Friday, August 13, 2021

ಅಂಗಾಂಗ ದಾನ ಮತ್ತು ಜೀವಸಾರ್ಥಕತೆ

 

ಅಂಗಾಂಗ ದಾನ ಮತ್ತು ಜೀವಸಾರ್ಥಕತೆ

ನಮ್ಮಲ್ಲಿ ಬಹಳಷ್ಟು ಜನಕ್ಕೆ ಗೊತ್ತಿರಲಿಕ್ಕಿಲ್ಲ. ಭಾರತದಲ್ಲಿ ಕೆಲವು ಆಚರಣೆಗಳ ದಿನಗಳು ಎರಡೆರಡಾಗಿ ಆಚರಿಸಲ್ಪಡುತ್ತಿವೆ. ಅವೆಂದರೆ ಶಿಕ್ಷಕ ದಿನ, ವಿಜ್ಞಾನ ದಿನ ಇತ್ಯಾದಿ. ಅವುಗಳಂತೆಯೇ ‘ಅಂಗಾಂಗ ದಾನದ ದಿನ’ ಕೂಡ ನಮ್ಮಲ್ಲಿ ಎರಡು ದಿನ ಆಚರಿಸಲ್ಪಡುವ ದಿನವಾಗಿದೆ. ಮೊದಲನೆಯದಾಗಿ ಪ್ರತಿವರ್ಷ ಆಗಸ್ಟ್ 13ನ್ನು ‘ವಿಶ್ವ ಅಂಗಾಂಗ ದಾನದ ದಿನ’ (World Organ Donation Day) ಎಂದು ಆಚರಿಸಿದರೆ ಇದೇ ದಿನವನ್ನು ನಮ್ಮ ದೇಶದ ಮಟ್ಟದಲ್ಲಿ ಪ್ರತಿವರ್ಷ ನವೆಂಬರ್ 27 ರಂದು ಆಚರಿಸಲಾಗುತ್ತದೆ. ಸಾರ್ವಜನಿಕರಲ್ಲಿ ಅಂಗಾಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ ಅವರು ಅಂಗಾಂಗ ದಾನಕ್ಕೆ ಮುಂದಾಗುವಂತೆ ಮಾಡುವುದು ಈ ಆಚರಣೆಗಳ ಮುಖ್ಯವಾದ ಉದ್ದೇಶ. ಕಳೆದ ವರ್ಷ ಸರ್ಕಾರ “ನಿಮ್ಮ ಅಂಗಾಂಗಗಳನ್ನು ನಿಮ್ಮೊಂದಿಗೆ ಸ್ವರ್ಗಕ್ಕೆ ತೆಗೆದುಕೊಂಡು ಹೋಗಬೇಡಿ. ಅವುಗಳ ಅವಶ್ಯಕತೆ ಇಲ್ಲಿಯೇ ಇದೆ ಎಂಬುದು ದೇವರಿಗೆ ಗೊತ್ತಿದೆ” ಎಂಬ ಧ್ಯೇಯವಾಕ್ಯದೊಂದಿಗೆ ಜನರಿಗೆ ಅಂಗಾಂಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಅಂಗಾಂಗ ಕಸಿ (Organ Transplantation) ಯ ಇತಿಹಾಸ

ಆಧುನಿಕ ಪ್ರಪಂಚದಲ್ಲಿ ಅಂಗಾಗ ಕಸಿಯ ಮೂಲಕ ವೈಜ್ಞಾನಿಕವಾಗಿ ನಮ್ಮ ಜಗತ್ತು ಒಂದು ಮಹತ್ವದ ಮೈಲುಗಲ್ಲನ್ನು


