Tuesday, April 21, 2020

ಗಾಳಿಸುದ್ಧಿಯ ಗಾಳೆಕೆ ಸಿಲುಕಿ

ಗಾಳಿಸುದ್ಧಿಯ ಗಾಳಕೆ ಸಿಲುಕಿ

·       ಡಾ. ರಾಜೇಂದ್ರ ಬುರಡಿಕಟ್ಟಿ
ಗಾಳಿಸುದ್ಧಿಯ ಗಾಳಕೆ ಸಿಲುಕಿ
ಹಾಳಾಗಿ ಹೋಯಿತು ನಮಬದುಕು
ಕೂಳರು ಎಸೆದಿಹ ದಾಳಕೆ ಮಗುಚಿ
ಹೋಳಾಗಿ ಹೋಯಿತು ನಮಊರು!
ಇವು ನಾನು ಇತ್ತೀಚೆಗಷ್ಟೇ ಓದಿದ ಕವಿತೆಯೊಂದರ ಆರಂಭದ ನಾಲ್ಕು ಸಾಲುಗಳು. ಕೋವಿಡ್ 19 ಸಂದರ್ಭದಲ್ಲಿ ನಮ್ಮಲ್ಲಿ ಹರಡಿ ಜನಮಾನಸವನ್ನು ಕ್ಷುದ್ರಗೊಳಿಸಿದ ನೂರಾರು ಗಾಳಿಸುದ್ಧಿಗಳು ಮಾಡಿದ ಕೆಟ್ಟಪರಿಣಾಮಗಳನ್ನು ಅವಲೋಕಿಸುವಾಗ ಏಕೋ ಈ ಸಾಲುಗಳು ನಾಲಿಗೆಯ ಮೇಲೆ ಬಂದು ನನ್ನಲ್ಲಿ ನಾನೇ ಗುನುಗಿಕೊಳ್ಳಬೇಕಾಯಿತು. ಕೋವಿಡ್ 19 ಸಂದರ್ಭದಲ್ಲಿ ಹರಡಿದ ಗಾಳಿಸುದ್ಧಿಗಳ ವಿಶ್ಲೇಷಣೆಯನ್ನು ಪ್ರತ್ಯೇಕ ಲೇಖನವೊಂದರಲ್ಲಿ ಮಾಡುತ್ತಿರುವುದರಿಂದ ಇಲ್ಲಿ ಅವುಗಳನ್ನು ಚರ್ಚೆಗೆ ಎತ್ತಿಕೊಳ್ಳದೆ ಇಲ್ಲಿ ಗಾಳಿಸುದ್ಧಿ ಕುರಿತಾದ ವಿಶ್ಲೇಷಣೆಯನ್ನು ಮಾತ್ರ ಮಾಡಲಾಗುತ್ತಿದೆ. ಗಾಳಿಸುದ್ಧಿ ಅಂದರೇನು, ಅವುಗಳ ಸ್ವರೂಪ ವಿಧಗಳೇನು, ಅವನ್ನು ಯಾರೆಲ್ಲ ಹರಡುತ್ತಾರೆ ಅವು ಉಂಟುಮಾಡುವ ಪರಿಣಾಮ ಎಂಥದ್ದು ಮತ್ತು ಅವುಗಳನ್ನು ತಡೆಯಲು ನಾವು ಏನು ಮಾಡಬೇಕು ಎಂಬ ಕೆಲವು ಮುಖ್ಯ ಸಂಗತಿಗಳನ್ನು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಕಾಲಘಟ್ಟದಲ್ಲಿ ಹರಡಿದ ಕೆಲವು ಗಾಳಿಸುದ್ಧಿಗಳ ಹಿನ್ನಲೆ ಇಟ್ಟುಕೊಂಡು ಚರ್ಚಿಸುವುದು ಈ ಲೇಖನದ ಉದ್ದೇಶವಾಗಿದೆ.

`ಗಾಳಿಸುದ್ಧಿ’: ಹಾಗಂದರೇನು?

