Saturday, August 14, 2021

ಹೀಗೆ ನಡೆದಿತ್ತು ನೋಡಿ ನಮ್ಮ ಮೊದಲ ಸ್ವಾತಂತ್ರ್ಯೋತ್ಸವ!

 

ಹೀಗೆ ನಡೆದಿತ್ತು ನೋಡಿ ನಮ್ಮ ಮೊದಲ ಸ್ವಾತಂತ್ರ್ಯೋತ್ಸವ!

(ಭಾರತದ ಮೊದಲ ಸ್ವಾತಂತ್ರ್ಯೋತ್ಸವ ಸಮಾರಂಭ ಹೇಗೆ ನಡೆಯಿತು? ಆಗಸ್ಟ್ ಹದಿನೈದೇ ಏಕೆ ನಿಗಧಿಯಾಯಿತು? ಹದಿನೈದರ ಬದಲು ಹದಿನಾಲ್ಕರ ರಾತ್ರಿ ಸಮಾರಂಭ ಏಕೆ ಆರಂಭವಾಯಿತು?  ಸಮಾರಂಭದಲ್ಲಿ ಆದ ಎಡವಟ್ಟುಗಳೇನು? ಇಂತಹ ಕೆಲವು ಕುತೂಹಲಕಾರಿ ಅಂಶಗಳಿಗಾಗಿ ಈ ಲೇಖನವನ್ನು ಗಮನಿಸಿ – ಡಾ. ರಾಜೇಂದ್ರ ಬುರಡಿಕಟ್ಟಿ)

*****


1947ರ ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂತು. ಆದರೆ ದೇಶಭಕ್ತ ಭಾರತೀಯರು ಇದಕ್ಕೂ ಹದಿನೇಳು ವರ್ಷ ಮುಂಚೆಯೇ ಪ್ರಥಮ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದರು……. 1930 ರ ಜನವರಿಯ ಕೊನೆಯ ಭಾನುವಾರ ಸ್ವಾತಂತ್ರ್ಯ ದಿನವನ್ನು ಆಚರಿಸಬೇಕೆಂದು ಗೊತ್ತುಪಡಿಸುವ ಠರಾವನ್ನು ಲಾಹೋರ್ ನಗರದಲ್ಲಿ ನಡೆದ ಕಾಂಗ್ರೆಸ್ಸಿನ ವಾರ್ಷಿಕ ಅಧಿವೇಶನದಲ್ಲಿ ಪಾಸು ಮಾಡಲಾಯಿತು. ಇಲ್ಲಿಯೇ ಜವಾಹರ ಲಾಲ್ ನೆಹರು ಕಾಂಗ್ರೆಸ್ ನ ಅಧ್ಯಕ್ಷರಾಗಿ ಆಯ್ಕೆಯಾದದ್ದು……..

ಮಧ್ಯರಾತ್ರಿಯೇಕೆ?

