Saturday, October 14, 2017

ಘಂಟಿ ಮಾತು: `ಪರಂಪರೆಯ ಪಿಸುಮಾತು’

ಘಂಟಿ ಮಾತು: `ಪರಂಪರೆಯ ಪಿಸುಮಾತು’


ಹಂಪಿ ಕನ್ನಡ ವಿವಿ ಕುಲಪತಿ ಡಾ. ಮಲ್ಲಿಕಾ ಘಂಟಿಯವರಿಗೆ ಹೈಕೋರ್ಟ್, `ವೇದಿಕೆಗಳಲ್ಲಿ ಎಚ್ಚರಿಕೆಯಿಂದ ಮಾತನಾಡಿ’ ಎಂದು ಎಚ್ಚರಿಸಿದ್ದು ಇಂದು ವರದಿಯಾಗಿದೆ. ಎರಡು ವರ್ಷಗಳ ಹಿಂದೆ ಅವರು ಕುವೆಂಪು ವಿವಿ ಯ ಕುಲಸಚಿವರಾಗಿದ್ದಾಗ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, `ರಾಮಾಯಣ, ಮಹಾಭಾರತ ಅತ್ಯಾಚಾರದ ಕೂಪಗಳು. ಅವುಗಳನ್ನು ಓದುತ್ತಾ ಬೆಳೆದವರಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚಿರುತ್ತದೆ’ ಎಂದು ಘಂಟಿ ಆಡಿದ್ದರು ಎನ್ನಲಾದ ಮಾತಿಗೆ ಪ್ರತಿಹೇಳಿಕೆಯಾಗಿ ಶಂಕರಗೌಡ ಎಂಬುವವರು ಖಾಸಗೀ ಟಿವಿ ಚಾನಲ್ ಒಂದರಲ್ಲಿ ಪ್ರತಿಹೇಳಿಕೆ ನೀಡುವಾಗ `ನನ್ನ ವಿರುದ್ಧ ಶಂಕರಗೌಡ ಅವರು ಅಸಹ್ಯಕರ ಮತ್ತು ಅಸಭ್ಯ ಪದಗಳನ್ನು ಬಳಸಿ ನನ್ನ ಘನತೆಗೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿ ಭದ್ರಾವತಿ ಪೋಲೀಸ್ ಠಾಣೆಗೆ ಮಲ್ಲಿಕಾ ಘಂಟಿಯವರು ದೂರು ಸಲ್ಲಿಸಿದ್ದರಂತೆ. ದೂರಿನ ವಿಚಾರಣೆಯ ಭಾಗವಾಗಿ ತಮ್ಮ ಮೇಲೆ ಪೋಲೀಸರು ಭದ್ರಾವತಿ ಅಧೀನ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪಪಟ್ಟಿಯನ್ನು ರದ್ದುಗೊಳಿಸಬೇಕು ಎಂದು ಶಂಕರಗೌಡ ಅವರು ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ಹೈಕೋರ್ಟ್ ಅಧೀನ ನ್ಯಾಯಾಲಯದ ವಿಚಾರಣೆಗೆ ಮಧ್ಯಂತರ ತಡೆ ನೀಡುತ್ತಾ ಈ  ಎಚ್ಚರಿಕೆಯನ್ನು ನೀಡಿರುವುದಾಗಿ ಈ ವರದಿ ಹೇಳುತ್ತದೆ.

ನ್ಯಾಯಮೂರ್ತಿಗಳುಗಳು ಮೌಖಿಕವಾಗಿ ಅಭಿಪ್ರಾಯಪಟ್ಟರು ಎಂದು ವರದಿಯಾಗಿರುವ ಅವರ ಎರಡು ಮಾತು ಮಾಧ್ಯಮಗಳಲ್ಲಿ ಹೀಗೆ ವರದಿಯಾಗಿವೆ, ಒಂದು: “ಮಲ್ಲಿಕಾ ಘಂಟಿಯವರು ಬಳಸಿರುವ ಪದಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಹೀಗೆಂದರೆ ಏನರ್ಥ. ರಾಮಾಯಣ ಮತ್ತು ಮಹಾಭಾರತ ಓದಿದವರೆಲ್ಲಾ ದೌರ್ಜನ್ಯ ಎಸಗುತ್ತಾರೆಯೇ. ಅವರೇನು ದೋಷಿಗಳೇ. ಇಂತಹ ಮಾತುಗಳನ್ನು ಆಡುವುದು ತರವಲ್ಲ. ಪ್ರತಿಯೊಬ್ಬರೂ ಬೇರೊಬ್ಬರ ಅಭಿಪ್ರಾಯಗಳನ್ನು ಗೌರವಿಸಬೇಕು.” ಎರಡು: “ಮಲ್ಲಿಕಾ ಘಂಟಿ ಉನ್ನತ ಹುದ್ದೆಯಲ್ಲಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರು ಕಡಿಮೆ ಮಾತನಾಡಬೇಕು. ಒಂದೊಮ್ಮೆ ಮಾತನಾಡಿದರೂ ಜವಾಬ್ದಾರಿಯಿಂದ ನುಡಿಯಬೇಕಾಗುತ್ತದೆ. ಬೇರೊಬ್ಬರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡಬಾರದು. ಅದರಲ್ಲೂ ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವಾಗ ಎಚ್ಚರದಿಂದ ಇರಬೇಕು. ಸಮಾಜದ ಸಾಮರಸ್ಯಕ್ಕೆ ಪೆಟ್ಟು ಬೀಳುವಂತಹ ಹೇಳಿಕೆ ನೀಡಬಾರದು.”

ನ್ಯಾಯಾಲಯದ ವಾದ-ವಿವಾದ, ಅದರ ಪ್ರತಿಫಲವಾಗಿ ಬರುವ ತೀರ್ಪು ಇಂತಹ ಕಾನೂನಾತ್ಮಕ ಅಂಶಗಳ ಹೊರತು ಈ ಪ್ರಕರಣ ಎತ್ತುತ್ತಿರುವ ಕೆಲವು ಸೈದ್ಧಾಂತಿಕ ಪ್ರಶ್ನೆಗಳನ್ನು ಚರ್ಚಿಸುವುದು ಈ ಲೇಖನದ ಉದ್ದೇಶ. ನ್ಯಾಯಾಲಯದ ಮೇಲೆ ನಾವು ಹೊಂದಿರಲೇಬೇಕಾಗಿರುವ ಗೌರವವನ್ನು ಇಟ್ಟುಕೊಂಡೇ ಈ ಸಮಸ್ಯೆಗಳನ್ನು ಚರ್ಚಿಸುವುದು ನಾಡಿನ ಸಾಂಸ್ಕೃತಿಕ ವೈಚಾರಿಕತೆಯ ಬೆಳವಣಿಗೆಯ ದೃಷ್ಟಿಯಿಂದ ಬಹುಮುಖ್ಯ ಸಂಗತಿಯಾದುದರಿಂದ ಅದನ್ನು ಇಲ್ಲಿ ಆದ್ಯತೆ ನೀಡಿ ಕೈಗೆತ್ತಿಕೊಳ್ಳಲಾಗುತ್ತಿದೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳುವ ಮೊದಲ ಮತ್ತು ಬಹುಮುಖ್ಯ ಪ್ರಶ್ನೆ ಎಂದರೆ ರಾಮಾಯಣ ಮತ್ತು ಮಹಾಭಾರತಗಳಂತಹ ಅದರಲ್ಲಿಯೂ ಬಹಳಷ್ಟು ಭಿನ್ನ ವ್ಯಾಖ್ಯಾನಗಳನ್ನು ಹೊಂದಿರುವ ಸಾಂಸ್ಕೃತಿಕ ಪಠ್ಯಗಳ ಮೇಲೆ ಮಾತನಾಡುವಾಗ ಬೇರೆಯವರ ಅಭಿಪ್ರಾಯಕ್ಕೆ ಧಕ್ಕೆಯಾಗದಂತೆ ಮಾತನಾಡುವುದು ವಾಸ್ತವದಲ್ಲಿ ಸಾಧ್ಯವಿದೆಯೇ ಎಂಬುದು. ವೈಯಕ್ತಿಕ ಚಾರಿತ್ರ್ಯವಧೆ, ಮಾನಹಾನಿ, ವ್ಯಕ್ತಿತ್ವ ಘನತೆ ಇಂತಹ ವಿಷಯಗಳಲ್ಲಿ ಬೇರೆಯವರ ಭಾವನೆಗಳಿಗೆ ಧಕ್ಕೆ ಯಾಗದಂತೆ ನಡೆದುಕೊಳ್ಳಲು ಎಲ್ಲರಿಗೂ ಸಾಧ್ಯವಿದೆ. ಹಾಗೆ ನಡೆದುಕೊಳ್ಳಬೇಕು ಕೂಡ. ಆದರೆ ಇದು ಸಾಂಸ್ಕೃತಿಕ ಪಠ್ಯಗಳ ಚರ್ಚೆಯ ಸಂದರ್ಭದಲ್ಲಿ ಪಾಲಿಸಲು ಅಸಾಧ್ಯವಾದ ಸಂಗತಿ ಎಂಬುದನ್ನು ನಾವು ಗಮನಿಸಬೇಕು. ಅದರಲ್ಲೂ ರಾಮಾಯಣ ಮತ್ತು ಮಹಾಭಾರತಗಳಂತಹ ಬಹು ವಿವಾದಾತ್ಮಕ ಕೃತಿಗಳ ಬಗ್ಗೆ ಹೇಳುವಾಗ ಯಾರಿಗೂ ಬೇಸರವಾಗದಂತೆ ಅಥವಾ ಬೇರೆಯವರ ಭಾವನೆಗಳಿಗೆ ಧಕ್ಕೆಯಾಗದಂತೆ ಮಾತನಾಡುವುದು ಹೇಗೆ ಸಾಧ್ಯ? ಈ ಬಗ್ಗೆ ಸಹಜವಾಗಿ ಉಂಟಾಗುವ ಅಭಿಪ್ರಾಯಭೇಧಗಳನ್ನೇ ಅನಗತ್ಯವಾಗಿ ವಿವಾದವನ್ನಾಗಿ ಪರಿವರ್ತಿಸುವವರನ್ನು ತಡೆಯುವುದು ಈ ರೀತಿಯಲ್ಲಿ ಸಾಧ್ಯವೇ? ಒಂದು ವೇಳೆ ಆಡಳಿತ ವ್ಯವಸ್ಥೆಯು ಕೆಲವು ಪುಸ್ತಕಗಳನ್ನು ಪಟ್ಟಿಮಾಡಿ ಅವುಗಳ ಬಗ್ಗೆ `ಏನನ್ನೂ ಮಾತನಾಡಕೂಡದು’ ಎಂದೋ ಅಥವಾ ಅವುಗಳ ಬಗ್ಗೆ ಇಂಥದ್ದೇ ಅಭಿಪ್ರಾಯ `ಅಧಿಕೃತ’ ಮತ್ತು ಆ ಅಭಿಪ್ರಾಯವನ್ನು ಹೊರತು ಪಡಿಸಿದ ಇತರ ಅಭಿಪ್ರಾಯಗಳನ್ನು `ಅನಧಿಕೃತ’ ಎಂದು ಘೋಷಿಸಿಯೋ ಶಾಸನವನ್ನೇನಾದರೂ ಮಾಡಿದರೆ ಇಂತಹ ವಿವಾದಗಳನ್ನು ತಡೆಯಬಹುದೇನೋ. ವಾಸ್ತವದಲ್ಲಿ ಅವೆಲ್ಲ ಸಾಧ್ಯವಿಲ್ಲದ ಸಂಗತಿಗಳು.  