ಮೊದಲಿಗೆ ಗಾಳಿಸುದ್ಧಿ ಅಂದರೇನು ಎಂದು ನೋಡೋಣ. ಸಾಮಾನ್ಯವಾಗಿ ಇವಕ್ಕೆ `ಸುಳ್ಳುಸುದ್ಧಿ’ ಎನ್ನುತ್ತಾರೆಯಾದರೂ ಇದು ಸರಿಯಾದ ಪದಬಳಕೆಯಲ್ಲ. ಏಕೆಂದರೆ ಎಲ್ಲ ಗಾಳಿಸುದ್ಧಿಗಳೂ ಸುಳ್ಳುಸುದ್ಧಿಗಳಾಗಿರುವುದಿಲ್ಲ. ಈ ಬಗ್ಗೆ ಮುಂದೆ ಚರ್ಚಿಸೋಣ. ಯಾರು ಯಾರಿಂದಲೋ ಹರಡುತ್ತಾ ಬರುವ ಖಚಿತವಲ್ಲದ ಸುದ್ಧಿಗಳನ್ನು ನಮ್ಮಲ್ಲಿ ಗಾಳಿಸುದ್ಧಿ ಎನ್ನಬಹುದು. ಗಾಳಿಯಂತೆ ಹರಡುವುದು ಅಥವಾ ಗಾಳಿಯ ಮೂಲಕ ಬರುವುದು ಎನ್ನುವ ಅರ್ಥದಲ್ಲಿ ಈ ಪದಪ್ರಯೋಗ ಬಳಕೆ ಬಂದಿರಬಹುದು. ಇದನ್ನು ಇನ್ನೂ ಸೂತ್ರೀಕರಿಸಿ ಹೇಳುವುದಾದರೆ, “ಸಾಕಷ್ಟು ಸಾಕ್ಷಾಧಾರಗಳಿಂದ ಖಚಿತಗೊಂಡಿರದ, ವರ್ತಮಾನದ ಸಾಂದರ್ಭಿಕ ಮಹತ್ವವುಳ್ಳ, ವೇಗವಾಗಿ ಹಬ್ಬಲು ಅನುಕೂಲವಾಗುವಂಥ ಆಕರ್ಷಕ ಮತ್ತು ಕುತೂಹಲಕಾರಿಯಾದ ಸುದ್ಧಿ, ವರದಿ ಅಥವಾ ಮಾಹಿತಿಯ ತುಣುಕುಗಳನ್ನು ಗಾಳಿಸುದ್ಧಿಗಳು” ಎಂದು ಕರೆಯಬಹುದು. ಇಂಗ್ಲಿಷಿನಲ್ಲಿ ಈ ಪದಕ್ಕೆ ಸಮಾನಾರ್ಥ ಪದಗಳಾಗಿ ಎರಡು ಪದಗಳು ಹೆಚ್ಚು ಬಳಕೆಯಲ್ಲಿವೆ. ಅವೆಂದರೆ ಒಂದು `ಗಾಸಿಪ್’ ಮತ್ತು ಇನ್ನೊಂದು `ರೂಮರ್’. ಮೇಲ್ನೋಟಕ್ಕೆ ಇವೆರಡೂ ಒಂದೇ ಎಂಬಂತೆ ಕಂಡರೂ ಸೂಕ್ಷ್ಮವಾಗಿ ನೋಡಿದರೆ ಅವುಗಳ ನಡುವೆ ಒಂದಿಷ್ಟು ಅರ್ಥವ್ಯತ್ಯಾಸ ಇರುವುದನ್ನು ನಾವು ಗುರುತಿಸಬಹುದು.
ಒಬ್ಬ ವ್ಯಕ್ತಿಯ ಬಗ್ಗೆ ಅಥವಾ ಒಂದು ಘಟನೆಯ ಬಗ್ಗೆ ಇನ್ನೊಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಥವಾ ಗುಂಪಿನೊಂದಿಗೆ ಕುತೂಹಲಕಾರಿಯಾದ ಆದರೆ ಖಚಿತವಲ್ಲದ ಸುದ್ಧಿ, ವರದಿ, ಮಾಹಿತಿಯ ತುಣುಕೊಂದನ್ನು ಹಂಚಿಕೊಳ್ಳುವುದನ್ನು ಸಾಮಾನ್ಯವಾಗಿ `ಗಾಸಿಪ್’ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇವು ನಾವು ಸಾರ್ವಜನಿಕವಾಗಿ ಹೇಳಿಕೊಳ್ಳಲು ಇಷ್ಟಪಡದ ವಿಷಯಗಳಿಗೆ ಹೆಚ್ಚಾಗಿ ಸಂಬಂಧಿಸಿರುತ್ತವೆ. ಗಂಡುಹೆಣ್ಣಿನ ಸಂಬಂಧಗಳಾದ ಪ್ರೀತಿ-ಪ್ರೇಮ, ಲೈಂಗಿಕ ಸಂಬಂಧ, ಲಂಚ, ಇತ್ಯಾದಿಗಳಿಗೆ ಹೆಚ್ಚಾಗಿ ಸಂಬಂಧಿಸಿರುತ್ತವೆ. ಇವುಗಳಲ್ಲಿ ಗಂಡುಹೆಣ್ಣಿನ ಸಂಬಂಧದ ಸುದ್ಧಿತುಣುಕುಗಳದ್ದೇ ಸಿಂಹಪಾಲು. ಇವು ತೀರಾ ಖಾಸಗೀ ವಲಯದಲ್ಲಿ, ಸಮಯ ಕಳೆಯಲೆಂದು ಆಡುವ ಮಾತುಗಳಲ್ಲಿ ಹರಡಿಕೊಳ್ಳುವುದು ಹೆಚ್ಚು. ಇವು ಒಂದು ನಿರ್ಧಿಷ್ಟ ಉದ್ದೇಶ ಎಂಬುದು ಇಲ್ಲದ ಕೇವಲ ಬಾಯಿಯ ಚಟಕ್ಕೆ ಆಡುವ ಮಾತುಗಳಾಗಿರುತ್ತವೆ. ಇವನ್ನು `ಚಟಸುದ್ಧಿಗಳು’ ಎಂದು ಕರೆಯಬಹುದು. ಬೇಕಾದರೆ `ಎಲೆಯಡಿಕೆ ಸುದ್ಧಿ’ ಅಥವಾ `ತಾಂಬೂಲಸುದ್ಧಿ’ ಎಂದೂ ಕರೆದುಕೊಳ್ಳಬಹುದು! ಇಂತಹ `ಎಲೆಯಡಿಕೆ ಸುದ್ಧಿ’ಗಳ ಜೀವಿತಾವದಿ ತೀರಾ ಕಡಿಮೆ. ಒಂದು ಸುದ್ಧಿ ಜನರ ಬಾಯಿಗೆ ಇನ್ನೊಂದು ಇಂತಹ ಸುದ್ಧಿ ಸಿಗುವತನಕ ಮಾತ್ರ ಇರುತ್ತದೆ.  ಸಿಗದಿದ್ದರೂ ತಮ್ಮಷ್ಟಕ್ಕೆ ತಾವೇ ಕೆಲವೇ ಕೆಲವು ದಿನಗಳ ನಂತರ ಇವು ಸತ್ತುಹೋಗುತ್ತವೆ. ಇವುಗಳಿಂದ ಸಂಬಂಧಿಸಿದ ವ್ಯಕ್ತಿಗೆ ಒಂದಿಷ್ಟು ಮುಜುಗರವಾಗುವುದು ನಿಜವಾದರೂ ಅದು ಅಷ್ಟೇನೂ ದೊಡ್ಡಪ್ರಮಾಣದಲ್ಲಿ ಇರುವುದಿಲ್ಲ.
ಆದರೆ `ರೂಮರ್’ಗಳು ಗಾಸಿಪ್ಗಳಂಥಲ್ಲ.  ಅವುಗಳು ಕೂಡ ಗಾಸಿಪ್ಗಳ ಬಹಳಷ್ಟು ಲಕ್ಷಣಗಳನ್ನು ಹೊಂದಿದ್ದರೂ ಅವುಗಳಿಗಿಂತ ವಿಶಿಷ್ಟವಾದ ಕೆಲವು ಲಕ್ಷಣಗಳನ್ನು ಹೊಂದಿರುವ ಮೂಲಕ ಅವುಗಳಿಗಿಂತ ಭಿನ್ನವಾಗಿ ನಿಲ್ಲುತ್ತವೆ. ಅಂತಹ ವಿಶಿಷ್ಟ ಅಂಶಗಳಲ್ಲಿ ಮುಖ್ಯವಾದದ್ದು ಇವುಗಳು ಗಾಸಿಪ್ಗಳಂತೆ ಉದ್ದೇಶವಿಲ್ಲದ ಸುದ್ಧಿತುಣುಕುಗಳಾಗಿರದೆ ನಿರ್ದಿಷ್ಠವಾದ ಉದ್ದೇಶದಿಂದ ರಚನೆಯಾದವುಗಳಾಗಿರುತ್ತವೆ ಎಂಬುದು. ಅವುಗಳಂತೆ ಇವು ಕಾಲಕಳೆಯಲು ಆಡುವ ಮಾತು ಕಳಿಸುವ ಸಂದೇಶಗಳಾಗಿರದೇ ಸಮಯಮಾಡಿಕೊಂಡು ಆಡುವ ಮಾತುಗಳಾಗಿರುತ್ತವೆ. ಇವನ್ನು `ಮಾಡಲೇಬೇಕಾದ ಕೆಲಸ’ವೆಂಬಂತೆ ಮೈಮೇಲೆ ತೆಗೆದುಕೊಂಡು ರಚಿಸುವ ಮತ್ತು ಹಂಚುವ ಕೆಲಸವನ್ನು ಜನ ಹಟಕ್ಕೆ ಬಿದ್ದವರಂತೆ ತೊಡಗಿಕೊಂಡು ಮಾಡುತ್ತಿರುತ್ತಾರೆ. ಹಾಗಾಗಿ ಅವು `ಚಟಸುದ್ಧಿ’ಗಳಾದರೆ ಇವು `ಹಟಸುದ್ಧಿ’ಗಳು!
ಈ ಹಟಸುದ್ಧಿಗಳು ನೇರವಾಗಿ `ರೂಮರ್’ ಮಾದರಿಯ ಹಟಸುದ್ಧಿಗಳಾಗಿಯೇ ಹುಟ್ಟಿ ಹಬ್ಬಬಹುದು ಅಥವಾ `ಗಾಸಿಪ್’ ಮಾದರಿಯ ಚಟಸುದ್ಧಿಗಳಾಗಿ ಹುಟ್ಟಿ ಬಾಲ್ಯವನ್ನು ಕಳೆದು  ಬೆಳೆಯುವ ಯಾವುದೋ ಒಂದು ಹಂತದಲ್ಲಿ `ಹಟಸುದ್ಧಿ’ಗಳಾಗಿ ವಿರಾಟ್ ಸ್ವರೂಪವನ್ನು ಪಡೆಯಬಹುದು. ಇದಕ್ಕೆ ಒಂದು ಉದಾಹರಣೆಯನ್ನು ಭಾರತೀಯ ಸಂದರ್ಭದಲ್ಲಿ ಕೊಡುವುದಾದರೆ ಒಬ್ಬ ಮಹಿಳೆಗೆ ಸಂಬಂಧಿಸಿದಂತೆ `ಅವಳು ಯಾರದ್ಯಾರದೋ ಗಂಡಸರ ಜೊತೆ ತಿರುಗಾಡುತ್ತಿದ್ದಾಳಂತೆ’ ಎಂಬುದು ಒಂದು ಗಾಸಿಪ್ ಆಗಿರುತ್ತದೆ. ಆದರೆ ಇದೇ ಬೆಳೆದು `ಅವಳು ಗರ್ಭಿಣಿ ಆಗಿದ್ದಳಂತೆ ಗರ್ಭ ತೆಗಿಸಿಕೊಂಡು ಬಂದಳಂತೆ’ ಎನ್ನುವ ಹಂತಕ್ಕೆ ತಲುಪಿದರೆ ಅದು ಗಾಸಿಪ್ ಸ್ವರೂಪದಿಂದ ರೂಮರ್ ಸ್ವರೂಪಕ್ಕೆ ಬೆಳದಿದೆ ಎಂದೇ ಅರ್ಥ!
ಈ ಹಟಸುದ್ಧಿಗಳು ಕೂಡ ಬಹಳಷ್ಟು ಸಂದರ್ಭದಲ್ಲಿ ಚಟಸುದ್ಧಿಗಳಂತೆ ಊಹೆಯನ್ನು ಅವಲಂಬಿಸಿ ರಚನೆಯಾಗಿರುತ್ತವೆ. ಇವಕ್ಕೂ ಖಚಿತತೆ ಎಂಬುದು ಇರುವುದಿಲ್ಲ. ಗಾಸಿಪ್ಗಳು ಅದಕ್ಕೆ ಈಡಾಗುವ ವ್ಯಕ್ತಿಯನ್ನು ಮುಜುಗರಕ್ಕೆ ಸಿಕ್ಕಿಸುವ ಕೆಲಸವನ್ನು ಮಾತ್ರ ಮಾಡಿದರೆ ಇವು ಒಂದು ಹೆಜ್ಜೆ ಮುಂದೆ ಹೋಗಿ ಅವನನ್ನು, ಅವಳನ್ನು ಅಥವಾ ಅವರನ್ನು ಅವಮಾನಕ್ಕೀಡುಮಾಡುವ, ನೋವು ಅನುಭವಿಸುವಂತೆ ಮಾಡುವ ಅಷ್ಟೇ ಏಕೆ ದ್ವೇಷ, ಅಸೂಯೆ, ತಿರಸ್ಕಾರ ಇತ್ಯಾದಿ ನಕಾರಾತ್ಮಕ ಗುಣಗಳನ್ನು ಉದ್ಧೀಪನಗೊಳಿಸುವ ಕೆಲಸವನ್ನೂ ಮಾಡುತ್ತವೆ. ಹಾಗಾಗಿ ಇವುಗಳ ಪರಿಣಾಮ ಅವುಗಳಿಗಿಂತ ಹೆಚ್ಚು ವ್ಯಾಪಕ ಮತ್ತು ಹೆಚ್ಚು ಗಾಯಕ! ಈ ಹಿನ್ನಲೆಯಲ್ಲಿ `ಗಾಸಿಪ್’ ಮಾದರಿಯ ಗಾಳಿಸುದ್ಧಿಗಳನ್ನು ಒಂದು ರೀತಿ `ನಿರುಪದ್ರವಿ’ ಅಥವಾ `ಅಲ್ಪೋಪದ್ರವಿ’ಗಳೆಂದು ಕರೆಯಬಹುದಾದರೂ `ರೂಮರ್’ ಮಾದರಿಯ ಗಾಳಿಸುದ್ಧಿಗಳು ಮಾತ್ರ ನಿಸ್ಸಂದೇಹವಾಗಿ `ತೀವ್ರೋಪದ್ರವಿ’ಗಳೆಂದೇ ಕರೆಯಬೇಕಾಗುತ್ತದೆ!!

