Thursday, October 26, 2017

ಇಬ್ಬರು ಗಾಂಧಿಗಳಿಂದ ನೆಗ್ಗಿ ಮುರುಟಿದ ಬದುಕು

ಇಬ್ಬರು ಗಾಂಧಿಗಳಿಂದ ನೆಗ್ಗಿ ಮುರುಟಿದ ಬದುಕು

ಅಕ್ಟೋಬರ್ ತಿಂಗಳು ವಸಾಹತು ಮತ್ತು ವಸಾಹತೋತ್ತರ ಭಾರತದ ಮೂವರು ಮಹಾನ್ ನಾಯಕರು ಹುಟ್ಟಿದ ತಿಂಗಳು. ಈ ಮೂವರಲ್ಲಿ ಮಹಾತ್ಮಾ ಗಾಂಧಿ ಹುಟ್ಟಿದ ದಿನ ರಾಷ್ಟ್ರೀಯ ಹಬ್ಬವಾಗಿ ಆಚರಿಸಲ್ಪಡುವುದರಿಂದ ಖ್ಯಾತವಾಗಿದೆ. ಗಾಂಧಿಯವರಷ್ಟಲ್ಲದಿದ್ದರೂ ತಮ್ಮ ಸರಳ ಸಜ್ಜನಿಕೆಯಿಂದ ಖ್ಯಾತರಾಗಿದ್ದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜನ್ಮದಿನವೂ ಗಾಂಧಿಯ ಜನ್ಮದಿನದಂದೇ ಬರುವುದರಿಂದ ಅದು ಗಾಂಧಿಜಯಂತಿಯಲ್ಲಿ ಒಂದರ್ಥದಲ್ಲಿ ಲೀನವಾಗಿಬಿಟ್ಟಿದೆ. ಬಹಳ ದಿನಗಳಿಂದ ನಾವು ಸಾರ್ವಜನಿಕವಾಗಿ ಆಚರಿಸಿಕೊಂಡು ಬರುತ್ತಿದ್ದ `ಗಾಂಧಿಜಯಂತಿ’ ಇತ್ತೀಚಿನ ದಿನಗಳಲ್ಲಿ `ಗಾಂಧಿ-ಶಾಸ್ತ್ರೀ ಜಯಂತಿ’ ಎಂದು ಹೆಸರು ಬದಲಿಸಿಕೊಂಡಿರುವುದು ನಿಜವಾದರೂ ಶಾಸ್ತ್ರೀಯವರಿಗೆ ಸಿಗಬೇಕಾದ ಮಾನ್ಯತೆ ಆಧ್ಯತೆಗಳು ಸಿಗುತ್ತಿಲ್ಲವೆಂದೇ ಹೇಳಬೇಕು. ಅಂದು ಮಾತನಾಡುವ ಭಾಷಣಕಾರರೆಲ್ಲ ಗಾಂಧಿಯವರ ಬಗ್ಗೆ ಮಾತಾಡಿಯಾದ ಮೇಲೆ ನೆನಪಾದರೆ ಶಾಸ್ತ್ರೀಯವರ ಬಗ್ಗೆಯೂ ಕೊನೆಯಲ್ಲಿ ಸಮಾರೋಪದ ರೀತಿಯಲ್ಲಿ ಒಂದೆರಡು ಮಾತುಗಳನ್ನು ಸೇರಿಸಿ ಹೇಳಿ ಮಾತು ಮುಗಿಸುವುದನ್ನೂ ಇನ್ನು ಕೆಲವರು ಗಾಂಧಿ ಬಗ್ಗೆ ಮಾತಾಡುತ್ತಾ ಮಾತಾಡುತ್ತಾ ಕೊನೆಯಲ್ಲಿ ಶಾಸ್ತ್ರೀಯವರ ಹೆಸರನ್ನು ಪ್ರಸ್ತಾಪಿಸುವುದನ್ನೇ ಮರೆತು ಭಾಷಣ ಮುಗಿಸಿ, ಕೊನೆಗೆ ನೆನಪಾಗಿ ಏನೋ ಅಪರಾಧ ಮಾಡಿದವರಂತೆ ಕೈಕೈ ಹಿಚುಕಿಕೊಳ್ಳುವುದನ್ನೂ ನೋಡಿದರೆ ಇದು ಸ್ಪಷ್ಟವಾಗುತ್ತದೆ.
ಇದೇ ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದ ಇನ್ನೊಬ್ಬ ಮಹಾನ್ ನಾಯಕ `ಆಗಸ್ಟ್ ಕ್ರಾಂತಿಯ ವೀರ’ `ಲೋಕನಾಯಕ’ ಎಂಬ ಅಭಿಧಾನಗಳಿಗೆ ಪಾತ್ರವಾಗಿರುವ ಜೆಪಿ ಎಂದೇ ಪ್ರಖ್ಯಾತರಾದ ಜಯಪ್ರಕಾಶ್ ನಾರಾಯಣ ಅವರು. ಗಾಂಧೀಜಿಯ ಕೊಲೆಯ ನಂತರ ಅವರ ಸರ್ವೋದಯ ತಾತ್ವಿಕತೆ ಬಹುಕಾಲ ಸಾಯದಂತೆ ನೋಡಿಕೊಂಡ ಹಿರಿಮೆ ಜೆಪಿಯವರಿಗೆ ಸಲ್ಲುತ್ತದೆ. ಗಾಂಧೀಜಿಯ `ಗ್ರಾಮಸ್ವರಾಜ್ಯ’ ಕಲ್ಪನೆಯ ಮುಂದುವರೆದ ಭಾಗವಾಗಿ ಅವರು ಪ್ರತಿಪಾದಿಸಿದ `ಸಂಪೂರ್ಣಕ್ರಾಂತಿ’ ಆಧುನಿಕ ಭಾರತದ ಸಮಾಜೋರಾಜಕೀಯ ಇತಿಹಾಸದಲ್ಲಿ ಬಹುಮುಖ್ಯವಾದ ಅಧ್ಯಾಯವೇ ಆಗಿದೆ. ಅಕ್ಟೋಬರ್ ಹನ್ನೊಂದು ಅವರ ಜನ್ಮದಿನ. 1902ರಲ್ಲಿ ಹುಟ್ಟಿದ್ದ ಅವರು ಬದುಕಿದ್ದರೆ ಅವರಿಗೆ ಈಗ ನೂರಾ ಹದಿನೈದು ವರ್ಷಗಳಾಗುತ್ತಿತ್ತು. ಅಕ್ಟೋಬರ್ ಅವರು ತೀರಿಕೊಂಡ ತಿಂಗಳು ಕೂಡ ಹೌದು. 1979ರ ಅಕ್ಟೋಬರ್ ಏಳರಂದು ನಮ್ಮನ್ನಗಲಿದ ಜೆಪಿ ಒಟ್ಟು ಬದುಕಿದ್ದು ಒಟ್ಟು ಎಪ್ಪತ್ತೇಳು ವರ್ಷಗಳು. ನಮ್ಮ ಕುವೆಂಪು ಕಾರಂತರ ಸಮಕಾಲೀನರಾಗಿದ್ದ ಜೆಪಿ, ಕಾರಂತರು ಹುಟ್ಟಿದ ವರ್ಷವೇ ಹುಟ್ಟಿದವರು ಕೂಡ.
ಗಾಂಧೀಜಿ, ಅಂಬೇಡ್ಕರ್, ನೇತಾಜಿ, ಮುಂತಾದ ನಾಯಕರಿಗೆ ಸಿಗದ ಒಂದು ಅವಕಾಶ ಜೆಪಿಯವರಿಗೆ ತಮ್ಮ ಜೀವಿತಾವಧಿಯಲ್ಲಿ ಸಿಕ್ಕಿತು. ಅದೆಂದರೆ ಯಾವ ಸ್ವಾತಂತ್ರ್ಯಕ್ಕಾಗಿ ತಮ್ಮ ಮಾನ ಮತ್ತು ಪ್ರಾಣಹಾನಿಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಗುಂಡಿಗೆ ಗುಂಡಿಗೆಕೊಟ್ಟು ಅವರೆಲ್ಲ ಅಹೋರಾತ್ರಿ ಹೋರಾಡಿದರೋ ಆ ಸ್ವಾತಂತ್ರ್ಯ ಹೇಗಿರುತ್ತದೆ ಎಂದು ಬಹಳ ವರ್ಷ ನೋಡುವ ಅವಕಾಶ ಗಾಂಧಿ ಮುಂತಾದವರಿಗೆ ದೊರೆಯಲಿಲ್ಲ. ಸ್ವಾತಂತ್ರ್ಯ ಸಿಗುವ ಮತ್ತು ಸಿಕ್ಕ ಆಸುಪಾಸಿನ ವರ್ಷಗಳಲ್ಲಿಯೇ ಅವರೆಲ್ಲ ನಮ್ಮನ್ನಗಲಿದರು. ಆದರೆ ಜಯಪ್ರಕಾಶರಿಗೆ ಮಾತ್ರ ಆ ಅವಕಾಶ ಸಿಕ್ಕಿತು. ಅದನ್ನು `ಅವಕಾಶ’ ಎಂದು ಕರೆಯುವುದು ಎಷ್ಟರ ಮಟ್ಟಿಗೆ ಸರಿಯಾಗುತ್ತದೆಯೋ ತಿಳಿಯದು. ಏಕೆಂದರೆ ಒಟ್ಟು ಬದುಕಿದ ಎಪ್ಪತ್ತೇಳು ವರ್ಷಗಳಲ್ಲಿ ಆರಂಭಿಕ ಬಾಲ್ಯ ಸ್ನಾತಕಗಳ ಅವಧಿಯ ಸುಮಾರು ಇಪ್ಪತ್ತೇಳು ವರ್ಷಗಳನ್ನು ಬಿಟ್ಟರೆ ಉಳಿದ ಐವತ್ತು ವರ್ಷಗಳನ್ನು ಜೆಪಿ ಸಾರ್ವಜನಿಕ ಹಿತಕ್ಕಾಗಿಯೇ ಬದುಕಿದರು. ಈ ಐವತ್ತು ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಮೊದಲ ಹದಿನೆಂ ಟು ವರ್ಷಗಳನ್ನು ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವ ಬ್ರಿಟೀಷರ ವಿರುದ್ಧದ ಹೋರಾಟಕ್ಕೆ ಬಳಸಿದರೆ ಉಳಿದ ಮೂವತ್ತೆರಡು ವರ್ಷಗಳನ್ನು ಗಳಿಸಿಕೊಂಡ ಸ್ವಾತಂತ್ರ್ಯವನ್ನು ನಮ್ಮವರಿಂದಲೇ ಉಳಿಸಿಕೊಳ್ಳುವ ಹೋರಾಟಕ್ಕೆ ಬಳಸಿದರು! ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರಿಂದ ಅನುಭವಿಸಿದ್ದಕ್ಕಿಂತ ದೊಡ್ಡಮಟ್ಟದ ಚಿತ್ರಹಿಂಸೆಯನ್ನು ಅನುಭವಿಸಿ ನರಳಿ ನರಳಿ ಅವರು ಪ್ರಾಣಬಿಡಬೇಕಾಯಿತು.
ಬೆಳೆವ ಸಿರಿಯ ಮೊಳಕೆ
ಪ್ರಾಚೀನ ಕಾಲದಿಂದಲೂ ಬಿಹಾರ ಬಹಳಷ್ಟು ಕಾರಣಕ್ಕಾಗಿ ಈ ದೇಶದ ಚರಿತ್ರೆಯಲ್ಲಿ ಗಮನಸೆಳೆಯುವ ಪ್ರದೇಶವಾಗಿ ಗುರುತಿಸಿಕೊಳ್ಳುತ್ತಲೇ ಬಂದಿದೆ. ಪೌರಾಣಿಕ ಅಂಶಗಳನ್ನು ಬಿಟ್ಟು ಕೇವಲ ಐತಿಹಾಸಿಕ ಅಂಶಗಳಿಂದಲೇ ಆರಂಭಿಸುವುದಾದರೂ ಏಷ್ಯಾದ ಬೆಳಕು ಎಂದು ಕರೆಯಲ್ಪಡುವ ಬೌದ್ಧ ಧರ್ಮದ ಸ್ಥಾಪಕ ಗೌತಮ ಬುದ್ಧ, ಜೈನ ಮತಸ್ಥಾಪಕ ಮಹಾವೀರ ಹುಟ್ಟಿದ ನಾಡು. ಭಾರತದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯದ ಕಾರ್ಯಕ್ಷೇತ್ರ. ಅಶೋಕನ ರಾಜಧಾನಿಯಾಗಿ ಮೆರೆದ ಈಗಿನ ಪಾಟ್ನಾ ಅಥವಾ ಆಗಿನ ಪಾಟಲೀಪುತ್ರ. ಸ್ವತಂತ್ರ್ಯಪೂರ್ವ ಮತ್ತು ಸ್ವತಂತ್ರ್ಯೋತ್ತರ ಭಾರತದ ಮಹಾನ್ ಇನ್ನೊಬ್ಬ ಮಹಾನ್ ನಾಯಕ ಡಾ. ರಾಮಮನೋಹರ ಲೋಹಿಯಾ ಇವರ ಜನ್ಮಸ್ಥಳ ಅವುಗಳನ್ನು ಹೆಸರಿಸಬಹುದಾದ ಕೆಲವು ಮುಖ್ಯಸಂಗತಿಗಳು.