ಸರಿ, ಇಂತಹ ಪಠ್ಯಗಳ ಬಗ್ಗೆ ಯಾರಾದರೂ ಏನಾದರೂ ಮಾತನಾಡಿದಾಗ ಕೆಲವರ ಭಾವನೆಗಳಿಗೆ ಏಕೆ ಧಕ್ಕೆಯಾಗಬೇಕು? ಅವರ ಭಾವನೆಗಳಿಗೆ ಧಕ್ಕೆ ಎಂಬ ಕಾರಣಕ್ಕೆ ಅವುಗಳ ಮೇಲೆ ಅವರು ಒಪ್ಪುವ ಅಭಿಪ್ರಾಯವನ್ನೇ ಎಲ್ಲರೂ ಹೊಂದಿರಲು ಸಾಧ್ಯವಿದೆಯೇ? ಅಷ್ಟಕ್ಕೂ ಆ ಪಠ್ಯಗಳು ಹೀಗೆ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಅಹವಾಲು ಸಲ್ಲಿಸುವವರ ಖಾಸಗೀ ಆಸ್ತಿಗಳೇನಲ್ಲ. ಅವು ಈ ನಾಡಿನ ಸಮಸ್ತ ಜನರ ಕೂಡುಆಸ್ತಿಗಳು. ಆ ಆಸ್ತಿಗಳ ಮೇಲಿನ ಜವಾಬ್ದಾರಿ, ಹಕ್ಕು, ಅವುಗಳ ಬಗೆಗಿನ ಜಗಳ ಎಲ್ಲವೂ ಸಾಮೂಹಿಕವಾಗಿಯೇ ಇರುತ್ತವೆಯೆಂದು ನಾವು ತಿಳಿಯಬೇಕಾಗುತ್ತದೆ. ಆ ಕೃತಿಗಳನ್ನು ಹೊಗಳುವ ಹಕ್ಕು ಇದೆ ತೆಗಳುವ ಹಕ್ಕು ಇಲ್ಲ ಎನ್ನುವುದಾದರೆ ಅವನ್ನು ಹೊಗಳುವವರ ಖಾಸಗೀ ಆಸ್ತಿಯಾಗಿ ಪರಿಗಣಿಸದಂತಾಗುವುದಿಲ್ಲವೇ? ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳ ವಿಷಯದಲ್ಲಿ ವಿವಾದ ಉಂಟಾಗಲು ಬಹುಮುಖ್ಯ ಕಾರಣ ಈ ಕೃತಿಗಳಿಗೆ ಧಾರ್ಮಿಕ ಆಯಾಮ ಇರುವುದಾಗಿದೆ. ಕೆಲವರು ಈ ಕೃತಿಗಳ ಬಗ್ಗೆ `ಪೂಜ್ಯ’ಭಾವನೆ ಬೆಳಸಿಕೊಂಡಿರುತ್ತಾರೆ.  ನಾವು ಯಾವುದಾದರೂ ಒಂದು ಗ್ರಂಥದ ಬಗ್ಗೆ ಹೀಗೆ `ಪೂಜ್ಯ’ ಭಾವನೆ ಬೆಳಸಿಕೊಂಡರೆ ಆ ಗ್ರಂಥದ ಬಗ್ಗೆ ಟೀಕೆ ಇರಲಿ ಕನಿಷ್ಠ ವಿಮರ್ಶೆಯನ್ನೂ ಆಲಿಸುವ ಸೌಜನ್ಯ ತೋರದ ಹಟಮಾರಿಗಳಾಗಿಬಿಡುತ್ತೇವೆ.

ಕುವೆಂಪು ಹಾಗಾಗಿಯೇ, “ಯಾವೊಂದು ಗ್ರಂಥವೂ ಪೂಜನೀಯವಾಗಬಾರದು. ಎಲ್ಲರೂ ಎಲ್ಲ ಒಳ್ಳೆಯ ಗ್ರಂಥಗಳಲ್ಲಿರುವ ಒಳ್ಳೆಯ ಅಂಶಗಳನ್ನು ಸ್ವೀಕರಿಸಿ ತಮ್ಮದೇ ವಿಚಾರವನ್ನು ಕಟ್ಟಿಕೊಳ್ಳಬೇಕು” ಎಂಬ ಅಭಿಪ್ರಾಯವನ್ನು ಎಂದು ತಮ್ಮ ಕೊನೆಗಾಲದ ವಿಶ್ವಮಾನವ ಸಂದೇಶದಲ್ಲಿ ಹೇಳಿದ್ದಾರೆ. `ಧರ್ಮವು ಗುಂಪು ಕಟ್ಟುವ ವಿಷಯವಾಗಬಾರದು’ ಎಂಬ ಅವರ ವಿಚಾರಧಾರೆಗೆ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವ ನಮ್ಮ ಇಂದಿನ ಸಮಾಜಕ್ಕೆ ಇದನ್ನು ಅರ್ಥಮಾಡಿಸುವುದು ಹೇಗೆ ಎಂಬುದನ್ನು ನಾವಿಂದು ಆಲೋಚಿಸಬೇಕಿದೆ. ಈ ರಾಮಾಯಣ ಮಹಾಭಾರತ ನಮ್ಮ ಬಹುಮುಖ್ಯ ಸಾಂಸ್ಕೃತಿಕ ಪಠ್ಯಗಳಾಗಿರುವುದರಿಂದ ಅವುಗಳನ್ನು ಓದುವ, ಅವುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳುವ, ಬರೆಯುವ ಸ್ವಾತಂತ್ರ್ಯ ಎಲ್ಲರಿಗೂ ಇರಬೇಕಾದದ್ದು ಅತ್ಯಂತ ಅವಶ್ಯ. ಇದು ಅಭಿಪ್ರಾಯ ವ್ಯಕ್ತಪಡಿಸುವವರ ಸ್ವಾತಂತ್ರ್ಯ ಮಾತ್ರವಲ್ಲ ಕೃತಿಗಳ ಸ್ವಾತಂತ್ರ್ಯ ಕೂಡ ಹೌದು. ಏಕೆಂದರೆ ಇವೆಲ್ಲ ಬೌದ್ಧಿಕ ಚರ್ಚೆಯ ಸಂಗತಿಗಳು. ಬೌದ್ಧಿಕ ಚರ್ಚೆಗಳಲ್ಲಿ ವೈಚಾರಿಕ ಸಂಘರ್ಷ ಎಂಬುದು ಅತ್ಯಂತ ಸಾಮಾನ್ಯ ಸಂಗತಿ. ಆ ಸಂಘರ್ಷಗಳು ಆ ಕೃತಿಗಳನ್ನು ಒರೆಗೆ ಹಚ್ಚುವ ಮೂಲಕ ಅವುಗಳು ನಮ್ಮ ಕಾಲಕ್ಕೆ ಔಟ್ ಡೇಟೆಡ್ ಆಗದಂತೆ ಜೀವಂತವಾಗಿಟ್ಟುಕೊಳ್ಳುವ ಬಹುಮುಖ್ಯ ಕಾರ್ಯಗಳೂ ಆಗಿರುತ್ತವೆ.