ಗೋಳದ ತುಂಬಿಲ್ಲೆ ಹರಡಿದೆ ಗಾಳಿಸುದ್ಧಿಯ ಇತಿಹಾಸ

ಗಾಳಿಸುದ್ಧಿಗಳು ಗೋಳದ ತುಂಬೆಲ್ಲ ಇವೆಯೇ? ಈ ಗಾಳಿಸುದ್ಧಿಗೂ ಒಂದು ಇತಿಹಾಸ ಎಂಬುದು ಇದೆಯೇ? ಎಂದು ಯಾರಾದರೂ ಹುಬ್ಬೇರಿಸಿ ಕೇಳಬಹುದು. ಆದರೆ ಈ ಎರಡೂ ಪ್ರಶ್ನೆಗಳಿಗೂ `ಹೌದು’ ಎಂಬುದೇ ಸರಿಯಾದ ಉತ್ತರ.  ಗಾಳಿಸುದ್ಧಿಗಳನ್ನು ಹುಟ್ಟಿಸಿ ಹರಡುವುದರಲ್ಲಿ ನಾವು ಅಂದರೆ ಭಾರತೀಯರು ಮಾತ್ರ ಇಲ್ಲ ಬೇರೆ ಬೇರೆ ದೇಶದವರೂ ಇದ್ದಾರೆ ಎಂಬ ಅಂಶವು ನಮ್ಮನ್ನು ಅಪರಾಧಿ ಪ್ರಜ್ಞೆಯ ನರಳುವಿಕೆಯಿಂದ ತುಸು ನಿರಾಳಗೊಳಿಸಲೂಬಹುದೇನೋ. ಇನ್ನು ಇದಕ್ಕೊಂದು ಇತಿಹಾಸ ಇರುವುದಂತೂ ಸತ್ಯ. ಪ್ರಪಂಚದ ವಿವಿಧ ದೇಶಗಳಲ್ಲಿ ಹರಡಿ ಹಾನಿಯುಂಟುಮಾಡಿದ ಅನೇಕ ಗಾಳಿಸುದ್ಧಿಗಳನ್ನು ಸಂಗ್ರಹಿಸಿ ಅವನ್ನು ಶಿಸ್ತುಬದ್ಧವಾಗಿ ಅಧ್ಯಯನ ಮಾಡುವ ಕೆಲಸಗಳನ್ನೂ ಅನೇಕ ಸಮಾಜಶಾಸ್ತ್ರಜ್ಞರು, ವಿದ್ವಾಂಸರು ಮಾಡಿದ್ದಾರೆ. ಈ ಬಗ್ಗೆ ಹಲವು ಕೃತಿಗಳೂ ಪ್ರಕಟವಾಗಿವೆ. ಇಂಥವುಗಳಲ್ಲಿ ಇಲ್ಲಿ ಒಂದನ್ನು ಹೆಸರಿಸುವುದಾದರೆ ಅದು ಅಮೇರಿಕೆಯ ರಾಬರ್ಟ್ ಬಾತ್ಲೋಮ್ (Robert Bartholomew) ಮತ್ತು ಪೀಟರ್ ಹಾಸಲ್ (Peter Hassal) ಎಂಬ ತಜ್ಞರಿಬ್ಬರು ಜೊತೆಯಾಗಿ ರಚಿಸಿರುವ  `ಜನಪ್ರಿಯ ಭ್ರಮೆಗಳ ವರ್ಣಮಯ ಇತಿಹಾಸ’  (A Colorful History of Popular Delusions) ಎಂಬ ಕೃತಿ. ಇನ್ನು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ, ಬೇರೆ ಬೇರೆ ಕಾಲಘಟ್ಟದಲ್ಲಿ ಹರಡಿ ಹಾನಿಯುಂಟುಮಾಡಿದ ಕೆಲವು ಗಾಳಿಸುದ್ಧಿಗಳನ್ನು ನೋಡೋಣ:

ಕುಷ್ಟರೋಗಕ್ಕೆ ರಕ್ತಸ್ನಾನದ ಮದ್ದು

ಹದಿನೆಂಟನೆಯ ಶತಮಾನದಲ್ಲಿ ಆಳ್ವಿಕೆ ಮಾಡಿದ ಪ್ರಾನ್ಸ್ ದೊರೆ ಆರನೆ ಲೂಯಿ ಬಗ್ಗೆ ಒಂದು ಗಾಳಿಸುದ್ಧಿ ಎದ್ದಿತ್ತು. “ರಾಜನು ಕುಷ್ಠರೋಗದಿಂದ ಬಳಲುತ್ತಿದ್ದಾನೆ; ಮತ್ತು ಮಕ್ಕಳ ರಕ್ತದಲ್ಲಿ ಸ್ನಾನಮಾಡಿ ಅದನ್ನು ವಾಸಿಮಾಡಿಕೊಳ್ಳಲು ಮಕ್ಕಳನ್ನು ಅಪಹರಿಸುತ್ತಿದ್ದಾನೆ” ಎಂಬದು ಆ ಸುದ್ಧಿ. (ಆ ಕಾಲದಲ್ಲಿ ಮಕ್ಕಳ ರಕ್ತದಿಂದ ಸ್ನಾನಮಾಡಿದರೆ ಕುಷ್ಠರೋಗ ವಾಸಿಯಾಗುತ್ತದೆ ಎಂದು ಅಲ್ಲಿ ಕೆಲವರು ನಂಬಿದ್ದರು).  ರಾಜನ ಅಧಿಕಾರಿಗಳು ರಸ್ತೆಯಲ್ಲಿನ ಮಕ್ಕಳನ್ನು ಹಿಡಿದುಕೊಂಡು ಹೋಗುತ್ತಿದ್ದದ್ದು ಈ ಗಾಳಿಸುದ್ಧಿಗೆ ಪುಷ್ಟಿಕೊಟ್ಟಿತ್ತು. ಇದರಿಂದ ರಾಜ್ಯದ ಜನರೆಲ್ಲ ಆತಂಕಕ್ಕೆ ಒಳಗಾಗಿಬಿಟ್ಟಿದ್ದರು. ಆದರೆ ರಾಜಭಟರು ಮಕ್ಕಳನ್ನು ಒಯ್ಯುತ್ತಿದ್ದುದು ನಿಜವಾದರೂ ಅದರ ಹಿಂದಿನ ಉದ್ದೇಶ ಬೇರೆಯೇ ಇತ್ತು. ಅವರಿಗೆ ರಸ್ತೆಗಳಲ್ಲಿ ಅನಗತ್ಯ ಅಡೆತಡೆ ಉಂಟಾಗದಂತೆ ಕ್ರಮಕೈಗೊಳ್ಳಲು ಆದೇಶ ನೀಡಲಾಗಿತ್ತು. ಮತ್ತು ಅಡ್ಡಾದಿಡ್ಡಿ ಅಡ್ಡಾಡುವವರನ್ನು ಹಿಡಿದುಕೊಟ್ಟ ಪೋಲೀಸರಿಗೆ ಬಹುಮಾನಗಳನ್ನೂ ಕೊಡಲಾಗುತ್ತಿತ್ತು. ಈ ಕಾರಣದಿಂದ ಅವರು ರಸ್ತೆಯಲ್ಲಿನ ಮಕ್ಕಳನ್ನು ಹಿಡಿದೊಯ್ಯುತ್ತಿದ್ದರು. ಮತ್ತು ನಂತರ ಒಂದಿಷ್ಟು ವಿಚಾರಣೆ ಇತ್ಯಾದಿಗಳ ನಂತರ ಅವರನ್ನು ಅವರ ಪಾಲಕರಿಗೆ ಒಪ್ಪಿಸುತ್ತಿದ್ದರು. ಅವರು ಮಕ್ಕಳನ್ನು ಹಿಡಿದೊಯ್ಯುತ್ತಿದ್ದದ್ದು ಜನರಿಗೆ ಕಾಣಿಸಿತು. ಅವರು ಮರಳಿ ಒಪ್ಪಿಸಿದ್ದು ಜನರಿಗೆ ಕಾಣಲಿಲ್ಲ. ಸರಿ ಗಾಳಿಸುದ್ಧಿ ಹಬ್ಬಿತು!

ಕ್ರೈಸ್ತರ ಬಾವಿಗೆ ವಿಷಹಾಕುವಿಕೆ: ಯಹೂದಿಗಳ ಬಲಿ

ಇದಕ್ಕೂ ಮೊದಲು ನಾಲ್ಕುನೂರು ವರ್ಷಗಳ ಹಿಂದೆ ಅಂದರೆ ಹದಿನಾಲ್ಕನೆಯ ಶತಮಾನದಲ್ಲಿ  ಯುರೋಪಿನಲ್ಲಿ ಹರಡಿದ ಒಂದು ಗಾಳಿಸುದ್ಧಿ ಸಾವಿರಾರು ಜನರ ಜೀವವನ್ನೇ ಬಲಿತೆಗೆದುಕೊಂಡಿತು. ಅಲ್ಲಿನ `ಯಹೂದಿಗಳು ಕ್ರೈಸ್ತರ ಕುಡಿಯುವ ನೀರಿನ ಬಾವಿಗಳಿಗೆ ವಿಷವನ್ನು ಹಾಕಿದರೆ ಪ್ಲೇಗಿನಿಂದ ಅವರಿಗೆ ಸೈತಾನನು ರಕ್ಷಣೆ ನೀಡುತ್ತಾನೆ ಎಂದು ನಂಬಿ ಹಾಗೆ ಮಾಡುತ್ತಿದ್ದಾರೆ” ಎಂಬ ಒಂದು ಸುದ್ಧಿ ಕಾಡ್ಬೆಂಕಿಯಂತೆ ಹಬ್ಬಿತು. ಅದಕ್ಕೆ ಪ್ರತಿಕ್ರಿಯೆಯಾಗಿ ಅನೇಕ ಸಾವಿರ ಜನ ಯಹೂದಿಗಳನ್ನು ಹಿಡಿದು ಕೊಲ್ಲಲಾಯಿತು. 1321ರಲ್ಲಿ ಪ್ರಾನ್ಸಿನ ಒಂದೇ ನಗರದಲ್ಲಿ ಸುಮಾರು ಐದು ಸಾವಿರ ಜನ ಯಹೂದಿಗಳನ್ನು ಜೀವಂತ ಸುಟ್ಟದ್ದು ದಾಖಲಾಯಿತು. ಅದರಂತೆ ಅಕ್ಕಪಕ್ಕದ ಅನೇಕ ದೇಶಗಳಲ್ಲಿ ಯಹೂದಿಗಳು ಚಿತ್ರಹಿಂಸೆಗೆ ಒಳಪಡಿಸಲಾಯಿತು. ಅವರು ವಾಸಿಸುವ ಶಿಬಿರಗಳನ್ನು ಸುಟ್ಟುಹಾಕಲಾಯಿತು. ಅಷ್ಟೇ ಏಕೆ ಜರ್ಮನಿಯು ಅಧಿಕೃತವಾಗಿ ಯಹೂದಿಗಳ ಈ ಕುಡಿಯುವ ನೀರಿಗೆ ವಿಷ ಬೆರೆಸುವ ಕಾರ್ಯವನ್ನು (ಅವರು ವಾಸ್ತವವಾಗಿ ಮಾಡಿರಲಿಲ್ಲವಾದರೂ) ಖಂಡಿಸಿ ಕಾನೂನನ್ನೇ ರಚಿಸಿತು!