ಮುಟ್ಟಿದ್ದು ಸುಮಾರು ಎಪ್ಪತ್ತು ವರ್ಷಗಳ ಹಿಂದೆ. 1954 ರಲ್ಲಿ ಅಮೇರಿಕೆಯ ವೈದ್ಯವಿಜ್ಞಾನಿ ಡಾ. ಜೊಸೆಫ್ ಮೂರಿಯು ಮೊಟ್ಟಮೊದಲು ರಿಚರ್ಡ್ ಹ್ಯಾರಿಕ್ ಮತ್ತು ರೊನಾಲ್ಡ್ ಹ್ಯಾರಿಕ್ ಎಂಬ ಇಬ್ಬರು ಅವಳಿಗಳ ನಡುವೆ ಮೂತ್ರಕೋಶದ ಯಶಸ್ವಿ ಕಸಿಮಾಡುವುದರೊಂದಿಗೆ ಅಂಗಾಂಗ ಕಸಿಗೆ ವೈದ್ಯವಿಜ್ಞಾನದಲ್ಲಿ ಒಂದು ಮಹತ್ವದ ಅಡಿಗಲ್ಲು ಹಾಕಿದ. ಮನಶ್ಶಾಸ್ತ್ರದಲ್ಲಿ ಅನೇಕ ಮಹತ್ವದ ಜಾಗತಿಕ ಮಟ್ಟದ ಕೃತಿಗಳನ್ನೂ ಬರೆದಿರುವ ಈ ವಿಜ್ಞಾನಿಗೆ ಮುಂದೆ 1990 ರಲ್ಲಿ ಪ್ರತಿಷ್ಠಿತ ನೊಬೆಲ್ ಬಹುಮಾನವನ್ನು ನೀಡುವ ಮೂಲಕ ಜಗತ್ತು ಗೌರವಿಸಿತು. ಮೂರಿ ಮಾಡಿದ ಈ ಸಾಧನೆಯಿಂದಾಗಿ ಇಂದು ಜಗತ್ತಿನಾದ್ಯಂತ ಅಂಗಾಂಗ ಕಸಿ ವಿಭಿನ್ನ ಆಯಾಮಗಳಲ್ಲಿ ನಡೆದುಕೊಂಡು ಬರುತ್ತಿದೆ.

ಭಾರತದಲ್ಲಿ ಅಂಗಾಗ ಕಸಿ

ಭಾರತದಲ್ಲಿ ಅಂಗಾಗ ಕಸಿಯ ಸಾಧನೆ ಅಷ್ಟೇನೂ ಹೇಳಿಕೊಳ್ಳುವಂತೆ ನಡೆದಿಲ್ಲವೆನ್ನಬಹುದು. ಅಂಗಾಗ ಕಸಿಯ ಸಾಧ್ಯತೆಯನ್ನು ನಾವು ಆರಂಭದಲ್ಲಿ ದುರುಪಯೋಗಪಡಿಸಿಕೊಂಡದ್ದೇ ಹೆಚ್ಚು. ಅನೇಕ ‘ಕಿಡ್ನಿವ್ಯಾಪಾರಗಳು’ ನಡೆಯತೊಡಗಿದಾಗ ಇದಕ್ಕೊಂದು ವ್ಯವಸ್ಥಿತ ಸಂಘಟಿತ ರೂಪರೇಷೆಗಳನ್ನು, ಕಾನೂನಾತ್ಮಕ ಚೌಕಟ್ಟನ್ನು ರೂಪಿಸುವ ಕೆಲಸಗಳು ನಮ್ಮಲದಲಿ ಆರಂಭವಾದವು.  ಈ ನಿಟ್ಟಿನಲ್ಲಿ ಭಾರತ ಸರ್ಕಾರವು 2011 ರಲ್ಲಿ ಜಾರಿಗೆ ತಂದ ಮಾನವ ಅಂಗಾಗ ಕಸಿ (ತಿದ್ದುಪಡಿ)ವಿಧೇಯಕ (Transplantation of Human Organ (Amendment) Bill 2011) ಒಂದು ಮಹತ್ವದ ಹೆಜ್ಜೆಯಾಯಿತು. ಈಗ ಈ ಕಾಯ್ದೆಯ ಅನ್ವಯ ಭಾರತದಲ್ಲಿಯ ಅಂಗಾಗ ಕಸಿಯ ವ್ಯವಸ್ಥಿತ ನಿರ್ವಹಣೆಯ ಜವಾಬ್ದಾರಿಯನ್ನು ರಾಷ್ಟ್ರಮಟ್ಟದ