1930ರ ನಂತರ, ಪ್ರತಿವರ್ಷ ಕಾಂಗ್ರೆಸ್ ಮನೋಧರ್ಮದ ಭಾರತೀಯರು ಜನವರಿ 26ರಂದು ಸ್ವಾತಂತ್ರ್ಯದಿನ ಆಚರಿಸಿದರು. ಬ್ರಿಟೀಷರು ಆಖೈರಾಗಿ ಉಪಖಂಡ ತ್ಯಜಿಸಿ ಹೋದಾಗ, ಅವರು ಅಧಿಕಾರ ಹಸ್ತಾಂತರಿಸಲು 1947 ಆಗಸ್ಟ್ 15 ರ ದಿನಾಂಕವನ್ನು ಆಯ್ಕೆಮಾಡಿಕೊಂಡರು. ಈ ತಾರೀಖನ್ನು ಆಯ್ಕೆ ಮಾಡಿದ್ದು ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್. ಅದು, ಎರಡನೆಯ ಮಹಾಯುದ್ಧದಲ್ಲಿ ಜಪಾನಿಗಳು ಮಿತ್ರರಾಷ್ಟ್ರಗಳ ಪಡೆಗಳಿಗೆ ಶರಣಾಗತಿಯಾದುದರ ಎರಡನೆಯ ವಾರ್ಷಿಕ ದಿನವಾಗಿತ್ತು. ಇನ್ನು ಕೆಲವರು 1948ರ ಜನವರಿ 26 ರಂದು ಅಧಿಕಾರ ಹಸ್ತಾಂತರವಾಗಬೇಕೆಂದು ಬಯಸಿದರು. ಆದರೆ ಮೌಂಟ್ ಬ್ಯಾಟನ್ ಮತ್ತು ಅಧಿಕಾರ ಸ್ವೀಕಾರಕ್ಕೆ ಕಾಯುತ್ತಿದ್ದ ರಾಜಕಾರಣಿಗಳು ಅಧಿಕಾರ ಹಸ್ತಾಂತರವನ್ನು ವಿಳಂಬಗೊಳಿಸಲು ಒಪ್ಪಲಿಲ್ಲ.

ಹೀಗೆ, ರಾಷ್ಟ್ರೀಯ ಭಾವನೆಗಿಂತ, ಸಾಮ್ರಾಜ್ಯಶಾಹಿಯ ಹಮ್ಮು-ಪ್ರತಿಷ್ಠೆಗಳನ್ನು ಅನುರಣಿಸಿದ ದಿನ ಸ್ವಾತಂತ್ರ್ಯ ಕೊನೆಗೂ ಬಂತು. ಆಗಸ್ಟ್ 15 ಮಂಗಳಕರ ದಿನವಲ್ಲವೆಂದು ಜ್ಯೋತಿಷಿಗಳು ಕಟ್ಟಳೆ ಮಾಡಿದ್ದರು. ಆದ್ದರಿಂದ 14ರಂದೇ


ಸಂಭ್ರಮಾಚರಣೆಗಳನ್ನು ಆರಂಭಿಸಲು ನಿರ್ಧರಿಸಲಾಯಿತು. ಹೊಸ ಸಂವಿಧಾನ ರಚಿಸಲು ಭಾರತೀಯ ಪ್ರತಿನಿಧಿಗಳನ್ನೊಳಗೊಂಡಿದ್ದ ಸಂವಿಧಾನ ರಚನಾ ಸಭೆಯ ವಿಶೇಷ ಅಧಿವೇಶನವನ್ನು 14ರಂದೇ ನಡೆಸುವುದರೊಂದಿಗೆ ಸ್ವಾತಂತ್ರ್ಯೋತ್ಸವದ ಆಚರಣೆಗಳನ್ನು ಆರಂಭಿಸಲು ನಿರ್ಧರಿಸಲಾಯಿತು.