ಅಮೇರಿಕ ಅಧ್ಯಕ್ಷರ ನಿವಾಸದಲ್ಲಿ ಸ್ಪೋಟ!

ಟ್ವಿಟರ್ ವಾಟ್ಸಾಪ್ ಗಳಂತಹ ಸಾಮಾಜಿಕ ಸುದ್ಧಿಮಾಧ್ಯಮಗಳು ಬಂದಮೇಲೆ ಇಂತಹ ಗಾಳಿಸುದ್ಧಿಗಳಿಗೆ ಸವಾರಿಮಾಡಲು ಒಳ್ಳೆಯ ಕುದುರೆಗಳು ಸಿಕ್ಕಂತಾಗಿದೆ. ಇಂತಹ ಮಾಧ್ಯಮಗಳು ಬಂದಮೇಲೆ ಅಂದರೆ ಇತ್ತೀಚಿನ ವರ್ಷಗಳಲ್ಲಿ ಎದ್ದು ಜಾಗತಿಕ ಪರಿಣಾಮವನ್ನುಂಟುಮಾಡಿದ ಸುದ್ಧಿಗಳಿಗೆ ಒಂದು ಉದಾಹರಣೆಯಾಗಿ 2013ರ ಏಪ್ರಿಲ್ ತಿಂಗಳಲ್ಲಿ ಒಂದು ನಕಲಿ ಟ್ವಿಟರ್ ಖಾತೆಯಿಂದ ಹರಿಬಿಟ್ಟು ಒಂದು ಗಾಳಿಸುದ್ಧಿಯನ್ನು ಕೊಡಬಹುದು. ಚಿಕ್ಕ ಸುದ್ಧಿಯೊಂದು ಇಡೀ ಪ್ರಪಂಚದ ಆರ್ಥಿಕ ಪರಿಸ್ಥಿತಿಯನ್ನು ಎಷ್ಟು ಏರು ಪೇರು ಮಾಡಬಹುದು ಎಂಬುದಕ್ಕೂ ಈ ಗಾಳಿಸುದ್ಧಿ ಸೂಕ್ತ ಉದಾಹರಣೆಯಾಗುತ್ತದೆ. ಅಂದಹಾಗೆ ಈ ಗಾಳಿಸುದ್ಧಿ ಏನು ಗೊತ್ತೆ? ಅಮೇರಿಕೆಯ “ವೈಟ್ ಹೌಸ್ ನಲ್ಲಿ ಉಂಟಾದ ಸ್ಪೋಟದಲ್ಲಿ ಅಧ್ಯಕ್ಷ ಬರಾಕ್ ಒಬಾಮ ಗಾಯಗೊಂಡಿದ್ದಾರೆ.” ಎಂಬುದು. ಈ ಒಂದು ಚಿಕ್ಕ ಟ್ವಿಟರ್ ಸಂದೇಶ ಇಡೀ ಪ್ರಪಂಚದ ಹಣಕಾಸು ಮಾರುಕಟ್ಟೆಗಳ ಮೇಲೆ ಯಾವ ಮಟ್ಟದ ಅಸ್ಥಿರತೆಯುಂಟುಮಾಡಿತು ಎಂದರೆ ಷೇರುಪೇಟೆ ಸೂಚ್ಯಾಂಕ ಒಮ್ಮೆಲೆ 500 ರಷ್ಟು ಕುಸಿದು ಸುಮಾರು  130 ಶತಕೋಟಿ ಡಾಲರಿನಷ್ಟು ನಷ್ಟವನ್ನುಂಟುಮಾಡಿತು!

ಮಾಟಮಂತ್ರಗಳಿಂದ ಹರಡುತ್ತಿರುವ ಪ್ಲೇಗ್

1998 ರಲ್ಲಿ ಇಂಡೋನೇಷ್ಯಾ ಸಂಕಷ್ಟದಲ್ಲಿತ್ತು. ಅಲ್ಲಿ ಆಗ ಪ್ಲೇಗ್ ಕಾಯಿಲೆ ಹರಡುತ್ತಿತ್ತು.  ಎಲ್ಲಿ ನೋಡಿದಲ್ಲಿ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಪ್ರತಿಭಟನೆ, ಅರಾಜಕತೆ ಎದ್ದುಕಾಣುತ್ತಿತ್ತು. ಅದೇ ಸಮಯದಲ್ಲಿ ಅಲ್ಲಿನ ಗ್ರಾಮೀಣ ಭಾಗದಲ್ಲಿ ಒಂದು ಗಾಳಿಸುದ್ಧಿ ಹಬ್ಬಿತ್ತು. ಅದು ಪ್ಲೇಗ್ ಹರಡುವಿಕೆಗೆ ಸಂಬಂಧಿಸಿದ್ದು. ಅಲ್ಲಿ ಮಂತ್ರವಾದಿಗಳು ಅಂದರೆ ಮಾಟಗಾರರ ನೆರವಿನಿಂದ ನಮಗೆ ಆಗದವರು ನಮ್ಮ ಮನೆಗಳಿಗೆ ಪ್ಲೇಗ್ ಬರುವಂತೆ `ಮಾಟ’ ಮಾಡಿಸುತ್ತಿದ್ದಾರೆ ಎಂಬುದು ಆ ಸುದ್ಧಿ. ಈ ಸುದ್ಧಿಯಿಂದ ಜನ ಮಂತ್ರವಾದಿಗಳನ್ನು ಕಂಡಕಂಡಲ್ಲಿ ಹಿಡಿದು ಹೊಡೆದು ಕೊಲ್ಲತೊಡಗಿದರು. ಕೊನೆಗೆ ಸರ್ಕಾರ ಇಂತಹ ಮಂತ್ರವಾದಿಗಳ ಜೀವರಕ್ಷಣೆಗಾಗಿ ಅವರಿಗೆ ಪೋಲೀಸ್ ಸ್ಟೇಷನ್ ಅಂತಹ ಸ್ಥಳಗಳಲ್ಲಿ ರಕ್ಷಣೆ ಕೊಡುವ ವ್ಯವಸ್ಥೆ ಮಾಡಿತು. ಆದರೆ ಜನ ಅಷ್ಟಕ್ಕೂ ಸುಮ್ಮನಿರದೆ ಅಲ್ಲಿಗೂ ನುಗ್ಗಿ ಅವರನ್ನು ಹೊರಗೆಳೆದುಕೊಂಡು ಹೊಡೆದು ಕೊಲ್ಲತೊಡಗಿದರು. ಹೀಗೆ ಇಡೀ ದೇಶದ ಜನಜೀವನ ಅಸ್ತವ್ಯಸ್ತಗೊಂಡುಬಿಟ್ಟಿತು.

ಕಾಮೋತ್ತೇಜಕ ಸೇಂಟ್!

