಂಥದೋ ಸಂಬಂಧಗಳು ಇರುತ್ತವೆ. ಅವನ್ನೆಲ್ಲ ಹೇಳೋದು ಕಷ್ಟ. `ಪ್ರೀತಿ’ `ಪ್ರೇಮ’ ಇಂತಹ ಸಂಗತಿಗಳನ್ನೆಲ್ಲ ಸಾರ್ವಜನಿಕವಾಗಿ ಮಾತನಾಡಲು ನಮ್ಮ ಹಿಂದಿನ ತಲೆಮಾರಿನ ಜನ ಮುಜುಗರಪಡುತ್ತಿದ್ದರು. `ಮೈಸೂರು ಮಲ್ಲಿಗೆ’ ಕೃತಿಯ ಪ್ರೇಮಗೀತೆಗಳ ಮೂಲಕ ಕನ್ನಡ ಜನಮಾನಸದಲ್ಲಿ `ಪ್ರೇಮಕವಿ’ ಎಂದೇ ಹೆಸರಾದ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರು ತಮ್ಮ ಗೀತೆಗಳನ್ನು ಯಾರಾದರೂ `ಪ್ರೇಮಗೀತೆಗಳು’ ಎಂದದ್ದು ತಮ್ಮ ಕಿವಿಗೆ ಬಿದ್ದರೆ, `ಅವು ಪ್ರೇಮಗೀತೆಗಳಲ್ಲ ದಾಂಪತ್ಯಗೀತೆಗಳು’ ಎಂದು ತಿದ್ದಿ ಹೇಳುತ್ತಿದ್ದರಂತೆ! ಬಹುಶಃ ದಾಂಪತ್ಯದಲ್ಲಿರುವ `ಪತ್ಯ’ದ ಕಾರಣಕ್ಕೆ ಅವರು ಹಾಗೆ ತಿದ್ದುತ್ತಿರಬಹುದು. ಆ ಕಾಲದ ದಾಂಪತ್ಯದ್ದು ಈ ಕಥೆಯಾದರೆ ಇನ್ನು ಈ ಕಾಲದ ಇತ್ತೀಚಿನ ಜೋಡಿಗಳು, ಅಂದರೆ ಮದುವೆಯಾದ ಅಥವಾ ಆಗದೆಯೂ ಆದವರಂತೆ ಜೊತೆಯಾಗಿ ಬದುಕುತ್ತಿರುವ ಪ್ರೀತಿ ಪ್ರೇಮದ ಹುಡುಗ ಹುಡುಗಿಯರ ಜೋಡಿಗಳಿಗೆ ಈ ಸೀರೆ ಬೇಕಾಗಿಲ್ಲ. ಅವರು ಒಂದು ರೀತಿಯಲ್ಲಿ `ಜಿನ್ಪ್ ಪ್ಯಾಂಟ್ ಟೀ ಶರ್ಟ್ ಜೋಡಿ’ಗಳು. ಅವರಿಗೆ ಗಂಡಸರ ಬಟ್ಟೆ ಹೆಂಗಸರ ಬಟ್ಟೆ ಇವುಗಳ ನಡುವೆ ವ್ಯತ್ಯಾಸ ಏನೂ ಇರಬೇಕಾಗಿಲ್ಲ. ಎಲ್ಲಿಗಾದರು ಹೊರಟರೆ ಎರಡು ಜಿನ್ ಪ್ಯಾಂಟು ಎರಡು ಟೀ ಶರ್ಟ್ ಬ್ಯಾಗಿನಲ್ಲಿ ತುರುಕಿಕೊಂಡರೆ ಮುಗಿಯಿತು. ಇಬ್ಬರಿಗೂ ಆಗುತ್ತೆ. ಅಷ್ಟೇ ಅಲ್ಲ  ಕವಿ ಬೇಂದ್ರೆ ಅವರ `ಬಳಸಿಕೊಂಡೆವು ನಾವು ಅದನೆ ಅದಕು ಇದಕು ಎದಕು’ ಎನ್ನುವ ಸಾಲಿನಂತೆ ಹಗಲು ತಿರುಗಲಿಕ್ಕೆ ರಾತ್ರಿ ಮಲಗಲಿಕ್ಕೆ ಎಲ್ಲದಕ್ಕೂ ಆಗುತ್ತೆ. ಅವರಿಗೂ ಈ ಸೀರೆಗೂ ಸಂಬಂಧನೇ ಇಲ್ಲದ್ದರಿಂದ ಅವರ ಉಸಾಬರಿ ನಮಗೆ ಬೇಡ!

