Saturday, October 21, 2017

ಕತ್ತಲಲ್ಲಿ ಕೈಯಾಡಿಸಲು ಹೋದಾಗ …..

ಕತ್ತಲಲ್ಲಿ ಕೈಯಾಡಿಸಲು ಹೋದಾಗ …..
ಹಗೆಯ ಸಂತೆಯಲ್ಲಿ ಹುಡುಕಿ
ಒಲುಮೆ ತಂದೆನು
ಹಂಚಿದಷ್ಟು ಬೆಳೆಯುತಿಹುದು
ಪ್ರೀತಿ ಅಳಿಯದು
ಕವಿಮಿತ್ರ ಮಾರುತಿ ದಾಸಣ್ಣನವರ ಈ ಪದ್ಯಸಾಲುಗಳು ನಮ್ಮ ದೇಶ ಇಂದು ಹಗೆಯ ಸಂತೆಯಾಗಿರುವುದನ್ನೂ ಅದರಲ್ಲಿ ಪ್ರೀತಿಯನ್ನು ನಾವು ಕೊಳೆತ ತರಕಾರಿಗಳ ನಡುವೆ ಒಳ್ಳೆಯ ತರಕಾರಿಗಳನ್ನು ಆರಿಸುವಂತೆ ಆರಿಸಿಕೊಂಡು ಬಂದು ಅವುಗಳನ್ನು ತಿನ್ನುವುದಷ್ಟೇ ಅಲ್ಲ ಅವುಗಳ ಬೀಜಗಳನ್ನು ನೆಟ್ಟು ಬೆಳೆಸಬೇಕಾದ ಅವಶ್ಯಕತೆಯನ್ನೂ ತುಂಬಾ ಸೊಗಸಾಗಿ ಕಟ್ಟಿಕೊಡುತ್ತವೆ.

ಪೇಜಾವರ ಯತಿ ವಿಶ್ವೇಶತೀರ್ಥ ಸ್ವಾಮೀಜಿ ಲಿಂಗಾಯತ ಧರ್ಮದ ಸ್ವಾಯತ್ತತೆಗೆ ಸಂಬಂಧಿಸಿದಂತೆ ಮತ್ತೆ ಹೇಳಿಕೆ ನೀಡಿ ತಮ್ಮ ಸಂಕಟವನ್ನು ಪರೋಕ್ಷವಾಗಿ ತೋಡಿಕೊಂಡಿದ್ದಾರೆ. `ಮತ್ತೆ’ ಎಂಬ ಪದ ಬಳಸುತ್ತಿರುವುದು ಏಕೆ ಎಂದರೆ ಅವರು ಈ ಬಗ್ಗೆ ಈಗಾಗಲೇ ಅನೇಕ ಬಾರಿ ಹೇಳಿಕೆ ನೀಡಿದ್ದಾರೆ. ಆ ಹೇಳಿಕೆಗಳನ್ನು ನೀಡಿದಾಗಲೆಲ್ಲ ಬಹಳಷ್ಟು ಸಂದರ್ಭದಲ್ಲಿ ಅವರು ತಿರಸ್ಕಾರಕ್ಕೆ ಒಳಗಾಗಿದ್ದಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ನಿರ್ಲಕ್ಷಕ್ಕೀಡಾಗಿದ್ದಾರೆ. ಸ್ವತಂತ್ರ ಲಿಂಗಾಯತ ಧರ್ಮ ಸ್ಥಾನಮಾನಕ್ಕಾಗಿ ಹೋರಾಟ ನಡೆಸುತ್ತಿರುವ ಬಹುತೇಕ ಎಲ್ಲ ನಾಯಕರೂ `ನಿಮ್ಮ ಸಲಹೆ ನಮಗೆ ಬೇಕಿಲ್ಲ’ ಎಂದು ದಕ್ಷಿಣ ಕರ್ನಾಟಕದ ಸೌಮ್ಯಶೈಲಿಯಲ್ಲಿಯೂ `ನಮ್ಮ ಉಸಾಬರಿಗೆ ಬರಬೇಡಿ’ ಎಂದು ಉತ್ತರ ಕರ್ನಾಟಕದ ಖಡಕ್ ಶೈಲಿಯಲ್ಲಿಯೂ ಉತ್ತರ ಕೊಟ್ಟರೂ ಸಲಹೆಕೊಡುವ ಕಸುಬನ್ನು ಅವರು ಬಿಟ್ಟಂತಿಲ್ಲ. ಪರಿಸ್ಥಿತಿಯ ಸೂಕ್ಷ್ಮತೆ ಅರಿತು ಸುಮ್ಮನಿದ್ದು ಇರುವ ಗೌರವವನ್ನು ಅವರು ಉಳಿಸಿಕೊಳ್ಳಬಹುದಿತ್ತೇನೋ. ಆದರೆ ಅದು ಅವರಿಗೆ ಏಕೋ ಸಾಧ್ಯವಾಗುತ್ತಿಲ್ಲ.




ದೀಪಾವಳಿ ಹಬ್ಬದ ಮುಂದೆ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಲಿಂಗಾಯತ ಧರ್ಮ ಸ್ವಾಯತ್ತತೆಗೆ ಸಂಬಂಧಿಸಿದಂತೆ, ಈ ಹಿಂದಿನಂತೆಯೇ ತಿರಸ್ಕಾರಕ್ಕೆ ಅರ್ಹವಾದ ಕೆಲವು ಮಾತುಗಳನ್ನು ಆಡಿ ಮತ್ತೊಮ್ಮೆ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಈ ಪತ್ರಿಕಾ ಗೋಷ್ಠಿಯಲ್ಲಿ ಅವರು ಒಂದಕ್ಕೊಂದು ತಾಳೆಯಾಗದ, ಸ್ಪಷ್ಟವಾಗಿ ಅವರ ನಿಲುವನ್ನೂ ತಿಳಿಸಲು ಆಗದ ಗೊಂದಲದ ಹಲವು ಮಾತುಗಳನ್ನು ಆಡಿದ್ದಾರೆ. ಆ ಮಾತುಗಳು ಸೈದ್ದಾಂತಿಕವಾಗಿ ಒಂದಿಷ್ಟು ಮಹತ್ವ ಪಡೆದಿರುವುದರಿಂದ ಅವುಗಳಲ್ಲಿ ಕೆಲವನ್ನು ಇಲ್ಲಿ ವಿಶ್ಲೇಷಣೆಗೆ ಎತ್ತಿಕೊಳ್ಳಲಾಗಿದೆ. ಪತ್ರಿಕೆಗಳಲ್ಲಿ ವರದಿಯಾದಂತೆ ಅವರ ಒಂದು ಮಾತು ಹೀಗಿದೆ: “ಲಿಂಗಾಯತರಲ್ಲಿ ಎರಡು ತರಹದ ಸಂಪ್ರದಾಯ, ಭಿನ್ನಾಭಿಪ್ರಾಯಗಳಿದ್ದರೂ ಎರಡೂ ಬೇರೆ ಬೇರೆ ಧರ್ಮಗಳಲ್ಲ, ಲಿಂಗಾಯತ, ವೀರಶೈವ ಎರಡು ಪ್ರಭೇದಗಳು ಎನ್ನಬಹುದು. ಹೇಗೆ ಧ್ವೈತ ಅಧ್ವೈತಗಳಲ್ಲಿ ಮೂಲಭೂತವಾದ ತಾತ್ವಿಕ ಭಿನ್ನಾಭಿಪ್ರಯಗಳಿದ್ದರೂ ಒಂದೇ ವೈದಿಕ ಧರ್ಮದ ಪ್ರಭೇದಗಳೋ, ಅದೇ ರೀತಿ ಅವುಗಳಿಗಿಂತ ಅತ್ಯಲ್ಪ ಭಿನ್ನತೆ ಇರುವ ಶಿವನೇ ಪರದೈವ ಎನ್ನುವ ಈ ಎರಡೂ ಸಂಪ್ರದಾಯಗಳು ಬೇರೆ ಬೇರೆ ಆಗಿರುವ ಸಾಧ್ಯತೆ ಇಲ್ಲ”