ಇಂತಹ ಬಿಹಾರದ ಸರಯೂ ಮತ್ತು ಜಾಹ್ನವಿ ನದಿಗಳ ಮಧ್ಯದ ಸಿತಾಬ್ ದಿಯಾರಾ ಎಂಬ ಹಳ್ಳಿ ಜೆಪಿಯವರ ಹುಟ್ಟೂರು. ಅವರ ತಂದೆ ತಾಯಿಯವರಾದ ಹರಸೂದ್ ಪಾಲ್ ಮತ್ತು ಪೂಲ್ ರಾನಿ ದೇವಿಯವರಿಗೆ ಇವರು ನಾಲ್ಕನೆಯ ಮಗ. ನಾವೆಲ್ಲ ಸಾಮಾನ್ಯ ಜನರು. ನಮ್ಮ ಪೂರ್ವಜರು ಕೊನೆಯ ಪಕ್ಷ ಮನೆಯಲ್ಲಿಯಾದರೂ ಹುಟ್ಟುತ್ತಿದ್ದರು. ನಾವು ಆ ಭಾಗ್ಯವನ್ನೂ ಈಗ ಇಟ್ಟುಕೊಂಡಿಲ್ಲ. ಈಗಿನ ಮಕ್ಕಳೆಲ್ಲ ಆಸ್ಪತ್ರೆಯಲ್ಲಿ ಹುಟ್ಟುವವರು. ಆದರೆ ಲೋಕಕ್ಕೆ ಬೆಳಕಾಗುವ ಬಹಳಷ್ಟು ವ್ಯಕ್ತಿಗಳು ಅನನುಕೂಲಕರ ಪರಿಸ್ಥಿತಿಯಲ್ಲೋ ನಡುಬೀದಿಯಲ್ಲೋ ಹುಟ್ಟುತ್ತಾರೆ! ಕ್ರಿಸ್ತ ಕುರಿಕೊಟ್ಟಿಗೆಯಲ್ಲಿ ಹುಟ್ಟಿದ, ಬುದ್ಧ ಲುಂಬಿನಿವನದಲ್ಲಿ ಮರದ ಕೆಳಗೆ ಹುಟ್ಟಿದ. ಜೆಪಿಯವರು ಕೂಡ ಹುಟ್ಟಿದ್ದು ತಮ್ಮ ಊರಿನಿಂದ ದೂರದಲ್ಲಿ ಅವರ ಪಾಲಕರು ಪ್ಲೇಗ್ ಮಾರಿಯಿಂದ ಮತ್ತು ಜೀವಕಂಟಕವಾಗಿ ಹರಿಯುತ್ತಿದ್ದ ನಮ್ಮೂರಿನ ನದಿಗಳ ಪ್ರವಾಹದಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಹಾಕಿಕೊಂಡಿದ್ದ ತಾತ್ಕಾಲಿಕ ಮನೆ ಎನ್ನಬಹುದಾದ ಡೇರೆಯೊಂದರಲ್ಲಿ. ಹೀಗೆ ಒಂದರ್ಥದಲ್ಲಿ ಇವರೂ ನಡುಬೀದಿಯಲ್ಲಿ ಹುಟ್ಟಿದವರೇ!
ಬಾಲಕ ಜಯಪ್ರಕಾಶ ತಮ್ಮ ಆರಂಭಿಕ ಜೀವನವನ್ನು ತಮ್ಮ ಪರಿಸರದಲ್ಲಿ, ಪಾಟ್ನಾದಲ್ಲಿ ಪೂರೈಸಿದವರು. ಬಾಲ್ಯದಲ್ಲಿಯೇ ಪಶುಪಕ್ಷಿಗಳೊಂದಿಗೆ ಸಂತೋಷದಿಂದ ಕಾಲಕಳೆಯುತ್ತಿದ್ದ ಜೆಪಿ ಮನುಷ್ಯರನ್ನು ಗೌರವಿಸುವುದು ಮಾತ್ರವಲ್ಲ ಸಹಜೀವಿಗಳ ಜೀವನವನ್ನು ಗೌರವಿಸುವ ಕಲೆ ಕೂಡ ಆಗಿನಿಂದಲೇ ರೂಢಿಸಿಕೊಂಡವರು. ಅಂತೆಯೇ ಅನ್ಯಾಯದ ವಿರುದ್ಧ ಪ್ರತಿಭಟಿಸುವುದನ್ನು ಕೂಡ ಅಲ್ಲಿಂದಲೇ ರೂಢಿಸಿಕೊಂಡವರು. ಹಿಂದೂಧರ್ಮದ ಹಬ್ಬದ ದಿನದಿಂಲೇ ತಮ್ಮ ಪರೀಕ್ಷೆಯನ್ನು ಗೊತ್ತುಮಾಡಿದ್ದ ತನ್ನ ಶಾಲೆಯ ಬ್ರಿಟೀಷ್ ಮುಖ್ಯೋಪಾಧ್ಯಾಯನ ಕ್ರಮವನ್ನು ವಿರೋಧಿಸಿ ತನ್ನ ಮಿತ್ರರೊಂದಿಗೆ ಪರೀಕ್ಷೆಯನ್ನೇ ಬಹಿಷ್ಕರಿಸುವ ಎದೆಗಾರಿಕೆಯನ್ನು ತೋರಿದ್ದವರು! ಜಗದೀಶ್ಚಂದ್ರ ಭೋಸ್ ಅವರಂತೆ ವಿಜ್ಞಾನಿಯಾಗಬೇಕೆಂದು ವಿಜ್ಞಾನ ವಿಷಯವನ್ನು ತೆಗೆದುಕೊಂಡು ಅಧ್ಯಯನ ಆರಂಭಿಸಿದರೂ ಅವರು ಆದದ್ದು ಮಾತ್ರ ರಾಜಕೀಯ ಮುತ್ಸದ್ಧಿ ಮತ್ತು ಸಮಾಜಸೇವಕ!
ಅಮೇರಿಕೆಯಲ್ಲಿ ರೂಪುಗೊಂಡ ಹೋರಾಟಗಾರ
ಜೆಪಿಯವರು ಇಂಟರ್ ಮುಗಿಸುತ್ತಿದ್ದಂತೆಯೇ ಅವರಿಗೆ 1922 ರಲ್ಲಿ ಮದುವೆಯಾಗುತ್ತದೆಯಾದರೂ ಅವರು ಹೆಂಡತಿಯನ್ನು ಭಾರತದಲ್ಲಿಯೇ ಬಿಟ್ಟು ಅಮೇರಿಕಕ್ಕೆ ಹೋಗಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾರೆ. ಅಮೇರಿಕೆಯಲ್ಲಿ ಜೆಪಿ ಕಳೆದ ಸುಮಾರು ಏಳು ವರ್ಷಗಳ ಬದುಕು ಅವರನ್ನು ಒಬ್ಬ ಹೋರಾಟಗಾರರನ್ನಾಗಿ ರೂಪಿಸಿತು ಎನ್ನಬಹುದು. ಗಾಂಧಿ ಹೇಗೆ ದಕ್ಷಿಣ ಆಫ್ರಿಕದಲ್ಲಿ ಹೋರಾಟಗಾರರಾಗಿ ರೂಪಿಸಲ್ಪಟ್ಟರೋ ಅದೇ ರೀತಿ ಜೆಪಿ ಅಮೇರಿಕದಲ್ಲಿ ರೂಪಿಸಲ್ಪಟ್ಟರು. ಅವರು ಅಮೇರಿಕೆಗೆ ಹೋಗುವ ಮೊದಲೇ ಹದಿನೆಂಟು ವರ್ಷದ ಯುವಕನಾಗಿದ್ದಾಗಲೇ ಸುಮಾರು 1920ರ ವೇಳೆಗೆ ಗಾಂಧಿ ಸೇರಿದಂತೆ ಭಾರತದ ಬಹುಮುಖ್ಯ ಸ್ವಾತಂತ್ರ್ಯ ಹೋರಾಟಗಾರ ಸಂಪರ್ಕಕ್ಕೆ ಬಂದು, ಅಸಹಾಕರ ಚಳುವಳಿಯ ತೀವ್ರತೆಯ ಆ ಕಾಲದಲ್ಲಿ ಮೌಲಾನ್ ಅಬ್ದುಲ್ ಕಲಾಮ್ ಮತ್ತು ನೆಹರೂ ಅವರ ಭಾಷಣಗಳನ್ನು ಆಲಿಸಿ ತೀವ್ರವಾಗಿ ರಾಷ್ಟ್ರಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಲು ನಿರ್ಧರಿಸಿ, ಮುಂಬರುವ ಇಂಟರ್ ಮಿಡಿಯೇಟ್ ಪರೀಕ್ಷೆಯನ್ನು ಲೆಕ್ಕಿಸಿದೇ ಕಾಲೇಜ್ ತೊರೆದು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡದ್ದೂ ಚೌರಿಚೌರಾ ಘಟನೆಯ ಹಿನ್ನಲೆಯಲ್ಲಿ ಗಾಂಧೀಜಿ ಅಸಹಾಕಾರ ಚಳುವಳಿಯನ್ನು ಹಿಂತೆಗೆದುಕೊಂಡಾಗ ಮುಂದೇನು ಮಾಡಬೇಕೆಂದು ತೋರದೆ ಹೀಗೆ ರಾಷ್ಟ್ರಭಕ್ತರಿಗಾಗಿಯೇ ಇದ್ದ ಬಿಹಾರ ವಿದ್ಯಾಪೀಠವನ್ನು ಸೇರಿ ಇಂಟರ್ ಮುಂದುವರೆಸಿ ಪಾಸಾಗಿದ್ದೂ ಮುಂತಾದ ಘಟನೆಗಳು ಅವರಲ್ಲಿ ಹೋರಾಟದ ಬೀಜಗಳನ್ನು ಬಿತ್ತಿದ್ದವು ನಿಜ. ಆದರೆ ಆ ಬೀಜಗಳು ಮೊಳಕೆಯೊಡೆದು ಎಳೆಯ ಸಸಿಯಾಗಿ ನಳನಳಿಸಿ ಅವರು ಭಾರತಕ್ಕೆ ಬರುವ ವೇಳೆಗೆ ಒಂದಿಷ್ಟು ಗಡುಸಾದ ಗಿಡಗಳಾಗಿ ಪ್ರತಿರೋಧವನ್ನು ತಡೆದುಕೊಲ್ಳುವಂತೆ ಆದದ್ದು ಮಾತ್ರ ಅಮೇರಿಕದಲ್ಲಿಯೇ ಎನ್ನಬೇಕು.