ಹಾಗಾಗಿ ಇಲ್ಲಿ ನಾವು ಭಾವನೆಗಳಿಗೆಂತ ಸಹನೆಗೆ ಆದ್ಯತೆ ನೀಡಬೇಕಾಗುತ್ತದೆ. ಇಂತಹ ವಿಷಯಗಳಲ್ಲಿ ಯಾರಿಗೇ ಆಗಲಿ ತನ್ನಾಭಿಪ್ರಾಯದೊಂದಿಗೆ ಭಿನ್ನಾಭಿಪ್ರಾಯವನ್ನೂ ಕೇಳುವ ಸಹನೆ ಇಲ್ಲದಿದ್ದರೆ ವಿವಾದವಾಗುವುದು ಅತ್ಯಂತ ಸಹಜವಾದದ್ದು.  ಈ ಕೃತಿಗಳನ್ನು ತೆಗಳುವವರನ್ನು ಕಂಡು ಅವನ್ನು ಹೊಗಳುವವರ ಭಾವನೆಗಳಿಗೆ ಧಕ್ಕೆಯಾಗುವುದಾದರೆ ಹೊಗಳುವವರನ್ನು ಕಂಡು ತೆಗಳುವವರ ಭಾವನೆಗಳಿಗೂ ಧಕ್ಕೆಯಾಗುತ್ತದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ.  ಆದ್ದರಿಂದ ಹೊಗಳುವವರು ಮತ್ತು ತೆಗಳುವವರು ಇಬ್ಬರೂ ಪರಸ್ಪರರ ಅಭಿಪ್ರಾಯಗಳನ್ನು ಒಪ್ಪಿಕೊಳ್ಳದಿದ್ದರೂ ಆಲಿಸುವ, ಸಹಿಸಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದೊಂದೆ ಇದಕ್ಕಿರುವ ಸಮರ್ಪಕ ಪರಿಹಾರ.

ಇನ್ನು ಎರಡನೆಯ ಪ್ರಶ್ನೆ ರಾಮಾಯಣ ಮತ್ತು ಮಹಾಭಾರತ ಕೃತಿಗಳು ಹಿಂಸೆಯನ್ನು ಪ್ರಚೋದಿಸುವ ಕೃತಿಗಳಾಗಿಲ್ಲವೇ ಎಂಬುದು. ಇದಕ್ಕೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿ ನಮಗೆ ಸಧ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ಈ ಎರಡು ಅಂಶಗಳು ಸ್ಪಷ್ಟವಾಗುತ್ತಿವೆ: 1) ಇದು ರಾಮಾಯಣ ಮಹಾಭಾರತಗಳಂತಹ ಬಹಳಷ್ಟು ವೈವಿಧ್ಯಮಯವೂ ಪರಸ್ಪರ ವಿರುದ್ಧ ವ್ಯಾಖ್ಯಾನಗಳೂ ಗುರಿಯಾಗಿರುವ ಸಾಂಸ್ಕೃತಿಕ ಪಠ್ಯಗಳ ಮೇಲಿನ ವಿದ್ವಾಂಸರೊಬ್ಬರ ಅಭಿಪ್ರಾಯಕ್ಕೆ ಸಂಬಂಧಿಸಿದ ಪ್ರಕರಣ. 2) `ಅವುಗಳನ್ನು (ರಾಮಾಯಣ ಮತ್ತು ಮಹಾಭಾರತ) ಓದುವವರಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚಿರುತ್ತದೆ’ ಎಂಬ ಮಲ್ಲಿಕಾ ಘಂಟಿ ಅವರ ಹೇಳಿಕೆಯಲ್ಲಿ ಇಲ್ಲದ `ಎಲ್ಲರೂ’ ಎಂದು ಅರ್ಥಕೊಡುವ ಪದ ನ್ಯಾಯಮೂರ್ತಿಗಳ ಈ ಬಗೆಗಿನ ಅಭಿಪ್ರಾಯದಲ್ಲಿ ಸೇರಿಕೊಂಡಿದೆ. (ಓದಿದವರೆಲ್ಲಾ). ಹೀಗಾಗಿ ಘಂಟಿಯವರ ಹೇಳಿಕೆ `ಈ ಕಾವ್ಯಗಳು ಹಿಂಸೆಯನ್ನು ಪ್ರಚೋದಿಸುತ್ತವೆ’ ಎಂಬ ಸಾಮಾನ್ಯ ಹೇಳಿಕೆಯಾಗಿರಬಹುದೇ ಹೊರತು `ಅವನ್ನು ಓದಿದ ಎಲ್ಲರೂ ಹಿಂಸಾ ಪ್ರವೃತ್ತಿ ಬೆಳಸಿಕೊಳ್ಳುತ್ತಾರೆ’ ಎಂದಿರಲಾರದು ಎಂಬುದು ನನ್ನ ಅನಿಸಿಕೆ.

ಹೀಗೆ ನನ್ನ ಅನಿಸಿಕೆಯಂತೆ ಅವರ ಹೇಳಿಕೆಯ ಹಿಂದಿನ ಧ್ವನಿ, `ರಾಮಾಯಣ ಮಹಾಭಾರತಗಳು ಹಿಂಸೆಯನ್ನು ಪ್ರತಿನಿಧಿಸುತ್ತವೆ’ ಎಂಬುದೇ ಆಗಿದ್ದಲ್ಲಿ ಅದನ್ನು ಸುಳ್ಳು ಎನ್ನುವ ಧೈರ್ಯ ಯಾರಿಗೆ ಇದೆ ಎಂಬುದು ಇಲ್ಲಿನ ಮುಖ್ಯ ಪ್ರಶ್ನೆ.  ರಾಮಾಯಣ ಮತ್ತು ಮಹಾಭಾರತ ಎರಡೂ ಹೇಳಿ ಕೇಳಿ ಯುದ್ಧಕಾವ್ಯಗಳು. ಭಗವದ್ಗೀತೆ ಯುದ್ದಕ್ಕೆ ಹೆದರಿದ ಅರ್ಜುನನನ್ನು ಕರ್ತವ್ಯದ ಹೆಸರಿನಲ್ಲಿ ಯುದ್ಧಮಾಡಲು ಹುರುದುಂಬಿಸಿ ಬಂಧುಬಳಗವನ್ನು ಕೊಲ್ಲಲು ಹಚ್ಚಿದ ಕೃತಿ. ಭಾರತದ ಮಾತ್ರವಲ್ಲ ಜಗತ್ತಿನ ಬಹುತೇಕ ಮಹಾಕಾವ್ಯಗಳ ಪ್ರಧಾನ ರಸ ಎರಡೇ ಎಂಬುದು ಬಹಳಷ್ಟು ಜನ ವಿದ್ವಾಂಸರ ಅಭಿಪ್ರಾಯ. ಅವೆಂದರೆ ಒಂದು ಶೃಂಗಾರ ಇನ್ನೊಂದು ವೀರ! `ವೀರ’ಎಂಬುದನ್ನು ಸಾಭೀತುಮಾಡುತ್ತಿದ್ದಂತಹ ಸಂಗಂತಿಗಳೇ `ಕೊಲೆ ಮತ್ತು ಹಿಂಸೆ’ಗಳು. ಇವೇ ಆಗ ಈ `ವೀರತ್ವ’ಕ್ಕೆ ಮಾನದಂಡಗಳಾಗಿದ್ದವು.  ಆ ಕಾಲಘಟ್ಟ ಯುದ್ಧಪ್ರಧಾನವಾದ ಕಾಲಘಟ್ಟ. ಹಾಗಾಗಿ ಕೊಲೆ ಮತ್ತು ಹಿಂಸೆ ಅಲ್ಲಿ ಅಪರಾಧವಾಗಿರಲಿಲ್ಲ. ಹೆಚ್ಚೆಚ್ಚು ಜನರನ್ನು ಕೊಂದ ರಾಜನನ್ನು ನಾವು ಮಹಾರಾಜ ವೀರಾಧಿವೀರ ಎಂದು ಹೊಗಳಿ ಗೌರವಿಸುತ್ತಲೇ ಬಂದಿದ್ದೇವೆ. ಅದು ಆ ಕಾಲಘಟ್ಟದ ಒಪ್ಪಿತ ವಿಚಾರಧಾರೆ!  ಈಗ ನಾವು `ಕೊಲೆ’ ಮತ್ತು `ಹಿಂಸೆ’ಗಳು `ಅಪರಾಧ’ ಎಂದು ಪರಿಗಣಿತವಾಗುತ್ತಿರುವ `ಪ್ರಜಾಪ್ರಭುತ್ವ’ದ ಕಾಲಘಟ್ಟದಲ್ಲಿದ್ದೇವೆ. ತೇಜಸ್ವಿ ಯಾವುದೋ ಒಂದು ಸಂದರ್ಶನದಲ್ಲಿ ಹೇಳಿದಂತೆ, “ಯಾವುದೋ ಕಾಲಘಟ್ಟದ ಮೌಲ್ಯಗಳನ್ನು ಪ್ರತಿಪಾದಿಸಲು ರಚನೆಯಾದ ಕೃತಿಗಳನ್ನು ಇನ್ನಾವುದೋ ಕಾಲಘಟ್ಟದಲ್ಲಿ ಯಥಾವತ್ತಾಗಿ ಸ್ವೀಕರಿಸುವುದು ಮೂರ್ಖತನ” ಆಗಬಹುದು. ಇವೆಲ್ಲ ದೇಶ ಕಾಲಗಳ ಪಲ್ಲಟದಲ್ಲಿ ಕೃತಿಯೊಂದರ ಮೌಲ್ಯವಿವೇಚನೆಯ ಸಂದರ್ಭದಲ್ಲಿ ಉಂಟಾಗುವ ಸಾಮಾನ್ಯ ಸಾಂಸ್ಕೃತಿಕ ಬಿಕ್ಕಟ್ಟುಗಳು.