ಸಂಸ್ಥೆ ‘ನೊಟ್ಟೊ’ (National Organ and Tissue Transplant Organization –NOTTO) ಹೊತ್ತಿದೆ. ಈ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 1995 ರಿಂದ 2010 ವರೆಗಿನ 15 ವರ್ಷಗಳಲ್ಲಿ ಅಂಗಾಗಕಸಿಯ ಪ್ರಕರಣಗಳು ಯಾವ ವರ್ಷವೂ ಒಂದು ಸಾವಿರವನ್ನು ದಾಟಿಲ್ಲ! 2011 ರಲ್ಲಿ ಮೊಟ್ಟ ಮೊದಲ ಬಾರಿ ಸಾವಿರ ಗಡಿಯನ್ನು ದಾಟಿ ಇತ್ತೀಚೆಗೆ ಹೆಚ್ಚಾಗುತ್ತಿವೆಯಾದರೂ ಹೇಳಿಕೊಳ್ಳುವಂಥ ಪ್ರಗತಿ ಆಗಿಲ್ಲ. ಇನ್ನೊಂದು ವರದಿಯ ಪ್ರಕಾರ ಭಾರತದ ಜನಸಂಖ್ಯೆಯಲ್ಲಿ ಕೇವಲ ಶೇ. 3 ರಷ್ಟು ಮಾತ್ರ ಅಂಗಾಗ ದಾನಿಗಳಿದ್ದಾರೆ! ಭಾರತದಲ್ಲಿ ಅದರ ಭಾಗವಾದ ಕರ್ನಾಟಕದಲ್ಲಿ ಕೂಡ ಅಂಗಾಗ ಕಸಿಗೆ ಬೇಡಿಕೆ ಸಲ್ಲಿಸಿ ಕಾಯುತ್ತಿರುವವರಲ್ಲಿ ಅತೀ ಹೆಚ್ಚು ಜನ ಮೂತ್ರಕೋಶಕ್ಕೆ ಬೇಡಿಕೆ ಸಲ್ಲಿಸಿದವರಿದ್ದರೆ ಎರಡನೆಯ ಸ್ಥಾನದಲ್ಲಿ ಲಿವರ್ ಗಾಗಿ ಬೇಡಿಕೆ ಸಲ್ಲಿಸಿದವರಿದ್ದಾರೆ. ಮೂರನೆಯ ಸ್ಥಾನದಲ್ಲಿ ಹೃದಯದವರಿದ್ದಾರೆ. ಕಸಿಮಾಡುವಿಕೆಯಲ್ಲಿಯೂ ಇವೇ ಮೂರು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ಇವರೆಲ್ಲ ಕಾಯುವಿಕೆಯ ಸಾಲಿನಲ್ಲಿ ಹಾಗೇ ಇದ್ದಾರೆ…

ಇದಕ್ಕೆ ಕಾರಣ ಭಾರತೀಯರಾದ ನಮ್ಮ ಆಲೋಚನಾ ಕ್ರಮ. ಸತ್ತಮೇಲಿನ ಬದುಕಿನ ಬಗ್ಗೆ ಎಲ್ಲ ದೇಶಗಳಲ್ಲಿಯೂ ಎಲ್ಲ ಸಮಾಜಗಳಲ್ಲಿಯೂ ಹತ್ತು ಹಲವು ನಂಬಿಕೆಗಳಿವೆ. ಹಲವು ಧರ್ಮಗಳ ನಾಡಾಗಿರುವ  ಭಾರತದಲ್ಲಿ ಇವು ತುಸು ಹೆಚ್ಚೇ ಇವೆ. ಸತ್ತಮೇಲೆ ಶವವನ್ನು ಹೂಳಬೇಕೋ ಸುಡಬೇಕೋ ಇತ್ಯಾದಿ ಚರ್ಚೆಗಳು ನಮ್ಮಲ್ಲಿ ಮಹತ್ವ ಪಡೆದುಕೊಂಡಂತೆ ಇವೆರಡಕ್ಕಿಂತ ಭಿನ್ನವಾಗಿ ಯಾರಿಗಾದರೂ ಉಪಯುಕ್ತವಾದದ್ದನ್ನು ಏನನ್ನಾದರೂ  ಮಾಡಬಹುದೇ ಎಂಬ ಚರ್ಚೆ ನಡೆಯುವುದು ಅಪರೂಪ. ಈ ಕಾರಣದಿಂದ ನಮ್ಮಲ್ಲಿ ಅಂಗಾಗ ದಾನ ಮಾಡಲು ಮುಂದೆ ಬರುವವರ ಸಂಖ್ಯೆ ತುಂಬಾ ಕಡಿಮೆ. ನಮ್ಮ ದೇಶದಲ್ಲಿ ಅಪಘಾತ ಮತ್ತಿತರ ಕಾರಣಗಳಿಂದ ಸಾಯುತ್ತಿರುವ ಎಲ್ಲರ ಅಂಗಾಂಗಗಳನ್ನು ಪಡೆಯಲು ಸಾಧ್ಯವಾಗುವುದಾದರೆ ಅಂಗಾಗಗಳ ವೈಫಲ್ಯದಿಂದ ನರಳುತ್ತಿರುವ ಪ್ರಕರಣಗಳೇ ಇರುವುದಿಲ್ಲ. ಆದರೆ ಬಹಳಷ್ಟು ಜನರು ತಮ್ಮ ಧಾರ್ಮಿಕ ನಂಬಿಕೆಗಳಿಂದ ಹೊರಬಂದು ಒಂದಿಷ್ಟು ವೈಚಾರಿಕವಾಗಿ ವಿಚಾರಿಸಲು ತೊಡಗುತ್ತಿಲ್ಲವಾದ್ದರಿಂದ ಇದು ಇಂದಿಗೂ ಸಾಧ್ಯವಾಗಿಲ್ಲ.