ಸ್ವಭಾವತಃ ಸ್ವಾಭಿಮಾನಿಯಾಗಿದ್ದ ಜೆಪಿ ತಮ್ಮ ವಿದ್ಯಾಭ್ಯಾಸದ ಖರ್ಚಿಗೆ ಯಾರಲ್ಲಿಯೂ ಕೈಯೊಡ್ಡದೇ ಅಮೇರಿಕದಲ್ಲಿದ್ದ ಏಳು ವರ್ಷಗಳೂ ಅಲ್ಲಿನ ತೋಟಗಳಲ್ಲಿ ಅಲ್ಲಿನ ಕೂಲಿಕಾರರ ಜೊತೆ ಕಷ್ಟಪಟ್ಟು ದುಡಿದರು. ಹೀಗೆ ತನ್ನ ದುಡಿಮೆಯಿಂದ ವಿಶ್ವವಿದ್ಯಾಲಯದ ಶುಲ್ಕವನ್ನು ಹೇಗೋ ನಿಭಾಯಿಸುತ್ತಿದ್ದ ಜೆಪಿ ಒಮ್ಮೆ ತಾನು ಓದುತ್ತಿದ್ದ ವಿವಿಯು ಶುಲ್ಕವನ್ನು ದುಪ್ಪಟ್ಟುಮಾಡಿದಾಗ ಅದನ್ನು ಭರಿಸಲು ಸಾಧ್ಯವೇ ಇಲ್ಲದಂತಾಗಿ ಕಡಿಮೆ ಶುಲ್ಕವಿರುವ ವಿಶ್ವವಿದ್ಯಾಲಯವನ್ನು ಹುಡುಕಿ ಅಲ್ಲಿಗೆ ವರ್ಗಾವಣೆಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬ ಅಂಶವನ್ನು ಗಮನಿಸಿದರೆ ಅವರ ಆಗಿನ ಆರ್ಥಿಕ ಸ್ಥಿತಿ ಹೇಗಿತ್ತು ಎಂಬುದು ನಮಗೆ ಅರ್ಥವಾಗುತ್ತದೆ. ಈ ದುಡಿಮ ಅವರಿಗೆ ಹಣಕಾಸಿನ ನೆರವನ್ನು ನೀಡಿದ್ದು ಸಣ್ಣ ಲಾಭವಾದರೆ, ದುಡಿವ ವರ್ಗವಾದ ತಳಸಮುದಾಯ ಜನರೊಂದಿಗೆ ಬೆರೆಯುವ ಅವಕಾಶವನ್ನು ಮಾಡಿಕೊಟ್ಟು ಅವರ ಕಷ್ಟಕಾರ್ಪಣ್ಯಗಳನ್ನು ಬಲು ಹತ್ತಿರದಿಂದ ಕಂಡುಕೊಂಡು ಅವರ ಕಷ್ಞಗಳಿಗೆ ಸ್ಪಂದಿಸುವ ಗುಣವನ್ನು ಕಲಿಸಿಕೊಟ್ಟದ್ದು ಅವರಿಗೆ ದೊರೆತ ದೊಡ್ಡ ಲಾಭವಾಯಿತು. ಆ ಕಾಲಘಟ್ಟದಲ್ಲಿ ಉಂಟಾದ ಅಮೇರಿಕೆಯ ಕಾರ್ಮಿಕ ಚಳುವಳಿ ಅದಕ್ಕೆ ಪ್ರೇರಣೆಯಾದ ಮಾರ್ಕ್ಸ್ ವಾದ ಅವರ ವ್ಯಕ್ತಿತ್ವವನ್ನು ಬಹುವಾಗಿ ಪ್ರಭಾವಿಸಿದವು. ಮಾರ್ಕ್ಸ್ ವಾದದ `ಡಿಗ್ನಿಟಿ ಆಫ್ ಲೇಬರ್’ (ಶ್ರಮಗೌರವ) ತತ್ವವೇ ಬಹುಶಃ ಅವರನ್ನು ಗ್ಯಾರೇಜಿನಲ್ಲಿ ಮೆಕಾನಿಕ್ ಆಗಿ, ಹೊಟೆಲ್ಲಿನಲ್ಲಿ ಪರಿಚಾರಕನಾಗಿ ಅಷ್ಟೇ ಏಕೆ ಬೂಟ್ ಪಾಲೀಸ್ ಮಾಡುವ ಕೆಲಸವನ್ನು ಕೂಡ ಗೌರವದಿಂದಲೇ ಮಾಡಲು ಹಚ್ಚಿತು!
ಹೋರಾಟದ ಮೊದಲ ಘಟ್ಟ : ಹೊರಗಿನವರೊಂದಿಗೆ
1929ರಲ್ಲಿ ಭಾರತಕ್ಕೆ ಬರುವ ವೇಳೆಗಾಗಲೇ ಜೆಪಿ ಸ್ಪಷ್ಟವಾಗಿ ಒಬ್ಬ ರಾಷ್ಟ್ರಸೇವೆಗೆ ಸಿದ್ಧವಾದ ಹೋರಾಟಗಾರರಾಗಿ ರೂಪುಗೊಂಡಿದ್ದರು. ಅಮೇರಿಕೆಯಿಂದ ರಷ್ಯಾಕ್ಕೆ ಹೋಗಿ ಮಾರ್ಕ್ಸ್ ವಾದದ ಬಗ್ಗೆ ಆಳವಾಗಿ ಅಧ್ಯಯನ ಮಾಡಬೇಕು ಎಂಬ ಆಸೆಯಿದ್ದರೂ ತಾಯಿಯ ಅನಾರೋಗ್ಯ ಮತ್ತಿತರ ಕಾರಣಗಳಿಗಾಗಿ ಭಾರತಕ್ಕೆ ಮರಳಿಬಂದ ಜೆಪಿ ರಾಷ್ಟ್ರೀಯ ಚಳುವಳಿಯಲ್ಲಿ ನೇರವಾಗಿ ಧುಮಿಕಿದರು. `ಪೂರ್ಣಸ್ವರಾಜ್ಯ’ವನ್ನು ಘೋಷಿಸಿದ 1929ರ ಲಾಹೋರ್ ಕಾಂಗ್ರೇಸ್ ಅಧಿವೇಶನದಲ್ಲಿ ಅನೇಕ ರಾಷ್ಟ್ರೀಯ ಹೋರಾಟಗಾರರ ಮಾತು ಕೇಳಿದ ಜೆಪಿ ತನ್ನ ಮುಂದಿನ ದಾರಿ ದೇಶಸೇವೆಯೇ ಎಂದು ಸ್ಪಷ್ಟವಾಗಿ ನಿರ್ಧರಿಸುತ್ತಾರೆ. ಗಾಂಧೀಜಿಯವರು ಖುದ್ಧಾಗಿ ಜೆಪಿಯವರನ್ನು ನೆಹರೂ ಅವರಿಗೆ ಪರಿಚಯಿಸಿಕೊಟ್ಟದ್ದು ಇದೇ ಅಧಿವೇಶನದಲ್ಲಿ.
ದೇಶಸೇವೆ ಮಾಡುವುದೇನೋ ಸರಿ. ಅದನ್ನು ಬರಿಹೊಟ್ಟೆಯಲ್ಲಿ ಮಾಡಲಾದೀತೆ? ತಂದೆಗೆ ಪಾರ್ಶ್ವವಾಯು ಬಡಿದು ಇಡೀ ಕುಟುಂಬ ಆರ್ಥಿಕ ದುಸ್ಥಿತಿಗೆ ತಲುಪಿದಾಗ ಜೆಪಿ ಅನ್ನದ ಮಾರ್ಗವನ್ನೂ ಹುಡುಕುವುದು ಅನಿವಾರ್ಯವಾಗುತ್ತದೆ. ಜೆಪಿಯ ಕಷ್ಟವನ್ನು ನೋಡಿದ ಗಾಂಧಿ ಬಿರ್ಲಾಗೆ ಪತ್ರಬರೆದು ಜೆಪಿಗೆ ಅವರ ಕಾಲೇಜಿನಲ್ಲಿ ಯಾವುದಾದರೊಂದು ಕೆಲಸವನ್ನು ಕೊಡುವಂತೆ ಕೇಳಿಕೊಳ್ಳುತ್ತಾರೆ. ಜೆಪಿಯಂಥ ಕ್ರಾಂತಿಕಾರಿಗೆ ಕೆಲಸಕೊಡುವುದು ಅಂದರೆ ಸರ್ಕಾರದ ವಿರೋಧವನ್ನು ಕಟ್ಟಿಕೊಳ್ಳುವುದು ಎಂದರ್ಥ. ಬಿರ್ಲಾಗೆ ಇದು ನುಂಗಲಾರದ ಬಿಸಿತುಪ್ಪವಾಗುತ್ತದೆ. ಕೆಲಸ ಕೊಡದಿದ್ದರೆ ಗಾಂಧಿಗೆ ಬೇಸರವಾಗುತ್ತದೆ; ಕೊಟ್ಟರೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಕೊನೆಗೆ ಬಿರ್ಲಾ ಜೆಪಿಯವರನ್ನು ತಮ್ಮ ಕಾರ್ಯದರ್ಶಿಯಾಗಿ ನೇಮಿಸಿಕೊಳ್ಳುತ್ತಾರೆಯಾದರೂ ಅಮೇರಿಕೆಯಲ್ಲಿ ತಳಸಮುದಾಯದ ದುಡಿವ ವರ್ಗದ ಮಧ್ಯೆ ಹೋರಾಟಗಾರರಾಗಿ ಬೆಳೆದ ಜೆಪಿ ಬಿರ್ಲಾರಂಥ ಬಂಡವಾಳಶಾಹಿಯಲ್ಲಿ ಕೆಲಸಮಾಡಲು ಹೇಗೆತಾನೆ ಸಾಧ್ಯವಾಗುತ್ತದೆ? ಒಂದು ವರ್ಷವೂ ಅವರಿಗೆ ಈ ವಾತಾವರಣದಲ್ಲಿ ಮುಂದುವರೆಯಲು ಸಾಧ್ಯವಾಗದೇ ಆ ಕೆಲಸವನ್ನೂ ಬಿಡುತ್ತಾರೆ.
ನೆಹರೂ ಅವರೊಂದಿಗೆ ಕೆಲಸಕ್ಕೆ ತೊಡಗಿದ ಮಹಾಮುತ್ಸದ್ಧಿಯಾಗಿದ್ದ ಜೆಪಿ ಸ್ವಾತಂತ್ರ್ಯಪೂರ್ವ ಕಾಲಘಟ್ಟದಲ್ಲಿ ಕಾಂಗ್ರೆಸ್ ನ `ಥಿಂಕ್ ಟ್ಯಾಂಕ್’ ಆಗಿ ಕೆಲಸ ಮಾಡಿದರು. ನೆಹರು ಅವರನ್ನು ಬ್ರಿಟೀಷ್ ಸರ್ಕಾರ ದಸ್ತಗಿರಿ ಮಾಡುವ ಸಂದರ್ಭದಲ್ಲಿ ಅವರಲ್ಲಿದ್ದ ಪ್ರಮುಖ ಕಾಗದಪತ್ರಗಳನ್ನು ತೆಗೆದುಕೊಂಡು ಸರೋಜಿನಿ ನಾಯ್ಡು ಅವರಿಗೆ ತಲುಪಿಸಿದ್ದಕ್ಕೋ ಏನೋ ಬ್ರಿಟೀಷ್ ಸರ್ಕಾರ ಜೆಪಿಯವರನ್ನೂ ದಸ್ತಗಿರಿಮಾಡಿಬಿಡುತ್ತದೆಯಾದರೂ ಈ ಬಂಧನ ಜೆಪಿಯವರ ಪಾಲಿಗೆ ವರದಾನವೇ ಆಯಿತೇನೋ. ಕಾರಾಗೃಹದಲ್ಲಿ ಅಚ್ಯುತ ಪಟವರ್ಧನ್ ಸೇರಿದಂತೆ ಹತ್ತು ಹಲವು ರಾಷ್ಟ್ರೀಯ ನಾಯಕರ ನಿಕಟಸಂಪರ್ಕ ಇದರಿಂದ ಸಾಧ್ಯವಾಗಿ ಮುಂದೊಂದು ದಿನ ಭಾರತದ ರಾಜಕಾರಣದಲ್ಲಿ ಸಮಾಜವಾದಿ ಅಲೆ ಬೀಸಲು ಕಾರಣವಾಗುತ್ತದೆ.