ಹಿಂದಿನ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಲೆಜಿಸ್ಲೆಟಿವ್ ಕೌನ್ಸಿಲ್ ಅಧಿವೇಶನ ನಡೆಯುತ್ತಿದ್ದ ಎತ್ತರದ ಗುಮ್ಮಟದ ಸಭಾಂಗಣದಲ್ಲಿ ಸಮಾರಂಭ ಏರ್ಪಾಡಾಗಿತ್ತು. ಉಜ್ವಲ ದೀಪಗಳಿಂದ ಬೆಳಗುತ್ತಿದ್ದ ಸಭಾಂಗಣ ಬಾವುಟಗಳಿಂದ ಅಲಂಕೃತಗೊಂಡಿತ್ತು. ಹಿಂದಿನ ವಾರ ಬ್ರಿಟಿಷ್ ವೈಸ್ ರಾಯ್ ಗಳ ಭಾವಚಿತ್ರಗಳಿದ್ದ ಫೋಟೋ ಫ್ರೇಮ್ ಗಳಲ್ಲಿ ಬಾವುಟಗಳು ರಾರಾಜಿಸುತ್ತಿದ್ದವು. ರಾಷ್ಟ್ರಭಕ್ತಿಗೀತೆ ‘ವಂದೇ ಮಾತರಂ’ ಗಾಯನದೊಂದಿಗೆ ರಾತ್ರಿ 11 ಗಂಟೆಗೆ ಸಮಾರಂಭದ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಭಾರತದೊಳಗೆ ಹಾಗೂ ಬೇರೆಡೆ ಪ್ರಾಣಾರ್ಪಣೆ ಮಾಡಿದವರಿಗೆ” ಎರಡು ನಿಮಿಷಗಳ ಮೌನಾಚರಣೆ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಭಾರತೀಯ ನಾರಿಯರ ಪರವಾಗಿ ರಾಷ್ಟ್ರಧ್ವಜವನ್ನು ಪ್ರದಾನಮಾಡುವುದರೊಂದಿಗೆ ಸಮಾರಂಭ ಮುಕ್ತಾಯಗೊಂಡಿತು….

ಸ್ತೋತ್ರಗೀತೆ ಮತ್ತು ರಾಷ್ಟ್ರಧ್ವಜ ಪ್ರದಾನಗಳ ಮಧ್ಯೆ ಭಾಷಣಗಳಾದವು. ಆ ರಾತ್ರಿ ಮೂವರು ಪ್ರಮುಖರು ಭಾಷಣ ಮಾಡಿದರು. ಒಬ್ಬರು, ಚೌಧುರಿ ಖಲೀಕ್ ಉಸ್ಮಾನ್, ಭಾರತದ ಮುಸ್ಲಿಮರ ಪ್ರತಿನಿಧಿಯಾಗಿ ಇವರನ್ನು ಆರಿಸಲಾಗಿತ್ತು. ಇವರು ಹೊಸದಾಗಿ ಸ್ವಾತಂತ್ರ್ಯಗೊಂಡ ಭಾರತ ದೇಶಕ್ಕೆ ಅಲ್ಪಸಂಖ್ಯಾತರ ನಿಷ್ಠೆಯನ್ನು ಯಥೋಚಿತವಾಗಿ ಘೋಷಿಸಿದರು. ಎರಡನೆಯವರು ತತ್ವಶಾಸ್ತ್ರಜ್ಞ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್. ವಾಕ್ ಶಕ್ತಿ, ಪ್ರಾವೀಣ್ಯತೆ ಹಾಗೂ ಪೂರ್ವ-ಪಶ್ವಿಮಗಳನ್ನು ಹತ್ತಿರ ತರುವ ಗ್ರಂಥದ ಕರ್ತೃವಾದ್ದರಿಂದ ಇವರನ್ನು ಆಯ್ಕೆ ಮಾಡಲಾಗಿತ್ತು. ಡಚ್ಚರು ಇಂಡೋನೇಷ್ಯಾದಲ್ಲೆ ಉಳಿದಿದ್ದು, ಫ್ರೆಂಚರು ಇಂಡೋ ಚೀನಾದಿಂದ ಕಾಲ್ತೆಗೆಯಲು ನಿರಾಕರಿಸುತ್ತಿರುವ ಸಂದರ್ಭದಲ್ಲಿ, ಭಾರತ ತ್ಯಜಿಸುವುದನ್ನು ಆಯ್ಕೆ ಮಾಡಿಕೊಂಡ ಬ್ರಿಟನ್ನಿನ ರಾಜಕೀಯ ವ್ಯವಹಾರಿಕ ವಿವೇಕ ಮತ್ತು ಎದೆಗಾರಿಕೆಯನ್ನು ರಾಧಾಕೃಷ್ಣನ್ ಪ್ರಶಂಸಿಸಿದರು.