ಹೆಂಗಸರಿಗೆ ಸೀರೆ ಕೊಡಿಸುವ ವಿಚಾರದಲ್ಲಿ ಗಂಡಸರು ಹೆಂಗೆಂಗೋ ವರ್ತಿಸುತ್ತಾರೆ. ಕೆಲವು ಗಂಡಸರು ಹೆಂಗಸರಿಗಿಂತಲೂ ಹೆಚ್ಚಾಗಿ ಸೀರಿಯಸ್ಸಾಗಿ ಅಂಗಡಿಗಳಲ್ಲಿ ಅವರಿಗಿಂತಲೂ ಹೆಚ್ಚು ಸೀರೆ ಕಿತ್ತುಹಾಕಿಸಿ ಅವರಿಗಿಂತಲೂ ಹೆಚ್ಚಾಗಿ ಎತ್ತಿಕೊಳ್ಳೊದು ಮತ್ತೆ ವಾವಸ್ಸು ಕೊಡೋದು ಬದಲಿ ಮಾಡಿಕೊಳ್ಳೋದು ಮಾಡುವುದುಂಟು. ಆದರೆ ಇಂಥವರ ಸಂಖ್ಯೆ ಬಹಳ ಕಡಿಮೆ. ನಾನು ಕಂಡಂತೆ ನಮ್ಮ ಲಂಕೇಶ್ ಅವರಂಥ ಗಂಡಸರೇ ಹೆಚ್ಚು. ಲಂಕೇಶ್ ಹೆಸರು ಹೇಳಿದೆನಲ್ಲ, ಅವರ ಕಥೆ ಕೇಳಿ: ಲಂಕೇಶ್ ಸೀರೆ ಕೊಡಿಸಲೆಂದು ಅವರ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದರಂತೆ. ಹಾಗನ್ನುವುದಕ್ಕಿಂತ ಅವರ ಹೆಂಡತಿಯೇ ಅವರನ್ನು ಕರೆದುಕೊಂಡು ಹೋಗುತ್ತಿದ್ದರು ಎನ್ನುವುದು ಹೆಚ್ಚು ಸರಿಯಾಗುವ ಮಾತು ಆಗಬಹುದು. ಹಾಗೆ ಹೋದ ಲಂಕೇಶ್ ಹೆಂಡತಿಯನ್ನು ಬಟ್ಟೆ ಅಂಗಡಿ ಒಳಗೆ ಕಳಿಸಿ ಹೊರಗಡೆ ನಿಂತು ಒಂದು ಸಿಗರೇಟು ಹಚ್ಚುತ್ತಿದ್ದರಂತೆ. ಆ ಸಿಗರೇಟು ಮುಗಿದು ಅದರ ತುಂಡನ್ನು ಅವರು ನೆಲಕ್ಕೆ ಎಸೆದು ಹೊಸಕಿಹಾಕುವುದರೊಳಗೆ ಹೆಂಡತಿ ಸೀರೆ ಸೆಲೆಕ್ಟ್ ಮಾಡಿಕೊಂಡು ಬರಬೇಕಾಗಿತ್ತಂತೆ. ಅಷ್ಟರೊಳಗೆ ಒಂದು ವೇಳೆ ಅವರು ಬರದಿದ್ದರೆ, “ನೀನೇನು ಜೀವನಪೂರ್ತಿ ಒಂದೇ ಸೀರೆ ಉಡ್ತೀಯಾ?” ಎಂದು ಜೋರು ಮಾಡುತ್ತಿದ್ದರಂತೆ!