ಸ್ವತಂತ್ರ್ಯಚಳುವಳಿಯ ಇತಿಹಾಸದಲ್ಲಿ ಗಾಂಧಿಯ ವ್ಯಕ್ತಿತ್ವದ ಘನತೆಗೆ ಧಕ್ಕೆ ತಂದ ಬಹುಮುಖ್ಯ ಘಟನೆ 1939ರ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ. ಆ ಚುನಾವಣೆಯಲ್ಲಿ ನೇರ ಸ್ಪರ್ಧೆಯಲ್ಲಿದ್ದವರು ಪಟ್ಟಾಭಿ ಸೀತಾರಾಮಯ್ಯ ಮತ್ತು ನೇತಾಜಿ ಸುಭಾಶ್ಚಂದ್ರ ಭೋಸ್. ಗಾಂಧೀಜಿ ಪಟ್ಟಾಭಿಯವರಿಗೆ ಬೆಂಬಲ ಘೋಷಿಸಿದರು. ಉಳಿದ ಅನೇಕ ಮುಖಂಡರು ಗಾಂಧಿಯನ್ನು ಅನುಸರಿಸಿದರು. ನೇತಾಜಿ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸಿದರು. ಗಾಂಧೀಜಿಗೆ ಅವಮಾನವಾಗುವಂತೆ ಫಲಿತಾಂಶ ಬಂದು ಸುಭಾಶ್ಚಂದ್ರ ಭೋಸ್ ಆಯ್ಕೆಯಾದರು. ಇಂತಹ ಸಂದರ್ಭದಲ್ಲಿ ಗಾಂಧೀಜಿ ತೆಳೆದ ನಿಲುವು ಅವರ ವ್ಯಕ್ತಿತ್ವಕ್ಕೆ ಕುಂದು ತರುವಂತೆ ಮಾಡಿತು. ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆಯಾದ ಸುಭಾಶ್ಚಂದ್ರರಿಗೆ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಲು ಸಹಕಾರ ಕೊಡುವುದನ್ನು ಬಿಟ್ಟು ಅನೇಕ ಸದಸ್ಯರನ್ನು ರಾಜಿನಾಮೆ ಕೊಡಲು ಗಾಂಧಿ ಪ್ರಚೋದಿಸುತ್ತಾರೆ. ಗಾಂಧಿಯ ಈ ವರ್ತನೆಯಿಂದ ಬೇಸತ್ತು ಗೆದ್ದರೂ ಅಧ್ಯಕ್ಷರಾಗಿ ಮುಂದುವರೆಯಲು ಇಚ್ಚಿಸದ ನೇತಾಜಿ ಕೊನೆಗೆ ರಾಜಿನಾಮೆ ನೀಡಿ ತಮ್ಮದೇ ಆದ ಹೊಸ ಸಂಘಟನೆ ಕಟ್ಟಿ ಹೋರಾಟ ಮುಂದುವರೆಸುತ್ತಾರೆ. ಈ ಚುನಾವಣೆಯಲ್ಲಿ ಈ ದುರಂತ ಸಂಭವಿಸದಂತೆ ಜೆಪಿ ಪಟ್ಟಾಭಿ ಮತ್ತು ನೇತಾಜಿ ಮಧ್ಯೆ ಸಂಧಾನ ಏರ್ಪಡಿಸಲು ಬಹಳಷ್ಟು ಪ್ರಯತ್ನಮಾಡುತ್ತಾರಾದರೂ ಬಹುಶಃ ಗಾಂಧಿಯ ಕಾರಣಕ್ಕೆ ಅದು ಸಫಲವಾಗುವುದಿಲ್ಲ. ಗಾಂಧಿಯ ಬಗ್ಗೆ ಅಪಾರ ಗೌರವವಿದ್ದರೂ ಅವರು ಈ ಸಂದರ್ಭದಲ್ಲಿ ನಡೆದುಕೊಂಡ ರೀತಿ ಜೆಪಿಯವರಿಗೆ ಸರಿಕಾಣಲಿಲ್ಲ.
`ಮಾಡು ಇಲ್ಲವೇ ಮಡಿ’ ಎಂಬ ಘೋಷಣೆಯೊಂದಿಗೆ ಗಾಂಧೀಜಿಯ ನೇತೃತ್ವದಲ್ಲಿ 1942ರಲ್ಲಿ ಆರಂಭವಾದ `ಕ್ವಿಟ್ ಇಂಡಿಯಾ ಚಳುವಳಿ’ ಜೆಪಿಯವರನ್ನು ಭಾರತದ ಅಗ್ರಗಣ್ಯನಾಯಕನನ್ನಾಗಿ ರೂಪಿಸಿದ ಚಳುವಳಿ. ಈ ಚಳುವಳಿ ಆರಂಭವಾಗುವ ಒಂದು ವರ್ಷ ಮೊದಲೆ ವಿದ್ಯಾರ್ಥಿಗಳನ್ನು ಪ್ರಭುತ್ವದ ವಿರುದ್ಧ ಹುರುದುಂಬಿಸಿದರು ಎಂಬ ಕಾರಣದಿಂದ ಅವರನ್ನು ಸರ್ಕಾರ ಬಂಧಿಸಿ ಸೆರೆಯಲ್ಲಿಟ್ಟಿರುತ್ತದೆ. ಇಷ್ಟೊಂದು ದೊಡ್ಡ ಚಳುವಳಿ ನಡೆಯುತ್ತಿರುವಾಗ ಸೆರೆಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ಈ ವ್ಯಕ್ತಿಗೆ ಸಾಧ್ಯವಾಗುವುದಾದರು ಹೇಗೆ? ಸರಿ, ಧೈರ್ಯಮಾಡಿ ತನ್ನ ಜೊತೆ ನಾಲ್ಕೈದು ಸ್ನೇಹಿತರೊಂದಿಗೆ ಸೆರೆಮನೆಯ ಗೋಡೆಹಾರಿ ತಪ್ಪಿಸಿಕೊಂಡೇ ಬಿಟ್ಟರು. ವೇಷಮರೆಸಿಕೊಂಡು ಚಳುವಳಿಯಲ್ಲಿ ಪಾಲ್ಗೊಂಡರು. ಈ ಚಳುವಳಿಯಲ್ಲಿ ಗಾಂಧಿಯ ದಸ್ತಗಿರಿಯಾದಾಗ, ಡಾ. ರಾಮಮನೋಹರ ಲೋಹಿಯಾ, ಅಚ್ಯುತ ಪಟವರ್ಧನ್, ಕಮಲಾದೇವಿ ಚಟುಪಾಧ್ಯಾಯ ಮುಂತಾದವರು ಚಳುವಳಿಯನ್ನು ಮುನ್ನಡೆಸುತ್ತಿದ್ದರು. ಆ ಕಡೆ ಸಿಂಗಪುರದಿಂದಲೇ ನೇತಾಜಿ ಹೋರಾಟಕ್ಕೆ ಪ್ರಚೋದನೆ ನೀಡುತ್ತಿದ್ದರು.
ಈ ಹೋರಾಟದಲ್ಲಿ ಪಾಲ್ಗೊಂಡ ಜೆಪಿ ಹೋರಾಟ ಸಾಕಷ್ಟು ಉಗ್ರವಾಗುವಂತೆ ನೋಡಿಕೊಂಡರು. ಇವರ ತಪ್ಪಿಸಿಕೊಳ್ಳುವಿಕೆಯಿಂದ ಸಿಟ್ಟಿಗೆದ್ದ ಸರ್ಕಾರ ಇವರ ಸುಳಿವು ನೀಡಿದವರಿಗೆ ಆರಂಭದಲ್ಲಿ ಹಣದ ಬಹುಮಾನ ಕೊಡಲು ಘೋಷಣೆಮಾಡಿತ್ತು. ಕೊನೆಗೆ ಬಹಳದಿನ ಸಿಗದೇ ಇದ್ದಾಗ ಇನ್ನೂ ರೊಚ್ಚಿಗೆದ್ದು ಇವರ ವಿರುದ್ಧ `ಕಂಡಲ್ಲಿ ಗುಂಡಿಕ್ಕು’(Shoot at Sight) ಆದೇಶವನ್ನೇ ಹರಡಿಸಿಬಿಟ್ಟಿತು! ಕಾಶ್ಮೀರದಲ್ಲಿ ಉಗ್ರ ಚಳುವಳಿ ನಡೆಸಿ ಪಂಜಾಬಿನ ಕಡೆ ಬರುತ್ತಿದ್ದಾಗ ಕೊನೆಗೂ ಸರ್ಕಾರ 1943ರಲ್ಲಿ ಜೆಪಿಯವರನ್ನು ಮತ್ತೆ ಹಿಡಿಯುವಲ್ಲಿ ಯಶಸ್ವಿಯಾಗಿಬಿಡುತ್ತದೆ. ಮತ್ತೆ ಮೂರುವರ್ಷ ಸೆರೆವಾಸ, ಅಲ್ಲಿ ನೀಡಿದ ವಿಚಿತ್ರ ಹಿಂಸೆಯೆಲ್ಲವನ್ನೂ ಅನುಭವಿಸಿ ದೇಶ ಸ್ವಾತಂತ್ರ್ಯ ಪಡೆಯುವ ಹಿಂದಿನ ವರ್ಷ ಅಂದರೆ 1946ರಲ್ಲಿ ಬಿಡುಗಡೆಯಾಗುತ್ತಾರೆ. ಅವರ ಮೇಲೆ ಕೊಲೆ ಆರೋಪ ಹೊರಿಸಿ ಮೊಕದ್ದಮೆ ಹೂಡುವ ಸಂಚನ್ನು ಸರ್ಕಾರ ಮಾಡುತ್ತದೆಯಾದರೂ ಜೆಪಿಯವರಿಗಿದ್ದ ಜನಪ್ರಿಯತೆ ಮತ್ತು ಅದರಿಂದ ಎದುರಿಸಬೇಕಾದ ಪ್ರತಿರೋಧಕ್ಕೆ ಹೆದರಿ ಆ ಸಾಹಸಕ್ಕೆ ಕೈಹಾಕದೆ ಬಿಡುಗಡೆಮಾಡಿಬಿಡುತ್ತದೆ. ಅವರು ಜೈಲಿನಿಂದ ಬಿಡುಗಡೆಯಾದ ಈ ಸಂದರ್ಭಕ್ಕೇ ಅವರು `ಆಗಸ್ಟ್ ಕ್ರಾಂತಿಯ ವೀರ’ ಎನಿಸಿ ರಾಷ್ಟ್ರದ ಅಗ್ರಪಂಕ್ತಿಯ ನಾಯಕನ ಸ್ಥಾನಕ್ಕೆ ಏರಿದರು.
ಹೋರಾಟದ ಎರಡನೇ ಘಟ್ಟ: ಒಳಗಿನವರೊಂದಿಗೆ
ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ ಜೆಪಿಯವರ ಹೋರಾಟದ ಎರಡನೆಯ ಘಟ್ಟ ಪ್ರಾರಂಭವಾಗುತ್ತದೆ. ಸ್ವಾತಂತ್ರ್ಯ ದೊರೆಯುವ ವೇಳೆಗೆ ಗಾಂಧೀಜಿಯೇ ಮೂಲೆಗುಂಪಾಗುವ ಸ್ಥಿತಿ ನಿರ್ಮಾಣವಾಗಿತ್ತು. ಗಾಂಧಿ ಸೂಚಿಸಿದರೂ ನೆಹರೂ ಬಿಡುಗಡೆಮಾಡಿದ ಹೊಸಮಂತ್ರಿಮಂಡಳದ ಪಟ್ಟಿಯಲ್ಲಿ ಜೆಪಿಯ ಹೆಸರು ಸೇರಲಿಲ್ಲ! ಹೀಗೆ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಸಕಲವನ್ನೂ ಸಮರ್ಪಿಸಿ ದುಡಿದಿದ್ದ ಒಂದು ಕಾಲಘಟ್ಟದಲ್ಲಿ ಕಾಂಗ್ರೆಸ್ ನ `ಬುದ್ಧಿಕುಂಡ’ವೇ ಆಗಿದ್ದ ಜೆಪಿಯವರ ಅಪಾರ ಅನುಭವವನ್ನು ಸ್ವತಂತ್ರ ಭಾರತ ಪಡೆಯುವಲ್ಲಿ ವಿಫಲವಾಯಿತು. ಇದರಿಂದ ಜೆಪಿ ಬಹಳ ಬೇಸರಮಾಡಿಕೊಳ್ಳಲಿಲ್ಲ. ಅವರು ಗಾಂಧೀಜಿಯ ದಾರಿಯನ್ನೇ ತುಳಿದರು. ಅಧಿಕಾರಕ್ಕೆ ಆಸೆಪಡೆಯದೇ ಸರ್ವೋದಯ ಸಾಧಿಸಲೆಂದು ವಿನೋಬಾ ಭಾವೆ ಆರಂಭಿಸಿದ್ದ ಭೂದಾನ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆಸ್ತಿಗಳ ಮರುಹಂಚಿಕೆಯ ಮಹತ್ಕಾರ್ಯವನ್ನು ಮಾಡಿದರು.