ರಾಮಾಯಣ ಮತ್ತು ಮಹಾಭಾರತ ಕೃತಿಗಳಲ್ಲಿ ಹಿಂಸೆಯನ್ನು ಪ್ರಚೋಧಿಸುವ ಭಾಗಗಳು ಎಷ್ಟೊಂದು ದೊಡ್ಡ ಮಟ್ಟದಲ್ಲಿವೆ ಎಂಬುದನ್ನು ಅವುಗಳನ್ನು ಒಂದುಬಾರಿ ಓದಿದವರೂ ಕೂಡ ಅವುಗಳ ಬಾಹುಳ್ಯವನ್ನು ಸುಲಭವಾಗಿ ಕಂಡುಕೊಳ್ಳಬಹುದು. ಹೀಗಿದ್ದೂ ಅವನ್ನು `ಅಹಿಂಸೆಯನ್ನು ಪ್ರತಿಪಾದಿಸುವ ಕೃತಿಗಳು’ ಎಂದು ಯಾರಾದರೂ ಕರೆದರೆ ಅದು ಆ ಕೃತಿಗಳ ಆಶಯಕ್ಕೆ ಮಾಡುವ ಅವಮಾನವೇ ಆದೀತು. ವಾಲ್ಮೀಕಿ ರಾಮಾಯಣವನ್ನೇ ಉದಾಹರಿಸುವುದಾದರೆ ಅದು ಪ್ರತಿಪಾದಿಸುವ ಹಿಂಸೆಗೆ ತತ್ತರಿಸಿಹೋದ ಕವಿ ಕುವೆಂಪು ಇಡೀ ರಾಮಾಯಣವನ್ನು ಅಹಿಂಸೆಯ ಪ್ರತಿಪಾದನೆಯ ಮಹಾಕಾವ್ಯವನ್ನಾಗಿ ರೂಪಿಸಲು ಎಷ್ಟೆಲ್ಲ ಹೆಣಗಿದರು ಎಂಬುದನ್ನು ಗಮನಿಸಬೇಕು. ತಮ್ಮ ಕಾವ್ಯದ ಆರಂಭದಲ್ಲಿಯೇ ಕ್ರೌಂಚಪಕ್ಷಿಯನ್ನು ಬಾಣಬಿಟ್ಟು ಹೊಡೆದುರುಳಿಸಿದ ನಿಷಾದನಿಗೆ, `ಮಾಣ್ ನಿಷಾದನೆ ಮಾಣ್/ ಕೊಲೆ ಸಾಲ್ಗುಮಯ್ಯೋ ಮಾಣ್’’ ಎಂದು ಅವನಿಗೆ `ಶಿಕ್ಷೆ’ ಕೊಡದೇ `ಶಿಕ್ಷಣ’ವನ್ನು ಕೊಟ್ಟು ಆ ಹಕ್ಕಿಯನ್ನು ಆರೈಕೆಮಾಡಿ ಬದುಕಿಸುವ ಮೂಲಕ ತನ್ನದು ಭಿನ್ನ ನಡೆ ಎಂದು ತೋರಿಸುವ ಕುವೆಂಪು,  “ಕೊಲೆಯ ಸಾಹಸದ ಕಥೆ ಜನರಿಗೆ ಸಹಜವಾಗಿ ರುಚಿಸುತ್ತದೆ ಆದರೆ ಕೊಲೆಯ ಕಥೆ ಬದಲು ರಾಮನ ಮನದ ಕಲೆಯ ಕಥೆಯನ್ನು ರುಚಿಸುವಂತೆ ಕೃತಿರಚಿಸುವ ಸಾಮರ್ಥ್ಯವನ್ನು ಕೊಡು” ಎಂದು ಸರಸ್ವತಿಯಲ್ಲಿ ಯಾಕೆ ಬೇಡಿಕೊಳ್ಳುತ್ತಾರೆ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಂಡರೆ ವಾಲ್ಮೀಕಿ ರಾಮಾಯಣದಲ್ಲಿನ ಹಿಂಸೆಯ ಬಾಹುಳ್ಯ ನಮ್ಮ ಅರಿವಿಗೆ ಬಾರದೇ ಇರದು.

ಹೀಗೆ ಹಿಂಸೆಯ ವಾಲ್ಮೀಕಿ ರಾಮಾಯಣವನ್ನು ಅಹಿಂಸೆಯ ರಾಮಾಯಣವನ್ನಾಗಿ ಮುರಿದು ಕಟ್ಟುವ ಸಾಹಸ ಮಾಡಿದ  ಕುವೆಂಪು ಅವರಿಗೆ  ಕೂಡ ತಮ್ಮ ಕಾವ್ಯದಲ್ಲಿ ಯುದ್ಧವನ್ನು ವರ್ಜಿಸಲು ಅವರಿಗೆ  ಆಗಲಿಲ್ಲ ಎಂಬ ಸಂಗತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ಯುದ್ಧವನ್ನು ತಮ್ಮ ಕಾವ್ಯದಿಂದಲೇ ವರ್ಜಿಸಿ ಕುವೆಂಪು ಅಹಿಂಸೆಯ ಪ್ರತಿಪಾದನೆ ಮಾಡಬೇಕಿತ್ತು ಎಂದು ಯಾವ ಓದುಗನಿಗೂ ಅಲ್ಲಿ ಅನ್ನಿಸುವುದಿಲ್ಲ. ಹಾಗೇ ಮಾಡಿದ್ದರೆ ಅದು ರಾಮಾಯಣವಾಗದೇ ಇನ್ನಾವುದೋ ಕಾವ್ಯವಾಗುತ್ತಿತ್ತು. ಈ ಮಾತು ಯಾಕೆ ಎಂದರೆ ಹಿಂಸೆಯನ್ನು ರಾಮಾಯಣ ಮಹಾಭಾರತಗಳಿಂದ ತೆಗೆಯುವುದು ಎಂದರೆ ಅವುಗಳ ಜೀವತೆಗೆದಂತೆ! ಏಕೆಂದರೆ ರಕ್ತ ಹರಿಯದ ರಾಮಾಯಣ ಮತ್ತು ಮಾಂಸ ಸುರಿಯದ ಮಹಾಭಾರತ ಎರಡೂ ವಾಸ್ತವದಲ್ಲಿ ಸಾಧ್ಯವಿಲ್ಲದ ಸಂಗತಿಗಳು!! ಕುವೆಂಪು ಒಬ್ಬ ಅಸಾಮಾನ್ಯ ಪ್ರತಿಭಾಶಾಲಿ ಕವಿಯಾದ ಕಾರಣ ತಮ್ಮ ಕಾವ್ಯದಲ್ಲಿ ಸಾವಿರಾರು ಸಾವು ನೋವುಗಳನ್ನು ತೋರಿಸಿಯೂ, ಈ ಹರಿದ ರಕ್ತವನ್ನೇ ನೀರಾಗಿ ಸುರಿದ ಮಾಂಸದ ಮುದ್ದೆಯನ್ನೇ ಗೊಬ್ಬರ ಮಾಡಿಕೊಂಡು, ಈ `ರಕ್ತ ಹರಿಯುವಿಕೆ’ ಮತ್ತು `ಮಾಂಸ ಸುರಿಯುವಿಕೆ’ಯ ಭಯಂಕರತೆಯ ವಿರೋಧಿ ಅರಿವಿನ ಸಸಿಗಳು ಬೆಳೆಯುವಂತೆ ಮಾಡಿ ಕಾವ್ಯವನ್ನು ಮುರಿದುಕಟ್ಟುವಲ್ಲಿ ಯಶಸ್ವಿಯಾದರು. ಇಂಥದೇ ಅನೇಕ ಉದಾಹರಣೆಗಳನ್ನು ನಾವು ಮಹಾಭಾರತದ ಬಗ್ಗೆಯೂ ಕೊಡಬಹುದಾಗಿದೆ. ಈ ಸತ್ಯವನ್ನು ಸಂಬಂಧಪಟ್ಟವರೆಲ್ಲರೂ ಅರ್ಥಮಾಡಿಕೊಳ್ಳಬೇಕು.