ಅಂದಿನ ಭಾಷಣಕಾರರಲ್ಲಿ ತಾರಾ ಆಕರ್ಷಣೆಯೆಂದರೆ ಸ್ವತಂತ್ರ  ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಹರಲಾಲ್


ನೆಹರೂ.  ನೆಹರೂ ಆ ರಾತ್ರಿ ಭಾಷಣಕಾರರಲ್ಲಿ ಧ್ರುವತಾರೆಯಾಗಿದ್ದರು. ಅವರ ಭಾಷಣ ಭಾವತೀವ್ರತೆಯಿಂದಲೂ ವಾಗ್ಮಯ ಕಲೆಯಿಂದಲೂ ತುಂಬಿ ಶ್ರೀಮಂತವಾಗಿತ್ತು. ಆ ರಾತ್ರಿ ಅವರು ಆಡಿದ, “ಮಧ್ಯರಾತ್ರಿಯ ಘಂಟಾನಾದದ ಈ ಮುಹೂರ್ತದಲ್ಲಿ, ಇಡೀ ವಿಶ್ವ ನಿದ್ರಿಸುತ್ತಿರುವಾಗ, ಭಾರತ ಜೀವಚೈತನ್ಯಕ್ಕೆ-ಸ್ವಾತಂತ್ರ್ಯಕ್ಕೆ ಕಣ್ತೆರೆಯುತ್ತಿದೆ.” ಈ ಮಾತುಗಳು ಅಂದಿನಿಂದ ವ್ಯಾಪಕವಾಗಿ ಉಲ್ಲೇಖಗೊಂಡವು. “ಈ ಮುಹೂರ್ತ ಇತಿಹಾಸದ ಅತ್ಯಪೂರ್ವ ಕ್ಷಣ, ನಾವು ಹಳೆಯದರಿಂದ ಹೊಸತಿಗೆ ಪಾದಾರ್ಪಣ ಮಾಡುತ್ತಿದ್ದೇವೆ, ರಾಷ್ಟ್ರಾತ್ಮ ಸುದೀರ್ಘಕಾಲ ತುಳಿತಕ್ಕೊಳಗಾಗಿದ್ದ ಯುಗಾಂತ್ಯಗೊಂಡು ವಾಕ್ ಶಕ್ತಿ ಪಡೆಯುತ್ತಿರುವ ಮುಹೂರ್ತವಿದು” ಎಂದು ನೆಹರೂ ಹೇಳಿದ್ದರು.

ಸಮಾರಂಭದಲ್ಲಾದ ಎಡವಟ್ಟು!

ಭಾರತದಲ್ಲಿ ಯಾವುದೇ ಒಂದು ಮಹತ್ವದ ಸಮಾರಂಭವೂ ಎಡವಟ್ಟು-ಅಚಾತುರ್ಯಗಳಿಲ್ಲದೆ ಮುಗಿಯುವುದಿಲ್ಲ. ಈ ಸಂದರ್ಭದಲ್ಲಿ ಆದ ಅಚಾತುರ್ಯ ಹೋಲಿಕೆಯಿಂದ ಸಣ್ಣದು. ಮಧ್ಯರಾತ್ರಿಯ ಅಧಿವೇಶನದ ನಂತರ ಜವಹರಲಾಲ್ ನೆಹರೂ ಅವರು ಗೌರ್ನರ್ ಜನರಲ್ ಅವರಿಗೆ ತಮ್ಮ ಸಂಪುಟದ ಸಚಿವರ ಪಟ್ಟಿ ಸಲ್ಲಿಸಲು ಧಾವಿಸಿದರು. ಅವರು ಗೌರ್ನರ್ ಜನರಲ್ ಅವರಿಗೆ ಖಾಲಿ ಲಕೋಟೆಯೊಂದನ್ನು ನೀಡಿದ್ದರು! ಆದರೆ ಪ್ರಮಾಣವಚನ ಸ್ವೀಕಾರದ ವೇಳೆಗೆ ಕಳೆದುಹೋಗಿದ್ದ ಕಾಗದದ ಚೂರು ಸಿಕ್ಕಿತು. ಪ್ರಧಾನಮಂತ್ರಿಯಲ್ಲದೆ, ಸಂಪುಟದಲ್ಲಿ ಹದಿಮೂರು ಮಂದಿ ಇತರೆ ಸಚಿವರುಗಳಿದ್ದರು. ಅವರಲ್ಲಿ ವಲ್ಲಭಭಾಯಿ ಪಟೇಲ್, ಮೌಲಾನ ಅಬ್ದುಲ್ ಕಲಾಂ ಆಜಾದ್ ರಂಥ ರಾಷ್ಟ್ರೀಯ ಅತಿರಥ ಮಹಾರಥ ನಾಯಕರುಗಳಿದ್ದರು. ಅಲ್ಲದೆ ಯುವ ಜನಾಂಗದ ನಾಲ್ವರು ಕಾಂಗ್ರೆಸ್ ರಾಜಕಾರಣಿಗಳೂ ಸೇರಿದ್ದರು.