ನೆಹರು ನೇತೃತ್ವದಲ್ಲಿ ಬಂದ ಹೊಸ ಸರ್ಕಾರ ಗಾಂಧಿಮಾರ್ಗದಿಂದ ಬಹುದೂರ ಸರಿಯಿತು. ಗಾಂಧೀಜಿಯವರ ಗ್ರಾಮಸ್ವರಾಜ್ಯ ಕಲ್ಪನೆ ಹಳ್ಳಹಿಡಿಯಿತು. ಬಂಡವಾಳಶಾಹಿಗಳು ಅಧಿಕಾರದ ಪರೋಕ್ಷ ಆಡಳಿತ ಸೂತ್ರಹಿಡಿದರು. ಸಮಾಜವಾದ ಹಿನ್ನಡೆಗೆ ಸರಿದು ಬಂಡವಾಳಶಾಹಿ ವ್ಯವಸ್ಥೆ ಪ್ರಬಲವಾಯಿತು. ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಕಡಿಮೆಯಾಗುವ ಬದಲು ಹೆಚ್ಚಾಗುತ್ತಾ ನಡೆಯಿತು. ಶ್ರೀಮಂತರು ಮತ್ತಷ್ಟು ಶ್ರೀಮಂತರಾದರು. ಬಡವರು ಮತ್ತಷ್ಟು ಬಡವರಾದರು. “ಸ್ವತಂತ್ರ ಭಾರತದಲ್ಲಿ ಅಧಿಕಾರ ಎನ್ನುವುದು ದಗಾಕೋರರ, ಠಕ್ಕರ ಹಾಗೂ ನಿರಂಕುಶ ದರೋಡೆಕೋರರ ಕೈಗೆ ಹೋಗುತ್ತದೆ. ಗಾಳಿಯೊಂದನ್ನು ಬಿಟ್ಟರೆ ತುಂಡು ಬ್ರೆಡ್ಡಾಗಲೀ, ಸೀಸೆ ನೀರಾಗಲೀ ತೆರಿಗೆಯಿಂದ ತಪ್ಪಿಸಿಕೊಳ್ಳುವುದಿಲ್ಲ ತಮ್ಮತಮ್ಮೊಳಗಿನ ಕಾದಾಟದಿಂದ ಅವರು ಭವ್ಯ ಭಾರತವನ್ನು ಕಳೆದುಕೊಳ್ಳುತ್ತಾರೆ” ಎಂದು ಸ್ವಾತಂತ್ರ್ಯ ಗಳಿಸಿಕೊಳ್ಳುವಾಗ ಅದನ್ನು ಬಹಳ ವಿರೋಧಿಸಿದ್ದ ಬ್ರಿಟೀಷ್ ಪ್ರಧಾನಿ ಚರ್ಚಿಲ್ ಹೇಳಿದ ಮಾತ್ರ ಸಂಪೂರ್ಣ ಸುಳ್ಳಾಗಲಿಲ್ಲ. ಇಂತಹ ಸ್ಥಿತಿಯನ್ನು ನೋಡಲು ಗಾಂಧೀಜಿಯೇನೋ ಕಣ್ಣುಮುಚ್ಚಿದ್ದರು. ಆದರೆ ಜೆಪಿ ಬದುಕಿದ್ದರು. ಸರ್ಕಾರ ದಾರಿತಪ್ಪುವುದನ್ನು ತಪ್ಪಿಸಲು ಸರ್ಕಾರಕ್ಕೆ ಅನೇಕಬಾರಿ ಅವರು ಪತ್ರಬರೆದರು. ಸುಧಾರಣೆಗೆ ಸಲಹೆ ನೀಡಿದರು. ಆದರೆ ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಯಾರುತಾನೆ ಇದ್ದರು?
ಹಾಗಂತ ಜೆಪಿ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಸುಮಾರು ಹದಿನೆಂಟು ವರ್ಷ ಬ್ರಿಟೀಷ್ ಸರ್ಕಾರದ ವಿರುದ್ಧ ಸ್ವಾತಂತ್ರ್ಯ ಗಳಿಸಿಕೊಳ್ಳಲು ಪ್ರಬಲ ಹೋರಾಟನ್ನು ಮಾಡಿದ್ದ ಅವರು ಈಗ ಪಡೆದ ಸ್ವಾತಂತ್ರ್ಯವನ್ನು ನಮ್ಮವರಿಂದಲೇ ಉಳಿಸಿಕೊಳ್ಳಲು ಶ್ರೀಸಾಮಾನ್ಯನ ಉದ್ಧಾರವನ್ನು ಉಸಿರಾಗಿಟ್ಟುಕೊಂಡು ಎರಡನೇ ಹಂತದ ಹೋರಾಟವನ್ನು ಆರಂಭಿಸಿದರು. ಹೋರಾಟದ ಹಾದಿಯಲ್ಲಿ `ಸರ್ವೋದಯ’ದ ಈ ವೀರನಿಗೆ ತನ್ನ ರಾಜ್ಯದವರೇ ಆದ `ಸಮಾಜವಾದಿ’ ಲೋಹಿಯಾ ಜೊತೆಯಾದರು. `ಪ್ರಜಾಸಮಾಜವಾದಿ ಪಕ್ಷ’ ಸ್ಥಾಪನೆಯಾಯಿತು. ಬಿಹಾರ ಭಾಗದಲ್ಲಿ ಹಳ್ಳಿಹಳ್ಳಿಗೆ ಸಂಚರಿಸಿ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದ, ಮತ್ತು ನೆಹರು ಆಡಳಿತಕ್ಕೆ ಸೆಡ್ಡುಹೊಡೆಯುವ ಹಂತಕ್ಕೆ ಪ್ರಜಾಸಮಾಜವಾದಿ ಪಕ್ಷ ಬೆಳೆಯ ತೊಡಗಿದಾಗ ಸಹಜವಾಗಿಯೇ ‘ಒಳಹಾಕಿಕೊಳ್ಳುವ’ ಪ್ರಯತ್ನಗಳೂ ಆರಂಭವಾದವು. 1947ರಲ್ಲಿ ಗಾಂಧಿ ಹೇಳಿದರೂ `ಅವರಿಗಿಂತಲೂ ಹಿರಿಯರಿದ್ದಾರಲ್ಲ’ ಎಂಬ ಕಾರಣ ನೀಡಿ ಜೆಪಿಯವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳದಿದ್ದ ನೆಹರು ಈಗ ಪ್ರಜಾಸಮಾಜವಾದಿ ಪಕ್ಷವನ್ನು ಕಾಂಗ್ರೆಸ್ ನೊಂದಿಗೆ ಸಹಕಾರ ಕೊಡುವಂತೆ ಕೇಳಿಕೊಂಡು ತಮ್ಮೊಡನೆ ಸಚಿವಸಂಪುಟ ಸೇರಿಕೊಳ್ಳಲು ಕೇಳಿಕೊಳ್ಳುತ್ತಾರೆ. ಆದರೆ ಅಧಿಕಾರಕ್ಕೆ ಎಂದೂ ಆಸೆಪಡದ ಜೆಪಿ ಭಾರತದ ಬಡವರ ಉದ್ಧಾರ, ಹಳ್ಳಿಗಳ ಉದ್ಧಾರ ಮಾಡುವಂತಹ ಕೆಲವು ಕನಿಷ್ಠ ಕಾರ್ಯಕ್ರಮಗಳನ್ನು ಸರ್ಕಾರ ಒಪ್ಪಿಕೊಳ್ಳುವುದಾದರೆ ಸರ್ಕಾರ ಸೇರುವುದಾಗಿ ಷರತ್ತು ಹಾಕುತ್ತಾರೆ. ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಇಷ್ಟವಿಲ್ಲದ ನೆಹರೂ ಸರ್ಕಾರ ಇದಕ್ಕೆ ಒಪ್ಪಲಿಲ್ಲ; ಜೆಪಿ ಸರ್ಕಾರ ಸೇರಲಿಲ್ಲ! ಹೋರಾಟ ಮುಂದುವರಿಯಿತು.
ಜೆಪಿಯವರ ಸ್ವತಂತ್ರ ಉಳಿಸಿಕೊಳ್ಳುವ ಹೋರಾಟ ನಡೆದದ್ದು ಮುಖ್ಯವಾಗಿ ಇಬ್ಬರು ಪ್ರಧಾನಿಗಳ ಆಡಳಿತದಲ್ಲಿ. ಮೊದಲನೆಯವರು ನೆಹರೂ. ಈ ಕಾಲಘಟ್ಟದ ನಂತರ ಅವರ ಹೋರಾಟ ನಡೆದದ್ದು ಅವರ ಮಗಳ ಕಾಲದಲ್ಲಿ. ಇವೆರಡಕ್ಕೂ ಹೋಲಿಸಿದಲ್ಲಿ ಅವರು ಅತ್ಯಂತ ಹಿಂಸೆ ಅನುಭವಿಸಿದ್ದು ಅಪ್ಪನಿಗಿಂತ ಮಗಳ ಕಾಲದಲ್ಲಿಯೇ ಎನ್ನಬೇಕು. ಸಾಮಾನ್ಯ ಜನರ ಹಿತಾಸಕ್ತಿ ಕಾಪಾಡುವ ವಿಷಯದಲ್ಲಿ ಸರ್ಕಾರ ವಿಫಲವಾದಾಗ ಅದನ್ನು ಕೈಗೆತ್ತಿಕೊಂಡು ಹೋರಾಟವನ್ನು ತೀವ್ರಗೊಳಿಸಿದ ಜೆಪಿಯ ಹೋರಾಟ ನೆಹರೂ ಕಾಲಘಟ್ಟಕ್ಕಿಂತ ಅವರ ಮಗಳ ಕಾಲದಲ್ಲಿ ಸಹಜವಾಗಿಯೇ ತೀವ್ರವಾಯಿತು. ಇದಕ್ಕೆ ಕಾರಣ ಅಪ್ಪನಿಗಿಂತ ಮಗಳ ಆಡಳಿತ ಜನರಿಂದ ಹೆಚ್ಚು ದೂರವಾದದ್ದು. ಜನರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ತಾವೇ ಮುಂದಾಗಬೇಕು ಎಂದು ಕರೆನೀಡಿದ ಜೆಪಿ. ನಿರುದ್ಯೋಗ, ಬೆಲೆಏರಿಕೆ, ಭ್ರಷ್ಟಾಚಾರ, ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಮುಂತಾದ ಮಹತ್ವದ ವಿಷಯಗಳನ್ನು ಇಟ್ಟುಕೊಂಡು ಹೋರಾಟ ಮುಂದುವರೆಸಿದರು. ಇವೆಲ್ಲವುಗಳಲ್ಲಿನ ಸುಧಾರಣೆಗಳನ್ನೊಳಗೊಂಡ `ಸಂಪೂರ್ಣಕ್ರಾಂತಿ’ಯನ್ನು ಘೋಷಿಸಿ ಆಡಳಿತಕ್ಕೆ ಸವಾಲಾದರು.
ತುರ್ತುಪರಿಸ್ಥಿಯ ಚಿತ್ರಹಿಂಸೆ
1975 ಜೂನ್ 25 ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಕಪ್ಪು ಅಧ್ಯಾಯ ಪ್ರಾರಂಭವಾದ ದಿನ. ದೇಶಾದ್ಯಂತ ಜೆಪಿ ನೇತೃತ್ವದಲ್ಲಿ ಪ್ರಬಲಗೊಳ್ಳುತ್ತಿದ್ದ ಜನಪರ ಚಳುವಳಿ, ಗುಜರಾತ್ ಚುನಾವಣೆಯ್ಲಲಿ ಜನತಾರಂಗದ ಎದುರು ಕಾಂಗ್ರೆಸ್ ಸೋಲು, ತನ್ನ ಆಯ್ಕೆಯನ್ನೇ ಅಸಿಂಧು ಗೊಳಿಸಿದ ಅಲಹಾಬಾದ್ ಹೈಕೋರ್ಟ್ ತೀರ್ಪು ಈ ಮೂರು ಕಾರಣಗಳಿಂದ ಕಂಗಾಲಾದ ಇಂದಿರಾಗಾಂಧಿ ಇಡೀ ದೇಶಾದ್ಯಂತ ತುರ್ತುಪರಿಸ್ಥಿತಿಯನ್ನು ಘೋಷಿಸಿ ನಾಗರಿಕ ಹಕ್ಕುಗಳ ದಮನಕ್ಕೆ ನಾಂದಿಹಾಡಿದ ದಿನವದು. ಆಗ ಜೆಪಿ, ಅಧ್ವಾನಿ, ವಾಜಪೇಯಿ, ಸೇರಿದಂತೆ ಅನೇಕ ವಿರೋಧಿ ಪಕ್ಷಗಳ ನಾಯಕರು, ಇಂದಿರಾಗಾಂಧಿಯವರ ಈ ದೌರ್ಜನ್ಯವನ್ನು ಟೀಕಿಸಿದ ಕಾಂಗ್ರೆಸ್ಸಿನ ನಾಯಕರೂ ಸೇರಿದಂತೆ ಸುಮಾರು ಲಕ್ಷಕ್ಕೂ ಹೆಚ್ಚು ಜನರನ್ನು ಬಂಧಿಸಿ ಸೆರೆಮನೆಗೆ ತಳ್ಳಲಾಯಿತು. ನಾಗರಿಕರ ಮೂಲಭೂತ ಹಕ್ಕುಗಳನ್ನು ನಿಷ್ಕ್ರೀಯಗೊಳಿಸಲಾಯಿತು. ಪತ್ರಿಕಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಯಿತು. ಈ ಕ್ರಮವನ್ನು ವಿರೋಧಿಸಿ ದೇಶಾದ್ಯಂತ ಹೋರಾಟ ಬುಗಿಲೆದ್ದಿತು.