ಪೇಜಾವವರ ಮೇಲಿನ ಮಾತು ಕೆಲವು ಬಹಳಷ್ಟು ಅಸ್ಪಷ್ಟವಾಗಿದ್ದರೂ ಕೆಲವು ಸಂಗತಿಗಳನ್ನು ಸ್ಪಷ್ಟಪಡಿಸುತ್ತದೆ. ಅಸ್ಪಷ್ಟ ಏಕೆ ಎಂದರೆ ಅವರು ಕೆಲವು ಧರ್ಮಗಳನ್ನು `ಮೂಲ’ ಎಂದೂ ಮತ್ತೆ ಕೆಲವನ್ನು `ಪ್ರಭೇದ’ ಎಂದು ಅವರು ಗುರುತಿಸುವಲ್ಲಿ ಸ್ಪಷ್ಟತೆ ಇಲ್ಲ. `ವೀರಶೈವ’ ಮತ್ತು `ಲಿಂಗಾಯತ’ ಗಳನ್ನು ಪ್ರಭೇದಗಳು ಎಂದು ಹೆಸರಿಸುವ ಅವರು ಇವೆರಡಕ್ಕೆ ಯಾವುದು ಮೂಲ ಎಂದು ಸ್ಪಷ್ಟವಾಗಿ ಹೇಳುವುದಿಲ್ಲ. ಆದರೂ ಆ ಮಾತಿನ ಹಿಂದೆ ಮತ್ತು ಮುಂದೆ ಇರುವ ಅವರ ಮಾತುಗಳನ್ನು ಗಮನಿಸಿದರೆ ಅವರೆಡಕ್ಕೂ `ಹಿಂದೂಧರ್ಮ’ ಎಂಬುದು ಮೂಲ ಎಂದು ಅವರು ಹೇಳುತ್ತಿದ್ದಂತೆ ತೋರುತ್ತದೆ. ಆದರೆ  ಹೋಲಿಕೆ ಕೊಡಲು ಅವರು ಬಳಸುವ `ಧ್ವೈತ’ ಮತ್ತು `ಅಧ್ವೈತ’ ಗಳನ್ನು ಪ್ರಭೇದಗಳು ಎಂದು ಹೇಳುವಾಗ ಅವುಗಳಿಗೆ `ವೈದಿಕಧರ್ಮ’ವನ್ನು ಮೂಲವಾಗಿ ಸ್ಪಷ್ಟವಾಗಿ ಗುರುತಿಸುತ್ತಾರೆ. ಅಂದರೆ ಮೂಲಧರ್ಮಗಳ ಪಟ್ಟಿಯಲ್ಲಿ `ಹಿಂದೂ’ ಜೊತೆ `ವೈದಿಕ’ವನ್ನೂ ಸೇರಿಸುವ ಪೇಜಾವರರ ಈ ವಿವರಣೆ ಪ್ರಕಾರ `ವೈದಿಕ’ ಮತ್ತು `ಹಿಂದೂ’  ಇವೆರಡೂ ಬೇರೆ ಬೇರೆ ಎಂಬುದಂತೂ ಸ್ಪಷ್ಟ. ಹಾಗಾದರೆ ಇವುಗಳ ನಡುವಿನ ಸಂಬಂಧ ಎಂಥದ್ದು? ನಾವು ತಿಳಿದುಕೊಂಡಂತೆ ತಾಯಿ- ಮಗುವಿನ ಸಂಬಂಧವಾಗುವುದಿಲ್ಲ. ಹಾಗಾದರೆ ಅವು ಸಹೋದರ ಸಂಬಂಧಿಗಳೇ? ಹೌದೆನ್ನುವುದಾದರೆ ಇವೆರಡಕ್ಕೂ ಮೂಲ ಇನ್ಯಾವುದು? ವಾಸ್ತವ ಏನೆಂದರೆ ಯಾವನ್ನು ಪೇಜಾವರರು ಪ್ರಭೇದಗಳು ಎಂದು ಗುರುತಿಸುತ್ತಾರೋ ಅಂತಹ ವೀರಶೈವ, ಲಿಂಗಾಯತ, ಹಾಗೂ ಅವರು ಧ್ವೈತ ಅಧ್ವೈತ ಗಳಿಗೆ ಮೂಲವೆಂದು ಗುರುತಿಸುವ ವೈಷ್ಣವ ಇವೇ ಸ್ವತಂತ್ರ ಧರ್ಮಗಳು. ಇವೆಲ್ಲವುಗಳನ್ನು ಒಳಗೊಂಡ ಇವೆಲ್ಲದರ ಮೂಲವೆಂದು ಕರೆಯಲ್ಪಡುವ `ಹಿಂದೂಧರ್ಮ’ ಎನ್ನುವುದು ಒಂದು `ಕಾಲ್ಪನಿಕ ಕವಚ’ವೇ ಹೊರತು ಅದು ಧರ್ಮವಲ್ಲ. ಹಿಂದೂ ಎಂಬುದನ್ನು ಧರ್ಮವೆಂದು ಕರೆಯದೆ ಅದನ್ನು ಜೀವನ ವಿಧಾನ (Way of Life) ಎಂದು ಕರೆಯುವುದೇ ಸೂಕ್ತ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಹಾಗಾಗಿ  ಪ್ರಪಂಚದ ಇತರ ಧರ್ಮಗಳಾದ ಸಿಖ್, ಜೈನ, ಭೌದ್ಧ ಇಂತಹ ಧರ್ಮಗಳ ಜೊತೆಗಿಟ್ಟು ಚರ್ಚಿಸಬೇಕಾದಂಥವು ಈ ಲಿಂಗಾಯತ, ವೀರಶೈವ, ವೈಷ್ಣವ, ಇತ್ಯಾದಿಗಳೇ ಹೊರತು ಅವೆಲ್ಲದರ `ಕಾಲ್ಪನಿಕ ಕವಚ’ವಾದಂತಹ ಕಲ್ಪಿತ `ಹಿಂದೂಧರ್ಮ’ವಲ್ಲ. ಅದನ್ನು ಪೇಜಾವರರಂಥವರು ಒಪ್ಪುವುದು ಕಷ್ಟ.

ಈ ಮಾತಿನಲ್ಲಿರುವ ಇನ್ನೊಂದು ಅಂಶ ಲಿಂಗಾಯತ ಮತ್ತು ವೀರಶೈವ ಎರಡೂ ಸಂಪ್ರದಾಯಗಳು ಶಿವನನ್ನೇ ಪರದೈವ ಎನ್ನುವ ಕಾರಣಕ್ಕೆ ಇವೆರಡೂ ಬೇರೆ ಆಗುವ ಸಾಧ್ಯತೆಯಿಲ್ಲ ಎನ್ನುವುದು. ಪೇಜಾವರರಿಗೆ ಲಿಂಗಾಯತರು ಶಿವನ ಆರಾಧಕರಲ್ಲ ಎನ್ನುವ ಅಂಶ ಗೊತ್ತಿಲ್ಲ ಎಂಬುದನ್ನು ಅವರ ಈ ಮಾತು ತಿಳಿಸುತ್ತದೆ. ಎಲ್ಲ ಹಿಂದೂಗಳು ಶಿವನ ಆರಾಧಕರಲ್ಲ ಎಂಬುದು ಹೇಗೆ ಸತ್ಯವೋ ಶಿವನ ಆರಾಧಕರೆಲ್ಲ ಹಿಂದೂಗಳಲ್ಲ ಎನ್ನುವುದು ಅಷ್ಟೇ ಸತ್ಯ.  ಶಿವನನ್ನು ಪೂಜಿಸುವವರನ್ನು ಶೈವರೆಂದೂ, ಸ್ಥಾವರ ಲಿಂಗವನ್ನು ಪೂಜಿಸುವವರನ್ನು ವೀರಶೈವರೆಂದೂ, ಇಷ್ಟಲಿಂಗವನ್ನು ಪೂಜಿಸುವವರನ್ನು `ಲಿಂಗಾಯತ’ರೆಂದೂ ಸ್ಥೂಲವಾಗಿ ವಿಭಾಗಿಸಬಹುದಾದರೂ ಪೂಜಾವಿಧಾನದಲ್ಲಿ ಅಷ್ಟೇನೂ ಕಟ್ಟುನಿಟ್ಟುಗಳನ್ನು ಈ ಧರ್ಮೀಯರು ಸೇರಿದಂತೆ ಭಾರತದಲ್ಲಿ ಯಾವ ಧರ್ಮೀಯರೂ ಆಚರಿಸಕೊಂಡುಬಂದಿಲ್ಲ ಎಂಬುದು ಸತ್ಯ. ಹಾಗೆ ನೋಡಿದರೆ ಲಿಂಗಾಯತರು ಕೇವಲ ಪೇಜಾವರರು ಹೇಳುವಂತೆ ಶಿವನ ಆರಾಧಕರು ಮಾತ್ರವಲ್ಲ. ಪುರೋಹಿತಶಾಹಿಯ ಮತ್ತು ವೈದಿಕ ಪ್ರಭಾವದಿಂದಾಗಿ ವಿಷ್ಣುವನ್ನೂ ಅವನ ವಿವಿಧ ಅವತಾರಗಳೆಂದು ಕರೆಯಲಾಗುವ ಕೃಷ್ಣ ಮುಂತಾದವರನ್ನೂ ಪೂಜಿಸುವವರು ಇದ್ದಾರೆ. ನಮ್ಮ ಪುರಾಣಗಳಲ್ಲಿ `ಶಿವ’ ಮತ್ತು `ವಿಷ್ಣು’ ಇವರ ನಡುವೆ ದೊಡ್ಡ ಕಾಳಗಗಳನ್ನೇ ನಮ್ಮ ಪುರೋಹಿತಶಾಹಿ ನಡೆಸಿದೆ. ಅವರಿಬ್ಬರಲ್ಲಿ ಒಬ್ಬನು ಇನ್ನೊಬ್ಬನಿಗಿಂತ ಮೇಲು ಎಂದು ತೋರಿಸಲು ಎಷ್ಟೊಂದು ಪುರಾಣಗಳನ್ನು ಬರೆದಿದ್ದಾರೆ ಎಂಬುದು ಪೇಜಾವರರಂಥ ಯತಿಗಳಿಗೆ ತಿಳಿಯದ ಸಂಗತಿಯಲ್ಲ. ಸಂಸ್ಕೃತಿಯ ಸರದಾರರಾಗಿ  ಬಹುಕಾಲ ಮೆರೆದ ವೈದಿಕರ ಪ್ರಭಾವದಿಂದ ಅವರ ಈ ಆಚರಣೆಗಳು ಉಳಿದೆಲ್ಲ ವೈದಿಕೇತರರ ಜೀವನವಿಧಾನಗಳಲ್ಲಿ ಬಹಳಷ್ಟು ಮಟ್ಟಿಗೆ ಬೆರೆತಿರುವಂತೆ ಅವು ಲಿಂಗಾಯತದಲ್ಲಿಯೂ ಬೆರತಿವೆ ಅಷ್ಟೆ.  ಆದರೆ ಅವು ಲಿಂಗಾಯತದ ಮೂಲ ಚಹರೆಗಳಲ್ಲ; ಇದು ಪೇಜಾವರರಿಗೆ ಬಹುಶಃ ಗೊತ್ತಿಲ್ಲ.