ಸಂಪುಟದ ಸಚಿವರುಗಳ ಹೆಸರುಗಳಲ್ಲಿ ತುಂಬಾ ಗಮನಾರ್ಹವಾದವು ಕಾಂಗ್ರೆಸ್ ಪಕ್ಷದವರದಾಗಿರಲಿಲ್ಲ. ಸಂಪುಟದಲ್ಲಿ ವಾಣಿಜ್ಯ ಪ್ರಪಂಚ ಹಾಗೂ ಸಿಖ್ಖರ ಪ್ರತಿನಿಧಿಗಳಿದ್ದರು. ಉಳಿದ ಮೂವರು ಜೀವನದುದ್ದಕ್ಕೂ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಲೇ ಬಂದವರು. ಇವರು, ಭಾರತದ ಅತ್ಯುತ್ತಮ ವಿತ್ತೀಯ ಬುದ್ಧಿವಂತರೆನ್ನಿಸಿಕೊಂಡ ಮದ್ರಾಸಿನ ವಣಿಕ ಮಹಾಶಯರಾದ ಆರ್. ಕೆ. ಷಣ್ಮುಖಂ ಚೆಟ್ಟಿ, ನ್ಯಾಯಶಾಸ್ತ್ರದ ಮೇಧಾವಿಗಳೂ ಜಾತಿಯಿಂದ ಅಸ್ಪೃಶ್ಯರೂ ಆದ ಬಿ.ಆರ್. ಅಂಬೇಡ್ಕರ್ ಮತ್ತು ಹಿಂದೂ ಮಹಾಸಭಾಗೆ ಸೇರಿದ ಬಂಗಾಳದ ಪ್ರಮುಖ ರಾಜಕಾರಣಿ ಶ್ಯಾಮ್ ಪ್ರಸಾದ್ ಮುಖರ್ಜಿ. ಕಾಂಗ್ರೇಸ್ಸಿಗರು ಬ್ರಿಟೀಷರ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗ ಆಡಳಿತಗಾರರೊಂದಿಗೆ ಕೈಜೋಡಿಸಿದವರೂ ಇದ್ದರು. ಆದರೆ ನೆಹರೂ ಮತ್ತು ಅವರ ಸಹೋದ್ಯೋಗಿಗಳು ಈಗ ಆ ಎಲ್ಲ ಭಿನ್ನಾಭಿಪ್ರಾಯಗಳನ್ನೂ ಬುದ್ಧಿವಂತಿಕೆಯಿಂದ ಪಕ್ಕಕ್ಕೆ ದೂಡಿದ್ದರು. ‘ಸ್ವಾತಂತ್ರ್ಯ ಬಂದಿರುವುದು ಭಾರತಕ್ಕೆ, ಕ್ರಾಂಗ್ರೆಸ್ಸಿಗೆ ಅಲ್ಲ’ ಎಂಬುದನ್ನು ನೆನಪಿಸುವ ಮೂಲಕ ಗಾಂಧೀಜಿಯವರು, ಪಕ್ಷಭೇದ ಮರೆತು ಸಮರ್ಥರನ್ನೊಳಗೊಂಡ ಸಂಪುಟವನ್ನು ಬರಚಿಸಬೇಕೆಂದು ಆಗ್ರಹಪಡಿಸಿದ್ದರು.