ಕರ್ನಾಟಕ ಪ್ರದೇಶದಲ್ಲಿಯೂ ಇದರ ಪರಿಣಾಮವಾಗಿ ಎಚ್.ಡಿ.ದೇವೇಗೌಡ ಸೇರಿದಂತೆ ಹಲವರು ಬಂಧಿಸಲ್ಪಟ್ಟರು. ಹಿರಿಯ ಗಾಂಧಿವಾದಿ ಎಚ್.ಎಸ್. ದೊರೆಸ್ವಾಮಿ ಸೇರಿದಂತೆ ಹಲವರು ಇಂದಿರಾಗಾಂಧಿಗೆ ಪತ್ರ ಬರೆದು ಈ ಅಮಾನವೀಯ ಕ್ರಮವನ್ನು ಹಿಂತೆಗೆದುಕೊಳ್ಳಲು ಆಗ್ರಹಿಸಿದರು. ಹಿರಿಯ ಸಾಹಿತಿ ಡಾ. ಕೆ. ಶಿವರಾಮ ಕಾರಂತ ತಮ್ಮ ಪದ್ಮಭೂಷಣ ಪ್ರಶಸ್ತಿಯನ್ನು ಪ್ರತಿಭಟನಾ ಸೂಚಕವಾಗಿ ಹಿಂತಿರುಗಿಸಿದರು. ಸಾಹಿತಿ ಚಂದ್ರಶೇಖರ ಪಾಟೀಲ (ಚಂಪಾ) ಬಂಧನಕ್ಕೊಳಗಾಗಿ ಜೈಲು ಸೇರಿದರು. (ಮುಂದಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ತೀವ್ರಗೊಂಡ ದಲಿತ ಬಂಡಾಯ ಸಾಹಿತ್ಯ ಚಳುವಳಿ ಈ ಸರ್ವಾಧಿಕಾರ ಧೋರಣೆಗೆ ತೀವ್ರವಾಗಿ ಪ್ರತಿಕ್ರಿಯಿಸಿತು. `ತುರ್ತು ಪರಿಸ್ಥಿತಿಯ ಕರಾಳ ರಾಣಿಯ ಕಥೆಯನ್ನ ಹೇಳ್ತೀವಿ’ ಎಂಬ ಸಿದ್ಧಲಿಂಗಯ್ಯನವರ ಒಂದು ಹಾಡು ಇಡೀ ಕರ್ನಾಟಕದ ಬೀದಿಬೀದಿಗಳಲ್ಲಿ ಮೊಳಗಿತು.)
ಜೆಪಿಯ ಪಾಲಿಗೆ ತುರ್ತು ಪರಿಸ್ಥಿತಿ ಯಮಯಾತನೆಯಾಯಿತು. ತುರ್ತುಪರಿಸ್ಥಿತಿ ಘೋಷಣೆಯಾದ ಮರುದಿನವೇ ಬಂಧಿಸಲ್ಪಟ್ಟ ಜೆಪಿಯವರನ್ನು ಇಂದಿರಾಗಾಂಧಿ ಸರ್ಕಾರ 1975ರ ಡಿಸೆಂಬರ್ 4 ರವರೆಗೆ ಸೆರೆಮನೆಯಲ್ಲಿಟ್ಟು ಚಿತ್ರಹಿಂಸೆಯನ್ನು ಕೊಟ್ಟಿತು. ಜಯಪ್ರಕಾಶ್ ಅವರು ಜೈಲಿನಲ್ಲಿದ್ದ ಅವಧಿಯಲ್ಲಿ ಬರೆದ ಅವರ ದಿನಚರಿವೊಂದರ ಮಾತು, ಈ ನಾಯಕನ ಆಗಿನ ಮನಸ್ಥಿತಿಯನ್ನು ಬಿಂಬಿಸುತ್ತದೆ: “ಸ್ವತಂತ್ರ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ನಾನು ಕೇಂದ್ರ ಮೀಸಲು ಪಡೆಯ ಅಶ್ರುವಾಯುವಿಗೆ ಮತ್ತು ಲಾಠಿಗೆ ಬಲಿಯಾಗಬೇಕಾಗಿ ಬಂದ, ಅಲ್ಲದೆ ಸೆರೆವಾಸವನ್ನೂ ಅನುಭವಿಸಬೇಕಾಗಿ ಬಂದ ಆಳ್ವಿಕೆ ಇದು. ಬ್ರಿಟಿಷರ ಕಾಲದಲ್ಲಿ 1946ರ ಏಪ್ರಿಲ್ ನಲ್ಲಿ ಆಗ್ರಾ ಕೇಂದ್ರ ಸೆರೆಮನೆಯಿಂದ ನನ್ನ ಬಿಡುಗಡೆಯಾಧ ನಂತರ ಮತ್ತೆ ನನ್ನನ್ನೆಂದೂ ಬಂಧಿಸಿರಲಿಲ್ಲ ಮತ್ತು ಸೆರೆಯಲ್ಲಿಟ್ಟಿರಲಿಲ್ಲ.”
ಸೆರೆಮನೆಯಲ್ಲಿ ಹಿಂಸೆ ಪಡುತ್ತಾ ಇದ್ದರೂ ಅವರ ಮನಸ್ಸು ಸಮಾಜಸೇವೆಗೆ ತುಡಿಯುತ್ತಲೇ ಇತ್ತು. ಆ ಕಾಲದಲ್ಲಿ ಬಿಹಾರದಲ್ಲಿ ಉಂಟಾದ ಬೀಕರ ಪ್ರವಾಹದಲ್ಲಿ ತೊಂದರೆಗೀಡಾದವರ ಸೇವೆಸಲ್ಲಿಸಲು ಒಂದು ತಿಂಗಳ ಕಾಲ ಸೆರೆಮನೆಯಿಂದ ಬಿಡುಗಡೆ ಮಾಡಿ ಅವಕಾಶ ಕೊಡಲು ಅವರು ಸರ್ಕಾರಕ್ಕೆ ಪತ್ರಬರೆದು ಕೇಳಿಕೊಂಡರೂ ಸರ್ಕಾರ ಅವರನ್ನು ಬಿಡುಗಡೆಮಾಡಲಿಲ್ಲ. ಅಸಹಾಯಕರಾಗಿ ಅವರು ತಮ್ಮ ದಿನಚರಿಯಲ್ಲಿ ಬರೆದ ಸಾಲು ಹೀಗಿದೆ: “ …ಪಾಟ್ನಾದಲ್ಲಿನ ಪ್ರವಾಹ ಪರಿಸ್ಥಿತಿ ಅಷ್ಟೊಂದು ಭೀಕರವಾಗಿದೆ ಎಂದು ನನಗೆ ತಿಳಿದೇ ಇರಲಿಲ್ಲ ಇಂದು ಮುಂಜಾನೆಯ ಹಿಂದೂಸ್ಥಾನ್ ಟೈಮ್ಸ್ ಎದೆ ನಡುಗಿಸುವ ವಿವರಗಳನ್ನು ಕೊಟ್ಟಿದೆ. ಅಲ್ಲಿನ ಜನ ಎಂದೆಂದಿಗೂ ಕಾಣದ ಇಂತಹ ಅನಾಹುತದಲ್ಲಿ ಸಿಕ್ಕಿ ನರಳುತ್ತಿರುವಾಗ ನಾನಿಲ್ಲಿ ಸುಮ್ಮನೆ ಕೈಕಟ್ಟಿ ಕುಳಿತಿರುವ ಬಗ್ಗೆ ನನಗೆ ಬಹಳ ಅಸಹ್ಯವೆನಿಸಿದೆ. ನಾನು ನಿಸ್ಸಹಾಯಕನಾಗಿದ್ದೇನೆ.”
ಜೆಪಿಯ ಕೊನೆಯ ದಿನಗಳು ಅವರಿಗೆ ನರಳಾಟದ ದಿನಗಳಾದವು. ಸೆರಮೆನೆವಾಸದ ಚಿತ್ರಹಿಂಸೆಯಿಂದ ಆರೋಗ್ಯ ತೀವ್ರ ಕುಸಿದು ಎರಡೂ ಮೂತ್ರಪಿಂಡಗಳು ಕೆಲಸ ನಿಲ್ಲಿಸಿದವು. ಓಡಾಡಲಾರದ ಸ್ಥಿತಿ ನಿರ್ಮಾಣವಾಯಿತು. ಬದುಕು ಸಾಕೆನಿಸುವ ಹಂತಕ್ಕೆ ತಲುಪಿದರು. ದೇಹದ ಮೇಲೆ ಇಂತಹ ಕೆಟ್ಟ ಪರಿಣಾಮದ ನೋವು ಉಂಟಾದರೆ ಅದಕ್ಕೂ ಬಲವಾದ ಮಾನಸಿಕ ನೋವನ್ನು ಅವರು ಅನುಭವಿಸಿದ್ದು ತಮ್ಮ ಜೀವನದ ಮೊದಲ ಘಟ್ಟದ ಹೋರಾಟ ಮತ್ತು ಎರಡನೇ ಘಟ್ಟದ ಹೋರಾಟ ಎರಡರಲ್ಲೂ ಏನನ್ನು ವಿರೋಧಿಸುತ್ತಾ ಬಂದಿದ್ದರೋ ಮತ್ತು ಯಾವುದರ ವಿರುದ್ಧ ತಮ್ಮ ಜೀವನವನ್ನೇ ಸವೆಸಿದ್ದರೋ ಅಂತಹ ತತ್ವಗಳಿಗೆ ತಾವೇ ಕಟ್ಟಿ ಬೆಳಸಿದ ಜನತಾಪಕ್ಷ ಅಧಿಕಾರಕ್ಕೆ ಬಂದಾಗ ವಾಲಿಕೊಂಡದ್ದರಿಂದ. ಅತ್ಯಂತ ಕಷ್ಟಪಟ್ಟು ಕಟ್ಟಿದ್ದ ಜನತಾ ಪಕ್ಷವನ್ನು ಅಷ್ಟೇ ಕಷ್ಟಪಟ್ಟು ಬೆಳಸಿ ಮೊಟ್ಟಮೊದಲ ಕಾಂಗ್ರೇಸ್ಸೇತರ ಸರ್ಕಾರ ಕೇಂದ್ರದಲ್ಲಿ ಸ್ಥಾಪನೆಯಾಗಲು ಕಾರಣರಾಗಿದ್ದ ಜೆಪಿ. ಯಾವುದನ್ನು ಇಂದಿರಾ ಸರ್ಕಾರದಲ್ಲಿ ವಿರೋಧಿಸಿದ್ದರೋ ಮತ್ತು ದೆಹಲಿಯ ರಾಜಘಾಟಿನಲ್ಲಿರುವ ಗಾಂಧಿ ಸಮಾಧಿಬಳಿ ಜನತಾ ಸರ್ಕಾರ ನಡೆಸುವವರೆಲ್ಲರಿಂದ ತಮ್ಮ ನೇತೃತ್ವದಲ್ಲಿಯೇ ಜನತೆಯ ಪರವಾದ ಲೋಕಕಲ್ಯಾಣದ ಆಡಳಿತ ನೀಡುವುದಾಗಿ ಪ್ರಮಾಣ ಮಾಡಿಸಿಕೊಂಡಿದ್ದರೋ ಅಂತಹ ಜನತಾ ಪಕ್ಷದ ತಮ್ಮ ಅನುಯಾಯಿಗಳೂ ಕೂಡ ದಾರಿತಪ್ಪಿದ್ದು ಅವರಿಗೆ ತೀವ್ರ ನೋವನ್ನುಂಟುಮಾಡಿತ್ತು. ತಾವು ಕಟ್ಟಿ ಬೆಳೆಸಿದ್ದ ಜನತಾಪಕ್ಷ ಕೂಡ ಮೊರಾರ್ಜಿ ದೇಸಾಯಿ ಮತ್ತು ಚೌದರಿ ಚರಣಸಿಂಗ್ ನೇತೃತ್ವದ ಗುಂಪುಗಳಾಗಿ ಪಕ್ಷದ ಧ್ಯೇಯೋದ್ಧೇಶಕ್ಕೆ ತಿಲಾಂಜಲಿ ಇಟ್ಟದ್ದನ್ನು ಸಹಿಸಿಕೊಳ್ಳಲು ಅವರಿಗೆ ಆಗಲಿಲ್ಲ. ಇಂತಹ ನೋವುಗಳ ಕೊರಗಿನಲ್ಲಿಯೇ ಜೆಪಿ 1979ರಲ್ಲಿ ತಮ್ಮ ಎಪ್ಪತ್ತೇಳನೆಯ ವಯಸ್ಸಿನಲ್ಲಿ ನಮ್ಮನ್ನಗಲಿದರು.