ಅವರು ಮುಂದುವರೆಸಿದ ಮಾತಿನಲ್ಲಿ, “ಶಿವನೇ ಪರದೈವ ಎಂದು ಭಾವಿಸುವ, ಶಿವ ಪಂಚಾಕ್ಷರಿ ಜಪ, ಲಿಂಗಪೂಜೆ ಮಾಡುವ ಲಿಂಗಾಯತರಾಗಲೀ ಅಥವಾ ವೀರಶೈವರಾಗಲೀ, ಹಿಂದೂಧರ್ಮದಿಂದ ಬೇರೆ ಆಗುವುದು ಹೇಗೆ ಎಂದು ನಾನು ಕೇಳಿದ ಪ್ರಶ್ನೆಗೆ ಈವರೆಗೆ ಯಾರೂ ಉತ್ತರ ಕೊಟ್ಟಿಲ್ಲ. ಜಾತಿ ವ್ಯವಸ್ಥೆಯನ್ನು ಒಪ್ಪದ ಲಿಂಗಾಯತ ಧರ್ಮವು ಹಿಂದೂಧರ್ಮದಿಂದ ಬೇರೆಯಾದರೆ  ಜಾತಿ ವ್ಯವಸ್ಥೆಯನ್ನು ಒಪ್ಪಿಕೊಳ್ಳದ ರಾಮಕೃಷ್ಣಾಶ್ರಮ, ಆರ್ಯಸಮಾಜ, ಹಿಂದೂ ಧರ್ಮದಿಂದ ಬೇರೆಯೇ, ಜಾತಿಪದ್ಧತಿಯನ್ನು ಒಪ್ಪದ ಅನೇಕ ವೈಷ್ಣವ ಧರ್ಮಗಳು ಮತ್ತು ಶೈವಧರ್ಮಗಳು ಹಿಂದೂಧರ್ಮದಿಂದ ಬೇರೆಯೇ, ಎಂಬ ಪ್ರಶ್ನೆಗೂ ಯಾರೂ ಉತ್ತರ ನೀಡಿಲ್ಲ” ಎಂದು ಹೇಳಿದ್ದಾರೆ.

ಈ ಮಾತೂ ಎಷ್ಟು ಗೊಂದಲದಿಂದ ಕೂಡಿದೆ ಗಮನಿಸಿ. ಜಾತಿವ್ಯವಸ್ಥೆಯನ್ನು ಒಪ್ಪದ ವೈಷ್ಣವ ಧರ್ಮಗಳು ಮತ್ತು ಶೈವಧರ್ಮಗಳು ಎನ್ನುವಾಗ ಜಾತಿ ಮತ್ತು ಧರ್ಮಗಳಿಗಿರುವ ಸ್ಪಷ್ಟತೆ ಅವರಿಗೆ ಇದ್ದಂತಿಲ್ಲ. ರಾಮಕೃಷ್ಣಾಶ್ರಮವನ್ನೂ ಧರ್ಮವೆಂದು ಪರಿಗಣಿಸುತ್ತಾರೆ! ಈ ಗೊಂದಲಗಳು ಇರಲಿ. ಅವರು ಕೇಳಿರುವ `ಇದುವರೆಗೂ ಯಾರೂ ಉತ್ತರ ನೀಡದ ಪ್ರಶ್ನೆಗಳ ಕಡೆ ಗಮನಕೊಡೋಣ. ಈ ಪ್ರಶ್ನೆಗಳೇ ಸರಿಯಿಲ್ಲದಿದ್ದರಿಂದ ಅವರಿಗೆ ನೇರವಾಗಿ ಯಾರೂ ಉತ್ತರ ಕೊಟ್ಟಿಲ್ಲದಿರಬಹುದು. ಆದರೆ ಅವು ಬಹಳಷ್ಟು ಸಂಕೀರ್ಣವಾದ ಮತ್ತು ಉತ್ತರಿಸಲು ತತ್ತರಿಸುವ ಪ್ರಶ್ನೆಗಳಂತೂ ಅಲ್ಲ. ಈ ಪ್ರಶ್ನೆಗಳಿಗೆ ಉತ್ತರವೆನಿಸುವ ಅನೇಕ ವಿವರಗಳನ್ನು ಈಗಾಗಲೇ ಅನೇಕ ವಿದ್ವಾಂಸರು, ಸಾರ್ವಜನಿಕವಾಗಿ ನೀಡಿದ್ದಾರೆ. ಅವುಗಳನ್ನು ಪೇಜಾವರರು ಗಮನಿಸುವ ಔದಾರ್ಯ ತೋರಿದಂತಿಲ್ಲ. ಈ ಬಗ್ಗೆ ಸಾರ್ವಜನಿಕವಾಗಿ ನಡೆಯುತ್ತಿರುವ ಚರ್ಚೆಯನ್ನು `ಮುಕ್ತ’ವಾಗಿ ಗಮನಿಸಲು ಅವರಿಗೆ ಸಾಧ್ಯವಾದರೆ ಅವರ ಪ್ರಶ್ನೆಗಳ ಅಪ್ರಸ್ತುತತೆ ಅವರಿಗೆ ಅರ್ಥವಾಗುತ್ತದೆ. ಈ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗಿರುವುದರಿಂದ  ಆ ನಿಟ್ಟಿನಲ್ಲಿ ಇಲ್ಲಿ ಚರ್ಚೆಯನ್ನು ಬೆಳಸುವ ಅವಶ್ಯಕತೆಯಿಲ್ಲ.

ಪೇಜಾವರರ ಈ ಸುದ್ಧಿಗೋಷ್ಠಿಯಲ್ಲಿ ಅವರ ಒಳ ಉದ್ದೇಶವನ್ನು ಹೊರಹಾಕುವ ಮಾತುಗಳು ತಮಾಸೆಯ ಸಂಗತಿಯಂತೆ ಕೊನೆಯಲ್ಲಿ ಅವರ ಬಾಯಿಯಿಂದ ಬಂದಿವೆ. ಆ ಮಾತುಗಳು ಹೀಗಿವೆ: “ವೈಷ್ಣವ ಸಂಪ್ರದಾಯದಲ್ಲಿರುವ ನನಗೆ ಇದರ ಬಗ್ಗೆ (ಲಿಂಗಾಯತ-ವೀರಶೈವ ಸಮಸ್ಯೆಯ ಬಗ್ಗೆ) ಮಾತನಾಡಲು ಅಧಿಕಾರ ಏನು ಎಂದು ಕೆಲವರು ಕೇಳಿತ್ತಾರೆ. ಸಹೋದರ ಮನೆಬಿಟ್ಟು ಹೋಗುವಾಗ ಹೋಗಬೇಡ ಎಂದು ಒತ್ತಾಯಿಸುವುದು ಅಪರಾಧವೇ?.. ನಮ್ಮೊಂದಿಗೆ ಇದ್ದು ಧರ್ಮ ಸಂಸ್ಕೃತಿಯನ್ನು ರಕ್ಷಿಸಲು ಪ್ರಯತ್ನಿಸಬೇಕು….ಹೇಗೆ ಮುಸಲ್ಮಾನರೆಲ್ಲ ಅನ್ಯೋನ್ಯರಾಗಿರಬೇಕೋ ಅದೇ ರೀತಿ ಹಿಂದೂಗಳೂ ಇರಬೇಕು….ವೀರಶೈವ–ಲಿಂಗಾಯತ ಧರ್ಮಗಳ ಆಂತರಿಕ ವಿಷಯವಾಗಿರುವುದರಿಂದ ಇದರಲ್ಲಿ ನಾನು ಮೂಗು ತೂರಿಸುವುದಿಲ್ಲ.”