ಮೊದಲ ಮಂತ್ರಿಮಂಡಲ ರಾಜಕೀಯವಾಗಿಯಷ್ಟೇ ಅಲ್ಲದೆ, ಬೇರೆ ರೀತಿಯಿಂದಲೂ ವ್ಯಾಪಕ ಪ್ರಾತಿನಿಧ್ಯದಿಂದ ಕೂಡಿತ್ತು. ಮಂತ್ರಿಮಂಡಲದಲ್ಲಿ ಐದು ಪ್ರಮುಖ ಧರ್ಮಗಳವರಿದ್ದರು (ಸಾಕಷ್ಟು ಪ್ರಮಾಣದಲ್ಲಿ ನಿರೀಶ್ವರವಾದಿಗಳೂ ಇದ್ದರು) ಹಾಗೂ ಭಾರತದ ಎಲ್ಲ ಭಾಗಗಳವರೂ ಇದ್ದರು. ಇಬ್ಬರು ಅಸ್ಪೃಶ್ಯರಲ್ಲದೆ ಮಹಿಳಾ ಪ್ರತಿನಿಧಿಯೆಂಬಂತೆ ರಾಜಕುಮಾರಿ ಅಮೃತ ಕೌರ್ ಅವರೂ ಇದ್ದರು.

ಸಮಾರಂಭದ ಕಾರ್ಯಸೂಚಿ!

ಆಗಸ್ಟ್ 15 ರ ಕಾರ್ಯಸೂಚಿಯ ಮೊದಲ ವಿಷಯ, ಗೌರ್ನರ್ ಜನರಲ್ ಆಗಿ ಲಾರ್ಡ್ ಮೌಂಟ್ ಬ್ಯಾಟನ್ ಅವರಿಂದ ಪ್ರಮಾಣವಚನ ಸ್ವೀಕಾರ. ಇವರು ಹಿಂದಿನ ರಾತ್ರಿಯವರೆಗೆ ಬ್ರಿಟಿಷರ ಕೊನೆಯ ವೈಸರಾಯ್ ಆಗಿದ್ದವರು. ಆ ದಿನ ಉಳಿದ ಕಾರ್ಯಕ್ರಮದ ಪಟ್ಟಿ ಹೀಗಿತ್ತು:

ಬೆಳಿಗ್ಗೆ 8.30 ಸರ್ಕಾರಿ ಭವನದಲ್ಲಿ ಗೌರ್ನರ್ ಜನರಲ್ ಹಾಗೂ ಸಚಿವರಿಂದ ಪ್ರಮಾಣ ವಚನ ಸ್ವೀಕಾರ.

ಬೆಳಿಗ್ಗೆ 9.40 – ಸಂವಿಧಾನ ರಚನಾ ಸಭೆಗೆ ಸಚಿವರ ಮೆರವಣಿಗೆ.

ಬೆಳಿಗ್ಗೆ 9.50 – ಸಂವಿಧಾನ ರಚನಾ ಸಭೆಗೆ ಗೌರ್ನರ್ ಜನರಲ್ ಆಗಮನ.

ಬೆಳಿಗ್ಗೆ 9.55 – ಗೌರ್ನರ್ ಜನರಲ್ ಅವರಿಗೆ ರಾಜೋಚಿತ ಗೌರವ ವಂದನೆ.