ಮಧ್ಯ ಏಷಿಯಾ ರಾಷ್ಟ್ರಗಳಲ್ಲಿ ಹರಡಿದ ಒಂದು ಗಾಳಿಸುದ್ಧಿ ಏನೆಲ್ಲ ಪರಿಣಾಮವನ್ನುಂಟುಮಾಡಿತು ನೋಡಿ: ಇದು ಕಳೆದ ಶತಮಾತನದ ತೊಂಬತ್ತರ ದಶಕದಲ್ಲಿ ಹಬ್ಬಿದ ಸುದ್ಧಿ. 1996 ರಲ್ಲಿ ಈಜಿಪ್ತಿನ ಪಟ್ಟಣವೊಂದರಲ್ಲಿ ಈ ಸುದ್ಧಿಯ ಹರಡುವಿಕೆ ಆರಂಭವಾಯಿತು. ಆ “ಪಟ್ಟಣದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಾಮೋತ್ತೇಜಕ ಅಂಟುಲೇಪನವೊಂದನ್ನು (ಗಮ್) ಕೊಂಡು ಅದರಿಂದ ಉತ್ತೇಜನಗೊಂಡು ಅನೈತಿಕವಾದ ಸ್ವೇಚ್ಚಾಚಾರದ ಸಂತೋಷಕೂಟಗಳನ್ನು ನಡೆಸುತ್ತಿದ್ದಾರೆ” ಎಂಬುದು ಆ ಸುದ್ಧಿ. ಅಲ್ಲಿನ ಪಾರ್ಲಿಮೆಂಟಿನ ಸದಸ್ಯರೊಬ್ಬರು ಹೇಳಿಕೆ ನೀಡಿ `ಇಸ್ರೇಲಿ ಸರ್ಕಾರ ಈ  ಅಂಟುಲೇಪನವನ್ನು ತಮ್ಮ ದೇಶದ ವಿದ್ಯಾರ್ಥಿಗಳನ್ನು ದಾರಿತಪ್ಪಿಸುವುದಕ್ಕಾಗಿ ಹಂಚಿದೆ’ ಎಂದು ಆಪಾದಿಸಿದರು. (ನಮ್ಮ ದೇಶದಲ್ಲಿ ಏನಾದರೂ ಕೆಟ್ಟದ್ದು ಆದರೆ ಅದಕ್ಕೆಲ್ಲ ನಾವು `ವೈರಿ’ರಾಷ್ಟ್ರವೆಂದು ಮಾನಸಿಕವಾಗಿ ಆಗಲೇ ಸ್ವೀಕರಿಸಿರುವ ಪಕ್ಕದ ರಾಷ್ಟ್ರದ ಮೇಲೆ ಗೂಬೆ ಕೂರಿಸುವ ಕ್ರಮವಿದೆಯಲ್ಲ! ಅದೇ ರೀತಿ ಅಲ್ಲಿಯೂ ಇತ್ತು).
ಇದು ಯಾವ ಮಟ್ಟದ ಪ್ರಚಾರ ಪಡೆದುಕೊಂಡಿತು ಎಂದರೆ ಮಸೀದಿಗಳ ಧ್ವನಿವರ್ಧಕಗಳ ಮೂಲಕ ಜನತೆ ಈ ಅಂಟುಲೇಪನವನ್ನು ಬಳಸದೇ ಅದರಿಂದ ದೂರವಿರಲು ಎಚ್ಚರಿಕೆಗಳನ್ನು ನೀಡುವ ಕೆಲಸ ಕೂಡ ನಡೆಯಿತು. ಈ ಕಾಮೋತ್ತೇಜಕ ಅಂಟುಲೇಪನವನ್ನು ಮೈಗೆ ಪೂಸಿಕೊಳ್ಳುವ `ಸುಗಂಧ ದ್ರವ್ಯ’ (ಸೇಂಟ್)ದ ರೂಪದಲ್ಲಿ ಮಾರಲಾಗುತ್ತದೆ ಎಂದು ಊಹಿಸಿ ಅಂತಹ ಕ್ರಮವನ್ನು ತಡೆಯಲೆಂದು ಅನೇಕ ಅಂಗಡಿಗಳನ್ನು ಮುಚ್ಚಿ ಅವುಗಳ ಮಾಲೀಕರನ್ನು ಬಂಧಿಸಲಾಯಿತು. ಆದರೆ ಎಲ್ಲಿಯೂ ಈ `ಕಳಂಕಿತ ದ್ರವ್ಯ’ ಸಿಗಲೇ ಇಲ್ಲ! ಅದರ ಮುಂದಿನ ವರ್ಷ ಇದೇ ಸುದ್ಧಿ ಗಾಜಿಯಾ ಪಟ್ಟಿಯಲ್ಲಿ, “ಈ ಕಾಮೋತ್ತೇಜಕವು ಸ್ಟ್ರಾಬೆರಿ ಹಣ್ಣುಗಳ ಮೂಲಕ ಮಹಿಳೆಯರಿಗೆ ಹಂಚಲ್ಪಡುತ್ತಿದ್ದು ಅದನ್ನು ಸೇವಿಸಿದ ಅವರೆಲ್ಲ ಕಾಮದಿಂದ ಹುಚ್ಚೆದ್ದು ತಾಳಲಾರದೆ `ವೇಶ್ಯೆಯರಾಗುತ್ತಿದ್ದಾರೆ” ಎಂದು ಸ್ವಲ್ಪ ರೂಪಾಂತರ ಹೊಂದಿ ಹರಡತೊಡಗಿತು!