ಮೊದಲು ತಮಾಸೆಯ ಸಂಗತಿಯನ್ನು ಹೇಳಿಬಿಡುತ್ತೇನೆ. ಲಿಂಗಾಯತರು ಎಂದು ಸ್ವತಂತ್ರಧರ್ಮ ಬೇಡಿಕೆಯನ್ನು ಇಟ್ಟುಕೊಂಡು ಹೋರಾಟವನ್ನು ಆರಂಭಿಸಿದರೋ, ಎಂದು ಅವರೆಲ್ಲ ತಮ್ಮ ಕಪಿಮುಷ್ಟಿಯಿಂದ ಕಳಚಿಕೊಳ್ಳುತ್ತಿದ್ದಾರೆ ಎಂಬ ಆತಂಕ ಪೇಜಾವರರು ಪ್ರತಿನಿಧಿಸುವ `ಕಲ್ಪಿತಹಿಂದೂ’ ಪಾಳಯದಲ್ಲಿ ಶುರುವಾಯಿತೋ ಅಂದಿನಿಂದಲೇ ಪೇಜಾವರರು `ವೀರಶೈವ-ಲಿಂಗಾಯತ’ ಧರ್ಮದ ವಿಷಯದಲ್ಲಿ ಮೂಗು ತೂರಿಸುತ್ತಲೇ ಬಂದಿದ್ದಾರೆ. ಮೂಗು ಮುರಿಯುವಂತೆ ಎದುರು ಪಾಳೆಯದಿಂದ ವಾಗ್ದಾಳಿಗೆ ತುತ್ತಾಗುತ್ತಲೇ ಬಂದಿದ್ದಾರೆ. ಇದೊಂದು ಸುದ್ದಿಗೋಷ್ಠಿಯಲ್ಲಿಯೇ ಆ ಧರ್ಮಗಳ ಬಗ್ಗೆ ಇಷ್ಡೊಂದು ಮೂಗು ತೂರಿಸಿ ಮಾತನಾಡಿದ್ದಾರೆ. ಆದರೂ `ನಾನು ಮೂಗು ತೂರಿಸುವುದಿಲ್ಲ’ ಎನ್ನುತ್ತಿದ್ದಾರೆ. ಇವರ ದೃಷ್ಟಿಯಲ್ಲಿ ಮೂಗನ್ನು ಎಷ್ಟು ಉದ್ದ ಒಳಗೆ ತಳ್ಳಿದರೆ ಮೂಗು ತೂರಿಸಿದಂತೆ ಆಗುತ್ತದೆಯೋ ಗೊತ್ತಿಲ್ಲ.

“ಸಹೋದರ ಮನೆಬಿಟ್ಟುಹೋಗುವಾಗ ಹೋಗಬೇಡ ಎಂದು ಒತ್ತಾಯಿಸುವುದು ಅಪರಾಧವೇ?” ಎಂದು ಕೇಳುವ ಅವರ ಪ್ರಶ್ನೆಯಂತೂ ಅವರಿಗೆ ಮನೆಯನ್ನು ಒಗ್ಗಟ್ಟಾಗಿಟ್ಟುಕೊಳ್ಳಬೇಕು ಎಂಬ ಕಾಳಜಿ ಎಷ್ಟಿದೆಯಲ್ಲ ಎಂದು ಒಂದು ಕ್ಷಣ ಅಪಾರವಾದ ಗೌರವ ಅವರ ಮೇಲೆ ಉಕ್ಕುವಂತೆ ಮಾಡುತ್ತದೆ. ಆದರೆ ಅವರ ಈ ಸಹೋದರ ಪ್ರೇಮ ವಿಶ್ವಾಸಾರ್ಹವಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಹೌದು, ಸಹೋದರ ಮನೆಬಿಟ್ಟು ಹೋಗುವಾಗ ಹೋಗಬೇಡ ಎಂದು ಒತ್ತಾಯಿಸುವುದು ಅಪರಾಧವಲ್ಲ. ಆದರೆ ಆ ಸಹೋದರ ಮೆನಬಿಟ್ಟು ಏಕೆ ಹೊರಟ ಎಂಬುದು ಮನೆಯ ಹಿರಿಯನಿಗೆ ಅಥವಾ ಅವನನ್ನು `ಸಹೋದರ’ ಎಂದು ಕರೆಯುವವರಿಗೆ ಗೊತ್ತಿಲ್ಲದಿದ್ದರೆ ಹೇಗೆ? ಯಾವುದಾದರು ಸಹೋದರ ಮನೆಬಿಟ್ಟು ಹೊರಡುವ ನಿರ್ಧಾರಕ್ಕೆ ಬರುತ್ತಾನೆ ಎಂದರೆ ಅದು ಧಿಡೀರನೆ ತೆಗೆದುಕೊಳ್ಳುವ ನಿರ್ಧಾರವಾಗಿರುವುದಿಲ್ಲ. ಸಣ್ಣಪುಟ್ಟ ಮನಸ್ತಾಪಗಳಿಗೆಲ್ಲ ಮನೆಬಿಡುವ ನಿರ್ಧಾರವನ್ನು ಯಾವ ಜವಾಬ್ದಾರಿಯುತ ಸಹೋದರನೂ ತೆಗೆದುಕೊಳ್ಳುವುದಿಲ್ಲ. ಅದರ ಹಿಂದೆ ಹೊಂದಿಕೊಂಡಿರುವ ಅನೇಕ ಪ್ರಯತ್ನಗಳು ನಡೆದಿರುತ್ತವೆ. ಆ ಎಲ್ಲ ಪ್ರಯತ್ನಗಳು ವಿಫಲವಾದಾಗ ಮಾತ್ರ ಮನೆಬಿಡುವ ಅಂತಿಮ ನಿರ್ಧಾರಕ್ಕೆ ಯಾವುದೇ ಸಹೋದರ ಬರುತ್ತಾನೆ. ಇದು ವಾಸ್ತವ. ಆದರೆ ಅವನು ಮನೆಯಲ್ಲಿ ಸಂಕಟಪಡಲು ಕಾರಣರಾದವರು, ಅಥವಾ ಕಾರಣರಾಗದಿದ್ದರೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಹಿರಿಯರು ಅವನ ಸಂಕಟವನ್ನು ಆಲಿಸಿ ಸಮಾಧಾನಮಾಡುವ, ಅವನಿಗೆ ಕಿರುಕುಳ ತಪ್ಪುವಂತೆ ಮಾಡುವ, ಅವನನ್ನು ಪ್ರೀತಿಯಿಂದ ಕಾಣುವ ಕೆಲಸವನ್ನು ಮಾಡಬೇಕಾಗುತ್ತದೆ. ಅದ್ಯಾವುದನ್ನೂ ಮಾಡದೇ ಅವನು ಉಸಿರುಕಟ್ಟಿದ ವಾತಾವರಣದಿಂದ ದೂರವಾಗಲು ಅಂತಿಮ ನಿರ್ಧಾರವನ್ನು ತೆಗೆದುಕೊಂಡು ಗಂಟು ಮೂಟೆ ಕಟ್ಟಿಕೊಂಡು ಮನೆಯ ಹೊರನಡೆಯುತ್ತಿರುವಾಗ ಹೊರಬಾಗಿಲಿನ ಹೊಸ್ತಿಲ ಹತ್ತಿರ ಅವನನ್ನು ತಡೆಯಹೋಗುವುದರಲ್ಲಿ ಅರ್ಥವಿಲ್ಲ. ಈ ದೃಷ್ಟಿಯಿಂದ ಪೇಜಾವರರ ಒತ್ತಾಯ ಅಪರಾಧವಲ್ಲ ನಿಜ; ಉಪಯೋಗವಿಲ್ಲ ಎಂಬುದೂ ನಿಜ.