ಲಂಕೇಶ್ ಅವರ ಕಥೆ ಹಂಗಾಯ್ತಲ್ಲ, ಅದು ಒಂದುಕಡೆ ಇರ್ಲಿ. ಗಂಡಸರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಾಲ್ಕು ಮಾತು: ಅಂದಹಾಗೆ ಈ ಸೀರೆ ಬೆಲೆ ಎಷ್ಟು ಅಂತ ಇನ್ನೂ ಗೊತ್ತಿಲ್ಲ. ಆದರೆ ಇದನ್ನು ಉಟ್ಟುಕೊಂಡು ಬಳುಕಾಡುತ್ತಾ, ಬೆಳಕುಬೀರುತ್ತಾ ಹೆಂಗಸರು ನಡೆಯುವುದು ಯಾವುದೇ ಗಂಡಸರಿಗಾದರೂ ಪುಳಕವನ್ನುಂಟುಮಾಡುವ ಸಂಗತಿಯಾದೀತು. ಸ್ವತಃ ಹೆಂಗಸರಿಗೂ ಇದು ಸಂತೋಷವನ್ನುಂಟು ಮಾಡೀತು. ಮನೆಯಲ್ಲಿ ಸ್ವಲ್ಪಹೊತ್ತು ಕರೆಂಟು ಹೋದರೂ ನಡೆದೀತು. ರಸ್ತೆಯಲ್ಲಿ ಬೀದಿದೀಪ ಇಲ್ಲದಿದ್ದರೂ ಆದೀತು. ಆದರೆ ಇಂತಹ ಈ ಸೀರೆ ಉಟ್ಟುಕೊಂಡ ಹೆಂಗಸರ ಮೈಮುಟ್ಟಿದರೆ ಪ್ರೀತಿಪ್ರೇಮದ, ಅನುರಾಗದ ಭಾವನೆ ಉಂಟಾಗುತ್ತದೆಯೋ ಅಥವಾ ಕರೆಂಟ್ ಹೊಡೆಸಿಕೊಂಡ ಅನುಭವ ಆಗುತ್ತದೆಯೋ ಇನ್ನೂ ಗಂಡಸರಿಗೆ ಗೊತ್ತಿಲ್ಲ. ಹತ್ತಿರ ಹೋದರೆ ಗ್ರೌಂಡಿಂಗ್ ಆಗಿ ಶಾಕ್ ಹೊಡೆಯುವ ಚಾನ್ಸ್ ಕೂಡ ಇರಬಹುದು. ಯಾವುದಕ್ಕೂ `ಹತ್ತಿರವಿದ್ದರೂ ಹತ್ತಿಕೊಂಡಿರುವುದನ್ನು ತಪ್ಪಿಸುವುದು’ ಆ ಮೂಲಕ `ಸುರಕ್ಷಿತ ಅಂತರ’ ಅಂದರೆ `Comfortable Distance’ ಮೇಂಟೇನ್ ಮಾಡೋದು ಒಳ್ಳೆಯದೇನೋ ಅಲ್ವಾ?

ನನ್ನ ಕಥೆ ಕೇಳಿ. ನಾನಂತು ಈ ಸೀರೆ ಕೊಡಿಸುವ ಸಂದರ್ಭ ಬರ್ಲಿಕ್ಕಿಲ್ಲ ಅಂದ್ಕೊಂಡಿದ್ದೇನೆ. ಯಾಕೆಂದರೆ ನನ್ನ ಹೆಂಡತಿ ಅದನ್ನು ಉಟ್ಟುಕೊಂಡು ಬಳ್ಳಿಯಂತೆ ಬಳುಕಾಡಿ ನಡೆದಾಡುವಷ್ಟು ತೆಳ್ಳಗೂ ಇಲ್ಲ. ಕ್ಯಾಟ್ ವಾಕ್ ಮಾಡಿ ನನ್ನನ್ನು ಖುಷಿಪಡಿಸುವ ವಯಸ್ಸೂ ಅವಳದಲ್ಲ! ನನಗೂ ನನ್ನ ಹೆಂಡ್ತಿಗೂ ನಮ್ಮ ಮನೆಯ ಡುಮ್ಮಿ ಟಿವಿಗೂ ಹೇಳಿಮಾಡಿಸಿದ ಜೋಡಿ! ಮೇಡ್ ಫಾರ್ ಈಚ್ ಅದರ್ ಅಂತನೋ ಏನೋ ಹೇಳ್ತಾರಲ್ಲ ಹಂಗೆ. ನಮ್ಮ ಕವಿ ಜಿ.ಪಿ. ರಾಜರತ್ನಂ ಅವರ ರತ್ನ ಹೇಳುವಂತೆ, `ನಮ್ಮಷ್ಟಕ್ ನಾವಾಗಿ, ಇದ್ದದ್ರಲ್ಲಿ ಹಾಯಾಗಿ’ ಅದೀವಿ. ನೀವು ಯಾರಾದ್ರು ಬೇಕಾದರೆ ಕೊಡಿಸಿ ಉಡಿಸಿ ನೋಡಿ ಸಂತೋಷ ಪಡಿರಪ್ಪ. ನಾವೆಲ್ಲ ದೂರದಿಂದ ನೋಡಿ ಸಂತೋಷ ಪಡ್ತೀವಿ. ಕೊನೆಯಲ್ಲಿ ನಾಲ್ಕು ಸಾಲಿನ ಒಂದು ಪದ್ಯ:

ಬಂದಿತು ನೋಡಿ ಎಲ್ಇಡಿ ಸೀರೆ
ಜಗಮಗ ಜಗಮಗ ಬೆಳಕಿನ ಧಾರೆ
ಉಟ್ಟುನಡೆದರೆ ಬಳುಕುತ ನೀರೆ
ನಿಂತು ನೋಡೀತು ಊರಿಗೆ ಊರೆ


·         ರಾಜೇಂದ್ರ ಬುರಡಿಕಟ್ಟಿ

No comments:

Post a Comment