ಮಕ್ಕಳನ್ನು ಕದಿಯುವ ಕಳ್ಳರ ಗ್ಯಾಂಗ್

ನಮ್ಮ ದೇಶದ ಒಂದು ಉದಾಹರಣೆಯನ್ನೇ ನೋಡುವುದಾದರೆ ಎರಡು ವರ್ಷಗಳ ಹಿಂದೆ ಹರಿದಾಡಿದ ಒಂದು ಗಾಳಿಸುದ್ಧಿ ಸುಮಾರು 29 ಜನರ ಜೀವವನ್ನು ಬಲಿತೆಗೆದುಕೊಂಡಿತು. “ಮಕ್ಕಳ ಕಳ್ಳರ ದೊಡ್ಡ ಗ್ಯಾಂಗೊಂದು ಬೇರೆ ಯಾವುದೋ ರಾಜ್ಯದಿಂದ ಬಂದಿದ್ದು ಅದು ಮಕ್ಕಳನ್ನು ಅಪಹರಿಸಿಕೊಂಡು ಹೋಗಿ ಅವರ ಅಂಗಾಂಗಗಳನ್ನು ಮಾರಾಟಮಾಡುತ್ತಿದೆ. ಅದು ಬೇರೆ ಬೇರೆ ಊರುಗಳಿಗೆ ಒಬ್ಬಿಬ್ಬರು ಬೈಕ್ ಸವಾರರನ್ನು ಕಳಿಸಿಕೊಟ್ಟು ಮಕ್ಕಳನ್ನು ಅಪಹರಿಸುತ್ತಿದೆ” ಎಂಬುದು ಆಸುದ್ಧಿ. ಇಬ್ಬರು ಮೋಟರ್ ಬೈಕ್ ಸವಾರರು ಮಗುವೊಂದನ್ನು ಎತ್ತಿಕೊಂಡು ಹೋಗುವ ದೃಶ್ಯವಿರುವ ಸಿ.ಸಿ.ಟಿ.ವಿ.ಯ ದೃಶ್ಯಾವಳಿಯನ್ನು ಹೋಲುವ ವಿಡಿಯೋ ತುಣುಕೊಂದರ ಜೊತೆಗೆ ಹರಿದಾಡಿದ ಈ ಸುದ್ಧಿ ದೇಶಾದ್ಯಂತ ತೀವ್ರಗತಿಯಲ್ಲಿ ಹರಡಿದ ಪರಿಣಾಮವಾಗಿ ಅನೇಕ ಜನ ಸಹಜವಾಗಿ ತೀವ್ರ ಆತಂಕಕ್ಕೊಳಗಾದರು. ಅನೇಕ ಕಡೆ ಅವರು ಅಪರಿಚಿತರಾದ ಬೈಕ್ ಸವಾರರನ್ನು ಸಂಶಯದಿಂದ ಹಿಡಿದು ಹೊಡೆದು ಕೊಲ್ಲತೊಡಗಿದರು. ಈ ಬಗ್ಗೆ ವರದಿಯೊಂದು ಪ್ರಕಟವಾಗುವ ವೇಳೆಗೆ ಈ ಗುಂಪುಹತ್ಯೆಗಳ ಪ್ರಮಾಣ 29 ಮುಟ್ಟಿತ್ತಾದರೂ ಅದು ಇನ್ನೂ ಮುಂದುವರೆದಿತ್ತು! ವಾಸ್ತವವಾಗಿ ಆ ವಿಡಿಯೋ ತುಣುಕು ಪಾಕಿಸ್ತಾನದ ಕರಾಚಿಯಲ್ಲಿ, `ಮಕ್ಕಳ ಸುರಕ್ಷತೆ ಬಗ್ಗೆ ಅರಿವನ್ನುಂಟುಮಾಡುವ ಸಲುವಾಗಿ, ಶೈಕ್ಷಣಿಕ ಉದ್ದೇಶದಿಂದ ಚಿತ್ರೀಕರಿಸಿದ ದೃಶ್ಯಾವಳಿಯಾಗಿದ್ದು ಅದನ್ನು ಯಾರೋ ಕಿಡಿಗೇಡಿಗಳು ಪರಿಷ್ಕರಿಸಿ ಭಾರತದಲ್ಲಿ ಹರಿಬಿಟ್ಟಿದ್ದರು.
ಹೀಗೇ ಈ ಗಾಳಿಸುದ್ಧಿಗಳ ಇತಿಹಾಸವೃಕ್ಷದ ಬೇರುಗಳು ಗೋಳದೆಲ್ಲೆಡೆಯಲ್ಲಿ ಆಳವಾಗಿಯೂ ಮತ್ತು ಅಗಲವಾಗಿಯೂ ಪಸರಿಸಿವೆ. ಈ ವಿಶಾಲ ವೃಕ್ಷದ ಸಾವಿರಾರು ಬೇರುಗಳಲ್ಲಿ ಸಾಂಕೇತಿಕವಾಗಿ ಕೆಲವನ್ನು ಮಾತ್ರ ಇಲ್ಲಿ ಎತ್ತಿ ತೋರಿಸಲಾಗಿದೆ.