ಖ್ಯಾತನಾಮರ ನಡೆಯ ಪ್ರಭಾವ

ಈ ನಿಟ್ಟಿನಲ್ಲಿ ಜನಪ್ರಿಯ ವ್ಯಕ್ತಿಗಳು (ಸೆಲಿಬ್ರಿಟಿಗಳು) ಅಂಗಾಗ ದಾನಕ್ಕೆ ಮುಂದೆ ಬಂದಾಗ ಅವು ವಿಪರೀತ ಸುದ್ಧಿಯಾಗಿ ಒಂದಿಷ್ಟು ಧನಾತ್ಮಕ ಪರಿಣಾಮ ಬೀರುವುದುಂಟು. ನಮ್ಮಲ್ಲಿ ರಾಷ್ಟ್ರಮಟ್ಟದ ಜನಪ್ರಿಯ ವ್ಯಕ್ತಿಗಳಲ್ಲಿ ಅನೇಕರು ಅಂಗಾಗ ದಾನಮಾಡುವ ಮೂಲಕ ದಾನದ ವಾಗ್ದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇದರಲ್ಲಿ ಹಲವು ಕ್ಷೇತ್ರಗಳ ಖ್ಯಾತನಾಮರಿದ್ದಾರೆ. ಡಾ. ಮನಮೋಹನ್ ಸಿಂಗ್, ಅಮೀರ್ ಖಾನ್, ಐಶ್ವರ್ಯ ಬಚನ್, ಗೌತಮ್ ಗಂಭೀರ್, ನವಜ್ಯೋತ್ ಸಿಂಗ್ ಸಿದೂ, ರಜನಿಕಾಂತ್ ಜಯಪ್ರದಾ… ಹೀಗೆ ಒಂದಿಷ್ಟು ಹೆಸರುಗಳನ್ನು ಪಟ್ಟಿಮಾಡಬಹುದು. 


ಕರ್ನಾಟಕದಲ್ಲಿ ಇತ್ತೀಚೆಗೆ ಅಪಘಾತಕ್ಕೆ ತುತ್ತಾಗಿ ಮೆದುಳು ನಿಷ್ಕ್ರೀಯಗೊಂಡು ನಮ್ಮನ್ನಗಲಿದ ನಟ ಸಂಚಾರಿ ವಿಜಯ್ ಅವರ ಅಂಗಾಂಗ ದಾನದ ವಿಷಯವು ಅನೇಕ ಪತ್ರಿಕೆಗಳ ಮುಖಪುಟ ಸುದ್ಧಿಯಾಗಿ ಪ್ರಕಟವಾದಾಗ ಕರ್ನಾಟಕದಲ್ಲಿ ಅಂಗಾಂಗದಾನದಲ್ಲಿ ಒಂದಿಷ್ಟು ಅರಿವು ಉಂಟಾಯಿತು. ಅವರ ಕುಟುಂಬ ಅಂಗಾಂಗ ದಾನಕ್ಕೆ ತ್ವರಿತವಾಗಿ ಮಾಡಿದ ನಿರ್ಧಾರದಿಂದಾಗಿ ಕೆಲವರಿಗೆ ಜೀವಕೆಲಸ ಮಾನವೀಯ ಕೆಲಸವಾಯಿತು ಮಾತ್ರವಲ್ಲ ಅದು ಅಂಗಾಗ ದಾನದ ಅರಿವನ್ನು ವಿಸ್ತರಿಸಲೂ ನೆರವಾಯಿತು. ಸಂಚಾರಿ ವಿಜಯ್ ಅವರ ಪ್ರಕರಣದಿಂದಾಗಿ ಆ ಸಂದರ್ಭದಲ್ಲಿ ಕೇವಲ 20 ದಿನಗಳ ಅವಧಿಯಲ್ಲಿ ಸುಮಾರು 230 ಜನ ತಮ್ಮ ಅಂಗಾಂಗ ದಾನದ ಘೋಷಣೆಮಾಡಿ ನೋಂದಾಯಿಸಿಕೊಂಡಿದ್ದಾರೆಂಬುದು ಕರ್ನಾಟಕದಲ್ಲಿ ಅಂಗಾಗಕಸಿಯ ವ್ಯವಸ್ಥಿತಿ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ರಾಜ್ಯದ ಸೊಟ್ಟೊ (State Organ Transplant and Tissue Organization) ನ ಹೇಳಿಕೆ.