ಕರುಳ ಕುಡಿ ಚಿಗುರುವುದನ್ನೂ ತಡೆದ ಮಹಾತ್ಮ
ಜೆಪಿಯ ಸಾರ್ವಜನಿಕ ಹೋರಾಟದ ಬದುಕನ್ನು ತಿಳಿದುಕೊಂಡ ನಾವು ಅವರ ವೈಯಕ್ತಿಕ ಸಂಸಾರಿಕ ಜೀವನದ ಬಗ್ಗೆ ನೆನಪು ಮಾಡಿಕೊಳ್ಳದಿದ್ದರೇ ಅನ್ಯಾಯವೇ ಆದೀತು. ಆ ನೆನಪು ಅವರು ಜೀವನ ಪರ್ಯಂತ ಮಕ್ಕಳನ್ನು ಮಾಡಿಕೊಳ್ಳದೇ ಉಳಿಯುವಂತಾದ ಘಟನೆಗೆ ಸಂಬಂಧಿಸಿದ್ದು. ನಾವು ಬಹಳ ಪ್ರೀತಿಸುವ ಮತ್ತು ಗೌರವಿಸುವ ಗಾಂಧೀಜಿ ಅನೇಕ ವಿಷಯಗಳಲ್ಲಿ ಅಸಹಜವಾದ ಮೂಡನಂಬಿಕೆ ಅನ್ನಬಹುದಾದ ನಂಬಿಕೆಗಳನ್ನು ಇಟ್ಟುಕೊಂಡಿದ್ದರು ಎಂಬುದು ಸುಳ್ಳಲ್ಲ. ಹೀಗೆ ಹೇಳಿದರೆ ಅವರನ್ನು ಅಗೌರವಿಸಿದಂತೇನೂ ಆಗುವುದಿಲ್ಲ. ಅಂತಹ ಅಂಶಗಳಲ್ಲಿ ಒಂದು ಮನುಷ್ಯನ ಲೈಂಗಿಕ ಜೀವನದ ಬಗ್ಗೆ ಅವರು ತಾಳಿದ್ದ ನಿಲುವು. ತಮ್ಮ ಹದಿಮೂರನೆಯ ವಯಸ್ಸಿನಲ್ಲಿಯೇ ಮದುವೆಯಾಗಿದ್ದ ಗಾಂಧೀಜಿ ಮೂವತ್ತು ವರ್ಷದೊಳಗೇ ಮೂರು ಮಕ್ಕಳ ತಂದೆಯಾಗಿ ಹೆಚ್ಚೂ ಕಡಿಮೆ ಈಗ ಬಹುತೇಕ ಮಂದಿ ಮದುವೆಯಾಗಿ ಹೆಂಡತಿಯೊಂದಿಗೆ ಸಹಶಯ್ಯೆಗೆ ತೊಡಗುವ ವಯಸ್ಸಿಗೇ ಅವರು ಹೆಂಡತಿಯೊಂದಿಗೆ ಮಲಗುವುದನ್ನು ಬಿಟ್ಟವರು!! ತಮ್ಮ ಆತ್ಮಚರಿತ್ರೆಯಲ್ಲಿ ಅವರು ಕೊಡುವ ವಿವರ ನೋಡಿದರೆ ಮನುಷ್ಯನ ಲೈಂಗಿಕತೆ ಬಗ್ಗೆ ಅವರು ತಳೆದಿದ್ದ ಅಸ್ವಾಭಾವಿಕ ನಿಲುವು ಅರ್ಥವಾಗುತ್ತದೆ. `ಬ್ರಹ್ಮಚರ್ಯ ಶ್ರೇಷ್ಠ ಸಾಂಸಾರಿಕ ಜೀವನ ಕನಿಷ್ಠ’ ಎಂದು ಭಾವಿಸಿದ್ದ ಅವರು ತಮ್ಮ ಮೇಲೆ ತಾವೇ ಒತ್ತಡ ತಂದುಕೊಂಡು ಬ್ರಹ್ಮಚರ್ಯೆ ದೀಕ್ಷೆ ಪಡೆಯುತ್ತಾರೆ. ಅದಕ್ಕಾಗಿ ಕಠಿಣ ಆಹಾರದ ನಿಯಮಗಳನ್ನು ವಿಧಿಸಿಕೊಳ್ಳುತ್ತಾರೆ. ಮನುಷ್ಯನ ಲೈಂಗಿಕತೆ ಎಂಬುದು ಒಂದು ಅತ್ಯಂತ ಸ್ವಾಭಾವಿಕ ಜೈವಿಕ ಅಗತ್ಯವೆಂದೂ ಅದನ್ನು ಅನುಭವಿಸುವಲ್ಲಿ ಯಾವುದೇ ತಪ್ಪುಗಳಿಲ್ಲವೆಂದೂ ಅದಕ್ಕೂ ದೇಶಸೇವೆ ಮಾಡುವುದಕ್ಕೂ ಸಂಬಂಧವಿಲ್ಲವೆಂದು ಅವರಿಗೆ ಅನ್ನಿಸಲೇ ಇಲ್ಲ.
ಅವರ ಈ ತಪ್ಪು ತಿಳಿವಳಿಕೆ ಕೆಟ್ಟಪರಿಣಾಮ ಬೀರಿದ್ದು ಜೆಪಿ ದಂಪತಿಗಳ ಮೇಲೆ. ಈ ಲೇಖನದಲ್ಲಿ ಮೊದಲೇ ಉಲ್ಲೇಖವಾದಂತೆ ಜೆಪಿ ಅಮೇರಿಕಕ್ಕೆ ಓದಲು ಹೊರಡುವ ಮೊದಲು ಅವರಿಗೆ ಮದುವೆಯಾಗುತ್ತದೆ. ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ತಿರುವನ್ನು ನೀಡಿದ್ದ ಆಗಿನ ಚಂಪಾರಣ್ಯ ಸತ್ಯಾಗ್ರಹದ ರೂವಾರಿ ವಜ್ರಕಿಶೋರ ಬಾಬು, ತಮ್ಮ ಮೊದಲನೇ ಮಗಳಾದ ವಿದ್ಯಾವತಿಯನ್ನು ಡಾ.ಬಾಬು ರಾಜೇಂದ್ರ ಪ್ರಸಾದರ ಮಗನಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ತರುಣ ಜಯಪ್ರಕಾಶ್ ಅವರ ತೇಜಸ್ಸು ಓಜಸ್ಸುಗಳಿಗೆ ಮಾರುಹೋಗಿ ಅವರು ತಮ್ಮ ಎರಡನೇ ಮಗಳಾದ ಪ್ರಭಾವತಿಯನ್ನು ಜಯಪ್ರಕಾಶರಿಗೆ ಮದುವೆಮಾಡಿಕೊಡುತ್ತಾರೆ. ಹೀಗೆ 1922 ರಲ್ಲಿ ಜೆಪಿ ಮದುವೆಯಾಗಿ ಸಂಸಾರಿಯಾಗುತ್ತಾರೆ. ಆಗಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಮತ್ತು ಮದುವೆಯಾದ ಹೆಂಡತಿಯನ್ನು ಅವಳ ತವರುಮನೆ ಅಥವಾ ಅವಳ ಬಂಧುಬಳಗದವರ ಮನೆಯಲ್ಲಿ ಬಿಟ್ಟು ಹುಡುಗರು ತಮ್ಮ ವಿದ್ಯಾಭ್ಯಾಸಕ್ಕಾಗಿ ದೂರದ ಊರುಗಳಿಗೆ, ಬೇರೆ ದೇಶಗಳಿಗೆ ಹೋಗುವುದು ಸಾಮಾನ್ಯ ಸಂಗತಿಯಾಗಿತ್ತು. ಜೆಪಿಯವರ ಜೀವನದಲ್ಲೂ ಇಂತಹದ್ದೇ ಘಟನೆ ನಡೆಯುತ್ತದೆ. ಜೆಪಿ ಮದುವೆಯಾದ ತಕ್ಷಣ ಉನ್ನತ ವ್ಯಾಸಂಗಕ್ಕಾಗಿ ಅಮೇರಿಕೆಗೆ ಪ್ರಯಾಣ ಬೆಳಸುತ್ತಾರೆ. ಕಸ್ತೂರಿ ಬಾ ಅವರ ಅನುಯಾಯಿಯಾಗಿದ್ದ ಪ್ರಭಾವತಿ ದೇವಿ ಗಾಂಧಿಯವರ ಸಾಬರಮತಿ ಆಶ್ರಮ ಸೇರುತ್ತಾರೆ. ನೆಹರೂ ಪತ್ನಿ ಕಮಲಾ ನೆಹರೂ ಅವರೊಂದಿಗೆ ಸಂಪರ್ಕದಲ್ಲಿದ್ದ ಪ್ರಭಾವತಿ ತಮ್ಮದೇ ಆದ ರೀತಿಯಲ್ಲಿ ತಾವೂ ದೇಶಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ.
ಹೊಸದಾಗಿ ಮದುವೆಯಾದರೂ ಗಂಡನ ಸಖ್ಯವಿಲ್ಲದೇ ಏಕಾಂಗಿಯಾಗಿ ಆಶ್ರಮವಾಸಿಯಾಗಿ ರಾಮಾಯಣದ ಲಕ್ಷ್ಮಣನ ಹೆಂಡತಿ ಊರ್ಮಿಳೆಯಂತೆ ಸನ್ಯಾಸಿನಿಯ ಬದುಕನ್ನು ಎಳೆಯಬೇಕಾದ ಸ್ಥಿತಿ ತರುಣೆ ಪ್ರಭಾವತಿಗೆ ಒದಗುತ್ತದೆ. ಹೋಗಲಿ ಜೆಪಿ ವಿದೇಶದಿಂದ ಮರಳಿ ಬಂದ ಮೇಲಾದಾದರೂ ಅವರ ಸುಂದರ ದಾಂಪತ್ಯ ಮುಂದುವರೆಯುವುದಿಲ್ಲ. ಅದಕ್ಕೆ ಕಾರಣವಾಗಿದ್ದು ಗಾಂಧಿ! ಆಶ್ರಮವಾಸಿಯಾಗಿದ್ದ ಇನ್ನೂ ಪ್ರೀತಿಪ್ರೇಮಕಾಮಗಳ ಬದುಕನ್ನು ಬದುಕಬೇಕಾದ ವಯಸ್ಸಿನಲ್ಲಿ ಪ್ರಭಾವತಿಯವರಲ್ಲಿ ಗಾಂಧಿ ವೈರಾಗ್ಯವನ್ನು ತುಂಬಿ ಅವರು ಸಂಸಾರಿಕ ಜೀವನದಿಂದ ವಿಮುಖವಾಗುವಂತೆ ಮಾಡಿಬಿಡುತ್ತಾರೆ! ಅವರ ಬೋಧನೆಯಿಂದ ಪ್ರಭಾವಿತರಾದ ಪ್ರಭಾವತಿ ಅಮೇರಿಕೆಯಿಂದ ಇನ್ನೇನು ಗಂಡ ಮರಳಿ ಬರಬೇಕು ಅನ್ನುವಷ್ಟರಲ್ಲಿ ಅವರಿಗೆ ಅಲ್ಲಿಗೇ ಒಂದು ಪತ್ರ ಬರೆದು `ದೇಶ ಸೇವೆಗಾಗಿ ನಾವು ಬ್ರಹ್ಮಚರ್ಯ ಆಚರಿಸೋಣ’ ಎಂದು ತಿಳಿಸಿಬಿಡುತ್ತಾರೆ. ಜೆಪಿ ಸ್ವದೇಶಕ್ಕೆ ಬಂದ ತಕ್ಷಣ ಹೆಂಡತಿಯೊಂದಿಗೆ ಗಾಂಧಿ ಆಶ್ರಮಕ್ಕೆ ಅವರ ಆಶೀರ್ವಾದವನ್ನು ಪಡೆಯಲು ಹೋದಾಗ ಈ ತರುಣ ದಂಪತಿಗಳಿಗೆ ದೇಶಸೇವೆಗೆ ತೊಡಗಿಕೊಳ್ಳಲು ತಾವು ನಂಬಿದ್ದ ಬ್ರಹ್ಮಚರ್ಯೆಯ ಉಪದೇಶ ಮಾಡಿಬಿಡುತ್ತಾರೆ! ಗಾಂಧಿಯ ಮೇಲೆ ಅಪಾರ ಗೌರವಹೊಂದಿದ್ದ ಈ ದಂಪತಿಗಳು ಒಟ್ಟಾಗಿ ಬದುಕುವ ಪ್ರೀತಿಪ್ರೇಮಕಾಮದ ಸಹಜ ಸೌಂದರ್ಯದ ಖಾಸಗೀ ಬದುಕನ್ನು ತ್ಯಜಿಸಿ ದೇಶಸೇವೆಗೆ ತಮ್ಮ ಇಡೀ ಬದುಕನ್ನು ಮುಡುಪಾಗಿ ಹೋರಾಡುತ್ತಾರೆ. ಈ ಘಟನೆಯನ್ನು ನೋಡಿದರೆ ಅವರು ಮದುವೆಯಾದದ್ದಾದರೂ ಏತಕ್ಕೆ ಎಂಬ ಭಾವ ನಮ್ಮಲ್ಲಿ ಸಹಜವಾಗಿಯೇ ಉಂಟಾಗುತ್ತದೆ.