ಲಿಂಗಾಯತ – ವೀರಶೈವರದ್ದೂ ಅದೇ ಕಥೆ. `ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಎಂಬ ಕವಿ ನಿಸಾರ್ ಅಹಮದ್ ಅವರ ಕವಿತೆಯ ಸಾಲಿನಂತೆ ಒಂದು ಮನೆಯಲ್ಲಿದ್ದೂ ಒಂದಾಗದೇ ಉಳಿದ, ಬಹುತೇಕ ವೈದಿಕೇತರರು ವೈದಿಕರ ಊಳಿಗವನ್ನು ಶತಮಾನಗಳಿಂದ ಮಾಡಿಮಾಡಿ ಬೇಸತ್ತು ರೋಸಿಹೋಗಿ ಆಗಾಗ ಕೆಲವರು ಮನೆಬಿಟ್ಟು ಹೋಗಿ ಬೇರೆ ಮನೆಮಾಡಿಕೊಂಡು ಸುಖವಾಗಿಯಲ್ಲದಿದ್ದರೂ ನೆಮ್ಮದಿಯಿಂದ ಇದ್ದಾರೆ. ಆ ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ಈಗ ಈ ವೀರಶೈವ-ಲಿಂಗಾಯತರು ಬಿಡುಗಡೆ ಬಯಸಿ ಹೊರಟಿದ್ದಾರೆ. ಯಾರನ್ನು ಹಿಂದೂಗಳು ಎಂದು ಕರೆಯಲಾಗುತ್ತದೆಯೋ ಮತ್ತು ಯಾವ ಜೀವನಕ್ರಮ ಆಚಾರ ವಿಚಾರಗಳನ್ನು `ಹಿಂದೂ ಜೀವನಕ್ರಮ’ ಮತ್ತು `ಹಿಂದೂ ಆಚಾರ ವಿಚಾರಗಳು’ ಎಂದು ಬಿಂಬಿಸಿ ನಂಬಿಸಲಾಗುತ್ತಿದೆಯೋ ಅವೆಲ್ಲ ಈ ವಿಶಾಲ ಹಿಂದೂವಿನ ಒಂದಂಗವಾದ `ವೈದಿಕಶಾಹಿಯ ಜೀವನ ಕ್ರಮ’ ಮತ್ತು `ವೈದಿಕಶಾಹಿಯ ಆಚಾರ ವಿಚಾರಗಳು’ ಎಂಬುದರ ಅರಿವು ಆಗುತ್ತಿರುವುದರ ಪ್ರತಿಫಲ ಈ ನಡೆಗಳ ಹಿಂದಿರುವ ಕಾರಣ. ಈ `ವೈದಿಕ ಬಂಧನ’ ಎಂಬುದು ಒಂದು ರೀತಿಯಲ್ಲಿ `ದೃತರಾಷ್ಟ್ರ ಬಂಧನ’, ಎಳ್ಳಷ್ಟೂ ಪ್ರೀತಿ ಅದರೊಳಗಿಲ್ಲ, ನಾವು ಹೆಸರು ಮಾಡುವುದಿರಲಿ ಉಸಿರಾಡುವುದೂ ಅದಕ್ಕೆ ಇಷ್ಟವಿಲ್ಲ ಎಂಬುದನ್ನು ತಮ್ಮ ಅರಿವಿನ ಮೂಲಕ ಅವರೆಲ್ಲ ತಿಳಿದುಕೊಂಡಿದ್ದಾರೆ. “ಸ್ವಲ್ಪದೂರ ಸರಿದು ನಿಲ್ಲು ಉಸಿರನಾಡುವೆ/ ಕತ್ತನೆತ್ತಿ ಮೇಲಕೊಮ್ಮೆ ಮುಗಿಲ ನೋಡುವೆ” ಎಂದು ಪುರೋಹಿತಶಾಹಿಯ ಸರ್ಪಬಂಧನದಿಂದ ಬಿಡಿಸಿಕೊಳ್ಳುವ ಆತುರದಲ್ಲಿದ್ದಾರೆ. ಈ ಹಂತದಲ್ಲಿ ಅವರನ್ನು ತಡೆಯುವ ಬದಲು ಶುಭಹಾರೈಸಿ ಕಳಿಸುವುದೇ ಒಳಿತು. ಇಲ್ಲದಿದ್ದರೆ ತಡೆಯಹೋಗುವವರನ್ನು ತಳ್ಳಿ ಕೆಡವಿ ಅವರು ಮುನ್ನಡೆಯುತ್ತಾರೆ!

ಪೇಜಾವರರು ಶ್ರೀಕೃಷ್ಣನ ಪರಮ ಭಕ್ತರು. ಮಹಾಭಾರತದಲ್ಲಿ ಕರ್ಣನನ್ನು ಪಾಂಡವರ ಕಡೆ ಒಲಿಸಿಕೊಳ್ಳುವ ಉದ್ದೇಶದಿಂದ ಶ್ರೀಕೃಷ್ಣ ಅವನನ್ನು ಭೇಟಿಮಾಡಿ, “ನಿನ್ನನ್ನು ಹಸ್ತಿನಾಪುರದ ರಾಜನನ್ನಾಗಿ ಮಾಡುತ್ತೇನೆ, ಕೌರವರು ಪಾಂಡವರು ನಿನ್ನ ಎಡಬಲದಲ್ಲಿ ನಿಂತು ನಿನಗೆ ಸಲಾಮು ಹೊಡೆಯುವಂತೆ ಮಾಡುತ್ತೇನೆ, ಕೌರವ ಪಾಂಡವರೆಲ್ಲ ನಿನ್ನ ಕಿಂಕರರಾಗಿ ಸೇವೆ ಮಾಡುತ್ತಾರೆ, ನೀನು ಅವರ ಮಧ್ಯೆ ಕುಳಿತು ಧರ್ಪದಿಂದ ರಾಜ್ಯಭಾರ ಮಾಡುತ್ತಾ ಮೆರೆಯಬಹುದು, ನಮ್ಮಕಡೆಗೇ ಇರು ಆ ಕಡೆ ಹೋಗಬೇಡ” ಎಂದು ಆಮಿಷ ತೋರುತ್ತಾನೆ. ಅವನ ಮಾತೆಲ್ಲವನ್ನೂ ಸಮಾಧಾನದಿಂದ ಆಲಿಸಿಕೊಂಡ ಕರ್ಣ ಅತ್ಯಂತ ದೃಢಚಿತ್ತದಿಂದ ತನ್ನ ನಿರ್ಧಾರವನ್ನು “`ಮರುಳು ಮಾಧವ’ (ಹುಚ್ಚ ಕೃಷ್ಣ) ಮಹಿಯ ರಾಜ್ಯದ ಸಿರಿಗೆ ಸೋಲುವವನಲ್ಲ/ ಕೌಂತೇಯರು ಸುಯೋಧನರು ಬೆಸಕೈವಲ್ಲಿ ಮನವಿಲ್ಲ” ಎಂದು ಎದೆಗೆ ಹೊಡೆದಂತೆ ಹೇಳಿ ಕಳಿಸುತ್ತಾನೆ. ಕೃಷ್ಣ ಕರ್ಣನಿಂದ ಹೇಳಿಸಿಕೊಂಡ ಮಾತನ್ನೇ ಪೇಜಾವರರು ಲಿಂಗಾಯತ ಧರ್ಮದ ಪ್ರತಿಪಾದಕರಿಂದ ಹೇಳಿಸಿಕೊಳ್ಳಬಾರದು. ಅನ್ನುವುದಾದರೆ ತಮಗೆ ಗೊತ್ತಿಲ್ಲದ ವಿಷಯದಲ್ಲಿ ಅವರು ಸುಮ್ಮನಿರುವುದೇ ಕ್ಷೇಮ.
 
ಅವರ ಮಾತಿನಲ್ಲಿರುವ ಇನ್ನೊಂದು  ಬಹಳ ಮುಖ್ಯವಾದ ಅಂಶ ಹಿಂದೂ ಮುಸಲ್ಮಾನರ ಭಾವೈಕ್ಯತೆಗೆ ಸಂಬಂಧಿಸಿದ್ದು. “ಮುಸಲ್ಮಾನರು ಹೇಗೆ ಅನ್ಯೂನ್ಯತೆಯಿಂದ ಬಾಳಬೇಕೋ ಹಿಂದೂಗಳೂ ಹಾಗೇ ಅನ್ಯೂನ್ನತೆಯಿಂದ ಬಾಳಬೇಕು” ಎಂಬ ಮಾತು ಏನನ್ನು ಧ್ವನಿಸುತ್ತದೆ. ಮೇಲು ನೋಟಕ್ಕೆ ಹಿಂದೂಗಳೆಲ್ಲರೂ ಒಟ್ಟಾಗಿರಬೇಕು ಎಂದು ಒಂದು ಒಳ್ಳೆಯ ಸಂದೇಶವನ್ನು ನೀಡಿದಂತೆ ಅದು ತೋರುತ್ತದೆ. ಅದೇ ಕಾಲಕ್ಕೆ ಸೂಕ್ಷ್ಮನೋಟಕ್ಕೆ ಅದು ಮುಸಲ್ಮಾನರು ಹಿಂದೂಗಳಿಗಿಂತ ಭಿನ್ನ, ಹಾಗಾಗಿ ಅವರೊಂದು ಗುಂಪು ನಾವೊಂದು ಗುಂಪು ಆಗೋಣ ಎಂದು ಹೇಳಿದಂತೆ ಕೂಡ ಆಗುತ್ತದೆ. ಏಕೆ ಹಿಂದೂಗಳು ಮುಸಲ್ಮಾನರು ಪರಸ್ಪರ ಅನ್ಯೋನ್ಯತೆಯಿಂದ ಬಾಳಿದರೆ ಏನಾಗುತ್ತದೆ? ಅವರಿಬ್ಬರ ನಡುವೆ ಒಂದು ಕಂದಕ ಇರಬೇಕು ಎಂಬುದೇ ಇವರ ಅಪೇಕ್ಷೆಯೇ? ಇಡೀ ದೇಶ ಇವತ್ತು ಹಿಂದೂಗಳ ನಡುವಿನ ಒಡಕಿನಿಂದಾಗಲೀ ಮುಸ್ಲಿಮರ ನಡುವಿನ ಒಡಕಿನಿಂದಾಗಲೀ ತತ್ತರಿಸುತ್ತಿಲ್ಲ; ಬದಲಾಗಿ ಅದು ತತ್ತರಿಸುತ್ತಿರುವುದು ಹಿಂದೂ ಮತ್ತು ಮುಸ್ಲಿಮರ ನಡುವಿನ ಒಡಕಿನಿಂದ ಅಥವಾ ನ್ಯೋನತೆಯಿಂದ.  ಅದನ್ನು ಬೆಸೆಯುವ ಕೆಲಸ ಎಲ್ಲರೂ ಮಾಡಬೇಕಾಗಿರುವ ತುರ್ತು ಕಾರ್ಯವಲ್ಲವೇ?