ಬೆಳಿಗ್ಗೆ 10.30 – ಸಂವಿಧಾನ ರಚನಾ ಸಭೆಯಲ್ಲಿ ಧ್ವಜಾರೋಹಣ

ಬೆಳಿಗ್ಗೆ 10.35 – ಸರ್ಕಾರಿ ಭವನಕ್ಕೆ ಗೌರ್ನರ್ ಜನರಲ್ ನಿರ್ಗಮನ.

ಸಂಜೆ 6.00 – ಇಂಡಿಯಾ ಗೇಟಿನಲ್ಲಿ ಧ್ವಜಾರೋಹಣ.

ಸಂಜೆ 7.00 – ದೀಪೋತ್ಸವ.

ಸಂಜೆ 7.45 – ಬಾಣ ಬಿರುಸುಗಳ ಪ್ರದರ್ಶನ.

ಸಂಜೆ 8.45 – ಸರ್ಕಾರಿ ಭವನದಲ್ಲಿ ಅಧಿಕೃತ ಭೋಜನಕೂಟ.

ರಾತ್ರಿ 10.15 – ಸರ್ಕಾರಿ ಭವನದಲ್ಲಿ ಉತ್ಸವ.

ನಿರ್ಗಮಿಸಿದ ಪ್ರಭುಗಳಂತೆ ಭಾರತೀಯರಿಗೂ ಅದ್ಧೂರಿ-ಆಡಂಬರದ ಸಮಾರಂಭಗಳು ಪ್ರಿಯವಾಗಿರುವಂತೆ ತೋರುತ್ತದೆ. ದೆಹಲಿ ಉದ್ದಗಲಗಳಲ್ಲಿ ಹಾಗೂ ಭಾರತದ ಇತರ ಭಾಗಗಳಲ್ಲಿ ಸರ್ಕಾರ ಮತ್ತು ಪ್ರಜೆಗಳು ಸ್ವಾತಂತ್ರ್ಯಾಗಮನವನ್ನು ಹರ್ಷೋಲ್ಲಾಸಗಳಿಂದ ಆಚರಿಸಿದರು. ರಾಜಧಾನಿಯೊಂದರಲ್ಲೇ ಮುನ್ನೂರು ಧ್ವಜಾರೋಹಣ ಸಮಾರಂಭಗಳು ನಡೆದುದಾಗಿ ವರದಿಯಾಗಿದೆ. ರಾಷ್ಟ್ರದ ವಾಣಿಜ್ಯ ಕೇಂದ್ರವಾದ ಮುಂಬಯಿಯಲ್ಲಿ ನಗರದ ಮೇಯರ್ ಭವ್ಯ ತಾಜ್ ಮಹಲ್ ಹೋಟೆಲಿನಲ್ಲಿ ಔತಣಕೂಟ ಏರ್ಪಡಿಸಿದ್ದರು. ಹಿಂದೂಗಳ ಪವಿತ್ರ ಯಾತ್ರಾಸ್ಥಳವಾದ ಕಾಶಿಯಲ್ಲಿ ದೇವಾಲಯವೊಂದರಲ್ಲಿ, ಗಮನಾರ್ಹವಾಗಿ ಮುಸ್ಲಿಮನೊಬ್ಬನಿಂದ ರಾಷ್ಟ್ರಧ್ವಜಾರೋಹಣ ನಡೆಯಿತು. …….