ಘಂಟಿಯವರ ಈ ಪ್ರಕರಣದಲ್ಲಿ `ರಾಮಾಯಣ’ ಮತ್ತು `ಮಹಾಭಾರತ’ ಎಂಬ ಪದಗಳನ್ನು ಪ್ರಸ್ತಾಪಿಸಲಾಗಿದೆ. ಯಾವ ರಾಮಾಯಣ ಯಾವ ಮಹಾಭಾರತ ಎಂದು ಉಲ್ಲೇಖಿಸಲ್ಪಟ್ಟಿರಲಿಕ್ಕಿಲ್ಲ. ಹಾಗಿದ್ದರೆ ಯಾವ ರಾಮಾಯಣ ಮತ್ತು ಯಾವ ಮಹಾಭಾರತ ಎಂಬ ಪ್ರಶ್ನೆ ಇಲ್ಲಿ ಹುಟ್ಟಿಕೊಂಡೇ ಹುಟ್ಟಿಕೊಳ್ಳುತ್ತದೆ. ಏಕೆಂದರೆ ನಮಗೆ ರಾಮಾಯಣ ಎಂಬುದು ಒಂದಿಲ್ಲ. ಮಹಾಭಾರತ ಎಂಬುದೂ ಒಂದಿಲ್ಲ. ನೂರಾರು ರಾಮಾಯಣಗಳೂ ಬಹುದೊಡ್ಡ ಸಂಖ್ಯೆಯ ಮಹಾಭಾರತಗಳೂ ನಮ್ಮಲ್ಲಿವೆ. ರಾಮಾಯಣದ ವಿಚಾರದಲ್ಲಿ ಬೌದ್ಧ ರಾಮಾಯಣಗಳು, ಜೈನರಾಮಾಯಣಗಳು, ವೈದಿಕ ರಾಮಾಯಣಗಳು ಮತ್ತು ಜನಪದ ರಾಮಾಯಣಗಳು ಎಂದು ಬಹುಮುಖ್ಯವಾಗಿ ನಾಲ್ಕು ಧಾರೆಯಲ್ಲಿ ವಿಭಾಗಿಸಬಹುದಾದ ಈ ರಾಮಾಯಣಗಳ ಗಾತ್ರ, ಪಾತ್ರ, ಕಥೆ, ಪ್ರತಿಪಾದಿಸುವ ಮೌಲ್ಯ ಇವುಗಳ ನಡುಗೆ ಆಡು-ಆನೆಯಷ್ಟು ಅಂತರವಿದೆ. ಅನೇಕ ಕಡೆ ಇವು ಪ್ರತಿಪಾದಿಸುವ ಮೌಲ್ಯಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿಯೂ ಇವೆ. ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ, ರಾಮ ಸೀತೆ ಅಣ್ಣ ತಂಗಿಯರು ಎಂದು ಹೇಳುವು ರಾಮಾಯಣಗಳೂ ನಮ್ಮಲ್ಲಿವೆ! ಜೈನ ರಾಮಾಯಣವೊಂದರಲ್ಲಿ ರಾಮ, ಲಕ್ಷ್ಮಣ, ರಾವಣ ಇವರೆಲ್ಲ ನೆಂಟರು! ಸೀತೆ ರಾವಣನ ಪತ್ನಿ ಮಂಡೋದರಿಯ ಗರ್ಭಸಂಜಾತೆ! ರಾವಣನನ್ನು ಕೊಲ್ಲುವವ ಲಕ್ಷ್ಮಣನೇ ಹೊರತು ರಾಮನಲ್ಲ!! ಮಹಾಭಾರತದ ಬಗ್ಗೆ ಇಷ್ಟು ವೈವಿಧ್ಯತೆ ಇಲ್ಲದಿದ್ದರೂ ಕಥೆಯ ಭಿನ್ನರೂಪಗಳ ಅನೇಕ ಪ್ರತಿಗಳು ದೊರೆತಿರುವುದನ್ನು ಅನೇಕ ವಿದ್ವಾಂಸರು ಗುರುತಿಸಿದ್ದಾರೆ.

ಹೀಗೆ ವೈವಿಧ್ಯತೆ ಮತ್ತು ಹತ್ತು ಹಲವು ವಿಷಯಗಳಲ್ಲಿ ಅನಿರ್ಧಿಷ್ಟತೆಯನ್ನು ಒಳಗೊಂಡ ಈ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಯಾವ ಯಾವ ರಾಮಾಯಣ ಮತ್ತು ಮಹಾಭಾರತವಗಳನ್ನು ಕೇಂದ್ರೀಕರಿಸಿ ಈ ಪ್ರಕರಣದಲ್ಲಿ ಚರ್ಚೆ ನಡೆಯುತ್ತಿದೆಯೋ ಗೊತ್ತಿಲ್ಲ. ದೂರದಿಂದ ನೋಡಿ ಊಹಿಸುವುದಾದರೆ ಇದು ವೈದಿಕ ರಾಮಾಯಣಗಳ ಗುಂಪಿನಲ್ಲಿ ಬರುವ `ವಾಲ್ಮೀಕಿ ರಾಮಾಯಣ’ವನ್ನೂ ಮತ್ತು `ವ್ಯಾಸಮಹಾಭಾರತ’ವನ್ನೂ ಕೇಂದ್ರೀಕರಿಸಿ ನಡೆಯುತ್ತಿರುವಂತೆ ತೋರುತ್ತಿದೆ. ಹೀಗಾಗಿ ಈ ಕೃತಿಗಳ ಬಗ್ಗೆಯಾದರೂ ನಮ್ಮಲ್ಲಿ ಒಂದು ನಿರ್ಧಿಷ್ಟತೆ ಇದೆಯೇನೋ ಅಂದರೆ ಅದೂ ಇದ್ದಂತಿಲ್ಲ. ಅವುಗಳ ಗಾತ್ರ ಕಾಲಗಳ ಬಗ್ಗೆ ರಚನಾಕಾರರ ಬಗ್ಗೆ ಬಹುದೊಡ್ಡ ವಿದ್ವಾಂಸರೇ ನಾವು ಆಶ್ಚರ್ಯಪಡುವ ಹೇಳಿಕೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಕೆಲವನ್ನು ಗಮನಿಸಬಹುದು:

ವಿಶ್ವಕವಿ ರವೀಂದ್ರ ನಾಥ ಟ್ಯಾಗೋರ್ ಅವರು, “ನಿಜವಾಗಿಯೂ `ವ್ಯಾಸ’ ಅಥವಾ `ವಾಲ್ಮೀಕಿ’ ಎಂಬುದು ಯಾರ ಹೆಸರೂ ಆಗಿರಲಿಲ್ಲ” ಎಂದು ಹೇಳುತ್ತಾರೆ. `ಯುಗಯಾತ್ರೀ ಭಾರತೀಯ ಸಂಸ್ಕೃತಿ’ ಪ್ರಕಾರ ಈ ಎರಡು ಮಹಾಕಾವ್ಯಗಳ ಅನುಕ್ರಮಿಕ ವಿಕಾಸವನ್ನೂ ಅವು ಬೆಳೆದುನಿಂತ ಬೃಹದ್ಗಾತ್ರವನ್ನೂ ನೋಡಿದ ಯಾರಿಗಾದರೂ “ಮೂಡುವ ಮೊದಲ ಅಭಿಪ್ರಾಯವೆಂದರೆ ಅದು ಒಬ್ಬ ಬರೆದ ಬರಹ ಅಲ್ಲ; ಅಷ್ಟೇ ಅಲ್ಲ ಒಂದು ತಲೆಮಾರಿನ ಬರಹಗಾರರದೂ ಅಲ್ಲ ಎಂಬುದು; ಬೇರೆ ಬೇರೆ ಪ್ರಮಾಣದ ಶಕ್ತಿಯುಳ್ಳ  ಅನೇಕ ಬರಹಗಾರರ ಕಲಬೆರಕೆ ಅದು ಎಂದೂ ಗೊತ್ತಾಗುತ್ತದೆ.” ನಮ್ಮ ಇನ್ನೊಬ್ಬ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರು `ವಾಲ್ಮೀಕಿ’ ಮತ್ತು `ವ್ಯಾಸ’ ಎಂಬವು ನಿಜವಾಗಿಯೂ ಯಾರ ಹೆಸರೂ ಆಗಿರಲಿಲ್ಲ ಎಂಬ ಟ್ಯಾಗೋರರ ಮಾತನ್ನು ಅನುಮೋದಿಸಿ, ಈ ರೀತಿ ಅಭಿಪ್ರಾಯಪಡುತ್ತಾರೆ: “`ವಾಲ್ಮೀಕಿ’ ಎಂಬುದು ಒಂದು ಸಂಕೇತ; ಹುತ್ತಗಟ್ಟಿಕೊಂಡ ಚಿತ್ತದ ಸಂಕೇತ. `ವಾಲ್ಮೀಕಿ’ ಕೂತಲ್ಲೇ ಹುತ್ತ ಬೆಳೆಯಿತು ಎಂದರೆ, ಅದು ಆ ವ್ಯಕ್ತಿತ್ವದ ಏಕಾಗ್ರತೆಯ ಸ್ಥಿರತೆಯ ಸಂಕೇತ. ಇಂಥ ಏಕಾಗ್ರತೆಯಿಲ್ಲದೆ ರಾಮಾಯಣದಂತಹ ಮಹಾಕೃತಿ ರಚನೆಯಾಗುವುದು ಸಾಧ್ಯವಿಲ್ಲ. ಹಾಗೆಯೇ `ವ್ಯಾಸ’ ಎಂದರೆ ವಿಸ್ತಾರ; ಮಹಾಭಾರತವನ್ನೂ ಅದರ ವಿಷಯ ವಿಪುಲತೆಯನ್ನೂ ನೋಡಿದರೆ, ಜಗತ್ತಿನಲ್ಲಿ ಏನೆಲ್ಲ ಇದೆಯೋ ಅದೆಲ್ಲವೂ ಮಹಾಭಾರತದಲ್ಲಿ ಇದೆ ಎನ್ನಿಸುತ್ತದೆ. ಹೀಗಾಗಿ ಲೋಕಾನುಭವದ ಸಮಸ್ತವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡ ಸಾಮರ್ಥ್ಯಕ್ಕೆ `ವ್ಯಾಸ’ ಎಂಬುದು ಒಂದು ಸಂಕೇತ. ಅಷ್ಟೇ ಅಲ್ಲ “ಇದೊಂದು (ರಾಮಾಯಣ) ಆರ್ಯ ದ್ರಾವಿಡರ ಸಮರದ ಕಥೆ; ಆರ್ಯರು ದಕ್ಷಿಣ ಭಾರತವನ್ನು ನಿರ್ನಾಮಗೊಳಿಸಲು ಕೈಗೊಂಡ ಸಾಹಸಯಾತ್ರೆ” ಎಂದು ಹೇಳಿದ ವಿದ್ವಾಂಸರೂ ಇದ್ದಾರೆ. ಇನ್ನು “ರಾಮಾಯಣದ ಕಥೆ ತುಂಬಾ ಚಿಕ್ಕದು ಜೊತೆಗೆ ಅದು ಸರಳವಾದ ಕತೆ ಹಾಗೂ ಅದರಲ್ಲಿ ಭಾವೋದ್ರೇಕಕಾರಿಯಾದದ್ದು ಏನೂ ಇಲ್ಲ” ಎನ್ನುವ ಅಂಬೇಡ್ಕರ್, “ಈ ಕಥೆಯಲ್ಲಿ ರಾಮನನ್ನು ಆರಾಧಿಸಲು ಪ್ರೇರೇಪಿಸುವಂಥ ಯಾವ ಅಂಶಗಳೂ ಕಾಣವು. ಅವನೊಬ್ಬ ಕರ್ತವ್ಯಪಾಲಕ ಮಗ ಅಷ್ಟೇ.” ಎಂದು ಹೇಳಿ ಭಾವನೆಗಳಿಗೆ ಧಕ್ಕೆ ಯಾಗುವ ಅಂಶಗಳನ್ನೇ ನಿರಾಕರಿಸುತ್ತಾರೆ.

ಮಹಾಭಾರತದ ಬಗ್ಗೆಯೂ ಅದರ ರಚನೆ, ಗಾತ್ರ, ಪ್ರಕ್ಷೇಪಗಳು, ಅದು ಪ್ರತಿಪಾದಿಸುವ ಮೌಲ್ಯಗಳು ಇವುಗಳನ್ನು ಕುರಿತು ಈ ರೀತಿಯ ಅನೇಕ ವಿವಾದಗಳು, ಗೊಂದಲಗಳು ಇವೆ. ಒಂದೆರಡನ್ನು  ಪ್ರಸ್ತಾಪಿಸುವುದಾದರೆ ಅದರ ರಚನೆಯ ಕಾಲ ಮತ್ತು ರಾಮಾಯಣ ಮತ್ತು ಮಹಾಭಾರತ ಇವುಗಳ ಗಾತ್ರಗಳ ಬಗ್ಗೆ ಇರುವ ಗೊಂದಲವನ್ನು ನೋಡಬಹುದು. ಆರಂಭದಲ್ಲಿ ಕೇವಲ ಎಂಟು ಸಾವಿರ ಶ್ಲೋಕಗಳಿದ್ದ `ಜಯ’ ಎಂಬ ಕೃತಿ ಅನೇಕ ಕಾಲಘಟ್ಟಗಳಲ್ಲಿ ಅನೇಕರು ಸೇರಿಸಿದ ಶ್ಲೋಕಗಳಿಂದಾಗಿ ಇಂದು ಒಂದು ಲಕ್ಷ ಶ್ಲೋಕಗಳ ಗಾತ್ರ ಮುಟ್ಟಿದೆಯಂತೆ! ರಾಮಾಯಣ ಮತ್ತು ಮಹಾಭಾರತ ಇವುಗಳಲ್ಲಿ ಯಾವುದು ಮೊದಲು ರಚಿತವಾಯಿತು ಯಾವುದು ಅನಂತರ ರಚಿತವಾಯಿತು ಮತ್ತು ಯಾವುದು ಚಿಕ್ಕದು ಯಾವುದು ದೊಡ್ಡದು ಎಂಬುದರ ಬಗ್ಗೆ ಕೂಡ ವಿದ್ವಾಂಸರಲ್ಲಿ ಸ್ಪಷ್ಟತೆ ಇಲ್ಲ. ಈ ಬಗ್ಗೆ ಇರುವ ಹತ್ತು ಹಲವು ಗೊಂದಲಮಯ ಹೇಳಿಕೆಗಳನ್ನೂ ಆಧಾರಗಳನ್ನೂ ಆಳವಾಗಿ ಅಧ್ಯಯನ ನಡೆಸಿದ ಕನ್ನಡದ ಹಿರಿಯ ವಿದ್ವಾಂಸರಾದ ಡಾ. ಎ. ಆರ್. ಕೃಷ್ಣಶಾಸ್ತ್ರೀ ಅವರು “ರಾಮನ ಕಥೆ ಪ್ರಾಚೀನವಾದದ್ದು. ಆದರೆ ‘ರಾಮಾಯಣ’ವು ಮಾತ್ರ `ಭಾರತವು’ ಹುಟ್ಟಿ `ಮಹಾಭಾರತ’ವಾಗಿ ಬೆಳೆಯುತ್ತಿದ್ದ ಕಾಲದಲ್ಲಿ ಮಧ್ಯೆ ಯಾವಾಗಲೋ ಹುಟ್ಟಿರಬೇಕೆಂದೂ ರಾಮಾಯಣವು ಹುಟ್ಟಿದ ಮೇಲೆ ಭಾರತದ ಬೆಳವಣಿಗೆ ಮುಗಿದು ಅದು ಇಂದಿನ ರೂಪವನ್ನು ತಾಳಿತೆಂದೂ ಸಾಧಾರಣವಾಗಿ ಎಲ್ಲರೂ ಒಪ್ಪುತ್ತಾರೆ. ಆದ್ದರಿಂದ ರಾಮಾಯಣಕ್ಕಿಂತ ಭಾರತ ಹಳೆಯದು. ಭಾರತಕ್ಕಿಂತ ರಾಮಾಯಣ ಹಳೆಯದು” ಎಂದು ತಮಾಸೆ ಎನಿಸಬಹುದಾದ ಆದರೆ ವಾಸ್ತವದ ಅಭಿಪ್ರಾಯವನ್ನು ಬರೆಯುತ್ತಾರೆ.