ಅಂಗಾಗ ಕಸಿ ಮತ್ತು ದಾನದ ಅರಿವಿನ ವಿಸ್ತಾರದ ಅಗತ್ಯ

ಅಂಗಾಗ ಕಸಿ ಎಂಬುದು ಆಧುನಿಕ ವೈದ್ಯವಿಜ್ಞಾನ ನಮಗೆ ನೀಡಿದ ಒಂದು ವರದಾನ. ಒಬ್ಬ ವ್ಯಕ್ತಿ ತನ್ನ ಸಾವಿನ ನಂತರ ತನಗೆ ಉಪಯೋಗಕ್ಕೆ ಬಾರದ ಆದರೆ ಇತರರಿಗೆ ಜೀವ ನೀಡಬಲ್ಲ ತನ್ನ ಅಂಗಳನ್ನು ಸುಟ್ಟುಹಾಕುವ ಮೂಲಕವೋ ಹೂತುಹಾಕುವ ಮೂಲಕವೋ ಅವನ್ನು ನಾಶಮಾಡದೆ ಅವನ್ನು ಇತರರಿಗೆ ದಾನಮಾಡುವ ಔದಾರ್ಯವನ್ನು ಬೆಳಸಿಕೊಳ್ಳಬೇಕು. ಇದರಿಂದ ಎಷ್ಟೋ ಜೀವಿಗಳಿಗೆ ನಾವು ಸತ್ತಮೇಲೆಯೂ ಉಪಕಾರ ಮಾಡಿದಂತಾಗುತ್ತದೆ. ಮೂತ್ರಕೋಶ ಮತ್ತು ಲಿವರ್ ಹೊರತು ಉಳಿದೆಲ್ಲ ಅಂಗಗಳ ದಾನವನ್ನು ವ್ಯಕ್ತಿಯ ಮರಣಾನಂತರವಷ್ಟೇ ಪಡೆಯಲಾಗುವುದರಿಂದ ನಮ್ಮ ಜನರು ತಮ್ಮ ಧಾರ್ಮಿಕ ನಂಬಿಕೆಗಳಾಚೆಗೆ ಬಂದು ಮಾನವೀಯ ನೆಲೆಯಲ್ಲಿ ಆಲೋಚಿಸಿ ಅಂಗಾಂಗ ದಾನಕ್ಕೆ ಮುಂದಾಗಬೇಕು. ಈ ಬಗ್ಗೆ ಅರಿವಿನ ವಿಸ್ತಾರ ಇಂದಿನ ತುರ್ತು ಅಗತ್ಯ. ಇದ್ದಾಗ ಯಾರು ಯಾರಿಗೆ ಎಷ್ಟು ಸಹಾಯಮಾಡಲು ಸಾಧ್ಯವಾಗುತ್ತದೆಯೋ. ಆದರೆ ಸತ್ತಮೇಲಂತೂ ಈ ಅಂಗಾಗ ದಾನದ ಮೂಲಕ ನಾವು ಖಂಡಿತಾ ಇತರರಿಗೆ ಅವರು ಮರೆಯಲಾರದಂತ ಸಹಾಯಮಾಡಬಹುದು.ಆ ಮೂಲಕ ನಮ್ಮ ಬದುಕ ಸಾರ್ಥಕತೆ ಪಡೆಯಬಹುದು. ಈ ಬಗ್ಗೆ ನಾವೆಲ್ಲರೂ ಆಲೋಚಿಸೋಣ.  