ಪೇಜಾವರರು ಭಾವಿಸುವಂತೆ ಹಿಂದೂ ಧರ್ಮರಕ್ಷಣೆಯಾಗಲೀ ಇಸ್ಲಾಂ ಧರ್ಮ ರಕ್ಷಣೆಯಾಗಲೀ ಇಂದು ಆದ್ಯತೆಯ ವಿಷಯಗಳಲ್ಲ. ಈ ಧರ್ಮ ಜಾಗೃತಿ ಎಂಬುದು ಇಂದು ಎಲ್ಲ ಧರ್ಮಗಳಲ್ಲಿಯೂ ಯಾವ ಮಟ್ಟದಲ್ಲಿ ಆಗಿಬಿಟ್ಟಿದೆ ಎಂದರೆ ಈ ಜಾಗೃತಿಯೇ ಇಂದು ದೇಶಕ್ಕೆ ಅಪಾಯವಾಗುವ ಹಂತ ತಲುಪಿಬಿಟ್ಟಿದೆ! ಏಕೆಂದರೆ ಧರ್ಮಾಧಾರಿತ ರಾಷ್ಟ್ರಗಳಲ್ಲಿ ಧರ್ಮರಕ್ಷಣೆಯೇ ದೇಶರಕ್ಷಣೆಯೂ ಆಗಿರುತ್ತದೆ. ಅಂತಹ ರಾಷ್ಟ್ರಗಳಲ್ಲಿ ಧರ್ಮಜಾಗೃತಿ ಅಥವಾ ಧರ್ಮರಕ್ಷಣೆ ಎಂದರೆ ದೇಶರಕ್ಷಣೆಯೇ ಆಗಿಬಿಡುತ್ತದೆ. ಆದರೆ ಭಾರತದಂತಹ ಹತ್ತು ಹಲವು ಧರ್ಮಗಳನ್ನು ಹೊಂದಿರುವ `ಧರ್ಮನಿರಪೇಕ್ಷ’ (ಸೆಕ್ಯುಲರ್) ಆಡಳಿತ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರದಲ್ಲಿ ಧರ್ಮಜಾಗೃತಿ ಅಥವಾ ಧರ್ಮರಕ್ಷಣೆ ಎಂದರೆ ದೇಶರಕ್ಷಣೆಯಲ್ಲ.`ಧರ್ಮ’ ಮತ್ತು `ದೇಶ’ ಇಲ್ಲಿ ಸ್ಪಷ್ಟವಾಗಿ ಬೇರೆ ಬೇರೆಯೇ ಆದ ಸಂಗತಿಗಳು. ಇಂತಹ ರಾಷ್ಟ್ರಗಳಲ್ಲಿ ಯಾವುದೇ ಧರ್ಮದ ಜಾಗೃತಿ (ಅಥವಾ ಅತಿಜಾಗೃತಿ) ಉಳಿದವರಲ್ಲಿ ಭಯ ಆತಂಕಗಳನ್ನು ಹುಟ್ಟಿಸುವ ಮೂಲಕ ದೇಶದ ಅಭದ್ರತೆಯನ್ನು ಉಂಟುಮಾಡುವ ಅಂಶವಾಗುತ್ತದೆ. ಹಿಂದೂ, ಇಸ್ಲಾಂ, ಕ್ರೈಸ್ತ, ಭೌದ್ಧ, ಜೈನ ಹೀಗೆ ಯಾವುದೇ ಧರ್ಮಗಳಿಗೂ ಅನ್ವಯಿಸುವ ಮಾತಿದು.  ಇಡೀ ದೇಶವ್ಯಾಪಿ ಪ್ರಭಾವ ಇರುವಂಥವರು ಎಂದು ಹೇಳಲಾಗುವ ಪೇಜಾವರರಂತಹ ವ್ಯಕ್ತಿಗಳು ತೀರಾ ಸಂಕುಚಿತವಾದ `ಅಗ್ರಹಾರಾಲೋಚನೆ’ಯಿಂದ ಹೊರಬಂದು ವಿಶಾಲವಾಗಿ ಆಲೋಚನೆ ಮಾಡಬೇಕಾಗುತ್ತದೆ. ಮುಸ್ಲಿಮರು ಮತ್ತು ಹಿಂದೂಗಳು ಪರಸ್ಪರ ಅನ್ಯೋನ್ಯತೆಯಿಂದ ಬಾಳಬೇಕು ಎಂದು ಅವರು ಹೇಳಬೇಕಾಗುತ್ತದೆ. ಹಾಗಾದಾಗ ಮಾತ್ರ ಅವರ ವ್ಯಕ್ತಿತ್ವಕ್ಕೆ ಅಖಿಲಭಾರತೀಯ ವ್ಯಕ್ತಿತ್ವದ ಘನತೆ ಪ್ರಾಪ್ತವಾಗುತ್ತದೆ.

ಪೇಜಾವರರು ಇಂದು ಮಾಡಬೇಕಾಗಿರುವ ಬಹುಮುಖ್ಯ ಕೆಲಸವೆಂದರೆ ಲಿಂಗಾಯತರು ಮತ್ತು ವೀರಶೈವರು ಒಂದೋ ಬೇರೆ ಬೇರೆಯೋ ಎಂಬದರ ಬಗ್ಗೆ ಸಲಹೆಕೊಡುವುದಲ್ಲ. ಅದನ್ನು ಅವರವರು ನೋಡಿಕೊಳ್ಳುತ್ತಾರೆ. ಇವರ ಅವಶ್ಯಕತೆ ಅಲ್ಲಿ ಇಲ್ಲವೂ ಇಲ್ಲ. ಇನ್ನು ಲಿಂಗಾಯತ ಹಿಂದೂ ಧರ್ಮದ ಅವಿಭಾಜ್ಯ ಅಂಗ ಎಂದು ಹೇಳುತ್ತಾ ಕೂರುವುದೂ ಅವರ ಕೆಲಸ ಅಲ್ಲ. ಏಕೆಂದರೆ ವೈದಿಕ ಧರ್ಮದಲ್ಲಿ ಅವರಿಗೆ ಅಪಾರ ತಿಳಿವಳಿಕೆ ಇರುವುದು ನಿಜವಾದರೂ ಲಿಂಗಾಯತ ಧರ್ಮದ ಬಗ್ಗೆ ಅವರಿಗೆ ತಿಳಿವಳಿಕೆ ಇಲ್ಲ ಎಂಬುದನ್ನು ಅವರ ಇದುವರೆಗಿನ ಅವರ ಹೇಳಿಕೆಗಳು ತೋರಿಸಿಕೊಟ್ಟಿವೆ. ಹಾಗಾಗಿ ಇವೆರಡೂ ಕೆಲಸವನ್ನು ಬಿಟ್ಟು ಅವರು ಅತ್ಯಂತ ಅವಶ್ಯವಾಗಿ ಮಾಡಬೇಕಾಗಿರುವ ಕೆಲಸವೊಂದಿದೆ, ಅದರ ಕಡೆ ಗಮನ ಕೊಡಬೇಕು. ಅದೆಂದರೆ `ಹಿಂದೂಧರ್ಮ’ ಎಂಬುದರ ಬಗ್ಗೆ ಇರುವ ಗೊಂದಲ ಮತ್ತು ಗೋಜಲುಗಳನ್ನು ಬಿಡಿಸುವ ಕೆಲಸ.