ಶಿಸ್ತಿನಿಂದ ಅಶಿಸ್ತಿನ ಕಡೆಗೆ…

1930ರ ಜನವರಿ 26 ರಂದು ಅದ್ಭುತವಾಗಿ ಆಚರಿಸಲಾದ ಮೊದಲ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ, ನೆಹರೂ ಹೇಳಿರುವಂತೆ, ಭಾಗವಹಿಸಿದವರು ಶಿಸ್ತುಗಾಂಭೀರ್ಯಗಳಿಂದ ಆಜ್ಞಾನುವರ್ತಿಗಳಾಗಿದ್ದರು. ಆದರೆ 1947ರಲ್ಲಿ, ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಬಂದಾಗ ಭಾವನೆಗಳ ಅಭಿವ್ಯಕ್ತಿ, ಪ್ರದರ್ಶನಗಳು ಅತ್ಯಂತ ಸಹಜವಾಗಿದ್ದವು. ವಿದೇಶಿಯೊಬ್ಬರನ್ನು ಉಲ್ಲೇಖಿಸಿ ಹೇಳುವುದಾದರೆ, “ ನಗರಗಳ ನಂತರ ನಗರಗಳಲ್ಲಿ ಉತ್ಸಾಹಭರಿತ ಜನಸಮುದಾಯ, ಅನೇಕ ವರ್ಷಗಳಿಂದ ಅದುಮಿಟ್ಟಿದ್ದ ಹತಾಶೆಗಳು ಕಟ್ಟೆಯೊಡೆದು ಬಂದಂತೆ ಮೋಜಿನಿಂದ, ಆಮೋದ-ಪ್ರಮೋದಗಳಿಂದ ಆಚರಿಸಿತು….. ಮನೆಗಳ ಮೇಲೆ ಕಟ್ಟಡಗಳ ಮೇಲೆ ಸಾಲು ಸಾಲಾಗಿ ನಿಶಾನೆಗಳು ಹಾರಾಡಿದವು. ಕಾರುಗಳ ಮೇಲೆ ಬೈಸಿಕಲ್ಲುಗಳ ಮೇಲೆ, ಮಕ್ಕಳು, ಹಾಲು ಹಸುಳೆಗಳ ಕೈಗಳಲ್ಲಿ ನಿಶಾನೆಗಳು ಹಾರಾಡಿದವು……

ಈ ಮಧ್ಯೆ ಸರ್ಕಾರಿ ಭವನದಲ್ಲಿ ಹೊಸ ಭಾರತೀಯ ಗೌರ್ನರ್ ನ ಪ್ರಮಾಣವಚನ ಸ್ವೀಕಾರ ನಡೆದಿತ್ತು…. “ಅರಮನೆಯ ತುಂಬ ಅನಧಿಕೃತ ವ್ಯಕ್ತಿಗಳೇ ತುಂಬಿದ್ದು, ಸಮಾರಂಭವು ಬ್ರಿಟೀಷರು ಭಾರತವನ್ನು ತ್ಯಜಿಸಿದ ನಂತರ ಭವಿಷ್ಯದ ದಿನಗಳಲ್ಲಿ ಬರಲಿರುವುದರ ಮುನ್ಸೂಚನೆಯಂತಿತ್ತು.”….

*****

ಡಾ. ರಾಜೇಂದ್ರ ಬುರಡಿಕಟ್ಟಿ

15-08-2021

{ಮೇಲಿನ ಲೇಖನವು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರ India After Gandhi ಕೃತಿಯ ಕನ್ನಡ ಅನುವಾದವಾದ ‘ಬಾಪು ನಂತರದ ಭಾರತ’ (ಅನು:ಜಿ.ಎನ್. ರಂಗನಾಥ ರಾವ್) ಕೃತಿಯ ಮೊದಲ ಅಧ್ಯಾಯವಾದ  ‘ಸ್ವಾತಂತ್ರ್ಯ ಮತ್ತು ಪಿತೃಹತ್ಯೆ’ಯ ಆಯ್ದ ಈ ಭಾಗವಾಗಿದ್ದು ದೇಶವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದ ಓದಿಗಾಗಿ ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ. ಮೂಲ ಲೇಖಕರಿಗೆ ಮತ್ತು ಅನುವಾದಕರಿಗೆ ಕೃತಜ್ಞನಾಗಿದ್ದೇನೆ. – ರಾಬು}

 

No comments:

Post a Comment