ಇನ್ನು ಅದು ಪ್ರತಿಪಾದಿಸುವ ಮೌಲ್ಯದ ಬಗ್ಗೆ ಇರುವ ಒಂದು ಅಭಿಪ್ರಾಯವನ್ನು ನೋಡುವುದಾದರೆ, ಅದರ ಪಾತ್ರವೊಂದರ ಬಗ್ಗೆ ಸ್ವತಂತ್ರೋತ್ತರ ಭಾರತದ ಮಹಾನ್ ಚಿಂತಕ ಡಾ. ರಾಮ ಮನೋಹರ್ ಲೋಹಿಯಾ ಮಾಡುವ ಕಠಿಣ ವಿಮರ್ಶೆಯ ಈ ಮಾತುಗಳನ್ನು ನೋಡಬಹುದು: “ಕೃಷ್ಣ ಕಳ್ಳನಾಗಿದ್ದ, ಸುಳ್ಳುಗಾರನಾಗಿದ್ದ, ಕೊಲೆಗಾರನಾಗಿದ್ದ. ಇವುಗಳನ್ನೂ ಇನ್ನಿತರ ಪಾತಕಗಳನ್ನೂ, ಕಿಂಚತ್ ಪಶ್ಚಾತ್ತಾಪವೂ ಇಲ್ಲದೇ ಮಾಡಿದ. ತನ್ನ ಸಾಕು ತಾಯಿಯಲ್ಲಿ ಬೆಣ್ಣೆ ಕದಿಯುವುದರಿಂದ ಪ್ರಾರಂಭಿಸಿ ಮತ್ತೊಬ್ಬನ ಹೆಂಡತಿಯನ್ನು ಕದಿಯುವ ಹಂತಕ್ಕೆ ಏರಿದ.”

ಮಹಾನ್ ವಿದ್ವಾಂಸರುಗಳ ನಡುವೆಯೇ ಇಷ್ಟೊಂದು ಗೊಂದಲಗಳು ಸಂದೇಹಗಳು ಅವುಗಳ ಮೌಲ್ಯಗಳ ಬಗ್ಗೆ ಪರಸ್ಪರ ವಿರುದ್ಧಾಭಿಪ್ರಾಯಗಳು, ಇರುವ ಇಂತಹ ಪ್ರಾಚೀನ ಕೃತಿಗಳ ಬಗ್ಗೆ ಈಗಿನ ಯಾವುದೇ ವಿದ್ವಾಂಸರು ಹೇಗೆ ತಾನೆ ಒಂದೇ ರೀತಿಯ ಯಾರಿಗೂ ಬೇಸರವಾಗದಂತಹ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಿದೆ ಎಂಬುದು ಅರ್ಥವಾಗುತ್ತಿಲ್ಲ. ಘಂಟಿ ಹೇಳಿದ ಮಾತು ಲೋಹಿಯಾ ಮಾತಿಗಿಂತ ಉಗ್ರವಾಗಿರುವಂತೆ ಏನೂ ಕಾಣುವುದಿಲ್ಲ.

ಮೂರನೆಯ ಮತ್ತು ಕೊನೆಯ ಪ್ರಶ್ನೆ ಸಾಂಸ್ಕೃತಿಕ ಪಠ್ಯವೊಂದನ್ನು ಧಾರ್ಮಿಕ ಭಾವನೆಗಳ ಪರೀಧಿಯಲ್ಲಿ ವಿಶ್ಲೇಷಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು. ಇತ್ತೀಚಿನ ದಿನಗಳ ವಿದ್ಯಮಾನಗಳನ್ನು ನೋಡಿದರೆ ನಾವು ಸಂವಿಧಾನವು ನಮಗೆ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ವಿಶ್ಲೇಷಿಸಿಕೊಳ್ಳುವಲ್ಲಿ ಎಡವಿದ್ದೇವೆಯೇನೋ ಎನಿಸುತ್ತಿದೆ. ಒಂದು ಉದಾಹರಣೆಯ ಮೂಲಕ ಇದನ್ನು ನಾವು ವಿಸ್ತರಿಸಿಕೊಳ್ಳಬಹುದು: ಉದಾಹರಣೆಗೆ ಒಬ್ಬ ವ್ಯಕ್ತಿ ಯಾವುದೋ ಸಾರ್ವಜನಿಕ ಸ್ಥಳದಲ್ಲಿರುವ ಅವನ ಖಾಸಗೀ ಆಸ್ತಿಯಲ್ಲದ ಒಂದು ದೇವರ ಮೂರ್ತಿಯನ್ನು `ಪೂಜಿಸುತ್ತಾನೆ’ ಎಂದಿಟ್ಟುಕೊಳ್ಳೋಣ. ಇನ್ನೊಬ್ಬ ಯಾರೋ ಆ ಮೂರ್ತಿಯ ಮೇಲೆ `ಕಾಲಿಡುತ್ತಾನೆ’, ಎಂದಿಟ್ಟುಕೊಳ್ಳೋಣ. ಆಗ ಮೂರ್ತಿಯನ್ನು ಪೂಜಿಸುತ್ತಿದ್ದವನು ಸಾಮಾನ್ಯವಾಗಿ `ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಯಿತು’ ಎಂದು ನ್ಯಾಯಾಲಯದ ಮೆಟ್ಟಿಲೇರಿದರೆ ಏನಾಗಬಹುದು ಎಂಬುದು ನಮಗೆ ಗೊತ್ತಿದೆ. ಬಹುತೇಕವಾಗಿ ಅವನ ಅಹವಾಲು ಮಾನ್ಯಮಾಡಲ್ಪಡುತ್ತದೆ. ಬಹುಶಃ ಮೂರ್ತಿಯನ್ನು ಈ ರೀತಿ `ಅಪಮಾನ’ ಮಾಡಿದ್ದಕ್ಕಾಗಿ ಅವನ ಎದುರು ಪಾರ್ಟಿಗೆ ಅಂದರೆ `ಕಾಲಿಟ್ಟವನಿಗೆ’ ಶಿಕ್ಷೆಯಾದರೂ ಆಗಬಹುದು.

ಆದರೆ “ಇಂತಹ ಮೂರ್ತಿಯನ್ನು ಪೂಜೆ ಮಾಡುವುದರಿಂದ ಮೂಡನಂಬಿಕೆ ಬೆಳೆಯುತ್ತದೆ; ದೇವರ ಮೇಲೆ ಗೌರವ ಹೆಚ್ಚಾಗಿ ಮನುಷ್ಯನ ಮೇಲೆ ಗೌರವ ಕಡಿಮೆಯಾಗುತ್ತದೆ. ಹೀಗಾಗಿ ‘ಪೂಜೆಮಾಡುವುದರಿಂದ ನನ್ನ ಭಾವನೆಗಳಿಗೆ ಧಕ್ಕೆಯಾಯಿತು’ ಎಂದು ಹೀಗೆ ಆ ಮೂರ್ತಿಯನ್ನು `ಪೂಜಿಸುವವನ’ ವಿರುದ್ಧ ಕಾಲಲ್ಲಿ ತುಳಿಯುವವನು ನ್ಯಾಯಾಲಯದ ಮೆಟ್ಟಿಲನ್ನು ಏರಿದರೆ ತೀರ್ಪು ಏನೆಂದು ಬರಬಹುದು?  ಗೊತ್ತಿಲ್ಲ. ಯಾರೂ ಹೀಗೆ ನ್ಯಾಯಾಲಯದ ಮೊರೆಹೋಗಿದ್ದು ನನ್ನ ಗಮನಕ್ಕೆ ಬಂದಿಲ್ಲ. ಅಂಥದ್ದೇನಾದರೂ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದರೆ “ಆ ಮೂರ್ತಿ ನಿಮ್ಮೊಬ್ಬರಲ್ಲಿ ಯಾರ ಖಾಸಗೀ ಆಸ್ತಿಯೂ ಅಲ್ಲ. ಪೂಜೆಮಾಡುವವರು ಪೂಜೆ ಮಾಡಿ; ತುಳಿಯುವವರು ತುಳಿಯಿರಿ’ ಅದು ನಿಮ್ಮ ನಿಮ್ಮ ಸ್ವಾತಂತ್ಯ. ನಿಮ್ಮ ನಿಮ್ಮ ಸ್ವಾತಂತ್ರ್ಯವನ್ನು ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಿ ಅಷ್ಟೇ” ಎಂಬ ತೀರ್ಪು ಬರಬೇಕು ಎಂಬುದು ನಮ್ಮಂಥವರ ಅಪೇಕ್ಷೆ. ಏಕೆಂದರೆ `ಪೂಜ್ಯ’ಕ್ಕೂ `ತ್ಯಾಜ್ಯ’ಕ್ಕೂ ಸಮಾನವಾದ ಮಾನ್ಯತೆ ಇದ್ದಾಗ ಮಾತ್ರ `ಸ್ವಾತಂತ್ರ್ಯ’ ಎಂಬುದಕ್ಕೆ ಅರ್ಥ ಬರುತ್ತದೆ.