`ಲಿಂಗಾಯತ-ವೀರಶೈವಗಳು ಹಿಂದೂವಿನಿಂದ ಹೇಗೆ ಭಿನ್ನ’ ಎಂದು ತಮ್ಮ ಪ್ರಶ್ನೆಗೆ ಉತ್ತರವನ್ನು ಯಾರೂ ನೀಡಿಲ್ಲ ಎಂಬುದಕ್ಕೆ ತಾಯಿರೂಪದ ಪ್ರಶ್ನೆಯೊಂದಿದೆ. ಅದೆಂದರೆ `ಹಿಂದೂಧರ್ಮ’ ಅಂದರೇನು; ಅದು ಪ್ರತಿಪಾದಿಸುವ ಮುಖ್ಯವಾದ ತತ್ವಗಳೇನು? ಎಂಬ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವನ್ನು ಕೊಡುವ ಕೆಲಸವನ್ನು ಅವರು ಮಾಡಬೇಕು. ಮೊದಲು ಪ್ರಪಂಚದ ಇತರ ಧರ್ಮಗಳಿಗಿಂತ `ಹಿಂದೂಧರ್ಮ’ವನ್ನು ಪ್ರತ್ಯೇಕಿಸುವ ವಿಶಿಷ್ಟ ಲಕ್ಷಣಗಳು ಯಾವುವು ಎಂಬುದನ್ನು ಸ್ಪಷ್ಟಪಡಿಸುವುದು ಮತ್ತು ಒಬ್ಬ ನಿಷ್ಠಾವಂತ ಹಿಂದೂ ಆದವನು ಜೀವನದಲ್ಲಿ ಅಳವಡಿಸಿಕೊಂಡು ಅನುಸರಿಸಬೇಕಾದ ಒಂದೈದಾರು ತತ್ವಗಳನ್ನಾದರೂ ಪಟ್ಟಿಮಾಡಿ ಹೇಳುವುದು ಇವು ಪೇಜಾವರರು ಮಾಡಬೇಕಾಗಿರುವ ಬಹುಳ ಮುಖ್ಯವಾದ ಕೆಲಸಗಳು. ಅದರ ಜೊತೆಗೆ ಲಿಂಗಾಯತ – ವೀರಶೈವ, ಧ್ವೈತ, ಅಧ್ವೈತ ಹೀಗೆ ಇವೆಲ್ಲವೂ ಹಿಂದೂ ಧರ್ಮದ ಅಂಗಗಳು ಅನ್ನುವ ಅವರು ಇವೆಲ್ಲವನ್ನೂ ಒಂದು ಎಂದು ಪರಿಗಣಿಸಲು ಅವೆಲ್ಲವುಗಳಲ್ಲಿರುವ ಸಾಮಾನ್ಯವಾದ ಅಂಶಗಳು ಯಾವವು, ಅಂದರೆ ಅವೆಲ್ಲವನ್ನೂ ಬಂಧಿಸುವ ಸೂತ್ರ ಯಾವುದು ಎಂದುದನ್ನು ಸ್ಪಷ್ಟಪಡಿಸುವ ಕೆಲಸವನ್ನೂ ಮಾಡಬೇಕು.

ಏಕೆಂದರೆ ಇವತ್ತು ಭೌದ್ಧ, ಜೈನ, ಇಸ್ಲಾಂ, ಹೀಗೆ ಯಾವುದೇ ಧರ್ಮಗಳ ಬಗ್ಗೆ ಇಂತಹ ಪ್ರಶ್ನೆ ಕೇಳವು ಅವಶ್ಯಕತೆಯಿಲ್ಲ. ಒಬ್ಬ ಮುಸ್ಲಿಮನನ್ನು ನೀನೇಕ ಮುಸ್ಮಿಮ್ ಎಂದರೆ ಅವನು ತಕ್ಷಣ ತಡವರಿಸದಂತೆ, “ನಾನು ನಮಾಜು ಮಾಡುತ್ತೇನೆ, ಕುರಾನ್ ತಾತ್ವಿಕತೆ ನನ್ನ ಧರ್ಮಗ್ರಂಥ, ಪ್ರವಾದಿ ಮಹಮದ್ ನನ್ನ ಧರ್ಮಗುರು, ನನ್ನ ಧರ್ಮದ ಪ್ರಕಾರ ನಾವು ಇಂತಿಂಥ ಕೆಲಸಗಳನ್ನು ಮಾಡುವುದು ಸರಿ, ಇಂತಿಂಥ ಕೆಲಸಗಳನ್ನು ಮಾಡುವುದು ತಪ್ಪು” ಹೀಗೆ ಏನಾದರೂ ನಾಲ್ಕು ಮಾತು ಹೇಳಬಲ್ಲ. ಬೇರೆ ಧರ್ಮೀಯರಿಗೂ ಇದು ಸಾಧ್ಯ. ಆದರೆ ಒಬ್ಬ ಹಿಂದೂ ಧರ್ಮೀಯನನ್ನು ನೀನೇಕೆ ಹಿಂದೂ? ನಿನ್ನ ಧರ್ಮದ ಪ್ರಮುಖ ತತ್ವಗಳೇನು ಎಂದು ಯಾರಾದರೂ ಕೇಳಿದರೆ ಅವನು ಏನು ಹೇಳಬಲ್ಲ? ತಡವರಿಸುವುದು ಅವನಿಗೆ ಅನಿವಾರ್ಯ. ಇಷ್ಟೊಂದು ಯತಿಗಳು ಧರ್ಮಗುರುಗಳು ಬಂದುಹೋಗಿದ್ದರೂ ಅವನು ತಡವರಿಸದಂತೆ ಉತ್ತರಿಸುವ ಒಂದು ತಾತ್ವಿಕತೆಯನ್ನು ರೂಪಿಸಲು ಸಾಧ್ಯವಾಗಿಲ್ಲ. ತನ್ನ ಧರ್ಮದ ತತ್ವಗಳೇನು  ತನ್ನ ಧರ್ಮದ ಪ್ರಕಾರ ಏನು ಮಾಡಿದರೆ ತಪ್ಪು, ಏನು ಮಾಡಿದರೆ ಸರಿ ಎಂಬ ವಿಧಿನಿಷೇಧಗಳ ಬಗ್ಗೆ ಅವನಿಗೆ ಸ್ಪಷ್ಟತೆ ಮೂಡಿಸಲು ಸಾಧ್ಯವಾಗಿಲ್ಲ. 

ಸಾಮಾನ್ಯ ಜನರು ಕೇವಲ ಮರಣದಾಚೆಗಿನ ಸ್ವರ್ಗ, ನರಕ ಇತ್ಯಾದಿಗಳ ಬಗ್ಗೆ ತಿಳಿಯಲು ಮಾತ್ರ ಧರ್ಮವನ್ನು ಆಶ್ರಯಿಸುವುದಿಲ್ಲ; ಬದಲಾಗಿ ತಮ್ಮ ದೈನಂದಿನ ಜೀವನದ ವ್ಯವಹಾರಗಳ ನಿರ್ವಹಣೆಯಲ್ಲಿ ಮಾರ್ಗದರ್ಶನಕ್ಕಾಗಿಯೂ ಅವರು ಧರ್ಮದ ಕಡೆ ನೋಡುತ್ತಾರೆ. ಹಾಗೆ ನೋಡಿದರೇ ಈ ಕಾರಣಕ್ಕೇ ಅವರು ಧರ್ಮಗಳನ್ನು ಹೆಚ್ಚಾಗಿ ಆಶ್ರಯಿಸುವುದು. ಹೀಗೆ ತನ್ನನ್ನು ಆಶ್ರಯಿಸಿಬಂದ ಭಕ್ತರಿಗೆ ಅವರ ಸಮಸ್ಯೆಯನ್ನು ಬಗೆಹರಿಸಲು ಆಗದಿದ್ದರೂ ಕೊನೇಪಕ್ಷ ಅವರಿಗೆ ಸಮಾಧಾನ ಆಗುವಂತಹ ಮಾರ್ಗದರ್ಶನವನ್ನಾದರೂ ಯಾವುದೇ ಧರ್ಮವಿರಲಿ ಮಾಡಬೇಕಾಗುತ್ತದೆ. ಮನುಷ್ಯಗೆ ಸಾಮಾನ್ಯವಾಗಿ ಯಾರೊಂದಿಗೂ ಹೇಳಿಕೊಳ್ಳಲಾಗದ ಸಂದರ್ಭಗಳಲ್ಲಿ ಧರ್ಮಸೂಕ್ಷ್ಮಗಳು ಹೆಚ್ಚಾಗಿ ಕಾಡುತ್ತವೆ. ಉದಾಹರಣೆಗೆ  ಒಬ್ಬ ಅಧಿಕಾರಿಗೆ ಲಂಚತೆಗೆದುಕೊಳ್ಳುವಾಗ ತಾನು ಮಾಡುವುದು ಸರಿಯೋ ತಪ್ಪೋ ಎಂಬ ಧರ್ಮಸೂಕ್ಷ್ಮ ಕಾಡಬಹುದು. ಒಬ್ಬ ವ್ಯಕ್ತಿ ಪ್ರಾಣಿಯೊಂದನ್ನು ಕಡಿಯುವ ಸಂದರ್ಭದಲ್ಲಿ ತಾನು ಮಾಡುವುದು ತಪ್ಪೋ ಸರಿಯೋ ಎಂಬ ಈ ಧರ್ಮಸೂಕ್ಷ್ಮ ಎದುರಾಗಬಹುದು. ಒಬ್ಬ ಗೃಹಿಣಿಗೆ ವಿವಾಹದಿಂದ ಹೊರಗಿನ ಗಂಡಸಿನ ಸಂಬಂಧ ಇಟ್ಟುಕೊಳ್ಳುವ ಸಂದರ್ಭ ನಿರ್ಮಾಣವಾದಾಗ ತಾನು ಮಾಡುವುದು ತಪ್ಪೋ ಸರಿಯೋ ಎಂಬ ಧರ್ಮಸೂಕ್ಷ್ಮ ಕಾಡಬಹುದು. ಒಬ್ಬ ಯುವಕನಿಗೆ ಒಬ್ಬ ಹುಡುಗಿಯನ್ನು ಹಂಟಸಂಭೋಗಕ್ಕೆ ಎಳೆದೊಯ್ಯುವಾಗ ತಾನು ಮಾಡುತ್ತಿರುವುದು ತಪ್ಪೋ ಸರಿಯೋ ಎಂಬ ಧರ್ಮಸೂಕ್ಷ್ಮ ಕಾಡಬಹುದು.