ಗಾಂಧೀಜಿ ಜೀವನದಲ್ಲಿ ಅನೇಕ ಬಾರಿ ತಮ್ಮ ತಪ್ಪುಗಳನ್ನು ತಿದ್ದಿಕೊಂಡಿದ್ದರು. ತಮ್ಮ ಆಲೋಚನಾ ಕ್ರಮವನ್ನು ಬದಲಿಸಿಕೊಂಡಿದ್ದರು. ಆರಂಭದಲ್ಲಿ ಅಂತರ್ಜಾತಿಯ ವಿವಾಹಗಳನ್ನು ಬಹಳಷ್ಟು ವಿರೋಧಿಸುತ್ತಿದ್ದ ಅವರು ಮುಂದೆ ಎಷ್ಟು ಬದಲಾದರು ಎಂದರೆ ಕೇವಲ ಅಂತರ್ಜಾತಿಯ ವಿವಾಹಗಳಿಗೆ ಮಾತ್ರ ಭಾಗವಹಿಸುವ ನಿರ್ಧಾರವನ್ನು ಮಾಡಿದರು. ಹೀಗೆ ಬಹಳಷ್ಟು ವಿಷಯಗಳಲ್ಲಿ ಬದಲಾವಣೆಹೊಂದಿದ್ದ ಅವರು ಗಂಡುಹೆಣ್ಣಿನ ಸಂಬಂಧದ ಬಗ್ಗೆ ಮಾತ್ರ ತಮ್ಮ ನಿಲುವನ್ನು ಬದಲಿಸಿಕೊಳ್ಳಲೇ ಇಲ್ಲ. `ನಾನಿನಗೆ ನೀನನಗೆ ಜೇನಾಗುವ’ ಎಂದು ಗಂಡು ಹೆಣ್ಣಿನ ನಡುವೆ ಸಹಜವಾಗಿ ಹುಟ್ಟುವ ಮಾನವನ ವಯೋಸಹಜ ಅನುರಾಗದ ಎಳೆಸಸಿಯನ್ನು ತಕ್ಷಣ, `ರತಿರೂಪಿ ಭಗವತಿಗೆ ಮುಡಿಪಾಗುವ’ ಎಂದು `ಅಧ್ಯಾತ್ಮದ ಗೂಟಕ್ಕೆ ಬಿಗಿದು ಕಟ್ಟುವ ಕುವೆಂಪು ಈ ಸಂಬಧವನ್ನು ದೈವತ್ವಕ್ಕೆ ಏರಿಸುತ್ತಾರೆ ಬಿಟ್ಟರೆ ಅದನ್ನು ವಿರೋಧಿಸುವುದಿಲ್ಲ. ಅವರ ಪ್ರಕಾರ ಗಂಡಹೆಂಡತಿ ಲೈಂಗಿಕಚಟುವಟಿಕೆಗಳಲ್ಲಿ ತೊಡಗುವುದು ಕೂಡ ದೇವತಾಕಾರ್ಯ!!. ಆದರೆ ಗಾಂಧಿ ಮಾತ್ರ ಈ ವಿಷಯದಲ್ಲಿ ಬಹಳ ಒರಟಾದ ಒಣವೇದಾಂತಿಯಾಗಿದ್ದರು. ಗಂಡುಹೆಣ್ಣಿನ ಸಂಬಂಧಕ್ಕೆ ಬಹುಮುಖ್ಯವಾಗಿ ಎರಡು ಆಯಾಮಗಳಿರುತ್ತವೆ. ಒಂದು `ಲೈಂಗಿಕಸುಖ’. ಇನ್ನೊಂದು `ಸಂತಾನೋತ್ಪತ್ತಿ’. ಗಾಂಧಿ ಮೊದಲನೆಯದನ್ನು ಅಲಕ್ಷಿಸಿದರು; ಎರಡನೆಯದನ್ನು ಮಾತ್ರ ಪುರಸ್ಕರಿಸಿದರು. ಹೀಗಾಗಿಯೇ ಹರೆಯದ ವಯಸ್ಸಿನಲ್ಲಿ ವಯೋಸಹಜವಾಗಿ ತಮ್ಮ ಹೆಂಡತಿಯೊಂದಿಗೆ ಕೂಡುವ ಬಯಕೆಯಯಾಗುವುದನ್ನೂ ಅವರು `ಕೆಟ್ಟ ಆಲೋಚನೆ’ ಅನ್ನುವ ಅತಿರೇಕಕ್ಕೆ ಹೋದರು. “ಗಂಡಹೆಂಡತಿ ಸೇರಬೇಕಾದದ್ದು ಈ ಪ್ರಪಂಚವನ್ನು ಮುನ್ನಡೆಸಲು ಅವಶ್ಯವಾಗಿ ಬೇಕಾಗಿರುವ ಸಂತಾನವನ್ನು ಪಡೆಯುವುದಕ್ಕೆ ಮಾತ್ರ” ಎಂಬ ನಿಲುವಿಗೆ ಅಂಟಿಕೊಂಡುಬಿಟ್ಟರು. ನಮ್ಮ ಶಿವರಾಮ ಕಾರಂತರಂತೆ “ಗಂಡು-ಹೆಣ್ಣಿನ ಸೇರುವಿಕೆಯ ಲೈಂಗಿಕ ಸುಖ ಮಾನವನ ಬದುಕು ನಮಗೆ ನೀಡುವ ಅಮೂಲ್ಯವಾದ ಸುಖ, ಅದರಿಂದ ಯಾರೂ ವಂಚಿತವಾಗಬಾರದು” ಎಂಬ ನಿಲುವಿಗೆ ಗಾಂಧಿ ಕೊನೆಗೂ ಬರಲೇ ಇಲ್ಲ.
ಗಾಂಧೀಜಿಯವರ ಈ ಅರ್ಥರಹಿತವೂ ಜೀವವಿರೋಧಿಯೂ ಆದ ಹಟಮಾರಿಸ್ವಭಾವದ ಒಣವೇದಾಂತಕ್ಕೆ ಬಲಿಯಾಗಿದ್ದು ಅವರ ಬದುಕಲ್ಲ! ಬದಲಾಗಿ ಜೆಪಿ ಮತ್ತು ಪ್ರಭಾವತಿ ಎಂಬ ಈ ತರುಣ ಜೋಡಿಯ ಬದುಕು. ಇದರ ಪರಿಣಾಮವಾಗಿ ಗಾಂಧಿ ಇಡೀ ದೇಶಕ್ಕೆ ತಂದೆಯಾದರೂ ಜೆಪಿ ಮತ್ತು ಅವರ ಹೆಂಡತಿ ತಮ್ಮ ಕರುಳ ಕುಡಿಗೂ ತಂದೆತಾಯಿಯಾಗಲಾಗಲಿಲ್ಲ! ಇದು ಹೋಗಲಿ, ತಮ್ಮ ಖಾಸಗೀ ಬದುಕನ್ನು ಒಣಗಿಸಿಕೊಂಡು ಅದರ ಸುಖ ಸಂತೋಷಗಳನ್ನು ತ್ಯಾಗಮಾಡಿ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳನ್ನೂ ತಡೆದು ಏನೊಂದೂ ಆಸ್ತಿಯನ್ನೂ ಮಾಡದೇ ಹಗಲಿರುಳು ದೇಶಸೇವೆಗೆ ತಮ್ಮ ಬದುಕನ್ನು ಮುಡುಪಾಗಿಟ್ಟುಕೊಂಡು ಹೋರಾಡಿದ ಮಹಾನ್ ನಾಯಕ ಜಯಪ್ರಕಾಶ್ ನಾರಾಯಣ ಅವರಿಗೆ ನಮ್ಮ ಸರ್ಕಾರಗಳು ನೀಡಿದ ಸನ್ಮಾನವಾದರೂ ಏನು? ಅವರಿಗೆ ಬ್ರಿಟೀಷ್ ಸರ್ಕಾರ ಕೊಟ್ಟದ್ದಕ್ಕಿಂತ ಹೆಚ್ಚಿನ ಚಿತ್ರಹಿಂಸೆಕೊಟ್ಟು ಅವರು ನರಳಿ ನರಳಿ ಸಾಯುವಂತೆ ಮಾಡಿದ್ದು!! ಒಟ್ಟಿನಲ್ಲಿ ಇಬ್ಬರು ಗಾಂಧಿಗಳಿಂದ ಜೆಪಿ ಬದುಕು ನೆಗ್ಗಿ ನುಜ್ಜುಗುಜ್ಜಾಗಿ ಮುರುಟಿಹೋಯಿತು ಎನ್ನುವುದಂತು ಸತ್ಯ. ಅವರ ಸಾರ್ವಜನಿಕ ಬದುಕು ಮುರುಟಿಹೋಗಲು ಕಾರಣವಾದ ಇಂದಿರಾಗಾಂಧಿ ಮಾಡಿದ ದೌರ್ಜನ್ಯ `ಕರುಣೆಯಿಲ್ಲದ ಕ್ರೌರ್ಯ’. ಅದನ್ನು ದೇಶಕ್ಕೆ ದೇಶವೇ ಹೇಳಿತು. ಆದರೆ ಅವರ ಖಾಸಗೀ ಬದುಕು ಮುರುಟಲು ಕಾರಣವಾದ ಮಹಾತ್ಮಾ ಗಾಂಧಿ ಮಾಡಿದ್ದು ಏನು? ಬಹುಶಃ ರಹಮತ್ ಅವರು ಕುವೆಂಪು ಸಾಹಿತ್ಯ ಚರ್ಚಿಸುತ್ತಾ ಬಳಸುವ `ಕರುಣೆಯೊಳಗಿನ ಕ್ರೌರ್ಯ’ ಅನ್ನಬಹುದೇನೋ!!
*****
ಡಾ. ರಾಜೇಂದ್ರ ಬುರಡಿಕಟ್ಟಿ
23-10-2017
*****
(ಕೃತಜ್ಞತೆ: ಈ ಲೇಖನಕ್ಕೆ ನಾನು ಹಲವಾರು ಮೂಲಗಳನ್ನು ಆಶ್ರಯಿಸಿರುವೆನಾದರೂ ವಿಶೇಷವಾಗಿ ಬಹಳಷ್ಟು ಮಾಹಿತಿಯನ್ನು ಜ.ಹೋ. ನಾರಾಯಣ ಸ್ವಾಮಿ ಅವರ ಜೆಪಿ ಕುರಿತ ಪುಸ್ತಕದಿಂದ ಪಡೆದಿದ್ದೇನೆ. ಈ ಕಾರಣಕ್ಕೆ ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. – ರಾಬು)


No comments:

Post a Comment