ಹಂಚಿಕೆಯ ಚಟ ಮತ್ತು ವಿವೇಕಯುತ ನಿರ್ಧಾರ

ಗಾಳಿಸುದ್ಧಿಗಳೆಲ್ಲವೂ ಸುಳ್ಳುಸುದ್ಧಿಗಳಲ್ಲ ಎಂಬ ಮಾತು ಆಗಲೇ ಬಂದಿದೆ. ಗಾಳಿಸುದ್ಧಿಗಳೆಂದರೆ, ‘ತ್ವರಿತವಾಗಿ ಹರಡುವಗುಣವುಳ್ಳ ಖಚಿತವಲ್ಲದ ಸಾಂದರ್ಭಿಕ ಮಹತ್ವದ ಕುತೂಹಲಕಾರಿ ಸುದ್ಧಿ ತುಣುಕುಗಳುಎಂದು ಮಾತ್ರ ಅರ್ಥೈಸಬಹುದಾದ್ದರಿಂದ ಅವುಗಳಲ್ಲಿ ಕೆಲವು ನೈಜ ಮತ್ತು ವಾಸ್ತವ ಸುದ್ಧಿಗಳೂ ಇರಬಹುದು. ಆದರೆ ಸಾಮಾನ್ಯವಾಗಿ ಕಂಡುಬರುವಂತೆ ಅವುಗಳಲ್ಲಿ ಸುಳ್ಳು (Fake) ಮತ್ತು ತಪ್ಪು (False) ಸುದ್ಧಿಗಳೇ ಹೆಚ್ಚು. ಹಿಂದೆ ಮುದ್ರಣದ ಮತ್ತು ಆನಂತರದ ಶ್ರವಣ ಮತ್ತು ದೃಶ್ಯ ಮಾಧ್ಯಮಗಳ ಕಾಲದಲ್ಲಿ ಗಾಳಿಸುದ್ಧಿಗಳು ಇಷ್ಟುದೊಡ್ಡ ಪ್ರಮಾಣದಲ್ಲಿ ಹರಡುತ್ತಿರಲಿಲ್ಲ. ಯಾವಾಗ ನಮ್ಮ ಜನ ಸಾಮಾಜಿಕ ಮಾಧ್ಯಮಗಳನ್ನು ತಮ್ಮ ಕೈಗೆ ತೆಗೆದುಕೊಂಡರೋ ಇವುಗಳ ಭರಾಟೆ ತೀವ್ರಗೊಂಡಿತು. ಅದರಲ್ಲೂ ವಾಟ್ಸಾಪ್ ಅಂತೂ ಇಂತಹ ಸುದ್ಧಿ ಶೂರರನ್ನು ಯುದ್ಧಕ್ಕೆ ಕರೆದೊಯ್ಯುವ ಕುದುರೆಯಂತೆಯೇ ಕೆಲಸಮಾಡಿತು ಎನ್ನಬೇಕು. `ತುಂಟಕುದುರೆಗಳಿಗೆ ಗಂಟುಲಗಾಮುಗಳುಇಲ್ಲದೇ ಹೋಗಿ ಅವು ಹುಚ್ಚೆದ್ದು ಕುಣಿಯತೊಡಗಿತು!
ಇಂತಹ ಸುದ್ಧಿಗಳನ್ನು ಹಂಚುವಲ್ಲಿ ಕೇವಲ ತಿಳಿಯದವರು ಮಾತ್ರ ಇರುತ್ತಾರೆ ಎಂದು ಭಾವಿಸಬೇಕಿಲ್ಲ. ಅನೇಕ ಡಿಗ್ರಿ ಓದಿಕೊಂಡ `ವಿದ್ಯಾವಂತ’ರೂ ಇದರಲ್ಲಿ ಇರುತ್ತಾರೆ. ಗಾಸಿಪ್ ಮಾದರಿಯ ಚಟಸುದ್ಧಿಗಳನ್ನು ರಚಿಸುವವರಿಗೆ ಮತ್ತು ಹಂಚುವವರಿಗೆ ಒಂದು ನಿರ್ಧಿಷ್ಟ ಉದ್ದೇಶ ಇರುವುದಿಲ್ಲವೆಂಬುದು ಸರಿ. ಆದರೆ ರೂಮರ್ ಅಂತಹ ಹಟಸುದ್ಧಿಗಳನ್ನು ರಚಿಸುವವರಿಗೆ ಯಾವಾಗಲೂ ಒಂದು ಉದ್ದೇಶ ಹಾಗನ್ನುವುದಕ್ಕಿಂತ ದುರುದ್ಧೇಶ ಖಂಡಿತಾ ಇದ್ದೇ ಇರುತ್ತದೆ. ಆದರೆ ಅವನ್ನು ರಚಿಸುವವರಿಗೆ ಇದ್ದಂತೆ  ಹಂಚುವವರಿಗೂ ಒಂದು ಖಚಿತ ಉದ್ದೇಶ ಇದ್ದೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವು ಸಲ ಇರಬಹುದು ಇನ್ನು ಕೆಲವು ಸಲ ಇಲ್ಲದೆಯೂ ಇರಬಹುದು. ಆದರೆ ಈ ಹಂಚಿಕೆದಾರರೆಲ್ಲ ಒಂದು ಕ್ಷಣ ತಮ್ಮ ವಿದ್ಯೆ ವಿವೇಕಗಳನ್ನು ಬದಿಗಿಟ್ಟು ಯಾವುದೋ ಹಿಂದಣಭಿಪ್ರಾಯದೊತ್ತಡಕ್ಕೆ ಒಳಗಾಗಿ `ಹುಂಬ’ರಾಗಿ ಇಂತಹ ಸುದ್ಧಿಗಳನ್ನು ಮುಂತಳ್ಳಿಬಿಡುತ್ತಾರೆ ಎಂಬುದಂತೂ ಸತ್ಯ. ಕೆಲವರಿಗಂತೂ `ಹಂಚಿಕೆಯ ಚಟ’  ಕಾಯಿಲೆಯ ಸ್ವರೂಪದಲ್ಲಿಯೇ ಅಂಟಿಕೊಂಡಿರುತ್ತದೆ.  ಮೊಬೈಲ್ ಬಗೆಗಿನ ಕಾಯಿಲೆಗಳನೇಕನ್ನು ಮನೋವಿಜ್ಞಾನಿಗಳು ಕಂಡುಕೊಂಡಿದ್ದು ಇದು ಯಾವ ಬಗೆಯ ಕಾಯಿಲೆ ಎಂಬುದನ್ನು ಅವರು ಮಾತ್ರ ಗುರುತಿಸಬಲ್ಲರೇನೋ.
ಇಂತಹ ಗೊತ್ತುಗುರಿಯಿಲ್ಲದ ಸಂದೇಶಗಳು ಸಾಮೂಹಿಕ ಆಯಾಮ ಪಡೆದುಕೊಂಡರೆ ಅವು ಮಾಡುವ ಹಾನಿ ಕೆಲವು ಸಂದರ್ಭಗಳಲ್ಲಿ ಸರಿಪಡಿಸಲಾರದಷ್ಟು ದೊಡ್ಡಪ್ರಮಾಣದಲ್ಲಿ ಇರುತ್ತದೆ ಎಂಬುದನ್ನು ನಾವು ಮರೆಯಬಾರದು. ಅವು ಹೀಗೆ ಹಾನಿಮಾಡುವಾಗ ಅವಕ್ಕೆ ಬಹುಮುಖ್ಯವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಬಲಿಯಾಗುವವರು ಈಗಾಗಲೇ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಅಂಚಿಗೆ ತಳ್ಳಲ್ಪಟ್ಟ ತಳಸಮುದಾಯದ ಜನ, ಅಲ್ಪಸಂಖ್ಯಾತರಾದ ಜನ, ಮಹಿಳೆಯರು ಇಂಥವರೇ ಆಗಿರುತ್ತಾರೆ. ದೇಶ ಯಾವುದಾದರೂ ಸರಿ. ಇದು ಹೀಗೆಯೇ ಆಗುವುದು. ಅದಕ್ಕೆ ಕಾರಣಗಳೂ ಹಲವಾರು. ಮೇಲಿನ ಉದಾಹರಣೆಗಳನ್ನು ನೆನಪುಮಾಡಿಕೊಂಡರೆ ಅವು ಮಾಡುವ, ಜೀವಹಾನಿ, ಜೀವನಹಾನಿ, ಆರ್ಥಿಕ ನಷ್ಟ, ಸಾಮಾಜಿಕ ವಿಭಜನೆ ಎಂತಹ ಘೋರ ಪರಿಣಾಮವನ್ನು ಉಂಟುಮಾಡಬಲ್ಲವು ಎಂಬುದು ಅರಿವಿಗೆ ಬರುತ್ತದೆ. ಅವು ಮೂಲಭೂತವಾಗಿ ಮನುಷ್ಯನ ಮನಸ್ಸಿನಲ್ಲಿ ದ್ವೇಷ, ಅಸೂಹೆ, ಕ್ರೋಧ, ಮತ್ಸರ ಮುಂತಾದ ಕಹಿಭಾವನೆಗಳನ್ನು ಉಂಟುಮಾಡುವುದರಿಂದ ಮನಸ್ಸು ಕೆಟ್ಟು ಹೋಗುತ್ತದೆ. ಮನಸ್ಸು ಕೆಟ್ಟುಹೋದ ಮೇಲೆ ಮನುಷ್ಯ ಹೇಗೆ ಸರಿಯಿರುತ್ತಾನೆ? ಅವನೂ ಕೆಟ್ಟುಹೋಗುತ್ತಾನೆ. ಮನುಷ್ಯನೇ ಕೆಟ್ಟುಹೋದಮೇಲೆ ಜಗತ್ತು ಕೆಡದೇ ಇರುತ್ತದೆಯೇ? ಹಾಗಾಗಿ ಈ ಕೆಡುಕನ್ನು ತಡೆಯಲೇಬೇಕು. ಆದರೆ ಇದನ್ನು ತಡೆಯುವುದು ಹೇಗೆ? ತಡೆಯುವವರು ಯಾರು? ಮುಖ್ಯವಾಗಿ ಇದು ಎರಡು ಕಡೆಗಳಿಂದಲೂ ಆಗಬೇಕು. ಅಂದರೆ ಸಮುದಾಯದ ನಾಯಕರು, ಸಂಬಂಧಪಟ್ಟ ಚುನಾಯಿತ ಸ್ಥಾನಮಾನದಲ್ಲಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಜನರಿಗೆ ಯಾವುದೇ ಸಾರ್ವಜನಿಕ ವಿಷಯಗಳಲ್ಲಿ ಮಾಹಿತಿಯ ಕೊರತೆಯಾಗದಂತೆ ಆಗಾಗ್ಗೆ ಸರಿಯಾದ ಮಾಹಿತಿಯನ್ನು ನೀಡುತ್ತಿರಬೇಕು. ಇದರಿಂದ ಇಂತಹ ಗಾಳಿಸುದ್ಧಿಗಳಿಗೆ ಕಡಿವಾಣ ಬೀಳುತ್ತದೆ. ಇನ್ನು ಸಾರ್ವಜನಿಕರಾದ ನಮ್ಮ ಕಡೆಯಿಂದ ಏನು ಆಗಬೇಕು ಎಂಬುದನ್ನು ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ಕವಿತೆಯ ಕೊನೆಯ ನುಡಿಯೊಂದು ಅದನ್ನು ಹೇಳುತ್ತದೆ. ಅಷ್ಟು ಮಾಡಿದರೆ ಸಾಕಾಗಬಹುದು:
ಖಚಿತವಲ್ಲದ ಸುದ್ಧಿಯ ಹಂಚಿಕೆ
ಉಚಿತವಲ್ಲವದ ತಿಳಿಯೋಣ
ಯಾರದೋ ಜೀವಕೆ, ಊರಿಗೆ ದೇಶಕೆ
ಮಾರಕವಾಗದೆ ಉಳಿಯೋಣ
*****
·       ಡಾ. ರಾಜೇಂದ್ರ ಬುರಡಿಕಟ್ಟಿ

Friday, April 17, 2020

No comments:

Post a Comment