ಇಂತಹ ಸಂದರ್ಭಗಳಲ್ಲಿ ಅವರಿಗೆ ಮಾರ್ಗದರ್ಶನವನ್ನು ನೀಡದಿರುವ ಧರ್ಮ ಅವರ ಪಾಲಿಗೆ ಇದ್ದರೂ ಒಂದೇ ಇರದಿದ್ದರೂ ಒಂದೇ. ಮೇಲಿನ ಪ್ರಕರಣಗಳಲ್ಲಿ ಲಂಚತೆಗೆದುಕೊಳ್ಳುವ ಅಧಿಕಾರಿ ಲಿಂಗಾಯತ ಧರ್ಮಾವಲಂಬಿ ಎಂದಿಟ್ಟುಕೊಂಡರೆ ಅವನಿಗೆ ಅವನ ಧರ್ಮದ ಕಾಯಕತತ್ವ ನೆನಪಾಗಿ `ದುಡಿಮೆ ಪ್ರತಿಫಲವಲ್ಲದೇ ಬೇರೆ ರೀತಿಯ ಹಣವನ್ನು ಸ್ವೀಕರಿಸುವುದು ಕಳ್ಳತನಕ್ಕೆ ಸಮಾನ’ ಎಂಬ ಎಚ್ಚರಿಗೆ ಉಂಟಾಗಿ ಅವನು ಮಾಡಹೊರಟಿರುವ ಕೆಟ್ಟಕೆಲಸದಿಂದ ಹಿಂದೆ ಸರಿಯಬಹುದು. ಪ್ರಾಣಿಯನ್ನು ಕೊಲ್ಲುವ ಮೇಲಿನ ಇನ್ನೊಂದು ಪ್ರಕರಣದಲ್ಲಿ ಅವನು ಜೈನಧರ್ಮಾವಲಂಬಿಯಾಗಿದ್ದರೆ ಅವನಿಗೆ ಅವನ ಧರ್ಮದ ಅಹಿಂಸಾತತ್ವ ನೆನಪಾಗಿ ಅವನಿಗೆ ಕೊಲ್ಲಬಾರದು ಎಂಬ ಮಾರ್ಗದರ್ಶನ ದೊರೆಯಬಹುದು. ಹಾಗೇ ಉಳಿದೆರಡು ಪ್ರಕರಣಗಳಿಗೂ ಬೇರೆ ಬೇರೆ ಧರ್ಮಾವಲಂಬಿಗಳಿಗೆ ಅವರವರ ಧರ್ಮಗಳು ಏನೋ ಒಂದು ಮಾರ್ಗದರ್ಶನ ಮಾಡುತ್ತವೆ. ಇಂತಹ ಪ್ರಕರಣಗಳಲ್ಲಿ ಅವನು ತನ್ನನ್ನೊಬ್ಬ `ಹಿಂದೂಧರ್ಮಾವಲಂಬಿ’ ಅಂದುಕೊಂಡರೆ ಅವನಿಗೆ ಎಲ್ಲಿಂದ ಮತ್ತು ಯಾರಿಂದ ಯಾವರೀತಿಯಿಂದ ಮಾರ್ಗದರ್ಶನ ಸಿಗುತ್ತದೆ? ಖಂಡಿತಾ ಸಿಗಲಾರದು. ಏಕೆಂದರೆ ಮೇಲೆ ಉದಾಹರಿಸಿದ ಕೆಲಸಗಳನ್ನು ಮಾಡುವುದು ತಪ್ಪು ಎಂದು ಕೆಲವು ಧರ್ಮಗ್ರಂಥಗಳ ಆಧಾರಗಳಿಂದ ನಿರೂಪಿಸಬಹುದಾದರೆ ಮತ್ತೆ ಕೆಲವು ಧರ್ಮಗ್ರಂಥಗಳಿಂದಲೇ ಅವನ್ನು ಮಾಡುವುದು ತಪ್ಪಲ್ಲ ಎಂಬುದನ್ನೂ ನಿರೂಪಿಸಬಹುದು! ಅರವತ್ನಾಲ್ಕು ವಿದ್ಯೆಗಳಲ್ಲಿ ಚೋರವಿದ್ಯೆ (ಕಳ್ಳತನ ಮಾಡುವುದನ್ನು ಕಲಿಸುವ ವಿದ್ಯೆ) ಕೂಡ ಸೇರಿದೆ!

ನನಗೆ ಗೊತ್ತಿರುವಂತೆ ಹಿಂದೂ ಧರ್ಮದ ಒಗಟುಗಳು ಎಂದು ಸುಮಾರು ಹದಿನಾಲ್ಕು ಹದಿನೈದು ಒಗಟುಗಳನ್ನು ಅಂಬೇಡ್ಕರ್ ಪಟ್ಟಿಮಾಡಿಕೊಟ್ಟು ಅವುಗಳಿಗೆ ಉತ್ತರ ಹೇಳಲು ಪೇಜಾವರರಂತಹ ಯತಿಗಳಿಗೆ ಕೇಳಿಕೊಂಡು ಬಹಳಷ್ಟು ವರ್ಷಗಳೇ ಆದವು. ಅವುಗಳಲ್ಲಿ ಒಂದು ಪ್ರಶ್ನೆಗೂ `ಹಿಂದುತ್ವ’ ಪ್ರತಿಪಾದಕರಲ್ಲಿ ಯಾರಿಗೂ ಇನ್ನೂ ಉತ್ತರವನ್ನು ಕೊಡಲು ಸಾಧ್ಯವಾಗಿಲ್ಲ! ಅದು ಪೇಜಾವರರಿಗೂ ಗೊತ್ತಿರಬಹುದು. ಧರ್ಮ, ಸಂಪ್ರದಾಯ, ಮತ, ಮೂಲಧರ್ಮ, ಪ್ರಭೇದಗಳು ಈ ಸಂಗತಿಗಳಲ್ಲಿ ಒಂದು ಸ್ಪಷ್ಟತೆಯನ್ನು ನಾವು ಹೊಂದದೇ ಇಂತಹ ವಿಚಾರಗಳನ್ನು ಮಾತನಾಡುತ್ತಾ ಹೋಗುವುದು ಜನರ ಗೊಂದಲವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇವುಗಳ ಗೊಂದಲವನ್ನು ಇಟ್ಟುಕೊಂಡೇ `ಹಿಂದೂಧರ್ಮ’ `ಹಿಂದೂಧರ್ಮ’ ಎಂದು ಕೂಗಾಡುವುದಾಗಲೀ ಆ ಧರ್ಮದ ಜಾಗೃತಿ ಮಾಡಲು ಜನರನ್ನು ಒಟ್ಟುಗೂಡಿಸಲು ಹೋಗುವುದಾಗಲೀ ಈಗಾಗಲೇ ಹಲವರು ಅಭಿಪ್ರಾಯಪಟ್ಟಂತೆ ಕತ್ತಲಲ್ಲಿ ಕೈಯಾಡಿಸಿದಂತೆ ಆಗುತ್ತದೆ. ಪೇಜಾವರರಂತಹ ಹಿರಿಯರು ಕತ್ತಲಲ್ಲಿ ಕೈಯಾಡಿಸುವುದಕ್ಕಿಂತ ಬೆಳಕನ್ನು ಬೀರುವ ಕಡೆ ಗಮನಹರಿಸುವುದು ಎಲ್ಲರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಏಕೆಂದರೆ ಕತ್ತಲೆಯಲ್ಲಿ ಕೈಯಾಡಿಸಲು ಹೋದಾಗ ಕೈ ಯಾವುದಕ್ಕೆ ತಾಗುತ್ತದೆ ಯಾರಿಗೆ ತಾಗುತ್ತದೆ, ಅದರಿಂದ ಏನೆಲ್ಲ ಅನಾಹುತಗಳು ಸಂಭವಿಸುತ್ತವೆ  ಎಂಬುದನ್ನು ಹೇಳುವುದು ಕಷ್ಟ.

ಕವಿಮಿತ್ರ ರಂಜಾನ್ ದರ್ಗಾ ಅವರು ಕೆಳಗಿನ ಪದ್ಯಸಾಲುಗಳ ಮೂಲಕ ಮಾಡುತ್ತೇನೆ ಎಂದು ಹೇಳುವುದನ್ನೇ ಮಾಡೋಣ:
ಹಿಂದೂ ಮುಸ್ಲಿಂ ಸಿಖ್ಖರ ಮಧ್ಯೆ
ಮನುಷ್ಯರನ್ನು ಹುಡುಕಿಕೊಳ್ಳುತ್ತೇನೆ
*****
·         ಡಾ. ರಾಜೇಂದ್ರ ಬುರಡಿಕಟ್ಟಿ
21-10-2017


No comments:

Post a Comment