(ಅಂಗಾಂಗ ದಾನ ಮಾಡಲಿಚ್ಚಿಸುವವರು ಕರ್ನಾಟಕದಲ್ಲಿ ಸಂಪರ್ಕಿಸಬೇಕಾದ ಎರಡು ವೆಬ್ ವಿಳಾಸಗಳು:

1) NOTTO: https://notto.gov.in

2) SOTTO: https://www.jeevasarthakathe.karnataka.gov.in/Website/Home.aspx

*****

ಈ ದಿನದ ವಿಶೇಷ ಓದಿಗಾಗಿ ಅಂಗಾಂಗ ದಾನದ ಮಹತ್ವವನ್ನು ಸಾರುವ ನನ್ನ ಒಂದು ಗೀತೆ:

ಉಯಿಲು

ನನ್ನ ದೇಹವ ನೀವು ಸುಟ್ಟುಹಾಕಲು ಬೇಡಿ

ಸಾಯುವವು ಮರವೆರಡು ನನ್ನ ಚಿತೆಗೆ

ಹೂತುಹಾಕಲುಬೇಡಿ ನನ್ನನ್ನು ಭುವಿಯೊಳಗೆ

ಕೊಳೆತು ಹೋಗುವುದೆಲ್ಲ ನನ್ನ ಜೊತೆಗೆ


ಕಿತ್ತುಕೊಡಿ ಕುರುಡಂಗೆ ನನ್ನೆರಡು ಕಣ್ಣುಗಳ

ಕತ್ತಲೆಯ ಬದುಕಿಂಗೆ ಬೆಳಕು ಬರಲಿ

ಸುತ್ತುತ್ತ ಊರುಗಳ ಕರ್ಣದೋಷದ ಕಿವುಡ

ಹುಡುಕುತ್ತ ಬರಬಹುದು ಕಿವಿಗಳಿರಲಿ


ನಿಂತ ಹೃದಯವನೆ ನಡೆಸುವವರು ಬಂದಾರು

ನಿಂತ ಗಡಿಯಾರವನು ನಡೆಸುವಂತೆ

ಸಾಯುವವನೆದೆಯೊಳಗೆ ನನ್ನ ಹೃದಯವನಿಟ್ಟು

ಮಾಡಿಬಿಡಿ ಅವನುಸಿರು ಆಡುವಂತೆ


ಮುತ್ತುಗಳ ಬೆಲೆಯಂತೆ ಮೂತ್ರಕೋಶಗಳಿಂಗೆ

ಯಾತ್ರೆ ಮುಗಿದಿರಲವು ನನಗದೇಕೆ?

ಎತ್ತಿಹಾಕಿರಿ ಅವನು ಹಾಸಿಗೆಯಲಿರುವಂಗೆ

ಎದ್ದು ಬರಲಿ ಅವನು ನರಳಲೇಕೆ?


ಸತ್ತ ಕೂಡಲೆ ನೀವು ಮರೆತುಬಿಡಿ ನನ್ನನ್ನು

ಕಟ್ಟಹೋಗಲು ಬೇಡಿ ಗೋರಿ ನನಗೆ

ಗೋರಿಗಳ ಊರಲ್ಲಿ ದಾರಿ ಹುಡುಕುವುದು ಹೇಗೆ

ಬದುಕಿ ಬಾಳುವ ಜನರ ಪ್ರೀತಿ ಮನೆಗೆ


ಬರುವುದೆಲ್ಲವ ಬಳಸಿ ಉಳಿದುದನು ಬದಿಗಿರಿಸಿ

ಕೂಗಿ ಕರೆಯಿರಿ ಪ್ರಾಣಿ ಪಕ್ಷಿಗಳನು

ತಿಂದು ಸಂತಸ ಪಡಲಿ ಒಂದು ದಿನ ಅವು ಎಲ್ಲ

ಸಾರ್ಥಕವು ಆದೀತು ನನ್ನ ಬದುಕು!

*****

ಡಾ. ರಾಜೇಂದ್ರ ಬುರಡಿಕಟ್ಟಿ

(ವಿಶ್ವ ಅಂಗಾಂಗ ದಾನದ  ದಿನದ ಓದಿಗಾಗಿ ಹಿಂದೆಂದೋ ಬರೆದ ಒಂದು ಗೀತೆ…)

13-08-2021 (World Organ Donation Day)

 

No comments:

Post a Comment