ಹೀಗೆ ಸಂವಿಧಾನ ನಮಗೆ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ನೇರವಾಗಿ ಧಾರ್ಮಿಕ ಸಂಗತಿಗಳಲ್ಲಿಯೇ ಸರಿಯಾಗಿ ಬಳಸಿಕೊಳ್ಳುವಲ್ಲಿ ಎಡವುತ್ತಿರುವ ನಾವು ಈ ಸ್ವಾತಂತ್ರ್ಯವನ್ನು ರಾಮಾಯಣ ಮಹಾಭಾರತಗಳಂತಹ ಸಾಹಿತ್ಯ ಕೃತಿಗಳಿಗೆ ತಗಲುಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಆಲೋಚಿಸಬೇಕು. ಈ ಬಗ್ಗೆ ಕುವೆಂಪು ಅವರ ಇನ್ನೊಂದು ಉಲ್ಲೇಖವನ್ನು ಕೊಡುವುದಾದರೆ ರಾಮಾಯಣದಲ್ಲಿನ ಹಿಂಸೆಯೂ ಸೇರಿದಂತೆ ಅನೇಕ ಸಂಗತಿಗಳನ್ನು ಒಪ್ಪದೇ ಅವೆಲ್ಲವನ್ನೂ ಬದಲಿಸುವ ಸಂಕಲ್ಪಮಾಡಿ ಹೊಸದಾದ ರಾಮಾಯಣವನ್ನು ಬರೆಯುವ ಸಂಕಲ್ಪ ಮಾಡುವ ಮೊದಲು ಅವರು ಕೂಡ ವಾಲ್ಮೀಕಿ ರಾಮಾಯಣವನ್ನು ಬಹಳ ಮೆಚ್ಚಿಕೊಂಡಿದ್ದರು. ಅದರಲ್ಲಿರುವ ಹಿಂಸೆ ಮತ್ತು ಕ್ರೌರ್ಯವನ್ನು ಗುರುತಿಸದೇ ಅದರ ರಸಮಾಧುರ್ಯಕ್ಕೆ ಮಾರುಹೋಗಿದ್ದರು: ಆ ಕಾಲಘಟ್ಟದಲ್ಲಿ ಆ ಕಾವ್ಯವನ್ನು ಕುರಿತು ಹೇಳುವಾಗಲೂ ಅವರು ಅದಕ್ಕೆ ಧಾರ್ಮಿಕತೆಯ ತಳುಕುಹಾಕಲಿಲ್ಲ ಎಂಬುದನ್ನು ನಾವು ಮರೆಯಬಾರದು ``ವಾಲ್ಮೀಕಿಯ ಮಹಾಕೃತಿ ಚರಿತ್ರೆಯಲ್ಲ; ಕಾವ್ಯ; ಆ ಚರಿತ್ರೆ ಕವಿಯ ಚಿದ್ರಂಗದಲ್ಲಿ ನಡೆದದ್ದು’ ಎನ್ನುವ ಅವರು ರಾಮಾಯಣವು ಕೇವಲ ಕವಿಯ ಕಲ್ಪನೆ ಮಾತ್ರ. ಹಾಗಾಗಿ ಅದನ್ನು `ಸಾಹಿತ್ಯ ಕೃತಿ’ಯಾಗಿ ಮಾತ್ರ ನೋಡಬೇಕೆ ಹೊರತು `ಇತಿಹಾಸದ ಪುಸ್ತಕ’ವಾಗಿ ಅಲ್ಲ ಎನ್ನುವ ತಿಳಿವಳಿಕೆಯನ್ನು ನಮಗೆ ನೀಡುತ್ತಾರೆ. ಈ ಬಗ್ಗೆ  ಇನ್ನೂ ಮುಂದುವರೆದು ಮಾತನಾಡುವ ಅವರು ವಾಲ್ಮೀಕಿಯ ಈ ರಾಮಾಯಣವನ್ನು ಕಬ್ಬಿನಕೋಲಿಗೆ ಹೋಲಿಸಿ “ಕಬ್ಬಿನ ಕೋಲಿನಲ್ಲಿ ದೊಣ್ಣೆಯತನ ಇಲ್ಲ ಎಂದಲ್ಲ. ಅದನ್ನು ಎಮ್ಮೆ ಹೊಡೆಯಲಿಕ್ಕೆ ಉಪಯೋಗಿಸಲು ಸಾಧ್ಯವಿಲ್ಲ ಎಂದೂ ಅಲ್ಲ. ಆದರೆ ಕಬ್ಬಿನ ಪ್ರಧಾನೋದ್ದೇಶ ರಸಮಾಧುರ್ಯ. ಅದರ ಮುಖ್ಯ ಸತ್ವವೂ ಅದರ ಸಹಿಯಲ್ಲಿಯೇ ನಿಷ್ಠಿತ. ಬೆಲ್ಲವೇ ಅದರ ಸತ್ಯಸ್ಯ ಸತ್ಯ” ಎನ್ನುತ್ತಾರೆ. ಅವರು ಹೇಳುವಂತೆ ರಾಮಾಯಣ ಮತ್ತು ಮಹಾಭಾರತ ಎಂಬ ಕಬ್ಬಿನ ಕೋಲನ್ನು ನಾವು ಎಮ್ಮೆ ಹೊಡೆಯಲು ಬಳಸಿಕೊಳ್ಳುವ ದಡ್ಡತನಕ್ಕೆ ಇಳಿಯಬಾರದು. ಕುವೆಂಪು ಅವರ ಈ ಅಭಿಪ್ರಾಯವನ್ನು ನಾವು ಒಪ್ಪಿಕೊಳ್ಳುವುದಾದರೆ ಕಾವ್ಯಕೃತಿಯಾದ ರಾಮಾಯಣ, ಮಹಾಭಾರತ ಮಾತ್ರವಲ್ಲ ಯಾವುದೇ ಕೃತಿಯನ್ನು ನಾವು ಸಾಹಿತ್ಯ ಕೃತಿಯಾಗಿ ನೋಡಬೇಕೆ ಹೊರತು ಅದಕ್ಕೆ `ದೈವತ್ವ’ವನ್ನು ಆರೋಪಿಸಿ ರಂಪಮಾಡಬಾರದು.

ಕೊನೆಯ ಮಾತು: ನ್ಯಾಯಾಲಯದ ತೀರ್ವು ತಾಂತ್ರಿಕವಾಗಿ ಏನೋ ಆಗಬಹುದು ಅದು ಬೇರೆ ವಿಷಯ. ತಾತ್ವಿಕವಾಗಿ ನೋಡುವುದಾದರೆ ವಿಶ್ವಕವಿ ರವೀಂದ್ರನಾಥ ಟ್ಯಾಗೋರರು ಇನ್ನೊಂದು ಕಡೆ, ಈ ರಾಮಾಯಣ ಮತ್ತು ಮಹಾಭಾರತ ಕೃತಿಗಳಲ್ಲಿ ಬರುವ ಮಾತುಗಳನ್ನು ಕುರಿತು ಅವು ಒಬ್ಬ ವ್ಯಕ್ತಿಯ ಅಥವಾ ಒಂದು ಕಾಲಘಟ್ಟದ ಜನರ ಮಾತುಗಳಾಗಿರದೇ “ಒಂದು ಪರಂಪರೆಯ ಮಾತುಗಳು” ಎಂಬ ಬಹುಮುಖ್ಯವಾದ ಮಾತನ್ನು ಹೇಳುತ್ತಾರೆ. ಟ್ಯಾಗೋರರ ಈ ಮಾತಿನ ಚುಂಗನ್ನು ಹಿಡಿದೆಳೆದು ಮಾತನ್ನು ಮುಂದುವರಿಸಿ ಹೇಳಬಹುದಾದರೆ, ಮಲ್ಲಿಕಾ ಘಂಟಿ ಅವರು ಆಡಿದ ಮಾತು ಕೂಡ ಅವರೊಬ್ಬರ ಮಾತಲ್ಲ; ಅದೂ ಕೂಡ ಈ `ಪರಂಪರೆಯ ಮಾತೇ’. ಆ ಮಾತು ತಾಂತ್ರಿಕವಾಗಿ ಘಂಟಿಯವರ ಗಂಟಲಿನಿಂದ ಘಂಟಾಘೋಷವಾಗಿ ಹೊರಬಂದದ್ದು ನಿಜವಾದರೂ ಅದು ಅವರೊಬ್ಬರ ಮಾತಲ್ಲ; ಬದಲಾಗಿ ಅದು ನಮ್ಮ `ಪರಂಪರೆಯ ಪಿಸುಮಾತು’.  ಅದು ಇಡೀ ಭಾರತೀಯ ಸಾಹಿತ್ಯ ಪರಂಪರೆ ಮತ್ತು ಅದರ ಭಾಗವಾದ ಕನ್ನಡ ಸಾಹಿತ್ಯ ಪರಂಪರೆ ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದಲ್ಲಿ ರೂಢಿಸಿಕೊಂಡ ವೈಚಾರಿಕತೆಯ ಪರಿಣಾಮವಾಗಿ ರೂಪುಗೊಂಡ ಸಾಮೂಹದ ಒಮ್ಮಾತು. ಹಾಗಾಗಿ ಈ ಮಾತಿನ ಹೊಣೆಗಾರಿಕೆ ಘಂಟಿಯವರದ್ದು ಮಾತ್ರವಲ್ಲ; ಇಡೀ ಪರಂಪರೆಯದ್ದು; ಅದನ್ನು ಪ್ರತಿನಿಧಿಸುವ ಎಲ್ಲರದ್ದು!
********
ಡಾ. ರಾಜೇಂದ್ರ ಬುರಡಿಕಟ್ಟಿ

14-10-2017  

No comments:

Post a Comment